ವಿಕ್ರಾಂತ್ ರೋಣ ಬಳಿಕ ಕಿಚ್ಚ ಸುದೀಪ್ ಅವರ ಮುಂದಿನ ಸಿನಿಮಾ ಯಾವುದು? ಸದ್ಯಕ್ಕೆ ಎಲ್ಲರಿಗೂ ಕುತೂಹಲ ಇದೆ. ಮತ್ತೆ ಸುದೀಪ್ ಅವರು ಅನೂಪ್ ಭಂಡಾರಿ ಜೊತೆ ಸಿನಿಮಾ ಮಾಡಲಿದ್ದಾರೆ ಎಂಬ ಮಾತುಗಳೂ ಕೇಳಿ ಬರುತ್ತಿವೆ. ಹಾಗಂತೆ ಹೀಗಂತೆ ಎಂಬ ಮಾತುಗಳು ಎಷ್ಟರಮಟ್ಟಿಗೆ ಸರಿಯೋ ತಪ್ಪೋ ಗೊತ್ತಿಲ್ಲ. ಸದ್ಯದ ಮಾಹಿತಿ ಪ್ರಕಾರ, ಸುದೀಪ್ ಅವರು ಈಗ ಕನ್ನಡ ಮತ್ತು ತಮಿಳು ಭಾಷೆಯಲ್ಲಿ ತಯಾರಾಗುವ ಸಿನಿಮಾವೊಂದನ್ನು ಮಾಡಲಿದ್ದಾರೆ ಎಂಬ ಸುದ್ದಿ ಬಂದಿದೆ.
ಹೌದು, ಸುದೀಪ್ ತಮಿಳಿನ ಹೊಸ ನಿರ್ದೇಶಕರೊಬ್ಬರ ಕಥೆ ಕೇಳಿದ್ದು, ಆ ಚಿತ್ರ ಮಾಡಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎನ್ನಲಾಗಿದೆ.
ಅಂದಹಾಗೆ, ಸುದೀಪ್ ಅವರ ಹೊಸ ಸಿನಿಮಾ ನಿರ್ಮಿಸುತ್ತಿರೋದು ತಮಿಳಿನ ಹೆಸರಾಂತ ನಿರ್ಮಾಪಕ, ವಿತರಕ ಕಲೈಪುಲಿ ಎಸ್.ತಾನು. ತಮಿಳು ಚಿತ್ರರಂಗದಲ್ಲಿ ಇವರು ಅನೇಕ ಹಿಟ್ ಸಿನಿಮಾಗಳನ್ನು ವಿತರಣೆ ಕೂಡ ಮಾಡಿದ್ದಾರೆ. ರಜನಿಕಾಂತ್ ಅವರ ಕಬಾಲಿ, ಕಮಲ್ ಹಾಸನ್ ಅವರ ಆಲವಂತಾನ್, ವಿಜಯ್ ಅವರ ತುಪಾಕಿ, ಸೂರ್ಯ ಅವರ ಕಾಕ ಕಾಕ ಹಾಗು ಧನುಷ್ ಅವರ ಅಸುರನ್ ಸಿನಿಮಾಗಳನ್ನು ನಿರ್ಮಿಸಿದ್ದಾರೆ.
ಸದ್ಯದ ಮಾಹಿತಿ ಪ್ರಕಾರ ಸುದೀಪ್ ಅವರಿಗೆ ಇವರೊಂದು ಸಿನಿಮಾ ನಿರ್ಮಾಣ ಮಾಡುತ್ತಿದ್ದು, ಅದು ಕನ್ನಡ ಹಾಗು ತಮಿಳು ಭಾಷೆಯಲ್ಲಿ ತಯಾರಾಗಲಿದೆ ಎನ್ನಲಾಗಿದೆ. ಇತ್ತೀಚೆಗಷ್ಟೇ ಅ ಸಿನಿಮಾ ಕುರಿತು ಮಾತುಕತೆ ಮುಗಿದಿದ್ದು, ಹೊಸ ನಿರ್ದೇಶಕರ ಕಥೆಯಲ್ಲಿ ಸುದೀಪ್ ಹೀರೋ ಅವರು ಆಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ.
ಅದೇನೆ ಇರಲಿ, ಸುದೀಪ್ ಅಭಿಮಾನಿಗಳಿಗೆ ತಮ್ಮ ಕಿಚ್ಚ ಬಾಸ್ ಮುಂದೆ ಯಾವ ಸಿನಿಮಾ ಮಾಡ್ತಾರೆ ಎಂಬ ಕುತೂಹಲಕ್ಕೆ ಈಗ ಈ ಸುದ್ದಿ ಉತ್ತರ ನೀಡಿದೆ. ಇದು ಯಾವಾಗ ಶುರುವಾಗುತ್ತೆ, ಯಾರೆಲ್ಲ ಇರುತ್ತಾರೆ ಎಂಬುದಕ್ಕೆ ಕಾದು ನೋಡಬೇಕಿದೆ.
ಯುವ ನಿರ್ದೇಶಕ ಜೀವಾ ನವೀನ್ ಅವರು ಕನ್ನಡದಲ್ಲೊಂದು ಜೈ ಭೀಮ್, ಅಸುರನ್, ಕರ್ನನ್, ನಾರಪ್ಪ ರೀತಿಯ ಸಿನೆಮಾ ನಿರ್ದೇಶನ ಮಾಡಿದ್ದಾರೆ. ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯದ ವಿರುದ್ದ ಹೋರಾಡುವ ಕಥಾಹಂದರ ಇಟ್ಟುಕೊಂಡು ಪಾಲಾರ್ ಸಿನೆಮಾಗೆ ಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರವೀಗ ಬಿಡುಗಡೆಗೆ ಸಿದ್ಧವಾಗಿದೆ. ಈ ಬಗ್ಗೆ ಮಾಹಿತಿ ಹಂಚಿಕೊಂಡ ನಿರ್ದೇಶಕ ಜೀವಾ ನವೀನ್ ” ಅವಿಭಜಿತ ಕೋಲಾರ ಜಿಲ್ಲೆ ಮತ್ತು ದೇವನಹಳ್ಳಿ ಭಾಗದಲ್ಲಿ ನಡೆದ ನೈಜ ಘಟನೆಗಳನ್ನು ಇಟ್ಟುಕೊಂಡು ಅದೇ ಭಾಗದಲ್ಲಿ ಚಿತ್ರೀಕರಣ ಮಾಡಿದ್ದೇವೆ. ಇದೊಂದು ಮಹಿಳಾ ಪ್ರಧಾನ, ಸಂಘರ್ಷದ ಕಥೆ, ತಮಗೂ ಬದುಕಲು ಹಕ್ಕಿದೆ ಎಂದು ತೋರಿಸಿದ ದಲಿತರ ಹೋರಾಟದ ಕಥನ ಎಂದು ಹೇಳಿದರು.
ತೆಲುಗಿನ ‘ಸಿನಿಮಾ ಬಂಡಿ’ ಖ್ಯಾತಿಯ ನಟಿ, ಗಾಯಕಿ ವೈ.ಜಿ.ಉಮಾ ಕೋಲಾರ ಅವರು ಮುಖ್ಯಪಾತ್ರದಲ್ಲಿ ನಟಿಸಿರುವ ‘ಪಾಲಾರ್’ ತನ್ನ ವಿಶಿಷ್ಟ ಹೆಸರಿನ ಮೂಲಕ ಗಮನ ಸೆಳೆದಿದೆ. ನೀನಾಸಂನಲ್ಲಿ ತರಬೇತಿ ಪಡೆದಿರುವ ಉಮಾ ಜೊತೆ ನಾಯಕನಾಗಿ ರಾಷ್ಟ್ರೀಯ ನಾಟಕ ಶಾಲೆಯ ತಿಲಕ್ ರಾಜ್ ಬಣ್ಣ ಹಚ್ಚಿದ್ದಾರೆ.
ಜೊತೆಗೆ ಈ ಸಿನಿಮಾದಲ್ಲಿ ಸುಮಾರು ನೂರಕ್ಕೂ ಹೆಚ್ಚು ಕಲಾವಿದರು ಅಭಿನಯಿಸಿದ್ದಾರೆ. ಚಿತ್ರಕ್ಕೆ ಆಸಿಫ್ ರೆಹಾನ್, ಅವರ ಛಾಯಾಗ್ರಹಣ, ವಲಿ ಕುಲಾಯಿಸ್ ಸಂಕಲನವಿದೆ. ರಾಜಮೌಳಿ ತಂಡದ ಸಾಹಿತಿ ವರದರಾಜ್ ಚಿಕ್ಕಬಳ್ಳಾಪುರ 4 ಹಾಡುಗಳನ್ನು ರಚಿಸಿದ್ದಾರೆ. ಸುಬ್ರಮಣ್ಯ ಆಚಾರ್ಯ ಅವರ ಸಂಗೀತವಿದ್ದು, ಶ್ವೇತಾ ದೇವನಹಳ್ಳಿ, ಸುಪ್ರೀತ್ ಪಲ್ಗುಣ, ಸುಬ್ರಮಣ್ಯ ಆಚಾರ್ಯ ಜೊತೆಗೆ ಉಮಾ ವೈ ಜಿ ಕೋಲಾರ ಹಾಡುಗಳಿಗೆ ದನಿಯಾಗಿದ್ದಾರೆ.
ಪಾಲಾರ್ ಟೈಟಲ್‌ನ ವಿಶೇಷತೆಯನ್ನು ವಿವರಿಸಿದ ನಿರ್ದೇಶಕರು, “ನಂದಿ ಬೆಟ್ಟದಲ್ಲಿ ಹುಟ್ಟಿದ ಪಾಲಾರ್ ನದಿ ಕೋಲಾರದ ಬೇತಮಂಗಲವರೆಗೂ ಭೂಮಿಯ ಒಳಗಡೆಯೇ ಹರಿಯುತ್ತದೆ. ಆ ನಂತರ ಆಂದ್ರಪ್ರದೇಶ, ತಮಿಳು ನಾಡಿನಾದ್ಯಂತ ಹರಿದು ಸಮುದ್ರ ಸೇರುತ್ತದೆ. ಈ ನದಿ ಭೂಮಿಯ ಒಳಗಡೆ ಇದ್ದಾಗ ಬಿಸಿಯಾಗಿರುತ್ತದೆ. ಇದೇರೀತಿಯ ಕುದಿತ ದಲಿತರ ಆಂತರ್ಯದಲ್ಲಿ ಅಡಗಿದೆ. ಸಂದರ್ಭ ಸಿಕ್ಕಾಗ ಅದು ಹೊರಬಂದು, ಆಕ್ರೋಶ ಸ್ಫೋಟಿಸಿದಾಗ ಏನಾಗುತ್ತದೆ ಎಂಬುದೇ ಪಾಲಾರ್ ಚಿತ್ರದ ಕಥೆ. ಪಾಲಾರ್ ನದಿಗೂ ನಮ್ಮ ಕಥೆಗೂ ಸಂಬಂಧವಿಲ್ಲ. ಒಂದು ರೂಪಕವಾಗಿ ಅದನ್ನು ಬಳಸಿದ್ದೇವೆ. ಅಲ್ಲದೆ ಪಾಲಾರ್ ಎಂಬ ಕಾಲ್ಪನಿಕ ಹಳ್ಳಿಯಲ್ಲಿ ನಮ್ಮ ಕಥೆ ನಡೆಯುತ್ತದೆ” ಎಂದು ವಿವರಿಸಿದರು.
ಬಾಗೇಪಲ್ಲಿ, ಕೋಲಾರ, ದೇವನಹಳ್ಳಿ, ಚಿಕ್ಕಾಬಳ್ಳಾಪುರ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದ್ದು ಸದ್ಯ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆದಿದೆ. ಸೌನವಿ ಕ್ರಿಯೇಷನ್ ಮತ್ತು ಹೆಲೋ ಗ್ಲೋಬಲ್ ಬ್ಯಾನರ್ ಅಡಿಯಲ್ಲಿ ಕೆ.ಆರ್. ಸೌಜನ್ಯ, ಸೌಂದರ್ಯ ಕೆ.ಆರ್ ಮತ್ತು ನವೀನ್ ಕುಮಾರ್ ಬಾಬು ಅವರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಸದ್ಯದಲ್ಲೇ ಚಿತ್ರದ ಟ್ರೈಲರ್ ಮತ್ತು ಹಾಡುಗಳನ್ನು ಬಿಡುಗಡೆಗೊಳಿಸಿ, ನವಂಬರ್ ನಲ್ಲಿ ಚಿತ್ರ ಬಿಡುಗಡೆ ಮಾಡುವುದಾಗಿ ಚಿತ್ರತಂಡ ತಿಳಿಸಿದೆ.
ರಾಮೇನಹಳ್ಳಿ ಜಗನ್ನಾಥ್ ನಿರ್ದೇಶನದ ಬಹು ನಿರೀಕ್ಷೆ ಮೂಡಿಸಿರುವ ‘ಹೊಂದಿಸಿ ಬರೆಯಿರಿ’ ಸಿನಿಮಾ ಬಿಡುಗಡೆಗೆ ರೆಡಿಯಾಗಿದೆ. ನವೆಂಬರ್ 18ಕ್ಕೆ ಸಿನಿಮಾ ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ಬಹು ದೊಡ್ಡ ಹಾಗೂ ಕಲರ್ ಫುಲ್ ತಾರಾಗಣ ಚಿತ್ರದಲ್ಲಿದ್ದು, ಪ್ರವೀಣ್ ತೇಜ್, ಐಶಾನಿ ಶೆಟ್ಟಿ, ಸಂಯುಕ್ತ ಹೊರನಾಡು, ಶ್ರೀ ಮಹದೇವ್, ಭಾವನಾ ರಾವ್, ನವೀನ್ ಶಂಕರ್, ಅರ್ಚನಾ ಜೋಯಿಸ್ ಚಿತ್ರದ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ.
ಪರಿಸ್ಥಿತಿಗಳೊಂದಿಗೆ ಹೊಂದಿಕೊಂಡು ಸಾಗುವ ಬದುಕಿನ ಪಯಣವೇ ಜೀವನ ಎನ್ನುವ ಎಳೆಯನ್ನು ಮೂಲವಾಗಿಟ್ಟುಕೊಂಡು ಅದರ ಸುತ್ತ ಹೆಣೆಯಲಾದ ಕಥಾಹಂದರವೇ ‘ಹೊಂದಿಸಿ ಬರೆಯಿರಿ’ ಸಿನಿಮಾ. ಚಿತ್ರದಲ್ಲಿ ಐದು ಜನ ಸ್ನೇಹಿತರ ಬದುಕಿನ ಒಂದೊಂದು ಕಥೆಯಿದೆ. ಭಾವನಾತ್ಮಕ ಜರ್ನಿಯೂ ಇದೆ. ಈಗಾಗಲೇ ಚಿತ್ರದ ಸ್ಯಾಂಪಲ್ ಗಳ ಮೂಲಕ ಗಮನ ಸೆಳೆದಿರುವ ಈ ಚಿತ್ರ ಸಿನಿರಸಿಕರಲ್ಲಿ ನಿರೀಕ್ಷೆಯನ್ನು ಹೆಚ್ಚಿಸಿದೆ. ಚಿತ್ರದ ಪ್ರಚಾರ ಕಾರ್ಯ ಭರ್ಜರಿಯಾಗಿ ನಡೆಯುತ್ತಿದ್ದು ನವೆಂಬರ್ 18ಕ್ಕೆ ರಾಜ್ಯಾದ್ಯಂತ ಚಿತ್ರ ಬಿಡುಗಡೆ ಮಾಡಲು ಡೇಟ್ ಕನ್ಫರ್ಮ್ ಮಾಡಿದೆ ಚಿತ್ರತಂಡ.
ಚಿತ್ರದಲ್ಲಿ ಎಂಟು ಹಾಡುಗಳಿದ್ದು ಈಗಾಗಲೇ ಒಂದು ಸಾಂಗ್ ಬಿಡುಗಡೆಯಾಗಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಅಕ್ಟೋಬರ್ ನಲ್ಲಿ ಟ್ರೇಲರ್ ರಿಲೀಸ್ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆ. ನಿರ್ದೇಶಕ ಜಗನ್ನಾಥ್ ಗಿದು ಮೊದಲ ಸಿನಿಮಾ. ರಾಕ್ ಲೈನ್ ಪ್ರೊಡಕ್ಷನ್ ನಲ್ಲಿ ಕೆಲಸ ಮಾಡಿದ ಅನುಭವ ಇವರಿಗಿದೆ. ಚಿತ್ರಕ್ಕೆ ಕಥೆ ಬರೆದು ನಿರ್ದೇಶನ ಮಾಡುವುದರ ಜೊತೆಗೆ ನಿರ್ಮಾಣವನ್ನು ತಾವೇ ಮಾಡಿದ್ದಾರೆ.
ಶಾಂತಿ ಸಾಗರ್ ಹೆಚ್.ಜಿ ಕ್ಯಾಮೆರಾ ನಿರ್ದೇಶನ, ಜೋ ಕೋಸ್ಟ ಸಂಗೀತ ನಿರ್ದೇಶನ ಚಿತ್ರಕ್ಕಿದೆ. ಕೆ. ಕಲ್ಯಾಣ್, ಹೃದಯಶಿವ ಹಾಗೂ ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್ ಚಿತ್ರದ ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ. ಟಗರು ಖ್ಯಾತಿಯ ಮಾಸ್ತಿ, ಪ್ರಶಾಂತ್ ರಾಜಪ್ಪ ಹಾಗೂ ನಿರ್ದೇಶಕ ಜಗನ್ನಾಥ್ ಮೂವರ ಸಂಭಾಷಣೆ ಚಿತ್ರಕ್ಕಿದೆ. ಸಂಡೇ ಸಿನಿಮಾಸ್ ಬ್ಯಾನರ್ ನಡಿ ರಾಮೇನಹಳ್ಳಿ ಜಗನ್ನಾಥ್ ಹಾಗೂ ಸ್ನೇಹಿತರು ಸೇರಿ ಹೊಂದಿಸಿ ಬರೆಯಿರಿ ಚಿತ್ರ ನಿರ್ಮಾಣ ಮಾಡಿದ್ದಾರೆ. ಸುನೀಲ್ ಪುರಾಣಿಕ್, ಪ್ರವೀಣ್ ಡಿ ರಾವ್ , ಧರ್ಮೇಂದ್ರ ಅರಸ್, ನಂಜುಂಡೇ ಗೌಡ, ಸುಧಾ ನರಸಿಂಹರಾಜು ಒಳಗೊಂಡ ದೊಡ್ಡ ತಾರಾಬಳಗ ಚಿತ್ರದಲ್ಲಿದೆ.
ಸ್ಯಾಂಡಲ್ ವುಡ್ ಪ್ರತಿಭಾನ್ವಿತ ನಟ ವಸಿಷ್ಠ ಸಿಂಹ ಅಭಿನಯದ ಬಹು ನಿರೀಕ್ಷಿತ ಸಿನಿಮಾಗಳಲ್ಲೊಂದು ‘ಲವ್ ಲಿ’. ವಸಿಷ್ಠ ಸಿಂಹ ಅಭಿಮಾನಿ ಬಳಗ ಕೂಡ ಈ ಚಿತ್ರದ ಮೇಲೆ ಅಪಾರ ನಿರೀಕ್ಷೆ ಇಟ್ಟುಕೊಂಡಿದೆ. ಚಿತ್ರದ ಪೋಸ್ಟರ್ ಗಳಲ್ಲಿ ವಸಿಷ್ಠ ಲುಕ್ ಸಖತ್ ಇಂಪ್ರೆಸ್ ಮಾಡಿದ್ದು ‘ಲವ್ ಲಿ’ ಸಿನಿಮಾ ಅಪ್ಡೇಟ್ ಗಳೂ ನಿರೀಕ್ಷೆ ಹೆಚ್ಚಿಸಿವೆ. ಲವ್ ಲಿ ಚಿತ್ರೀಕರಣ ಕೂಡ ಭರದಿಂದ ಸಾಗುತ್ತಿದ್ದು ಮೊದಲ ಶೆಡ್ಯೂಲ್ ಯಶಸ್ವಿಯಾಗಿ ಮುಗಿಸಿರುವ ಚಿತ್ರತಂಡ ಸೆಕೆಂಡ್ ಶೆಡ್ಯೂಲ್ ಚಿತ್ರೀಕರಣದಲ್ಲಿ ಬ್ಯುಸಿಯಾಗಿದೆ.
ನಾಗರಭಾವಿಯ ಕಿಂಗ್ಸ್ ಕ್ಲಬ್ ನಲ್ಲಿ ‘ಲವ್ ಲಿ’ ಚಿತ್ರದ ಸೆಕೆಂಡ್ ಶೆಡ್ಯೂಲ್ ಚಿತ್ರೀಕರಣ ನಡೆಯುತ್ತಿದೆ. ಇಲ್ಲಿನ ಕಿಂಗ್ಸ್ ಕ್ಲಬ್ ನಲ್ಲಿ ಆಫೀಸ್ ಸೆಟ್ ನಿರ್ಮಾಣ ಮಾಡಲಾಗಿದ್ದು ವಸಿಷ್ಠ ಸಿಂಹ, ಸಾಧುಕೋಕಿಲ, ನಟಿ ಸಮೀಕ್ಷಾ, ಕಾಮಿಡಿ ಕಿಲಾಡಿಗಳು ಖ್ಯಾತಿಯ ಸೂರಜ್ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ.
‘ಲವ್ ಲಿ’ ಚಿತ್ರಕ್ಕೆ ಚೇತನ್ ಕೇಶವ್ ನಿರ್ದೇಶನವಿದೆ. ಇದೊಂದು ಕಮರ್ಶಿಯಲ್ ರೋಮ್ಯಾಂಟಿಕ್ ಲವ್ ಸ್ಟೋರಿ ಸಿನಿಮಾವಾಗಿದ್ದು, ರೌಡಿಸಂ ಕಥಾಹಂದರವೂ ಚಿತ್ರದಲ್ಲಿದೆ. ವಸಿಷ್ಠ ಸಿಂಹನಿಗೆ ನಾಯಕಿಯಾಗಿ ಜಾರ್ಕಂಡ್ ಮೂಲದ ಸ್ಟೆಫಿ ಪಟೇಲ್ ನಟಿಸುತ್ತಿದ್ದು, ಕೊರಿಯನ್ ವೆಬ್ ಸೀರೀಸ್, ತಮಿಳು, ಹಿಂದಿ ಸಿನಿಮಾಗಳಲ್ಲಿ ನಟಿಸಿರುವ ಸ್ಟೆಫಿ ಪಟೇಲ್ ಗೆ ಇದು ಮೊದಲ ಕನ್ನಡ ಸಿನಿಮಾ. ಮಾಸ್ಟರ್ ಆನಂದ್ ಪುತ್ರಿ ವಂಶಿಕಾ ಕೂಡ ಲವ್ ಲಿ ಚಿತ್ರತಂಡ ಸೇರಿಕೊಂಡಿದ್ದು, ಸುಬ್ಬಲಕ್ಷ್ಮಿ ಸಂಸಾರ ಸೀರಿಯಲ್ ಖ್ಯಾತಿಯ ಸಮೀಕ್ಷಾ ಲವ್ ಲಿ ಚಿತ್ರದಲ್ಲಿ ಪ್ರಮುಖ ರೋಲ್ ನಲ್ಲಿ ಮಿಂಚಲಿದ್ದಾರೆ.
ಚಿತ್ರವನ್ನು ಎಂ.ಆರ್ ರವೀಂದ್ರ ಕುಮಾರ್ ನಿರ್ಮಿಸುತ್ತಿದ್ದು, ಅಶ್ವಿನ್ ಕೆನಡಿ ಕ್ಯಾಮೆರಾ ವರ್ಕ್, ಹರೀಶ್ ಕೊಮ್ಮೆ ಸಂಕಲನ, ಅನೂಪ್ ಸೀಳಿನ್ ಸಂಗೀತ ನಿರ್ದೇಶನ ಚಿತ್ರಕ್ಕಿದೆ.
ದೂರದರ್ಶನ ಸಿನಿಮಾ ಸದ್ಯ ಕುತೂಹಲದ ಕೇಂದ್ರ ಬಿಂದು. ವಿಭಿನ್ನ ಪೋಸ್ಟರ್, ಟೀಸರ್ ಝಲಕ್ ಮತ್ತು ಇಲ್ಲಿವರೆಗೂ ಮನ ಮುಟ್ಟುವ ಪ್ರಚಾರ ದ ಮೂಲಕ ನಿರೀಕ್ಷೆ ಇಮ್ಮಡಿಗೊಳಿಸಿದೆ. ಈ ಚಿತ್ರದಲ್ಲಿ ಉಗ್ರಂ ಸಿನಿಮಾ ಖ್ಯಾತಿಯ ಮಂಜು ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಇದುವರೆಗೂ ಮಾಡಿರುವ ಸಿನಿಮಾಗಳಿಗಿಂತ ಈ ಚಿತ್ರದಲ್ಲಿ ವಿಭಿನ್ನ ಪಾತ್ರದ ಮೂಲಕ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದ್ದಾರೆ. ಕಿಟ್ಟಿ ಎಂಬ ಪಾತ್ರಕ್ಕೆ ಉಗ್ರಂ ಮಂಜು ಬಣ್ಣ ಹಚ್ಚಿದ್ದು, ಸಾಲು ಸಾಲು ಒದ್ದಾಟ ಅನುಭವಿಸುವ, ವೈಫಲ್ಯಗಳನ್ನು ಎದುರಿಸಿಕೊಂಡು ಗುರಿ ಬೆನ್ನಟ್ಟವ ಗಟ್ಟಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ನಾಯಕ ಮನು ಮತ್ತು ಕಿಟ್ಟಿ ಹೈವೋಲ್ಟೇಜ್ ಸೀಕ್ವೆನ್ಸ್ ಸಿನಿಮಾದಲ್ಲಿದೆ. ಮಂಜು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುವುದರ ಜೊತೆಗೆ ಕಾರ್ಯಕಾರಿ ನಿರ್ಮಾಪಕನಾಗಿ, ಕಲಾ ವಿನ್ಯಾಸಕನಾಗಿಯೂ ತಂಡದ ಜೊತೆ ಜವಾಬ್ದಾರಿಯನ್ನ ಹಂಚಿಕೊಂಡಿದ್ದಾರೆ.
ನೈಜ ಘಟನೆ ಹಾಗೂ ಕಾಲ್ಪನಿಕತೆ ಕಥಾಹಂದರ ಸುತ್ತ ಸಾಗುವ ದೂರದರ್ಶನ ಸಿನಿಮಾದಲ್ಲಿ ಪೃಥ್ವಿ ಅಂಬರ್ ನಾಯಕನಾಗಿ ನಟಿಸಿದ್ದು, ಅಯಾನಾ ನಾಯಕಿಯಾಗಿ ಅಭಿನಯಿಸಿದ್ದಾರೆ. ಉಳಿದಂತೆ ಹರಿಣಿ, ದೀಪಕ್ ರೈ ಪಾಣಾಜೆ, ರಘು ರಮಣಕೊಪ್ಪ, ಹುಲಿ ಕಾರ್ತಿಕ್, ಸೂರಜ್ ಮಂಗಳೂರು, ಸೂರ್ಯ ಕುಂದಾಪುರ ಸೇರಿದಂತೆ ಮತ್ತಿತರ ತಾರಾಗಣ ಸಿನಿಮಾದಲ್ಲಿದೆ.
ಸುಕೇಶ್ ಶೆಟ್ಟಿ ನಿರ್ದೇಶನದಲ್ಲಿ ತಯಾರಾಗುತ್ತಿರುವ “ದೂರದರ್ಶನ” ಚಿತ್ರ ಈಗಷ್ಟೇ ಡಬ್ಬಿಂಗ್ ಮುಗಿಸಿ ಶೀಘ್ರದಲ್ಲಿ ತೆರೆಗೆ ತರಲು ಚಿತ್ರ ತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸ ಗಳಲ್ಲಿ ಬ್ಯುಸಿಯಾಗಿದೆ . ಸಿನಿಮಾವನ್ನು ವಿಎಸ್ ಮೀಡಿಯಾ ಎಂಟರ್ ಪ್ರೈಸಸ್ ಬ್ಯಾನರ್ ನಡಿ ರಾಜೇಶ್ ಭಟ್ ನಿರ್ಮಾಣ ಮಾಡಿದ್ದಾರೆ.
ವಾಸುಕಿ ವೈಭವ್ ಸಂಗೀತ ಸಂಯೋಜನೆ, ಅರುಣ್ ಸುರೇಶ್ ಕ್ಯಾಮೆರಾ ವರ್ಕ್, ನಂದೀಶ್ ಟಿಜಿ ಸಂಭಾಷಣೆ, ಪ್ರದೀಪ್ ಆರ್ ರಾವ್ ಸಂಕಲನ ಸಿನಿಮಾಕ್ಕಿದೆ. ದೂರದರ್ಶನ ಸಿನಿಮಾದಲ್ಲಿ ನಾಲ್ಕು ಹಾಡುಗಳು, ಎರಡು ಫೈಟ್ ಸೀನ್ಸ್ ಗಳಿದ್ದು, ಹೊಡೆದಾಟದ ದೃಶ್ಯಗಳನ್ನು ನೈಜ ರೀತಿಯಲ್ಲಿ ಚಿತ್ರೀಕರಿಸಲಾಗಿದೆ. ಶೀರ್ಘದಲ್ಲಿಯೇ ಚಿತ್ರತಂಡ ತೆರೆಗೆ ಬರಲು ಸಜ್ಜಾಗುತ್ತಿದೆ.
ಕೆಜಿಎಫ್ ಸಿನಿಮಾ ಮೂಲಕ ಖ್ಯಾತಿಗಳಿಸಿರುವ ಕೆಜಿಎಫ್ ತಾತಾ ಎಂದೇ ಕರೆಸಿಕೊಳ್ಳೋ ಕೃಷ್ಣಾಜಿ ರಾವ್ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಈಗ ಫುಲ್ ಬ್ಯುಸಿ. ‘ನ್ಯಾನೋ ನಾರಾಯಣಪ್ಪ’ ಸಿನಿಮಾದಲ್ಲಿ ಕೃಷ್ಣ ಜಿ ರಾವ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದು ಬಿಡುಗಡೆಯ ಬಾಗಿಲಲ್ಲಿರುವ ಈ ಚಿತ್ರದ ಟ್ರೇಲರ್ ರಿಲೀಸ್ ಆಗಿದೆ.
‘ಕೆಮಿಸ್ಟ್ರಿ ಆಫ್ ಕರಿಯಪ್ಪ’, ‘ಕ್ರಿಟಿಕಲ್ ಕೀರ್ತನೆಗಳು’ ಸಿನಿಮಾ ಮೂಲಕ ಭರವಸೆ ಮೂಡಿಸಿರುವ ಕುಮಾರ್ ನಿರ್ದೇಶನ ಸಾರಥ್ಯದಲ್ಲಿ ಮೂಡಿ ಬಂದಿರುವ ಸಿನಿಮಾ ‘ನ್ಯಾನೋ ನಾರಾಯಣಪ್ಪ’. ಚಿತ್ರದ ಮುಖ್ಯ ಭೂಮಿಕೆಯಲ್ಲಿ ಕೃಷ್ಣಾಜಿ ರಾವ್ ನಟಿಸಿದ್ದು. ಫಸ್ಟ್ ಲುಕ್ ಪೋಸ್ಟರ್, ಟೈಟಲ್ ಮೂಲಕ ಗಮನ ಸೆಳೆದ ಚಿತ್ರತಂಡ ಈಗ ಟ್ರೇಲರ್ ಬಿಡುಗಡೆ ಮಾಡುವ ಮೂಲಕ ನಿರೀಕ್ಷೆಯನ್ನು ಹೆಚ್ಚಿಸಿದೆ.
ಕೆಜಿಎಫ್ ನಲ್ಲಿ ಪುಟ್ಟ ಪಾತ್ರದ ಮೂಲಕ ಜನಪ್ರಿಯತೆ ಗಳಿಸಿಕೊಂಡ ಕೃಷ್ಣಾಜಿ ರಾವ್ ಈ ಚಿತ್ರದಲ್ಲಿ ಇಡೀ ಸಿನಿಮಾ ಆವರಿಸಿಕೊಂಡಿದ್ದಾರೆ. ಕುಮಾರ್ ಹಿಂದಿನ ಸಿನಿಮಾಗಳಂತೆ ಕಾಮಿಡಿ ಈ ಚಿತ್ರದ ಮೂಲ ಮಂತ್ರವಾಗಿದ್ದು ಭಾವನಾತ್ಮಕ ಅಂಶಗಳು ಸಿನಿಮಾದಲ್ಲಿವೆ ಅನ್ನೋದು ಟ್ರೇಲರ್ ನೋಡಿದ್ರೆ ಗೊತ್ತಾಗುತ್ತೆ.
ಚಿತ್ರಕ್ಕೆ ಕಥೆ ಬರೆದು ನಿರ್ದೇಶನ ಮಾಡುವುದರ ಜೊತೆಗೆ ನಿರ್ಮಾಣವನ್ನು ಮಾಡಿದ್ದಾರೆ ಕುಮಾರ್. ಕಾಮಿಡಿ ಎಮೋಷನಲ್ ಸಿನಿಮಾ ಇದಾಗಿದ್ದು, ಕುಟುಂಬ ಸಮೇತ ನೋಡಿ ಎಂಜಾಯ್ ಮಾಡಬಹುದಾದ ಸಬ್ಜೆಕ್ಟ್ ಚಿತ್ರದಲ್ಲಿದೆ. ಶಿವಶಂಕರ ಕ್ಯಾಮೆರಾ ನಿರ್ದೇಶನ, ಆಕಾಶ್ ಪರ್ವ ಸಂಗೀತ, ದೀಪು ಮತ್ತು ಸಿದ್ದಾರ್ಥ್ ನಾಯಕ ಸಂಕಲನ ಚಿತ್ರಕ್ಕಿದೆ.
ಕಾಕ್ರೋಚ್ ಸುಧಿ, ಪ್ರಶಾಂತ್ ಸಿದ್ದಿ, ಅಕ್ಷತ ಕುಕ್ಕಿ, ಅಪೂರ್ವ ಸೇರಿದಂತೆ ಪ್ರತಿಭಾನ್ವಿತ ಕಲಾವಿದರ ಬಳಗ ಚಿತ್ರದಲ್ಲಿದೆ. ಚಿತ್ರದ ಪ್ರಚಾರ ಕಾರ್ಯದಲ್ಲಿ ಸಿನಿಮಾ ತಂಡ ಬ್ಯುಸಿಯಾಗಿದ್ದು ಅಕ್ಟೋಬರ್ ನಲ್ಲಿ ಚಿತ್ರ ಬಿಡುಗಡೆಯಾಗಲಿದೆ.
ಎನ್. ಗೊಂಬೆ ಬ್ಯಾನರ್ ನಲ್ಲಿ ಪ್ರದೀಪ್ ಯಾದವ್ ನಿರ್ಮಾಣದ “ಉಸಿರೇ ಉಸಿರೇ” ಚಿತ್ರದಲ್ಲಿ ಡೈನಾಮಿಕ್ ಸ್ಟಾರ್ ದೇವರಾಜ್ ಅಭಿನಯಿಸುತ್ತಿದ್ದಾರೆ. “ಉಸಿರೇ ಉಸಿರೇ” ಚಿತ್ರತಂಡದಿಂದ ದೇವರಾಜ್ ಅವರ ಹುಟ್ಟುಹಬ್ಬವನ್ನು ಇತ್ತೀಚೆಗೆ ಆಚರಿಸಲಾಯಿತು. ಇದೇ ಸಂದರ್ಭದಲ್ಲಿ “ಉಸಿರೇ ಉಸಿರೇ” ಚಿತ್ರದಲ್ಲಿನ ದೇವರಾಜ್ ರವರ ವಿಭಿನ್ನ ಪಾತ್ರದಲ್ಲಿನ ಪೋಸ್ಟರ್ ಮತ್ತು ಮೇಕಿಂಗ್ ವಿಡಿಯೋ ಬಿಡುಗಡೆ ಮಾಡಲಾಯಿತು.
“ಬಿಗ್ ಬಾಸ್” ಖ್ಯಾತಿಯ ರಾಜೀವ್ ಈ ಚಿತ್ರದ ನಾಯಕ. ಶ್ರೀಜಿತ ನಾಯಕಿ. ತಾರಾ, ಸುಚೇಂದ್ರ ಪ್ರಸಾದ್, ರಾಜೇಶ್ ನಟರಂಗ, ಆಲಿ, ಬ್ರಹ್ಮಾನಂದಮ್,ಸಾಧುಕೋಕಿಲ, ದೇವರಾಜ್, ಮಂಜು ಪಾವಗಡ, ಜಗಪ್ಪ, ಶಿವು, ಸುಶ್ಮಿತಾ ಮುಂತಾದವರು ಇದ್ದಾರೆ. ವಿಶೇಷ ಪಾತ್ರದಲ್ಲಿ ಕಿಚ್ಚ ಸುದೀಪ್ ಅಭಿನಯಿಸುತ್ತಿದ್ದಾರೆ.
ಸಿ.ಎಂ.ವಿಜಯ್ ನಿರ್ದೇಶನದ ಈ ಚಿತ್ರಕ್ಕೆ ಮನು ಛಾಯಾಗ್ರಹಣ, ಕೆ ಎಂ ಪ್ರಕಾಶ್ ಸಂಕಲನ, ಟೈಗರ್ ಶಿವು ಸಾಹಸ ನಿರ್ದೇಶನ ಹಾಗೂ ಮೋಹನ್ ಮತ್ತು ಹೈಟ್ ಮಂಜು ಅವರ ನೃತ್ಯ ನಿರ್ದೇಶನವಿದೆ ವಿವೇಕ್ ಚಕ್ರವರ್ತಿ ಈ ಚಿತ್ರದ ಸಂಗೀತ ನಿರ್ದೇಶಕರು.
ನಿರ್ಮಾಪಕ ಕೆ.ಮಂಜು ಪುತ್ರ ಶ್ರೇಯಸ್ ನಾಯಕನಾಗಿ ನಟಿಸಿರುವ , ನಂದಕಿಶೋರ್ ನಿರ್ದೇಶನದ “ರಾಣ” ಚಿತ್ರದ “ಗಲ್ಲಿ ಬಾಯ್” ಹಾಡನ್ನು ಜೋಗಿ ಪ್ರೇಮ್ ಬಿಡುಗಡೆ ಮಾಡಿದರು. ಚಂದನ್ ಶೆಟ್ಟಿ ಬರೆದು ಸಂಗೀತ ನೀಡಿರುವ ಈ ಹಾಡನ್ನು ಅನಿರುದ್ಧ್ ಶಾಸ್ತ್ರಿ ಹಾಗೂ ಅದಿತಿ ಸಾಗರ್ ಹಾಡಿದ್ದಾರೆ. ಆನಂದ್ ಆಡಿಯೋ ಮೂಲಕ ಈ ಹಾಡು ಬಿಡುಗಡೆಯಾಗಿದೆ.
ಹಾಡು ತುಂಬಾ ಚೆನ್ನಾಗಿ ಮೂಡಿಬಂದಿದೆ. ಶ್ರೇಯಸ್ ಹಾಗೂ ರೀಷ್ಮಾ ನಾಣಯ್ಯ ಇಬ್ಬರೂ ಚೆನ್ನಾಗಿ ನೃತ್ಯ ಮಾಡಿದ್ದಾರೆ. ಚಂದನ್ ಶೆಟ್ಟಿ ಸಂಗೀತ ಸುಂದರವಾಗಿದೆ. ಅನಿರುದ್ಧ್ ಶಾಸ್ತ್ರಿ ಹಾಗೂ ಅದಿತಿ ಸಾಗರ್ ಗಾಯನ ಸುಮಧುರವಾಗಿದೆ. ನಂದ ಕಿಶೋರ್ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರ ಭರ್ಜರಿ ಯಶಸ್ಸು ಕಾಣಲಿ ಎಂದು ಜೋಗಿ ಪ್ರೇಮ್ ಹಾರೈಸಿದರು.
ಮೊದಲು ನಾನು, ನನ್ನ ಸ್ಪೂರ್ತಿಯಾದ ವಿಷ್ಣುವರ್ಧನ್ ಹಾಗೂ ಅಪ್ಪು ಅವರನ್ನು ನೆನಪಿಸಿಕೊಳ್ಳುತ್ತೇನೆ. ಚಂದನ್ ಶೆಟ್ಟಿ ಎಲ್ಲರ ಮನಸಿಗೆ ಹತ್ತಿರವಾಗುವಂತಹ ಸಾಹಿತ್ಯ ಬರೆದಿದ್ದಾರೆ. ಅಷ್ಟೇ ಚೆನ್ನಾಗಿ ಸಂಗೀತ ನೀಡಿದ್ದಾರೆ. ಅನಿರುಧ್ದ್ ಶಾಸ್ತ್ರಿ ಹಾಗೂ ಅದಿತಿ ಸಾಗರ್ ಅವರ ಅದ್ಭುತ ಗಾಯನ ಹಾಡಿನ ಅಂದವನ್ನು ಮತ್ತಷ್ಟು ಹೆಚ್ಚಿಸಿದೆ. ರೀಷ್ಮಾ ನಾಣಯ್ಯ ಒಳ್ಳೆಯ ನೃತ್ಯಗಾರ್ತಿ. ನೃತ್ಯ ನಿರ್ದೇಶಕ ಇಮ್ರಾನ್ ಮಾಸ್ಟರ್ ಹಾಗೂ ಛಾಯಾಗ್ರಾಹಕ ಶೇಖರ್ ಚಂದ್ರ ಅವರ ಕಾರ್ಯವೈಖರಿ ಚೆನ್ನಾಗಿದೆ. ನಾನು ಈ ಚಿತ್ರಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡು ಅಭಿನಯಿಸಿದ್ದೇನೆ. ನವೆಂಬರ್11 ರಂದು ಚಿತ್ರ ತೆರೆಗೆ ಬರಲಿದೆ. ಹಾಡು ಬಿಡುಗಡೆ ಮಾಡಿಕೊಟ್ಟ ಪ್ರೇಮ್ ಅವರಿಗೆ ಹಾಗೂ ಅವಕಾಶ ನೀಡಿರುವ ನಿರ್ಮಾಪಕ ಪುರುಷೋತ್ತಮ್ ಹಾಗೂ ನಿರ್ದೇಶಕ ನಂದಕಿಶೋರ್ ಅವರಿಗೆ ಧನ್ಯವಾದ ಎಂದರು ನಾಯಕ ಶ್ರೇಯಸ್.
ಚಿತ್ರ ಚೆನ್ನಾಗಿ ಬಂದಿದೆ. ಈ ಹಾಡಂತೂ ಸಖತಾಗಿದೆ. ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ ಅವರು ಬರೆದಿರುವ ಈ ಹಾಡು ಎಲ್ಲರ ಗಮನ ಸೆಳೆಯುತ್ತಿದೆ ಎಂದರು ನಾಯಕಿ ರೀಷ್ಮಾ ನಾಣಯ್ಯ.
ಗುಜ್ಜಲ್ ಪುರುಷೋತ್ತಮ್ ಅವರು ಒಂದು ಸಿನಿಮಾ ಮಾಡುತ್ತಿದ್ದೇನೆ. ನೀವು ಜೊತೆಗಿರಬೇಕು ಎಂದರು. ನನ್ನ ಮಗನೇ ಹೀರೋ ಅಂತ ತಿಳಿದ ಮೇಲೆ, ನಾನು ಅವನಿಗೆ ಚಿತ್ರ ಚೆನ್ನಾಗಿ ಬರಲು ನಿರ್ದೇಶಕರು ಕಾರಣ ಅವರು ಹೇಳಿದ ಹಾಗೆ ಕೇಳಬೇಕು ಅಂತ ಹೇಳಿದೆ. “ರಾಣ” ಒಂದೊಳ್ಳೆಯ ಕೌಟುಂಬಿಕ ಚಿತ್ರ. ಹಳ್ಳಿಯಿಂದ ನಗರಕ್ಕೆ ಬಂದು ನೆಲೆಸಿರುವವರ ಕುರಿತಾದ ಕಥೆಯಿದೆ. ನಂದಕಿಶೋರ್ ನಿರ್ದೇಶನ, ಚಂದನ್ ಶೆಟ್ಟಿ ಸಂಗೀತ ನಿರ್ದೇಶನ ಸೇರಿದಂತೆ ಎಲ್ಲರ ಕೆಲಸ ಚೆನ್ನಾಗಿದೆ. ನವೆಂಬರ್ 11 ಚಿತ್ರ ತೆರೆಗೆ ಬರುತ್ತಿದೆ ಎಂದು ತಿಳಿಸಿದ ಕೆ.ಮಂಜು, ಹಾಡು ಬಿಡುಗಡೆ ಮಾಡಲು ದೂರದ ಮುಂಬೈನಿಂದ ಬಂದ ಪ್ರೇಮ್ ಅವರಿಗೆ ಧನ್ಯವಾದ ಹೇಳಿದರು.
ಹಾಡು ಬಿಡುಗಡೆ ಮಾಡಿದ ಪ್ರೇಮ್ ಸರ್ ಗೆ ಧನ್ಯವಾದ. ಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ನವೆಂಬರ್ 11 ಬಿಡುಗಡೆಯಾಗಲಿದೆ. ತಂಡದರೆಲ್ಲಾ ಸೇರಿ ಉತ್ತಮ ಚಿತ್ರ ಮಾಡಿದ್ದೇವೆ. ಪ್ರೋತ್ಸಾಹ ನೀಡಿ ಎಂದರು ನಿರ್ದೇಶಕ ನಂದಕಿಶೋರ್.
ಕೆ.ಮಂಜು ಅವರ ಸಹಕಾರದಿಂದ ಈ ಚಿತ್ರ ನಿರ್ಮಾಣ ಮಾಡಿದ್ದೇನೆ. ಇಡೀ ತಂಡಕ್ಕೆ ನನ್ನ ಧನ್ಯವಾದ ಎಂದರು ನಿರ್ಮಾಪಕ ಗುಜ್ಜಲ್ ಪುರುಷೋತ್ತಮ್.
ನಂದಕಿಶೋರ್ ನಿರ್ದೇಶನದಲ್ಲಿ ಚಿತ್ರ ಚೆನ್ನಾಗಿ ಬಂದಿದೆ. ಹಾಡುಗಳು ಸುಂದರವಾಗಿದೆ. ಇದೇ ಮೊದಲ ಬಾರಿಗೆ ನಾನು ಹಿನ್ನೆಲೆ ಸಂಗೀತ ಕೂಡ ನೀಡಿದ್ದೇನೆ ಎಂದು ಸಂಗೀತದ ಬಗ್ಗೆ ಚಂದನ್ ಶೆಟ್ಟಿ ಮಾಹಿತಿ ನೀಡಿದರು.
ಚಿತ್ರದಲ್ಲಿ ಅಭಿನಯಿಸಿರುವ ಕೋಟೆ ಪ್ರಭಾಕರ್, ಅಶೋಕ್ , ರಘು ಹಾಗೂ ಗಾಯಕ ಅನಿರುದ್ಧ್ ಶಾಸ್ತ್ರಿ ಚಿತ್ರದ ಕುರಿತು ಮಾತನಾಡಿದರು. ಕೇಶವ್ ಇದ್ದರು.
ಸಿನಿಮಾ ಅನ್ನೋದು ಅದ್ಭುತ ಪ್ರತಿಕ್ರಿಯೆ. ಸಿನಿಮಾ ಪ್ರೀತಿ ಮಾಡೋರಿಗೆ ಸದಾ ಅದರದ್ದೇ ಧ್ಯಾನ. ಕನ್ನಡ ಚಿತ್ರರಂಗ ಈಗ ಭಾರತೀಯ ಚಿತ್ರರಂಗದಲ್ಲಿ ಗಟ್ಟಿ ನೆಲೆ ಕಂಡುಕೊಂಡಿದೆ. ಇಡೀ ಭಾರತೀಯ ಸಿನಿಮಾರಂಗವೇ ಹಾಗೊಮ್ಮೆ ಇತ್ತ ಕಣ್ಣಾಯಿಸುವಂತೆ ಮಾಡಿದ್ದು ಸುಳ್ಳಲ್ಲ. ಇಲ್ಲಿ ಸಿನಿಮಾ ಮಾಡೋದು ಎಷ್ಟು ಕಷ್ಟ-ಇಷ್ಟ ಅನ್ನೋದು ಅಲ್ಲಿ ಅನುಭವಿಸಿದವರಿಗಷ್ಟೇ ಗೊತ್ತು. ಸಿನಿಮಾ ಮಾಡೋದು ದೊಡ್ಡದ್ದಲ್ಲ. ಅದನ್ನು ರಿಲೀಸ್ ಮಾಡಿ, ವ್ಯಾಪಾರ ವಹಿವಾಟು ನಡೆಸೋದು ಮುಖ್ಯ. ಅದೆಷ್ಟೋ ಸಿನಿಮಾಗಳು ತಯಾರಾಗಿ ರಿಲೀಸ್ ಅಗದೆ ಇಂದಿಗೂ ಆ ಪ್ರಯತ್ನದಲ್ಲಿವೆ. ಹಾಕಿದ ಹಣ ವಾಪಾಸ್ ಪಡೆಯೋದು ಕಷ್ಟ ಅನಿಸಿರುವ ಈ ಸಂದರ್ಭದಲ್ಲೊಂದು ಕನ್ನಡ ಸಿನಿಮಾ ನಿರ್ಮಾಪಕ, ನಿರ್ದೇಶಕರಿಗೆ ಖುಷಿಯ ಸುದ್ದಿಯೊಂದು ಹೊರಬಿದ್ದಿದೆ.
ಹೌದು, ಕನ್ನಡದ ಸದಭಿರುಚಿಯ ಸಿನಿಮಾಗಳನ್ನು ಖರೀದಿಸಿ, ಅವುಗಳಿಗೆ ಪ್ರಚಾರವನ್ನೂ ಮಾಡಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವ ಮೂಲಕ ಆ ನಿರ್ಮಾಪಕರಿಗೆ ಸಾಥ್ ನೀಡುವ ಸಂಸ್ಥೆಯೊಂದು ಹುಟ್ಟುಕೊಂಡಿದೆ. ಅಂದಹಾಗೆ, ಅದು ‘ಮನೀಶ್ ಅಂಡ್ ಮಿತ್ರ ಎಂಟರ್ ಟೈನ್ಮೆಂಟ್’ ಸಂಸ್ಥೆ. ಇದು ಕನ್ನಡ ಸಿನಿ ಜಗತ್ತಿನಲ್ಲಿ ಆರಂಭಗೊಂಡ ಹೊಸ ಸಂಸ್ಥೆ.
ಇದು ಕನ್ಮಡದ ಹಾಸ್ಯ ನಟ ಮಿತ್ರ ಅವರ ಸಾರಥ್ಯದಲ್ಲಿ ಉದ್ಯಮಿ ಮನೀಶ್ ಮೆಹ್ತಾ ಮತ್ತು ಗೆಳೆಯರು ಸೇರಿ ಮಾಡಿರುವ ಸಂಸ್ಥೆ. ‘ಮನೀಶ್ ಅಂಡ್ ಮಿತ್ರ ಎಂಟರ್ ಟೈನ್ಮೆಂಟ್ ‘ ಎಂಬ ಬ್ಯಾನರ್ ಮೂಲಕ ಸದಭಿರುಚಿಯ ಸಿನಿಮಾಗಳ ರೈಟ್ಸ್ , ಅವುಗಳ ವಿತರಣೆ, ರಿಲೀಸ್ ಹೊಣೆ ಹಾಗು ಸಿನಿಮಾ ನಿರ್ಮಾಣ ಆಗಲಿದೆ. ಪ್ರಮುಖವಾಗಿ ಈ ಸಂಸ್ಥೆಯ ಉದ್ದೇಶ, ಕಂಟೆಂಟ್ ಮತ್ತು ಗುಣಮಟ್ಟದ ಸಿನಿಮಾಗಳ ರೈಟ್ಸ್ ಪಡೆದು ರಿಲೀಸ್ ಮಾಡುವ ಕೆಲಸಕ್ಕೆ ಕೈ ಹಾಕಿದೆ. ತಯಾರಾದ ಚಿತ್ರಗಳು, ತಯಾರಾಗದೆ ಸಮಸ್ಯೆಯಲ್ಲಿರುವ ಸಿನಿಮಾಗಳಿಗೂ ಸಾಥ್ ನೀಡುವ ಕೆಲಸ ಮಾಡಲು ಈ ಸಂಸ್ಥೆ ಮುಂದಾಗಿದೆ.
ಮನೀಶ್ ಮೆಹ್ತಾ ಸಂಸ್ಥೆ ಮುಖ್ಯಸ್ಥ
ಈಗಾಗಲೇ ನಾಗತಿಹಳ್ಳಿ ಸಿನಿ ಕ್ರಿಯೇಷನ್ಸ್ ನಡಿ ತಯಾರಾಗಿರುವ ‘ ಡೈಮಂಡ್ ಕ್ರಾಸ್’ ಎಂಬ ಜಾಕಿಚಾನ್ ಮಾದರಿಯ ಕನ್ನಡದ ಆಕ್ಷನ್ ಸಿನಿಮಾವೊಂದರ ರೈಟ್ಸ್ ಪಡೆದು ರಿಲೀಸ್ ಮಾಡಲು ಮುಂದಾಗಿದೆ. ಇದರೊಂದಿಗೆ ಇನ್ನೂ ಹನ್ನೊಂದು ಸಿನಿಮಾಗಳ ರೈಟ್ಸ್ ಪಡೆದು ರಿಲೀಸ್ ಮಾಡುವ ತಯಾರಿಯಲ್ಲಿದೆ. ‘ಡೈಮಂಡ್ ಕ್ರಾಸ್’ ಚಿತ್ರವನ್ನು ನಾಗತಿಹಳ್ಳಿ ಅವರ ಅಕ್ಕನ ಮಗ ರಾಮ್ ದೀಪ್ ನಿರ್ದೇಶನ ಮಾಡಿದ್ದಾರೆ. ಉತ್ತರ ಕರ್ನಾಟಕದ ಪ್ರತಿಭೆ ಧ್ರುವ , ರೋಜರ್ ನಾರಾಯಣ್ ಸೇರಿದಂತೆ ಹಲವರು ಸಿನಿಮಾದಲ್ಲಿದ್ದಾರೆ. ಕನ್ನಡಕ್ಕೆ ಈ ರೀತಿಯ ಒಂದು ಫ್ಲಾಟ್ ಫಾರಂ ಕೊರತೆ ಇತ್ತು. ಅದನ್ನು ಮನೀಶ್ ಅಂಡ್ ಮಿತ್ರ ಎಂಟರ್ ಟೈನ್ಮೆಂಟ್ ಸಂಸ್ಥೆ ದೊಡ್ಡ ಪ್ರಯತ್ನಕ್ಕೆ ಮುಂದಾಗಿದೆ.
ಈಗ ಸಿನಿಮಾ ಮಾಡಿ ರಿಲೀಸ್ ಮಾಡೋದು ಕಷ್ಟ ಸಾಧ್ಯ. ಅದರಲ್ಲೂ ಹಾಕಿದ ಬಂಡವಾಳ ಹಿಂದಕ್ಕೆ ಬಂದರೆ ಅದೇ ಗೆಲುವು. ಇಂತಹದರಲ್ಲಿ ಹೊಸಬರ ಕಂಟೆಂಟ್ ಸಿನಿಮಾಗಳು ಬಿಡುಗಡೆಗೆ, ವ್ಯಾಪಾರಕ್ಕೆ ಅಲೆದಾಡುವ ಸ್ಥಿತಿ ಇದೆ. ಅದನ್ನು ಗಮನದಲ್ಲಿಟ್ಟುಕೊಂಡು ಈ ಸಂಸ್ಥೆ ಸಿನಿಮಾಗಳ ಖರೀದಿಸಿ, ಬಿಡುಗಡೆ ಮಾಡುವ ಉದ್ದೇಶ ಹೊಂದಿದೆ.
ಇನ್ನು, ಎಲ್ಲಾ ಸಿನಿಮಾಗಳ ರೈಟ್ಸ್ ಅಸಾಧ್ಯ. ಇಲ್ಲೂ ಕೆಲ ಮಾನದಂಡಗಳಿವೆ. ಸಂಸ್ಥೆಯ ಮುಖ್ಯಸ್ಥ ಮನೀಶ್ ಅವರು ಹೇಳುವಂತೆ, ಸದಭಿರುಚಿಯ ಸಿನಿಮಾಗಳನ್ನು ಖರೀದಿಸಿ, ಅವರ ಸಿನಿಮಾಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡಬೇಕಿದೆ. ಈ ನಿಟ್ಟಿನಲ್ಲಿ ನಮ್ಮ ಸಂಸ್ಥೆಯ ನಟ ಮಿತ್ರ ಅವರು ಸಿನಿಮಾ ವೀಕ್ಷಿಸಿ, ಅದರ ಕಂಟೆಂಟ್ ಹಾಗು ಕ್ವಾಲಿಟಿ ಪರಿಶೀಲಿಸಿ, ಅದು ಚೆನ್ನಾಗಿದೆ ಎಂದು ಸರ್ಟಿಫಿಕೆಟ್ ಕೊಟ್ಟ ಬಳಿಕವೇ ಆ ಸಿನಿಮಾ ರೈಟ್ಸ್ ಇತ್ಯಾದಿ ಬಗ್ಗೆ ಅಂತಿಮಗೊಳಿಸಲಾಗುತ್ತದೆ ಎನ್ನುತ್ತಾರೆ.
ಮಿತ್ರ ಅವರ ಪ್ರಕಾರ, ಈ ವೇದಿಕೆ ಹುಟ್ಟುಹಾಕಿದ್ದೇ, ಹೊಸ ಪ್ರತಿಭೆಗಳಿಗಂತೆ. ಸಿನಿಮಾ ಮಾಡಿ ರಿಲೀಸ್ ಮಾಡಲಾಗದೆ, ವ್ಯಾಪಾರ ಮಾಡಲಾಗದೆ ಅಸಹಾಯಕರಾಗುವ ನಿರ್ಮಾಪಕರಿಗೆ ಸಾಥ್ ನೀಡಬೇಕೆಂಬ ಉದ್ದೇಶದಿಂದ. ಅದೀಗ ಸಾಕಾರವಾಗುತ್ತಿದೆ. ಈ ವೇದಿಕೆ ಮೂಲಕ ಕನ್ನಡದ ಒಂದಷ್ಟು ಪ್ರತಿಭಾವಂತರನ್ನು ಗಟ್ಟಿಗೊಳಿಸುವ ಸಣ್ಣ ಪ್ರಯತ್ನ ನಮ್ಮದು ಎನ್ನುತ್ತಾರೆ.
ಅದೇನೆ ಇರಲಿ, ಒಳ್ಳೆಯ ಸಿನಿಮಾಗಳು ಜನರಿಗೆ ತಲುಪಬೇಕೆಂಬ ಉದ್ದೇಶ ಈ ಸಂಸ್ಥೆಯದ್ದು. ಈಗಷ್ಟೇ ತನ್ನ ಕಾರ್ಯಕ್ಕೆ ಕೈ ಹಾಕಿರುವ ಈ ಸಂಸ್ಥೆ ಕನ್ನಡದ ಒಂದಷ್ಟು ನಿರ್ಮಾಪಕರಿಗೆ ಸಾಥ್ ನೀಡಲಿ ಅನ್ನೋದು ‘ಸಿನಿಲಹರಿ’ ಆಶಯ.