ಚಿತ್ರ ವಿಮರ್ಶೆ: ರುದ್ರನ ಗನ್ನಾಭಿಷೇಕ!

ವಿಜಯ್ ಭರಮಸಾಗರ

ರೇಟಿಂಗ್: 5/3

ಚಿತ್ರ: ಸೂರಿ ಬ್ಯಾಡ್ ಮ್ಯಾನರ್ಸ್
ನಿರ್ದೇಶನ: ಸೂರಿ
ನಿರ್ಮಾಣ: ಸುಧೀರ್
ತಾರಾಗಣ: ಅಭಿಷೇಕ್ ಅಂಬರೀಶ್,
ರಚಿತಾ ರಾಮ್, ತಾರಾ, ಶೋಭರಾಜ್, ಶರತ್ ಲೋಹಿತಾಶ್ವ, ಇತರರು.

‘ನಾವ್ ಏನ್ ಹೇಳ್ತಿವೋ ಅದನ್ನು ಮಾಡಿ ತೋರಿಸ್ಬೇಕು. ಬೇರೆ ಏನೋ ಮಾಡಿದ್ರೆ ಅದು ಬ್ಯಾಡ್ ಮ್ಯಾನರ್ಸ್…’

ಈ ಡೈಲಾಗ್ ಬರುವ ಹೊತ್ತಿಗೆ ಕಥೆ ಆಗಷ್ಟೇ ಟೇಕಾಫ್ ಆಗಿರುತ್ತೆ. ಹೇಳಿ ಕೇಳಿ ಇದು ಸೂರಿ ಚಿತ್ರ. ಹಾಗಾಗಿ ಇಲ್ಲಿ ಎಲ್ಲವೂ ರಾ ಅಂಶಗಳೇ. ಕಥೆ ಸರಳವಾಗಿದೆ. ಚಿತ್ರಕಥೆಯೇ ಇಲ್ಲಿ ಜೀವಾಳ. ಉಳಿದಂತೆ ಕಥೆಯ ವೇಗಕ್ಕೆ ಎಡಿಟಿಂಗ್ ಕೂಡ ಸಾಥ್ ನೀಡಿದೆ. ಸಿನಿಮಾದಲ್ಲಿ ರಗಡ್ ಅಂಶಗಳೇ ಹೆಚ್ಚು. ಅದಕ್ಕೆ‌ಸರಿಯಾಗಿ
ಆಯ್ಕೆ ಮಾಡಿಕೊಂಡ ಲೊಕೇಷನ್ ಕೂಡ ರಗಡ್ ಆಗಿವೆ.

ಇದೊಂದು ರಾ ಕಂಟೆಂಟ್ ಸಿನಿಮಾ. ಕ್ರೈಮ್ ಹಿನ್ನೆಲೆಯ ಕಥೆ ನೋಡುಗರನ್ನು ಕೂರಿಸಿಕೊಳ್ಳುತ್ತೆ. ಮೊದಲರ್ಧ ಗನ್ ಸೌಂಡ್ ನಲ್ಲೇ ಚಿತ್ರ ಸಾಗುತ್ತೆ. ದ್ವಿತಿಯಾರ್ಧ ಅದರ ಸೌಂಡು ಇನ್ನೂ ಜಾಸ್ತಿ ಕೇಳುತ್ತೆ. ಅಲ್ಲಿಗೆ ಇದೊಂದು ಗನ್ ಮಾಫಿಯಾ ಕಥೆ ಅಂತ ಪ್ರತ್ಯೇಕವಾಗಿ ಹೇಳಬೇಕಿಲ್ಲ.
ಸೂರಿ ಅವರ ಫ್ಲೇವರ್ ಇಲ್ಲೂ ಮುಂದುವರೆದಿದೆ.

ನೋಡುಗನಿಗೆ ಸ್ವಲ್ಪ ಕನ್ಫ್ಯೂಷನ್ ಸಹಜ. ನೋಟ ಅತ್ತಿತ್ತ ಹರಿಸಿದರೆ ಗೊಂದಲ ಗ್ಯಾರಂಟಿ. ರಿವರ್ಸ್ ಸ್ಕ್ರೀನ್ ಪ್ಲೇ ಸಿನಿಮಾ ಆಗಿದ್ದರಿಂದ ಎಲ್ಲೂ ಬೋರ್ ಆಗಲ್ಲ. ಕೆಲವು ಕಡೆ ಅನಗತ್ಯ ಸೀನ್ ಎನಿಸಿದರೂ ಗನ್ ಸದ್ದಿನ ಮುಂದೆ ಎಲ್ಲವೂ ಗೌಣ. ಒಟ್ಟಾರೆ, ಚಿತ್ರ ಮಾಸ್ ಎಂಟರ್ಟೈನ್ಮೆಂಟ್ ಮೂಲಕ ರಸದೌತಣ ಕೊಡುತ್ತೆ. ಆಕ್ಷನ್ ಪ್ರಿಯರಿಗಂತೂ ಹತ್ತಿರ ಆಗುವ ಸಿನಿಮಾವಿದು.

ಕಥೆ ಏನು?
ರುದ್ರ ತನ್ನ ತಂದೆಯ ಕೆಲಸ ಪಡೆದು ಪೊಲೀಸ್ ಅಧಿಕಾರಿ ಆಗ್ತಾನೆ. ಘಟನೆಯಲ್ಲಿ ಸರ್ವೀಸ್ ಗನ್ ಕಳೆದುಕೊಳ್ತಾನೆ. ಅದನ್ನು ಹುಡುಕಿ ಹೊರಡುವ ಆತನಿಗೆ ಗನ್ ಮಾಫಿಯಾ ಪರಿಚಯವಾಗುತ್ತೆ. ಕಂಟ್ರಿ ಪಿಸ್ತೂಲ್‌ನಿಂದ ಹಿಡಿದು ಎಕೆ 47 ವರೆಗೂ ಅಲ್ಲಿ ಗನ್ ಮಾರಾಟವಾಗುತ್ತವೆ. ಗೋಡ ಅನ್ನೋ ಊರಲ್ಲಿ ರಾಶಿ ರಾಶಿ ಗನ್ ಉತ್ಪತ್ತಿಯಾಗುತ್ತವೆ. ಮಕ್ಕಳ ಕೈಯಲ್ಲೂ ಗನ್ನು. ಅಂತಹ ಊರಲ್ಲಿ ಗನ್ ಮಾಫಿಯಾ ತಂಡ ಪತ್ತೆ ಹಚ್ಚಿ ಹಿಗ್ಗಾ ಮುಗ್ಗಾ ಥಳಿಸೋಕೆ ರುದ್ರ ಮುಂದಾಗ್ತಾನೆ. ಆ ಬಳಿಕ ಒಂದಷ್ಟು ಘಟನೆಗಳು ನಡೆಯುತ್ತವೆ. ಅಲ್ಲಿಂದ ಕಥೆ ಇನ್ನೊಂದು ತಿರುವು ಪಡೆದುಕೊಳ್ಳುತ್ತೆ. ಇಲ್ಲಿ ಹೇರಳವಾಗಿಯೇ ಫೈಟ್ಸ್ ಇದೆ. ಭರಪೂರ ಮನರಂಜನೆಗೇನೂ ಕಮ್ಮಿ ಇಲ್ಲ.

ಯಾರು ಹೇಗೆ?
ಅಭಿಷೇಕ್ ಇಲ್ಲಿ ಮೊದ ಚಿತ್ರಕ್ಕೆ ಹೋಲಿಸಿದರೆ ಸಖತ್ ಆಗಿ ಕಾಣುತ್ತಾರೆ. ನಟನೆಯಲ್ಲಿ ಪ್ರಬುದ್ಧತೆ ಎದ್ದು ಕಾಣುತ್ತೆ. ಆಕ್ಷನ್ ಮೂಲಕ ಗಮನ ಸೆಳೆಯುವ ಅವರು, ಡ್ಯಾನ್ಸ್ ಸ್ಟೆಪ್ ನಲ್ಲಿ ನೀರಸ ಎನಿಸಿತ್ತಾರೆ. ಉಳಿದಂತೆ ಬಾಡಿ ಲಾಂಗ್ವೇಜ್, ಡೈಲಾಗ್ ಹರಿಬಿಡುವುದರಲ್ಲಿ ಇಷ್ಟ ಆಗ್ತಾರೆ.
ರಚಿತಾರಾಮ್ ಸ್ವಲ್ಪ ಹೊತ್ತು ಕಾಣಿಸಿಕೊಂಡರೂ ಇರುವಷ್ಟು ಸಮಯ ಕಾಡುತ್ತಾರೆ. ತಾರಾ ಅಮ್ಮನಾಗಿ ಇಷ್ಟವಾಗುತ್ತಾರೆ. ಉಳಿದಂತೆ ಬರುವ ಮಗಾಯಿ, ಫೀನಿಕ್ಸ್, ಗುನ್ನೀಸ್, ಶೋಲೆಬಾಬು, ಸಿಲ್ಕ್, ತಲ್ವಾರ್ ತಾತಯ್ಯ, ಹಂಡೆ ಪಾತ್ರಗಳು ಗಮನ ಸೆಳೆಯುತ್ತವೆ.


ಕುಡಿದ್ರೆ ಜುಮ್ ಅನ್ನುತ್ತೆ ಹಾಡು ಚೆನ್ನಾಗಿದೆ. ಆ ಹಾಡಲ್ಲೇ ಫೈಟ್ ಮಾಡಿರೋದು ಖುಷಿ ಕೊಡುತ್ತೆ. ಇನ್ನು ಸ್ಟಂಟ್ ಮಾಸ್ಟರ್
ರವಿವರ್ಮ ಕೆಲಸ ಅಬ್ಬರಿಸಿದೆ. ಚರಣ್ ಅವರ ಹಿನ್ನೆಲೆ ಸಂಗೀತದ ಕಥೆಗೆ ಪೂರಕವಾಗಿದೆ. ಶೇಖರ್ ಕ್ಯಾಮೆರಾ ಕೈಚಳಕ ಸೊಗಸಾಗಿದೆ.

Related Posts

error: Content is protected !!