ಮೂಕಹಕ್ಕಿ ಸಿನಿಮಾ ಖ್ಯಾತಿಯ ನಿರ್ದೇಶಕ ನೀನಾಸಂ ಮಂಜು ನಿರ್ದೇಶನದಲ್ಲಿ ಮೂಡಿ ಬಂದಿದ್ದ ಕನ್ನೇರಿ ಸಿನಿಮಾ ಬೆಳ್ಳಿತೆರೆಯಲ್ಲಿ ಯಶಸ್ವಿಯಾಗಿ ಸಾಗುತ್ತಿದೆ. ಮಾರ್ಚ್ 4ರಂದು ರಾಜ್ಯಾದ್ಯಂತ ತೆರೆಕಂಡ ಕನ್ನೇರಿ ಸಿನಿಮಾಗೆ ಚಿತ್ರರಸಿಕರು ಭಾರೀ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಅದರಲ್ಲೂ ಉತ್ತರ ಕರ್ನಾಟಕದ ರಾಯಭಾಗದಲ್ಲಂತೂ ಸಿನಿಮಾಗೆ ಭಾರೀ ಪ್ರಶಂಸೆ ವ್ಯಕ್ತವಾಗುತ್ತಿದೆ.
ಐವತ್ತು ದಿನ ಪೂರೈಸಿದ ಕನ್ನೇರಿ
ನೈಜ ಘಟನೆಯಾಧಾರಿತ ಮಹಿಳಾ ಪ್ರಧಾನ ಕನ್ನೇರಿ ಸಿನಿಮಾದಲ್ಲಿ ಕೊಡಗಿನಲ್ಲಿ ಭಾರಿ ಸದ್ದು ಮಾಡಿದ್ದ ದಿಡ್ಡಳ್ಳಿ ಸಂತ್ರಸ್ತರ ಹೋರಾಟ, ಪ್ರಕೃತಿ ಮಡಿಲಲ್ಲಿ ಬದುಕು ಕಟ್ಟಿಕೊಂಡಿದ್ದ ಬುಡಕಟ್ಟು ಜನಾಂಗ ಒಕ್ಕಲೆಬ್ಬಿಸಿದ ಪರಿ, ಹೆಣ್ಣು ಮಕ್ಕಳು ದೌರ್ಜನ್ಯಕ್ಕೆ ಒಳಗಾಗುವ ಕಥೆಯನ್ನು ನೀನಾಸಂ ಮಂಜು ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿದ್ದಾರೆ.
ಈ ಕಥೆ ಚಿತ್ರಪ್ರೇಮಿಗಳಿಗೆ ಸಖತ್ ಇಷ್ಟವಾಗಿದೆ. ಅದರ ಪ್ರತಿಫಲ, ಇವತ್ತು ಪ್ಯಾನ್ ಇಂಡಿಯಾ ಸಿನಿಮಾ ಹಾಗೂ ಕಮರ್ಷಿಯಲ್ ಸಿನಿಮಾಗಳ ಅಬ್ಬರ ನಡುವೆಯೂ ಕನ್ನೇರಿ ಐವತ್ತು ದಿನ ಪೂರೈಸಿರುವುದು ವಿಶೇಷ.
ಅರ್ಚನಾ ಮಧುಸೂಧನ್, ಅನಿತಾ ಭಟ್, ಅರುಣ್ ಸಾಗರ್, ಎಂ.ಕೆ. ಮಠ, ಕರಿಸುಬ್ಬು ಒಳಗೊಂಡಂತೆ ಹಲವು ಪ್ರತಿಭಾನ್ವಿತ ಕಲಾವಿದರು ನಟಿಸಿರುವ ಕನ್ನೇರಿ ಸಿನಿಮಾವನ್ನು ಬುಡ್ಡಿ ದೀಪ ಸಿನಿಮಾ ಹೌಸ್ ಬ್ಯಾನರ್ ನಡಿ ಪಿ.ಪಿ ಹೆಬ್ಬಾರ್ ನಿರ್ಮಾಣ ಮಾಡಿದ್ದಾರೆ. ಗಣೇಶ್ ಹೆಗ್ಡೆ ಕ್ಯಾಮರಾ ವರ್ಕ್, ಮಣಿಕಾಂತ್ ಕದ್ರಿ ಸಂಗೀತ ನಿರ್ದೇಶನ, ಸುಜಿತ್ ನಾಯಕ್ ಸಂಕಲನ ಸಿನಿಮಾಕ್ಕಿದೆ.