ವಿಷ್ಣು ಮಂಚು ಅಭಿನಯದ ಮಹತ್ವಾಕಾಂಕ್ಷೆಯ ಚಿತ್ರವಾದ ‘ಕಣ್ಣಪ್ಪ – ದಿ ಗ್ರೇಟ್ ಎಪಿಕ್ ಇಂಡಿಯನ್ ಟೇಲ್’ ಕುರಿತು ಈಗಾಗಲೇ ಪ್ರೇಕ್ಷಕರ ವಲಯದಲ್ಲಿ ಸಾಕಷ್ಟು ಕುತೂಹಲ ಮತ್ತು ನಿರೀಕ್ಷೆಗಳಿವೆ. ಅದಕ್ಕೆ ಒಂದು ಪ್ರಮುಖ ಕಾರಣ ಚಿತ್ರದ ತಾರಾಗಣ. ‘ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್ ಪ್ರಭಾಸ್ ಮತ್ತು ಮಲಯಾಳಂ ಚಿತ್ರರಂಗದ ಜನಪ್ರಿಯ ನಟ ಮೋಹನ್ ಲಾಲ್, ಈ ಚಿತ್ರದಲ್ಲಿ ನಟಿಸುತ್ತಿರುವುದು ಈಗಾಗಲೇ ಸುದ್ದಿಯಾಗಿದೆ. ಈಗ ಶಿವರಾಜಕುಮಾರ್ ಸಹ ಈ ಚಿತ್ರಕ್ಕೆ ಸೇರ್ಪಡೆಯಾಗಿದ್ದಾರೆ.
ಶಿವರಾಜ್‍ಕುಮಾರ್ ಅವರಿಗೂ, ಕಣ್ಣಪ್ಪನಿಗೂ ಬಹಳ ಹಳೆಯ ನಂಟು. ಹಲವು ವರ್ಷಗಳ ಹಿಂದೆ ಶಿವರಾಜ್‍ಕುಮಾರ್ ಅವರು, ‘ಶಿವ ಮೆಚ್ಚಿದ ಕಣ್ಣಪ್ಪ’ ಚಿತ್ರದಲ್ಲಿ ಮೊದಲು ದಿಣ್ಣನಾಗಿ, ಆ ನಂತರ ಶಿವನ ಅನುಗ್ರಹಕ್ಕೆ ಪಾತ್ರವಾಗುವ ಕಣ್ಣಪ್ಪನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈಗ ಅದೇ ಪಾತ್ರವನ್ನು ತೆಲುಗಿನಲ್ಲಿ ವಿಷ್ಣು ಮಂಚು ಮಾಡುತ್ತಿದ್ದಾರೆ ಎನ್ನುವುದು ವಿಶೇಷ. ‘ಕಣ್ಣಪ್ಪ’ ಚಿತ್ರದಲ್ಲಿ ಶಿವರಾಜ್‍ಕುಮಾರ್ ಅವರ ಪಾತ್ರವೇನು? ಎಂಬ ವಿಷಯವನ್ನು ಚಿತ್ರತಂಡ ಸದ್ಯಕ್ಕೆ ರಹಸ್ಯವಾಗಿಟ್ಟಿದೆ. ಆದರೆ, ಶಿವಣ್ಣ ಅವರ ಪಾತ್ರ ಇಡೀ ಚಿತ್ರದ ಹೈಲೈಟ್ ಆಗಲಿದ್ದು, ಅಭಿಮಾನಿಗಳಿಗೆ ಬಹಳ ಇಷ್ಟವಾಗಲಿದೆ ಎಂಬುದು ಚಿತ್ರತಂಡದ ಅಭಿಪ್ರಾಯ.
ಈ ಹಿಂದೆ ಸ್ಟಾರ್ ಪ್ಲಸ್ ವಾಹಿನಿಗಾಗಿ ‘ಮಹಾಭಾರತ’ ಸರಣಿಯನ್ನು ನಿರ್ದೇಶಿಸಿದ್ದ ಮುಕೇಶ್ ಕುಮಾರ್ ಸಿಂಗ್, ಈ ಪೌರಾಣಿಕ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಹಿರಿಯ ನಟ ಮತ್ತು ನಿರ್ಮಾಪಕ ಡಾ. ಮೋಹನ್ ಬಾಬು ನಿರ್ಮಿಸುತ್ತಿರುವ ಶಿವನ ಅಚಲ ಭಕ್ತನಾದ ಕಣ್ಣಪ್ಪನ ಕಾಲಾತೀತ ಕಥೆಯ ಚಿತ್ರೀಕರಣ ಈಗಾಗಲೇ ನ್ಯೂಜಿಲ್ಯಾಂಡ್‍ನಲ್ಲಿ ಪ್ರಾರಂಭವಾಗಿದೆ.
ಸಂದೇಶ್ ಪ್ರೊಡಕ್ಷನ್ಸ್ ನಲ್ಲಿ ಸಂದೇಶ್ ನಾಗರಾಜ್ ಅರ್ಪಿಸುವ, ಸಂದೇಶ್ ಎನ್ ನಿರ್ಮಾಣದ ಹಾಗೂ ಶ್ರೀನಿ ನಿರ್ದೇಶನದಲ್ಲಿ ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ನಾಯಕರಾಗಿ ನಟಿಸಿರುವ ಬಹು ನಿರೀಕ್ಷಿತ “ಘೋಸ್ಟ್” ಚಿತ್ರ ಅಕ್ಟೋಬರ್ 19ರಂದು ಬಿಡುಗಡೆಯಾಗುತ್ತಿದೆ.
ಈ ಚಿತ್ರಕ್ಕೆ ಶುಭಕೋರಿ ಅಕ್ಟೋಬರ್ 18ರ ಬುಧವಾರ ಮಧ್ಯಾಹ್ನ 3 ಗಂಟೆಗೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಅದ್ದೂರಿ ಮೆರವಣಿಗೆ ನಡೆಯಲಿದೆ.
ಜ್ವಾಲಾಮುಖಿ ಡಾ.ರಾಜಕುಮಾರ್ ಅಭಿಮಾನಿಗಳ ಬಳಗ ಈ ಅದ್ದೂರಿ ಮೆರವಣಿಗೆ ಆಯೋಜಿಸಿದೆ. ಡೋಲು, ನಗರಿ, ಕೇರಳದ ಚಂಡೆ, ತಮಟೆ ಮೊದಲಾದ ವಾದ್ಯಗಳು, ಜಾನಪದ ಕಲಾ ತಂಡಗಳು, ನೂರೈವತ್ತಕ್ಕೂ ಆಟೋಗಳಲ್ಲಿ ನಕ್ಷತ್ರಗಳು ಈ ಮೆರವಣಿಗೆಯ ಪ್ರಮುಖ ಆಕರ್ಷಣೆ. ಸಾವಿರಾರು ಅಭಿಮಾನಿಗಳು ಪಾಲ್ಗೊಳ್ಳಲಿದ್ದಾರೆ.
ಮೈಸೂರಿನ ಇಟ್ಟಿಗೆಗೂಡಿನಿಂದ ಆರಂಭವಾಗುವ ಮೆರವಣಿಗೆ ಡಿಸಿ ಕಛೇರಿ ಮೂಲಕ ಸಾಗಿ ವುಡ್ ಲ್ಯಾಂಡ್ಸ್ ಚಿತ್ರಮಂದಿರ ತಲುಪಲಿದೆ. ಕರುನಾಡ ಚಕ್ರವರ್ತಿ ಡಾ.ಶಿವರಾಜಕುಮಾರ್, ನಿರ್ಮಾಪಕರಾದ ಸಂದೇಶ್ ಮುಂತಾದವರು ಈ ಅದ್ದೂರಿ ಮೆರವಣಿಗೆಯಲ್ಲಿ ಭಾಗವಹಿಸಲಿದ್ದಾರೆ.
ಮೈಸೂರಿನಲ್ಲಿ ಈಗ ದಸರಾ ಸಡಗರ. ಅದರೊಂದಿಗೆ “ಘೋಸ್ಟ್” ಚಿತ್ರ ಸಹ ಬಿಡುಗಡೆಯಾಗುತ್ತಿದ್ದು, ಅಭಿಮಾನಿಗಳ ಆನಂದವನ್ನು ಮತ್ತಷ್ಟು ಹೆಚ್ಚಿಸಲಿದೆ.
ಸಾಯಿ ರಮೇಶ್ ಪ್ರೊಡಕ್ಷನ್ಸ್ ನಲ್ಲಿ ಕೆ.ರಮೇಶ್ ಹಾಗೂ ಬಿ.ಭೈರಪ್ಪ ಮೈಸೂರು ನಿರ್ಮಿಸುತ್ತಿರುವ ಹಾಗೂ ರಾಮ್ ಜನಾರ್ದನ್ ನಿರ್ದೇಶನದ “ಭಗೀರಥ” ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ.
ಮೈಸೂರು, ಮಡಿಕೇರಿ, ಸಕಲೇಶಪುರ, ಮಂಗಳೂರು ಸುತ್ತಮುತ್ತ ಚಿತ್ರಕ್ಕೆ 25 ದಿನಗಳ ಕಾಲ ಒಂದೇ ಹಂತದ ಚಿತ್ರೀಕರಣವಾಗಿದೆ. ಸದ್ಯ ಚಿತ್ರೀಕರಣ ಮುಕ್ತಾಯವಾಗಿದ್ದು, ಪೋಸ್ಟ್ ಪ್ರೊಡಕ್ಷನ್ ವರ್ಕ್ ನಡೆಯುತ್ತಿದೆ. ನವೆಂಬರ್ ನಲ್ಲಿ ಚಿತ್ರವನ್ನು ತೆರೆಗೆ ತರುವ ಪ್ರಯತ್ನ ನಡೆಯುತ್ತಿದೆ ಎಂದು ನಿರ್ದೇಶಕ ರಾಮ್ ಜನಾರ್ದನ್ ತಿಳಿಸಿದ್ದಾರೆ.
ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ನಾಲ್ಕು ಸಾಹಸ ಸನ್ನಿವೇಶಗಳಿದೆ ಥ್ರಿಲ್ಲರ್ ಮಂಜು ಸಾಹಸ ಸಂಯೋಜನೆ ಮಾಡಿದ್ದಾರೆ. ಪ್ರದೀಪ್ ವರ್ಮ ಸಂಗೀತ ನಿರ್ದೇಶನ, ಅಕುಲ್ ನೃತ್ಯ ನಿರ್ದೇಶನ, ಸೂರಿ ಚಿತ್ತೂರು ಛಾಯಾಗ್ರಹಣ, ರವಿಚಂದ್ರನ್ ಸಂಕಲನ ಹಾಗೂ ಮೋಹನ್ ರಾಸು ಅವರ ಸಹ ನಿರ್ದೇಶನ “ಭಗೀರಥ” ಚಿತ್ರಕ್ಕಿದೆ.
ಜಯಪ್ರಕಾಶ್, ಚಂದನ ರಾಘವೇಂದ್ರ, ಸುಧಾ ಬೆಳವಾಡಿ, ಶಿವರಾಜ್ ಕೆ.ಆರ್ ಪೇಟೆ, ರವಿಕಾಳೆ, ಶ್ರೀನಿವಾಸಪ್ರಭು, ಬಾಲ ರಾಜವಾಡಿ, ನಯನ, ರವಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
ದಕ್ಷಿಣ ಭಾರತದ ಹೆಸರಾಂತ ನಿರ್ಮಾಣ ಸಂಸ್ಥೆ ಲೈಕಾ ಪ್ರೊಡಕ್ಷನ್ಸ್ ಲಾಂಛನದಲ್ಲಿ ಸುಭಾಸ್ಕರನ್ ಅವರು ನಿರ್ಮಿಸುತ್ತಿರುವ, ಲಕ್ಷ್ಮಣ್ ನಿರ್ದೇಶನದಲ್ಲಿ ಯುವರಾಜ ನಿಖಿಲ್ ಕುಮಾರ್ ನಾಯಕರಾಗಿ ನಟಿಸುತ್ತಿರುವ ನೂತನ ಚಿತ್ರದ ಚಿತ್ರೀಕರಣ ಬೆಂಗಳೂರಿನಲ್ಲಿ ಬಿರುಸಿನಿಂದ ಸಾಗಿದೆ.
ಬಹು ನಿರೀಕ್ಷಿತ ಈ ಚಿತ್ರದಲ್ಲಿ ಸ್ಯಾಂಡಲ್ ವುಡ್ ಸಲಗ ದುನಿಯಾ ವಿಜಯ್ ಅವರು ನಟಿಸುತ್ತಿದ್ದಾರೆ. ವಿಜಯ್ ಅವರ ಪಾತ್ರದ ಬಗ್ಗೆ ಚಿತ್ರತಂಡ ಗುಟ್ಟು ಬಿಟ್ಟುಕೊಟ್ಟಿಲ್ಲ. ಸದ್ಯದಲ್ಲೇ ವಿಜಯ್ ಅವರು ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ. ವಿಜಯ್ ಅವರ ಪಾತ್ರ ಏನ್ನಿರಬಹುದು? ಎಂಬ ಕುತೂಹಲ ಅಭಿಮಾನಿಗಳಲ್ಲಿದೆ. ಅಪಾರವೆಚ್ಚದಲ್ಲಿ ಅದ್ದೂರಿಯಾಗಿ ನಿರ್ಮಾಣವಾಗುತ್ತಿರುವ ಈ ಚಿತ್ರದ ಬಗ್ಗೆ ಸಿನಿರಸಿಕರಿಗೆ ಸಾಕಷ್ಟು ನಿರೀಕ್ಷೆಯಿದೆ.
ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ ಹಾಗೂ ವಂಶಿ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ರಘು ನಿಡುವಳ್ಳಿ ಸಂಭಾಷಣೆ ಬರೆದಿದ್ದಾರೆ.
ಆಯುಷ್ ಟಿ.ವಿ ಕಳೆದ 7 ವರ್ಷಗಳಿಂದ ಆರೋಗ್ಯಕರ ಜೀವನ ಶೈಲಿಗಾಗಿ ಎಂಬ ಧ್ಯೇಯದೊಂದಿಗೆ ವೈವಿಧ್ಯಮಯ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸುವ ಮೂಲಕ ಪ್ರೇಕ್ಷಕರ ಮನ್ನಣೆಗಳಿಸಿರುವ ಏಕೈಕ ಆರೋಗ್ಯದ ಕುರಿತಾದ ವಾಹಿನಿಯಾಗಿದ್ದು, ಪ್ರಸ್ತುತ ಕರ್ನಾಟಕದ ಜನಪ್ರಿಯ ಮನೋರಂಜನಾ ವಾಹಿನಿ ಸಿರಿಕನ್ನಡ ಹಾಗೂ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸೆ ಕೇಂದ್ರ (ಕ್ಷೇಮವನ) ಇವರ ಸಹಭಾಗಿತ್ವದಲ್ಲಿ ಆಯೋಜಿಸಿರುವ ವಿಶ್ವದ ಮೊಟ್ಟಮೊದಲ ಆರೋಗ್ಯದ ಕುರಿತಾದ ರಿಯಾಲಿಟಿ ಶೋ “ಫಿಟ್ ಬಾಸ್”.
ಮನುಷ್ಯನಿಗೆ ಎಲ್ಲದಕ್ಕಿಂತ ಆರೋಗ್ಯವೇ ಹೆಚ್ಚು ಎಂಬ ಧ್ಯೇಯದಿಂದ ನಮ್ಮ ಆಯೂಷ್ ಟಿವಿ ಕಳೆದ ಏಳು ವರ್ಷಗಳಿಂದ ಆರೋಗ್ಯದ ವಿವಿಧ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿದೆ. ಇದೇ ಮೊದಲ ಬಾರಿಗೆ ಸ್ಥೂಲಕಾಯದವರಿಗಾಗಿ(ಹೆಚ್ಚು ದಪ್ಪ) “ಫಿಟ್ ಬಾಸ್” ಎಂಬ ರಿಯಾಲಿಟಿ ಶೋ ಆರಂಭಿಸಲಾಗಿದೆ. ನಮ್ಮೊಂದಿಗೆ ಸಿರಿಕನ್ನಡ ವಾಹಿನಿ ಹಾಗೂ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸಾ ಕೇಂದ್ರ(ಕ್ಷೇಮವನ) ಕೈ ಜೋಡಿಸಿದೆ ಎಂದು ಆಯೂಷ್ ಟಿವಿ ವೈಸ್ ಚೇರ್ಮನ್ ಅರುಣಾಚಲಂ ತಿಳಿಸಿದರು.
ಕಳೆದ ಕೆಲವು ವರ್ಷಗಳಿಂದ ನಮ್ಮ ಸಿರಿಕನ್ನಡ ವಾಹಿನಿ ಹಲವು ಜನಪ್ರಿಯ ಕಾರ್ಯಕ್ರಮಗಳ ಮೂಲಕ ಜನರ ಮೆಚ್ಚುಗೆ ಪಡೆದಿದೆ. ಪ್ರಸ್ತುತ ಆಯೂಷ್ ಟಿವಿಯ “ಫಿಟ್ ಬಾಸ್” ರಿಯಾಲಿಟಿ ಶೋ ಜೊತೆಗೆ ಸಿರಿಕನ್ನಡ ವಾಹಿನಿ ಕೈ ಜೋಡಿಸಿದೆ. ಆರೋಗ್ಯದ ಕುರಿತು ಜಾಗೃತಿ ಮೂಡಿಸುವ ಈ ರಿಯಾಲಿಟಿ ಶೋ ಅಕ್ಟೋಬರ್ 16 ರಿಂದ ಸೋಮವಾರದಿಂದ ಶುಕ್ರವಾರದವರೆಗೂ ಆಯೂಷ್ ಟಿವಿ ಸಂಜೆ 7 ಕ್ಕೆ ಹಾಗೂ ಸಿರಿಕನ್ನಡ ವಾಹಿನಿಯಲ್ಲಿ ರಾತ್ರಿ 8 ಕ್ಕೆ ಪ್ರಸಾರವಾಗಲಿದೆ ಎಂದರು ಸಿರಿಕನ್ನಡ ವಾಹಿನಿ ಸಂಸ್ಥಾಪಕ ನಿರ್ದೇಶಕ ಸಂಜಯ್ ಶಿಂಧೆ.
ಈ ರಿಯಾಲಿಟಿ ಶೋ ನ ಆಡಿಷನ್ ನಲ್ಲಿ ಸುಮಾರು 2000 ಜನ ಪಾಲ್ಗೊಂಡಿದ್ದರು. ಅದರಲ್ಲಿ ಸುಮಾರು 100 ಕೆಜಿ ಗಿಂತ ಹೆಚ್ಚು ತೂಕವಿರುವ 21 ಜನರನ್ನು ಆಯ್ಕೆ ಮಾಡಿಕೊಳ್ಳಲಾಯಿತು. ಇಪ್ಪತ್ತೊಂದು ದಿನ ,ತಮ್ಮ ದೇಹದ ಅತಿಯಾದ ತೂಕವನ್ನು ಕಡಿಮೆ ಮಾಡಲು ಇಲ್ಲಿ ಪಾಲ್ಗೊಂಡಿದ್ದು ವಿಶೇಷ, ತಮ್ಮ ಆರೋಗ್ಯದ ಸಮಸ್ಯೆಗಳನ್ನು ವೈಜ್ಞಾನಿಕವಾಗಿ ಕ್ಯೂರ್ ಮಾಡಿಕೊಳ್ಳುವುದರ ಜೊತೆಗೆ ಆಟ, ಮೋಜು, ಮಸ್ತಿ, ಮತ್ತು ಸ್ನೇಹ ಸಂಬಂಧಗಳ ಮೌಲ್ಯಗಳನ್ನು ಈ ರಿಯಾಲಿಟಿ ಶೋ ನಲ್ಲಿ ಕಲಿತಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್, ಅಮೂಲ್ಯ, ರೂಪಿಕಾ, ನಿರೂಪಕ ಮುರಳಿ, ಆರ್ಯನ್ ಶಾಮ್ ಮುಂತಾದ ಗಣ್ಯರು ಗ್ರ್ಯಾಂಡ್ ಫಿನಾಲೆಗೆ ಆಗಮಿಸಿ ಸ್ಪರ್ಧಿಗಳಿಗೆ ಶುಭ ಕೋರಿದ್ದಾರೆ. ಗೆದ್ದ ಸ್ಪರ್ಧಿಗೆ 5 ಲಕ್ಷ ರೂಪಾಯಿ ಬಹುಮಾನ ನೀಡಲಾಗಿದೆ ಎಂದು “ಫಿಟ್ ಬಾಸ್” ರಿಯಾಲಿಟಿ ಶೋ ನಿರ್ದೇಶಕ ಬಾಲಕೃಷ್ಣ ತಿಳಿಸಿದರು.
21 ದಿನಗಳಕಾಲ ಪ್ರತಿ ದಿನ ಮುಂಜಾನೆ 5 ರಿಂದ ಯೋಗದೊಂದಿಗೆ ಸಾಧಕರ ದಿನಚರಿ ಪ್ರಾರಂಭವಾದರೆ ಕ್ರಮೇಣ ವಿವಿಧ ನ್ಯಾಚುರೋಪತಿ ಚಿಕಿತ್ಸೆಗಳು ಹಾಗೂ ಹಲವು ಮನೋರಂಜನಾ ಕಾರ್ಯಕ್ರಮಗಳು ಸ್ಪರ್ಧಿಗಳನ್ನು ಕ್ರಿಯಾಶೀಲರನ್ನಾಗಿಸಿರುವಂತೆ ಮಾಡಿದ್ದವು ಎಂಬ ಮಾಹಿತಿಯನ್ನು “ಕ್ಷೇಮವನ”ದ ಮುಖ್ಯ ಕ್ಷೇಮಾಧಿಕಾರಿ ಡಾ.ನರೇಂದ್ರ ಶೆಟ್ಟಿ ನೀಡಿದರು.
” ಫಿಟ್ ಬಾಸ್” ರಿಯಾಲಿಟಿ ಶೋ ನ ಆರಂಭದ ದಿನ ಹಾಗೂ ಫಿನಾಲೆ ದಿನ ನಿರೂಪಕನಾಗಿ ಕೆಲಸ ಮಾಡಿದ್ದು ಖುಷಿಯಾಗಿದೆ. ಇಂತಹ ಕಾರ್ಯಕ್ರಮಗಳನ್ನು ಎಲ್ಲರೂ ನೋಡಬೇಕೆಂದರು ಪ್ರಶಾಂತ್ ಸಂಬರ್ಗಿ.
“ಫಿಟ್ ಬಾಸ್” ಕಾರ್ಯಕ್ರಮದ ಬಗ್ಗೆ ಆಯೂಷ್ ಟಿವಿಯ ದಿವ್ಯ ಅವರು ಮಾತನಾಡಿದರು
ಹರಿಕೃಷ್ಣ, ವ್ಯವಸ್ಥಾಪಕ ನಿರ್ದೇಶಕರು ಆಯುಷ್ ಟಿ ವಿ, ಸಂಜಯ್ ಶಿಂಧೆ, ಸಂಸ್ಥಾಪಕ ನಿರ್ದೇಶಕರು ಸಿರಿ ಕನ್ನಡ ವಾಹಿನಿ ಪ್ರಶಾಂತ್ ಸಂಬರ್ಗಿ, ಕಲಾವಿದರು ಹಾಗೂ ಫಿಟ್ ಬಾಸ್ ಗ್ರ್ಯಾಂಡ್ ಫಿನಾಲೆ ನಿರೂಪಕರು ಬಾಲಕೃಷ್ಣ, ಫಿಟ್ ಬಾಸ್ ರಿಯಾಲಿಟಿ ಷೋ ನಿರ್ದೇಶಕರು ಅರುಣಾಚಲಂ , ವೈಸ್ ಚೇರ್ಮನ್ ಆಯುಷ್ ಟಿವಿ ಅರವಿಂದ್ ಎನ್.ಜೆ , ಪವನ್ ಕುಮಾರ್ , ವಿನಾಯಕ್ ಪೈ , ದಿವ್ಯ(ಆಯೂಷ್ ಟಿವಿ), ರಾಜೇಶ್ ರಾಜಘಟ್ಟ ಮುಖ್ಯಸ್ಥರು , ಸಿರಿ ಕನ್ನಡ ವಾಹಿನಿ ಇದ್ದರು
ಮಾಲಾಶ್ರೀ ಅಂದಾಕ್ಷಣ ನೆನಪಿಗೆ ಬರೋದೇ ಖಡಕ್ ಪೊಲೀಸ್ ಅಧಿಕಾರಿ. ಅಂಥದ್ದೊಂದು ಖದರ್ ಇರುವ ಸಿನಿಮಾವೊಂದು ಈ ವಾರ ತೆರೆಗೆ ಅಪ್ಪಳಿಸಲು ಸಜ್ಜಾಗಿದೆ.
ಹೌದು, ಬಹಳ ದಿನಗಳ ಬಳಿಕ ಮಾಲಾಶ್ರೀ ಅವರು ಸಖತ್ ಫೋರ್ಸ್ ಇರುವ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಆ ಸಿನಿಮಾದ ಹೆಸರು ಮಾರಕಾಸ್ತ್ರ.
ಸಿನಿಮಾದ ಶೀರ್ಷಿಕೆ ಹೇಳುವಂತೆ ಇದೊಂದು ಭ್ರಷ್ಠರ ವಿರುದ್ಧ ಸೆಣೆಸಾಡುವ ಕಥೆ. ಈ ಸಿನಿಮಾದಲ್ಲಿ ಸಾಕಷ್ಟು ಸಾಮಾಜಿಕ ಪರಿಣಾಮ ಬೀರುವ ಅಂಶಗಳಿವೆ.
ಅಂದಹಾಗೆ, ಗುರುಮೂರ್ತಿ ಸುನಾಮಿ ಈ ಸಿನಿಮಾದ ನಿರ್ದೇಶಕರು.ಕೋಮಲ ನಟರಾಜ್ ಅದ್ಧೂರಿಯಾಗಿ ನಿರ್ಮಾಣ ಮಾಡಿದ್ದಾರೆ. ಸಿನಿಮಾದಲ್ಲಿ ಮಾಲಾಶ್ರೀ ಅವರು ಹೈಲೆಟ್. ಅವರೊಂದಿಗೆ ದೊಡ್ಡ ತಾರಾ ಬಳಗವೇ ಇದೆ.
ಮಾಲಾಶ್ರೀ ಇದ್ದಾರೆಂದರೆ ಸಾಹಸಮಯ ದೃಶ್ಯಗಳಿಗೇನೂ ಕಮ್ಮಿ ಇಲ್ಲ ಬಿಡಿ. ಮೈ ನವಿರೇಳಿಸುವ ಸಾಹಸ ದೃಶ್ಯಗಳೇ ತುಂಬಿವೆ. ಮಾಸ್ಟರ್ ಥ್ರಿಲ್ಲರ್ ಮಂಜು ಅವರ ಕಾಂಬಿನೇಷನ್ ಸಾಹಸದಲ್ಲಿ ಅದ್ಭುತ ಸ್ಟಂಟ್ಸ್ ಮಾಡಿದ್ದಾರೆ ಮಾಲಾಶ್ರೀ.
ಇನ್ನು, ಸಿನಿಮಾ ರಿಲೀಸ್ ಮೊದಲೇ ನಿರ್ಮಾಪಕರ ಮೊಗದಲ್ಲಿ ಮಂದಹಾಸ ಬೀರಿದೆ. ಕಾರಣ, ಸಿನಿಮಾ ಡಬ್ಬಿಂಗ್ ರೈಟ್ಸ್ ಒಳ್ಳೆಯ ಮೊತ್ತಕ್ಕೆ ಮಾರಾಟವಾಗಿದೆ. ಹಾಗಾಗಿ ತಂಡ ಕೂಡ ಖುಷಿಯಲ್ಲಿದೆ.
ಮೊದಲ ಸಲ ನಿರ್ಮಾಣ ಮಾಡಿರುವ ಕೋಮಲ ನಟರಾಜ್ ಅವರು ಸಿನಿಮಾಗೆ ಏನೆಲ್ಲ ಬೇಕೋ ಎಲ್ಲವನ್ನೂ ಅಚ್ಚುಕಟ್ಟಾಗಿ ಒದಗಿಸಿದ್ದರಿಂದಲೇ ಚಿತ್ರ ಅಂದುಕೊಂಡಿದ್ದಕ್ಕಿಂತಲೂ ಚೆನ್ನಾಗಿ ಮೂಡಿಬಂದಿದೆ ಎನ್ನುತ್ತಾರೆ ನಿರ್ದೇಶಕರು.
ಸಂದೇಪ್ರೊಡಕ್ಷನ್ಸ್ ನಲ್ಲಿ ಸಂದೇಶ್ ನಾಗರಾಜ್ ಅವರು ಅರ್ಪಿಸಿ, ಸಂದೇಶ್ ಎನ್ ನಿರ್ಮಾಣದ ಹಾಗೂ ಶ್ರೀನಿ ನಿರ್ದೇಶನದಲ್ಲಿ ಶಿವರಾಜಕುಮಾರ್ ನಾಯಕರಾಗಿ ನಟಿಸಿರುವ ಬಹು ನಿರೀಕ್ಷಿತ “ಘೋಸ್ಟ್” ಚಿತ್ರ ಇದೇ ಅಕ್ಟೋಬರ್ 19 ರಂದು ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಈ ಚಿತ್ರದ ಮತ್ತೊಂದು ವಿಶೇಷವೆಂದರೆ ಅಖಿಲ ಕರ್ನಾಟಕ ಡಾ.ಶಿವರಾಜಕುಮಾರ್ ಅಭಿಮಾನಿಗಳ ಸಂಘದವರು ಹಾಡೊಂದನ್ನು ಸಿದ್ದಪಡಿಸಿ “ಘೋಸ್ಟ್” ಚಿತ್ರಕ್ಕೆ ಉಡುಗೊರೆಯಾಗಿ ನೀಡಿದ್ದಾರೆ.
ಈ ರೀತಿ ಅಭಿಮಾನಿಗಳು ಚಿತ್ರವೊಂದಕ್ಕೆ ಹಾಡಿನ ಉಡುಗೊರೆ ನೀಡಿರುವುದು ಇದೇ ಮೊದಲು. ಅಭಿಮಾನಿಗಳು ಅಭಿಮಾನದಿಂದ ನೀಡಿರುವ ಈ ಹಾಡನ್ನು ರೋಲಿಂಗ್ ಟೈಟಲ್ಸ್ ನಲ್ಲಿ ಬಳಸಿಕೊಳ್ಳುವುದಾಗಿ ಚಿತ್ರತಂಡ ತಿಳಿಸಿದೆ.
ಅಕ್ಟೋಬರ್ 11 ರ ಮಧ್ಯಾಹ್ನ 1ಗಂಟೆಗೆ ಈ ಹಾಡು ಹೊಸಪೇಟೆಯ “ಮೀರ್ ಅಲ್ಲಂ” ಥಿಯೇಟರ್ ನಲ್ಲಿ ಬಿಡುಗಡೆಯಾಗಲಿದೆ.
ಅಂತರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಅತ್ಯಂತ ಮೆಚ್ಚುಗೆ ಪಡೆದ ರಿಷಬ್ ಶೆಟ್ಟಿ ಸಂಸ್ಥೆಯ ಹೆಮ್ಮೆಯ ಚಲನಚಿತ್ರ, “ಶಿವಮ್ಮ,” ಬುಸಾನ್ ಚಲನಚಿತ್ರೋತ್ಸವ ಸೇರಿದಂತೆ ಜಗತ್ತಿನಾದ್ಯಂತ ಹಲವಾರು ಪ್ರತಿಷ್ಠಿತ ಚಲನಚಿತ್ರೋತ್ಸವಗಳ ಮೂಲಕ ಒಂದು ವರ್ಷದ ಪ್ರಯಾಣದ ನಂತರ ಅಂತಿಮವಾಗಿ ಭಾರತಕ್ಕೆ ಆಗಮಿಸಲಿದೆ.
ಭಾರತದ ಪ್ರತಿಷ್ಠಿತ ಮಾಮಿ ಮುಂಬೈ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ದಕ್ಷಿಣ ಏಷ್ಯಾದ ಚೊಚ್ಚಲ ಪ್ರದರ್ಶನವನ್ನು ಕಾಣುತ್ತಿದೆ.
“ಶಿವಮ್ಮ” ಚಿತ್ರವನ್ನು ಸಂಪೂರ್ಣವಾಗಿ ಉತ್ತರ ಕರ್ನಾಟಕದ ಕೊಪ್ಪಳ ಜಿಲ್ಲೆಯ ಯರೇಹಂಚಿನಾಳ ಗ್ರಾಮದಲ್ಲಿ ಚಿತ್ರೀಕರಿಸಲಾಗಿದ್ದು, ಊರಿನ ಗ್ರಾಮಸ್ಥರೇ ಮುಖ್ಯ ತಾರಾಗಣದಲ್ಲಿದ್ದಾರೆ.
ತನ್ನ ಕುಟುಂಬದ ಉನ್ನತಿಗೋಸ್ಕರ ನೆಟ್ವರ್ಕ್ ಮಾರ್ಕೆಟಿಂಗ್ ವ್ಯಾಪಾರದಲ್ಲಿ ತೊಡಗುವ ಸರ್ಕಾರಿ ಶಾಲೆಯಲ್ಲಿ ಅಡುಗೆ ಕೆಲಸ ಮಾಡುವ ಹಳ್ಳಿ ಹೆಣ್ಣುಮಗಳ ಕಥೆಯಾಗಿದೆ.
ಇರಾನ್‌ನಲ್ಲಿ ನಡೆದ ಫಜರ್ ಚಲನಚಿತ್ರೋತ್ಸವದಲ್ಲಿ ಪ್ರಶಸ್ತಿ ಗೆದ್ದ ಮೊದಲ ಕನ್ನಡ ಚಿತ್ರ ಇದಾಗಿದೆ.
ಚಿತ್ರವು ಈಗಾಗಲೇ ಐದು ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದು, ಚಿತ್ರದ ಟೀಸರ್ ಇಂದು ಸಂಜೆ 6 ಗಂಟೆಗೆ ರಿಷಬ್ ಶೆಟ್ಟಿ ಫಿಲಂಸ್ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಲಿದೆ.
ಹಿರಿತೆರೆ ಹಾಗೂ ಕಿರುತೆರೆಯಲ್ಲಿ ತಮ್ಮದೇ ಆದ ಅಭಿಮಾನಿ ಬಳಗ ಹೊಂದಿರುವ ನಟ ಅನಿರುದ್ಧ್ ಜತಕರ್ ನಾಯಕರಾಗಿ ನಟಿಸಿರುವ, “ರಾಘು” ಚಿತ್ರದ ಖ್ಯಾತಿಯ ಎಂ.ಆನಂದರಾಜ್ ನಿರ್ದೇಶನದ “chef ಚಿದಂಬರ” ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ.
ನಮ್ಮ ಚಿತ್ರದ ಚಿತ್ರೀಕರಣ ಆಗಸ್ಟ್ 10ರಂದು ಆರಂಭವಾಗಿತ್ತು. ಅಕ್ಟೋಬರ್ 10ರಂದು ಮುಕ್ತಾಯವಾಗಿದೆ ಎಂದು ಮಾತು ಪ್ರಾರಂಭಿಸಿದ ನಿರ್ದೇಶಕ ಆನಂದರಾಜ್, ನಮ್ಮ ಚಿತ್ರಕ್ಕೆ ಒಟ್ಟು 29 ದಿನಗಳ ಕಾಲ ಬೆಂಗಳೂರು, ಮಂಗಳೂರು, ತುಮಕೂರು, ದೇವರಾಯನದುರ್ಗ ಮುಂತಾದ ಕಡೆ ಚಿತ್ರೀಕರಣ ನಡೆದಿದೆ. ಇದೊಂದು ಆಕ್ಷನ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಡಾರ್ಕ್ ಹ್ಯೂಮರ್ ಜಾನರ್ ನ ಚಿತ್ರ. ಅನಿರುದ್ದ್ ಅವರು ಶೆಫ್ ಪಾತ್ರದಲ್ಲಿ ಅಭಿನಯಿಸಿದ್ದಾರೆ. ನಿಧಿ ಸುಬ್ಬಯ್ಯ ಈತನಕ ಮಾಡಿರದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರೆಚೆಲ್ ಡೇವಿಡ್ ಅವರ ಪಾತ್ರ ಕೂಡ ವಿಭಿನ್ನವಾಗಿದೆ. ಶರತ್ ಲೋಹಿತಾಶ್ವ, ಶಿವಮಣಿ, ಶ್ರೀಧರ್, ಮಹಂತೇಶ್ ಮುಂತಾದವರು ಚಿತ್ರದಲ್ಲಿ ನಟಿಸಿದ್ದಾರೆ.
ದಮ್ತಿ ಪಿಕ್ಚರ್ಸ್ ಲಾಂಛನದಲ್ಲಿ ರೂಪ ಡಿ.ಎನ್ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ಚಿತ್ರತಂಡದ ಸಹಕಾರದಿಂದ ಚಿತ್ರೀಕರಣ ಮುಕ್ತಾಯವಾಗಿದೆ. ಪೋಸ್ಟ್ ಪ್ರೊಡಕ್ಷನ್ ವರ್ಕ್ ಆರಂಭವಾಗಲಿದೆ ಎಂದು ತಿಳಿಸಿದರು.
ನಾನು ಯಾವತ್ತಿಗೂ ಅಡುಗೆಮನೆ ಕಡೆ ಹೋದವನಲ್ಲ. ಈ ಚಿತ್ರದಲ್ಲಿ ಮೊದಲ ಬಾರಿಗೆ ಶೆಫ್ ಪಾತ್ರ ನಿರ್ವಹಿಸಿದ್ದೇನೆ. ತರಬೇತಿ ಪಡೆದು ಈ ಪಾತ್ರ ನಿರ್ವಹಣೆ ಮಾಡಿದ್ದೇನೆ. ಕ್ರೈಮ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಚಿತ್ರವಾದರೂ, ನಿರ್ದೇಶಕರು ಕಥೆಯನ್ನು ಹಾಸ್ಯದ ಮೂಲಕ ಹೇಳಿದ್ದಾರೆ. ಸಹ ಕಲಾವಿದರ ಅಭಿನಯ ಹಾಗೂ ತಂತ್ರಜ್ಞರ ಕಾರ್ಯವೈಖರಿ ಚೆನ್ನಾಗಿದೆ ಎಂದರು ನಾಯಕ ಅನಿರುದ್ಧ್ ಜತಕರ್.
ನಾನು ಈವರೆಗೂ ಮಾಡಿರದ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಈ ಪಾತ್ರ ಎಲ್ಲರಿಗೂ ಮೆಚ್ಚುಗೆಯಾಗಲಿದೆ ಎನ್ನುತ್ತಾರೆ ನಾಯಕಿ ನಿಧಿ ಸುಬ್ಬಯ್ಯ.
ಅನು ಎಂಬುದು ನನ್ನ ಪಾತ್ರದ ಹೆಸರು. ನನ್ನ ಪಾತ್ರ ಹಾಗೂ ಕಥೆ ಎರಡೂ ಚೆನ್ನಾಗಿದೆ ಎಂದರು ನಾಯಕಿ ರೆಚೆಲ್ ಡೇವಿಡ್.
ನಿರ್ಮಾಪಕಿ ರೂಪ ಡಿ.ಎನ್, ಛಾಯಾಗ್ರಾಹಕ ಉದಯ್ ಲೀಲಾ, ಚಿತ್ರದಲ್ಲಿ ನಟಿಸಿರುವ ಮಹಾಂತೇಶ್, ಸೌಂಡ್ ಇಂಜಿನಿಯರ್ ಬಿ.ಆರ್ ನವೀನ್ ಕುಮಾರ್ ಇದ್ದರು.
ಚಿತ್ರಕ್ಕೆ ನಿರ್ದೇಶಕರೆ ಕಥೆ ರಚಿಸಿದ್ದು, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ಗಣೇಶ್ ಪರಶುರಾಮ್ ಬರೆದಿದ್ದಾರೆ. ಉದಯಲೀಲಾ ಛಾಯಾಗ್ರಹಣ, ವಿಜೇತ್ ಚಂದ್ರ ಸಂಕಲನ, ರಿತ್ವಿಕ್ ಮುರಳಿಧರ್ ಸಂಗೀತ ನಿರ್ದೇಶನ, ಆಶಿಕ್ ಹುಸಗುಳ್ಳಿ ಡಿ.ಐ, ನರಸಿಂಹಮೂರ್ತಿ ಸಾಹಸ ನಿರ್ದೇಶನ ಹಾಗೂ ಮಾಧುರಿ ಪರಶುರಾಮ ಅವರ ನೃತ್ಯ ನಿರ್ದೇಶನ “chef ಚಿದಂಬರ” ಚಿತ್ರಕ್ಕಿದೆ.
ಹಳ್ಳಿಯಲ್ಲಿ ಮಿಠಾಯಿ ಮಾರಿಕೊಂಡು ಜೀವನ ನಡೆಸುತ್ತಿದ್ದ ಯುವಕನೊಬ್ಬನನ್ನು ಶ್ರೀಮಂತ ಮನೆತನದ ಯುವತಿಯು ಪ್ರೀತಿಸಿದಾಗ ಏನಾಗಬಹುದು ಎಂಬುದನ್ನು ಸೈಕಲ್ ಸವಾರಿ ಚಿತ್ರದ ಮೂಲಕ ನಿರ್ದೇಶಕ ದೇವು ಕೆ.ಅಂಬಿಗ ಅವರು ಹೇಳಹೊರಟಿದ್ದಾರೆ. ಕಲಾರಂಗ್ ಫಿಲಂ ಸ್ಟುಡಿಯೋ ಅಂಡ್ ಪ್ರೊಡಕ್ಷನ್ಸ್ ವತಿಯಿಂದ ಸುರೇಶ್ ಶಿವೂರ ಹಾಗೂ ಲೋಕೇಶ್ ಸವದಿ ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ.
ಸಂಪೂರ್ಣ ಉತ್ತರ ಕರ್ನಾಟಕ ಸೊಗಡಿನ ಭಾಷೆ, ಕಥೆಯನ್ನು ಹೊಂದಿರುವ ಈ ಚಿತ್ರದಲ್ಲಿ ನಿರ್ದೇಶಕ ದೇವು ಅವರೇ ನಾಯಕನಾಗಿಯೂ ನಟಿಸಿದ್ದಾರೆ. ಬಿಜಾಪುರದ ದೀಕ್ಷಾ ಬೀಸೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ರೋಹನ್ ಎಸ್. ದೇಸಾಯಿ ಅವರು ಸಂಗೀತದ ಜೊತೆಗೆ ಕ್ಯಾಮೆರಾ ವರ್ಕ್, ಡಿ.ಐ. ಕೆಲಸವನ್ನೂ ಸಹ ನಿರ್ವಹಿಸಿದ್ದಾರೆ.
ನ.3ರಂದು ಬಿಡುಗಡೆಯಾಗಲು ಸಿದ್ದವಾಗಿರುವ ಈ ಚಿತ್ರದ ಟ್ರೇಲರ್ ಹಾಗೂ ಆಡಿಯೋ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕ ದೇವು ವಿಜಯಪುರದಲ್ಲಿ ನಮ್ಮದೇ ಸ್ಟುಡಿಯೋ ಆರಂಭಿಸಿ ಒಂದಷ್ಟು ಶಾರ್ಟ್ ಫಿಲಂಗಳನ್ನು ಮಾಡಿರುವೆ. ಸಿನಿಮಾವೊಂದರ ಪೋಸ್ಟ್ ಪ್ರೊಡಕ್ಷನ್ ಕೂಡ ಅದರಲ್ಲೇ ನಡೆದಿದೆ. ಲಾಕ್ ಡೌನ್ ಸಮಯದಲ್ಲಿ 2 ಪಾತ್ರಗಳನ್ನಿಟ್ಟುಕೊಂಡು ಕಿರುಚಿತ್ರವೊಂದನ್ನು ನಿರ್ದೇಶನ ಮಾಡಬೇಕೆಂದು ಈ ಕಥೆ ಬರೆದಿದ್ದೆ. ನಂತರ ಅದು ಸಿನಿಮಾ ಆಯಿತು. ಅಗ ನಮ್ಮಲ್ಲಿದ್ದುದು 5ಲಕ್ಷ ಮಾತ್ರ. ನಂತರ ಸುರೇಶ್ ಶಿವೂರು ಅವರು ನಮ್ಮ ಸಹಾಯಕ್ಕೆ ನಿಂತರು. ಕಡ್ಡಿಹೋಗಿ ದೊಡ್ಡ ಗುಡ್ಡವೇ ಆಯ್ತು. ಚಿತ್ರದಲ್ಲಿ 5 ಹಾಡುಗಳಿದ್ದು ಯಾವುದೂ ಕಥೆಯನ್ನು ಬಿಟ್ಟು ಇಲ್ಲ. ನಂತರ ಪೋಸ್ಟ್ ಪ್ರೊಡಕ್ಷನ್ ಸಮಯದಲ್ಲಿ ಲೋಕೇಶ್ ಸವದಿ ಅವರು ಕೈಜೋಡಿಸಿದರು. ಅವರಿಂದಲೇ ಈಗ ಸಿನಿಮಾ ಬಿಡುಗಡೆಯಾಗುತ್ತಿದೆ.
ಶಿವಾಜಿ ಮೆಟಗಾರ್ ಪ್ರತಿ ಹಂತದಲ್ಲೂ ಜೊತೆಗಿದ್ದು ಸಹಕರಿಸಿದರು. ನಾನು ಊರಲ್ಲಿ ಬಾಂಬೆ ಮಿಠಾಯಿ ಮಾರುವ ಬಸು ಎಂಬ ಹುಡುಗನ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಸಾಹುಕಾರ್ ಮನೆಯ ಹುಡುಗಿ ಈತನ ಹಿಂದೆ ಬಿದ್ದು ಲವ್ ಮಾಡಿದಾಗ ಏನಾಗುತ್ತದೆ ಎನ್ನುವುದೇ ಈ ಸಿನಿಮಾ ಎಂದರು. ನಾಯಕಿ ದೀಕ್ಷಾ ಬೀಸೆ ಮಾತನಾಡಿ ಮೂಲತಃ ನಾನೊಬ್ಬ ಭರತನಾಟ್ಯ ನೃತ್ಯಗಾರ್ತಿ. ಚಿಕ್ಕವಯಸಿನಿಂದಲೂ ಕಲಾವಿದೆಯಾಗಬೇಕೆಂಬ ಆಸೆಯಿತ್ತು. ಅದು ಈ ಚಿತ್ರದಿಂದ ಈಡೇರಿದೆ. ಯಾವುದೇ ತರಬೇತಿ ಇಲ್ಲದೆ ಅಭಿನಯಿಸಿದ್ದೇನೆ ಎಂದರು.
ಸಂಗೀತ-ಕ್ಯಾಮೆರಾ ಎರಡನ್ನೂ ನಿಭಾಯಿಸಿರುವ ರೋಹನ್ ದೇಸಾಯಿ ಮಾತನಾಡಿ ಕಡಿಮೆ ಟೆಕ್ನೀಷಿಯನ್ ಇಟ್ಟುಕೊಂಡು ಮಾಡಿರುವ ಸಿನಿಮಾ. ಅಕ್ಷನ್, ಮಾಸ್, ಕಾಮಿಡಿ, ಸಸ್ಪೆನ್ಸ್, ಲವ್ ಎಲ್ಲಾ ಥರದ ಅಂಶಗಳು ಚಿತ್ರದಲ್ಲಿವೆ ಎಂದರು. ನಿರ್ಮಾಪಕರಲ್ಲೊಬ್ಬರಾದ ಲೋಕೇಶ್ ಸವದಿ ಮಾತನಾಡಿ ಮೊದಲು ನನಗೆ ಸಿನಿಮಾ ಬಗ್ಗೆ ಅಂಥಾ ಇಂಟರೆಸ್ಟ್ ಇರಲಿಲ್ಲ. ಒಮ್ಮೆ ಶಿವಾಜಿ ಬಂದು ಈ ವಿಚಾರ ಹೇಳಿದರು. ಒಂದು ಐಟಂ ಸಾಂಗನ್ನು 5 ದಿನ ಮಾಡಿದ್ದನ್ನು ನೋಡಿದಾಗ ಚಿತ್ರತಂಡದವರು ಎಷ್ಟು ಎಫರ್ಟ್ ಹಾಕ್ತಾರೆ ಅನ್ನೋದು ಗೊತ್ತಾಯ್ತು ಎಂದು ಹೇಳಿದರು.
ವಿಲನ್ ಪಾತ್ರ ಮಾಡಿರುವ ಶಿವಾಜಿ ಮಾತನಾಡಿ ನನ್ನ ಒಂದೇ ಮಾತಿಗೆ ಸ್ನೇಹಿತರೂ ಆದ ಲೋಕೇಶ್ ಹಣ ಹಾಕಲು ಒಪ್ಪಿದರು. ಮರಳುದಂದೆ ನಡೆಸುವ ಖಳನಾಯಕ, ನಾಯಕಿಯ ತಾತನಾಗೂ ಕಾಣಿಸಿಕೊಂಡಿದ್ದೇನೆ ಎಂದರು. ನಾಯಕನ ತಾಯಿ ಪಾತ್ರಧಾರಿ ಗೀತಾ ರಾಘವೇಂದ್ರ, ಎರಡನೇ ನಾಯಕಿ ಕಾವ್ಯ ಚಿತ್ರದ ಕುರಿತು ಮಾತನಾಡಿದರು.
ಬಹುತೇಕ ಉತ್ತರ ಕರ್ನಾಟಕ ಭಾಗದಲ್ಲೇ ಚಿತ್ರೀಕರಿಸಿರುವ ಈ ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆಯನ್ನೂ ನಿರ್ದೇಶಕ ದೇವು ಅವರೇ ಬರೆದಿದ್ದಾರೆ.