Categories
ಸಿನಿ ಸುದ್ದಿ

ಜಗ್ಗೇಶ್‌ ಪುತ್ರ ಗುರುರಾಜನ ಕಾಗೆಮೊಟ್ಟೆ ಸೆಪ್ಟೆಂಬರ್‌ನಲ್ಲಿ ರಿಲೀಸ್ ; ಮಗನ ಚಿತ್ರಕ್ಕೆ ಸಾಹಿತ್ಯ ರಚಿಸಿ ಹಾಡಿದ ಅಪ್ಪ!

ಕೊರೊನಾ ಈಗ ಒಂದು ಹಂತಕ್ಕೆ ಮರೆಯಾಗುತ್ತಿದೆ. ಮೆಲ್ಲನೆ ಭಯ ಕಡಿಮೆಯಾಗುತ್ತಿದೆ. ಎಲ್ಲಾ ರಂಗದಲ್ಲೂ ಕಾರ್ಯಚಟುವಟಿಕೆಗಳೂ ಜೋರಾಗಿವೆ. ಸಿನಿಮಾರಂಗ ಮಾತ್ರ ಶೇ.೫೦ರಷ್ಟು ಆಸನ ಭರ್ತಿ ಆದೇಶದಲ್ಲೇ ಇದೆ. ಹೀಗಿದ್ದರೂ, ಈಗ ಒಂದೊಂದೆ ಸಿನಿಮಾ ರಿಲೀಸ್‌ ಆಗೋಕೆ ರೆಡಿಯಾಗಿವೆ. ಶಿವರಾಜಕುಮಾರ್‌ ಅಭಿನಯದ “ಭಜರಂಗಿ ೨” ಸಿನಿಮಾ ರಿಲೀಸ್‌ ಅನೌನ್ಸ್‌ ಮಾಡಿದೆ. ಅದರ ಬೆನ್ನಲ್ಲೇ ಈಗ ಜಗ್ಗೇಶ್‌ ಪುತ್ರ ಗುರುರಾಜ್‌ ಅವರ ಸಿನಿಮಾವೊಂದು ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ.


ಹೌದು, ನವರಸನಾಯಕ ಜಗ್ಗೇಶ್ ಅವರ ಪುತ್ರ ಗುರುರಾಜ್ ನಾಯಕನಾಗಿ ಅಭಿನಯಿಸಿದ ಚಿತ್ರ “ಕಾಗೆ ಮೊಟ್ಟೆ” ಎಲ್ಲವೂ ಅಂದುಕೊಂಡಂತೆ ನಡೆದರೆ, ಸೆಪ್ಟೆಂಬರ್‌ ಎರಡನೇ ವಾರದಲ್ಲಿ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಇದೊಂದು ಪಕ್ಕಾ ಲೋಕಲ್‌ ಹುಡುಗರ ಕಥೆ. ಮೂವರು ಲೋಕಲ್ ಹುಡುಗರ ಕಥೆಯನ್ನಿಟ್ಟುಕೊಂಡು ನಿರ್ದೇಶಕ‌ ಚಂದ್ರಹಾಸ ಅವರು ಈ ಚಿತ್ರ ಮಾಡಿದ್ದಾರೆ. ಕಾಗೆ ಶನೀಶ್ವರನ ವಾಹನ, ಶನಿ ಹೆಗಲೇರಿದರೆ ಕೊನೇವರೆಗೆ ಬಿಡಲ್ಲ ಅನ್ನೋದು ಗೊತ್ತು. ಅದೇ ರೀತಿ ಈ ಮೂರೂ ಜನ ಹುಡುಗರು ಯಾರ ಹಿಂದಾದ್ರೂ ಬಿದ್ದರೆ ಸುಲಭದಲ್ಲಿ ಬಿಡುವವರೇ ಅಲ್ಲ, ಮೊಟ್ಟೆಯಂತಿರುವ ಇವರು ಬೆಳೆದ ಮೇಲೆ ಯಾವ ರೀತಿ ಇರಬಹುದು ಎಂಬ ಪರಿಕಲ್ಪನೆಯೊಂದಿಗೆ ಚಂದ್ರಹಾಸ್ ಅವರು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.


ಈಗಾಗಲೇ ತನ್ನೆಲ್ಲ ಕೆಲಸಗಳನ್ನು ಮುಗಿಸಿಕೊಂಡು ರಿಲೀಸ್‌ಗೆ ಸಿದ್ದವಾಗಿರುವ ಕಾಗೆಮೊಟ್ಟೆ ಸೆಪ್ಟೆಂಬರ್ ಎರಡನೇ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಕಳೆದ ಲಾಕ್‌ಡೌನ್‌ಗೂ ಮುಂಚೆಯೇ ರೆಡಿಯಾಗಿದ್ದ ಈ ಚಿತ್ರದಲ್ಲಿ ಗುರುರಾಜ್ ಜಗ್ಗೇಶ್ ಜೊತೆ ಕೆ.ಮಾದೇಶ್ ಹಾಗೂ ಹೇಮಂತ್ ಇನ್ನಿಬ್ಬರು ಗೆಳೆಯರಾಗಿ ನಟಿಸಿದ್ದಾರೆ. ಕನ್ನಡದವರೇ ಆದ ತನುಜಾ ಚಿತ್ರದ ನಾಯಕಿಯಾಗಿ ನಟಿಸಿದ್ದಾರೆ, ಸಹ ನಿರ್ಮಾಪಕರಾಗಿ ಸುಬ್ಬರಾಯುಡು ಹಾಗೂ ಹೆಚ್.ಎನ್.ಶ್ರೀನಿವಾಸಯ್ಯ ಇವರ ಜೊತೆ ಕೈಜೋಡಿಸಿದ್ದಾರೆ.

ಅಂದಹಾಗೆ ಈ ಚಿತ್ರಕ್ಕೆ ಪಿಳ್ಳಾ, ಗೋವಿ, ಕೃಷ್ಣನ ಕಥೆ ಎಂಬ ಅಡಿಬರಹವಿದೆ. ಹಳ್ಳಿಯಲ್ಲಿ ಸಣ್ಣಪುಟ್ಟ ರಾಬರಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಈ ಮೂವರು ಹುಡುಗರು, ಒಮ್ಮೆ ಒಂದು ದೊಡ್ಡ ಉದ್ದೇಶ ಇಟ್ಟುಕೊಂಡು ಬೆಂಗಳೂರಿಗೆ ಬರುತ್ತಾರೆ. ಯಾವುದೇ ಹಿನ್ನೆಲೆ ಇಲ್ಲದೆ ಸಿಟಿಗೆ ಬಂದ ಇವರು ತಾವು ಅಂದುಕೊಂಡಿದ್ದನ್ನು ಮಾಡುತ್ತಾರೋ ಇಲ್ಲವೋ ಅನ್ನೋದು ಕಥೆ. ಕೊಳ್ಳೇಗಾಲ, ಚಾಮರಾಜನಗರ ಅಲ್ಲದೆ ಬೆಂಗಳೂರಿನ ಹಲವಾರು ಸ್ಲಂಗಳಲ್ಲಿ ಚಿತ್ರೀಕರಣ ನಡೆದಿದೆ. ಈ ಮೂವರು ಹುಡುಗರಿಗೆ ನಗರದಲ್ಲಿ ಬೆನ್ನೆಲುಬಾಗಿ ನಿಲ್ಲುವ ವೇಶ್ಯೆಯ ಪಾತ್ರವನ್ನು ಸೌಜನ್ಯ ಎಂಬ ನಟಿ ನಿರ್ವಹಿಸಿದ್ದಾರೆ. ಚಿತ್ರದಲ್ಲಿ ೩ ಹಾಡುಗಳಿದ್ದು, ಶ್ರೀವತ್ಸ ಸಂಗೀತ ಸಂಯೋಜನೆ ಮಾಡಿದ್ದಾರೆ. ನಾಗೇಂದ್ರ ಪ್ರಸಾದ್, ಜಯಂತ್ ಕಾಯ್ಕಿಣಿ, ಕವಿರಾಜ್ ಹಾಗೂ ನಟ ಜಗ್ಗೇಶ್ ಸಹ ಹಾಡೊಂದಕ್ಕೆ ಸಾಹಿತ್ಯ ರಚಿಸಿದ್ದಲ್ಲದೆ ಅದಕ್ಕೆ ತಾವೇ ದನಿಯಾಗಿದ್ದಾರೆ. ಪಿ.ಎಲ್. ರವೀ ಚಿತ್ರದ ಕ್ಯಾಮೆರಾ ಹಿಡಿದರೆ, ರಜನೀಕಾಂತ್‌ ಅವರ ಸ್ನೇಹಿತ ರಾಜ್ ಬಹದ್ದೂರ್‌ ಮುಸ್ಲಿಂ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

Categories
ಸಿನಿ ಸುದ್ದಿ

ಲವ್‌ಸ್ಟೋರಿಯಲ್ಲೊಂದು ಕ್ರಾಂತಿಕಾರಿ ಬದಲಾವಣೆ ಡಾರ್ಲಿಂಗ್‌ ಕೃಷ್ಣ ಸಿನಿಮಾಗೆ ಹೊಸ ತೇಜಸ್ಸು!

ಶಿವತೇಜಸ್‌ ಹೇಳಿದ ಬ್ಯೂಟಿಫುಲ್‌ ಲವ್‌ಸ್ಟೋರಿಗೆ ಫಿದಾ ಆದ “ಡಾರ್ಲಿಂಗ್‌” ಕೃಷ್ಣ, ಸಿನಿಮಾ ಮಾಡಲು ಗ್ರೀನ್‌ ಸಿಗ್ನಲ್‌ ಕೊಟ್ಟಾಗಿದೆ. ಆಗಸ್ಟ್‌ 27ರಂದು ಧರ್ಮಸ್ಥಳದ ಶ್ರೀಮಂಜುನಾಥ ಸ್ವಾಮಿಯ ಸನ್ನಿಧಿಯಲ್ಲಿ ಪೂಜೆ. ಒಬ್ಬ ನಿರ್ದೇಶಕರಾಗಿ ಮತ್ತೊಬ್ಬ ನಿರ್ದೇಶಕರಿಗೆ ಅವಕಾಶ ಕೊಡೋದು ಅಂದರೆ ತಮಾಷೆಯ ಮಾತಲ್ಲ. ಒಬ್ಬ ನಿರ್ದೇಶಕನಲ್ಲಿರುವ ಪ್ರತಿಭೆ ಮತ್ತು ಶ್ರದ್ಧೆ ನಿರ್ದೇಶಕನಿಗೆ ಮಾತ್ರ ಗೊತ್ತು. ಆ ಪ್ರತಿಭೆ ಮತ್ತು ಶ್ರದ್ಧೆ ಶಿವತೇಜಸ್‌ ಅವರಲ್ಲಿದೆ ಎಂಬುದನ್ನು ಬಲವಾಗಿ ನಂಬಿರುವ ಸುಮಂತ್‌ ಕ್ರಾಂತಿ ನಿರ್ಮಾಣ ಮಾಡಲು ಮನಸ್ಸು ಮಾಡಿದ್ದಾರೆ

ಒಂದು ಸಿನಿಮಾ ಮಾಡೋಕೆ ಮುಖ್ಯವಾಗಿ ಬೇಕಾಗಿರೋದು ಸಿನಿಮಾ ಪ್ರೀತಿ. ಅದಷ್ಟೇ ಅಲ್ಲ, ಶ್ರದ್ಧೆ ಮತ್ತು ಪ್ರತಿಭೆ. ಇದನ್ನೇ ನಂಬಿ ಸಿನಿಮಾ ರಂಗಕ್ಕೆ ಎಂಟ್ರಿಕೊಟ್ಟವರು ನಿರ್ದೇಶಕ ಶಿವತೇಜಸ್.‌ ಈಗಾಗಲೇ ಜೋರು ಪ್ರೀತಿಯ “ಮಳೆ” ಸುರಿಸಿದ ಶಿವತೇಜಸ್‌, ಸಿನಿಪ್ರೇಮಿಗಳ ಮನವನ್ನು ಪ್ರೀತಿಯಿಂದಲೇ ಒದ್ದೆ ಮಾಡಿದವರು. ಆ ನಂತರ “ಧೈರ್ಯಂ” ಮೂಲಕ ಗಾಂಧಿನಗರದಲ್ಲಿ ಗಟ್ಟಿನೆಲೆ ಕಂಡ ಧೈರ್ಯದಲ್ಲೇ ಮತ್ತೊಂದು ಕ್ಯೂಟ್‌ ಅಂಡ್‌ ಪ್ಯೂರ್‌ ಲವ್‌ಸ್ಟೋರಿ ಹಿಂದೆ ನಿಂತಿದ್ದಾರೆ ಶಿವತೇಜಸ್.‌ ಹೌದು, ನಿರ್ದೇಶಕ ಶಿವತೇಜಸ್‌ ಈಗ ಹೊಸ ಸಿನಿಮಾಗೆ ಕೈ ಹಾಕಿದ್ದಾರೆ. ಈ ಬಾರಿ ಎಂದಿಗಿಂತಲೂ ಜೋರು ಸದ್ದು ಮಾಡುವ ಹುಮ್ಮಸ್ಸಿನಲ್ಲಿದ್ದಾರೆ. ಆವರ ಆಯ್ಕೆ ಕೂಡ ಹಾಗೆಯೇ ಇದೆ. ಹಾಗಾಗಿ, ಅವರ ಹೊಸ ಚಿತ್ರ ಜೋರು ಸೌಂಡು ಮಾಡುವುದರಲ್ಲಿ ಅನುಮಾನವೇ ಇಲ್ಲ ಬಿಡಿ.

ಅಂದಹಾಗೆ, ಶಿವತೇಜಸ್‌ ಮಾಡ ಹೊರಟಿರುವ ಸಿನಿಮಾದ ಹೀರೋ ಬೇರಾರೂ ಅಲ್ಲ, “ಲವ್‌ ಮಾಕ್ಟೇಲ್‌” ಖ್ಯಾತಿಯ “ಡಾರ್ಲಿಂಗ್‌” ಕೃಷ್ಣ ಅವರದು. ನಿಜ, ಶಿವತೇಜಸ್‌ ಅವರು ಹೇಳಿದ ಬ್ಯೂಟಿಫುಲ್‌ ಲವ್‌ಸ್ಟೋರಿಗೆ ಫಿದಾ ಆದ “ಡಾರ್ಲಿಂಗ್‌” ಕೃಷ್ಣ, ಸಿನಿಮಾ ಮಾಡಲು ಗ್ರೀನ್‌ ಸಿಗ್ನಲ್‌ ಕೊಟ್ಟಾಗಿದೆ. ಆಗಸ್ಟ್‌ 27ರಂದು ಚಿತ್ರದ ಪೂಜೆ ನೆರವೇರುತ್ತಿದೆ. ಧರ್ಮಸ್ಥಳದ ಶ್ರೀಮಂಜುನಾಥ ಸ್ವಾಮಿಯ ಸನ್ನಿಧಿಯಲ್ಲಿ ಪೂಜೆ ನಡೆಯುತ್ತಿದೆ ಅನ್ನೋದು ವಿಶೇಷ. ಈ ಚಿತ್ರದಲ್ಲಿ ಹಲವು ವಿಶೇಷತೆಗಳೇ ತುಂಬಿವೆ. ಆ ವಿಶೇಷತೆಗಳಲ್ಲಿ ಮೊದಲ ಸ್ಪೆಷಲ್‌ ಅಂದರೆ, ನಿರ್ದೇಶಕ ಶಿವತೇಜಸ್‌ ಅವರನ್ನು ನಂಬಿ, ಅವರು ಮಾಡಿಕೊಂಡಿರುವ ಲವ್‌ಸ್ಟೋರಿಯನ್ನು ಒಪ್ಪಿ, ಚಿತ್ರವನ್ನು ಅದ್ಧೂರಿಯಾಗಿ ನಿರ್ಮಾಣ ಮಾಡಲು ಮುಂದಾಗಿರೋದು ನಿರ್ಮಾಪಕ ಸುಮಂತ್‌ ಕ್ರಾಂತಿ ಇದು ಅವರ ರಶ್ಮಿ ಫಿಲಂಸ್‌ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿದೆ.

ಈ ಸುಮಂತ್‌ ಕ್ರಾಂತಿ ಹೆಸರು ಕೇಳಿದಾಕ್ಷಣ, ಥಟ್ಟನೆ ನೆನಪಾಗೋದೇ “ನಾನಿ” ಎಂಬ ಕಾಡುವ ಚಿತ್ರ. ಹೌದು, ನಿರ್ದೇಶಕರಾಗಿ ಸಿನಿಮಾ ರಂಗಕ್ಕೆ ಎಂಟ್ರಿಯಾದ ಸುಮಂತ್‌ ಕ್ರಾಂತಿ ಇದೀಗ ನಿರ್ಮಾಪಕರಾಗಿಯೂ ಗುರುತಿಸಿಕೊಂಡಿದ್ದಾರೆ. “ಕಾಲಚಕ್ರ” ಸಿನಿಮಾ ನಿರ್ದೇಶನದ ಜೊತೆಗೆ ನಿರ್ಮಾಣವನ್ನೂ ಮಾಡಿದ್ದಾರೆ. ಅದೀಗ ಬಿಡುಗಡೆಗೆ ಸಜ್ಜಾಗಿದೆ. ಅದರ ಬೆನ್ನ ಹಿಂದೆಯೇ ಅವರು “ಬರ್ಕ್ಲಿ” ಎಂಬ ಮತ್ತೊಂದು ಫೆಂಟಾಸ್ಟಿಕ್‌ ಸಿನಿಮಾ ಕೂಡ ಮಾಡಿದ್ದಾಗಿದೆ. ಅದರ ಹಿಂದೆಯೇ ಅವರು ಪ್ರಜ್ವಲ್‌ ದೇವರಾಜ್‌ ಅವರಿಗೊಂದು ಸಿನಿಮಾ ಮಾಡಲೂ ಮುಂದಾಗಿರೋದು ಹೊಸ ಸುದ್ದಿಯೇನಲ್ಲ. ಈಗ ಶಿವತೇಜಸ್‌ ಅವರಿಗಾಗಿ “ಡಾರ್ಲಿಂಗ್‌” ಕೃಷ್ಣ ಅವರ ನಟನೆಯ ಸಿನಿಮಾಗೆ ನಿರ್ಮಾಪಕರಾಗಿದ್ದಾರೆ. ಇದು ನಿಜಕ್ಕೂ ಮೆಚ್ಚುವ ವಿಷಯ.

ಒಬ್ಬ ನಿರ್ದೇಶಕರಾಗಿ ಮತ್ತೊಬ್ಬ ನಿರ್ದೇಶಕರಿಗೆ ಅವಕಾಶ ಕೊಡೋದು ಅಂದರೆ ತಮಾಷೆಯ ಮಾತಲ್ಲ. ಒಬ್ಬ ನಿರ್ದೇಶಕನಲ್ಲಿರುವ ಪ್ರತಿಭೆ ಮತ್ತು ಶ್ರದ್ಧೆ ನಿರ್ದೇಶಕನಿಗೆ ಮಾತ್ರ ಗೊತ್ತು. ಆ ಪ್ರತಿಭೆ ಮತ್ತು ಶ್ರದ್ಧೆ ಶಿವತೇಜಸ್‌ ಅವರಲ್ಲಿದೆ ಎಂಬುದನ್ನು ಬಲವಾಗಿ ನಂಬಿರುವ ಸುಮಂತ್‌ ಕ್ರಾಂತಿ ಅವರು, ಈಗ ನಿರ್ಮಾಣ ಮಾಡಲು ಮನಸ್ಸು ಮಾಡಿದ್ದಾರೆ. ಸುಮಂತ್‌ ಕ್ರಾಂತಿ ಅವರೂ ನಿರ್ದೇಶಕರಾಗಿರುವುದರಿಂದ, ಈ ಚಿತ್ರಕ್ಕೆ ಏನೆಲ್ಲಾ ಬೇಕೋ ಅದೆಲ್ಲವನ್ನೂ ಪೂರೈಸುತ್ತಾರೆ ಎಂಬ ಭವ್ಯ ಭರವಸೆ ಕೂಡ ನಿರ್ದೇಶಕ ಶಿವತೇಜಸ್‌ ಅವರಿಗಿದೆ. ಅದೇನೆ ಇರಲಿ, ಶಿವತೇಜಸ್ ಈ ಬಾರಿ ಒಂದೊಳ್ಳೆಯ ಕಥೆ ಹಿಡಿದು ಬರುತ್ತಿದ್ದಾರೆ. ತಮ್ಮ ಬ್ಯೂಟಿಫುಲ್‌ ಲವ್‌ಸ್ಟೋರಿ ಕುರಿತು “ಸಿನಿಲಹರಿ” ಜೊತೆ ಮಾತನಾಡಿದ ಶಿವತೇಜಸ್‌ ಹೇಳಿದ್ದಿಷ್ಟು.

“ನಾನು “ಮಳೆ” ಬಳಿಕ ಮತ್ತೊಂದು ಪ್ಯೂರ್‌ ಬೊಂಬಾಟ್‌ ಲವ್‌ಸ್ಟೋರಿ ಸಿನಿಮಾ ಮಾಡ್ತಾ ಇದ್ದೇನೆ. ನವೆಂಬರ್‌ನಿಂದ ಸಿನಿಮಾ ಶುರುವಾಗಲಿದೆ. ಧರ್ಮಸ್ಥಳದಲ್ಲಿ ಆಗಸ್ಟ್‌ 27ರಂದು ಪೂಜೆ ನೆರವೇರಲಿದೆ. ಸುಮಂತ್‌ ಕ್ರಾಂತಿ ಅವರು ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಮೂಲತಃ ನಿರ್ದೇಶಕರಾಗಿದ್ದರೂ, ನನ್ನ ಕಥೆ ನಂಬಿ ಹಣ ಹಾಕುತ್ತಿದ್ದಾರೆ. ಅವರ ನಂಬಿಕೆಯನ್ನು ನಾನು ಉಳಿಸಿಕೊಳ್ತೀನಿ ಎಂಬ ಮಾತು ಕೊಡ್ತೀನಿ. ಕಥೆ, ಚಿತ್ರಕಥೆ, ಸಂಭಾಷಣೆ ಕೂಡ ನನ್ನದೇ. ಇನ್ನು, ಚಿತ್ರದಲ್ಲಿ ಇಬ್ಬರು ನಾಯಕಿಯರು ಇರಲಿದ್ದಾರೆ. ಅವರು ಯಾರೆಂಬುದು ಸದ್ಯ ಗೌಪ್ಯ.

ಅಂತೆಯೇ ಅರ್ಜುನ್‌ ಜನ್ಯ ಸಂಗೀತ ನೀಡುತ್ತಿದ್ದಾರೆ. ಛಾಯಾಗ್ರಹಣ ಸೇರಿದಂತೆ ಉಳಿದ ತಾಂತ್ರಿಕ ವರ್ಗದ ಆಯ್ಕೆ ಹಾಗು ಕಲಾವಿದರ ಆಯ್ಕೆ ನಡೆಯಬೇಕಿದೆ. ನವೆಂಬರ್‌ನಿಂದ ಚಿತ್ರೀಕರಣ ಶುರುವಾಗಲಿದೆ ಎನ್ನುವ ಶಿವತೇಜಸ್, “ಮಳೆ” ನೋಡಿದವರಿಗೆ ಒಂದೊಳ್ಳೆಯ ಫೀಲ್‌ ಇತ್ತು. ಈ ಸಿನಿಮಾ ಅದಕ್ಕಿಂತಲೂ ಬೊಂಬಾಟ್‌ ಫೀಲ್‌ ಕೊಡುತ್ತೆ. ಈಗಿನ ಟ್ರೆಂಡ್‌ಗೆ ತಕ್ಕಂತಹ ಲವ್‌ಸ್ಟೋರಿ ಇಲ್ಲಿದೆ. ಲವ್‌ಸ್ಟೋರಿ ಅಂದರೆ, ಅದೇ ಪ್ರೀತಿ ಗೀತಿ ಇತ್ಯಾದಿ ಇರುತ್ತೆ. ಆದರೆ, ನಮ್‌ ಲವ್‌ಸ್ಟೋರಿಯ ರೇಂಜ್‌ ಬೇರೆ ರೀತಿ ಇರುತ್ತೆ. ಎಲ್ಲವನ್ನೂ ಈಗಲೇ ಹೇಳಿದರೆ, ಕುತೂಹಲ ಇರಲ್ಲ. ಸಿನಿಮಾ ಬಂದಮೇಲೆ ಖಂಡಿತವಾಗಿಯೂ ಎಲ್ಲಾ ವರ್ಗಕ್ಕೆ ಇಷ್ಟವಾಗುತ್ತೆ ಎಂಬ ಭರವಸೆ ಕೊಡ್ತೀನಿ ಅಂತಾರೆ ಶಿವತೇಜಸ್.‌

Categories
ಸಿನಿ ಸುದ್ದಿ

ಸುದೀಪ್ ಡೈರೆಕ್ಟ್ ಮಾಡಿದ್ರೆ ನಾನು ಆಕ್ಟ್ ಮಾಡ್ತೀನಿ ; ಹೀಗಂದ್ರು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ !

  • ವಿಶಾಲಾಕ್ಷಿ

ಸ್ಯಾಂಡಲ್ ವುಡ್ ಬಾದ್ ಷಾ ಕಿಚ್ಚ ಸುದೀಪ್ ಆಕ್ಷನ್ ಕಟ್ ಹೇಳಿದರೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಆಕ್ಟ್ ಮಾಡೋದಕ್ಕೆ ರೆಡಿಯಂತೆ. ಇದು ಬರೀ ಅಂತೆ ಕಂತೆ ಸುದ್ದಿಯಲ್ಲ ಸ್ವತಃ ಶಿವಣ್ಣ ಅವರೇ ಸುದೀಪ್ ಪಕ್ಕದಲ್ಲಿ ನಿಂತು ಅಧಿಕೃತ ವಾಗಿ ಘೋಷಣೆ ಮಾಡಿರುವ ಸುದ್ದಿ ಇದು.

ಕಿಚ್ಚನ ಕಥೆಗೆ ಶಿವಣ್ಣ ಕ್ಲೀನ್ ಬೋಲ್ಡ್

ಹೌದು, ಕರುನಾಡ ಚಕ್ರವರ್ತಿಯ ‘ನೀ ಸಿಗೋವರೆಗೂ’ ಸಿನಿಮಾ ಮುಹೂರ್ತ ಕಾರ್ಯಕ್ರಮ ಖಾಸಗಿ ಹೋಟೆಲ್ ನಲ್ಲಿ ಹಮ್ಮಿಕೊಳ್ಳಲಾಗಿತ್ತು. ಇಲ್ಲಿಗೆ ವಿಶೇಷ ಅತಿಥಿಯಾಗಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಆಗಮಿಸಿದ್ದರು. ಶಿವಣ್ಣನಿಗೆ ಫಸ್ಟ್ ಕ್ಲಾಪ್ ಮಾಡಿ 124 ನೇ ಚಿತ್ರಕ್ಕೆ ತುಂಬು ಹೃದಯದಿಂದ ಹಾರೈಸಿದರು. ಇದೇ ವೇಳೆ ಹ್ಯಾಟ್ರಿಕ್ ಹೀರೋಗೆ ಸುದೀಪ್ ಒಂದು ಕಥೆ ನರೇಟ್ ಮಾಡಿದ್ದಾರೆ. ಒನ್ ಲೈನ್ ಸ್ಟೋರಿ ಕೇಳಿ ಎಕ್ಸೈಟ್ ಆದ ಶಿವಣ್ಣ ಸುದ್ದಿಗೋಷ್ಠಿಯಲ್ಲಿ ಬಹಿರಂಗವಾಗಿಯೇ ಸುದೀಪ್ ನಿರ್ದೇಶನ ಮಾಡಿದರೆ ನಾನು ಆ ಸಿನಿಮಾ ಮಾಡೋದಕ್ಕೆ ರೆಡಿಯಿದ್ದೇನೆ ಎಂದರು.

ಶಿವಣ್ಣನಿಗಾಗಿ ಡೈರೆಕ್ಟರ್ ಕ್ಯಾಪ್ ತೊಡ್ತಾರಾ ಕಿಚ್ಚ

ಶಿವಣ್ಣ ಮಾತು ಮುಗಿಸಿದ್ಮೇಲೆ ಮೈಕ್ ಕೈಗೆತ್ತಿಕೊಂಡ ಸುದೀಪ್ ಅವರು ಶಿವಣ್ಣನ ದೊಡ್ಡತನದ ಬಗ್ಗೆ ಮಾತನಾಡಿದರು. ಒಬ್ಬ ಹೀರೋ ಮತ್ತೊಬ್ಬ ಹೀರೋಗೆ ಡೈರೆಕ್ಟ್ ಮಾಡ್ತೀನಿ ಅಂಗ ಬಂದಾಗ
ಸಿನಿಮಾ ಮಾಡೋಕೆ ಬರ್ತಿದ್ದಾನಾ ಅಥವಾ ಹಾಳು ಮಾಡೋಕೆ ಬರ್ತಿದ್ದಾನಾ ಎನ್ನುವ ಯೋಚನೆ ಸಹಜವಾಗಿ ಬರುತ್ತೆ. ಜೊತೆಗೆ ಅವರೇ ಒಬ್ಬ ನಟನಾಗಿ ನನಗ್ಯಾಕೆ ಡೈರೆಕ್ಟ್ ಮಾಡಬೇಕು ಎನ್ನುವ ಥಾಟ್ ಕೂಡ ಫ್ಲ್ಯಾಶ್‌‌‌ ಆಗುತ್ತೆ. ವಾಸ್ತವ ಹೀಗಿರುವಾಗ ಡೈರೆಕ್ಟ್ ಮಾಡಿದರೆ ನಾನು ಆಕ್ಟ್ ಮಾಡ್ತೀನಿ ಅಂತ ಶಿವಣ್ಣ ಹೇಳ್ತಿದ್ದಾರೆ ಅಂದರೆ ಅದು ಅವರ ದೊಡ್ಡಗುಣ ಹಾಗೂ ಸುದೀಪ್ ಮೇಲಿರುವ ನಂಬಿಕೆ ಅಲ್ಲದೇ ಮತ್ತೇನು ಅಲ್ಲ.

ಮಾಣಿಕ್ಯ ನಿರ್ದೇಶನದ ಶಾಂತಿನಿವಾಸದಲ್ಲಿ ಮಿಂಚಿದ್ದಾರೆ ಶಿವಣ್ಣ

ಅಷ್ಟಕ್ಕೂ, ಸುದೀಪ್ ಅದ್ಯಾವ್ ಕಥೆ ಹೇಳಿದರೂ, ಸ್ಟೋರಿ ಲೈನ್ ಹೇಗಿದೆ? ಇದ್ಯಾವ ಬಗ್ಗೆಯೂ ಹೆಚ್ಚಿನ ಡಿಟೈಲ್ಸ್ ಇಲ್ಲ. ಆದರೆ, ಇಬ್ಬರು ಒಂದಾಗಿ ಸಿನಿಮಾ ಸಂದರ್ಭ ಎದುರಾದರೆ ನೂರಕ್ಕೆ ನೂರು ಪರ್ಸೆಂಟ್ ಜೊತೆಯಾಗಿ ಸಿನಿಮಾ ಮಾಡ್ತಾರೆ. ಈಗಾಗಲೇ ಒಮ್ಮೆ ಶಿವಣ್ಣನಿಗೆ ಕಿಚ್ಚ ಆಕ್ಷನ್ ಕಟ್ ಹೇಳಿದ್ದಾರೆ. ಸುದೀಪ್ ನಿರ್ದೇಶಿಸಿ‌ ನಟಿಸಿದ್ದ ಶಾಂತಿನಿವಾಸದಲ್ಲಿ
ಹ್ಯಾಟ್ರಿಕ್ ಹೀರೋ ಮಿಂಚಿ ಹೋಗಿದ್ದಾರೆ. ‘ಒಂದು ಒಳ್ಳೆ ಕಥೆಯ ಹೇಳುವೆ’ ಹಾಡಿಗೆ ಸುದೀಪ್ ಹಾಗೂ ಶಿವಣ್ಣ ಒಟ್ಟಿಗೆ ಕಂಠಕುಣಿಸಿದ್ದಾರೆ.

ಈಗಾಗಲೇ, ಜೋಗಿ ಪ್ರೇಮ್ ನಿರ್ದೇಶನದ ಮಲ್ಟಿಸ್ಟಾರರ್ ದಿ ವಿಲನ್ ಚಿತ್ರದಲ್ಲಿ ಧಗಧಗಿಸಿದ್ದಾರೆ.
ಮತ್ತೆ ಒಟ್ಟಿಗೆ ಬೆಳ್ಳಿತೆರೆ ಮೇಲೆ ಯಾವಾಗ ಅಬ್ಬರಿಸ್ತಾರೋ ಅಂತ ಫ್ಯಾನ್ಸ್ ಕೂಡ ಕಾತುರರಾಗಿ ಕಾಯ್ತಿದ್ದಾರೆ. ಈ‌ ಮಧ್ಯೆ ಸುದೀಪ್ ನಿರ್ದೇಶನದ- ಶಿವಣ್ಣನ ಅಭಿನಯದ
ಧಮಾಕೇದಾರ್ ಸುದ್ದಿ ದೊಡ್ಮನೆ ಫ್ಯಾನ್ಸ್ ಹಾಗೂ ಶಾಂತಿನಿವಾಸದ ಅಭಿಮಾನಿಗಳನ್ನು ಹುಚ್ಚೆಬ್ಬಿಸಿದೆ. ಇಬ್ಬರ ಫ್ಯಾನ್ಸ್ ಹಬ್ಬ ಮಾಡಿ ಸಂಭ್ರಮಿಸುವಂತೆ ಮಾಡಿದೆ. ಡೈರೆಕ್ಟರ್ ಕ್ಯಾಪ್ ತೊಟ್ಟು ಆಕ್ಷನ್ ಕಟ್ ಹೇಳುವ ಗಳಿಗೆಯನ್ನ ಆರಡಿ ಕಟೌಟ್ ಫ್ಯಾನ್ಸ್ ಎದುರು ನೋಡುವಂತಾಗಿದೆ. ಆ ದಿನ. ಆ ಕ್ಷಣ ಆದಷ್ಟು ಬೇಗ ಬರಲಿ. ಬಿಗ್ ಸ್ಕ್ರೀನ್ ಕೂಡ ಸಂಭ್ರಮ ಪಡಲಿ ಅಲ್ಲವೇ..

ಎಂಟರ್ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಕಾಶ್ಮೀರದಲ್ಲಿ ಹೊಸಬರ ನೆನಪು ! ಹೃದಯಕೆ ಹೈದಯವೇ ಕಡು ವೈರಿ ಆಲ್ಬಂ ಗೀತೆ ಹೊರ ಬಂತು


ಸಿನಿಮಾ ರಂಗಕ್ಕೆ ಎಂಟ್ರಿಯಾಗುವ ಬಹುತೇಕ ಹೊಸ ಪ್ರತಿಭೆಗಳು ಕಿರುಚಿತ್ರವೋ ಅಥವಾ ಆಲ್ಬಂ ಸಾಂಗ್‌ ಮೂಲಕವೋ ಎಂಟ್ರಿಯಾಗುತ್ತಿರುವುದು ಹೊಸದೇನಲ್ಲ. ಆ ಸಾಲಿಗೆ ಇಲ್ಲೊಂದು ಹೊಸತರ ತಂಡ ಒಂದು ಆಲ್ಬಂ ಸಾಂಗ್‌ನೊಂದಿಗೆ ಸದ್ದು ಮಾಡುತ್ತಿದೆ. ಹೌದು, “ನಿನದೇ ನೆನಪು” ಶೀರ್ಷಿಕೆಯ ಆಲ್ಬಂ ಸಾಂಗ್‌ವೊಂದು ಈಗ ಎಲ್ಲೆಡೆ ಜೋರು ಸುದ್ದಿಯಾಗಿದೆ. ಸದ್ಯ ಸೋಶಿಯಲ್‌ ಮೀಡಿಯಾದಲ್ಲಿ ಇದರದ್ದೇ ಸುದ್ದಿ.


ಗೀತ ಸಾಹಿತಿ ಗೌಸ್‌ಪೀರ್‌ ಅವರು ಬರೆದ “ಹೃದಯಕ್ಕೆ ಹೃದಯವೇ ಕಡು ವೈರಿ” ಎಂದು ಶುರುವಾಗುವ ಗೀತೆ ಸ್ವಾತಂತ್ರ್ಯ ದಿನದಂದು ಬಿಡುಗಡೆಯಾಗಿದೆ. ಈ ಹಾಡಿನ ಚಿತ್ರೀಕರಣ ಕಾಶ್ಮೀರ ಮತ್ತು ಲೇಹ್‌ನಲ್ಲಿ ನಡೆದಿದೆ. ಸರವಣ್ ಮತ್ತು ಪ್ರತಿಮಾ ಈ ಆಲ್ಬಂ ಸಾಂಗ್‌ನಲ್ಲಿ ಅಭಿನಯಿಸಿದ್ದಾರೆ.

ಸರವಣ್ ಈಗಾಗಲೇ ಸಬ್ ವೇ ಎಂಬ ಸಿನಿಮಾದಲ್ಲಿ ನಟಿಸಿದ್ದಾರೆ. ಸದ್ಯ ಆ ಸಿನಿಮಾ ರಿಲೀಸ್‌ಗೆ ರೆಡಿಯಾಗುತ್ತಿದೆ. “ಟಿಕ್ ಟಾಕ್” ಮೂಲಕ ಮನೆ ಮಾತಾಗಿರುವ ಪ್ರತಿಮಾ ಈಗಾಗಲೇ ಕೆಲವು ಆಲ್ಬಂಗಳಲ್ಲಿ ನಟಿಸಿದ್ದಾರೆ. ಈ ಆಲ್ಬಂ ನಿರ್ಮಾಣ ಮಾಡಿರೋದು ಆಂಜಿ ಬಾಬು. ಅವರಿಗೆ ಬೆಂಬಲವಾಗಿ ನಿಂತವರು ಫೈಯಿಂಗ್ ಕಿಂಗ್ ಮಂಜು. ಈ ಮೊದಲು ಮಯೂರ್ ಪಟೇಲ್ ಅಭಿನಯದ ರಾಜೀವ ಚಿತ್ರವನ್ನೂ ಮಂಜು ನಿರ್ದೇಶಿಸಿದ್ದಾರೆ.


ಈ ಹಾಡನ್ನು ಎಂ. ವೈ. ಕೃಷ್ಣ ನಿರ್ದೇಶಿಸಿದ್ದಾರೆ. ವಾಸುಕಿ ವೈಭವ್ ಹಾಡಿರುವ ಹಾಡಿಗೆ ರೋಹಿತ್ ಸೊವಾರ್ ಸಂಗೀತವಿದೆ. ಕಾರ್ತಿಕ್ ಛಾಯಾಗ್ರಹಣ ಮಾಡಿದ್ದಾರೆ. ಚಾಣಕ್ಯ ಫಿಲಂಸ್ ಮೂಲಕ ಈ ಅಲ್ಬಂ ನಿರ್ಮಾಣಗೊಂಡಿದೆ. ನರೇಂದ್ರ ಬಾಬು, ನಿರ್ಮಾಪಕ ಸಯ್ಯದ್ ಸಲಾಂ, ರಮೇಶ್ ಹೊಸಬರ ಈ ಹಾಡಿಗೆ ಶುಭ ಹಾರೈಸಿದ್ದಾರೆ.

Categories
ಸಿನಿ ಸುದ್ದಿ

ಅಂತೂ ಕ್ಯಾಬ್ ಚಾಲಕನ ಕನಸು ನನಸಾಯ್ತು! ಅಂಗೈಲಿ ಅಕ್ಷರ ಸಿನ್ಮಾ ಮೂಲಕ ಬಣ್ಣದ ಹೆಜ್ಜೆ…

ಸಿನಿಮಾನೆ ಹಾಗೆ. ಇಲ್ಲಿ ಕನಸು ಕಾಣೋ ಮಂದಿಯೇ ಹೆಚ್ಚು. ಅದರಲ್ಲೂ ಇಲ್ಲಿ ಕನಸು ಕಂಡವರಿಗೆಲ್ಲಾ ಅದು ನನಸಾಗುತ್ತೆ ಅಂತ ಹೇಳುವುದಕ್ಕೂ ಆಗೋದಿಲ್ಲ. ಎಲ್ಲೋ ಒಂದಷ್ಟು ಅದೃಷ್ಟವಂತರಿಗೆ ಮಾತ್ರ ಅಂಥದ್ದೊಂದು ಲಕ್‌ ಸಿಗುತ್ತೆ. ಈಗ ಅಂಥದ್ದೊಂದು ಲಕ್‌ಗೆ ಸಿದ್ದರಾಜು ಕಾಳೇನಹಳ್ಳಿ ಕಾರಣರಾಗಿದ್ದಾರೆ. ಹೌದು, ಸರಿ ಸುಮಾರು ಎರಡು ದಶಕಗಳಿಂದಲೂ ಕ್ಯಾಬ್ ಚಾಲಕರಾಗಿರುವ ಸಿದ್ದರಾಜು ಅವರಿಗೆ ತಮ್ಮ ಅನುಭವಗಳನ್ನೇ ಆಧರಿಸಿ ಚಿತ್ರ ನಿರ್ಮಾಣ ಮಾಡಬೇಕೆಂಬ ಹಂಬಲವಿತ್ತು. ಆದರೆ, ಹಣವಿರಲಿಲ್ಲ. ಕ್ಯಾವ್‌ನಲ್ಲಿ ಪಯಣಿಸುತ್ತಿದ್ದ, ಜ್ಞಾನೇಶ್ ಅವರ ಬಳಿ ಸಿದ್ದರಾಜು ಈ ವಿಷಯ ಹೇಳಿದಾಗ, ಚಿತ್ರ ನಿರ್ಮಾಣಕ್ಕೆ ಕೈ ಜೋಡಿಸುವ ಮನಸ್ಸು ಮಾಡಿದ್ದಾರೆ ಜ್ಞಾನೇಶ್. ನಂತರ ಇಬ್ಬರು ಸೇರಿ ಕೆ.ಹೆಚ್.ಎಸ್ ಬ್ಯಾನರ್‌ನಲ್ಲಿ ಸಿನಿಮಾ ನಿರ್ಮಿಸಿದ್ದಾರೆ.

ತಮ್ಮ ಕನಸ್ಸನ್ನೇ ನನಸು ಮಾಡಿಕೊಳ್ಳಲು ಹೆಣಗಾಡುತ್ತಿರುವವರ ನಡುವೆ ಮತ್ತೊಬ್ಬನ ಕನಸನ್ನು ನನಸು ಮಾಡಲು ಹೊರಟಿದ್ದಾರೆ ಜ್ಞಾನೇಶ್. ಒಬ್ಬ ಕ್ಯಾಬ್ ಡ್ರೈವರ್ ಅನ್ನು ಡೈರೆಕ್ಟರ್ ಮಾಡಲು ಹೋಗಿ ಪ್ಯಾಸೆಂಜರ್ ಒಬ್ಬರು ಪ್ರೊಡ್ಯೂಸರ್ ಆಗಿದ್ದಾರೆ. ಇನ್ನು, ಬಾಲ್ಯದಲ್ಲೇ ತಂದೆತಾಯಿ ಕಳೆದುಕೊಂಡ ಮಕ್ಕಳು‌ ವಿದ್ಯಾಭ್ಯಾಸ ಹಾಗೂ ತಮ್ಮ ಜೀವನ ಹೇಗೆ ರೂಪಿಸಿಕೊಳ್ಳಬೇಕು ಎಂಬ ಕಥಾವಸ್ತು ಚಿತ್ರದ ಹೈಲೈಟ್.‌ ಸದ್ಯ ಚಿತ್ರೀಕರಣ ಪೂರ್ಣಗೊಂಡು, ಬಿಡುಗಡೆಗೆ ರೆಡಿಯಾಗಿದೆ.


ಹುಲಿಯೂರುದುರ್ಗ, ಮಾಗಡಿ ತಾವರೆಕೆರೆ, ಬೆಂಗಳೂರು ನಗರ ಸುತ್ತಮುತ್ತ ಚಿತ್ರೀಕರಣ ನಡೆದಿದೆ. ಸಿದ್ದರಾಜು ಕಾಳೇನಹಳ್ಳಿ ಅವರೇ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ನಾಗೇಶ್ ಉಜ್ಜನಿ ಸಹ ನಿರ್ದೇಶನವಿದೆ. ಮಲ್ಲಿಕಾರ್ಜುನ್ ಎಮ್ ಎನ್, ಸೋಮಣ್ಣ ಅವರ ಸಹಾಯಕ ನಿರ್ದೇಶನವಿದೆ. ಅಮ್ಮನಿಂದ ದೂರವಾದ ಒಂದು ಬಡ ವರ್ಗದ ಹುಡುಗನ ಶೈಕ್ಷಣಿಕ ಹಾದಿ, ಅಮ್ಮ ಮಗನ ನಡುವಿನ ಬಾಂಧವ್ಯ ಇರುವ ಹಾಗೂ ಸಮಾಜಕ್ಕೆ ಶಿಕ್ಶಣದ ಮಹತ್ವದ ಅರಿವು ಮೂಡಿಸುವ ಕುರಿತಾದ ಈ ಚಿತ್ರದಲ್ಲಿ ಪಕ್ಕಾ ಫ್ಯಾಮಿಲಿ, ಫ್ರೆಂಡ್‍ಷಿಪ್, ಸೆಂಟಿಮೆಂಟ್ ಹಾಗೂ ಕಾಮಿಡಿಯಂತಹ ಎಲ್ಲಾ ಮನರಂಜನಾತ್ಮಕ ಅಂಶಗಳಿವೆ.

ಈ ಚಿತ್ರಕ್ಕೆ ಎ.ಟಿ.ರವೀಶ್‌ ಅವರ ಸಂಗೀತವಿದೆ. ಚಿತ್ರದಲ್ಲಿ ನಾಲ್ಕು ಹಾಡುಗಳಿವೆ. ನಾಗೇಶ್ ಉಜ್ಜನಿ, ಜ್ಞಾನೇಶ ಎಂ.ಬಿ, ಶೈಲಜಾ ಎಸ್.ರಾವ್ ಸಾಹಿತ್ಯವಿದೆ. ಸರಿಗಮಪ ವಿನ್ನರ್ ಸುನಿಲ್, ಮೆಹಬೂಬ್ ಸಾಬ್, ಕನ್ನಡ ಕೋಗಿಲೆ ತನುಷ್ ರಾಜ್ ಹಾಡಿದ್ದಾರೆ. ಮಲ್ಲ, ಕೋದಂಡರಾಮ ಚಿತ್ರದ ಸಂಜೀವ್ ರೆಡ್ಡಿ ಅವರ ಸಂಕಲನವಿದ್ದು, ರಮೇಶ್ ಹಾಗೂ ನರಸಿಂಹ ಅವರ ಛಾಯಾಗ್ರಹಣವಿದೆ. ಲಯನ್ ಗಂಗರಾಜು ಅವರ ಸಾಹಸ, ಸ್ಟಾರ್ ನಾಗಿ, ಸುರೇಶ್ ಅವರ ನೃತ್ಯ ನಿರ್ದೇಶನವಿದೆ.


ಈ ಚಿತ್ರದಲ್ಲಿ ಬಾಲನಟರಾಗಿ ತನುಷರಾಜ್, ಕಾನಿಷ್ಕ ರವಿ ದೇಸಾಯಿ, ಅಮೋಘ ಕೃಷ್ಣ, ಮಧುಸೂಧನ್, ಬೇಬಿ ಅಂಕಿತ ಜಯರಾಮ್, ಬೇಬಿಶ್ರೀ, ಜೀವನ್, ಚೇತನ್, ನವನೀತ್, ಬಾ ನಾ ರವಿ, ಚಂದ್ರಪ್ರಭಾ, ಗೋವಿಂದೇಗೌಡ, ವಿನೋದ್ ಆನಂದ್, ಮೋನಿಕ, ಶ್ರೀದೇವಿ ಮಂಜುನಾಥ, ರಾಜೇಶ್, ನವೀನ್ ರಾಜ್, ಗಂಗರಾಜು ನಾಗಶ್ರೀ, ಗುರು, ರಾಜು, ಅಂಧರಾದ ಬಸವರಾಜ್, ಪ್ರತಾಪ್ ನಟಿಸಿದ್ದಾರೆ. ಅತಿಥಿ ಪಾತ್ರದಲ್ಲಿ ಕರ್ನಾಟಕ ಜನಸೇವಾ ಟ್ರಸ್ಟಿನ ಪ್ರಶಾಂತ್ ಚಕ್ರವರ್ತಿ ಕಾಣಿಸಿಕೊಂಡಿದ್ದಾರೆ. ಗೋ ಸಂರಕ್ಷಕರಾದ ಮಹೇಂದ್ರ ಮುನ್ನೋತ್ ಶಿಕ್ಷಣ ಸಚಿವರಾಗಿ ನಟಿಸಿದ್ದಾರೆ.

Categories
ಸಿನಿ ಸುದ್ದಿ

ಕರುನಾಡ ಚಕ್ರವರ್ತಿಗೆ ಅಭಿನಯ ಚಕ್ರವರ್ತಿ ಫಸ್ಟ್‌ ಕ್ಲಾಪ್;‌ ಶಿವಣ್ಣ ಹೊಸ ಚಿತ್ರ ಶುರು…

ಒಬ್ಬರು ಕರುನಾಡ ಚಕ್ರವರ್ತಿ ಇನ್ನೊಬ್ಬರು ಅಭಿನಯ ಚಕ್ರವರ್ತಿ. ಗಂಧದಗುಡಿಯ ಈ ಇಬ್ಬರು ಚಕ್ರವರ್ತಿಗಳು ಮಂಗಳವಾರ ಬೆಳಗ್ಗೆ ೮ ಗಂಟೆ ಸುಮಾರಿಗೆ ಐಷರಾಮಿ ಹೋಟೆಲ್‌ನಲ್ಲಿ ಕ್ಯಾಮೆರಾಗೆ ಸೆರೆ ಸಿಕ್ಕರು. ಇಬ್ಬರು ಚಕ್ರವರ್ತಿಗಳನ್ನು ಒಂದೇ ಫ್ರೇಮ್‌ನಲ್ಲಿ ನೋಡಿ ಅವರಿಬ್ಬರ ಫ್ಯಾನ್ಸ್ ಮಾತ್ರವಲ್ಲ ಕ್ಯಾಮೆರಾ ಕೂಡ ಖುಷಿಪಡ್ತು. ಈ ಖುಷಿ ಹಾಗೂ ಸಂಭ್ರಮಕ್ಕೆ ಕಾರಣವಾಗಿದ್ದು ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ನಟನೆಯ `ನೀ ಸಿಗೋವರೆಗೂ’ ಸಿನಿಮಾ.

ಸೆಂಚುರಿಸ್ಟಾರ್ ಅಭಿನಯದ ೧೨೪ನೇ ಚಿತ್ರವಾದ `ನೀ ಸಿಗೋವರೆಗೂ’ ಸಿನಿಮಾ ಮುಹೂರ್ತ ನೆರವೇರಿತು. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ವಿಶೇಷ ಅತಿಥಿಯಾಗಿ ಆಗಮಿಸಿದ್ದರು. ಫಸ್ಟ್ ಕ್ಲ್ಯಾಪ್ ಮಾಡಿ ಶಿವಣ್ಣನ ನಯಾ ಚಿತ್ರಕ್ಕೆ ಸುದೀಪ್ ಶುಭ ಕೋರಿದರು 124 ಸಿನಿಮಾ ಮಾಡೋದು ತಮಾಷೆಯ ಮಾತಲ್ಲ ಇಂಡಸ್ಟ್ರಿಗೆ ಬಂದು 35 ವರ್ಷದಲ್ಲಿ 124 ಸಿನಿಮಾ ಮಾಡಿ ಮುನ್ನುಗುತ್ತಿದ್ದಾರೆ ಅಂದರೆ, ಸಿನಿಮಾ ಮೇಲೆ ಅವರಿಗಿರುವ ಪ್ರೀತಿ-ಭಕ್ತಿ ಹಾಗೂ ಶ್ರದ್ದೆಯನ್ನು ತೋರಿಸುತ್ತೆ ಎಂದರು. ತಮ್ಮ ಕರಿಯರ್ ಆರಂಭದ ದಿನಗಳನ್ನು ಮೆಲುಕು ಹಾಕಿದ ಕಿಚ್ಚ, ನನ್ನ ಬಹುತೇಕ ಸಿನಿಮಾಗಳಿಗೆ ಶಿವಣ್ಣ ಫಸ್ಟ್ ಕ್ಲಾಪ್ ಮಾಡಿ ತುಂಬು ಹೃದಯದಿಂದ ಹಾರೈಸಿದ್ದಾರೆ ಹೀಗಾಗಿ ನನ್ನ ಸಿನಿ ಜರ್ನಿಯಲ್ಲಿ ಕರುನಾಡ ಚಕ್ರವರ್ತಿಯ ಪಾತ್ರ ಬಹಳಷ್ಟಿದೆ ಎಂದರು. ಶಿವಣ್ಣನಿಗೋಸ್ಕರ ಡೈರೆಕ್ಟರ್ಸ್ ಈಗಲೂ ಲವ್‌ಸ್ಟೋರಿ ಕಥೆಗಳನ್ನು ರಚಿಸುತ್ತಾರೆ ಆದರೆ ನಮಗ್ಯಾಕೆ ಲವ್‌ಸ್ಟೋರಿ ಕಾನ್ಸೆಪ್ಟ್ ಗಳನ್ನು ನಿರ್ದೇಶಕರು ಮಾಡ್ತಿಲ್ಲವೋ ಏನೋ? ನನಗೆ ಈ ವಿಚಾರದಲ್ಲಿ ಬೇಸರ ಇದೆ ಅಂತ ಮೀಸೆ ಮರೆಯಲ್ಲಿ ನಗುತ್ತಾ ಕಿಚ್ಚ ಹಾಸ್ಯ ಚಟಾಕಿ ಹಾರಿಸಿದರು.

ಸ್ಯಾಂಡಲ್‌ವುಡ್‌ನ ಚಿರ ಯುವಕ ಶಿವಣ್ಣ ೫೯ರಲ್ಲೂ ಯಂಗ್ ಅಂಡ್ ಎನರ್ಜಿಟಿಕ್. ಇವತ್ತಿನ ಹೀರೋಗಳಿಗೆ ಸೆಡ್ಡು ಹೊಡೆಯುವ ಹ್ಯಾಟ್ರಿಕ್ ಹೀರೋ ಮತ್ತೆ ಲವ್ವರ್ ಬಾಯ್ ಆಗಿ ಅಖಾಡಕ್ಕೆ ಇಳಿಯುತ್ತಿದ್ದಾರೆ. 124ನೇ ಚಿತ್ರ `ನೀ ಸಿಗೋವರೆಗೂ’ ಮೂವೀಯಲ್ಲಿ ರೊಮ್ಯಾಂಟಿಕ್ ಹೀರೋ ಆಗಿ ಮೆರೆಯಲಿದ್ದು ಟಿಟೌನ್ ಬ್ಯೂಟಿ ಮೆಹ್ರೀನ್ ಫಿರ್ಜಾದಾ ಸೆಂಚುರಿ ಸ್ಟಾರ್‌ಗೆ ಜೋಡಿಯಾಗ್ತಿದ್ದಾರೆ. ಸ್ಯಾಂಡಲ್‌ವುಡ್‌ಗೆ ಲಗ್ಗೆ ಇಡ್ಬೇಕು, ಕನ್ನಡದಲ್ಲೊಂದು ಸಿನಿಮಾ ಮಾಡ್ಬೇಕು ಅಂತ ಕನಸು ಕಂಡಿದ್ದ ಮೆಹ್ರೀನ್‌ಗೆ, ದೊಡ್ಮನೆ ಸೂಪರ್‌ಸ್ಟಾರ್ ಜೊತೆ ಅಭಿನಯಿಸೋ ಚಾನ್ಸ್ ಸಿಕ್ಕಿದೆ. ಹೀಗಾಗಿ ಮೆಹ್ರೀನ್ ಫುಲ್ ಎಕ್ಸೈಟ್ ಆಗಿದ್ದಾರೆ. ಡೆಬ್ಯೂ ಚಿತ್ರದ ಬಗ್ಗೆ ನೂರೆಂಟು ಕನಸು ಕಂಡಿದ್ದಾರೆ.

ಕರುನಾಡ ಚಕ್ರವರ್ತಿಗೆ ಇದೇ ಮೊದಲ ಭಾರಿಗೆ ರವಿ ಧುಲಿಪುಡಿ ಆಕ್ಷನ್ ಕಟ್ ಹೇಳ್ತಿದ್ದಾರೆ. ರವಿ ಧುಲಿಪುಡಿ ತೆಲುಗು ಮೂಲದವರಾಗಿದ್ದು ಶಿವಣ್ಣನನ್ನ 124ನೇ ಚಿತ್ರದಲ್ಲಿ ಲವ್ವರ್ ಬಾಯ್ ಆಗಿ ತೋರ‍್ಸೋಕೆ ಮುಂದಾಗಿದ್ದಾರೆ. ನವೀರಾದ ಪ್ರೇಮಕಥೆ ಇದಾಗಿದ್ದು ಸ್ವತಃ ಸೆಂಚುರಿಸ್ಟಾರ್ ಕೂಡ ಕೊಂಚ ಎಕ್ಸೈಟ್ ಆಗಿದ್ದಾರೆ. ಆನಂದ್ ಸಿನಿಮಾ ನೋಡಿ ಫ್ಯಾನ್ ಆಗಿರುವ ನಾರಾಲ ಶ್ರೀನಿವಾಸ್ ರೆಡ್ಡಿ ಅವರು ಇದೀಗ `ನೀ ಸಿಗೋವರೆಗೂ’ ಚಿತ್ರಕ್ಕೆ ಬಂಡವಾಳ ಹೂಡ್ತಿದ್ದಾರೆ. ಇವರ ಜೊತೆಗೆ ಸ್ವಾತಿ ವನಪಲ್ಲಿ, ಶ್ರೀಕಾಂತ್ ಧುಲಿಪುಡಿ, ಕುಡುಪುಡಿ ವಿಜಯ್ ಕುಮಾರ್ ಕೈ ಜೋಡಿಸ್ತಿದ್ದಾರೆ. ಅದ್ದೂರಿಯಾಗಿಯೇ ಸಿನಿಮಾ ಮಾಡ್ಬೇಕು ಎನ್ನುವ ಕನಸೊತ್ತಿದ್ದಾರೆ. ಶಿವಣ್ಣ-ಮೆಹ್ರೀನ್ ಜೊತೆಗೆ ನಾಸರ್, ಸಂಪತ್, ಮಂಗ್ಲಿ, ಸಾಧುಕೋಕಿಲ ಸೇರಿದಂತೆ ಹಲವರು ತಾರಾಬಳಗದಲ್ಲಿದ್ದಾರೆ. ಮಹೇಂದ್ರ ಸಿಂಹ ಕ್ಯಾಮೆರಾ ಕೈಚಳಕ ಚಿತ್ರಕ್ಕಿರಲಿದ್ದು, ಚರಣ್ ರಾಜ್ ಮ್ಯೂಸಿಕ್ ಬಾರಿಸಲಿದ್ದಾರೆ.

ಸಂಡೇ ಹೊರತುಪಡಿಸಿ ವರ್ಷದ ೩೬೫ ದಿನವೂ ಬ್ಯುಸಿ ಇರಬೇಕು ಇದು ಹ್ಯಾಟ್ರಿಕ್ ಹೀರೋ ಶಿವಣ್ಣನ ಪಾಲಸಿ. ಅದರಂತೇ ಸದಾ ಸಿನಿಮಾ ಕೆಲಸದಲ್ಲೇ ತೊಡಗಿಸಿಕೊಳ್ತಾರೆ. ಬ್ಯಾಕ್ ಟು ಬ್ಯಾಕ್ ಸಿನಿಮಾ ಒಪ್ಪಿಕೊಳ್ತಾರೆ. ಸದ್ಯ, ಬಹುನಿರೀಕ್ಷಿತ ಭಜರಂಗಿ-೨ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಭೈರಾಗಿ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ. ಈ ಮಧ್ಯೆ ೧೨೪ನೇ ಚಿತ್ರ ಸೆಟ್ಟೇರಿದೆ. ೧೨೫, ೧೨೬, ೧೨೭, ೧೨೮, ೧೨೯ನೇ ಸಿನಿಮಾಗಳು ಶಿವಣ್ಣನ ಅಕೌಂಟ್‌ನಲ್ಲಿ ನಾನು ಫಸ್ಟ್.. ನಾನು ಫಸ್ಟ್.. ಅಂತ ಕುಣಿಯುತ್ತಿವೆ. ಯಾವಾಗ ಯಾವ ಸಿನಿಮಾ ಕೈಗೆತ್ತಿಕೊಳ್ತಾರೋ ಕಾದುನೋಡಬೇಕಿದೆ. ಒಟ್ನಲ್ಲಿ ಸೆಂಚುರಿಸ್ಟಾರ್ ಮೋಸ್ಟ್ ಬ್ಯುಸಿಯೆಸ್ಟ್ ಆಕ್ಟರ್ ಅನ್ನೋದಂತೂ ದಿಟ.

ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

`ಮಾರ್ಟಿನ್’ ನಾಯಕಿ ಬಗ್ಗೆ ಆಕ್ಷನ್‌ಪ್ರಿನ್ಸ್ ಹೇಳಿದ್ದೇನು ? ಬಹದ್ದೂರ್ ಬೆಂಕಿ ಚೆಂಡಿಗೆ ಇಂಥಾ ನಾಯಕಿ ಬೇಕಂತೆ!

ನಾಯಕಿ ಆಯ್ಕೆ ಬಗ್ಗೆ ನಾನು ಟೀಮ್ ಜೊತೆ ಚರ್ಚೆ ಮಾಡಲ್ಲ. ನಾಯಕಿಯಾಗಿ ಯಾರೇ ಇದ್ದರೂ ಅಭ್ಯಂತರ ಇಲ್ಲ. ಒಂದು ಕಂಡೀಷನ್ ಅಂದರೆ, ನಾನು ಹೇಳುವ ಡೈಲಾಗ್ ಎದುರು ನಿಲ್ಲೋ ನನ್ನ ಕೋಸ್ಟಾರ್ ನಾಯಕಿಗೆ ಅರ್ಥ ಆಗ್ಬೇಕು ಅಷ್ಟೇ. ಧ್ರುವ ಅವರ ಈ ಮಾತನ್ನು ಎರಡು ರೀತಿ ಅರ್ಥೈಸಿಕೊಳ್ಳಬಹುದು. ಕನ್ನಡತಿ ನಾಯಕಿಯಾಗಬೇಕು ಎನ್ನುವುದು ಮೊದಲ ಅರ್ಥವಾದರೆ, ಕನ್ನಡ ಭಾಷೆ ಬರುವ ಯಾವುದೇ ನಾಯಕಿ ತನಗೆ ಕೋಸ್ಟಾರ್ ಆಗಬಹುದು ಎನ್ನುವುದು ಮತ್ತೊಂದು ಅರ್ಥ ನೀಡುತ್ತೆ

ಮಾಯಲೋಕದಲ್ಲಿ ಮೆರೆಯುತ್ತಿರುವ ಹಾಗೂ ಸೋಷಿಯಲ್ ಲೋಕವನ್ನು ಕಳೆದ ಎರಡು ದಿನಗಳಿಂದ ಆಳುತ್ತಿರುವ ಏಕೈಕ ಹೆಸರು ಮಾರ್ಟಿನ್'. ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಹೈವೋಲ್ಟೇಜ್ ಸಿನಿಮಾ ಇದು. ಬಹದ್ದೂರ್ ಗಂಡು ನಟನೆಯ ಐದನೇ ಚಿತ್ರ. ಅದ್ಧೂರಿ ಕಾಂಬೋ ಮತ್ತೆ ಒಂದಾಗಿರುವ ಮಹಾ ಮೂವೀ. ಒಂಭತ್ತು ವರ್ಷಗಳ ನಂತರ ಮತ್ತೆ ಜೊತೆಯಾಗಿ ಸೆನ್ಸೇಷನ್ ಸೃಷ್ಟಿಸಿರುವ ಜೋಡಿಯಮಾರ್ಟಿನ್’ ಚಿತ್ರಕ್ಕೆ ಕ್ರೇಜಿಸ್ಟಾರ್ ರವಿಚಂದ್ರನ್ ಫಸ್ಟ್ ಕ್ಲಾಪ್ ಮಾಡಿ ಶುಭ ಹಾರೈಸಿದ್ದಾರೆ. ಇದರ ಬೆನ್ನಲ್ಲೇ ಮಾರ್ಟಿನ್ ಹೊಸ ದಾಖಲೆ ಬರೆದಿದೆ. ಸೋಷಿಯಲ್ ಲೋಕದಲ್ಲಿ ಫಸ್ಟ್ ಲುಕ್ ಹಾಗೂ ಟೀಸರ್ ಧೂಳೆಬ್ಬಿಸುತ್ತಿದೆ. ಕೇವಲ ೨೪ ಗಂಟೆಯಲ್ಲಿ ೮೦ ಲಕ್ಷ ಮಂದಿ ಟೀಸರ್‌ನ ಕಣ್ತುಂಬಿಕೊಂಡಿದ್ದಾರೆ. ಇದೆಲ್ಲದರ ನಡುವೆ `ಮಾರ್ಟಿನ್’ ನಾಯಕಿ ಯಾರಾಗ್ತಾರೆ ಎನ್ನುವ ಕೂತೂಹಲ ಫಸ್ಟ್‌ ಲುಕ್‌ ಹಾಗೂ ಟೀಸರ್‌ನ ಬೀಟ್ ಮಾಡಿ ಮುನ್ನುಗುತ್ತಿದೆ. ಇದೇ ಹೊತ್ತಲ್ಲೇ ಎಂಥಾ ನಾಯಕಿ ಬೇಕು ಅನ್ನೋದನ್ನ ಆಕ್ಷನ್‌ಪ್ರಿನ್ಸ್ ಖಾಸಗಿ ಮಾಧ್ಯಮದ ಮುಂದೆ ಹೇಳಿಕೊಂಡಿದ್ದಾರೆ.

ಮಾರ್ಟಿನ್‌ ನಾಯಕಿ ಯಾರು?

ಸ್ಟಾರ್ ಸಿನಿಮಾಗಳು ಸೆಟ್ಟೇರುವ ಹೊತ್ತಲ್ಲಿ ಫ್ಯಾನ್ಸ್ ಗೆ ಹಾಗೂ ಗಾಂಧಿನಗರದ ಮಂದಿಗೆ ಟೈಟಲ್ ಮೇಲೆ ಎಷ್ಟು ಕೂತೂಹಲ ಇರುತ್ತೋ ಅಷ್ಟೇ ಕ್ಯೂರಿಯಾಸಿಟಿ ಚಿತ್ರದ ನಾಯಕಿ ಮೇಲೆಯೂ ಇರುತ್ತೆ. ಚಿತ್ರತಂಡ ಟೈಟಲ್ ಅನೌನ್ಸ್ ಮಾಡಿ, ಫಸ್ಟ್ ಲುಕ್-ಮೋಷನ್ ಪೋಸ್ಟರ್-ಟೀಸರ್ ಅಂತ ಎಲ್ಲಾ ರಿವೀಲ್ ಮಾಡಿದ್ರೂ ಕೂಡ ಹೀರೋಯಿನ್ ಮೇಲಿರುವ ಕೂತೂಹಲದ ವ್ಯಾಮೋಹ ಮಾತ್ರ ಕಮ್ಮಿಯಾಗೋದಿಲ್ಲ. ಸದ್ಯಕ್ಕೆ, `ಮಾರ್ಟಿನ್’ ಹೀರೋಯಿನ್ ಯಾರು ಎನ್ನುವುದೇ ಮಿಲಿಯನ್ ಡಾಲರ್ ಪ್ರಶ್ನೆ. ಆ ಪ್ರಶ್ನೆಗೆ ಉತ್ತರ ಕೊಡುವುದಕ್ಕೆ ಹದಿನೈದು ದಿನ ಟೈಮ್ ಬೇಕು ಯಾಕಂದ್ರೆ ಇನ್ನೂ ಫೈನಲೈಸ್ ಮಾಡಿಲ್ಲ ಅಂತ ನಿರ್ದೇಶಕ ಎ.ಪಿ ಅರ್ಜುನ್ ಹೇಳಿದ್ದಾರೆ. ಇತ್ತ ಧ್ರುವ ಸರ್ಜಾ ತನ್ನ ಪಕ್ಕದಲ್ಲಿ ನಿಲ್ಲುವ ನಾಯಕನಟಿ ಹೇಗಿರಬೇಕು ಎನ್ನುವುದನ್ನು ಮುಕ್ತವಾಗಿ ಹೇಳಿದ್ದಾರೆ.

ನನ್ನ ಡೈಲಾಗ್‌ ಅವರಿಗೆ ಅರ್ಥ ಆಗ್ಬೇಕಷ್ಟೇ!

ಆಕ್ಷನ್‌ಪ್ರಿನ್ಸ್ ಧ್ರುವ ಸರ್ಜಾ ಜೊತೆ ಇಲ್ಲಿಯವರೆಗೆ ಒಟ್ಟು ಐದು ಜನ ನಾಯಕಿಯರು ಸ್ಕ್ರೀನ್ ಶೇರ್ ಮಾಡಿದ್ದಾರೆ. ಬಹದ್ದೂರ್ ಗಂಡಿಗೆ ಜೊತೆಯಾದ ಮೊದಲ ನಾಯಕಿ ರಾಧಿಕಾ ಪಂಡಿತ್. ಅದ್ದೂರಿ ಚಿತ್ರದಲ್ಲಿ ಧ್ರುವ-ರಾಧಿಕಾ ಕೆಮಿಸ್ಟ್ರಿ ವರ್ಕ್ ಆಗಿದ್ದೇ ಬಂತು ಬಹದ್ದೂರ್ ಚಿತ್ರಕ್ಕೆ ಮತ್ತೆ ಜೋಡಿ ಮಾಡಿದರು. ಇವರಿಬ್ಬರು ಜೊತೆಯಾಗಿ ಮೆರವಣಿಗೆ ಹೊರಟ ಎರಡು ಸಿನಿಮಾಗಳು ಬ್ಲಾಕ್‌ಬಸ್ಟರ್ ಹಿಟ್ ಆದ್ವು. ಮುಂದೆ ಡಿಂಪಲ್‌ಕ್ವೀನ್-ಹರಿಪ್ರಿಯಾ-ವೈಶಾಲಿ ದೀಪಕ್ ಸೇರಿದಂತೆ ಮೂವರು ಸುಂದರಿಯರ ಜೊತೆ ಡ್ಯುಯೆಟ್ ಹಾಡಿ ಭರ್ಜರಿ' ಚಿತ್ರದಲ್ಲಿ ಹ್ಯಾಟ್ರಿಕ್ ಬಾರಿಸಿದರು. ಕಿರಿಕ್ ಕ್ವೀನ್ ಜೊತೆಯಾಗಿಪೊಗರು’ ತೋರಿಸಿದರು. ಇದೀಗ ಮಾರ್ಟಿನ್' ಸಿನಿಮಾ ಮೂಲಕ ಪ್ಯಾನ್ ಇಂಡಿಯಾದಲ್ಲಿ ಹವಾ ಎಬ್ಬಿಸೋಕೆ ಧ್ರುವ ಹೊರಟು ನಿಂತಿದ್ದಾರೆ.ನಾಯಕಿಯ ಆಯ್ಕೆ ಬಗ್ಗೆ ನಾನು ಟೀಮ್ ಜೊತೆ ಯಾವತ್ತೂ ಚರ್ಚೆ ಮಾಡುವುದಿಲ್ಲ. ನಾಯಕಿಯಾಗಿ ಅವರು ಯಾರನ್ನೂ ಕೊಟ್ಟರೂ ನನಗೆ ಅಭ್ಯಂತರ ಇಲ್ಲ ನಾನು ಆಕ್ಟ್ ಮಾಡ್ತೀನಿ. ನಂದು ಒಂದೇ ಒಂದು ಕಂಡೀಷನ್ ಅಂದರೆ ನಾನು ಹೇಳುವ ಮಾತು ಹಾಗೂ ಡೈಲಾಗ್ ಎದುರುಗಡೆ ನಿಲ್ಲುವ ನನ್ನ ಕೋಸ್ಟಾರ್ ನಾಯಕಿಗೆ ಅರ್ಥ ಆಗ್ಬೇಕು ಅಷ್ಟೇ.

ಪರಭಾಷೆ ಸುಂದರಿಯರು ಬರಬಹುದೇನೋ?

ಧ್ರುವ ಸರ್ಜಾರ ಈ ಮಾತನ್ನು ಎರಡು ರೀತಿಯಾಗಿ ಅರ್ಥೈಸಿಕೊಳ್ಳಬಹುದು. ಅಪ್ಪಟ ಕನ್ನಡತಿ ನಾಯಕಿಯಾಗಬೇಕು ಎನ್ನುವುದು ಮೊದಲ ಅರ್ಥವಾದರೆ, ಕನ್ನಡ ಭಾಷೆ ಬರುವ ಯಾವುದೇ ನಾಯಕಿ ತನಗೆ ಕೋಸ್ಟಾರ್ ಆಗಬಹುದು ಎನ್ನುವುದು ಮತ್ತೊಂದು ಅರ್ಥ ನೀಡುತ್ತೆ. ಅಂದ್ಹಾಗೇ, ಇಲ್ಲಿಯವರೆಗೆ ಬಹದ್ದೂರ್ ಬೆಂಕಿಚೆಂಡಿಗೆ ನಾಯಕಿಯಾಗಿರುವುದು ಅಪ್ಪಟ ಕನ್ನಡತಿಯರೇ ಕನ್ನಡದ ಮಣ್ಣಿನವರೇ. ಹೀಗಾಗಿ, ಐದನೇ ಸಿನಿಮಾಗೂ ಕನ್ನಡದ ನಟಿಯೇ ಆಗ್ತಾರೆನ್ನುವ ನಿರ್ಧಾರಕ್ಕೆ ಬರುವುದಾದರೂ? ಮಾರ್ಟಿನ್' ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ನಿರ್ಮಾಣಗೊಳ್ಳುತ್ತಿರುವುದರಿಂದ ಪರಭಾಷೆಯ ಕೋಟಿ ಸುಂದರಿಯರುಮಾರ್ಟಿನ್’ ಅಡ್ಡಕ್ಕೆ ಗ್ರ್ಯಾಂಡ್ ಎಂಟ್ರಿ ಕೊಡಬಹುದು. ಆಕ್ಷನ್‌ಪ್ರಿನ್ಸ್ ಪಕ್ಕದಲ್ಲಿ ನಿಂತರೂ ನಿಲ್ಲಬಹುದು.. ಜೋಗಿ ಪ್ರೇಮ್ ಏಮಿಜಾಕ್ಸನ್‌ಗೆ ಕನ್ನಡ ಹೇಳಿಕೊಟ್ಟ ಹಾಗೇ ಕನ್ನಡ ಹೇಳಿಕೊಟ್ಟು ಆಕ್ಟ್ ಮಾಡಿಸುವ ಸಂದರ್ಭ ಎ.ಪಿ ಅರ್ಜುನ್ ಸರ್‌ಗೆ ಬಂದರೂ ಬರಬಹುದು. ಸಾರಥಿಯ ಮಾತಿಗೆ ಆಕ್ಷನ್‌ಪ್ರಿನ್ಸ್ ಸೈ ಎನ್ನಬೇಕಾದ ಸಿಚ್ಯೂಯೇಷನ್ ಕ್ರಿಯೇಟ್ ಆಗಬಹುದು.

ಇಷ್ಟೆಲ್ಲಾ ಅಂತೆ-ಕಂತೆ ನಡುವೆ ಒಂದು ಸಿನಿಮಾಗೆ ನಾಯಕಿಯ ಆಯ್ಕೆ ಹೇಗೆ ನಡೆಯುತ್ತೆ? ಅದರಲ್ಲೂ ಸ್ಟಾರ್ ಹೀರೋಗಳ ಚಿತ್ರಕ್ಕೆ ಹೀರೋಯಿನ್ ಸೆಲೆಕ್ಷನ್ ಹೇಗೆ ಮಾಡುತ್ತಾರೆ? ನಾಯಕಿಯರನ್ನು ಫೈನಲ್ ಮಾಡೋದು ನಿರ್ದೇಶಕರಾ? ನಟರಾ? ನಿರ್ಮಾಪಕರಾ? ಅಥವಾ ಸಿನಿಮಾದ ಕಥೆ ಬಯಸಿದಂತೆ ನಟಿಯರನ್ನು ಆಯ್ಕೆ ಮಾಡ್ತಾರಾ? ಈ ಎಲ್ಲಾ ಪ್ರಶ್ನೆಗೆ ಒಂದೇ ಸಾಲಿನಲ್ಲಿ ಉತ್ತರ ಕೊಡುವುದಕ್ಕೆ ಆಗುವುದಿಲ್ಲ. ಯಾಕಂದ್ರೆ, ಒಂದೊಂದು ಸಿನಿಮಾಗೆ ಒಂದೊಂದು ರೀತಿಯ ಸೆಲೆಕ್ಷನ್ ಪ್ಯಾಟ್ರನ್ ಇರುತ್ತೆ. ಹೀರೋ ಕಾಲ್‌ಶೀಟ್ ಸಿಕ್ಕಮೇಲೆ ನಿರ್ದೇಶಕರು ಕಥೆ ಬರೆಯೋದ್ರಿಂದ ಸ್ಕ್ರಿಪ್ಟ್ ನಿರ್ದಿಷ್ಠ ನಾಯಕಿಯರನ್ನ ಕೇಳೋದಿಲ್ಲ ಎನ್ನುವ ಮಾತು ಚಾಲ್ತಿಯಲ್ಲಿದೆ.

ಇದರ ಜೊತೆಗೆ ಏನಪ್ಪಾ ಅಂದರೆ, ಅನ್ನದಾತರು ಗಟ್ಟಿ ಗುಂಡಿಗೆಯವರಾದರೆ ಹೀರೋ ಹೈಟ್‌ಗೆ-ಪರ್ಸನಾಲಿಟಿಗೆ-ಇಮೇಜ್‌ಗೆ ತಕ್ಕಂತೆ ಕೋಟಿ ಕೋಟಿ ಸುರಿದು ಬೇಡಿಕೆಯ ನಟಿಯರನ್ನೇ ಹೀರೋ ಪಕ್ಕದಲ್ಲಿ ನಿಲ್ಲಿಸುತ್ತಾರೆ. ಗುಂಡಿಗೆ ಕೊಂಚ ವೀಕ್- ಖಜಾನೆ ಸ್ವಲ್ಪ ಮಂಕು ಎನ್ನುವ ನಿರ್ಮಾಪಕರು ನಾಯಕಿಗೆ ಹೈಹೀಲ್ಸ್ ಹಾಕ್ಸಿ ಹೈಟ್ ಮ್ಯಾಚ್ ಮಾಡ್ರಿ ಸರಾ ಅಂತ ಡೈರೆಕ್ಟರ್ಸ್ ಹಾಗೂ ಹೀರೋನಾ ಕನ್‌ವಿನ್ಸ್ ಮಾಡ್ತಾರಂತೆ. ನಿರ್ಮಾಪಕರು ಅನ್ನದಾತರಾಗಿರೋದ್ರಿಂದ ಓಕೆ ಎನ್ನಬೇಕಾಗುತ್ತೇನೋ ಗೊತ್ತಿಲ್ಲ.

ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಲಂಕೆಯಲ್ಲಿ ರಾಮನ ತೇಜಸ್ಸು, ರಾವಣನ ವರ್ಚಸ್ಸು ಅವೆರೆಡೂ ಅವನ ತಾಕತ್ತು…! ಒಂಟಿಯಾಗಿ ಹೊಡೆದಾಡಿ ಸಾಮ್ರಾಜ್ಯ ಕಟ್ಟೋಕೆ ಯೋಗಿ ರೆಡಿ!!

ಯೋಗಿ ಅಂತಹ ನಟರಿದ್ದರೆ, ಇಂತಹ ಹತ್ತಾರು ಸಿನಿಮಾಗಳನ್ನು ಮಾಡಬಹುದು. ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ತುಂಬಾ ಸಹಕಾರ ಮನೋಭಾವ ಇರುವ ಯೋಗಿ ಅವರ ಪ್ರೋತ್ಸಾಹದಿಂದ ಲಂಕೆ ಸಿನಿಮಾ ಬೇರೆ ಲೆವೆಲ್‌ಗೆ ಹೋಗಿದೆ. ಈಗ “ಲಂಕೆ”ಗೆ ಬಿಡುಗಡೆ ಮೊದಲೇ ಸಿಗುತ್ತಿರುವ ರೆಸ್ಪಾನ್ಸ್‌ ನೋಡಿದರೆ, ಖಂಡಿತ ಇಲ್ಲಿ ಗಟ್ಟಿನೆಲೆ ಕಾಣುತ್ತೇವೆ ಎಂಬ ಭರವಸೆ ಇದೆ

“ಸೂರ್ಯನೆ ಕಾಣದ ಈ ಮಾಯಾ ಬಜಾರ್‌ನಲ್ಲಿ ಭಾವನೆಗೇ ಬೆಲೆ ಇಲ್ಲ… ರಾಮನ ತೇಜಸ್ಸು, ರಾವಣನ ವರ್ಚಸ್ಸು, ಇವೆರೆಡೂ ಇವನ ತಾಕತ್ತು. ಸೈನ್ಯ ಇಟ್ಕೊಂಡ್‌ ಹೋರಾಡೋನು ದಳಪತಿ, ಒಂಟಿಯಾಗಿ ಹೊಡೆದಾಡೋನು ಅಧಿಪತಿ…ʼ
ಇದು ಯೋಗಿ ಅಭಿನಯದ “ಲಂಕೆʼ ಚಿತ್ರದ ಅಫಿಷಿಯಲ್‌ ಟೀಸರ್‌ನಲ್ಲಿ ಬರೋ ಡೈಲಾಗ್.‌ ಡೈಲಾಗ್‌ ಮಾತ್ರ ಖಡಕ್‌ ಆಗಿಲ್ಲ. ಆ ಟೀಸರ್‌ನಲ್ಲಿ ಕಾಣೋ ಫೈಟು ಕೂಡ ಅಷ್ಟೇ ಖದರ್‌ ಆಗಿದೆ. ಅಲ್ಲಿಗೆ “ಲಂಕೆʼ ಪಕ್ಕಾ ಮಾಸ್‌ ಅನ್ನೋದು ಸಾಬೀತಾಗುತ್ತದೆ. ಇಷ್ಟಕ್ಕೂ ಈ “ಲಂಕೆ” ಬಗ್ಗೆ ಹೇಳೋಕೆ ಹೊರಟಿರುವ ವಿಷಯ, ಮೊನ್ನೆ ಮೊನ್ನೆಯಷ್ಟೇ ರಿಲೀಸ್‌ ಆಗಿರುವ ಅಫಿಷಿಯಲ್‌ ಟೀಸರ್‌ಗೆ ಭರಪೂರ ಮೆಚ್ಚುಗೆ ಸಿಗುತ್ತಿದೆ. ಟೀಸರ್‌ ನೋಡಿದವರಿಗೆ ಯೋಗಿಯ ತಾಕತ್ತಷ್ಟೇ ಅಲ್ಲ, ಆ ಸಿನಿದೊಳಗಿರುವ ತಾಕತ್ತು ಎಷ್ಟಿದೆ ಅನ್ನೋದು ಗೊತ್ತಾಗುತ್ತೆ. ಅಷ್ಟರಮಟ್ಟಿಗೆ ನಿರ್ದೇಶಕ ರಾಮ್‌ ಪ್ರಸಾದ್‌ ಪವರ್‌ಫುಲ್‌ ಆಗಿ ಕಟ್ಟಿಕೊಟ್ಟಿದ್ದಾರೆ.

ಒಂದು ಸಿನಿಮಾ ಮಾಡೋದು ದೊಡ್ಡ ವಿಷಯವಲ್ಲ, ಆ ಸಿನಿಮಾದೊಳಗಿರುವ ಅಂಶಗಳನ್ನು ಗುರುತಿಸಿ, ಅದನ್ನೆಲ್ಲಾ ಟೀಸರ್‌ಗೆ ಸೇರಿಸಿ ಸಿನಿಮಾಗೂ ಮೊದಲೇ ಪ್ರೇಕ್ಷಕರ ಮುಂದೆ ಬಿಡುವ ಜಾಣತನ ದೊಡ್ಡದು. ಅಂಥದ್ದೊಂದು ಜಾಣತನ ಟೀಸರ್‌ನಲ್ಲಿ ಎದ್ದು ಕಾಣುತ್ತದೆ. ನಿರ್ದೇಶಕ ರಾಮ್‌ಪ್ರಸಾದ್‌ ಈ ಬಾರಿ ಸಕ್ಸಸ್‌ ದಾರಿಯಲ್ಲಿದ್ದಾರೆ ಅನ್ನುವುದಕ್ಕೆ ಆ ಟೀಸರ್‌ ಸಾಕ್ಷಿ. ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಲಕ್ಷಗಟ್ಟಲೆ ವೀಕ್ಷಣೆ ಪಡೆದ “ಲಂಕೆ” ಟೀಸರ್‌ಗೆ ಎಲ್ಲೆಡೆಯಿಂದಲೂ ಮೆಚ್ಚುಗೆ ಸಿಕ್ಕಿದೆ. ಈಗಾಗಲೇ ಚಿತ್ರದ ಎರಡು ಹಾಡುಗಳು ಕೂಡ ಟ್ರೆಂಡಿಂಗ್‌ನಲ್ಲಿವೆ. ಶನಿವಾರ ಚಿತ್ರದ ಆಡಿಯೋ ಕೂಡ ಹೊರಬರಲಿದೆ ಅನ್ನೋದು ಹೊಸ ಸುದ್ದಿ.

ಸದ್ಯ ಕೊರೊನಾ ಹಾವಳಿ ಅಲ್ಲಲ್ಲಿ ಇರುವುದರಿಂದ ಸಿನಿಮಾ ಬಿಡುಗಡೆ ಕೊಂಚ ತಡವಾಗಿದೆ. ವೀಕೆಂಡ್‌ ಕರ್ಪ್ಯೂ ಕೆಲವು ಜಿಲ್ಲೆಗಳಲ್ಲಿದೆ. ಅದೆಲ್ಲವೂ ತೆರೆವಾದ ನಂತರ “ಲಂಕೆ” ಪ್ರೇಕ್ಷಕನ ಮುಂದೆ ಬರಲಿದೆ. ಅಂದಹಾಗೆ, “ಲಂಕೆ” ಯೋಗಿ ಅವರಿಗೊಂದು ಕಮ್‌ಬ್ಯಾಕ್‌ ಸಿನಿಮಾ ಅಂದರೂ ತಪ್ಪಿಲ್ಲ. ಯಾಕೆಂದರೆ, ಯೋಗಿ ಅಭಿನಯದ ಹಿಂದಿನ ಸಿನಿಮಾ ಅಷ್ಟೇನೂ ಸದ್ದು ಮಾಡಲಿಲ್ಲ. ಈಗ “ಲಂಕೆ” ಮೇಲೆ ಬಹು ನಿರೀಕ್ಷೆ ಇಟ್ಟುಕೊಂಡಿರುವ ಯೋಗಿಗೂ ಒಳ್ಳೆಯ ಯೋಗ ಬರುತ್ತೆ ಎಂಬ ನಂಬಿಕೆಯಂತೂ ಇದೆ. ಎಲ್ಲರ ಶ್ರಮದಿಂದಾಗಿ “ಲಂಕೆʼ ಚೆನ್ನಾಗಿ ಮೂಡಿಬಂದಿದೆ ಎಂಬುದು ನಿರ್ದೇಶಕ ರಾಮ್‌ಪ್ರಸಾದ್‌ ಅವರ ಮಾತು.

ಯೋಗಿ ಅಂತಹ ನಟರಿದ್ದರೆ, ಖಂಡಿತವಾಗಿಯೂ ಇಂತಹ ಹತ್ತಾರು ಸಿನಿಮಾಗಳನ್ನು ಮಾಡಬಹುದು. ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ತುಂಬಾನೇ ಸಪೋರ್ಟಿಂಗ್‌ ನೇಚರ್‌ ಇರುವ ಯೋಗಿ ಅವರ ಸಹಕಾರದಿಂದ ಸಿನಿಮಾ ಬೇರೆ ಲೆವೆಲ್‌ಗೆ ಹೋಗಿದೆ. ನಾವೂ ಕೂಡ ಇಷ್ಟು ದಿನಗಳ ಕಾಲ ಗಟ್ಟಿನೆಲೆ ಕಾಣಬೇಕು ಎಂಬ ತುಡಿತವಿತ್ತು. ಈಗ “ಲಂಕೆ”ಗೆ ಬಿಡುಗಡೆ ಮೊದಲೇ ಸಿಗುತ್ತಿರುವ ರೆಸ್ಪಾನ್ಸ್‌ ನೋಡಿದರೆ, ಖಂಡಿತವಾಗಿಯೂ ಇಲ್ಲಿ ಗಟ್ಟಿನೆಲೆ ಕಾಣುತ್ತೇವೆ ಎಂಬ ಭರವಸೆ ಇದೆ.
ಸದ್ಯ ‘ಲಂಕೆ’ ಬಿಡುಗಡೆಗೆ ರೆಡಿಯಾಗಿದೆ. ಈಗಾಗಲೇ ‘ಲಂಕೆ’ ಚಿತ್ರದ ವಿಡಿಯೋ ಸಾಂಗ್‌ವೊಂದನ್ನು ಚಿತ್ರತಂಡ ಬಿಡುಗಡೆ ಮಾಡಿದ್ದು, ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಸಾಕಷ್ಟು ಮೆಚ್ಚುಗೆ ಪಡೆದಿದೆ.

ನಯನಕೆ ನಯನ… ಎಂಬ ಬ್ಯೂಟಿಫುಲ್ ಸಾಂಗ್ಗೆ ಮೆಚ್ಚುಗೆ ಸಿಕ್ಕಿದೆ. ಈಗಾಗಲೇ ಸಿನಿಮಾ ತಂಡ ಪ್ರಚಾರ ಶುರು ಮಾಡಿದೆ. “ಲಂಕೆ” ಒಂದು ಪಕ್ಕಾ ಮಾಸ್‌ ಸಿನಿಮಾ. ಅದು ಟೀಸರ್‌ನಲ್ಲೇ ಗೊತ್ತಾಗಲಿದೆ. ಯೋಗಿ ಅವರಿಲ್ಲಿ ಲಂಕಾಧಿಪತಿಯಾಗಿ ಅಬ್ಬರಿಸಲಿದ್ದಾರೆ. ಇನ್ನು, ಅವರಿಗೆ ಕ್ರಿಷಿ ತಾಪಂಡ ಹಾಗು ಕಾವ್ಯಾ ಶೆಟ್ಟಿ ನಾಯಕಿಯರು. ವಿಶೇಷವೆಂದರೆ, ನಟ ಸಂಚಾರಿ ವಿಜಯ್ ಕೂಡ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು, ಈ ಚಿತ್ರಕ್ಕೆ ಕಾರ್ತಿಕ್‌ ಶರ್ಮ ಸಂಗೀತ ನೀಡಿದ್ದಾರೆ. ಇರುವ ನಾಲ್ಕು ಹಾಡುಗಳು ಕೂಡ ವಿಭಿನ್ನ ಶೈಲಿಯಲ್ಲಿ ಮೂಡಿಬಂದಿವೆ. ಧನಂಜಯ್ ನೃತ್ಯ ನಿರ್ದೇಶನವಿದೆ. ಚಿತ್ರಕ್ಕೆ ಸುರೇಖ ರಾಮ್ ಪ್ರಸಾದ್ ಹಾಗು ಪಟೇಲ್ ಶ್ರೀನಿವಾಸ್ ಅವರು ನಿರ್ಮಾಣದ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

Categories
ಸಿನಿ ಸುದ್ದಿ

ಪೋಲೀಸ್ ಸ್ಟೋರಿಗೆ 25! ಯಶಸ್ವಿ ಚಿತ್ರಕ್ಕೆ ಕಾರಣರಾದ ಎಲ್ಲರಿಗೂ ಧನ್ಯವಾದ ಅರ್ಪಿಸಿದ ಸಾಯಿಕುಮಾರ್

ಕೆಲ ಸಿನಿಮಾಗಳು ಹಾಗೆನೇ. ಎಷ್ಟೇ ವರ್ಷ ಉರುಳಿದರೂ ಪದೇ ಪದೇ ನೆನಪಾಗುತ್ತಲೇ ಇರುತ್ತವೆ. ಅಷ್ಟರಮಟ್ಟಿಗೆ ಪ್ರಭಾವ ಬೀರಿರುವ ಸಿನಿಮಾಗಳ ಪೈಕಿ, ಈ ಹಿಂದೆ ಕನ್ನಡದಲ್ಲಿ ಜೋರು ಸದ್ದು ಮಾಡಿದ “ಪೋಲೀಸ್‌ ಸ್ಟೋರಿ”ಯೂ ಒಂದು. ಹೌದು, “ಪೋಲೀಸ್‌ ಸ್ಟೋರಿ” ಕನ್ನಡ ಚಿತ್ರರಂಗದಲ್ಲಿ ದೊಡ್ಡ ಸುದ್ದಿ ಮಾಡಿದ್ದಂತೂ ನಿಜ. ಅದಕ್ಕೆ ಕಾರಣ, ಚಿತ್ರದ ಕಥೆ ಹಾಗೂ ಸಾಯಿಕುಮಾರ್‌ ಅವರ ನಟನೆ. ಅಲ್ಲಿ ನಟನೆ ಅನ್ನುವುದಕ್ಕಿಂತ ಅವರ ಡೈಲಾಗ್‌ ಡಿಲವರಿಯೇ ಚಿತ್ರವನ್ನು ಬಹು ಎತ್ತರಕ್ಕೆ ಕೊಂಡೊಯ್ದ ವಿಷಯ ಎಲ್ಲರಿಗೂ ಗೊತ್ತು. ಆ ಚಿತ್ರದ ಡೈಲಾಗ್‌ಗಳು ಎಲ್ಲರ ಬಾಯಲ್ಲೂ ಗುನುಗುವಂತಾಗಿದ್ದು ಸುಳ್ಳಲ್ಲ. ಇಂದಿಗೂ ಪಡ್ಡೆ ಹುಡುಗ್ರು ಸಾಯಿಕುಮಾರ್‌ ಬಾಯಿಂದ ಬಂದಂತಹ ಪೋಲೀಸ್‌ ಸ್ಟೋರಿ ಸಿನಿಮಾದ ಡೈಲಾಗ್‌ ಹೇಳ್ತಾರೆ ಅಂದರೆ, ಆ ಸಿನಿಮಾದ ಖಡಕ್‌ ಮಾತುಗಳು ಎಷ್ಟರಮಟ್ಟಿಗೆ ಪರಿಣಾಮ ಬೀರಿವೆ ಅನ್ನೋದನ್ನು ಊಹಿಸಿಕೊಳ್ಳಿ.


ಅಷ್ಟಕ್ಕೂ ಈಗ ಯಾಕೆ “ಪೋಲೀಸ್‌ ಸ್ಟೋರಿ” ಸಿನಿಮಾ ವಿಷಯ ಅಂದುಕೊಂಡ್ರಾ? ವಿಷಯವಿದೆ. ಡೈಲಾಗ್ ಕಿಂಗ್ ಸಾಯಿಕುಮಾರ್ ಅಭಿನಯಿಸಿ, ಭರ್ಜರಿ ಯಶಸ್ಸು ಕಂಡಿದ್ದ “ಪೊಲೀಸ್ ಸ್ಟೋರಿ” ಚಿತ್ರ ಇಂದಿಗೆ ಯಶಸ್ವಿ ೨೫ ವರ್ಷಗಳನ್ನು ಪೂರೈಸಿದೆ. ಹೌದು, ಆಗಸ್ಟ್ 16 ಕ್ಕೆ “ಪೋಲಿಸ್‌ ಸ್ಟೋರಿ” ರಿಲೀಸ್‌ ಆಗಿ 25 ವರ್ಷಗಳಾಗಿವೆ. 1996 ರಲ್ಲಿ ತೆರೆ ಕಂಡ ಈ ಸಿನಿಮಾ, ಭರ್ಜರಿ ಯಶಸ್ಸು ಪಡೆದಿತ್ತು.
ಕನ್ನಡ ಮಾತ್ರವಲ್ಲದೆ, ತೆಲುಗು, ತಮಿಳು ಹಾಗೂ ಮಲೆಯಾಳಂನಲ್ಲೂ ಈ ಚಿತ್ರ ಗೆಲುವು ಕಂಡಿತ್ತು.

ಇಪ್ಪತ್ತೈದು ವರ್ಷ ತುಂಬಿರುವ ಈ ಸಂದರ್ಭದಲ್ಲಿ ನಟ ಸಾಯಿಕುಮಾರ್ ಅವರು, “ಪೋಲೀಸ್‌ ಸ್ಟೋರಿ” ಚಿತ್ರದ ಯಶಸ್ಸಿಗೆ ಕಾರಣರಾದ ನಿರ್ಮಾಪಕ, ನಿರ್ದೇಶಕ ಸೇರಿದಂತೆ ಇಡೀ ಚಿತ್ರತಂಡಕ್ಕೆ ಧನ್ಯವಾದ ತಿಳಿಸಿದ್ದಾರೆ.
ಚಿತ್ರ‌ ಯಶಸ್ಸು ಕಾಣಲು ಮಾಧ್ಯಮದವರ ಹಾಗೂ ಕನ್ನಡ ಕಲಾಭಿಮಾನಿಗಳ ಪಾಲು ಬಹು ದೊಡ್ಡದು. ಅವರಿಗೆ ವಿಶೇಷ ಧನ್ಯವಾದಗಳನ್ನು ತಿಳಿಸಿದ್ದಾರೆ ಸಾಯಿಕುಮಾರ್.‌ ಇದೇ ಖುಷಿಯಲ್ಲಿರುವ ಸಾಯಿಕುಮಾರ್‌, ಅದೇ ತಂಡದ ಜೊತೆ ಇಷ್ಟರಲ್ಲೇ ಹೊಸ ಚಿತ್ರ ಶುರುಮಾಡುವ ಯೋಚನೆಯೂ ಇದೆ ಎಂದಿದ್ದಾರೆ.

Categories
ಸಿನಿ ಸುದ್ದಿ

ಕನ್ನಡದಲ್ಲಿ ಅದ್ಧೂರಿ ಚಿತ್ರಕ್ಕೆ ತಯಾರಿ!ಸೆಟ್ಟೇರಲಿದೆ 500 ಕೋಟಿ ಬಜೆಟ್‌ ಸಿನಿಮಾ!! ದಾಖಲೆ ಬರೆಯುತ್ತಾ ಕೃಷ್ಣರಾಜ-4 ಚಿತ್ರ?

ಇದು ನಿಜಕ್ಕೂ ಕನ್ನಡದ ಮಟ್ಟಿಗೆ ದಾಖಲೆಯೇ ಸರಿ. ಆದರೆ, ಆ ದಾಖಲೆ ಬರೆಯುವ ಮಟ್ಟಕ್ಕೆ ಕೆಲಸವಾಗಬೇಕಷ್ಟೇ. ಇಲ್ಲೀಗ ಹೇಳ ಹೊರಟಿರುವ ವಿಷಯ. ಒಂದು ಹೊಸ ಚಿತ್ರದ್ದು. ಗಾಂಧಿನಗರದಲ್ಲಿ ಹೊಸ ಸಿನಿಮಾಗಳ ಸಂಖ್ಯೆ ದಿನ ಕಳೆದಂತೆ ಏರುತ್ತಲೇ ಇದೆ. ಅಂತಹ ಸಿನಿಮಾಗಳ ಬಗ್ಗೆ ವಿವರವೂ ಸಿಗುತ್ತಿರುತ್ತೆ. ಆದರೆ, ಇಲ್ಲೊಂದು ಸೆಟ್ಟೇರಲಿರುವ ಹೊಸ ಸಿನಿಮಾ ಬಗ್ಗೆ ಒಂದಷ್ಟು ಕುತೂಹಲವಂತೂ ಇದೆ. ಆ ಕುತೂಹಲಕ್ಕೆ ಕಾರಣವಿಷ್ಟೇ. ಅದೊಂದು ಬಿಗ್‌ ಬಜೆಟ್‌ ಚಿತ್ರ. ಅರೇ, ಈಗಾಗಲೇ ಕನ್ನಡದಲ್ಲಿ ದಾಖಲೆ ಮೊತ್ತದ ಬಜೆಟ್‌ ಸಿನಿಮಾಗಳು ಸೆಟ್ಟೇರಿ, ಬಿಡುಗಡೆಯಾಗಿವೆಯಲ್ಲ ಎಂಬ ಪ್ರಶ್ನೆ ಎದುರಾಗಬಹುದು. ಆದರೂ ಈಗ ಒಂದು ಬಿಗ್‌ಬಜೆಟ್‌ ಸಿನಿಮಾ ಬಗ್ಗೆ ಹೇಳಲೇಬೇಕು.
ಹೌದು, “ಕೆಜಿಎಫ್”, “ವಿಕ್ರಾಂತ್ ರೋಣ”, “ಕಬ್ಜ” ಹೀಗೆ ಕನ್ನಡದಲ್ಲಿ ಇನ್ನೂ ಅನೇಕ ಬಿಗ್‌ ಬಜೆಟ್‌ ಚಿತ್ರಗಳು ತಯಾರಾಗುತ್ತಿವೆ. ಈಗಾಗಲೇ ಕನ್ನಡ ಚಿತ್ರರಂಗದತ್ತ ಇತರೆ ಚಿತ್ರರಂಗಗಳೂ ತಿರುಗಿ ನೋಡಿವೆ. ಈಗ ಅಂಥದ್ದೇ ದೊಡ್ಡ ಸಿನಿಮಾವೊಂದು ಸೆಟ್ಟೇರಲು ಅಣಿಯಾಗುತ್ತಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಹಾಗೂ ಇಂಗ್ಲೀಷ್ ಸೇರಿ ಏಳು ಭಾಷೆಗಳಲ್ಲಿ ಆ ಚಿತ್ರ ಅದ್ದೂರಿ ವೆಚ್ಚದಲ್ಲಿ ನಿರ್ಮಾಣವಾಗಲಿದೆ ಅನ್ನೋದೇ ಈ ಹೊತ್ತಿನ ಸುದ್ದಿ.


ಅಂದಹಾಗೆ, ಅಂಥದ್ದೊಂದು ದಾಖಲೆ ಮೊತ್ತದ ಬಜೆಟ್‌ನಲ್ಲಿ ಸಿನಿಮಾ ತಯಾರಿಸಲು ಹೊರಟಿರೋದು ದೊಡ್ಡಬಳ್ಳಾಪುರ ಮೂಲದ ಉದ್ಯಮಿ ಹಾಗೂ ಶ್ರೀ ಭಗವತಿ ದೇವಿಯ ಆರಾಧಕ ಗಾನ ಶರವಣ ಸ್ವಾಮೀಜಿ. ಹೌದು, 1995 ರಿಂದ ಕನ್ನಡ ಚಿತ್ರರಂಗದಲ್ಲಿ ಗಾಯಕನಾಗಿ ಗುರುತಿಸಿಕೊಂಡಿರುವ ಇವರು, ಸಿನಿಮಾರಂಗದೊಂದಿಗೆ ಅಷ್ಟೇ ನಂಟು ಹೊಂದಿದವರು. ಟ್ರ್ಯಾಕ್ ಸಿಂಗರ್ ಆಗಿ ದೊಡ್ಡ ಮ್ಯೂಸಿಕ್ ಡೈರೆಕ್ಟರ್‌ಗಳ ಜೊತೆಯಲ್ಲೂ ಕೆಲಸ ಮಾಡಿದ್ದಾರೆ. ಆನಂತರ ಗೋಲ್ಡ್ ಬ್ಯುಸಿನೆಸ್‌ನಲ್ಲಿ ತೊಡಗಿಕೊಂಡು ಬ್ಯುಸಿಯಾದ ಮೇಲೆ ಚಿತ್ರರಂಗದತ್ತ ಗಮನ ಹರಿಸಲು ಇವರಿಗೆ ಸಾಧ್ಯವಾಗಲಿಲ್ಲವಂತೆ. ಲಂಡನ್, ಹಾಂಕಾಂಗ್, ಮಲೇಶಿಯಾ ದಲ್ಲೂ ಇವರು ಗೋಲ್ಡ್ ಕಂಪನಿ ಹೊಂದಿದ್ದು, ಸಾವಿರಾರು ಕೋಟಿ ವಹಿವಾಟು ನಡೆಸುತ್ತಿದ್ದಾರೆ. ಆರೇಳು ತಿಂಗಳ ಹಿಂದೆ ಗಾನಶರವಣ ಸ್ವಾಮೀಜಿ ಅವರು ಕೇರಳದ ಭಗವತಿದೇವಿ ದೇವಸ್ಥಾನದ ನವೀಕರಣಕ್ಕೆ ಬರೋಬರಿ 526 ಕೋಟಿ ರೂ. ಕೊಟ್ಟಿದ್ದರು. ಅದು ಎಲ್ಲಾ ಕಡೆ ದೊಡ್ಡ ಮಟ್ಟದಲ್ಲಿ ಸುದ್ದಿಯೂ ಆಗಿತ್ತು. ಇವರೀಗ ಬರೋಬರಿ ಐನೂರು ಕೋಟಿಯ ಬಿಗ್‌ ಬಜೆಟ್ ಚಿತ್ರವನ್ನು ಏಳು ಭಾಷೆಗಳಲ್ಲಿ ನಿರ್ಮಿಸಲು ಹೊರಟಿದ್ದಾರೆ.

ಇತ್ತೀಚೆಗೆ ಅವರು ತಮ್ಮ ಚಿತ್ರದ ಶೀರ್ಷಿಕೆ ಅನಾವರಣ ಮಾಡಿದ್ದಾರೆ. ಜಿ.ಎಸ್.ಆರ್.ಫಿಲಂ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ಆ ಚಿತ್ರ ನಿರ್ಮಾಣವಾಗುತ್ತಿದೆ. ಚಿತ್ರಕ್ಕೆ “ಕೃಷ್ಣರಾಜ-೪” ಎಂದು ನಾಮಕರಣ ಮಾಡಲಾಗಿದೆ. ಈ ಚಿತ್ರದ ಕಥೆಯಷ್ಟೇ ರೆಡಿಯಾಗಿದೆ. ಆದರೆ, ಯಾರು ನಿರ್ದೇಶಕ, ನಾಯಕ, ನಾಯಕಿ ಯಾರಾಗುತ್ತಾರೆ. ಯಾರೆಲ್ಲ ತಾಂತ್ರಿಕ ವರ್ಗ ಕೆಲಸ ಮಾಡಲಿದೆ. ಕಲಾವಿದರು ಯಾರ್‌ ಯಾರ್‌ ನಟಿಸುತ್ತಾರೆ ಎಂಬಿತ್ಯಾದಿ ಮಾಹಿತಿ ಇಲ್ಲ. ಅದನ್ನು ಇಷ್ಟರಲ್ಲೇ ಅನೌನ್ಸ್‌ ಮಾಡಲು ಶರವಣ ಸ್ವಾಮೀಜಿ ತಯಾರು ಮಾಡಿಕೊಳ್ಳುತ್ತಿದ್ದಾರೆ.
ಟೈಟಲ್‌ ಲಾಂಚ್ ಮಾಡಿ ಮಾತನಾಡಿದ ನಿರ್ಮಾಪಕ, ಕಥೆಗಾರ ಹಾಗೂ ಸಂಗೀತ ನಿರ್ದೇಶಕ ಗಾನಶರವಣ ಸ್ವಾಮೀಜಿ, “ಸಂಗೀತ ಕಲೆ ನನಗೆ ರಕ್ತಗತವಾಗಿ ಬಂದಿದೆ. ಕಳೆದ ಐದಾರು ವರ್ಷದಿಂದಲೂ ಸಿನಿಮಾ ಮಾಡುವ ಯೋಜನೆ ಇತ್ತು.

ಮೂರು ವರ್ಷಗಳ ಹಿಂದೆ ಒಂದು ಕಥೆಯ ಹೊಳೆಯಿತು. ಐತಿಹಾಸಿಕ ಹಾಗೂ ಸಾಮಾಜಿಕ ಹಿನ್ನೆಲೆ ಇರುವ ಕಥೆ ಮಾಡಿದೆ. ಅದಕ್ಕೆ “ಕೃಷ್ಣರಾಜ-೪” ಎಂಬ ಟೈಟಲ್ ಇಡಲಾಗಿದೆ. ಈ ಚಿತ್ರವನ್ನು ಅದ್ಧೂರಿಯಾಗಿ ನಿರ್ಮಾಣ ಮಾಡುತ್ತಿದ್ದೇನೆ. ಸುಮಾರು 400ರಿಂದ 500 ಕೋಟಿ ವೆಚ್ಚದಲ್ಲಿ ಸಿನಿಮಾ ತಯಾರಾಗಲಿದೆ. ಬಹುತೇಕ ಚಿತ್ರೀಕರಣ ಮೈಸೂರಿನಲ್ಲೇ ನಡೆಯಲಿದೆ. ಸ್ವಾಮೀಜಿ ಫಿಲಂಸಿಟಿಯನ್ನು ನಿರ್ಮಿಸಲು ಮೈಸೂರಿನಲ್ಲಿ ಈಗಾಗಲೇ 640 ಎಕರೆ ಜಾಗವನ್ನೂ ಸಹ ಖರೀದಿಸಲಾಗಿದೆ. ಅಲ್ಲೊಂದು ಅದ್ದೂರಿ ವೆಚ್ಚದ ಸೆಟ್ ಹಾಕಲಿದ್ದೇವೆ. ಅದು ಅಲ್ಲೇ ಶಾಶ್ವತವಾಗಿ ಉಳಿಯಲಿದೆ, ಇನ್ನು ಲಂಡನ್‌ನಲ್ಲಿ ನಮ್ಮ ಮ್ಯೂಸಿಕ್ ಸ್ಟುಡಿಯೋ ಇದ್ದು, ಅಲ್ಲೇ ಈ ಚಿತ್ರದ ಮ್ಯೂಸಿಕ್ ಕೆಲಸಗಳು ನಡೆಯಲಿದೆ. ಅಲ್ಲದೆ ಭಾರತದಲ್ಲಿ ಹೆಸರು ಮಾಡಿರುವ ನಿರ್ದೇಶಕರೊಬ್ಬರನ್ನು ಈ ಚಿತ್ರಕ್ಕೆ ಕರೆತರುವ ಪ್ಲಾನ್ ಇದೆ, ಅದು ಯಾರು ಅನ್ನೋದು ಇಷ್ಟರಲ್ಲೇ ಗೊತ್ತಾಗಲಿದೆ. ನಾಯಕನ ಪಾತ್ರಕ್ಕೂ ಕೂಡ ಹುಡುಕಾಟ ನಡೆಯುತ್ತಿದೆ. ಎಲ್ಲಾ ಭಾಷೆಯಲ್ಲೂ ಸ್ಥಳೀಯ ಕಲಾವಿದರನ್ನು ಚಿತ್ರದಲ್ಲಿ ಬಳಸಿಕೊಳ್ಳುವ ಯೋಚನೆಯೂ ಇದೆ ಎಂಬುದು ಅವರ ಮಾತು.
ಶರವಣ ಸ್ವಾಮೀಜಿ ಅವರ ಲೀಗಲ್ ಅಡ್ವೈಜರ್‌ ಎಂ.ವಿ. ಅದಿತಿ ಅವರು ಸಹ ನಿರ್ಮಾಪಕಿಯಾಗಿ ಕೆಲಸ ಮಾಡಲಿದ್ದಾರೆ.

error: Content is protected !!