ಜಿಗರ್ ಟ್ರೇಲರ್ ಗೆ ಮೆಚ್ಚುಗೆ: ಜುಲೈ 5ಕ್ಕೆ ರಿಲೀಸ್

ಪೂಜಾ ವಸಂತಕುಮಾರ್ ನಿರ್ಮಾಣದ, ಸೂರಿ ಕುಂದರ್ ನಿರ್ದೇಶನದ ಹಾಗೂ ಪ್ರವೀಣ್ ತೇಜ್ ನಾಯಕನಾಗಿ ನಟಿಸಿರುವ “ಜಿಗರ್” ಚಿತ್ರದ ಟ್ರೇಲರ್ ಇತ್ತೀಚಿಗೆ ಬಿಡುಗಡೆಯಾಯಿತು. ಪಿ.ಆರ್.ಓ ಸುಧೀಂದ್ರ ವೆಂಕಟೇಶ್ ಟ್ರೇಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ಟ್ರೇಲರ್ ನಲ್ಲೇ ಕುತೂಹಲ ಮೂಡಿಸಿರುವ ಈ ಚಿತ್ರ ಜುಲೈ 5ರಂದು ತೆರೆಗೆ ಬರುತ್ತಿದೆ.

ಪ್ರೇಮಕಥೆಗಳಿಗೆ ಸೀಮಿತನಾಗಿದ್ದ ನನ್ನನ್ನು ನಿರ್ದೇಶಕರು ಈ ಚಿತ್ರದ ಮೂಲಕ ಆಕ್ಷನ್ ಹೀರೋ ಮಾಡಿದ್ದಾರೆ ಎಂದು‌ ಮಾತನಾಡಿದ ನಾಯಕ ಪ್ರವೀಣ್ ತೇಜ್, ಈ ಚಿತ್ರದಲ್ಲಿ ನನ್ನ ಪಾತ್ರದ ಹೆಸರು ಜೀವ. ಉತ್ಸಾಹಿ ಯುವಕನೊಬ್ಬ ಫಿಶ್ ಟೆಂಡರ್ ಶಿಪ್ ನಲ್ಲಿ ಭಾಗಿಯಾಗುತ್ತಾನೆ. ಆಮೂಲಕ ಭೂಗತಲೋಕಕ್ಕೂ ಕಾಲಿಡುತ್ತಾನೆ. ಅಲ್ಲಿ ಮೂರು ನಾಲ್ಕು ಸಂಘಗಳಿರುತ್ತದೆ. ಸಂಘಗಳ ನಡುವೆ ಸಂಘರ್ಷವೂ ಇರುತ್ತದೆ. ಇದು ಚಿತ್ರದ ಪ್ರಮುಖ ಕಥಾಹಂದರ. ಇದರೊಟ್ಟಿಗೆ ಲವ್, ಆಕ್ಷನ್, ಕಾಮಿಡಿ ಕೂಡ ನಮ್ಮ ಚಿತ್ರದಲ್ಲಿದೆ ಎಂದು ತಿಳಿಸಿದರು.

ಸುಮಾರು ಹದಿನೈದು ವರ್ಷಗಳಿಂದ ಚಿತ್ರರಂಗದಲ್ಲಿದ್ದೇನೆ. ಖ್ಯಾತ ನಿರ್ದೇಶಕರ ಜೊತೆ ಕೆಲಸ ಮಾಡಿದ್ದೇನೆ‌. ಸ್ವತಂತ್ರ ನಿರ್ದೇಶಕನಾಗಿ ಮೊದಲ ಚಿತ್ರ. ಅವಕಾಶ ನೀಡಿದ ನಿರ್ಮಾಪಕರಿಗೆ ಧನ್ಯವಾದ. “ಜಿಗರ್” ಎಂದರೆ ಎರಡು ಗುಂಡಿಗೆವುಳ್ಳವನು ಹಾಗೂ ಯಾವುದಕ್ಕೂ ಅಂಜದವನು ಎಂದು ಅರ್ಥ. ಮಲ್ಪೆ , ಉಡುಪಿ, ಕುಂದಾಪುರ ಮುಂತಾದ ಕಡೆ ಚಿತ್ರೀಕರಣ ಮಾಡಿದ್ದೇವೆ. ಚಿತ್ರತಂಡದ ಸದಸ್ಯರ ಸಹಕಾರದಿಂದ ಚಿತ್ರ ಉತ್ತಮವಾಗಿ ಮೂಡಿಬಂದಿದೆ. ಜುಲೈ 5 ರಂದು “ಜಿಗರ್” ಬಿಡುಗಡೆಯಾಗಲಿದೆ. ನೋಡಿ ಪ್ರೋತ್ಸಾಹಿಸಿ ಎಂದರು ನಿರ್ದೇಶಕ ಸೂರಿ ಕುಂದರ್.

ನಾಯಕಿ ವಿಜಯಶ್ರೀ, ನಟ ಯಶ್ ಶೆಟ್ಟಿ ಸೇರಿದಂತೆ ಚಿತ್ರದಲ್ಲಿ ನಟಿಸಿರುವ ಅನೇಕ ಕಲಾವಿದರು ತಮ್ಮ ಪಾತ್ರದ ಬಗ್ಗೆ ಮಾಹಿತಿ ನೀಡಿದರು. ಸಂಗೀತ ನಿರ್ದೇಶಕ ರಿತ್ವಿಕ್ ಮುರಳಿಧರ್, ಗೀತರಚನೆಕಾರ ಗಣೇಶ್, ಛಾಯಾಗ್ರಾಹಕ ಶಿವಸೇನ ಮುಂತಾದವರು “ಜಿಗರ್” ಚಿತ್ರದ ಕುರಿತು ಮಾತನಾಡಿದರು.

Related Posts

error: Content is protected !!