Categories
ಸಿನಿ ಸುದ್ದಿ

ಬಿರಾದಾರ್ ಈಗ ಹೀರೋ!90 ಬಿಡಿ ಮನೀಗ್ ನಡಿ ಇದು ಅವರ 500 ನೇ ಚಿತ್ರ…

ಎಪ್ಪತ್ತರ ವಯಸ್ಸಿನಲ್ಲೂ ಇಪ್ತತ್ತರ ಯುವಕನ ಉತ್ಸಾಹ ಹೊಂದಿರುವ, ತಮ್ಮ ಕಾಮಿಡಿ ಪಾತ್ರಗಳ ಮೂಲಕ ಕನ್ನಡಿಗರ ಮನ ಗೆದ್ದಿರುವ ಬಿರಾದಾರ್ ನಾಯಕನಾಗಿ ಅಭಿನಯಿಸಿರುವ ಚಿತ್ರ “90 ಬಿಡಿ ಮನೀಗ್ ನಡಿ”. ಇದು ಅವರ ನಟನೆಯ 500ನೇ ಚಿತ್ರವೂ ಹೌದು.‌

ಉಮೇಶ್ ಬಾದರದಿನ್ನಿ ಹಾಗೂ ನಾಗರಾಜ ಅರೆಹೊಳೆ ಕಥೆ ಬರೆದು, ಜಂಟಿಯಾಗಿ ನಿರ್ದೇಶಿಸಿರುವ ಈ ಚಿತ್ರಕ್ಕೆ ರತ್ನಮಾಲ ಬಾದರದಿನ್ನಿ ನಿರ್ಮಾಪಕರು.

ಉತ್ತಮ ಸಂದೇಶ ಹೇಳುವಂತ ಕಥಾಹಂದರವನ್ನಿಟ್ಟುಕೊಂಡು ಉತ್ತರ ಕರ್ನಾಟಕ ಶೈಲಿಯಲ್ಲಿ ಕಥೆ ಹೇಳಲು ಹೊರಟ್ಟಿದ್ದೇವೆ. 80 ಭಾಗದಷ್ಟು ಸಂಭಾಷಣೆ ಉತ್ತರ ಕರ್ನಾಟಕ ಶೈಲಿಯಲ್ಲಿರುತ್ತದೆ. ಹಾಗಾಗಿ ನಮಗೆ ಉತ್ತರ ಕರ್ನಾಟಕದ ಕಲಾವಿದನೇ ಬೇಕಾಗಿತ್ತು. ಆಗ ಬಿರಾದಾರ್ ಅವರನ್ನು ಆಯ್ಕೆ ಮಾಡಿಕೊಂಡೆವು.‌ ಅವರ 500 ನೇ ಚಿತ್ರವನ್ನು ನಿರ್ದೇಶಿಸುತ್ತಿರುವುದು ಸಂತೋಷವಾಗಿದೆ ಎನ್ನುತ್ತಾರೆ ನಿರ್ದೇಶಕರಾದ ಉಮೇಶ್ ಬಾದರದಿನ್ನಿ ಹಾಗೂ ನಾಗರಾಜ ಅರೆಹೊಳೆ.

500ಚಿತ್ರಗಳಲ್ಲಿ ಅಭಿನಯಿಸಿದ್ದಿನೆಂದರೆ ಅದಕ್ಕೆ ರಂಗಭೂಮಿ ಹಾಗೂ ಚಿತ್ರರಂಗದವರ ಪ್ರೋತ್ಸಾಹವೇ ಕಾರಣ. ಈ ಚಿತ್ರದಲ್ಲಿ
ಊದಿನ ಕಡ್ಡಿ ಮಾರುವವನ ಪಾತ್ರ ನನ್ನದು. ನನಗೆ ಕುಡಿತದ ಚಟ ಇರುತ್ತದೆ. ಒಬ್ಬ ಹೆಂಗಸಿನ ಪರಿಚಯವಾಗುತ್ತದೆ. ಆನಂತರ ಸಾಕಷ್ಟು ತಿರುವುಗಳಿರುತ್ತದೆ. ಅದನ್ನು ಸಿನಿಮಾದಲ್ಲೇ ನೋಡಬೇಕು. ನಾಟಕದಲ್ಲಿ ಹಾಗೋಹೀಗೋ ಕುಣಿಯುತ್ತಿದ್ದೆ. ಈ ಚಿತ್ರದಲ್ಲಿ ಹಾಡೊಂದಕ್ಕೆ ಪೂರ್ಣಪ್ರಮಾಣದಲ್ಲಿ ನೃತ್ಯ ಮಾಡಿದ್ದೇನೆ. ಭೂಷಣ್ ಮಾಸ್ಟರ್ ಮಾಡಿಸಿದ್ದಾರೆ. ಈ ಹಾಡನ್ನು ನಟ ಶರಣ್ ಮೆಚ್ಚಿಕೊಂಡಿದ್ದಾರೆ ಎಂದು ತಮ್ಮ ಪಾತ್ರ ಹಾಗೂ ಚಿತ್ರದ ಬಗ್ಗೆ ವೈಜನಾಥ್ ಬಿರಾದಾರ್ ವಿವರಿಸಿದರು.

ವೃತ್ತಿ ರಂಗಭೂಮಿಯಲ್ಲಿ ಚಿಕ್ಕ ವಯಸ್ಸಿನಿಂದ ನಾಟಕ ಮಾಡಿಕೊಂಡು ಬಂದಿದ್ದೀನಿ. ಮೊದಲ ಬಾರಿಗೆ ಬಿರಾದಾರ್‌ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದೀನಿ. ಈ ಚಿತ್ರದಲ್ಲಿ ವೇಶ್ಯೆ ಪಾತ್ರ ಮಾಡಿದ್ದೇನೆ. ನಾಯಕನನ್ನು ದುಶ್ಚಟಗಳಿಂದ ದೂರ ಮಾಡುತ್ತೇನೆ ಎಂದು ನಾಯಕಿ ನೀತಾ ಪಾತ್ರದ ಬಗ್ಗೆ
ಹೇಳಿದರು.

ಬಿರಾದಾರ್ ಅವರಲ್ಲಿ ವಿಶೇಷ ಶಕ್ತಿ ಇದೆ.ಈ ವಯಸ್ಸಿನಲ್ಲಿ ಅವರು ಈ ರೀತಿ ನೃತ್ಯ ಮಾಡಿದ್ದು ನೋಡಿ ಕಣ್ಣೀರು ಬಂತು. ನನ್ನದು ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿ ಪಾತ್ರ ಎಂದರು ನಟ ಧರ್ಮ.

500ನೇ ಸಿನಿಮಾ ಆದರೂ ಮೊದಲ ಚಿತ್ರದ ಹುಮ್ಮಸಿನಲ್ಲಿ ಬಿರಾದಾರ್ ಅಭಿನಯಿಸಿದ್ದಾರೆ. ಉತ್ತರ ಕರ್ನಾಟಕ ಸೊಗಡಿನ ಚಿತ್ರ. ನಾನು ಈ ಚಿತ್ರದಲ್ಲಿ ಅಭಿನಯಿಸಿರುವುದು ಖುಷಿಯಾಗಿದೆ ಎಂದು ಕರಿಸುಬ್ಬು ತಿಳಿಸಿದರು.

ಹಾಡನ್ನು ಬರೆದು ಸಂಗೀತ ನೀಡಿರುವ ಶಿವು ಭೇರಗಿ, ಗಾಯಕ ರವೀಂದ್ರ ಸೊರಗಾವಿ ಹಾಗೂ ಹಿನ್ನೆಲೆ ಸಂಗೀತ ನೀಡಿರುವ ವೀರ ಸಮರ್ಥ್ ಚಿತ್ರದ ಕುರಿತು ಮಾತನಾಡಿದರು.

Categories
ಸಿನಿ ಸುದ್ದಿ

ಸೂಪರ್ ಸ್ಟಾರ್ : ಇದು ರಮಾಸ್ ಮೀಡಿಯಾ ಕ್ರಿಯೇಷನ್ಸ್ ಸಿನಿಮಾ- ನಿರಂಜನ್ ಸುಧೀಂದ್ರ ಹೀರೋ…

ಕನ್ನಡ ಚಿತ್ರಗಳು ಈಗ ವಿಶ್ವದಾದ್ಯಂತ ಜನಪ್ರಿಯ. ಕನ್ನಡ ಚಿತ್ರಗಳ ಮೇಲೆ ಅಪಾರ ಅಭಿಮಾನವಿರುವ ನೆರೆ ರಾಜ್ಯಗಳ ನಿರ್ಮಾಣ ಸಂಸ್ಥೆಗಳು ಕನ್ನಡ ಚಿತ್ರ ನಿರ್ಮಾಣಕ್ಕೆ ಮುಂದಾಗುತ್ತಿದೆ. ಆಂದ್ರಪ್ರದೇಶದಲ್ಲಿ ಕೆಲವು ತೆಲುಗು ಚಿತ್ರಗಳನ್ನು ನಿರ್ಮಾಣ ಮಾಡಿರುವ ರಮಾ ಅವರು ತಮ್ಮ “ರಮಾಸ್ ಮೀಡಿಯಾ ಕ್ರಿಯೇಷನ್ಸ್” ಎಂಬ ನೂತನ ನಿರ್ಮಾಣ ಸಂಸ್ಥೆಯನ್ನು ಕರ್ನಾಟಕದಲ್ಲೂ ಆರಂಭಿಸಿದ್ದಾರೆ. ಸಂಸ್ಥೆಯ ಲೋಗೊ ರಿಯಲ್ ಸ್ಟಾರ್ ಉಪೇಂದ್ರ ಅವರಿಂದ ಬಿಡುಗಡೆಯಾಯಿತು. ಈ ಸಂಸ್ಥೆಯ ಮೊದಲ ಚಿತ್ರವಾಗಿ ನಿರಂಜನ್ ಸುಧೀಂದ್ರ ಅಭಿನಯದ “ಸೂಪರ್ ಸ್ಟಾರ್” ಪ್ಯಾನ್ ಇಂಡಿಯಾ ಚಿತ್ರ ನಿರ್ಮಾಣವಾಗುತ್ತಿದೆ.
ನಿವೃತ್ತ ಪೊಲೀಸ್ ಅಧಿಕಾರಿ ಸತ್ಯನಾರಾಯಣ ಹಾಗೂ ಅವರ ಮಗಳು ರಮಾ ಈ ಸಂಸ್ಥೆಯ ರುವಾರಿಗಳು.

ನಾವು ತೆಲುಗಿನಲ್ಲಿ “ರಮಾಸ್ ಮೀಡಿಯಾ ಕ್ರಿಯೇಷನ್ಸ್” ಮೂಲಕ ಕೆಲವು ಚಿತ್ರಗಳನ್ನು ನಿರ್ಮಾಣ ಮಾಡಿದ್ದೇವೆ. “ಸೂಪರ್ ಸ್ಟಾರ್” ಚಿತ್ರದ ಮೂಲಕ ನಾನು ಕನ್ನಡ ಚಿತ್ರರಂಗ ಪ್ರವೇಶಿಸಿದ್ದೇನೆ. ನಮ್ಮದು ಸಿನಿಮಾ ನಿರ್ಮಾಣವಲ್ಲದೆ ಸಾಕಷ್ಟು ಬೇರೆಬೇರೆ ಉದ್ಯಮಗಳು ಇವೆ. ಕೆಲಸದ ನಿಮಿತ್ತ ಬೆಂಗಳೂರಿಗೆ ಬಂದಾಗ ನಿರ್ದೇಶಕ ರಮೇಶ್ ವೆಂಕಟೇಶ್ ಬಾಬು ಈ ಚಿತ್ರದ ಬಗ್ಗೆ ಹೇಳಿದರು. ಕೆಲವು ಸಮಯ ತೆಗೆದುಕೊಂಡು ನಂತರ ನಿರ್ಮಾಣ ಮಾಡೋಣ ಅಂದೆ. ನಿರ್ದೇಶಕರು ಹೆಣೆದಿರುವ ಕಥೆ ನನ್ನನ್ನು ಆಕರ್ಷಿಸಿತ್ತು. ‌ ನಿರಂಜನ್ ಸುರದ್ರೂಪಿ ನಟ. ಚೆನ್ನಾಗಿ ಅಭಿನಯಿಸುತ್ತಿದ್ದಾರೆ. ನಿರ್ದೇಶಕ ಹಾಗೂ ನಾಯಕ, ಇವರಿಬ್ಬರ ಕಾಂಬಿನೇಷನ್ ನಲ್ಲಿ ಉತ್ತಮ ಚಿತ್ರ ಬರುವುದಂತೂ ಖಚಿತ. ಈ ಚಿತ್ರದ ನಂತರ ಇವರಿಬ್ಬರ ಜೋಡಿಯಲ್ಲೇ ಮತ್ತೊಂದು ಚಿತ್ರ ನಿರ್ಮಾಣ ಮಾಡುತ್ತೇನೆ. ನಮ್ಮ ಸಂಸ್ಥೆಗೆ ನಿಮ್ಮ ಬೆಂಬಲವಿರಲಿ ಎಂದರು ನಿರ್ಮಾಪಕಿ ರಮಾ. ನಿರ್ಮಾಪಕ ಸತ್ಯನಾರಾಯಣ ಅವರು ಸಹ ಚಿತ್ರ ನಿರ್ಮಾಣ ಆರಂಭವಾದ ಬಗ್ಗೆ ಮಾಹಿತಿ ನೀಡಿದರು.

ನಾನು ಹಾಗೂ ನಿರಂಜನ್ ಈ ಚಿತ್ರದ ಕುರಿತು ಮಾತನಾಡುತ್ತಿದ್ದಾಗ, ನಮಗೆ ರಮಾ ಮೇಡಮ್ ಅವರ ಪರಿಚಯವಾಯಿತು. ಅವರಿಗೆ ಕಥೆ ಹೇಳಿದಾಗ, ಕಥೆಯನ್ನು ಮೆಚ್ಚಿಕೊಂಡು ನಿರ್ಮಾಣಕ್ಕೆ ಮುಂದಾಗಿದ್ದಾರೆ. ಯಾವುದೇ ಕೊರೆತೆ ಇಲ್ಲದಂತೆ ಚಿತ್ರವನ್ನು ‌ಅದ್ದೂರಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ ಅವರಿಗೆ, ನನ್ನ ತಂಡಕ್ಕೆ ಹಾಗೂ ಚಿತ್ರ ಆರಂಭದಿಂದ ಪ್ರೋತ್ಸಾಹ ನೀಡುತ್ತಿರುವ ರಿಯಲ್ ಸ್ಟಾರ್ ಉಪೇಂದ್ರ ಅವರಿಗೆ ಧನ್ಯವಾದ . ಚಿತ್ರೀಕರಣ ಬಹುತೇಕ ಪೂರ್ಣವಾಗಿದೆ. ಚಿತ್ರ ಅಂತಿಮಹಂತದಲ್ಲಿದೆ ಎಂದು ನಿರ್ದೇಶಕ ರಮೇಶ್ ವೆಂಕಟೇಶ್ ಬಾಬು ಮಾಹಿತಿ ನೀಡಿದರು.

ನಾನು ಈ ಚಿತ್ರಕ್ಕಾಗಿ ಸಾಕಷ್ಟು ಶ್ರಮವಹಿಸುತ್ತಿದ್ದೇನೆ. ಏಕೆಂದರೆ “ಸೂಪರ್ ಸ್ಟಾರ್” ನನ್ನ ಚಿಕ್ಕಪ್ಪನ ಟೈಟಲ್. ಅವರಿಂದ ಅನುಮತಿ ಪಡೆದು ಶೀರ್ಷಿಕೆಯಿಟ್ಟಿದ್ದೇನೆ. ಆ ಹೆಸರಿಗೆ ಧಕ್ಕೆ ಬಾರದ ಹಾಗೆ ನೋಡಿಕೊಳ್ಳುವುದೇ ನನ್ನ ಮೊದಲ ಆದ್ಯತೆ. ನಮ್ಮ ಮೇಲೆ ನಂಬಿಕೆಯಿಟ್ಟು ಚಿತ್ರ ನಿರ್ಮಾಣಕ್ಕೆ ಮುಂದಾಗಿರುವ “ರಮಾಸ್ ಮೀಡಿಯಾ ಕ್ರಿಯೇಷನ್ಸ್” ಅವರಿಗೆ, ನಿರ್ದೇಶಕರಿಗೆ ,ಆಗಮಿಸಿರುವ ಗಣ್ಯರಿಗೆ ಹಾಗೂ ಕುಟುಂಬದವರಿಗೆ ನಿರಂಜನ್ ಸುಧೀಂದ್ರ ಧನ್ಯವಾದಗಳನ್ನು ತಿಳಿಸಿದರು.

ಪಕ್ಕದ ರಾಜ್ಯದಿಂದ ಕನ್ನಡ ಚಿತ್ರವೊಂದರ ನಿರ್ಮಾಣಕ್ಕೆ ಆಗಮಿಸಿರುವ ಒಳ್ಳೆಯದಾಗಲಿ. ಇನ್ನೂ ನಮ್ಮ ನಿರಂಜನ್ ಸುಧೀಂದ್ರ ಬಹಳ ಶ್ರಮ ಜೀವಿ. ಇತ್ತೀಚೆಗೆ “ಸೂಪರ್ ಸ್ಟಾರ್” ಚಿತ್ರದ ಸಾಹಸ ಸನ್ನಿವೇಶವೊಂದನ್ನು ನಾನು ಹಾಗೂ ಸುದೀಪ್ ನೋಡಿ ಸಂತೋಷಪಟ್ಟೆವು. ಸುದೀಪ್ ಅಂತೂ ನಿರಂಜನ್ ಅಭಿನಯದ ಬಗ್ಗೆ ಉತ್ತಮ ಮಾತುಗಳಾಡಿದರು. ಇವತ್ತು ನಮ್ಮ ನಿರಂಜನ್ ಹುಟ್ಟುಹಬ್ಬ . ಅವನಿಗೆ ಹಾಗೂ ಈ ಚಿತ್ರಕ್ಕೆ ಒಳ್ಳೆಯದಾಗಲಿ ಎಂದು ಉಪೇಂದ್ರ ಹಾರೈಸಿದರು.

ಕರ್ನಾಟಕ ಚಲನಚಿತ್ರ ವಾಣಿಜ್ಯ ಅಧ್ಯಕ್ಷರಾದ ಭಾ.ಮ.ಹರೀಶ್, ಉಪಾಧ್ಯಕ್ಷರಾದ ಶಿಲ್ಪ ಶ್ರೀನಿವಾಸ್ ಮುಂತಾದ ಗಣ್ಯರು ಸಮಾರಂಭಕ್ಕೆ ಆಗಮಿಸಿ ಶುಭ ಕೋರಿದರು. ಇದೇ ಸಂದರ್ಭದಲ್ಲಿ ನಿರಂಜನ್ ಸುಧೀಂದ್ರ ಅವರ ಹುಟ್ಟುಹಬ್ಬ ಆಚರಣೆ ಸಹ ನಡೆಯಿತು .

Categories
ಸಿನಿ ಸುದ್ದಿ

ಕಾಲಕ್ಕೆ ತಕ್ಕಂತೆ ಬದಲಾಗದೇ ಹೋದ್ರೆ ಕಲೆ ಸಾಯುತ್ತೆ! ಡೊಳ್ಳು ಟ್ರೇಲರ್ ರಿಲೀಸ್ ಮಾಡಿ ಮಾತಾಡಿದ ನಟ‌ ಗಣೇಶ್…

ಪವನ್ ಒಡೆಯರ್ ನಿರ್ಮಾಣದ ಡೊಳ್ಳು ಸಿನಿಮಾ ಬಿಡುಗಡೆಗೆ ಸಜ್ಜಾಗಿದ್ದು, ಆಗಸ್ಟ್ 26ರಿಂದ ಮಾಯಾನಗರಿಯಲ್ಲಿ ಡೊಳ್ಳಿನ ನಾದ ಶುರುವಾಗಲಿದೆ. ಅದರ ಮೊದಲ ಭಾಗವಾಗಿ ಇತ್ತೀಚೆಗಷ್ಟೇ ಮಯಾನಗರಿ ಎಂಬ ಹಾಡು ಬಿಡುಗಡೆ ಮಾಡಿ ಗಮನಸೆಳೆದಿದ್ದ ಚಿತ್ರತಂಡ ಈಗ ಡೊಳ್ಳು ಸಿನಿಮಾದ ಟ್ರೇಲರ್ ನ್ನು ಪ್ರೇಕ್ಷಕರಿಗೆ ಉಣಬಡಿಸಿದೆ.

ಡೊಳ್ಳು ಕಲೆಯನ್ನು ಯಾರು ಬೇಕಾದರೂ ಕಲಿಯಬಹುದು. ಆದರೆ ಮನಸ್ಸಿನಲ್ಲಿ ಇಳಿಸಿಕೊಳ್ಳಲು ಆಗುವುದಿಲ್ಲ ಎಂಬ ಅರ್ಥಪೂರ್ಣವಾದ ಮಾತಿನಿಂದ ಶುರುವಾಗುವ ಟ್ರೇಲರ್ ನಲ್ಲಿ ಜನಪದ ಕಲೆ ಡೊಳ್ಳು ಪ್ರಾಮುಖ್ಯತೆ ಜೊತೆಗೆ ಪ್ರೀತಿ, ಕಣ್ಣೀರು, ಕೋಪ ಎಲ್ಲವನ್ನೂ ಅಚ್ಚುಕಟ್ಟಾಗಿ ಕಟ್ಟಿಕೊಡಲಾಗಿದೆ. ನೋಡುಗರ ಹೃದಯಕ್ಕೆ ಹಾಗೇ ಇಳಿದು ಬಿಡುವ ಈ ಟ್ರೇಲರ್ ಬಿಡುಗಡೆ ಮಾಡಿದ ಗೋಲ್ಡನ್ ಸ್ಟಾರ್ ಗಣೇಶ್ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ. ನಮ್ ಸಿನಿಮಾ. ತಮ್ಮ ತನದ ಸಿನಿಮಾ..ನಮ್ಮ ಮಣ್ಣಿನ ಸೊಗಡಿನ ಸಿನಿಮಾ. ಕಲೆ ಮತ್ತು ಕಮರ್ಷಿಯಲ್ ನಡುವಿನ ಮಧ್ಯೆ ತೆಗೆದಿರುವ ಸಿನಿಮಾ. ಟ್ರೇಲರ್ ಬಹಳ ಚೆನ್ನಾಗಿದೆ. ಇದೇ 26ರಂದು ಚಿತ್ರ ಬಿಡುಗಡೆಯಾಗ್ತಿದೆ ಪ್ರತಿಯೊಂದು ನೋಡಿ ಎಂದರು.

ರಾಷ್ಟ್ರಪ್ರಶಸ್ತಿ ವಿಜೇತ ಸಾಗರ್ ಪುರಾಣಿಕ್ ನಿರ್ದೇಶನದಲ್ಲಿ ಮೂಡಿಬಂದಿರುವ ಸಿನಿಮಾದಲ್ಲಿ ಜನಪದ ಕಲೆ ಡೊಳ್ಳಿನ ಮಹತ್ವವನ್ನು ಕಟ್ಟಿಕೊಡಲಾಗಿದ್ದು, ಕಾರ್ತಿಕ್ ಮಹೇಶ್ ನಾಯಕನಾಗಿ ಅಮೋಘವಾಗಿ ನಟಿಸಿದ್ದು. ಇವರಿಗೆ ಜೋಡಿಯಾಗಿ ನಿಧಿ ಹೆಗ್ಡೆ ಕಾಣಿಸಿಕೊಂಡಿದ್ದಾರೆ. ಬಾಬು ಹಿರಣಯ್ಯ, ಚಂದ್ರ ಮಯೂರ್, ಶರತ್ ಮುಂತಾದ ಕಲಾ ಬಳಗ ಚಿತ್ರದಲ್ಲಿದ್ದು, ಶ್ರೀನಿಧಿ ಸಂಭಾಷಣೆ-ಚಿತ್ರಕಥೆ, ಅನಂತ್ ಸಂಗೀತ, ಅಭಿಲಾಸ್ ಕಲಾಥಿ ಕ್ಯಾಮೆರಾ ಕೈಚಳಕ ಸಿನಿಮಾದಲ್ಲಿದೆ.

ಹಲವು ಅಂತರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಮುಡಿಗೇರಿಸಿಕೊಂಡಿರುವ ಡೊಳ್ಳು ಸಿನಿಮಾ 68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗೂ ಭಜನವಾಗಿದೆ. ಪವನ್ ಒಡೆಯರ್ ಮೂವೀವ್ ಬ್ಯಾನರ್ ನಡಿ ಪವನ್ ಒಡೆಯರ್ ಪತ್ನಿ ಅಪೇಕ್ಷಾ ಜೊತೆಗೂಡಿ ಸಿನಿಮಾ ನಿರ್ಮಾಣ ಮಾಡಿದ್ದು, ಇದೇ 26ಕ್ಕೆ ಚಿತ್ರ ರಾಜ್ಯಾದ್ಯಂತ ರಿಲೀಸ್ ಆಗುತ್ತಿದೆ.

Categories
ಸಿನಿ ಸುದ್ದಿ

ಪರಂವಃ ಸ್ಟುಡಿಯೋಸ್​ನ ಹೊಸ ಚಿತ್ರಕ್ಕೆ ಹೆಸರು ಸಿಕ್ತು: ಇಬ್ಬನಿ ತಬ್ಬಿದ ಇಳೆಯಲಿ ಸಿನಿಮಾಗೆ ವಿಹಾನ್ -ಅಂಕಿತಾ ಜೋಡಿ…


ಪರಂವಃ ಸ್ಟುಡಿಯೋಸ್​ನಡಿ ರಕ್ಷಿತ್​ ಶೆಟ್ಟಿ ನಿರ್ಮಿಸುತ್ತಿರುವ ಹೊಸ ಚಿತ್ರವು ಕಳೆದ ತಿಂಗಳಷ್ಟೇ ಘೋಷಣೆಯಾಗಿತ್ತು.

ವಿಹಾನ್​ ಗೌಡ ಮತ್ತು ಅಂಕಿತಾ ಅಮರ್​ ಅಭಿನಯದ ಈ ಚಿತ್ರದ ಹೆಸರನ್ನು ಚಿತ್ರತಂಡ ಹೇಳಿರಲಿಲ್ಲ. ಶನಿವಾರ ಸಂಜೆ ಚಿತ್ರದ ಹೆಸರು ಅಧಿಕೃತವಾಗಿ ಘೋಷಣೆಯಾಗಿದ್ದು, ಚಿತ್ರಕ್ಕೆ ‘ಇಬ್ಬನಿ ತಬ್ಬಿದ ಇಳೆಯಲಿ’ ಎಂಬ ಹೆಸರನ್ನು ಇಡಲಾಗಿದೆ.

ಪ್ರೀತಿ ಎಂದರೆ ಏನು? ಹಳೆಯ ನೆನಪುಗಳಾ? ನಾಳೆ ಜತೆಯಾಗಿರಬೇಕು ಎಂಬ ಕನಸುಗಳಾ? ದೂರವಾದ ನಂತರದ ಚಡಪಡಿಕೆಯಾ? ಇದೆಲ್ಲದರ ಸಂಗಮವೇ ‘ಇಬ್ಬನಿ ತಬ್ಬಿದ ಇಳೆಯಲಿ’.

ಇದೊಂದು ಕಾವ್ಯಾತ್ಮಕ ಪ್ರೇಮಕಥೆಯಾಗಿದ್ದು, ಬೇಷರತ್ತಾಗಿ ಪ್ರೀತಿಸುವುದನ್ನು ಸಂಭ್ರಮಿಸುವ ಚಿತ್ರ. ನಿನ್ನೆ, ಇಂದು ಮತ್ತು ನಾಳೆಯ ಪ್ರೀತಿಯನ್ನು ತೋರಿಸುವ ಚಿತ್ರ. ಪ್ರೇಕ್ಷಕರು ಚಿತ್ರವನ್ನು ನೋಡುತ್ತಾ, ಹಾಡುತ್ತಾ, ನಲಿಯುತ್ತಾ, ತಮ್ಮನ್ನೇ ತಾವು ಮರೆಯುವಂತಹ ಚಿತ್ರ.


ಕಾಲೇಜಿನಿಂದ ಪ್ರಾರಂಭವಾಗುವ ಈ ಕಥೆಯು ಪ್ರೌಡಾವಸ್ಥೆಯವಸ್ಥೆಯಲ್ಲಿ ಅಂತ್ಯವಾಗುತ್ತದೆ. ಹೀಗೆ ಒಂದು ದಶಕದ ವಿವಿಧ ಕಾಲಘಟ್ಟವನ್ನು ಈ ಚಿತ್ರವು ಸೂಕ್ಷ್ಮವಾಗಿ ತೋರಿಸಲಿದ್ದು, ಇಲ್ಲಿ ಹಸಿರು ಎಷ್ಟು ಮುಖ್ಯವೋ, ಆಧುನಿಕ ನಗರದೃಶ್ಯಗಳು ಸಹ ಅಷ್ಟೇ ಪ್ರಮುಖ ಪಾತ್ರವಹಿಸುತ್ತದೆ. ಅಷ್ಟೇ ಅಲ್ಲ, ಬೇಸಿಗೆಯ ಘಮ, ಚಳಿಗಾಲದ ಹಿತ ಮತ್ತು ಮಳೆಗಾಲದ ಮಾಧುರ್ಯವೂ ಈ ಚಿತ್ರದಲ್ಲಿರಲಿದೆ.

ಈ ಹಿಂದೆ ರಕ್ಷಿತ್​ ಶೆಟ್ಟಿ ಅವರ ಸೆವೆನ್​ ಆಡ್ಸ್​ ಚಿತ್ರಕಥಾ ವಿಭಾಗದಲ್ಲಿ ಸಕ್ರಿಯವಾಗಿ ‘ಕಿರಿಕ್​ ಪಾರ್ಟಿ’ ಮತ್ತು ‘ಅವನೇ ಶ್ರೀಮನ್ನಾರಾಯಣ’ ಚಿತ್ರಗಳ ಚಿತ್ರಕಥೆಯಲ್ಲಿ ತೊಡಗಿಸಿಕೊಂಡಿದ್ದ ಮತ್ತು ‘ಕಥಾಸಂಗಮ’ ಚಿತ್ರದ ‘ರೇನ್​ಬೋ ಲ್ಯಾಂಡ್​’ ಕಿರುಚಿತ್ರವನ್ನು ನಿರ್ದೇಶಿಸಿದ್ದ ಚಂದ್ರಜಿತ್​ ಬೆಳ್ಳಿಯಪ್ಪ, ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ. ಈ ಚಿತ್ರದ ಕಥೆ ಹೊಸತನ ಕೇಳುವುದರಿಂದ, ಹೊಸ ಕಲಾವಿದರು ಮತ್ತು ತಂತ್ರಜ್ಞರನ್ನು ಆಯ್ಕೆ ಮಾಡಲಾಗಿದೆ. ಈಗಾಗಲೇ ನಾಯಕ-ನಾಯಕಿಯಾಗಿ ವಿಹಾನ್​ ಮತ್ತು ಅಂಕಿತಾ ಅಮರ್​ ಆಯ್ಕೆಯಾಗಿದ್ದು, ಸದ್ಯದಲ್ಲೇ ಎರಡನೆಯ ನಾಯಕಿಯ ಅಧಿಕೃತ ಘೋಷಣೆಯಾಗಲಿದೆ.

ಇದೊಂದು ಸಂಗೀತಮಯ ಪ್ರೇಮಕಥೆಯಾಗಿದ್ದು, ಗಗನ್​ ಬದೇರಿಯಾ ಸಂಗೀತ ಸಂಯೋಜಿಸುತ್ತಿದ್ದಾರೆ. ನ್ಯೂಯಾರ್ಕ್​ ಫಿಲಂ ಅಕಾಡೆಮಿಯಲ್ಲಿ ಕಲಿತು ಬಂದಿರುವ ಶ್ರೀವತ್ಸನ್​ ಸೆಲ್ವರಾಜನ್​, ಈ ಚಿತ್ರಕ್ಕೆ ಛಾಯಾಗ್ರಾಹಕರಾಗಿ ಆಯ್ಕೆ ಆಗಿದ್ದಾರೆ. ಈ ಹಿಂದೆ ‘ಕಥಾಸಂಗಮ’ ಚಿತ್ರದ ‘ಗಿರ್​ಗಿಟ್ಲೆ’ ಕಥೆಯನ್ನು ನಿರ್ದೇಶಿಸದ್ದ ಶಶಿಕುಮಾರ್​, ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರಾಗಿ ಕೆಲಸ ಮಾಡುತ್ತಿದ್ದಾರೆ.

‘ಇಬ್ಬನಿ ತಬ್ಬಿದ ಇಳೆಯಲಿ’ ಚಿತ್ರದ ಚಿತ್ರೀಕರಣ ಸೆಪ್ಟೆಂಬರ್​ ಮೊದಲ ವಾರದಲ್ಲಿ ಪ್ರಾರಂಭವಾಗಲಿದ್ದು, 2023ರ ಬೇಸಿಗೆಯಲ್ಲಿ ಬಿಡುಗಡೆಯಾಗಲಿದೆ.

Categories
ಸಿನಿ ಸುದ್ದಿ

ಈ ಬಾರಿ ಬೆಂಗಳೂರಲ್ಲಿ ಸೈಮಾ ಅವಾರ್ಡ್ಸ್-2022: ಅಪ್ಪು ನೆನಪಲ್ಲಿ ಪ್ರಶಸ್ತಿ ಪ್ರದಾನ…

ದಕ್ಷಿಣ ಭಾರತದ ನಾಲ್ಕು ರಾಜ್ಯಗಳ ತಾರೆಯರ, ತಂತ್ರಜ್ಞರ ಸಮಾಗಮದಲ್ಲಿ ನಡೆಯುವ ಪ್ರತಿಷ್ಠಿತ “ಸೈಮಾ” ಅವಾರ್ಡ್ಸ್ 2022 ಈ ಬಾರಿ, ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನೆನಪಿನೊಂದಿಗೆ ಸೆಪ್ಟೆಂಬರ್ 10 ಹಾಗೂ 11ರಂದು
ಬೆಂಗಳೂರಿನ ಅರಮನೆ ಆವರಣದಲ್ಲಿ ಅದ್ದೂರಿಯಾಗಿ ನಡೆಯಲಿದೆ.

“SIIMA” 2022 ಪ್ರಶಸ್ತಿ ಪ್ರದಾನ ಸಮಾರಂಭವನ್ನು ಬೆಂಗಳೂರಿನಲ್ಲಿ ನಡೆಸಲು ಖುಷಿಯಾಗುತ್ತಿದೆ. ಇದು ಹತ್ತನೇ ವರ್ಷದ ಪ್ರಶಸ್ತಿ ಸಮಾರಂಭ ಕೂಡ. ಬೆಂಗಳೂರಿನಲ್ಲಿ “ಸೈಮಾ” ಅವಾರ್ಡ್ಸ್ ನಡೆಸಲು ಎರಡು ಪ್ರಮುಖ ಕಾರಣಗಳಿದೆ. ಒಂದು ನಮ್ಮೆಲ್ಲರ ನೆಚ್ಚಿನ ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ಗೌರವ ಸಲ್ಲಿಸುವ ಸಲುವಾಗಿ‌. ಮತ್ತೊಂದು ಕನ್ನಡ ಚಿತ್ರಗಳು ಈಗ ಪ್ಯಾನ್ ಇಂಡಿಯಾ ದಲ್ಲಿ ಸಾಕಷ್ಟು ಜನಪ್ರಿಯವಾಗುತ್ತಿದೆ ಹಾಗಾಗಿ ಈ ಬಾರಿ ಬೆಂಗಳೂರನ್ನೇ ಆಯ್ಕೆ ಮಾಡಿಕೊಂಡಿದ್ದೇವೆ. ಇಲ್ಲಿ ಬಂದಿರುವ ಗಣ್ಯರಿಗೆ ಹಾಗೂ ಪ್ರಾಯೋಜಕರಿಗೆ ಧನ್ಯವಾದ ಎಂದರು “ಸೈಮಾ” ಅವಾರ್ಡ್ಸ್ ನ ಮುಖ್ಯಸ್ಥೆ ಬೃಂದಾ ಪ್ರಸಾದ್.

ಒಂದು ಪ್ರಶಸ್ತಿ ಸಮಾರಂಭವನ್ನು ಹತ್ತುವರ್ಷಗಳ ಕಾಲ ನಡೆಸುವುದು ಸುಲಭವಲ್ಲ. ಆ ನಿಟ್ಟಿನಲ್ಲಿ ನಾನು ಮೊದಲು ಇದರ ಉಸ್ತುವಾರಿ ಬೃಂದಾ ಪ್ರಸಾದ್ ಮತ್ತು ತಂಡಕ್ಕೆ ಅಭಿನಂದನೆ ತಿಳಿಸುತ್ತೇನೆ. ಈ ಬಾರಿ ಹತ್ತನೇ ವರ್ಷದ “ಸೈಮಾ” ಅವಾರ್ಡ್ಸ್ ನನಗೆ ಪ್ರಿಯವಾದ ಬೆಂಗಳೂರಿನಲ್ಲಿ ನಡೆಯುತ್ತಿರುವುದು ಖಷಿ ಎನ್ನುತ್ತಾರೆ ಖ್ಯಾತ ನಟ ರಾಣಾ ದಗ್ಗುಬಾಟಿ.

ನನಗೆ “ಸೈಮಾ” ಬರೀ ಪ್ರಶಸ್ತಿ ಅಲ್ಲ. ಅದೊಂದು ನೆನಪು. ನಾನು ಮೊದಲ ಬಾರಿ ಈ ಪ್ರಶಸ್ತಿ ಸ್ವೀಕರಿಸಲು ಮಲೇಷಿಯಾ ಗೆ ಹೋಗಿದ್ದು ನನ್ನ ಹೃದಯದಲ್ಲಿ ಇನ್ನೂ ಹಸಿರಾಗಿದೆ. ಈ ಬಾರಿ ನಮ್ಮ ಬೆಂಗಳೂರಿನಲ್ಲಿ ಪ್ರಶಸ್ತಿ ಸಮಾರಂಭ ನಡೆಯುತ್ತಿರುವುದು ಹೆಚ್ಚು ಖುಷಿ ತಂದಿದೆ. ನಿಮ್ಮೆಲ್ಲರಿಗೂ ನಮ್ಮೂರಿಗೆ ಆತ್ಮೀಯ ಸ್ವಾಗತ. ಪದೇಪದೇ ಬೆಂಗಳೂರಿನಲ್ಲೇ ಈ ಸಮಾರಂಭ ಮಾಡಬೇಕು ಅನಿಸಬೇಕು. ಆ ಮಟ್ಟದಲ್ಲಿ ಈ ಸಮಾರಂಭ ಯಶಸ್ವಿಯಾಗಲಿ‌ ಎಂದು ನಟ ಡಾಲಿ ಧನಂಜಯ ಹಾರೈಸಿದರು.

ನನಗೆ ಬೆಂಗಳೂರು ತುಂಬಾ ಇಷ್ಟ. ಸಾಕಷ್ಟು ಕನ್ನಡ ಚಿತ್ರಗಳಲ್ಲಿ ನಟಿಸಿದ್ದೇನೆ.. ಚಿತ್ರೀಕರಣ ಸಮಯದಲ್ಲಿ ಹಲವು ದಿನಗಳನ್ನು ಇಲ್ಲೇ ಕಳೆದಿದ್ದೇನೆ. ಈ ಬಾರಿ ಅಪ್ಪು ಅವರ ಸ್ಮರಣೆಯೊಂದಿಗೆ ಈ ಸಮಾರಂಭ ನಡೆಯುತ್ತಿದೆ ಎಂದು ನಟಿ ಶಾನ್ವಿ ಶ್ರೀವಾಸ್ತವ್ ತಿಳಿಸಿದರು.

ನಟಿಯರಾದ ಫರಿಯಾ ಅಬ್ದುಲ್ಲಾ, ಶ್ರೀಲೀಲ ಹಾಗೂ ಕೆಲವು ಪ್ರಾಯೋಜಕರು ಸಹ “ಸೈಮಾ” ಬಗ್ಗೆ ಮಾತನಾಡಿದರು.

Categories
ಸಿನಿ ಸುದ್ದಿ

ರಿಪ್ಪರ್ ಸಿನಿಮಾಗೆ ವೀರೇಂದ್ರ ಹೆಗ್ಗಡೆ ಸಾಥ್: ಪೋಸ್ಟರ್ ರಿಲೀಸ್ ಮಾಡಿ ಹಾರೈಕೆ…

ಕೃಷ್ಣ ಬೆಳ್ತಂಗಡಿ ನಿರ್ದೇಶನದ ಎರಡನೇ ಚಿತ್ರ ರಿಪ್ಪರ್. ಇದರ ಮೊದಲು ಪೋಸ್ಟರ್ ಅನ್ನು ನೂತನ ರಾಜ್ಯಸಭಾ ಸದಸ್ಯರು, ಧರ್ಮಸ್ಥಳದ ಧರ್ಮಾಧಿಕಾರಿಗಳೂ ಆದ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಬಿಡುಗಡೆ ಮಾಡಿದ್ದಾರೆ.
ಸಿನಿಮಾ, ನಿರ್ಮಾಣ, ಚಿತ್ರೀಕರಣ, ಸ್ಥಳಗಳು, ಕಲಾವಿದರು ಹೀಗೆ ಅನೇಕ ವಿಚಾರಗಳನ್ನು ನಿರ್ದೇಶಕ ಕೃಷ್ಣ ಬೆಳ್ತಂಗಡಿ ಇವರಿಂದ ಪಡೆದ ಹೆಗ್ಗಡೆಯವರು ಸಿನಿಮಾದ ಯಶಸ್ಸಿಗೆ ಶುಭ ಹಾರೈಸಿದ್ದಾರೆ.

ಸಿನಿಮಾದ ದಕ್ಷಿಣ ಕನ್ನಡ ವಿಭಾಗ ನಿರ್ವಹಕರದ ಬಿ.ಹೆಚ್. ರಾಜು ಈ ವೇಳೆ ಉಪಸ್ಥಿತರಿದ್ದರು.
ರಿಪ್ಪರ್ ಚಲನಚಿತ್ರವು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ನೈಜ ಘಟನೆಯೊಂದರಿಂದ ಪ್ರೇರಿತವಾದ ಸಿನಿಮಾವಾಗಿದ್ದು, ಜಿಕೆ ರಿಯಲ್ ಇಮೇಜಸ್ ಮತ್ತು ಶ್ರೀ ಗುರುರಾಯ ಪ್ರೊಡಕ್ಷನ್ಸ್ ಇವರಿಂದ ನಿರ್ಮಾಣವಾಗಿದೆ.


ಕೌಸ್ತುಬ್ ಜಯರಾಮ್, ಅಮುಲ್ ಗೌಡ, ಶ್ರೀರಾಮ್, ಸಾನ್ವಿ, ಅರ್ಪಿತಾ ಬಿ.ಜಿ, ಶಿವಕುಮಾರ್ ಆರಾಧ್ಯ, ಗಜಾನನ ಹೆಗ್ಡೆ ಇವರುಗಳು ಪ್ರಮುಖ ತಾರಾಗಣದಲ್ಲಿ ಇದ್ದಾರೆ.

Categories
ಸಿನಿ ಸುದ್ದಿ

ಕಿರಣ್ ರಾಜ್ ಈಗ ಶೇರ್! ಕಂಠೀರವ ಸ್ಟುಡಿಯೋದಲ್ಲಿ ಪ್ರಸಿದ್ಧ ಸಿನಿಮಾಗೆ ಚಾಲನೆ

“ಕನ್ನಡತಿ” ಧಾರಾವಾಹಿ ಮೂಲಕ ಜನಪ್ರಿಯರಾಗಿರುವ ಕಿರಣ್ ರಾಜ್, “ಬಡ್ಡೀಸ್” ಚಿತ್ರದ ಮೂಲಕ ನಾಯಕನಾಗಿ ಬೆಳ್ಳಿತೆರೆ ಪ್ರವೇಶಿಸಿದರು. ಇವರ ನಟನೆಯ “ಭರ್ಜರಿ ಗಂಡು” ಚಿತ್ರ ಸಹ ಸದ್ಯದಲ್ಲೇ ಬಿಡುಗಡೆಯಾಗಲಿದೆ.

ಕಿರಣ್ ರಾಜ್ ನಾಯಕರಾಗಿ ನಟಿಸಿ, ಪ್ರಸಿದ್ಧ್ ನಿರ್ದೇಶಿಸುತ್ತಿರುವ “ಶೇರ್” ಚಿತ್ರದ ಮುಹೂರ್ತ ಸಮಾರಂಭ ಕಂಠೀರವ ಸ್ಟುಡಿಯೋದಲ್ಲಿ ನೆರವೇರಿತು. ನಿರ್ಮಾಪಕ ಡಾ. ಸುದರ್ಶನ್ ಸುಂದರರಾಜ್ (ಬೀದರ್) ಚಿತ್ರದ ಮೊದಲ ಸನ್ನಿವೇಶಕ್ಕೆ ಕ್ಲಾಪ್ ಮಾಡಿದರು. ಗಣ್ಯರು ಮುಹೂರ್ತ ಸಮರಂಭಕ್ಕೆ ಆಗಮಿಸಿ ಶುಭ ಕೋರಿದರು.

“ಶೇರ್” ಪಕ್ಕಾ ಆಕ್ಷನ್ ಥ್ರಿಲ್ಲರ್ ಚಿತ್ರ. ಅನಾಥಾಶ್ರಮದಲ್ಲಿ ಹೆಚ್ಚಿನ ಕಥೆ ನಡೆಯುತ್ತದೆ. ಅಲ್ಲೊಬ್ಬ ರಾಜಕಾರಣಿ ಇರುತ್ತಾನೆ. ಎರಡು ಗುಂಪುಗಳೂ ಇರುತ್ತದೆ. ಒಂದು ಗುಂಪಿನವರು ಅನಾಥಾಶ್ರಮವನ್ನೇ ಅಡ್ಡ ಮಾಡಿಕೊಂಡಿರುತ್ತಾರೆ. ಅಲ್ಲಿ ಒಳ್ಳೆಯ ಗುಂಪು ಸಹ ಇರುತ್ತದೆ. ನಾಯಕ-ನಾಯಕಿ ಅನಾಥರ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಎ.ಪಿ.ಎಂ.ಸಿ ಮಾರುಕಟ್ಟೆಯಲ್ಲೂ ನಮ್ಮ ಚಿತ್ರದ ಕಥೆ ಸಾಗುತ್ತದೆ.

“ಕಿರಣ್ ರಾಜ್ ಚಾಕೊಲೇಟ್ ಹೀರೋ ಅಂತ ಪ್ರಸಿದ್ದ್. ಅವರಿಗೆ ರಗಡ್ ಲುಕ್ ಸರಿ ಹೊಂದುವುದೆ?” ಅಂತ ಅನೇಕರು ಕೇಳಿದರು. ಆದರೆ ಮಾಸ್ ಪಾತ್ರಕ್ಕೆ ಬೇಕಾದ ಕಿಕ್ ಬಾಕ್ಸಿಂಗ್, ಮಾರ್ಷಲ್ ಆರ್ಟ್ಸ್ ಮುಂತಾದವುಗಳನ್ನು ಕಿರಣ್ ರಾಜ್ ಅಭ್ಯಾಸ ಮಾಡಿದ್ದಾರೆ. ನನ್ನ ಹಾಗೂ ಕಿರಣ್ ರಾಜ್ ಕಾಂಬಿನೇಶನ್ ನಲ್ಲಿ ಮೂಡಿಬಂದಿರುವ “ಭರ್ಜರಿ ಗಂಡು” ಚಿತ್ರ ಸಹ ಸೆಪ್ಟೆಂಬರ್ ನಲ್ಲಿ ತೆರೆ ಕಾಣಲಿದೆ. ಆ ಚಿತ್ರದಲ್ಲಿ ಭಾಗಿಯಾಗಿರುವ ಬಹುತೇಕ ತಂಡವೇ ಈ ಚಿತ್ರದಲ್ಲಿ ಮುಂದುವರೆಯಲಿದೆ. ಬೀದರ್ ಸುದರ್ಶನ್ ಸುಂದರರಾಜ್ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಆಗಸ್ಟ್ 22 ರಿಂದ‌ ಚಿತ್ರೀಕರಣ ಆರಂಭವಾಗಲಿದೆ ಎಂದು ನಿರ್ದೇಶಕ ಪ್ರಸಿದ್ಧ್ “ಶೇರ್” ಬಗ್ಗೆ ಮಾಹಿತಿ ನೀಡಿದರು.

ಆಕ್ಷನ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ‌ ಚಿತ್ರದಲ್ಲಿ ನಟಿಸಲು ಖುಷಿಯಾಗಿದೆ. ಇದಕ್ಕಾಗಿ ಕಿಕ್ ಬಾಕ್ಸಿಂಗ್, ಮಾರ್ಷಲ್ ಆರ್ಟ್ಸ್ ಮುಂತಾದ ಕಲೆಗಳನ್ನು ಅಭ್ಯಾಸ ಮಾಡಿದ್ದೀನಿ. “ಭರ್ಜರಿ ಗಂಡು” ಚಿತ್ರದಲ್ಲೂ ಸಾಹಸ ಸನ್ನಿವೇಶಗಳು ಭರ್ಜರಿಯಾಗಿ ಮೂಡಿಬಂದಿದೆ ಎಂದು ನಾಯಕ ಕಿರಣ್ ರಾಜ್ ತಿಳಿಸಿದರು.

ನಾನು‌ ಮೂಲತಃ ಬೀದರ್ ನವನು. ಅಲ್ಲೇ ವಕೀಲನಾಗಿ ಕಾರ್ಯ ನಿರ್ವಿಸುತ್ತಿದ್ದೇನೆ. ರಾಜಕೀಯದಲ್ಲೂ ಇದ್ದೀನಿ. ನಿರ್ದೇಶಕರು ಹೇಳಿದ ಕಥೆ ಇಷ್ಟವಾಯಿತು. ನಿರ್ಮಾಣಕ್ಕೆ ಮುಂದಾದೆ ಎಂದರು ನಿರ್ಮಾಪಕ ಸುದರ್ಶನ್ ಸುಂದರರಾಜ್.

ಚಿತ್ರದ ನಾಯಕಿ ಸುರೇಖ ಹಾಗೂ ಪೊಲೀಸ್ ಅಧಿಕಾರಿಯಾಗಿಕಾಣಿಸಿಕೊಳ್ಳುತ್ತಿರುವ ತನೀಶಾ ತಮ್ಮ ಪಾತ್ರದ ಬಗ್ಗೆ ಮಾತನಾಡಿದರು. ಕಿಟ್ಟಿ ಕೌಶಿಕ್ ಛಾಯಾಗ್ರಹಣದ ಬಗ್ಗೆ ಹಾಗೂ ಗುಮ್ಮಿನೇನಿ‌ ವಿಜಯ್ ಸಂಗೀತದ ಬಗ್ಗೆ ಮಾಹಿತಿ ನೀಡಿದರು.

Categories
ಸಿನಿ ಸುದ್ದಿ

ಎನ್. ಕುಮಾರ್ ಬ್ಯಾನರ್ ನಲ್ಲಿ ಗಿರಿರಾಜ್ ಸಿನಿಮಾ: ಕನ್ನಡದಲ್ಲೊಂದು ವಿಭಿನ್ನ ಪ್ರಯತ್ನದ ಚಿತ್ರ…

ಎನ್. ಕುಮಾರ್. ಕನ್ನಡ ಚಿತ್ರರಂಗದಲ್ಲಿ ಬಹು ದೊಡ್ಡ‌ ಹೆಸರಿದು. ಯಶಸ್ವಿ ವಿತರಕರಾಗಿ, ನಿರ್ಮಾಪಕರಾಗಿ ಈಗಾಗಲೇ ಗಟ್ಟಿನೆಲೆ ಕಂಡಿರುವ ಎನ್.ಕುಮಾರ್, ಸ್ಟಾರ್ ನಟರ ಸಾಲು ಸಾಲು ಯಶಸ್ವಿ ಸಿನಿಮಾ‌ಗಳನ್ನು‌ ನಿರ್ಮಿಸುವ ಮೂಲಕ ತಮ್ಮದೇ ಛಾಪು ಮೂಡಿಸಿದವರು. ಸಿಂಪಲ್ ವ್ಯಕ್ತಿಯಾಗಿ, ಪಕ್ಕಾ ಸಿನಿಮಾ ಉದ್ಯಮಿಯಾಗಿ, ಒಳ್ಳೆಯ ವಾಗ್ಮಿಯೂ ಆಗಿ ಸಿನಿಮಾ ಮಂದಿಗೆ ಹತ್ತಿರವಾದವರು.

ಸದಾ ಸಿನಿಮಾ ಚಟುವಟಿಕೆಯಲ್ಲೇ ನಿರತರಾಗಿರುವ ಎಂ.ಎನ್.ಕುಮಾರ್ ಅವರು ಸಿನಿಮಾ ಬಿಟ್ಟು ಬೇರೆ ಧ್ಯಾನ ಮಾಡಿದವರಲ್ಲ. ವಿತರಕರಾಗಿ, ನಿರ್ಮಾಪಕರಾಗಿ ಕನ್ನಡ ಚಿತ್ರರಂಗಕ್ಕೆ ಯಶಸ್ವಿ ಸಿನಿಮಾಗಳನ್ನು‌ ಕಟ್ಟಿಕೊಟ್ಟಿರುವ ಎನ್.ಕುಮಾರ್ ಈಗ ಮತ್ತೊಂದು ಸಿನಿಮಾ ನಿರ್ಮಾಣ ಮಾಡುವ ತಯಾರಿಯಲ್ಲಿದ್ದಾರೆ.

ಹೌದು, ಸ್ಟಾರ್ ನಟರು ಸೇರಿದಂತೆ ಅನೇಕ ಹೊಸಬರನ್ನೂ ಪ್ರೀತಿಯಿಂದ ಕಾಣುವ ಕುಮಾರ್, ಪಕ್ಕಾ ಸಿನಿಮಾ ವ್ಯಾಕರಣವನ್ನು ಬಲ್ಲವರು. ಆ ಕಾರಣಕ್ಕೆ ಸಿನಿಮಾ ಬಿಜಿನೆಸ್ ಮಾಡೋದು ಹೇಗೆ ಎಂಬುದನ್ನೂ ತೋರಿಸಿ ಗೆದ್ದವರು.
ಅಂದಹಾಗೆ, ಈ ಬಾರಿ ಎನ್. ಕುಮಾರ್ ವಿಶೇಷ ಕಥಾವಸ್ತು ಹಿಡಿದು ಒಂದೊಳ್ಳೆಯಬಸಿನಿಮಾ‌ಮಾಡುವ ಉತ್ಸಾಹದಲ್ಲಿದ್ದಾರೆ. ಅವರ ಉತ್ಸಾಹಕ್ಕೆ ಕಾರಣ, ಯಶಸ್ವಿ ಮತ್ತು ಸೂಕ್ಷ್ಮ ಸಂವೇದನೆ ನಿರ್ದೇಶಕ ಬಿ.ಎಂ.ಗಿರಿರಾಜ್.

ನಿಜ, ಬಿ.ಎಂ. ಗಿರಿರಾಜ್ ಅವರೀಗ ಎನ್. ಕುಮಾರ್ ಅವರ ಬ್ಯಾನರ್ ನಲ್ಲಿ ಹೊಸ ತರಹದ ಕಥೆ ಹೆಣೆದು ಸಿನಿಮಾ ಮಾಡಲು ಅಣಿಯಾಗಿದ್ದಾರೆ. ಇವರಿಬ್ಬರ ಕಾಂಬಿನೇಷನ್ ಅಂದಾಗಲೇ ಸಿನಿಮಾ ಅರ್ಧ ಗೆದ್ದಂತೆ ಅನ್ನೋದು ಎಲ್ಲರಿಗೂ ಗೊತ್ತು. ಅಂದಹಾಗೆ, ಗಿರಿರಾಜ್ ಅವರು ಹೇಳಿದ ಕಥೆ ಮೆಚ್ಚಿಕೊಂಡು ದೊಡ್ಡಮಟ್ಟದಲ್ಲೇ ಸಿನಿಮಾ ನಿರ್ಮಾಣ‌ ಮಾಡಲು ರೆಡಿಯಾಗಿರುವ ಕುಮಾರ್, ಅದೊಂದು ಹೊಸ ಬಗೆಯ ಸಿನಿಮಾ ಅಗುವುದರಿಂದ ಪ್ಯಾನ್ ಇಂಡಿಯಾ ಲೆವೆಲ್ ನಲ್ಲೇ ಚಿತ್ರ ಕೊಡಬೇಕೆಂಬ ತಯಾರಿಯಲ್ಲಿದ್ದಾರೆ.

ಸದ್ಯ ಗಿರಿರಾಜ್ ಅವರ ಹೊಸ ಕಥೆಗೆ ಎಂ.ಎನ್.ಕುಮಾರ್ ನಿರ್ಮಾಪಕರು. ಇನ್ನು ಗಿರಿರಾಜ್ ಕೂಡ ಹಲವು ಸೂಕ್ಷ್ಮ ಕಥೆಗಳನ್ನು ಆಯ್ಕೆ ಮಾಡಿಕೊಂಡು ಸಿನಿಮಾ ಮಾಡಿ ಈಗಾಗಲೇ ಗೆದ್ದಿದ್ದಾರೆ. ಈಗ ಕುಮಾರ್ ಬ್ಯಾನರ್ ನಲ್ಲಿ ಹೊಸ ರೀತಿಯ ಕಥೆ ಮಾಡಿ ಮತ್ತೊಂದು ಗೆಲುವಿಗೆ ಅಣಿಯಾಗುತ್ತಿರುವುದೇ ಈ ಹೊತ್ತಿನ ಸುದ್ದಿ.

ಅದೇನೆ ಇರಲಿ, ಕನ್ನಡ ಸಿನಿಮಾರಂಗ ಈಗಾಗಲೇ ಭಾರತೀಯ ಚಿತ್ರರಂಗದಲ್ಲೇ ಮೊದಲ ಮೆಟ್ಟಿಲ ಮೇಲೆ ನಿಂತು ಬೀಗುತ್ತಿದೆ. ಈ ನಡುವೆ ಒಳ್ಳೆಯ ಸಿನಿಮಾಗಳೂ ಸೆಟ್ಟೇರುತ್ತಿವೆ. ಈಗ ಗಿರಿರಾಜ್ ಹಾಗು ಕುಮಾರ್ ಕಾಂಬಿನೇಷನ್ ಸಿನಿಮಾ ಕೂಡ ರೆಡಿಯಾಗಲಿದೆ. ಚಿತ್ರದ ಹೀರೋ, ಹೀರೋಯಿನ್ ಸೇರಿದಂತೆ ಯಾರೆಲ್ಲ ಇರುತ್ತಾರೆ ಅನ್ನೋದಕ್ಕೆ ಇಷ್ಟರಲ್ಲೇ ಮಾಹಿತಿ‌ ಸಿಗಲಿದೆ. ಅಂತೂ ಹೊಸದೊಂದು ಪ್ಯಾನ್ ಇಂಡಿಯಾ ಲೆವೆಲ್ ಸಿನಿಮಾ ಸೌಂಡು‌ ಮಾಡೋಕೆ ರೆಡಿಯಾಗುತ್ತಿದೆ ಅನ್ನೋದೆ ಖುಷಿಯ ವಿಷಯ.

Categories
ಸಿನಿ ಸುದ್ದಿ

ವಂದೇ ಮಾತರಂ ಹಾಡಲ್ಲಿ ಸ್ಟಾರ್ಸ್ ಸಮಾಗಮ: ಜಗ್ಗೇಶ್ ನಿರ್ಮಾಣ- ಸಂತೋಷ್ ಆನಂದರಾಮ್ ನಿರ್ದೇಶನ…

ಭವ್ಯ ಪರಂಪರೆ ಹೊಂದಿರುವ ನಮ್ಮ ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾಗಿವೆ. ದೇಶದಾದ್ಯಂತ ಅಮೃತ ಮಹೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದೆ.
ಈ ಸಂದರ್ಭದಲ್ಲಿ ನಮ್ಮ ನಾಡಿನ ಸಾಂಸ್ಕೃತಿಕ ರಂಗದ ಗಣ್ಯರ ಸಮಾಗಮದಲ್ಲಿ ಮೂಡಿಬಂದಿರುವ “ವಂದೇ ಮಾತರಂ” ಎಂಬ ಅದ್ಭುತ ಗೀತೆ ಬಿಡುಗಡೆಯಾಗಿದೆ.

ಹೆಸರಾಂತ ನಟ ಹಾಗೂ ರಾಜ್ಯಸಭಾ ಸದಸ್ಯ ಜಗ್ಗೇಶ್ ಈ ಹಾಡನ್ನು ನಿರ್ಮಾಣ ಮಾಡಿದ್ದಾರೆ. ಸಂತೋಷ್ ಆನಂದರಾಮ್ ನಿರ್ದೇಶನ ಮಾಡಿದ್ದಾರೆ. ಪ್ರವೀಣ್ ಡಿ ರಾವ್ ಸಂಗೀತ ನೀಡಿದ್ದು, ವಿಜಯ್ ಪ್ರಕಾಶ್ ಸುಶ್ರಾವ್ಯವಾಗಿ ಹಾಡಿದ್ದಾರೆ. ಶ್ರೀಶ ಕುದವಳ್ಳಿ ಛಾಯಾಗ್ರಹಣ ಮಾಡಿದ್ದಾರೆ. ಕಿಚ್ಚ ಸುದೀಪ, ಶಿವರಾಜಕುಮಾರ್, ರವಿಚಂದ್ರನ್, ಜಗ್ಗೇಶ್, ರಮೇಶ್ ಅರವಿಂದ್,ಅನಂತನಾಗ್,
ಅರ್ಜುನ್ ಸರ್ಜಾ, ಗಣೇಶ್, ಶ್ರೀಮುರಳಿ, ಧನಂಜಯ, ರಿಷಬ್ ಶೆಟ್ಟಿ, ಧ್ರುವ ಸರ್ಜಾ, ಹಿರಿಯ ಸಾಹಿತಿ ಎಸ್ ಎಲ್ ಭೈರಪ್ಪ, ಸಾಲುಮರದ ತಿಮ್ಮಕ್ಕ, ಜೋಗತಿ ಮಂಜಮ್ಮ ಹಾಗೂ ಕ್ರಿಕೆಟ್ ಆಟಗಾರ ವೆಂಕಟೇಶ್ ಪ್ರಸಾದ್ ಈ ಹಾಡಿನಲ್ಲಿ ಅಭಿನಯಿಸಿದ್ದಾರೆ.

ನನಗೆ ಚಿಕ್ಕ ವಯಸ್ಸಿನಿಂದಲೂ “ಮಿಲೇ ಸುರ್ ಮೇರಾ ತುಮಾರ” ಹಾಡೆಂದರೆ ಬಹಳ ಇಷ್ಟ. ಇಂತಹದೊಂದು ಹಾಡನ್ನು ನಮ್ಮ ಕನ್ನಡ ಕಲಾವಿದರ ಸಮಾಗಮದಲ್ಲಿ ಮಾಡಬೇಕೆಂಬ ಆಸೆಯಿತ್ತು. ಈಗ ಆ ಆಸೆ ಈಡೇರಿದೆ. ಗೆಳೆಯ ಶ್ರೀನಿಧಿ ಅವರು ಕೆಲವು ದಿನಗಳ ಹಿಂದೆ ಈ ಹಾಡಿನ ಬಗ್ಗೆ ಪ್ರಸ್ತಾಪಿಸಿದರು. ನಾನು ನಿರ್ಮಾಣಕ್ಕೆ ಮುಂದಾದೆ. ಕೇವಲ ಹದಿಮೂರು ದಿನಗಳಲ್ಲಿ ಈ ಹಾಡು ನಿರ್ಮಾಣವಾಗಿದೆ. ಸಂತೋಷ್ ಆನಂದ್ ರಾಮ್ ಸೊಗಸಾಗಿ ನಿರ್ದೇಶನ ಮಾಡಿದ್ದಾರೆ.

ವಿಜಯ್ ಪ್ರಕಾಶ್ ಧ್ವನಿಯಲ್ಲಿ ಈ ಹಾಡನ್ನು ಕೇಳುವುದೆ ಆನಂದ. ಈ ಹಾಡಿನ‌ ನಿರ್ಮಾಣ ಆರಂಭವಾದಾಗ ನನ್ನ ಎಲ್ಲಾ ಕನ್ನಡ ಚಿತರಂಗದ ನಾಯಕ ಮಿತ್ರರನ್ನು ಫೋನ್ ಮೂಲಕ ಸಂಪರ್ಕಿಸಿ, ಈ ವಿಷಯ ಹೇಳಿದಾಗ ಬಹಳ ಪ್ರೀತಿಯಿಂದ ಬಂದು ಈ ಹಾಡಿನಲ್ಲಿ ಅಭಿನಯಿಸಿದ್ದಾರೆ. ನಾಯಕ ನಟರಷ್ಟೇ ಅಲ್ಲದೇ ವಿವಿಧ ಕ್ಷೇತ್ರಗಳ ಗಣ್ಯರು ಈ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಇವರೆಲ್ಲರಿಗೂ ನನ್ನ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸುತ್ತೇನೆ.

ನಾಡಿನ ಸನ್ಮಾನ್ಯ ಮುಖ್ಯಮಂತ್ರಿಗಳು ಹಾಗೂ ಹಲವು ಮಂತ್ರಿಗಳು ಈ ಹಾಡನ್ನು ಮೆಚ್ಚಿ ಶೇರ್ ಮಾಡಿದ್ದಾರೆ. ತಾವು ಕೂಡ ಈ ಹಾಡನ್ನು ಶೇರ್ ಮಾಡುವ ಮೂಲಕ ಹೆಚ್ಷಿನ ಜನರಿಗೆ ತಲುಪಿಸಿ ಎಂದು ಜಗ್ಗೇಶ್ ವಿನಂತಿಸಿದ್ದಾರೆ. ಪ್ರಧಾನಮಂತ್ರಿಗಳಿಗೂ ಈ ಹಾಡನ್ನು ತೋರಿಸುವ ಪ್ರಯತ್ನ ನಡೆಯುತ್ತಿದೆ ಎಂದು ಜಗ್ಗೇಶ್ ತಿಳಿಸಿದ್ದಾರೆ.

“ವಂದೇ ಮಾತರಂ” ಎಂದರೆ ಜಾತಿಮತಧರ್ಮ ಎಲ್ಲವನ್ನೂ ದಾಟಿ ನಾವೆಲ್ಲರೂ ಭಾರತಮಾತೆಯ ಮಕ್ಕಳು ಎನ್ನುವ ಸಾರಾಂಶ. ಭಾರತವನ್ನು ಯಾವ ರೀತಿಯಲ್ಲಿ ವಿವರಿಸಬಹುದು ಎಂದು ಹೋದಾಗ, ಅಲ್ಲಿ ನಾವು ಗೋಮಾತೆಯನ್ನು ತಾಯಿಯ ತರಹ ಪೂಜಿಸುತ್ತೇವೆ. ಆ ಪಾತ್ರದಲ್ಲಿ ಶಿವಣ್ಣ ಅಭಿನಯಿಸಿದ್ದಾರೆ. ಭಾರತಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರಗಳ ಮೂಲಕ ಹಾಡು ಆರಂಭವಾಗುತ್ತದೆ ಅಲ್ಲಿ ಸುದೀಪ್ ಇದ್ದಾರೆ.

ಹೀಗೆ ಭಾರತದ ಹಿರಿಮೆಯನ್ನು ಈ ಹಾಡಿನಲ್ಲಿ ತೋರಿಸುವ ಪ್ರಯತ್ನವನ್ನು ಹಿರಿಯ ನಟರಾದ ಅನಂತನಾಗ್, ರವಿಚಂದ್ರನ್, ರಮೇಶ್ ಅರವಿಂದ್, ಜಗ್ಗೇಶ್, ಅರ್ಜುನ್ ಸರ್ಜಾ ಹಾಗೂ ಯುವ ಪ್ರತಿಭೆಗಳಾದ ಗಣೇಶ್, ಶ್ರೀಮುರಳಿ, ಧ್ರುವ ಸರ್ಜಾ, ರಿಷಬ್ ಶೆಟ್ಟಿ, ಧನಂಜಯ ಅವರ ಮೂಲಕ ಮಾಡಿದ್ದೇವೆ. ಚಿತ್ರರಂಗದ ನಟರಷ್ಟೇ ಅಲ್ಲದೇ ಹಿರಿಯ ಸಾಹಿತಿ ಎಸ್ ಎಲ್ ಭೈರಪ್ಪ, ಸಾಲುಮರದ ತಿಮ್ಮಕ್ಕ, ಜೋಗತಿ ಮಂಜಮ್ಮ ಹಾಗೂ ಕ್ರಿಕೆಟ್ ಆಟಗಾರ ವೆಂಕಟೇಶ್ ಪ್ರಸಾದ್ ಮುಂತಾದವರು ಭಾರತದ ಭವ್ಯ ಪರಂಪರೆಯನ್ನು ಬಿಂಬಿಸುವ ಈ ಹಾಡಿನಲ್ಲಿ ಭಾಗಿಯಾಗಿದ್ದಾರೆ‌. ನಾಲ್ಕುವರೆ ದಿನಗಳಲ್ಲಿ ಈ ಹಾಡಿನ ಚಿತ್ರೀಕರಣ ಮುಗಿದಿದೆ. ಸಹಕಾರ ನೀಡಿದ ನನ್ನ ತಂಡಕ್ಕೆ ಹಾಗೂ ಅಭಿನಯಿಸಿರುವ ಗಣ್ಯರಿಗೆ ಧನ್ಯವಾದ ಎನ್ನುತ್ತಾರೆ ನಿರ್ದೇಶಕ ಸಂತೋಷ್ ಆನಂದ್ ರಾಮ್.

Categories
ಸಿನಿ ಸುದ್ದಿ

ಸ್ವಾತಂತ್ರ್ಯ ದಿನಕ್ಕೆ ಕಾಂತಾರ ಹಾಡು: ಮೊದಲ ಹಾಡಲ್ಲಿ ಜಾನಪದ ಸೊಗಡು…

ಕನ್ನಡ ಚಿತ್ರರಂಗಕ್ಕೆ ಕೆ‌.ಜಿ.ಎಫ್ ನಂತಹ ಸೂಪರ್ ಹಿಟ್ ಚಿತ್ರಗಳನ್ನು ನೀಡಿರುವ ಹೊಂಬಾಳೆ ಫಿಲಂಸ್ ಮೂಲಕ ವಿಜಯ್ ಕಿರಗಂದೂರು ಅವರು ನಿರ್ಮಸಿರುವ “ಕಾಂತಾರ” ಚಿತ್ರದ ಮೊದಲ ಹಾಡು ಸ್ವಾತಂತ್ರ್ಯ ದಿನಾಚರಣೆ ಶುಭ ಸಂದರ್ಭದಲ್ಲಿ ಬಿಡುಗಡೆಯಾಗಲಿದೆ. ನಟ – ನಿರ್ದೇಶಕ ರಿಷಬ್ ಶೆಟ್ಟಿ ಈ ಚಿತ್ರವನ್ನು ನಿರ್ದೇಶಿಸಿರುವುಲ್ಲದೆ, ನಾಯಕರಾಗಿಯೂ ನಟಿಸಿದ್ದಾರೆ.

ಪ್ರಮೋದ್ ಮರವಂತೆ ರಚಿಸಿರುವ “ಸಿಂಗಾರ ಸಿರಿಯೆ” ಎಂಬ ಮನಮೋಹಕ ಹಾಡಿನಲ್ಲಿ ಜಾನಪದ ಸೊಗಡನ್ನು ಎತ್ತಿ ಹಿಡಿಯಲಾಗಿದೆ.

ಗಾಯಕ ವಿಜಯ್ ಪ್ರಕಾಶ್, ಅನನ್ಯ ಭಟ್ ಹಾಗೂ ನಾಗರಾಜ್ ಪನ್ನಾರ್ ವಲ್ಟುರ್ ಅವರ ಕಂಠಸಿರಿಯಲ್ಲಿ ಮೂಡಿಬಂದಿದೆ. ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ.
ರಿಷಬ್ ಶೆಟ್ಟಿ ಹಾಗೂ ಸಪ್ತಮಿ ಗೌಡ ಈ ಹಾಡಿನಲ್ಲಿ ಅಭಿನಯಿಸಿದ್ದಾರೆ.

ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರ ಸೆಪ್ಟೆಂಬರ್ 30ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

error: Content is protected !!