Categories
ಸಿನಿ ಸುದ್ದಿ

ನಿಂತಲ್ಲೇ ಶವವಾದೆ ಗೊತ್ತೇನು? ಗೋರಿ ಚಿತ್ರದ ಎಮೋಷನಲ್‌ ಗೀತೆಗೆ ಶಿವಣ್ಣ ಸಾಥ್

ಗಾಂಧಿನಗರಕ್ಕೆ ಹಲವು ಮಂದಿ ಆಸೆಯ ಕಂಗಳಲ್ಲೇ ಎಂಟ್ರಿಯಾಗುತ್ತಾರೆ. ತಾನೂ ಹೀರೋ ಆಗಬೇಕು, ನಿರ್ದೇಶಕ ಆಗಬೇಕು ಅಂತ. ಆದರೆ, ಕಲೆ ಕೆಲವರನ್ನು ಮಾತ್ರ ಕೈ ಬೀಸಿ ಕರೆಯುತ್ತೆ. ಆ ಸಾಲಿಗೆ ಮಾಧ್ಯಮ ಗೆಳೆಯ ಕಿರಣ್ ಹಾವೇರಿ ಮತ್ತು ಅವರ ಗೆಳೆಯರು ಸೇರಿದ್ದಾರೆ. ಹೌದು, ಕಿರಣ್‌ ಹಾವೇರಿ ಅವರು ಅವರು ಹೀರೋ ಆಗಿರೋದು ಗೊತ್ತೇ ಇದೆ. “ಗೋರಿ” ಸಿನಿಮಾ ಮೂಲಕ ತಮ್ಮ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.

ಚಿತ್ರ ಈಗ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. “ಗೋರಿ” ಎಂಬ ಹೆಸರೇ ಒಂದು ರೀತಿ ಕುತೂಹಲ ಹುಟ್ಟಿಸುತ್ತೆ. ಹಾಗೆಯೇ ಸಿನಿಮಾದ ಕಥೆ ಕೂಡ ಅಷ್ಟೇ ನಿರೀಕ್ಷೆ ಹೆಚ್ಚಿಸಿದೆ. ಕಾರಣ, ಇದೊಂದು ಪ್ರೇಮಕಥೆ. ಅದರಲ್ಲೂ ಸಮಾನ ಮನಸ್ಕ ಗೆಳೆಯರೆಲ್ಲರೂ ಕೂಡಿ ಮಾಡಿರುವ ಚಿತ್ರವಿದು. ಕಷ್ಟಪಟ್ಟು ಅನ್ನುವುದಕ್ಕಿಂತ ತುಂಬಾನೇ ಇಷ್ಟಪಟ್ಟು ಮಾಡಿರುವ ಚಿತ್ರ. ಆ ಕಾರಣಕ್ಕೆ, “ಗೋರಿ” ಒಂದು ಹೊಸ ಬಗೆಯ ಸಿನಿಮಾ ಅನ್ನಬಹುದು. ಈಗಾಗಲೇ ಚಿತ್ರ ಒಂದಷ್ಟು ಸದ್ದು ಮಾಡಿದೆ. ಆ ಸಾಲಿಗೆ ಮತ್ತೊಂದು ಹಾಡಿನ ಮೂಲಕವೂ ಸೌಂಡು ಮಾಡುತ್ತಿದೆ.

“ನೀನಿರದೇ ನೀನಿರದೇ ನಾನು, ನಿಂತಲ್ಲೇ ಶವವಾದೆ ಗೊತ್ತೇನು…” ಎಂಬ ಹಾಡು ರಿಲೀಸ್‌ ಆಗಿದ್ದು, ಅದೊಂದು ಎಮೋಷನಲ್‌ ಸಾಂಗ್.‌ ಈ ಹಾಡನ್ನು ಸೆಂಚುರಿ ಸ್ಟಾರ್‌ ಶಿವರಾಜಕುಮಾರ್ ಅವರು, ರಿಲೀಸ್‌ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಗೀತ ಸಾಹಿತಿ ಕೆ.ಕಲ್ಯಾಣ್ ಅವರ ಸಾಹಿತ್ಯ ಇರುವ ಈ ಗೀತೆಗೆ ವಿನು ಮನಸು ಅವರ ಸಂಗೀತವಿದೆ. ಕಿರಣ್ ಹಾವೇರಿ ನಟಿಸಿರುವ ಈ ಚಿತ್ರವನ್ನು ಗೋಪಾಲ‌ಕೃಷ್ಣ ಹೊಮ್ಮರಡಿ ನಿರ್ದೇಶನ ಮಾಡಿದ್ದಾರೆ.

ಸದ್ಯ ತೆರೆಗೆ ಅಪ್ಪಳಿಸಲು ಸಜ್ಜಾಗಿರುವ ಈ ಸಿನಿಮಾ ಯು/ಎ ಸರ್ಟಿಫಿಕೆಟ್‌ ಪಡೆದಿದೆ. “ಪ್ರೀತಿಯ ಸಮಾದಿ” ಎಂಬುದು ಶೀರ್ಷಿಕೆಯ ಅಡಿಬರಹ. ಈ ಅಡಿಬರಹ ಓದಿದರೆ, ಇದೊಂದು ಅಪ್ಪಟ ಪ್ರೇಮಿಗಳ ಕಥೆ ಅನ್ನುವುದು ಗೊತ್ತಾಗುತ್ತೆ. ಎಲ್ಲಾ ಲವ್‌ಸ್ಟೋರಿಗಳಲ್ಲೂ ನೋವು ಸಹಜ. ಈ “ಗೋರಿ” ಸಿನಿಮಾದಲ್ಲೂ ಆ ನೋವು ಇದೆಯಾ? ಗೊತ್ತಿಲ್ಲ.

ಆದರೆ, ಸಿನಿಮಾ ನೋಡಿದವರಿಗೆ ಆ ಪ್ರೀತಿಯ ಕಥೆ, ವ್ಯಥೆ ಮತ್ತು ಪ್ರೇಮಿಗಳ ಮನದೊಳಗಿರುವ ಗಾಢವಾದ ನೋವು ಏನೆಂಬುದು ಗೊತ್ತಾಗುತ್ತೆ. ಸದ್ಯ ಆನಂದ್ ಆಡಿಯೋದ ಚಾನೆಲ್‌ನಲ್ಲಿ ಬಿಡುಗಡೆಯಾಗಿರುವ ಈ ಹಾಡಿಗೆ ಎಲ್ಲೆಡೆಯಿಂದ ಮೆಚ್ಚುಗೆ ಸಿಗುತ್ತಿದೆ. ಇನ್ನು, ಈ ಹಾಡಿಗೆ ಸರಿಗಮಪ ಖ್ಯಾತಿಯ ಮೆಹಬೂಬ್ ಸಾಬ್ ಅವರು ಹಾಡಿದ್ದಾರೆ.

Categories
ಸಿನಿ ಸುದ್ದಿ

ಕಿಟ್ಟಿ ಸಂಸಾರ ಹೆಂಗೈತೆ ಗೊತ್ತಾ? ಕನ್ನಡದಲ್ಲಿ ಶುರುವಾಗಿದೆ ಹೊಸ ವೆಬ್‌ಸೀರೀಸ್‌…


ಈಗಂತೂ ಎಲ್ಲೆಡೆ ವೆಬ್‌ಸೀರೀಸ್‌ಗಳದ್ದೇ ಮಾತು. ಅದರಲ್ಲೂ ಕಂಟೆಂಟ್‌ ಇರುವ ವೆಬ್‌ಸೀರಿಸ್‌ಗಳ ಬಗ್ಗೆಯಂತೂ ಎಲ್ಲಿಲ್ಲದ ಮಾತು. ಹಲವು ಭಾಷೆಗಳಲ್ಲಿ ಈಗಾಗಲೇ ವೆಬ್‌ಸೀರೀಸ್‌ಗಳ ಹವಾ ಜೋರಾಗಿದೆ. ಅದು ಕನ್ನಡಕ್ಕೂ ಹೊರತಲ್ಲ. ಹೌದು, ಇತ್ತೀಚೆಗೆ ಕನ್ನಡದಲ್ಲಿ ಸಾಕಷ್ಟು ವೆಬ್‌ಸೀರೀಸ್‌ಗಳು ಪ್ರಸಾರವಾಗುತ್ತಿವೆ. ಯುವಕರೇ ಹೆಚ್ಚಾಗಿ ವೆಬ್‌ಸೀರೀಸ್‌ಗಳತ್ತ ಮುಖ ಮಾಡುತ್ತಿದ್ದಾರೆ. ಆ ಮೂಲಕ ಅವರೆಲ್ಲರೂ ಗುರುತಿಸಿಕೊಳ್ಳುತ್ತಿದ್ದಾರೆ. ಆ ಸಾಲಿಗೆ ಈಗ ಮತ್ತೊಂದು ಹೊಸ ವೆಬ್‌ಸೀರೀಸ್‌ ಶುರುವಾಗುತ್ತಿದೆ.

ಹೌದು, ಈಗಾಗಲೇ “ರಂಕಲ್‌ ರಾಟೆ” ಮತ್ತು “ಮದುವೆ ಮಾಡ್ರೀ ಸರಿ ಹೋಗ್ತಾನೆ” ಸಿನಿಮಾಗಳನ್ನು ನಿರ್ದೇಶಿಸಿರುವ ಗೋಪಿ ಕೆರೂರ್‌ ಅವರು, ಹೊಸದೊಂದು ವೆಬ್‌ಸೀರೀಸ್‌ಗೆ ಕೈ ಹಾಕಿದ್ದಾರೆ. ಅದಕ್ಕೆ “ಕಿಟ್ಟಿ ಸಂಸಾರದಲ್ಲಿ ಸಿಡಿಮಿಡಿ” ಎಂದು ನಾಮಕರಣ ಮಾಡಿದ್ದಾರೆ. ಈ ವೆಬ್‌ಸೀರೀಸ್‌ ನಿರ್ದೇಶನದ ಜೊತೆಗೆ ಅವರು ಹೀರೋ ಆಗಿಯೂ ಕಾಣಿಸಿಕೊಳ್ಳುತ್ತಿರುವುದು ವಿಶೇಷ. ಸದ್ಯ ವೆಬ್‌ಸೀರೀಸ್‌ ಚಿತ್ರೀಕರಣ ಜೋರಾಗಿಯೇ ನಡೆಯುತ್ತಿದೆ. ಗೋಪಿ ಕೆರೂರ್‌ ಅವರಿಗೆ ನಾಯಕಿಯಾಗಿ ಐಶ್ವರ್ಯ ಇದ್ದಾರೆ.

ಉಳಿದಂತೆ ಸಿದ್ಧಿ ವಿನಾಯಕ ಕಾಣಿಸಿಕೊಳ್ಳುತ್ತಿದ್ದಾರೆ. ಆಶಾ ಅವರು ಇತ್ತೀಚೆಗೆ ಕ್ಯಾಮೆರಾ ಆನ್‌ ಮಾಡುವ ಮೂಲಕ ಚಿತ್ರೀಕರಣಕ್ಕೆ ಚಾಲನೆ ನೀಡಿದ್ದಾರೆ. ಇನ್ನು, ಈ ವೆಬ್‌ಸೀರೀಸ್‌ ಅನ್ನು ಝೇಂಕಾರ್‌ ಮ್ಯೂಸಿಕ್ ಕಂಪನಿ ನಿರ್ಮಿಸುತ್ತಿದೆ.


ಎಂಟರ್‌ಟೈನ್ಮೆಂಟ್‌ ಈಗ ಮೊದಲಿಗಿಂತಲೂ ಹೊಸತನದಿಂದ ಕೂಡಿದೆ. ಹೊಸಬರು ಹೊಸ ಹೊಸ ಅಲೋಚನೆಗಳಲ್ಲಿ ಕಥೆ ಹೆಣೆಯುತ್ತಿದ್ದಾರೆ. ಎಲ್ಲಾ ವರ್ಗಕ್ಕೂ ಇಷ್ಟವಾಗುವಂತಹ ವೆಬ್‌ಸೀರೀಸ್‌ಗಳು ಮೂಡಿ ಬರುತ್ತಿವೆ. ಆ ಸಾಲಿಗೆ ಈಗ ಕಿಟ್ಟಿ ಸಂಸಾರದಲ್ಲಿ ಸಿಡಿಮಿಡಿ ಕೂಡ ಸೇರುತ್ತಿದೆ.

Categories
ಸಿನಿ ಸುದ್ದಿ

ಮತ್ತಷ್ಟು ದಾಖಲೆ ಬರೆದ ಬೊಂಬೆ ಹೇಳುತ್ತೈತೆ ಹಾಡು! 100 ಮಿಲಿಯನ್ಸ್‌ ವೀಕ್ಷಣೆ ಪಡೆದ ಮೇಕಿಂಗ್‌ ವಿಡಿಯೋ!!


ಪುನೀತ್‌ ರಾಜಕುಮಾರ್‌ ಇಲ್ಲವೆಂಬ ಭಾವ ಯಾರಿಗೂ ಇಲ್ಲ. ದೈಹಿಕವಾಗಿ ಅವರಿಲ್ಲದಿದ್ದರೂ, ಎಲ್ಲರ ಹೃದಯದಲ್ಲಿ ಪುನೀತ್‌ ರಾಜಕುಮಾರ್‌ ನೆಲೆಸಿದ್ದಾರೆ. ಇದು ನಿಜ. ಅವರು ಏನೇ ಮಾಡಿದರೂ ದೊಡ್ಡ ಸುದ್ದಿಯೇ ಆಗುತ್ತಿತ್ತು. ಅವರು ಸಿನಿಮಾ ಮಾಡಲಿ, ಹಾಡು ಹಾಡಲಿ, ಡೈಲಾಗ್‌ ಹೇಳಲಿ, ಡ್ಯಾನ್ಸ್‌ ಮಾಡಲಿ, ಫೈಟ್‌ ಮಾಡಲಿ ಏನೂ ಮಾಡಿದರೂ ಜನ ಸೈ ಎನ್ನುತ್ತಿದ್ದರು. ಖುಷಿಯಿಂದಲೇ ಚಪ್ಪಾಳೆ ತಟ್ಟಿ, ಶಿಳ್ಳೆ ಹಾಕಿ ಸಂಭ್ರಮಿಸುತ್ತಿದ್ದರು. ಅವರಿಲ್ಲದಿದ್ದರೂ, ಆ ಸಂಭ್ರಮ ನಿರಂತರವಾಗಿರುತ್ತೆ ಅನ್ನುವುದನ್ನು ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ.

ಪುನೀತ್‌ ಇಲ್ಲ ಅಂದುಕೊಳ್ಳದ ಅವರ ಅಭಿಮಾನಿಗಳು ಮತ್ತು ನಾಡಿನ ಜನ, ಅವರ ಸಿನಿಮಾಗಳನ್ನು ಮತ್ತೆ ಮತ್ತೆ ನೋಡುತ್ತಿದ್ದಾರೆ. ಹಾಡುಗಳನ್ನು ಪುನಃ ಕೇಳುತ್ತಲೇ ಇದ್ದಾರೆ. ಅವರ ಮಾತುಗಳನ್ನು ಕೇಳಿ ಅದೆಷ್ಟೋ ಮಂದಿ ಕಣ್ಣೀರಾಗಿದ್ದಾರೆ. ಈಗ ಮತ್ತೊಂದು ದಾಖಲೆಯ ವಿಷಯ ಏನೆಂದರೆ, ಅವರ ರಾಜಕುಮಾರ ಚಿತ್ರದ ಬೊಂಬೆ ಹೇಳುತ್ತೈತೆ ಹಾಡು ದೊಡ್ಡ ದಾಖಲೆ ಬರೆದಿದೆ.

ಹೌದು, ರಾಜಕುಮಾರ ಸಿನಿಮಾ ಪುನೀತ್ ರಾಜ್‌ಕುಮಾರ್ ಅವರ 42ನೇ ಹುಟ್ಟುಹಬ್ಬ ಸಂಭ್ರಮದ ಬಳಿಕ ರಿಲೀಸ್ ಆಗಿತ್ತು. ಸಂತೋಷ್ ಆನಂದ್‌ರಾಮ್ ನಿರ್ದೇಶಿಸಿದ್ದ ಈ ಚಿತ್ರ ದೊಡ್ಡ ಸುದ್ದಿ ಮಾಡಿತ್ತು. ಅನೇಕ ದಾಖಲೆಗಳನ್ನೂ ಬರೆದಿತ್ತು. ಈ ಸಿನಿಮಾ ರಿಲೀಸ್‌ ಆಗುವ ಮೊದಲೇ ದೊಡ್ಡ ಸೌಂಡ ಮಾಡಿತ್ತು. ಅದಕ್ಕೆ ಕಾರಣ, ಬೊಂಬೆ ಹೇಳುತೈತೆ ಹಾಡು. ಹೌದು, ಈ ಹಾಡಿಗೆ ವಿ.ಹರಿಕೃಷ್ಣ ಸಂಗೀತ ಸಂಯೋಜಿಸಿದ್ದರು. ಗಾಯಕ ವಿಜಯ್ ಪ್ರಕಾಶ್ ಹಾಡಿದ್ದರು.

ಬೊಂಬೆ ಹೇಳುತೈತೆ ಹಾಡಿನ ಮೇಕಿಂಗ್ ಝಲಕ್ ರಿಲೀಸ್ ಮಾಡಿದ್ದರಿಂದ ಜನರು ಈ ಹಾಡನ್ನೇ ಗುನುಗುವ ಮೂಲಕ ಸಿನಿಮಾ ರಿಲೀಸ್‌ಗೆ ಕಾದಿದ್ದರು. ನಂತರ ಸಿನಿಮಾ ಬಿಡುಗಡೆಯಾದ ಬಳಿಕ ಹಾಡು ಸೂಪರ್‌ ಹಿಟ್‌ ಲಿಸ್ಟ್‌ಗೆ ಸೇರಿತ್ತು. ಈ ಹಾಡು ಈಗ ಮತ್ತಷ್ಟು ಜನಪ್ರಿಯವಾಗಿದೆ ಅನ್ನೋದೇ ವಿಶೇಷ. ಯುಟ್ಯೂಬ್‌ನಲ್ಲಿ ಬರೋಬ್ಬರಿ 100 ಮಿಲಿಯನ್ ವೀಕ್ಷಣೆ ಕಂಡು ದಾಖಲೆ ಬರೆದಿದೆ. ಭಾರತದಲ್ಲಿ ಮೇಕಿಂಗ್ ವಿಡಿಯೋಗೆ ಇಷ್ಟೊಂದು ವೀವ್ಸ್ ಸಿಕ್ಕಿರುವುದು ವಿಶೇಷತೆಗಳಲ್ಲೊಂದು. ಅದೇನೆ ಇರಲಿ, ಅಪ್ಪು ಫ್ಯಾನ್ಸ್‌ ಮಾತಲ್ಲಿ ಅಪ್ಪು ಸದಾ ರಾಜಕುಮಾರ.

Categories
ಸಿನಿ ಸುದ್ದಿ

ಮದಗಜ ನೋಡೋಕೆ ಕಾಲೇಜಿಗೆ ರಜೆ ಕೊಡಿ! ಹೀಗಂತ ಮೈಸೂರು ಕಾಲೇಜು ಸ್ಟುಡೆಂಟ್ ಪ್ರಿನ್ಸಿಪಾಲರಿಗೆ ಪತ್ರ ಬರೆದ!!


ಮದಗಜ ಸಿನಿಮಾ ರಿಲೀಸ್‌ ಡೇಟ್‌ ಅನೌನ್ಸ್‌ ಮಾಡಿದ್ದೇ ತಡ, ಶ್ರೀಮುರಳಿ ಫ್ಯಾನ್ಸ್‌ ಸಿಕ್ಕಾಪಟ್ಟೆ ಖುಷಿಯಲ್ಲಿದ್ದಾರೆ. ಅಷ್ಟೇ ಅಲ್ಲ, ಸಿನಿಮಾ ನೋಡೋಕೆ ತುದಿಗಾಲ ಮೇಲೆ ನಿಂತಿದ್ದಾರೆ. ಇದಿಷ್ಟೇ ಆಗಿದ್ದರೆ ಹೇಳುವ ಅಗತ್ಯ ಇರುತ್ತಿರಲಿಲ್ಲ. ಈಗ ಹೊಸ ಸುದ್ದಿ ಅಂದರೆ, ಮದಗಜ ಸಿನಿಮಾ ನೋಡಲು ಕಾಲೇಜಿಗೆ ರಜೆ ಕೊಡಿ ಅಂತ ಕಾಲೇಜಿನಿ ವಿದ್ಯಾರ್ಥಿಯೊಬ್ಬ ಪ್ರಾಂಶುಪಾಲರಿಗೆ ಪತ್ರ ಬರೆದಿದ್ದಾನೆ…

ಹೌದು, ಶ್ರೀಮುರಳಿಯ ಅಪ್ಪಟ ಅಭಿಮಾನಿಯೊಬ್ಬ ಮದಗಜ ಚಿತ್ರ ನೋಡಲು ಮೈಸೂರಿನ ಜ್ಞಾನೋದಯ ಕಾಲೇಜಿಗೆ ರಜೆ ಕೊಡಬೇಕು ಎಂದು ವಿದ್ಯಾರ್ಥಿ ವಿಕ್ರಮ್‌ ಎಂಬಾತ ಪ್ರಿನ್ಸಿಪಾಲ್‌ಗೆ ಪತ್ರ ಬರೆದಿದ್ದಾನೆ.
ಆತ ಬರೆದಿರುವ ಪತ್ರದಲ್ಲಿ, “ಡಿಯರ್‌ ಪ್ರಿನ್ಸಿಪಾಲ್‌, ಡಿಸೆಂಬರ್‌ ೩ ರಂದು ಕಾಲೇಜಿಗೆ ರಜೆ ಘೋಷಣೆ ಮಾಡಿ. ಯಾಕೆಂದರೆ, ಅಂದು ರೋರಿಂಗ್‌ ಸ್ಟಾರ್‌ ಶ್ರೀಮುರಳಿ ಅವರ “ಮದಗಜ” ಸಿನಿಮಾ ರಿಲೀಸ್‌ ಆಗುತ್ತಿದೆ.

ಹಾಗಾಗಿ, ಎಲ್ಲರೂ ಅವರ ಸಿನಿಮಾ ನೋಡಲು ಕಾತುರರಾಗಿದ್ದಾರೆ. ಅದರಲ್ಲೂ, ಅದೊಂದು ಬಹುನಿರೀಕ್ಷೆಯ ಚಿತ್ರ. ಹೀಗಾಗಲಿ, ಜನರು ಕೂಡ ಸಿನಿಮಾ ನೋಡಲು ಕಾಯುತ್ತಿದ್ದಾರೆ. ನಾವೆಲ್ಲರೂ ಕೂಡ ಕಾಯುತ್ತಿದ್ದೇವೆ. ಆದ್ದರಿಂದ, ಡಿಸೆಂಬರ್‌ ೩ ರಂದು ಮದಗಜ ಸಿನಿಮಾ ರಿಲೀಸ್‌ ಆಗುತ್ತಿರುವುದರಿಂದ ಅಂದು ಕಾಲೇಜಿಗೆ ರಜೆಯನ್ನು ಘೋಷಿಸಬೇಕು ಎಂದು ಪತ್ರ ಬರೆದು, ಪೋಸ್ಟ್‌ ಮಾಡಿದ್ದಾನೆ.
ಈ ರೀತಿಯ ಅಭಿಮಾನಿಗಳ ಪತ್ರಗಳು ಹೊಸದೇನಲ್ಲ.

ಆದರೆ, ಮೈಸೂರಿನ ಜ್ಞಾನೋದಯ ಕಾಲೇಜು ವಿದ್ಯಾರ್ಥಿಯೊಬ್ಬ, ಈ ರೀತಿ ಪರಿ ಪರಿಯಾಗಿ ತನ್ನ ಕಾಲೇಜಿನ ಪ್ರಾಂಶುಪಾಲರಿಗೆ , ಸಿನಿಮಾ ನೋಡುವ ಸಲುವಾಗಿಯೇ ರಜೆ ಕೊಡಬೇಕು ಎಂದು ಮನವಿ ಮಾಡಿಕೊಳ್ಳುವ ಮೂಲಕ ಪತ್ರವೊಂದನ್ನು ಬರೆದಿರುವುದು ನಿಜಕ್ಕೂ ವಿಶೇಷ.
ಅದೇನೆ ಇರಲಿ, ಇಂತಹ ಅಭಿಮಾನಿಗಳೂ ಇದ್ದಾರೆ ಅನ್ನುವುದಕ್ಕೆ ಇದೊಂದು ಉದಾಹರಣೆಯಷ್ಟೇ. ಶ್ರೀಮುರಳಿ ಅವರಿಗೆ ಈಗ ಸಾಕಷ್ಟು ಅಭಿಮಾನಿ ಬಳಗವಿದೆ. ಅವರೆಲ್ಲರೂ ಮದಗಜ ಚಿತ್ರವನ್ನು ನೋಡಲು ತುದಿಗಾಲ ಮೇಲೆ ನಿಂತಿದ್ದಾರೆ.

ಅದರಲ್ಲೂ ಶ್ರೀಮುರಳಿ ಅವರಿಗೆ ಕಾಲೇಜು ಸ್ಟುಡೇಂಟ್ಸ್‌ ಹೆಚ್ಚು ಫ್ಯಾನ್ಸ್.‌ ಯೂಥ್‌ಗೆ ಫೇವರೇಟ್‌ ಹೀರೋ ಎನಿಸಿರುವ ಶ್ರೀಮುರಳಿ ಅವರು, ಎಲ್ಲರನ್ನೂ ಅಷ್ಟೇ ಪ್ರೀತಿಯಿಂದ ಕಾಣುತ್ತಾರೆ. ಫ್ಯಾನ್ಸ್‌ ಅಂದರೆ ಸಾಕು, ಎಲ್ಲಿಲ್ಲದ ಪ್ರೀತಿ ಅವರಿಗೆ. ಸದಾ ಸೋಶಿಯಲ್‌ ಮೀಡಿಯಾದಲ್ಲಿ ಸಕ್ರಿಯರಾಗಿರುವ ಶ್ರೀಮುರಳಿ ಅವರು, ತಮ್ಮ ಅಭಿಮಾನಿಗಳಿಗಾಗಿಯೇ ವಿಶೇಷ ಪಾತ್ರವನ್ನು ಮದಗಜ ಚಿತ್ರದಲ್ಲಿ ನಿರ್ವಹಿಸಿದ್ದಾರೆ.

ಈಗಾಗಲೇ ಮದಗಜ ಸಾಕಷ್ಟು ಸುದ್ದಿಯಲ್ಲಿದೆ. ಇತ್ತೀಚೆಗೆ ಬಿಡುಗಡೆಯಾದ ಟೈಟಲ್‌ ಸಾಂಗ ಭರ್ಜರಿ ಹಿಟ್‌ ಆಗಿದೆ. ಆ ಹಾಡು ನೋಡಿದವರಿಗೆ ಸಿನಿಮಾ ನೋಡಲೇಬೇಕು ಅನ್ನುವಷ್ಟರ ಮಟ್ಟಿಗೆ ಸಾಂಗು ಸೂಪರ್‌ ಆಗಿದೆ. ಚಿತ್ರತಂಡ, ಡಿಸೆಂಬರ್‌ ೩ರಂದು ರಿಲೀಸ್‌ ಮಾಡಲು ಜೋರಾದ ತಯಾರಿ ಮಾಡಿಕೊಂಡಿದೆ.

Categories
ಸಿನಿ ಸುದ್ದಿ

ಪ್ರಿಯಾಮಣಿಯ ಸೈನ್ಸ್ ಫಿಕ್ಷನ್ ಆಕ್ಷನ್ ಥ್ರಿಲ್ಲರ್ ಡಿಆರ್ 56; ಟೀಸರ್ ಹೊರ ಬಂತು…

ಹರಿಹರ ಪಿಚ್ಚರ್ಸ್ ನಿರ್ಮಾಣದ ‘ಡಿಆರ್ 56’ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಹೀರೋ “ಪಿಆರ್” ಹಾಗು “ಪ್ರಿಯಾಮಣಿ” ಅಭಿನಯದ “ಡಿಆರ್ 56” ಚಿತ್ರದ ಟೀಸರ್ ಬಿಡುಗಡೆಗೆ ಕಾರಣ, ನಟ “ಪಿಆರ್” ಅವರ ಹುಟ್ಟು ಹಬ್ಬ. ಹಾಗಾಗಿ ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ನವೆಂಬರ್ 11ರಂದು ಬಿಡುಗಡೆ ಮಾಡಲಾಗಿದೆ.


ಈ ಚಿತ್ರ ಕನ್ನಡ ಹಾಗೂ ತಮಿಳ್ ನಲ್ಲಿ ಏಕಕಾಲದಲ್ಲಿ ಚಿತ್ರೀಕರಣ ಮಾಡಲಾಗಿದ್ದು ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಚಿತ್ರ ತೆರೆಗೆ ಬರಲು ಸಜ್ಜಾಗಿದೆ. ಇದೊಂದು ಸೈನ್ಸ್ ಫಿಕ್ಷನ್ ಆಕ್ಷನ್ ಥ್ರಿಲ್ಲರ್ ಚಿತ್ರವಾಗಿದ್ದು ಸಮಾಜದಲ್ಲಿ ನಡೆಯುತ್ತಿದ್ದ, ನಡೆಯುತ್ತಿರುವ, ಮುಂದೆಯು ನಡೆಯುವ
ವಂಚನೆಯನ್ನು ಜನರಿಗೆ ಮನದಟ್ಟು ಮಾಡಿಸಲು ಹೊರಟಿರುವ ಚಿತ್ರ.

ಕಥೆ ಹಾಗೂ ಚಿತ್ರಕಥೆ ನಾಯಕನಟ “ಪಿಆರ್”
ಅವರೆ ರೂಪಿಸಿದ್ದು, ನಿರ್ದೇಶನದ ಜವಾಬ್ದಾರಿಯನ್ನು “ರಾಜೇಶ್ ಆನಂದ ಲೀಲಾ” ಅವರು ನಿರ್ವಹಿಸಿದ್ದಾರೆ
ರಾಕೇಶ್ ಸಿ ತಿಲಕ್ ಅವರ ಛಾಯಾಗ್ರಹಣ
ನೋಬಿನ್ ಪಾಲ್ ಅವರ ಸಂಗೀತ ಹಾಗೂ ಹಿನ್ನೆಲೆ ಸಂಗೀತ ವಿಶ್ವ ಎನ್ ಎಂ” ಅವರ ಸಂಕಲನ
“ಶಂಕರ್ ರಾಮನ್” ಅವರ ಸಂಭಾಷಣೆ
ನಾಗೇಂದ್ರ ಪ್ರಸಾದ್ ಅವರ ಸಾಹಿತ್ಯವಿದೆ.


ರಾಷ್ಟ್ರಪ್ರಶಸ್ತಿ ವಿಜೇತ “ವಿಕ್ರಂ ಮೋರ್” ಅವರ ಸಾಹಸ ನಿರ್ದೇಶನವಿದೆ. ಕಾರ್ಯಕಾರಿ ನಿರ್ಮಾಪಕ “ಶ್ರೀಕಾಂತ್ ಕಶ್ಯಪ್” ಅವರ ನಿರ್ವಹಣೆ ಚಿತ್ರಕ್ಕಿದೆ.

Categories
ಸಿನಿ ಸುದ್ದಿ

ದೊಡ್ಮನೆ ರಾಜರತ್ನನಿಗೆ ಅವಮಾನ ಮಾಡೋರಲ್ಲ ನಾವು; ಏಕ್ ಲವ್ ಯಾ’ ಅಚಾತುರ್ಯಕ್ಕೆ ಕ್ಷಮೆ ಇರಲಿ; ಅಪ್ಪು ಫ್ಯಾನ್ಸ್ ಬಳಿ ಪ್ರೇಮ್-ರಕ್ಷಿತಾ ಕ್ಷಮೆ !

ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅವ್ರನ್ನು ಅಭಿಮಾನಿಸುವವರು-ಪ್ರೀತಿಸುವವರು ನಾವು. ಅವರ ನಡೆ-ನುಡಿಯನ್ನು ಫಾಲೋ ಮಾಡುವವರು ನಾವು. ಅವ್ರಂತೇ ಬದುಕಿ-ಬಾಳಬೇಕು ಎಂದು ಆಸೆಪಡುತ್ತಿರುವವರು ನಾವು. ಅಪ್ಪು ಅವರ ಆದರ್ಶಗಳನ್ನು-ಗುಣಗಳನ್ನು ಮೈಗೂಡಿಸಿಕೊಂಡು ಮುಂದುವರಿಯಬೇಕು, ನಮ್ಮ ಕೈಯಲ್ಲಿ ಸಾಧ್ಯವಾದಷ್ಟು ಸಹಾಯ ಮಾಡ್ಬೇಕು, ಸ್ಪೂರ್ತಿಯುತ ಜೀವನ ನಡೆಸಬೇಕು, ಇದಷ್ಟು ದಿನ ಪ್ರೀತಿ ಹಂಚಬೇಕು, ಒಳ್ಳೆಯದ್ದನ್ನೇ ಮಾಡ್ಬೇಕು, ಒಳ್ಳೆಯದನ್ನೇ ಉಳಿಸಿ ಹೋಗ್ಬೇಕು ಅಂತ ಬಯಸ್ತಿರುವವರು ನಾವು ಹೀಗಿರುವಾಗ ನಾವ್ಯಾಕೆ ಅಪ್ಪುಗೆ ಅವಮಾನ ಮಾಡಲಿ -ರಕ್ಷಿತಾ ಪ್ರೇಮ್

ಹೀಗೆ ಹೇಳುತ್ತಾ ಹೋದರು ರಕ್ಷಿತಾ ಪ್ರೇಮ್. ಅಷ್ಟಕ್ಕೂ, ಅಪ್ಪು ಭಾವಚಿತ್ರದ ಮುಂದೆ ಶ್ಯಾಂಪೇನ್ ಬಾಟೆಲ್ ಓಪನ್ ಮಾಡೋದು ನಮ್ಮ ಉದ್ದೇಶ ಆಗಿರಲಿಲ್ಲ. ಶ್ಯಾಂಪೇನ್ ಓಪನ್ ಆದ ತಕ್ಷಣ ಏಕ್ ಲವ್ ಯಾ' ಎಣ್ಣೆ ಸಾಂಗ್ ಪ್ಲೇ ಆಗ್ಬೇಕಿತ್ತು. ಆದರೆ, ತಾಂತ್ರಿಕ ದೋಷದಿಂದಾಗಿ ಸಾಂಗ್ ಪ್ಲೇ ಆಗುವ ಜಾಗದಲ್ಲಿ ಅಪ್ಪುಗೆ ನಮನ ಸಲ್ಲಿಸಿದ್ದ ವಿಡಿಯೋ ಪ್ಲೇ ಆಗಿದೆ. ಇದರಿಂದ ದೊಡ್ಮನೆ ರಾಜರತ್ನನಿಗೆ ನಾವು ಅವಮಾನ ಮಾಡಿದ್ದೇವೆ ಎನ್ನುವ ಆಕ್ರೋಶ ವ್ಯಕ್ತವಾಗ್ತಿದೆ. ದಯವಿಟ್ಟುಏಕ್ ಲವ್ ಯಾ’ ತಂಡದಿಂದಾದ ಎಡವಟ್ಟಿಗೆ ಕ್ಷಮೆ ಇರಲಿ. ನಮ್ಮ ಅರಿವಿಗೆ ಬಾರದೆ ಆದಂತಹ ಅವಾಂತರಕ್ಕೆ ಕೈಮುಗಿದು ಕ್ಷಮೆಯಾಚಿಸುತ್ತೇವೆ ಎಂದು ಅಭಿಮಾನಿ ದೇವರುಗಳಲ್ಲಿ ಪ್ರೇಮ್ ಮತ್ತು ರಕ್ಷಿತಾ ಪ್ರೇಮ್ ಜೊತೆಗೆ `ಏಕ್ ಲವ್ ಯಾ’ ಟೀಮ್ ವಿನಂತಿ ಮಾಡಿಕೊಂಡಿದೆ.

ನಿನ್ನೆಯಷ್ಟೇ ಏಕ್ ಲವ್ ಯಾ' ತಂಡ ಸಾಂಗ್ ಲಾಂಚ್ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಅದ್ದೂರಿಯಾಗಿ ಆರ್ಗನೈಸ್ ಆಗಿದ್ದ ಕಾರ್ಯಕ್ರಮಕ್ಕೆ ಖ್ಯಾತ ಗಾಯಕಿ ಮಂಗ್ಲಿ ಸೇರಿದಂತೆ ಸ್ಯಾಂಡಲ್‌ವುಡ್‌ನ ಸ್ಟಾರ್ ನಟಿಯರು ಆಗಮಿಸಿದ್ದರು. ಅಕುಲ್ ಬಾಲಾಜಿ ನಿರೂಪಣೆಯಲ್ಲಿ ಪ್ರೋಗ್ರಾಂ ನಡೀತು. ಈ ವೇಳೆ ಎಣ್ಣೆ ಸಾಂಗ್ ಲಾಂಚ್ ಮಾಡಲಿಕ್ಕೆಏಕ್ ಲವ್ ಯಾ’ ಚಿತ್ರದ ನಿರ್ಮಾಪಕಿ ರಕ್ಷಿತಾ ಪ್ರೇಮ್- ರಚಿತರಾಮ್- ರೀಷ್ಮಾ ನಾಣಯ್ಯ- ಮೇಘನಾ ಗಾಂವ್ಕರ್-ಅದಿತಿ ಪ್ರಭುದೇವ್- ನಿಶ್ವಿಕಾ ನಾಯ್ಡು ಸೇರಿದಂತೆ ಇತರೆ ನಟಿಮಣಿಯರು ವೇದಿಕೆ ಮೇಲೆ ಎಂಟ್ರಿಕೊಟ್ಟರು. ಶ್ಯಾಂಪೇನ್ ಬಾಟೆಲ್ ಓಪನ್ ಮಾಡಿ ಚಿತ್ರದ `ಎಣ್ಣೆ’ ಸಾಂಗ್ ಲಾಂಚ್ ಮಾಡೋದಕ್ಕೆ ಪ್ಲಾನ್ ಆಗಿತ್ತು. ಅದರಂತೇ, ಬಾಟೆಲ್ ಓಪನ್ ಆಯ್ತು ಆದರೆ ಸ್ಕ್ರಿನ್ ಮೇಲೆ ಸಾಂಗ್ ಬದಲಿಗೆ ಅಪ್ಪುಗೆ ನಮನ ಸಲ್ಲಿಸಿದ್ದ ವಿಡಿಯೋ ಪ್ಲೇ ಆಯ್ತು. ಈ ವಿಡಿಯೋ ಮಾಧ್ಯಮದಲ್ಲಿ ಪ್ರಸಾರಗೊಂಡಿದ್ದೇ ತಡ ಅಪ್ಪು ಅಭಿಮಾನಿಗಳು ಮತ್ತು ದೊಡ್ಮನೆ ಭಕ್ತರು ಆಕ್ರೋಶಗೊಂಡರು. ಈ ಸುದ್ದಿ ಫಿಲ್ಮ್ ಚೇಂಬರ್‌ನ ಮಾಜಿ ಅಧ್ಯಕ್ಷರ ಕಿವಿಗೆ ಬಿತ್ತು. ಅಪ್ಪು ಅಗಲಿಕೆಯ ನೋವಲ್ಲಿರುವ ಅಭಿಮಾನಿಗಳನ್ನು ಕೆರಳಿಸಿದಂತಾಗಿದೆ. ದಯವಿಟ್ಟು ಒಮ್ಮೆ ಕ್ಷಮೆಯಾಚಿಸಿ‌ ಬಿಡಿ ಎಂದು ಸಾ.ರಾ. ಗೋವಿಂದು ಅವರು ಒತ್ತಾಯಿಸಿದರು.

ದೊಡ್ಡವರ ಮಾತಿಗೆ ಬೆಲೆಕೊಟ್ಟ ಚಿತ್ರತಂಡ ಅಪ್ಪುಗೆ ಅವಮಾನ ಮಾಡುವ ಉದ್ದೇಶ ನಮ್ಮದಾಗಿರಲಿಲ್ಲ'. ನಮಗೆ ಗೊತ್ತಿಲ್ಲದೇ, ನಮ್ಮ ಅರಿವಿಗೆ ಬಾರದೇ, ಟೆಕ್ನಿಕಲಿ ಸಮಸ್ಯೆಯಿಂದಾಗಿ ಈ ರೀತಿಯಾಗಿದೆ. ದಯವಿಟ್ಟು ಅಭಿಮಾನಿ ದೇವರುಗಳು ಕ್ಷಮಿಸಬೇಕು ಎಂದು ನಿರ್ದೇಶಕ ಪ್ರೇಮ್ ಸುದ್ದಿಗೋಷ್ಟಿ ಮಾಡಿ ಕ್ಷಮೆ ಕೋರಿದ್ದಾರೆ. ಇದೇ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಪ್ರೇಮ್ ಅವರು, ಅಪ್ಪು ಉಸಿರು ಚೆಲ್ಲಿ ಆಸ್ಪತ್ರೆಯಲ್ಲಿ ಮಲಗಿದಾಗ ಅವರು ಹಣೆಸವರಿ, ಎರಡು ಕಾಲುಗಳನ್ನು ಹಿಡಿದುಕೊಂಡು ಕ್ಷಮೆ ಕೇಳಿದ್ದೇನೆ. ನನ್ನಿಂದ ಏನಾದರೂ ತಪ್ಪಾಗಿದ್ದರೆ ಕ್ಷಮಿಸಿಬಿಡಿ ಬಾಸ್ ಎಂದು ಬೇಡಿಕೊಂಡಿದ್ದೇನೆ ಗೊತ್ತಾ. ಅಷ್ಟಕ್ಕೂ,ಏಕ್ ಲವ್ ಯಾ’ ಸಾಂಗ್ ಲಾಂಚಿAಗ್ ಸಂದರ್ಭದಲ್ಲಿ ಅಚಾನಕ್ ಆಗಿ ಅಪ್ಪು ಬಾಸ್ ಫೋಟೋ ಪ್ಲೇ ಆಗಿದೆ. ಬೇಕು ಅಂತ ನಾವು ಏನು ಮಾಡಿಲ್ಲ. ಅಭಿಮಾನಿಗಳು ಅನ್ಯತಾ ಭಾವಿಸಬೇಡಿ, ದೊಡ್ಮನೆ ರಾಜಕುಮಾರನಿಗೆ ಅವಮಾನ ಮಾಡಿ ನಿಮ್ಮ ಮನಸ್ಸಿಗೆ ನೋವುಂಟು ಮಾಡುವ ಸಣ್ಣಮನಸ್ಸು ನಮ್ಮದಲ್ಲ ಎಂದು ಕೈಮುಗಿದರು.

ಇನ್ನೂ ಮನೆಯಿಂದನೇ ಮಾಧ್ಯಮಗಳ ಜೊತೆ ಮಾತನಾಡಿದ ರಕ್ಷಿತಾ ಪ್ರೇಮ್, ಅವರು ಕಣ್ಣೀರಾದರು. ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಬ್ಯಾಡ್ ಕಮೆಂಟ್ಸ್ ಬರುತ್ತಿದೆ.
ಉದ್ದೇಶಪೂರ್ವವಾಗಿ ನಾವು ಇದನ್ನು ಮಾಡಿಲ್ಲ. ಯಾರಿಗೂ ನೋಯಿಸುವ ಉದ್ದೇಶ ನಮ್ಮದಲ್ಲ. ಅಭಿಮಾನಿ ದೇವರುಗಳಿಗೆ ನಮ್ಮಿಂದ ನೋವಾಗಿದ್ರೆ ಕ್ಷಮಿಸಿಬಿಡಿ ಎಲ್ಲರು. ಅಷ್ಟಕ್ಕೂ, ಶ್ಯಾಂಪೇನ್ ಬಾಟೆಲ್‌ನಲ್ಲಿ ಆಲ್ಕೋ ಹಾಲೇ ಇರಲಿಲ್ಲ. ನಾನ್ ಆಲ್ಕೋಹಾಲಿಕ್ ಶ್ಯಾಂಪೇನ್ ಅದಾಗಿತ್ತು ಅಷ್ಟೇ. ಎಣ್ಣೆ ಸಾಂಗ್ ಅದಾಗಿದ್ರಿಂದ ಶ್ಯಾಂಪೇನ್ ಬಾಟೆಲ್ ಓಪನ್ ಮಾಡಿಸಿದ್ವಿ ಎಂದರು ರಕ್ಷಿತಾ.

ಇದೇ ವೇಳೆ ದೊಡ್ಮನೆಗೆ ಕೊಡುವ ಗೌರವದ ಬಗ್ಗೆ ಮಾತನಾಡಿದರು. ಅಪ್ಪು ಸಿನಿಮಾದ ಮೂಲಕ ನನ್ನನ್ನು ಮಾತ್ರವಲ್ಲ ನಮ್ಮ ಅಮ್ಮ ಹಾಗೂ ಅಪ್ಪಾಜಿಯನ್ನು ಕೂಡ ಚಿತ್ರರಂಗಕ್ಕೆ ಪರಿಚಯಿಸಿದವರು ದೊಡ್ಮನೆಯವರು. ಹೀಗಿರುವಾಗ ಆ ದೊಡ್ಡ ಕುಟುಂಬಕ್ಕೆ ನಾವು ಅವಮಾನ ಮಾಡುತ್ತೇವಾ? ಕಮೆಂಟ್ ಮಾಡುವ ಜನರು ಸೂಕ್ಷ್ಮವಾಗಿ ಒಮ್ಮೆ ಯೋಚಿಸಿದರೆ ಗೊತ್ತಾಗುತ್ತೆ. ಎನಿವೇ, ನಮ್ಮಿಂದ ನಿಮ್ಮ ಭಾವನೆಗಳಿಗೆ ಪೆಟ್ಟಾಗಿದ್ದರೆ, ನಿಮ್ಮ ಮನಸ್ಸಿಗೆ ನೋವಾಗಿದ್ದರೆ ಪ್ರತಿಯೊಬ್ಬರಿಗೂ ಕೈ ಮುಗಿದು ಕ್ಷಮೆ ಕೇಳುತ್ತೇನೆ. ಅಪ್ಪು ಎಲ್ಲರಿಂದನೂ ಒಂದೊಂದನ್ನು ಕಲಿಯುತ್ತಿದ್ದರು. ಅದೇ ರೀತಿ ಈ ಘಟನೆಯಿಂದ ಯಾವ್ ರೀತಿ ಹುಷಾರಾಗಿರಬೇಕು ಎಂಬುದನ್ನು ಕಲಿಯುತ್ತೇನೆ ಎಂದರು. ಏಕ್ ಲವ್ ಯಾ ನಿರ್ದೇಶಕ ಪ್ರೇಮ್- ನಿರ್ಮಾಪಕಿ ರಕ್ಷಿತಾರಂತೆ, ಚಿತ್ರದ ನಾಯಕಿ ರಚಿತಾ ಹಾಗೂ ಇಡೀ ಚಿತ್ರತಂಡ ಕ್ಷಮೆಯಾಚಿಸಿದೆ.

ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಅಂತೂ ಇಂತೂ ಅವತಾರ ಪುರುಷ ದರ್ಶನ ಕೊಡೋಕೆ ರೆಡಿ! ಡಿಸೆಂಬರ್‌ 10ರಂದು ಶರಣ್‌ ಹೊಸ ಅವತಾರ!!

ನಟ ಶರಣ್‌ ಸದ್ಯ ಕಾಮಿಡಿ ಹೀರೋ ಆಗಿಯೇ ಫೇಮಸ್.‌ ಅವರು ಹಾಸ್ಯ ನಟರಾಗಿಯೂ ಸೈ ಎನಿಸಿಕೊಂಡವರು. ತೆರೆ ಮೇಲೆ ಹೀರೋ ಆಗಿ ಯಾವಾಗ ಕಾಣಿಸಿಕೊಂಡರೋ, ಅಲ್ಲಿಂದ ಎಂದೂ ಹಿಂದಿರುಗಿ ನೋಡೇ ಇಲ್ಲ. ಅವರು ಹೀರೋ ಆಗಿ ನಟಿಸಿದ ಸಿನಿಮಾಗಳೆಲ್ಲವೂ ಯಶಸ್ವಿಯಾಗಿವೆ. ಆ ಸಾಲಿಗೆ ಈಗ “ಅವತಾರ ಪುರುಷ” ಸಿನಿಮಾ ಕೂಡ ಸೇರುವ ನಂಬಿಕೆ ಚಿತ್ರತಂಡಕ್ಕಿದೆ. ಅಂದಹಾಗೆ, ಈ ಚಿತ್ರ ಇದೀಗ ರಿಲೀಸ್‌ಗೆ ರೆಡಿಯಾಗಿದೆ. ಸೆನ್ಸಾರ್ ಮುಗಿಸಿದ ಅವತಾರ ಪುರುಷ ಡಿಸೆಂಬರ್ 10ಕ್ಕೆ ಪ್ರೇಕ್ಷಕರ ಎದುರು ಬರುತ್ತಿದೆ.

ಅಫಿಶಿಯಲ್ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಅವತಾರ ಪುರುಷ ರಿಲೀಸ್ ಡೇಟ್ ಅನ್ನು ಚಿತ್ರತಂಡ ಅಧಿಕೃತವಾಗಿ ಘೋಷಣೆ ಮಾಡಿದೆ. ಸದ್ಯ ಚಿತ್ರತಂಡ ಈ ದಿನಾಂಕ ಘೋಷಣೆ ಮಾಡುವುದರ ಜೊತೆಗೆ ಭರ್ಜರಿಯಾಗಿಯೇ ಚಿತ್ರದ ಪ್ರಚಾರ ಕಾರ್ಯ ಶುರುವಿಟ್ಟುಕೊಂಡಿದೆ. ಹೌದು, ಚಿತ್ರ ಆರಂಭದಿಂದಲೂ ಸಾಕಷ್ಟು ಸುದ್ದಿ ಮಾಡಿದೆ. ಅದರಲ್ಲೂ ಶೀರ್ಷಿಕೆಯಿಂದಲೇ ಸಿನಿಮಾ ಒಂದಷ್ಟು ಕುತೂಹಲ ಮೂಡಿಸಿರುವುದಂತೂ ನಿಜ. ಇನ್ನೊಂದು ನಿರೀಕ್ಷೆಗೆ ಕಾರಣ, ಸಿಂಪಲ್‌ ಸುನಿ ಈ ಚಿತ್ರವನ್ನು ನಿರ್ದೇಶನ ಮಾಡಿರುವುದು.

ಅಷ್ಟೇ ಅಲ್ಲ, ಪುಷ್ಕರ್‌ ಮಲ್ಲಿಕಾರ್ಜುನ್‌ ನಿರ್ಮಾಣದ ಸಿನಿಮಾ ಅಂದಮೇಲೆ, ಅಲ್ಲಿ ವಿಶೇಷ ಕಂಟೆಂಟ್‌ ಇದ್ದೇ ಇರುತ್ತೆ. ಅಂಥದ್ದೊಂದು ಕಥೆ ಮತ್ತು ಚಿತ್ರಕಥೆ ಇರುವ ಅವತಾರ ಪುರುಷ, ಡಿಸೆಂಬರ್‌ 10ರಂದು ರಾಜ್ಯಾದ್ಯಂತ ಅಬ್ಬರಿಸಲಿದ್ದಾನೆ. ಈ ಸಿನಿಮಾಗೆ ಶರಣ್‌ ಹೀರೋ. ಅವರಿಗೆ ಆಶಿಕಾ ರಂಗನಾಥ್ ನಾಯಕಿ. ಉಳಿದಂತೆ ಚಿತ್ರದಲ್ಲಿ ಶ್ರೀನಗರ ಕಿಟ್ಟಿ, ಸಾಯಿಕುಮಾರ್, ಸುಧಾರಣಿ, ಭವ್ಯ ಸೇರಿದಂತೆ ಹಲವರು ನಟಿಸುತ್ತಿದ್ದಾರೆ. ಶರಣ್‌ ಇಲ್ಲಿ ಯಾವ ಪಾತ್ರ ನಿರ್ವಹಿಸುತ್ತಿದ್ದಾರೆ ಅನ್ನುವುದೇ ವಿಶೇಷ. ಅದು ಯಾವುದು ಎಂಬುದನ್ನು ತೆರೆಮೇಲೆಯೇ ಕಾಣಬೇಕು.

Categories
ಸಿನಿ ಸುದ್ದಿ

ನಾವ್ ಅವರ ಜಾಗಕ್ಕೆ ಹೋಗಿದ್ದೇವೆ- ಇನ್ಮೇಲೆ ಅವರು ನಮ್ಮ ಜಾಗಕ್ಕೆ ಬರಬೇಕು; ಆ ವ್ಯಕ್ತಿ ಬಳಿ `ಅಪ್ಪು’ ಬಿಚ್ಚಿಟ್ಟಿದ್ದರು ಅಚ್ಚರಿಯ ಸಂಗತಿ !

ನನಗೆ ಒಂದು ಬಿಗ್ ಡ್ರೀಮ್ ಇದೆ. ಗಂಧದಗುಡಿಗೆ ಅತೀ ದೊಡ್ಡ ಸ್ಟುಡಿಯೋವನ್ನು ಕೊಡುಗೆಯಾಗಿ ನೀಡಬೇಕು. ಮುಂದಿನ ದಿನಗಳಲ್ಲಿ ಪರಭಾಷೆಯವರು ನಮ್ಮ ಚಂದನವನಕ್ಕೆ ಬರಬೇಕು. ಪ್ರಿಪ್ರೊಡಕ್ಷನ್ ಸೇರಿದಂತೆ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಮ್ಮಲ್ಲಿ ಆಗ್ಬೇಕು. ಟೆಕ್ನಾಲಜಿ ಎಕ್ಸ್ಚೇಂಜ್ ಆಗ್ಬೇಕು ಹೀಗಾದಾಗ ಒಳ್ಳೆ ಪ್ರಾಡೆಕ್ಟ್ ಔಟ್‌ಪುಟ್ ಬರುತ್ತೆ. ಆಗ ಇಂಡಿಯನ್ ಸಿನ್ಮಾ ಇಂಡಸ್ಟ್ರಿಗೆ ಒಳ್ಳೊಳ್ಳೆ ಸಿನಿಮಾಗಳನ್ನು ಉಡುಗೊರೆಯಾಗಿ ನೀಡಬಹುದು ಎಂದಿದ್ದರು ಅಪ್ಪು…

ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅಗಲಿ ಇಂದಿಗೆ ಹದಿನಾರು ದಿವಸ ಕಳೀತಾ ಇದೆ. ಆದರೆ, ದೊಡ್ಮನೆ ಮಗನಿಲ್ಲದ ನೋವು ಮಾತ್ರ ಮರೆಯಾಗುತ್ತಿಲ್ಲ ಬಹುಷಃ ಅಷ್ಟು ಬೇಗ ಮರೆಯಾಗೋದು ಇಲ್ಲ. ಯಾಕಂದ್ರೆ, ಅಗಲಿರುವುದು ಬರೀ ವ್ಯಕ್ತಿಯಲ್ಲ ಅದೊಂದು ಶಕ್ತಿ. ಬೆಲೆಯೇ ಕಟ್ಟಲಾಗದ ಬೆಟ್ಟದ ಹೂ. ಆದರೆ, ಈ ಹೂ ತನಗೆ ಪ್ರಿಯವಾಗಿದ್ದು ಅಂತ ಆ ಭಗವಂತ ಏಕಾಏಕಿ ಕಿತ್ಕೊಂಡಿದ್ದು ಮಾತ್ರ ಖಂಡನೀಯ. ಹೆಸರಿಗೆ ಕರುಣಾಮಯಿ ಎನಿಸಿಕೊಳ್ಳುವ ಭಗವಂತನಿಗೆ ಕೊಂಚವಾದರೂ ಕರುಣೆಯಿದ್ದರೆ ಕೋಟ್ಯಾಂತರ ಮನಸ್ಸುಗಳು ಆರಾಧಿಸುವ, ಪೂಜಿಸುವ, ಪ್ರೀತಿಸುವ, ತಲೆ ಮೇಲೆ ಹೊತ್ತು ಮೆರೆಸುವ ಜನರಿಂದ ಅಪ್ಪುನಾ ದೂರ ಮಾಡುತ್ತಿರಲಿಲ್ಲ. ದೊಡ್ಮನೆಯನ್ನು ಅನಾಥ ಮಾಡಿ, ಕರುನಾಡನ್ನು ಕಣ್ಣೀರ ಕಡಲಲ್ಲಿ ಮುಳುಗಿಸುತ್ತಿರಲಿಲ್ಲ ಬಿಡಿ.

ಎಂತೆಂತವರಿಗೋ ಭಗವಂತ ಚಾನ್ಸ್ ಕೊಡ್ತಾನೆ, ಇದು ಕಡೇ ಚಾನ್ಸ್ ಉಳಿಸಿಕೋ ಎಂದು ಕರುಣೆ ತೋರಿಸ್ತಾನೆ. ಸಾವಿನ ಮನೆಗೆ ಸಮೀಪಿಸಿದವರನ್ನೂ ವಾಪಾಸ್ ಕರೆದುಕೊಂಡು ಆಯಷ್ಯ ಪ್ರಾಪ್ತಿರಸ್ತು ಎನ್ನುತ್ತಾನೆ. ಆದರೆ, ಅನಾಥರಿಗೆ ಆಸರೆಯಾಗಿ, ಕತ್ತಲಲ್ಲಿರುವವರಿಗೆ ಬೆಳಕಾಗಿ, ಬಡವರಿಗೆ ದೇವರಾಗಿ, ನಿರ್ಗತಿಕರಿಗೆ ನೆರವಾಗಿ, ಪ್ರತಿಭಾವಂತರಿಗೆ ವರವಾಗಿದ್ದ ಕಲಿಯುಗದ ಕರ್ಣನಂತಿದ್ದ ಅಂಜನಿಪುತ್ರನಿಗೆ ಕಡೇ ಚಾನ್ಸ್ ಅಲ್ಲ ಫಸ್ಟ್ ಚಾನ್ಸ್ ಕೂಡ ಕೊಡಲಿಲ್ಲ. ರಾಜರತ್ನನನ್ನು ಎಳೆದೊಯ್ಯಲಿಕ್ಕೆ ಸ್ಕೆಚ್ ಹಾಕಿದ ಭಗವಂತ ಒಂದೇ ಒಂದು ಚಾನ್ಸ್ ಕೊಟ್ಟಿದ್ದರೆ, ಅರೆಕ್ಷಣ ಕರುಣಾಮಯಿಯಾಗಿದ್ರೆ ಯುವರತ್ನ ಉಸಿರು ಚೆಲ್ಲುತ್ತಿರಲಿಲ್ಲ. ದೊಡ್ಮನೆ ಅನಾಥವಾಗುತ್ತಿರಲಿಲ್ಲ, ಅಭಿಮಾನಿ ದೇವರುಗಳು ಎದೆಬಡಿದುಕೊಂಡು ಸಾಯುವ ಸಂಧರ್ಭ ಸೃಷ್ಟಿಯಾಗುತ್ತಿರಲಿಲ್ಲ, ಕರುನಾಡು ಕಣ್ಣೀರಿನ ಕೋಡಿ ಹರಿಸುವಂತಿರಲಿಲ್ಲ. ಎಲ್ಲದಕ್ಕಿಂತ ಹೆಚ್ಚಾಗಿ, ಅಪ್ಪು ಕಂಡ ಕನಸುಗಳು `ಪೃಥ್ವಿ’ ಜೊತೆ ಒಡಲು ಸೇರುತ್ತಿರಲಿಲ್ಲ. ಅದರಲ್ಲೂ ಅರಸು ಕಂಡ ಅತೀ ದೊಡ್ಡ ಕನಸು ಮಣ್ಣಲ್ಲಿ ಮಣ್ಣಾಗುತ್ತಿರಲಿಲ್ಲ.

ಅಪ್ಪು ಒಬ್ಬರೇ ಸಾವನ್ನಪ್ಪಿಲ್ಲ ಬದಲಾಗಿ ದೊಡ್ಮನೆ ಮಗನನ್ನು ಮೈಂಡ್‌ನಲ್ಲಿಟ್ಟುಕೊಂಡು ರಚನೆ ಮಾಡಿದ ಎಷ್ಟೋ ಕಥೆಗಾರರ ಕನಸಿನ ಕೂಸುಗಳು ಉಸಿರುಗಟ್ಟಿವೆ. ಈ ಕಥೆನಾ? ಈ ಸಿನಿಮಾನ ಯಾರಿಗೆ ಮಾಡ್ಲಿ ದೇವಾ ಅಂತ ಕಥೆಗಾರರು-ನಿರ್ದೇಶಕರು-ನಿರ್ಮಾಪಕರು ಆಕಾಶ ನೋಡುವಂತಹ ಪರಿಸ್ಥಿತಿ. ಅದರಂತೇ, ಬೆಳ್ಳಿತೆರೆಯದ್ದು- ಬಾಕ್ಸ್ಆಫೀಸ್‌ನದ್ದು ಒಂದು ನೋವಿದೆ. ಇನ್ಮೇಲೆ ಅಪ್ಪು ಕಟೌಟ್ ನನ್ನ ಅಂಗಳದಲ್ಲಿ ಬೀಳಲ್ಲ, ಅಪ್ಪುನಾ ತಲೆ ಮೇಲೆ ಹೊತ್ಕೊಂಡು ಮೆರವಣಿಗೆ ಹೋಗೋದಕ್ಕೆ ಆಗಲ್ಲ ಅಂತ ಬೆಳ್ಳಿಪರದೆ ಮರುಕಪಡ್ತಿದೆ. ಕೋಟಿ ಕೋಟಿ ನನ್ನ ಖಜಾನೆಯಲ್ಲಿ ಕುಣಿಯಲ್ಲವಲ್ಲ ಅಂತ ಬಾಕ್ಸ್ಆಫೀಸ್ ಕಣ್ಣೀರಿಡ್ತಿದೆ. ಇನ್ನೂ, ಪವರ್‌ಸ್ಟಾರ್ ಅಭಿಮಾನಿಗಳಂತೂ ಜೇಮ್ಸ್ ಹೊರತುಪಡಿಸಿ ಮತ್ಯಾವ ಚಿತ್ರವನ್ನು ಫಸ್ಟ್ ಡೇ ಫಸ್ಟ್ ಶೋ ಚಿತ್ರಮಂದಿರಕ್ಕೆ ಹೋಗಿ ನೋಡಲಿಕ್ಕೆ ಆಗಲ್ಲ, ಥಿಯೇಟರ್ ಮುಂದೆ ಮತ್ಯಾವ ಚಿತ್ರದ ಕಟೌಟ್ ಹಾಕಿ ಅಭಿಷೇಕ ಮಾಡಲಿಕ್ಕೆ ಆಗಲ್ಲ ಅಂತ ಒಳಗೊಳಗೆ ನೋವುಣ್ಣುತ್ತಿದ್ದಾರೆ.

ಇದೆಲ್ಲದರ ಮಧ್ಯೆ ದಿಗ್ಗಜರು ಕಟ್ಟಿ ಬೆಳೆಸಿದ ಗಂಧದಗುಡಿ ಕೂಡ `ಅರಸು’ನಾ ನೆನೆದು ಮಮ್ಮಲ್ಲ ಮರುಗುತ್ತಿದೆ. ಕನ್ನಡ ಚಿತ್ರರಂಗದ ಕೊರತೆನಾ ನೀಗಿಸ್ತೀನಿ? ಗಂಧದಗುಡಿಗೆ ಅತೀ ದೊಡ್ಡ ಕೊಡುಗೆ ನೀಡ್ತೀನಿ? ಪರಭಾಷೆಯವರು ನಮ್ಮ ಅಖಾಡಕ್ಕೆ ಬರುವಂತೆ ಮಾಡ್ತೀನಿ? ಇಂಡಿಯನ್ ಸಿನ್ಮಾ ಇಂಡಸ್ಟ್ರಿಗೆ ಉಡುಗೊರೆ ಕೊಡ್ತೀನಿ ಅಂತ ಹೇಳಿಕೊಂಡಿದ್ದ ಅಪ್ಪು ಮಾತನ್ನು ನೆನೆ ನೆನೆದು ಗಂಧದಗುಡಿ ದುಃಖಿಸುತ್ತಿದೆ. ಹೌದು, ಸ್ಟಾರ್‌ಗಳಿಗೆ ಮರುಜೀವ ನೀಡಿ ಆಕಾಶದೆತ್ತರಕ್ಕೆ ಬೆಳೆದು ನಿಲ್ಲಿಸುವ ಗಂಧದಗುಡಿಯಲ್ಲಿ ಒಂದಿಷ್ಟು ಕೊರತೆಯಿದೆ. ಅದರಲ್ಲಿ, ಒಂದು ಅತೀ ದೊಡ್ಡ ಸ್ಟುಡಿಯೋ ವ್ಯವಸ್ಥೆ ಇಲ್ಲದಿರುವುದು. ಶೂಟಿಂಗ್- ಎಡಿಟಿಂಗ್-ಡಬ್ಬಿಂಗ್-ಮಿಕ್ಸಿಂಗ್ ಸೇರಿದಂತೆ ಸಿನಿಮಾ ಶುರು ಆದಾಗಿಂದ ಸಿನಿಮಾ ರಿಲೀಸ್ ಆಗೋರ‍್ಗೂ ಕೂಡ ಒಂದೇ ಸೂರಿನಡಿ ಅಂದರೆ ಒಂದೇ ಸ್ಟುಡಿಯೋದಲ್ಲಿ ಎಲ್ಲವೂ ಸಾಧ್ಯವಾಗಬೇಕು ಎನ್ನುವುದು ನಟಸಾರ್ವಭೌಮನ ಕನಸಾಗಿತ್ತು.

ಅಂದ್ಹಾಗೇ, ಈ ಕನಸಿನ ಬಗ್ಗೆ `ಫಿಲ್ಮ್ ಕಂಪ್ಯಾನಿಯನ್ ಸೌತ್’ ಯೂಟ್ಯೂಬ್ ಚಾನೆಲ್‌ವೊಂದರ ನಿರೂಪಕನ ಬಳಿ ಹಂಚಿಕೊಂಡಿದ್ದರು. ನಿಮ್ಮ ಡ್ರೀಮ್ ಏನು? ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಏನ್ ಕೊರತೆಯಿದೆ? ಇರುವಂತಹ ಕೊರೆತಯನ್ನು ಯಾವ್ ರೀತಿ ನೀಗಿಸುವುದಕ್ಕೆ ಪ್ರಯತ್ನ ಪಡುತ್ತೀರಿ? ನಿರೂಪಕ ಭಾರಧ್ವಾಜ್ ರಂಗನ್ ಅವರ ಈ ಪ್ರಶ್ನೆಗಳಿಗೆ ಉತ್ತರಿಸಿದ್ದ ಅಪ್ಪು, ನನಗೆ ಒಂದು ಬಿಗ್ ಡ್ರೀಮ್ ಇದೆ. ಗಂಧದಗುಡಿಗೆ ಅತೀ ದೊಡ್ಡ ಸ್ಟುಡಿಯೋವನ್ನು ಕೊಡುಗೆಯಾಗಿ ನೀಡಬೇಕು ಎನ್ನುವುದು. ಹಿಂದಿನಿಂದಲೂ ಹೊರ ರಾಜ್ಯಕ್ಕೆ ಮತ್ತು ಪರಭಾಷಾ ಸ್ಥಳಗಳಿಗೆ ಹೋಗಿ ಚಿತ್ರೀಕರಣ ಸೇರಿದಂತೆ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಮುಗಿಸಿಕೊಂಡು ಬಂದಿದ್ದೇವೆ. ಮುಂದಿನ ದಿನಗಳಲ್ಲಿ ಪರಭಾಷೆಯವರು ನಮ್ಮ ಚಂದನವನಕ್ಕೆ ಬರಬೇಕು. ಪ್ರಿಪ್ರೊಡಕ್ಷನ್ ಸೇರಿದಂತೆ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಮ್ಮಲ್ಲಿ ಆಗ್ಬೇಕು. ಟೆಕ್ನಾಲಜಿ ಎಕ್ಸ್ಚೇಂಜ್ ಆಗ್ಬೇಕು ಹೀಗಾದಾಗ ಒಳ್ಳೆ ಪ್ರಾಡೆಕ್ಟ್ ಔಟ್‌ಪುಟ್ ಬರುತ್ತೆ. ಆಗ ಇಂಡಿಯನ್ ಸಿನ್ಮಾ ಇಂಡಸ್ಟ್ರಿಗೆ ಒಳ್ಳೊಳ್ಳೆ ಸಿನಿಮಾಗಳನ್ನು ಉಡುಗೊರೆಯಾಗಿ ನೀಡಬಹುದು ಎಂದು ಹೇಳಿಕೊಂಡಿದ್ದರು. ಅತೀ ಶೀಘ್ರದಲ್ಲೇ ಸ್ಟುಡಿಯೋ ಬಗ್ಗೆ ಮಾಹಿತಿ ನೀಡುತ್ತೇನೆ ಎಂದು ಕೂಡ ತಿಳಿಸಿದ್ದರು. ಅಷ್ಟರಲ್ಲಿ ದುರ್ವಿಧಿಯ ಆಟಕ್ಕೆ ಬದುಕಿನ ಆಟ ಮುಗಿಸಿ ಎದ್ದೋಗಿದ್ದಾರೆ ಅಪ್ಪು.

ವಿಶಾಲಾಕ್ಷಿ,ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಅರಮನೆ ಮೈದಾನದಲ್ಲಿ ಅಪ್ಪುಗೆ ನುಡಿ ನಮನ; ನವೆಂಬರ್‌ 16 ರಂದು ಫಿಲ್ಮ್‌ಚೇಂಬರ್‌ ನೇತೃತ್ವದಲ್ಲಿ ದೊಡ್ಮನೆ ಹುಡುಗನಿಗೆ ನಮನ- ಮನರಂಜನೆಗೆ ಅವಕಾಶವಿಲ್ಲ

ಕನ್ನಡ ಚಿತ್ರರಂಗದ ಖ್ಯಾತ ನಟ ಪುನೀತ್‌ರಾಜಕುಮಾರ್‌ ಅವರ ಅಗಲಿಕೆ ಹಿನ್ನೆಲೆಯಲ್ಲಿ ಕನ್ನಡ ಚಿತ್ರರಂಗ ನುಡಿ ನಮನ ಕಾರ್ಯಕ್ರಮ ಆಯೋಜಿಸಿದೆ. ನವೆಂಬರ್‌ 16 ರಂದು ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ಈ ಕಾರ್ಯಕ್ರಮ ನಡೆಯಲಿದೆ.

ಈ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಸೇರಿದಂತೆ ಸಚಿವರು, ವಿರೋಧ ಪಕ್ಷದ ನಾಯಕರು, ಗಣ್ಯರು, ಚಿತ್ರರಂಗದ ಕಲಾವಿದರು ತಾಂತ್ರಿಕ ವರ್ಗದವರು ಪಾಲ್ಗೊಳ್ಳಲಿದ್ದಾರೆ. ಕನ್ನಡ ಚಿತ್ರರಂಗದ ಎಲ್ಲಾ ವಿಭಾಗಗಳು ಈ ನುಡಿನಮನ ಕಾರ್ಯಕ್ರಮಕ್ಕೆ ಕೈ ಜೋಡಿಸಿವೆ. ಅಪ್ಪು ನುಡಿನಮನ ಕಾರ್ಯಕ್ರಮ ಕುರಿತಂತೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್‌ ಹೇಳುವುದಿಷ್ಟು.


ಪುನೀತ್‌ರಾಜಕುಮಾರ್‌ ಅವರ ಅಗಲಿಕೆಯಿಂದ ಚಿತ್ರೋದ್ಯಮ ದುಃಖದಲ್ಲಿದೆ. ಸರಳ ಸಜ್ಜನಿಕೆ ನಟ ಕಳೆದುಕೊಂಡು ನಿಜಕ್ಕೂ ಬಡವಾಗಿದೆ. ಫಿಲ್ಮ್‌ ಚೇಂಬರ್‌ ನೇತೃತ್ವದಲ್ಲಿ ಚಿತ್ರೋದ್ಯಮ ಅಪ್ಪು ನುಡಿ ನಮನ ಕಾರ್ಯಕ್ರಮ ಆಯೋಜಿಸಿದೆ. ನಿರ್ಮಾಪಕರ ಸಂಘ, ಕಲಾವಿದರ ಸಂಘ, ಛಾಯಾಗ್ರಾಹಕರ ಸಂಘ, ಒಕ್ಕೂಟ, ವಿತರಕರು, ಪ್ರದರ್ಶಕರು ಸೇರಿದಂತೆ ಚೇಂಬರ್‌ನ ಅಂಗ ಸಂಸ್ಥೆಗಳ ಪದಾಧಿಕಾರಿಗಳು ಸೇರಿ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಸೌತ್‌ ಫಿಲ್ಮ್‌ಇಂಡಸ್ಟ್ರಿ ಮಂದಿ ಕೂಡ ಆಗಮಿಸಲಿದ್ದಾರೆ. ಒಂದು ಅರ್ಥಪೂರ್ಣ ಕಾರ್ಯಕ್ರಮ ನಡೆಸಲು ತೀರ್ಮಾನಿಸಲಾಗಿದೆ. ಇದು ಎಲ್ಲರ ಕಾರ್ಯಕ್ರಮ. ಚಿತ್ರರಂಗದ ಪ್ರತಿಯೊಬ್ಬರ ಸಹಕಾರದಿಂದ ಈ ಕಾರ್ಯಕ್ರಮ ನಡೆಯಲಿದೆ ಎಂದರು.


ಸಾ.ರಾ.ಗೋವಿಂದು ಮಾತನಾಡಿ, ” ಪುನೀತ್‌ ಅವರ ನಿಧನದ ಹಿಂದಿನ ದಿನವೇ ನಾವು ನುಡಿ ನಮನ ಕಾರ್ಯಕ್ರಮ ನಡೆಸಲು ತೀರ್ಮಾನಿಸಿದ್ದೆವು. ಅದರಂತೆ, ನವೆಂಬರ್‌ ೧೬ರಂದು ಅಪ್ಪು ನುಡಿ ನಮನ ಕಾರ್ಯಕ್ರಮ ನಡೆಯಲಿದೆ. ರಾಜ್‌ಕುಮಾರ್ ಕುಟುಂಬ‌, ಇಡೀ ಚಿತ್ರೋದ್ಯಮ, ದಕ್ಷಿಣ ಭಾರತ ಚಿತ್ರೋದ್ಯಮ ನುಡಿ ನಮನಕ್ಕೆ ಸಾಕ್ಷಿಯಾಗಲಿದೆ. ಈಗಾಗಲೇ ಹೈದರಾಬಾದ್‌ಗೆ ಹೋಗಿ, ಅಲ್ಲಿನ ಫಿಲ್ಮ್‌ ಚೇಂಬರ್‌ ಪದಾಧಿಕಾರಿಗಳು ಮತ್ತು ಕಲಾವಿದರನ್ನು ಆಹ್ವಾನಿಸಲಾಗಿದೆ. ಚೆನ್ನೈ ಫಿಲ್ಮ್‌ ಚೇಂಬರ್‌ಗೂ ಮಾಹಿತಿ ನೀಡಿದ್ದೇವೆ. ಪುನೀತ್‌ ಅವರ ಅಭಿಮಾನಿಗಳು ಮತ್ತು ನಾಡಿನ ಜನರಲ್ಲಿ ಮನವಿ ಮಾಡಿಕೊಳ್ಳುವುದೇನೆಂದರೆ, ಈ ನುಡಿ ನಮನ ಕಾರ್ಯಕ್ರಮ ನಡೆಯುತ್ತಿರೋದು, ಸಿನಿಮಾ ರಂಗಕ್ಕೆ ಮಾತ್ರ ಸೀಮಿತವಾಗಿದೆ. ಹಾಗಾಗಿ ಯಾರೂ ಅನ್ಯತಾ ಭಾವಿಸಬಾರದು. ಈ ಕಾರ್ಯಕ್ರಮಕ್ಕೆ ಸುಮಾರು ಒಂದುವರೆ ಸಾವಿರ ಜನರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಹಾಗಾಗಿ ನಾಡಿನ ಜನರು ಸಹಕಾರ ನೀಡಬೇಕು. ನೀವಿದ್ದಲ್ಲೀಯೇ ಟಿವಿ ಮೂಲಕ ಕಾರ್ಯಕ್ರಮ ವೀಕ್ಷಿಸಬಹುದು ಎಂದಿದ್ದಾರೆ.

ಮನರಂಜನೆ ಇರಲ್ಲ…
ಅಂದು ನುಡಿನಮನ ಕಾರ್ಯಕ್ರಮ ಹೊರತಾಗಿ ಯಾವುದೇ ಮನರಂಜನೆ ಇರಲ್ಲ. ಪುನೀತ್‌ ಅವರ ಕುರಿತು ವಿಶೇಷವಾದ ಹಾಡೊಂದನ್ನು ನಾಗೇಂದ್ರ ಪ್ರಸಾದ್‌ ಬರೆದಿದ್ದಾರೆ. ಆ ಹಾಡಿಗೆ ಗುರುಕಿರಣ್‌ ಸಂಯೋಜನೆ ಇದೆ. ಹಾಡಿನೊಂದಿಗೆ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಲಿದೆ. ಇನ್ನು, ಅಂದು ಪುನೀತ್‌ ಅವರ ಚಿತ್ರಗಳ ಹಾಡಿನ ತುಣುಕು ಪ್ರದರ್ಶನ ಮತ್ತು ಗಣ್ಯರು ಮಾತಾಡಲಿದ್ದಾರೆ. ನವರಸನ್‌ ಅವರು ಕಾರ್ಯಕ್ರಮದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಒಂದು ಅರ್ಥಪೂರ್ಣ ಕಾರ್ಯಕ್ರಮ ಮಾಡುವ ಮೂಲಕ ಯಶಸ್ವಿಗೊಳಿಸಬೇಕು ಅನ್ನೋದು ನಮ್ಮ ಆಸೆ ಎಂದರು ಸಾ.ರಾ.ಗೋವಿಂದು.

ಶೂಟಿಂಗ್‌ ಬಂದ್‌
ನುಡಿ ನಮನ ಕಾರ್ಯಕ್ರಮದ ಹಿನ್ನೆಲೆಯಲ್ಲಿ, ಚಿತ್ರರಂಗದ ಎಲ್ಲರೂ ಭಾಗವಹಿಸಲಿದ್ದಾರೆ. ಅಂದು ಚಿತ್ರೀಕರಣ ಬಂದ್‌ ಮಾಡಲಾಗುತ್ತದೆ. ಆದರೆ, ಥಿಯೇಟರ್‌ ಪ್ರದರ್ಶನ ಎಂದಿನಂತೆ ಇರಲಿದೆ. ನಮಗೂ ಎಲ್ಲರನ್ನೂ ಕರೆಯಬೇಕು ಎಂಬ ಆಸೆ ಇತ್ತು. ಆದರೆ, ಈಗ ಪರಿಸ್ಥಿತಿ ಸರಿ ಇಲ್ಲ. ಹಾಗಾಗಿ ಪುನೀತ್‌ ಅವರ ಅಭಿಮಾನಿಗಳು ನಾಡಿನ ಜನರು ಕುಳಿತಲ್ಲೇ ಟಿವಿಯಲ್ಲಿ ಕಾರ್ಯಕ್ರಮ ವೀಕ್ಷಿಸಬೇಕು. ಅಂದು ವಿಶೇಷವಾಗಿ ಮೈಸೂರು ರಾಜಮನೆತನದ ರಾಜ ಯದುವೀರ್‌ ಅವರು ಭಾಗವಹಿಸಲಿದ್ದಾರೆ.


ಪಾಸ್‌ ಇದ್ದವರಿಗೆ ಪ್ರವೇಶ
ಈ ನುಡಿ ನಮನ ಕಾರ್ಯಕ್ರಮಕ್ಕೆ ಪಾಸ್‌ ಇದ್ದವರಿಗೆ ಮಾತ್ರ ಪ್ರವೇಶವಿದೆ. ವಿಐಪಿ ವಿವಿಐಪಿ ಹೀಗೆ ವಿಂಗಡಣೆ ಮಾಡಿ ಪಾಸ್‌ ವ್ಯವಸ್ಥೆ ಮಾಡಲಾಗಿದೆ. ಅಂದು ಮಧ್ಯಾಹ್ನ ೩ಗಂಟೆಗೆ ಕಾರ್ಯಕ್ರಮ ಶುರುವಾಗಲಿದೆ. ೨.೩೦ಕ್ಕೆ ಎಲ್ಲರೂ ಆಗಮಿಸಬೇಕು. ನಾಲ್ಕು ದ್ವಾರದಲ್ಲೂ ಸೆಕ್ಯೂರಿಟಿ ಇರುವುದರಿಂದ ಪಾಸ್‌ ಇದ್ದವರಿಗೆ ಮಾತ್ರ ಅವಕಾಶವಿದೆ. ಒಟ್ಟು ಮೂರು ತಾಸಿನ ಕಾರ್ಯಕ್ರಮವದು.

Categories
ಸಿನಿ ಸುದ್ದಿ

ಕಬ್ಜ ಟೀಸರ್ ರಿಲೀಸ್ ಮುಂದಕ್ಕೆ…

ಈಗಾಗಲೇ ದೇಶಾದ್ಯಂತ ಸಂಚಲನ ಮೂಡಿಸಿರುವ, ರಿಯಲ್‌ ಸ್ಟಾರ್ ಉಪೇಂದ್ರ ಹಾಗೂ ಅಭಿನಯm ಚಕ್ರವರ್ತಿ ಕಿಚ್ಚ ಸುದೀಪ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ “ಕಬ್ಜ” ಚಿತ್ರದ ಟೀಸರ್ ದೀಪಾವಳಿ ಹಬ್ಬಕ್ಕೆ ಬಿಡುಗಡೆ ಮಾಡುತ್ತೇನೆ ಎಂದು ನಿರ್ದೇಶಕ ಆರ್ ಚಂದ್ರು ತಿಳಿಸಿದ್ದರು. ಅಷ್ಟರಲ್ಲಿ ಪುನೀತ್ ರಾಜಕುಮಾರ್ ಅವರ ಅಗಲಿಕೆಯ ಸುದ್ದಿಗೆ ಇಡೀ ಕರುನಾಡು ಮಂಕಾಯಿತು.

ಹೀಗಾಗಿ ನಿರ್ದೇಶಕ ಆರ್.ಚಂದ್ರು ಟೀಸರ್ ರಿಲೀಸ್ ಕುರಿತು ಮಾತಾಡಿದ್ದಾರೆ. ನಮ್ಮ ತಂಡಕ್ಕೂ ಅಪ್ಪು ಅವರ‌ ಅಗಲಿಕೆ ಬಹಳ ನೋವು ತಂದಿದೆ. ಇಂತಹ ಸಂದರ್ಭದಲ್ಲಿ ಟೀಸರ್ ಬಿಡುಗಡೆ ಮಾಡಿ ಸಂಭ್ರಮಿಸುವುದು ಸರಿಯಲ್ಲ ಎಂಬ ಉದ್ದೇಶದಿಂದ “ಕಬ್ಜ” ಚಿತ್ರದ ಟೀಸರ್ ಬಿಡುಗಡೆ ಮಾಡಿಲ್ಲ

ಮುಂದಿನ‌ ದಿನಗಳಲ್ಲಿ ಟೀಸರ್ ಲಾಂಚ್ ಮಾಡುವುದಾಗಿ ಟ್ವಿಟರ್ ಮೂಲಕ ಸಿನಿಪ್ರೇಕ್ಷಕರಿಗೆ ತಿಳಿಸಿದ್ದಾರೆ.
.

error: Content is protected !!