ತಮ್ಮ ಸಹಜ ಅಭಿನಯದಿಂದ ಅಭಿಮಾನಿಗಳ ಮನ ಗೆದ್ದಿರುವ “ಕೋಮಲ್ ಕುಮಾರ್” ಅಭಿನಯದ “ಕೋಣ” ಚಿತ್ರದ ಶೀರ್ಷಿಕೆ ಹಾಗೂ ಪೋಸ್ಟರ್ ಅನಾವರಣಗೊಂಡಿದೆ. ಈ ಚಿತ್ರ ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ನಿರ್ಮಾಣವಾಗಲಿದೆ.
ಡಾರ್ಕ್ ಕಾಮಿಡಿ ಜಾನರ್ ಇರುವ ಈ ಚಿತ್ರವನ್ನು ಈ ಹಿಂದೆ ಜಗ್ಗೇಶ್ ಅವರು ಅಭಿನಯಿಸಿದ್ದ “8 MM” ಚಿತ್ರವನ್ನು ನಿರ್ದೇಶಿಸಿದ್ದ ಎಸ್ ಹರಿಕೃಷ್ಣ ನಿರ್ದೇಶಿಸುತ್ತಿದ್ದಾರೆ.
ಇದೊಂದು ನೈಜ ಘಟನೆ ಆಧಾರಿತ ಚಿತ್ರವಾಗಿದೆ. ಕೋಮಲ್ ಕುಮಾರ್ ಅವರು ಈವರೆಗೂ ಅಭಿನಯಿಸಿರದ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಕನ್ನಡದಲ್ಲಿ ಆನೆ, ನಾಯಿ, ಕೋತಿ ಮೊದಲಾದ ಪ್ರಾಣಿಗಳನ್ನು ಬಳಸಿಕೊಂಡು ಸಾಕಷ್ಟು ಬಂದಿದ್ದು ಈ ಚಿತ್ರದಲ್ಲಿ “ಕೋಣ”(ಪ್ರಾಣಿ) ಮುಖ್ಯ ಪಾತ್ರವಾಗಿರುವುದು ವಿಶೇಷವಾಗಿರಲಿದೆ. ಜನವರಿಯಲ್ಲಿ ಚಿತ್ರೀಕರಣ ಆರಂಭವಾಗಲಿದೆ ಎಂದು ನಿರ್ದೇಶಕ ಹರಿಕೃಷ್ಣ ಎಸ್ ತಿಳಿಸಿದ್ದಾರೆ.
ತೇಜ್ವಿನ್ ಪ್ರೊಡಕ್ಷನ್ ಲಾಂಛನದಲ್ಲಿ ವಿನೋದ್ ಕುಮಾರ್ ಹಾಗೂ ಸೆಲ್ವನ್ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಶಶಾಂಕ್ ಶೇಷಗಿರಿ ಸಂಗೀತ ನಿರ್ದೇಶನ, ವಿನೋದ್ ಕುಮಾರ್ ಬಿ ಛಾಯಾಗ್ರಹಣ ಹಾಗೂ ಉಮೇಶ್ ಆರ್ ಬಿ ಅವರ ಸಂಕಲನವಿರುವ ಈ ಚಿತ್ರಕ್ಕಿದೆ. ಸಂಜಯ್ ಹಾಗೂ ಉತ್ತಮ್ ಸ್ವರೂಪ್ ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಈವರೆಗೂ ಚಲನಚಿತ್ರಗಳಿಗೆ ಸೆನ್ಸಾರ್ ಮಂಡಳಿ ಕೊಡುವ U, U/A, A, ಸರ್ಟಿಫಿಕೇಟ್ ಗಳು ಪ್ರೇಕ್ಷಕರ ವರ್ಗವನ್ನು ನಿಗದಿ ಮಾಡುತ್ತಿದ್ದು ಅದೇ ರೀತಿ “ಅಥಿ ಐ ಲವ್ ಯು” ಚಿತ್ರಕ್ಕೂ ಸಹ ಸೆನ್ಸಾರ್ ಮಂಡಳಿ ಯು ಸರ್ಟಿಫಿಕೇಟ್ ನೀಡುವ ಮೂಲಕ ಮಕ್ಕಳಿಂದ ವಯೋ ವೃದ್ಧರವರೆಗೂ ಸೇರಿದಂತೆ ಎಲ್ಲಾ ವರ್ಗದ ಜನರು ಸಿನಿಮಾವನ್ನು ವೀಕ್ಷಣೆ ಮಾಡಬಹುದು ಎಂದು ಅನುಮತಿ ನೀಡಿದ್ದಾರೆ.
ಆದರೆ ನಿರ್ದೇಶಕ ಲೋಕೇಂದ್ರ ಸೂರ್ಯ ಈ ಚಿತ್ರ ಕೇವಲ ದಂಪತಿಗಳಿಗೆ ಮಾತ್ರ ಎಂದು ಹೇಳಿದ್ದಾರೆ. ಹೌದು ನಿರ್ದೇಶಕರ ಈ ಹೇಳಿಕೆಯಿಂದ ಎಂಥವರಿಗಾದರೂ ಗೊಂದಲ ಎನಿಸುವುದು ಸಹಜ. ಜನಸಾಮಾನ್ಯರು ಇಂದು ಥಿಯೇಟರ್ ಕಡೆ ಮುಖ ಮಾಡಿ ಚಿತ್ರಗಳನ್ನ ವೀಕ್ಷಿಸುವ ಪ್ರಮಾಣ ಕಡಿಮೆಯಾದ ಬೆನ್ನಲ್ಲಿ ಗಾಂಧಿನಗರದ ನಟರು, ನಿರ್ದೇಶಕರು, ನಿರ್ಮಾಪಕರು ಪ್ರೇಕ್ಷಕರನ್ನು ಥಿಯೇಟರ್ ನತ್ತ ಕರೆದು ತರಲು ಸಾಕಷ್ಟು ಸರ್ಕಸ್ ಮಾಡುತ್ತಿರುವ ಸಂದರ್ಭದಲ್ಲಿ, ನಿರ್ದೇಶಕ ಲೋಕೇಂದ್ರ ಸೂರ್ಯ ನನ್ನ “ಅಥಿ ಐ ಲವ್ ಯು” ಚಿತ್ರವನ್ನು ದಂಪತಿಗಳು ಮಾತ್ರ ಜೊತೆಯಲ್ಲಿ ಕುಳಿತು ನೋಡಬೇಕಿದೆ.
ಸೆನ್ಸಾರ್ ಮಂಡಳಿ ಕೊಟ್ಟಿರುವ U ಸರ್ಟಿಫಿಕೇಟ್ ಮತ್ತು ನಿರ್ದೇಶಕ ಲೋಕೇಂದ್ರ ಸೂರ್ಯ ಕೊಟ್ಟಿರುವ ಹೇಳಿಕೆಗೆ ಒಂದಕ್ಕೊಂದು ವಿರುದ್ಧವಾಗಿದೆ. ಈ ಬಗ್ಗೆ ನಿರ್ಮಾಪಕ ರೆಡ್ ಅಂಡ್ ವೈಟ್ ಸೆವೆನ್ ರಾಜ್ ಅವರು ನಿರ್ದೇಶಕರು ಕೊಟ್ಟಿರುವ ಹೇಳಿಕೆ ಸರಿಯಾಗಿದೆ ಅದರಿಂದ ನನಗೇನು ನಷ್ಟವಿಲ್ಲ ನಮ್ಮ ಸಿನಿಮಾ ದಂಪತಿಗಳೇ ನೋಡಬೇಕಾದ ಚಿತ್ರವಾದ ಕಾರಣ ಅವರನ್ನೇ ಉದ್ದೇಶಿಸಿ ನಿರ್ದೇಶಕರು ಮಾತನಾಡಿದ್ದಾರೆ ಈ ಸಾಂಸಾರಿಕ ವಿಚಾರಗಳು ಸಂಸಾರದ ಅನುಭವವನ್ನು ಕಂಡವರಿಗೆ ಮಾತ್ರವೇ ರುಚಿಸುತ್ತದೆ ವಿನಹ ಅದರ ಅನುಭವ ಇಲ್ಲದವರಿಗೆ ಅದು ಕ್ಷುಲ್ಲಕ ಎನಿಸಬಹುದು ಆ ನಿಟ್ಟಿನಲ್ಲಿ ನಿರ್ದೇಶಕರು ಕೊಟ್ಟಿರುವ ಹೇಳಿಕೆಯನ್ನೇ ನಾನು ಗೌರವಿಸುತ್ತೇನೆ ಎಂದು ಹೇಳಿದ್ದಾರೆ. ಅಲ್ಲದೆ ಈ ಮೊದಲ ಚಿತ್ರ A ಸರ್ಟಿಫಿಕೇಟ್ ಪಡೆದುಕೊಂಡ ಕಾರಣ ನನಗೆ ಬಹಳ ನಿರಾಶೆಯಾಗಿತ್ತು ಆದರೆ ಈಗ “ಅತಿ ಐ ಲವ್ ಯು U” ಸರ್ಟಿಫಿಕೇಟ್ ಪಡೆದುಕೊಂಡು ಬಿಡುಗಡೆಗೆ ಮತ್ತಷ್ಟು ಧೈರ್ಯ ತುಂಬಿದೆ ಎಂದರು ರೆಡ್ ಅಂಡ್ ವೈಟ್ ನಿರ್ಮಾಪಕ ಸವೆನ್ ರಾಜ್.
ಮೊದಲಿನಿಂದಲೂ ಒಂದಲ್ಲ ಒಂದು ರೀತಿ ವಿಭಿನ್ನ ಪ್ರಯತ್ನಗಳನ್ನ ತಮ್ಮ ಇತಿಮಿತಿಗಳಲ್ಲಿ ಸಾಬೀತು ಪಡಿಸುತ್ತಿರುವ ಲೋಕೇಂದ್ರ ಸೂರ್ಯ ಈ ಬಾರಿಯೂ ಅಂತಹದ್ದೆ ಒಂದು ವಿಭಿನ್ನತೆಗೆ ಜೀವ ನೀಡಿದ್ದಾರೆ ಎಂದು ಕಾಣುತ್ತಿದೆ. ಈ ಎಲ್ಲಾ ಗೊಂದಲಗಳಿಗೆ ಡಿಸೆಂಬರ್ 7ರಂದು ಚಿತ್ರದ ಬಿಡುಗಡೆ ಉತ್ತರ ನೀಡಲಿದೆ. ಒಂದೇ ಮನೆ, ಎರಡೇ ಪಾತ್ರಗಳು, ಒಂದು ಸನ್ನಿವೇಶವನ್ನು ನಿರ್ದೇಶಕರು ಚಿತ್ರವನ್ನಾಗಿ ರೂಪಿಸಿದ್ದಾರೆ. ಇಂತಹ ವಿಭಿನ್ನ ಪ್ರಯತ್ನದ “ಅಥಿ ಐ ಲವ್ ಯು” ಚಿತ್ರ ಜನಮೆಚ್ಚುಗೆ ಪಡೆಯುತ್ತದೆ ಎಂಬ ಭರವಸೆ ಚಿತ್ರತಂಡಕ್ಕಿದೆ.
ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿ ಪುರಸ್ಕೃತ ನಿರ್ದೇಶಕ ಡಿ.ಸತ್ಯ ಪ್ರಕಾಶ್ ಚಿತ್ರ ಸೆಟ್ಟೇರಿತು ಎಂದರೆ ಏನಾದರೊಂದಷ್ಟು ವಿಶೇಷತೆಗಳನ್ನು ಹೊಂದಿರುತ್ತದೆ ಎಂದು ಪ್ರೇಕ್ಷಕರು ಮತ್ತು ಚಿತ್ರೋದ್ಯಮದ ಮಂದಿ ಎದುರು ನೋಡುತ್ತಾರೆ. ಅದನ್ನು ಅಷ್ಟೇ ಜತನದಿಂದ ಕಾಪಾಡಿಕೊಂಡು ಬಂದಿದ್ದಾರೆ ನಿರ್ದೇಶಕ ಸತ್ಯ.
ಬಹಳ ದಿನಗಳ ನಂತರ ಈಗ ಅಳೆದು ತೂಗಿ ಅತ್ಯಾಪ್ತ ಕಥೆ ಮಾಡಿಕೊಂಡು ಅದಕ್ಕೆ “ಎಕ್ಸ್ ಅಂಡ್ ವೈ” ಎಂದು ಶೀರ್ಷಿಕೆ ಇಟ್ಟುಕೊಂಡು ಅಖಾಡಕ್ಕೆ ಇಳಿದಿದ್ದಾರೆ. ತಮ್ಮ ಹಿಂದಿನ ಮೂರು ಚಿತ್ರಗಳಲ್ಲಿ ಮೂಡಿಸಿದ ವಿಶೇಷತೆಗಳಂತೆ ಇಲ್ಲೂ ಚಿತ್ರದ ಟೈಟಲ್, ಆರಿಸಿಕೊಂಡ ಕಥೆ, ಲೊಕೇಶನ್ಸ್, ಕಲಾವಿದರ ಆಯ್ಕೆಯಲ್ಲದೆ ತಾವೇ ಮುಖ್ಯ ಪಾತ್ರಧಾರಿಯಾಗಿ ನಟನೆಗೆ ಇಳಿದಿದ್ದಾರೆ.
ನವಂಬರ್ 24ರ ಬ್ರಾಹ್ಮಿ ಮುಹೂರ್ತದಲ್ಲಿ ಜಯನಗರದ ತಮ್ಮದೇ ಕಛೇರಿಯಲ್ಲಿ ಸ್ನೇಹಿತರು, ಕಲಾವಿದರು, ಹಾಗೂ ತಮ್ಮ ತಂಡದ ತಂತ್ರಜ್ಞರನ್ನೊಳಗೂಡಿ ಸತ್ಯ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಮುಹೂರ್ತ ಮುಗಿಸಿಕೊಂಡಿದ್ದಾರೆ. ನಿರ್ಮಾಣ ಹಾಗೂ ನಿರ್ದೇಶನದ ಜೊತೆಗೆ ಸತ್ಯಪ್ರಕಾಶ್ ಹಾಗೂ ಅಥರ್ವ ಪ್ರಕಾಶ್ ನಾಯಕರಾಗಿ ಅಭಿನಯಿಸುತ್ತಿದ್ದಾರೆ.
ಲವಿತ್ ಛಾಯಾಗ್ರಹಣ, ವಾಸುಕಿ ವೈಭವ್ ಸಂಗೀತ ನರ್ದೇಶನ, ಬಿ.ಎಸ್ ಕೆಂಪರಾಜು ಅವರ ಸಂಕಲನ ಇದೆ. ವರದರಾಜ್ ಕಾಮತ್ ಕಲಾನಿರ್ದೇಶನ ಮಾಡುತ್ತಿದ್ದಾರೆ. ಇಡೀ ಚಿತ್ರ ಬೆಂಗಳೂರು ಮತ್ತು ಮಂಗಳೂರು ಸುತ್ತ ಮುತ್ತಣ ಪರಿಸರದಲ್ಲಿ ಚಿತ್ರೀಕರಿಸಲು ಯೋಜಿಸಲಾಗಿದೆ ಎಂದು ಸತ್ಯಪ್ರಕಾಶ್ ತಿಳಿಸಿದ್ದಾರೆ.
ಗೊಂಬೆಗಳ ಲವ್ ಸಿನಿಮಾ ಖ್ಯಾತಿಯ ಅರುಣ್ ಕುಮಾರ್ ಮರಿ ಟೈಗರ್ ವಿನೋದ್ ಪ್ರಭಾಕರ್ ಜೊತೆ ಕೈ ಜೋಡಿಸಿರುವುದು ಗೊತ್ತೇ ಇದೆ. ಇವರಿಬ್ಬರ ಕಾಂಬಿನೇಷನ್ ನೆಲ್ಸನ್ ಸಿನಿಮಾದ ಟೀಸರ್ ಧೂಳ್ ಎಬ್ಬಿಸಿದೆ. ಇದೀಗ ಚಿತ್ರತಂಡದಿಂದ ಮತ್ತೊಂದು ಅಪ್ ಡೇಟ್ ಸಿಕ್ಕಿದೆ. ನೆಲ್ಸನ್ ಗೆ ನಾಯಕಿ ಸಿಕ್ಕಿದ್ದಾಳೆ. ಮಾಸ್ ಮರಿ ಟೈಗರ್ ವಿನೋದ್ ಗೆ ಜೋಡಿಯಾಗಿ ಶ್ವೇತಾ ಡಿಸೋಜಾ ನಟಿಸಲಿದ್ದಾರೆ.
ಕರಾವಳಿಯ ಚೆಲುವೆ ಶ್ವೇತಾ ಡಿಸೋಜಾ ನೆಲ್ಸನ್ ಬಳಗ ಸೇರಿಕೊಂಡಿದ್ದಾರೆ. ಹಿಂದಿ ಸಿನಿಮಾ Y ಮೂಲಕ ಸಿನಿಮಾ ಜರ್ನಿ ಆರಂಭಿಸಿದ್ದ ಈ ಸುಂದರಿ ಖಾಸಗಿ ಪುಟಗಳು ಹಾಗೂ ಹೆಜ್ಜಾರು ಚಿತ್ರದಲ್ಲಿ ನಟಿಸಿದ್ದಾರೆ. ಹೆಜ್ಜಾರು ಸಿನಿಮಾಗಾಗಿ ಕಾಯ್ತಿರುವ ಶ್ವೇತಾ, ಈಗ ನೆಲ್ಸನ್ ಗೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.
1960-90ರ ದಶಕದಲ್ಲಿ ಚಾಮರಾಜನಗರದಲ್ಲಿ ನಡೆಯುವ ನೈಜ ಘಟನೆಯಾಧಾರಿತ ಚಿತ್ರ ನೆಲ್ಸನ್. ಗ್ಯಾಂಗ್ ಸ್ಟರ್ ಕಥಾಹಂದರ ಹೊಂದಿದ್ದು, ವಿನೋದ್ ಪ್ರಭಾಕರ್ ಹಿಂದೆಂದೂ ಕಾಣದ ಅವತಾರದಲ್ಲಿ ‘ನೆಲ್ಸನ್-ರಕ್ತದಲ್ಲಿ ನೆಂದ ದೇವರಕಾಡು’ ಸಿನಿಮಾದಲ್ಲಿ ನಿಮಗೆ ಕಾಣಸಿಗ್ತಾರೆ.
ಒಂದಷ್ಟು ಸಿನಿಮಾಗಳಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿರುವ ಅರುಣ್ ಕುಮಾರ್ ನೆಲ್ಸನ್ ಮೂಲಕ ನಿರ್ದೇಶಕರಾಗಿ ಮೊದಲ ಹೆಜ್ಜೆ ಇಡುತ್ತಿದ್ದಾರೆ. ಅರುಣ್ ಮೊದಲ ಕನಸಿಗೆ ದೀಪ ಫಿಲ್ಮ್ಸ್ ಬ್ಯಾನರ್ ನಲ್ಲಿ ಬಿ.ಎಮ್ ಶ್ರೀರಾಮ್ (ಕೋಲಾರ) ಹಣ ಹಾಕಿದ್ದಾರೆ. ಪ್ರಜ್ವಲ್ ಗೌಡ ಛಾಯಾಗ್ರಹಣ ಮತ್ತು ಭರತ್ ಬಿಜಿ ಸಂಗೀತ, ವಿಜಯ್ ರಾಜ್ ಸಂಕಲನ, ಹರಿ ಸಂಭಾಷಣೆ ‘ನೆಲ್ಸನ್-ರಕ್ತದಲ್ಲಿ ನೆಂದ ದೇವರಕಾಡು’ ಸಿನಿಮಾಗಿದೆ.
‘ನಾವ್ ಏನ್ ಹೇಳ್ತಿವೋ ಅದನ್ನು ಮಾಡಿ ತೋರಿಸ್ಬೇಕು. ಬೇರೆ ಏನೋ ಮಾಡಿದ್ರೆ ಅದು ಬ್ಯಾಡ್ ಮ್ಯಾನರ್ಸ್…’
ಈ ಡೈಲಾಗ್ ಬರುವ ಹೊತ್ತಿಗೆ ಕಥೆ ಆಗಷ್ಟೇ ಟೇಕಾಫ್ ಆಗಿರುತ್ತೆ. ಹೇಳಿ ಕೇಳಿ ಇದು ಸೂರಿ ಚಿತ್ರ. ಹಾಗಾಗಿ ಇಲ್ಲಿ ಎಲ್ಲವೂ ರಾ ಅಂಶಗಳೇ. ಕಥೆ ಸರಳವಾಗಿದೆ. ಚಿತ್ರಕಥೆಯೇ ಇಲ್ಲಿ ಜೀವಾಳ. ಉಳಿದಂತೆ ಕಥೆಯ ವೇಗಕ್ಕೆ ಎಡಿಟಿಂಗ್ ಕೂಡ ಸಾಥ್ ನೀಡಿದೆ. ಸಿನಿಮಾದಲ್ಲಿ ರಗಡ್ ಅಂಶಗಳೇ ಹೆಚ್ಚು. ಅದಕ್ಕೆಸರಿಯಾಗಿ ಆಯ್ಕೆ ಮಾಡಿಕೊಂಡ ಲೊಕೇಷನ್ ಕೂಡ ರಗಡ್ ಆಗಿವೆ.
ಇದೊಂದು ರಾ ಕಂಟೆಂಟ್ ಸಿನಿಮಾ. ಕ್ರೈಮ್ ಹಿನ್ನೆಲೆಯ ಕಥೆ ನೋಡುಗರನ್ನು ಕೂರಿಸಿಕೊಳ್ಳುತ್ತೆ. ಮೊದಲರ್ಧ ಗನ್ ಸೌಂಡ್ ನಲ್ಲೇ ಚಿತ್ರ ಸಾಗುತ್ತೆ. ದ್ವಿತಿಯಾರ್ಧ ಅದರ ಸೌಂಡು ಇನ್ನೂ ಜಾಸ್ತಿ ಕೇಳುತ್ತೆ. ಅಲ್ಲಿಗೆ ಇದೊಂದು ಗನ್ ಮಾಫಿಯಾ ಕಥೆ ಅಂತ ಪ್ರತ್ಯೇಕವಾಗಿ ಹೇಳಬೇಕಿಲ್ಲ. ಸೂರಿ ಅವರ ಫ್ಲೇವರ್ ಇಲ್ಲೂ ಮುಂದುವರೆದಿದೆ.
ನೋಡುಗನಿಗೆ ಸ್ವಲ್ಪ ಕನ್ಫ್ಯೂಷನ್ ಸಹಜ. ನೋಟ ಅತ್ತಿತ್ತ ಹರಿಸಿದರೆ ಗೊಂದಲ ಗ್ಯಾರಂಟಿ. ರಿವರ್ಸ್ ಸ್ಕ್ರೀನ್ ಪ್ಲೇ ಸಿನಿಮಾ ಆಗಿದ್ದರಿಂದ ಎಲ್ಲೂ ಬೋರ್ ಆಗಲ್ಲ. ಕೆಲವು ಕಡೆ ಅನಗತ್ಯ ಸೀನ್ ಎನಿಸಿದರೂ ಗನ್ ಸದ್ದಿನ ಮುಂದೆ ಎಲ್ಲವೂ ಗೌಣ. ಒಟ್ಟಾರೆ, ಚಿತ್ರ ಮಾಸ್ ಎಂಟರ್ಟೈನ್ಮೆಂಟ್ ಮೂಲಕ ರಸದೌತಣ ಕೊಡುತ್ತೆ. ಆಕ್ಷನ್ ಪ್ರಿಯರಿಗಂತೂ ಹತ್ತಿರ ಆಗುವ ಸಿನಿಮಾವಿದು.
ಕಥೆ ಏನು? ರುದ್ರ ತನ್ನ ತಂದೆಯ ಕೆಲಸ ಪಡೆದು ಪೊಲೀಸ್ ಅಧಿಕಾರಿ ಆಗ್ತಾನೆ. ಘಟನೆಯಲ್ಲಿ ಸರ್ವೀಸ್ ಗನ್ ಕಳೆದುಕೊಳ್ತಾನೆ. ಅದನ್ನು ಹುಡುಕಿ ಹೊರಡುವ ಆತನಿಗೆ ಗನ್ ಮಾಫಿಯಾ ಪರಿಚಯವಾಗುತ್ತೆ. ಕಂಟ್ರಿ ಪಿಸ್ತೂಲ್‌ನಿಂದ ಹಿಡಿದು ಎಕೆ 47 ವರೆಗೂ ಅಲ್ಲಿ ಗನ್ ಮಾರಾಟವಾಗುತ್ತವೆ. ಗೋಡ ಅನ್ನೋ ಊರಲ್ಲಿ ರಾಶಿ ರಾಶಿ ಗನ್ ಉತ್ಪತ್ತಿಯಾಗುತ್ತವೆ. ಮಕ್ಕಳ ಕೈಯಲ್ಲೂ ಗನ್ನು. ಅಂತಹ ಊರಲ್ಲಿ ಗನ್ ಮಾಫಿಯಾ ತಂಡ ಪತ್ತೆ ಹಚ್ಚಿ ಹಿಗ್ಗಾ ಮುಗ್ಗಾ ಥಳಿಸೋಕೆ ರುದ್ರ ಮುಂದಾಗ್ತಾನೆ. ಆ ಬಳಿಕ ಒಂದಷ್ಟು ಘಟನೆಗಳು ನಡೆಯುತ್ತವೆ. ಅಲ್ಲಿಂದ ಕಥೆ ಇನ್ನೊಂದು ತಿರುವು ಪಡೆದುಕೊಳ್ಳುತ್ತೆ. ಇಲ್ಲಿ ಹೇರಳವಾಗಿಯೇ ಫೈಟ್ಸ್ ಇದೆ. ಭರಪೂರ ಮನರಂಜನೆಗೇನೂ ಕಮ್ಮಿ ಇಲ್ಲ.
ಯಾರು ಹೇಗೆ? ಅಭಿಷೇಕ್ ಇಲ್ಲಿ ಮೊದ ಚಿತ್ರಕ್ಕೆ ಹೋಲಿಸಿದರೆ ಸಖತ್ ಆಗಿ ಕಾಣುತ್ತಾರೆ. ನಟನೆಯಲ್ಲಿ ಪ್ರಬುದ್ಧತೆ ಎದ್ದು ಕಾಣುತ್ತೆ. ಆಕ್ಷನ್ ಮೂಲಕ ಗಮನ ಸೆಳೆಯುವ ಅವರು, ಡ್ಯಾನ್ಸ್ ಸ್ಟೆಪ್ ನಲ್ಲಿ ನೀರಸ ಎನಿಸಿತ್ತಾರೆ. ಉಳಿದಂತೆ ಬಾಡಿ ಲಾಂಗ್ವೇಜ್, ಡೈಲಾಗ್ ಹರಿಬಿಡುವುದರಲ್ಲಿ ಇಷ್ಟ ಆಗ್ತಾರೆ. ರಚಿತಾರಾಮ್ ಸ್ವಲ್ಪ ಹೊತ್ತು ಕಾಣಿಸಿಕೊಂಡರೂ ಇರುವಷ್ಟು ಸಮಯ ಕಾಡುತ್ತಾರೆ. ತಾರಾ ಅಮ್ಮನಾಗಿ ಇಷ್ಟವಾಗುತ್ತಾರೆ. ಉಳಿದಂತೆ ಬರುವ ಮಗಾಯಿ, ಫೀನಿಕ್ಸ್, ಗುನ್ನೀಸ್, ಶೋಲೆಬಾಬು, ಸಿಲ್ಕ್, ತಲ್ವಾರ್ ತಾತಯ್ಯ, ಹಂಡೆ ಪಾತ್ರಗಳು ಗಮನ ಸೆಳೆಯುತ್ತವೆ.
ಕುಡಿದ್ರೆ ಜುಮ್ ಅನ್ನುತ್ತೆ ಹಾಡು ಚೆನ್ನಾಗಿದೆ. ಆ ಹಾಡಲ್ಲೇ ಫೈಟ್ ಮಾಡಿರೋದು ಖುಷಿ ಕೊಡುತ್ತೆ. ಇನ್ನು ಸ್ಟಂಟ್ ಮಾಸ್ಟರ್ ರವಿವರ್ಮ ಕೆಲಸ ಅಬ್ಬರಿಸಿದೆ. ಚರಣ್ ಅವರ ಹಿನ್ನೆಲೆ ಸಂಗೀತದ ಕಥೆಗೆ ಪೂರಕವಾಗಿದೆ. ಶೇಖರ್ ಕ್ಯಾಮೆರಾ ಕೈಚಳಕ ಸೊಗಸಾಗಿದೆ.
ಮದುವೆ ಮುಂತಾದ ಸಮಾರಂಭಗಳಲ್ಲಿ “ಸೂಟ್” ಧರಿಸಿದರೆ ಒಂದು ಕಳೆ. ಅಂತಹ “ಸೂಟ್” ಬಗ್ಗೆ ಸಿನಿಮಾವೊಂದು ಬರುತ್ತಿದ್ದು, ಬಿಡುಗಡೆಗೂ ಸಿದ್ದವಾಗಿದೆ. ಇತ್ತೀಚೆಗೆ ಈ ಚಿತ್ರದ ಹಾಡುಗಳು ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದೆ.
ನಿರ್ದೇಶಕ ಭಗತ್ ರಾಜ್, “ಸೂಟ್” ಗೆ ಅದರದೇ ಆದ ವಿಶೇಷತೆ ಇದೆ. ಎಂದಿಗೂ “ಸೂಟ್” ಹಾಕದವರು, ಮದುವೆ ಆರತಕ್ಷತೆಯಲ್ಲಾದರೂ “ಸೂಟ್” ಧರಿಸುವುದು ವಾಡಿಕೆ. ಅಂತಹ “ಸೂಟ್” ನಮ್ಮ ಚಿತ್ರದ ಕಥಾನಾಯಕ. ಈ ಚಿತ್ರದಲ್ಲಿ “ಸೂಟ್” ಅನ್ನು ಬರೀ ಬಟ್ಟೆಯಂತೆ ತೋರಿಸಿಲ್ಲ. ಮನುಷ್ಯನ ಹೊರಗಿನ ಮನಸ್ಸನ್ನು “ಸೂಟ್” ನ ಮೂಲಕ ತೋರಿಸುವ ಪ್ರಯತ್ನ ಮಾಡಿದ್ದೇನೆ. “ಸೂಟ್” ಬಗ್ಗೆ ಅನೇಕ ಗಣ್ಯರು ತಮಗನಿಸಿದನ್ನು ಕವನಗಳ ಮೂಲಕ ಬರೆದಿದ್ದಾರೆ. ಅದನ್ನು ಸಂಕಲನವಾಗಿ ಹೊರ ತಂದಿದ್ದೇವೆ. ನಮ್ಮ ಚಿತ್ರ ಚಿತ್ರ ಮೂರು ಕಿರಣಗಳಿಂದ ಹೆಚ್ಚು ಪ್ರಕಾಶಿಸುತ್ತಿದೆ.
ಸಂಗೀತ ನಿರ್ದೇಶಕ ಕಿರಣ್ ಶಂಕರ್ ಸುಮಧುರ ಹಾಡುಗಳನ್ನು ನೀಡಿದ್ದಾರೆ. ಛಾಯಾಗ್ರಾಹಕ ಕಿರಣ್ ಹಂಪಾಪುರ ಅವರ ಛಾಯಾಗ್ರಹಣ “ಸೂಟ್” ನ ಅಂದವನೆ ಮತ್ತಷ್ಟು ಹೆಚ್ಚುಸಿದೆ. ರೇಖಾಚಿತ್ರಗಳ ಮೂಲಕ ಕಿರಣ್ ನಮ್ಮ ಚಿತ್ರಕ್ಕೆ ಜೀವ ತುಂಬಿದ್ದಾರೆ. ಇವರೆ ಆ ಮೂರು ಕಿರಣಗಳು. ಚಿತ್ರದಲ್ಲಿ ಐವತ್ತಕ್ಕೂ ಅಧಿಕ ಕಲಾವಿದರು ನಟಿಸಿದ್ದಾರೆ. ಸದ್ಯದಲ್ಲೇ “ಸೂಟ್” ತೆರೆಗೆ ಬರಲಿದೆ ಎಂದರು.
ವಿ.ನಾಗೇಂದ್ರ ಪ್ರಸಾದ್ ತಾವು ಈ ಚಿತ್ರದಲ್ಲಿ ನಟಿಸಿರುವುದಾಗಿ ತಿಳಿಸಿ, “ಸೂಟ್” ಬಗ್ಗೆ ತಾವು ಬರೆದಿರುವ ಕಾವ್ಯವನ್ನು ವಾಚಿಸಿದರು.
ಚಿತ್ರದಲ್ಲಿ ಅಭಿನಯಿಸಿರುವ ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್, ಪ್ರಣಯ ಮೂರ್ತಿ, ದೀಪ್ತಿ ಕಾಪ್ಸೆ, ಭೀಷ್ಮ ರಾಮಯ್ಯ ಮುಂತಾದವರು ಚಿತ್ರ ಹಾಗೂ ತಮ್ಮ ಪಾತ್ರಗಳ ಕುರಿತು ಮಾತನಾಡಿದರು. ಅನಾರೋಗ್ಯದ ನಿಮಿತ್ತ ಕಾರ್ಯಕ್ರಮಕ್ಕೆ ಹಾಜರಾಗದ ಸಂಗೀತ ನಿರ್ದೇಶಕ ಕಿರಣ್ ಶಂಕರ್ ಹಾಡುಗಳ ಹಾಗೂ ಹಾಡಿದವರ ಬಗ್ಗೆ ವಿಡಿಯೋ ಮೂಲಕ ಮಾಹಿತಿ ನೀಡಿದರು.
ಛಾಯಾಗ್ರಾಹಕ ಕಿರಣ್ ಹಂಪಾಪುರ ಸೇರಿದಂತೆ ಅನೇಕ ತಂತ್ರಜ್ಞರು, ಕಲಾವಿದರು ಹಾಗೂ ಅತಿಥಿಗಳು ಆಡಿಯೋ ರಿಲೀಸ್ ಸಮಾರಂಭದಲ್ಲಿ ಉಪಸ್ಥಿತರಿದ್ದರು. “ದ ಸೂಟ್” ಚಿತ್ರಕ್ಕೆ “ಅತಿಥಿದೇವೋ ಭವ” ಎಂಬ ಅಡಿಬರಹವಿದೆ.
ಡಾ.ಬಾಬು ಜಗಜೀವನ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ (ಲಿಡ್ಕರ್)ಕ್ಕೆ ಇದೇ ಮೊದಲ ಬಾರಿಗೆ ರಾಯಭಾರಿಯನ್ನ ಆಯ್ಕೆ ಮಾಡಿದೆ. ನಟರಾಕ್ಷಸ ಡಾಲಿ ಧನಂಜಯ್ ಲಿಡ್ಕರ್ ಗೆ ರಾಯಭಾರಿಯಾಗಿದ್ದಾರೆ.
ಸ್ಯಾಂಡಲ್‌ವುಡ್ ನಟ, ನಿರ್ಮಾಪಕನಾಗಿ ಡಾಲಿ ಸಿಕ್ಕಾಪಟ್ಟೆ ಬ್ಯುಸಿ ಇರುವ ಸ್ಟಾರ್. ನಟನೆ, ನಿರ್ಮಾಣದ ಜೊತೆಗೀಗ ಧನಂಜಯ ಜಾಹೀರಾತು ಕ್ಷೇತ್ರಕ್ಕೂ ಕಾಲಿಟ್ಟಿದ್ದಾರೆ. ಮೊದಲ ಬಾರಿಗೆ ಡಾಲಿ ಸರ್ಕಾರದ ಜಾಹೀರಾತಿನಲ್ಲಿ ಮಿಂಚುವ ಮೂಲಕ ಲಿಡ್ಕರ್ ಬ್ರಾಂಡ್ ಪ್ರಮೋಟ್ ಮಾಡುತ್ತಿದ್ದಾರೆ.
ಲಿಡ್ಕರ್ ನಲ್ಲಿ 50 ಸಾವಿರಕ್ಕೂ ಹೆಚ್ಚು ಚರ್ಮ ಕುಶಲಕರ್ಮಿಗಳ ಕುಟುಂಬವಿದೆ. ಚರ್ಮ ಕೈಗಾರಿಕೆಯನ್ನು ಮತ್ತಷ್ಟು ಅಭಿವೃದ್ಧಿ ಪಡಿಸಲು ಮುಂದಾಗಿರುವ ಸರ್ಕಾರ ಸ್ಯಾಂಡಲ್‌ವುಡ್ ಸ್ಟಾರ್ ಧನಂಜಯ್ ಅವರನ್ನು ರಾಯಾಭಾರಿಯಾಗಿ ನೇಮಕಮಾಡಿದೆ. ಈಗಾಗಲೇ ಡಾಲಿ ಜೊತೆ ಮಾತುಕತೆಯಾಗಿದ್ದು ಧನಂಜಯ ಕೂಡ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಅಧಿಕೃತ ಪ್ರಕಟಣೆಯೊಂದೆ ಬಾಕಿ ಇದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಲಿಡ್ಕರ್ ವ್ಯವಸ್ಥಾಪಕ ನಿರ್ದೇಶಕಿ ಕೆ.ಎಂ.ಎಸ್ ವಸುಂಧರಾ, ಧನಂಜಯ್ ಅವರು ರಾಯಭಾರಿಯಾಗಿದ್ದು ತುಂಬಾ ಖುಷಿ ಇದೆ.
ಅವರು ಸ್ಯಾಂಡಲ್‌ವುಡ್‌ನ ಲೀಡಿಂಗ್ ನಟ ಎಲ್ಲಾ ವರ್ಗದ ಜನರಿಗೆ ತಲುಪುವ ಕಲಾವಿದ ಹಾಗಾಗಿ ಅವರನ್ನ ಆಯ್ಕೆ ಮಾಡಿದ್ದೇವೆ ಸಚಿವರು ಕೂಡ ಇದಕ್ಕೆ ಒಪ್ಪಿಗೆ ಸೂಚಿಸಿದ್ದು ಆದಷ್ಟು ಬೇಗ ಜಾಹೀರಾತಿನ ಚಿತ್ರೀಕರಣ ನಡೆಯಲಿದೆ ಎಂದಿದ್ದಾರೆ.
ಧನಂಜಯ ಸದ್ಯ ಸಾಲು ಸಾಲು ಸಿನಿಮಾಗಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚಿಗಷ್ಟೆ ಧನಂಜಯ್ ತಮ್ಮದೇ ಡಾಲಿ ಸಂಸ್ಥೆ ನಿರ್ಮಾಣದ ‘ಟಗರು ಪಲ್ಯ’ ಸಿನಿಮಾ ರಿಲೀಸ್ ಮಾಡಿದ್ದರು. ಟಗರು ಪಲ್ಯ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ನಿರ್ಮಾಣದ ಜೊತೆಗೆ ಡಾಲಿ ಅನೇಕ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಕನ್ನಡದ ಜೊತೆಗೆ ತೆಲುಗಿನ ಪುಷ್ಪ-2 ಸಿನಿಮಾದಲ್ಲೂ ಕಾಣಿಸಿಕೊಂಡಿದ್ದಾರೆ ಈ ನಡುವೆ ಜಾಹೀರಾತು ಲೋಕಕ್ಕೆ ಡಾಲಿ ಲಗ್ಗೆ ಇಟ್ಟಿರುವುದು ಅವರ ಅಭಿಮಾನಿ ಬಳಗಕ್ಕೆ ಸಂತಸ ತಂದಿದೆ .
ಸ್ಯಾಂಡಲ್ ವುಡ್ ಗೆ ಅನೇಕ ನಟಿಯರು ಎಂಟ್ರಿ ಕೊಡುತ್ತಿರುತ್ತಾರೆ. ಆದರೆ ಕೆಲವರು ಮಾತ್ರ ಗಟ್ಟಿಯಾಗಿ ಬೇರೂರುತ್ತಾರೆ ಮತ್ತು ಸ್ಟಾರ್ ಆಗಿ ಮೆರೆಯುತ್ತಾರೆ. ಇನ್ನು ಕೆಲವರು ಒಂದೆರಡು ಸಿನಿಮಾ ಮಾಡಿ ಮಾಯಾಗುತ್ತಾರೆ. ಇದೀಗ’ ಕೆರೆ ಬೇಟೆ’ ಸಿನಿಮಾ ಮೂಲಕ ಮತ್ತೋರ್ವ ನಟಿ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ.
ಗೌರಿಶಂಕರ್ ನಟನೆಯ ರಾಜ್ ಗುರು ನಿರ್ದೇಶನದ ‘ಕೆರೆ ಬೇಟೆ’ ಸಿನಿಮಾ ಮೂಲಕ ನಾಯಕಿಯಾಗಿ ಬಿಂದು ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ. ಈಗಾಗಲೇ ಫಸ್ಟ್ ಲುಕ್ ಮತ್ತು ಮೋಶನ್ ಪೋಸ್ಟರ್ ಮೂಲಕ ಬಾರಿ ಸದ್ದು ಮಾಡಿರುವ ‘ಕೆರೆ ಬೇಟೆ’ ಸಿನಿಮಾ ರಿಲೀಸ್ ಗೆ ಎಲ್ಲಾ ತಯಾರಿಗಳನ್ನು ಮಾಡಿಕೊಳ್ಳುತ್ತಿದೆ. ಈ ನಡುವೆ ನಾಯಕಿ ಬಿಂದು ಅವರ ಫಸ್ಟ್ ಲುಕ್ ರಿಲೀಸ್ ಮಾಡುವ ಮೂಲಕ ಚಿತ್ರದ ಮೇಲಿನ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ ಸಿನಿಮಾತಂಡ.
ಅಂದಹಾಗೆ ಬಿಂದುಗೆ ಇದು ಮೊದಲ ಸಿನಿಮಾ. ಕನ್ನಡದವರೇ ಆಗಿರುವ ಬಿಂದು ಈ ಸಿನಿಮಾ ಮೂಲಕ ಹಳ್ಳಿ ಹುಡುಗಿಯಾಗಿ ತೆರೆಮೇಲೆ ಮಿಂಚಲು ಸಜ್ಜಾಗಿದ್ದಾರೆ. ಮೊದಲ ಸಿನಿಮಾದಲ್ಲೆ ವಿಭಿನ್ನ ಪಾತ್ರದಲ್ಲಿ ನಟಿಸುವ ಅವಕಾಶ ಪಡೆದಿರುವ ಬಿಂದು ಸಿನಿಮಾದ ಬಗ್ಗೆ ಸಿಕ್ಕಾಪಟ್ಟೆ ಎಕ್ಸಾಯಿಟ್ ಆಗಿದ್ದಾರೆ.
ಬೆಂಗಳೂರು ಮೂಲದ ನಟಿ ಬಿಂದು ಪ್ರತಿಷ್ಠಿತ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಪಡೆದಿದ್ದಾರೆ. ಸಿನಿಮಾದಲ್ಲಿ ನಟಿಸಬೇಕೆನ್ನುವುದು ಬಿಂದು ಅವರ ಕನಸಾಗಿತ್ತು. ಆ ಕನಸು ಈಗ ‘ಕೆರೆ ಬೇಟೆ’ ಸಿನಿಮಾ ಮೂಲಕ ನನಸುಮಾಡಿಕೊಂಡಿದ್ದಾರೆ. ಈ ಬಗ್ಗೆ ಬಿಂದು ಹೇಳಿದ್ದಿಷ್ಟು.
‘ಕಾಲೇಜು ದಿನಗಳಲ್ಲಿ ಫ್ಯಾಷನ್ ವಾಕ್, ಕಲ್ಚರಲ್ ಆ್ಯಕ್ಟಿವಿಟಿ ಮತ್ತು ಡ್ರಾಮ ಮಾಡುತ್ತಿದ್ದೆ, ಆಗ ನಮ್ಮ ಕಾಲೇಜ್ ಲೆಕ್ಚರರ್ಸ್ ನನ್ನ ಅಭಿನಯ ನೋಡಿ ಅಪ್ರಿಶಿಯೇಟ್ ಮಾಡುತ್ತಿದ್ದರು, ಆ ದಿನಗಲ್ಲಿ ನನಗೆ ಸಿನೆಮಾ ಬಗ್ಗೆ ಒಲವು ಮೂಡಿತು, ಕೆಲವು ಸಿನಿಮಾಗಳ ಆಡಿಶನ್ ಗೆ ಹೋಗ್ತಾ ಇದ್ದೆ, ಅದೇ ರೀತಿ ಕೆರೆಬೇಟೆ ಸಿನಿಮಾಗು ಆಡಿಷನ್ ಕೊಟ್ಡಿದ್ದೆ, ಕೆಲ ದಿನಗಳ ನಂತರ, ಪ್ರೊಡಕ್ಷನ್ ಕಡೆಯಿಂದ ಕರೆ ಮಾಡಿ ನಾಯಕಿ ಪಾತ್ರಕ್ಕೆ ಆಯ್ಕೆ ಮಾಡಿದರು. ಬಳಿಕ ಅವರೇ ನಿನಾಸಮ್ ತರಬೇತು ದಾರರಿಂದ ಅಭಿನಯ ತರಬೇತಿ ಮಾಡಿಸಿದರು. ಈ ಅವಕಾಶ ಕೊಟ್ಟ ಕೆರೆಬೇಟೆ ಚಿತ್ರ ತಂಡಕ್ಕೆ ಕೃತಜ್ಞಳಾಗಿದ್ದೇನೆ’ ಎನ್ನುತ್ತಾರೆ.
ಸ್ಯಾಂಡಲ್ ವುಡ್ ನಲ್ಲಿ ದೊಡ್ಡ ನಟಿಯಾಗಿ ಬೆಳೆಯುವ ಕನಸು ಕಂಡಿರುವ ಬಿಂದು ಕೆರೆಬೇಟೆ ಸಿನಿಮಾ ಮೂಲಕ ಅಭಿಮಾನಿಗಳ ಹೃದಯ ಗೆಲ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ
ಬೆಂಗಳೂರಿಗೆ ಐಟಿ ಸಿಟಿ ಎಂದು ಹೆಸರು ಬರಲು “ಎಲೆಕ್ಟ್ರಾನಿಕ್ ಸಿಟಿ” ಪ್ರಮುಖ ಕಾರಣ. ಅಷ್ಟು ಐಟಿ ಕಂಪನಿಗಳು ಅಲ್ಲಿದೆ. ಅಂತಹ ಪ್ರತಿಷ್ಠಿತ ಬಡಾವಣೆಯ ಹೆಸರೆ ಚಿತ್ರದ ಶೀರ್ಷಿಕೆಯಾಗಿದೆ. ಇತ್ತೀಚೆಗೆ ಈ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಮೆಚ್ಚುಗೆ ಪಡೆಯುತ್ತಿದೆ.
ಕೆ.ಪಿ.ಸಿ.ಸಿ ಜನರಲ್ ಸೆಕ್ರೆಟರಿ ಶಿವಣ್ಣ, ಶಿಕ್ಷಣ ತಜ್ಞ ವುಡೆ ಪಿ ಕೃಷ್ಣ ಹಾಗೂ ಚಲನಚಿತ್ರ ನಿರ್ದೇಶಕ ಲಿಂಗದೇವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಆರ್ ಚಿಕ್ಕಣ್ಣ ನಿರ್ಮಿಸಿ , ನಿರ್ದೇಶಿಸಿರುವ “ಎಲೆಕ್ಟ್ರಾನಿಕ್ ಸಿಟಿ” ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ ಶುಭ ಕೋರಿದರು.
ನಾನು ಹದಿನಾರು ವರ್ಷದಿಂದ ಐಟಿ ಉದ್ಯೋಗದಲ್ಲಿದ್ದೇನೆ. ಐಟಿ ಉದ್ಯೋಗಿಗಳ ಬದುಕಿನ ಬಗ್ಗೆ ಚಿತ್ರ ಮಾಡುವ ಅಸೆ ಬಂತು. ಐದು ವರ್ಷಗಳ ಹಿಂದೆ ಈ ಚಿತ್ರದ ಕಥೆ ಬರೆದೆ. ಕಥೆಯ ಕುರಿತು ಚಿತ್ರರಂಗದ ಅನೇಕರ ಜೊತೆ ಚರ್ಚಿಸಿ, 2021ರಲ್ಲಿ ಚಿತ್ರೀಕರಣ ಆರಂಭ ಮಾಡಿದೆ.
2022 ರಲ್ಲಿ ಚಿತ್ರ ಸಿದ್ದವಾಯಿತು. ಈವರೆಗೂ ನಲವತ್ತೆರಡಕ್ಕೂ ಅಧಿಕ ಚಿತ್ರೋತ್ಸವಗಳಲ್ಲಿ ಆಯ್ಕೆಯಾಗಿರುವ ನಮ್ಮ ಚಿತ್ರ ಮೂವತ್ತಕ್ಕೂ ಅಧಿಕ ಪ್ರಶಸ್ತಿಗಳನ್ನು ವಿವಿಧ ಭಾಗಗಳಲ್ಲಿ ಪಡೆದುಕೊಂಡಿದೆ.
ನವೆಂಬರ್ 24 ಚಿತ್ರ ತೆರೆಗೆ ಬರಲಿದೆ ನೋಡಿ ಹಾರೈಸಿ ಎಂದರು ನಿರ್ದೇಶಕ – ನಿರ್ಮಾಪಕ ಆರ್ ಚಿಕ್ಕಣ್ಣ. ಈ ಚಿತ್ರದಲ್ಲಿ ನಾನು ಐಟಿ ಉದ್ಯೋಗಿ. ಚಿಕ್ಕಣ್ಣ ಅವರ ನಿರ್ದೇಶನದಲ್ಲಿ ಚಿತ್ರ ಚೆನ್ನಾಗಿ ಬಂದಿದೆ. ಈ ಚಿತ್ರದಿಂದ ನನಗೆ “ಘೋಸ್ಟ್” ಚಿತ್ರದಲ್ಲಿ ನಟಿಸುವ ಅವಕಾಶ ದೊರೆಯಿತು ಎಂದು ನಾಯಕ ಆರ್ಯನ್ ಶೆಟ್ಟಿ ತಿಳಿಸಿದರು.
ನಾಯಕಿಯರಾದ ದಿಯಾ ಆಶ್ಲೇಶ, ರಕ್ಷಿತ ಕೆರೆಮನೆ ಹಾಗೂ ನಟಿ ರಶ್ಮಿ ಮುಂತಾದವರು ತಮ್ಮ ಪಾತ್ರದ ಬಗ್ಗೆ ಮಾತನಾಡಿದರು. ಸಂಕಲನಾಕಾರ ಸೌಂದರ್ ರಾಜ್ ಹಾಗೂ ಕಲಾ ನಿರ್ದೇಶಕ ಹಂಪಿ ಸುಂದರ್ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ನಟ ಪ್ರಥಮ್ ನಾಯಕನಾಗಿ ಅಭಿನಯಿಸುತ್ತಿರುವ, ಪಿ.ವಿ.ಆರ್ ಸ್ವಾಮಿ ಗೂಗಾರದೊಡ್ಡಿ ನಿರ್ದೇಶನದ “ಫಸ್ಟ್ ನೈಟ್ ವಿತ್ ದೆವ್ವ” ಚಿತ್ರದ ಮುಹೂರ್ತ ಸಮಾರಂಭ ಬಂಡೆ ಮಹಾಂಕಾಳಿ ದೇವಸ್ಥಾನದಲ್ಲಿ ನೆರವೇರಿದೆ. ಹಿರಿಯನಟ ಶ್ರೀನಿವಾಸಮೂರ್ತಿ ಚಿತ್ರದ ಮೊದಲ ಸನ್ನಿವೇಶಕ್ಕೆ ಆರಂಭ ಫಲಕ ತೋರಿ ಶುಭ ಕೋರಿದ್ದಾರೆ.
“ಫಸ್ಟ್ ನೈಟ್ ವಿತ್ ದೆವ್ವ” ಹಾರಾರ್ ವಿತ್ ಕಾಮಿಡಿ ಜಾನರ್ ನ ಚಿತ್ರ ಎಂದು ಮಾತನಾಡಿದ ನಾಯಕ ಪ್ರಥಮ್, ಈ ಚಿತ್ರಕ್ಕೆ ನಾನೇ ಕಥೆ ಬರೆದಿದ್ದೇನೆ. ನಾನು ಈ ಚಿತ್ರಕ್ಕೆ ಕಥೆ ಬರೆಯಲು “ವಿಕ್ರಮ್ ಮತ್ತು ಬೇತಾಳ” ಕಥೆ ಸ್ಪೂರ್ತಿ. ಸಾಕಷ್ಟು ಹಾರಾರ್ ಚಿತ್ರ ಬಂದಿದೆ. ಆದರೆ ನಾವು ಸ್ವಲ್ಪ ವಿಭಿನ್ನವಾಗಿ ತೋರಿಸುತ್ತಿದ್ದೇವೆ.
ನಿಖಿತ ಅವರು ನನ್ನ ಪತ್ನಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹಿರಿಯ ನಟರಾದ ಶ್ರೀನಿವಾಸಮೂರ್ತಿ, ಸಂಗೀತಾ, ಹರೀಶ್ ರಾಜ್, ತನುಜಾ ಮುಂತಾದವರು ಪ್ರಮುಖ ತಾರಾಬಳಗದಲ್ಲಿದ್ದಾರೆ. ಮಾನ್ಯ ಸಿಂಗ್ ದೆವ್ವದ ಪಾತ್ರ ಮಾಡುತ್ತಿದ್ದಾರೆ. ನನ್ನ ಸ್ನೇಹಿತ ನವೀನ್ ಈ ಚಿತ್ರ ನಿರ್ಮಿಸುತ್ತಿದ್ದಾರೆ ಎಂದು ತಿಳಿಸಿದರು.
ಪ್ರಥಮ್ ಬರೆದಿರುವ ಕಥೆ ಚೆನ್ನಾಗಿದೆ. ನಾನು ಛಾಯಾಗ್ರಹಣದೊಂದಿಗೆ ನಿರ್ದೇಶನವನ್ನು ಮಾಡುತ್ತಿದ್ದೇನೆ. ಇಂದಿನಿಂದ ಬೆಂಗಳೂರಿನಲ್ಲಿ ಚಿತ್ರೀಕರಣ ಆರಂಭವಾಗಿದೆ. ಹಾಡಿನ ಚಿತ್ರೀಕರಣ ಹೊರದೇಶದಲ್ಲಿ ನಡೆಯಲಿದೆ ಎಂದರು ನಿರ್ದೇಶಕ ಪಿ.ವಿ.ಆರ್ ಸ್ವಾಮಿ.
ಚಿತ್ರದ ನಾಯಕಿರಾದ ನಿಖಿತ ಹಾಗೂ ಮಾನ್ಯ ಸಿಂಗ್, ಪ್ರಮುಖಪಾತ್ರದಲ್ಲಿ ಅಭಿನಯಿಸುತ್ತಿರುವ ಶ್ರೀನಿವಾಸಮೂರ್ತಿ, ಸಂಗೀತ, ಹರೀಶ್ ರಾಜ್ ತಮ್ಮ ಪಾತ್ರದ ಕುರಿತು ಮಾಹಿತಿ ನೀಡಿದರು. ಸಂಗೀತ ನಿರ್ದೇಶಕ ಅದ್ವಿಕ್ ವರ್ಮ ಹಾಗೂ ಸಂಭಾಷಣೆ ಬರೆದು ಸಂಕಲನ ಕಾರ್ಯವನ್ನು ಮಾಡುತ್ತಿರುವ ನಾಗೇಶ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.