ಶೆಟ್ಟರ ಭರತನಾಟ್ಯ ಅಭ್ಯಾಸ-ಕರಾವಳಿ ಬೆಡಗಿ ಐಶಾನಿ ಚಿತ್ತ ನಿರ್ದೇಶನದತ್ತ…

ಕೊರೊನಾ ಎಲ್ಲರಿಗೂ ತಕ್ಕಪಾಠವನ್ನಂತೂ ಕಲಿಸಿದೆ. ಸತತ ಏಳು ತಿಂಗಳ ಕಾಲ ಕೊರೊನಾ ಎಂಬ ಗುಮ್ಮ ಎಲ್ಲರನ್ನೂ ಬೆಚ್ಚಿಬೀಳಿಸುತ್ತಲೇ ಇದೆ. ಆದರೆ, ಈಗ ಭಯಬೀಳೀಸಿದ್ದ ಕೊರೊನಾವೇ ಕೊಂಚ ಗೊಂದಲದಲ್ಲಿರುವುದಂತೂ ನಿಜ. ಇಷ್ಟಕ್ಕೂ ಈ ಕೊರೊನಾ ಬಂದು ಒಂದಷ್ಟು ತಯಾರಿ ಮಾಡಿಕೊಳ್ಳುವುದನ್ನು ಕಲಿಸಿದೆ. ಕೊರೊನಾ ಹಿನ್ನೆಲೆಯಲ್ಲಿ ಲಾಕ್‌ಡೌನ್‌ ಆಗಿದ್ದು ಗೊತ್ತೇ ಇದೆ. ಅದರಲ್ಲೂ ಸಿನಿಮಾ ಮಂದಿ ಈ ಲಾಕ್ ಡೌನ್‌ ವೇಳೆ ಸಾಕಷ್ಟು ಕಥೆ ಗೀಚಿದ್ದಾರೆ. ಕಥೆ ಕೇಳಿದ್ದಾರೆ. ಆ ಸಾಲಿಗೆ ನಟಿ ಐಶಾನಿ ಶೆಟ್ಟಿ ಕೂಡ ಹೊರತಲ್ಲ. ಅವರು ಈ ಲಾಕ್‌ಡೌನ್‌ ವೇಳೆ ಏನು ಮಾಡಿದ್ದಾರೆ ಗೊತ್ತಾ?
ಅವರು ತಮ್ಮ ಮನೆ ಕೆಲಸದ ನಡುವೆಯೇ ಭರತನಾಟ್ಯಂ ಅಭ್ಯಾಸ ಮಾಡಿದ್ದಾರೆ. ಅವರು ಕಳೆದ ಒಂದುವರೆ ವರ್ಷದಿಂದಲೂ ಭರತನಾಟ್ಯ ಕ್ಲಾಸ್‌ಗೆ ಹೋಗುತ್ತಿದ್ದರು. ಆದರೆ, ಕೊರೊನಾ ಬಂದಿದ್ದರಿಂದ ಮನೆಯಲ್ಲೇ ಇರುವಂತಾಯಿತು. ಅವರು ಆ ಸಮಯವನ್ನು ವ್ಯರ್ಥ ಮಾಡಿಕೊಳ್ಳದೆ, ಭರತನಾಟ್ಯ ಅಭ್ಯಾಸ ಮಾಡಿದ್ದಾರೆ. ಇನ್ನು, ಐಶಾನಿ ಶೆಟ್ಟಿ, ನಟನೆ ಜೊತೆಯಲ್ಲಿ ನಿರ್ದೇಶನದ ಮೇಲೂ ಅತೀವ ಆಸಕ್ತಿ ಇಟ್ಟುಕೊಂಡವರು. ಈಗಾಗಲೇ ಅವರು ಕಿರುಚಿತ್ರ ನಿರ್ದೇಶಿಸುವ ಮೂಲಕ ನಿರ್ದೇಶಕಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಸಿನಿಮಾ ನಿರ್ದೇಶನದ ಮೇಲೂ ಆಸಕ್ತಿ ಇಟ್ಟುಕೊಂಡಿರುವ ಐಶಾನಿ, ಮುಂದಿನ ದಿನಗಳಲ್ಲಿ ಸಿನಿಮಾ ನಿರ್ದೇಶಿಸುವ ಆಶಯವಿದೆ. ಅವರು ಹಿಂದೆ ಬರೆದಿಟ್ಟುಕೊಂಡಿದ್ದ ಕಥೆಗಳನ್ನು ಈ ಲಾಕ್‌ ಡೌನ್‌ ಸಮಯದಲ್ಲಿ ಓದಿದ್ದಾರೆ. ಮುಂದಿನ ದಿನಗಳಲ್ಲಿ ಸಿನಿಮಾ ಮಾಡುವ ಯೋಚನೆಯನ್ನೂ ಮಾಡಿದ್ದಾರೆ. ಅವರು ಮಾಡಿಕೊಂಡಿರುವ ಕಥೆಯಲ್ಲಿ ಸಾಕಷ್ಟು ವಿಚಾರಗಳಿದ್ದು, ಅದನ್ನಿಟ್ಟುಕೊಂಡೇ ಸಿನಿಮಾ ಮಾಡುವ ತಯಾರಿಯಲ್ಲೂ ಇದ್ದಾರಂತೆ. ಅಂದಹಾಗೆ, ಅವರು ಕಳೆದ ಎರಡ್ಮೂರು ವರ್ಷಗಳ ಹಿಂದೆ ಮಾಡಿಕೊಂಡಿದ್ದ ಕಥೆಗಳು ಈಗಿನ ಟ್ರೆಂಡ್‌ಗೆ ಸರಿಹೊಂದಲ್ಲ ಎಂಬ ಕಾರಣಕ್ಕೆ, ಅವರು ಹೊಸದಾಗಿ ಕಥೆ ಹೆಣೆದು ಸಿನಿಮಾ ನಿರ್ದೇಶಿಸುವ ಬಯಕೆಯೂ ಅವರಿಗಿದೆ.
ಸದ್ಯ ಐಶಾನಿ ಶೆಟ್ಟಿ ಬಳಿ ಒಂದಷ್ಟು ಚಿತ್ರಗಳಿವೆ. “ಧರಣಿ ಮಂಡಲ” ಹಾಗೂ “ಹೊಂದಿಸಿ ಬರೆಯಿರಿ” ಚಿತ್ರಗಳಿವೆ. ಕೊರೊನಾ ಇದ್ದುದ್ದರಿಂದ ಚಿತ್ರೀಕರಣ ಸ್ಥಗಿತಗೊಳಿಸಲಾಗಿತ್ತು. ಈಗಷ್ಟೇ ಇಂಡಸ್ಟ್ರಿ ಮೆಲ್ಲನೆ ಶುರುವಾಗುತ್ತಿದೆ. ಇನ್ನು ಮುಂದಿನ ದಿನಗಳಲ್ಲಿ ಚಿತ್ರೀಕರಣ ಶುರುವಾಗಿ, ಮುಗಿಸಿ, ಪ್ರೇಕ್ಷಕರ ಮುಂದೆ ಬರಬೇಕಷ್ಟೆ.

Related Posts

error: Content is protected !!