ಕನ್ನಡ ಚಿತ್ರಗಳು ಈಗ ವಿಶ್ವದಾದ್ಯಂತ ಜನಪ್ರಿಯ. ಕನ್ನಡ ಚಿತ್ರಗಳ ಮೇಲೆ ಅಪಾರ ಅಭಿಮಾನವಿರುವ ನೆರೆ ರಾಜ್ಯಗಳ ನಿರ್ಮಾಣ ಸಂಸ್ಥೆಗಳು ಕನ್ನಡ ಚಿತ್ರ ನಿರ್ಮಾಣಕ್ಕೆ ಮುಂದಾಗುತ್ತಿದೆ. ಆಂದ್ರಪ್ರದೇಶದಲ್ಲಿ ಕೆಲವು ತೆಲುಗು ಚಿತ್ರಗಳನ್ನು ನಿರ್ಮಾಣ ಮಾಡಿರುವ ರಮಾ ಅವರು ತಮ್ಮ “ರಮಾಸ್ ಮೀಡಿಯಾ ಕ್ರಿಯೇಷನ್ಸ್” ಎಂಬ ನೂತನ ನಿರ್ಮಾಣ ಸಂಸ್ಥೆಯನ್ನು ಕರ್ನಾಟಕದಲ್ಲೂ ಆರಂಭಿಸಿದ್ದಾರೆ. ಸಂಸ್ಥೆಯ ಲೋಗೊ ರಿಯಲ್ ಸ್ಟಾರ್ ಉಪೇಂದ್ರ ಅವರಿಂದ ಬಿಡುಗಡೆಯಾಯಿತು. ಈ ಸಂಸ್ಥೆಯ ಮೊದಲ ಚಿತ್ರವಾಗಿ ನಿರಂಜನ್ ಸುಧೀಂದ್ರ ಅಭಿನಯದ “ಸೂಪರ್ ಸ್ಟಾರ್” ಪ್ಯಾನ್ ಇಂಡಿಯಾ ಚಿತ್ರ ನಿರ್ಮಾಣವಾಗುತ್ತಿದೆ.
ನಿವೃತ್ತ ಪೊಲೀಸ್ ಅಧಿಕಾರಿ ಸತ್ಯನಾರಾಯಣ ಹಾಗೂ ಅವರ ಮಗಳು ರಮಾ ಈ ಸಂಸ್ಥೆಯ ರುವಾರಿಗಳು.
ನಾವು ತೆಲುಗಿನಲ್ಲಿ “ರಮಾಸ್ ಮೀಡಿಯಾ ಕ್ರಿಯೇಷನ್ಸ್” ಮೂಲಕ ಕೆಲವು ಚಿತ್ರಗಳನ್ನು ನಿರ್ಮಾಣ ಮಾಡಿದ್ದೇವೆ. “ಸೂಪರ್ ಸ್ಟಾರ್” ಚಿತ್ರದ ಮೂಲಕ ನಾನು ಕನ್ನಡ ಚಿತ್ರರಂಗ ಪ್ರವೇಶಿಸಿದ್ದೇನೆ. ನಮ್ಮದು ಸಿನಿಮಾ ನಿರ್ಮಾಣವಲ್ಲದೆ ಸಾಕಷ್ಟು ಬೇರೆಬೇರೆ ಉದ್ಯಮಗಳು ಇವೆ. ಕೆಲಸದ ನಿಮಿತ್ತ ಬೆಂಗಳೂರಿಗೆ ಬಂದಾಗ ನಿರ್ದೇಶಕ ರಮೇಶ್ ವೆಂಕಟೇಶ್ ಬಾಬು ಈ ಚಿತ್ರದ ಬಗ್ಗೆ ಹೇಳಿದರು. ಕೆಲವು ಸಮಯ ತೆಗೆದುಕೊಂಡು ನಂತರ ನಿರ್ಮಾಣ ಮಾಡೋಣ ಅಂದೆ. ನಿರ್ದೇಶಕರು ಹೆಣೆದಿರುವ ಕಥೆ ನನ್ನನ್ನು ಆಕರ್ಷಿಸಿತ್ತು. ನಿರಂಜನ್ ಸುರದ್ರೂಪಿ ನಟ. ಚೆನ್ನಾಗಿ ಅಭಿನಯಿಸುತ್ತಿದ್ದಾರೆ. ನಿರ್ದೇಶಕ ಹಾಗೂ ನಾಯಕ, ಇವರಿಬ್ಬರ ಕಾಂಬಿನೇಷನ್ ನಲ್ಲಿ ಉತ್ತಮ ಚಿತ್ರ ಬರುವುದಂತೂ ಖಚಿತ. ಈ ಚಿತ್ರದ ನಂತರ ಇವರಿಬ್ಬರ ಜೋಡಿಯಲ್ಲೇ ಮತ್ತೊಂದು ಚಿತ್ರ ನಿರ್ಮಾಣ ಮಾಡುತ್ತೇನೆ. ನಮ್ಮ ಸಂಸ್ಥೆಗೆ ನಿಮ್ಮ ಬೆಂಬಲವಿರಲಿ ಎಂದರು ನಿರ್ಮಾಪಕಿ ರಮಾ. ನಿರ್ಮಾಪಕ ಸತ್ಯನಾರಾಯಣ ಅವರು ಸಹ ಚಿತ್ರ ನಿರ್ಮಾಣ ಆರಂಭವಾದ ಬಗ್ಗೆ ಮಾಹಿತಿ ನೀಡಿದರು.
ನಾನು ಹಾಗೂ ನಿರಂಜನ್ ಈ ಚಿತ್ರದ ಕುರಿತು ಮಾತನಾಡುತ್ತಿದ್ದಾಗ, ನಮಗೆ ರಮಾ ಮೇಡಮ್ ಅವರ ಪರಿಚಯವಾಯಿತು. ಅವರಿಗೆ ಕಥೆ ಹೇಳಿದಾಗ, ಕಥೆಯನ್ನು ಮೆಚ್ಚಿಕೊಂಡು ನಿರ್ಮಾಣಕ್ಕೆ ಮುಂದಾಗಿದ್ದಾರೆ. ಯಾವುದೇ ಕೊರೆತೆ ಇಲ್ಲದಂತೆ ಚಿತ್ರವನ್ನು ಅದ್ದೂರಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ ಅವರಿಗೆ, ನನ್ನ ತಂಡಕ್ಕೆ ಹಾಗೂ ಚಿತ್ರ ಆರಂಭದಿಂದ ಪ್ರೋತ್ಸಾಹ ನೀಡುತ್ತಿರುವ ರಿಯಲ್ ಸ್ಟಾರ್ ಉಪೇಂದ್ರ ಅವರಿಗೆ ಧನ್ಯವಾದ . ಚಿತ್ರೀಕರಣ ಬಹುತೇಕ ಪೂರ್ಣವಾಗಿದೆ. ಚಿತ್ರ ಅಂತಿಮಹಂತದಲ್ಲಿದೆ ಎಂದು ನಿರ್ದೇಶಕ ರಮೇಶ್ ವೆಂಕಟೇಶ್ ಬಾಬು ಮಾಹಿತಿ ನೀಡಿದರು.
ನಾನು ಈ ಚಿತ್ರಕ್ಕಾಗಿ ಸಾಕಷ್ಟು ಶ್ರಮವಹಿಸುತ್ತಿದ್ದೇನೆ. ಏಕೆಂದರೆ “ಸೂಪರ್ ಸ್ಟಾರ್” ನನ್ನ ಚಿಕ್ಕಪ್ಪನ ಟೈಟಲ್. ಅವರಿಂದ ಅನುಮತಿ ಪಡೆದು ಶೀರ್ಷಿಕೆಯಿಟ್ಟಿದ್ದೇನೆ. ಆ ಹೆಸರಿಗೆ ಧಕ್ಕೆ ಬಾರದ ಹಾಗೆ ನೋಡಿಕೊಳ್ಳುವುದೇ ನನ್ನ ಮೊದಲ ಆದ್ಯತೆ. ನಮ್ಮ ಮೇಲೆ ನಂಬಿಕೆಯಿಟ್ಟು ಚಿತ್ರ ನಿರ್ಮಾಣಕ್ಕೆ ಮುಂದಾಗಿರುವ “ರಮಾಸ್ ಮೀಡಿಯಾ ಕ್ರಿಯೇಷನ್ಸ್” ಅವರಿಗೆ, ನಿರ್ದೇಶಕರಿಗೆ ,ಆಗಮಿಸಿರುವ ಗಣ್ಯರಿಗೆ ಹಾಗೂ ಕುಟುಂಬದವರಿಗೆ ನಿರಂಜನ್ ಸುಧೀಂದ್ರ ಧನ್ಯವಾದಗಳನ್ನು ತಿಳಿಸಿದರು.
ಪಕ್ಕದ ರಾಜ್ಯದಿಂದ ಕನ್ನಡ ಚಿತ್ರವೊಂದರ ನಿರ್ಮಾಣಕ್ಕೆ ಆಗಮಿಸಿರುವ ಒಳ್ಳೆಯದಾಗಲಿ. ಇನ್ನೂ ನಮ್ಮ ನಿರಂಜನ್ ಸುಧೀಂದ್ರ ಬಹಳ ಶ್ರಮ ಜೀವಿ. ಇತ್ತೀಚೆಗೆ “ಸೂಪರ್ ಸ್ಟಾರ್” ಚಿತ್ರದ ಸಾಹಸ ಸನ್ನಿವೇಶವೊಂದನ್ನು ನಾನು ಹಾಗೂ ಸುದೀಪ್ ನೋಡಿ ಸಂತೋಷಪಟ್ಟೆವು. ಸುದೀಪ್ ಅಂತೂ ನಿರಂಜನ್ ಅಭಿನಯದ ಬಗ್ಗೆ ಉತ್ತಮ ಮಾತುಗಳಾಡಿದರು. ಇವತ್ತು ನಮ್ಮ ನಿರಂಜನ್ ಹುಟ್ಟುಹಬ್ಬ . ಅವನಿಗೆ ಹಾಗೂ ಈ ಚಿತ್ರಕ್ಕೆ ಒಳ್ಳೆಯದಾಗಲಿ ಎಂದು ಉಪೇಂದ್ರ ಹಾರೈಸಿದರು.
ಕರ್ನಾಟಕ ಚಲನಚಿತ್ರ ವಾಣಿಜ್ಯ ಅಧ್ಯಕ್ಷರಾದ ಭಾ.ಮ.ಹರೀಶ್, ಉಪಾಧ್ಯಕ್ಷರಾದ ಶಿಲ್ಪ ಶ್ರೀನಿವಾಸ್ ಮುಂತಾದ ಗಣ್ಯರು ಸಮಾರಂಭಕ್ಕೆ ಆಗಮಿಸಿ ಶುಭ ಕೋರಿದರು. ಇದೇ ಸಂದರ್ಭದಲ್ಲಿ ನಿರಂಜನ್ ಸುಧೀಂದ್ರ ಅವರ ಹುಟ್ಟುಹಬ್ಬ ಆಚರಣೆ ಸಹ ನಡೆಯಿತು .