ಅಂತೂ ಇಂತೂ ಇಡೀ ದಕ್ಷಿಣ ಭಾರತ ಚಿತ್ರರಂಗವೇ ಇದೀಗ ಕಿಚ್ಚನಿಗೆ ಸಾಥ್ ನೀಡಿದೆ. ಹೌದು, ಕಳೆದ ಎರಡು ದಿನಗಳಿಂದ ನಟ ಸುದೀಪ್ ಹಾಗು ಅಜಯ್ ದೇವಗನ್ ಮಧ್ಯೆ ನಡೆದ ಟ್ವೀಟ್ ವಾರ್‌ಗೆ ಸ್ಯಾಂಡಲ್ ವುಡ್ ಸ್ಟಾರ್ಸ್ ಮಾತ್ರವಲ್ಲ, ಈಗ ಸೌತ್ ಇಂಡಿಯಾ ಫಿಲ್ಮ್ ಸ್ಟಾರ್ಸ್‌ಗಳೂ ಸಾಥ್ ನೀಡುವ ಮೂಲಕ ಒಟ್ಟಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ಕನ್ನಡ ಚಿತ್ರರಂಗದ ಮೋಹಕ ತಾರೆ ರಮ್ಯಾ, ರಾಮ್ ಗೋಪಾಲ್ ವರ್ಮಾ, ಸತೀಶ್ ನೀನಾಸಂ, ಆಶಿಕಾ ರಂಗನಾಥ್, ಶ್ರೀನಗರ ಕಿಟ್ಟಿ, ನಿರ್ದೇಶಕ ಮಂಸೋರೆ ಸೇರಿದಂತೆ ಹಲವು ನಟ,ನಟಿಯರು ನಟ ಸುದೀಪ್‌ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಇದಿಷ್ಟೇ ಅಲ್ಲ, ಅತ್ತ ರಾಜಕೀಯ ಧುರೀಣರು ಸಹ ಬೆಂಬಲ ಸೂಚಿಸುವ ಮೂಲಕ ಅಜಯ್ ದೇವಗನ್ ಅವರಿಗೆ ಟಾಂಗ್ ಕೊಟ್ಟಿದ್ದಾರೆ. ಪರಭಾಷಿಗರಿಂದಲೂ ಸುದೀಪ್‌ಗೆ ಭಾರೀ ಬೆಂಬಲ ವ್ಯಕ್ತವಾಗುತ್ತಿರುವುದು ಇಡೀ ಸೌತ್ ಫಿಲ್ಮ್ ಇಂಡಸ್ಟ್ರಿ ಒಗ್ಗಟ್ಟಿನ ಮಂತ್ರ ಹೇಗಿದೆ ಅನ್ನೋದನ್ನು ತೋರಿಸುತ್ತಿದೆ…

ದೇವಗನ್‌ಗೆ ಚಳಿ ಬಿಡಿಸಿದ ವರ್ಮಾ…
ನಿರ್ದೇಶಕ, ರಾಮ್ ಗೋಪಾಲ್ ವರ್ಮಾ ಕೂಡ ಸುದೀಪ್ ಟ್ವೀಟ್ ಕುರಿತಂತೆ ಟ್ವೀಟ್ ಮಾಡಿದ್ದಾರೆ. ಸುದೀಪ್ ಮಾತುಗಳಿಗೆ ಬೇಷರತ್ ಬೆಂಬಲ ವ್ಯಕ್ತಪಡಿಸಿದ್ದಾರೆ. ಜೊತೆಗೆ ಸಾಲು ಸಾಲು ಟ್ವೀಟ್ ಮಾಡುವ ಮೂಲಕ ಅಜಯ್ ದೇವಗನ್ ಮಾತುಗಳನ್ನು ಕೊಂಚ ಖಾರವಾಗಿಯೇ ಖಂಡಿಸಿದ್ದಾರೆ. ನೀವು ಹಿಂದಿಯಲ್ಲಿ ಮಾಡಿದ ಟ್ವೀಟ್ ನನಗೆ ಅರ್ಥವಾಯಿತು, ಅದಕ್ಕೆ ಕಾರಣ, ನನಗೆ ಆ ಭಾಷೆಯ ಮೇಲಿರುವ ಗೌರವ, ನಿಮ್ಮ ಟ್ವೀಟ್‌ಗೆ ನಾನು ಕನ್ನಡದಲ್ಲಿ ಪ್ರತಿಕ್ರಿಯೆ ನೀಡಿದ್ದರೆ ನಿಮಗೆ ಅರ್ಥವಾಗುತ್ತಿತ್ತೆ?” ಎಂಬ ಸುದೀಪ್‌ರ ಟ್ವೀಟ್ ಅನ್ನು ಮೆಚ್ಚಿಕೊಂಡಿರುವ ವರ್ಮಾ, ”ಭಾಷೆಯ ವಿಷಯವನ್ನು ನಿಮ್ಮ ಈ ಪ್ರಶ್ನೆಗಿಂತಲೂ ಚೆನ್ನಾಗಿ ಯಾವುದೂ ಅರ್ಥೈಸಲು ಸಾಧ್ಯವಿಲ್ಲ. ಅಜಯ್ ದೇವಗನ್ ಅವರ ಹಿಂದಿ ಟ್ವೀಟ್‌ಗೆ ಕನ್ನಡದಲ್ಲಿ ಪ್ರತಿಕ್ರಿಯೆ ಕೊಟ್ಟಿದ್ದಿದ್ದರೆ ಪರಿಸ್ಥಿತಿ ಭಿನ್ನವಾಗಿರುತ್ತಿತ್ತು. ಈಗಲಾದರು ಅರ್ಥ ಮಾಡಿಕೊಳ್ಳಲಿ ಭಾರತ ಒಂದು ಅನ್ನುವುದನ್ನು ಎಂದಿದ್ದಾರೆ ವರ್ಮಾ. ಇನ್ನು ಅಜಯ್ ದೇವಗನ್ ಮಾಡಿದ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ವರ್ಮಾ, ‘ಅಜಯ್ ಅವರನ್ನು ಬಹು ವರ್ಷಗಳಿಂದಲೂ ಬಲ್ಲೆ, ಯಾರನ್ನೂ ನೋಯಿಸುವ ಉದ್ದೇಶ ಅವರಿಗಿಲ್ಲ, ಅವರ ಟ್ವೀಟಿ ಅನ್ನು ಕೆಲವರು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಭಾಷೆಯು ಇಂದು ಪ್ರಾದೇಶಿಕ ಗಡಿ ಹಾಗೂ ಸಂಸ್ಕೃತಿಗಳನ್ನು ಮೀರಿ ಬೆಳೆದಿದೆ. ಭಾಷೆ ಇರುವುದು ಜನರನ್ನು ಹತ್ತಿರ ತರಲೆಂದು ಒಡೆಯಲೆಂದಲ್ಲ ಎಂದು ಸೂಕ್ಷ್ಮವಾಗಿ ಹೇಳಿದ್ದಾರೆ.

‘ನನ್ನ ಮಾತುಗಳನ್ನು ತಪ್ಪಾಗಿ ಅರ್ಥೈಸಲಾಗಿದೆ” ಎಂಬ ಸುದೀಪ್‌ರ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿರುವ ಅವರು, ‘ನೀವು ಉದ್ದೇಶಪೂರ್ವಕವಾಗಿ ಅಥವಾ ಬೇರೆ ಯಾವುದೇ ಕಾರಣಕ್ಕಾದರೂ ಈ ಟ್ವೀಟ್ ಅನ್ನು ಮಾಡಿರಬಹುದು ಆದರೆ ಈ ನಿಮ್ಮ ಹೇಳಿಕೆ ನನಗೆ ಇಷ್ಟವಾಯಿತು. ಉತ್ತರ ಮತ್ತು ದಕ್ಷಿಣ ಭಾರತ ಚಿತ್ರರಂಗಗಳ ನಡುವೆ ಯುದ್ಧದಂತಹ ಪರಿಸ್ಥಿತಿ ಇದ್ದಾಗ ಈ ರೀತಿಯ ಯುದ್ಧ ಶಮನ ಮಾಡುವ ಮನಸ್ಥಿತಿಯ ಹೇಳಿಕೆಗಳು ಅವಶ್ಯಕವಾಗಿರುತ್ತವೆ” ಎಂದಿದ್ದಾರೆ ವರ್ಮಾ. ಮತ್ತೆ ಸುದೀಪ್‌ಗೆ ಪ್ರತ್ಯೇಕ ಟ್ವೀಟ್ ಮಾಡಿರುವ ವರ್ಮಾ, ”ಸುದೀಪ್ ಅವರೆ, ಸತ್ಯವೆಂದರೆ ಬಾಲಿವುಡ್ ಸ್ಟಾರ್ ನಟರು ದಕ್ಷಿಣ ಭಾರತದ ಸಿನಿಮಾ ಸ್ಟಾರ್ ನಟರ ಬಗ್ಗೆ ಅಸೂಯೆ ಹೊಂದಿದ್ದಾರೆ. ‘ಕೆಜಿಎಫ್ 2’ ಸಿನಿಮಾ ಮೊದಲ ದಿನವೇ 50 ಕೋಟಿ ಕಲೆಕ್ಷನ್ ಮಾಡಿದ್ದಕ್ಕೆ ಅವರಿಗೆ ಉರಿ ಎದ್ದಿದೆ. ಹಿಂದಿ ಸಿನಿಮಾಗಳು ಇಂತಹ ಓಪನಿಂಗ್ ಪಡೆದುಕೊಳ್ಳಲಾರವು” ಎಂದಿರುವ ವರ್ಮಾ, ಅಂತಿಮವಾಗಿ, ”ರನ್‌ವೇ 34 ಸಿನಿಮಾದ ಕಲೆಕ್ಷನ್ ತೋರಿಸಲಿದೆ. ಹಿಂದಿ ವರ್ಸಸ್ ಕನ್ನಡ ಯುದ್ಧದಲ್ಲಿ ಗೆದ್ದವರ್ಯಾರು ಎಂದು. ಅಥವಾ ಅಜಯ್ ದೇವಗನ್ v/s ಸುದೀಪ್ ಯುದ್ಧದಲ್ಲಿ ಗೆದ್ದವರ್ಯಾರು ಎಂದು” ಎಂದಿದ್ದಾರೆ ವರ್ಮಾ.

ವಿವಾದ ದೊಡ್ಡ ಸುದ್ದಿ
ಅದೇನೆ ಇರಲಿ, ಸದ್ಯ ಚಿತ್ರರಂಗದಲ್ಲಿ ಹಿಂದಿ ಭಾಷೆಯ ವಿಚಾರವಗಿ ದೊಡ್ಡ ಬಿರುಗಾಳಿ ಎದ್ದಿದೆ. ಸುದೀಪ್ ಮತ್ತು ಅಜಯ್ ದೇವಗನ್ ನಡುವೆ ಶುರುವಾದ ವಾಗ್ವಾದ ಈಗ ರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಇದಕ್ಕೆ ಕಾರಣ ‘ಹಿಂದಿ ರಾಷ್ಟ್ರೀಯ ಭಾಷೆಯಾಗಿ ಉಳಿದಿಲ್ಲ’ ಎಂಬ ಕಿಚ್ಚನ ಹೇಳಿಕೆ. ಹಿಂದಿ ರಾಷ್ಟ್ರೀಯ ಭಾಷೆ ಅಲ್ಲ ಎಂದ ಸುದೀಪ್ ಹೇಳಿಕೆಗೆ ಬಾಲಿವುಡ್ ನಟ ಅಜಯ್ ದೇವಗನ್ ತಿರುಗೇಟು ನೀಡುವ ಮೂಲಕ ಭಾರೀ ಸುದ್ದಿಗೆ ಕಾರಣರಾಗಿದ್ದರು. ಇಬ್ಬರೂ ಟ್ವೀಟ್ ಮೂಲಕವೇ ಈ ವಿಚಾರದಲ್ಲಿ ವಾಗ್ವಾದಕ್ಕೆ ಇಳಿದು ಅದು ಎಲ್ಲೆಲ್ಲೋ ಮುಟ್ಟಿದೆ. ಅಜಯ್ ದೇವಗನ್ ನೀಡಿದ ಆ ಹೇಳಿಕೆ ಯಾರಿಗೂ ಸಹಿಸಲು ಸಾಧ್ಯವಾಗಿಲ್ಲ. ಕನ್ನಡಿಗರಿಗೆ ಮಾತ್ರವಲ್ಲ. ಇಡೀ ದಕ್ಷಿಣ ಭಾರತೀಯರನ್ನು ಅಜಯ್ ದೇವಗನ್ ಅವರ ಈ ಹೇಳಿಕೆ ಕೆರಳಿಸಿದೆ. ಕನ್ನಡಿಗರು, ಕನ್ನಡದ ಚಿತ್ರರಂಗದವರು ಮಾತ್ರವಲ್ಲದೆ ಸುದೀಪ್ ಪರ ದಕ್ಷಿಣ ಭಾರತೀಯರೇ ನಿಂತಿದ್ದಾರೆ.

ಸುದೀಪ್‌ಗೆ ಜೈ ಅಂದ ತೆಲುಗು, ತಮಿಳು ಫ್ಯಾನ್ಸ್ !
ಸುದೀಪ್ ಗೆ ಜೈ ಎನ್ನುತ್ತಿದ್ದಾರೆ ತಮಿಳು, ತೆಲುಗು ಫ್ಯಾನ್ಸ್! ಹೌದು, ಸುದೀಪ್ ಮತ್ತು ಅಜಯ್ ದೇವಗನ್ ಅವರಿಬ್ಬರ ಸರಣಿ ಟ್ವೀಟ್ ವಾರ್‌ನಲ್ಲಿ ಸುದೀಪ್ ಪರವಾಗಿ ಇಡೀ ಸೌತ್ ಚಿತ್ರರಂಗ ಒಂದಾಗಿದೆ. ಸೌತ್‌ನಲ್ಲೂ ಸ್ಟಾರ್ ವಾರ್, ಫ್ಯಾನ್ ವಾರ್ ಎಲ್ಲವೂ ಇದೆ. ಆದರೆ ಈ ವಿಚಾರದಲ್ಲಿ ಮಾತ್ರ ಎಲ್ಲವನ್ನು ಬದಿಗಿಟ್ಟು ಒಂದೇ ರೀತಿಯ ಧ್ವನಿ ಎತ್ತಿರುವುದು ನಿಜಕ್ಕೂ ವಿಶೇಷ. ತೆಲುಗು ನಟ ಮಹೇಶ್ ಬಾಬು ಅಭಿಮಾನಿಗಳು ಸುದೀಪ್ ಪರ ನಿಂತು ಕಿಚ್ಚನಿಗೆ ಜೈ ಎನ್ನುತ್ತಿದ್ದಾರೆ. ಜೂ.ಎನ್‌ಟಿಆರ್ ಫ್ಯಾನ್ಸ್ ಕೂಡ ಕಿಚ್ಚನಿಗೆ ಬೆಂಬಲ ಸೂಚಿಸಿದ್ದಾರೆ. ತೆಲುಗು ಮತ್ತು ತಮಿಳಿನ ಬಹುತೇಕ ಸ್ಟಾರ್ ನಟರ ಅಭಿಮಾನಿಗಳು ಬೆಂಬಲ ಸೂಚಿಸುತ್ತಿರುವುದು ಇನ್ನೊಂದು ವಿಶೇಷ. ತಮಿಳು ನಟ ವಿಜಯ್ ಮತ್ತು ಜೂ.ಎನ್‌ಟಿಆರ್ ಫ್ಯಾನ್ ಪೇಜ್‌ನಿಂದ ಕಿಚ್ಚನಿಗೆ ದೊಡ್ಡ ಮಟ್ಟದಲ್ಲಿ ಬೆಂಬಲ ವ್ಯಕ್ತವಾಗಿದೆ. ಈ ಮೂಲಕ ಸೌತ್ ಇಂಡಿಯಾದ ಬಹುತೇಕ ಮಂದಿ ಒಂದಾಗಿ ಮುಂದೆ ಬಂದಿದ್ದಾರೆ ಎನ್ನುವುದು ಸ್ಪಷ್ಟ.

ಅದೇನೆ ಇರಲಿ, ಈಗ ಸೌತ್ ಚಿತ್ರಗಳಿಗೆ ಬಾಲಿವುಡ್ ಹೆದರಿದೆಯಾ? ಗೊತ್ತಿಲ್ಲ. ಆದರೆ, ಈ ಟ್ವೀಟ್ ವಾರ್ ಅನ್ನು ಬಾಲಿವುಡ್ ಮಂದಿ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. RRR, ಪುಷ್ಪ, ಕೆಜಿಎಫ್ 2 ಚಿತ್ರಗಳು ಬಾಕ್ಸಾಫೀಸ್ ಗಳಿಕೆ ಕಂಡು ಬಾಲಿವುಡ್ ನಿಜಕ್ಕೂ ಶೇಕ್ ಆಗಿದೆ. ಇನ್ನು ಸೌತ್ ಫಿಲ್ಮ್ ಇಂಡಸ್ಟ್ರಿಯಿಂದ ಸಾಕಷ್ಟು ಸ್ಟಾರ್ಸ್ ಸಿನಿಮಾಗಳ ಹಬ್ಬವಿದೆ. ಆ ಹಬ್ಬ ಕಣ್ತುಂಬಿಕೊಳ್ಳೋಕೆ ಬಾಲಿವುಡ್ ಸ್ಟಾರ್ಸ್ ಗೆ ಆಗ್ತಾ ಇಲ್ಲವೇನೋ? ಅದಕ್ಕೆ ಇಷ್ಟೆಲ್ಲಾ ಖ್ಯಾತೆ ಅಂತ ಟ್ರೋಲ್ ಮಾಡಲಾಗುತ್ತಿದೆ. ಮುಂದೆ ಇದು ಎಲ್ಲಿಗೆ ಹೋಗಿ ನಿಲ್ಲುತ್ತೋ ಕಾದು ನೋಡಬೇಕು.
ಎಂಟರ್‌ಟೈನ್‌ಮೆಂಟ್ ಬ್ಯೂರೋ ಸಿನಿಲಹರಿ