Deshadri Hosmane
Those who came to journalism with a fighting background. Hew has over 20 years of experience as a journalist and has worked in a variety of fields including politics, crime and agriculture. He is also a film journalist by accident and has been awarded the prestigious Aragini Award by the Karnataka Media Academy. He has worked in evening newspapers like sanjevani, karunaadu Sanje. Also work in tv Chanel. ETV, Udaya TV, Janashree, Vijaya Karnataka and Kannada newspapers.
ದೇಶಾದ್ರಿ ಹೊಸ್ಮನೆ
ಹೋರಾಟದ ಹಿನ್ನೆಲೆಯೊಂದಿಗೆ ಪತ್ರಿಕೋದ್ಯಮ ಕ್ಕೆ ಬಂದವರು. ಪತ್ರಕರ್ತನಾಗಿ 20 ವರ್ಷಗಳಿಗೂ ಹೆಚ್ವು ಕಾಲ ಅನುಭವ ಹೊಂದಿದ್ದು, ರಾಜಕೀಯ, ಅಪರಾಧ, ಕೃಷಿ ಸೇರಿದಂತೆ ಬೇರೆ ಬೇರೆ ಕ್ಷೇತ್ರಗಳಲ್ಲಿ ಕೆಲಸ ಮಾಡಿದ ಅನುಭವಿ. ಹಾಗೆಯೇ ಆಕಸ್ಮಿಕ ಎಂಬಂತೆ ಸಿನಿಮಾ ಪತ್ರಕರ್ತರಾಗಿ ಬಂದ ಅವರು, ಕರ್ನಾಟಕ ಮಾಧ್ಯಮ ಅಕಾಡೆಮಿ ನೀಡುವ ಪ್ರತಿಷ್ಟಿತ ಅರಗಿಣಿ ಪ್ರಶಸ್ತಿ ಗೆ ಪಾತ್ರವಾಗಿದ್ದಾರೆ. ಸಂಜೆ ವಾಣಿ, ಈಟಿವಿ, ಉದಯ ಟಿವಿ, ಜನಶ್ರೀ, ವಿಜಯ ಕರ್ನಾಟಕ, ಕನ್ನಡ ಪ್ರಭ ಪತ್ರಿಕೆಗಳಲ್ಲಿ ಕೆಲಸ ಮಾಡಿದ್ದು, ರಾಜ್ಯ ಕಾರ್ಯ ನಿರತ ಪತ್ರಕರ್ತರ ಸಂಘದ ವಾರ್ಷಿಕ ಪ್ರಶಸ್ತಿ, ನ್ಯೂಸ್ ಮೀಡಿಯಾ ವಿಶೇಷ ಪ್ರಶಸ್ತಿ ಗಳಿಗೆ ಭಾಜನರಾಗಿದ್ದಾರೆ.ಈಗ ಸಿನಿ ಲಹರಿ ವೆಬ್ ಸೈಟ್ ಹಾಗೂ ಯುಟ್ಯೂಬ್ ಚಾನೆಲ್ ರೂವಾರಿ ಆಗಿದ್ದಾರೆ.
ಪ್ರತಿಷ್ಟಿತ ಆಸ್ಕರ್ ಪ್ರಶಸ್ತಿ ಯ ಪಟ್ಟಿಯಲ್ಲಿ ಈ ಬಾರಿ ಹೊಸ ಇತಿಹಾಸ ದಾಖಲಾಗಿದೆ. 2021ನೇ ಸಾಲಿನ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಪಟ್ಟಿ ಪ್ರಕಟವಾಗಿದ್ದು , ಅತ್ಯುತ್ತಮ ನಿರ್ದೇಶಕಿಯಾಗಿ ಚೀನಾ ಮೂಲದ ಕ್ಲೋಯಿ ಜೋವ್ ಆಸ್ಕರ್ ಪ್ರಶಸ್ತಿಗೆ ಪಾತ್ರವಾಗಿದ್ದಾರೆ.ಈ ಮೂಲಕ ಆಸ್ಕರ್ ಗೆ ಮುತ್ತಿಟ್ಟ ಏಷಿಯಾ ಮೊದಲ ಮಹಿಳಾ ನಿರ್ದೇಶಕಿ ಎನ್ನುವ ಖ್ಯಾತಿಗೆ ಚೀನಾದ ಕೋಯ್ಲಿ ಜಾವ್ ಭಾಜನರಾಗಿದ್ದಾರೆ.
2021 ಆಸ್ಕರ್ ಪ್ರಶಸ್ತಿ ಆಯ್ಕೆ ಲಾಸ್ ಏಂಜಲೀಸ್ ನಲ್ಲಿ ನಡೆಯುತ್ತಿದೆ. ಯೂನಿಯನ್ ಸ್ಟೇಷನ್ ಮತ್ತು ಡಾಲ್ಬಿ ಥಿಯೇಟರ್ ಎರಡು ಕಡೆ ನಡೆಯುತ್ತಿದೆ. ‘ನೋಮಡ್ ಲ್ಯಾಂಡ್’ ಚಿತ್ರದ ಅತ್ಯುತ್ತಮ ನಿರ್ದೇಶನಕ್ಕೆ ಕ್ಲೋಯಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. 93 ವರ್ಷದ ಅಕಾಡೆಮಿ ಅವಾರ್ಡ್ ಇತಿಹಾಸದಲ್ಲಿ ನಿರ್ದೇಶನ ವಿಭಾಗದಲ್ಲಿ ಪ್ರಶಸ್ತಿ ಗೆದ್ದ ಎರಡನೇ ಮಹಿಳೆ ಕ್ಲೋಯಿ ಜೋವ್ ಆಗಿದ್ದಾರೆ.
ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಯನ್ನು ‘ಮಿನಾರಿ’ ಚಿತ್ರದ ನಟನೆಗೆ ಯೂನ್ ಯುಹ್ ಜಂಗ್ ಪಡೆದುಕೊಂ ಡಿದ್ದಾರೆ. ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಡೇನಿಯಲ್ ಕಲುಯಾ ಪಾಲಾಗಿದೆ.
ಕೊನೆಗೂ ರಾಜ್ಯ ಸರ್ಕಾರ ಕೊರೋನಾ ನಿಯಂತ್ರಣಕ್ಕೆ ಟಫ್ ರೂಲ್ಸ್ ಜಾರಿಗೊಳಿಸಿದೆ. ಇದು ಲಾಕ್ ಡೌನ್ ಎನ್ನುವುದರ ಇನ್ನೊಂದು ರೂಪವೇ. ಲಾಕ್‌ಡೌನ್ ಎನ್ನುವ ಬದಲಿಗೆ ಟಫ್ ರೂಲ್ಸ್ ಹೆಸರಲ್ಲಿ ಅಘೋಷಿತ ಲಾಕ್ ಡೌನ್‌ಹೇರಿದೆ. ಆಸ್ಪತ್ರೆ, ಹಣ್ಣು-ಹಂಪಲು, ತರಕಾರಿ ಮಾರಾಟ ಸೇರಿದಂತೆ ಅಗತ್ಯ ಸೇವೆಗಳ ಓಡಾಟಕ್ಕೆ ಅವಕಾಶ ಇದೆ. ಉಳಿದಂತೆ ಎಲ್ಲವೂ ಗುರುವಾರ ಮಧ್ಯಾಹ್ನದಿಂದಲೇ ಬಂದ್ ಆಗಿವೆ. ಸಹಜವಾಗಿಯೇ ಇದರ ಎಫೆಕ್ಟ್ ಮನರಂಜನಾ ಕ್ಷೇತ್ರದ ಮೇಲೂ ಬಿದ್ದಿದೆ. ಸಿನಿಮಾ ಅಥವಾ ಸೀರಿಯಲ್ ಚಿತ್ರೀಕರಣಕ್ಕೆ ಸರ್ಕಾರ ನಿರ್ಧಿಷ್ಟವಾಗಿ ಏನನ್ನು ಹೇಳಿಲ್ಲ. ಸಭೆ-ಸಮಾರಂಭ ನಡೆಸುವಂತಿಲ್ಲ, ಗುಂಪು ಸೇರುವಂತಿಲ್ಲ ಅಂತೆಲ್ಲ ಆದೇಶ ನೀಡಿರುವುದರಿಂದ ಅದು ಸಿನಿಮಾ ಚಟುವಟಿಕೆಗಳಿಗೂ ಅನ್ವಯಿಸುತ್ತದೆ. ಅದರ ಇಂಫ್ಯಾಕ್ಟ್ ಈಗಾಗಲೇ ಸಿನಿಮಾ ಹಾಗೂ ಸೀರಿಯಲ್ ಕ್ಷೇತ್ರದ ಮೇಲೂ ಆಗಿದೆ. ಚಿತ್ರೀಕರಣದ ಹಂತದಲ್ಲಿದ್ದ ಸಾಕಷ್ಟು ಸಿನಿಮಾಗಳ ಚಿತ್ರೀಕರಣ ಗುರುವಾರದಿಂದಲೇ ಸ್ಟಾಪ್ ಆಗಿದೆ. ಸೀರಿಯಲ್ ಚಿತ್ರೀಕರಣ ಬಂದ್ ಆಗಿರುವುದರ ಬಗ್ಗೆ ಈವರೆಗೂ ಯಾವುದೇ ಮಾಹಿತಿ ದೊರೆತಿಲ್ಲ. ಆದರೆ ಸದ್ಯದ ಪರಿಸ್ಥಿತಿ ನೋಡಿದರೆ ಸೀರಿಯಲ್ ಚಿತ್ರೀಕರಣಕ್ಕೂ ಟಫ್ ರೂಲ್ಸ್ ಎಫೆಕ್ಟ್ ಬೀರುವುದು ಗ್ಯಾರಂಟಿ. ಹಾಗೊಂದು ವೇಳೆ, ಸಿನಿಮಾ ಹಾಗೂ ಸೀರಿಯಲ್ ಚಿತ್ರೀಕರಣದ ಚಟುವಟಿಕೆಗಳ ಸಂಪೂರ್ಣವಾಗಿ ಬಂದ್ ಆದ್ರೆ ಈಕ್ಷೇತ್ರಗಳನ್ನೆ ನಂಬಿಕೊಂಡವರ ಪರಿಸ್ಥಿತಿ ಶೋಚನೀಯ ಆಗುವುದು ಕಟ್ಟಿಟ್ಟ ಬುತ್ತಿ .
ಸಿನಿಮಾ ಅಥವಾ ಸೀರಿಯಲ್ ಅಂದಾಕ್ಷಣ ಜನ ಸಾಮಾನ್ಯರಿಗೆ ಬರುವ ಆಲೋಚನೆಯೇ ಬೇರೆ. ಅದೊಂದು ತಳಕು-ಬಳುಕಿನ ಜಗತ್ತು. ಅಲ್ಲಿನ ಜನರು ಸಹಜವಾಗಿಯೇ ಸುಖವಾಗಿದ್ದಾರೆನ್ನುವುದು ಸಹಜವಾದ ತಿಳಿವಳಿಕೆ.ಇವೆರೆಡು ಬಣ್ಣದ ಜಗತ್ತು ಅನ್ನೋದು ಕೂಡ ಅದಕ್ಕೆ ಕಾರಣ. ಆದ್ರೆ ಅದು ವಾಸ್ತವವಲ್ಲ. ಈಗಾಗಲೇ ಗೊತ್ತಿರುವಂತೆ ಕನ್ನಡ ಚಿತ್ರರಂಗದ ವಾರ್ಷಿಕ ಸಕ್ಸಸ್ ರೇಟ್ ಕೇವಲ 5 ರಷ್ಟು. ವರ್ಷಕ್ಕೆ ನೂರಿನ್ನೂರು ಚಿತ್ರಗಳು ಬಿಡುಗಡೆ ಯಾದರೂ, ಗೆಲ್ಲುವುದು ಮಾತ್ರ ಬೆರಳೆಣಿಕೆಯ ಚಿತ್ರಗಳು. ಹಾಗೆಯೇ ಇಲ್ಲಿ ಎಲ್ಲಾ ಸೌಲಭ್ಯಗಳನ್ನು ಪಡೆದು ಸುಖವಾಗಿರುವವರ ಸಂಖ್ಯೆ ಕೂಡ ಕೇವಲ ೫ ರಷ್ಟು. ಉಳಿದ ಶೇ. 95 ರಷ್ಟು ಜನರ ಬದುಕು ದಿನಗೂಲಿಗಳಿಗಿಂತ ಭಿನ್ನವಾಗಿಲ್ಲ. ಅವರೆಲ್ಲ ಒಂದೂತ್ತಿನ ಅನ್ನಕ್ಕೂ ನಿತ್ಯ ದುಡಿಯಲೇಬೇಕು. ಅವರ ಪಾಡು ಈಗ ಅಕ್ಷರಶಃ ಬೀದಿ ಪಾಲಾಗಿದೆ.
ಕಳೆದ ಒಂದು-ಒಂದೂವರೆ ವರ್ಷದಿಂದ ಅವರಿಗೆ ಕೈ ತುಂಬಾ ಕೆಲಸ ಇಲ್ಲ. ಕೊರೋನಾ ಬಂದು ಅವರ ನೆಮ್ಮದಿ ಹಾಳಾಗಿದೆ. ವಾರಕ್ಕೆ ಒಂದು ದಿನ ಕೆಲಸ ಮಾತ್ರ. ಅಲ್ಲಿ ಸಿಕ್ಕ ಕೂಲಿಯಲ್ಲಿಯೇ ಅವರೆಲ್ಲ ವಾರದಷ್ಟು ಖರ್ಚು ವೆಚ್ಚ ನೋಡಿಕೊಳ್ಳಬೇಕಿದೆ. ಅದೇ ಬದುಕಿಗೆ ಈಗ ಮತ್ತೆ ಲಾಕ್ ಡೌನ್ ಗರ ಬಡಿದಿದೆ. ವಾರಕ್ಕೆ ಒಂದೋ, ಎರಡೋ ದಿನ ಸಿಗುತ್ತಿದ್ದ ಕೂಲಿಗೂ ಈಗ ಕಲ್ಲು ಬಿದ್ದಿದೆ. ಫ್ಯಾಕ್ಟರಿಗಳಿಗೆ, ಸರ್ಕಾರಿ ಕಚೇರಿಗಳಿಗೆ, ಖಾಸಗಿ ಕಂಪನಿಗಳಲ್ಲೂ ಇಂತಿಷ್ಟೇ ಜನ ಕೆಲಸ ಮಾಡ್ಬೇಕು ಅಂತ ಸರ್ಕಾರ ಗೈಡ್ ಲೈನ್ಸ್ ಕೊಟ್ಟಿದೆ. ಸಿನಿಮಾ ಮತ್ತು ಸೀರಿಯಲ್ ಕ್ಷೇತ್ರಕ್ಕೆ ಇಂತಹ ಯಾವುದೇ ಗೈಡ್ ಲೈನ್ಸ್ ನೀಡದೆ ಮೋಸ ಮಾಡಿದೆ. ಈ ಕ್ಷೇತ್ರಗಳನ್ನೇ ನಂಬಿ ಬದುಕುವವರು ಬೀದಿಗೆ ಬೀಳುವಂತಾಗಿದೆ. ಸರ್ಕಾರ ತಕ್ಷಣವೇ ಸಿನಿಮಾ ಮತ್ತು ಸೀರಿಯಲ್ ಚಿತ್ರೀಕರಣದ ಚಟುವಟಿಕೆಗಳಿಗೂ ಸೂಕ್ತ ಗೈಡ್ ಲೈನ್ಸ್ ಹೊರಡಿಸಿ, ಅಲ್ಲಿನ ಕಾರ್ಮಿಕರಿಗೂ ಕೆಲಸ ಮಾಡುವ ಅವಕಾಶ ನೀಡಬೇಕು. ಹಾಗೆಯೇ ಸೂಕ್ತ ಮುಂಜಾಗ್ರತೆ ವಹಿಸುವಂತೆ ಪ್ರೊಡಕ್ಷನ್ ಹೌಸ್ ಗಳಿಗೆ ಸೂಚನೆ ನೀಡಬೇಕು. ಹಾಗಾದಾಗ ಮಾತ್ರ ಸಿನಿಮಾ ಮತ್ತು ಸೀರಿಯಲ್ ಕ್ಷೇತ್ರಗಳನ್ನೇ ನಂಬಿಕೊಂಡು ಬದುಕುತ್ತಿರುವ ಕಾರ್ಮಿಕರು, ಕಲಾವಿದರಿಗೂ ಒಳೀತು.
ಡಿಂಪಲ್ ಕ್ವೀನ್ ರಚಿತಾ ರಾಮ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗುತ್ತಿದ್ದಾರೆ. ಈಗವರು ಶಬರಿ ಆಗಿ ತೆರೆ ಮೇಲೆ ಬರಲು ರೆಡಿ ಆಗಿದ್ದಾರೆ. ಹೌದು, ಶಬರಿ ಹೆಸರಿನ ಚಿತ್ರವೊಂದಕ್ಕೆ ಗುಳಿಕೆನ್ನೆ ಚೆಲುವೆ ರಚಿತಾ ರಾಮ್ ಫಿಕ್ಸ್ ಆಗಿದ್ದಾರೆ. ಶ್ರೀರಾಮ ನವಮಿ ದಿನವಾದ ಬುಧವಾರ ರಚಿತಾ ರಾಮ್ ಶಬರಿ ಆಗಿ ಅಭಿಮಾನಿಗಳ ಮುಂದೆ ಬರುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಹೌದು, ಡಿಂಪಲ್ ಕ್ವೀನ್ ರಚಿತಾ ರಾಮ್ ಅಭಿನಯದ ಹೊಸ ಚಿತ್ರಕ್ಕೆ ಶಬರಿ ಸರ್ಚಿಂಗ್ ಫಾರ್ ರಾವಣ ಅಂತ ಶೀರ್ಷಿಕೆ ಇಡಲಾಗಿದೆ. ಇದು ರಚಿತಾ ಅವರ ೩೬ ನೇ ಸಿನಿಮಾ. ರಾಮ ನವಮಿಯ ವಿಶೇಷವಾಗಿ ಚಿತ್ರದ ಫಸ್ಟ್ ಲುಕ್ ಮತ್ತು ಟೈಟಲ್ ಬಿಡುಗಡೆ ಮಾಡಲಾಗಿದೆ. ಪೋಸ್ಟರ್ ನಲ್ಲಿ ಉಗ್ರ ಅವತಾರ ತಾಳಿರುವ ರಚಿತಾ ಲುಕ್ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.ಅಂದಹಾಗೆ ಶಬರಿ ಸರ್ಚಿಂಗ್ ಫಾರ್ ರಾವಣ ಚಿತ್ರಕ್ಕೆ ನವೀನ್ ಶೆಟ್ಟಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇಷ್ಟು ದಿನ ಇಂಡಸ್ಟ್ರಿನಲ್ಲಿ ಸಂಕಲನಕಾರನಾಗಿ ಗುರುತಿಸಿಕೊಂಡಿದ್ದ ನವೀನ್ ಶಬರಿ ಸಿನಿಮಾ ಮೂಲಕ ನಿರ್ದೇಶಕರಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಇದೊಂದು ಮಹಿಳಾ ಪ್ರಧಾನ ಚಿತ್ರ. ಇದರಲ್ಲಿ ರಚಿತಾ ರಾಮ್ ವಿಭಿನ್ನವಾಗಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ಪೋಸ್ಟರ್ ಶೇರ್ ಮಾಡಿರುವ ರಚಿತಾ, ಎಲ್ಲರಿಗೂ ಶ್ರೀರಾಮ ನವಮಿಯ ಶುಭಾಶಯ ತಿಳಿಸಿದ್ದಾರೆ. ಜೊತೆಗೆ ಹೊಸ ಸಿನಿಮಾಗೆ ಎಲ್ಲರ ಆಶೀರ್ವಾದ ಇರಲಿ ಎಂದು ಕೇಳಿಕೊಂಡಿದ್ದಾರೆ. ಇನ್ನು ಶಬರಿ ಸರ್ಚಿಂಗ್ ಫಾರ್ ರಾವಣ ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ರಚಿತಾ ರಾಮ್ ಬಳಿ ಸದ್ಯ ಬ್ಯಾಡ್ ಮ್ಯಾನರ್ಸ್, ರಚ್ಚು ಐ ಲವ್ ಯು, ವೀರಂ, ಮ್ಯಾಟ್ನಿ, ಲಿಲ್ಲಿ, ಏಪ್ರಿಲ್, ಡಾಲಿ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ರಚಿತಾ ಬ್ಯುಸಿಯಾಗಿದ್ದಾರೆ
ಕೊರೋನಾ ಪರಿಸ್ಥಿತಿಯನ್ನು ನಿಯಂತ್ರಿಸುವಲ್ಲಿ ರಾಜ್ಯ ಸರ್ಕಾರ ತೋರಿರುವ ನಿರ್ಲಕ್ಷ್ಯಕ್ಕೆ ನಟ ಉಪೇಂದ್ರ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಸದ್ಯ ರಾಜ್ಯಾದ್ಯಂತ ಜನ ಸಾಮಾನ್ಯರ ಪರಿಸ್ಥಿತಿ ನೋಡಿದ್ರೆ, ಕರಳು ಹಿಂಡುತ್ತದೆ. ಆಸ್ಪತ್ರೆಗಳಲ್ಲಿ ಸಕಾಲಕ್ಕೆ ಸರಿಯಾದ ಚಿಕಿತ್ಸೆ ಸಿಗದ ಜನರ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇಂತಹ ಭೀಕರ ಪರಿಸ್ಥಿತಿ ಬರಬಹುದು ಅಂತ ಗೊತ್ತಿದ್ದರೂ ಸರ್ಕಾರಗಳು ಬಹುದೊಡ್ಡ ನಿರ್ಲಕ್ಷ್ಯ ತೋರಿದವು. ಅದೇ ಇವತ್ತಿನ ಪರಿಸ್ಥಿತಿಗೆಲ್ಲ ಕಾರಣ ಅಂತ ಉಪೇಂದ್ರ, ಕಿಡಿಕಾರಿದರು. ʼಲಗಾಮ್ʼ ಚಿತ್ರದ ಮುಹೂರ್ತದ ವೇಳೆ ಮಾಧ್ಯಮದವರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದರು.
ಚುನಾವಣೆ ಬಂದಾಗ ಯಾಕೆ ಯೋಚಿಸುವುದಿಲ್ಲ..?
ಮಿತಿ ಮೀರಿದ ಕೊರೋನಾ ಪರಿಸ್ಥಿತಿ, ಜನರ ಸಾವು_ನೋವಿನ ಘಟನಗೆಳಿಗೆ ಪ್ರಜಾಕೀಯದ ಪ್ರತಿಕ್ರಿಯೆ ಏನು ಎನ್ನುವ ಮಾಧ್ಯಮದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, ಶಿಕ್ಷಣ ಖಾಸಗೀಕರಣ ಆದಂತೆಯೇ ಇವತ್ತು ರಾಜಕೀಯ ಅನ್ನೋದು ಬಿಸಿನೆಸ್ ಆಗಿರೋದ್ರಿಂದಲೇ ಜನರು ಇವತ್ತು ಅಸ್ಪತ್ರೆಗಳಲ್ಲಿ ಸಕಾಲಕ್ಕೆ ಸೌಲಭ್ಯ ಸಿಗದೆ ಜೀವ ಕಳೆದುಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಲ್ಲಿ ಯಾರದು ಸರಿ, ಯಾರದು ತಪ್ಪು ಅಂತ ಹೇಳೋದೆ ಕಷ್ಟ. ಯಾಕಂದ್ರೆ ಜನ ಕೂಡ ಚುನಾವಣೆಗಳು ಬಂದಾಗ ತಮ್ಮ ಜವಾಬ್ದಾರಿಗಳನ್ನು ಮರೆತು ಬಿಡುತ್ತಾರೆ. ಆಗ ಜಾತಿ, ಹಣ, ಪಕ್ಷ ಅಂತೆಲ್ಲ ತಮ್ಮ ಮತಗಳನ್ನು ಇನ್ನಾವುದಕ್ಕೋ ಮೀಡಲಿಡುತ್ತಾರೆ. ಆಮೇಲೆ ಇಂತಹ ಪರಿಸ್ಥಿತಿ ನಿರ್ಮಾಣ ಆದಾಗ ಪ್ರತಿಭಟನೆ, ಧರಣಿ ಅಂತೆಲ್ಲ ಮಾತನಾಡುತ್ತಾರೆ ಅಂತ ಉಪೇಂದ್ರ ಬೇಸರ ಹೊರ ಹಾಕಿದರು.
ಕೊರೋನಾ ಅಂತ ಭಯ ಬೇಡ, ಧೈರ್ಯದಿಂದಿರಿ
ಖಾಸಗಿ ಆಸ್ಪತ್ರೆಗಳ ವೈದ್ಯರ ಪರಿಸ್ಥಿತಿ ಬಗ್ಗೆಯೂ ಮಾತನಾಡುವಂತಿಲ್ಲ. ಅವರು ಕೂಡ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮೆಡಿಕಲ್ ಕೊರ್ಸ್ ಮುಗಿಸಿ ಬಂದಿರುತ್ತಾರೆ. ಹಾಗೆಯೇ ಕೊಟ್ಯಾಂತರ ರೂ. ಖರ್ಚು ಮಾಡಿ ಆಸ್ಪತ್ರೆ ಕಟ್ಟುಕೊಂಡಿರುತ್ತಾರೆ. ಅವರು ತಮ್ಮ ಖರ್ಚು ವೆಚ್ಚಗಳ ನ್ನು ನೋಡಿಕೊಳ್ಳುವುದಕ್ಕೆ ಜನರಿಂದ ದುಬಾರಿ ಹಣ ಪಡೆಯುತ್ತಾರೆ. ಇದೆಲ್ಲದಕ್ಕೆ ಯಾರನ್ನು ದೂರೋಣ? ಇದಕ್ಕೆ ಇರೋದು ಒಂದೇ ದಾರಿ, ಜನರು ಚುನಾವಣೆ ಬಂದಾಗ ವಿಚಾರವಂತರಾಗಬೇಕು. ಸರಿಯಾದ ವ್ಯಕ್ತಿಗಳನ್ನು ಗೆಲ್ಲಿಸಿಕೊಳ್ಳಬೇಕು ಅಂತ ಉಪೇಂದ್ರ ಕಿವಿ ಮಾತು ಹೇಳಿದರು. ಹಾಗೆಯೇ ಕೊರೋನಾ ಅಂತ ಭಯ ಪಡುವುದು ಬೇಡ. ಧೈರ್ಯದಿಂದ ಇರಿ. ಕೆಲವೊಮ್ಮೆ ನಮ್ಮ ಧೈರ್ಯವೇ ರೋಗಕ್ಕೆ ಮದ್ದು. ಇದನ್ನು ಪಾಲಿಸಿ. ಹಾಗಂತ ಮಾಸ್ಕ್ ಹಾಗೂ ಸಾನಿಟೈಸರ್ ಬಳಸುವುದನ್ನು ಮರೆಯಬೇಡಿ ಅಂತ ಉಪೇಂದ್ರ ಹೇಳಿದರು.
ʼಗಜʼ ಚಿತ್ರದ ಖ್ಯಾತಿಯ ನಿರ್ದೇಶಕ ಕೆ. ಮಾದೇಶ್ ಇದೇ ಮೊದಲ ಬಾರಿಗೆ ನಾಲ್ಕು ಭಾಷೆಗಳಲ್ಲಿ ಹೊಚ್ಚ ಹೊಸ ಚಿತ್ರಕ್ಕೆ ಕೈ ಹಾಕಿದ್ದಾರೆ. ಅದರ ಹೆಸರೇ “ಲಗಾಮ್’. ಇದೇ ಶುಭ ಸೋಮವಾರ “ಲಗಾಮ್ʼ ಚಿತ್ರದ ಮುಹೂರ್ತ ಕಂಠೀರವ ಸ್ಟುಡಿಯೋದಲ್ಲಿ ಅದ್ಧೂರಿಯಾಗಿ ನೆರವೇರಿತು. ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್, ಚಿತ್ರಕ್ಕೆ ಮೊದಲ ಕ್ಲಾಪ್ ಮಾಡುವ ಮೂಲಕ ತಂಡಕ್ಕೆ ಶುಭ ಹಾರೈಸಿದರು. “ಲಗಾಮ್ʼ ಒಂದೊಳ್ಳೆ ಸಂದೇಶ ಇರುವ ಅದ್ಧೂರಿ ಕಮರ್ಷಿಯಲ್ ಸಿನಿಮಾ ಅಂತಾರೆ ಚಿತ್ರದ ನಾಯಕ ರಿಯಲ್ ಸ್ಟಾರ್ ಉಪೇಂದ್ರ. ಈ ರೀತಿಯ ಅದ್ದೂರಿ ಮುಹೂರ್ತ ಮಾಡಿ ಎರಡು ವರ್ಷಗಳೇ ಆಗಿತ್ತು. ಆದರೆ ಕೊರೋನಾ ಸಮಯದಲ್ಲೂ ಇಷ್ಟೊಂದು ಗ್ರ್ಯಾಂಡ್ ಆಗಿ ಮುಹೂರ್ತ ಮಾಡಿರುವುದೇ ಒಂದು ಪಾಸಿಟಿವ್ ಎನರ್ಜಿ. ಸಿನಿಮಾನೂ ಇಷ್ಟೇ ಗ್ರ್ಯಾಂಡಾಗಿ ಮೂಡಿಬರಲಿದೆ ಎಂಬ ಭರವಸೆ ನನಗಂತೂ ಇದೆ. ಒಳ್ಳೆ ತಂತ್ರಜ್ಞರು, ಒಳ್ಳೆ ಕಲಾವಿದರಿರುವ ಪಕ್ಕಾ ಕಮರ್ಷಿಯಲ್ ಸಿನಿಮಾ. ಒಂದೊಳ್ಳೆ ಮೆಸೇಜ್ ಇರುವ ಎಂಟರ್‌ಟೈನರ್ ಚಿತ್ರ. ಲಗಾಮ್ ಕನ್ನಡದ ಲಗಾನ್ ಆಗುತ್ತೆ ಎಂಬ ವಿಶ್ವಾಸವಿದೆ. ಕಬ್ಜಾ ದೊಡ್ಡ ಮಟ್ಟದ ಸಿನಿಮಾ, ಸೆಟ್‌ನಲ್ಲಿಯೇ ಬಹುತೇಕ ಶೂಟಿಂಗ್ ಮಾಡಲಾಗುತ್ತಿದೆ. ಹೀಗಾಗಿಯೇ ಸಾಕಷ್ಟು ಸಮಯ ಬೇಕು. ಅದೇ ಸಮಯದಲ್ಲಿ ಈ ಸಿನಿಮಾ ಮಾಡುತ್ತಿದ್ದೇನೆ' ಎಂದು ಲಗಾಮ್ ಚಿತ್ರದ ಬಗ್ಗೆ ಮಾಹಿತಿ ನೀಡಿದರು ಚಿತ್ರದ ನಾಯಕ ರಿಯಲ್ ಸ್ಟಾರ್ ಉಪೇಂದ್ರ. ನಿರ್ದೇಶಕ ಕೆ. ಮಾದೇಶ್ ಮಾತನಾಡಿ,ಲಗಾಮ್ ಕನ್ನಡ, ಹಿಂದಿ, ತೆಲುಗು, ತಮಿಳು ಹೀಗೆ ನಾಲ್ಕು ಭಾಷೆಗಳಲ್ಲಿ ಅದ್ದೂರಿ ಮೇಕಿಂಗ್‌ನಲ್ಲಿ ಮೂಡಿಬರಲಿರುವ ಕಮರ್ಷಿಯಲ್ ಸಿನಿಮಾ. ಮುಂದಿನ ಸೋಮವಾರದಿಂದ ಮೈಸೂರಿನಲ್ಲಿ ಮೊದಲ ಹಂತದ ಚಿತ್ರೀಕರಣ ಪ್ರಾರಂಭ ಮಾಡಲಿದ್ದೇವೆ. ಭ್ರಷ್ಟಾಚಾರಕ್ಕೆ, ಮೋಸಕ್ಕೆ, ವಂಚನೆಗೆ, ಅತ್ಯಾಚಾರಕ್ಕೆ, ದ್ರೋಹಕ್ಕೆ, ಕೊರನಾಗೆ ಲಗಾಮ್ ಹಾಕೋದೇ ಈ ಚಿತ್ರದ ಥೀಮ್’ ಎಂದು ನಗುತ್ತಲೇ ಚಿತ್ರದ ಬಗ್ಗೆ ಹೇಳಿಕೊಳ್ಳುತ್ತಾರೆ.
ಇನ್ನು ಈಗ್ಗೆ ಐದಾರು ವರ್ಷಗಳ ಹಿಂದೆ ಉಪೇಂದ್ರ ಅವರ ಜೊತೆ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದ ನಟಿ ಹರಿಪ್ರಿಯಾ ಅವರಿಗೆ ಮೊದಲ ಬಾರಿಗೆ ಸಿನಿಮಾದಲ್ಲಿ ರಿಯಲ್ ಸ್ಟಾರ್ ಗಿ ನಾಯಕಿಯಾಗಿ ತೆರೆ ಹಂಚಿಕೊಳ್ಳುತ್ತಿರುವ ಸಂಭ್ರಮ. `ಮೊದಲ ಬಾರಿ ಉಪ್ಪಿ ಸರ್ ಜೊತೆ ಸಿನಿಮಾದಲ್ಲಿ ನಟಿಸುತ್ತಿರುವ ಖುಷಿಯಿದೆ. ಹಾಗೇ ಸಾಧು ಕೋಕಿಲಾ ಸರ್ ಅವರ ಮ್ಯೂಸಿಕ್ ಅಂದರೆ ನನಗೆ ತುಂಬಾ ಇಷ್ಟ. ಇದೇ ಮೊದಲ ಬಾರಿಗೆ ನನ್ನ ಸಿನಿಮಾಗೆ ಅವರು ಮ್ಯೂಸಿಕ್ ನೀಡುತ್ತಿರುವುದು ನನಗೆ ಮತ್ತಷ್ಟು ಖುಷಿ ನೀಡಿದೆ. ಇತ್ತೀಚಿನ ದಿನಗಳಲ್ಲಿ ಪೌರಾಣಿಕ, ಐತಿಹಾಸಿಕ ಸಿನಿಮಾಗಳಲ್ಲೇ ಹೆಚ್ಚು ನಟಿಸುತ್ತಿದ್ದೆ. ಆದರೆ ಈ ಸಿನಿಮಾದಲ್ಲಿ ಈಗಿನ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದೇನೆ. ಒಳ್ಳೆಯ ಕಥೆ ಇದೆ’ ಎಂದು ಖುಷಿಯಿಂದ ಮತ್ತೆ ಗ್ಲಾಮರ್ ಗೊಂಬೆಯಾಗಿ ಮಿಂಚಲು ಅವಕಾಶ ಸಿಕ್ಕಿರುವ ಬಗ್ಗೆ ಸಂತಸ ವ್ಯಕ್ತಪಡಿಸುತ್ತಾರೆ ನಟಿ ಹರಿಪ್ರಿಯಾ. ಸಾಧು ಕೋಕಿಲಾ ಅವರು ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡುವುದರ ಜತೆಗೆ ಪ್ರಮುಖ ಪಾತ್ರದಲ್ಲೂ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಭಯ, ಭಯ, ಅಂತ ಈಗ ಜನಕ್ಕೆ ಜೀವ ಭಯವೇ ಆವರಿಸಿಕೊಂಡಿದೆ. ಈ ಟೈಮ್‌ನಲ್ಲಿ ಯಾರಾದ್ರೂ ಟಾಕೀಸ್‌ಗೆ ಬಂದು ಸಿನಿಮಾ ನೋಡೋದು ನಿಜವೇ ? ಗೊತ್ತಿಲ್ಲ, ಇಡೀ ಚಿತ್ರರಂಗಕ್ಕೆ ಇಂತಹದೊಂದು ಪ್ರಶ್ನೆ ಕಾಡ್ತಿರೋ ಹೊತ್ತಲ್ಲಿಯೇ ಕಳೆದ ಶುಕ್ರವಾರ “ಕೃಷ್ಣ ಟಾಕೀಸ್ʼ ಹಾಗೂ “ರಿವೈಂಡ್ʼ ಹೆಸರಿನ ಎರಡು ಸಿನಿಮಾ ರಿಲೀಸ್‌ಆಗಿದ್ದವು.ಈ ಸಿನ್ಮಾ ಟೀಮ್‌ನವರಿಗೆ ಅದೆಂತಹ ಕಾನ್ಪಿಡೆನ್ಸ್‌ಇತ್ತೇನೋ ಗೊತ್ತಿಲ್ಲ, ಆದ್ರೂ ಅವತ್ತು ಈ ಸಿನ್ಮಾ ರಿಲೀಸ್‌ಮಾಡಿದ್ದರು. ಹಾಗಂತ ಅವರ ನಿರೀಕ್ಷೆ ನಿಜವಾಯ್ತಾ ? ಇಲ್ಲ, ಈ ಸಿನ್ಮಾಗಳೆರೆಡು ರಿಲೀಸ್ ಆ ದಿನ ಟಾಕೀಸ್‌ಒಳಗಡೆ ಇವತ್ತು ಕಂಡಿದ್ದೇ ಬೇರೆ. ಚಿತ್ರ ತೆರೆ ಕಂಡ ಮುಖ್ಯ ಚಿತ್ರಮಂದಿರಗಳಲ್ಲೇ ಹತ್ತಿಪ್ಪತ್ತು ಜನ ಇರಲಿಲ್ಲ. ಪಾಪ, ಬಂಡವಾಳ ಹಾಕಿ ಸಿನಿಮಾ ಮಾಡಿದ ನಿರ್ಮಾಪಕರ ಕಥೆ ಏನು?
ಕೊರೋನಾ ಅಂತ ಚಿತ್ರೋದ್ಯಮ ಕಂಗಾಲಾಗಿ ಕುಳಿತಿರುವಾಗ ಸಿನಿಮಾ ಮಾಡಿದ ನಿರ್ಮಾಪಕರ ಪರಿಸ್ಥಿತಿ ಇತರರಗಿಂತ ಭಿನ್ನವಾಗಿಲ್ಲ. ಕೋಟಿ ಕೋಟಿ ಹಣ ಸುರಿದು ಸಿನಿಮಾ ನಿರ್ಮಾಣ ಮಾಡುವ ನಿರ್ಮಾಪಕರು ಕೂಡ ತತ್ತರಿಸಿ ಹೋಗುವ ಹಾಗೆ ಮಾಡಿದ ಕೋರೋನಾ ಎನ್ನುವ ಮಾಹಾಮಾರಿ. ಕೋಟಿ ನಿರ್ಮಾಪಕರ ಸ್ಥಿತಿಯೇ ಹೀಗಿರಬೇಕಾದ್ರೆ, ಸಣ್ಣ ಪುಟ್ಟವರು ಕಥೆ ಏಂತೂ ? ಆ ಕಥೆ ಇನ್ನು ಘೋರ. ಪರಿಸ್ಥಿತಿ ಹೀಗಿರುವಾಗ ಕಷ್ಟಪಟ್ಟು , ಬಂಡವಾಳ ಹಾಕಿ ಸಿನಿಮಾ ನಿರ್ಮಾಣ ಮಾಡಿದ ನಿರ್ಮಾಪಕರಿಗೆ ತಮ್ಮ ಚಿತ್ರ ರಿಲೀಸ್‌ಆದಾಗ ಚಿತ್ರ ಮಂದಿರದಲ್ಲಿ ಪ್ರೇಕ್ಷಕರೇ ಕಾಣದಿದ್ದರೆ ಏನಾಗಬೇಡ ? ಅವತ್ತು ಚಿತ್ರ ತಂಡದ ಮುಖದಲ್ಲಿ ಕಂಡಿದ್ದು ಕಣ್ಣೀರು. ಅದರ ಪರಿಸ್ಥಿತಿ ಇವತ್ತು ಆಗಿದ್ದೇನು? ಈ ಪೈಕಿ ಇವತ್ತು ʼ ಕೃಷ್ಣ ಟಾಕೀಸ್ʼ ಚಿತ್ರದ ಪ್ರದರ್ಶನವನ್ನು ಚಿತ್ರ ತಂಡ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ನಿರ್ಧರಿಸಿದೆ.
“ ಸರ್ಕಾರ ಏನು ನಿರ್ಧಾರ ತೆಗೆದುಕೊಳ್ಳುವುದು ಗೊತಿಲ್ಲ. ಆದರೆ ಚಿತ್ರದ ನಿರ್ಮಾಪಕ ಗೋವಿಂದರಾಜು ಹಾಗೂ ಚಿತ್ರತಂಡದವರು ಎಲ್ಲಕ್ಕಿಂತ ಆರೋಗ್ಯವೇ ಮುಖ್ಯ ಎಂಬ ಉದ್ದೇಶದಿಂದ ಏಪ್ರಿಲ್ 22 ರವರೆಗೂ ಮಾತ್ರ ಚಿತ್ರವನ್ನು ಪ್ರದರ್ಶಿಸಿ, ನಂತರ ಸ್ಥಗಿತಗೊಳಿಸಲು ತೀರ್ಮಾನಿಸಿದ್ದಾರೆ. ಹಾಗೊಂದು ವೇಳೆ ಸರ್ಕಾರ ನಾಳೆಯಿಂದಲೇ ಚಿತ್ರಮಂದಿರ ಮುಚ್ಚಬೇಕು ಅಂದರೆ ಅದಕ್ಕೂ ನಾವು ಬದ್ಧ ಎನ್ನುತ್ತಾರೆ ನಿರ್ದೇಶಕ ವಿಜಯಾನಂದ್. ಮತ್ತೊಂದಡೆ ಚಿತ್ರದ ಮರು ಬಿಡುಗಡೆಗೂ ಚಿತ್ರ ತಂಡ ಪ್ಲಾನ್ ಹಾಕಿಕೊಂಡಿದೆ. ಕೊರೋನಾ ಪರಿಸ್ಥಿತಿ ನಿಯಂತ್ರಣಕ್ಕೆ ಬಂದ ನಂತರ ರೀ ರಿಲೀಸ್ ಮಾಡುವುದಾಗಿ ತಿಳಿಸಿದೆ.
ಹೌದು, ನಿರ್ಮಾಣ ಮಾಡಿದ ಸಿನಿಮಾವನ್ನು ರಿಲೀಸ್‌ಮಾಡದೆ ಇರೋದಕ್ಕೆ ಅದೇನು ಪಾತ್ರೆ-ಸಾಮಾನು ಅಲ್ಲ. ಅಪ್ಕೋರ್ಸ್, ತಯಾರಾದ ಸಿನಿಮಾ ಚಿತ್ರಮಂದಿರಕ್ಕೆ ಬರಲೇ ಬೇಕು. ಪ್ರೇಕ್ಷಕರಿಂದ ಅದಕ್ಕೆ ಒಳ್ಳೆಯ ರೆಸ್ಪಾನ್ಸ್‌ಕೂಡ ಸಿಗಬೇಕು. ಆದ್ರೆ ಇವರೆಡು ಸಿನಿಮಾ ಇವತ್ತು ರಿಲೀಸ್ ಆದ ಸಂದರ್ಭ ಸರಿಯಿತ್ತಾ ? ಟೀಮ್‌ನವರಿಗೆ ಅದೇನೋ ಕಾನ್ಪಿಡೆನ್ಸ್ ಇತ್ತೇನೋ. ಕೊರೋನಾ ಅಂತ ಏನೇ ಭಯ ಹುಟ್ಟಿಸಿದ್ರೂ ಪ್ರೇಕ್ಷಕರಿಗೆ ಸಿನ್ಮಾ ಬೇಕು. ಅವರು ಬಂದೇ ಬರ್ತಾರೆ ಅಂತ ಭಂಡ ಧೈರ್ಯವೂ ಇತ್ತೇನೋ. ಆದ್ರೆ ಪರಿಸ್ಥಿತಿ ಹಾಗಿರಲಿಲ್ಲ ಅನ್ನೋದು ಅಷ್ಟೇ ಸತ್ಯ.
ʼಮಠʼ ಚಿತ್ರದ ಖ್ಯಾತಿಯ ನಿರ್ದೇಶಕ ಗುರುಪ್ರಸಾದ್ ಅವರಿಗೆ ಕೊರೋನಾ ಪಾಸಿಟಿವ್ ಬಂದಿದೆ. ತಮಗೆ ಕೊರೋನಾ ಪಾಸಿಟಿವ್ ಧೃಡಪಟ್ಟಿರುವ ಕುರಿತು ಮಾತನಾಡಿರುವ ವಿಡಿಯೋವೊಂದನ್ನು ಗುರುಪ್ರಸಾದ್ ಸೋಷಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.” ನನಗೆ ಕರೋನಾ ಪಾಸಿಟಿವ್ ಬಂದಿದೆ. ಬಂದಿದೆ ಅನ್ನೊದಕ್ಕಿಂತ ರಾಜ್ಯ ಸರ್ಕಾರ ಮನೆ ಮನೆಗೆ ಕೊರೋನಾ ತಂದು ಮುಟ್ಟಿಸಿದೆ. ಇದಕ್ಕೆ ಮುಖ್ಯ ಕಾರಣ ಸಿಎಂ ಯಡಿಯೂರಪ್ಪ, ಅವರ ಪುತ್ರ ವಿಜಯೇಂದ್ರ ಹಾಗೂ ಆರೋಗ್ಯ ಸಚಿವ ಡಾ.ಸುಧಾಕರ್. ಇದು ಇವರೆಲ್ಲರ ಕೊಡುಗೆ. ಮುಂದೆ ನಾನು ಏನಾಗುತ್ತೇನೋ ಗೊತ್ತಿಲ್ಲ. ಹಾಗೇನಾದ್ರು ನಂಗೆ ಆದ್ರೆ ಅದಕ್ಕೆ ರಾಜ್ಯ ಸರ್ಕಾರವೇ ಕಾರಣ ಅಂತ ತರಾಟೆಗೆ ತೆಗೆದುಕೊಂಡಿದ್ದಾರೆ. ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ಹೊರ ಹಾಕಿರುವ ಗುರು ಪ್ರಸಾದ್, ತೀವ್ರ ನೋವು ತೊಡಿಕೊಂಡಿದ್ದಾರೆ. ಅದರ ಸಂಪೂರ್ಣ ವಿಡಿಯೋ ಇಲ್ಲಿದೆ. ( ಕೆಳಗಿನ ಲಿಂಕ್ ಕ್ಲಿಕ್ ಮಾಡಿ )
ಬಾಕ್ಸ್ ಆಫೀಸ್ ಸುಲ್ತಾನ್ ದರ್ಶನ್ ಸಾಧನೆ ನೋಡುವುದಕ್ಕೆ ಅವರ ತಂದೆ ಇರಬೇಕಿತ್ತು. ನಟರಾಗಿ ನೆಲೆ ಕಂಡುಕೊಳ್ಳುವುದಕ್ಕೆ ಕಡುಕಷ್ಟ ಪಟ್ಟಿದ್ದ ತೂಗುದೀಪ ಶ್ರೀನಿವಾಸ್, ಇವತ್ತು ಮಕ್ಕಳ ಈ ದರ್ಬಾರ್ ಅನ್ನು ಕಣ್ಣಾರೆ ನೋಡಿದ್ದರೆ ಅದೆಷ್ಟು ಖುಷಿ ಪಡುತ್ತಿದ್ದರೋ ಏನೋ….! ದರ್ಶನ್ ಅಭಿಮಾನಿಗಳು ಮಾತ್ರವಲ್ಲ, ಕನ್ನಡದ ಅದೆಷ್ಟೋ ಮಂದಿ ಸಿನಿಮಾ ಪ್ರೇಕ್ಷಕರು ಅನೇಕ ಸಲ ಹೀಗೆ ಅಂದುಕೊಂಡಿದ್ದು ಸುಳ್ಳಲ್ಲ. ಸಿನಿಮಾದಿಂದ ಸಿನಿಮಾಕ್ಕೆ ದರ್ಶನ್ ತಮ್ಮ ಸ್ಟಾರ್ ಇಮೇಜ್ ಅನ್ನು ಹೆಚ್ಚಿಸಿಕೊಳ್ಳುತ್ತಾ ಎತ್ತರೆತ್ತರಕ್ಕೆ ಜಿಗಿದಾಗೆಲ್ಲ ಜನರೇ ಹಾಗೆಂದುಕೊಂಡಿದ್ದು ಹೌದು.
ಅವರೆಲ್ಲ ಹಾಗಂದುಕೊಳ್ಳುವುದಕ್ಕೂ ಕಾರಣ ಇದೆ. ದರ್ಶನ್ ಸ್ಟಾರ್ ಆಗಿ ಸಂಭ್ರಮಿಸಿದಾಗೆಲ್ಲ ಪ್ರೇಕ್ಷಕರ ಮುಂದೆ ದರ್ಶನ್ ತಂದೆ ತೂಗುದೀಪ ಶ್ರೀನಿವಾಸ್ ಅವರ ಬಣ್ಣದ ಬದುಕಿನ ದಾರಿಗಳು ಕಾಣಿಸಿಕೊಳ್ಳುತ್ತವೆ. ದರ್ಶನ್ ಜನಪ್ರಿಯತೆ ಕಂಡಾಗ ಅವರ ಅಭಿಮಾನಿಗಳಿಗೆ ತೂಗುದೀಪ ಶ್ರೀನಿವಾಸ್ ವಿಲನ್ ಆಗಿ ಅಬ್ಬರಿಸಿದ ದೃಶ್ಯಗಳು ಕಣ್ಮುಂದೆ ಬಂದು ನಿಲುತ್ತವೆ. ಸಿನಿಮಾದಲ್ಲಿ ಅವಕಾಶ ಇಲ್ಲ ಅಂತ ಅವರು ಮತ್ತೆ ನಾಟಕಗಳಲ್ಲಿ ಬ್ಯುಸಿಯಾದ ದಿನಗಳು ನೆನಪಾಗುತ್ತವೆ. ಅಂತಹ ನಟನೊಬ್ಬನ ಮಗ ಕನ್ನಡದ ದೊಡ್ಡ ಸ್ಟಾರ್ ಆಗಿ ಮೆರೆಯುತ್ತಿರುವಾಗ ಅದರ ವೈಭೋಗ ನೋಡುವುದಕ್ಕೆ ಅವರು ಇರಬೇಕಿತ್ತು ಅನ್ನೋದು ಕನ್ನಡ ಸಿನಿಮಾ ಪ್ರೇಕ್ಷಕರಿಗೆ ಸಹಜವಾಗಿಯೇ ಕಾಡುವ ಸಂಗತಿ.
ಅಂದ ಹಾಗೆ, ಈಗ ಇಲ್ಲಿ ತೂಗುದೀಪ ಶ್ರೀನಿವಾಸ್ ಅವರ ಕುರಿತು ಯಾಕೆ ಮಾತು ಅಂತ ನಿಮಗೂ ಅನಿಸಿರಬಹುದು. ಅದಕ್ಕೆ ಕಾರಣವೂ ಇದೆ. ನಟ ದಿವಂಗತ ತೂಗುದೀಪ ಶ್ರೀನಿವಾಸ್ ಅವರಿಗೆ ಇಂದು ಹುಟ್ಟು ಹಬ್ಬ. ಅವರು ಬದುಕಿದ್ದರೆ ದರ್ಶನ್ ಅವರ ಕುಟುಂಬ ಹಾಗೂ ಅವರ ಫ್ಯಾನ್ಸ್ ಅದೆಷ್ಟು ಅದ್ದೂರಿಯಾಗಿ ಹುಟ್ಟು ಹಬ್ಬ ಆಚರಿಸುತ್ತಿತ್ತೋ ಏನೋ. ಹಾಗಂತ ದರ್ಶನ್ ಫ್ಯಾನ್ಸ್ ಅವರೇನು ಸುಮ್ಮನೆ ಕುಳಿತಿಲ್ಲ.” ತೂಗುದೀಪ ಡೈನೆಸ್ಟಿʼ ಹೆಸರಿನ ಒಂದು ತಂಡ ತೂಗುದೀಪ ಶ್ರೀನಿವಾಸ್ ಅವರನ್ನು ವಿಭಿನ್ನವಾಗಿಯೇ ಸ್ಮರಿಸಿಕೊಂಡಿದೆ. ತೂಗುದೀಪ ಶ್ರೀನಿವಾಸ್ ಅವರ ಹುಟ್ಟು ಹಬ್ಬಕ್ಕೆ ಒಂದು ಸ್ಪೆಷಲ್ ಲಿರಿಕಲ್ ವಿಡಿಯೋ ಸಾಂಗ್ ಲಾಂಚ್ ಮಾಡಿದೆ. ಪ್ರಮೋದ್ ಜೋಯಿಸ್ ಸಾಹಿತ್ಯಕ್ಕೆ ಚೇತನ್ ಕೃಷ್ಣ ಸಂಗೀತ ನೀಡಿದ್ದಾರೆ. ದರ್ಶನ್ ನಾರಾಯಣ್ ಹಾಡಿದ್ದಾರೆ.ʼ ” ಜಯ ಜಯ ತೂಗುದೀಪ ….” ಹೆಸರಿನ ಈ ಸಾಂಗ್‌ನಲ್ಲಿ ನಟ ತೂಗುದೀಪ ಶ್ರೀನಿವಾಸ್ ಅವರ ಕಲಾ ಸಾಧನೆಯನ್ನು ಬಗೆ ಬಗೆಯಲ್ಲಿ ಬಣ್ಣಿಸಲಾಗಿದೆ.
ಹೌದು, ಕನ್ನಡ ಚಿತ್ರರಂಗ ಕಂಡ ಮಹಾನ್ ಖಳನಟರ ಪೈಕಿ ತೂಗುದೀಪ ಶ್ರೀನಿವಾಸ್ ಕೂಡ ಒಬ್ಬರು. ಹಾಗಂತ ಅವರು ಬರೀ ಖಳನಟರಲ್ಲ. ಸಹ ನಟ ಹಾಗೆಯೇ ಪೋಷಕ ನಟರೂ ಹೌದು. ಆ ಮೂಲಕ ಕನ್ನಡ ಚಿತ್ರರಂಗವನ್ನು ಶ್ರೀಮಂತಗೊಳಿಸಿದ ಮಹಾನ್ ಪ್ರತಿಭೆ. ನಟ ತೂಗುದೀಪ ಶ್ರೀನಿವಾಸ್ ಅಂದಾಕ್ಷಣ ಕಟ್ಟು ಮಸ್ತು ದೇಹ, ಅಗಲ ಮುಖ, ಕತ್ತಿನ ಅಂಚಿನ ನೋಟ, ಹುರಿಗೊಳಿಸಿದ ಮೀಸೆ, ಖಡಕ್ ಲುಕ್ ಆಕೃತಿ ನಿಮ್ಮ ಕಣ್ಮುಂದೆ ಬಂದು ನಿಲ್ಲೋದು ಸಹಜ. ಆ ಆಕೃತಿ ನೋಡಿಯೇ ಸಿನಿಮಾ ಮಂದಿ, ವಿಲನ್‌ಗೆ ನೀವು ಫಿಕ್ಸ್ ಅಂತಲೇ ಅವರಿಗೆ ಹೇಳುತ್ತಿದ್ರಂತೆ. ಆರಂಭದಿಂದಲೂ ವಿಲನ್ ಆಗಿ ಬ್ರಾಂಡ್ ಆದ ಅಪರೂಪದ ನಟ ತೂಗುದೀಪ ಶ್ರೀನಿವಾಸ್. ಅವರ ಬಣ್ಣದ ಬದುಕಿನ ಇಂಟೆರೆಸ್ಟಿಂಗ್ ಸಂಗತಿಗಳಲ್ಲಿ ಮೊದಲು ತುಂಬಾನೆ ಕ್ಯೂರಿಯಾಸಿಟಿ ಮೂಡಿಸಿದ್ದು ಶ್ರೀನಿವಾಸ್ ಎನ್ನುವ ಹೆಸರಿಗೆ ತೂಗುದೀಪ ಎನ್ನುವ ಸಿನಿಮಾ ಶೀರ್ಷಿಕೆಯೂ ಸೇರಿಕೊಂಡಿದ್ದು.
ಆ ಕಥೆ ಬಹುತೇಕ ಎಲ್ಲರಿಗೂ ಗೊತ್ತೇ ಇದೆ. ನಟ ತೂಗುದೀಪ ಶ್ರೀನಿವಾಸ್ ಮೊಟ್ಟ ಮೊದಲು ಸಿನಿಮಾಕ್ಕೆ ಬಣ್ಣ ಹಚ್ಚಿದ್ದು ಕೆ.ಎಸ್.ಎಲ್ ಸ್ವಾಮಿ ನಿರ್ದೇಶನದ ” ತೂಗುದೀಪʼ ಚಿತ್ರದಲ್ಲಿ. ಈ ಚಿತ್ರಕ್ಕೆ ಬರುವಾಗ ಅವರ ಹೆಸರು ಶ್ರೀನಿವಾಸ್ ಅಂತಲೇ ಇತ್ತಂತೆ. ಆದ್ರೆ ಆ ಹೊತ್ತಿಗೆ ಆ ಚಿತ್ರದಲ್ಲಿ ಇನ್ನೊಬ್ಬರು ಶ್ರೀನಿವಾಸ್ ಅಂತ ಇದ್ದರು. ಅವ್ರು ಬೇರಾರು ಅಲ್ಲ, ಗಾಯಕ ಪಿ.ಬಿ. ಶ್ರೀನಿವಾಸ್. ಕರೆಯೋದಿಕ್ಕೆ ಇದು ಸ್ವಲ್ಪ ಕನ್‌ಪ್ಯೂಸ್ ಮೂಡಿಸುತ್ತೆ ಅಂತ ನಿರ್ದೇಶಕ ಕೆ.ಎಸ್.ಎಲ್ ಸ್ವಾಮಿ ಅವರು, ನಟ ಶ್ರೀನಿವಾಸ್ ಅವರಿಗೆ ಸಿನಿಮಾದ ಶೀರ್ಷಿಕೆಯನ್ನೇ ಮುಂದಿಟ್ಟು “ತೂಗುದೀಪ ಶ್ರೀನಿವಾಸ್ʼ ಅಂತ ಹೆಸರಿಟ್ಟರಂತೆ. ಅಲ್ಲಿಂದ ತೂಗುದೀಪ ಶ್ರೀನಿವಾಸ್ ಎನ್ನುವ ಹೆಸರು ಮನೆ ಮತಾಯಿತು ಅನ್ನೋದು ಹಳೇ ಮಾತು.
“ತೂಗುದೀಪʼ ಚಿತ್ರದೊಂದಿಗೆ ಬೆಳ್ಳಿತೆರೆಗೆ ಎಂಟ್ರಿಯಾದ ನಟ ತೂಗುದೀಪ ಶ್ರೀನಿವಾಸ್ ಅಭಿನಯಿಸಿದ ಚಿತ್ರಗಳ ಸಂಖ್ಯೆ ಬಹಳಷ್ಟು. ಮೇಯರ್ ಮುತ್ತಣ್ಣ , ಬಂಗಾರದ ಮನುಷ್ಯ, ಗಂಧದ ಗುಡಿ, ಕಳ್ಳ-ಕುಳ್ಳ, ಸಾಹಸ ಸಿಂಹ ಸೇರಿದಂತೆ ಲೆಕ್ಕ ಹಾಕುತ್ತಾ ಹೋದರೆ ಅದೊಂದು ದೊಡ್ಡ ಪಟ್ಟಿಯೇ ಆದೀತು. ಆ ಕಾಲಕ್ಕೆ ತೂಗುದೀಪ ಶ್ರೀನಿವಾಸ್ ಬಹುಬೇಡಿಕೆಯ ಖಳ ನಟ. ಆ ಕಾಲದಲ್ಲಿ ಕನ್ನಡ ಬೆಳ್ಳಿತೆರೆಗೆ ಖಡಕ್ ವಿಲನ್ ಗಳ ಕೊರತೆಯೇ ಇರಲಿಲ್ಲ. ಅಲ್ಲೊಂದು ದೊಡ್ಡ ಖಳ ನಟರ ದಂಡೇ ಇತ್ತು. ಈ ವಿಲನ್‌ಗಳ ಗ್ಯಾಂಗ್‌ಗೆ ತೂಗುದೀಪ ಶ್ರೀನಿವಾಸ್ ಅವರೇ ಡಾನ್ . ಆಗ ಇವರೆಲ್ಲ ಬಹುಬೇಡಿಕೆಯ ಖಳ ನಟರಾಗಿದ್ದರೂ, ಹೀರೋ ಆಗಿಯೋ, ಪೋಷಕ ಪಾತ್ರಗಳಲ್ಲೋ ಮಿಂಚಬೇಕೆನ್ನುವ ಆಸೆ ಇತ್ತೇನೋ. ಯಾಕಂದ್ರೆ ಆ ಹೊತ್ತಿಗೆ ಹೀರೋ ಜತೆಗೆ ಪೋಷಕ ಪಾತ್ರಗಳಿದ್ದ ಬೆಲೆ ವಿಲನ್ ಗಳಿಗೆ ಇರಲಿಲ್ಲ. ಆ ಹೊತ್ತಲ್ಲಿ ಟೈಗರ್ ಪ್ರಭಾಕರ್ ಹೊರತು ಪಡಿಸಿ, ಬಹಳಷ್ಟು ಖಳನಟರು ವಿಲನ್ ಎನ್ನುವುದಕ್ಕೆ ಬ್ರಾಂಡ್ ಆಗಿ, ಸ್ಟಾರ್ ಆಗುವ ಅವಕಾಶಗಳಿಂದ ವಂಚಿತರಾಗಿದ್ದು ಹೌದು.
ಹಾಗಂತ ಅವರ ಕನಸಗಳೇನು ಕಮರಿ ಹೋಗಿಲ್ಲ. ಇವತ್ತು ಕನ್ನಡ ಚಿತ್ರರಂಗದಲ್ಲಿ ಒಂದು ಕಾಲದ ಖಳನಟರ ಮಕ್ಕಳದ್ದೇ ದರ್ಬಾರ್. ಅದಕ್ಕೆ ಸಾಕ್ಷಿ ಚಾಲೆಂಜಿಂಗ್ ಸ್ಟಾರ್ ದರ್ಶನ್, ದಿನಕರ್ ತೂಗುದೀಪ ಸಾಕ್ಷಿ. ಪ್ರತಿಯೊಬ್ಬ ತಂದೆಗೂ ಒಂದು ಕನಸಿರುತ್ತೆ. ತಮ್ಮ ಮಕ್ಕಳು ತಮಗಿಂತ ಎತ್ತರಕ್ಕೆ ಬೆಳೆಯಬೇಕು, ಸುಖವಾಗಿ ಬಾಳಬೇಕು, ಒಳ್ಳೆಯ ಹೆಸರು ಮತ್ತು ಕೀರ್ತಿ ಸಂಪಾದಿಸಿಕೊಳ್ಬೇಕು ಅಂತ. ವಿಲನ್ ಆಗಿ ಯಶಸ್ಸು ಕಂಡರೂ ಕಲಾವಿದರಾಗಿ ಕಡು ಕಷ್ಟ ಕಂಡಿದ್ದ ತೂಗುದೀಪ ಶ್ರೀನಿವಾಸ್ ಅವರಿಗೂ ಇಂತಹದೊಂದು ಆಷೆ ಇತ್ತಂತೆ. ತಮ್ಮ ಮಕ್ಕಳು ದೊಡ್ಡ ಸ್ಟಾರ್ ಆಗ್ಬೇಕು ಅನ್ನೋದು. ಅಂತೆಯೇ ಇವತ್ತು ದರ್ಶನ್ ಕನ್ನಡದ ಬಹುದೊಡ್ಡ ಸ್ಟಾರ್. ದಿನಕರ್ ಕೂಡ ಕಮ್ಮಿ ಇಲ್ಲ, ನಿರ್ಮಾಪಕರಾಗಿ, ನಿರ್ದೇಶಕರಾಗಿಯೂ ತಮ್ಮದೇ ಛಾಪು ಮೂಡಿಸಿದ್ದಾರೆ. ಮಕ್ಕಳ ಈ ಸಾಧನೆ ಕಣ್ತುಂಬಿಕೊಳ್ಳುವುದಿಕ್ಕೆ ನಟ ತೂಗುದೀಪ ಶ್ರೀನಿವಾಸ್ ಇಲ್ಲ ಅಂತಂದ್ರು, ಅವರ ಹೆಸರನ್ನು ದರ್ಶನ್ ಹಾಗೂ ದಿನಕರ್ ಇಬ್ಬರು ಅಜರಾಮಾರವಾಗಿಸುತ್ತಿದ್ದಾರೆನ್ನುವುದಕ್ಕೆ ಸಾಕ್ಷಿ “ತೂಗುದೀಪ” ವೇ ಸಾಕು. ಈ ದೀಪ ಇನ್ನಷ್ಟು ಬೆಳಗಲಿ. ಪ್ರಜ್ವಲಿಸಲಿ.
ಚಂದನವನದ ಬೆಳದಿಂಗಳ ಬಾಲೆ ಸುಮನ್ ನಗರ್ಕರ್ ಅವರ ಹೊಸ ಅವಾತರ ಇದು. ಅವರೀಗ ಮನೋರೋಗ ವೈದ್ಯರು. ಹಾಗಂತ ನಟನೆ, ನಿರ್ಮಾಣ ಅಂತ ಸಿನಿಮಾ ಬದುಕು ಬಿಟ್ಟು ಮೆಂಟಲ್ ಡಾಕ್ಟರ್ ಆಗಿಬಿಟ್ರಾ ಅಂತ ಅಂದುಕೊಳ್ಳಬೇಕಿಲ್ಲ. ನಟಿಯಾಗಿ ಅವರಿಗೀಗ ಸಿಕ್ಕ ಮತ್ತೊಂದು ವಿಭಿನ್ನ ಪಾತ್ರ ಇದು. ಅಂದ ಹಾಗೆ ಈ ಪಾತ್ರಕ್ಕೆ ಅವರು ಬಣ್ಣ ಹಚ್ಚಿರೋದು “ಮೃತ್ಯುಂಜಯʼ ಹೆಸರಿನ ಚಿತ್ರದಲ್ಲಿ.
ಕನ್ನಡ ಸಿನಿಮಾ ಮೃತ್ಯುಂಜಯ ಅಂದಾಕ್ಷಣ ಶಿವರಾಜ್ ಕುಮಾರ್ ಸಿನಿಮಾ ನೆನಪಾಗೋದು ಸಹಜ. ಯಾಕಂದ್ರೆ ತುಂಬಾ ಹಿಂದೆಯೇ ಶಿವರಾಜ್ ಕೂಮಾರ್ ʼಮೃತ್ಯುಂಜಯʼ ನಾಗಿ ಕಾಣಸಿಕೊಂಡಿದ್ರು. ಹಾಗಂತ ನಾವಿಲ್ಲಿ ಹೇಳ್ತಿರೋದು ಈ ಸಿನಿಮಾ ಕಥೆ ಅಲ್ಲ. ಹೊಸಬರ ತಂಡವೊಂದು ಈಗ ಅದೇ ಹೆಸರಲ್ಲಿ ಒಂದು ಸಿನಿಮಾ ಮಾಡಿ ತೆರೆಗೆ ತರಲು ಹೊರಟಿದೆ. ಆ ಸಿನಿಮಾದಲ್ಲಿ ಸುಮನ್ ನಗರ್ಕರ್ ಮನರೋಗ ವೈದ್ಯೆ ಆಗಿ ಕಾಣಸಿಕೊಂಡಿದ್ದಾರಂತೆ. ಸಜ್ಜನ್ ನಿರ್ದೇಶನದ ಈ ಚಿತ್ರದ ಟ್ರೇಲರ್ ಲಾಂಚ್ ಕಾರ್ಯಕ್ರಮ ಇತ್ತೀಚೆಗಷ್ಟೇ ನಡೀತು. ಆ ಮೂಲಕ ಚಿತ್ರದ ತಂಡ ಮಾಧ್ಯಮದ ಮುಂದೆ ಬಂದಾಗ ನಟಿ ಸುಮನ್ ನಗರ್ಕರ್ ತಾವು ಮನೋ ವೈದ್ಯೆಯಾಗಿದ್ದ ಕಥೆ ಬಿಚ್ಚಿಟ್ಟರು.
“ ಮೃತ್ಯುಂಜಯ ಅಂದಾಕ್ಷಣ ಶಿವಣ್ಣ ಅಭಿನಯದ ಶಿನಿಮಾ ನೆನಪಾಗುತ್ತೆ. ಆದ್ರೆ ಆ ಸಿನಿಮಾವೇ ಬೇರೆ, ಈ ಸಿನಿಮಾವೇ ಬೇರೆ, ಇದೊಂದು ಹಾರರ್, ಥ್ರಿಲ್ಲರ್ ಕಥಾ ಹಂದರದ ಸಿನಿಮಾ. ತಂಡದಲ್ಲಿರುವವರು ಹೊಸಬರಾದ್ರೂ ಒಳ್ಳೆಯ ರೀತಿಯಲ್ಲೇ ಸಿನಿಮಾ ಮಾಡಿದ್ದಾರೆ. ಲಾಕ್ ಡೌನ್ ಸಮಯದಲ್ಲಿ ನಂಗೆ ಈ ಸಿನಿಮಾ ಅವಕಾಶ ಬಂತು. ಆಗೆಲ್ಲ ಹೊರಗಡೆ ಹೋಗುವುದಕ್ಕೂ ಭಯ ಇತ್ತು. ಆದ್ರೆ ಟೀಮ್‌ನವ್ರು ತುಂಬಾ ಮುನ್ನೆಚ್ಚರಿಕೆ ವಹಿಸಿ, ಚಿತ್ರೀಕರಣ ಮುಗಿಸಿದ್ರು. ಸ್ಪೆಷಲ್ ಅಂದ್ರೆ ೧೯೨ ಗಂಟೆಗಳಲ್ಲಿ ಈ ಚಿತ್ರದ ಚಿತ್ರೀಕರಣ ಮುಗೀತುʼ ಅಂತ ನಟಿ ಸುಮನ್ ನಗರ್ಕರ್ ಚಿತ್ರದಲ್ಲಿನ ತಮ್ಮ ಪಾತ್ರ ಹಾಗೂ ಚಿತ್ರೀಕರಣದ ಅನುಭವ ಹೇಳಿಕೊಂಡರು.
ಒಂದಷ್ಟು ವರ್ಷಗಳ ಗ್ಯಾಪ್ ಬಳಿಕ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನ ʼಇಷ್ಟಕಾಮ್ಯʼ ಚಿತ್ರದೊಂದಿಗೆ ನಟಿ ಸುಮನ್ ನಗರ್ಕರ್ ಮತ್ತೆ ಚಂದನವನದಲ್ಲಿ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ ನಂತರ ನಿರೀಕ್ಷೆಯಂತೆ ಅವರು ನಟಿಯಾಗಿ ಬ್ಯುಸಿ ಆಗಿದ್ದಾರೆ. ಮೃತ್ಯುಂಜಯ ಸೇರಿದಂತೆ ನಾಲ್ಕೈದು ಚಿತ್ರಗಳಲ್ಲಿ ಅಭಿನಯಿಸಿದ್ದಾರಂತೆ. ಅವೆಲ್ಲ ಈಗ ರಿಲೀಸ್ ಗೆ ರೆಡಿ ಆಗಿವೆ. ಹಾಗೆಯೇ ಅವರು ನಿರ್ಮಾಪಕರಾಗಿಯೂ ಗುರುತಿಸಿಕೊಂಡಿದ್ದಾರೆ. ಬಬ್ರು ನಂತರ ಬ್ರಾಹ್ಮೀ ಹೆಸರಿನ ಚಿತ್ರವೊಂದನ್ನು ನಿರ್ಮಿಸಿ, ಅದರ ರಿಲೀಸ್ ಗೂ ಸಿದ್ಧತೆ ನಡೆಸಿದ್ದಾರೆ. ಆದರೆ ಕೊರೋನಾ ಪರಿಸ್ಥಿತಿ ಅವರಲ್ಲೂ ಆತಂಕ ಸೃಷ್ಟಿಸಿದೆ.
“ ಎಲ್ಲವೂ ಸರಿಹೋಯ್ತು ಅನ್ನುವಷ್ಟರಲ್ಲಿಯೇ ಈಗ ಕೊರೋನಾ ಮತ್ತೆ ಹೆಚ್ಚಾಗಿದೆ. ಜನರ ಜೀವನದ ಜತೆಗೆ ಚಿತ್ರೋದ್ಯಮದ ಪರಿಸ್ಥಿತಿಯೂ ಹದಗೆಡುತ್ತಿದೆ. ಸಿನಿಮಾ ನಿರ್ಮಾಣ ಮಾಡಿ, ರಿಲೀಸ್ ಗೆ ಕಾಯುತ್ತಿದ್ದೇವೆ. ಅದರ ಮೇಲೆ ಸಾಕಷ್ಟು ಬಂಡವಾಳವೂ ಹಾಕಿದ್ದೇವೆ. ಆದರೆ ಅದರ ರಿಲೀಸ್ ಗೆ ಒಳ್ಳೆಯ ಸಮಯವೇ ಸಿಗುತ್ತಿಲ್ಲ. ಪರಿಸ್ಥಿತಿ ಹೀಗೆಯೇ ಆದರೆ, ಸಿನಿಮಾಗಳ ಗತಿಯೇನೋ ಅನ್ನೋದು ಆತಂಕ ನಿರ್ಮಾಣವಾಗಿದೆʼ ಎನ್ನುತ್ತಾರವರು. ಸದ್ಯಕ್ಕೆ ನಟನೆಯಲ್ಲಿ ಬ್ಯುಸಿ ಆಗಿರುವ ಅವರು, ಹೊಸ ಅವಕಾಶಗಳತ್ತ ಮುಖ ಮಾಡಿದ್ದು, ಒಳ್ಳೆಯ ಪಾತ್ರಗಳು ಸಿಕ್ಕರೆ ಹೊಸಬರ ಸಿನಿಮಾಗಳಲ್ಲೂ ನಾನು ಅಭಿನಯಿಸಲು ರೆಡಿ ಎನ್ನುತ್ತಾರೆ ನಟಿ ಸುಮನ್ ನಗರ್ಕರ್.
ನಟ, ನಿರ್ದೇಶಕ ಕಿಚ್ಚ ಸುದೀಪ್, ತಮ್ಮ ಆರೋಗ್ಯದ ಕುರಿತು ಸ್ಪಷ್ಟನೆ ನೀಡಿದ್ದಾರೆ. ಸುದೀಪ್ ಅವರ ಅರೋಗ್ಯದಲ್ಲಿ ವ್ಯತ್ಯಾಸ ಆಗಿದೆ ಎಂಬುದಾಗಿ ಹರಡಿರುವ ಸುದ್ದಿಗಳಿಗೆ ಅವರು ಸ್ಪಷ್ಟನೆ ಕೊಟ್ಟಿದ್ದಾರೆ. ತಮ್ಮ ಆರೋಗ್ಯದ ಕುರಿತು ಸ್ವತಃ ಸುದೀಪ್ ಅವರೇ ಆರೋಗ್ಯ ಕುರಿತು ಟ್ವಿಟ್ಟರ್ ಮೂಲಕ ಮಾಹಿತಿ ನೀಡಿದ್ದಾರೆ. ಹಾಗೆಯೇ ಈ ವಾರ ಬಿಗ್ ಬಾಸ್ ಮಿಸ್ ಮಾಡಿಕೊಳ್ಳುತ್ತಿರುವುದಾಗಿಯೂ ಹೇಳಿಕೊಂಡಿದ್ದಾರೆ.ಸದ್ಯಕ್ಕೆ ತಮಗೆ ಏನಾಗಿದೆ ಎನ್ನುವುದರ ಕುರಿತು ನಿಖರವಾಗಿ ಏನನ್ನು ತಿಳಿಸಿಲ್ಲ. ಹಾಗೆಯೇ ಆ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಬದಲಿಗೆ ಒಂದಷ್ಟು ಅನಾರೋಗ್ಯದಲ್ಲಿದ್ದೇನೆ. ವೈದ್ಯರ ಸಲಹೆಯಂತೆ ವಿಶ್ರಾಂತಿ ಪಡೆಯುತ್ತಿದ್ದೇನೆ ಎಂದಿದ್ದಾರೆ.
”ಅನಾರೋಗ್ಯದಿಂದ ಬಳಲುತ್ತಿದ್ದರು ವಾರಾಂತ್ಯದೊಳಗೆ ಚೇತರಿಸಿಕೊಳ್ಳುವ ನಂಬಿಕೆ ಇದೆ. ಆದರೆ, ವೈದ್ಯರ ಸಲಹೆಯ ಮೇರೆಗೆ ನಾನು ಸ್ವಲ್ಪ ಹೆಚ್ಚು ವಿಶ್ರಾಂತಿ ಪಡೆಯಬೇಕಿದೆ” ಎಂದು ಟ್ವೀಟ್ ಮಾಡಿದ್ದಾರೆ. ಸದ್ಯಕ್ಕೆ ನಟ ಕಿಚ್ಚ ಸುದೀಪ್ ಕಲರ್ಸ್ ಕನ್ನಡದ ಬಿಗ್ ಬಾಸ್ ನಿರೂಪಣೆಯಲ್ಲಿ ಬ್ಯುಸಿ ಇದ್ದಾರೆ. ಹಾಗೆಯೇ ಈಗಷ್ಟೇ ಅವರು ವಿಕ್ರಾಂತ್ ರೋಣ ಹಾಗೂ ಕೋಟಿಗೊಬ್ಬ 3 ಚಿತ್ರದ ಚಿತ್ರೀಕರಣ ಮುಗಿಸಿದ್ದಾರೆ. ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಇವೆರೆಡು ಚಿತ್ರಗಳು ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿವೆ. ವಿಕ್ರಾಂತ ರೋಣ ಚಿತ್ರ ತಂಡ ಅದರ ರಿಲೀಸ್ ಡೇಟ್ ಅನೌನ್ಸ್ ಮಾಡಿದೆ. ಆಗಸ್ಟ್19 ಕ್ಕೆ ವಿಕ್ರಾಂತ್ ರೋಣ ತೆರೆಗೆ ಬರುತ್ತಿದೆ. ಮತ್ತೊಂದೆಡೆ ಕೋಟಿಗೊಬ್ಬ 3 ಚಿತ್ರದ ತಂಡ ಯುಗಾದಿ ಹಬ್ಬಕ್ಕೆ ಸ್ಪಷಲ್ ಪೋಸ್ಟರ್ ಲಾಂಚ್ ಮಾಡಿದೆ. ಉಳಿದಂತೆ ಈಗ ಬಿಗ್ ಬಾಸ್ ನಿರೂಪಣೆಗೆ ಸುದೀಪ್ ಅನಾರೋಗ್ಯದ ನಡುವೆಯೂ ಹಾಜರಾಗುತ್ತಾರಾ ಅನ್ನೋದು ಕುತೂಹಲ ಹುಟ್ಟಿಸಿದೆ. ಸದ್ಯಕ್ಕೆ ಈ ವಾರ ಅವರ ಜಾಗಕ್ಕೆ ಬೇರೊಬ್ಬರು ಬರುವ ಸಾಧ್ಯತೆಗಳಿವೆ ಎನ್ನುವ ಮಾತುಗಳು ಕೇಳಿಬಂದಿವೆ.ಈ ಮಧ್ಯೆ ಕಿಚ್ಚ ಸುದೀಪ್ ಅಭಿಮಾನಿಗಳು ತಮ್ಮ ನೆಚ್ಚಿನ ನಟ ಬೇಗ ಗುಣಮುಖರಾಗಲಿ ಅಂತ ಸೋಷಲ್ ಮೀಡಿಯಾದಲ್ಲಿ ಶುಭ ಹಾರೈಸಿದ್ದಾರೆ.