“ಸರಿಗಮಪ” ರಿಯಾಲಿಟಿ ಶೋ ಮೂಲಕ ಮನೆಮಾತಾಗಿರುವ ಮೆಹಬೂಬ್ ಸಾಬ್ ಅವರು “ಸೀತಮಮ್ಮನ ಮಗ” ಚಿತ್ರಕ್ಕಾಗಿ ಯತಿರಾಜ್ ಬರೆದಿರುವ ” ಸೀತೆಯೆಂಬ ಹೆಸರಲ್ಲೇನೋ ದೋಷವುಂಟು… ಯುಗಗಳೇ ಕಳೆದರೂನು ಲೋಪವುಂಟು” ಎಂಬ ಅಮ್ಮನ ಕುರಿತಾದ ಭಾವುಕ ಗೀತೆಯನ್ನು ಹಾಡಿದ್ದಾರೆ. ವಿನುಮನಸು ಸಂಗೀತ ನೀಡಿರುವ ಈ ಹಾಡಿನ ರೆಕಾರ್ಡಿಂಗ್ ಇತ್ತೀಚೆಗೆ ರೇಣು ಸ್ಟುಡಿಯೋದಲ್ಲಿ ನಡೆಯಿತು.
ಈ ಹಿಂದೆ ಬಿಟ್ಟೋಗ್ ಬೇಡ ನನ್ನ…” ಗೀತೆಯಂತೆ ಈ ಹಾಡು ಕೂಡ ಜನಪ್ರಿಯತೆ ಪಡೆಯಲಿದೆ. ಇದುವರೆಗೂ ಅಮ್ಮನ ಕುರಿತಾಗಿ ಬಂದಿರುವ ಎಲ್ಲಾ ಹಾಡುಗಳಂತೆ ಈ ಹಾಡು ಕೂಡ ಜನಪ್ರಿಯವಾಲಿ’ ಎಂದು ಗಾಯಕ ಮೆಹಬೂಬ್ ಸಾಬ್ ಚಿತ್ರತಂಡಕ್ಕೆ ಶುಭಕೋರಿದರು. ಸೋನು ಫಿಲಂಸ್ ಲಾಂಛನದಲ್ಲಿ ಕೆ.ಮಂಜುನಾಥ್ ನಾಯಕ್ ನಿರ್ಮಿಸುತ್ತಿರುವ ಈ ಚಿತ್ರಚಿತ್ರವನ್ನು ಯತಿರಾಜ್ ನಿರ್ದೇಶಿಸಿ, ನಟಿಸುತ್ತಿದ್ದಾರೆ.
ಯತಿರಾಜ್ ಅವರೆ ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ಚೈತ್ರಾ ಶ್ರೀನಿವಾಸ್, ಚರಣ್ ಕಾಸಲ, ಸೋನು ಸಾಗರ, ಬುಲೆಟ್ ರಾಜು, ಬಸವರಾಜ್, ಜೀವನ್ ರಾಜ್, ಮಂಜುನಾಥ್ ನಾಯಕ್, ಸಿಂಚನ ಮುಂತಾದವರು ಚಿತ್ರದಲ್ಲಿದ್ದಾರೆ. ಜೀವನ್ ರಾಜ್ ಛಾಯಾಗ್ರಹಣ ಹಾಗೂ ಶಶಿಕುಮಾರ್ ಇಜ್ಜಲಘಟ್ಟ ಅವರ ಸಹ ನಿರ್ದೇಶನ ಚಿತ್ರಕ್ಕಿದೆ.