“ಕನ್ನಡತಿ” ಧಾರಾವಾಹಿ ಖ್ಯಾತಿಯ ಕಿರಣ್ ರಾಜ್ ಅಭಿನಯದ “ಬಹದ್ದೂರ್ ಗಂಡು” ಚಿತ್ರದ ಭರ್ಜರಿ ಸಾಹಸ ಸನ್ನಿವೇಶವೊಂದರ ಚಿತ್ರೀಕರಣ ಇತ್ತೀಚೆಗೆ ನಂದಿ ಬೆಟ್ಟದ ಬಳಿ ನಡೆದಿದೆ. ನಾಯಕ ಕಿರಣ್ ರಾಜ್ ಈ ಸಾಹಸ ಸನ್ನಿವೇಶಕ್ಕಾಗಿ ಸುಮಾರು ಮೂರು ತಿಂಗಳಿಂದ ದೊಣ್ಣೆ ವರಸೆ ಕಲಿತಿದ್ದಾರಂತೆ. ಕಿರಣ್ ರಾಜ್ ಹಾಗೂ ಶಬರಿ ಮಂಜು ಅವರ ನಡುವೆ ಈ ಸಾಹಸ ದೃಶ್ಯ ನಡೆಯುತ್ತಿದೆ. ವಿನೋದ್ ಅವರ ಸಾಹಸ ನಿರ್ದೇಶನದಲ್ಲಿ ಅದ್ದೂರಿ ಯಾಗಿ ಈ ಸನ್ನಿವೇಶ ಮೂಡಿಬಂದಿದೆ.
ನಿರ್ದೇಶಕ ಪ್ರಶಾಂತ್ ಸಿದ್ಧ್ ಹೇಳುವುದಿಷ್ಟು, “ನಮ್ಮ ಚಿತ್ರದಲ್ಲಿ ನಾಲ್ಕು ಸಾಹಸ ಸನ್ನಿವೇಶಗಳಿದೆ. ಈ ಸಾಹಸ ಸನ್ನಿವೇಶದಲ್ಲಿ ದೊಣ್ಣೆ ವರಸೆ ಪ್ರಮುಖ ಆಕರ್ಷಣೆ. ಇದಕ್ಕಾಗಿ ನಾಯಕ ಕಿರಣ್ ರಾಜ್ ಸಾಕಷ್ಟು ತಯಾರಿ ಮಾಡಿಕೊಂಡಿದ್ದಾರೆ ಎಂದು ಹೇಳುತ್ತಾರೆ.
ಪ್ರಸಿದ್ದ್ ಸಿನಿಮಾಸ್ ಮತ್ತು ರಮೇಶ್ ರೆಡ್ಡಿ ಅವರು ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಕಿಟ್ಟಿ ಕೌಶಿಕ್ ಛಾಯಾಗ್ರಹಣ, ಗುಮ್ಮಿನೇನಿ ವಿಜಯ್ ಸಂಗೀತ ನಿರ್ದೇಶನ, ವೆಂಕಿ ಯು ಡಿ ವಿ ಸಂಕಲನ ಹಾಗೂ ಮೋಹನ್ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.
ಪ್ರೇಮಿಗಳ ದಿನಕ್ಕೆ ಒಂದಷ್ಟು ಸಿನಿಮಾಗಳು ಬಿಡುಗಡೆಗೆ ರೆಡಿಯಾಗಿವೆ. ಕೆಲವು ಸಿನಿಮಾಗಳು ಟೀಸರ್, ಟ್ರೇಲರ್ ಮತ್ತು ಪೋಸ್ಟರ್ ರಿಲೀಸ್ ಮಾಡಲು ತಯಾರಿ ನಡೆಸುತ್ತಿವೆ. ಅದಕ್ಕೂ ಮುನ್ನ ರೌಡಿ ಬೇಡಿ ಸಿನಿಮಾ ರಿಲೀಸ್ ಆಗಲಿದೆ. ಹೌದು, ಎಸ್. ಎಸ್. ರವಿಗೌಡ ಹಾಗು ಬಿಗ್ ಬಾಸ್ ಖ್ಯಾತಿಯ ದಿವ್ಯ ಸುರೇಶ್ ಅಭಿನಯದ ಚಿತ್ರ ಫೆಬ್ರವರಿ 11ರಂದು ಬಿಡುಗಡೆಯಾಗಲಿದೆ.
ಫೆಬ್ರವರಿ 14 ರಂದು ಪ್ರೇಮಿಗಳ ದಿನ ಆಚರಿಸಲಾಗುತ್ತದೆ. ಇದಕ್ಕೂ ಮುನ್ನ “ರೌಡಿ ಬೇಬಿ” ಚಿತ್ರ ಬರುತ್ತಿದೆ. Warfoot studios ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ ಈ ಚಿತ್ರವನ್ನು Epuru ಕೃಷ್ಣ ನಿರ್ದೇಶನ ಮಾಡಿದ್ದಾರೆ. ಸಾಮ್ರಾಟ್ ಛಾಯಾಗ್ರಹಣವಿದೆ. ಅಭಿಷೇಕ್ ಹಿನ್ನೆಲೆ ಸಂಗೀತವಿದೆ. ಅರ್ಮಾನ್ ಮೆರುಗು ಸಂಗೀತ ನಿರ್ದೇಶನ ಮಾಡಿದರೆ, ವೆಂಕಿ ಯುಡಿವಿ ಅವರ ಸಂಕಲನವಿದೆ.
ಎಸ್. ಎಸ್. ರವಿಗೌಡ ಅವರಿಗೆ ದಿವ್ಯ ಸುರೇಶ್ ಹಾಗು ಹೀರಾ ಕೌರ್ ನಾಯಕಿಯರಾಗಿ ನಟಿಸಿದ್ದಾರೆ. ಅಮಿತ್, ಕೆಂಪೇಗೌಡ ಮುಂತಾದವರು ನಟಿಸಿದ್ದಾರೆ.
ನಟಿ ಹರ್ಷಿಕಾ ಪೊಣಚ್ಚ ಮತ್ತೊಂದು ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ಹೌದು, ಇತ್ತೀಚೆಗಷ್ಟೇ ಅವರು ಮತ್ತೊಂದು ಭೋಜ್‌ಪುರಿ ಸಿನಿಮಾದಲ್ಲಿ ನಟಿಸುತ್ತಿರುವ ಬಗ್ಗೆ ಸುದ್ದಿಯಾಗಿತ್ತು. ಆ ಚಿತ್ರದ ಮುಹೂರ್ತ ನಡೆದ ಬೆನ್ನಲ್ಲೇ ಈಗ ಹೊಸ ಕನ್ನಡ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಆ ಚಿತ್ರಕ್ಕೆ “ಸ್ತಬ್ಧ” ಎಂದು ಹೆಸರಿಡಲಾಗಿದೆ. ಆ ಚಿತ್ರಕ್ಕೆ ಮುಹೂರ್ತವೂ ನೆರವೇರಿದೆ. ಈ ಚಿತ್ರದಲ್ಲಿ ರಾಘವೇಂದ್ರ ರಾಜಕುಮಾರ್ ಅವರು ಹೈಲೈಟ್. ಹರ್ಷಿಕಾ ಪೂಣಚ್ಚ ಅವರೊಂದಿಗೆ ಪ್ರತಾಪ್ ಸಿಂಹ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದ ಮೊದಲ ದೃಶ್ಯಕ್ಕೆ ಶಾಸಕ ರಾಮಲಿಂಗ ರೆಡ್ಡಿ ಅವರ ಪುತ್ರ ಶ್ರೀರಾಜ್ ರಾಮಲಿಂಗರೆಡ್ಡಿ ಕ್ಲಾಪ್ ಮಾಡಿದರು. ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಸಿ. ಸೋಮಶೇಖರ್ ಕ್ಯಾಮೆರಾ ಚಾಲನೆ ಮಾಡಿದರು. ಈ ಚಿತ್ರಕ್ಕೆ ಲಾಲಿ ರಾಘವ ನಿರ್ದೇಶಕರು. ಡಾ.ಡಿ.ವಿ.ವಿದ್ಯಾಸಾಗರ್ ನಿರ್ಮಾಪಕರು.
ನಿರ್ದೇಶಕ ಲಾಲಿ ರಾಘು ಅವರು ಈ ಹಿಂದೆ ತಮಿಳಿನಲ್ಲಿ ಒಂದು ಚಿತ್ರ ನಿರ್ದೇಶಿಸಿದ್ದಾರೆ. ಕನ್ನಡದ ಈ ಚಿತ್ರ ಎರಡನೇ ನಿರ್ದೇಶನದ ಸಿನಿಮಾ. ಕಥೆ ಬಗ್ಗೆ ಹೇಳುವ ಅವರು, “ಮನುಷ್ಯನ ಮನಸ್ಸು, ಸ್ಥಿಮಿತತೆ ಕಳೆದುಕೊಂಡು ಭ್ರಮಾಲೋಕಕ್ಕೆ ಸಾಗಿದಾಗ, ಆಗುವಂತಹ ಪರಿಣಾಮ ಮತ್ತು ಅದರಿಂದ ಹೊರಬರಲು ಚಿತ್ರದ ಕಥಾ ನಾಯಕ ನಡೆಸುವ ಹೋರಾಟದ ಸೂಕ್ಷ್ಮತೆಯ ಕಥೆಯನ್ನು ಚಿತ್ರ ಹೇಳುತ್ತದೆ. ಚಿತ್ರದಲ್ಲಿ ಉದಯೋನ್ಮುಖ ನಟ ಪ್ರತಾಪ್ ಸಿಂಹ ಅವರೊಂದಿಗೆ, ರಾಘವೇಂದ್ರ ರಾಜಕುಮಾರ್ ಮತ್ತು ಹರ್ಷಿಕಾ ಪೂಣಚ್ಛ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಉಳಿದಂತೆ ಪ್ರಶಾಂತ್ ಸಿದ್ದಿ, ಶ್ರುತಿ ರಾಜ್, ಬೇಬಿ ಅಂಕಿತ, ಮಾ.ಚಿನ್ಮಯ್ ಮತ್ತು ಪ್ರಿಯಾಂಕಾ ಹೀಗೆ ಹೊಸ ಪ್ರತಿಭೆಗಳು ನಟಿಸುತ್ತಿದ್ದಾರೆ. ಇನ್ನು, ವಿ.ಆರ್ ಸ್ವಾಮಿ ಛಾಯಾಗ್ರಹಣವಿದೆ. ಹಂಸಲೇಖ ಅವರ ಸಾಹಿತ್ಯ, ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ ಹಾಗೂ ಆರವ್ ರಿಷಿಕ್ (ಹಂಸಲೇಖ) ಅವರ ಸಂಗೀತವಿದೆ ಎಂದು ವಿವರ ಕೊಟ್ಟರು ನಿರ್ದೇಶಕ ಲಾಲಿ ರಾಘವ್.
ರಾಘವೇಂದ್ರ ರಾಜಕುಮಾರ್ ಅವರಿಗೆ ಇಲ್ಲಿ ಕಥೆ ಇಷ್ಟವಾಯಿತಂತೆ. ನಿರ್ದೇಶಕರು ಹೆಣೆದ ಕಥೆಯ ಆಶಯ ಚೆನ್ನಾಗಿದೆ. ಪಾತ್ರವನ್ನೂ ಅಷ್ಟೇ ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿದ್ದಾರೆ. ಇಲ್ಲಿ ಕಥೆಯೇ ಒಂದು ಪಾತ್ರ. ನಾವೆಲ್ಲ ಚಿಕ್ಕ ಪಾತ್ರ ಮಾಡುತ್ತಿದ್ದೇವೆ. ಸಸ್ಪೆನ್ಸ್ ಚಿತ್ರವಾಗಿರುವುದರಿಂದ ಕಥೆಯ ಬಗ್ಗೆ ಹೇಳುವಂತಿಲ್ಲ ಎಂದರು ರಾಘವೇಂದ್ರ ರಾಜಕುಮಾರ್. ನನ್ನ ಮೊದಲ ಚಿತ್ರದ ನಂತರ ರಾಘಣ್ಣ ಫೋನ್ ಮಾಡಿದ್ದರು. ನಮ್ಮ ಸಂಸ್ಥೆಯಿಂದ ನಿರ್ಮಾಣವಾಗುತ್ತಿರುವ “ಜಾಕಿ” ಚಿತ್ರದಲ್ಲಿ ನೀವು ನಟಿಸಬೇಕೆಂದರು. ಆಗ ನನಗಾದ ಆನಂದಕ್ಕೆ ಪಾರವೇ ಇಲ್ಲ. ಶಿವಣ್ಣ, ಪುನೀತ್ ಸರ್ ಜೊತೆ ನಟಿಸಿದ್ದೆ. ಈ ಚಿತ್ರದಲ್ಲಿ ರಾಘಣ್ಣ ಅವರ ಮಗಳಾಗಿ ಅಭಿನಯಿಸುತ್ತಿದ್ದೇನೆ. ಡಾ.ರಾಜಕುಮಾರ್ ಅವರ ಮೂರು ಮಕ್ಕಳ ಜೊತೆ ನಟಿಸುವ ಭಾಗ್ಯ ನನಗೆ ಸಿಕ್ಕಿರುವ ಸಂತೋಷವಿದೆ ಎಂಬುದು ನಟಿ ಹರ್ಷಿಕಾ ಮಾತು.
ಹೊಸ ಪ್ರತಿಭೆ ಪ್ರತಾಪ್ ಸಿಂಹ ಅವರು, ಈಗಾಗಲೇ ರಾಘಣ್ಣ ಅವರೊಂದಿಗೆ “ರಾಜತಂತ್ರ”, ” ರಾಜಿ” ಚಿತ್ರಗಳಲ್ಲಿ ನಟಿಸಿದ್ದಾರೆ. ಅವರಿಗೆ ರಾಘಣ್ಣ ಅವರೊಟ್ಟಿಗೆ ಅಭಿನಯಿಸುವುದೇ ಒಂದು ಸುಂದರ ಅನುಭವವಂತೆ. ಒಳ್ಳೆಯ ಸಿನಿಮಾ ಮಾಡುತ್ತಿದ್ದೇವೆ. ನಿಮ್ಮೆಲ್ಲರ ಶುಭಹಾರೈಕೆ ಇರಲಿ ಎಂದರು ಪ್ರತಾಪ್ ಸಿಂಹ.
ನಿರ್ಮಾಪಕ ಡಾ.ಡಿ.ವಿ.ವಿದ್ಯಾಸಾಗರ್ ಅವರು ನಿರ್ದೇಶಕ ಲಾಲಿ ರಾಘವ್ ಅವರನ್ನು ಚಿಕ್ಕಂದಿನಿಂದಲೂ ನೋಡಿದ್ದಾರಂತೆ. ಅವರ ಸಹೋದರ ನನ್ನ ಸಹೋದ್ಯೋಗಿ. ಆತ ಹೇಳಿದ ಕಥೆ ಇಷ್ಟವಾಯಿತು ಹಾಗಾಗಿ ಚಿತ್ರ ನಿರ್ಮಾಣಕ್ಕೆ ಮುಂದಾದೆ ಎಂಬುದು ವಿದ್ಯಾಸಾಗರ್ ಮಾತು. ಪ್ರಶಾಂತ್ ಸಿದ್ದಿ, ಛಾಯಾಗ್ರಾಹಕ ಪಿ.ವಿ.ಆರ್ ಸ್ವಾಮಿ ಹಾಗೂ ಸಂಗೀತ ನಿರ್ದೇಶಕ ಆರವ್ ರಿಷಿಕ್ ಇತರರು ಸಿನಿಮಾ ಕುರಿತು ಮಾತಾಡಿದರು.
ಪುನೀತ್ ರಾಜಕುಮಾರ್ ಅಭಿನಯದ ಜೇಮ್ಸ್ ಚಿತ್ರ ಮುಗಿದಿದೆ. ಚಿತ್ರತಂಡ ತುಂಬಾನೇ ಬೇಸರದಲ್ಲಿ ಅದರಲ್ಲೂ ಎಲ್ಲರೂ ಕಣ್ತುಂಬಿಕೊಂಡೇ ಕೆಲಸ ಮಾಡಿದ್ದಾರೆ. ವಿಷಯ ಏನೆಂದರೆ, ಈ ಸಿನಿಮಾವನ್ನು ಮಾರ್ಚ್ ೧೭ರಂದು ಬಿಡುಗಡೆ ಮಾಡಬೇಕು ಅಂತ ಚಿತ್ರತಂಡ ಸಾಕಷ್ಟು ತಯಾರಿ ನಡೆಸುತ್ತಿದೆ. ಈ ಚಿತ್ರದ ಮತ್ತೊಂದು ವಿಶೇಷ ಅಂದರೆ, ಜೇಮ್ಸ್ ಸಿನಿಮಾ ಪುನೀತ್ ರಾಜಕುಮಾರ್ ಅವರ ಹೊಸ ಬಗೆಯ ಕಥೆ ಇರುವ ಚಿತ್ರ. ಈ ಚಿತ್ರದಲ್ಲಿ ಶಿವರಾಜಕುಮಾರ್, ರಾಘವೇಂದ್ರ ರಾಜಕುಮಾರ್ ನಟಿಸಿದ್ದಾರೆ.
ಈ ಕುರಿತು ಸ್ವತಃ ರಾಘವೇಂದ್ರ ರಾಜಕುಮಾರ್ ಅವರೇ ಸ್ಪಷ್ಟಪಡಿಸಿದ್ದಾರೆ. “ಇದು ಪುನೀತ್ ಅವರ ಸಿನಿಮಾ. ಅದರಲ್ಲಿ ನಾವಿಬ್ಬರು ಒಂದು ಸಣ್ಣ ಪಾತ್ರ ಮಾಡಿದ್ದೇವಷ್ಟೇ. ಅದು ನಮಗೆ ಸಿಕ್ಕಿದೆ ಮಾಡಿದ್ದೇವೆ. ನಾವು ಕೆಲಸ ಮಾಡಿದ್ದೇವೆ ಅಂತ ಹೇಳಲು ಇಷ್ಟ ಪಡ್ತೀನಿ ಅಷ್ಟೇ. ಪಾತ್ರ ಮಾಡಿದ್ದೀನಿ ಅಂತಲ್ಲ. ಇನ್ನು ಇದಕ್ಕೆ ಗಿಮಿಕ್ ಮಾಡಿ ಏನೇನೋ ಮಾಡಿದ್ದೀವಿ ಅಂತ ಜನರಲ್ಲಿ ನಾವು ಏನೇನೋ ಅಭಿಪ್ರಾಯ ಕೊಡಬಾರದು. ಮಾಡದೇ ಇರುವುದನ್ನು ಮಾಡಿದೀವಿ, ಮಾಡಿದಿವಿ ಅಂತ ಗಿಮಿಕ್ ಮಾಡಬಾರದು, ಅದು ನಾನು ಮಾಡಲ್ಲ. ನಮ್ಮ ಪಾತ್ರ ನೋಡಿದಾಗ ಸಣ್ಣದಾಗಿ ಇದ್ದರು ಚೆನ್ನಾಗಿದೆ ಅಂತ ಅನಿಸುತ್ತದೆ. ನಾವು ಮೂವರು ಈ ಚಿತ್ರದಲ್ಲಿ ಇದೀವಿ. ಹಾಗಂತ ನಾವು ಒಂದೇ ಸೀನ್ ನಲ್ಲಿ ಇಲ್ಲ. ಆದರೆ ಮೂವರು ಒಂದೇ ಚಿತ್ರದಲ್ಲಿ ಇದೀವಿ. ಎಂದು ರಾಘವೇಂದ್ರ ರಾಜ್‌ಕುಮಾರ್ ಹೇಳಿದ್ದಾರೆ.
ಅಂದಹಾಗೆ, ನಿರ್ದೇಶಕ ಚೇತನ್‌ಕುಮಾರ್ ಅವರು ಈ ಸಿನಿಮಾ ಮಾಡಿದ ಉತ್ಸಾಹ ಆರಂಭದಲ್ಲಿ ಜೋರಾಗಿಯೇ ಇತ್ತು. ಯಾವಾಗ ಪುನೀತ್ ರಾಜಕುಮಾರ್ ಅವರು ಅಗಲಿದರೋ, ಅಂದಿನಿಂದ ಡಲ್ ಆಗಿಬಿಟ್ಟರು. ಜೇಮ್ಸ್ ಸಿನಿಮಾದಲ್ಲಿ ಉಳಿದ ಕೆಲಸ ಮಾಡುವುದಕ್ಕೂ ಅವರು ಯೋಚಿಸತೊಡಗಿದ್ದರು. ಮತ್ತೆ ಕೆಲಸ ಮಾಡಲು ಶುರುವಾದಾಗ, ಅದೇ ನೋವಲ್ಲಿ ಕೆಲಸ ಮಾಡಿದರು. ರಾಘವೇಂದ್ರ ರಾಜಕುಮಾರ್ ಅವರ ಬಳಿ ಹೋಗಿ ಮಾತಾಡುವಾಗಲೂ ಕಣ್ಣಾಲಿಗಳನ್ನು ತುಂಬಿಕೊಂಡಿದ್ದರು.
ಇದನ್ನೂ ಸಹ ರಾಘವೇಂದ್ರ ರಾಜಕುಮಾರ್ ಹೇಳಿಕೊಂಡಿದ್ದಾರೆ. ಅದೇನೆ ಇರಲಿ, ಪುನೀತ್ ಇಲ್ಲ ಅಂತ ಯಾರೂ ಭಾವಿಸಿಲ್ಲ. ಅವರ ಸಿನಿಮಾ ನೋಡಲು ಅವರ ಅಭಿಮಾನಿಗಳು ಅದರಲ್ಲೂ ಕನ್ನಡಿಗರು ಕಾದು ಕುಳಿತಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಮಾರ್ಚ್ ೧೭ರಂದು ಸಿನಿಮಾ ರಿಲೀಸ್ ಮಾಡಲು ಚಿತ್ರತಂಡ ತಯಾರಿ ನಡೆಸುತ್ತಿದೆ.
ಕನ್ನಡದಲ್ಲಿ ಶಿವರಾಜಕುಮಾರ್ ಅವರಿಗೆ ನಿರ್ದೇಶನ ಮಾಡಬೇಕು ಅನ್ನುವ ಆಸೆ ಯಾರಿಗೆ ತಾನೇ ಇರಲ್ಲ ಹೇಳಿ. ಅದರಲ್ಲೂ ಸಕ್ಸಸ್‌ಫುಲ್ ನಟನನ್ನು ನಿರ್ದೇಶಿಸುವ ಕನಸು ನನಸಾಗಿಬಿಟ್ಟರಂತೂ ಸ್ವರ್ಗ ಮೂರೇ ಗೇಣು. ಹೌದು, ಅಂಥದ್ದೊಂದು ಅವಕಾಶವನ್ನು ನಿರ್ದೇಶಕ ಆರ್.ಜೈ ಪಡೆದುಕೊಂಡಿದ್ದಾರೆ. ಅವರ ಈ ಚಿತ್ರಕ್ಕೆ ಕೇಶವ್ (ರೈತ) ನಿರ್ಮಾಪಕರು. ಇದೊಂದು ಬಿಗ್‌ಬಜೆಟ್ ಸಿನಿಮಾ ಅಷ್ಟೇ ಅಲ್ಲ, ಪ್ಯಾನ್ ಇಂಡಿಯಾ ಸಿನಿಮಾ ಅನ್ನೋದು ವಿಶೇಷ…
ಶಿವರಾಜಕುಮಾರ್ ಅವರು ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ಆ ಚಿತ್ರಕ್ಕೆ ಆರ್.ಜೈ ನಿರ್ದೇಶಕರು. ಯಾರು ಈ ಆರ್.ಜೈ ಅನ್ನುವ ಕುತೂಹಲ ಎಲ್ಲರಿಗೂ ಇದೆ. ಅದು ಬೇರಾರೂ ಅಲ್ಲ. ಅದು ಆರ್ ಜಯರಾಮ್. ಹೌದು, ಉಪೇಂದ್ರ ಅಭಿನಯದ “ಬುದ್ಧಿವಂತ ೨” ನಿರ್ದೇಶಿಸಿರುವ ಆರ್. ಜಯರಾಮ್ ಅವರೇ ಈ ಚಿತ್ರಕ್ಕೇ ನಿರ್ದೇಶಕರು. ಇನ್ನು, ಈ ಚಿತ್ರಕ್ಕೆ ನಿರ್ಮಾಪಕರಾಗಿರೋದು ಕೇಶವ್ (ರೈತ). ಇಷ್ಟಕ್ಕೂ ಯಾರು ಈ ನಿರ್ಮಾಪಕರು ಅನ್ನುವುದಾದರೆ, ಇತ್ತೀಚೆಗೆ ಬಿಡುಗಡೆಯಾದ ಚಂದನ್ ಶೆಟ್ಟಿ – ರಚಿತಾರಾಂ ಕಾಂಬಿನೇಶನ್ ನ ಅದ್ಧೂರಿ ಬಜೆಟ್‌ನ “ಲಕಲಕ ಲ್ಯಾಂಬರ್ಗಿನಿ” ಆಲ್ಬಮ್ ಸಾಂಗ್ ನಿರ್ಮಿಸಿದ್ದ ಆರ್. ಕೇಶವ್(ರೈತ) . ಬಿಂದ್ಯಾ ಮೂವೀಸ್ ಮೂಲಕ ಅಪಾರ ವೆಚ್ಚದಲ್ಲಿ ಅದ್ದೂರಿ ಚಿತ್ರ ಮಾಡಲು ಹೊರಟಿದ್ದಾರೆ.
ಹಲವು ಭಾಷೆಗಳಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರದ ನಾಯಕರಾಗಿ ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಅಭಿನಯಿಸುತ್ತಿದ್ದಾರೆ ಅನ್ನೋದಷ್ಟೇ ಈ ಹೊತ್ತಿನ ಸುದ್ದಿ. ಉಳಿದಂತೆ ಚಿತ್ರಕ್ಕೆ ಯಾರು ನಾಯಕಿ. ಯಾರೆಲ್ಲ ಇರುತ್ತಾರೆ. ಎಲ್ಲೆಲ್ಲಿ ಚಿತ್ರೀಕರಣ ಎಂಬಿತ್ಯಾದಿ ವಿಷಯ ಸದ್ಯಕ್ಕಿಲ್ಲ. ಇನ್ನು, ಆರ್.ಜಯರಾಮ್ ಅವರು ಈ ಚಿತ್ರದ ಮೂಲಕ ತಮ್ಮ ಹೆಸರನ್ನು ಆರ್. ಜೈ ಎಂದು ಬದಲಿಸಿಕೊಂಡಿದ್ದಾರೆ. ಆ ಮೂಲಕ ಅವರು ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.
ಕಥೆ ಏನು ಗೊತ್ತಾ…?
ನಿರ್ದೇಶಕ ಆರ್.ಜೈ ಹೇಳುವ ಪ್ರಕಾರ ಇದೊಂದು ಬಿಗ್ ಬಜೆಟ್ ಸಿನಿಮಾ. ಅದರಲ್ಲೂ ಇದು ಪ್ಯಾನ್ ಇಂಡಿಯಾ ಕಥೆ. ಹಾಗೆ ಹೇಳುವುದಾದರೆ, 1970 ರ ಕಾಲಘಟ್ಟದಲ್ಲಿ ನಡೆಯುವ ರೆಟ್ರೊ ಶೈಲಿಯ ಕಥೆ ಇದು. ಶಿವರಾಜಕುಮಾರ್ ಅವರನ್ನು ಹೊಸ ರೀತಿಯಲ್ಲೇ ತೋರಿಸುವ ಉದ್ದೇಶದಿಂದ ಪಕ್ಕಾ ಪ್ಲಾನ್ ಮಾಡಿಕೊಳ್ಳಲಾಗಿದೆ.
ಅದರೊಂದಿಗೆ ಕಥೆ, ಪಾತ್ರವನ್ನು ವಿಶೇಷವಾಗಿ ಕಟ್ಟಿಕೊಡುವ ಮೂಲಕ ಕನ್ನಡಿಗರಿಗೊಂದು ಹೊಸ ಬಗೆಯ ಸಿನಿಮಾ ತೋರಿಸುವ ಉದ್ದೇಶ ನನ್ನದು ಅನ್ನುತ್ತಾರೆ ಅವರು. ಸದ್ಯ ತಾಂತ್ರಿಕವರ್ಗ ಹಾಗೂ ತಾರಾಬಳಗದ ಆಯ್ಕೆ ನಡೆಯುತ್ತಿದೆ. ಅದಾದ ಬಳಿಕ ಎಲ್ಲವನ್ನೂ ಹೇಳುತ್ತೇನೆ ಎನ್ನುತ್ತಾರೆ ಅವರು.
ಅಂದಹಾಗೆ, ಶಿವಣ್ಣ ಅಭಿನಯದ ಈ ಸಿನಿಮಾ ಮುಂದಿನ ತಿಂಗಳು ಮೋಷನ್ ಪೋಸ್ಟರ್ ಬಿಡುಗಡೆಯ ಜೊತೆಗೆ ಅದ್ದೂರಿ ಮುಹೂರ್ತ ಸಮಾರಂಭ ನಡೆಯಲಿದೆ ಎಂದು ನಿರ್ದೇಶಕ ಆರ್ ಜೈ ತಿಳಿಸಿದ್ದಾರೆ.
ನವರಸ ನಾಯಕ ಜಗ್ಗೇಶ್ ಹಾಗೂ ನಿರ್ದೇಶಕ ವಿಜಯಪ್ರಸಾದ್ ಕಾಂಬಿನೇಷನ್ ಈಗಾಗಲೇ ‘ನೀರ್ ದೋಸೆ’ ಮೂಲಕ ದೊಡ್ಡ ದಾಖಲೆ ಬರೆದಿದೆ. ಈಗ ಮತ್ತೊಂದು ದಾಖಲೆಯೂ ಬರೆದಿದೆ. ಹೌದು, ಜನವರಿ 24ರಂದು “ತೋತಾಪುರಿ” ಚಿತ್ರದ ಮೊದಲ ಝಲಕ್ ಆಡಿಯೋ ಟೀಸರ್ ಮೂಲಕ ಹೊರಬಂದಿದೆ. ಆರಂಭದಿಂದಲೂ ಸಾಕಷ್ಟು ಕುತೂಹಲ ಕೆರಳಿಸಿರುವ ‘ತೋತಾಪುರಿ’ ಬಗ್ಗೆ ನಿರೀಕ್ಷೆ ಹೆಚ್ಚಿದೆ.
ಇದೇ ಮಾದಲ ಬಾರಿಗೆ ಕನ್ನಡ ಕಾಮಿಡಿ ಸಿನಿಮಾವೊಂದು ಐದು ಭಾಷೆಗಳಲ್ಲಿ ಬಿಡುಗಡೆಯಾಗುವ ಮೂಲಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಲು ಸಜ್ಜಾಗಿದೆ. ತಾರಾಗಣದ ವಿಷಯದಲ್ಲೂ ‘ತೋತಾಪುರಿ’ ಕಡಿಮೆಯೇನಿಲ್ಲ. ಜಗ್ಗೇಶ್, ‘ಡಾಲಿ’ ಧನಂಜಯ್, ಸುಮನ್ ರಂಗನಾಥ್, ಅದಿತಿ ಪ್ರಭುದೇವ, ದತ್ತಣ್ಣ, ವೀಣಾ ಸುಂದರ್, ಹೇಮಾದತ್, ರೋಹಿತ್ ಪದಕಿ ಸೇರಿದಂತೆ ನೂರಾರು ಕಲಾವಿದರು ನಟಿಸಿದ್ದಾರೆ.
ಈ ಹಿಂದೆ “ಎರಡನೇ ಮದುವೆ”, “ಗೋವಿಂದಾಯ ನಮಃ”, “ಆರ್ ಎಕ್ಸ್ ಸೂರಿ”, “ಶಿವಲಿಂಗ” ಸಿನಿಮಾಗಳನ್ನು ನಿರ್ಮಿಸಿರುವ ಕೆ.ಎ.ಸುರೇಶ್ ‘ಮೋನಿಫ್ಲಿಕ್ಸ್ ಸ್ಟುಡಿಯೋಸ್’ ಬ್ಯಾನರ್ ಅಡಿಯಲ್ಲಿ “ತೋತಾಪುರಿ” ನಿರ್ಮಿಸಿದ್ದಾರೆ.
ಅಂದಹಾಗೆ “ತೋತಾಪುರಿ” ಭಾಗ 1 ಹಾಗೂ ಭಾಗ 2 ರೂಪದಲ್ಲಿ ಬಿಡುಗಡೆಯಾಗಲಿದೆ. ಅನೂಪ್ ಸೀಳಿನ್ ಸಂಗೀತವಿದೆ. ವಿಜಯ ಪ್ರಸಾದ್ ಸಾಹಿತ್ಯವಿದೆ. ನಿರಂಜನ್ ಬಾಬು ಛಾಯಾಗ್ರಹಣ ಹಾಗೂ ಸುರೇಶ್ ಅರಸ್ ಸಂಕಲನ ಈ ಚಿತ್ರಕ್ಕಿದೆ. ಈಗಾಗಲೇ ಮೊದಲ ಝಲಕ್ ಬಿಡುಗಡೆಯಾಗಿದ್ದು, ಸಖತ್ ವೈರಲ್ ಆಗಿದೆ. ಅದು ಹಾಡಿನ ಟೀಸರ್ ಆಗಿದ್ದು, ಎಲ್ಲೆಡೆ ಮೆಚ್ಚುಗೆ ಗಳಿಸಿದೆ.
ಸದ್ಯದಲ್ಲೇ ಪೂರ್ಣ ಹಾಡು ರಿಲೀಸ್ ಮಾಡುವ ಆಲೋಚನೆಯಲ್ಲಿದೆ ಚಿತ್ರತಂಡ. ಅದೇನೆ ಇರಲಿ, ಸದ್ಯ ರಿಲೀಸ್ ಆಗಿರುವ ಆಡಿಯೋ ಟೀಸರ್ ಸಖತ್ ಕಮಾಲ್ ಮಾಡುತ್ತಿದ್ದು, ಲಕ್ಷಾಂತರ ಹಿಟ್ಸ್ ದಾಖಲಾಗಿದೆ. ಜಗ್ಗೇಶ್ ಅವರ ರಿಯಾಕ್ಷನ್, ವಿಜಯಪ್ರಸಾದ್ ಸಾಹಿತ್ಯ ಹಾಗೂ ಅನೂಪ್ ಸೀಳಿನ್ ಸಂಗೀತ ಸಾಕಷ್ಟು ಮೋಡಿ ಮಾಡಿದೆ. ಮೋನಿಫ್ಲಿಕ್ಸ್ ಆಡಿಯೋಸ್ ಯೂ ಟ್ಯೂಬ್ ಚಾನಲ್’ನಲ್ಲಿ ಹಾಡು ಬಿಡುಗಡೆಯಾಗಿದೆ. ಶಿವಲಿಂಗ ಸಿನಿಮಾ ಖ್ಯಾತಿಯ ಕೆ.ಎ.ಸುರೇಶ್ ಈ ಚಿತ್ರವನ್ನು ಮೋನಿಫ್ಲಿಕ್ಸ್ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಿದ್ದಾರೆ.
ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಆರ್ ಆರ್ ಆರ್ ಬಿಡುಗಡೆಗೆ ಹೊಸ ದಿನಾಂಕ ನಿಗದಿಯಾಗಿದೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಆರ್ ಆರ್ ಆರ್ ಸಿನಿಮಾ ಜನವರಿ 7ರಂದು ಅದ್ಧೂರಿಯಾಗಿ ಐದು ಭಾಷೆಯಲ್ಲಿ ತೆರೆಗೆ ಬರಬೇಕಿತ್ತು. ರಾಜ್ಯ ರಾಜ್ಯಗಳಲ್ಲಿ ಚಿತ್ರತಂಡ ಭರ್ಜರಿ ಪ್ರಚಾರ ನಡೆಸಿತ್ತು. ಇನ್ನೇನು ಸಿನಿಮಾ ರಿಲೀಸ್ ಮಾಡಬೇಕು ಎನ್ನುವಷ್ಟರಲ್ಲಿ ಕೊರೋನಾ ಸೋಂಕು ಪ್ರಕರಣ ಹೆಚ್ಚಾಗಿತ್ತು. ಅಲ್ಲದೆ ರಾಜ್ಯದ ಹಲವೆಡೆಗಳಲ್ಲಿ ಚಿತ್ರಮಂದಿರಗಳು ಮುಚ್ಚಲ್ಪಟ್ಟಿದ್ದು, ಇನ್ನೂ ಹಲವೆಡೆ ಶೇ 50ರಷ್ಟು ಮಾತ್ರ ಆಸನಕ್ಕೆ ಅವಕಾಶ ನೀಡಲಾಗಿದೆ. ಹೀಗಾಗಿ ಸಿನಿಮಾ ಬಿಡುಗಡೆ ಮಾಡೋದನ್ನು ಮುಂದಕ್ಕೆ ಹಾಕಲಾಯ್ತು. ಈಗ ಸಿನಿಮಾ ತಂಡ ಹೊಸ ರಿಲೀಸ್ ಡೇಟ್ ನೀಡಿದೆ.
ಯಾವಾಗ ಬರುತ್ತೆ ಆರ್ ಆರ್ ಆರ್?
ಇಡೀ ಚಿತ್ರಪ್ರೇಮಿಗಳು ಈ ಸಿನಿಮಾಗಾಗಿ ಕಾದು ಕುಳಿತಿದ್ದಾರೆ. ಅಂತೂ ರಾಜಮೌಳಿ ಹೊಸ ದಿನಾಂಕ ಅನೌನ್ಸ್ ಮಾಡಿದ್ದಾರೆ. ಆದ್ರೆ ಅಲ್ಲೊಂದು ಟ್ವಿಸ್ಟ್ ಇದೆ. ಎರಡು ದಿನಾಂಕಗಳಿಗೆ ಆರ್ ಆರ್ ಅರ್ ಕರ್ಚಿಫ್ ಹಾಕಿದೆ. 18 ಮಾರ್ಚ್ ಅಥವಾ ಏಪ್ರಿಲ್ 28ರಲ್ಲಿ ಒಂದು ಡೇಟ್‌ನಲ್ಲಿ ಸಿನಿಮಾ ರಿಲೀಸ್ ಮಾಡಲಿದ್ದೇವೆ ಎಂದು ಆರ್ ಆರ್ ಆರ್ ಬಳಗ ತಿಳಿಸಿದೆ. ದೇಶದಲ್ಲಿ ಕೊರೋನಾ ಪ್ರಕರಣ ಕಡಿಮೆಯಾಗಿ, ಎಲ್ಲ ಥಿಯೇಟರ್‌ಗಳಲ್ಲಿ 100% ಆಸನ ವ್ಯವಸ್ಥೆ ಸಿಕ್ಕರೆ ಮಾರ್ಚ್ 18ಕ್ಕೆ ಬರುತ್ತೇವೆ. ಇಲ್ಲ ಏಪ್ರಿಲ್ 28ಕ್ಕೆ ಸಿನಿಮಾ ರಿಲೀಸ್ ಮಾಡಲಿದ್ದೇವೆ ಎರಡು ರಿಲೀಸ್ ಡೇಟ್‌ನ್ನು RRR ತಂಡ ಬ್ಲ್ಯಾಕ್ ಮಾಡಿಕೊಂಡಿದೆ.
ಈ ಚಿತ್ರಕ್ಕೆ ರಾಜಮೌಳಿ ನಿರ್ದೇಶನ ಮಾಡಿದ್ದು, ರಾಮ್ ಚರಣ್ ಮತ್ತು ಜ್ಯೂ. ಎನ್ಟಿಆರ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ನಟಿ ಆಲಿಯಾ ಭಟ್ ಈ ಸಿನಿಮಾ ಮೂಲಕ ಇದೇ ಮೊದಲ ಬಾರಿಗೆ ದಕ್ಷಿಣ ಭಾರತಕ್ಕೆ ಕಾಲಿಟ್ಟಿದ್ದಾರೆ. ಅಜಯ್ ದೇವಗನ್ ಒಂದು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಕನ್ನಡ, ತಮಿಳು, ತೆಲುಗು ಹಿಂದಿ ಹಾಗೂ ಮಾಲಯಾಳಂ ಭಾಷೆಯಲ್ಲಿ ರಿಲೀಸ್ ಆಗ್ತಿರುವ ತ್ರಿಬಲ್ ಆರ್ ಸಿನಿಮಾವನ್ನು ಕರ್ನಾಟಕದಲ್ಲಿ ಕೆವಿಎನ್ ಪ್ರೊಡಕ್ಷನ್ಸ್ ವಿತರಣೆ ಮಾಡುತ್ತಿದೆ.
ನಿಖಿಲ್ ಕುಮಾರ್ ಇಂದು ಬರ್ತ್ಡೇ ಸಂಭ್ರಮ. ಸಿನಿಮಾರಂಗ ಹಾಗೂ ರಾಜಕೀಯ ಎರಡರಲ್ಲೂ ಬ್ಯುಸಿ ಇರುವ ನಿಖಿಲ್ಗೆ ಅಭಿಮಾನಿಗಳು, ರಾಜಕೀಯ ನಾಯಕರು ಹಾಗೂ ಚಿತ್ರರಂಗದವರು ಶುಭಾಶಯ ತಿಳಿಸುತ್ತಿದ್ದಾರೆ. ನಿಖಿಲ್ ಹುಟ್ಟುಹಬ್ಬದ ಪ್ರಯುಕ್ತ ಹೊಸ ಸಿನಿಮಾ ಟೈಟಲ್ ಹಾಗೂ ಫಸ್ಟ್ ಲುಕ್ ಬಿಡುಗಡೆಯಾಗಿದೆ.
ಯುವರಾಜ ಈಗ ಯದುವೀರ!
ಕನ್ನಡದ ಪ್ರತಿಷ್ಠಿತ ಪ್ರೊಡಕ್ಷನ್ ಹೌಸ್ ಕೆವಿಎನ್ ಸಂಸ್ಥೆಯಲ್ಲಿ ನಿಖಿಲ್ ಕುಮಾರ್ ಐದನೇ ಸಿನಿಮಾ ರೆಡಿಯಾಗ್ತಿದೆ. ಈ ಸಿನಿಮಾಗೆ ಯದುವೀರ ಎಂಬ ಕ್ಯಾಚಿ ಟೈಟಲ್ ಇಡಲಾಗಿದ್ದು, ಫಸ್ಟ್ ಲುಕ್ ಕೂಡ ಅನಾವರಣ ಮಾಡಲಾಗಿದೆ.
ಯದುವೀರ ಸಿನಿಮಾಗೆ ಮಂಜು ಅಥರ್ವ ಅವರು ನಿರ್ದೇಶನ ಮಾಡುತ್ತಿದ್ದಾರೆ. ಕಳೆದ ಏಳು ವರ್ಷಗಳಿಂದ ಮಂಜು ಚಿತ್ರರಂಗದಲ್ಲಿ ಇದ್ದಾರೆ. ಯಶ್ ನಟನೆಯ ‘ಮಾಸ್ಟರ್ ಪೀಸ್’, ಶಿವರಾಜ್ಕುಮಾರ್ ಅಭಿನಯದ ‘ಮಫ್ತಿ’ ಸಿನಿಮಾಗಳಿಗೆ ಅಸೋಸಿಯೇಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ನೆನಪಿರಲಿ ಪ್ರೇಮ್ ಅವರ 25ನೇ ಸಿನಿಮಾ ‘ಪ್ರೇಮಂ ಪೂಜ್ಯಂ’ ಸಿನಿಮಾಗೆ ಕೋ-ಡೈರೆಕ್ಟರ್ ಕೂಡ ಆಗಿದ್ದರು. ಇದೀಗ ಅವರು ನಿಖಿಲ್ ಅವರ ಸಿನಿಮಾದ ಮೂಲಕ ನಿರ್ದೇಶಕರಾಗಿ ಬಡ್ತಿ ಪಡೆದುಕೊಳ್ಳುತ್ತಿದ್ದಾರೆ. ನಿಖಿಲ್ ಹುಟ್ಟುಹಬ್ಬ ಈ ಚಿತ್ರದ ಟೈಟಲ್ ಇಂದು ಘೋಷಣೆ ಆಗಿದೆ. ಜತೆಗೆ ಫಸ್ಟ್ ಪೋಸ್ಟರ್ ಕೂಡ ರಿಲೀಸ್ ಆಗಿದೆ. ಈ ಮೂಲಕ ನಿಖಿಲ್ ಬರ್ತ್ಡೇಗೆ ಅಭಿಮಾನಿಗಳಿಗೆ ಚಿತ್ರತಂಡದಿಂದ ಗಿಫ್ಟ್ ಸಿಕ್ಕಿದೆ.
ಆ್ಯಕ್ಷನ್ ಕಂ ಫ್ಯಾಮಿಲಿ ಎಂಟರ್ ಟ್ರೈನರ್ ಸಿನಿಮಾವಾಗಿರುವ ಯದುವೀರ್ ಚಿತ್ರವನ್ನು ಕೆವಿಎನ್ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ನಿಶಾ ವೆಂಕಟ್ ಕೊನಂಕಿ ಮತ್ತು ಸುಪ್ರೀತ್ ನಿರ್ಮಾಣ ಮಾಡುತ್ತಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ನೀಡುತ್ತಿದ್ದು, ‘ಮಫ್ತಿ’, ‘ಮದಗಜ’ ಸಿನಿಮಾಗಳ ಸಿನಿಮಾಟೋಗ್ರಾಫರ್ ನವೀನ್ ಕ್ಯಾಮೆರಾ ಕೈ ಚಳಕ ಸಿನಿಮಾದಲ್ಲಿರಲಿದೆ. ಸದ್ಯಕ್ಕೆ ಶೂಟಿಂಗ್ ಪ್ರಾರಂಭಿಸಿರುವ ಚಿತ್ರತಂಡ ಸದ್ಯದಲ್ಲಿಯೇ ಉಳಿದ ತಾರಾಬಳಗದ ಬಗ್ಗೆ ಮಾಹಿತಿ ನೀಡಲಿದೆ.
ನಾಚಿ.. ಇದು ಹೊಸಬರ ಚಿತ್ರ. ಸಚಿತ್ ಫಿಲಂಸ್ ಬ್ಯಾನರ್ ನಲ್ಲಿ ವೆಂಕಟ ಗೌಡ ಮತ್ತು ಮೀನಾ ವೆಂಕಟ್ ಗೌಡ ನಿರ್ಮಾಣ, ಶಶಾಂಕ್ ರಾಜ್ ನಿರ್ದೇಶನದಲ್ಲಿ ನಿರ್ಮಾಣವಾಗುತ್ತಿದೆ. ಗೂಳಿಹಟ್ಟಿ, ಹಾಲು ತುಪ್ಪ ಮತ್ತು ಉಡುಂಬಾ ಸಿನಿಮಾಗಳಲ್ಲಿ ನಾಯಕನಾಗಿ ನಟಿಸಿದ್ದ ಪವನ್ ಶೌರ್ಯ, ನಾಚಿ ಚಿತ್ರದ ಹೀರೋ. ಕ್ರೇಜ಼ಿಸ್ಟಾರ್ ರವಿಚಂದ್ರನ್ ಅವರ ಗರಡಿಯಲ್ಲಿ ಕೆಲಸ ಕಲಿತು, ನಂತರ ಯುಗಯುಗಗಳೇ ಸಾಗಲಿ, ಉಡ, ಮಾವಳ್ಳಿ ಮಿಲ್ಟ್ರಿ ಹೋಟೆಲ್, ಗೂಳಿಹಟ್ಟಿ, ಹನಿ ಹನಿ ಇಬ್ಬನಿ, ಹಾಲುತುಪ್ಪ ಮುಂತಾದ ಸಿನಿಮಾಗಳನ್ನು ನಿರ್ದೇಶಿಸಿರುವ ಶಶಾಂಕ್ ರಾಜ್ `ನಾಚಿ’ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ
ಎಲ್ಲ ಅಂದುಕೊಂಡಂತೇ ಆಗಿದ್ದಿದ್ದರೆ ಅಕ್ಟೋಬರ್ 29ರಂದು ಅದ್ದೂರಿ ಮುಹೂರ್ತ ನಡೆಸಿ ಚಿತ್ರೀಕರಣಕ್ಕೆ ತೆರಳುವ ಯೋಜನೆ ಚಿತ್ರತಂಡದ್ದಾಗಿತ್ತು. ಪುನೀತ್ ರಾಜ್ ಕುಮಾರ್ ಅವರ ಅಗಲಿಕೆಯ ಕಾರಣಕ್ಕೆ ಅದು ಸಾಧ್ಯವಾಗಲಿಲ್ಲ. ಸರಳವಾಗಿ ಪೂಜೆ ನೆರವೇರಿಸಿಕೊಂಡು ಚಿತ್ರೀಕರಣ ಆರಂಭಿಸಲಾಗಿತ್ತು. ಸದ್ಯ ನಾಚಿ ಚಿತ್ರ ಸರಿಸುಮಾರು ಮೂವತ್ತೈದು ದಿನಗಳ ಚಿತ್ರೀಕರಣ ನಡೆಸಿದೆ. ಇನ್ನೂ ಇಪ್ಪತ್ತೈದು ದಿನಗಳ ಶೂಟಿಂಗ್ ಬಾಕಿ ಇದೆ. ಈ ಮಧ್ಯೆ ಮಲ್ಲೇಶ್ವರಂನ ಕಾಡು ಮಲ್ಲೇಶ್ವರ ದೇವಸ್ಥಾನದಲ್ಲಿ ಸಾಂಕೇತಿಕ ಮುಹೂರ್ತ ಕಾರ್ಯಕ್ರಮ ನಡೆಸುವ ಮೂಲಕ ಮತ್ತೊಮ್ಮೆ ಚಿತ್ರಕ್ಕೆ ಚಾಲನೆ ನೀಡಲಾಗಿದೆ.
ತಾತ ಮೊಮ್ಮಗಳ ಸುತ್ತ ಪ್ರಧಾನವಾಗಿ ಬೆಸೆದುಕೊಂಡ ಕತೆ ʻನಾಚಿʼ ಚಿತ್ರದ್ದು. ನಚಿತಾ ಎನ್ನುವುದು ಆಕೆಯ ಹೆಸರು. ಎಲ್ಲರೂ ಪ್ರೀತಿಯಿಂದ ʻನಾಚಿʼ ಎಂದು ಕರೆಯುತ್ತಿರುತ್ತಾರೆ. ಪುರಾತತ್ವ ವಿಭಾಗದ ಅಂತಿಮ ವರ್ಷದಲ್ಲಿ ಓದುತ್ತಿರುತ್ತಾಳೆ. ಅದೊಮ್ಮೆ ಮಲೆನಾಡಿನ ಪ್ರದೇಶವೊಂದರಲ್ಲಿ ಪ್ರಾಚ್ಯವಸ್ತುಗಳ ಸಂಶೋಧನೆಗೆಂದು ಹೋದಾಗ ಅದು ತನ್ನದೇ ಪೂರ್ವಜರ ಮನೆ ಎಂದು ಗೊತ್ತಾಗುತ್ತದೆ. ಇದರ ಜೊತೆ ನಿಧಿಯ ಕತೆ ಕೂಡಾ ತೆರೆದುಕೊಳ್ಳುತ್ತದೆ. ಇತಿಹಾಸ, ವಿಜ್ಞಾನ, ಲವ್, ಕಾಮಿಡಿ, ಥ್ರಿಲ್ಲರ್, ಹಾರರ್ ಅಂಶಗಳೊಂದಿಗೆ ಆಕ್ಷನ್ ಕೂಡಾ ಕತೆಯಲ್ಲಿ ಬೆಸೆದುಕೊಂಡಿದೆ. ಅಂತಿಮವಾಗಿ ʻಸೈನ್ಸ್ ಬಿಯಾಂಡ್ ಸೆನ್ಸ್ʼ ಎನ್ನುವ ಸಿದ್ದಾಂತವನ್ನು ಮಂಡಿಸುವ ಉದ್ದೇಶ ʻನಾಚಿʼ ಚಿತ್ರದ್ದು.
ಮಲೆನಾಡಿನ ಸುಂದರ ತಾಣಗಳಲ್ಲಿ ʻನಾಚಿʼಗಾಗಿ ಚಿತ್ರೀಕರಣ ನಡೆಸಲಾಗಿದೆ. ಯಕ್ಷಗಾನ, ಭೂತಕೋಲಾಗಳ ದೃಶ್ಯಗಳನ್ನು ನೈಜವಾಗಿ ಸೆರೆ ಹಿಡಿಯಲಾಗಿದೆ. ನಾಲ್ಕು ಫೈಟ್, ಮೂರು ಹಾಡು, ಒಂದು ಬಿಟ್ ಸಾಂಗ್ ಕೂಡಾ ʻನಾಚಿʼ ಚಿತ್ರದಲ್ಲಿರಲಿದೆ. ತೆಲುಗಿನಲ್ಲಿ ಸುಮಾಋು ಹದಿನೈದು ಚಿತ್ರಗಳಲ್ಲಿ ನಟಿಸಿರುವ ಕನ್ನಡದ ಹುಡುಗಿ ಮೌರ್ಯಾನಿ. ಕನ್ನಡ ಸಿನಿಮಾದಲ್ಲಿ ನಟಿಸುವ ಬಯಕೆಯಿಂದ ಕಳೆದ ನಾಲ್ಕು ವರ್ಷಗಳಿಂದ ಹಲವಾರು ಕತೆಗಳನ್ನು ಕೇಳಿದ್ದರಂತೆ. ಕಡೆಗೆ ಶಶಾಂಕರ್ ರಾಜ್ ಅವರು ಹೇಳಿದ ಸಬ್ಜೆಕ್ಟ್ ಇಷ್ಟವಾದ ಕಾರಣಕ್ಕೆ ನಟಿಸಲು ಒಪ್ಪಿದ್ದಾಗಿ ಮೌರ್ಯಾನಿ ಹೇಳಿಕೊಂಡರು.
ಪವನ್ ಶೌರ್ಯ ಮತ್ತು ಮಾರ್ಯಾನಿ ಅವರ ಜೊತೆಗೆ ಆರ್ಯಭಟ ಜಾಗ್ವಾರ್, ಕ್ರಿಷ್, ಪ್ರಿಯಾ ಶೆಟ್ಟಿ, ಶ್ರೇಯಾ ಶೆಟ್ಟಿ, ನೀನಾಸಂ ನಂಜಪ್ಪ, ಖಳನಟನಾಗಿ ಪ್ರಶಾಂತ್, ಮನೀಶ್ ಸೇರಿದಂತೆ ಇತರರು ʻನಾಚಿʼ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈ ಹಿಂದೆ ರಂಗಭೂಮಿ, ಕಿರುತೆರೆಗಳಲ್ಲಿ ಸಾಕಷ್ಟು ದುಡಿದಿರುವ ಎಸ್.ಎಲ್. ಎನ್ ಸ್ವಾಮಿ ತಾತನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸಚಿತ್ ಫಿಲಂಸ್ ಲಾಂಛನದಲ್ಲಿ ವೆಂಕಟ್ ಗೌಡ ನಿರ್ಮಿಸುತ್ತಿರುವ ಐದನೇ ಚಿತ್ರವಿದು.
ಸ್ಟಾರ್ ಡೈರೆಕ್ಟರ್ ರಾಮ್ ಗೋಪಾಲ್ ವರ್ಮಾ ಗರಡಿಯಲ್ಲಿ ಐದಾರು ವರ್ಷಗಳ ಕಾಲ ಪಳಗಿರುವ ಅಪ್ಪಟ ಪ್ರತಿಭಾನ್ವಿತ ನಿರ್ದೇಶಕ ಕಿಶೋರ್ ಭಾರ್ಗವ್, ನಿರ್ದೇಶಿಸಿರುವ ಸ್ಟಾಕರ್ ಸಿನಿಮಾ ಬಿಡುಗಡೆಗೆ ಸಜ್ಜಾಗಿದ್ದು, ಮೂಲತಃ ತೆಲುಗಿನವರಾದ ರಾಮ್ ಸಿನಿಮಾದಲ್ಲಿ ನಾಯಕ ನಟನಾಗಿ ಅಭಿನಯಿಸಿದ್ದಾರೆ.
ತೆಲುಗಿನವರಾದ್ರೂ ಕನ್ನಡ ಮೇಲಿನ ಇವರ ಅಭಿಮಾನ ಕನ್ನಡ ಚಿತ್ರರಂಗದತ್ತ ಕರೆದುಕೊಂಡು ಬಂದಿದೆ. ಹೀಗಾಗಿ ತಾವು ಮೊದಲ ಸಿನಿಮಾವನ್ನು ಕನ್ನಡದಲ್ಲಿಯೇ ನಟಿಸ್ಬೇಕು ಅನ್ನೋ ಇಚ್ಛೆಯಿಂದ ರಾಮ್ ಸ್ಟಾಕರ್ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ. ಅರವಿಂದ್ ಎಂಬ ಪವರ್ ಫುಲ್ ಪಾತ್ರ ಮಾಡಿರುವ ರಾಮ್ ಲುಕ್ ರಿವೀಲ್ ಆಗಿದೆ. ಗೈಯಲ್ಲಿ ಗನ್ ಹಿಡಿದು, ದ್ವೇಷ ತುಂಬಿರುವ ಕಣ್ಣುಗಳಿಂದ ಖಡಕ್ ಲುಕ್ ನಲ್ಲಿ ಮಿಂಚಿರುವ ರಾಮ್ ಗೆಟಪ್ ಸೂಪರ್ ಆಗಿದೆ.
ಬೆಳದಿಂಗಳ ಬಾಲೆ ಸುಮನ್ ನರ್ಗಕರ್, ಐಶ್ವರ್ಯ ನಂಬಿಯರ್, ಉದಯ್ ಆಚಾರ್, ನಮ್ರತಾ ಪಾಟೀಲ್, ಜಿತೆನ್ ಆರೋರಾ, ಭವಾನಿಶಂಕರ್ ದೇಸಾಯಿ ಮುಂತಾದವರು ಸ್ಟಾಕರ್ ಸಿನಿಮಾದಲ್ಲಿ ನಟಿಸಿದ್ದು, ಕನ್ನಡದ ಜೊತೆಗೆ ಹಿಂದಿ ಭಾಷೆಯಲ್ಲಿ ಈ ಸಿನಿಮಾ ತಯಾರಾಗಿದೆ.
ಥ್ರಿಲ್ಲರ್ ಜೊತೆಗೆ ಸಸ್ಪೆನ್ಸ್ ಕಥಾಹಂದರ ಹೊಂದಿರುವ ಸ್ಟಾಕರ್ ಸಿನಿಮಾವನ್ನು, ಎಸ್ ಎಂ ಎಲ್ ಪ್ರೊಡಕ್ಷನ್ಸ್, ಸ್ಕ್ರಿಪ್ಟ್ ಟೀಸ್ ಫಿಲ್ಮ್ಸ್ ನಡಿ ಎಂ ಎನ್ ವಿ ರಮಣ, ಸಂದೀಪ್ ಗೌಡ ಹಾಗೂ ಸ್ವಾತಿ ಗೋವಾಡನಿರ್ಮಾಣ ಮಾಡಿದ್ದಾರೆ.
ಸೋಮಶೇಖರ್, ಭರತ್ ಪ್ರಮೋದ್ ಹಾಗೂ ಕಿಶೋರ್ ಭಾರ್ಗವ್ ಚಿತ್ರಕಥೆ ಬರೆದಿದ್ದು, ವಿನೋದ್ ರಾಜ್ ಕ್ಯಾಮೆರಾ ಕೈ ಚಳಕ, ಸ್ಕಂದ ಕಶ್ಯಪ್ ಮ್ಯೂಸಿಕ್, ಸುಧೀರ್ ಪಿಆರ್ ಕಲಾ ನಿರ್ದೇಶನ, ವಂದನಾ ಭಂಡಾರೆ ವಸ್ತ್ರ ವಿನ್ಯಾಸ ಸಿನಿಮಾದಲ್ಲಿರಲಿದೆ. ಸದ್ಯ ಸ್ಟಾಕರ್ ಸಿನಿಮಾ ಶೂಟಿಂಗ್ ಕಂಪ್ಲೀಟ್ ಮಾಡಿ ಬಿಡುಗಡೆಗೆ ಎದುರು ನೋಡುತ್ತಿದೆ.