ವಿಷ್ಣು ಮಂಚು ನಟನೆಯ ಕಣ್ಣಪ್ಪ – ದಿ ಗ್ರೇಟ್‍ ಎಪಿಕ್ ಇಂಡಿಯನ್‍ ಟೇಲ್‍’ ಸಿನಿಮಾಗೆ ಶಿವಣ್ಣ ಎಂಟ್ರಿ

ವಿಷ್ಣು ಮಂಚು ಅಭಿನಯದ ಮಹತ್ವಾಕಾಂಕ್ಷೆಯ ಚಿತ್ರವಾದ ‘ಕಣ್ಣಪ್ಪ – ದಿ ಗ್ರೇಟ್‍ ಎಪಿಕ್ ಇಂಡಿಯನ್‍ ಟೇಲ್‍’ ಕುರಿತು ಈಗಾಗಲೇ ಪ್ರೇಕ್ಷಕರ ವಲಯದಲ್ಲಿ ಸಾಕಷ್ಟು ಕುತೂಹಲ ಮತ್ತು ನಿರೀಕ್ಷೆಗಳಿವೆ. ಅದಕ್ಕೆ ಒಂದು ಪ್ರಮುಖ ಕಾರಣ ಚಿತ್ರದ ತಾರಾಗಣ. ‘ಪ್ಯಾನ್‍ ಇಂಡಿಯಾ ಸೂಪರ್ ಸ್ಟಾರ್ ಪ್ರಭಾಸ್‍ ಮತ್ತು ಮಲಯಾಳಂ ಚಿತ್ರರಂಗದ ಜನಪ್ರಿಯ ನಟ ಮೋಹನ್‍ ಲಾಲ್‍, ಈ ಚಿತ್ರದಲ್ಲಿ ನಟಿಸುತ್ತಿರುವುದು ಈಗಾಗಲೇ ಸುದ್ದಿಯಾಗಿದೆ. ಈಗ ಶಿವರಾಜಕುಮಾರ್ ಸಹ ಈ ಚಿತ್ರಕ್ಕೆ ಸೇರ್ಪಡೆಯಾಗಿದ್ದಾರೆ.


ಶಿವರಾಜ್‍ಕುಮಾರ್ ಅವರಿಗೂ, ಕಣ್ಣಪ್ಪನಿಗೂ ಬಹಳ ಹಳೆಯ ನಂಟು. ಹಲವು ವರ್ಷಗಳ ಹಿಂದೆ ಶಿವರಾಜ್‍ಕುಮಾರ್ ಅವರು, ‘ಶಿವ ಮೆಚ್ಚಿದ ಕಣ್ಣಪ್ಪ’ ಚಿತ್ರದಲ್ಲಿ ಮೊದಲು ದಿಣ್ಣನಾಗಿ, ಆ ನಂತರ ಶಿವನ ಅನುಗ್ರಹಕ್ಕೆ ಪಾತ್ರವಾಗುವ ಕಣ್ಣಪ್ಪನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈಗ ಅದೇ ಪಾತ್ರವನ್ನು ತೆಲುಗಿನಲ್ಲಿ ವಿಷ್ಣು ಮಂಚು ಮಾಡುತ್ತಿದ್ದಾರೆ ಎನ್ನುವುದು ವಿಶೇಷ.
‘ಕಣ್ಣಪ್ಪ’ ಚಿತ್ರದಲ್ಲಿ ಶಿವರಾಜ್‍ಕುಮಾರ್ ಅವರ ಪಾತ್ರವೇನು? ಎಂಬ ವಿಷಯವನ್ನು ಚಿತ್ರತಂಡ ಸದ್ಯಕ್ಕೆ ರಹಸ್ಯವಾಗಿಟ್ಟಿದೆ. ಆದರೆ, ಶಿವಣ್ಣ ಅವರ ಪಾತ್ರ ಇಡೀ ಚಿತ್ರದ ಹೈಲೈಟ್‍ ಆಗಲಿದ್ದು, ಅಭಿಮಾನಿಗಳಿಗೆ ಬಹಳ ಇಷ್ಟವಾಗಲಿದೆ ಎಂಬುದು ಚಿತ್ರತಂಡದ ಅಭಿಪ್ರಾಯ.


ಈ ಹಿಂದೆ ಸ್ಟಾರ್ ಪ್ಲಸ್‍ ವಾಹಿನಿಗಾಗಿ ‘ಮಹಾಭಾರತ’ ಸರಣಿಯನ್ನು ನಿರ್ದೇಶಿಸಿದ್ದ ಮುಕೇಶ್‍ ಕುಮಾರ್ ‍ಸಿಂಗ್‍, ಈ ಪೌರಾಣಿಕ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಹಿರಿಯ ನಟ ಮತ್ತು ನಿರ್ಮಾಪಕ ಡಾ. ಮೋಹನ್‍ ಬಾಬು ನಿರ್ಮಿಸುತ್ತಿರುವ ಶಿವನ ಅಚಲ ಭಕ್ತನಾದ ಕಣ್ಣಪ್ಪನ ಕಾಲಾತೀತ ಕಥೆಯ ಚಿತ್ರೀಕರಣ ಈಗಾಗಲೇ ನ್ಯೂಜಿಲ್ಯಾಂಡ್‍ನಲ್ಲಿ ಪ್ರಾರಂಭವಾಗಿದೆ.

Related Posts

error: Content is protected !!