ಕ್ಲೈಮ್ಯಾಕ್ಸ್ ಹಂತದಲ್ಲಿ ಅನ್ ಲಾಕ್ ರಾಘವ!

ಈಗಾಗಲೇ ತನ್ನ ವಿಭಿನ್ನವಾದ ಟೈಟಲ್ ನಿಂದ ಗಮನ ಸೆಳೆದಿರುವ ‘ಅನ್ ಲಾಕ್ ರಾಘವ’ ಸಿನಿಮಾದ ಕ್ಲೈಮ್ಯಾಕ್ಸ್ ಚಿತ್ರೀಕರಣ ಜೋರಾಗಿ ಸಾಗಿದೆ. ಸತ್ಯ ಮತ್ತು ಮಯೂರ ಪಿಕ್ಚರ್ಸ್ ಬ್ಯಾನರ್ ನಡಿ ನಿರ್ಮಾಣವಾಗುತ್ತಿರುವ ಈ ಸಿನಿಮಾದ ಕ್ಲೈಮಾಕ್ಸ್ ಹಾಸ್ಯ ಲೇಪನದೊಂದಿಗೆ ಸಾಕಷ್ಟು ಅಚ್ಚರಿ ಮೂಡಿಸಲಿದೆ ಎನ್ನುತ್ತಿದೆ ಚಿತ್ರತಂಡ.

ದೀಪಕ್ ಮಧುವನಹಳ್ಳಿ ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ಮಿಲಿಂದ್ ನಾಯಕ ನಟನಾಗಿ ನಟಿಸುತ್ತಿದ್ದು, ನಾಯಕಿಯಾಗಿ ರೇಚಲ್ ಡೇವಿಡ್ ನಟಿಸುತ್ತಿದ್ದಾರೆ. ಕ್ಲೈಮ್ಯಾಕ್ಸ್ ಚಿತ್ರೀಕರಣದಲ್ಲಿ ನಾಯಕ, ನಾಯಕಿ ಒಳಗೊಂಡಂತೆ ಸಾಧುಕೋಕಿಲ, ಸುಂದರ್, ವೀಣಾ ಸುಂದರ್, ಶೋಭರಾಜ್, ಅವಿನಾಶ್ ಸೇರಿದಂತೆ ಹಲವು ಕಲಾವಿದರು ಪಾಲ್ಗೊಂಡಿದ್ದು, ಇದೇ ಸಂದರ್ಭದಲ್ಲಿ ಚಿತ್ರತಂಡ ಸಿನಿಮಾ ಬಗ್ಗೆ ಒಂದಷ್ಟು ಮಾಹಿತಿ ಹಂಚಿಕೊಂಡಿದೆ.

ಅನ್ ಲಾಕ್ ರಾಘವ ಚಿತ್ರದ ನಿರ್ದೇಶಕ ದೀಪಕ್ ಮಧುವನಹಳ್ಳಿ ಮಾತನಾಡಿ “ಕ್ಲೈಮ್ಯಾಕ್ಸ್ ಚಿತ್ರೀಕರಣ ನಡೆಯುತ್ತಿದೆ. ಎಂಟು ದಿನಗಳ ಕಾಲ ಕ್ಲೈಮಾಕ್ಸ್ ಚಿತ್ರೀಕರಣ ಯೋಜಿಸಿದ್ದು, ಇನ್ನು ಮೂರು ದಿನದಲ್ಲಿ ಕ್ಲೈಮ್ಯಾಕ್ಸ್ ಚಿತ್ರೀಕರಣ ಮುಗಿಯಲಿದೆ. ಎರಡು ಸಾಂಗ್ ಹಾಗೂ ಟಾಕಿ ಪೋಷನ್ ಮುಗಿಸಿದ್ರೆ ಸಿನಿಮಾ ಚಿತ್ರೀಕರಣ ಕಂಪ್ಲೀಟ್ ಆಗುತ್ತದೆ. ಒಟ್ಟು 50 ರಿಂದ 55 ದಿನ ಚಿತ್ರೀಕರಣ ಮಾಡಿದ್ದೇವೆ. ಎಲ್ಲಾ ಕಲಾವಿದರ ಕಾಂಬಿನೇಶನ್ ನಲ್ಲಿ ಕ್ಲೈಮ್ಯಾಕ್ಸ್ ಚಿತ್ರೀಕರಿಸುತ್ತಿದ್ದೇವೆ. ವಿನೋದ್ ಮಾಸ್ಟರ್ ಚಿತ್ರಕ್ಕೆ ಸಾಹಸ ನಿರ್ದೇಶನ ಮಾಡುತ್ತಿದ್ದಾರೆ. ಹೊಸ ರೀತಿಯ ಪ್ರಯತ್ನ ಸಿನಿಮಾದಲ್ಲಿದೆ. ಆಕ್ಷನ್ ಜೊತೆಗೆ ಹ್ಯೂಮರ್ ಕೂಡ ಇಡೀ ಸಿನಿಮಾದಲ್ಲಿ ಜೊತೆಯಾಗಿ ಟ್ರಾವೆಲ್ ಆಗಲಿದೆ. ಸಿನಿಮಾಗೆ ಏನೂ ಕೊರತೆ ಆಗದ ಹಾಗೆ ನಿರ್ಮಾಪಕರು ನೋಡಿಕೊಂಡಿದ್ದಾರೆ” ಎಂದು ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡರು.

ಚಿತ್ರದ ನಿರ್ಮಾಪಕ ಮಂಜುನಾಥ್.ಡಿ ಮಾತನಾಡಿ “ಒಳ್ಳೆಯ ಕಂಟೆಂಟ್ ಕೊಟ್ರೆ ಖಂಡಿತಾ ಜನ ಸಿನಿಮಾವನ್ನು ನೋಡ್ತಾರೆ, ಗೆಲ್ಲಿಸ್ತಾರೆ. ಈ ಸಿನಿಮಾದ ಕಂಟೆಂಟ್ ತುಂಬಾ ಚೆನ್ನಾಗಿದೆ, ಒಳ್ಳೆಯ ಕಲಾವಿದರು ಇದ್ದಾರೆ. ಗೆಲ್ತೀವಿ ಎನ್ನುವ ಕಾನ್ಫಿಡೆನ್ಸ್ ನಿಂದ ಹೆಜ್ಜೆ ಇಟ್ಟಿದ್ದೇವೆ. ಏಪ್ರಿಲ್ ನಂತರದಲ್ಲಿ ಸಿನಿಮಾ ಬಿಡುಗಡೆ ಮಾಡಲಿದ್ದೇವೆ ಎಂದು ತಿಳಿಸಿದರು.

ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕರಾದ ಡಿ.ಸತ್ಯಪ್ರಕಾಶ್ ಅವರು ಮಾತನಾಡಿ “ಖಂಡಿತವಾಗಿಯೂ, ಇಡೀ ಸಿನಿಮಾವನ್ನು ನಗ್ತಾ ನಗ್ತಾ ಸಿನಿಮಾ ನೋಡ್ತೀರ. ಸಬ್ಜೆಕ್ಟ್ ಬಹಳ ವಿಭಿನ್ನವಾಗಿದೆ. ದೊಡ್ಡ ದೊಡ್ಡ ಕಲಾವಿದರ ದಂಡೇ ಈ ಚಿತ್ರದಲ್ಲಿದೆ. ಸಾಧುಕೋಕಿಲ ಸರ್ ಪೂರ್ತಿ ಸಿನಿಮಾದಲ್ಲಿ ಕಾಣಿಸಿಕೊಳ್ತಾರೆ. ಇನ್ನು ಸುಂದರ್ ಸರ್ ಬಹಳ ವಿಭಿನ್ನ ಪಾತ್ರ ನಿರ್ವಹಿಸಿದ್ದಾರೆ. ಅವರ ಪಾತ್ರದ ವೈಶಿಷ್ಟ್ಯವನ್ನು ಫಿಲಂ ನೋಡಿನೇ ತಿಳ್ಕೋಬೇಕು. ವಿಶೇಷ ಅಂದರೆ ಎಲ್ಲ ಪಾತ್ರಗಳಿಗೂ ಅದರದ್ದೇ ಆದ ವಿಶೇಷತೆಗಳಿವೆ. ಇಡೀ ಫ್ಯಾಮಿಲಿ ಒಟ್ಟಾಗಿ ಕುಳಿತು ನೋಡುವ ಸಿನಿಮಾವಿದು. ಒಂದೊಳ್ಳೆ ಮೆಸೇಜ್ ಚಿತ್ರದಲ್ಲಿದೆ. ಇನ್ನು ನನ್ನ ದೀಪಕ್ ಅವರ ಸ್ನೇಹ 15 ವರ್ಷದ್ದು. ನಾನು ಕಥೆಯಲ್ಲಿ ಬರೆದಿರೋ ಹ್ಯೂಮರನ್ನು ದೀಪಕ್ ಚೆನ್ನಾಗಿ ತೆರೆ ಮೇಲೆ ತಂದಿದ್ದಾರೆ. ಇಡೀ ಸಿನಿಮಾ ಕಟ್ಟುವಾಗ ನಮ್ಮ ಜೊತೆ ಸಪೋರ್ಟಿವ್ ಆಗಿ ನಿಂತು ನಿರ್ಮಾಪಕರಾದ ಮಂಜುನಾಥ್ ಅವರು ಸಹಕಾರ ನೀಡಿದ್ದಾರೆ” ಎಂದು ಮಾಹಿತಿ ಹಂಚಿಕೊಂಡರು.

ನಾಯಕ ನಟ ಮಿಲಿಂದ್ ಮಾತನಾಡಿ “ಒಬ್ಬ ಹೀರೋ ಆಗಿ ನನಗೆ ಬಹಳ ಮುಖ್ಯವಾದ ಸಿನಿಮಾವಿದು. ಅದ್ಭುತವಾದ ಕಥೆ ಆಯ್ಕೆ ಮಾಡಿಕೊಂಡಿದ್ದೇನೆ. ಈ ಸಿನಿಮಾದ ಶಕ್ತಿ ಎಂದರೆ ಸತ್ಯ ಸರ್ ಬರವಣಿಗೆ. ಕಮರ್ಶಿಯಲ್ ಸಿನಿಮಾವಾದ್ರು ಕೂಡ ಜಾಸ್ತಿ ಹೊಡೆದಾಟ ಬಡಿದಾಟಕ್ಕೆ ಹೋಗಿಲ್ಲ. ಬದಲಾಗಿ ರೋಮ್ಯಾನ್ಸ್ ಮತ್ತು ಕಾಮಿಡಿ ಜಾನರ್ ಸಿನಿಮಾವಿದು ಅದಕ್ಕೆ ಹೆಚ್ಚು ಒತ್ತು ನೀಡಿದ್ದೇವೆ. ಮೊದಲ ಸಿನಿಮಾದಲ್ಲಿ ಪೆಟ್ಟು ತಿಂದಿದ್ದರಿಂದ, ಈ ಸಿನಿಮಾ ಮಾಡುವಾಗ ಒಂದು ಫಿಯರ್ ಇತ್ತು. ನಿರ್ದೇಶಕ ದೀಪಕ್ ಸರ್ ಅದನ್ನೆಲ್ಲ ಹೋಗಲಾಡಿಸಿ, ಸಾಕಷ್ಟು ತಿದ್ದಿದ್ದಾರೆ. ನಾನು ಈ ಸಿನಿಮಾ ಮಾಡೋದಕ್ಕೆ ಮುಖ್ಯ ಕಾರಣ ಅಂದ್ರೆ ನಮ್ಮ ತಂದೆ. ಅವರಿಗೆ ಸಿನಿಮಾ ಅಂದ್ರೆ ಪ್ಯಾಶನ್, ನಾನು ನಟನಾಗಬೇಕು ಎಂಬುದು ಅವರ ಆಸೆ. ಈ ಸಿನಿಮಾ ಜರ್ನಿಯಲ್ಲಿ ಪ್ರತಿ ಹಂತದಲ್ಲಿ ನನ್ನ ಜೊತೆ ನಿಂತಿದ್ದಾರೆ. ಈ ಸಿನಿಮಾ ಗೆಲ್ಲುತ್ತೆ ಎನ್ನುವ ಕಾನ್ಫಿಡೆನ್ಸ್ ಇದೆ“ ಎಂದರು.

ನಾಯಕ ನಟಿ, ರೇಚಲ್ ಡೇವಿಡ್ ಮಾತನಾಡಿ “ವಿಶೇಷವಾದಂತಹ ಪಾತ್ರ ನನ್ನದು. ಈಗ ಕ್ಲೈಮ್ಯಾಕ್ಸ್ ಚಿತ್ರೀಕರಣ ನಡೆಯುತ್ತಿದೆ. ಸಿನಿಮಾ ಇಲ್ಲಿವರೆಗೂ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಹಿರಿಯ ನಟರೊಂದಿಗೆ ನಟಿಸಿದ್ದು ಒಳ್ಳೆ ಅನುಭವ ನೀಡಿದೆ. ಚಿತ್ರದಲ್ಲಿ ಜಾನಕಿ ಹೆಸರಲ್ಲಿ ಆರ್ಕಿಯೋಲಜಿಸ್ಟ್ ಪಾತ್ರ ನಿರ್ವಹಿಸಿದ್ದೇನೆ” ಎಂದು ತಿಳಿಸಿದರು.

ಹಿರಿಯ ನಟ ಅವಿನಾಶ್ ಮಾತನಾಡಿ “ಇದು ಬಹಳ ಒಳ್ಳೆಯ ಕಥಾಹಂದರ ಇರುವ ಸಿನಿಮಾ. ಹಲವು ಕಲಾವಿದರು ಈ ಚಿತ್ರದಲ್ಲಿದ್ದೇವೆ. ಬೇರೆ ರೀತಿಯ ಕಥೆ ಮಾಡಿಕೊಂಡಿದ್ದಾರೆ. ಥ್ರಿಲ್ ಇದೆ, ಹ್ಯೂಮರ್ ಇದೆ, ವಿಡಂಬನಾತ್ಮಕವಾಗಿ ಸಿನಿಮಾ ಹೋಗುತ್ತೆ. ನಿರ್ದೇಶಕ ದೀಪಕ್ ಸಿನಿಮಾವನ್ನು ತುಂಬಾ ಚೆನ್ನಾಗಿ ನಿರ್ದೇಶಿಸಿದ್ದಾರೆ. ಈ ಸಿನಿಮಾ ನನಗೆ ಒಳ್ಳೆಯ ಅನುಭವ ನೀಡಿದೆ” ಎಂದು ತಿಳಿಸಿದರು.

‘ಅನ್ ಲಾಕ್ ರಾಘವ’ ಚಿತ್ರವನ್ನು ಸತ್ಯ ಹಾಗೂ ಮಯೂರ ಪಿಕ್ಚರ್ಸ್ ಬ್ಯಾನರ್ ನಡಿ ಮಂಜುನಾಥ್. ಡಿ, ಡಿ ಸತ್ಯಪ್ರಕಾಶ್ ಹಾಗೂ ಗಿರೀಶ್ ಕುಮಾರ್ ಜಂಟಿಯಾಗಿ ನಿರ್ಮಿಸುತ್ತಿದ್ದಾರೆ. ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಸತ್ಯಪ್ರಕಾಶ್ ಕಥೆ-ಚಿತ್ರಕಥೆ-ಸಂಭಾಷಣೆ ಬರೆದಿದ್ದಾರೆ. ಲವಿತ್ ಛಾಯಾಗ್ರಾಹಣ, ಅನೂಪ್ ಸೀಳಿನ್ ಸಂಗೀತ, ಅಜಯ್ ಕುಮಾರ್ ಸಂಕಲನ ಚಿತ್ರಕ್ಕಿದೆ. ಸಾಧುಕೋಕಿಲ, ಅವಿನಾಶ್, ರಮೇಶ್ ಭಟ್, ವೀಣಾ ಸುಂದರ್, ಸುಂದರ್, ಧರ್ಮಣ್ಣ ಕಡೂರು, ಸಾಯಿ ಕುಡ್ಲ, ಭೂಮಿ ಶೆಟ್ಟಿ ಚಿತ್ರದ ಪ್ರಮುಖ ತಾರಾಗಣದಲ್ಲಿದ್ದಾರೆ.

Related Posts

error: Content is protected !!