ಶರಣ್ ಈಗ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳೋಕೆ ರೆಡಿಯಾಗಿದ್ದಾರೆ. ಹೌದು, ಪುಷ್ಕರ್ ಫಿಲಂಸ್ ಬ್ಯಾನರ್‌ನಲ್ಲಿ ಪುಷ್ಕರ್ ಮಲ್ಲಿಕಾರ್ಜುನ್ ನಿರ್ಮಿಸಿರುವ “ಅವತಾರ ಪುರುಷ” ಡಿಸೆಂಬರ್ 10ರಂದು ಬಿಡುಗಡೆಯಾಗುತ್ತಿದೆ. ಈ ಚಿತ್ರಕ್ಕೆ ಸಿಂಪಲ್ ಸುನಿ ನಿರ್ದೇಶಕರು. ಈಗಾಗಲೇ ಜೋರು ಸದ್ದು ಮಾಡಿರುವ ಚಿತ್ರ, ನೋಡುವ ಕುತೂಹಲವನ್ನು ಮೂಡಿಸಿದೆ…
ನಾಯಕ ಶರಣ್ ಇದೇ ಮೊದಲ ಬಾರಿಗೆ ಈ ಚಿತ್ರದಲ್ಲಿ ವಿಶೇಷ ಪಾತ್ರ ಮಾಡಿದ್ದಾರಂತೆ. ಅವರು ಆ ಕುರಿತು ಹೇಳುವುದಿಷ್ಟು. “ನಾನು ಈವರೆಗೂ ಈ ರೀತಿಯ ಚಿತ್ರ ಮಾಡಿಲ್ಲ. ನನ್ನ ಈವರೆಗಿನ ಸಿನಿ ಪಯಣದಲ್ಲೇ ದೊಡ್ಡ ಬಜೆಟ್ ನ ಚಿತ್ರವಿದು. ಇಂತಹ ಅದ್ದೂರಿ ಚಿತ್ರ ನಿರ್ಮಾಣಕ್ಕೆ ಮುಂದಾದ ನಿರ್ಮಾಪಕ ಪುಷ್ಕರ್ ಅವರ ಧೈರ್ಯ ಮೆಚ್ಚಲೇಬೇಕು. ಇನ್ನೂ ನಿರ್ದೇಶಕ ಸಿಂಪಲ್ ಸುನಿ, ಅವರ ಹೆಸರಿನಲ್ಲ ಮಾತ್ರ ಸಿಂಪಲ್ ಇಲ್ಲ. ಸಿಂಪಲೆಸ್ಟ್ ಸುನಿ ಅವರು. ಅವರ ಕಾರ್ಯವೈಖರಿ ಬಗ್ಗೆ ಎಷ್ಟು ಹೇಳಿದರು ಕಡಿಮೆ. ನಾಯಕಿ ಆಶಿಕಾ ರಂಗನಾಥ್ ಸೇರಿದಂತೆ ಈ ಚಿತ್ರದಲ್ಲಿ ನಟಿಸಿರುವ ಎಲ್ಲಾ ಕಲಾವಿದರ ಅಭಿನಯ ಸೊಗಸಾಗಿ ಮೂಡಿಬಂದಿದೆ. ನಾನು ಸುಮಾರು ಹತ್ತು ಅವತಾರಗಳಲ್ಲಿ ಕಾಣಿಸಿಕೊಂಡಿದ್ದೇನೆ. ಡಿಸೆಂಬರ್ ಹತ್ತರಂದು “ಅವತಾರ ಪುರುಷ” ನ ಆಗಮನವಾಗಲಿದೆ ನೋಡಿ ಹಾರೈಸಿ ಎಂದರು ಶರಣ್.
ನಟಿ ಆಶಿಕಾ ರಂಗನಾಥ್ ಅವರಿಗೆ ಈ ಸಿನಿಮಾ ವಿಶೇಷವಂತೆ. ಇದು ಎಲ್ಲರ ಜೊತೆ ಉತ್ತಮ ಬಾಂಧವ್ಯ ಬೆಸೆದ ಸಿನಿಮಾ. ಈ ತಂಡದಲ್ಲಿ ಎಲ್ಲರೂ ಒಂದೇ ಕುಟುಂಬದವರ ಹಾಗೆ ಇದ್ದೆವು. ಶರಣ್ ಹಾಗೂ ಸುನಿ ಅವರ ಕಾಂಬಿನೇಶನಲ್ಲಿ ಈ ಚಿತ್ರ ಹೇಗೆ ಬರಬಹುದು? ಎಂಬ ಕುತೂಹಲ ಇದೆ. ನಾನು ಚಿತ್ರ ನೋಡುವ ಕಾತುರದಲ್ಲಿದ್ದೀನಿ. ನಿರ್ದೇಶಕ ಸುನಿ ಹಾಗೂ ನಿರ್ಮಾಪಕ ಪುಷ್ಕರ್ ಅವರ ಸರಳತೆ ಬಗ್ಗೆ ಎಷ್ಟು ಹೇಳಿದರು ಕಡಿಮೆ. ಒಟ್ಟಿನಲ್ಲಿ ಉತ್ತಮ ಸಿನಿಮಾದಲ್ಲಿ ಅಭಿನಯಿಸಿದ ತೃಪ್ತಿಯಿದೆ. ಜನರು ಕೂಡ ಮೆಚ್ಚಿ ಕೊಳ್ಳುತ್ತಾರೆ ಎಂಬ ಭರವಸೆಯಿದೆ ಎಂದರು ಆಶಿಕಾ ರಂಗನಾಥ್.
ನಿರ್ದೇಶಕ ಸುನಿ ಕೂಡ ಅವತಾರ ಕುರಿತು ಮಾತಿಗಿಳಿದರು. “ನಾನು ವೆಬ್ ಸಿರೀಸ್ ಗೆ ಅಂತಾ ಮಾಡಿದ ಕಥೆಯಿದು. ಪುಷ್ಕರ್ ಅವರು ಈ ಕಥೆ ಕೇಳಿ, ವೆಬ್ ಸಿರೀಸ್ ಬೇಡ . ಸಿನಿಮಾ ಮಾಡೋಣ ಅಂದರು. ಎರಡು ಭಾಗಗಳಲ್ಲಿ ಈ ಚಿತ್ರ ನಿರ್ಮಾಣವಾಗಿದೆ. ಮೊದಲ ಭಾಗ ಡಿಸೆಂಬರ್ 10ರಂದು ಬಿಡುಗಡೆಯಾಗಲಿದೆ. ಎರಡನೇ ಭಾಗದ ಚಿತ್ರೀಕರಣ ಬಹುತೇಕ ಮುಗಿದಿದೆ. ನಿರ್ದೇಶಕನಿಗೆ ಸಿನಿಮಾ ಬಗ್ಗೆ ತನ್ನದೇ ಆದ ಒಂದು ಕಲ್ಪನೆ ಇರುತ್ತದೆ. ಆದರೆ ಆ ಕಲ್ಪನೆಗೂ ಮೀರಿ ” ಅವತಾರ ಪುರುಷ ” ಚಿತ್ರ ಬಂದಿದೆ. ಶರಣ್ – ಆಶಿಕಾ ರಂಗನಾಥ್ ಅವರ ಜೋಡಿ ನೋಡುಗರನ್ನು ಮೋಡಿ ಮಾಡಲಿದೆ. ಶ್ರೀನಗರ ಕಿಟ್ಟಿ, ಸಾಯಿಕುಮಾರ್, ಭವ್ಯ, ಸುಧಾರಣಿ ಸೇರಿದಂತೆ ಇತರರು ನಟಿಸಿದ್ದಾರೆ. ವಿಜಯ್ ಚೆಂಡೂರ್ ನಟನೆಯೊಂದಿಗೆ ಸ್ಕ್ರಿಪ್ಟ್ ವರ್ಕ್ ನಲ್ಲೂ ನೆರವಾಗಿದ್ದಾರೆ. ಅರ್ಜುನ್ ಜನ್ಯ ಅವರ ಸಂಗೀತ ನಿರ್ದೇಶನದಲ್ಲಿ ಹಾಡುಗಳು ಉತ್ತಮವಾಗಿ ಮೂಡಿಬಂದಿದೆ. ವಿಲಿಯಂ ಡೇವಿಡ್ ಅವರ ಛಾಯಾಗ್ರಹಣ “ಅವತಾರ ಪುರುಷ” ನ ಅಂದವನ್ನು ಮತ್ತಷ್ಟು ಹೆಚ್ಚಿಸಿದೆ ಎಂದರು ನಿರ್ದೇಶಕ ಸಿಂಪಲ್ ಸುನಿ.
ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನ್ ಮಾತನಾಡಿ, “ನನ್ನ ಪ್ರಕಾರ “ಆಪ್ತಮಿತ್ರ” ನಂತರ ಕನ್ನಡದಲ್ಲಿ ಬರುತ್ತಿರುವ ಸಿನಿಮಾ “ಅವತಾರ ಪುರುಷ”. ಹತ್ತು, ಹದಿನೈದು ವರ್ಷಗಳಲ್ಲಿ ಈ ರೀತಿಯ ಸಿನಿಮಾ ಬಂದಿಲ್ಲ ಅನಿಸುತ್ತದೆ. ನಾಯಕ ಶರಣ್, ನಾಯಕಿ ಆಶಿಕಾ ರಂಗನಾಥ್ ಹಾಗೂ ನಿರ್ದೇಶಕ ಸಿಂಪಲ್ ಸುನಿ ಸೇರಿದಂತೆ ಎಲ್ಲಾ ಕಲಾವಿದರ ಸಹಕಾರದಿಂದ ಈ ಚಿತ್ರ ಉತ್ತಮವಾಗಿ ಮೂಡಿಬಂದಿದೆ. ಡಿಸೆಂಬರ್ ಹತ್ತರಂದು ಸುಮಾರು 350 ಕ್ಕೂ ಅಧಿಕ ಚಿತ್ರಮಂದಿರದಲ್ಲಿ ಈ ಚಿತ್ರ ಬಿಡುಗಡೆಯಾಗಲಿದೆ. ಭಾಗ 1 ಬಿಡುಗಡೆಯಾದ ನೂರನೇ ದಿನಕ್ಕೆ ಸರಿಯಾಗಿ ಈ ಚಿತ್ರದ ಎರಡನೇ ಭಾಗ ಕೂಡ ಬಿಡುಗಡೆಯಾಗಲಿದೆ ಎಂದರು ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನ.