ಹಾಡುಗಳ ಸಿಂಧೂರ…


’ಸಿಂಧೂರ’ ಹಾಡುಗಳ ಬಿಡುಗಡೆ ಕಾರ್ಯಕ್ರಮ ತಡವಾದರೂ ಅರ್ಥಪೂರ್ಣವಾಗಿ ನಡೆಯಿತು. ಕಾಳಿಮಠದ ಋಷಿಕುಮಾರ ಸ್ವಾಮೀಜಿ, ಸ್ವಸ್ತಿಕ್‌ ಶಂಕರ್, ಉಮೇಶ್‌ ಬಣಕಾರ್ ಇತರರು ಆಡಿಯೋ ಬಿಡುಗಡೆ ಮಾಡಿ ತಂಡಕ್ಕೆ ಶುಭ ಕೋರಿದರು. ಇದೊಂದು ತ್ರಿಕೋನ ಪ್ರೇಮಕಥೆ. ನಾಯಕ, ನಿರ್ಮಾಪಕ ಮತ್ತು ನಿರ್ದೇಶಕ ಸಚ್ಚಿನ ಪುರೋಹಿತ್ ತಂದೆ ದಿವಂಗತ ರಾಮ್‌ ಪುರೋಹಿತ್ ಎಂಟು ವರ್ಷಗಳ ಹಿಂದೆ ಬರೆದ ಕಥೆಯು ಈಗ ಚಿತ್ರ ರೂಪದಲ್ಲಿ ಸಿದ್ದಗೊಂಡಿದೆ.


ಕ್ರಿಶ್ಚಿಯನ್ ಶಾಸಕನ ಮಗಳು, ಮದ್ಯಮ ವರ್ಗದ ಪ್ರಾದ್ಯಪಕನ ಮಗನ ಮೇಲೆ ಪ್ರೀತಿ ಹುಟ್ಟಿಕೊಳ್ಳುತ್ತದೆ. ಎಲ್ಲಾ ಕಡೆಯಲ್ಲೂ ಸಮಾನತೆ ಕಾಣುವ ಶಾಸಕ, ಮಗಳ ವಿಷಯ ಬಂದಾಗ ತಿರುಗಿ ಬೀಳುತ್ತಾನೆ. ಮುಂದೆ ಜೀವನದಲ್ಲಿ ಮೇಲೆ ಬರುತ್ತೇನೆಂದು ಚಾಲೆಂಜ್ ತೆಗೆದುಕೊಂಡು ಪಟ್ಟಣಕ್ಕೆ ಬರುತ್ತಾನೆ. ಆ ಸಮಯದಲ್ಲಿ ಮತ್ತೊಂದು ಹುಡುಗಿಯ ಪರಿಚಯ ಪ್ರೇಮಕ್ಕೆ ತಿರುಗುತ್ತದೆ. ಅಲ್ಲೊಂದು ಉಪಕಥೆ ಹುಟ್ಟಿಕೊಳ್ಳುತ್ತದೆ. ಅಂತಿಮವಾಗಿ ಆತ ಯಾರಿಗೆ ಒಲಿಯುತ್ತಾನೆ ಎಂಬುದು ಒಂದು ಕಥೆ ಸಾರಾಂಶ.


ಶಾಸಕನ ಮಗಳಾಗಿ ನಿವೀಕ್ಷಾನಾಯ್ಡು, ಕಂಪೆನಿ ಕಾರ್ಯದರ್ಶಿಯಾಗಿ ಸುರಕ್ಷಿತಶೆಟ್ಟಿ ನಾಯಕಿಯರು. ಉಳಿದಂತೆ ಬ್ಯಾಂಕ್‌ ಜನಾರ್ದನ, ರೇಖಾದಾಸ್, ರಾಂಪುರೋಹಿತ್, ಅರುಣ್‌ದೇವಸ್ಯ, ಜ್ಯೋತಿ ಮುರೂರು, ದಯಾನಂದ್‌ ನೀನಾಸಂ, ಶ್ರೀವಿಷ್ಣು, ಉಮಾಶಂಕರ್ ಮುಂತಾದವರು ನಟಿಸಿದ್ದಾರೆ, ಗೋವಾ, ಮಡಿಕೇರಿ, ಸಕಲೇಶಪುರ, ಬಾಗಲಕೋಟೆ, ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಐದು ಹಾಡುಗಳಿಗೆ ಸಾಹಿತ್ಯ ಮತ್ತು ಸಂಗೀತ ಒದಗಿಸಿರುವುದು ಕಾರ್ತಿಕ್‌ ವೆಂಕಟೇಶ್. ಗಣೇಶ್‌ರಾಜನ್ ಛಾಯಾಗ್ರಹಣ, ಅರವಿಂದ್.ಜೆ.ಪಿ ಸಂಕಲನ, ಅಶೋಕ್ ಸಾಹಸ, ಸೂರಿ-ಜೆ.ಪಿ.ಆರಾಧ್ಯ ನೃತ್ಯ ನಿರ್ವಹಿಸಿದ್ದಾರೆ.


ಇದಕ್ಕೂ ಮುನ್ನ ಚಿತ್ರದ ಟೀಸರ್ ಮತ್ತು ಹಾಡುಗಳ ತುಣುಕು ತೋರಿಸಲಾಯಿತು. ಆನಂದ್ ಆಡಿಯೋ ಹಾಡುಗಳ ಹಕ್ಕು ಪಡೆದುಕೊಂಡಿದೆ. ಸೆನ್ಸಾರ್‌ನಿಂದ ಪ್ರಶಂಸೆಗೆ ಒಳಗಾದ ಚಿತ್ರವು ಕರೋನ ಪರಿಸ್ಥಿತಿ ನೋಡಿಕೊಂಡು ತೆರೆಗೆ ತರಲು ನಿರ್ಮಾಪಕರು ಯೋಜನೆ ರೂಪಿಸಿಕೊಂಡಿದ್ದಾರೆ.

Related Posts

error: Content is protected !!