Categories
ಸಿನಿ ಸುದ್ದಿ

ರಚನಾ ರೈ ಕೈ ಹಿಡಿದ ಧನ್ವೀರ್! ವಾಮನ ಸಿನಿಮಾಗೆ ಕರಾವಳಿ ಬೆಡಗಿ ನಾಯಕಿ…

ಧನ್ವೀರ್ ಗೌಡ ನಟನೆಯ ವಾಮನ ಸಿನಿಮಾದ ಶೂಟಿಂಗ್ ಭರದಿಂದ ಸಾಗುತ್ತಿದ್ದು, ಇದೀಗ ವಾಮನ ಅಂಗಳದಿಂದ ಹೊಸ ಅಪ್ ಡೇಟ್ ಸಿಕ್ಕಿದೆ. ಧನ್ವೀರ್ ಗೆ ನಾಯಕಿ ಯಾರ್ ಇರ್ತಾರೆ ಅನ್ನೋ ಕುತೂಹಲದ ಪ್ರಶ್ನೆಗೀಗ ಚಿತ್ರತಂಡ ಉತ್ತರ ನೀಡಿದೆ.

ಶಂಕರ್ ರಾಮನ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ವಾಮನ ಸಿನಿಮಾಗೆ ತುಳುನಾಡ ಕುವರಿ ರಚನಾ ರೈ ಎಂಟ್ರಿ ಕೊಟ್ಟಿದ್ದಾರೆ. ಈ ಹಿಂದೆ ತುಳು ಸಿನಿಮಾವೊಂದರಲ್ಲಿ ನಟಿಸಿದ್ದ ರಚನಾಗೆ ಇದು ಮೊದಲ ಕನ್ನಡ ಸಿನಿಮಾ.

ತಮ್ಮ ಪಾತ್ರದ ಬಗ್ಗೆ ಹೆಚ್ಚೇನೂ ಗುಟ್ಟು ಬಿಟ್ಟು ಕೊಡದ ರಚನಾ, ಬಬ್ಲಿ ಪಾತ್ರದ ಮೂಲಕ ಅಭಿಮಾನಿಗಳನ್ನು ರಂಜಿಸುವುದಾಗಿ ಹೇಳಿಕೊಂಡಿದ್ದಾರೆ. ಬ್ಯಾಡ್ಮಿಂಟನ್ ಫ್ಲೈಯರ್ ಆಗಿರುವ ಈ ತುಳುನಾಡ ಚೆಲುವೆ, ಮಾಡೆಲ್, ಡ್ಯಾನ್ಸರ್ ಹಾಗೇ ಬರಹಗಾರತಿ ಕೂಡ.

ಸದ್ಯ ವಾಮನ ಸಿನಿಮಾದಲ್ಲಿ ಧನ್ವೀರ್ ಗೆ ನಾಯಕಿಯಾಗಿ ನಟಿಸ್ತಿರುವ ರಚನಾ ರೈ, ಈಗಾಗಲೇ ಎರಡನೇ ಹಂತದ ಶೂಟಿಂಗ್ ಕಂಪ್ಲೀಟ್ ಮಾಡಿದ್ದಾರೆ.


ಈಕ್ವಿನಾಕ್ಸ್ ಗ್ಲೋಬಲ್ ಎಂಟರ್‌ಟೈನ್‌ಮೆಂಟ್‌ ನಡಿ ಮೂಡಿ ಬರುತ್ತಿರುವ ಮಾಸ್​ ಆಕ್ಷನ್ ಎಂಟರ್​ಟೇನರ್ ವಾಮನ ಸಿನಿಮಾಗೆ ಚೇತನ್ ಕುಮಾರ್ ಬಂಡವಾಳ ಹೂಡಿದ್ದು, ಕನ್ನಡ ಮತ್ತು ತೆಲುಗು ಚಿತ್ರಗಳಿಗೆ ಸಂಭಾಷಣಾಗಾರನಾಗಿ ಕಾರ್ಯನಿರ್ವಹಿಸಿದ್ದ ಶಂಕರ್ ರಾಮನ್ ಈಗ ನಿರ್ದೇಶಕರಾಗಿ ಮೊದಲ ಹೆಜ್ಜೆ ಇಟ್ಟಿದ್ದಾರೆ.

Categories
ಸಿನಿ ಸುದ್ದಿ

ಇದು ಅವರಿಬ್ಬರ ಅಂತರ್ ಕಲಹ! ಹೊಸಬರ ಕಲಹದಲ್ಲೇನಿದೆ ಗೊತ್ತಾ?

ತಮ್ಮ ಪ್ರತಿಭಾ ಪ್ರದರ್ಶನಕ್ಕೆ ಕಿರುಚಿತ್ರ ನಿರ್ದೇಶನ ಉತ್ತಮ ವೇದಿಕೆ. ಬೆಳ್ಳಿತೆರೆ ಮೇಲೆ ದೊಡ್ಡ ಚಿತ್ರಗಳನ್ನು ನಿರ್ದೇಶಿಸುವ ಆಸೆ ಹೊತ್ತ ಉತ್ಸಾಹಿ ಯುವಕರು, ತಮ್ಮ ಮೊದಲ ಪ್ರಯತ್ನವಾಗಿ ಕಿರುಚಿತ್ರ ನಿರ್ದೇಶನ ಮಾಡುತ್ತಿದ್ದಾರೆ.

ಮೂಲತಃ ರಂಗಭೂಮಿ ಕಲಾವಿದ, ಅಭಿನಯ ತರಂಗ ಹಾಗೂ ವಿಜಯನಗರ ಬಿಂಬದಲ್ಲಿ ನಾಟಕಗಳಲ್ಲಿ ಅಭಿನಯ‌. ಆನಂತರ ಆಲ್ ಓಕೆ ಸೇರಿದಂತೆ ಕನ್ನಡದ ಸುಪ್ರಸಿದ್ಧ ರ್ಯಾಪರ್ಸ್ಲ್ಬ ಆಲ್ಬಂ ಸಾಂಗ್ ಗಳಿಗೆ ಛಾಯಾಗ್ರಹಣ ಹಾಗೂ ಸಂಕಲನ ಮಾಡಿರುವ ಆಕಾಶ್ ಜೋಶಿ ಈಗ “ಅಂತರ್ ಕಲಹ” ಎಂಬ ಕಿರುಚಿತ್ರ ನಿರ್ದೇಶನ ಮಾಡಿದ್ದಾರೆ.

ಇದೊಂದು ಸೈಕಾಲಿಜಿಕಲ್ ಥ್ರಿಲ್ಲರ್. ಪ್ರತಿಯೊಬ್ಬ ಮನುಷ್ಯನ ಒಳಗೂ “ಅಂತರ್ ಕಲಹ” ಇರುತ್ತದೆ. ಅದನ್ನು ಹತೋಟಿಯಲ್ಲಿಟ್ಟುಕೊಳ್ಳಬೇಕು. ಇಲ್ಲವಾದಲ್ಲಿ ಏನಾಗುತ್ತದೆ ಎಂಬುದನ್ನು ಈ ಕಿರುಚಿತ್ರದ ಮೂಲಕ ಹೇಳ ಹೊರಟಿದ್ದೇನೆ. ನಮ್ಮ ತಂಡಕ್ಕೆ ಸಿನಿಮಾ ಮಾಡುವ ಆಸೆಯಿದೆ. ಅದಕ್ಕೆ ಇದು ಮೊದಲ ಹೆಜ್ಜೆ. ನಾನೇ ಕಥೆ ಬರೆದು, ಛಾಯಾಗ್ರಹಣ ಹಾಗೂ ಸಂಕಲನದೊಂದಿಗೆ ನಿರ್ದೇಶನ ಮಾಡಿದ್ದೇನೆ. ಸುನಿಲ್ ಬಿ.ಟಿ ಹಾಗೂ ಪ್ರಿಯಾಂಕ ಜೋಶಿ ನಿರ್ಮಾಣ ಮಾಡಿದ್ದಾರೆ. ಸುನಿಲ್ ಬಿ.ಟಿ, ಅರುಣ್ ಸಾಗರ್, ರಾಣಾ, ಅನ್ನಪೂರ್ಣ, ಆರ್ತಿ ಪಡುಬಿದ್ರಿ ಅಭಿನಯಿಸಿದ್ದಾರೆ. ಆದಷ್ಟು ಬೇಗ ಜನಪ್ರಿಯ ಓಟಿಟಿಯಲ್ಲಿ ಈ ಕಿರು ಚಿತ್ರ ಬಿಡುಗಡೆಯಾಗಲಿದೆ ಎಂದರು ಆಕಾಶ್ ಜೋಶಿ.

ನನಗೆ ನನ್ನ ಗುರುಗಳಾದ ಬಿ.ವಿ.ಕಾರಂತರು ಹೇಳುತ್ತಿದ್ದರು. ಹೊಸಬರಿಗೆ ನಿನ್ನ ಕೈಲಾದ ಸಹಾಯ ಮಾಡು ಎಂದು. ಅದನ್ನು ನಾನು ಪಾಲಿಸಿಕೊಂಡು ಬಂದಿದ್ದೇನೆ. ಈ ತಂಡದವರು ಬಂದು ಈ ರೀತಿಯ ಪಾತ್ರ ಇದೆ ನೀವು ಬಂದು ಮಾಡಿ ಎಂದಾಗ ಆಯ್ತು ಎಂದೆ. ಈ ಉತ್ಸಾಹಿ ಯುವ ತಂಡಕ್ಕೆ ಶುಭವಾಗಲಿ ಎಂದರು ಅರುಣ್ ಸಾಗರ್.

ಹಿರಿಯ ನಟ ದೊಡ್ಡಣ್ಣ ಸಹ ಕಿರುಚಿತ್ರದ ಬಗ್ಗೆ ಮೆಚ್ಚುಗೆ ಸೂಚಿಸಿದರು. ಆಲ್ ಓಕೆ, ನಿರಂಜನ್ ದೇಶಪಾಂಡೆ, ರಘು ಗೌಡ, ಶಮಂತ್ (ಬ್ರೋ ಗೌಡ), ರೋಹಿತ್ ಭಾನುಪ್ರಕಾಶ್, ಸಾಗರ್ ಪುರಾಣಿಕ್ ಹಾಗೂ ಸಂಜಯ್ ಶರ್ಮ ಮುಖ್ಯ ಅತಿಥಿಗಳಾಗಿ ಆಗಮಿಸಿ, ಆಕಾಶ್ ಜೋಶಿ ತಂಡಕ್ಕೆ ಶುಭ ಕೋರಿದರು.

Categories
ಸಿನಿ ಸುದ್ದಿ

ಮೇ 6ಕ್ಕೆ ಜಿಗಿಯಲಿದೆ ದ್ವಿಮುಖ! ಇಲ್ಲಿ ಸ್ಟೋರಿಯೇ ಹೈಲೈಟ್…

ಎರಡು ಮುಖಗಳನ್ನು ಹೊಂದಿರುವ ಮನುಷ್ಯರ ಪಾಪಗಳಿಂದ ಹುಟ್ಟಿದ ಕಥೆ “ದ್ವಿಮುಖ”. ಸಸ್ಪೆನ್ಸ್ ಥ್ರಿಲ್ಲರ್ ಕಥೆ ಆಧಾರಿತ ಚಿತ್ರವಿದು ಎಂಬುದು ಚಿತ್ರತಂಡದ ಮಾತು. ಮನುಷ್ಯನ ಮನಸ್ಸಿನಲ್ಲಿರುವ “ದ್ವಿಮುಖ”ವನ್ನು ಅನಾವರಣಗೊಳಿಸಲು ಈ ಚಿತ್ರ ಇದೇ ಮೇ 6 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಹಲವಾರು ಸಿನಿಮಾಗಳಲ್ಲಿ ಸಹ ನಿರ್ದೇಶಕನಾಗಿ ಕೆಲಸ ನಿರ್ವಹಿಸಿರುವ ಮಧು ಶ್ರೀಕಾರ್ ಅವರು “ದ್ವಿಮುಖ” ಚಿತ್ರದ ನಿರ್ದೇಶಕರು.

ನಾಯಕ ನಟನಾಗಿ ಮೊದಲ ಸಿನಿಮಾದಲ್ಲಿ ನಟಿಸಿರುವ ಪ್ರವೀಣ್ ಅಥರ್ವ, ರಂಗಭೂಮಿ ಹಿನ್ನೆಲೆಯಿಂದ ಬಂದವರು. ಕಥೆ ಮತ್ತು ಚಿತ್ರ ಕಥೆಯನ್ನು ಕೂಡ ಇವರೇ ಬರೆದಿದ್ದಾರೆ. ಪ್ರತಿಯೊಬ್ಬ ಮನುಷ್ಯನಲ್ಲೂ ಎರಡು ಮುಖಗಳು ಇರುತ್ತವೆ, ಸಂದರ್ಭಕ್ಕೆ ತಕ್ಕಂತೆ ಅವುಗಳನ್ನು ಹೇಗೆ ಬಳಸುತ್ತಾರೆ ಎಂಬುದು ಕಥೆ ಹುಟ್ಟಿಕೊಳ್ಳಲು ಸ್ಪೂರ್ತಿ ಎನ್ನುತ್ತಾರೆ ನಟ – ಕಥೆಗಾರ ಪ್ರವೀಣ್ ಅಥರ್ವ.

ಪರ್ಪಲ್ ರಾಕ್ ಸ್ಟುಡಿಯೋ ಮೂಲಕ ಚಿತ್ರ ಬಿಡುಗಡೆ ಮಾಡುತ್ತಿರುವ ಗಣೇಶ್ ಪಾಪಣ್ಣ ಅವರು ಚಿತ್ರದ ಬಗ್ಗೆ ಹೇಳಿಕೊಂಡರು.

ನಾಯಕಿ ಕವಿತಾ ಗೌಡ ತಮ್ಮ ಪಾತ್ರದ ಬಗ್ಗೆ ವಿವರಣೆ ನೀಡಿ, ಚಿತ್ರ ನಿರ್ಮಾಣದ ಸಮಯದಲ್ಲಿ ಚಿತ್ರತಂಡ ಪಟ್ಟ ಶ್ರಮ ವಿವರಿಸಿದರು.

ಮತ್ತೊಬ್ಬ ನಾಯಕ ವಿಜಯ್ ಚಂದ್ರ, ಛಾಯಾಗ್ರಹಕ ಕಿಟ್ಟಿ ಕೌಶಿಕ್, ಸಹ ನಿರ್ದೇಶಕ ಮತ್ತು ಸಂಕಲನಕಾರ ಯುಧಿ ಶಂಕರ್ ಹಾಗೂ ಮಾಸ್ಟರ್ ಚಿರಂತ್ ಚಿತ್ರದ ಅನುಭವ ಹಂಚಿಕೊಂಡರು.

ರಂಗಾಯಣ ರಘು, ವಿಜಯ್ ಚೆಂಡೂರ್, ಕಾಮಿಡಿ ಕಿಲಾಡಿಗಳು ಖ್ಯಾತಿಯ ಸಂತು, ನಯನ, ಪ್ರವೀಣ್
ಡಿ ರಾವ್, ಪದ್ಮಜಾರಾವ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ಬಕ್ಕೇಶ್ ಮತ್ತು ಕಾರ್ತಿಕ್ ಸಂಗೀತ ನಿರ್ದೇಶನ ಮತ್ತು ದೇವಿಪ್ರಕಾಶ್ ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿದೆ.

Categories
ಸಿನಿ ಸುದ್ದಿ

ಪ್ರೀತಿವಾಲನ ಶೋಕಿ ಜೀವನ…

ಚಿತ್ರ ವಿಮರ್ಶೆ

ನಿರ್ದೇಶಕ: ಜಾಕಿ

ನಿರ್ಮಾಪಕ : ಟಿ.ಆರ್.ಚಂದ್ರಶೇಖರ

ತಾರಾಗಣ: ಅಜೇಯ್ ರಾವ್, ಸಂಜನಾ ಆನಂದ್, ಅರುಣ ಬಾಲರಾಜ್, ಶರತ್ ಲೋಹಿತಾಶ್ವ, ಗಿರಿ, ಪ್ರಮೋದ್ ಶೆಟ್ಟಿ ಇತರರು.

ಅವನಿಗೆ ಲವ್ ಮಾಡಿದ ಹುಡುಗಿಯರ ಲೆಕ್ಕ ಸಿಕ್ಕಿಲ್ಲ. ಆದರೂ ಅವನನ್ನ ಒಬ್ಭ ಹುಡುಗಿಯೂ ಲವ್ ಮಾಡಲ್ಲ! ಊರಲೆಲ್ಲ ಓಡಾಡೋ ಹುಡುಗಿಯರ ಹಿಂದಿಂದೆ ಅಲೆದಾಡೋ ‘ಶೋಕಿ’ ಹುಡುಗನಿಗೆ ಒಬ್ಬ ಹುಡುಗಿ ಕಣ್ಣಿಗೆ ಬೀಳ್ತಾಳೆ. ಅವಳೇ ನನ್ ಲೈಫು ಅಂತ ಖುಷಿ ಪಡುವ ಅವನ ಲೈಫಲ್ಲಿ ಒಂದಷ್ಟು ಘಟನಾವಳಿಗಳು ನಡೆದು ಹೋಗುತ್ತವೆ. ಆ ಘಟನೆಗಳೆಲ್ಲ ಏನು ಅನ್ನೋದೇ ಶೋಕಿವಾಲನ ಹೈಲೈಟ್.

ಇದೊಂದು ಹಳ್ಳಿ ಕಥೆ. ಅದರಲ್ಲೂ ಹಳ್ಳಿ ಹೈದರಿಗೆ ಖುಷಿಪಡಿಸೋ ಸಿನಿಮಾ. ಸ್ವಲ್ಪ ಕ್ಲಾಸು,ಫುಲ್ಲು ಮಾಸು ಇರೋ ಕಥೆಯಲ್ಲಿ ನೂರೆಂಟು ಟ್ವಿಸ್ಟ್ ಗಳಿವೆ. ಇಲ್ಲಿ ಗೆಳೆತನ, ಪ್ರೀತಿ, ತಾಯಿ ಸೆಂಟಿಮೆಂಟ್, ಕಚಗುಳಿ ಇಡುವ ಹಾಸ್ಯ, ಅಲ್ಲಲ್ಲಿ ಭಾವುಕತೆ ಹೆಚ್ಚಿಸುವ ಅಂಶಗಳು ನೋಡುಹರನ್ನು ಖುಷಿಪಡಿಸುತ್ತವೆ. ಹಾಗಾಗಿ ಶೋಕಿವಾಲ ಒಬ್ಬ ಪಕ್ಕಾ ಪ್ರೀತಿವಾಲ ಅನ್ನೋದನ್ನ ಇಲ್ಲಿ ಕಾಣಬಹುದು.

ಮೊದಲರ್ಧ ಕಥೆ ಸರಾಗವಾಗಿಯೇ ಸಾಗುತ್ತೆ. ದ್ವಿತಿಯಾರ್ಧ ಅಲ್ಲಲ್ಲಿ ಗೊಂದಲಕ್ಕೀಡು ಮಾಡಿದರೂ ಆಗಾಗ ಕಾಣ ಸಿಗುವ ಹಾಡುಗಳು ಆ ಗೊಂದಲಕ್ಕೆ ತೆರೆ ಎಳೆಯುತ್ತವೆ. ಕಥೆಯಲ್ಲಿ ಹೇಳುವಂತಹ ಹೊಸತನವೇನೂ ಇಲ್ಲ. ಆದರೆ, ನಿರೂಪಣೆಯಲ್ಲೊಂದಷ್ಟು ತಾಕತ್ತು ಕಾಣಬಹುದು. ಕೆಲವು ಕಡೆ ಚಿತ್ರಕಥೆ ಧಮ್ ಕಳೆದುಕೊಂಡಿದೆ. ಇನ್ನೂ ಕೆಲವು ಕಡೆ ಗೆಳೆಯರ ಹಾಸ್ಯ ಆ ಧಮ್ ಗೆ ಹೆಗಲು ಕೊಟ್ಟಿದೆ. ಇಡೀ ಸಿನಿಮಾದಲ್ಲಿ ಎಲ್ಲವೂ ಅದ್ಧೂರಿ. ಒಂದು ಹಳ್ಳಿಯಲ್ಲಿ ನಡೆಯುವ ಚಿತ್ರಣವನ್ನು ಹಾಗೆಯೇ ಉಣಬಡಿಸುವ ಪ್ರಯತ್ನವನ್ನು ನಿರ್ದೇಶಕ ಜಾಕಿ ಮಾಡಿದ್ದಾರೆ. ಒಟ್ಟಾರೆ ಇಲ್ಲಿ ಮನರಂಜನೆ ಜೊತೆಗೊಂದು ಸಣ್ಣ ಸಂದೇಶವೂ ಇದೆ. ಉಢಾಳ ಮಗನೊಬ್ಬನ ವಿಪರೀತ ಶೋಕಿ, ಧೈರ್ಯ, ಪ್ರೀತಿ ಗೀತಿ ಇತ್ಯಾದಿ ಸಿನಿಮಾದ ಆಕರ್ಷಣೆ.

ಕಥೆ ಬಗ್ಗೆ ಹೇಳುವುದಾದರೆ, ಅದೊಂದು ಹಳ್ಳಿ. ಅಲ್ಲೊಬ್ಬ ಶೋಕಿವಾಲ. ಹೆಸರು‌ ಕೃಷ್ಣ. ಅವನಿಗೆ ಹುಡುಗಿಯರ ಹಿಂದೆ ಹೋಗೋ ಖಯಾಲಿ. ಅಂದರೆ ಲವ್ ಮಾಡೋ ಶೋಕಿ. ಆದರೆ ಅವನಿಗೆ ಯಾವ ಹುಡುಗಿಯೂ ಕ್ಯಾರೆ ಅನ್ನಲ್ಲ. ಅಂತಹ ಹೊತ್ತಲ್ಲೇ ಊರ ಗೌಡನ ಮಗಳೊಬ್ಬಳು ಆ ಕೃಷ್ಣನ ಕಣ್ಣಿಗೆ ಬೀಳ್ತಾಳೆ. ಅದೇ ಶೋಕಿಯಲ್ಲೇ ಅವನು ಗೌಡನ ಮಗಳನ್ನು ಒಲಿಸಿಕೊಳ್ಳೋಕೆ ನಾನಾ ರೀತಿ ಕಸರತ್ತು ಮಾಡ್ತಾನೆ. ಕೊನೆಗೆ ಆಕೆ ಅವನ ಲವ್ ಗೆ ಜೈ ಅಂತಾಳೆ. ಅವರಿಬ್ಬರು ಮದುವೆಯನ್ನೂ ಆಗ್ತಾರೆ. ಹಾಗಂತ, ಆ ಗೌಡ ತನ್ನ ಮಗಳನ್ನು ರಾತ್ರೋ ರಾತ್ರಿ ಕರೆದೊಯ್ದು ಮದುವೆ ಆಗುವ ಆ ಶೋಕಿವಾಲನನ್ನು ಸುಮ್ಮನೆ ಬಿಡ್ತಾನಾ? ಇದು ಮುಂದೆ ಸಾಗುವ ಇಂಟ್ರೆಸ್ಟಿಂಗ್ ಸ್ಟೋರಿ. ಆ ಕುತೂಹಲ ಇದ್ದರೆ, ಒಮ್ಮೆ ಶೋಕಿವಾಲನ ಶೋಕಿ ನೋಡಬಹುದು.

ಕಥೆಯಲ್ಲಿ ಒಂದಷ್ಟು ತಿರುವುಗಳಿವೆ. ಬದುಕಿನ ಪಾಠವೂ ಇದೆ. ಪ್ರೀತಿ ಸುಲಭವಲ್ಲ ಅನ್ನುವ ಸಂದೇಶವೂ ಇದೆ. ಗೆಳೆಯರ ಸಾಥ್ ಹೇಗಿರಬೇಕು ಅನ್ನುವುದನ್ನೂ ನಿರ್ದೇಶಕರಿಲ್ಲಿ ತೋರಿಸಿಕೊಟ್ಟಿದ್ದಾರೆ. ಒಟ್ಟಾರೆ ಇಲ್ಲಿ ಇನ್ನೊಂದು ವಿಷಯ ಪ್ರಸ್ತಾಪ ಮಾಡಲೇಬೇಕು ಅದು ಸಂಗೀತ ಮತ್ತು ಸಾಹಿತ್ಯ. ಹಾಡು ಹಾಗು ಹಿನ್ನೆಲೆ ಸಂಗೀತ ಕಥೆಗೆ ಪೂರಕವಾಗಿದೆ. ಶ್ರೀಧರ್ ವಿ.ಸಂಭ್ರಮ್ ಅವರ ಕೀ ಬೋರ್ಡ್ ಇಲ್ಲಿ ಸದ್ದು ಮಾಡಿದೆ. ಪ್ರಶಾಂತ್ ರಾಜಪ್ಪ ಅವರ ಸಂಭಾಷಣೆ ಕೂಡ ಚಿತ್ರದ ಮತ್ತೊಂದು ಹೈಲೈಟ್.

ಅಜೇಯ್ ರಾವ್ ಇಡೀ ಸಿನಿಮಾ ಆವರಿಸಿಕೊಂಡಿದ್ದಾರೆ. ಶೋಕಿವಾಲನಾಗಿ ಇಷ್ಟವಾಗುತ್ತಾರೆ. ಎಂದಿಗಿಂತಲೂ ಇಲ್ಲಿ ಡ್ಯಾನ್ಸ್ ಮತ್ತು ಫೈಟ್ ನಲ್ಲಿ ಗಮನ ಸೆಳೆಯುತ್ತಾರೆ. ಸಂಜನಾ ಆನಂದ್ ಮುದ್ದಾಗಿ ಕಾಣುತ್ತಾರೆ ಬಿಟ್ಟರೆ ಡ್ಯಾನ್ಸ್ ನಲ್ಲಿ ಹಿಂದೆ ಉಳಿದಿಲ್ಲ. ನಟನೆಯಲ್ಲಿನ್ನೂ ಧಮ್ ಕಟ್ಟಬೇಕಿತ್ತು. ಉಳಿದಂತೆ ಇಲ್ಲಿ ಅರುಣ ಬಾಲರಾಜ್ ಅಮ್ಮನಾಗಿ ಇಷ್ಟ ಆಗುತ್ತಾರೆ. ಶರತ್ ಲೋಹಿತಾಶ್ವ ಅವರೂ ಸಿಕ್ಕ ಪಾತ್ರಕ್ಕೆ‌ಮೋಸ ಮಾಡಿಲ್ಲ. ನಾಗರಾಜಯ್ಯ, ಗಿರಿ, ಪ್ರಮೋದ್, ಸುಧಾಕರ್ ಎಲ್ಲರೂ ಪಾತ್ರಗಳಿಗೆ ನ್ಯಾಯ ಸಲ್ಲಿಸಿದ್ದಾರೆ.
ನವೀನ್ ಅವರ ಕ್ಯಾಮೆರಾ ಕೈಚಳಕ ಹಳ್ಳಿಯ ಸೊಬಗನ್ನು ಹೆಚ್ಚಿಸಿದೆ.

Categories
ಸಿನಿ ಸುದ್ದಿ

1975 ಸಿನಿಮಾ ಸ್ಪೆಷಲ್ ಸಾಂಗ್ ಗೆ ಸಿಂಧು ಲೋಕನಾಥ್ ಸ್ಟೆಪ್: ಇದು ಡ್ರಗ್ಸ್ ಕುರಿತ ರೋಚಕ ಕಥೆ…

ಈ ಹಿಂದೆ ಒನ್ ಲವ್ ಟೂ ಸ್ಟೋರಿ ಸಿನಿಮಾ ಮೂಲಕ ಕನ್ನಡ ಚಿತ್ರ ಲೋಕಕ್ಕೆ ಪರಿಚಿತರಾದ ನಿರ್ದೇಶಕ ವಸಿಷ್ಠ ಬಂಟನೂರು ನಿರ್ದೇಶನದಲ್ಲಿ ಮತ್ತೊಂದು ಸಿನಿಮಾ ತಯಾರಾಗಿದೆ. ಅದೇ 1975. ಕ್ರೈಮ್ ಥ್ರಿಲ್ಲರ್ ಕಥಾ ಹೂರಣ ಇರುವ ಸಿನಿಮಾದಲ್ಲಿ ಚಕ್ರವರ್ತಿ ಚಂದ್ರಚೂಡ್, ಜಯ್ ಶೆಟ್ಟಿ, ಮಾನಸ, ವೆಂಕಟೇಶ್ ಪ್ರಸಾದ್ ಸೇರಿದಂತೆ ಹಲವು ಪ್ರತಿಭಾನ್ವಿತ ತಾರಾಬಳಗವಿದೆ.

ಸ್ಪೆಷಲ್ ಹಾಡಲ್ಲಿ ಸಿಂಧು

1975 ಸಿನಿಮಾದ ಮೆಲೋಡಿ ಪಬ್ ಸಾಂಗ್ ವೊಂದರಲ್ಲಿ ಸಿಂಧೂ ಲೋಕನಾಥ್ ಭರ್ಜರಿಯಾಗಿ ಸ್ಟೆಪ್ಸ್ ಹಾಕಿದ್ದಾರೆ. ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ಈ ಹಾಡಿನ ಚಿತ್ರೀಕರಣ ನಡೆದಿದೆ. ಚಿತ್ರತಂಡ ಈ ಬಗ್ಗೆ ಹೇಳಿಕೊಂಡಿದ್ದಿಷ್ಟು.

ನನ್ನ ಸಿನಿಮಾ ಜರ್ನಿಯಲ್ಲಿ ಈ ರೀತಿ ಸ್ಪೆಷಲ್ ಸಾಂಗ್ ಗೆ ಹೆಜ್ಜೆ ಹಾಕಿರುವುದು ವಿಶೇಷ. ಸಾಂಗ್ ತುಂಬಾ ಚೆನ್ನಾಗಿದೆ. ಈ ಸಾಂಗ್ ಪ್ರತಿಯೊಬ್ಬರಿಗೂ ಇಷ್ಟವಾಗುತ್ತದೆ. ಹೊಸಬರ ತಂಡ ಇಡೀ ಟೀಂಗೆ ಒಳ್ಳೆದಾಗಲಿ ಎಂದು ಸಿಂಧು ಲೋಕನಾಥ್ ತಮ್ಮ ಅನುಭವ ಹಂಚಿಕೊಂಡರು.

ಕಳೆದ ಮೂರು ವರ್ಷಗಳಿಂದ ನಡೆಯುತ್ತಿರುವ ವಿಷಯ ಇಲ್ಲಿದೆ. ನಿರ್ಮಾಪರು ಸಿನಿಮಾಗೆ ಕೇಳಿದೆಲ್ಲವನ್ನೂ ಕೊಟ್ಟಿದ್ದಾರೆ. ಸ್ಕ್ರಿಪ್ಟ್ ತುಂಬಾ ಚೆನ್ನಾಗಿದೆ ಎಂಬುದು ಚಕ್ರವರ್ತಿ ಚಂದ್ರಚೂಡ್ ಮಾತು.

ಪ್ರೊಡಕ್ಷನ್ ಸಿಲ್ವರ್ ಸ್ಕ್ರೀನ್ ಫಿಲ್ಮಂ ಫ್ಯಾಕ್ಟರಿ ಬ್ಯಾನರ್ ನಡಿ ದಿನೇಶ್ ರಾಜನ್ ಸಿನಿಮಾಗೆ ಬಂಡವಾಳ ಹೂಡಿದ್ದು, ಬೆಂಗಳೂರು, ಉಡುಪಿ ಸೇರಿದಂತೆ ಚಿತ್ರೀಕರಣ ನಡೆದಿದೆ. ಈಗಾಗಲೇ ಶೂಟಿಂಗ್ ಮುಗಿಸಿ ಕುಂಬಳಕಾಯಿ ಹೊಡಿರುವ ಚಿತ್ರತಂಡ ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಲ್ಲಿ ಬ್ಯುಸಿಯಾಗಿದೆ.

Categories
ಸಿನಿ ಸುದ್ದಿ

ಕಿಚ್ಚನಿಗೆ ಇಡೀ ಸೌತ್ ಇಂಡಿಯಾ ಸಾಥ್!‌‌ ಟ್ವೀಟ್‌ ವಾರ್‌ಗೆ ಒಗ್ಗಟ್ಟಿನ ಪ್ರತಿಕ್ರಿಯೆ; ಸ್ಟಾರ್ಸ್‌, ರಾಜಕಾರಣಿಗಳು ಸುದೀಪ್‌ಗೆ ಬೆಂಬಲ…

ಅಂತೂ ಇಂತೂ ಇಡೀ ದಕ್ಷಿಣ ಭಾರತ ಚಿತ್ರರಂಗವೇ ಇದೀಗ ಕಿಚ್ಚನಿಗೆ ಸಾಥ್‌ ನೀಡಿದೆ. ಹೌದು, ಕಳೆದ ಎರಡು ದಿನಗಳಿಂದ ನಟ ಸುದೀಪ್‌ ಹಾಗು ಅಜಯ್‌ ದೇವಗನ್‌ ಮಧ್ಯೆ ನಡೆದ ಟ್ವೀಟ್‌ ವಾರ್‌ಗೆ ಸ್ಯಾಂಡಲ್‌ ವುಡ್‌ ಸ್ಟಾರ್ಸ್‌ ಮಾತ್ರವಲ್ಲ, ಈಗ ಸೌತ್‌ ಇಂಡಿಯಾ ಫಿಲ್ಮ್‌ ಸ್ಟಾರ್ಸ್‌ಗಳೂ ಸಾಥ್‌ ನೀಡುವ ಮೂಲಕ ಒಟ್ಟಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ಕನ್ನಡ ಚಿತ್ರರಂಗದ ಮೋಹಕ ತಾರೆ ರಮ್ಯಾ, ರಾಮ್‌ ಗೋಪಾಲ್‌ ವರ್ಮಾ, ಸತೀಶ್ ನೀನಾಸಂ, ಆಶಿಕಾ ರಂಗನಾಥ್, ಶ್ರೀನಗರ ಕಿಟ್ಟಿ, ನಿರ್ದೇಶಕ ಮಂಸೋರೆ ಸೇರಿದಂತೆ ಹಲವು ನಟ,ನಟಿಯರು ನಟ ಸುದೀಪ್‌ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಇದಿಷ್ಟೇ ಅಲ್ಲ, ಅತ್ತ ರಾಜಕೀಯ ಧುರೀಣರು ಸಹ ಬೆಂಬಲ ಸೂಚಿಸುವ ಮೂಲಕ ಅಜಯ್‌ ದೇವಗನ್‌ ಅವರಿಗೆ ಟಾಂಗ್‌ ಕೊಟ್ಟಿದ್ದಾರೆ. ಪರಭಾಷಿಗರಿಂದಲೂ ಸುದೀಪ್‌ಗೆ ಭಾರೀ ಬೆಂಬಲ ವ್ಯಕ್ತವಾಗುತ್ತಿರುವುದು ಇಡೀ ಸೌತ್‌ ಫಿಲ್ಮ್‌ ಇಂಡಸ್ಟ್ರಿ ಒಗ್ಗಟ್ಟಿನ ಮಂತ್ರ ಹೇಗಿದೆ ಅನ್ನೋದನ್ನು ತೋರಿಸುತ್ತಿದೆ…

ದೇವಗನ್‌ಗೆ ಚಳಿ ಬಿಡಿಸಿದ ವರ್ಮಾ…

ನಿರ್ದೇಶಕ, ರಾಮ್ ಗೋಪಾಲ್ ವರ್ಮಾ ಕೂಡ ಸುದೀಪ್‌ ಟ್ವೀಟ್‌ ಕುರಿತಂತೆ ಟ್ವೀಟ್ ಮಾಡಿದ್ದಾರೆ. ಸುದೀಪ್‌ ಮಾತುಗಳಿಗೆ ಬೇಷರತ್ ಬೆಂಬಲ ವ್ಯಕ್ತಪಡಿಸಿದ್ದಾರೆ. ಜೊತೆಗೆ ಸಾಲು ಸಾಲು ಟ್ವೀಟ್‌ ಮಾಡುವ ಮೂಲಕ ಅಜಯ್‌ ದೇವಗನ್‌ ಮಾತುಗಳನ್ನು ಕೊಂಚ ಖಾರವಾಗಿಯೇ ಖಂಡಿಸಿದ್ದಾರೆ. ನೀವು ಹಿಂದಿಯಲ್ಲಿ ಮಾಡಿದ ಟ್ವೀಟ್ ನನಗೆ ಅರ್ಥವಾಯಿತು, ಅದಕ್ಕೆ ಕಾರಣ, ನನಗೆ ಆ ಭಾಷೆಯ ಮೇಲಿರುವ ಗೌರವ, ನಿಮ್ಮ ಟ್ವೀಟ್‌ಗೆ ನಾನು ಕನ್ನಡದಲ್ಲಿ ಪ್ರತಿಕ್ರಿಯೆ ನೀಡಿದ್ದರೆ ನಿಮಗೆ ಅರ್ಥವಾಗುತ್ತಿತ್ತೆ?” ಎಂಬ ಸುದೀಪ್‌ರ ಟ್ವೀಟ್‌ ಅನ್ನು ಮೆಚ್ಚಿಕೊಂಡಿರುವ ವರ್ಮಾ, ”ಭಾಷೆಯ ವಿಷಯವನ್ನು ನಿಮ್ಮ ಈ ಪ್ರಶ್ನೆಗಿಂತಲೂ ಚೆನ್ನಾಗಿ ಯಾವುದೂ ಅರ್ಥೈಸಲು ಸಾಧ್ಯವಿಲ್ಲ. ಅಜಯ್‌ ದೇವಗನ್‌ ಅವರ ಹಿಂದಿ ಟ್ವೀಟ್‌ಗೆ ಕನ್ನಡದಲ್ಲಿ ಪ್ರತಿಕ್ರಿಯೆ ಕೊಟ್ಟಿದ್ದಿದ್ದರೆ ಪರಿಸ್ಥಿತಿ ಭಿನ್ನವಾಗಿರುತ್ತಿತ್ತು. ಈಗಲಾದರು ಅರ್ಥ ಮಾಡಿಕೊಳ್ಳಲಿ ಭಾರತ ಒಂದು ಅನ್ನುವುದನ್ನು ಎಂದಿದ್ದಾರೆ ವರ್ಮಾ. ಇನ್ನು ಅಜಯ್ ದೇವಗನ್‌ ಮಾಡಿದ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ವರ್ಮಾ, ‘ಅಜಯ್ ಅವರನ್ನು ಬಹು ವರ್ಷಗಳಿಂದಲೂ ಬಲ್ಲೆ, ಯಾರನ್ನೂ ನೋಯಿಸುವ ಉದ್ದೇಶ ಅವರಿಗಿಲ್ಲ, ಅವರ ಟ್ವೀಟಿ ಅನ್ನು ಕೆಲವರು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಭಾಷೆಯು ಇಂದು ಪ್ರಾದೇಶಿಕ ಗಡಿ ಹಾಗೂ ಸಂಸ್ಕೃತಿಗಳನ್ನು ಮೀರಿ ಬೆಳೆದಿದೆ. ಭಾಷೆ ಇರುವುದು ಜನರನ್ನು ಹತ್ತಿರ ತರಲೆಂದು ಒಡೆಯಲೆಂದಲ್ಲ ಎಂದು ಸೂಕ್ಷ್ಮವಾಗಿ ಹೇಳಿದ್ದಾರೆ.


‘ನನ್ನ ಮಾತುಗಳನ್ನು ತಪ್ಪಾಗಿ ಅರ್ಥೈಸಲಾಗಿದೆ” ಎಂಬ ಸುದೀಪ್‌ರ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿರುವ ಅವರು, ‘ನೀವು ಉದ್ದೇಶಪೂರ್ವಕವಾಗಿ ಅಥವಾ ಬೇರೆ ಯಾವುದೇ ಕಾರಣಕ್ಕಾದರೂ ಈ ಟ್ವೀಟ್ ಅನ್ನು ಮಾಡಿರಬಹುದು ಆದರೆ ಈ ನಿಮ್ಮ ಹೇಳಿಕೆ ನನಗೆ ಇಷ್ಟವಾಯಿತು. ಉತ್ತರ ಮತ್ತು ದಕ್ಷಿಣ ಭಾರತ ಚಿತ್ರರಂಗಗಳ ನಡುವೆ ಯುದ್ಧದಂತಹ ಪರಿಸ್ಥಿತಿ ಇದ್ದಾಗ ಈ ರೀತಿಯ ಯುದ್ಧ ಶಮನ ಮಾಡುವ ಮನಸ್ಥಿತಿಯ ಹೇಳಿಕೆಗಳು ಅವಶ್ಯಕವಾಗಿರುತ್ತವೆ” ಎಂದಿದ್ದಾರೆ ವರ್ಮಾ. ಮತ್ತೆ ಸುದೀಪ್‌ಗೆ ಪ್ರತ್ಯೇಕ ಟ್ವೀಟ್‌ ಮಾಡಿರುವ ವರ್ಮಾ, ”ಸುದೀಪ್ ಅವರೆ, ಸತ್ಯವೆಂದರೆ ಬಾಲಿವುಡ್ ಸ್ಟಾರ್ ನಟರು ದಕ್ಷಿಣ ಭಾರತದ ಸಿನಿಮಾ ಸ್ಟಾರ್ ನಟರ ಬಗ್ಗೆ ಅಸೂಯೆ ಹೊಂದಿದ್ದಾರೆ. ‘ಕೆಜಿಎಫ್ 2’ ಸಿನಿಮಾ ಮೊದಲ ದಿನವೇ 50 ಕೋಟಿ ಕಲೆಕ್ಷನ್ ಮಾಡಿದ್ದಕ್ಕೆ ಅವರಿಗೆ ಉರಿ ಎದ್ದಿದೆ. ಹಿಂದಿ ಸಿನಿಮಾಗಳು ಇಂತಹ ಓಪನಿಂಗ್ ಪಡೆದುಕೊಳ್ಳಲಾರವು” ಎಂದಿರುವ ವರ್ಮಾ, ಅಂತಿಮವಾಗಿ, ”ರನ್‌ವೇ 34 ಸಿನಿಮಾದ ಕಲೆಕ್ಷನ್ ತೋರಿಸಲಿದೆ. ಹಿಂದಿ ವರ್ಸಸ್ ಕನ್ನಡ ಯುದ್ಧದಲ್ಲಿ ಗೆದ್ದವರ್ಯಾರು ಎಂದು. ಅಥವಾ ಅಜಯ್ ದೇವಗನ್ v/s ಸುದೀಪ್ ಯುದ್ಧದಲ್ಲಿ ಗೆದ್ದವರ್ಯಾರು ಎಂದು” ಎಂದಿದ್ದಾರೆ ವರ್ಮಾ.

ವಿವಾದ ದೊಡ್ಡ ಸುದ್ದಿ

ಅದೇನೆ ಇರಲಿ, ಸದ್ಯ ಚಿತ್ರರಂಗದಲ್ಲಿ ಹಿಂದಿ ಭಾಷೆಯ ವಿಚಾರವಗಿ ದೊಡ್ಡ ಬಿರುಗಾಳಿ ಎದ್ದಿದೆ. ಸುದೀಪ್ ಮತ್ತು ಅಜಯ್ ದೇವಗನ್ ನಡುವೆ ಶುರುವಾದ ವಾಗ್ವಾದ ಈಗ ರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಇದಕ್ಕೆ ಕಾರಣ ‘ಹಿಂದಿ ರಾಷ್ಟ್ರೀಯ ಭಾಷೆಯಾಗಿ ಉಳಿದಿಲ್ಲ’ ಎಂಬ ಕಿಚ್ಚನ ಹೇಳಿಕೆ. ಹಿಂದಿ ರಾಷ್ಟ್ರೀಯ ಭಾಷೆ ಅಲ್ಲ ಎಂದ ಸುದೀಪ್ ಹೇಳಿಕೆಗೆ ಬಾಲಿವುಡ್ ನಟ ಅಜಯ್ ದೇವಗನ್ ತಿರುಗೇಟು ನೀಡುವ ಮೂಲಕ ಭಾರೀ ಸುದ್ದಿಗೆ ಕಾರಣರಾಗಿದ್ದರು. ಇಬ್ಬರೂ ಟ್ವೀಟ್ ಮೂಲಕವೇ ಈ ವಿಚಾರದಲ್ಲಿ ವಾಗ್ವಾದಕ್ಕೆ ಇಳಿದು ಅದು ಎಲ್ಲೆಲ್ಲೋ ಮುಟ್ಟಿದೆ. ಅಜಯ್ ದೇವಗನ್ ನೀಡಿದ ಆ ಹೇಳಿಕೆ ಯಾರಿಗೂ ಸಹಿಸಲು ಸಾಧ್ಯವಾಗಿಲ್ಲ. ಕನ್ನಡಿಗರಿಗೆ ಮಾತ್ರವಲ್ಲ. ಇಡೀ ದಕ್ಷಿಣ ಭಾರತೀಯರನ್ನು ಅಜಯ್ ದೇವಗನ್ ಅವರ ಈ ಹೇಳಿಕೆ ಕೆರಳಿಸಿದೆ. ಕನ್ನಡಿಗರು, ಕನ್ನಡದ ಚಿತ್ರರಂಗದವರು ಮಾತ್ರವಲ್ಲದೆ ಸುದೀಪ್ ಪರ ದಕ್ಷಿಣ ಭಾರತೀಯರೇ ನಿಂತಿದ್ದಾರೆ.

ಸುದೀಪ್‌ಗೆ ಜೈ ಅಂದ ತೆಲುಗು, ತಮಿಳು ಫ್ಯಾನ್ಸ್‌ !

ಸುದೀಪ್ ಗೆ ಜೈ ಎನ್ನುತ್ತಿದ್ದಾರೆ ತಮಿಳು, ತೆಲುಗು ಫ್ಯಾನ್ಸ್! ಹೌದು, ಸುದೀಪ್ ಮತ್ತು ಅಜಯ್ ದೇವಗನ್ ಅವರಿಬ್ಬರ ಸರಣಿ ಟ್ವೀಟ್‌ ವಾರ್‌ನಲ್ಲಿ ಸುದೀಪ್ ಪರವಾಗಿ ಇಡೀ ಸೌತ್ ಚಿತ್ರರಂಗ ಒಂದಾಗಿದೆ. ಸೌತ್‌ನಲ್ಲೂ ಸ್ಟಾರ್ ವಾರ್, ಫ್ಯಾನ್ ವಾರ್ ಎಲ್ಲವೂ ಇದೆ. ಆದರೆ ಈ ವಿಚಾರದಲ್ಲಿ ಮಾತ್ರ ಎಲ್ಲವನ್ನು ಬದಿಗಿಟ್ಟು ಒಂದೇ ರೀತಿಯ ಧ್ವನಿ ಎತ್ತಿರುವುದು ನಿಜಕ್ಕೂ ವಿಶೇಷ. ತೆಲುಗು ನಟ ಮಹೇಶ್ ಬಾಬು ಅಭಿಮಾನಿಗಳು ಸುದೀಪ್‌ ಪರ ನಿಂತು ಕಿಚ್ಚನಿಗೆ ಜೈ ಎನ್ನುತ್ತಿದ್ದಾರೆ. ಜೂ.ಎನ್‌ಟಿಆರ್ ಫ್ಯಾನ್ಸ್ ಕೂಡ ಕಿಚ್ಚನಿಗೆ ಬೆಂಬಲ ಸೂಚಿಸಿದ್ದಾರೆ. ತೆಲುಗು ಮತ್ತು ತಮಿಳಿನ ಬಹುತೇಕ ಸ್ಟಾರ್ ನಟರ ಅಭಿಮಾನಿಗಳು ಬೆಂಬಲ ಸೂಚಿಸುತ್ತಿರುವುದು ಇನ್ನೊಂದು ವಿಶೇಷ. ತಮಿಳು ನಟ ವಿಜಯ್ ಮತ್ತು ಜೂ.ಎನ್‌ಟಿಆರ್ ಫ್ಯಾನ್ ಪೇಜ್‌ನಿಂದ ಕಿಚ್ಚನಿಗೆ ದೊಡ್ಡ ಮಟ್ಟದಲ್ಲಿ ಬೆಂಬಲ ವ್ಯಕ್ತವಾಗಿದೆ. ಈ ಮೂಲಕ ಸೌತ್ ಇಂಡಿಯಾದ ಬಹುತೇಕ ಮಂದಿ ಒಂದಾಗಿ ಮುಂದೆ ಬಂದಿದ್ದಾರೆ ಎನ್ನುವುದು ಸ್ಪಷ್ಟ.

ಅದೇನೆ ಇರಲಿ, ಈಗ ಸೌತ್ ಚಿತ್ರಗಳಿಗೆ ಬಾಲಿವುಡ್‌ ಹೆದರಿದೆಯಾ? ಗೊತ್ತಿಲ್ಲ. ಆದರೆ, ಈ ಟ್ವೀಟ್‌ ವಾರ್‌ ಅನ್ನು ಬಾಲಿವುಡ್ ಮಂದಿ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. RRR, ಪುಷ್ಪ, ಕೆಜಿಎಫ್ 2 ಚಿತ್ರಗಳು ಬಾಕ್ಸಾಫೀಸ್‌ ಗಳಿಕೆ ಕಂಡು ಬಾಲಿವುಡ್ ನಿಜಕ್ಕೂ ಶೇಕ್‌ ಆಗಿದೆ. ಇನ್ನು ಸೌತ್‌ ಫಿಲ್ಮ್‌ ಇಂಡಸ್ಟ್ರಿಯಿಂದ ಸಾಕಷ್ಟು ಸ್ಟಾರ್ಸ್‌ ಸಿನಿಮಾಗಳ ಹಬ್ಬವಿದೆ. ಆ ಹಬ್ಬ ಕಣ್ತುಂಬಿಕೊಳ್ಳೋಕೆ ಬಾಲಿವುಡ್ ಸ್ಟಾರ್ಸ್‌ ಗೆ ಆಗ್ತಾ ಇಲ್ಲವೇನೋ? ಅದಕ್ಕೆ ಇಷ್ಟೆಲ್ಲಾ ಖ್ಯಾತೆ ಅಂತ ಟ್ರೋಲ್‌ ಮಾಡಲಾಗುತ್ತಿದೆ. ಮುಂದೆ ಇದು ಎಲ್ಲಿಗೆ ಹೋಗಿ ನಿಲ್ಲುತ್ತೋ ಕಾದು ನೋಡಬೇಕು.

ಎಂಟರ್‌ಟೈನ್‌ಮೆಂಟ್‌ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

‘Love..ಲಿ’ ಸಿಂಹ ಎಂದ ಮಲೆನಾಡ ಬೆಡಗಿ; ವಸಿಷ್ಠಗೆ ಸಮೀಕ್ಷಾ ಜೋಡಿ

ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಾಯಕಿ…ಮಲೆನಾಡ ಬೆಡಗಿ ಸಮೀಕ್ಷಾ ಈಗ ಬೆಳ್ಳಿತೆರೆ ಮೇಲೆ ದಿಬ್ಬಣ ಹೋಗುತ್ತಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಕೊನೆಯ ಸಿನಿಮಾ ಜೇಮ್ಸ್ ನಲ್ಲಿ ಜಗಮಗಿಸಿದ್ದ ಸಮೀಕ್ಷಾ ಈಗ ಚಿಟ್ಟೆಯೊಟ್ಟಿಗೆ ಮಿಂಚಲು ಸಜ್ಜಾಗಿದ್ದಾರೆ.

ಚಿಟ್ಟೆಯ ‘Love…ಲಿ’ ಸಿನಿಮಾದಲ್ಲಿ ಸಮೀಕ್ಷಾ

ವಸಿಷ್ಠ ಸಿಂಹ ನಾಯಕನಾಗಿ ಬಣ್ಣ ಹಚ್ಚಿರುವ ಮತ್ತೊಂದು‌ ಬಹುನಿರೀಕ್ಷಿತ ಸಿನಿಮಾ love..ಲಿ ಇತ್ತೀಚೆಗಷ್ಟೇ ಸಿನಿಮಾದ ಮುಹೂರ್ತ ನೆರವೇರಿದ್ದು, ಈಗ ಚಿತ್ರತಂಡ ಪಾತ್ರವೊಂದನ್ನು ಪರಿಚಯಿಸ್ತಿದೆ. ಗಣೇಶ್ ಹಾಗೂ ಭಾವನಾ ನಟನೆಯ 99 ಸಿನಿಮಾ, ಫ್ಯಾನ್, ಜೇಮ್ಸ್ ಸಿನಿಮಾದಲ್ಲಿ ಅಭಿನಯಿಸಿದ್ದ ಸಮೀಕ್ಷಾ ಈಗ love…ಲಿ ಸಿನಿಮಾದಲ್ಲಿ ಬಣ್ಣ ಹಚ್ಚಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. Love..ಲಿ ಸಿನಿಮಾದಲ್ಲಿ‌ ಸಮೀಕ್ಷಾ ಕಾರ್ಪೋರೇಟ್ ಹುಡ್ಗಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

ಅಂದಹಾಗೇ love..ಲಿ ಸಿನಿಮಾ ರೋಮ್ಯಾಂಟಿಕ್,ಲವ್ ಸ್ಟೋರಿ ಸಿನಿಮಾವಾಗಿದ್ದು, ಚೇತನ್ ಕೇಶವ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಎಂ ಆರ್ ರವೀಂದ್ರ ಕುಮಾರ್ ನಿರ್ಮಾಣ, ಅನೂಪ್ ಸೀಳಿನ್ ಸಂಗೀತ, ಅಶ್ವಿನ್ ಕೆನೆಡಿ ಛಾಯಾಗ್ರಹಣ ಸಿನಿಮಾಕ್ಕಿದೆ.

Categories
ಸಿನಿ ಸುದ್ದಿ

ಬೆಂಕಿ ಬಿರುಗಾಳಿ ಹಾಡು! ಮೋಹಕ ತಾರೆ ರಮ್ಯಾ ರಿಲೀಸ್ ಮಾಡಿದ ಕಲರ್ ಫುಲ್ ಸಾಂಗು…

ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಾಯಕ ನಟ ಅನೀಶ್ ತೇಜೇಶ್ವರ್ ನಟಿಸುತ್ತಿರುವ ಬಹು ನಿರೀಕ್ಷಿತ ಸಿನಿಮಾ ಬೆಂಕಿ ಅಂಗಳದಿಂದ ಮೊದಲ ಹಾಡು ಬಿಡುಗಡೆಯಾಗಿದೆ. ಮೋಹಕ ತಾರೆ ರಮ್ಯಾ ಹಾಡು ರಿಲೀಸ್ ಮಾಡಿ ಚಿತ್ರತಂಡಕ್ಕೆ ಶುಭಾಶಯ ಕೋರಿದ್ದಾರೆ.

ಒಕೆನಾ ಇದು ಅನೀಶ್ ಡ್ಯಾನ್ಸಿಂಗ್‌ ನಂಬರ್

ಸಖತ್ ಕ್ಯಾಚಿ-ಮ್ಯಾಚಿಯಾಗಿರುವ ಒಕೆನಾ ಹಾಡಿಗೆ ನಾಗಾರ್ಜುನ್ ಶರ್ಮಾ ಸಾಹಿತ್ಯ ಬರೆದಿದ್ದು, ಆನಂದ್ ರಾಜವಿಕ್ರಮ್ ಸಂಗೀತ‌ ನೀಡಿದ್ದು, ಐಶ್ವರ್ಯ ರಂಗರಾಜನ್ ಹಾಗೂ ಪಂಚಮ್ ಜೀವ ಧ್ವನಿಯಾಗಿದ್ದಾರೆ.

ಕಲರ್ ಫುಲ್ ಆಗಿ ಮೂಡಿ‌ ಬಂದಿರುವ ಹಾಡಿನಲ್ಲಿ ಅನೀಶ್ ಹಾಗೂ‌ ಸಂಪದ ಜಬರ್ದಸ್ತ್ ಸ್ಟೆಪ್ಸ್ ಹಾಕಿದ್ದು, ಇದು ಅನೀಶ್ ಡ್ಯಾನ್ಸಿಂಗ್‌ ನಂಬರ್ ಗುರು ಅಂತಾ ಮೆಚ್ಚುಗೆ ಮಾತುಗಳು ವ್ಯಕ್ತವಾಗುತ್ತಿವೆ.

ಪಕ್ಕ ಮಾಸ್‌ ಹಾಗೂ ಕಮರ್ಷಿಯಲ್‌ ಬೆಂಕಿ ಸಿನಿಮಾವನ್ನು ವಿಂಕ್‌ವಿಷಲ್‌ ಪ್ರೊಡಕ್ಷನ್‌ ಬ್ಯಾನರ್‌ ನಡಿ ಅನೀಶ್ ತೇಜೇಶ್ವರ್ ನಿರ್ಮಾಣ ಮಾಡ್ತಿದ್ದು, ಇದು ಇವರ ಹತ್ತನೇ ಸಿನಿಮಾವಾಗಿದೆ. ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಎ.ಆರ್‌.ಬಾಬು ಅವರ ಪುತ್ರ ಶಾನ್‌ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದು, ಇದು ಇವರ ಚೊಚ್ಚಲ ಸಿನಿಮಾವಾಗಿದೆ.

ಅಣ್ಣ-ತಂಗಿ ಸೆಂಟಿಮೆಂಟ್‌ ಕಥೆಯ ಜೊತೆಗೆ, ಹಳ್ಳಿ ಸೊಡಗಿನ ಕಂಪು ಚೆಲ್ಲುವ ಬೆಂಕಿ ಸಿನಿಮಾದಲ್ಲಿ ಶೃತಿ ಪಾಟೀಲ್, ಅಚ್ಯುತ್‌ ಕುಮಾರ್‌, ಸಂಪತ್‌, ಉಗ್ರಂ ಮಂಜು, ಹರಿಣಿ ಸೇರಿದಂತೆ ಅನುಭವಿ ಕಲಾ ಬಳಗವಿದ್ದು, ವೀನಸ್‌ ನಾಗರಾಜ್‌ ಮೂರ್ತಿ ಛಾಯಾಗ್ರಹಣವಿದೆ.

Categories
ಸಿನಿ ಸುದ್ದಿ

ಈ ಪ್ರಶಸ್ತಿ ನಿರೀಕ್ಷಿಸಿರಲಿಲ್ಲ; ಅತ್ಯುತ್ತಮ ನಟ ಪ್ರಶಸ್ತಿ ಪಡೆದ ವಿಶೃತ್ ನಾಯಕ್ ಭಾವುಕ ಮಾತು…

ವಿಶೃತ್ ನಾಯಕ್ ನಟಿಸಿ ನಿರ್ದೇಶಿಸಿರುವ ಮಂಜರಿ ಸಿನಿಮಾಗೆ 2017 ನೇ ರಾಜ್ಯ ಪ್ರಶಸ್ತಿ ಲಭಿಸಿದೆ. ಈ ಚಿತ್ರದ ನಟನೆಗಾಗಿ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ನೀಡಲಾಗಿದೆ

ಪ್ರಶಸ್ತಿ ಸ್ವೀಕರಿಸಿದ ವಿಶೃತ್, ಮಾಧ್ಯಮ ಎದುರು ತಮ್ಮ ಜರ್ನಿ ಕುರುತು ಹೇಳಿದ್ದು ಹೀಗೆ. ‘ನಾನು ಕುಣಿಗಲ್ ನ ಹೊಸಕೆರೆಯವನು. ಅಲ್ಲಿಂದ ಬೆಂಗಳೂರಿಗೆ ಬಂದೆ. ಟ್ರಾವೆಲ್ ಒಂದರ ಓನರ್ ಆದೆ. ಕಾರಣಾಂತರದಿಂದ ಅದನ್ನು ಮಾರಿದೆ. ನಂತರ ಮುಂದೇನು? ಯೋಚಿಸುತ್ತಿದಾಗ, ನನ್ನ ಹೆಂಡತಿ ನನ್ನನ್ನು ಕಾನ್ಫಿಡಾಗೆ ಸೇರಿಸಿದಳು. ಅಲ್ಲಿ ಹಿರಿಯ ನಿರ್ದೇಶಕರಾದ ಸಿದ್ದಲಿಂಗಯ್ಯ, ನಾಗಾಭರಣ, ಕೋಡ್ಲು ರಾಮಕೃಷ್ಣ ಅವರಂತಹ ದಿಗ್ಗಜರ ಮಾರ್ಗದರ್ಶನ ದೊರೆಯಿತು. ನಂತರ ನಿರ್ದೇಶಕನಾದೆ. ನನಗೆ ಬರವಣಿಗೆಯಲ್ಲಿ ಆಸಕ್ತಿ ಹೆಚ್ಚು. ಓದುವ ಹವ್ಯಾಸ ನನಗೆ ಬೆಳೆದಿದ್ದು, ರವಿ ಬೆಳಗೆರೆ ಅವರಿಂದ.

ಆ ನಂತರ ನನ್ನ ನಿರ್ದೇಶನದ “ಮಂಜರಿ” ಚಿತ್ರ ಆರಂಭವಾಯಿತು. ಮೊದಲು ನಾನು ನಿರ್ದೇಶನ ಮಾತ್ರ ಮಾಡುವುದೆಂದು ತೀರ್ಮಾನವಾಗಿತ್ತು. ನನ್ನ ಅಭಿನಯದ ಪಾತ್ರ ಬೇರೊಬ್ಬರು ಮಾಡಬೇಕಿತ್ತು. ಕೆಲವು ಕಾರಣದಿಂದ ಅವರು ಮಾಡುವುದು ತಪ್ಪಿ ಹೋಯಿತು. ಆಗ ನಿರ್ಮಾಪಕ ಶಂಕರ್ ಅವರು ಆ ಪಾತ್ರವನ್ನು ನನಗೆ ಮಾಡಲು ಹೇಳಿದರು. ನಾನೇ ಅಭಿನಯಿಸಿದೆ. ಆಗ ಕನಸಿನಲ್ಲೂ ನನಗೆ ಪ್ರಶಸ್ತಿ ಬರುತ್ತದೆ ಎಂದು ಅಂದು ಕೊಂಡಿರಲಿಲ್ಲ. ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಅನಂತು ಎಂಬುವರು ನನ್ನ ಕರೆದು, ರಾಜ್ಯ ಪ್ರಶಸ್ತಿಗೆ ನೊಂದಾಯಿಸಿದ್ದೀರಾ? ಅಂದರು. ಇಲ್ಲ ಅಂದೆ. ಮೊದಲು ನೊಂದಾಯಿಸಿ ಎಂದರು. ನಾನು ಪ್ರಶಸ್ತಿಗೆ ಅಪ್ಲೈ ಮಾಡುವಾಗ ಕೂಡ ನನಗೆ ಬರುತ್ತದೆ ಎಂದು ನಿರೀಕ್ಷಿಸಿರಲಿಲ್ಲ. ನಟಿ ರೂಪಿಕಾ ಅವರಿಗೂ ಅಥವಾ ಬೇರೆ ಯಾರಿಗೋ ಬರುತ್ತದೆ ಅಂದುಕೊಂಡೆ. ನಂತರ ಆತ್ಮೀಯರೊಬ್ಬರ ಮೂಲಕ ನನಗೆ ಪ್ರಶಸ್ತಿ ಬಂದಿರುವ ವಿಷಯ ತಿಳಿದು ಸಂತೋಷವಾಯಿತು. ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಹಂಬಲ ಹೆಚ್ಚಿತ್ತು. ಈ ಪ್ರಶಸ್ತಿ ಬರಲು ಕಾರಣರಾದ ನಿರ್ಮಾಪಕರೂ ಸೇರಿದಂತೆ ನನ್ನ ತಂಡಕ್ಕೆ ಹಾಗೂ ನನ್ನ ಹೆಂಡತಿಗೆ ಧನ್ಯವಾದ.
ಈಗ ಜೆ.ಕೆ.ಅವರ ಅಭಿನಯದ “ಕಾಡ” ಹಾಗೂ “ಕಾಲ ನಾಗಿಣಿ” ಚಿತ್ರಗಳು ಕೂಡ ಬಿಡುಗಡೆ ಹಂತದಲ್ಲಿದೆ ಎಂದರು.

ನನ್ನ ಹಾರೈಸಲು ಬಂದಿರುವ ಗುರು ಸಮಾನರಾದ ಭಾ.ಮ.ಹರೀಶ್, ನಟ ಜೆ.ಕೆ, ನಿರ್ಮಾಪಕ ಶಂಕರ್, ಜಗದೀಶ್ ಅವರಿಗೆ ಅಭಿನಂದನೆ ಸಲ್ಲಿಸಿದರು ರಾಜ್ಯ ಪ್ರಶಸ್ತಿ ವಿಜೇತ ನಟ ವಿಶೃತ್ ನಾಯಕ್.

ಶ್ರೇಷ್ಠ ನಟ ಪ್ರಶಸ್ತಿ ಪಡೆಯುವುದು ಅಷ್ಟು ಸುಲಭವಲ್ಲ. ಪೈಪೋಟಿಗೆ ಸಾಕಷ್ಟು ಜನ ಇರುತ್ತಾರೆ. ಅಂತಹುದರಲ್ಲಿ ವಿಶೃತ್ ನಾಯಕ್ ಅವರಿಗೆ ಪ್ರಶಸ್ತಿ ಬಂದಿರುವು ಖುಷಿ ತಂದಿದೆ ಎಂದರು ಭಾ.ಮ.ಹರೀಶ್.

ನಮ್ಮ ಚಿತ್ರದಲ್ಲಿ ಅಭಿನಯಿಸಲು ಒಪ್ಪಿ, ಈಗ ಪ್ರಶಸ್ತಿ ಪಡೆದುಕೊಂಡಿರುವ ವಿಶೃತ್ ನಾಯಕ ಅವರಿಂದ ನಮ್ಮ ಚಿತ್ರಕ್ಕೂ ಉತ್ತಮ ಹೆಸರು ಬಂದಿದೆ. ಒಳ್ಳೆಯದಾಗಲಿ ಎಂದರು ನಿರ್ಮಾಪಕ ಶಂಕರ್.

ಒಬ್ಬ ನಟನಿಗೆ ರಾಷ್ಟ್ರ ಹಾಗೂ ರಾಜ್ಯ ಪ್ರಶಸ್ತಿ ಬಂದರೆ, ಅವರ ಉತ್ಸಾಹ ಇನ್ನಷ್ಟು ಹೆಚ್ಚುತ್ತದೆ ಎಂದು ಗೆಳೆಯ ವಿಶೃತ್ ನಾಯಕ್ ಅವರಿಗೆ ಶುಭಕೋರಿದರು ನಟ ಜೆ.ಕೆ.

ಗಂಡನ ಯಶಸ್ಸಿನ ಹಿಂದೆ ಹೆಂಡತಿ ಇರುತ್ತಾಳೆ ಎನ್ನುತ್ತಾರೆ. ಆದರೆ ನನ್ನ ಎಲ್ಲಾ ಕಾರ್ಯಗಳ ಹಿಂದೆ ನನ್ನ ಪತಿ ವಿಶೃತ್ ನಾಯಕ್ ಇರುತ್ತಾರೆ. ನಾನು ಪ್ರೇರಣ ಎಂಬ ಸಂಸ್ಥೆ ಮೂಲಕ ಸಾಕಷ್ಟು ವಿಶೇಷ ಮಕ್ಕಳನ್ನು ನೋಡಿಕೊಳ್ಳುತ್ತಿದ್ದೇನೆ. ಇದಕ್ಕೆ ರಾಷ್ಟ್ರಪ್ರಶಸ್ತಿ ಕೂಡ ಪಡೆದಿದ್ದೇನೆ. ಈಗ ವಿಶೃತ್ ಅವರಿಗೆ ರಾಜ್ಯ ಪ್ರಶಸ್ತಿ ಬಂದಿದೆ ಅಭಿನಂದನೆಗಳು ಎಂದರು ವಿಶೃತ್ ನಾಯಕ್ ಅವರ ಪತ್ನಿ ಮೇಘನಾ ಜೋಯಿಸ್.

Categories
ಸಿನಿ ಸುದ್ದಿ

ಹಾಡುಗಳ ಸಿಂಧೂರ…


’ಸಿಂಧೂರ’ ಹಾಡುಗಳ ಬಿಡುಗಡೆ ಕಾರ್ಯಕ್ರಮ ತಡವಾದರೂ ಅರ್ಥಪೂರ್ಣವಾಗಿ ನಡೆಯಿತು. ಕಾಳಿಮಠದ ಋಷಿಕುಮಾರ ಸ್ವಾಮೀಜಿ, ಸ್ವಸ್ತಿಕ್‌ ಶಂಕರ್, ಉಮೇಶ್‌ ಬಣಕಾರ್ ಇತರರು ಆಡಿಯೋ ಬಿಡುಗಡೆ ಮಾಡಿ ತಂಡಕ್ಕೆ ಶುಭ ಕೋರಿದರು. ಇದೊಂದು ತ್ರಿಕೋನ ಪ್ರೇಮಕಥೆ. ನಾಯಕ, ನಿರ್ಮಾಪಕ ಮತ್ತು ನಿರ್ದೇಶಕ ಸಚ್ಚಿನ ಪುರೋಹಿತ್ ತಂದೆ ದಿವಂಗತ ರಾಮ್‌ ಪುರೋಹಿತ್ ಎಂಟು ವರ್ಷಗಳ ಹಿಂದೆ ಬರೆದ ಕಥೆಯು ಈಗ ಚಿತ್ರ ರೂಪದಲ್ಲಿ ಸಿದ್ದಗೊಂಡಿದೆ.


ಕ್ರಿಶ್ಚಿಯನ್ ಶಾಸಕನ ಮಗಳು, ಮದ್ಯಮ ವರ್ಗದ ಪ್ರಾದ್ಯಪಕನ ಮಗನ ಮೇಲೆ ಪ್ರೀತಿ ಹುಟ್ಟಿಕೊಳ್ಳುತ್ತದೆ. ಎಲ್ಲಾ ಕಡೆಯಲ್ಲೂ ಸಮಾನತೆ ಕಾಣುವ ಶಾಸಕ, ಮಗಳ ವಿಷಯ ಬಂದಾಗ ತಿರುಗಿ ಬೀಳುತ್ತಾನೆ. ಮುಂದೆ ಜೀವನದಲ್ಲಿ ಮೇಲೆ ಬರುತ್ತೇನೆಂದು ಚಾಲೆಂಜ್ ತೆಗೆದುಕೊಂಡು ಪಟ್ಟಣಕ್ಕೆ ಬರುತ್ತಾನೆ. ಆ ಸಮಯದಲ್ಲಿ ಮತ್ತೊಂದು ಹುಡುಗಿಯ ಪರಿಚಯ ಪ್ರೇಮಕ್ಕೆ ತಿರುಗುತ್ತದೆ. ಅಲ್ಲೊಂದು ಉಪಕಥೆ ಹುಟ್ಟಿಕೊಳ್ಳುತ್ತದೆ. ಅಂತಿಮವಾಗಿ ಆತ ಯಾರಿಗೆ ಒಲಿಯುತ್ತಾನೆ ಎಂಬುದು ಒಂದು ಕಥೆ ಸಾರಾಂಶ.


ಶಾಸಕನ ಮಗಳಾಗಿ ನಿವೀಕ್ಷಾನಾಯ್ಡು, ಕಂಪೆನಿ ಕಾರ್ಯದರ್ಶಿಯಾಗಿ ಸುರಕ್ಷಿತಶೆಟ್ಟಿ ನಾಯಕಿಯರು. ಉಳಿದಂತೆ ಬ್ಯಾಂಕ್‌ ಜನಾರ್ದನ, ರೇಖಾದಾಸ್, ರಾಂಪುರೋಹಿತ್, ಅರುಣ್‌ದೇವಸ್ಯ, ಜ್ಯೋತಿ ಮುರೂರು, ದಯಾನಂದ್‌ ನೀನಾಸಂ, ಶ್ರೀವಿಷ್ಣು, ಉಮಾಶಂಕರ್ ಮುಂತಾದವರು ನಟಿಸಿದ್ದಾರೆ, ಗೋವಾ, ಮಡಿಕೇರಿ, ಸಕಲೇಶಪುರ, ಬಾಗಲಕೋಟೆ, ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಐದು ಹಾಡುಗಳಿಗೆ ಸಾಹಿತ್ಯ ಮತ್ತು ಸಂಗೀತ ಒದಗಿಸಿರುವುದು ಕಾರ್ತಿಕ್‌ ವೆಂಕಟೇಶ್. ಗಣೇಶ್‌ರಾಜನ್ ಛಾಯಾಗ್ರಹಣ, ಅರವಿಂದ್.ಜೆ.ಪಿ ಸಂಕಲನ, ಅಶೋಕ್ ಸಾಹಸ, ಸೂರಿ-ಜೆ.ಪಿ.ಆರಾಧ್ಯ ನೃತ್ಯ ನಿರ್ವಹಿಸಿದ್ದಾರೆ.


ಇದಕ್ಕೂ ಮುನ್ನ ಚಿತ್ರದ ಟೀಸರ್ ಮತ್ತು ಹಾಡುಗಳ ತುಣುಕು ತೋರಿಸಲಾಯಿತು. ಆನಂದ್ ಆಡಿಯೋ ಹಾಡುಗಳ ಹಕ್ಕು ಪಡೆದುಕೊಂಡಿದೆ. ಸೆನ್ಸಾರ್‌ನಿಂದ ಪ್ರಶಂಸೆಗೆ ಒಳಗಾದ ಚಿತ್ರವು ಕರೋನ ಪರಿಸ್ಥಿತಿ ನೋಡಿಕೊಂಡು ತೆರೆಗೆ ತರಲು ನಿರ್ಮಾಪಕರು ಯೋಜನೆ ರೂಪಿಸಿಕೊಂಡಿದ್ದಾರೆ.

error: Content is protected !!