ಪ್ರಭಾಸ್ ಅಭಿನಯದ ‘ಸಲಾರ್’ ಚಿತ್ರದ ಬಿಡುಗಡೆ ಯಾವಾಗ ಎಂಬ ಅಭಿಮಾನಿಗಳ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ಹೊಂಬಾಳೆ ಫಿಲಂಸ್ ನಿರ್ಮಾಣದ, ಪ್ರಶಾಂತ್ ನೀಲ್ ನಿರ್ದೇಶನದ ಅತ್ಯಂತ ಮಹಾತ್ವಾಕಾಂಕ್ಷೆಯ ಚಿತ್ರವಾದ ‘ಸಲಾರ್ ಪಾರ್ಟ್ 1 – ಸೀಸ್‍ಫೈರ್’, ಡಿ. 22 ರಂದು ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿದೆ.
‘ಸಲಾರ್ ಪಾರ್ಟ್ 1 – ಸೀಸ್‍ಫೈರ್’ ಚಿತ್ರದ ಮೊದಲ ಟೀಸರ್ ಯಾವಾಗ ಬಿಡುಗಡೆಯಾಯಿತೋ, ಆಗಿನಿಂದಲೇ ಜಗತ್ತಿನಾದ್ಯಂತ ಇರುವ ಪ್ರಭಾಸ್ ಅಭಿಮಾನಿಗಳಲ್ಲಿ ಈ ಚಿತ್ರದ ಬಗ್ಗೆ ಕುತೂಹಲ ಮತ್ತು ನಿರೀಕ್ಷೆಗಳು ಗರಿಗೆದರಿವೆ. ‘ಸಲಾರ್’ ಪ್ರಪಂಚವನ್ನು ಪರಿಯಿಸುವ ಈ ಟೀಸರ್ ದೊಡ್ಡ ಮಟ್ಟದಲ್ಲಿ ಜನಪ್ರಿಯವಾಗುವುದರ ಜೊತೆಗೆ, ಅತೀ ಹೆಚ್ಚಿನ ವೀಕ್ಷಣೆಗೊಳಗಾಗಿತ್ತು.
ಪ್ರೇಕ್ಷಕರಿಗೆ ಗುಣಮಟ್ಟದ ಚಿತ್ರಗಳನ್ನು ನೀಡಬೇಕೆನ್ನುವ ಹೆಬ್ಬಯಕೆಯೊಂದಿಗೆ ಹಲವು ಚಿತ್ರಗಳ ನಿರ್ಮಾಣದಲ್ಲಿ ಹೊಂಬಾಳೆ ಫಿಲಂಸ್ ತೊಡಗಿಸಿಕೊಂಡಿದ್ದು, ಮುಂದಿನ ದಿನಗಳಲ್ಲಿ ‘ಯುವ’, ‘ಕಾಂತಾರ 2’, ‘ರಘು ತಥಾ’, ‘ಬಘೀರ’, ‘ಸಲಾರ್ 2’, ‘ಕೆಜಿಎಫ್ 3’, ‘ರಿಚರ್ಡ್ ಆಂಟೋನಿ’, ‘ಟೈಸನ್’ ಮುಂತಾದ ಚಿತ್ರಗಳನ್ನು ನಿರ್ಮಿಸುತ್ತಿದೆ. ಈಗ ‘ಸಲಾರ್ 1’ ಚಿತ್ರದ ಬಿಡುಗಡೆ ದಿನಾಂಕ ಘೋಷಣೆಯಾಗುವ ಮೂಲಕ ಈ ಸಂಭ್ರಮ ಇನ್ನಷ್ಟು ಹೆಚ್ಚಾಗಿದೆ.
‘ಸಲಾರ್ ಪಾರ್ಟ್ 1 – ಸೀಸ್‍ಫೈರ್’ ಚಿತ್ರದ ಬಿಡುಗಡೆ ದಿನಾಂಕದ ಜೊತೆಗೆ ಚಿತ್ರದ ಪೋಸ್ಟರ್ ಸಹ ಬಿಡುಗಡೆಯಾಗಿದೆ. ಈ ಚಿತ್ರದ ಮೂಲಕ ‘ಬಾಬುಬಲಿ’ ಖ್ಯಾತಿಯ ಪ್ರಭಾಸ್, ‘ಕೆಜಿಎಫ್ 1’ ಮತ್ತು ‘ಕೆಜಿಎಫ್ 2’ ಚಿತ್ರದ ನಿರ್ಮಾಪಕ ವಿಜಯ್ ಕಿರಗಂದರೂ ಮತ್ತು ನಿರ್ದೇಶಕ ಪ್ರಶಾಂತ್ ನೀಲ್ ಮೊದಲ ಬಾರಿಗೆ ಜೊತೆಯಾಗಿ ಕೆಲಸ ಮಾಡಿದ್ದು, ಆಕ್ಷನ್ ಚಿತ್ರಗಳಲ್ಲಿ ನಟನೆ, ನಿರ್ಮಾಣ ಮತ್ತು ನಿರ್ದೇಶನದಲ್ಲಿ ಜನಪ್ರಿಯವಾದ ಮೂವರು ಒಟ್ಟಿಗೆ ಕೆಲಸ ಮಾಡುತ್ತಿರುವುದು ವಿಶೇಷ.
ಭಾರತದ ಅತೀ ದೊಡ್ಡ ಆಕ್ಷನ್ ಚಿತ್ರ ಎಂಬ ಹೆಗ್ಗಳಿಕೆಗೆ ಈ ಚಿತ್ರ ಪಾತ್ರವಾಗಿದ್ದು, ಇದುವರೆಗೂ ಕಂಡು ಕೇಳರಿಯದ ಬೃಹತ್ ಆಕ್ಷನ್ ದೃಶ್ಯಗಳು ಈ ಚಿತ್ರದ ಹೈಲೈಟ್ ಆಗಲಿದೆ ಎಂದು ಹೇಳಲಾಗಿದೆ.
ಈ ಚಿತ್ರದಲ್ಲಿ ಪ್ರಭಾಸ್ ಜೊತೆಗೆ ಪೃಥ್ವಿರಾಜ್ ಸುಕುಮಾರನ್, ಶ್ರುತಿ ಹಾಸನ್, ಜಗಪತಿ ಬಾಬು ಮುಂತಾದವರು ನಟಿಸುತ್ತಿದ್ದು, ಕ್ರಿಸ್ಮಸ್ ಅಂಗವಾಗಿ ಡಿಸೆಂಬರ್ 22ರಂದು ಹಲವು ರಾಷ್ಟ್ರಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ.