ನಾಗಭೂಷಣ್ ಈಗ ವಿದ್ಯಾಪತಿ: ಸಂಕ್ರಾಂತಿಗೆ ಡಾಲಿ ಪಿಕ್ಚರ್ಸ್ ನ ನಾಲ್ಕನೇ ಸಿನಿಮಾ ಅನೌನ್ಸ್

ಇಂದು ನಾಡಿನೆಲ್ಲೆಡೆ ಸಂಕ್ರಾಂತಿ ಹಬ್ಬದ ಸಂಭ್ರಮ ಮನೆ ಮಾಡಿದೆ. ವರ್ಷದ ಮೊದಲ ಹಬ್ಬವನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಗುತ್ತಿದೆ. ಸಿನಿರಂಗದಲ್ಲಿ ಸುಗ್ಗಿ ಸಂಭ್ರಮ ಜೋರಾಗಿದೆ. ಸಂಕ್ರಾಂತಿ ವಿಶೇಷವಾಗಿ ಹೊಸ ಹೊಸ ಸಿನಿಮಾಗಳು ಘೋಷಣೆಯಾಗಿವೆ. ಅದರಂತೆ ಧನಂಜಯ್ ಒಡೆತನದ ಡಾಲಿ ಪಿಕ್ಚರ್ಸ್ ನ ನಾಲ್ಕನೇ ಚಿತ್ರದ ಟೈಟಲ್ ಹಾಗೂ ಫಸ್ಟ್ ಲುಕ್ ಅನಾವರಣ ಮಾಡಲಾಗಿದೆ.

ಟಗರು ಪಲ್ಯ ಸಿನಿಮಾ ಮೂಲಕ ಕಳೆದ ವರ್ಷ ಡಾಲಿ ಪಿಚ್ಚರ್ಸ್ ಪ್ರೇಕ್ಷಕರಿಗೆ ಮನರಂಜನೆಯ ಬಾಡೂಟ ಬಡಿಸಿತ್ತು. ಹೊಸ ಹೊಸ ನಿರ್ದೇಶಕರಿಗೆ ವೇದಿಕೆಯಾಗಿರುವ ಡಾಲಿ ಪಿಕ್ಚರ್ಸ್ ಸದಾಭಿರುಚಿ ಸಿನಿಮಾಗಳನ್ನು ನಿರ್ಮಿಸುವಲ್ಲಿ ಹೆಜ್ಜೆ ಇಡ್ತಿದೆ. ಇದೀಗ ಡಾಲಿ ಪಿಕ್ಚರ್ಸ್ ನ ಮತ್ತೊಂದು ಕೊಡುಗೆ ವಿದ್ಯಾಪತಿ ಸಿನಿಮಾದ ಫಸ್ಟ್ ಲುಕ್ ನ್ನು ಸುಗ್ಗಿ ಸಂಭ್ರಮದ ವಿಶೇಷವಾಗಿ ಬಿಡುಗಡೆಯಾಗಿದೆ.

ಈ ಹಿಂದೆ ಇಕ್ಕಟ್ ಸಿನಿಮಾ ಮೂಲಕ ಭರವಸೆ ಹುಟ್ಟಿಸಿದ್ದ ಇಶಾಂ ಮತ್ತು ಹಸೀಂ ಖಾನ್ ವಿದ್ಯಾಪತಿ ಸಿನಿಮಾದ ಸಾರಥಿ..ಈ ಚಿತ್ರವನ್ನು ಇವರಿಬ್ಬರು ರಚಿಸಿ ನಿರ್ದೇಶಿಸಿ ಸಂಕಲನ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಫಸ್ಟ್ ಲುಕ್ ನಲ್ಲಿ ನಾಗಭೂಷಣ್ ಕರಾಟೆ ಕಿಂಗ್ ಅವತಾರದಲ್ಲಿ ಪ್ರತ್ಯಕ್ಷರಾಗಿದ್ದಾರೆ. ಟಗರು ಪಲ್ಯ ಮೂಲಕ ಮಸ್ತ್ ಮನರಂಜನೆ ನೀಡಿದ್ದ ನಾಗಭೂಷಣ್ ಮತ್ತೊಮ್ಮೆ ಡಾಲಿ ಜೊತೆ ಕೈ ಜೋಡಿಸಿದ್ದಾರೆ.

ಆಕ್ಷನ್ ಕಾಮಿಡಿ ಕಥಾಹಂದರ ಹೊಂದಿರುವ ವಿದ್ಯಾಪತಿ ಸಿನಿಮಾದ ಶೂಟಿಂಗ್ ಮುಂದಿನ ವಾರದಿಂದ ಚಾಲುವಾಗಲಿದೆ. ನಾಗಭೂಷಣ್ ಈ ಚಿತ್ರದಲ್ಲಿ ವಿಭಿನ್ನ ಗೆಟಪ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಲವಿತ್ ಛಾಯಾಗ್ರಹಣ, ಡಾಸ್ಮೋಡ್ ಸಂಗೀತ ನಿರ್ದೇಶನ, ಮುರುಳಿ ನೃತ್ಯ ನಿರ್ದೇಶನ, ಸುಜಿತ್ ವೆಂಕಟರಾಮಯ್ಯ ಸಾಹಿತ್ಯ, ಅರ್ಜುನ್ ಮಾಸ್ಟರ್ ಆಕ್ಷನ್ ವಿದ್ಯಾಪತಿ ಸಿನಿಮಾಕ್ಕಿದೆ. ಕ್ರಿಯೇಟಿವ್ ಡೈರೆಕ್ಟರ್ ಆಗಿ ತೇಜೇಶ್ ಗಣೇಶ್ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.

Related Posts

error: Content is protected !!