ಕನ್ನಡದಲ್ಲಿ ಅದ್ಧೂರಿ ಚಿತ್ರಕ್ಕೆ ತಯಾರಿ!ಸೆಟ್ಟೇರಲಿದೆ 500 ಕೋಟಿ ಬಜೆಟ್‌ ಸಿನಿಮಾ!! ದಾಖಲೆ ಬರೆಯುತ್ತಾ ಕೃಷ್ಣರಾಜ-4 ಚಿತ್ರ?

ಇದು ನಿಜಕ್ಕೂ ಕನ್ನಡದ ಮಟ್ಟಿಗೆ ದಾಖಲೆಯೇ ಸರಿ. ಆದರೆ, ಆ ದಾಖಲೆ ಬರೆಯುವ ಮಟ್ಟಕ್ಕೆ ಕೆಲಸವಾಗಬೇಕಷ್ಟೇ. ಇಲ್ಲೀಗ ಹೇಳ ಹೊರಟಿರುವ ವಿಷಯ. ಒಂದು ಹೊಸ ಚಿತ್ರದ್ದು. ಗಾಂಧಿನಗರದಲ್ಲಿ ಹೊಸ ಸಿನಿಮಾಗಳ ಸಂಖ್ಯೆ ದಿನ ಕಳೆದಂತೆ ಏರುತ್ತಲೇ ಇದೆ. ಅಂತಹ ಸಿನಿಮಾಗಳ ಬಗ್ಗೆ ವಿವರವೂ ಸಿಗುತ್ತಿರುತ್ತೆ. ಆದರೆ, ಇಲ್ಲೊಂದು ಸೆಟ್ಟೇರಲಿರುವ ಹೊಸ ಸಿನಿಮಾ ಬಗ್ಗೆ ಒಂದಷ್ಟು ಕುತೂಹಲವಂತೂ ಇದೆ. ಆ ಕುತೂಹಲಕ್ಕೆ ಕಾರಣವಿಷ್ಟೇ. ಅದೊಂದು ಬಿಗ್‌ ಬಜೆಟ್‌ ಚಿತ್ರ. ಅರೇ, ಈಗಾಗಲೇ ಕನ್ನಡದಲ್ಲಿ ದಾಖಲೆ ಮೊತ್ತದ ಬಜೆಟ್‌ ಸಿನಿಮಾಗಳು ಸೆಟ್ಟೇರಿ, ಬಿಡುಗಡೆಯಾಗಿವೆಯಲ್ಲ ಎಂಬ ಪ್ರಶ್ನೆ ಎದುರಾಗಬಹುದು. ಆದರೂ ಈಗ ಒಂದು ಬಿಗ್‌ಬಜೆಟ್‌ ಸಿನಿಮಾ ಬಗ್ಗೆ ಹೇಳಲೇಬೇಕು.
ಹೌದು, “ಕೆಜಿಎಫ್”, “ವಿಕ್ರಾಂತ್ ರೋಣ”, “ಕಬ್ಜ” ಹೀಗೆ ಕನ್ನಡದಲ್ಲಿ ಇನ್ನೂ ಅನೇಕ ಬಿಗ್‌ ಬಜೆಟ್‌ ಚಿತ್ರಗಳು ತಯಾರಾಗುತ್ತಿವೆ. ಈಗಾಗಲೇ ಕನ್ನಡ ಚಿತ್ರರಂಗದತ್ತ ಇತರೆ ಚಿತ್ರರಂಗಗಳೂ ತಿರುಗಿ ನೋಡಿವೆ. ಈಗ ಅಂಥದ್ದೇ ದೊಡ್ಡ ಸಿನಿಮಾವೊಂದು ಸೆಟ್ಟೇರಲು ಅಣಿಯಾಗುತ್ತಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಹಾಗೂ ಇಂಗ್ಲೀಷ್ ಸೇರಿ ಏಳು ಭಾಷೆಗಳಲ್ಲಿ ಆ ಚಿತ್ರ ಅದ್ದೂರಿ ವೆಚ್ಚದಲ್ಲಿ ನಿರ್ಮಾಣವಾಗಲಿದೆ ಅನ್ನೋದೇ ಈ ಹೊತ್ತಿನ ಸುದ್ದಿ.


ಅಂದಹಾಗೆ, ಅಂಥದ್ದೊಂದು ದಾಖಲೆ ಮೊತ್ತದ ಬಜೆಟ್‌ನಲ್ಲಿ ಸಿನಿಮಾ ತಯಾರಿಸಲು ಹೊರಟಿರೋದು ದೊಡ್ಡಬಳ್ಳಾಪುರ ಮೂಲದ ಉದ್ಯಮಿ ಹಾಗೂ ಶ್ರೀ ಭಗವತಿ ದೇವಿಯ ಆರಾಧಕ ಗಾನ ಶರವಣ ಸ್ವಾಮೀಜಿ. ಹೌದು, 1995 ರಿಂದ ಕನ್ನಡ ಚಿತ್ರರಂಗದಲ್ಲಿ ಗಾಯಕನಾಗಿ ಗುರುತಿಸಿಕೊಂಡಿರುವ ಇವರು, ಸಿನಿಮಾರಂಗದೊಂದಿಗೆ ಅಷ್ಟೇ ನಂಟು ಹೊಂದಿದವರು. ಟ್ರ್ಯಾಕ್ ಸಿಂಗರ್ ಆಗಿ ದೊಡ್ಡ ಮ್ಯೂಸಿಕ್ ಡೈರೆಕ್ಟರ್‌ಗಳ ಜೊತೆಯಲ್ಲೂ ಕೆಲಸ ಮಾಡಿದ್ದಾರೆ. ಆನಂತರ ಗೋಲ್ಡ್ ಬ್ಯುಸಿನೆಸ್‌ನಲ್ಲಿ ತೊಡಗಿಕೊಂಡು ಬ್ಯುಸಿಯಾದ ಮೇಲೆ ಚಿತ್ರರಂಗದತ್ತ ಗಮನ ಹರಿಸಲು ಇವರಿಗೆ ಸಾಧ್ಯವಾಗಲಿಲ್ಲವಂತೆ. ಲಂಡನ್, ಹಾಂಕಾಂಗ್, ಮಲೇಶಿಯಾ ದಲ್ಲೂ ಇವರು ಗೋಲ್ಡ್ ಕಂಪನಿ ಹೊಂದಿದ್ದು, ಸಾವಿರಾರು ಕೋಟಿ ವಹಿವಾಟು ನಡೆಸುತ್ತಿದ್ದಾರೆ. ಆರೇಳು ತಿಂಗಳ ಹಿಂದೆ ಗಾನಶರವಣ ಸ್ವಾಮೀಜಿ ಅವರು ಕೇರಳದ ಭಗವತಿದೇವಿ ದೇವಸ್ಥಾನದ ನವೀಕರಣಕ್ಕೆ ಬರೋಬರಿ 526 ಕೋಟಿ ರೂ. ಕೊಟ್ಟಿದ್ದರು. ಅದು ಎಲ್ಲಾ ಕಡೆ ದೊಡ್ಡ ಮಟ್ಟದಲ್ಲಿ ಸುದ್ದಿಯೂ ಆಗಿತ್ತು. ಇವರೀಗ ಬರೋಬರಿ ಐನೂರು ಕೋಟಿಯ ಬಿಗ್‌ ಬಜೆಟ್ ಚಿತ್ರವನ್ನು ಏಳು ಭಾಷೆಗಳಲ್ಲಿ ನಿರ್ಮಿಸಲು ಹೊರಟಿದ್ದಾರೆ.

ಇತ್ತೀಚೆಗೆ ಅವರು ತಮ್ಮ ಚಿತ್ರದ ಶೀರ್ಷಿಕೆ ಅನಾವರಣ ಮಾಡಿದ್ದಾರೆ. ಜಿ.ಎಸ್.ಆರ್.ಫಿಲಂ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ಆ ಚಿತ್ರ ನಿರ್ಮಾಣವಾಗುತ್ತಿದೆ. ಚಿತ್ರಕ್ಕೆ “ಕೃಷ್ಣರಾಜ-೪” ಎಂದು ನಾಮಕರಣ ಮಾಡಲಾಗಿದೆ. ಈ ಚಿತ್ರದ ಕಥೆಯಷ್ಟೇ ರೆಡಿಯಾಗಿದೆ. ಆದರೆ, ಯಾರು ನಿರ್ದೇಶಕ, ನಾಯಕ, ನಾಯಕಿ ಯಾರಾಗುತ್ತಾರೆ. ಯಾರೆಲ್ಲ ತಾಂತ್ರಿಕ ವರ್ಗ ಕೆಲಸ ಮಾಡಲಿದೆ. ಕಲಾವಿದರು ಯಾರ್‌ ಯಾರ್‌ ನಟಿಸುತ್ತಾರೆ ಎಂಬಿತ್ಯಾದಿ ಮಾಹಿತಿ ಇಲ್ಲ. ಅದನ್ನು ಇಷ್ಟರಲ್ಲೇ ಅನೌನ್ಸ್‌ ಮಾಡಲು ಶರವಣ ಸ್ವಾಮೀಜಿ ತಯಾರು ಮಾಡಿಕೊಳ್ಳುತ್ತಿದ್ದಾರೆ.
ಟೈಟಲ್‌ ಲಾಂಚ್ ಮಾಡಿ ಮಾತನಾಡಿದ ನಿರ್ಮಾಪಕ, ಕಥೆಗಾರ ಹಾಗೂ ಸಂಗೀತ ನಿರ್ದೇಶಕ ಗಾನಶರವಣ ಸ್ವಾಮೀಜಿ, “ಸಂಗೀತ ಕಲೆ ನನಗೆ ರಕ್ತಗತವಾಗಿ ಬಂದಿದೆ. ಕಳೆದ ಐದಾರು ವರ್ಷದಿಂದಲೂ ಸಿನಿಮಾ ಮಾಡುವ ಯೋಜನೆ ಇತ್ತು.

ಮೂರು ವರ್ಷಗಳ ಹಿಂದೆ ಒಂದು ಕಥೆಯ ಹೊಳೆಯಿತು. ಐತಿಹಾಸಿಕ ಹಾಗೂ ಸಾಮಾಜಿಕ ಹಿನ್ನೆಲೆ ಇರುವ ಕಥೆ ಮಾಡಿದೆ. ಅದಕ್ಕೆ “ಕೃಷ್ಣರಾಜ-೪” ಎಂಬ ಟೈಟಲ್ ಇಡಲಾಗಿದೆ. ಈ ಚಿತ್ರವನ್ನು ಅದ್ಧೂರಿಯಾಗಿ ನಿರ್ಮಾಣ ಮಾಡುತ್ತಿದ್ದೇನೆ. ಸುಮಾರು 400ರಿಂದ 500 ಕೋಟಿ ವೆಚ್ಚದಲ್ಲಿ ಸಿನಿಮಾ ತಯಾರಾಗಲಿದೆ. ಬಹುತೇಕ ಚಿತ್ರೀಕರಣ ಮೈಸೂರಿನಲ್ಲೇ ನಡೆಯಲಿದೆ. ಸ್ವಾಮೀಜಿ ಫಿಲಂಸಿಟಿಯನ್ನು ನಿರ್ಮಿಸಲು ಮೈಸೂರಿನಲ್ಲಿ ಈಗಾಗಲೇ 640 ಎಕರೆ ಜಾಗವನ್ನೂ ಸಹ ಖರೀದಿಸಲಾಗಿದೆ. ಅಲ್ಲೊಂದು ಅದ್ದೂರಿ ವೆಚ್ಚದ ಸೆಟ್ ಹಾಕಲಿದ್ದೇವೆ. ಅದು ಅಲ್ಲೇ ಶಾಶ್ವತವಾಗಿ ಉಳಿಯಲಿದೆ, ಇನ್ನು ಲಂಡನ್‌ನಲ್ಲಿ ನಮ್ಮ ಮ್ಯೂಸಿಕ್ ಸ್ಟುಡಿಯೋ ಇದ್ದು, ಅಲ್ಲೇ ಈ ಚಿತ್ರದ ಮ್ಯೂಸಿಕ್ ಕೆಲಸಗಳು ನಡೆಯಲಿದೆ. ಅಲ್ಲದೆ ಭಾರತದಲ್ಲಿ ಹೆಸರು ಮಾಡಿರುವ ನಿರ್ದೇಶಕರೊಬ್ಬರನ್ನು ಈ ಚಿತ್ರಕ್ಕೆ ಕರೆತರುವ ಪ್ಲಾನ್ ಇದೆ, ಅದು ಯಾರು ಅನ್ನೋದು ಇಷ್ಟರಲ್ಲೇ ಗೊತ್ತಾಗಲಿದೆ. ನಾಯಕನ ಪಾತ್ರಕ್ಕೂ ಕೂಡ ಹುಡುಕಾಟ ನಡೆಯುತ್ತಿದೆ. ಎಲ್ಲಾ ಭಾಷೆಯಲ್ಲೂ ಸ್ಥಳೀಯ ಕಲಾವಿದರನ್ನು ಚಿತ್ರದಲ್ಲಿ ಬಳಸಿಕೊಳ್ಳುವ ಯೋಚನೆಯೂ ಇದೆ ಎಂಬುದು ಅವರ ಮಾತು.
ಶರವಣ ಸ್ವಾಮೀಜಿ ಅವರ ಲೀಗಲ್ ಅಡ್ವೈಜರ್‌ ಎಂ.ವಿ. ಅದಿತಿ ಅವರು ಸಹ ನಿರ್ಮಾಪಕಿಯಾಗಿ ಕೆಲಸ ಮಾಡಲಿದ್ದಾರೆ.

Related Posts

error: Content is protected !!