ಮಾಲತಿ ಶೇಖರ್ ಶಿವಮೊಗ್ಗ ನಿರ್ಮಾಣದ, ಎಂ ಜೈರಾಮ್ ನಿರ್ದೇಶನದಲ್ಲಿ ಸುಮಂತ್ ಶೈಲೇಂದ್ರ ನಾಯಕನಾಗಿ ನಟಿಸುತ್ತಿರುವ “ಚೇಸರ್” ಚಿತ್ರದ ಚಿತ್ರೀಕರಣ ಮುಕ್ತಾಯ ಹಂತ ತಲುಪಿದ್ದು, ಕೆಲವು ದಿನಗಳ ಚಿತ್ರೀಕರಣ ಮಾತ್ರ ಬಾಕಿಯಿದೆ.
ಸೆಪ್ಟೆಂಬರ್ 7 ನಾಯಕ , ಶೈಲೇಂದ್ರ ಹುಟ್ಟುಹಬ್ಬ. ಅದೇ ದಿನ “ಚೇಸರ್” ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡುವ ಮೂಲಕ ಸುಮಂತ್ ಅವರಿಗೆ ಹುಟ್ಟುಹಬ್ಬದ ಉಡುಗೊರೆ ನೀಡಲು ಚಿತ್ರತಂಡ ಮುಂದಾಗಿದೆ.
ಸಸ್ಪೆನ್ಸ್ ವಿತ್ ಆಕ್ಷನ್ ಜಾನರ್ ನ ಈ ಚಿತ್ರಕ್ಕೆ ನಿರ್ದೇಶಕ ಎಂ.ಜೈರಾಮ್ ಅವರೆ ಕಥೆ, ಚಿತ್ರಕಥೆ ಬರೆದಿದ್ದಾರೆ. ಅರ್ಜುನ್ ಜನ್ಯ ಸಂಗೀತ ನಿರ್ದೇಶನ, ಕೆ.ಎಸ್ ಚಂದ್ರಶೇಖರ್ ಛಾಯಾಗ್ರಹಣ ಹಾಗೂ ಕೆ.ಎಂ.ಪ್ರಕಾಶ್ ಸಂಕಲನ ಈ ಚಿತ್ರಕ್ಕಿದೆ.
ಸುಮಂತ್ ಶೈಲೇಂದ್ರ ಅವರಿಗೆ ನಾಯಕಿಯಾಗಿ ರಕ್ಷ ಮೆನನ್ ನಟಿಸುತ್ತಿದ್ದಾರೆ. ರವಿಶಂಕರ್, ರಂಗಾಯಣ ರಘು, ಸಾಧುಕೋಕಿಲ, ಚಿಕ್ಕಣ್ಣ, ಕುರಿ ಪ್ರತಾಪ್, ಸುಚೇಂದ್ರ ಪ್ರಸಾದ್, ಕಡಿಪುಡಿ ಚಂದ್ರು, ಸಂಗೀತ ಮುಂತಾದವರು “ಚೇಸರ್” ಚಿತ್ರದ ತಾರಾಬಳಗದಲ್ಲಿದ್ದಾರೆ.
ಉಸಿರೇ ಉಸಿರೇ ಚಿತ್ರದ ಪ್ರಮುಖಪಾತ್ರದಲ್ಲಿ ಅಭಿನಯಿಸಿರುವ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್. ತಮ್ಮ ಹುಟ್ಟು ಹಬ್ಬದ ಹಿಂದಿನ ದಿನ ಈ ಚಿತ್ರದ ಡಬ್ಬಿಂಗ್ ಮುಗಿಸಿಕೊಟ್ಟಿದ್ದಾರೆ
ಇದೊಂದು ನವಿರಾದ ಪ್ರೇಮಕಥೆ ಎನ್ನುವ ನಿರ್ಮಾಪಕ ಪ್ರದೀಪ್ ಯಾದವ್, ಇದು ನನ್ನ ಮೊದಲ ನಿರ್ಮಾಣದ ಚಿತ್ರ. ನಾನು ಚಿತ್ರ ನಿರ್ಮಾಣ ಮಾಡಲು ಕಿಚ್ಚ ಸುದೀಪ್ ಅವರೆ ಸ್ಪೂರ್ತಿ. ಅವರು ನನ್ನ ಬೆನ್ನೆಲುಬಾಗಿ ನಿಂತರು ಹಾಗೂ ಪ್ರಮುಖ ಪಾತ್ರದಲ್ಲಿ ಅಭಿನಯ ಕೂಡ ಮಾಡಿದ್ದಾರೆ. ಸುದೀಪ್ ಅವರಿಗೆ ಹಾಗೂ ನನ್ನ ಇಡೀ ತಂಡಕ್ಕೆ ಧನ್ಯವಾದ ಎಂದಿದ್ದಾರೆ.
ಚಿತ್ರದ ಚಿತ್ರೀಕರಣ ಮುಕ್ತಾಯವಾಗಿ, ಪೋಸ್ಟ್ ಪ್ರೊಡಕ್ಷನ್ ವರ್ಕ್ ನಡೆಯುತ್ತಿದೆ. ಎಲ್ಲಾ ಅಂದುಕೊಂಡಂತೆ ಆದರೆ ಆಕ್ಟೋಬರ್ ನಲ್ಲಿ ತೆರೆಗೆ ಬರುವ ಸಾಧ್ಯತೆಗಳಿವೆ. “ಉಸಿರೇ ಉಸಿರೇ” ಚಿತ್ರದಲ್ಲಿ ಕಲಾವಿದರ ದಂಡೇ ಇದೆ. ರಾಜೀವ್ ಅವರಿಗೆ ನಾಯಕಿಯಾಗಿ ಶ್ರೀಜಿತ ನಟಿಸಿದ್ದಾರೆ. ಕಿಚ್ಚ ಸುದೀಪ್ ವಿಶೇಷಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ತೆಲುಗಿನ ಖ್ಯಾತ ನಟರಾದ ಆಲಿ ಹಾಗೂ ಪದ್ಮಭೂಷಣ ಪ್ರಶಸ್ತಿ ವಿಜೇತರು, ಅತೀ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಗಿನ್ನಿಸ್ ರೆಕಾರ್ಡ್ ಮಾಡಿರುವ ಬ್ರಹ್ಮಾನಂದಂ ಮೊದಲ ಬಾರಿಗೆ ನಮ್ಮ ಚಿತ್ರದಲ್ಲಿ ಒಟ್ಟಾಗಿ ನಟಿಸಿದ್ದಾರೆ. ಡೈನಾಮಿಕ್ ಸ್ಟಾರ್ ದೇವರಾಜ್, ಸಾಧುಕೋಕಿಲ, ಮಂಜು ಪಾವಗಡ, ತಾರಾ, ಸುಚೇಂದ್ರ ಪ್ರಸಾದ್, ರಾಜೇಶ್ ನಟರಂಗ, ಶೈನಿಂಗ್ ಸೀತಾರಾಮು,ಜಗಪ್ಪ, ಸುಶ್ಮಿತಾ ಮುಂತಾದವರ ತಾರಾಬಳಗವಿದೆ ಎನ್ನುತ್ತಾರೆ ನಿರ್ದೇಶಕ ಸಿ.ಎಂ.ವಿಜಯ್.
ಮನು ಛಾಯಾಗ್ರಹಣ, ಕೆ ಎಂ ಪ್ರಕಾಶ್ ಸಂಕಲನ, ಟೈಗರ್ ಶಿವು ಸಾಹಸ ನಿರ್ದೇಶನ ಹಾಗೂ ಮೋಹನ್ ಮತ್ತು ಹೈಟ್ ಮಂಜು ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದ್ದು, ವಿವೇಕ್ ಚಕ್ರವರ್ತಿ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ.
ಪ್ರಮೋದ್ ಶೆಟ್ಟಿ ನಾಯಕನಾಗಿ ನಟಿಸಿರುವ ” ಜಲಂಧರ” ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದ್ದು, ಪೋಸ್ ಪ್ರೊಡಕ್ಷನ್ ಕಾರ್ಯ ಬಿರುಸಿನಿಂದ ಸಾಗಿದೆ. ಈಗಾಗಲೇ ಈ ಚಿತ್ರದ ಪೋಸ್ಟರ್ ಸಹ ಬಿಡುಗಡೆಯಾಗಿದ್ದು, ಜನಪ್ರಿಯವಾಗಿದೆ.
ವಿಷ್ಣು ವಿ ಪ್ರಸನ್ನ ಚೊಚ್ಚಲ ನಿರ್ದೇಶನದ ಈ ಚಿತ್ರ ಕ್ರೈಮ್ ಥ್ರಿಲ್ಲರ್ ಕಥಾಹಂದರ ಹೊಂದಿದೆ. ಕಾವೇರಿ ನದಿದಡದ ಮಧುವತ್ತಿ ಎಂಬ ಊರಿನಲ್ಲಿ ಈ ಚಿತ್ರದ ಕಥೆ ತೆರೆದುಕೊಳ್ಳುತ್ತದೆ. ಲೋಕೇಶ್ ಈ ಚಿತ್ರಕ್ಕೆ ಕಥೆ ಬರೆದಿದ್ದಾರೆ.
ಸ್ಟೆಪ್ ಅಪ್ ಪಿಕ್ಚರ್ಸ್ ಲಾಂಛನದಲ್ಲಿ ಮದನ್ ಎಸ್ ನಿರ್ಮಾಣ ಮಾಡುತ್ತಿದ್ದಾರೆ. ಚಂದ್ರ ಮೋಹನ್, ರಾಮಚಂದ್ರ ಹಾಗೂ ಪದ್ಮನಾಭನ್ ಸಹ ನಿರ್ಮಾಪಕರಾಗಿದ್ದಾರೆ. ಮುತ್ತತ್ತಿ, ಬೆಂಗಳೂರಿನ ಸುತ್ತಮುತ್ತ ಚಿತ್ರೀಕರಣ ನಡೆದಿದೆ.
ಪ್ರಮೋದ್ ಶೆಟ್ಟಿ, ಲೋಕೇಶ್ ಗೌಡ, ರಘು ರಮಣಕೊಪ್ಪ, ಬಾಲ ರಾಜವಾಡಿ, ರಿಶಿಕಾ ರಾಜ್, ಆರೋಹಿತ ಗೌಡ, ನವೀನ್ ಸಾಗರ್, ಪ್ರತಾಪ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
ಸರಿನ್ ರವೀಂದ್ರನ್ ಹಾಗೂ ವಿದ್ಯಾಶಂಕರ್ ಛಾಯಾಗ್ರಹಣ, ಜತಿನ್ ದರ್ಶನ್ ಸಂಗೀತ ನಿರ್ದೇಶನ ಹಾಗೂ ವೆಂಕಿ ಯು ಡಿ ವಿ ಸಂಕಲನ “ಜಲಂಧರ” ಚಿತ್ರಕ್ಕಿದೆ.
ಕನ್ನಡದ ಮೇರು ಪ್ರತಿಭೆಗಳಾದ ಡಾ. ರಾಜಕುಮಾರ್, ಡಾ.ವಿಷ್ಣುವರ್ಧನ್, ಡಾ.ಅಂಬರೀಶ್ ಸೇರಿದಂತೆ ಅನೇಕ ಖ್ಯಾತ ನಟರ ಚಿತ್ರಗಳನ್ನು ನಿರ್ದೇಶಿಸಿರುವ ಹೆಸರಾಂತ ನಿರ್ದೇಶಕ ಡಾ.ಎಸ್ ನಾರಾಯಣ್ ನಿರ್ದೇಶನದಲ್ಲಿ ಶ್ರೇಯಸ್ ಮಂಜು ನಾಯಕನಾಗಿ ನಟಿಸುತ್ತಿರುವ “ಒಂದ್ಸಲ ಮೀಟ್ ಮಾಡೋಣ” ಚಿತ್ರ ಆರಂಭವಾಗಿದೆ.
ಚಿಕ್ಕಮಗಳೂರಿನ ಶ್ರೀದೇವಿರಮ್ಮ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತ ಸಮಾರಂಭ ನೆರವೇರಿದೆ. ಶ್ರೇಯಸ್ ಮಂಜು ಹಾಗೂ ತಾರಾ ಅನುರಾಧ ಅವರ ಮೇಲೆ ಸೆರೆಹಿಡಿಯಲಾದ ಮೊದಲ ಸನ್ನಿವೇಶಕ್ಕೆ ಸ್ಥಳೀಯ ಶಾಸಕರಾದ ಹೆಚ್ ಡಿ ತಮ್ಮಯ್ಯ ಆರಂಭ ಫಲಕ ತೋರಿದರು. ನಿರ್ಮಾಣ ಸಹಾಯಕ ಮಹದೇವ ಕ್ಯಾಮೆರಾ ಚಾಲನೆ ಮಾಡಿದರು.
“ಒಂದ್ಸಲ ಮೀಟ್ ಮಾಡೋಣ” ಪ್ರೀತಿಯ ಜರ್ನಿ ಎಂದು ಹೇಳುವ ನಿರ್ದೇಶಕರು, ಚಿಕ್ಕಮಗಳೂರಿನಿಂದ ಚಿತ್ರೀಕರಣ ಪ್ರಾರಂಭವಾಗಿ, ಸಕಲೇಶಪುರ, ವಿರಾಜಪೇಟೆ, ಕಣ್ಣೂರು, ಮೈಸೂರು, ಬೆಂಗಳೂರು, ಬೆಳಗಾವಿ ಹಾಗೂ ಗೋವಾ ಮುಂತಾದ ಕಡೆ ನಡೆಯಲಿದೆ. ಇದೊಂದು ಟ್ರಾವೆಲಿಂಗ್ ಲವ್ ಸ್ಟೋರಿ ಎಂದು ತಿಳಿಸಿದ್ದಾರೆ.
ಈಶಾ ಪ್ರೊಡಕ್ಷನ್ಸ್ ಲಾಂಛನದಲ್ಲಿ ಬಿ.ಪಿ.ತ್ಯಾಗರಾಜ್ ಅವರು ಅರ್ಪಿಸುತ್ತಿರುವ ಈ ಚಿತ್ರವನ್ನು ಕೆ.ಮಂಜು ಹಾಗೂ ರಮೇಶ್ ಯಾದವ್ ನಿರ್ಮಾಣ ಮಾಡುತ್ತಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಸದಭಿರುಚಿ ಚಿತ್ರಗಳನ್ನು ನಿರ್ಮಾಣ ಮಾಡಿರುವ ಕೆ.ಮಂಜು ಹಾಗೂ ರಮೇಶ್ ಯಾದವ್ ಅವರು ಜಂಟಿಯಾಗಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಮುಂದೆ ಇವರ ಕಾಂಬಿನೇಶನ್ ನಲ್ಲಿ ಸಾಕಷ್ಟು ಚಿತ್ರಗಳು ನಿರ್ಮಾಣವಾಗಲಿದೆ.
ನಿರ್ದೇಶಕ ಎಸ್ ನಾರಾಯಣ್ ಚಿತ್ರಕಥೆ, ಸಂಭಾಷಣೆ ಬರೆದು ಗೀತರಚನೆ ಮಾಡಿರುವ ಈ ಚಿತ್ರಕ್ಕೆ ಜಸ್ಸಿ ಗಿಫ್ಟ್ ಸಂಗೀತ ನೀಡುತ್ತಿದ್ದಾರೆ. ಕುಮಾರ್ ಗೌಡ ಛಾಯಾಗ್ರಹಣ, ಶಿವಪ್ರಸಾದ್ ಯಾದವ್ ಸಂಕಲನ, ಅರ್ಜುನ್ ಸಾಹಸ ನಿರ್ದೇಶನ, ಸಂತು ನೃತ್ಯ ನಿರ್ದೇಶನ ಹಾಗೂ ಆನಂದ್ ಅವರ ಕಲಾ ನಿರ್ದೇಶನ “ಒಂದ್ಸಲ ಮೀಟ್ ಮಾಡೋಣ” ಚಿತ್ರಕ್ಕಿದೆ.
ಕನ್ನಡದ ಸಮುದ್ರಂ ಸಿನಿಮಾ ನಿರ್ಮಾಪಕರು ಛಾಯಾಗ್ರಾಹಕರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಹೌದು, ಚನ್ನಮ್ಮನ ಅಚ್ಚುಕಟ್ಟು ಪ್ರದೇಶದ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ, ತಮ್ಮ ನಿರ್ಮಾಣದ ‘ಸಮುದ್ರಂ’ ಚಿತ್ರದ ಚಿತ್ರೀಕರಣ ಮಾಡಿರುವ ಹಾರ್ಡ್ ಡಿಸ್ಕ್ ಕೊಡದೆ ಮತ್ತು ಹಾಡ್ಸ್ ಡಿಸ್ಕ್ ಕೊಡುವಂತೆ ಕೇಳಿದರೆ ಛಾಯಾಗ್ರಾಹಕ ರಿಶಿಕೇಷ್ ಜೀವ ಬೆದರಿಕೆ ಹಾಕಿದ್ದಾರೆ ಎಂದು ನಿರ್ಮಾಪಕಿಬ ನ ರಾಜಲಕ್ಷ್ಮಿ ದೂರು ನೀಡಿದ್ದಾರೆ.
ಈ ಪ್ರಕರಣ ಕುರಿತಂತೆ ಸಿನಿಮಾ ನಾಯಕಿ ಅನಿತಾಭಟ್ ಸ್ಪಷ್ಟನೆ ನೀಡಿದ್ದಾರೆ. ‘ಆರಂಭದಲ್ಲಿ ನಾವೆಲ್ಲ ಸೇರಿ ಈ ಸಿನಿಮಾ ಶುರು ಮಾಡಿದ್ದೆವು. ಮೊದಲು ನಿರ್ಮಾಣಕ್ಕೆ ಕೈ ಹಾಕಿದ್ದೆವು. ನಂತರ ಸ್ವಲ್ಪ ಹಣದ ಸಮಸ್ಯೆ ಎದುರಾಯ್ತು. ಹಾಗಾಗಿ ನಿರ್ದೇಶಕ ರಾಘವ ಮಹರ್ಷಿ ಅವರು ರಾಜಲಕ್ಷ್ಮಿ ಎಂಬುವರನ್ನು ಪರಿಚಯಿಸಿದರು. ಆಗ ಎಲ್ಲರೂ ಒಟ್ಟಿಗೆ ಕೆಲಸ ಮಾಡುತ್ತಿದ್ದೆವು. ಆದರೆ, ರಾಜಲಕ್ಷ್ಮಿ ನಾನೇ ನಿರ್ಮಾಣ ಮಾಡುತ್ತೇನೆ ಎಂದರು. ಅದಕ್ಕೂ ನಾವು ಒಪ್ಪಿ, ಹಾಗಾದರೆ ನಾವು ಈವರೆಗೆ ಶೂಟಿಂಗ್ ಗೆ ಮಾಡಿರುವಶ ಖರ್ಚನ್ನು ಕೊಡಿ ಅಂದಾಗ ಅವರು ಈವರೆಗೂ ಹಣ ಹಿಂದಿರುಗಿಸಿಲ್ಲ.
ಸಿನಿಮಾದಲ್ಲಿ ಕೆಲಸ ಮಾಡಿದ ‘ಟೆಕ್ನಿಷನ್ ಗೆ ಕೊಡಬೇಕಾದ ಹಣ ಇನ್ನೂ ಬಾಕಿ ಉಳಿಸಿಕೊಂಡಿದ್ದಾರೆ. ಕ್ಯಾಮೆರಾಮೆನ್ ರಿಶಿಕೇಷ್ ಅವರಿಗೂ ದುಡ್ಡು ಕೊಡಬೇಕು. ಹಾಗಾಗಿ ಇಬ್ಬರ ಮಧ್ಯೆ ಸ್ವಲ್ಪ ಮನಸ್ತಾಪವಾಗಿದೆ. ಇದಕ್ಕೆ ಸಂಬಂಧಿಸಿದಂತೆ ಈ ಹಿಂದೆ ಕೂಡ ತೊಂದರೆ ಮಾಡಿದ್ದಾರೆ. ಈ ವಿಚಾರದಲ್ಲಿ ಕ್ಯಾಮೆರಾಮೆನ್ ಅವರದು ತೊಂದರೆಯಿಲ್ಲ.
ನಿರ್ಮಾಪಕಿ ರಾಜಲಕ್ಷ್ಮಿ ಅವರ ವಿರುದ್ಧ ನಾವೂ ಕೂಡ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ದೂರು ನೀಡಿದ್ದೆವು. ಸಿನಿಮಾ ರಿಲೀಸ್ ಆದ ನಂತರ ಹಣ ಕೊಡುವುದಾಗಿ ಅವರು ಹೇಳಿದರು. ಆದರೆ, ಈಗ ನೋಡಿದರೆ ಹೀಗೆ ದೂರು ನೀಡಿದ್ದಾರೆ. ಇದು ಎಷ್ಟು ಸರಿ? ಎಂದಿದ್ದಾರೆ ಅನಿತಾ ಭಟ್.
ಸಿನಿಮಾ ನಿರ್ದೇಶಕರನ್ನು ಬಿಟ್ಟು, ಸಿನಿಮಾಟೋಗ್ರಾಫರ್ ಹೇಗೆ ಹಾರ್ಡ್ ಡಿಸ್ಕ್ ಇಟ್ಟುಕೊಳ್ಳಲು ಆಗುತ್ತೆ ? ಹಣಕಾಸಿನ ವಿಷಯದಲ್ಲಿ ಮನಸ್ತಾಪ ಆಗಿದೆ. ನಾನ ಇಲ್ಲಿ ನಟಿಸಿದ್ದೇನೆ. ನಿರ್ಮಾಪಕಿಯೂ ಆಗಿದ್ದೇನೆ. ಆ ಸಿನಿಮಾದ ಬಿಡುಗಡೆಗೆ ಬೇಕಾದ ಎಲ್ಲ ಸಹಾಯವನ್ನು ಈಗಲೂ ನಾನು ಮಾಡಲು ಸಿದ್ದಳಿದ್ದೇನೆ. ಆದರೆ, ತಂಡದ ಮಧ್ಯೆ ಹೀಗೆಲ್ಲ ಒಡಕು ತರುವುದು ಎಷ್ಟು ಸರಿ ಎಂಬುದು ಅನಿತಾ ಭಟ್ ಮಾತು.
ಹಿರಿಯ ಸಾಹಿತಿ ಪಿ.ಲಂಕೇಶ್ ಅವರ ಮೊಮ್ಮಗ, ಇಂದ್ರಜಿತ್ ಲಂಕೇಶ್ ಅವರ ಮಗ ಸಮರ್ಜಿತ್ ಲಂಕೇಶ್ ನಾಯಕರಾಗಿ ನಟಿಸುತ್ತಿರುವ “ಗೌರಿ” ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ನಡೆದಿದೆ. ಈ ಚಿತ್ರದ ಮೂಲಕ ಸಮರ್ಜಿತ್ ನಾಯಕರಾಗಿ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ.
ಬಸವನಗುಡಿ ರಸ್ತೆಯಲ್ಲಿರುವ ದೊಡ್ಡ ಗಣಪತಿ ದೇವಸ್ಥಾನದಲ್ಲಿ ಮುಹೂರ್ತ ಸಮಾರಂಭ ನೆರವೇರಿದ್ದು,. ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರು ಚಿತ್ರದ ಮೊದಲ ಸನ್ನಿವೇಶಕ್ಕೆ ಕ್ಲಾಪ್ ಮಾಡುವ ಮೂಲಕ ಚಾಲನೆ ನೀಡಿದ್ದಾರೆ.
ಈ ಚಿತ್ರದ ಕುರಿತು ಮಾತನಾಡಿದ ಇಂದ್ರಜಿತ್ ಲಂಕೇಶ್, “ಗೌರಿ” ಶೀರ್ಷಿಕೆ ಇಡಲು ಕಾರಣವಿದೆ. ನಮ್ಮ ಅಕ್ಕನ ನೆನಪಿನಲ್ಲಿ ಈ ಶೀರ್ಷಿಕೆಯಿಟ್ಟಿದ್ದೇನೆ. ಈ ಚಿತ್ರ ಯುವಕರಿಗೊಂದು ಸ್ಫೂರ್ತಿದಾಯಕ ಸಿನಿಮಾ ಆಗುವುದಂತು ನಿಜ. ಚಿತ್ರದಲ್ಲೊಂದು ಅದ್ಭುತವಾದ ಸಂದೇಶವಿದೆ. ಏನೇ ಹೆಚ್ಚು ಹೇಳಿದರೂ ಈ ಚಿತ್ರದ ಕಥೆ ಏನಿರಬಹುದು? ಎಂಬುದು ಎಲ್ಲರಿಗೂ ತಿಳಿಯುತ್ತದೆ.
ಇದು ನಮ್ಮ ರಾಜ್ಯದ ಕಥೆ. ಇಡೀ ದೇಶಕ್ಕೇ ಇಷ್ಟವಾಗುತ್ತದೆ ಎಂಬ ನಂಬಿಕೆ ನನಗಿದೆ. ಇದೊಂದು ನೈಜ ಘಟನೆಯನ್ನಾಧರಿಸಿದ ಚಿತ್ರ. ಚಿತ್ರದಲ್ಲಿ ಬಹುದೊಡ್ಡ ತಾರಾಗಣವಿದೆ. ಮುಂದಿನ ದಿನಗಳಲ್ಲಿ ಒಂದೊಂದೇ ವಿಷಯಗಳನ್ನು ಹಂಚಿಕೊಳ್ಳುತ್ತಾ ಹೋಗುತ್ತೇ ಎನ್ನುತ್ತಾರೆ ಇಂದ್ರಜಿತ್.
‘ಗೌರಿ’ ಚಿತ್ರದಲ್ಲಿ ನಾಯಕ ಸಮರ್ಜಿತ್ ಲಂಕೇಶ್ ಮತ್ತು ನಾಯಕಿ ಸಾನಿಯಾ ಅಯ್ಯರ್ ಸಹ ಈ ಚಿತ್ರದಲ್ಲಿ ನಟಿಸುತ್ತಿರುವುದಕ್ಕೆ ಸಂತಸಪಟ್ಟರು. ‘ಕಾಂತಾರ’ ಚಿತ್ರದ ಖ್ಯಾತಿಯ ಮಾನಸಿ ಸುಧೀರ್ ಸಹ ಈ ಚಿತ್ರದ ಪ್ರಮುಖಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಇಂದ್ರಜಿತ್ ಅವರ ಪತ್ನಿ ಅರ್ಪಿತಾ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಜೆಸ್ಸಿ ಗಿಫ್ಟ್ ಮತ್ತು ಚಂದನ್ ಶೆಟ್ಟಿ ಸಂಗೀತ ಸಂಯೋಜಿಸುತ್ತಿದ್ದಾರೆ. ಎ.ಜೆ. ಶೆಟ್ಟಿ ಅವರ ಛಾಯಾಗ್ರಹಣವಿದ್ದು, ಮಾಸ್ತಿ ಮಂಜು ಮತ್ತು ಬಿ.ಎ. ಮಧು ಸಂಭಾಷಣೆ ಬರೆಯುತ್ತಿದ್ದಾರೆ.
‘ಗೌರಿ’ ಚಿತ್ರವನ್ನು 2024 ರ ಮಾರ್ಚ್ ನಲ್ಲಿ ತೆರೆಗೆ ತರುವ ಯೋಜನೆ ಹಾಕಿಕೊಂಡಿದ್ದಾರೆ ಇಂದ್ರಜಿತ್ ಲಂಕೇಶ್.
ಈ ಸಂದರ್ಭದಲ್ಲಿ ಸಂಭಾಷಣೆಕಾರರಾದ ಬಿ.ಎ. ಮಧು ಮತ್ತು ಮಾಸ್ತಿ ಮಂಜು, ಗೀತರಚನೆಕಾರ ಕವಿರಾಜ್, ಆನಂದ್ ಆಡಿಯೋ ಶ್ಯಾಮ್, ಹಿರಿಯ ನಿರ್ಮಾಪಕ ಕೆ. ಮಂಜು ಮುಂತಾದವರು ಹಾಜರಿದ್ದು ‘ಗೌರಿ’ ಚಿತ್ರತಂಡಕ್ಕೆ ಶುಭಕೋರಿದರು.
ನಟ ಸುದೀಪ್ ಅವರರ 50ನೇ ಹುಟ್ಟುಹಬ್ಬದಂದು ಪತ್ರಕರ್ತ, ನಟ ಹಾಗೂ ನಿರ್ದೇಶಕ ಡಿ.ಜೆ ಚಕ್ರವರ್ತಿ(ಚಂದ್ರಚೂಡ್), “ವೃಕ್ಷದೀಪ” ಎಂಬ ಹೆಸರಿನಲ್ಲಿ ಒಂದು ಲಕ್ಷ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಕೃಷಿ ಸಚಿವ ಚಲುವರಾಯಸ್ವಾಮಿ ವೃಕ್ಷದೀಪ ಅಭಿಯಾನಕ್ಕೆ ಚಾಲನೆ ನೀಡಿ ಶುಭ ಕೋರಿದ್ದಾರೆ. “ಅಭಿನಯ ತಿಲಕ” ಎಂಬ ಅಭಿಮಾನದ ಹಾಡನ್ನು ಚಲವಾದಿ ಮಹಾಸಭಾದ ಜ್ಞಾನಪ್ರಕಾಶ ಸ್ವಾಮೀಜಿ ಬಿಡುಗಡೆ ಮಾಡಿ ಹಾರೈಸಿದ್ದು, ಕಾರ್ಯಕ್ರಮದಲ್ಲಿ ಶಾಸಕ ರಾಜು ಗೌಡ ನಾಯಕ, ವೀರಕಪುತ್ರ ಶ್ರೀನಿವಾಸ್ ಇತರರು ಇದ್ದರು.
ಇದೇ ಸಂದರ್ಭದಲ್ಲಿ ಮಯೂರ ಮೋಷನ್ ಪಿಕ್ಚರ್ಸ್ ಲಾಂಛನದಲ್ಲಿ ಮಂಜುನಾಥ್ ಡಿ ನಿರ್ಮಿಸುತ್ತಿರುವ, ಡಿ.ಜೆ.ಚಕ್ರವರ್ತಿ ನಿರ್ದೇಶನದ ಹಾಗೂ ಮಿಲಿಂದ್ ಗೌತಮ್ ನಾಯಕರಾಗಿ ನಟಿಸುತ್ತಿರುವ “ಹುಲಿ ನಾಯಕ” ಚಿತ್ರದ ಮೋಷನ್ ಪೋಸ್ಟರನ್ನು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಬಿಡುಗಡೆ ಮಾಡಿದರು.
ಮೋಷನ್ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದ ಸುದೀಒ್, ಚಕ್ರವರ್ತಿ ಬಿಗ್ ಬಾಸ್ ನಿಂದ ನನಗೆ ಹತ್ತಿರವಾದರು. ಆತ ಅದ್ಭುತ ರೈಟರ್. ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ “ಹುಲಿನಾಯಕ” ಚಿತ್ರ ಯಶಸ್ವಿಯಾಗಲಿ ಎಂದು ಹಾರೈಸಿದರು.
“ವೃಕ್ಷದೀಪ” ಅಭಿಯಾನಕ್ಕೆ ಚಾಲನೆ ನೀಡಿದ ಎಲ್ಲಾ ಗಣ್ಯರಿಗೆ, ಹಾಡು ಬಿಡುಗಡೆ ಮಾಡಿಕೊಟ್ಟ ಸ್ವಾಮೀಜಿ ಅವರಿಗೆ ಹಾಗೂ ಹುಟ್ಟುಹಬ್ಬದ ಸಡಗರದಲ್ಲಿದ್ದರೂ ನಮ್ಮ ಕಾರ್ಯಕ್ರಮಕ್ಕೆ ಆಗಮಿಸಿ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿಕೊಟ್ಟ ಕಿಚ್ಚ ಸುದೀಪ್ ಅವರಿಗೆ ನನ್ನ ಧನ್ಯವಾದ.
ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಸಿಂಧೂರ ವೀರ ಲಕ್ಷ್ಮಣ ನಾಯಕ ಅವರ ಕುರಿತಾದ ಈ ಚಿತ್ರವನ್ನು ಮಂಜುನಾಥ್ ಅವರು ನಿರ್ಮಿಸುತ್ತಿದ್ದಾರೆ. ಮಿಲಿಂದ್ ಗೌತಮ್ ನಾಯಕರಾಗಿ ನಟಿಸುತ್ತಿದ್ದಾರೆ. ನಾನು ನಿರ್ದೇಶನ ಮಾಡುತ್ತಿದ್ದೇನೆ. ಇಂದು ಫಸ್ಟ್ ಲುಕ್ ಹಾಗೂ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ. ಮುಂದಿನ ದಿನಗಳಲ್ಲಿ ಚಿತ್ರದ ಬಗ್ಗೆ ಹೆಚ್ಚು ಮಾಹಿತಿ ನೀಡುತ್ತೇನೆ ಎಂದರು ಡಿ.ಜೆ ಚಕ್ರವರ್ತಿ.
ಚಕ್ರವರ್ತಿ ಅವರು ಒಳ್ಳೆಯ ಕಥೆ ಆಯ್ಕೆ ಮಾಡಿಕೊಂಡಿದ್ದಾರೆ. ಸುದೀಪ್ ಅವರು ನಮ್ಮ ಚಿತ್ರಕ್ಕೆ ಶುಭ ಹಾರೈಸಿದ್ದಾರೆ. ನನ್ನ ಮಗ ಮಿಲಿಂದ್ ಗೌತಮ್ ನಾಯಕನಾಗಿ ನಟಿಸುತ್ತಿದ್ದಾನೆ. ನಮ್ಮ ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಿರ್ಮಾಪಕ ಮಂಜುನಾಥ್.
ನಮ್ಮ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿಕೊಟ್ಟ ಸುದೀಪ್ ಸರ್ ಅವರಿಗೆ ನಾನು ಆಭಾರಿ. ಉತ್ತಮ ಕಥೆ ಆಯ್ಕೆ ಮಾಡಿಕೊಂಡಿರುವ ಚಕ್ರವರ್ತಿ ಅವರಿಗೆ ಧನ್ಯವಾದ ಎಂದರು ನಾಯಕ ಮಿಲಿಂದ್ ಗೌತಮ್.
ಇದೇ ಸಂದರ್ಭದಲ್ಲಿ ಡಾಲಿ ಧನಂಜಯ, ನೆನಪಿರಲಿ ಪ್ರೇಮ್, ವಸಿಷ್ಠ ಸಿಂಹ, ಪೂಜಾಗಾಂಧಿ, ಸಂಜನಾ ಗಲ್ರಾನಿ ಮುಂತಾದ ಕಲಾವಿದರು ಸೇರಿ ಸಿಂಧೂರ ಲಕ್ಷ್ಮಣ್ ನಾಯಕ ಅವರ ಕುಟುಂಬದವರನ್ನು ಹಾಗೂ ನಿರ್ದೇಶಕ ಪಲ್ಲಕ್ಕಿ ರಾಧಾಕೃಷ್ಣ ಅವರನ್ನು ಸನ್ಮಾನಿಸಿದರು.
ಸಮಾಜದಲ್ಲಿ ಕಾನೂನಿನ ಬಗ್ಗೆ ಅರಿವಿಲ್ಲದವರು ಹೇಗೆಲ್ಲ ತೊಂದರೆ ಅನುಭವಿಸುತ್ತಿದ್ದಾರೆ. ಕಾನೂನು ಎಂಬ ಅಸ್ತ್ರ ಇಟ್ಟುಕೊಂಡು ಅದರಿಂದ ಹೇಗೆ ಪಾರಾಗಬಹುದು ಎಂಬುದನ್ನು ನಾಗರಾಜ್ ಎಂ.ಜಿ.ಗೌಡ ಅವರು ಕಾನೂನು ಅಸ್ತ್ರ ಚಿತ್ರದ ಮೂಲಕ ಹೇಳ ಹೊರಟಿದ್ದಾರೆ. ಪುಟ್ಟೇಗೌಡ. ಎನ್. ಪ್ರೊಡಕ್ಷನ್ ಅಡಿಯಲ್ಲಿ ಪುಟ್ಟೇಗೌಡ ಎನ್. ಅವರೇ ಕಥೆ, ಸಂಭಾಷಣೆ ಬರೆದು ಚಿತ್ರ ನಿರ್ಮಾಣ ಮಾಡುವ ಜೊತೆಗೆ ಚಿತ್ರದ ಮುಖ್ಯ ಪಾತ್ರದಲ್ಲಿಯೂ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಆಡಿಯೋ ಹಾಗೂ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ. ರಾಜೇಶ್‌ಗೌಡ ಹಾಗೂ ನಟಿ ಅಪೂರ್ವ ಮುಖ್ಯ ಅತಿಥಿಗಳಾಗಿ ಆಗಮಿಸಿ ತಂಡಕ್ಕೆ ಶುಭ ಹಾರೈಸಿದರು.
ಜನರು ವಾಹನ ಸಾಲ ಪಡೆದು, ಕಂತು ಕಟ್ಟಲು ಸ್ವಲ್ಪ ತಡವಾದರೂ ಅವರ ಮೇಲೆ ಸೀಜಿಂಗ್ ನವರ ನಡೆಸುವ ದೌರ್ಜನ್ಯ, ಗೃಹ ಸಾಲ ಪಡೆದವರ ಮೇಲೆ ಬ್ಯಾಂಕ್ ಗಳು ಬೇಕಾಬಿಟ್ಟಿ ಬಡ್ಡಿ ವಿಧಿಸುವಿಕೆ, ಸಾಲ ಪಡೆಯುವಾಗ ಖಾಲಿ ಚೆಕ್ ನೀಡಿದರೆ ಆಗುವ ಪರಿಣಾಮಗಳು, ಗಂಡ ಹೆಂಡತಿ ಡೈವೊರ್ಸ್ ಗೆ ಕಾರಣಗಳು, ನಿರಪರಾಧಿಯ ಮೇಲೆ ಕೊಲೆ ಅಪರಾಧ ಬಂದಾಗ ಕಾನೂನು ಅಂತಹವರನ್ನು ಹೇಗೆ ಸಂರಕ್ಷಿಸುತ್ತದೆ ಎಂದು ಈ ಚಿತ್ರ ಹೇಳಲಿದೆ.
ಕಾನೂನಿನಲ್ಲಿ ಶ್ರೀಮಂತ, ಬಡವ ಎನ್ನುವ ಬೇಧಭಾವ ಇರುವುದಿಲ್ಲ. ಸಮಾಜದಲ್ಲಿ ನಡೆಯುವ ಅನ್ಯಾಯಗಳಿಂದ ಪಾರಾಗುವುದಕ್ಕೆ ಇರೋದು ಒಂದೇ ಆಯುಧ ಎಂದರೆ ಅದು ’ಕಾನೂನು ಅಸ್ತ್ರ . ಸಕಲೇಶಪುರ, ಚಿಕ್ಕಮಗಳೂರು, ಬೆಂಗಳೂರು, ಕುಶಾಲನಗರ, ಮಡಕೇರಿ ಹಾಗೂ ಹೊರದೇಶಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.
ವೆಂಕಿ ಯು.ಡಿ.ವಿ. ಅವರ ಸಂಕಲನ, ವಿನಯ್ ಗೌಡ ಅವರ ಛಾಯಾಗ್ರಹಣ, ವಿನಯ್‌ಪಾಂಡವಪುರ ಸಾಹಿತ್ಯದ ನಾಲ್ಕು ಹಾಡುಗಳಿಗೆ ಮಂಜು ಮಹದೇವ್ ಅವರ ಸಂಗೀತ, ಬಾಲು ಮಾಸ್ಟರ್ ಅವರ ಕೊರಿಯೋಗ್ರಫಿ ಚಿತ್ರಕ್ಮಿದೆ. ಪುಟ್ಟೇಗೌಡ. ಎನ್, ಜಗದೀಶ್. ಹೆಚ್.ಜಿ. ದೊಡ್ಡಿ, ಬಂಡೆಬಾಬು., ಲಕ್ಷ್ಮಿನಾರಾಯಣ್, ಸೌಮ್ಯರಾಜ್, ಯೋಗೇಶ್‌ಶೆಟ್ಟಿ ಇದ್ದಾರೆ.
ಇವರೊಂದಿಗೆ ಬೇಬಿ ಸಾನ್ವಿ ಗೌಡ, ಯೋಗೇಶ್, ಅಂಜನ್, ಚಂದನ,, ಸೌಂದರ್ಯ, ಗಿರೀಶ್, ಮಂಜುನಾಥ್ ಹಿರಿಯೂರು, ಸೌಮ್ಯ ರಾಜ್, ಆನಂದ್, ಮಾನ್ಯ ಗೌಡ, ಇನ್ನೂ ಮುಂತಾದವರು ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸುಸಿದ್ದಾರೆ. ಸದ್ಯ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದ್ದು, ನವೆಂಬರ್ ವೇಳೆಗೆ ಚಿತ್ರಮಂದಿರಕ್ಕೆ ಬರುವ ಸಾಧ್ಯತೆ ಇದೆ.
ರಾಜ್ಯಪ್ರಶಸ್ತಿ ವಿಜೇತ ‘ಕಾಲ್ಗೆಜ್ಜೆ’ ಎಂಬ ಅದ್ಭುತ ಸಿನೆಮಾ ಮಾಡಿದ್ದ ಎ. ಬಂಗಾರು ಈಗ ಹೊಸದೊಂದು ಸಿನಿಮಾಗೆ ಅಣಿಯಾಗಿದ್ದಾರೆ. ಆ ಸಿನಿಮಾಗೆ ‘ಮಡಿಕೇರಿ’ ಎಂದು ನಾಮಕರಣ ಮಾಡಿದ್ದಾರೆ. ಚಿತ್ರದ ಶೀರ್ಷಿಕೆ ಅನಾವರಣಕ್ಕೆ ಹಲವು ಗಣ್ಯರು ಸಾಕ್ಷಿಯಾದರು. ಬಂಗಾರು ಅವರ ಸಿನೆಮಾ ಗುರು ಎಸ್. ಮಹೇಂದರ್ ಅವರು ಶೀರ್ಷಿಕೆ ಬಿಡುಗಡೆ ಮಾಡಿದ್ದು ವಿಶೇಷ. ಈ ವೇ ವೇಳೆ ಶ್ರೀ ರೇವಣ ಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳ ದಿವ್ಯ ಸಾನ್ನಿಧ್ಯ ವಿಶೇಷವಾಗಿತ್ತು.
ಕನ್ನಡದಲ್ಲಿ ಪ್ರೀತಿ ಪ್ರೇಮ ಕುರಿತ ಹಲವು ಸಿನಿಮಾಗಳು ಬಂದಿವೆ. ಆ ಸಾಲಿಗೆ ಈಗ ಹೊಸ ಬಗೆಯ ಕಥೆ ಹೆಣೆದು ನಿರ್ದೇಶನಕ್ಕೆಅಣಿಯಾಗಿರುವ ಬಂಗಾರು ಅವರ ‘ ಮಡಿಕೇರಿ’ ಸಿನಿಮಾ ಕೂಡ ಸೇರಿದೆ. ಅಂದಹಾಗೆ, ಪರಮಹಸ್ತ ಪ್ರೊಡಕ್ಷನ್ಸ್ ಮತ್ತು ಶ್ರೀ ಬಾಲಾಜಿ ಸಿನಿ ಕಂಬೈನ್ಸ್ ಈ ಸಿನಿಮಾ ನಿರ್ಮಾಣ ಮಾಡುತ್ತಿದೆ. ಈ ಚಿತ್ರಕ್ಕೆ ಎ. ಬಂಗಾರು ಅವರು ಕಥೆ, ಚಿತ್ರಕತೆ, ಸಂಭಾಷಣೆಯ ಜೊತೆಗೆ ಸಾಹಿತ್ಯವನ್ನೂ ರಚಿಸಿದ್ದಾರೆ.
ಹಿರಿಯ ನಿರ್ದೇಶಕ ಎಸ್.ಮಹೇಂದರ್ ಮಾತನಾಡಿ, “ಇತ್ತೀಚಿನ ದಿನಗಳಲ್ಲಿ ಸದಭಿರುಚಿಯ ಚಿತ್ರಗಳು ಕಡಿಮೆ ಆಗುತ್ತಿವೆ. ನನ್ನ ಶಿಷ್ಯ ಮಾಡಿದ್ದ ಕಾಲ್ಗೆಜ್ಜೆ ಚಿತ್ರವನ್ನ 2012ರಲ್ಲಿ ನೋಡಿ ತುಂಬಾ ಖುಷಿಪಟ್ಟಿದ್ದೆ. ಅಷ್ಟೊಂದು ಅದ್ಭುತ ಚಿತ್ರ ಅದಾಗಿತ್ತು. ಅದೇ ಬಂಗಾರು ಇದೀಗ ಇನ್ನೊಂದು ಹೊಸ ಯೋಚನೆ-ಯೋಜನೆಯೊಂದಿಗೆ ಮತ್ತೆ ಬಂದಿದ್ದಾರೆ. ನನ್ನ ಶಿಷ್ಯರಲ್ಲಿ ಅತ್ಯಂತ ಪ್ರಿಯವಾದವರು ಬಂಗಾರು. ಮಡಿಕೇರಿ ಸಿನೆಮಾ ಶೀರ್ಷಿಕೆಯೇ ಅದ್ಭುತವಾಗಿದೆ. ಖಂಡಿತ ಇದು ವಿಷಯಾಧಾರಿತ ಚಿತ್ರವಾಗಿ ಹೊರ ಹೊಮ್ಮಲಿದೆ ಎನ್ನುವ ಭರವಸೆ ಇದೆ. ಖಂಡಿತ ಬರಹಗಾರ ಮತ್ತು ಭಾವನಾಜೀವಿ ಬಂಗಾರು ಗೆಲುವು ಸಾಧಿಸಲಿ. ಎಲ್ಲರಿಗೂ ಒಳ್ಳೆಯದಾಗಲಿ” ಎಂದು ಶುಭ ಹಾರೈಸಿದರು.
ನಿರ್ದೇಶಕ ಎ ಬಂಗಾರು ಮಾತನಾಡಿ, ‘ಇದೊಂದು ಸುಮಧುರ ದೃಶ್ಯಕಾವ್ಯ. ಸಂಗೀತವೇ ಚಿತ್ರದ ಜೀವಾಳ. ಮೂರು ಬೇರೆ ಬೇರೆ ಕುಟುಂಬದ ಟ್ರಾಕ್ ನಲ್ಲಿ ಕಥೆ ಸಾಗುತ್ತದೆ. ಸುಹಾಸಿನಿ ಅವರು ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮನರಂಜನಾತ್ಮಕ ಕಥಾಹಂದರವುಳ್ಳ ಈ ಚಿತ್ರಕ್ಕೆ ಪೃಥ್ವಿ ಅಂಬರ್ ನಾಯಕರಾಗುವ ಸಾಧ್ಯತೆಯಿದೆ. ಶಾಲಿನಿ ಭಟ್ ಚಿತ್ರದ ನಾಯಕಿಯಾಗಿದ್ದಾರೆ. ಟೈಟಲ್ ಝಲಕ್ ಅನಾವರಣಕ್ಕೋಸ್ಕರವೇ ಹಾಡೊಂದರ ಚಿತ್ರೀಕರಣ ಮಾಡಿದ್ದು, ನವಂಬರ್ ಹೊತ್ತಿಗೆ ಚಿತ್ರದ ಮುಹೂರ್ತ ಮತ್ತು ಶೂಟಿಂಗ್ ಮಾಡಲಾಗುವುದು’ ಎಂದು ಮಾಹಿತಿ ನೀಡಿದರು.
ನಿರ್ಮಾಪಕ ರವಿ ಶಾಮನೂರು ಮಾತನಾಡಿ, “ಬಂಗಾರು ಅವರು ಹದಿನೈದು ವರ್ಷದ ಸ್ನೇಹಿತರು. ಅವರ ಸಿನೆಮಾ ಮೇಲಿನ ಪ್ರೀತಿ ನಿಜಕ್ಕೂ ಶ್ಲಾಘನೀಯ. ಈ ಹಿಂದೆ ಪದವಿಪೂರ್ವ ಸಿನೆಮಾ ನಿರ್ಮಾಣ ಮಾಡಿದ್ದೆ. ಇದೀಗ ಮಡಿಕೇರಿ (ಮಂಜು ಕರಗುವ ಮುನ್ನ) ಸಿನೆಮಾಗೆ ಕೈ ಜೋಡಿಸಿದ್ದೇನೆ” ಎಂದರು.
ಇನ್ನೊಬ್ಬ ನಿರ್ಮಾಪಕರಾದ ಶಿವಪ್ರಕಾಶ್ ಮಾತನಾಡಿ, “ಬಂಗಾರು ಅವರ ಕಾಲ್ಗೆಜ್ಜೆ ಸಿನೆಮಾ ನೋಡಿ ತುಂಬಾ ಸಂಭ್ರಮಪಟ್ಟಿದ್ದೆ. ಥಿಯೇಟರ್ ನಿಂದ ಹೊರಬಂದವನೇ ಮಡಿಕೇರಿ (ಮಂಜು ಕರಗುವ ಮುನ್ನ) ಸಿನೆಮಾಗೆ ಅಡ್ವಾನ್ಸ್ ಕೊಟ್ಟಿದ್ದೆ. ಅವರ ಸಿನೆಮಾ ಪ್ಯಾಷನ್ ನನಗೆ ತುಂಬಾ ಇಷ್ಟವಾಗಿ ನಾವೆಲ್ಲಾ ಸೇರಿ ಈ ಚಿತ್ರಕ್ಕೆ ಸಾಥ್ ನೀಡಿದ್ದೇವೆ” ಎಂದು ಸಂಭ್ರಮಪಟ್ಟರು. ಬಳಿಗಾರ್, ಮಹೇಂದ್ರ ಬಡಳ್ಳಿ ಸೇರಿದಂತೇ ಬಂಗಾರು ಅವರ ಹಿತೈಷಿಗಳು ಕಾರ‍್ಯಕ್ರಮಕ್ಕೆ ಶುಭ ಹಾರೈಸಿದರು. ಈ ವೇಳೆ ಮಾತಾಡಿದ ಶ್ರೀ ಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ಸಿನೆಮಾ ತಂಡಕ್ಕೆ ಒಳ್ಳೆಯದಾಗಲಿ ಎಂದರು.
ಸಂಗೀತ ನಿರ್ದೇಶಕ ಗಂಧರ್ವ, ‘ಇದೊಂದು ಸಂಗೀತಮಯ ಚಿತ್ರವಾಗಿದ್ದು, ಚಿತ್ರದ ಟೈಟಲ್ ಗೆ ತಕ್ಕಂತೇ ಮ್ಯೂಸಿಕ್ ಮಾಡಿದ್ದೇನೆ’ ಎಂದು ವಿವರಿಸಿದರು. ನಾಯಕಿ ಶಾಲಿನಿ ಭಟ್, ನಟಿ ಭವಾನಿ ಪ್ರಕಾಶ್ ಅನುಭವ ಹಂಚಿಕೊಂಡರು. ಚಿತ್ರದಲ್ಲಿ ಅಚ್ಯುತಕುಮಾರ್, ಸುಧಾರಾಣಿ, ಅನುಪ್ರಭಾಕರ್, ಶ್ರೀ ಶಂಭು ಸೇರಿದಂತೇ ಮಜಾಭಾರತ ಖ್ಯಾತಿಯ ಬಸು, ವಿನೋದ್ ಗೊಬ್ರಗಾಲ, ಸುಷ್ಮಿತಾ ಸೇರಿದಂತೆ ಸಾಕಷ್ಟು ಕಲಾವಿದರು ಇರಲಿದ್ದಾರೆ. ಚಿತ್ರದ ಇನ್ನೊಂದು ವಿಶೇಷತೆ ಎಂದರೆ, ಚಂದ್ರ-ಪ್ರಭ ಮತ್ತು ಯಾಸಿನ್ ಅವರ ಕ್ಯಾಮೆರಾ ಕೈ ಚಳಕವಿದೆ. ಅರ್ಜುನ್ ಕಿಟ್ಟಿ ಸಂಕಲನ, ಮಾಸ್ ಮಾದ ಸಾಹಸ ನಿರ್ದೇಶನ, ಗಂಗಮ್ ರಾಜು ಅವರ ನೃತ್ಯ ನಿರ್ದೇಶನವಿದೆ. ದಿವ್ಯಾ ಭಾರತಿ ಅವರು ಈ ಚಿತ್ರಕ್ಕೆ ಕಾಸ್ಟೂಮ್ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದಾರೆ.
ಪ್ರತಿಷ್ಠಿತ ಸಂದೇಶ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಸಂದೇಶ್ ನಾಗರಾಜ್ ಅವರು ಅರ್ಪಿಸುವ, ಸಂದೇಶ್ ಎನ್ ನಿರ್ಮಾಣದ ಹಾಗೂ ಶ್ರೀನಿ ನಿರ್ದೇಶನದಲ್ಲಿ ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ನಾಯಕರಾಗಿ ನಟಿಸಿರುವ ಬಹು ನಿರೀಕ್ಷಿತ “ಘೋಸ್ಟ್” ಚಿತ್ರದ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಅಕ್ಟೋಬರ್ 19 ರಂದು ಬಹು ನಿರೀಕ್ಷಿತ ಈ ಚಿತ್ರ ಬಿಡುಗಡೆಯಾಗಲಿದೆ. “ಘೋಸ್ಟ್” ಚಿತ್ರ ವಿದೇಶದಲ್ಲೂ ರಿಲೀಸ್ ಆಗಲಿದೆ.
ಶಿವಣ್ಣ ಅವರ ಹುಟ್ಟುಹಬ್ಬಕ್ಕೆ ” Big daddy” ಟೀಸರ್ ಬಿಡುಗಡೆಯಾಗಿ, ಸಾಕಷ್ಟು ಜನಪ್ರಿಯವಾಗಿದೆ.
“ಘೋಸ್ಟ್” ಚಿತ್ರವನ್ನು ನೋಡಲು ಬರೀ ಭಾರತೀಯರಷ್ಟೇ ಅಲ್ಲ. ವಿದೇಶಿಗರು ಕಾತುರದಿಂದ ಕಾಯುತ್ತಿದ್ದಾರೆ.
ಲಂಡನ್ ನಿಂದ ಅಭಿಮಾನಿಗಳು ತಾವು ಈ ಚಿತ್ರದ ಬಿಡುಗಡೆಗೆ ಕಾಯುತ್ತಿರುವುದಾಗಿ ವಿಡಿಯೋ ಮೂಲಕ ಹೇಳಿಕೊಂಡು, ಚಿತ್ರ ಯಶಸ್ವಿಯಾಗಲೆಂದು ಹಾರೈಸಿದ್ದಾರೆ.