ಸಿನಿಮಾ ಅನ್ನೋದು ಅದ್ಭುತ ಪ್ರತಿಕ್ರಿಯೆ. ಸಿನಿಮಾ ಪ್ರೀತಿ ಮಾಡೋರಿಗೆ ಸದಾ ಅದರದ್ದೇ ಧ್ಯಾನ. ಕನ್ನಡ ಚಿತ್ರರಂಗ ಈಗ ಭಾರತೀಯ ಚಿತ್ರರಂಗದಲ್ಲಿ ಗಟ್ಟಿ ನೆಲೆ ಕಂಡುಕೊಂಡಿದೆ. ಇಡೀ ಭಾರತೀಯ ಸಿನಿಮಾರಂಗವೇ ಹಾಗೊಮ್ಮೆ ಇತ್ತ ಕಣ್ಣಾಯಿಸುವಂತೆ ಮಾಡಿದ್ದು ಸುಳ್ಳಲ್ಲ. ಇಲ್ಲಿ ಸಿನಿಮಾ ಮಾಡೋದು ಎಷ್ಟು ಕಷ್ಟ-ಇಷ್ಟ ಅನ್ನೋದು ಅಲ್ಲಿ ಅನುಭವಿಸಿದವರಿಗಷ್ಟೇ ಗೊತ್ತು. ಸಿನಿಮಾ ಮಾಡೋದು ದೊಡ್ಡದ್ದಲ್ಲ. ಅದನ್ನು ರಿಲೀಸ್ ಮಾಡಿ, ವ್ಯಾಪಾರ ವಹಿವಾಟು ನಡೆಸೋದು ಮುಖ್ಯ. ಅದೆಷ್ಟೋ ಸಿನಿಮಾಗಳು ತಯಾರಾಗಿ ರಿಲೀಸ್ ಅಗದೆ ಇಂದಿಗೂ ಆ ಪ್ರಯತ್ನದಲ್ಲಿವೆ. ಹಾಕಿದ ಹಣ ವಾಪಾಸ್ ಪಡೆಯೋದು ಕಷ್ಟ ಅನಿಸಿರುವ ಈ ಸಂದರ್ಭದಲ್ಲೊಂದು ಕನ್ನಡ ಸಿನಿಮಾ ನಿರ್ಮಾಪಕ, ನಿರ್ದೇಶಕರಿಗೆ ಖುಷಿಯ ಸುದ್ದಿಯೊಂದು ಹೊರಬಿದ್ದಿದೆ.
ಹೌದು, ಕನ್ನಡದ ಸದಭಿರುಚಿಯ ಸಿನಿಮಾಗಳನ್ನು ಖರೀದಿಸಿ, ಅವುಗಳಿಗೆ ಪ್ರಚಾರವನ್ನೂ ಮಾಡಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವ ಮೂಲಕ ಆ ನಿರ್ಮಾಪಕರಿಗೆ ಸಾಥ್ ನೀಡುವ ಸಂಸ್ಥೆಯೊಂದು ಹುಟ್ಟುಕೊಂಡಿದೆ. ಅಂದಹಾಗೆ, ಅದು ‘ಮನೀಶ್ ಅಂಡ್ ಮಿತ್ರ ಎಂಟರ್ ಟೈನ್ಮೆಂಟ್’ ಸಂಸ್ಥೆ. ಇದು ಕನ್ನಡ ಸಿನಿ ಜಗತ್ತಿನಲ್ಲಿ ಆರಂಭಗೊಂಡ ಹೊಸ ಸಂಸ್ಥೆ.
ಇದು ಕನ್ಮಡದ ಹಾಸ್ಯ ನಟ ಮಿತ್ರ ಅವರ ಸಾರಥ್ಯದಲ್ಲಿ ಉದ್ಯಮಿ ಮನೀಶ್ ಮೆಹ್ತಾ ಮತ್ತು ಗೆಳೆಯರು ಸೇರಿ ಮಾಡಿರುವ ಸಂಸ್ಥೆ. ‘ಮನೀಶ್ ಅಂಡ್ ಮಿತ್ರ ಎಂಟರ್ ಟೈನ್ಮೆಂಟ್ ‘ ಎಂಬ ಬ್ಯಾನರ್ ಮೂಲಕ ಸದಭಿರುಚಿಯ ಸಿನಿಮಾಗಳ ರೈಟ್ಸ್ , ಅವುಗಳ ವಿತರಣೆ, ರಿಲೀಸ್ ಹೊಣೆ ಹಾಗು ಸಿನಿಮಾ ನಿರ್ಮಾಣ ಆಗಲಿದೆ. ಪ್ರಮುಖವಾಗಿ ಈ ಸಂಸ್ಥೆಯ ಉದ್ದೇಶ, ಕಂಟೆಂಟ್ ಮತ್ತು ಗುಣಮಟ್ಟದ ಸಿನಿಮಾಗಳ ರೈಟ್ಸ್ ಪಡೆದು ರಿಲೀಸ್ ಮಾಡುವ ಕೆಲಸಕ್ಕೆ ಕೈ ಹಾಕಿದೆ. ತಯಾರಾದ ಚಿತ್ರಗಳು, ತಯಾರಾಗದೆ ಸಮಸ್ಯೆಯಲ್ಲಿರುವ ಸಿನಿಮಾಗಳಿಗೂ ಸಾಥ್ ನೀಡುವ ಕೆಲಸ ಮಾಡಲು ಈ ಸಂಸ್ಥೆ ಮುಂದಾಗಿದೆ.
ಈಗಾಗಲೇ ನಾಗತಿಹಳ್ಳಿ ಸಿನಿ ಕ್ರಿಯೇಷನ್ಸ್ ನಡಿ ತಯಾರಾಗಿರುವ ‘ ಡೈಮಂಡ್ ಕ್ರಾಸ್’ ಎಂಬ ಜಾಕಿಚಾನ್ ಮಾದರಿಯ ಕನ್ನಡದ ಆಕ್ಷನ್ ಸಿನಿಮಾವೊಂದರ ರೈಟ್ಸ್ ಪಡೆದು ರಿಲೀಸ್ ಮಾಡಲು ಮುಂದಾಗಿದೆ. ಇದರೊಂದಿಗೆ ಇನ್ನೂ ಹನ್ನೊಂದು ಸಿನಿಮಾಗಳ ರೈಟ್ಸ್ ಪಡೆದು ರಿಲೀಸ್ ಮಾಡುವ ತಯಾರಿಯಲ್ಲಿದೆ.
‘ಡೈಮಂಡ್ ಕ್ರಾಸ್’ ಚಿತ್ರವನ್ನು ನಾಗತಿಹಳ್ಳಿ ಅವರ ಅಕ್ಕನ ಮಗ ರಾಮ್ ದೀಪ್ ನಿರ್ದೇಶನ ಮಾಡಿದ್ದಾರೆ. ಉತ್ತರ ಕರ್ನಾಟಕದ ಪ್ರತಿಭೆ ಧ್ರುವ , ರೋಜರ್ ನಾರಾಯಣ್ ಸೇರಿದಂತೆ ಹಲವರು ಸಿನಿಮಾದಲ್ಲಿದ್ದಾರೆ. ಕನ್ನಡಕ್ಕೆ ಈ ರೀತಿಯ ಒಂದು ಫ್ಲಾಟ್ ಫಾರಂ ಕೊರತೆ ಇತ್ತು. ಅದನ್ನು ಮನೀಶ್ ಅಂಡ್ ಮಿತ್ರ ಎಂಟರ್ ಟೈನ್ಮೆಂಟ್ ಸಂಸ್ಥೆ ದೊಡ್ಡ ಪ್ರಯತ್ನಕ್ಕೆ ಮುಂದಾಗಿದೆ.
ಈಗ ಸಿನಿಮಾ ಮಾಡಿ ರಿಲೀಸ್ ಮಾಡೋದು ಕಷ್ಟ ಸಾಧ್ಯ. ಅದರಲ್ಲೂ ಹಾಕಿದ ಬಂಡವಾಳ ಹಿಂದಕ್ಕೆ ಬಂದರೆ ಅದೇ ಗೆಲುವು. ಇಂತಹದರಲ್ಲಿ ಹೊಸಬರ ಕಂಟೆಂಟ್ ಸಿನಿಮಾಗಳು ಬಿಡುಗಡೆಗೆ, ವ್ಯಾಪಾರಕ್ಕೆ ಅಲೆದಾಡುವ ಸ್ಥಿತಿ ಇದೆ. ಅದನ್ನು ಗಮನದಲ್ಲಿಟ್ಟುಕೊಂಡು ಈ ಸಂಸ್ಥೆ ಸಿನಿಮಾಗಳ ಖರೀದಿಸಿ, ಬಿಡುಗಡೆ ಮಾಡುವ ಉದ್ದೇಶ ಹೊಂದಿದೆ.
ಇನ್ನು, ಎಲ್ಲಾ ಸಿನಿಮಾಗಳ ರೈಟ್ಸ್ ಅಸಾಧ್ಯ. ಇಲ್ಲೂ ಕೆಲ ಮಾನದಂಡಗಳಿವೆ. ಸಂಸ್ಥೆಯ ಮುಖ್ಯಸ್ಥ ಮನೀಶ್ ಅವರು ಹೇಳುವಂತೆ, ಸದಭಿರುಚಿಯ ಸಿನಿಮಾಗಳನ್ನು ಖರೀದಿಸಿ, ಅವರ ಸಿನಿಮಾಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡಬೇಕಿದೆ. ಈ ನಿಟ್ಟಿನಲ್ಲಿ ನಮ್ಮ ಸಂಸ್ಥೆಯ ನಟ ಮಿತ್ರ ಅವರು ಸಿನಿಮಾ ವೀಕ್ಷಿಸಿ, ಅದರ ಕಂಟೆಂಟ್ ಹಾಗು ಕ್ವಾಲಿಟಿ ಪರಿಶೀಲಿಸಿ, ಅದು ಚೆನ್ನಾಗಿದೆ ಎಂದು ಸರ್ಟಿಫಿಕೆಟ್ ಕೊಟ್ಟ ಬಳಿಕವೇ ಆ ಸಿನಿಮಾ ರೈಟ್ಸ್ ಇತ್ಯಾದಿ ಬಗ್ಗೆ ಅಂತಿಮಗೊಳಿಸಲಾಗುತ್ತದೆ ಎನ್ನುತ್ತಾರೆ.
ಮಿತ್ರ ಅವರ ಪ್ರಕಾರ, ಈ ವೇದಿಕೆ ಹುಟ್ಟುಹಾಕಿದ್ದೇ, ಹೊಸ ಪ್ರತಿಭೆಗಳಿಗಂತೆ. ಸಿನಿಮಾ ಮಾಡಿ ರಿಲೀಸ್ ಮಾಡಲಾಗದೆ, ವ್ಯಾಪಾರ ಮಾಡಲಾಗದೆ ಅಸಹಾಯಕರಾಗುವ ನಿರ್ಮಾಪಕರಿಗೆ ಸಾಥ್ ನೀಡಬೇಕೆಂಬ ಉದ್ದೇಶದಿಂದ. ಅದೀಗ ಸಾಕಾರವಾಗುತ್ತಿದೆ. ಈ ವೇದಿಕೆ ಮೂಲಕ ಕನ್ನಡದ ಒಂದಷ್ಟು ಪ್ರತಿಭಾವಂತರನ್ನು ಗಟ್ಟಿಗೊಳಿಸುವ ಸಣ್ಣ ಪ್ರಯತ್ನ ನಮ್ಮದು ಎನ್ನುತ್ತಾರೆ.
ಅದೇನೆ ಇರಲಿ, ಒಳ್ಳೆಯ ಸಿನಿಮಾಗಳು ಜನರಿಗೆ ತಲುಪಬೇಕೆಂಬ ಉದ್ದೇಶ ಈ ಸಂಸ್ಥೆಯದ್ದು. ಈಗಷ್ಟೇ ತನ್ನ ಕಾರ್ಯಕ್ಕೆ ಕೈ ಹಾಕಿರುವ ಈ ಸಂಸ್ಥೆ ಕನ್ನಡದ ಒಂದಷ್ಟು ನಿರ್ಮಾಪಕರಿಗೆ ಸಾಥ್ ನೀಡಲಿ ಅನ್ನೋದು ‘ಸಿನಿಲಹರಿ’ ಆಶಯ.