Categories
ಸಿನಿ ಸುದ್ದಿ

ಹೊಂಬಾಳೆ ಫಿಲಂಸ್ ಮೂಲಕ ಗಂಧದ ಗುಡಿಗೆ ರಾಜ್ ಮೊಮ್ಮಗನ ಆಗಮನ; ಸಂತೋಷ್ ನಿರ್ದೇಶನದಲ್ಲಿ ಯುವ ರಾಜಕುಮಾರ್ ನಟನೆ

“ಕೆ.ಜಿ.ಎಫ್ 2” ಚಿತ್ರದ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ‌ ಸಂಸ್ಥೆ ಹೊಂಬಾಳೆ ಫಿಲಂಸ್. ವಿಜಯ್ ಕಿರಗಂದೂರ್ ಈ ಸಂಸ್ಥೆಯ ನಿರ್ಮಾಪಕರು.

ಈಗ ಈ ಸಂಸ್ಥೆಯಿಂದ ಹೊಸ ಚಿತ್ರಗಳ ನಿರ್ಮಾಣದ ಸರಣಿ ಆರಂಭವಾಗಿದೆ. ಮೊನ್ನೆಯಷ್ಟೇ ಖ್ಯಾತ ನಿರ್ದೇಶಕಿ ಸುಧಾ ಕೊಂಗರ ಅವರ ನಿರ್ದೇಶನದಲ್ಲಿ ನೂತನ ಚಿತ್ರ ಆರಂಭಿಸುವ ಸುದ್ದಿ ಹೊರ ಬಂದಿತ್ತು. ನಿನ್ನೆ ಸಾಮಾಜಿಕ ಜಾಲತಾಣಗಳಲ್ಲಿ ಇಂದು ಮತ್ತೊಂದು ಹೊಸ ಚಿತ್ರದ ಬಗ್ಗೆ ಮಾಹಿತಿ ನೀಡುವುದಾಗಿ ಹೊಂಬಾಳೆ ಫಿಲಂಸ್ ಸಂಸ್ಥೆ ಹೇಳಿಕೊಂಡಿತ್ತು. ಈಗ ಆ ಚಿತ್ರದ ಬಗ್ಗೆ ಮಾಹಿತಿ ಬಂದಿದೆ.

ರಾಜವಂಶದ ಕುಡಿ ಯುವ ರಾಜಕುಮಾರ್ ನಟನೆಯ ನೂತನ ಸಿನಿಮಾ ಆರಂಭಿಸುವುದಾಗಿ ಸಂಸ್ಥೆ ಹೇಳಿದೆ. ಖ್ಯಾತ ನಿರ್ದೇಶಕ ಸಂತೋಷ್ ಆನಂದರಾಮ್ ಈ ಚಿತ್ರ ನಿರ್ದೇಶಕರು. ಸದ್ಯಕ್ಕೆ ಇಷ್ಟು ಮಾಹಿತಿ ನೀಡಿರುವ ಹೊಂಬಾಳೆ ಫಿಲಂಸ್, ನಂತರದ ದಿನಗಳಲ್ಲಿ ಹೆಚ್ಚಿನ ಮಾಹಿತಿ ನೀಡುವುದಾಗಿ ಹೇಳಿದೆ.

ಮೊದಲಿನಿಂದಲೂ ರಾಜಕುಮಾರ್ ಅವರ ಕುಟುಂಬದ ಮೇಲೆ ನಿರ್ಮಾಪಕ ವಿಜಯ್ ಕಿರಗಂದೂರ್ ಅವರಿಗೆ ಅಪಾರ ಪ್ರೀತಿ. ಪುನೀತ್ ರಾಜಕುಮಾರ್ ಅವರ ಜೊತೆ ಸಂಸ್ಥೆಯ ಮೊದಲ ಚಿತ್ರವಾಗಿ “ನಿನ್ನಿಂದಲೇ” ಚಿತ್ರ ನಿರ್ಮಿಸಿದ್ದರು. ನಂತರ ಸಂತೋಷ್ ಆನಂದರಾಮ್ ನಿರ್ದೇಶನದಲ್ಲಿ ಪುನೀತ್ ಅವರು ಅಭಿನಯಿಸಿದ್ದ “ರಾಜಕುಮಾರ” ಚಿತ್ರ ಸಹ ಇದೇ ಸಂಸ್ಥೆಯಿಂದ ನಿರ್ಮಾಣವಾಗಿತ್ತು. ಈ ಮೂವರ ಸಂಗಮದಲ್ಲಿ ಬಂದಿದ್ದ “ಯುವರತ್ನ” ಚಿತ್ರ ಸಹ ಎಲ್ಲರ ಮನ ಗೆದ್ದಿತ್ತು.

ಸಂತೋಷ್ ಆನಂದರಾಮ್ ಹಾಗೂ ಪುನೀತ್ ರಾಜ್‍ಕುಮಾರ್ ಅವರ ಕಾಂಬಿನೇಶನಲ್ಲಿ ಮತ್ತೊಂದು ಹೊಸ ಚಿತ್ರ ಆರಂಭಕ್ಕೆ ಸಿದ್ದತೆ ನಡೆದಿತ್ತು. ಆದರೆ ಆ ಸಮಯದಲ್ಲಿ ಯಾರು ನಿರೀಕ್ಷಿಸದ ಘಟನೆ ನಡೆದು ಹೋಯಿತು. ಈಗ ಅದೇ ಕುಟುಂಬದ ಯುವ ರಾಜಕುಮಾರ್ ಅವರು ನಾಯಕರಾಗಿ ನಟಿಸುತ್ತಿರುವ ಆಕ್ಷನ್ ಓರಿಯಂಟೆಡ್ ಚಿತ್ರವನ್ನು ವಿಜಯ್ ಕಿರಗಂದೂರ್ ನಿರ್ಮಿಸುತ್ತಿದ್ದಾರೆ. ಸಂತೋಷ್ ಆನಂದರಾಮ್ ಅವರೆ ನಿರ್ದೇಶಿಸುತ್ತಿದ್ದಾರೆ. ಸದ್ಯದಲ್ಲೇ ಈ ನೂತನ ಚಿತ್ರಕ್ಕೆ ಚಾಲನೆ ದೊರಕಲಿದೆ.

“ನಿನ್ನಿಂದಲೇ” ಚಿತ್ರದಿಂದ ಆರಂಭಿಸಿ, ಯಶ್ ಅಭಿನಯದ “ಕೆ.ಜಿ.ಎಫ್”, “ಮಾಸ್ಟರ್ ಪೀಸ್”, ” ರಾಜಕುಮಾರ” ಯುವರತ್ನ”, “ಕೆ‌.ಜಿ.ಎಫ್ ೨” ಹೀಗೆ ಒಂದರ ಹಿಂದೆ ಒಂದು ಅದ್ದೂರಿ ಚಿತ್ರ ನಿರ್ಮಾಣ ಮಾಡಿರುವ ವಿಜಯ್ ಕಿರಗಂದೂರ್ ಅವರು ಸದ್ಯ ಪ್ರಭಾಸ್ ಹಾಗೂ ಪ್ರಶಾಂತ್ ನೀಲ್ ಜೋಡಿಯ “ಸಲಾರ್”, ಜಗ್ಗೇಶ್ ಅವರ ” ರಾಘವೇಂದ್ರ ಸ್ಟೋರ್ಸ್” , ರಿಷಭ್ ಶೆಟ್ಟಿ ನಿರ್ದೇಶನದ “ಕಾಂತಾರ” ಚಿತ್ರಗಳನ್ನು ನಿರ್ಮಿಸುತ್ತಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಏಕಕಾಲಕ್ಕೆ ಇಂತಹ ಸದಭಿರುಚಿಯ ಜೊತೆಗೆ, ಅದ್ದೂರಿ ಚಿತ್ರಗಳನ್ನು ನಿರ್ಮಾಣ ಮಾಡುತ್ತಿರುವ ವಿಜಯ್ ಕಿರಗಂದೂರ್ ಅವರ ಸಿನಿಮಾ ಪ್ರೀತಿಗೆ ವಿಶ್ವದಾದ್ಯಂತ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಮುಂದೆ ಈ ಸಂಸ್ಥೆಯಿಂದ ಯಾವ ಚಿತ್ರ ಬರಬಹುದೆಂಬ ನಿರೀಕ್ಷೆ ಕೂಡ ಹೆಚ್ಚಿಸುತ್ತಿದೆ.

ಕನ್ನಡ ಚಿತ್ರರಂಗದ ಮಾರುಕಟ್ಟೆಯನ್ನು ವಿಶ್ವದಾದ್ಯಂತ ವಿಸ್ತರಿಸಿದ ನಿರ್ಮಾಪಕ ವಿಜಯ್ ಕಿರಗಂದೂರ್ ನಿಜಕ್ಕೂ ಅಭಿನಂದನಾರ್ಹರು.

Categories
ಸಿನಿ ಸುದ್ದಿ

ಕನ್ನೇರಿ ಫಿಫ್ಟಿ ಡೇಸ್ ಯಶಸ್ವಿ; ಸಂಭ್ರಮಿಸಿದ ಸಿನಿಮಾ ತಂಡ…

ಮೂಕಹಕ್ಕಿ ಸಿನಿಮಾ ಖ್ಯಾತಿಯ ನಿರ್ದೇಶಕ ನೀನಾಸಂ ಮಂಜು ನಿರ್ದೇಶನದಲ್ಲಿ ಮೂಡಿ ಬಂದಿದ್ದ ಕನ್ನೇರಿ ಸಿನಿಮಾ ಬೆಳ್ಳಿತೆರೆಯಲ್ಲಿ ಯಶಸ್ವಿಯಾಗಿ ಸಾಗುತ್ತಿದೆ. ಮಾರ್ಚ್ 4ರಂದು ರಾಜ್ಯಾದ್ಯಂತ ತೆರೆಕಂಡ ಕನ್ನೇರಿ ಸಿನಿಮಾಗೆ ಚಿತ್ರರಸಿಕರು ಭಾರೀ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಅದರಲ್ಲೂ ಉತ್ತರ ಕರ್ನಾಟಕದ ರಾಯಭಾಗದಲ್ಲಂತೂ ಸಿನಿಮಾಗೆ ಭಾರೀ ಪ್ರಶಂಸೆ ವ್ಯಕ್ತವಾಗುತ್ತಿದೆ.

ಐವತ್ತು ದಿನ ಪೂರೈಸಿದ ಕನ್ನೇರಿ


ನೈಜ ಘಟನೆಯಾಧಾರಿತ ಮಹಿಳಾ ಪ್ರಧಾನ ಕನ್ನೇರಿ ಸಿನಿಮಾದಲ್ಲಿ ಕೊಡಗಿನಲ್ಲಿ ಭಾರಿ ಸದ್ದು ಮಾಡಿದ್ದ ದಿಡ್ಡಳ್ಳಿ ಸಂತ್ರಸ್ತರ ಹೋರಾಟ, ಪ್ರಕೃತಿ ಮಡಿಲಲ್ಲಿ ಬದುಕು ಕಟ್ಟಿಕೊಂಡಿದ್ದ ಬುಡಕಟ್ಟು ಜನಾಂಗ ಒಕ್ಕಲೆಬ್ಬಿಸಿದ ಪರಿ, ಹೆಣ್ಣು ಮಕ್ಕಳು ದೌರ್ಜನ್ಯಕ್ಕೆ ಒಳಗಾಗುವ ಕಥೆಯನ್ನು ನೀನಾಸಂ ಮಂಜು ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿದ್ದಾರೆ.

ಈ ಕಥೆ ಚಿತ್ರಪ್ರೇಮಿಗಳಿಗೆ ಸಖತ್ ಇಷ್ಟವಾಗಿದೆ. ಅದರ ಪ್ರತಿಫಲ, ಇವತ್ತು ಪ್ಯಾನ್ ಇಂಡಿಯಾ ಸಿನಿಮಾ ಹಾಗೂ ಕಮರ್ಷಿಯಲ್ ಸಿನಿಮಾಗಳ ಅಬ್ಬರ ನಡುವೆಯೂ ಕನ್ನೇರಿ ಐವತ್ತು ದಿನ ಪೂರೈಸಿರುವುದು ವಿಶೇಷ.

ಅರ್ಚನಾ ಮಧುಸೂಧನ್, ಅನಿತಾ ಭಟ್, ಅರುಣ್ ಸಾಗರ್, ಎಂ.ಕೆ. ಮಠ, ಕರಿಸುಬ್ಬು ಒಳಗೊಂಡಂತೆ ಹಲವು ಪ್ರತಿಭಾನ್ವಿತ ಕಲಾವಿದರು ನಟಿಸಿರುವ ಕನ್ನೇರಿ ಸಿನಿಮಾವನ್ನು ಬುಡ್ಡಿ ದೀಪ ಸಿನಿಮಾ ಹೌಸ್ ಬ್ಯಾನರ್ ನಡಿ ಪಿ.ಪಿ ಹೆಬ್ಬಾರ್ ನಿರ್ಮಾಣ ಮಾಡಿದ್ದಾರೆ. ಗಣೇಶ್ ಹೆಗ್ಡೆ ಕ್ಯಾಮರಾ ವರ್ಕ್, ಮಣಿಕಾಂತ್ ಕದ್ರಿ ಸಂಗೀತ ನಿರ್ದೇಶನ, ಸುಜಿತ್ ನಾಯಕ್ ಸಂಕಲನ ಸಿನಿಮಾಕ್ಕಿದೆ.

Categories
ಸಿನಿ ಸುದ್ದಿ

ಶುಗರ್ ಲೆಸ್ ಸೆನ್ಸಾರ್ ಆಯ್ತು: ಶೀಘ್ರವೇ ಟ್ರೇಲರ್ ಬಿಡುಗಡೆ…


ಸಕ್ಕರೆ ಕಾಯಿಲೆ ಕುರಿತು ಕೆಲವರಲ್ಲಿರುವ ಕಲ್ಪನೆ, ಭಯ ಇದನ್ನೆಲ್ಲ ಇಟ್ಟುಕೊಂಡು ಕಾಮಿಡಿ ಜೊತೆಗೆ ಮೆಸೇಜ್ ಹೇಳುವ ಪ್ರಯತ್ನವೇ ಶುಗರ್‌ಲೆಸ್. ನಿರ್ಮಾಪಕರಾಗಿದ್ದ ಶಶಿಧರ್ ಕೆ.ಎಂ. ಇದೇ ಮೊದಲ ಬಾರಿಗೆ ನಿರ್ದೇಶಿಸಿರುವ ಚಿತ್ರ ಇದಾಗಿದ್ದು, ಇತ್ತೀಚೆಗಷ್ಟೇ ಈ ಚಿತ್ರವನ್ನು ನೋಡಿದ ಸೆನ್ಸಾರ್ ಮಂಡಳಿ ಪ್ರಶಂಸೆಯ ಜೊತೆಗೆ ಯಾವುದೇ ಕಡಿತ ಮತ್ತು ಮ್ಯೂಟ್ ಇಲ್ಲದೆ ಯು ಪ್ರಮಾಣ ಪತ್ರ ‌ನೀಡಿದೆ.
ಚಿತ್ರದಲ್ಲಿ ಸಮಾಜಕ್ಕೆ ಅತ್ಯವಶ್ಯವಾಗಿ ಬೇಕಾಗಿರುವ ಒಂದು ಉತ್ತಮ ಸಂದೇಶವನ್ನು ಹೇಳಲಾಗಿದೆ.


ಶಶಿಧರ್ ಸ್ಟುಡಿಯೋಸ್ ಪ್ರೊಡಕ್ಷನ್ಸ್ ಮೂಲಕ ಶಶಿಧರ್ ಕೆ.ಎಂ. ಅವರೇ ಕಥೆ, ಚಿತ್ರಕಥೆ ಬರೆದು ನಿರ್ಮಾಣವನ್ನೂ ಮಾಡಿದ್ದಾರೆ. ಸಹ ನಿರ್ಮಾಪಕರಾಗಿ ಪ್ರಜ್ವಲ್ ಎಂ.ರಾಜ ಹಾಗೂ ವಿಜಯಲಕ್ಷ್ಮಿ ಕೃಷ್ಣೇಗೌಡ ಸಾಥ್ ನೀಡಿದ್ದಾರೆ. ಲವಿತ್ ಅವರ ಛಾಯಾಗ್ರಹಣ, ಅನೂಪ್ ಸೀಳಿನ್ ಅವರ ಸಂಗೀತ ಸಂಯೋಜನೆ ಚಿತ್ರಕ್ಕಿದ್ದು, ವಿ. ನಾಗೇಂದ್ರಪ್ರಸಾದ್ ಸಾಹಿತ್ಯ ರಚಿಸಿದ್ದಾರೆ. ಗುರು ಕಶ್ಯಪ್ ಚಿತ್ರದ ಸಂಭಾಷಣೆ ರಚಿಸಿದ್ದಾರೆ. ಚಿತ್ರದ ಸಂಕಲನ ರವಿಚಂದ್ರನ್, ನೃತ್ಯ ಸಂಯೋಜನೆ ಮುರಳಿ ಮಾಸ್ಟರ್, ಕಲೆ ವಿನ್ಯಾಸವನ್ನು ರೂಪೇಂದ್ರ ಆಚಾರ್ ಮಾಡಿದ್ದಾರೆ.

ಪೃಥ್ವಿ ಅಂಬರ್, ಪ್ರಿಯಾಂಕ ತಿಮ್ಮೇಶ್ ಪ್ರಮುಖ ಪಾತ್ರದಲ್ಲಿದ್ದು, ಉಳಿದಂತೆ ಹಿರಿಯ ನಿರ್ದೇಶಕ ಎಸ್.ನಾರಾಯಣ್, ರಘು ರಾಮನಕೊಪ್ಪ, ಧರ್ಮಣ್ಣ ಕಡೂರ್, ನವೀನ್ ಡಿ.ಪಡೀಲ್, ಗಿರೀಶ್ ಜತ್ತಿ, ಹೊನ್ನವಳ್ಳಿ ಕೃಷ್ಣ, ಮಾಲತಿ ಅಭಿನಯಿಸಿದ್ದಾರೆ. ಪ್ರಪಂಚದಾದ್ಯಂತ ಸಾಕಷ್ಟು ಮಧುಮೇಹಿಗಳಿದ್ದಾರೆ. ಸಕ್ಕರೆ ಕಾಯಿಲೆ ಮೇಲೆ ಯಾವುದೇ ಸಿನಿಮಾ ನಿರ್ಮಾಣವಾಗಿಲ್ಲ. ಶೀಘ್ರದಲ್ಲೇ ಚಿತ್ರದ ಟ್ರೇಲರ್ ಮತ್ತು ಚಿತ್ರದ ಬಿಡುಗಡೆ ದಿನಾಂಕ ಪ್ರಕಟಿಸುವುದಾಗಿ ನಿರ್ಮಾಪಕ ಕೆ.ಎಂ.ಶಶಿಧರ್ ಹೇಳಿದ್ದಾರೆ.

Categories
ಸಿನಿ ಸುದ್ದಿ

ಬಯಲುಸೀಮೆ ಎಂಬ ಜವಾರಿ ಭಾಷೆಯ ಸಿನಿಮಾ; ಹಾಡು ಬಿಡುಗಡೆಯ ಸಂಭ್ರಮ…

ಉತ್ತರ ಕರ್ನಾಟಕ ಶೈಲಿಯ ರಗಡ್ ಕಥೆಗಳ ಬಗ್ಗೆ ಕನ್ನಡದ ಪ್ರೇಕ್ಷಕರರಲ್ಲಿ ಒಂದು ವಿಶೇಷ ಪ್ರೀತಿ. ಇದೀಗ ಅದೇ ಸೊಗಡಿನ ಪಕ್ಕಾ ರಗಡ್ ಕಥಾನಕ ಹೊಂದಿರೋ ಬಯಲು ಸೀಮೆ ಸಿನಿಮಾ ಶೂಟಿಂಗ್ ಮುಗಿಸಿಕೊಂಡ ಚಿತ್ರ ತಂಡ ಆಡಿಯೋ ಬಿಡುಗಡೆಗೆ ಮಾಡಿದೆ.

ನಿರ್ದೇಶಕರು ಏನೇ ವಿಷ್ಯುವಲೈಸೇಷನ್ ಮಾಡಿದರೆ ಅದಕ್ಕೆ ನಿರ್ಮಾಪಕರ ಸಪೋರ್ಟ್ ಬಹಳ‌ ಮುಖ್ಯ. ಪ್ರತಿಯೊಬ್ಬರೂ ಈ ಸಿನಿಮಾಗೆ ಬಹಳಷ್ಟು ಶ್ರಮಿಸಿದ್ದಾರೆ. ನಾಗಾಭರಣ ಅವರ ಜೊತೆ ಆಕ್ಟ್ ಮಾಡಿರೋದು ಖುಷಿ ಕೊಟ್ಟಿದೆ ಎಂದು ಆರ್ಮುಗಂ ರವಿಶಂಕರ್ ತಮ್ಮ ಅನುಭವ ಹಂಚಿಕೊಂಡರು.

ಪೊಲಿಟಿಕಲ್ ಕ್ರೈಂ ಥ್ರಿಲ್ಲರ್ ಜಾನರಿನ ‘ಬಯಲುಸೀಮೆ’ ಸಿನಿಮಾ ನಾನಾ ಮಜಲುಗಳ, ಮೈನವಿರೇಳಿಸೋ ತಿರುವುಗಳ ಮೂಲಕ ಪ್ರೇಕ್ಷಕರನ್ನು ಬೇರೆಯದ್ದೇ ಜಗತ್ತಿಗೆ ಕೊಂಡೊಯ್ಯುವಂತೆ ಸಿನಿಮಾ ಮೂಡಿ‌ಬಂದಿದೆ.

ಲಕ್ಷ್ಮಣ್ ಸಾ ಶಿಂಗ್ರಿ ನಿರ್ಮಾಣದಲ್ಲಿ ಮೂಡಿ ಬಂದಿರುವ ಬಯಲುಸೀಮೆಯನ್ನು ವರುಣ್ ಕಟ್ಟೀಮನಿ ನಿರ್ದೇಶನ ಮಾಡಿದ್ದಾರೆ. ಎಂಬತ್ತರ ದಶಕ ಮತ್ತು ಇವತ್ತಿನ ಕಾಲಮಾನದೊಂದಿಗೆ ಜುಗಲ್ಬಂದಿ ಹೊಂದಿರೋ ಈ ಕಥೆ, ಆ ಎರಡು ಕಾಲಘಟ್ಟಗಳನ್ನೂ ಉತ್ತರ ಕರ್ನಾಟಕದ ಜವಾರಿ ಶೈಲಿಯಲ್ಲಿ ಕಟ್ಟಿಕೊಟ್ಟಿದೆ. ಸಾಹೂರಾವ್ ಶಿಂಧೆ ಎಂಬ ಶ್ರೀಮಂತ ವ್ಯಕ್ತಿಯ ಸುತ್ತ ಬಯಲು ಸೀಮೆಯ ಕಥೆ ಚಲಿಸುತ್ತೆ.

ಆತನ ಸುತ್ತ ಹಬ್ಬಿಕೊಳ್ಳುವ ಅಕ್ರಮ ಸಂಬಂಧ, ಅದರ ಹಿನ್ನೆಲೆಯಲ್ಲೊಂದು ಲವ್ ಸ್ಟೋರಿ ಹಾಗೂ ಅದರ ಗರ್ಭದಲ್ಲಿಯೇ ಹುಟ್ಟಿಕೊಳ್ಳೋ ದ್ವೇಷ… ಕ್ಷಣ ಕ್ಷಣವೂ ಪ್ರೇಕ್ಷಕರನ್ನು ತುದೀ ಸೀಟಿಗೆ ತಂದು ಕೂರಿಸುವಂಥಾ ಗಟ್ಟಿ ಕಥೆಯೊಂದಿಗೆ ಚಿತ್ರತಂಡ ಪ್ರೇಕ್ಷಕರನ್ನು ಮುಖಾಮುಖಿಯಾಗೋ ಉತ್ಸಾಹದಲ್ಲಿದೆ.

ಈ ಸಿನಿಮಾದಲ್ಲಿ ಭಯ ಹುಟ್ಟಿಸೋ ಪಾತ್ರಗಳಿವೆ. ಅದಕ್ಕೆ ಮಹಾರಥ ಕಲಾವಿದರುಗಳು ಜೀವ ತುಂಬಿದ್ದಾರೆ. ಬೃಹತ್ ತಾರಾಗಣ ಹೊಂದಿರೋ ಬಯಲು ಸೀಮೆಯಲ್ಲಿ ಬಿಸಿಲ ನಾಡ ಪ್ರತಿಭೆಗಳೂ ಮಿಂಚಲು ಅಣಿಯಾಗಿದ್ದಾರೆ.

ಟಿ.ಎಸ್ ನಾಗಾಭರಣ, ರವಿಶಂಕರ್, ಸಂಯುಕ್ತ ಹೊರನಾಡು, ಯಶ್ ಶೆಟ್ಟಿ, ಭವಾನಿ ಪ್ರಕಾಶ್, ಅರ್ಚನಾ ಕೊಟ್ಟಿಗೆ, ವರುಣ್ ಕಟ್ಟೀಮನಿ, ಲಕ್ಷ್ಮೀ ನಾಡಗೌಡರ್, ಸಂತೋಷ್ ಉಪ್ಪಿನ್, ನಾಗರಾಜ ಭಟ್, ಮಹೇಶ್ ದೊಡ್ಡಕೈನವರ್, ಪ್ರದೀಪ್ ರಾಜ್ ಮುಂತಾದವರು ಸಿನಿಮಾದಲ್ಲಿದ್ದಾರೆ. ಸುಜಯ್ ಕುಮಾರ್ ಬಾವಿಕಟ್ಟಿ ಛಾಯಾಗ್ರಹಣ, ಮಾನಸ ಹೊಳ್ಳ ಸಂಗೀತ ನಿರ್ದೇಶನ, ಕಿರಣ್ ಕುಮಾರ್ ಸಂಕಲನ ಮತ್ತು ರಾಮು ಅವರ ನೃತ್ಯ ಸಂಯೋಜನೆಯಿಂದ ಬಯಲುಸೀಮೆ ಸಿಂಗರಿಸಿಕೊಂಡಿದೆ.

Categories
ಸಿನಿ ಸುದ್ದಿ

ಪ್ರಶಾಂತ್ ರಾಜ್ ಹೊಸ ಸಿನಿಮಾ ಶುರು: ತಮಿಳು ಹೀರೋ ಸಂತಾನಂಗೆ ಆಕ್ಷನ್ ಕಟ್…

ಆರೆಂಜ್, ದಳಪತಿ, ಜೂಮ್, ಲವ್ ಗುರು ಸಿನಿಮಾಗಳ ಖ್ಯಾತಿಯ ಪ್ರಶಾಂತ್ ರಾಜ್ ನಿರ್ದೇಶನದ ಹೊಸ ಸಿನಿಮಾ ಸೆಟ್ಟೇರಿದೆ. ಈ ಬಾರಿ ಪ್ರಶಾಂತ್ ಕನ್ನಡದ ಜೊತೆಗೆ ತಮಿಳಿನಲ್ಲೂ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಅದರ ಮೊದಲ ಭಾಗವಾಗಿ ಇವತ್ತು ಬೆಂಗಳೂರಿನ ಕೊಂದಂಡ ರಾಮ ದೇಗುಲದಲ್ಲಿರುವ ಸಾಯಿಬಾಬಾ ಮಂದಿರದಲ್ಲಿ ಸಿನಿಮಾದ ಮುಹೂರ್ತ ನೆರವೇರಿದೆ

ಇಂದಿನಿಂದ ಶೂಟಿಂಗ್ ಶುರು
ಫಾರ್ಚುನ್ ಫಿಲ್ಮಂ ಬ್ಯಾನರ್ ನಡಿ ಪ್ರೊಡಕ್ಷನ್ ನಂಬರ್ 10 ಟೈಟಲ್ ನಡಿ ಸೆಟ್ಟೇರಿರುವ ಈ ಸಿನಿಮಾದಲ್ಲಿ ತಮಿಳಿನ ಖ್ಯಾತ ನಟ ಸಂತಾನಂ ನಾಯಕನಾಗಿ ನಟಿಸ್ತಿದ್ದು, ತಾನ್ಯ ಹೋಪ್ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ.

ರೋಮ್ಯಾಂಟಿಕ್ ಕಾಮಿಡಿ ಜಾನರ್ ಈ ಸಿನಿಮಾಗೆ ನವೀನ್ ರಾಜ್ ಬಂಡವಾಳ ಹೂಡಿದ್ದಾರೆ. ಇಂದಿನಿಂದ ಶೂಟಿಂಗ್ ಶುರು ಮಾಡಿರುವ ಪ್ರಶಾಂತ್ ರಾಜ್, ಫಸ್ಟ್ ಡೇ ಶೆಡ್ಯೂಲ್ಡ್ ನಲ್ಲೂ ಬೆಂಗಳೂರಿನಲ್ಲಿ ಮುಗಿಸಿಕೊಂಡು, ಆ ನಂತ್ರ ಚೆನ್ನೈನಲ್ಲಿ ಹಾಗೂ ವಿದೇಶದಲ್ಲಿ ಹಾಡು, ಕೆಲವೊಂದು ದೃಶ್ಯಗಳನ್ನು ಚಿತ್ರೀಕರಿಕರಿಸಲು ಪ್ಲ್ಯಾನ್ ಹಾಕಿಕೊಂಡಿದ್ದಾರೆ.

ಪ್ರಶಾಂತ್ ರಾಜ್ ಸಿನಿಮಾಗಳು ಅಂದ್ರೆ ಅಲ್ಲಿ ಸಂಗೀತಕ್ಕೆ ಹೆಚ್ಚಿನ ಪ್ರಾಧ್ಯಾನ್ಯತೆ ಇರುತ್ತದೆ. ಅದರಂತೆ ಈ ಬಾರಿ ಪ್ರಶಾಂತ್ ಮ್ಯೂಸಿಕಲ್ ಕಂಪೋಸರ್ ಅರ್ಜುನ್ ಜನ್ಯ ಜೊತೆ ಕೈ ಜೋಡಿಸಿದ್ದಾರೆ.

ಪ್ರಶಾಂತ್ ನಿರ್ದೇಶನದ ಹೊಸ ಸಿನಿಮಾಗೆ ಅರ್ಜುನ್ ಜನ್ಯ ಮ್ಯೂಸಿಕ್ ನೀಡಲಿದ್ದು, ಸುಧಾಕರ್ ಕ್ಯಾಮೆರಾ ಕೈಚಳಕ ಸಿನಿಮಾದಲ್ಲಿರಲಿದೆ. ಸದ್ಯದಲ್ಲಿಯೇ ಉಳಿದ ತಾರಾಬಳಗದ ಮಾಹಿತಿಯನ್ನು ಚಿತ್ರತಂಡ ನೀಡಲಿದೆ.

Categories
ಸಿನಿ ಸುದ್ದಿ

ಹೆಡ್ ಬುಷ್ ಆಟ ಕಂಪ್ಲೀಟ್! ಡಾಲಿ-ಯೋಗಿ ಸಿನಿಮಾ ಶೂಟಿಂಗ್ ಮುಗೀತು…

ಭೂಗತ ದೊರೆ ಎಂ.ಪಿ.ಜಯರಾಜ್ ಜೀವನಾಧಾರಿತ “ಹೆಡ್ ಬುಷ್” ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಬಹುತೇಕ ಬೆಂಗಳೂರಿನಲ್ಲೇ ಚಿತ್ರದ ಚಿತ್ರೀಕರಣ
ನಡೆದಿರುವುದು ವಿಶೇಷ….

ಡಾಲಿ ಧನಂಜಯ ಜಯರಾಜ್ ಅವರ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಅಗ್ನಿ ಶ್ರೀಧರ್ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿರುವ ಈ ಚಿತ್ರವನ್ನು ಶೂನ್ಯ ನಿರ್ದೇಶಿಸುತ್ತಿದ್ದಾರೆ. 1970 ರ ಬೆಂಗಳೂರಿನ ಭೂಗತ ಜಗತ್ತನ್ನು ಶೂನ್ಯ ಈ ಚಿತ್ರದಲ್ಲಿ ತೋರಿಸಲು ಹೊರಟಿದ್ದಾರೆ. ಆ ಕಾಲಕ್ಕೆ ಸರಿಹೊಂದುವ ಅನೇಕ ಸೆಟ್ ಗಳನ್ನು ಹಾಕಲಾಗಿದೆ.

ಫಿಲಂ ಮೇಕಿಂಗ್ ನಲ್ಲಿ ಎಂ ಎಸ್ ಸಿ ಪದವಿ ಪಡೆದಿರುವ ಶೂನ್ಯ, ರಕ್ಷಿತ್ ಶೆಟ್ಟಿ ಅವರ ಬಳಿ ಅಸೋಸಿಯೇಟ್ ಆಗಿ ಕಾರ್ಯ ನಿರ್ವಹಿಸಿ ಅನುಭವ ಪಡೆದಿದ್ದಾರೆ. ಅಷ್ಟೇ ಅಲ್ಲದೇ, ಶೂನ್ಯ ಫಿಲಂ ಮೇಕಿಂಗ್ ಕುರಿತು ಸಂಶೋಧನೆ ಕೂಡ ನಡೆಸಿದ್ದಾರೆ.

ಡಾಲಿ ಧನಂಜಯ, ಪಾಯಲ್ ರಜಪೂತ್, ಕ್ರೇಜಿಸ್ಟಾರ್ ರವಿಚಂದ್ರನ್, ಲೂಸ್ ಮಾದ ಯೋಗಿ, ವಸಿಷ್ಠ ಎನ್ ಸಿಂಹ, ಡೈನಾಮಿಕ್ ಸ್ಟಾರ್ ದೇವರಾಜ್, ಶೃತಿ ಹರಿಹರನ್, ರಘು ಮುಖರ್ಜಿ, ಬಾಲು ನಾಗೇಂದ್ರ ಮುಂತಾದ ಅನುಭವಿ ಕಲಾವಿದರ ದೊಡ್ಡ ತಾರಾಬಳಗವೇ ಈ ಚಿತ್ರದಲ್ಲಿದೆ.

ಡಾಲಿ ಪಿಕ್ಚರ್ಸ್ ಹಾಗೂ ಸೋಮಣ್ಣ ಟಾಕೀಸ್ ಲಾಂಛನದಲ್ಲಿ ಡಾಲಿ ಧನಂಜಯ ಹಾಗೂ ರಾಮ್ಕೊ ಸೋಮಣ್ಣ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.

ಅದ್ಭುತ ಹಾಡುಗಳಿಗೆ ಚರಣ್ ರಾಜ್ ಸಂಗೀತ ನಿರ್ದೇಶನವಿದೆ. ಸುನೊಜ್ ವೇಲಾಯಧನ್ ಅವರ ಛಾಯಾಗ್ರಹಣವಿರುವ ಈ ಚಿತ್ರದ ಕಲಾ ನಿರ್ದೇಶಕರು ಬಾಡಲ್ ನಂಜುಂಡಸ್ವಾಮಿ.

Categories
ಸಿನಿ ಸುದ್ದಿ

ದಿಗಂತ್ ಖಾತೆಯಲ್ಲಿ ಹಣವಿಲ್ಲ; ಕ್ಷಮಿಸಿ ಇದು ದೂದ್ ಪೇಡ ಸಿನಿಮಾ- ಏಪ್ರಿಲ್ 29ಕ್ಕೆ ರಿಲೀಸ್…

ದಿಗಂತ್ ಅಭಿನಯದ ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ ಸಿನಿಮಾ ಏಪ್ರಿಲ್ 29ಕ್ಕೆ ರಿಲೀಸ್ ಆಗುತ್ತಿದೆ. ಈ ಕುರಿತು ನಿರ್ದೇಶಕ ವಿನಾಯಕ ಕೋಡ್ಸರ ಹೇಳಿದ್ದಿಷ್ಟು.

ಚಿತ್ರದ ಬಗ್ಗೆ ಈಗಾಗಲೇ ಸಾಕಷ್ಟು ಹೇಳಿದ್ದೀನಿ. ಚಿತ್ರದ ಟ್ರೇಲರ್ ಹಾಗೂ ಹಾಡು ಈಗಾಗಲೇ ಜನರ ಮನಸ್ಸು ಗೆದ್ದಿದೆ. ಸಿನಿಮಾ ಕೂಡ ಗೆಲ್ಲುತ್ತದೆ ಎಂಬ ವಿಶ್ವಾಸವಿದೆ. ನಾವು ಹೆಚ್ಚು ಹೇಳುವುದೇನು ಇಲ್ಲ. ಇದೇ 29 ರಂದು ಚಿತ್ರ ತೆರೆಗೆ ಬರುತ್ತಿದೆ. ನೀವೆಲ್ಲಾ ನೋಡಿ ಹರಸಿ ಎಂದರು ವಿನಾಯಕ ಕೋಡ್ಸರ.

ಈ ಕಥೆ ಕೇಳಿದೆ. ಇಷ್ಟವಾಯಿತು. ಹತ್ತು ವರ್ಷಗಳ ನಂತರ ನಿರ್ಮಾಣ ಮಾಡಿದ್ದೇನೆ. ಸುಮಾರು ಅರವತ್ತಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುತ್ತೇನೆ ಎಂದರು ನಿರ್ಮಾಪಕ ಸಿಲ್ಕ್ ಮಂಜು.

ಮಧ್ಯಮ ವರ್ಗದ ಜನರ ಬಳಿ ತಿಂಗಳ ಕೊನೆಗೆ ದುಡ್ಡು ಉಳಿದಿರುವಿದಿಲ್ಲ. ಈ ವಿಷಯವಿಟ್ಟುಕೊಂಡು ನಿರ್ಮಾಣವಾಗಿರುವ ಚಿತ್ರವಿದು. ಮಲೆನಾಡ ಸುಂದರ ಪರಿಸರದಲ್ಲಿ ಚಿತ್ರೀಕರಣವಾಗಿದೆ. ಉತ್ತಮ ಕಥೆಯಿರುವ ಚಿತ್ರವನ್ನು ಜನ ಮೆಚ್ಚಿಕೊಳ್ಳುತ್ತಾರೆ ಎಂಬ ನಂಬಿಕೆಯಿದೆ. ಚಿತ್ರತಂಡದ ಪರಿಶ್ರಮ ಚೆನ್ನಾಗಿದೆ ಎಂದರು ನಾಯಕ ದಿಗಂತ್.

ಬಹಳ ವರ್ಷಗಳ ನಂತರ ನಾನು ದಿಗಂತ್ ಒಟ್ಟಾಗಿ ಅಭಿನಯಿಸುತ್ತಿದ್ದೇವೆ. ಲಾಯರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತದ್ದೇನೆ. ಉತ್ತಮ ಸಂದೇಶವಿರುವ ಈ ಚಿತ್ರವನ್ನು ನೋಡಿ ಹರಸಿ ಎಂದರು ನಾಯಕಿ ಐಂದ್ರಿತಾ.

ಸಾಕಷ್ಟು ಬಿಗ್ ಬಜೆಟ್ ಚಿತ್ರಗಳ ನಡುವೆ ಉತ್ತಮ ಕಥೆಯುಳ್ಳ ಚಿತ್ರಗಳನ್ನು ಕನ್ನಡಿಗರು ಕೈ ಹಿಡಿಯುತ್ತಾರೆ ಎಂಬ ಭರವಸೆಯಿದೆ. ನಮ್ಮ ಚಿತ್ರಕ್ಕೆ ನಿಮ್ಮ ಬೆಂಬಲವಿರಲಿ ಎಂದರು ಕಾರ್ಯಕಾರಿ ನಿರ್ಮಾಪಕ ರವೀಂದ್ರ ಜೋಶಿ.

ನಟಿ ರಜನಿ ರಾಘವನ್ ತಮ್ಮ ಪಾತ್ರದ ಬಗ್ಗೆ ಹೇಳಿಕೊಂಡರು. ಅತಿಥಿಯಾಗಿ ಆಗಮಿಸಿದ್ದ ಲಹರಿ ವೇಲು ಚಿತ್ರತಂಡಕ್ಕೆ ಶುಭ ಹಾರೈಸಿದರು.

ಪ್ರಜ್ವಲ್ ಪೈ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ನಂದಕಿಶೋರ್ ಅವರ ಛಾಯಾಗ್ರಹಣವಿದೆ.

Categories
ಸಿನಿ ಸುದ್ದಿ

ಐ ಆಮ್ ಆರ್; ಇದು ಉಪ್ಪಿ -ಆರ್ ಜಿ ವಿ ಸಿನಿಮಾ; ಟೈಟಲ್ ಬಿಡುಗಡೆ ಮಾಡಿ ಶುಭ ಕೋರಿದ ಕಿಚ್ಚ…

ಸಿನಿರಂಗದಲ್ಲಿ ತಮ್ಮದೇ ಆದ ಹೆಸರು ಮಾಡಿರುವವರು ರಾಮ್ ಗೋಪಾಲ್ ವರ್ಮ ಮತ್ತು ಉಪೇಂದ್ರ. ಇವರಿಬ್ಬರ ಕಾಂಬಿನೇಶನಲ್ಲಿ “I AM R” ಸಿನಿಮಾ ಬರುತ್ತಿದೆ ‌. ರಾಮ್ ಗೋಪಾಲ್ ವರ್ಮ ನಿರ್ದೇಶಿಸುತ್ತಿರುವ ಈ ಪ್ಯಾನ್ ಇಂಡಿಯಾ ಸಿನಿಮಾದ ನಾಯಕರಾಗಿ ಉಪೇಂದ್ರ ಅಭಿನಯಿಸುತ್ತಿದ್ದಾರೆ.

ಈ ಚಿತ್ರದ ಶೀರ್ಷಿಕೆ ಬಿಡುಗಡೆ ಸಮಾರಂಭ ಇತ್ತೀಚೆಗೆ ಅದ್ದೂರಿಯಾಗಿ ನಡೆಯಿತು. ಕಿಚ್ಚ ಸುದೀಪ ಮುಖ್ಯ ಅತಿಥಿಯಾಗಿ ಆಗಮಿಸಿ ಶೀರ್ಷಿಕೆ ಬಿಡುಗಡೆ ಮಾಡಿದರು.

ಶೀರ್ಷಿಕೆ ಬಿಡುಗಡೆ ಮಾಡಿ ಮಾತನಾಡಿದ ಕಿಚ್ಚ ಸುದೀಪ, ನನಗೆ ಈ ಸಮಾರಂಭಕ್ಕೆ ಬಂದ ಮೇಲೆ ಒಂಥರಾ ಅನಿಸುತ್ತಿದೆ. ನಾನು ಏಕೆ ಈ ಸಿ‌‌ನಿಮಾದಲ್ಲಿ ಇಲ್ಲ ಅಂತ? ಏಕೆಂದರೆ, ನಾನು ನಾಯಕನಾಗಲು ಉಪೇಂದ್ರ ಅವರೆ ಕಾರಣ. ನಿರ್ದೇಶಕನಾಗಬೇಕೆಂದಿದ್ದ ನನಗೆ ನಾಯಕನಾಗಲು ಪ್ರೇರೇಪಿಸಿದೇ ಅವರು. ಇನ್ನೂ ನನ್ನ ಮುಂಬೈಗೆ ಕರೆದುಕೊಂಡು ಹೋಗಿ ಅಲ್ಲಿ ನನ್ನ ಸಿನಿಪಯಣ ಆರಂಭಿಸಿದ್ದು ಆರ್ ಜಿ ವಿ ಅವರು. ಇವರಿಬ್ಬರ ಜೋಡಿಯಲ್ಲಿ ಉತ್ತಮ ಚಿತ್ರ ಬರವುದು ಖಂಡಿತ. ನಿರ್ಮಾಪಕ ರಾಜ್ ಯಜಮಾನ್ ಅವರನ್ನು
ಬಹಳ ದಿನಗಳಿಂದ ಬಲ್ಲೆ. ಇಲ್ಲಿಗೆ ಬಂದು ಅವರ ಇತಿಹಾಸ ತಿಳಿದು ಇನ್ನೂ ಸಂತೋಷವಾಯಿತು. R ಎಂದರೆ ಏನು ಎಂಬ ಪ್ರಶ್ನೆಗೆ ಕಿಚ್ಚ ಸುದೀಪ್, R ಎಂದರೆ ರಿಯಲ್ ಸ್ಟಾರ್. R ಎಂದರೆ ರಾಮ್ ಗೋಪಾಲ್ ವರ್ಮ ಅಂತ ಇರಬೇಕು. ಹಿಂದೆ ಮೂರು R ಬಂದಾಗ ಯಾರು ಕೇಳಲಿಲ್ಲ. ಈಗ ಒಂದು R ಬಗ್ಗೆ ಎಷ್ಟು ಕೇಳುತ್ತಿದ್ದಿರಾ? ನೋಡಿ ಎಂದು ಹೇಳಿದರು.

ಉಪೇಂದ್ರ ಅವರು ಈಗಾಗಲೇ ನಿರ್ದೇಶನ ಹಾಗೂ ನಟನೆ ಎರಡರಲ್ಲೂ ಹೆಸರು ಮಾಡಿದ್ದಾರೆ. ಅವರೊಂದಿಗೆ ಕೆಲಸ ಮಾಡಲು ಖುಷಿಯಾಗುತ್ತಿದೆ. ‍R ಎಂದರೆ ಏನು? ಎಂಬುದನ್ನು ಈಗಲೇ ಹೇಳುವುದಿಲ್ಲ. ಟ್ರೇಲರ್ ಬಿಡುಗಡೆ ಸಮಯದಲ್ಲಿ ಹೇಳುತ್ತೇನೆ. ಒಟ್ಟಿನಲ್ಲಿ ನಮ್ಮಿಬ್ಬರಿಂದ ಉತ್ತಮ ಚಿತ್ರ ಬರಲಿದೆ ಎಂದ ರಾಮ ಗೋಪಾಲ್ ವರ್ಮ, ದೇಶಾದ್ಯಂತ ಭರ್ಜರಿ ಯಶಸ್ಸು ಕಾಣುತ್ತಿರುವ “ಕೆ ಜಿ ಎಫ್ 2” ಚಿತ್ರತಂಡಕ್ಕೆ ಶುಭ ಕೋರಿದರು.

ನಾನು ಆರ್ ಜಿ ವಿ ಅವರ “ಶಿವ” ಸಿನಿಮಾ ನೋಡಿ, “ಓಂ” ಚಿತ್ರ‌ ಮಾಡಬೇಕೋ? ಬೇಡವೋ? ಎಂದು ಯೋಚಿಸಿದ್ದೆ. ಅಂತಹ ಒಳ್ಳೊಳ್ಳೆಯ ಚಿತ್ರಗಳನ್ನು ನೀಡಿರುವವರು ಆರ್ ಜಿ ವಿ ಸರ್ ಅವರ ಜೊತೆ ಕೆಲಸ ಮಾಡುತ್ತಿರುವುದು ಸಂತಸ ತಂದಿದೆ.‌ ನೈಜಘಟನೆ ಆಧಾರಿತ ಚಿತ್ರವಿದು.‌


ಅವರು ಹೇಳಿದಂತೆ ಉತ್ತಮ ಚಿತ್ರ ಆಗಿ ಹೊರಹೊಮ್ಮುವ ವಿಶ್ವಾಸವಿದೆ. ಟೈಟಲ್ ರಿಲೀಸ್ ಮಾಡಿಕೊಟ್ಟ ಸುದೀಪ ಅವರಿಗೆ ‌ಧಾನ್ಯವಾದ. ಇನ್ನೂ ನಿರ್ಮಾಪಕ ರಾಜ್ ಅವರ ಬಗ್ಗೆ ಹೇಳಬೇಕಾದರೆ, ಇವರು ನನ್ನ ಜೊತೆ ನಟಿಸಿದ್ದಾರೆ. “ಉಪೇಂದ್ರ” ಚಿತ್ರದಲ್ಲಿ ನಾಯಕಿ ದಾಮಿನಿ‌‌ ಅವರ ಲವರ್ ಪಾತ್ರದಲ್ಲಿ ‌ಕಾಣಿಸಿಕೊಂಡಿದ್ದರು ಎಂದು ಉಪೇಂದ್ರ ನೆನಪಿಸಿಕೊಂಡರು.

ಇಂದು ನನ್ನ ಹುಟ್ಟುಹಬ್ಬ. ಈ ಮೂರು ದಿಗ್ಗಜರು ಸೇರಿ ನನ್ನ‌ ನಿರ್ಮಾಣದ ಚಿತ್ರಕ್ಕೆ ಚಾಲನೆ ನೀಡಿರುವುದಕ್ಕೆ ತುಂಬಾ ಸಂತಸಗೊಂಡಿದ್ದೇನೆ. ಕಿಚ್ಚ ಸುದೀಪ, ಉಪೇಂದ್ರ ಹಾಗೂ ಆರ್ ಜಿ ವಿ ಅವರಿಗೆ ಅನಂತ ವಂದನೆ ಎಂದರು ನಿರ್ಮಾಪಕ ರಾಜ್ ಯಜಮಾನ್.

ನಿರ್ಮಾಪಕ ರಾಜ್ ಯಜಮಾನ್ ಕುಟುಂಬದವರ ಕೊಡುಗೆ ಕನ್ನಡ ಚಿತ್ರರಂಗಕ್ಕೆ ಅಪಾರ. ಇವರ ತಂದೆ ಹಾಗೂ ಅಜ್ಜಿಯವರು ರಾಜಕುಮಾರ್ ಅಭಿನಯದ
“ಭಲೇರಾಜ”, ” ಪ್ರೇಮದ ಕಾಣಿಕೆ”, “ಸಾಕ್ಷಾತ್ಕಾರ” ದಂತಹ ಜನಪ್ರಿಯ ಚಿತ್ರಗಳನ್ನು ನಿರ್ಮಾಣ ಮಾಡಿದವರು.

Categories
ಸಿನಿ ಸುದ್ದಿ

ಹೋಟೆಲ್ ಅಶೋಕದಲ್ಲಿ ಹಾರಾಡಿದ ಗಾಳಿಪಟ! ಎಕ್ಸಾಂ ಸಾಂಗ್ ರಿಲೀಸ್ ಮಾಡಿ ಬೀಗಿದ ಚಿತ್ರತಂಡ…

ವರ್ಷಗಳು ಹೇಗೆ ಕಳೆಯುತ್ತಿದೆಯೋ? ಗೊತ್ತಾಗುತ್ತಿಲ್ಲ. ಯೋಗರಾಜ್ ಭಟ್ ಅವರ ನಿರ್ದೇಶನದಲ್ಲಿ ಬಂದಿದ್ದ “ಗಾಳಿಪಟ” ಬಂದು ಹದಿನಾಲ್ಕು ವರ್ಷಗಳೇ ಕಳೆದಿದೆ. ಈಗ ಅದರ ಭಾಗ 2 ತೆರೆಗೆ ಬರಲು ಸಿದ್ದವಾಗಿದೆ.

ಈ ಚಿತ್ರಕ್ಕಾಗಿ ಯೋಗರಾಜ್ ಭಟ್ ಅವರು ಬರೆದಿರುವ ಪರೀಕ್ಷೆ ಕುರಿತಾದ ಗೀತೆಯೊಂದು ಬಿಡುಗಡೆಯಾಗಿದೆ. “ಗಾಳಿಪಟ 2” ಚಿತ್ರದ ಕಲಾವಿದರು ಹಾಗೂ ತಂತ್ರಜ್ಞರು ತಮ್ಮ ಅನುಭವ ಹಂಚಿಕೊಂಡರು.

“ಗಾಳಿಪಟ 2” ಆರಂಭವಾಗಿದ್ದೆ ಒಂದು ಸೋಜಿಗ. ನನಗೆ ಯೋಗರಾಜ್ ಭಟ್ ಅವರೇನು ಪರಿಚಯವಿರಲಿಲ್ಲ. ನಾನು
ಇನ್ಫೋಸಿಸ್ ಮುಖ್ಯಸ್ಥೆ ಸುಧಾ ಅಮ್ಮನವರೊಂದಿಗೆ ತಿರುಪತಿಯಿಂದ ದರ್ಶನ ಮುಗಿಸಿ ಬರಬೇಕಾದರೆ ಸುಧಾ ಅಮ್ಮ ಅವರಿಗೆ ಯೋಗರಾಜ್ ಸರ್ ಫೋನ್ ಮಾಡಿದ್ದರು.‌‌ ನಂತರ ಸುಧಾ ಅಮ್ಮ ಅವರು ನನಗೆ ಯೋಗರಾಜ್ ಭಟ್ “ಗಾಳಿಪಟ 2” ಚಿತ್ರದ ಕಥೆ ಸಿದ್ದಮಾಡಿಕೊಂಡಿದ್ದಾರೆ. ನೀವು ಸಾಧ್ಯವಾದರೆ ನಿರ್ಮಾಣ ಮಾಡಿ ಎಂದರು. ಅಮ್ಮನ ಮಾತಿಗೆ ಎಂದು ನಾನು ಆಗಲ್ಲ ಎಂದಿಲ್ಲ. ಸರಿ ಅಂದೆ. ನಂತರ “ಗಾಳಿಪಟ 2” ಆರಂಭವಾಯಿತು. ಇನ್ನೂ ಪರೀಕ್ಷೆ ಬಗ್ಗೆ ಹೇಳಬೇಕೆಂದರೆ ನಾನು ಈಗಾಗಲೇ ನಾಲ್ಕು ಪರೀಕ್ಷೆಯಲ್ಲಿ ಫೇಲ್ ಆಗಿದ್ದೀನಿ. ಐದನೇ ಪರೀಕ್ಷೆ ಬರೆದಿದ್ದೇನೆ. ನೀವೆಲ್ಲಾ ಸೇರಿ ಪಾಸ್ ಮಾಡಿಸಿ ಅಂದರು ನಿರ್ಮಾಪಕ ರಮೇಶ್ ರೆಡ್ಡಿ.

ಯೋಗರಾಜ್ ಭಟ್ ಅವರ ಕನಸು ನನಸಾಗಲು ಸುಧಾಮೂರ್ತಿ ಅವರು ಕಾರಣ. ಭಟ್ ಅವರಿಗೆ ಸುಧಾಮೂರ್ತಿ ಗಾಡ್ ಮದರ್ ಅಂದರೆ ತಪ್ಪಾಗಲಾರದು. “ಗಾಳಿಪಟ” ದಲ್ಲೂ ನಟಿಸಿದ್ದೆ. ಈಗ ಇದರಲ್ಲೂ ನಟಿಸಿದ್ದೇನೆ. ಉತ್ತಮ ಚಿತ್ರ ಒಳ್ಳೆಯದಾಗಲಿ ಎಂದರು ಹಿರಿಯ ನಟ ಅನಂತನಾಗ್.

ಹೌದು ಅನಂತ್ ಸರ್ ಹೇಳಿದ ಹಾಗೆ, ಸುಧಾಮೂರ್ತಿ ಅವರು ನನ್ನ ಗಾಡ್ ಮದರ್ . ಅವರಿಂದಲೇ ರಮೇಶ್ ರೆಡ್ಡಿ ಅವರ ಪರಿಚಯವಾಗಿದ್ದು, “ಗಾಳಿಪಟ 2” ಪ್ರಾರಂಭವಾಗಿದ್ದು. ಇನ್ನೂ ಈ ಚಿತ್ರದ ಬಗ್ಗೆ ಹೇಳಬೇಕೆಂದರೆ ಈಗ ಎಲ್ಲಾ ಕಾರ್ಯ ಪೂರ್ಣವಾಗಿ, ಬಿಡುಗಡೆಗೆ ಸಿದ್ದವಾಗಿದೆ. ಈಗ ಪರೀಕ್ಷೆ ಹಾಡನ್ನು ಬಿಡುಗಡೆ ಮಾಡಿದ್ದೀವಿ. ಬಿಡುಗಡೆಯಾದ ಸ್ವಲ್ಪ ಹೊತ್ತಿಗೆ ಬಾರಿ ಮೆಚ್ಚುಗೆ ವ್ಯಕ್ತವಾಗುತ್ತದೆ. ಇನ್ನೂ “ಗಾಳಿಪಟ” ದಲ್ಲಿದ್ದ ಗಣೇಶ್, ದಿಗಂತ್, ಅನಂತ್ ನಾಗ್, ಸುಧಾ ಬೆಳವಾಡಿ, ರಂಗಾಯಣ ರಘು, ಪದ್ಮಜಾರಾವ್ ಭಾಗ 2 ರಲ್ಲೂ ಇದ್ದಾರೆ. ಮಿತ್ರ ಪವನ್ ಕುಮಾರ್ ಇದರಲ್ಲಿ ಅಭಿನಯಿಸಿದ್ದಾರೆ. ಶರ್ಮಿಳಾ ಮಾಂಡ್ರೆ, ವೈಭವಿ ಶಾಂಡಿಲ್ಯ, ನಿಶ್ವಿಕಾ ನಾಯ್ಡು, ಕೇರಳ ಮೂಲದ ಸಂಯುಕ್ತ, ರಂಗಾಯ ರಘು ಸುಧಾ ಬೆಳವಾಡಿ, ಪದ್ಮಜಾರಾವ್,
ಬುಲೆಟ್ ಪ್ರಕಾಶ್ ಮುಂತಾದವರು ತಾರಾಬಳಗದಲ್ಲಿದ್ದಾರೆ. ಅರ್ಜುನ್ ಜನ್ಯ ಸಂಗೀತ ನಮ್ಮ ಚಿತ್ರದ ಅಂದವನ್ನು ಹೆಚ್ಚಿಸಿದೆ. ಸಂತೋಷ್ ರೈ ಪಾತಾಜೆ ಛಾಯಾಗ್ರಹಣ ಸೊಗಸಾಗಿದೆ. ಇಡೀ ಕಲಾವಿದರ ಹಾಗೂ ತಂತ್ರಜ್ಞರ ಸಹಕಾರದಿಂದ “ಗಾಳಿಪಟ ೨” ಚೆನ್ನಾಗಿ ಮೂಡಿಬಂದಿದೆ. ಇನ್ನು ಮುಂದೆ ನಿಮ್ಮ ಹಾಗೂ ಪ್ರೇಕ್ಷಕರ ಪ್ರೋತ್ಸಾಹ ಮುಖ್ಯ ಎಂದರು ಯೋಗರಾಜ್ ಭಟ್.

“ಗಾಳಿಪಟ” ಎಂದರೆ ನನಗೆ ಎಮೋಷನ್. ಯೋಗರಾಜ್ ಸರ್ ಕಥೆ ಹೇಳಿದಾಗ, ಸಾಕಷ್ಟು ಕುತೂಹಲ ಹುಟ್ಟಿಸಿತು.‌ ಅನಂತ್ ಸರ್ ಜೊತೆ ನಟಿಸುವುದೇ ಒಂದು ಖುಷಿ. ಕುದುರೆಮುಖದ ಕಾಲೇಜ್ ಸೆಟ್ ನಲ್ಲಿ ಸುಮಾರು ೫೦೦ಕ್ಕೂ ಹೆಚ್ಚು ಜನರೊಂದಿಗೆ ನಟಿಸಿದ್ದು, ಈಗಲೂ ಮರೆಯುವ ಹಾಗಿಲ್ಲ.‌ ರಂಗಾಯಣ ರಘು ಸರ್ ಅದರಲ್ಲೂ, ಇದರಲ್ಲೂ ನನಗೆ ಅಪ್ಪ.‌ ದಿಗಂತ್, ಪವನ್, ಶರ್ಮಿಳಾ, ವೈಭವಿ, ನಿಶ್ವಿಕಾ ಎಲ್ಲರ ಅಭಿನಯವೂ ಚೆಂದ. ‌ನಮ್ಮ “ಗಾಳಿಪಟ” ಕ್ಕೆ ನಿಮ್ಮ ಬೆಂಬಲವಿರಲಿ ಎಂದರು ಗಣೇಶ್.

“ಗಾಳಿಪಟ” ನನಗೆ ಮರೆಯಲಾಗದ್ದ ಚಿತ್ರ. ಅಲ್ಲಿಂದಲೇ ನನ್ನ ವೃತ್ತಿ ಜೀವನ ಶುರುವಾಗಿದು. ಯೋಗರಾಜ್ ಸರ್ ನನಗೆ ಅಪ್ಪ, ಚಿಕ್ಕಪ್ಪ, ಮಿತ್ರ ಇತ್ಯಾದಿ.
ಅವರ ಸಹಕಾರ ಅಪಾರ. “ಗಾಳಿಪಟ ೨” ಕೂಡ ಚೆನ್ನಾಗಿದೆ ಎಂದರು ದಿಗಂತ್.

ಪವನ್ ಕುಮಾರ್ ಸಹ “ಗಾಳಿಪಟ ೨ ” ಬಗ್ಗೆ ಅನುಭವ ಹಂಚಿಕೊಂಡರು. ಶರ್ಮಿಳಾ ಮಾಂಡ್ರೆ, ವೈಭವಿ ಶಾಂಡಿಲ್ಯ, ನಿಶ್ವಿಕಾ ನಾಯ್ಡು, ರಂಗಾಯಣ ರಘು, ಪದ್ಮಜಾರಾವ್, ಛಾಯಾಗ್ರಹಕ ಸಂತೋಷ್ ರೈ ಪಾತಾಜೆ ಹಾಗೂ ಸಾಹಿತಿ ಜಯಂತ ಕಾಯ್ಕಿಣಿ ಚಿತ್ರದ ಕುರಿತು ಮಾತನಾಡಿದರು.

Categories
ಸಿನಿ ಸುದ್ದಿ

ಮೇ 13ಕ್ಕೆ ಮನೋರಂಜನೆ! ಕ್ರೇಜಿ ಪುತ್ರನ ಸಿನಿಮಾ ಪ್ರಾರಂಭ…

ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ಮನುರಂಜನ್ ರವಿಚಂದ್ರನ್ ನಾಯಕರಾಗಿ ನಟಿಸಿರುವ “ಪ್ರಾರಂಭ” ಚಿತ್ರ ಮೇ 13 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಕೀರ್ತಿ ಕಲ್ಕೇರಿ ಈ ಚಿತ್ರದ ನಾಯಕಿ.

ಈ ಚಿತ್ರದ ಟ್ರೇಲರ್ ಹಾಗೂ ಹಾಡುಗಳು ಈಗಾಗಲೇ ಪ್ರೇಕ್ಷಕರ ಮನ ಗೆದ್ದಿದೆ. ಮನುರಂಜನ್ ಅವರ ಹೊಸ ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಚಿತ್ರ ಬಿಡುಗಡೆಗೆ ಕಾತುರದಿಂದ ಕಾಯುತ್ತಿದ್ದಾರೆ.

ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರವನ್ನು ಮನು ಕಲ್ಯಾಡಿ ನಿರ್ದೇಶಿಸಿದ್ದಾರೆ. ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಯನ್ನು ಮನು ಕಲ್ಯಾಡಿ ಅವರೆ ಬರೆದಿದ್ದಾರೆ.

ಜೇನುಶ್ರೀ ತನುಷ ಪ್ರೊಡಕ್ಷನ್ಸ್ ಲಾಂಛನದಲ್ಲಿ ಜಗದೀಶ್ ಕಲ್ಯಾಡಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ರವಿ ವಡ್ಡೇರಹಳ್ಳಿ ಈ ಚಿತ್ರದ ಸಹ ನಿರ್ಮಾಪಕು. ಪ್ರಜ್ವಲ್ ಪೈ ಸಂಗೀತ ನಿರ್ದೇಶನ, ಸುರೇಶ್ ಬಾಬು ಛಾಯಾಗ್ರಹಣ, ವಿಜಯ್ ಸಂಕಲನ ಹಾಗೂ ಥ್ರಿಲ್ಲರ್ ‌ಮಂಜು, ವಿಕ್ರಮ್ ಮೋರ್ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.

error: Content is protected !!