ಬಾಕ್ಸ್ ಆಫೀಸ್ ಸುಲ್ತಾನ್ ದರ್ಶನ್ ಸಾಧನೆ ನೋಡುವುದಕ್ಕೆ ಅವರ ತಂದೆ ಇರಬೇಕಿತ್ತು. ನಟರಾಗಿ ನೆಲೆ ಕಂಡುಕೊಳ್ಳುವುದಕ್ಕೆ ಕಡುಕಷ್ಟ ಪಟ್ಟಿದ್ದ ತೂಗುದೀಪ ಶ್ರೀನಿವಾಸ್, ಇವತ್ತು ಮಕ್ಕಳ ಈ ದರ್ಬಾರ್ ಅನ್ನು ಕಣ್ಣಾರೆ ನೋಡಿದ್ದರೆ ಅದೆಷ್ಟು ಖುಷಿ ಪಡುತ್ತಿದ್ದರೋ ಏನೋ….! ದರ್ಶನ್ ಅಭಿಮಾನಿಗಳು ಮಾತ್ರವಲ್ಲ, ಕನ್ನಡದ ಅದೆಷ್ಟೋ ಮಂದಿ ಸಿನಿಮಾ ಪ್ರೇಕ್ಷಕರು ಅನೇಕ ಸಲ ಹೀಗೆ ಅಂದುಕೊಂಡಿದ್ದು ಸುಳ್ಳಲ್ಲ. ಸಿನಿಮಾದಿಂದ ಸಿನಿಮಾಕ್ಕೆ ದರ್ಶನ್ ತಮ್ಮ ಸ್ಟಾರ್ ಇಮೇಜ್ ಅನ್ನು ಹೆಚ್ಚಿಸಿಕೊಳ್ಳುತ್ತಾ ಎತ್ತರೆತ್ತರಕ್ಕೆ ಜಿಗಿದಾಗೆಲ್ಲ ಜನರೇ ಹಾಗೆಂದುಕೊಂಡಿದ್ದು ಹೌದು.
ಅವರೆಲ್ಲ ಹಾಗಂದುಕೊಳ್ಳುವುದಕ್ಕೂ ಕಾರಣ ಇದೆ. ದರ್ಶನ್ ಸ್ಟಾರ್ ಆಗಿ ಸಂಭ್ರಮಿಸಿದಾಗೆಲ್ಲ ಪ್ರೇಕ್ಷಕರ ಮುಂದೆ ದರ್ಶನ್ ತಂದೆ ತೂಗುದೀಪ ಶ್ರೀನಿವಾಸ್ ಅವರ ಬಣ್ಣದ ಬದುಕಿನ ದಾರಿಗಳು ಕಾಣಿಸಿಕೊಳ್ಳುತ್ತವೆ. ದರ್ಶನ್ ಜನಪ್ರಿಯತೆ ಕಂಡಾಗ ಅವರ ಅಭಿಮಾನಿಗಳಿಗೆ ತೂಗುದೀಪ ಶ್ರೀನಿವಾಸ್ ವಿಲನ್ ಆಗಿ ಅಬ್ಬರಿಸಿದ ದೃಶ್ಯಗಳು ಕಣ್ಮುಂದೆ ಬಂದು ನಿಲುತ್ತವೆ. ಸಿನಿಮಾದಲ್ಲಿ ಅವಕಾಶ ಇಲ್ಲ ಅಂತ ಅವರು ಮತ್ತೆ ನಾಟಕಗಳಲ್ಲಿ ಬ್ಯುಸಿಯಾದ ದಿನಗಳು ನೆನಪಾಗುತ್ತವೆ. ಅಂತಹ ನಟನೊಬ್ಬನ ಮಗ ಕನ್ನಡದ ದೊಡ್ಡ ಸ್ಟಾರ್ ಆಗಿ ಮೆರೆಯುತ್ತಿರುವಾಗ ಅದರ ವೈಭೋಗ ನೋಡುವುದಕ್ಕೆ ಅವರು ಇರಬೇಕಿತ್ತು ಅನ್ನೋದು ಕನ್ನಡ ಸಿನಿಮಾ ಪ್ರೇಕ್ಷಕರಿಗೆ ಸಹಜವಾಗಿಯೇ ಕಾಡುವ ಸಂಗತಿ.
ಅಂದ ಹಾಗೆ, ಈಗ ಇಲ್ಲಿ ತೂಗುದೀಪ ಶ್ರೀನಿವಾಸ್ ಅವರ ಕುರಿತು ಯಾಕೆ ಮಾತು ಅಂತ ನಿಮಗೂ ಅನಿಸಿರಬಹುದು. ಅದಕ್ಕೆ ಕಾರಣವೂ ಇದೆ. ನಟ ದಿವಂಗತ ತೂಗುದೀಪ ಶ್ರೀನಿವಾಸ್ ಅವರಿಗೆ ಇಂದು ಹುಟ್ಟು ಹಬ್ಬ. ಅವರು ಬದುಕಿದ್ದರೆ ದರ್ಶನ್ ಅವರ ಕುಟುಂಬ ಹಾಗೂ ಅವರ ಫ್ಯಾನ್ಸ್ ಅದೆಷ್ಟು ಅದ್ದೂರಿಯಾಗಿ ಹುಟ್ಟು ಹಬ್ಬ ಆಚರಿಸುತ್ತಿತ್ತೋ ಏನೋ. ಹಾಗಂತ ದರ್ಶನ್ ಫ್ಯಾನ್ಸ್ ಅವರೇನು ಸುಮ್ಮನೆ ಕುಳಿತಿಲ್ಲ.” ತೂಗುದೀಪ ಡೈನೆಸ್ಟಿʼ ಹೆಸರಿನ ಒಂದು ತಂಡ ತೂಗುದೀಪ ಶ್ರೀನಿವಾಸ್ ಅವರನ್ನು ವಿಭಿನ್ನವಾಗಿಯೇ ಸ್ಮರಿಸಿಕೊಂಡಿದೆ. ತೂಗುದೀಪ ಶ್ರೀನಿವಾಸ್ ಅವರ ಹುಟ್ಟು ಹಬ್ಬಕ್ಕೆ ಒಂದು ಸ್ಪೆಷಲ್ ಲಿರಿಕಲ್ ವಿಡಿಯೋ ಸಾಂಗ್ ಲಾಂಚ್ ಮಾಡಿದೆ. ಪ್ರಮೋದ್ ಜೋಯಿಸ್ ಸಾಹಿತ್ಯಕ್ಕೆ ಚೇತನ್ ಕೃಷ್ಣ ಸಂಗೀತ ನೀಡಿದ್ದಾರೆ. ದರ್ಶನ್ ನಾರಾಯಣ್ ಹಾಡಿದ್ದಾರೆ.ʼ ” ಜಯ ಜಯ ತೂಗುದೀಪ ….” ಹೆಸರಿನ ಈ ಸಾಂಗ್‌ನಲ್ಲಿ ನಟ ತೂಗುದೀಪ ಶ್ರೀನಿವಾಸ್ ಅವರ ಕಲಾ ಸಾಧನೆಯನ್ನು ಬಗೆ ಬಗೆಯಲ್ಲಿ ಬಣ್ಣಿಸಲಾಗಿದೆ.
ಹೌದು, ಕನ್ನಡ ಚಿತ್ರರಂಗ ಕಂಡ ಮಹಾನ್ ಖಳನಟರ ಪೈಕಿ ತೂಗುದೀಪ ಶ್ರೀನಿವಾಸ್ ಕೂಡ ಒಬ್ಬರು. ಹಾಗಂತ ಅವರು ಬರೀ ಖಳನಟರಲ್ಲ. ಸಹ ನಟ ಹಾಗೆಯೇ ಪೋಷಕ ನಟರೂ ಹೌದು. ಆ ಮೂಲಕ ಕನ್ನಡ ಚಿತ್ರರಂಗವನ್ನು ಶ್ರೀಮಂತಗೊಳಿಸಿದ ಮಹಾನ್ ಪ್ರತಿಭೆ. ನಟ ತೂಗುದೀಪ ಶ್ರೀನಿವಾಸ್ ಅಂದಾಕ್ಷಣ ಕಟ್ಟು ಮಸ್ತು ದೇಹ, ಅಗಲ ಮುಖ, ಕತ್ತಿನ ಅಂಚಿನ ನೋಟ, ಹುರಿಗೊಳಿಸಿದ ಮೀಸೆ, ಖಡಕ್ ಲುಕ್ ಆಕೃತಿ ನಿಮ್ಮ ಕಣ್ಮುಂದೆ ಬಂದು ನಿಲ್ಲೋದು ಸಹಜ. ಆ ಆಕೃತಿ ನೋಡಿಯೇ ಸಿನಿಮಾ ಮಂದಿ, ವಿಲನ್‌ಗೆ ನೀವು ಫಿಕ್ಸ್ ಅಂತಲೇ ಅವರಿಗೆ ಹೇಳುತ್ತಿದ್ರಂತೆ. ಆರಂಭದಿಂದಲೂ ವಿಲನ್ ಆಗಿ ಬ್ರಾಂಡ್ ಆದ ಅಪರೂಪದ ನಟ ತೂಗುದೀಪ ಶ್ರೀನಿವಾಸ್. ಅವರ ಬಣ್ಣದ ಬದುಕಿನ ಇಂಟೆರೆಸ್ಟಿಂಗ್ ಸಂಗತಿಗಳಲ್ಲಿ ಮೊದಲು ತುಂಬಾನೆ ಕ್ಯೂರಿಯಾಸಿಟಿ ಮೂಡಿಸಿದ್ದು ಶ್ರೀನಿವಾಸ್ ಎನ್ನುವ ಹೆಸರಿಗೆ ತೂಗುದೀಪ ಎನ್ನುವ ಸಿನಿಮಾ ಶೀರ್ಷಿಕೆಯೂ ಸೇರಿಕೊಂಡಿದ್ದು.
ಆ ಕಥೆ ಬಹುತೇಕ ಎಲ್ಲರಿಗೂ ಗೊತ್ತೇ ಇದೆ. ನಟ ತೂಗುದೀಪ ಶ್ರೀನಿವಾಸ್ ಮೊಟ್ಟ ಮೊದಲು ಸಿನಿಮಾಕ್ಕೆ ಬಣ್ಣ ಹಚ್ಚಿದ್ದು ಕೆ.ಎಸ್.ಎಲ್ ಸ್ವಾಮಿ ನಿರ್ದೇಶನದ ” ತೂಗುದೀಪʼ ಚಿತ್ರದಲ್ಲಿ. ಈ ಚಿತ್ರಕ್ಕೆ ಬರುವಾಗ ಅವರ ಹೆಸರು ಶ್ರೀನಿವಾಸ್ ಅಂತಲೇ ಇತ್ತಂತೆ. ಆದ್ರೆ ಆ ಹೊತ್ತಿಗೆ ಆ ಚಿತ್ರದಲ್ಲಿ ಇನ್ನೊಬ್ಬರು ಶ್ರೀನಿವಾಸ್ ಅಂತ ಇದ್ದರು. ಅವ್ರು ಬೇರಾರು ಅಲ್ಲ, ಗಾಯಕ ಪಿ.ಬಿ. ಶ್ರೀನಿವಾಸ್. ಕರೆಯೋದಿಕ್ಕೆ ಇದು ಸ್ವಲ್ಪ ಕನ್‌ಪ್ಯೂಸ್ ಮೂಡಿಸುತ್ತೆ ಅಂತ ನಿರ್ದೇಶಕ ಕೆ.ಎಸ್.ಎಲ್ ಸ್ವಾಮಿ ಅವರು, ನಟ ಶ್ರೀನಿವಾಸ್ ಅವರಿಗೆ ಸಿನಿಮಾದ ಶೀರ್ಷಿಕೆಯನ್ನೇ ಮುಂದಿಟ್ಟು “ತೂಗುದೀಪ ಶ್ರೀನಿವಾಸ್ʼ ಅಂತ ಹೆಸರಿಟ್ಟರಂತೆ. ಅಲ್ಲಿಂದ ತೂಗುದೀಪ ಶ್ರೀನಿವಾಸ್ ಎನ್ನುವ ಹೆಸರು ಮನೆ ಮತಾಯಿತು ಅನ್ನೋದು ಹಳೇ ಮಾತು.
“ತೂಗುದೀಪʼ ಚಿತ್ರದೊಂದಿಗೆ ಬೆಳ್ಳಿತೆರೆಗೆ ಎಂಟ್ರಿಯಾದ ನಟ ತೂಗುದೀಪ ಶ್ರೀನಿವಾಸ್ ಅಭಿನಯಿಸಿದ ಚಿತ್ರಗಳ ಸಂಖ್ಯೆ ಬಹಳಷ್ಟು. ಮೇಯರ್ ಮುತ್ತಣ್ಣ , ಬಂಗಾರದ ಮನುಷ್ಯ, ಗಂಧದ ಗುಡಿ, ಕಳ್ಳ-ಕುಳ್ಳ, ಸಾಹಸ ಸಿಂಹ ಸೇರಿದಂತೆ ಲೆಕ್ಕ ಹಾಕುತ್ತಾ ಹೋದರೆ ಅದೊಂದು ದೊಡ್ಡ ಪಟ್ಟಿಯೇ ಆದೀತು. ಆ ಕಾಲಕ್ಕೆ ತೂಗುದೀಪ ಶ್ರೀನಿವಾಸ್ ಬಹುಬೇಡಿಕೆಯ ಖಳ ನಟ. ಆ ಕಾಲದಲ್ಲಿ ಕನ್ನಡ ಬೆಳ್ಳಿತೆರೆಗೆ ಖಡಕ್ ವಿಲನ್ ಗಳ ಕೊರತೆಯೇ ಇರಲಿಲ್ಲ. ಅಲ್ಲೊಂದು ದೊಡ್ಡ ಖಳ ನಟರ ದಂಡೇ ಇತ್ತು. ಈ ವಿಲನ್‌ಗಳ ಗ್ಯಾಂಗ್‌ಗೆ ತೂಗುದೀಪ ಶ್ರೀನಿವಾಸ್ ಅವರೇ ಡಾನ್ . ಆಗ ಇವರೆಲ್ಲ ಬಹುಬೇಡಿಕೆಯ ಖಳ ನಟರಾಗಿದ್ದರೂ, ಹೀರೋ ಆಗಿಯೋ, ಪೋಷಕ ಪಾತ್ರಗಳಲ್ಲೋ ಮಿಂಚಬೇಕೆನ್ನುವ ಆಸೆ ಇತ್ತೇನೋ. ಯಾಕಂದ್ರೆ ಆ ಹೊತ್ತಿಗೆ ಹೀರೋ ಜತೆಗೆ ಪೋಷಕ ಪಾತ್ರಗಳಿದ್ದ ಬೆಲೆ ವಿಲನ್ ಗಳಿಗೆ ಇರಲಿಲ್ಲ. ಆ ಹೊತ್ತಲ್ಲಿ ಟೈಗರ್ ಪ್ರಭಾಕರ್ ಹೊರತು ಪಡಿಸಿ, ಬಹಳಷ್ಟು ಖಳನಟರು ವಿಲನ್ ಎನ್ನುವುದಕ್ಕೆ ಬ್ರಾಂಡ್ ಆಗಿ, ಸ್ಟಾರ್ ಆಗುವ ಅವಕಾಶಗಳಿಂದ ವಂಚಿತರಾಗಿದ್ದು ಹೌದು.
ಹಾಗಂತ ಅವರ ಕನಸಗಳೇನು ಕಮರಿ ಹೋಗಿಲ್ಲ. ಇವತ್ತು ಕನ್ನಡ ಚಿತ್ರರಂಗದಲ್ಲಿ ಒಂದು ಕಾಲದ ಖಳನಟರ ಮಕ್ಕಳದ್ದೇ ದರ್ಬಾರ್. ಅದಕ್ಕೆ ಸಾಕ್ಷಿ ಚಾಲೆಂಜಿಂಗ್ ಸ್ಟಾರ್ ದರ್ಶನ್, ದಿನಕರ್ ತೂಗುದೀಪ ಸಾಕ್ಷಿ. ಪ್ರತಿಯೊಬ್ಬ ತಂದೆಗೂ ಒಂದು ಕನಸಿರುತ್ತೆ. ತಮ್ಮ ಮಕ್ಕಳು ತಮಗಿಂತ ಎತ್ತರಕ್ಕೆ ಬೆಳೆಯಬೇಕು, ಸುಖವಾಗಿ ಬಾಳಬೇಕು, ಒಳ್ಳೆಯ ಹೆಸರು ಮತ್ತು ಕೀರ್ತಿ ಸಂಪಾದಿಸಿಕೊಳ್ಬೇಕು ಅಂತ. ವಿಲನ್ ಆಗಿ ಯಶಸ್ಸು ಕಂಡರೂ ಕಲಾವಿದರಾಗಿ ಕಡು ಕಷ್ಟ ಕಂಡಿದ್ದ ತೂಗುದೀಪ ಶ್ರೀನಿವಾಸ್ ಅವರಿಗೂ ಇಂತಹದೊಂದು ಆಷೆ ಇತ್ತಂತೆ. ತಮ್ಮ ಮಕ್ಕಳು ದೊಡ್ಡ ಸ್ಟಾರ್ ಆಗ್ಬೇಕು ಅನ್ನೋದು. ಅಂತೆಯೇ ಇವತ್ತು ದರ್ಶನ್ ಕನ್ನಡದ ಬಹುದೊಡ್ಡ ಸ್ಟಾರ್. ದಿನಕರ್ ಕೂಡ ಕಮ್ಮಿ ಇಲ್ಲ, ನಿರ್ಮಾಪಕರಾಗಿ, ನಿರ್ದೇಶಕರಾಗಿಯೂ ತಮ್ಮದೇ ಛಾಪು ಮೂಡಿಸಿದ್ದಾರೆ. ಮಕ್ಕಳ ಈ ಸಾಧನೆ ಕಣ್ತುಂಬಿಕೊಳ್ಳುವುದಿಕ್ಕೆ ನಟ ತೂಗುದೀಪ ಶ್ರೀನಿವಾಸ್ ಇಲ್ಲ ಅಂತಂದ್ರು, ಅವರ ಹೆಸರನ್ನು ದರ್ಶನ್ ಹಾಗೂ ದಿನಕರ್ ಇಬ್ಬರು ಅಜರಾಮಾರವಾಗಿಸುತ್ತಿದ್ದಾರೆನ್ನುವುದಕ್ಕೆ ಸಾಕ್ಷಿ “ತೂಗುದೀಪ” ವೇ ಸಾಕು. ಈ ದೀಪ ಇನ್ನಷ್ಟು ಬೆಳಗಲಿ. ಪ್ರಜ್ವಲಿಸಲಿ.