ಸ್ಯಾಂಡಲ್ ವುಡ್ ಅಂಗಳದ ದೂದ್ ಪೇಡ ದಿಗಂತ್ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. ಅದರ ವಿಶೇಷವಾಗಿ ದಿಗಂತ್ ನಟಿಸುತ್ತಿರುವ ‘ಎಡಗೈಯೇ ಅಪಘಾತಕ್ಕೆ ಕಾರಣ’ ಚಿತ್ರತಂಡ ಕ್ಯಾರೆಕ್ಟರ್ ಪೋಸ್ಟರ್ ರಿವೀಲ್ ಮಾಡುವ ಮೂಲಕ ಚಿತ್ರದ ನಾಯಕ ನಟನಿಗೆ ಶುಭ ಕೋರಿದೆ.
ದಿಗಂತ್ ಅವರ ಕ್ಯಾರೆಕ್ಟರ್ ಪೋಸ್ಟರ್ ರಿವೀಲ್ ಮಾಡುವ ಮೂಲಕ ‘ಎಡಗೈಯೇ ಅಪಘಾತಕ್ಕೆ ಕಾರಣ’ ಚಿತ್ರತಂಡ ಹುಟ್ಟುಹಬ್ಬಕ್ಕೆ ಶುಭ ಕೋರಿದೆ. ದಿಗಂತ್ ಅವರಿಗೆ ಇಲ್ಲಿವರೆಗೆ ಚಾಕೋಲೇಟ್ ಬಾಯ್. ರೋಮ್ಯಾಂಟಿಕ್ ಹೀರೋ ಇಮೇಜ್ ಇತ್ತು ಆದ್ರೆ ಈ ಸಿನಿಮಾದಿಂದ ಕಂಪ್ಲೀಟ್ ಡಿಫ್ರೆಂಟ್ ಇಮೇಜ್ ನಲ್ಲಿ ದಿಗಂತ್ ಕಾಣಸಿಗುತ್ತಾರೆ. ಬರ್ತ್ ಡೇ ಗೆ ಡಿಫ್ರೆಂಟ್ ಕ್ಯಾರೆಕ್ಟರ್ ಪೋಸ್ಟರ್ ಬಿಡುಗಡೆ ಮಾಡಬೇಕೆಂದು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದ್ವಿ ಅದರಂತೆ ಇಂದು ಅನಾವರಣ ಮಾಡಿದ್ದೇವೆ ಎಂದು ನಿರ್ದೇಶಕ ಸಮರ್ಥ್ ಬಿ ಕಡಕೊಳ್ ತಿಳಿಸಿದ್ದಾರೆ.
‘ಎಡಗೈಯೇ ಅಪಘಾತಕ್ಕೆ ಕಾರಣ’ ಚಿತ್ರೀಕರಣ ಕೊನೆಯ ಹಂತದಲ್ಲಿದ್ದು, ಜನವರಿ ಕೊನೆಯಲ್ಲಿ ಚಿತ್ರೀಕರಣ ಕಂಪ್ಲೀಟ್ ಆಗಲಿದೆ. ಸಮರ್ಥ್ ಬಿ ಕಡಕೊಳ್ ನಿರ್ದೇಶನದಲ್ಲಿ ಮೂಡಿ ಬರ್ತಿರುವ ಚೊಚ್ಚಲ ಸಿನಿಮಾ ಇದಾಗಿದೆ. ಮರ್ಡರ್ ಮಿಸ್ಟರಿ, ಡಾರ್ಕ್ ಕಾಮಿಡಿ ಹಾಗೂ ಸಸ್ಪೆನ್ಸ್ ಥ್ರಿಲ್ಲರ್ ಸಬ್ಜೆಕ್ಟ್ ಒಳಗೊಂಡ ಕಥಾಹಂದರ ಚಿತ್ರದಲ್ಲಿದೆ. ಹೆಸರೇ ಹೇಳುವಂತೆ ಎಡಗೈ ಬಳಸುವವರ ಸಮಸ್ಯೆಗಳ ಸುತ್ತ ಹೆಣೆದ ಚಿತ್ರವಿದು. ಚಿತ್ರದಲ್ಲಿ ದಿಗಂತ್ ಜೋಡಿಯಾಗಿ ನವನಟಿ ಧನು ಹರ್ಷ ನಟಿಸುತ್ತಿದ್ದು, ರಾಧಿಕಾ ನಾರಾಯಣ್, ನಿಧಿ ಸುಬ್ಬಯ್ಯ ಕೂಡ ಚಿತ್ರದ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ.
ಹೈಫನ್ ಪಿಕ್ಚರ್ಸ್ ಬ್ಯಾನರ್ ನಡಿ ಗುರುದತ್ ಗಾಣಿಗ ಹಾಗೂ ನಿರ್ದೇಶಕ ಸಮರ್ಥ್ ಬಿ ಕಡಕೊಳ್ ಚಿತ್ರವನ್ನು ಜಂಟಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ಶೇಕಡಾ 90ರಷ್ಟು ಚಿತ್ರೀಕರಣ ಕಂಪ್ಲೀಟ್ ಆಗಿದ್ದು, ಭಜರಂಗಿ ಲೋಕಿ, ಕೃಷ್ಣ ಹೆಬ್ಬಾಳ್ ಚಿತ್ರದ ತಾರಾಗಣದಲ್ಲಿದ್ದಾರೆ. ಅಭಿಮನ್ಯು ಸದಾನಂದ್ ಕ್ಯಾಮೆರಾ ವರ್ಕ್, ರಾಹುಲ್ ವಿ ಪಾರ್ವತಿಕರ್ ಹಾಗೂ ಶ್ರೀಪಾದ್ ಜೋಶಿ ಸಂಭಾಷಣೆ ಸಿನಿಮಾಗಿದೆ.
ಕಿಚ್ಚ ಸುದೀಪ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ ‘ವಿಕ್ರಾಂತ್ ರೋಣ’ ಚಿತ್ರದಲ್ಲಿ ಪಿಟಿ ಮೇಷ್ಟ್ರು ಪಾತ್ರದ ಮೂಲಕ ಗಮನ ಸೆಳೆದ ಕಲಾವಿದ ವಜ್ರಧೀರ್ ಜೈನ್. ಚಿತ್ರದಲ್ಲಿ ಲಾರೆನ್ಸ್ ಪಿಂಟೋ ಪಾತ್ರದ ಮೂಲಕ ಪ್ರೇಕ್ಷಕರಿಗೆ ಸಖತ್ ಮನರಂಜನೆ ನೀಡಿದ್ರು. ಅಚ್ಚುಕಟ್ಟಾದ ನಟನೆ ಮೂಲಕ ಗಮನ ಸೆಳೆದು ಪ್ರೇಕ್ಷಕರ ಮನಗೆದ್ದಿರುವ ಇವರು ಈಗ ಸ್ಯಾಂಡಲ್ ವುಡ್ ಅಂಗಳದಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. ಟೈಟಲ್ ಮೂಲಕವೇ ಗಮನ ಸೆಳೆದಿರೋ ‘ಬ್ಲಿಂಕ್’ ಸಿನಿಮಾದಲ್ಲಿ ಮತ್ತೊಂದು ದೊಡ್ಡ ಪಾತ್ರ ನಿಭಾಯಿಸಿದ್ದಾರೆ ವಜ್ರಧೀರ್ ಜೈನ್.
‘ರಾಜರಥ’ ಸಿನಿಮಾದಲ್ಲಿ ನಟಿಸಿದ್ದ ವಜ್ರಧೀರ್ ಜೈನ್, ‘ವಿಕ್ರಾಂತ್ ರೋಣ’ ಚಿತ್ರದ ಪಾತ್ರದ ಮೂಲಕ ಮನೆ ಮಾತಾಗಿದ್ದಾರೆ. ಮೂಲತಃ ರಂಗಭೂಮಿ ಕಲಾವಿದರಾದ ವಜ್ರಧೀರ್ ಜೈನ್ ಸಮಸ್ಟಿ ನಾಟಕ ತಂಡದಲ್ಲಿ ಹಲವು ವರ್ಷಗಳಿಂದ ಗುರುತಿಸಿಕೊಂಡಿದ್ದಾರೆ. ನೀನಾಸಂನಲ್ಲೂ ತರಬೇತಿ ಪಡೆದಿದ್ದಾರೆ. ಹಲವಾರು ನಾಟಕಗಳಲ್ಲಿ ಅಭಿನಯಿಸಿದ್ದಾರೆ. ‘ರಾಜರಥ’ ಸಿನಿಮಾ ಮೂಲಕ ಬೆಳ್ಳಿ ತೆರೆಗೆ ಎಂಟ್ರಿಕೊಟ್ಟ ಇವರು ವಿಜಯ ರಾಘವೇಂದ್ರ ಅಭಿನಯದ ‘ಮಾಲ್ಗುಡಿ ಡೇಸ್’ ಚಿತ್ರದಲ್ಲೂ ಅಭಿನಯಿಸಿದ್ದಾರೆ. ‘ವಿಕ್ರಾಂತ್ ರೋಣ’ ಸಿನಿಮಾ ದೊಡ್ಡ ಬ್ರೇಕ್ ನೀಡಿದ್ದು ನೈಜ ಅಭಿನಯ, ಪಾತ್ರವನ್ನು ಜೀವಿಸುವ ರೀತಿ ಎಲ್ಲವೂ ಪ್ರೇಕ್ಷಕರ ಶಿಳ್ಳೆ, ಚಪ್ಪಾಳೆಗೆ ಪಾತ್ರವಾಗಿದೆ.
ಸ್ಯಾಂಡಲ್ ವುಡ್ ನಲ್ಲಿ ಕ್ಯೂರಿಯಾಸಿಟಿ ಮೂಡಿಸಿರುವ ‘ಬ್ಲಿಂಕ್’ ಸಿನಿಮಾದಲ್ಲೂ ವಜ್ರಧೀರ್ ಜೈನ್ ನಟಿಸಿದ್ದಾರೆ. ಶ್ರೀನಿಧಿ ಬೆಂಗಳೂರು ನಿರ್ದೇಶನದ ಈ ಚಿತ್ರದಲ್ಲಿ ವಜ್ರಧೀರ್ ಜೈನ್ ಪ್ರಮುಖ ಪಾತ್ರವೊಂದಕ್ಕೆ ಬಣ್ಣ ಹಚ್ಚಿದ್ದಾರೆ. ಈ ಬಗ್ಗೆ ಚಿತ್ರದ ನಿರ್ದೇಶಕ ಶ್ರೀನಿಧಿ ಬೆಂಗಳೂರು ಮಾಹಿತಿ ಹಂಚಿಕೊಂಡಿದ್ದಾರೆ. ಅವರ ಜೊತೆ ಕೆಲಸ ಮಾಡಿದ್ದು ಒಂದು ಹೊಸ ಅನುಭವ ನೀಡಿದೆ. ‘ವಿಕ್ರಾಂತ್ ರೋಣ’ ಚಿತ್ರದಲ್ಲಿ ದೊಡ್ಡ ಪಾತ್ರ ನಿಭಾಯಿಸಿದ್ದಾರೆ ಎಂದು ನಮಗೆ ಗೊತ್ತಿರಲಿಲ್ಲ. ಅವರು ಕೂಡ ಈ ಬಗ್ಗೆ ಹೇಳಿ ಕೊಂಡಿರಲಿಲ್ಲ. ನಮಗೆ ನಾಟಕ ತಂಡದ ಮೂಲಕ ಅವರ ಪರಿಚಯವಾಗಿದ್ದು, ಬ್ಲಿಂಕ್ ನಲ್ಲೂ ಬಹಳ ಪ್ರಾಮುಖ್ಯತೆ ಇರೋ ಪಾತ್ರವನ್ನು ನಿಭಾಯಿಸಿದ್ದಾರೆ. ಪಾತ್ರವನ್ನು ತುಂಬಾ ಕ್ಯಾಚಿಯಾಗಿ, ಸೆಟಲ್ ಆಗಿ ನಿರ್ವಹಿಸಿದ್ದಾರೆ ಆ ಮೂಲಕ ಅವರ ಪಾತ್ರಕ್ಕೆ ತೂಕ ತಂದು ಕೊಟ್ಟಿದ್ದಾರೆ. ನೋಡುಗರಿಗೆ ಬಹಳ ಬೇಗ ಅವರ ಪಾತ್ರ ಕನೆಕ್ಟ್ ಆಗುತ್ತೆ. ಆದ್ರಿಂದಲೇ ಅವರ ಪಾತ್ರಕ್ಕೆ ಅರಿವು ಎಂದು ಹೆಸರಿಟ್ಟಿದ್ದೇವೆ ಎಂದು ನಿರ್ದೇಶಕ ಶ್ರೀನಿಧಿ ಬೆಂಗಳೂರು ಸಂತಸ ಹಂಚಿಕೊಂಡಿದ್ದಾರೆ.
‘ಬ್ಲಿಂಕ್’ ಸೈನ್ಸ್ ಫಿಕ್ಷನ್ ಚಿತ್ರವಾಗಿದ್ದು, ನವ ನಿರ್ದೇಶಕ ಶ್ರೀನಿಧಿ ಬೆಂಗಳೂರು ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರದ ಟೀಸರ್ ಬಿಡುಗಡೆಯಾಗಿ ಐದು ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡು ಭರವಸೆ ಮೂಡಿಸಿದೆ. ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಚಿತ್ರತಂಡ ನಿರತವಾಗಿದ್ದು, ಜನನಿ ಪಿಕ್ಚರ್ಸ್ ಬ್ಯಾನರ್ ನಡಿ ರವಿಚಂದ್ರ ಎ.ಜೆ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ಆರು ಪ್ರಮುಖ ಪಾತ್ರಗಳು ಟ್ರಾವೆಲ್ ಮಾಡಲಿದ್ದು, ದಿಯಾ ಖ್ಯಾತಿಯ ದೀಕ್ಷಿತ್, ವಜ್ರದೀರ್ ಜೈನ್, ಚೈತ್ರ ಜೆ ಆಚಾರ್, ಮಂದಾರ ಬಟ್ಟಲಹಳ್ಳಿ, ಗೋಪಾಲ ಕೃಷ್ಣ ದೇಶಪಾಂಡೆ, ಯಶಸ್ವಿನಿ ರಾವ್, ಕಿರಣ್ ನಾಯ್ಕ್, ಸುರೇಶ್ ಅನಗಳ್ಳಿ ಮುಖ್ಯ ತಾರಾಗಣದಲ್ಲಿದ್ದಾರೆ. ಅವಿನಾಶ ಶಾಸ್ತ್ರಿ ಛಾಯಾಗ್ರಾಹಣ, ಪ್ರಸನ್ನ ಕುಮಾರ್ ಮ್ಯೂಸಿಕ್, ಸಂಜೀವ್ ಜಗೀರ್ದಾರ್ ಸಂಕಲನ ಚಿತ್ರಕ್ಕಿದೆ.
ಭಾಷೆಯ ಗಡಿ ಎಂಬ ಎಲ್ಲೆಯನ್ನು ಮೀರಿದ್ದು ಸಿನಿಮಾ. ಅದರ ಉದ್ದೇಶ ಒಂದೇ ಮನರಂಜನೆ. ಇದೀಗ ಅದೇ ಮನರಂಜನೆ ಉದ್ದೇಶ ಇಟ್ಟುಕೊಂಡು ಉತ್ತರ ಕರ್ನಾಟಕದ ಜವಾರಿ ಭಾಷೆಯ ಘಮ ಹೊತ್ತ ‘ಬಯಲು ಸೀಮೆ’ ಸಿನಿಮಾ ಬಿಡುಗಡೆಗೆ ರೆಡಿಯಾಗಿದೆ
ವರುಣ್ ಕಟ್ಟೀಮನಿ ನಿರ್ದೇಶನದಲ್ಲಿ ಮೂಡಿ ಬಂದಿರುವ ‘ಬಯಲುಸೀಮೆ’ ಸಿನಿಮಾ ಹೆಸರೇ ಸೂಚಿಸುವಂತೆ ಪಕ್ಕಾ ಉತ್ತರ ಕರ್ನಾಟಕ ಸೊಗಡಿರುವ ಚಿತ್ರ. ರಗಡ್ ಕಥೆ ಈ ಸಿನಿಮಾದ ಜೀವಾಳ. ಪೊಲಿಟಿಕಲ್ ಕ್ರೈಂ ಥ್ರಿಲ್ಲರ್ ಸಬ್ಜೆಕ್ಟ್ ಚಿತ್ರದ ಕಥಾವಸ್ತು. ಎಂಬತ್ತರ ದಶಕ ಹಾಗೂ ಈಗಿನ ಕಾಲಘಟ್ಟವನ್ನಿಟ್ಟುಕೊಂಡು ಕಥೆ ಹೆಣೆದು ನಿರ್ದೇಶನ ಮಾಡಿದ್ದಾರೆ ವರುಣ್ ಕಟ್ಟೀಮನಿ. ಕಥೆಗೆ ತಕ್ಕಂತೆ ಸಾಕಷ್ಟು ಟ್ವಿಸ್ಟ್ ಟರ್ನ್ ಗಳು ಚಿತ್ರದಲ್ಲಿದ್ದು, ನೋಡುಗರನ್ನು ಥ್ರಿಲ್ ಗೊಳಿಸುವ ಕಥಾಹಂದರ ಸಿನಿಮಾದಲ್ಲಿದೆ. ಈಗಾಗಲೇ ಸಿನಿಮಾದ ಹಾಡುಗಳು ಬಿಡುಗಡೆಯಾಗಿ ಗಮನ ಸೆಳೆದಿವೆ. ಸೆನ್ಸಾರ್ ನಲ್ಲಿ ‘ಎ’ ಸರ್ಟಿಫಿಕೇಟ್ ಪಡೆದುಕೊಂಡಿರುವ ಈ ಸಿನಿಮಾ ಸದ್ಯದಲ್ಲೇ ತೆರೆ ಕಾಣೋದಕ್ಕೆ ರೆಡಿಯಾಗಿದೆ.
ವರುಣ್ ಕಟ್ಟೀಮನಿ ನಿರ್ದೇಶನದ ಜೊತೆಗೆ ಚಿತ್ರದಲ್ಲಿ ನಾಯಕ ನಟನಾಗಿ ನಟಿಸಿದ್ದು, ಸಂಯುಕ್ತ ಹೊರನಾಡು ನಾಯಕಿಯಾಗಿ ನಟಿಸಿದ್ದಾರೆ. ಆರ್ಮುಗಂ ರವಿಶಂಕರ್, ಟಿ.ಎಸ್ ನಾಗಾಭರಣ, ಯಶ್ ಶೆಟ್ಟಿ, ಭವಾನಿ ಪ್ರಕಾಶ್, ಅರ್ಚನಾ ಕೊಟ್ಟಿಗೆ, ಲಕ್ಷ್ಮೀ ನಾಡಗೌಡರ್, ಸಂತೋಷ್ ಉಪ್ಪಿನ್, ನಾಗರಾಜ ಭಟ್, ಮಹೇಶ್ ದೊಡ್ಡಕಲ್ನವರ್, ಪ್ರದೀಪ್ ರಾಜ್ ಸೇರಿದಂತೆ ಬಹುದೊಡ್ಡ ತಾರಾಗಣ ಚಿತ್ರದಲ್ಲಿದೆ.
ಈ ಸಿನಿಮಾ ಉತ್ತರ ಕರ್ನಾಟಕದ ಖಡಕ್ ಖಾನಾವಳಿ ಊಟ ಇದ್ದಂಗೆ. ಕಂಪ್ಲೀಟ್ ಸಿನಿಮಾ ಉತ್ತರ ಕರ್ನಾಟಕ ಸ್ಲ್ಯಾಂಗ್ ಇರುತ್ತೆ. ಎಲ್ಲಾ ಕಲಾವಿದರು ಆ ಸ್ಲ್ಯಾಂಗ್ ನಲ್ಲೇ ಡಬ್ ಮಾಡಿದ್ದಾರೆ. ಉತ್ತರ ಕರ್ನಾಟಕ ಭಾಗದ ಪೊಲಿಟಿಕಲ್, ಕ್ರೈಂ,ಅಲ್ಲಿನ ಸಂಸ್ಕೃತಿ ಎಲ್ಲವನ್ನು ಈ ಚಿತ್ರದಲ್ಲಿ ಕಟ್ಟಿಕೊಡಲಾಗಿದೆ. ಕಮರ್ಶಿಯಲ್ ಎಲಿಮೆಂಟ್ ಗಳನ್ನು ಇಟ್ಟುಕೊಂಡು ವಿಭಿನ್ನವಾಗಿ ಕಥೆಯನ್ನು ಹೇಳುವ ಪ್ರಯತ್ನ ಮಾಡಿದ್ದೇವೆ ಎಂದು ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ ನಿರ್ದೇಶಕ ವರುಣ್ ಕಟ್ಟೀಮನಿ.
ಗಾಯಿತ್ರಿ ದೇವಿ ಕ್ರಿಯೇಷನ್ಸ್ ಮತ್ತು ಪಿ ಆರ್ ಎಸ್ ಕ್ರಿಯೇಷನ್ಸ್ ಬ್ಯಾನರ್ ನಡಿ ಲಕ್ಷ್ಮಣ್ ಸಾ ಶಿಂಗ್ರಿ, ಶ್ರೀಧರ್ ಬಿದರಳ್ಳಿ, ರಶ್ಮೀ ವರುಣ್ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಗಜೇಂದ್ರಗಡ, ಬೀಳಗಿ, ಮುಂಬೈನಲ್ಲಿ ಚಿತ್ರವನ್ನು ಸೆರೆ ಹಿಡಿಯಲಾಗಿದ್ದು, ಸುಜಯ್ ಕುಮಾರ್ ಬಾವಿಕಟ್ಟಿ ಕ್ಯಾಮೆರಾವರ್ಕ್, ಮಾನಸಾ ಹೊಳ್ಳ ಸಂಗೀತ ನಿರ್ದೇಶನ, ಕಿರಣ್ ಕುಮಾರ್ ಸಂಕಲನ ಚಿತ್ರಕ್ಕಿದೆ.
ಶ್ರೀ ಜಗನ್ನಾಥ ದಾಸರು ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ್ದ ಚಿತ್ರತಂಡ ಈಗ “ಶ್ರೀ ಪ್ರಸನ್ನ ವೆಂಕಟ ದಾಸರು” ಎಂಬ ದಾಸಪರಂಪರೆ ಮತ್ತೊಬ್ಬ ದಾಸರ ಜೀವನ ಚರಿತ್ರೆ ಕುರಿತಾದ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಇತ್ತೀಚೆಗೆ ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮ ತೀರ್ಥರು “ಶ್ರೀ ಪ್ರಸನ್ನ ವೆಂಕಟ ದಾಸರು” ಚಿತ್ರದ ಟೀಸರ್ ಹಾಗೂ ಹಾಡುಗಳನ್ನು ಬಿಡುಗಡೆ ಮಾಡಿದರು. ಆನಂತರ ಚಿತ್ರತಂಡದ ಚಿತ್ರದ ಬಗ್ಗೆ ಮಾತನಾಡಿದರು.
ಈ ಹಿಂದೆ ಶ್ರೀ ಜಗನ್ನಾಥ ದಾಸರು ಚಿತ್ರವನ್ನು ನಿರ್ಮಿಸಿದ್ದ ನಮ್ಮ ತಂಡ ಇದೀಗ ಮತ್ತೋರ್ವ ದಾಸ ಶ್ರೇಷ್ಠ ರಾದ ಶ್ರೀ ಪ್ರಸನ್ನ ವೆಂಕಟ ದಾಸರ ಜೀವನವನ್ನು ತೆರೆ ಮೇಲೆ ತರುತ್ತಿದ್ದೇವೆ. ಚಿತ್ರ ಬಿಡುಗಡೆಗೆ ಸಿದ್ದಾವಾಗಿದೆ. ಫೆಬ್ರವರಿಯಲ್ಲಿ ಬಿಡುಗಡೆ ಮಾಡುವ ಸಿದ್ದತೆ ನಡೆಯುತ್ತಿದೆ. ಟೀಸರ್ ಹಾಗೂ ಹಾಡುಗಳನ್ನು ಬಿಡುಗಡೆ ಮಾಡಿಕೊಟ್ಟ ಶ್ರೀ ಸತ್ಯಾತ್ಮ ತೀರ್ಥರಿಗೆ ಅನಂತ ನಮಸ್ಕಾರಗಳನ್ನು ಸಲ್ಲಿಸುತ್ತೇನೆ ಎಂದರು ನಿರ್ದೇಶಕ ಮತ್ತು ನಿರ್ಮಾಪಕ ಮಧುಸೂದನ್ ಹವಾಲ್ದಾರ್.
ಪ್ರಸನ್ನ ವೆಂಕಟ ದಾಸರ ಪಾತ್ರಧಾರಿ ಪ್ರಭಂಜನ್ ದೇಶಪಾಂಡೆ ಮಾತನಾಡಿ, ಪ್ರಸನ್ನ ವೆಂಕಟದಾಸರ ಪಾತ್ರವನ್ನು ನಿರ್ವಹಿಸಿದ್ದು ನಿಜಕ್ಕೂ ನನ್ನ ಪುಣ್ಯ. ದಾಸ ಪರಂಪರೆಯಲ್ಲಿ ಪುರಂದರ ದಾಸರು, ಕನಕ ದಾಸರು ಇವರುಗಳ ಕುರಿತು ಚಿತ್ರ ಆಗಿದೆ. ಆದರೆ ಇನ್ನೂ ಸಾಕಷ್ಟು ದಾಸ ಶ್ರೇಷ್ಠರು ಇದ್ದಾರೆ. ಅವರಲ್ಲಿ ಶ್ರೀ ಪ್ರಸನ್ನ ವೆಂಕಟ ದಾಸರು ಒಬ್ಬರು. ದಾಸರಿಗೆ ಸ್ವತಃ ಶ್ರೀನಿವಾಸ ದೇವರೇ ಬಂದು ನಾಲಿಗೆ ಮೇಲೆ ಬೀಜಾಕ್ಷರಗಳನ್ನು ಬರೆದಿದ್ದರು. ಅವರ ಜೀವನದ ಪ್ರತಿಯೊಂದು ಅಮೂಲ್ಯ ಘಟನೆಯನ್ನು ಇಲ್ಲಿ ತೋರಿಸಿದ್ದೇವೆ. ಚಿತ್ರಕ್ಕಾಗಿ ನಾನು ದೈಹಿಕವಾಗಿ ಸಾಕಷ್ಟು ಬದಲಾವಣೆಗಳನ್ನು ಮಾಡಿಕೊಂಡಿದ್ದೇನೆ. ಇದು ಕೇವಲ ಕಥೆಯಲ್ಲ ಒಂದು ಭಕ್ತಿ ಕಥೆ. ದಾಸರ ಸರಣಿ ಚಿತ್ರಗಳನ್ನು ಮಾಡುವುದು ನಮ್ಮ ಯೋಜನೆಯಾಗಿದ್ದು ಇದು ಎರಡನೇ ಚಿತ್ರ. ಮುಂದಿನ ದಿನಗಳಲ್ಲಿ ಮತ್ತೊಬ್ಬ ದಾಸರ ಚಿತ್ರವನ್ನು ತರಲಿದ್ದೇವೆ ಎಂದರು.
ಚಿತ್ರದಲ್ಲಿ ಒಟ್ಟು10 ಹಾಡುಗಳಿವೆ 8 ಸಂಪೂರ್ಣ ಗೀತೆ. ಇನ್ನೆರಡು ಬಿಟ್ಸ್. ಇಲ್ಲಿ ದಾಸರ ಪದ್ಯಗಳನ್ನೇ ಬಳಸಿದ್ದೇವೆ. ಮೂಲ ಸಂಗೀತ ರಚನೆಗೆ ಚ್ಯುತಿ ಬರದಂತೆ ಟ್ಯೂನ್ ಗಳನ್ನು ಬಳಸಿಕೊಂಡಿದ್ದೇವೆ. ಅನಂತ್ ಕುಲಕರ್ಣಿ, ರಾಯಚೂರು ಶೇಷಗಿರಿ ದಾಸ್ ಮುಂತಾದವರು ಚಿತ್ರದಲ್ಲಿ ಹಾಡಿದ್ದಾರೆ ಎಂದು ಸಂಗೀತ ನಿರ್ದೇಶಕ ವಿಜಯ ಕೃಷ್ಣ ಮಾಹಿತಿ ನೀಡಿದರು.
ರಾಯಚೂರು, ಹಂಪಿ, ಆನೆಗುಂದಿ, ಬಾಗಲಕೋಟೆ ಮುಂತಾದ ಕಡೆ ಚಿತ್ರೀಕರಣ ನಡೆದಿದೆ. ‘ಮಾತಾಂಬುಜಾ ಮೂವೀಸ್’ ಬ್ಯಾನರ್ ಅಡಿಯಲ್ಲಿ ಮಧುಸೂದನ್ ಹವಾಲ್ದಾರ್, ಸುಧಾ ಸ್ವಾಮಿ ರಾವ್ ದೇಸಾಯಿ ನಿರ್ಮಾಣ ಮಾಡಿದ್ದಾರೆ. ಮಧುಸೂದನ್ ಹವಾಲ್ದಾರ್ ನಿರ್ದೇಶನ, ನಾರಾಯಣ ಸಿ ಛಾಯಾಗ್ರಹಣ, ಆರ್ ಡಿ ರವಿ ಸಂಕಲನವಿದೆ.
ಪ್ರಭಂಜನ್ ದೇಶಪಾಂಡೆ, ವಿಜಯಾನಂದ ನಾಯ್ಕ, ವಿಷ್ಣು ಜೋಶಿ, ಲಕ್ಷ್ಮೀ , ಸ್ವಾಮಿ ರಾವ್ ದೇಸಾಯಿ, ಶರತ್ ಕುಮಾರ್ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.
ಗಾಯಕನಾಗಿ, ಸಂಗೀತ ನಿರ್ದೇಶಕನಾಗಿ ಜನಮನಸೂರೆಗೊಂಡಿರುವ ಚಂದನ್ ಶೆಟ್ಟಿ, ಈಗ ನಾಯಕನಾಗೂ ಜನಪ್ರಿಯ. ಚಂದನ್ ಶೆಟ್ಟಿ ನಾಯಕರಾಗಿ ನಟಿಸುತ್ತಿರುವ ” ಸೂತ್ರಧಾರಿ” ಚಿತ್ರದ “ಡ್ಯಾಶ್” ಸಾಂಗ್ ಎ2 ಮ್ಯೂಸಿಕ್ ಮೂಲಕ ಬಿಡುಗಡೆಯಾಗಿದೆ. ಹೊಸವರ್ಷದ ಸಂಭ್ರಮಾಚರಣೆಗೆ ಇದು ಅದ್ಭುತ ಗೀತೆಯಾಗಲಿದೆ.
“ಸೂತ್ರಧಾರಿ” ಸಿನಿಮಾದ “ಡ್ಯಾಶ್” ಹಾಡು ಹೊಸವರ್ಷಕ್ಕೆ ನಮ್ಮ ಚಿತ್ರತಂಡದಿಂದ ಉಡುಗೊರೆ. “ಡ್ಯಾಶ್” ಎಂದರೆ ಏನು ಅಂತ ಎಲ್ಲಾ ಕೇಳುತ್ತಿದ್ದಾರೆ? ಡ್ಯಾಶ್ ಎಂದರೆ ಖಾಲಿ ಜಾಗ. ಅಲ್ಲಿ ನೀವು ಏನು ಬೇಕಾದರೂ ಬರೆದುಕೊಳ್ಳಬಹುದು. ಈ ಹಾಡಿಗೆ ಭಜರಂಗಿ ಮೋಹನ್ ನೃತ್ಯ ನಿರ್ದೇಶನ ಮಾಡಿದ್ದಾರೆ. ಸಂಜನಾ ಆನಂದ್ ಈ ಹಾಡಿಗೆ ನನ್ನ ಜೊತೆ ಹೆಜ್ಜೆ ಹಾಕಿದ್ದಾರೆ. ನಿರ್ಮಾಪಕ ನವರಸನ್ ಅದ್ದೂರಿಯಾಗಿ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ನಾನು ಹಾಗೂ ಚೇತನ್ ಕುಮಾರ್ ಈ ಹಾಡನ್ನು ಬರೆದಿದ್ದೇವೆ. ನಾನೇ ಸಂಗೀತ ನೀಡಿದ್ದೀನಿ. ಬಿಡುಗಡೆಯಾದ ಕೆಲವೇ ನಿಮಿಷಗಳಲ್ಲಿ ಒಂದುವರೆ ಲಕ್ಷಕ್ಕೂ ಅಧಿಕ ಜನರು ಈ ಹಾಡನ್ನು ವೀಕ್ಷಿಸಿದ್ದಾರೆ ಎಂದರು ಚಂದನ್ ಶೆಟ್ಟಿ.
ನಾನು ಮೊದಲ ಬಾರಿಗೆ ಸ್ಪೆಷಲ್ ಸಾಂಗ್ ಒಂದರಲ್ಲಿ ನಟಿಸಿದ್ದೇನೆ. ಚಂದನ್ ಶೆಟ್ಟಿ ಅವರ ಜೊತೆ ಡ್ಯಾನ್ಸ್ ಮಾಡಿರುವುದು ಖುಷಿಯಾಗಿದೆ. ಹಾಡು ಅದ್ಭುತವಾಗಿದೆ ಎಂದರು ಸಂಜನಾ ಆನಂದ್.
ಚಂದನ್ ಶೆಟ್ಟಿ ಅವರು ಹೊಸವರ್ಷಕ್ಕೆ ಹೊಸ ಹಾಡೊಂದನ್ನು ಬಿಡುಗಡೆ ಮಾಡುತ್ತಾರೆ. ಈ ಬಾರಿ ನಮ್ಮ ಚಿತ್ರದ ಹಾಡೊಂದನ್ನು ಹೊಸವರ್ಷಕ್ಕೆ ಬಿಡುಗಡೆ ಮಾಡುವ ಆಸೆಯಿತ್ತು. ಆದರೆ ಸಮಯ ಕಡಿಮೆ ಇತ್ತು. ಚಂದನ್ ಶೆಟ್ಟಿ ಅವರ ಬಳಿ ಈ ವಿಷಯ ಹೇಳಿದೆ. ಕೇವಲ ಎರಡು ದಿನಗಳ ಹಿಂದೆ ಈ ಹಾಡಿನ ಚಿತ್ರೀಕರಣವಾಗಿ ಈಗ ಬಿಡುಗಡೆಯಾಗಿದೆ. ಈ ಚಿತ್ರದ ನಾಯಕಿ ಅಪೂರ್ವ. ಆದರೆ ಈ ವಿಶೇಷ ಹಾಡಿಗೆ ಚಂದನ್ ಶೆಟ್ಟಿ ಅವರ ಜೊತೆ ಸಂಜನಾ ಆನಂದ್ ಹೆಜ್ಜೆ ಹಾಕಿದ್ದಾರೆ. ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದ ಎಂದರು ನಿರ್ಮಾಪಕ ನವರಸನ್.
ನಿರ್ದೇಶಕ ಕಿರಣ್ ಕುಮಾರ್ ಹಾಡಿನ ಬಗ್ಗೆ ಮಾಹಿತಿ ನೀಡಿದರು. ಚಿತ್ರದಲ್ಲಿ ಅಭಿನಯಿಸಿರುವ ಕಲಾವಿದರು ಹಾಗೂ ಛಾಯಾಗ್ರಾಹಕ ಪಿ.ಕೆ.ಹೆಚ್ ದಾಸ್ ಸೇರಿದಂತೆ ಅನೇಕ ತಂತ್ರಜ್ಞರು ಚಿತ್ರದ ಕುರಿತು ಮಾತನಾಡಿದರು.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಭಾ.ಮ.ಹರೀಶ್, ನಿರ್ಮಾಪಕರಾದ ಸಂಜಯ್ ಗೌಡ, ರವಿ ಗೌಡ, ಗೋವಿಂದರಾಜು, ರಾಜೇಶ್ ಮುಂತಾದವರು “ಸೂತ್ರಧಾರಿ” ಹಾಡಿಗೆ ಹಾರೈಸಿದರು.
ಕಿರುತೆರೆ ಸೂಪರ್ ಸ್ಟಾರ್ ಎಂದು ಖ್ಯಾತರಾಗಿರುವ ಬೇಬಿ ವಂಶಿಕಾ ಕೆಲವು ಸಮಯ ಕಾರ್ಯಕ್ರಮದ ನಿರೂಪಣೆ ಮಾಡಿದ್ದು ವಿಶೇಷವಾಗಿತ್ತು.
ವಿಶ್ವಮಟ್ಟದಲ್ಲಿ ಕನ್ನಡ ಚಿತ್ರಗಳು ಗುರುತಿಸಿಕೊಳ್ಳುತ್ತಿವೆ. ಈ ಸಾಲಿಗೆ ವಿಭಿನ್ನ ಕಥಾಹಂದರ ಹೊಂದಿರುವ “ಜ್ಯೂಲಿಯೆಟ್ 2” ಸಹ PL production ಬ್ಯಾನರ್ ನಡಿ ನಿರ್ಮಾಣವಾಗಿದೆ. ಇತ್ತೀಚೆಗೆ ಈ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದ್ದು, ಚಿತ್ರದ ಬಗ್ಗೆ ಕುತೂಹಲ ಹೆಚ್ಚಿಸಿದೆ.
“ನೆನಪಿರಲಿ” ಪ್ರೇಮ್ ಅಭಿನಯದ “ಪ್ರೇಮ ಪೂಜ್ಯಂ” ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಬೃಂದಾ ಆಚಾರ್ಯ “ಜ್ಯೂಲಿಯೆಟ್ 2” ಚಿತ್ರದಲ್ಲಿ ಜ್ಯೂಲಿಯೆಟ್ ಆಗಿ ಕಾಣಿಸಿಕೊಂಡಿದ್ದಾರೆ.
ಕ್ರೈಮ್ ಥ್ರಿಲ್ಲರ್ ಜಾನರ್ ನ ಈ ಚಿತ್ರವನ್ನು ವಿರಾಟ್ ಬಿ ಗೌಡ ನಿರ್ದೇಶಿಸಿದ್ದಾರೆ. ಕಥೆ, ಚಿತ್ರಕಥೆ ಕೂಡ ವಿರಾಟ್ ಅವರದೆ.
ಲಿಖಿತ್ ಆರ್ ಕೋಟ್ಯಾನ್ ನಿರ್ಮಿಸಿರುವ ಈ ಚಿತ್ರದ ಚಿತ್ರೀಕರಣ ಪೂರ್ಣವಾಗಿದೆ. ಮಂಗಳೂರು, ಬೆಳ್ತಂಗಡಿ ಹಾಗೂ ಅದರ ಸುತ್ತಲ್ಲಿನ ಅರಣ್ಯ ಪ್ರದೇಶದಲ್ಲಿ ಚಿತ್ರೀಕರಣ ನಡೆದಿದೆ.
ನಗರವಾಸಿಯಾದ ಮಗಳು, ತನ್ನ ತಂದೆಯ ಕೊನೆಯ ಆಸೆ ಈಡೇರಿಸಲು ಹುಟ್ಟೂರಿಗೆ ಹೋಗಿ ನೆಲೆಸುತ್ತಾಳೆ. ಅಲ್ಲಿ ಏನೆಲ್ಲಾ ಆಗುತ್ತದೆ ಹಾಗೂ ಹೆಣ್ಣು ಶಾಂತರೂಪಿಯಾದ ಶಾರದೆಯ ರೀತಿ ಇರುತ್ತಾಳೆ. ಆದರೆ ತನಗೆ ತೊಂದರೆಯಾದಾಗ ಆಕೆ ದುರ್ಗೆಯೂ ಆಗುತ್ತಾಳೆ ಎಂಬುದು ಈ ಚಿತ್ರದ ಕಥಾಹಂದರ.
ಬೃಂದಾ ಆಚಾರ್ಯ, ಅನೂಪ್ ಸಾಗರ್, ಖುಷ್ ಆಚಾರ್ಯ, ರವಿ, ರಾಧೇಶ್ ಶೆಣೈ, ಶ್ರೀಕಾಂತ್, ರಾಯ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
ಸಚಿನ್ ಬಸ್ರೂರ್ ಅವರ ಬಿ.ಜಿ.ಎಂ ಹಾಗೂ shanto v anto ಅವರ ಛಾಯಾಗ್ರಹಣ ಚಿತ್ರದ ಹೈಲೆಟ್ ಎಂದರೆ ತಪ್ಪಾಗಲಾರದು.
ಕನ್ನಡ, ತೆಲುಗು, ತಮಿಳು, ಮಲೆಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಈ ಚಿತ್ರ ನಿರ್ಮಾಣವಾಗಿದೆ. ಮೊದಲು “ಜ್ಯೂಲಿಯೆಟ್ 2” ಫೆಬ್ರವರಿ ವೇಳೆಗೆ ತೆರೆಗೆ ಬರಲಿದೆ. ಆನಂತರ ಮೊದಲ ಭಾಗ ಬಿಡುಗಡೆಯಾಗಲಿದೆ ಎಂದು ನಿರ್ದೇಶಕ ವಿರಾಟ್ ತಿಳಿಸಿದ್ದಾರೆ.
ಕನ್ನಡ ಚಿತ್ರರಂಗಕ್ಕೆ ಸದಭಿರುಚಿ ಚಿತ್ರಗಳನ್ನು ನೀಡಿರುವ ಸಂದೇಶ್ ಪ್ರೊಡಕ್ಷನ್ಸ್ ಸಂಸ್ಥೆ ಬ್ಯಾನರ್ ನಲ್ಲಿ ರಾಷ್ಟ್ರಪ್ರಶಸ್ತಿ ವಿಜೇತ ನಿರ್ಮಾಪಕ ಸಂದೇಶ್ ನಾಗರಾಜ್(ಎಂ.ಎಲ್.ಸಿ) ನಿರ್ಮಿಸಿರುವ, ಇಂಡಿಯನ್ ಮೈಕಲ್ ಜಾಕ್ಸನ್ ಪ್ರಭುದೇವ ನಾಯಕರಾಗಿ ನಟಿಸಿರುವ “wolf” ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಬಹುಕೋಟಿ ವೆಚ್ಚದಲ್ಲಿ ಅದ್ದೂರಿಯಾಗಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ಪಾಂಡಿಚೇರಿ, ಚೆನೈ, ಬೆಂಗಳೂರು, ಅಂಡಮಾನ್, ನಿಕೋಬಾರ್ ಮುಂತಾದ ಕಡೆ 65 ದಿನಗಳ ಚಿತ್ರೀಕರಣ ನಡೆದಿದೆ.
ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ವಿನು ವೆಂಕಟೇಶ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಕನ್ನಡ, ತಮಿಳು, ತೆಲುಗು ಹಾಗೂ ಮಲೆಯಾಳಂ ಭಾಷೆಗಳಲ್ಲಿ ಈ ಚಿತ್ರ ನಿರ್ಮಾಣವಾಗಿದೆ.
ಪ್ರಭುದೇವ, ಅಂಜು ಕುರಿಯನ್, ಲಕ್ಷ್ಮೀ ರೈ, ಅನಸೂಯ(ಪುಷ್ಪ ಖ್ಯಾತಿ) ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
ಅಂಬರೀಶ್ ಅವರ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ಅರುಳ್ ವಿನ್ಸೆಂಟ್ ಅವರ ಛಾಯಾಗ್ರಹಣವಿದೆ. ಲಾರೆನ್ಸ್ ಕಿಶೋರ್ ಸಂಕಲನ, ಪ್ರದೀಪ್ ದಿನೇಶ್ ಸಾಹಸ ನಿರ್ದೇಶನ, ಮಣಿ ಮೌಳಿ ಕಲಾ ನಿರ್ದೇಶನ ಹಾಗೂ ಗಣೇಶ್, ಶ್ರೀಧರ್, ಭೂಪತಿ ರಾಜ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ಪ್ತಸಾದ್ ನಿರ್ಮಾಣ ಮೇಲ್ವಿಚಾರಣೆ ಹಾಗೂ ಶಂಕರ್ ಲಿಂಗಂ, ಮೈಸೂರು ಸುರೇಶ್ ನಿರ್ಮಾಣ ನಿರ್ವಹಣೆ ಇದೆ.
ಬಿಡುಗಡೆಗೂ ಪೂರ್ವದಲ್ಲೇ ಸಾಕಷ್ಟು ಕುತೂಹಲ ಹುಟ್ಟಿಸಿರುವ ಹೊಸ ಪ್ರತಿಭೆಗಳ “ಪದವಿಪೂರ್ವ” ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ರೆಬಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಅಂಬರೀಶ್ “ಪದವಿಪೂರ್ವ” ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದ್ದಾರೆ.
ಈ ಚಿತ್ರದ ನಾಯಕ ಪೃಥ್ವಿ ಶಾಮನೂರು ಅವರ ಉತ್ಸಾಹ ನೋಡಿದರೆ ಖುಷಿಯಾಗುತ್ತಿದೆ. ಟ್ರೇಲರ್ ಚೆನ್ನಾಗಿದೆ. ಅರ್ಜುನ್ ಜನ್ಯ ಅವರ ಸಂಗೀತ ನಿರ್ದೇಶನ ಹಾಗೂ ರೀರೆಕಾರ್ಡಿಂಗ್ ಅದ್ಭುತವಾಗಿದೆ. ಎಲ್ಲಾ ಕಲಾವಿದರ ಅಭಿನಯ ಅಮೋಘವಾಗಿದೆ. ನಿರ್ದೇಶಕ ಹರಿಪ್ರಸಾದ್ ಮೊದಲ ಬಾರಿಗೆ ನಿರ್ದೇಶನ ಮಾಡಿದ್ದಾರೆ. ಯೋಗರಾಜ್ ಭಟ್ ಹಾಗೂ ರವಿ ಶಾಮನೂರು ನಿರ್ಮಾಣ ಮಾಡಿದ್ದಾರೆ. ಚಿತ್ರ ಭರ್ಜರಿ ಯಶಸ್ಸು ಕಾಣಲಿ ಎಂದರು ಅಭಿಷೇಕ್ ಅಂಬರೀಶ್.
ಈ ಚಿತ್ರದ ಟ್ರೇಲರ್ ಅಭಿಷೇಕ್ ಅವರಿಂದ ಬಿಡುಗಡೆ ಮಾಡಿಸಬೇಕೆಂಬುದು ನಾನು ಸೇರಿದಂತೆ ನಮ್ಮ ಚಿತ್ರತಂಡದ ಆಸೆಯಾಗಿತ್ತು. ಟ್ರೇಲರ್ ಬಿಡುಗಡೆ ಮಾಡಿಕೊಟ್ಟ ಅಭಿಷೇಕ್ ಅವರಿಗೆ ಧನ್ಯವಾದ. ಈ ಹೊಸತಂಡ, ಹೊಸತರಹದ ಪ್ರಮೋಷನ್ ಮೂಲಕ ಜನರನ್ನು ತಲುಪುವ ಪ್ರಯತ್ನ ಮಾಡುತ್ತಿದ್ದಾರೆ. ಡಿಸೆಂಬರ್ 30 ರಂದು ಚಿತ್ರ ಬಿಡುಗಡೆಯಾಗುತ್ತಿದೆ. ನೋಡಿ. ಪ್ರೋತ್ಸಾಹ ನೀಡಿ ಎಂದರು ಯೋಗರಾಜ್ ಭಟ್.
ಅಭಿಷೇಕ್ ಅಂಬರೀಶ್ ಟ್ರೇಲರ್ ಬಿಡುಗಡೆ ಮಾಡಿಕೊಟ್ಟಿದ್ದು ತುಂಬಾ ಸಂತೋಷವಾಗಿದೆ. ಪ್ರಮೋಷನ್ ಗಾಗಿ ರಾಜ್ಯದ ಬೇರೆಬೇರೆ ಊರುಗಳಿಗೆ ಹೋಗುತ್ತಿದ್ದೇವೆ. ಹೋದ ಕಡೆ ಎಲ್ಲಾ ನಮ್ಮನ್ನು ಗುರುತಿಸಿ, ಚಿತ್ರದ ಹಾಡುಗಳು ಹಾಗೂ ಟೀಸರ್ ಬಗ್ಗೆ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಬಿಡುಗಡೆಗೆ ಕೆಲವೇ ದಿನಗಳು ಬಾಕಿಯಿದೆ. ಎಲ್ಲರ ಬೆಂಬಲವಿರಲಿ ಎನ್ನುತ್ತಾರೆ ನಾಯಕ ಪೃಥ್ವಿ ಶಾಮನೂರು.
ಚಿತ್ರದ ಬಗ್ಗೆ ಈಗಾಗಲೇ ಸಾಕಷ್ಟು ಹೇಳಿದ್ದೇನೆ. ಇದೇ ಮೂವತ್ತರಂದು ಪ್ರೇಕ್ಷಕರ ಮಡಿಲಿಗೆ ಹಾಕುತ್ತಿದ್ದೇವೆ. ನಮ್ಮ ಚಿತ್ರವನ್ನು ಎಲ್ಲರು ನೋಡಿ ಎಂದರು ನಿರ್ದೇಶಕ ಹರಿಪ್ರಸಾದ್ ಜಯಣ್ಣ.
ನಾಯಕಿ ಅಂಜಲಿ ಅನೀಶ್, ಯಶಾ ಶಿವಕುಮಾರ್, ಛಾಯಾಗ್ರಾಹಕ ಸಂತೋಷ ರೈ ಪಾತಾಜೆ, ನೃತ್ಯ ನಿರ್ದೇಶಕ ಧನಂಜಯ್ ಹಾಗೂ ನಿರ್ಮಾಪಕ ರವಿ ಶಾಮನೂರು “ಪದವಿಪೂರ್ವ” ದ ಬಗ್ಗೆ ಮಾತನಾಡಿದರು.
ಈಗಾಗಲೇ ತನ್ನ ವಿಭಿನ್ನವಾದ ಟೈಟಲ್ ನಿಂದ ಗಮನ ಸೆಳೆದಿರುವ ‘ಅನ್ ಲಾಕ್ ರಾಘವ’ ಸಿನಿಮಾದ ಕ್ಲೈಮ್ಯಾಕ್ಸ್ ಚಿತ್ರೀಕರಣ ಜೋರಾಗಿ ಸಾಗಿದೆ. ಸತ್ಯ ಮತ್ತು ಮಯೂರ ಪಿಕ್ಚರ್ಸ್ ಬ್ಯಾನರ್ ನಡಿ ನಿರ್ಮಾಣವಾಗುತ್ತಿರುವ ಈ ಸಿನಿಮಾದ ಕ್ಲೈಮಾಕ್ಸ್ ಹಾಸ್ಯ ಲೇಪನದೊಂದಿಗೆ ಸಾಕಷ್ಟು ಅಚ್ಚರಿ ಮೂಡಿಸಲಿದೆ ಎನ್ನುತ್ತಿದೆ ಚಿತ್ರತಂಡ.
ದೀಪಕ್ ಮಧುವನಹಳ್ಳಿ ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ಮಿಲಿಂದ್ ನಾಯಕ ನಟನಾಗಿ ನಟಿಸುತ್ತಿದ್ದು, ನಾಯಕಿಯಾಗಿ ರೇಚಲ್ ಡೇವಿಡ್ ನಟಿಸುತ್ತಿದ್ದಾರೆ. ಕ್ಲೈಮ್ಯಾಕ್ಸ್ ಚಿತ್ರೀಕರಣದಲ್ಲಿ ನಾಯಕ, ನಾಯಕಿ ಒಳಗೊಂಡಂತೆ ಸಾಧುಕೋಕಿಲ, ಸುಂದರ್, ವೀಣಾ ಸುಂದರ್, ಶೋಭರಾಜ್, ಅವಿನಾಶ್ ಸೇರಿದಂತೆ ಹಲವು ಕಲಾವಿದರು ಪಾಲ್ಗೊಂಡಿದ್ದು, ಇದೇ ಸಂದರ್ಭದಲ್ಲಿ ಚಿತ್ರತಂಡ ಸಿನಿಮಾ ಬಗ್ಗೆ ಒಂದಷ್ಟು ಮಾಹಿತಿ ಹಂಚಿಕೊಂಡಿದೆ.
ಅನ್ ಲಾಕ್ ರಾಘವ ಚಿತ್ರದ ನಿರ್ದೇಶಕ ದೀಪಕ್ ಮಧುವನಹಳ್ಳಿ ಮಾತನಾಡಿ “ಕ್ಲೈಮ್ಯಾಕ್ಸ್ ಚಿತ್ರೀಕರಣ ನಡೆಯುತ್ತಿದೆ. ಎಂಟು ದಿನಗಳ ಕಾಲ ಕ್ಲೈಮಾಕ್ಸ್ ಚಿತ್ರೀಕರಣ ಯೋಜಿಸಿದ್ದು, ಇನ್ನು ಮೂರು ದಿನದಲ್ಲಿ ಕ್ಲೈಮ್ಯಾಕ್ಸ್ ಚಿತ್ರೀಕರಣ ಮುಗಿಯಲಿದೆ. ಎರಡು ಸಾಂಗ್ ಹಾಗೂ ಟಾಕಿ ಪೋಷನ್ ಮುಗಿಸಿದ್ರೆ ಸಿನಿಮಾ ಚಿತ್ರೀಕರಣ ಕಂಪ್ಲೀಟ್ ಆಗುತ್ತದೆ. ಒಟ್ಟು 50 ರಿಂದ 55 ದಿನ ಚಿತ್ರೀಕರಣ ಮಾಡಿದ್ದೇವೆ. ಎಲ್ಲಾ ಕಲಾವಿದರ ಕಾಂಬಿನೇಶನ್ ನಲ್ಲಿ ಕ್ಲೈಮ್ಯಾಕ್ಸ್ ಚಿತ್ರೀಕರಿಸುತ್ತಿದ್ದೇವೆ. ವಿನೋದ್ ಮಾಸ್ಟರ್ ಚಿತ್ರಕ್ಕೆ ಸಾಹಸ ನಿರ್ದೇಶನ ಮಾಡುತ್ತಿದ್ದಾರೆ. ಹೊಸ ರೀತಿಯ ಪ್ರಯತ್ನ ಸಿನಿಮಾದಲ್ಲಿದೆ. ಆಕ್ಷನ್ ಜೊತೆಗೆ ಹ್ಯೂಮರ್ ಕೂಡ ಇಡೀ ಸಿನಿಮಾದಲ್ಲಿ ಜೊತೆಯಾಗಿ ಟ್ರಾವೆಲ್ ಆಗಲಿದೆ. ಸಿನಿಮಾಗೆ ಏನೂ ಕೊರತೆ ಆಗದ ಹಾಗೆ ನಿರ್ಮಾಪಕರು ನೋಡಿಕೊಂಡಿದ್ದಾರೆ” ಎಂದು ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡರು.
ಚಿತ್ರದ ನಿರ್ಮಾಪಕ ಮಂಜುನಾಥ್.ಡಿ ಮಾತನಾಡಿ “ಒಳ್ಳೆಯ ಕಂಟೆಂಟ್ ಕೊಟ್ರೆ ಖಂಡಿತಾ ಜನ ಸಿನಿಮಾವನ್ನು ನೋಡ್ತಾರೆ, ಗೆಲ್ಲಿಸ್ತಾರೆ. ಈ ಸಿನಿಮಾದ ಕಂಟೆಂಟ್ ತುಂಬಾ ಚೆನ್ನಾಗಿದೆ, ಒಳ್ಳೆಯ ಕಲಾವಿದರು ಇದ್ದಾರೆ. ಗೆಲ್ತೀವಿ ಎನ್ನುವ ಕಾನ್ಫಿಡೆನ್ಸ್ ನಿಂದ ಹೆಜ್ಜೆ ಇಟ್ಟಿದ್ದೇವೆ. ಏಪ್ರಿಲ್ ನಂತರದಲ್ಲಿ ಸಿನಿಮಾ ಬಿಡುಗಡೆ ಮಾಡಲಿದ್ದೇವೆ ಎಂದು ತಿಳಿಸಿದರು.
ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕರಾದ ಡಿ.ಸತ್ಯಪ್ರಕಾಶ್ ಅವರು ಮಾತನಾಡಿ “ಖಂಡಿತವಾಗಿಯೂ, ಇಡೀ ಸಿನಿಮಾವನ್ನು ನಗ್ತಾ ನಗ್ತಾ ಸಿನಿಮಾ ನೋಡ್ತೀರ. ಸಬ್ಜೆಕ್ಟ್ ಬಹಳ ವಿಭಿನ್ನವಾಗಿದೆ. ದೊಡ್ಡ ದೊಡ್ಡ ಕಲಾವಿದರ ದಂಡೇ ಈ ಚಿತ್ರದಲ್ಲಿದೆ. ಸಾಧುಕೋಕಿಲ ಸರ್ ಪೂರ್ತಿ ಸಿನಿಮಾದಲ್ಲಿ ಕಾಣಿಸಿಕೊಳ್ತಾರೆ. ಇನ್ನು ಸುಂದರ್ ಸರ್ ಬಹಳ ವಿಭಿನ್ನ ಪಾತ್ರ ನಿರ್ವಹಿಸಿದ್ದಾರೆ. ಅವರ ಪಾತ್ರದ ವೈಶಿಷ್ಟ್ಯವನ್ನು ಫಿಲಂ ನೋಡಿನೇ ತಿಳ್ಕೋಬೇಕು. ವಿಶೇಷ ಅಂದರೆ ಎಲ್ಲ ಪಾತ್ರಗಳಿಗೂ ಅದರದ್ದೇ ಆದ ವಿಶೇಷತೆಗಳಿವೆ. ಇಡೀ ಫ್ಯಾಮಿಲಿ ಒಟ್ಟಾಗಿ ಕುಳಿತು ನೋಡುವ ಸಿನಿಮಾವಿದು. ಒಂದೊಳ್ಳೆ ಮೆಸೇಜ್ ಚಿತ್ರದಲ್ಲಿದೆ. ಇನ್ನು ನನ್ನ ದೀಪಕ್ ಅವರ ಸ್ನೇಹ 15 ವರ್ಷದ್ದು. ನಾನು ಕಥೆಯಲ್ಲಿ ಬರೆದಿರೋ ಹ್ಯೂಮರನ್ನು ದೀಪಕ್ ಚೆನ್ನಾಗಿ ತೆರೆ ಮೇಲೆ ತಂದಿದ್ದಾರೆ. ಇಡೀ ಸಿನಿಮಾ ಕಟ್ಟುವಾಗ ನಮ್ಮ ಜೊತೆ ಸಪೋರ್ಟಿವ್ ಆಗಿ ನಿಂತು ನಿರ್ಮಾಪಕರಾದ ಮಂಜುನಾಥ್ ಅವರು ಸಹಕಾರ ನೀಡಿದ್ದಾರೆ” ಎಂದು ಮಾಹಿತಿ ಹಂಚಿಕೊಂಡರು.
ನಾಯಕ ನಟ ಮಿಲಿಂದ್ ಮಾತನಾಡಿ “ಒಬ್ಬ ಹೀರೋ ಆಗಿ ನನಗೆ ಬಹಳ ಮುಖ್ಯವಾದ ಸಿನಿಮಾವಿದು. ಅದ್ಭುತವಾದ ಕಥೆ ಆಯ್ಕೆ ಮಾಡಿಕೊಂಡಿದ್ದೇನೆ. ಈ ಸಿನಿಮಾದ ಶಕ್ತಿ ಎಂದರೆ ಸತ್ಯ ಸರ್ ಬರವಣಿಗೆ. ಕಮರ್ಶಿಯಲ್ ಸಿನಿಮಾವಾದ್ರು ಕೂಡ ಜಾಸ್ತಿ ಹೊಡೆದಾಟ ಬಡಿದಾಟಕ್ಕೆ ಹೋಗಿಲ್ಲ. ಬದಲಾಗಿ ರೋಮ್ಯಾನ್ಸ್ ಮತ್ತು ಕಾಮಿಡಿ ಜಾನರ್ ಸಿನಿಮಾವಿದು ಅದಕ್ಕೆ ಹೆಚ್ಚು ಒತ್ತು ನೀಡಿದ್ದೇವೆ. ಮೊದಲ ಸಿನಿಮಾದಲ್ಲಿ ಪೆಟ್ಟು ತಿಂದಿದ್ದರಿಂದ, ಈ ಸಿನಿಮಾ ಮಾಡುವಾಗ ಒಂದು ಫಿಯರ್ ಇತ್ತು. ನಿರ್ದೇಶಕ ದೀಪಕ್ ಸರ್ ಅದನ್ನೆಲ್ಲ ಹೋಗಲಾಡಿಸಿ, ಸಾಕಷ್ಟು ತಿದ್ದಿದ್ದಾರೆ. ನಾನು ಈ ಸಿನಿಮಾ ಮಾಡೋದಕ್ಕೆ ಮುಖ್ಯ ಕಾರಣ ಅಂದ್ರೆ ನಮ್ಮ ತಂದೆ. ಅವರಿಗೆ ಸಿನಿಮಾ ಅಂದ್ರೆ ಪ್ಯಾಶನ್, ನಾನು ನಟನಾಗಬೇಕು ಎಂಬುದು ಅವರ ಆಸೆ. ಈ ಸಿನಿಮಾ ಜರ್ನಿಯಲ್ಲಿ ಪ್ರತಿ ಹಂತದಲ್ಲಿ ನನ್ನ ಜೊತೆ ನಿಂತಿದ್ದಾರೆ. ಈ ಸಿನಿಮಾ ಗೆಲ್ಲುತ್ತೆ ಎನ್ನುವ ಕಾನ್ಫಿಡೆನ್ಸ್ ಇದೆ“ ಎಂದರು.
ನಾಯಕ ನಟಿ, ರೇಚಲ್ ಡೇವಿಡ್ ಮಾತನಾಡಿ “ವಿಶೇಷವಾದಂತಹ ಪಾತ್ರ ನನ್ನದು. ಈಗ ಕ್ಲೈಮ್ಯಾಕ್ಸ್ ಚಿತ್ರೀಕರಣ ನಡೆಯುತ್ತಿದೆ. ಸಿನಿಮಾ ಇಲ್ಲಿವರೆಗೂ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಹಿರಿಯ ನಟರೊಂದಿಗೆ ನಟಿಸಿದ್ದು ಒಳ್ಳೆ ಅನುಭವ ನೀಡಿದೆ. ಚಿತ್ರದಲ್ಲಿ ಜಾನಕಿ ಹೆಸರಲ್ಲಿ ಆರ್ಕಿಯೋಲಜಿಸ್ಟ್ ಪಾತ್ರ ನಿರ್ವಹಿಸಿದ್ದೇನೆ” ಎಂದು ತಿಳಿಸಿದರು.
ಹಿರಿಯ ನಟ ಅವಿನಾಶ್ ಮಾತನಾಡಿ “ಇದು ಬಹಳ ಒಳ್ಳೆಯ ಕಥಾಹಂದರ ಇರುವ ಸಿನಿಮಾ. ಹಲವು ಕಲಾವಿದರು ಈ ಚಿತ್ರದಲ್ಲಿದ್ದೇವೆ. ಬೇರೆ ರೀತಿಯ ಕಥೆ ಮಾಡಿಕೊಂಡಿದ್ದಾರೆ. ಥ್ರಿಲ್ ಇದೆ, ಹ್ಯೂಮರ್ ಇದೆ, ವಿಡಂಬನಾತ್ಮಕವಾಗಿ ಸಿನಿಮಾ ಹೋಗುತ್ತೆ. ನಿರ್ದೇಶಕ ದೀಪಕ್ ಸಿನಿಮಾವನ್ನು ತುಂಬಾ ಚೆನ್ನಾಗಿ ನಿರ್ದೇಶಿಸಿದ್ದಾರೆ. ಈ ಸಿನಿಮಾ ನನಗೆ ಒಳ್ಳೆಯ ಅನುಭವ ನೀಡಿದೆ” ಎಂದು ತಿಳಿಸಿದರು.
‘ಅನ್ ಲಾಕ್ ರಾಘವ’ ಚಿತ್ರವನ್ನು ಸತ್ಯ ಹಾಗೂ ಮಯೂರ ಪಿಕ್ಚರ್ಸ್ ಬ್ಯಾನರ್ ನಡಿ ಮಂಜುನಾಥ್. ಡಿ, ಡಿ ಸತ್ಯಪ್ರಕಾಶ್ ಹಾಗೂ ಗಿರೀಶ್ ಕುಮಾರ್ ಜಂಟಿಯಾಗಿ ನಿರ್ಮಿಸುತ್ತಿದ್ದಾರೆ. ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಸತ್ಯಪ್ರಕಾಶ್ ಕಥೆ-ಚಿತ್ರಕಥೆ-ಸಂಭಾಷಣೆ ಬರೆದಿದ್ದಾರೆ. ಲವಿತ್ ಛಾಯಾಗ್ರಾಹಣ, ಅನೂಪ್ ಸೀಳಿನ್ ಸಂಗೀತ, ಅಜಯ್ ಕುಮಾರ್ ಸಂಕಲನ ಚಿತ್ರಕ್ಕಿದೆ. ಸಾಧುಕೋಕಿಲ, ಅವಿನಾಶ್, ರಮೇಶ್ ಭಟ್, ವೀಣಾ ಸುಂದರ್, ಸುಂದರ್, ಧರ್ಮಣ್ಣ ಕಡೂರು, ಸಾಯಿ ಕುಡ್ಲ, ಭೂಮಿ ಶೆಟ್ಟಿ ಚಿತ್ರದ ಪ್ರಮುಖ ತಾರಾಗಣದಲ್ಲಿದ್ದಾರೆ.
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಜೀವನವನ್ನು ಪಠ್ಯಪುಸ್ತಕದಲ್ಲಿ ಅಳವಡಿಸಿಕೊಳ್ಳಬೇಕು ಎನ್ನುವುದು ಅವರ ಅಭಿಮಾನಿಗಳ ಆಸೆಯಾಗಿತ್ತು. ಅಪ್ಪು ಅಭಿಮಾನಿ ಸಂಘಗಳು ಸರಕಾರಕ್ಕೂ ಪತ್ರ ಬರೆದಿದ್ದವು. ಶಿಕ್ಷಣ ಮಂತ್ರಿಗಳನ್ನು ಭೇಟಿ ಮಾಡಿ ಮನವಿಯನ್ನೂ ಸಲ್ಲಿಸಿದ್ದವು. ಅಭಿಮಾನಿಗಳಿಗೆ ಸಿಹಿ ಸುದ್ದಿ ಅಂದರೆ, ಬೆಂಗಳೂರು ವಿಶ್ವವಿದ್ಯಾಲಯವು ತನ್ನ ಬಿಕಾಂ ಪದವಿ ಮೂರನೇ ಸೆಮಿಸ್ಟರ್ ಕನ್ನಡ ಭಾಷಾ ಪಠ್ಯ ‘ವಾಣಿಜ್ಯ ಕನ್ನಡ 3’ ನಲ್ಲಿ ಪುನೀತ್ ಅವರ ಜೀವನದ ಆಯ್ದ ಭಾಗವನ್ನು ಪಠ್ಯಕ್ಕೆ ಅಳವಡಿಸಿಕೊಂಡಿದೆ.
ಪತ್ರಕರ್ತ ಡಾ.ಶರಣು ಹುಲ್ಲೂರು ಬರೆದ, ಸಾವಣ್ಣ ಪ್ರಕಾಶನ ಹೊರ ತಂದಿರುವ ‘ನೀನೇ ರಾಜಕುಮಾರ’ ಕೃತಿಯ ಒಂದು ಅಧ್ಯಾಯವಾದ ‘ಲೋಹಿತ್ ಎಂಬ ಮರಿಮುದ್ದ’ ಭಾಗವನ್ನು ಪಠ್ಯದಲ್ಲಿ ಬಳಸಿಕೊಂಡಿದೆ ಬೆಂಗಳೂರು ವಿಶ್ವವಿದ್ಯಾಲಯ. ಡಾ.ಮುನಿಯಪ್ಪ ಈ ಪಠ್ಯಪುಸ್ತಕದ ಪ್ರಧಾನ ಸಂಪಾದಕರಾಗಿದ್ದಾರೆ.
ಡಾ.ಅಮರೇಂದ್ರ ಶೆಟ್ಟಿ ಆರ್, ಡಾ.ಕ.ನಿಂ. ಹೊಯ್ಸಳಾದಿತ್ಯ, ಡಾ.ಶಿವರಾಜ ಬಿ.ಇ ಹಾಗೂ ಡಾ.ರಘುನಂದನ್ ಬಿ.ಆರ್ ಅವರು ಪಠ್ಯದ ಸಂಪಾದಕರಾಗಿದ್ದಾರೆ. ಈ ವರ್ಷದ ಬಿ.ಕಾಂ ಪದವಿ ಮೂರನೇ ಸೆಮಿಸ್ಟರ್ ಕನ್ನಡ ಭಾಷಾ ಪಠ್ಯದಲ್ಲಿ ಪುನೀತ್ ಅವರ ಬಾಲ್ಯವನ್ನು ಅಳವಡಿಸಲಾಗಿದೆ.
ಮೊನ್ನೆಯಷ್ಟೇ ‘ನೀನೇ ರಾಜಕುಮಾರ’ ಪುಸ್ತಕದ ನಾಲ್ಕನೇ ಆವೃತ್ತಿಯನ್ನು ಪುನೀತ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಬಿಡುಗಡೆ ಮಾಡಿದ್ದರು. ಈ ವರ್ಷದಲ್ಲಿ ಕನ್ನಡದಲ್ಲಿ ಅತೀ ಹೆಚ್ಚು ಮಾರಾಟ ಕಂಡ ಬಯೋಗ್ರಫಿ ಎನ್ನುವ ದಾಖಲೆಗೂ ಈ ಪುಸ್ತಕ ಪಾತ್ರವಾಗಿತ್ತು. ಸತತವಾಗಿ ಹಲವು ಪುಸ್ತಕ ಮಳಿಗೆಗಳಲ್ಲಿ ಮತ್ತು ಆನ್ ಲೈನ್ ನಲ್ಲಿ ಟಾಪ್ ಪಟ್ಟಿಯಲ್ಲಿತ್ತು. ಇದೀಗ ಪಠ್ಯಕ್ಕೂ ಕೃತಿಯ ಭಾಗವನ್ನು ಅಳವಡಿಸಿಕೊಳ್ಳಲಾಗಿದೆ.