“ಕೆ.ಜಿ.ಎಫ್ 2” ಚಿತ್ರದ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಸಂಸ್ಥೆ ಹೊಂಬಾಳೆ ಫಿಲಂಸ್. ವಿಜಯ್ ಕಿರಗಂದೂರ್ ಈ ಸಂಸ್ಥೆಯ ನಿರ್ಮಾಪಕರು.
ಈಗ ಈ ಸಂಸ್ಥೆಯಿಂದ ಹೊಸ ಚಿತ್ರಗಳ ನಿರ್ಮಾಣದ ಸರಣಿ ಆರಂಭವಾಗಿದೆ. ಮೊನ್ನೆಯಷ್ಟೇ ಖ್ಯಾತ ನಿರ್ದೇಶಕಿ ಸುಧಾ ಕೊಂಗರ ಅವರ ನಿರ್ದೇಶನದಲ್ಲಿ ನೂತನ ಚಿತ್ರ ಆರಂಭಿಸುವ ಸುದ್ದಿ ಹೊರ ಬಂದಿತ್ತು. ನಿನ್ನೆ ಸಾಮಾಜಿಕ ಜಾಲತಾಣಗಳಲ್ಲಿ ಇಂದು ಮತ್ತೊಂದು ಹೊಸ ಚಿತ್ರದ ಬಗ್ಗೆ ಮಾಹಿತಿ ನೀಡುವುದಾಗಿ ಹೊಂಬಾಳೆ ಫಿಲಂಸ್ ಸಂಸ್ಥೆ ಹೇಳಿಕೊಂಡಿತ್ತು. ಈಗ ಆ ಚಿತ್ರದ ಬಗ್ಗೆ ಮಾಹಿತಿ ಬಂದಿದೆ.
ರಾಜವಂಶದ ಕುಡಿ ಯುವ ರಾಜಕುಮಾರ್ ನಟನೆಯ ನೂತನ ಸಿನಿಮಾ ಆರಂಭಿಸುವುದಾಗಿ ಸಂಸ್ಥೆ ಹೇಳಿದೆ. ಖ್ಯಾತ ನಿರ್ದೇಶಕ ಸಂತೋಷ್ ಆನಂದರಾಮ್ ಈ ಚಿತ್ರ ನಿರ್ದೇಶಕರು. ಸದ್ಯಕ್ಕೆ ಇಷ್ಟು ಮಾಹಿತಿ ನೀಡಿರುವ ಹೊಂಬಾಳೆ ಫಿಲಂಸ್, ನಂತರದ ದಿನಗಳಲ್ಲಿ ಹೆಚ್ಚಿನ ಮಾಹಿತಿ ನೀಡುವುದಾಗಿ ಹೇಳಿದೆ.
ಮೊದಲಿನಿಂದಲೂ ರಾಜಕುಮಾರ್ ಅವರ ಕುಟುಂಬದ ಮೇಲೆ ನಿರ್ಮಾಪಕ ವಿಜಯ್ ಕಿರಗಂದೂರ್ ಅವರಿಗೆ ಅಪಾರ ಪ್ರೀತಿ. ಪುನೀತ್ ರಾಜಕುಮಾರ್ ಅವರ ಜೊತೆ ಸಂಸ್ಥೆಯ ಮೊದಲ ಚಿತ್ರವಾಗಿ “ನಿನ್ನಿಂದಲೇ” ಚಿತ್ರ ನಿರ್ಮಿಸಿದ್ದರು. ನಂತರ ಸಂತೋಷ್ ಆನಂದರಾಮ್ ನಿರ್ದೇಶನದಲ್ಲಿ ಪುನೀತ್ ಅವರು ಅಭಿನಯಿಸಿದ್ದ “ರಾಜಕುಮಾರ” ಚಿತ್ರ ಸಹ ಇದೇ ಸಂಸ್ಥೆಯಿಂದ ನಿರ್ಮಾಣವಾಗಿತ್ತು. ಈ ಮೂವರ ಸಂಗಮದಲ್ಲಿ ಬಂದಿದ್ದ “ಯುವರತ್ನ” ಚಿತ್ರ ಸಹ ಎಲ್ಲರ ಮನ ಗೆದ್ದಿತ್ತು.
ಸಂತೋಷ್ ಆನಂದರಾಮ್ ಹಾಗೂ ಪುನೀತ್ ರಾಜ್‍ಕುಮಾರ್ ಅವರ ಕಾಂಬಿನೇಶನಲ್ಲಿ ಮತ್ತೊಂದು ಹೊಸ ಚಿತ್ರ ಆರಂಭಕ್ಕೆ ಸಿದ್ದತೆ ನಡೆದಿತ್ತು. ಆದರೆ ಆ ಸಮಯದಲ್ಲಿ ಯಾರು ನಿರೀಕ್ಷಿಸದ ಘಟನೆ ನಡೆದು ಹೋಯಿತು. ಈಗ ಅದೇ ಕುಟುಂಬದ ಯುವ ರಾಜಕುಮಾರ್ ಅವರು ನಾಯಕರಾಗಿ ನಟಿಸುತ್ತಿರುವ ಆಕ್ಷನ್ ಓರಿಯಂಟೆಡ್ ಚಿತ್ರವನ್ನು ವಿಜಯ್ ಕಿರಗಂದೂರ್ ನಿರ್ಮಿಸುತ್ತಿದ್ದಾರೆ. ಸಂತೋಷ್ ಆನಂದರಾಮ್ ಅವರೆ ನಿರ್ದೇಶಿಸುತ್ತಿದ್ದಾರೆ. ಸದ್ಯದಲ್ಲೇ ಈ ನೂತನ ಚಿತ್ರಕ್ಕೆ ಚಾಲನೆ ದೊರಕಲಿದೆ.
“ನಿನ್ನಿಂದಲೇ” ಚಿತ್ರದಿಂದ ಆರಂಭಿಸಿ, ಯಶ್ ಅಭಿನಯದ “ಕೆ.ಜಿ.ಎಫ್”, “ಮಾಸ್ಟರ್ ಪೀಸ್”, ” ರಾಜಕುಮಾರ” ಯುವರತ್ನ”, “ಕೆ.ಜಿ.ಎಫ್ ೨” ಹೀಗೆ ಒಂದರ ಹಿಂದೆ ಒಂದು ಅದ್ದೂರಿ ಚಿತ್ರ ನಿರ್ಮಾಣ ಮಾಡಿರುವ ವಿಜಯ್ ಕಿರಗಂದೂರ್ ಅವರು ಸದ್ಯ ಪ್ರಭಾಸ್ ಹಾಗೂ ಪ್ರಶಾಂತ್ ನೀಲ್ ಜೋಡಿಯ “ಸಲಾರ್”, ಜಗ್ಗೇಶ್ ಅವರ ” ರಾಘವೇಂದ್ರ ಸ್ಟೋರ್ಸ್” , ರಿಷಭ್ ಶೆಟ್ಟಿ ನಿರ್ದೇಶನದ “ಕಾಂತಾರ” ಚಿತ್ರಗಳನ್ನು ನಿರ್ಮಿಸುತ್ತಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಏಕಕಾಲಕ್ಕೆ ಇಂತಹ ಸದಭಿರುಚಿಯ ಜೊತೆಗೆ, ಅದ್ದೂರಿ ಚಿತ್ರಗಳನ್ನು ನಿರ್ಮಾಣ ಮಾಡುತ್ತಿರುವ ವಿಜಯ್ ಕಿರಗಂದೂರ್ ಅವರ ಸಿನಿಮಾ ಪ್ರೀತಿಗೆ ವಿಶ್ವದಾದ್ಯಂತ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಮುಂದೆ ಈ ಸಂಸ್ಥೆಯಿಂದ ಯಾವ ಚಿತ್ರ ಬರಬಹುದೆಂಬ ನಿರೀಕ್ಷೆ ಕೂಡ ಹೆಚ್ಚಿಸುತ್ತಿದೆ.
ಕನ್ನಡ ಚಿತ್ರರಂಗದ ಮಾರುಕಟ್ಟೆಯನ್ನು ವಿಶ್ವದಾದ್ಯಂತ ವಿಸ್ತರಿಸಿದ ನಿರ್ಮಾಪಕ ವಿಜಯ್ ಕಿರಗಂದೂರ್ ನಿಜಕ್ಕೂ ಅಭಿನಂದನಾರ್ಹರು.