Categories
ಸಿನಿ ಸುದ್ದಿ

ಶ್ರೀಧರ್ ಹಾಡಿನ ಸಂಭ್ರಮ! ನಾಟಿ ಕೋಳಿ ನೀನು … ನಾಟಿ ಹುಂಜ ನೀನು ಅಂದ್ರು ಜೋಗಿ ಸುನೀತ…

ಸಂಗೀತ ನಿರ್ದೇಶಕ ಶ್ರೀಧರ್ ಸಂಭ್ರಮ್ ಗಾಯಕರ ಮೂಲಕ ಹಾಡಿಸೋದು ಗೊತ್ತು. ಈಗ ಅವರೇ ಮೊದಲ ಸಲ ಹಾಡಿದ್ದಾರೆ. ಅದು ಶೋಕಿವಾಲ ಸಿನಿಮಾಗೆ. ಈಗಾಗಲೆ ಮೊದಲನೇ ಲಿರಿಕಲ್ ವೀಡಿಯೋ ರಿಲೀಸ್ ಅಗಿ ಹಿಟ್ ಅಗಿತ್ತು…

ಈಗ ಎರಡನೇ ಲಿರಿಕಲ್ ವೀಡಿಯೋ ನಾಟಿ ಕೋಳಿ… ನೀನು ನಾಟಿ ಹುಂಜ ನಾನು… ಹಾಡು ಹಾಡಿದ್ದಾರೆ. ಅಂದಹಾಗೆ, ಈ ಹಾಡು ಫೆಬ್ರವರಿ 3ರಂದು ಸಂಜೆ 5:04ಕ್ಕೆ ಕ್ರಿಸ್ಟಲ್ ಮ್ಯೂಸಿಕ್ ಚಾನಲ್ ನಲ್ಲಿ ರಿಲೀಸ್ ಆಗುತ್ತಿದೆ.

ಡಾ”ಟಿ.ಆರ್,ಚಂದ್ರಶೇಖರ್ ಸರ್ ನಿರ್ಮಾಣದ ಈ ಚಿತ್ರವನ್ನು, ಜಾಕಿ ನಿರ್ದೇಶನ ಮಾಡಿದ್ದಾರೆ. ಶ್ರೀಧರ್. ವಿ.ಸಂಭ್ರಮ್ ಸಂಗೀತವಿದೆ. ಮೊದಲ ಬಾರಿಗೆ ಅವರಿಲ್ಲಿ ಹಾಡಿದ್ದಾರೆ. ಅವರೊಂದಿಗೆ ಜೋಗಿ ಸುನೀತ ಧ್ವನಿಗೂಡಿಸಿದ್ದಾರೆ. ನಾಗೇಂದ್ರ ಪ್ರಸಾದ್, ಗೌಸ್ ಪೀರ್ ಬರೆದಿರುವ ಹಾಡು ಕ್ರಿಸ್ಟಲ್ ಮ್ಯೂಸಿಕ್ ಚಾನೆಲ್ ನಲ್ಲಿ ರಿಲೀಸ್ ಆಗಲಿದೆ.

Categories
ಸಿನಿ ಸುದ್ದಿ

ಹೊಸಬರ ಧರ್ಮಂ ಚಿತ್ರದ ಶೀರ್ಷಿಕೆ ಬಿಡುಗಡೆ…

ಶಾಂತಾ ಸಿನಿಮಾಸ್ ನಡಿ ಎಸ್ ಕೆ ರಾಮಕೃಷ್ಣ ನಿರ್ಮಾಣದ ಹೊಸ ಸಿನಿಮಾದ ಟೈಟಲ್ ಅನಾವರಣಗೊಂಡಿದೆ. ಒಂದಷ್ಟು ಹೊಸಬರೇ ಸೇರಿ ಮಾಡುತ್ತಿರುವ ಈ ಸಿನಿಮಾಗೆ ಧರ್ಮಂ ಎಂಬ ಪವರ್ ಫುಲ್ ಟೈಟಲ್ ಇಡಲಾಗಿದ್ದು, ಇತ್ತೀಚೆಗೆಷ್ಟೇ ಈ ಸಿನಿಮಾದ ಟೈಟಲ್ ಲಾಂಚ್ ಆಗಿದೆ. ಕನ್ನಡದ ಚಿತ್ರರಂಗದ ಸ್ಫೂರ್ತಿಯ ನಟರಾದ ಶಂಕರ್ ನಾಗ್ ಹಾಗೂ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಈ ಶೀರ್ಷಿಕೆಯನ್ನು ಚಿತ್ರತಂಡ ಅರ್ಪಣೆ ಮಾಡಿದೆ.

ಕಳೆದ ಹದಿಮೂರು ವರ್ಷಗಳಿಂದ ಅಸೋಸಿಯೇಟ್ ಡೈರೆಕ್ಟರ್ ಆಗಿ ಕೆಲಸ ನಿರ್ವಹಿಸುತ್ತಿರುವ ನಾಗಮುಖ ಧರ್ಮಂ ಸಿನಿಮಾ ಮೂಲಕ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದು, ಇದು ಇವರು ನಿರ್ದೇಶನದ ಮೊದಲ ಸಿನಿಮಾವಾಗಿದೆ. 1980ರ ಕಾಲಘಟ್ಟದಲ್ಲಿ ನಡೆದ ಸತ್ಯ ಘಟನೆ ಆಧಾರಿತ ಧರ್ಮಂ ಸಿನಿಮಾದಲ್ಲಿ ಶಶಿ ನಾಯಕ ನಟನಾಗಿ ಅಭಿನಯಿಸಿದ್ದು, ವರಿಣಿಕಾ ಶೆಟ್ಟಿ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ಉಳಿದಂತೆ ಸರವಣ ಸಂಗೀತ, ವಿನೋದ್ ಕುಮಾರ್ ಸಂಕಲನ, ನಾಗಶಟ್ಟಿ ಕ್ಯಾಮೆರಾ ಕೈಚಳಕ ಸಿನಿಮಾದಲ್ಲಿರಲಿದೆ.

ಆನೇಕಲ್ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದ್ದು, ಈಗಾಗಲೇ 90ರಷ್ಟು ಶೂಟಿಂಗ್ ಕಂಪ್ಲೀಟ್ ಮಾಡಿರುವ ಚಿತ್ರತಂಡ ಸಾಂಗ್ ಹಾಗೂ ಫೈಟ್ ಸೀನ್ಸ್ ಶೂಟಿಂಗ್ ನ್ನು ಬಾಕಿ ಉಳಿಸಿಕೊಂಡಿದೆ. ಸದ್ಯಕ್ಕೆ ಟಾಕಿ ಪೋಷನ್ ನಲ್ಲಿ ಬ್ಯುಸಿಯಾಗಿರುವ ಧರ್ಮಂ ಟೀಂ ಕೊರೋನಾ ಆರ್ಭಟ ಕೊಂಚ ಕಡಿಮೆಯಾದ್ಮೇಲೆ ತೆರೆಗೆ ಬರುವ ಯೋಜನೆ ಹಾಕಿಕೊಂಡಿದೆ.

Categories
ಸಿನಿ ಸುದ್ದಿ

ಫೆಬ್ರವರಿ 11ಕ್ಕೆ ಫೋರ್ ವಾಲ್ಸ್ ಸಿನಿಮಾ ತೆರೆಗೆ; ಅಚ್ಯುತ್ ಚಿತ್ರದ ಹೀರೋ

ಕನ್ನಡದಲ್ಲಿ ಈಗಾಗಲೇ ವಿಭಿನ್ನ ಬಗೆಯ ಶೀರ್ಷಿಕೆಯ ಸಿನಿಮಾಗಳು ಬಂದಿವೆ. ಅದರ ಜೊತೆಯಲ್ಲಿ ಪೋಸ್ಟರ್ ಹಾಗು ಟೈಟಲ್,ಟೀಸರ್ ಹೀಗೆ ಪ್ರತಿ ಹಂತದಲ್ಲೂ ಕ್ಯೂರಿಯಾಸಿಟಿ ಹುಟ್ಟಿಸುವ ಮೂಲಕ ಎಲ್ಲರ ಗಮನ ತನ್ನತ್ತ ಸೆಳೆಯುವಲ್ಲಿ ಯಶಸ್ವಿಯೂ ಆಗುತ್ತವೆ. ಅಂತಹ ಸಿನಿಮಾಗಳ ಸಾಲಿಗೆ ಫೋರ್ ವಾಲ್ಸ್ ಸಿನಿಮಾವೂ ಸೇರಿದೆ.

ಫಾರ್ ದ ಫಸ್ಟ್ ಟೈಮ್ ಖ್ಯಾತ ನಟ ಅಚ್ಯುತ್ ಕುಮಾರ್ ಹೀರೋ ಆಗಿ ನಟಿಸಿರುವ ‘ಫೋರ್ ವಾಲ್ಸ್’ ಸಿನಿಮಾ ಇದೀಗ ಬಿಡುಗಡೆಗೆ ಸಜ್ಜಾಗಿದೆ. ಅವರ ಜೊತೆ ಸುಜಯ್, ಜಾಹ್ನವಿ, ಭಾಸ್ಕರ್ ನೀನಾಸಂ, ಡಾ.ಪವಿತ್ರ, ರಚನಾ ಇತರರು ಕಾಣಿಸಿಕೊಂಡಿದ್ದಾರೆ.

ಫೆಬ್ರವರಿ 11ಕ್ಜೆ ‘ಫೋರ್ ವಾಲ್ಸ್’ ಸಿನಿಮಾ ಬಿಡುಗಡೆ ಮಾಡುವ ಬಗ್ಗೆ ಚಿತ್ರತಂಡ‌ ಜೋರು ತಯಾರಿ ನಡೆಸಿದೆ.

ಗಾಯಕ ವಿಜಯ್ ಪ್ರಕಾಶ್ ಅವರ ಧ್ವನಿಯಲ್ಲಿ ಮೂಡಿ ಬಂದಿದ್ದ ‘ಕಣ್ಮಣಿಯೇ ಕಣ್ಮಣಿಯೇ’ ಹಾಡಿನ ಲಿರಿಕಲ್ ವೀಡಿಯೋ ಸಾಂಗ್ ಈ ಹಿಂದೆ ಎಲ್ಲೆಡೆ ಜೋರು ಸದ್ದು ಮಾಡಿತ್ತು. ಅಚ್ಯುತ್ ಕುಮಾರ್ ಸೈಕಲ್ ಹಿಡಿದು ಗೆಳತಿ ಹಿಂದೆ ಸುತ್ತುತ್ತ, ಪ್ರೀತಿ ನಿವೇದನೆ ಮಾಡುವ ಹಾಡು ಕೇಳುಗರಿಗಂತೂ ಸಿಕ್ಕಾಪಟ್ಟೆ ಮೋಡಿ ಮಾಡಿತ್ತು. ಶ್ರೀ ತಲಗೇರಿ ಅವರ ಸಾಹಿತ್ಯಕ್ಕೆ ಸಂಗೀತ ನಿರ್ದೇಶಕ ಆನಂದ ರಾಜಾ ವಿಕ್ರಮ ಇಂಪಾದ ಸಂಗೀತ ಸಂಯೋಜನೆ ಮಾಡಿದ್ದಾರೆ. ಈ ಹಾಡಿನ ವಿಡಿಯೋ ಕೂಡ ಬಿಡುಗಡೆಯಾಗಿದ್ದು, ಯೂಟ್ಯೂಬ್ ನಲ್ಲಿ‌ ಸೌಂಡ್ ಮಾಡ್ತಿದೆ ಅನ್ನೋದು ಪ್ರತ್ಯೇಕವಾಗಿ ಹೇಳುವಂತಿಲ್ಲ.

‘ಫೋರ್ ವಾಲ್ಸ್’ ಚಿತ್ರಕ್ಕೆ ಮಂತ್ರಂ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಡೈರೆಕ್ಟರ್ ಆಗಿ ಎಂಟ್ರಿ ಕೊಟ್ಟಿದ್ದ ಎಸ್.ಎಸ್ ಸಜ್ಜನ್ ಈ ಚಿತ್ರಕ್ಕೆ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಅಚ್ಯುತ್ ಕುಮಾರ್ ಇಲ್ಲಿ ಹೀರೋ ಆಗಿ ಮಿಂಚಿದ್ದು, ಮೂರು ಶೇಡ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಟೀಸರ್ ನೋಡಿ, ಅಚ್ಯುತ್ ಕುಮಾರ್ ಹೊಸ ಗೆಟಪ್ ನಲ್ಲಿ ಕಂಡ ಚಿತ್ರಪ್ರೇಮಿಗಳು ಸಿನಿಮಾ ಬಗ್ಗೆ ಇನ್ನಿಲ್ಲದ ನಿರೀಕ್ಷೆಯನ್ನು ಇಟ್ಟುಕೊಂಡಿರುವುದಂತು ನಿಜ.

ಹಾಗಾದರೆ, ಈ ಫೋರ್ ವಾಲ್ಸ್ ಸ್ಟೋರಿ ಏನ್ ಗೊತ್ತಾ? ಹೇಳಿ ಕೇಳಿ ಇದೊಂದು ಫ್ಯಾಮಿಲಿ ಎಂಟಟೈನ್ಮೆಂಟ್ ಚಿತ್ರ. ತಂದೆ ಮತ್ತು ಮಗನ ನಡುವಿನ ಬಾಂಧವ್ಯದ ಕತೆ ಚಿತ್ರದಲ್ಲಿದೆ.

ಮನರಂಜನೆಗೆ ಎಲ್ಲೂ ಕೊರತೆ ಇಲ್ಲ ಎನ್ನುವುದು ಚಿತ್ರತಂಡದ ಮಾತು. ಎಸ್.ವಿ ಪಿಕ್ಚರ್ಸ್ ಬ್ಯಾನರ್ ನಲ್ಲಿ ಟಿ. ವಿಶ್ವನಾಥ್ ನಾಯಕ್ ನಿರ್ಮಾಪಕರು. ಡಾ. ಪವಿತ್ರ ನಾಯಕಿಯಾಗಿ ಅಭಿನಯಿಸಿದ್ದಾರೆ. ಡಾ. ಜಾನ್ಹವಿ ಜ್ಯೋತಿ, ದತ್ತಣ್ಣ, ಭಾಸ್ಕರ್ ನೀನಾಸಂ, ಶ್ರೇಯಾ ಶೆಟ್ಟಿ, ಆಂಚಲ್ ಸೇರಿದಂತೆ ಹಲವು ಕಲಾವಿದರು ಚಿತ್ರದಲ್ಲಿದ್ದಾರೆ. ವಿಡಿಆರ್ ಛಾಯಾಗ್ರಹಣ ಚಿತ್ರಕ್ಕಿದೆ.

Categories
ಸಿನಿ ಸುದ್ದಿ

ಆ ಅಪ್ಪರಂತೆ ಇವರೂ ಇರಲಿ…

ಚಿರಂಜೀವಿ ಸರ್ಜಾ ಮತ್ತು ಪನ್ನಗ ಇಬ್ಬರೂ ಆತ್ಮೀಯ ಗೆಳೆಯರು ಅನ್ನೋದು ಎಲ್ಲರಿಗೂ ಗೊತ್ತು. ಅವರ ಸ್ನೇಹ ಹೇಗಿತ್ತೆಂದರೆ, ಒಟ್ಟಿಗೆ ತಿಂಡಿ ತಿನ್ನುವುದರಿಂದ ಹಿಡಿದು ಒಟ್ಟಿಗೆ ಕಥೆಗಳನ್ನು ಕೇಳುವವರೆಗೂ ಇತ್ತು. ಬಿಡುವಿದ್ದಾಗೆಲ್ಲ ಸದಾ ಒಂದಷ್ಟು ಹರಟೆ, ಸಿನಿಮಾ ಕುರಿತ ಮಾತುಕತೆ ಇತ್ಯಾದಿ ವಿಷಯಗಳ ಬಗ್ಗೆ ಚರ್ಚಿಸುತ್ತಿದ್ದ ಅವರು ಒಂದು ರೀತಿ ಗೆಳೆತನಕ್ಕೆ ಹೇಳಿ ಮಾಡಿಸಿದಂತಹ ದೋಸ್ತ್‌ಗಳೇ.


ಹೌದು, ಇಲ್ಲಿರುವ ಒಂದು ಫೋಟೋ ನೋಡಿದವರಿಗೆ ಹೆಚ್ಚೇನೂ ಹೇಳುವ ಅಗತ್ಯವಿಲ್ಲ. ಇಲ್ಲಿರುವ ಫೋಟೋದಲ್ಲಿ ಚಿರಂಜೀವಿ ಸರ್ಜಾ ಅವರು ಪನ್ನಗ ಅವರಿಗೆ ಹೆಡ್‌ ಮಸಾಜ್‌ ಮಾಡುತ್ತಿದ್ದಾರೆ. ಹಾಗೆಯೇ ಪಕ್ಕದಲ್ಲಿರೋ ಫೋಟೋವನ್ನು ಗಮನಿಸಿ, ಆ ಫೋಟೋದಲ್ಲಿ ಚಿರಂಜೀವಿ ಸರ್ಜಾ ಅವರ ಪುತ್ರ ರಾಯನ್‌ ಪನ್ನಗ ಪುತ್ರ ವೇದ್‌ ಅವರಿಗೆ ತಲೆ ಸವರುತ್ತಿದ್ದಾನೆ. ಅಲ್ಲಿಗೆ ಅಪ್ಪಂದಿರಂತೆಯೇ ಮಕ್ಕಳೂ ಕಾಣಿಸಿಕೊಂಡಿದ್ದಾರೆ. ಇವರಿಬ್ಬರ ಗೆಳೆತನ ಕೂಡ ಹಾಗೆಯೇ ಇರಲಿ ಅನ್ನೋದು ಸಿನಿಲಹರಿ ಅಶಯ…

Categories
ಸಿನಿ ಸುದ್ದಿ

ಹೊಸ ಪ್ರತಿಭೆಗಳಿಗೆ ಅವಾರ್ಡ್‌ ಕೊಡಲಿದೆ ಅವಾರ್ಡಿಯೊ ಕಿರುಚಿತ್ರೋತ್ಸವ! ಇದು ಪ್ರತಿಭಾವಂತರ ಹೊಸ ವೇದಿಕೆ…

ಕಿರುಚಿತ್ರಗಳ ಮೂಲಕ ತಮ್ಮ ಭವಿಷ್ಯ ರೂಪಿಸಿಕೊಳ್ಳಲು ಹೊರಟಿರುವ ಅನೇಕ ಪ್ರತಿಭಾವಂತರು ಕನ್ನಡ ಸಿನಿ ಜಗತ್ತಿನಲ್ಲಿದ್ದಾರೆ. ಈಗಾಗಲೇ ಅನೇಕ ಪ್ರತಿಭಾವಂತರು ಕಿರುಚಿತ್ರಗಳ ಮೂಲಕವೇ ತಮ್ಮ ಭವಿಷ್ಯ ಕಟ್ಟಿಕೊಂಡಿದ್ದಾರೆ. ಅಂತಹ ಯುವ ಪ್ರತಿಭೆಗಳನ್ನು ಗುರುತಿಸಿ, ಅವರ ಸಿನಿಮಾ ಮತ್ತು ಅವರೊಳಗಿರುವ ಅಗಾಧ ಪ್ರತಿಭೆಯನ್ನು ಹೊರತರುವಂತಹ ಪ್ರಯತ್ನ ಕಿರುಚಿತ್ರೋತ್ಸವಗಳ ಮೂಲಕ ನಡೆದಿದೆ. ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸಬೇಕೆಂಬ ಉದ್ದೇಶದಿಂದಲೇ ಹಲವು ರಾಜ್ಯ ಮತ್ತು ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ಕಿರುಚಿತ್ರೋತ್ಸವಗಳು ನಡೆಯುತ್ತವೆ. ಪ್ರತಿ ವರ್ಷ ನಡೆಯುವ ಈ ಕಿರುಚಿತ್ರೋತ್ಸವಗಳ ಸಾಲಿಗೆ ಈಗ ಅವಾರ್ಡಿಯೊ ರಾಷ್ಟ್ರೀಯ ಕಿರುಚಿತ್ರೋತ್ಸವ ಕೂಡ ಸೇರಿದೆ.


ಹೌದು, ನವ ಪ್ರತಿಭೆಗಳಿಗೊಂದು ಹೊಸ ವೇದಿಕೆಯಾಗಿರುವ ಈ ಕಿರುಚಿತ್ರೋತ್ಸವದಲ್ಲಿ ಎಲ್ಲರಿಗೂ ಉತ್ತಮ ವೇದಿಕೆ ಕಲ್ಪಿಸುವ ಗುರಿಯನ್ನು ಹೊಂದಿದೆ ಎಂದು ಹೇಳುವ ANSFF ಸಂಸ್ಥಾಪಕ ಹಾಗು ಸಿಇಓ ಲಿಖಿತ್ ರಘುವೀರ್, ” ನಾವು ಆರಂಭಿಸುವ ಈ ಕಿರುಚಿತ್ರೋತ್ಸವದಂತಹ ವೇದಿಕೆಗಳನ್ನು ಬಹಳಷ್ಟು ಕಂಪನಿಗಳು ಶುರುಮಾಡಿವೆ. ಆದರೆ, ಅವುಗಳಿಗಿಂತಲೂ ಭಿನ್ನವಾಗಿ ಮಾಡಬೇಕು, ಎಲ್ಲಾ ಪ್ರತಿಭೆಗಳನ್ನೂ ಪರಿಗಣಿಸಿ ಅವರಿಗೆ ಸೂಕ್ತ ವೇದಿಕೆ ಕಲ್ಪಿಸಬೇಕು ಅನ್ನೋದು ನಮ್ಮ ಉದ್ದೇಶ. ಕೇವಲ ಅದು ಕಿರುಚಿತ್ರೋತ್ಸವ ಆಗಿ ಉಳಿಯದೆ, ಒಂದೊಳ್ಳೆಯ ಅನುಭವ ಕಟ್ಟಿಕೊಡುವ ಪ್ರಯತ್ನ ಮಾಡುತ್ತೇವೆ. ಎಲ್ಲಕ್ಕಿಂತಲೂ ಉತ್ತಮ ಸಂಬಂಧದ ಅರ್ಥ ಕಲ್ಪಿಸಿ, ಗೌರವಿಸುವ ಪ್ರಯತ್ನ ಮಾಡಲಾಗುತ್ತದೆ. ಹಲವು ಪ್ರತಿಭಾವಂತರ ಕನಸುಗಳನ್ನು ನನಸಾಗಿಸುವ ಸಣ್ಣ ಪ್ರಯತ್ನವಿದು.

ಇನ್ನು, ಈ ಕಿರುಚಿತ್ರೋತ್ಸವ ಯುವ ಪೀಳಿಗೆಯ ಚಲನಚಿತ್ರ ನಿರ್ಮಾಪಕರಿಗೆ ಮತ್ತೊಂದು ಅನನ್ಯ ವೇದಿಕೆಯೂ ಹೌದು. ಈ ಅವಾರ್ಡಿಯೊ ರಾಷ್ಟ್ರೀಯ ಕಿರುಚಿತ್ರೋತ್ಸವ ಬೆಂಗಳೂರಿನಲ್ಲೇ ನಡೆಯಲಿದೆ. ಕಿರುಚಿತ್ರೋತ್ಸವದಲ್ಲಿ ಖ್ಯಾತ ನಟ, ನಟಿಯರು, ನಿರ್ಮಾಪಕರು, ನಿರ್ದೇಶಕರು ಆಗಮಿಸಲಿದ್ದಾರೆ. ಕಿರುಚಿತ್ರೋತ್ಸವದಲ್ಲಿ ನಿರ್ಮಾಪಕ, ನಿರ್ದೇಶಕರ ಜೊತೆ ಸಂವಾದ ಕಾರ್ಯಕ್ರಮವೂ ಇರಲಿದೆ. ಇನ್ನು, 2022 ರ ಏಪ್ರಿಲ್‌ 23 ಮತ್ತು 24 ರಂದು ಕಿರುಚಿತ್ರೋತ್ಸವ ನಡೆಯಲಿದೆ. ತಮ್ಮ ಕಿರುಚಿತ್ರಗಳನ್ನು ಮಾರ್ಚ್‌ 6ರ ಒಳಗಾಗಿ ನೋಂದಣಿ ಮಾಡಿಕೊಳ್ಳಬೇಕು. ಇಲ್ಲಿ ಶಾರ್ಟ್‌ ಫಿಲ್ಮ್‌, ಶಾರ್ಟ್‌ ಡಾಕ್ಯುಮೆಂಟರಿ ಮತ್ತು ಮ್ಯೂಸಿಕ್‌ ವಿಡಿಯೋ ಕೂಡ ನೋಂದಣಿ ಮಾಡಬಹುದಾಗಿದೆ. www.awardioevents.com ಈ ಮೇಲ್‌ಗೆ ನೋಂದಣಿಗ ಎಂದು ವಿವರ ಕೊಡುತ್ತಾರೆ ಲಿಖಿತ್‌ ರಘುವೀರ್.

ಅಂದಹಾಗೆ, ಈ ಕಿರುಚಿತ್ರೋತ್ಸವಕ್ಕೆ ಇಂಡಿಯನ್ ಫಿಲ್ಮ್ ಮೇಕರ್ಸ್ ಅಸೋಸಿಯೇಷನ್, ಮ್ಯೂಸಿಕ್ ಬಾಕ್ಸ್ ನ ಸ್ಕೈಲೈನ್ ದಿಲೀಪ್ ಸಾಥ್‌ ನೀಡಿದ್ದಾರೆ. ನಮ್ಮೊಂದಿಗೆ ಫಿಲ್ಮಾಹಾಲಿಕ್‌ ಫೌಂಡೇಶನ್ ಮತ್ತು ತಾಥಿ ಸಿನಿಮಾ ಪ್ರೊಡಕ್ಷನ್ಸ್ ಕೂಡ ಕೈ ಜೋಡಿಸಿದೆ. ಜನವರಿ 1, 2016 ರ ನಂತರ ಪೂರ್ಣಗೊಂಡ ಯಾವುದೇ ಕಿರುಚಿತ್ರಕ್ಕೆ ANSFF ಮುಕ್ತವಾಗಿದೆ. ತಮ್ಮ ಚಲನಚಿತ್ರವನ್ನು ANSFF ಗೆ ಸಲ್ಲಿಸುವುದು ಆಯ್ಕೆಯ ಗ್ಯಾರಂಟಿ ಅಲ್ಲ. ಎಲ್ಲಾ ವಿಜೇತರನ್ನು ನಮ್ಮ ಅಧಿಕೃತ ವೆಬ್‌ಸೈಟ್‌ನಲ್ಲಿ ಪಟ್ಟಿ ಮಾಡಲಾಗುತ್ತದೆ. ಎಲ್ಲಾ ವಿಜೇತ ಚಿತ್ರಗಳಿಗೂ ಟ್ರೋಫಿ ಮತ್ತು ಪ್ರಮಾಣ ಪತ್ರವನ್ನು ನೀಡಲಾಗುತ್ತದೆ.

ಈ ಕಿರುಚಿತ್ರೋತ್ಸವ ಪ್ರತಿಯೊಬ್ಬ ನಟ,ನಿರ್ದೇಶಕ ಮತ್ತು ನಿರ್ಮಾಪಕ ಹಾಗು ಅವರ ತಂಡವನ್ನು ಸಮಾನವಾಗಿ ಪರಿಗಣಿಸುತ್ತದೆ. ಇನ್ನು, ಈ ಕಿರುಚಿತ್ರೋತ್ಸವದಲ್ಲಿ ಒಟ್ಟು 22 ವಿಭಾಗಳಲ್ಲಿ ಪ್ರಶಸ್ತಿ ನೀಡಲಾಗುತ್ತದೆ. ಅತ್ಯುತ್ತಮ ನಟ. ನಟಿ. ಅತ್ಯುತ್ತಮ ಕಥೆ. ಅತ್ಯುತ್ತಮ ಚಿತ್ರಕಥೆ. ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ಛಾಯಾಗ್ರಹಣ, ಅತ್ಯುತ್ತಮ ಸಂಗೀತ ನಿರ್ದೇಶಕ, ಅತ್ಯುತ್ತಮ ಸಂಕಲನ, ಅತ್ಯುತ್ತಮ ಚೊಚ್ಚಲ ಕಿರುಚಿತ್ರ ತಯಾರಕ, 2022 ರ ಅತ್ಯುತ್ತಮ ಅವಾರ್ಡಿಯೊ ಕಿರುಚಿತ್ರ ಸೇರಿದಂತೆ ಇತರೆ ವಿಭಾಗಳಲ್ಲೂ ಪ್ರಶಸ್ತಿ ವಿತರಿಸಲಾಗುತ್ತದೆ ಎಂದು ಕಿರುಚಿತ್ರೋತ್ಸವದ ಸಂಸ್ಥಾಪಕ ಲಿಖಿತ್ ರಘುವೀರ್ ಹೇಳಿದ್ದಾರೆ.

Categories
ಸಿನಿ ಸುದ್ದಿ

ಕನ್ನಡದಲ್ಲಿ ಮತ್ತೆ ರಣರಂಗ …? ಹೊಂಬಾಳೆ ಫಿಲಂಸ್‌ ಜೊತೆ ಶಿವರಾಜಕುಮಾರ್‌ ಸಿನಿಮಾ; ಸಂತೋಷ್‌ ಆನಂದ್‌ರಾಮ್‌ ಕಥೆ!!

ರಣರಂಗ… ಈ ಶೀರ್ಷಿಕೆ ಯಾರು ಕೇಳಿಲ್ಲ. ಅದರಲ್ಲೂ ಈ ಹೆಸರು ಕೇಳಿದಾಕ್ಷಣ ಥಟ್ಟನೆ ನೆನಪಾಗೋದೇ ಹ್ಯಾಟ್ರಿಕ್‌ ಹೀರೋ ಶಿವರಾಜಕುಮಾರ್.‌ ಹೌದು, ಶಿವರಾಜಕುಮಾರ್‌ ಅಭಿನಯದ ಈ ಸಿನಿಮಾ ೧೯೮೮ರಲ್ಲಿ ಬಿಡುಗಡೆಯಾಗಿತ್ತು. ಶಿವರಾಜಕುಮಾರ್‌ ಜೊತೆ ಈ ಚಿತ್ರದಲ್ಲಿ ಸುಧಾರಾಣಿ ಜೋಡಿಯಾಗಿದ್ದರು. ಈಗ ಮತ್ತೇಕೆ ಈ ಚಿತ್ರದ ವಿಷಯ ಅನ್ನೋ ಪ್ರಶ್ನೆ ಎದುರಾಗಬಹುದು. “ಮತ್ತೆ ರಣರಂಗ” ಶುರುವಾಗುವ ಸುದ್ದಿ ಜೋರಾಗಿಯೇ ಹರಿದಾಡುತ್ತಿದೆ. ಹೊಂಬಾಳೆ ಫಿಲಂಸ್‌ ಬ್ಯಾನರ್‌ನಲ್ಲಿ ಶಿವರಾಜಕುಮಾರ್‌ ನಟಿಸುತ್ತಿದ್ದು, ಸಂತೋಷ್‌ ಆನಂದರಾಮ್‌ ನಿರ್ದೇಶನ ಮಾಡಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಲೇ ಇವೆ. ಹಾಗೊಂದು ವೇಳೆ ಎಲ್ಲವೂ ಸರಿಯಾದರೆ ದೊಡ್ಮನೆ ಫ್ಯಾನ್ಸ್‌ ಫುಲ್‌ ಖುಷ್.‌


ಶಿವರಾಜ್ ಕುಮಾರ್ ಸದ್ಯ ಬಿಡುವಿಲ್ಲದಷ್ಟು ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. ಅವುಗಳ ಜೊತೆಗೆ ಪ್ಯಾನ್‌ ಇಂಡಿಯಾ ಸಿನಿಮಾವೂ ಇದೆ. ವೇದ ಚಿತ್ರದ ನಂತರ ಪ್ಯಾನ್ ಇಂಡಿಯಾ ಸಿನಿಮಾ ಶುರುವಾಗಬಹುದು ಎನ್ನಲಾಗುತ್ತಿದೆ. ಅದರ ಹಿಂದೆಯೇ ಈಗ ಹೊಸ ಸುದ್ದಿ ಬಂದಿದೆ. ಶಿವರಾಜ್ ಕುಮಾರ್ ಮತ್ತು ಸಂತೋಷ್‌ ಆನಂದ್‌ರಾಮ್ ಕಾಂಬಿನೇಷನ್ ನಲ್ಲಿ ಹೊಸ ಸಿನಿಮಾ ಸೆಟ್ಟೇರಲಿದೆ ಎಂಬುದೇ ಆ ಸುದ್ದಿ. ಆ ಸುದ್ದಿ ನಿಜವಾಗಲಿ ಅನ್ನೋದು ಕೂಡ ಎಲ್ಲರ ಆಶಯ. ಇಷ್ಟಕ್ಕೂ ಸಂತೋಷ್‌ ಆನಂದ್‌ ರಾಮ್‌ ಅವರು ಶಿವಣ್ಣ ಅವರಿಗೆ “ರಾಜಕುಮಾರ” ಸಿನಿಮಾ ವೇಳೆಯೇ ಒಂದೊಳ್ಳೆಯ ಕಥೆ ರೆಡಿ ಮಾಡಿಟ್ಟುಕೊಂಡಿದ್ದರಂತೆ. ಅದಕ್ಕೆ “ಮತ್ತೆ ರಣರಂಗ” ಎಂಬ ಶೀರ್ಷಿಕೆಯನ್ನೂ ಅವರು ಕೊಟ್ಟಿದ್ದರಂತೆ. ಆದರೆ, ಅದಕ್ಕೆ ಕಾಲ ಕೂಡಿಬಂದಿರಲಿಲ್ಲ. ಈಗ ಸಮಯ ಬಂದಿರಬಹುದೇನೋ ಅದಕ್ಕೆ ಎಲ್ಲೆಡೆ ಈ ಇಬ್ಬರ ಕಾಂಬಿನೇಷನ್‌ನ ಸಿನಿಮಾ ಕುರಿತು ಸುದ್ದಿ ಹರಿದಾಡುತ್ತಿದೆ.

“ಮತ್ತೆ ರಣರಂಗ” ಸಿನಿಮಾದ ಈ ಚಿತ್ರದ ಶಿವರಾಜ್ ಕುಮಾರ್ ಅವರ ಪಾತ್ರವನ್ನು ತುಂಬಾನೇ ವಿಶೇಷವಾಗಿ ಮಾಡಿದ್ದಾರಂತೆ ಸಂತೋಷ್ ಆನಂದ್ ರಾಮ್. ಈ ಸಿನಿಮಾ ಮಾಡಬೇಕು ಅಂದಾಗೆಲ್ಲ ಆಗುತ್ತಿರಲಿಲ್ಲ. ಆ ನಡುವೆ ಪುನೀತ್‌ ರಾಜಕುಮಾರ್‌ ಅವರಿಗೆ ಸಂತೋಷ್‌ ಆನಂದ್‌ರಾಮ್‌ “ಯುವರತ್ನ” ಮಾಡಿದರು. ಈಗ
ಹೊಂಬಾಳೆ ಫಿಲಂಸ್‌ ಬ್ಯಾನರ್‌ನಡಿ “ಮತ್ತೆ ರಣರಂಗ” ಶುರುವಾಗುತ್ತಾ? ಈ ವಿಚಾರವೇ ಈಗ ಎಲ್ಲೆಡೆ ಹರಿದಾಡುತ್ತಿದೆ. ಇದು ಆದಷ್ಟು ಬೇಗ ಕನ್ಪರ್ಮ್‌ ಆಗಿ ಹೊರಬರಬೇಕಿದೆ. ಈ ಚಿತ್ರ ಶುರುವಾಗೋದು ಯಾವಾಗ ಎಂಬಿತ್ಯಾದಿ ಕುರಿತು ವಿಜಯ್ ಕಿರಗಂದೂರು ಅವರ ಹೊಂಬಾಳೆ ಫಿಲಂಸ್‌ ಮೂಲಕವೇ ಹೊರಬರಬೇಕು. ಈಗ ಶಿವಣ್ಣ ಕೂಡ ಬಿಝಿಯಾಗಿದ್ದಾರೆ. ಸಂತೋಷ್‌ ಆನಂದ್ ರಾಮ್ ಕೂಡ ಬಿಝಿ ಬಿಝಿಯಾಗಿದ್ದಾರೆ.

ಈಗ “ಮತ್ತೆ ರಣರಂಗ” ಸಿನಿಮಾದ್ದೇ ಸುದ್ದಿ. ಅದೇನೆ ಇದ್ದರೂ, ಶಿವರಾಜಕುಮಾರ್‌ ಮತ್ತು ಸಂತೋಷ್‌ ಆನಂದರಾಮ್‌ ಅವರ ಕಾಂಬಿನೇಷನ್‌ನಲ್ಲಿ ಸಿನಿಮಾ ಬರುತ್ತೆ ಅನ್ನೋದೇ ಖುಷಿ ವಿಷಯ. ಅದರಲ್ಲೂ ಹೊಂಬಾಳೆ ಫಿಲಂಸ್‌ ಸಿನಿಮಾ ಅಂದರೆ ಇನ್ನೂ ಸಂತಸ. ಈ ಮೂರು ಕಾಂಬಿನೇಷನ್‌ನ ಸಿನಿಮಾ ಸದ್ಯಕ್ಕೆ ದೊಡ್ಡ ನಿರೀಕ್ಷೆ ಹುಟ್ಟಿಸಿರುವುದಂತೂ ಸುಳ್ಳಲ್ಲ.

Categories
ಸಿನಿ ಸುದ್ದಿ

ಖಡಕ್‌ ಕನ್ನಡಿಗರು! ಹಳ್ಳಿ ಹುಡುಗರ ಕನ್ನಡ ಹಾಡಿದು… ರಾಘಣ್ಣ ಹಾಡಿದ ಗೀತೆ ಪಿಆರ್‌ಕೆ ಆಡಿಯೋ ಮೂಲಕ ಬಂತು

ಹೊಸಬರ ಸಿನಿಮಾಗಳು ದಿನ ಕಳೆದಂತೆ ಶುರುವಾಗುತ್ತಿವೆ. ಆ ಸಾಲಿಗೆ ಈಗ “ಖಡಕ್‌ ಹಳ್ಳಿ ಹುಡುಗರು” ಎಂಬ ಸಿನಿಮಾ ಕೂಡ ಸೇರಿದೆ. ಹೌದು, ಈ ಚಿತ್ರ ಮಾರ್ಚ್‌ನಲ್ಲಿ ಅಧಿಕೃತವಾಗಿ ಶುರುವಾಗಲಿದೆ. ಅದಕ್ಕೂ ಮುನ್ನ ಈ ಚಿತ್ರದ ಹಾಡೊಂದನ್ನು ಬಿಡುಗಡೆ ಮಾಡುವ ಮೂಲಕ ಸಿನಿಮಾ ಕೆಲಸಗಳಿಗೆ ಚಾಲನೆ ಕೊಡಲಾಗಿದೆ. ಹೌದು, ಈ ಚಿತ್ರಕ್ಕೆ ರಾಘವೇಂದ್ರ ರಾಜಕುಮಾರ್ ಹಾಡಿದ್ದಾರೆ. ಅದರಲ್ಲೂ ಅದು ಕನ್ನಡದ ಮೇಲಿರುವ ಹಾಡನ್ನು ರಾಘಣ್ಣ ಹಾಡಿದ್ದಾರೆ. “ಕನ್ನಡಕ್ಕೆ ಮೊದಲ ಗೌರವ” ಹಾಡನ್ನು ನಿರ್ಮಾಪಕ ರೆಹಮಾನ್‌ ಅವರು ಇತ್ತೀಚೆಗೆ ಬಿಡುಗಡೆ ಮಾಡಿದ್ದಾರೆ. ಈ ಹಾಡು ಪಿಆರ್‌ಕೆ ಆಡಿಯೋ ಮೂಲಕ ಹೊರಬಂದಿದೆ. ಬಹುತೇಕ ಹೊಸಬರೇ ಸೇರಿ ಮಾಡಿರುವ ಈ ಸಿನಿಮಾಗೆ ಎಂ.ಯು.ಪ್ರಸನ್ನ ನಿರ್ದೇಶಕರು. ಹಳ್ಳಿ ಹಿನ್ನೆಲೆಯಿಂದ ಬಂದಿರುವ ಪ್ರಸನ್ನ ಅವರಿಗೆ ಪೋಷಕರ ಬೆಂಬಲವಿದೆ. ಆ ಕಾರಣದಿಂದಲೇ ಪ್ರಸನ್ನೆ ನಿರ್ದೇಶನದತ್ತ ವಾಲಿದ್ದಾರೆ.


ಈ ಕುರಿತು ಹೇಳಿಕೊಂಡ ಪ್ರಸನ್ನ, “ನಾನು ಮೂಲತಃ ಹಳ್ಳಿಯವನು. ಕೊರೊನಾ ಲಾಕ್ ಡೌನ್ ವೇಳೆ ಹುಟ್ಟಿದ ಕಥೆಯಿದು. ಪಕ್ಕಾ ಹಳ್ಳಿ ಸೊಗಡಿನ ಸಿನಿಮಾ. ಎಂಟು ಮುಖ್ಯ ಪಾತ್ರಗಳನ್ನಿಟ್ಟುಕೊಂಡು ಈ ಸಿನಿಮಾ ಮಾಡುತ್ತಿದ್ದೇನೆ. ಚಿತ್ರದಲ್ಲಿ ಆರು ಹಾಡುಗಳಿವೆ. ಆರು ಹಾಡುಗಳನ್ನು ನಾನೇ ಬರೆದಿದ್ದೇನೆ. ಅದರಲ್ಲಿ “ಕನ್ನಡಕ್ಕೆ ಮೊದಲ ಗೌರವ” ಎಂಬ ಮೊದಲ ಹಾಡನ್ನು ರಾಘವೇಂದ್ರ ರಾಜಕುಮಾರ್ ಹಾಡಿದ್ದಾರೆ. ಅವರಿಗೆ ಧನ್ಯವಾದ ಹೇಳ್ತೀನಿ. ಈ ಹಾಡನ್ನು ಹಾಡುವಂತೆ ರಾಘಣ್ಣ ಅವರಿಗೆ ಪ್ರೇರಿಪಿಸಿದ ಪುನೀತ್ ರಾಜಕುಮಾರ್ ಅವರಿಗೆ ವಿಶೇಷ ಧನ್ಯವಾದ ಅರ್ಪಿಸುತ್ತೇನೆ. ಅಪ್ಪು ಅವರ ಪಿ.ಆರ್.ಕೆ ಆಡಿಯೋ ಮೂಲಕ ಈ ಹಾಡು ಬಿಡುಗಡೆಯಾಗಿದೆ. ಮಾರ್ಚ್ ನಲ್ಲಿ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ ಎಂದರು ನಿರ್ದೇಶಕ ಪ್ರಸನ್ನ.

ಚಿತ್ರಕ್ಕೆ ರಾಜೀವ್‌ ರಾಥೋಡ್‌ ಹೀರೋ. ಅವರು ಸಿನಿಮಾ ಬಗ್ಗೆ ಹೇಳಿದ್ದು ಹೀಗೆ. “ನನ್ನ ನೋಡಿದರೆ ಹಳ್ಳಿ ಹುಡುಗನ ತರಹ ಕಾಣುವುದಿಲ್ಲ. ನಿರ್ದೇಶಕರು ನನಗೆ ಹಳ್ಳಿಹುಡುಗನ ಗೆಟಪ್ ಹಾಕಿ ನೋಡಿ ಆಯ್ಕೆ ಮಾಡಿಕೊಂಡರು. ಈಗ ಬಿಡುಗಡೆಯಾಗಿರುವ ಹಾಡು ಇಷ್ಟು ಚೆನ್ನಾಗಿ ಬಂದಿದೆ ಅಂದರೆ ಪುನೀತ್ ಸರ್ ಕಾರಣ. ಅವರ ಸಹಾಯ ಮರೆಯುವಂತಿಲ್ಲ. ಎಂಬುದು ನಾಯಕ ರಾಜೀವ್ ರಾಥೋಡ್ ಮಾತು.
ಅಂದು ನಟ ಧರ್ಮ ಕೂಡ ಹೊಸಬರ ಸಿನಿಮಾಗೆ ಶುಭಕೋರಲು ಆಗಮಿಸಿದ್ದರು. ಈ ಸಿನಿಮಾಗೆ ಒಳ್ಳೆಯದಾಗಲಿ ಎಂದ ಧರ್ಮ, “ನಾನು ರಾಜೀವ್ ಬಹು ದಿನಗಳ ಸ್ನೇಹಿತರು. ಈ ಚಿತ್ರದ ಕಥೆ ಚೆನ್ನಾಗಿದೆ. ನೀವು ಒಂದು ಪಾತ್ರ ಮಾಡಬೇಕೆಂದು ಕೇಳಿದ್ದಾರೆ. ಮಾಡುತ್ತೇನೆ. ಚಿತ್ರತಂಡಕ್ಕೆ ಶುಭವಾಗಲಿ ಎಂದರು ನಟ ಧರ್ಮ.


ಅಂದು ಪ್ರಭಾಸ್ ರಾಜ್, ಚಂದ್ರ ಪ್ರಭ, ದೀಪು ವಿಜಯ್, ವರದರಾಜ್, ಉದಯ್, ಮಹಂತೇಶ್, ಆರ್ ಎಂ ಎಂ ಮಂಜು, ನಾಯಕಿಯರಾದ ರಾನ್ವಿ ಶೇಖರ್, ದೀಪಿದ್ದರು. ಸಿಂಹ ಮತ್ತು ಪುನೀತ್ ಪಟೇಲ್ ನಿರ್ಮಾಪಕರು. ಸುಧೀರ್ ಶಾಸ್ತ್ರಿ ಹಾಗೂ ಧ್ರುವ ಸಂಗೀತ ನಿರ್ದೇಶಕರು. ಪಿ‌.ಎಲ್ ರವಿ ಛಾಯಾಗ್ರಹಣ ಮಾಡಲಿದ್ದಾರೆ.

Categories
ಸಿನಿ ಸುದ್ದಿ

ಆತ್ಮಹತ್ಯೆಗೆ ಹೊರಟಿದ್ದ ವ್ಯಕ್ತಿ ನಿರ್ದೇಶಕನಾದ ಕಥೆ! ಕಡಲೂರ ಕಣ್ಮಣಿ ಹಿಂದಿನ ಹಾಡು ಪಾಡು!!

ಯಾವುದೇ ವ್ಯಕ್ತಿ ಸಾಧನೆ ಮಾಡಲು ಹೊರಟರೆ ನೂರಾರು ಅಡೆತಡೆ ಸಹಜ. ಅದರಲ್ಲೂ ಒಂದರ ಮೇಲೊಂದರಂತೆ ಸಮಸ್ಯೆಗಳು ಎದುರಾದರಂತೂ ಬದುಕೇ ಬೇಡ ಎನಿಸಿ ಆತ್ಮಹತ್ಯೆಯಂತಹ ಘಟನೆಗೂ ಯೋಚಿಸುವಂತಹ ಸಂದರ್ಭ ಬಂದೇ ಬರುತ್ತೆ. ಅಂಥದ್ದೊಂದು ಆತ್ಮಹತ್ಯೆ ಮಾಡಿಕೊಳ್ಳುವ ಯೋಚನೆ ಕನ್ನಡ ಚಿತ್ರರಂಗದ ನಿರ್ದೇಶಕರಿಗೂ ಬಂದಿತ್ತು. ಅದು ರಾಮ್‌ ಪ್ರಸನ್ನ ಹುಣಸೂರು. ಕೊನೆಗೆ ಆ ನಿರ್ಧಾರದಿಂದ ಅವರು ಹಿಂದೆ ಸರಿದು ನಿಂತರು. ಈಗ ಸಿನಿಮಾ ನಿರ್ದೇಶಿಸಿ, ರಿಲೀಸ್‌ಗೂ ರೆಡಿಯಾಗುತ್ತಿದ್ದಾರೆ…

ನಿರ್ದೇಶಕ ರಾಮ್ ಪ್ರಸನ್ನ ಹುಣಸೂರು ಅವರ ನಿರ್ದೇಶನದ “ಕಡಲೂರ ಕಣ್ಮಣಿ” ಚಿತ್ರ ರಿಲೀಸ್‌ಗೆ ರೆಡಿಯಾಗುತ್ತಿದೆ. ಅದಕ್ಕೂ ಮುನ್ನ ಸಿನಿಮಾದ ಹಾಡುಗಳು ಬಿಡುಗಡೆಯಾಗಿವೆ. ಮಧುರಾಮ್ ಅವರು ಬರೆದಿರುವ “ಎದೆಯೊಳಗೆ ಈ ಪ್ರೀತಿ ಶುರುವಾಯಿತು ನನಗೆ” ಎಂಬ ಹಾಡು ಎ2 ಮ್ಯೂಸಿಕ್ ಮೂಲಕ ಬಿಡುಗಡೆಯಾಗಿದೆ.

ತಮ್ಮ ಸಿನಿಮಾ ಜರ್ನಿ ಕುರಿತು ಹೇಳಿಕೊಂಡ ನಿರ್ದೇಶಕ ರಾಮ್‌ ಪ್ರಸನ್ನ ಹುಣಸೂರು, “ನನಗೆ ಹದಿನಾಲ್ಕು ವರ್ಷಗಳಿಂದ ಕನ್ನಡ ಚಿತ್ರರಂಗದೊಂದಿಗೆ ನಂಟಿದೆ. ಈ ಚಿತ್ರ ಆರಂಭವಾಗುವ ಮುನ್ನ ನಡೆದ ಒಂದು ಪ್ರಸಂಗ ನಿಮ್ಮ ಮುಂದೆ ಹಂಚಿಕೊಳ್ಳುತ್ತೇನೆ. ಜೀವನದಲ್ಲಿ ನೊಂದ ನಾನು, ಆತ್ಮಹತ್ಯೆ ಮಾಡಿಕೊಳ್ಳಲು ಸಮುದ್ರದ ಬಳಿ ಹೋಗುತ್ತಿದ್ದೆ. ಇನೇನ್ನೂ ಆತ್ಮಹತ್ಯೆ ಮಾಡಿಕೊಳ್ಳುವಷ್ಟರಲ್ಲಿ ಹಿಂದೆ ನನ್ನ ತಂದೆ-ತಾಯಿ ಕಂಡರು. ಆಗ ನಾನು ನನ್ನ ನಿರ್ಧಾರದಿಂದ ಹಿಂದೆ ಸರಿದೆ. ಈ ಸಿನಿಮಾದ ನಿರ್ಮಾಪಕರು ನನ್ನ ಸ್ನೇಹಿತರು. ಅವರೆಲ್ಲಾ ನನ್ನ ಪ್ರೋತ್ಸಹಕ್ಕೆ ನಿಂತರು. ಈ ಸಿನಿಮಾ ಆರಂಭವಾಯಿತು. ಚಿತ್ರೀಕರಣ ಮುಕ್ತಾಯವಾಗಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸ ಸಾಗಿದೆ.
“ಕಡಲೂರ ಕಣ್ಮಣಿ” ಯನ್ನು ನಾನು ವಜ್ರ ಎನ್ನುತ್ತೇನೆ. ಈ ಸಿನಿಮಾದ ಕೊನೆಯ ಇಪ್ಪತ್ತು ನಿಮಿಷ ಎಲ್ಲರ ಕಣ್ಣಲ್ಲೂ ನೀರು ತರಿಸುತ್ತದೆ. ಇದರ ಕಥೆ ಈಗಲೇ ಪೂರ್ತಿ ಹೇಳಲಾಗದು. ಚಿತ್ರಕ್ಕೆ ಸಂಗೀತ ನೀಡುವಂತೆ ಸಂಗೀತ ನಿರ್ದೇಶಕರೊಬ್ಬರನ್ನು ಕೇಳಲಾಗಿತ್ತು. ಆದರೆ ಅವರು ಆರು ತಿಂಗಳಾದರು ಒಂದು ಹಾಡು ಮಾಡಿ ಕೊಡಲಿಲ್ಲ. ಕೊನೆಗೆ ನಿರ್ಮಾಪಕರ ಒತ್ತಾಯಕ್ಕೆ ಮಣಿದು ನಾನೇ ಸಂಗೀತ ನೀಡಿದ್ದೇನೆ ಎಂದರು ನಿರ್ದೇಶಕ ರಾಮ್ ಪ್ರಸನ್ನ ಹುಣಸೂರು.

ಚಿತ್ರಕ್ಕೆ ಅರ್ಜುನ್‌ ಹೀರೋ. ಅವರು ಹೇಳಿದ್ದಿಷ್ಟು, “ನನಗೆ ನನ್ನ ‌ಸ್ನೇಹಿತನ ಮೂಲಕ ನಿರ್ದೇಶಕರು ಪರಿಚಯವಾದರು. ಸ್ವಲ್ಪ ಸಮಯ ಅವರೊಡನೆ ಮಾತನಾಡಿದೆ. ನೀವೆ ನಮ್ಮ ಸಿ‌ನಿಮಾ ಹೀರೋ ಎಂದರು. ಚಿತ್ರದಲ್ಲಿ ನನ್ನ ಪಾತ್ರ ಚೆನ್ನಾಗಿದೆ. ಸಹಕಾರ ನೀಡಿದ ಇಡೀ ತಂಡಕ್ಕೆ ಧನ್ಯವಾದ ಎಂದರು ಅರ್ಜುನ್.

ನಿರ್ಮಾಪಕರಾದ ವಿನೋದ್ ರಾಮ್ ಹೊಳೆನರಸೀಪುರ, ಕೊಳ ಶೈಲೇಶ್ ಆರ್ ಪೂಜಾರ್ , ಸಹ ನಿರ್ಮಾಪಕ ಬಸವರಾಜ ಗಚ್ಚಿ, ಮಧುರಾಮ್, ಕಿರಣ್ ದೇವಲಾಪುರ ಹಾಗೂ ಛಾಯಾಗ್ರಾಹಕರಾದ ಮನೋಹರ್ ಹಾಗೂ ರವಿರಾಮ್ ಇದ್ದರು.

Categories
ಸಿನಿ ಸುದ್ದಿ

ಹಿರಿಯ ನಿರ್ದೇಶಕ ಕಟ್ಟೆ ರಾಮಚಂದ್ರ ನಿಧನ

ಕನ್ನಡ ಚಿತ್ರರಂಗದ ಮತ್ತೊಬ್ಬ ಹಿರಿಯ ನಿರ್ದೇಶಕ ಕಟ್ಟೆ ರಾಮಚಂದ್ರ (75) ಅವರು ನಿಧನರಾಗಿದ್ದಾರೆ. ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ಅವರು (ಇಂದು) ಜನವರಿ 28ರಂದು ಅಗಲಿದ್ದಾರೆ. ಕಟ್ಟೆ ರಾಮಚಂದ್ರ ಅವರು ನಿರ್ದೇಶಕರಾಗಿ ಮತ್ತು ನಿರ್ಮಾಪಕರಾಗಿಯೂ ಗುರುತಿಸಿಕೊಂಡಿದ್ದರು.

ಅವರು ವೈಶಾಖದ ದಿನಗಳು, ಅರಿವು ಸೇರಿದಂತೆ ಹಲವು ಸಿನಿಮಾಗಳನ್ನು ನಿರ್ದೇಶಿಸಿದ್ದರು. ಮಹಾಲಕ್ಷ್ಮಿ ಸಿನಿಮಾ ನಿರ್ಮಾಣ ಮಾಡಿದ್ದರು. ಕಿರುತೆರೆಯಲ್ಲೂ ಅವರು ತನು ನಿನ್ನದು ಮನ ನಿನ್ನದು ಎಂಬ ಧಾರಾವಾಹಿಯನ್ನು ನಿರ್ದೇಶಿಸಿ, ನಿರ್ಮಿಸಿದ್ದರು. ಅವರು ಮನೆ ಮನೆ ಕಥೆ, ಅಲೆಗಳು ಸೇರಿದಂತೆ ಹಲವು ಸಿನಿಮಾಗಳಲ್ಲೂ ನಟಿಸಿದ್ದರು. ಅವರಿಗೆ ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿಗಳು ಲಭಿಸಿದ್ದವು. ಅವರು ರಾಷ್ಟ್ರ ಪ್ರಶಸ್ತಿಯ ಸಮಿತಿಯಲ್ಲಿ ಜ್ಯೂರಿಯಾಗಿಯೂ ಕೆಲಸ ಮಾಡಿದ್ದರು. ಇನ್ನು, ಅವರಿಗೆ ರಂಗಭೂಮಿ ಹಿನ್ನೆಲೆಯೂ ಇತ್ತು. ಅವರೊಂದಿಗೆ ರಂಗಭೂಮಿಯಲ್ಲಿ ಕೆಲಸ ಮಾಡಿದ ಅನೇಕರು ಇಂದು ನಿರ್ದೇಶಕರಾಗಿ, ನಟ,ನಟಿಯರಾಗಿದ್ದಾರೆ.

Categories
ಸಿನಿ ಸುದ್ದಿ

ಮೂರು‌ ಭಾಷೆಯಲ್ಲಿ ಮಾಫಿಯಾ! ಏಕಕಾಲಕ್ಕೆ ಬಿಡುಗಡೆಯಾದ ಟೀಸರ್

ಪ್ರಜ್ವಲ್ ದೇವರಾಜ್ ಮಾಫಿಯಾ ಸಿನಿಮಾ ಮಾಡುತ್ತಿರೋದು ಎಲ್ಲರಿಗೂ ಗೊತ್ತು. ಈಗ ಈ ಚಿತ್ರದ ಹೊಸ ಸುದ್ದಿ ಅಂದರೆ, ಟೀಸರ್ ರಿಲೀಸ್ ಅಗಿರೋದು. ಅಷ್ಟೇ ಅಲ್ಲ, ಅದು ಅಪಾರ ಮೆಚ್ಚುಗೆ ಪಡೆದಿದೆ.

ಬೆಂಗಳೂರು ಕುಮಾರ್ ಫಿಲಂಸ್ ಲಾಂಛನದಲ್ಲಿ ಕುಮಾರ್ ಬಿ ನಿರ್ಮಿಸುತ್ತಿರುವ, ಲೋಹಿತ್ ನಿರ್ದೇಶನದಲ್ಲಿ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ನಾಯಕರಾಗಿ ನಟಿಸುತ್ತಿರುವ “ಮಾಫಿಯಾ” ಚಿತ್ರದ ಟೀಸರ್ ಆನಂದ್ ಆಡಿಯೋ ಚಾನಲ್ ಮೂಲಕ ಬಿಡುಗಡೆಯಾಗಿದೆ.

ಕನ್ನಡ, ತೆಲುಗು ಹಾಗೂ ತಮಿಳು ಭಾಷೆಗಳಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದೆ‌. ಚಿತ್ರದ ಟೀಸರ್ ಕೂಡ ಏಕಕಾಲಕ್ಕೆ ಬಿಡುಗಡೆಯಾಗಿದೆ ಅನ್ನೋದು ವಿಶೇಷ. ಕನ್ನಡದಲ್ಲಿ ಧ್ರುವ ಸರ್ಜಾ, ಸತೀಶ್ ನೀನಾಸಂ ಹಾಗೂ ರಿಷಬ್ ಶೆಟ್ಟಿ, ತೆಲುಗಿನಲ್ಲಿ ಸುಧೀರ್ ಬಾಬು ಮತ್ತು ರಾಜಶೇಖರ್ ಹಾಗೂ ತಮಿಳಿನಲ್ಲಿ ಸತ್ಯರಾಜ್, ವೆಂಕಟ್ ಪ್ರಭು, ಪಾರ್ಥಿಬನ್ ಹಾಗೂ ನಿರ್ದೇಶಕ ಶಿಶೀಂದ್ರನ್ ಚಿತ್ರದ ಟೀಸರ್ ಬಿಡುಗಡೆ ಮಾಡಿ ಶುಭ ಕೋರಿದ್ದಾರೆ.

ಅಷ್ಟೇ ಅಲ್ಲದೇ ಚಿತ್ರದ ಆಡಿಯೋ ಹಕ್ಕು ಸಹ ಆನಂದ್ ಆಡಿಯೋಗೆ ಭಾರೀ ಮೊತ್ತಕ್ಕೆ ಮಾರಾಟವಾಗಿದೆ ಎಂಬುದು ಮತ್ತೊಂದು ವಿಶೇಷ.

ಪ್ರಜ್ವಲ್ ದೇವರಾಜ್ ಅವರಿಗೆ ನಾಯಕಿಯಾಗಿ ಅದಿತಿ ಪ್ರಭುದೇವ ನಟಿಸುತ್ತಿದ್ದಾರೆ. ದೇವರಾಜ್ ಕೂಡ ಚಿತ್ರದಲ್ಲಿ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸಾಧುಕೋಕಿಲ ಇತರರು ಇದ್ದಾರೆ.

ತರುಣ್ ಛಾಯಾಗ್ರಹಣ ಮಾಡಿದರೆ, ಅನೂಪ್ ಸೀಳಿನ್ ಸಂಗೀತ ನಿರ್ದೇಶನವಿದೆ. ಈ ಚಿತ್ರಕ್ಕೆ ಮಾಸ್ತಿ ಸಂಭಾಷಣೆ ಬರೆದಿದ್ದಾರೆ.

error: Content is protected !!