ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ಗಿಂದು ಜನ್ಮದಿನದ ಸಂಭ್ರಮ. 58ನೇ ವಸಂತಕ್ಕೆ ಕಾಲಿಟ್ಟಿರುವ ಬಾದ್ ಷಾಗೆ ಶುಭಾಷಯಗಳ ಮಹಾಪೂರವೇ ಹರಿದುಬರ್ತಿದೆ. ಕಿಂಗ್ ಖಾನ್ ಹುಟ್ಟುಹಬ್ಬದ ಸ್ಪೆಷಲ್ ಆಗಿ ಡಂಕಿ ಸಿನಿಮಾದ ಟೀಸರ್ ಉಡುಗೊರೆಯಾಗಿ ಸಿಕ್ಕಿದೆ.
ನಾಲ್ಕು ರಾಷ್ಟ್ರಪ್ರಶಸ್ತಿ ಗೆದ್ದಿರುವ ಸ್ಟಾರ್ ಡೈರೆಕ್ಟರ್ ರಾಜ್ ಕುಮಾರ್ ಹಿರಾನಿ ಡಂಕಿ ಸಿನಿಮಾದ ಸೂತ್ರಧಾರ. ಮುನ್ನಾ ಬಾಯ್ ಎಂಬಿಬಿಎಸ್, 3 ಈಡಿಯಟ್ಸ್, ಪಿಕೆ, ಸಂಜುನಂತಹ ಸೂಪರ್ ಡೂಪರ್ ಹಿಟ್ ಚಿತ್ರ ಕೊಟ್ಟಿರುವ ಹಿರಾನಿ, ಈ ಬಾರಿ ಐದು ಜನ ಸ್ನೇಹಿತರ ಕಥೆ ಹೇಳೋದಿಕ್ಕೆ ಬರ್ತಿದೆ. ಒಂದೊಳ್ಳೆ ಸಂದೇಶದ ಜೊತೆಗೆ ಮನರಂಜನಾತ್ಮಕ ಅಂಶಗಳನ್ನು ಬೆರೆಸಿ ಎಣೆದಿರುವ ಡಂಕಿ ಟೀಸರ್ ಗೆ ಅದ್ಭುತ ರೆಸ್ಪಾನ್ಸ್ ಸಿಕ್ತಿದೆ.
ಪ್ರೀತಿ ಮತ್ತು ಸ್ನೇಹದ ಕಥೆಯಾಗಿರುವ ಡಂಕಿ ಸಿನಿಮಾವನ್ನು JIO ಸ್ಟುಡಿಯೋಸ್, ರೆಡ್ ಚಿಲ್ಲೀಸ್ ಎಂಟರ್ಟೈನ್ಮೆಂಟ್ ಮತ್ತು ರಾಜ್ಕುಮಾರ್ ಹಿರಾನಿ ಫಿಲ್ಮ್ಸ್ ನಡಿ ರಾಜ್ಕುಮಾರ್ ಹಿರಾನಿ ಮತ್ತು ಗೌರಿ ಖಾನ್ ನಿರ್ಮಿಸಿದ್ದಾರೆ. ಅಭಿಜಾತ್ ಜೋಷಿ, ರಾಜ್ಕುಮಾರ್ ಹಿರಾನಿ ಮತ್ತು ಕನಿಕಾ ಧಿಲ್ಲೋನ್ ಕಥೆ ಬರೆದಿದ್ದಾರೆ. ಡಂಕಿ ಸಿನಿಮಾ ಕ್ರಿಸ್ಮಸ್ ಗೆ ವಿಶ್ವಾದ್ಯಂತ ರಿಲೀಸ್ ಆಗಲಿದೆ.
ಕಳೆದ ಏಳೆಂಟು ವರ್ಷಗಳಿಂದ ಚಿತ್ರರಂಗದಲ್ಲಿ ಸಹ, ಸಹಾಯಕ ನಿರ್ದೇಶಕನಾಗಿ ಹಲವು ಚಿತ್ರಗಳಲ್ಲಿ ದುಡಿದಿದ್ದ ಸತೀಶ್ ಕುಮಾರ್ ಅವರು ಜೊತೆಯಾಗಿರು ಎಂಬ ಚಿತ್ರದ ಮೂಲಕ ಈಗ ನಿರ್ದೇಶಕರಾಗಿದ್ದಾರೆ. ಬಿಡುಗಡೆಗೆ ಸಿದ್ದವಾಗಿರುವ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ಅವರೇ ನಿರ್ದೇಶನವನ್ನೂ ಸಹ ಮಾಡಿದ್ದಾರೆ.
2009ರಲ್ಲಿ ನೆಡೆದ ಸತ್ಯ ಘಟನೆಯೊಂದನ್ನು ಆಧರಿಸಿ ಈ ಚಿತ್ರಕ್ಕೆ ಚಿತ್ರಕಥೆ ಹೆಣೆದಿದ್ದಾರೆ. ಆಗಿನ್ನೂ ಕೀಪ್ಯಾಡ್ ಮೊಬೈಲ್ ಇದ್ದಂಥ ಸಮಯ. ಆಗ ಹುಡುಗಿಯ ಮೊಬೈಲ್ ಗೆ ಬರುವ ಒಂದು ಮಿಸ್ ಕಾಲ್ ನಿಂದ ಆರಂಭವಾಗುವ ಪ್ರೇಮಕಥೆ ಮುಂದೆ ಏನೆಲ್ಲ ತಿರುವುಗಳನ್ನು ಪಡೆದುಕೊಳ್ಳುತ್ತದೆ ಎಂಬುದನ್ನು ಈ ಚಿತ್ರದಲ್ಲಿ ಹೇಳಲಾಗಿದೆ. ಚಿತ್ರವನ್ನು ಅದೇ ಕಾಲಘಟ್ಟಕ್ಕೆ ತಕ್ಕಂತೆ ಚಿತ್ರಿಸಲಾಗಿದೆ ಈಗಾಗಲೇ ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ U/A ಸರ್ಟಿಫಿಕೇಟ್ ಸಿಕ್ಕಿದೆ.
ರೇಣು ಮೂವೀಸ್ ನಿರ್ಮಾಣದ ಈ ಚಿತ್ರದ ಐದು ಹಾಡುಗಳಿಗೆ ವಿನು ಮನಸು ಅವರ ಸಂಗೀತ ನಿರ್ದೇಶನವಿದೆ. ಸತೀಶ್ ಚಂದ್ರಯ್ಯ ಅವರ ಸಂಕಲನ, ರಾಜ ಶಿವಶಂಕರ್ ಮತ್ತು ಆನಂದ್ ಇಳಯರಾಜ ಅವರ ಛಾಯಾಗ್ರಹಣ, ಕೆ.ಕಲ್ಯಾಣ್ ಮತ್ತು ಮನ್ವರ್ಷಿ ಅವರ ಸಾಹಿತ್ಯವಿದೆ. ಚಿತ್ರದ ಹಾಡುಗಳನ್ನು ಕಳಸ, ಸಕಲೇಶಪುರ, ಕುಂದಾಪುರದ ಸುತ್ತಮುತ್ತಲಿನ ಸುಂದರ ಸ್ಥಳಗಳಲ್ಲಿ ಚಿತ್ರಿಕರಿಸಲಾಗಿದೆ.
ಚಿತ್ರದಲ್ಲಿ ವೆಂಕಟೇಶ್ ಹೆಗ್ಡೆ ಮತ್ತು ಸುನೀಲ್ ಕಾಂಚನ್ ನಾಯಕರಾಗಿ, ರಶ್ಮಿಗೌಡ, ಮತ್ತು ಪೂಜಾ ಆಚಾರ್ ನಾಯಕಿಯರಾಗಿ ನಟಿಸಿದ್ದಾರೆ. ಉಳಿದ ತಾರಾಗಣದಲ್ಲಿ ಶಂಕರ ನಾರಾಯಣ್, ಸುಧೀರ್, ಸುಧಾ, ಯಶೋಧ, ಅಶ್ವಿನಿ, ಸಂತೋಷ್ , ರಾಜಶೇಖರ್, ಮಂಜು ಮುಂತಾದವರು ನಟಿಸಿದ್ದಾರೆ.
ಈ ವರ್ಷದ ಕೊನೆಯಲ್ಲಿ ಚಿತ್ರವನ್ನು ಬಿಡುಗಡೆ ಮಾಡುವ ಯೋಜನೆ ಹಾಕಿಕೊಳ್ಳಲಾಗಿದ್ದು, ನವೆಂಬರ್ ನಲ್ಲಿ ಚಿತ್ರತಂಡ ಆಡಿಯೋ ಮತ್ತು ಟ್ರೇಲರ್ ಬಿಡುಗಡೆ ಮಾಡಲಿದೆ.
ರಾಜಲಕ್ಷ್ಮಿ ಎಂಟರ್ಟೈನ್ಮೆಂಟ್ ಲಾಂಛನದಲ್ಲಿ ಪ್ರತಿಭಾ ನರೇಶ್ ನಿರ್ಮಿಸುತ್ತಿರುವ, ನೃತ್ಯ ನಿರ್ದೇಶಕ ರಾಜ ಕಲೈ ಕುಮಾರ್ ಪ್ರಥಮ ನಿರ್ದೇಶನದ ಹಾಗೂ ಪ್ರಜ್ವಲ್ ದೇವರಾಜ್ ನಾಯಕರಾಗಿ ನಟಿಸುತ್ತಿರುವ “ಚೀತಾ” ಚಿತ್ರದ ಮುಹೂರ್ತ ಸಮಾರಂಭ ಕನ್ನಡ ರಾಜ್ಯೋತ್ಸವದ ಶುಭದಿನದಂದು ಹೆಚ್ ಎಂ ಟಿ ಶಾಲೆ ಆಟದ ಮೈದಾನದಲ್ಲಿ ನೆರವೇರಿತು. ಪ್ರಜ್ವಲ್ ದೇವರಾಜ್ ಕನ್ನಡ ಧ್ವಜ ಹಾರಿಸುವುದರ ಮೂಲಕ ಚಿತ್ರಕ್ಕೆ ಚಾಲನೆ ನೀಡಿದರು.
ಕಳೆದ 23 ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಡ್ಯಾನ್ಸರ್ ಆಗಿ, ಡ್ಯಾನ್ಸ್ ಮಾಸ್ಟರ್ ಆಗಿ ಕಾರ್ಯ ನಿರ್ವಹಿಸಿದ್ದೇನೆ ಎಂದ ನಿರ್ದೇಶಕ ರಾಜ ಕಲೈ ಕುಮಾರ್, ಇದು ನನ್ನ ನಿರ್ದೇಶನದ ಮೊದಲ ಚಿತ್ರ. ಪ್ರಜ್ವಲ್ ಅವರ ಮೂವತ್ತೊಂಭತ್ತನೇ ಚಿತ್ರವನ್ನು ನಾನು ನಿರ್ದೇಶಿಸುತ್ತಿದ್ದೇನೆ. ಇನ್ನು ಚಿತ್ರದ ಕುರಿತು ಹೇಳುವುದಾದರೆ, ಇದೊಂದು ಮಾರ್ಕೆಟ್ ನಲ್ಲಿ ನಡೆಯುವ ಕಥೆ. ಮಾರ್ಕೆಟ್ ನಲ್ಲಿನ ವ್ಯಾಪಾರ, ವಹಿವಾಟು ಹಾಗೂ ಅಲ್ಲಿ ಕೆಲಸ ಮಾಡುವವರು ಎಲ್ಲಾ ಸೂಪರ್ ಫಾಸ್ಟ್. ನಮ್ಮ ಚಿತ್ರದ ನಾಯಕ ಕೂಡ ಚಿರತೆಯಷ್ಟೇ ವೇಗದವನು. ಹಾಗಾಗಿ ನಮ್ಮ ಚಿತ್ರಕ್ಕೆ “ಚೀತಾ” ಎಂದು ಹೆಸರಿಟ್ಟಿದ್ದೇವೆ.
ಕಲಾ ನಿರ್ದೇಶಕ ಶಿವು ಅವರು ಅದ್ದೂರಿ ಮಾರ್ಕೆಟ್ ಸೆಟ್ ನಿರ್ಮಾಣ ಮಾಡುತ್ತಿದ್ದಾರೆ. ಆ ಸೆಟ್ ನಲ್ಲೇ ಚಿತ್ರದ ಬಹುತೇಕ ಚಿತ್ರೀಕರಣ ನಡೆಯುತ್ತದೆ. ಶೃತಿ ಹರಿಹರನ್, ಗುರುರಾಜ್ ಜಗ್ಗೇಶ್, ಶಿವರಾಜ ಕೆ.ಆರ್ ಪೇಟೆ, ತೆಲುಗು ನಟ ಸುನೀಲ್, ಗೋವಿಂದೇ ಗೌಡ, ಅಭಯ್ ಪುನೀತ್ ಮುಂತಾದವರು ನಮ್ಮ ಚಿತ್ರದಲ್ಲಿ ನಟಿಸುತ್ತಿದ್ದಾರೆ. ನವೆಂಬರ್ ಆರರಿಂದ ಚಿತ್ರೀಕರಣ ಆರಂಭವಾಗಲಿದೆ ಎಂದರು.
ಕಲೈ ಮಾಸ್ಟರ್ ನೃತ್ಯ ನಿರ್ದೇಶಕರಾದಾಗ ನೃತ್ಯ ಸಂಯೋಜಿಸಿದ ಮೊದಲ ಗೀತೆಗೂ ನಾನೇ ನಾಯಕನಾಗಿದ್ದೆ. ಈಗ ಅವರು ನಿರ್ದೇಶಿಸುತ್ತಿರುವ ಮೊದಲ ಚಿತ್ರಕ್ಕೂ ನಾನೇ ನಾಯಕ. ನಿರ್ದೇಶಕರು ಒಳ್ಳೆ ಕಥೆ ಸಿದ್ದ ಮಾಡಿಕೊಂಡಿದ್ದಾರೆ. ಮಾರ್ಕೆಟ್ ನಲ್ಲೇ ಹುಟ್ಟಿ, ಅಲ್ಲೇ ಬೆಳೆಯುವ ಹುಡುಗನ ಪಾತ್ರ ನನ್ನದು ಎಂದು ನಾಯಕ ಪ್ರಜ್ವಲ್ ದೇವರಾಜ್ ತಿಳಿಸಿದರು.
ನಾನು ಚಿತ್ರದಲ್ಲಿ ಪ್ರಜ್ವಲ್ ಅವರ ಸ್ನೇಹಿತನ ಪಾತ್ರ ನಿರ್ವಹಿಸುತ್ತಿರುವುದಾಗಿ ಗುರುರಾಜ್ ಜಗ್ಗೇಶ್ ಹೇಳಿದರು.
ಶೃತಿ ಹರಿಹರನ್, ಶಿವರಾಜ್ ಕೆ.ಆರ್ ಪೇಟೆ, ಗೋವಿಂದೇ ಗೌಡ ಮುಂತಾದ ಕಲಾವಿದರು ಚಿತ್ರದ ಬಗ್ಗೆ ಮಾತನಾಡಿದರು. ನಿರ್ಮಾಪಕಿ ಪ್ರತಿಭಾ ನರೇಶ್ ಎಲ್ಲರಿಗೂ ಧನ್ಯವಾದ ತಿಳಿಸಿದರು.
ಈ ಚಿತ್ರದ ಮತ್ತೊಂದು ವಿಶೇಷವೆಂದರೆ ಮೊದಲ ಬಾರಿಗೆ ಸಿನಿಮಾದ ಅಷ್ಟು ತಂತ್ರಜ್ಞರ ಫೋಟೊ ಶೂಟ್ ಮಾಡಿಸುವುದರ ಮೂಲಕ ತೆರೆಯ ಹಿಂದೆ ದುಡಿಯುವ ತಂತ್ರಜ್ಞರಿಗೆ ವಿಶೇಷ ಗೌರವ ನೀಡಿದ್ದಾರೆ.
ಖ್ಯಾತ ಸಾಹಿತಿ ಪಿ.ಲಂಕೇಶ್ ಅವರ ಮೊಮ್ಮಗ ಹಾಗೂ ಇಂದ್ರಜಿತ್ ಲಂಕೇಶ್ ಅವರ ಮಗ ಸಮರ್ಜಿತ್ ಲಂಕೇಶ್ “ಗೌರಿ” ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ. ಇಂದ್ರಜಿತ್ ಲಂಕೇಶ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರದ ಚಿತ್ರೀಕರಣ ಬಿರುಸಿನಿಂದ ಸಾಗಿದೆ. ಇತ್ತೀಚೆಗೆ ನಾಯಕ ಸಮರ್ಜಿತ್ ಲಂಕೇಶ್ ಹುಟ್ಟುಹಬ್ಬವನ್ನು ಚಿತ್ರತಂಡದ ಸದಸ್ಯರು ಆಚರಿಸಿದ್ದಾರೆ.
ಮರ್ಜಿತ್ ಅವರ ಅಜ್ಜಿ, ಪಿ.ಲಂಕೇಶ್ ಪತ್ನಿ ಇಂದಿರಾ ಲಂಕೇಶ್, ತಾಯಿ ಅರ್ಪಿತಾ ಲಂಕೇಶ್, ಇಂದ್ರಜಿತ್ ಲಂಕೇಶ್, ನಾಯಕಿ ಸಾನ್ಯ ಅಯ್ಯರ್, ನಟಿಯರಾದ ಮಾನಸಿ ಸುಧೀರ್, ಎಸ್ತರ ನರೋನ, ಹಿರಿಯ ಛಾಯಾಗ್ರಾಹಕ ಕೆ.ಕೆ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ನಂತರ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು ಮಾತನಾಡಿದರು.
“ಗೌರಿ” ಚಿತ್ರದ ಚಿತ್ರೀಕರಣ ಬಿರುಸಿನಿಂದ ಸಾಗಿದೆ. ಈಗಾಗಲೇ ಚಿಕ್ಕಮಗಳೂರಿನ ರಮಣೀಯ ಸ್ಥಳಗಳಲ್ಲಿ ಮೊದಲ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ. ಎರಡನೇ ಹಂತದ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆಯುತ್ತಿದೆ. ರವಿವರ್ಮ ಅವರ ಸಾಹಸ ನಿರ್ದೇಶನದಲ್ಲಿ ಸಾಹಸ ದೃಶ್ಯಗಳು ಅದ್ಭುತವಾಗಿ ಮೂಡಿಬಂದಿದೆ.
ಸಮರ್ಜಿತ್ ನಾನು ಅಂದುಕೊಂಡದಕ್ಕಿಂತ ಚೆನ್ನಾಗಿ ಅಭಿನಯಿಸುತ್ತಿದ್ದಾರೆ. ಸಾನ್ಯ ಅವರು ಕೂಡ. ಮುಖ್ಯಮಂತ್ರಿ ಚಂದ್ರು, ಸಿಹಿಕಹಿ ಚಂದ್ರು, ಮಾನಸಿ ಸುಧೀರ್, ಎಸ್ತರ್ ನರೋನ ಮುಂತಾದವರು ನಮ್ಮ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಹಿರಿಯ ಛಾಯಾಗ್ರಾಹಕ ಕೆ.ಕೆ ಛಾಯಾಗ್ರಹಣ ಮಾಡುತ್ತಿದ್ದಾರೆ. ಇದು ಅವರ ನೂರನೇ ಚಿತ್ರ ಎಂದು ಇಂದ್ರಜಿತ್ ಲಂಕೇಶ್ ತಿಳಿಸಿದರು.
ನಾನು ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿಕೊಳ್ಳುವುದಿಲ್ಲ ಎಂದು ಮಾತನಾಡಿದ ಸಮರ್ಜಿತ್ ಲಂಕೇಶ್, ಇಂದು ಚಿತ್ರತಂಡದವರು ನನ್ನ ಹುಟ್ಟುಹಬ್ಬ ಆಚರಿಸಿದ್ದು ಖುಷಿಯಾಗಿದೆ. ಎಲ್ಲರಿಗೂ ಧನ್ಯವಾದ. ಸಾಕಷ್ಟು ತಯಾರಿ ಮಾಡಿಕೊಂಡು ಈ ಚಿತ್ರದಲ್ಲಿ ನಟಿಸುತ್ತಿದ್ದೇನೆ. ಚಿತ್ರ ಚೆನ್ನಾಗಿ ಮೂಡಿಬರುವ ಭರವಸೆ ಇದೆ ಎಂದರು.
ನಾಯಕಿ ಸಾನ್ಯ ಅಯ್ಯರ್ ಚಿತ್ರೀಕರಣದ ಅನುಭವವನ್ನು ಹಂಚಿಕೊಂಡರು. ಮಾನಸಿ ಸುಧೀರ್ ಹಾಗೂ ಎಸ್ತರ್ ನರೋನ ಸಹ ಚಿತ್ರದ ಕುರಿತು ಮಾತನಾಡಿದರು.
ಇದು ನನ್ನ ನೂರನೇ ಚಿತ್ರ. ನನ್ನ ಮಗ ನಾಣಿ ಕೂಡ ಈ ಚಿತ್ರದಲ್ಲಿ ನನ್ನ ಜೊತೆ ಕೆಲಸ ಮಾಡುತ್ತಿದ್ದಾರೆ. ಸಮರ್ಜಿತ್ ನಟನೆ ನೋಡಿದಾಗ ಮೊದಲ ಚಿತ್ರ ಅನಿಸುವುದಿಲ್ಲ. ಅಷ್ಟು ಚೆನ್ನಾಗಿ ನಟಿಸುತ್ತಿದ್ದಾರೆ ಎಂದರು ಛಾಯಾಗ್ರಾಹಕ ಕೆ.ಕೆ.
ಸಮರ್ಜಿತ್ ಅಜ್ಜಿ ಇಂದಿರಾ ಲಂಕೇಶ್ ಅವರು ಮೊಮ್ಮಗನಿಗೆ ಹುಟ್ಟುಹಬ್ಬದ ಶುಭಾಶಯ ಕೋರಿ, ಚಿತ್ರ ಯಶಸ್ವಿಯಾಗಲೆಂದು ಹಾರೈಸಿದರು.
ಸಮರ್ಜಿತ್ ತಮ್ಮ ಹುಟ್ಟುಹಬ್ಬವನ್ನು ಅನೇಕ ಸಾಮಾಜಿಕ ಕಾರ್ಯಗಳೊಂದಿಗೆ ಅರ್ಥಪೂರ್ಣವಾಗಿ ಆಚರಿಸಿಕೊಂಡರು. ಬೆಳಗ್ಗೆ ಸಿದ್ದಗಂಗಾ ಮಠಕ್ಕೆ ತೆರಳಿ ಶಿವಕುಮಾರ ಸ್ವಾಮಿಗಳ ಗದ್ದುಗೆ ದರ್ಶನ ಮಾಡಿ ಆಶೀರ್ವಾದ ಪಡೆದುಕೊಂಡರು. ಆನಂತರ ಕಂಠೀರವ ಸ್ಟುಡಿಯೋಗೆ ಆಗಮಿಸಿ ಪುನೀತ್ ರಾಜಕುಮಾರ್ ಸಮಾಧಿಗೆ ಪೂಜೆ ಸಲ್ಲಿಸಿದರು.
ಎನ್. ಗೊಂಬೆ ಬ್ಯಾನರ್ ನಲ್ಲಿ ಪ್ರದೀಪ್ ಯಾದವ್ ನಿರ್ಮಾಣದ, ಸಿ.ಎಂ.ವಿಜಯ್ ನಿರ್ದೇಶನದ ಹಾಗೂ ಬಿಗ್ ಬಾಸ್ ಖ್ಯಾತಿಯ ರಾಜೀವ್ ಹನು ನಾಯಕನಾಗಿ ನಟಿಸಿರುವ “ಉಸಿರೇ ಉಸಿರೇ” ಚಿತ್ರದ ಟ್ರೇಲರ್ ಅನ್ನು ನಟ ಸುದೀಪ್ ರಿಲೀಸ್ ಮಾಡಿದ್ದಾರೆ.
ಟ್ರೇಲರ್ ಬಿಡುಗಡೆ ಮಾಡಿ ಮಾತನಾಡಿದ ಕಿಚ್ಚ ಸುದೀಪ್, “ಉಸಿರೇ ಉಸಿರೇ” ನನ್ನ ಗೆಳೆಯ ರಾಜೀವ್ ನಾಯಕನಾಗಿ ನಟಿಸಿರುವ ಚಿತ್ರ. ಟ್ರೇಲರ್ ಚೆನ್ನಾಗಿದೆ. ದೇವರಾಜ್, ತಾರಾ, ಬ್ರಹ್ಮಾನಂದಂ, ಅಲಿ ಮುಂತಾದ ಹಿರಿಯ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ. ನಾನು ಕೂಡ ಈ ಚಿತ್ರದಲ್ಲಿ ಅಭಿನಯಿಸಿದ್ದೇನೆ. ನಿರ್ಮಾಪಕ ಪ್ರದೀಪ್ ಯಾದವ್, ನಿರ್ದೇಶಕ ಸಿ.ಎಂ.ವಿಜಯ್ ಹಾಗೂ ನಾಯಕ ರಾಜೀವ್ ಸಾಕಷ್ಟು ಶ್ರಮಪಟ್ಟು ಉತ್ತಮ ಚಿತ್ರ ಮಾಡಿದ್ದಾರೆ. ಸದ್ಯದಲ್ಲೇ ಬಿಡುಗಡೆಯಾಗಲಿರುವ ಈ ಚಿತ್ರವನ್ನು ತಾವೆಲ್ಲ ನೋಡಿ ಪ್ರೋತ್ಸಾಹಿಸಿ ಎಂದರು.
ನಮ್ಮ ಚಿತ್ರದ ಹೆಸರು “ಉಸಿರೇ ಉಸಿರೇ”. ನನ್ನ ಉಸಿರು ಸುದೀಪ್ ಸರ್. ಅವರ ಕಂಡರೆ ನನಗೆ ಅಷ್ಟು ಪ್ರೀತಿ. ಅವರು ನನಗೆ ನೀಡುತ್ತಿರುವ ಸಹಕಾರಕ್ಕೆ ನಾನು ಆಬಾರಿ. ಇಡೀ ಚಿತ್ರತಂಡದ ಶ್ರಮದಿಂದ ಒಂದೊಳ್ಳೆ ಚಿತ್ರ ನಿರ್ಮಾಣವಾಗಿದೆ. ಇಂದು ಟ್ರೇಲರ್ ಬಿಡುಗಡೆಯಾಗಿದೆ. ಸದ್ಯದಲ್ಲೇ ಚಿತ್ರ ತೆರೆಗೆ ಬರಲಿದೆ ಎನ್ನುತ್ತಾರೆ ನಾಯಕ ರಾಜೀವ್.
ನನಗೆ ಬಾಲಿವುಡ್ ನಲ್ಲಿ ಶಾರುಖ್ ಖಾನ್ ಪರಿಚಯ. ಸ್ಯಾಂಡಲ್ ವುಡ್ ನಲ್ಲಿ ಕಿಚ್ಚ ಸುದೀಪ್ ಪರಿಚಯ ಎಂದು ಮಾತನಾಡಿದ ಹಿರಿಯ ನಟ ಅಲಿ, ಈ ಚಿತ್ರದಲ್ಲಿ ನನ್ನ, ಬ್ರಹ್ಮಾನಂದಂ, ಸಾಧುಕೋಕಿಲ ಹಾಗೂ ಮಂಜು ಪಾವಗಡ ಅವರ ಕಾಂಬಿನೇಶನ್ ನಲ್ಲಿ ಹಾಸ್ಯ ಸನಿವೇಶಗಳು ಚೆನ್ನಾಗಿ ಬಂದಿದೆ ಎಂದು ತಿಳಿಸಿದರು.
ನಮ್ಮ ಚಿತ್ರದ ಆರಂಭದ ದಿನದಿಂದಲೂ ಸುದೀಪ್ ಅವರು ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ. ವಿಶೇಷ ಪಾತ್ರದಲ್ಲಿ ಅಭಿನಯ ಕೂಡ ಮಾಡಿದ್ದಾರೆ. ಅವರಿಗೆ ಧನ್ಯವಾದ. ಮೊದಲ ಬಾರಿಗೆ ಕನ್ನಡದಲ್ಲಿ ಖ್ಯಾತ ನಟರಾದ ಬ್ರಹ್ಮಾನಂದಂ ಹಾಗೂ ಅಲಿ ಅವರು ಒಟ್ಟಾಗಿ ಅಭಿನಯಿಸಿದ್ದಾರೆ. ರಾಜೀವ್, ಶ್ರೀಜಿತ ಘೋಶ್, ಡೈನಾಮಿಕ್ ಸ್ಟಾರ್ ದೇವರಾಜ್, ತಾರಾ, ಸುಚೇಂದ್ರ ಪ್ರಸಾದ್, ಸಾಧುಕೋಕಿಲ, ಮಂಜು ಪಾವಗಡ, ಶೈನಿಂಗ್ ಸೀತರಾಮ್ ಮುಂತಾದವರು ನಮ್ಮ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಸದ್ಯದಲ್ಲೇ ಚಿತ್ರದ ಬಿಡುಗಡೆ ದಿನಾಂಕವನ್ನು ತಿಳಿಸುವುದಾಗಿ ನಿರ್ಮಾಪಕ ಪ್ರದೀಪ್ ಯಾದವ್ ಹೇಳಿದರು.
ಸುದೀಪ್ ಸರ್ ಅವರ ಮುಂದೆ ನನಗೆ ಮಾತೇ ಬರುತ್ತಿಲ್ಲ. ಇಡೀ ತಂಡದ ಸಹಕಾರದಿಂದ “ಉಸಿರೇ ಉಸಿರೇ” ಉತ್ತಮವಾಗಿ ಮೂಡಿಬಂದಿದೆ ಎಂದರು ನಿರ್ದೇಶಕ ಸಿ.ಎಂ.ವಿಜಯ್.
ಚಿತ್ರದಲ್ಲಿ ನನ್ನ ಪಾತ್ರ ಚೆನ್ನಾಗಿದೆ ಎಂದರು ನಾಯಕಿ ಶ್ರೀಜಿತ ಘೋಶ್.
ಓರಾಯನ್ ಮಾಲ್ ನ ಸುಂದರ ಹೊರಾಂಗಣದಲ್ಲಿ ಜಗಮಗಿಸುವ ವೇದಿಕೆಯಲ್ಲಿ ನಡೆದ ವರ್ಣರಂಜಿತ ಈ ಸಮಾರಂಭಕ್ಕೆ ಸಾಕಷ್ಟು ಸಂಖ್ಯೆಯ ಗಣ್ಯರು ಹಾಗೂ ಅಭಿಮಾನಿಗಳು ಸಾಕ್ಷಿಯಾದರು.
ಕಳಸದಲ್ಲಿ “ಕೊರಗಜ್ಜ” ಸಿನಿಮಾದ ಹಾಡಿನ ಸನ್ನಿವೇಷದ ಚಿತ್ರೀಕರಣದ ವೇಳೆ ಧಾಂದಲೆ ನಡೆಸಿದ ನಲ್ಕೆ ಸಂಘದವರೆಂದು ಹೇಳಿಕೊಂಡ ವ್ಯಕ್ತಿಗಳನ್ನು ಬಂಧಿಸಿ ಕಳಸದ ಪೊಲೀಸ್ ಸ್ಟೇಷನ್ನಲ್ಲಿ ವಿಚಾರಣೆಗೆ ಒಳಪಡಿಸಲಾಗಿದೆ.
ಕೇಸು ದಾಖಲಿಸುವ ಪ್ರಕ್ರಿಯೆ ವೇಳೆ ಚಿತ್ರದ ನಿರ್ದೇಶಕ ಸುಧೀರ್ ಅತ್ತಾವರ್ ಗೆ ಸರ್ಕಲ್ ಇನ್ಸ್ ಪೆಕ್ಟರ್ ರಾತ್ರಿ ಸುಮಾರು 9.30ಕ್ಕೆ ಪೋನ್ ಮಾಡಿ ಆರೋಪಿಗಳನ್ನು ವಿಚಾರಣ ಖೈದಿಗಳಾಗಿಸಲು ಇ ಮೇಲ್ ನಲ್ಲಿ ದೂರು ನೀಡಲು ತಿಳಿಸಿದ್ದರು.
ಇದಕ್ಕೆ ಉತ್ತರವಾಗಿ ಕೂಲಿ ನಾಲಿ ಮಾಡಿ ಜೀವನ ಸಾಗಿಸುವ ದೈವ ನರ್ತಕರನ್ನು ಬಂಧಿಸದೆ ಅವರಿಗೆ ಬುದ್ದಿ ಹೇಳಿ ಬಿಟ್ಟು ಬಿಡುವಂತೆ ನಿರ್ದೇಶಕ ಸುಧೀರ್ ಅತ್ತಾವರ್ ಮನವಿ ಮಾಡಿದ್ದಾರೆ.
ಆದರೆ ಮಂಗಳೂರು ಮತ್ತು ಕಳಸದಲ್ಲಿ ಇಂತಹ ಗೂಂಡಾಗಿರಿಗೆ ಪ್ರಚೋದಿಸಿ, ದೈವ ನರ್ತಕರನ್ನು ಗೂಂಡಾಯಿಸಂ ಗೆ ಪ್ರಚೋದಿಸಿ ಚಿತ್ರೀಕರಣಕ್ಕೆ ಅಪಾರಹಾನಿ ಮಾಡಲು ಕುಮ್ಮಕ್ಕು ನೀಡುತ್ತಿರುವ “ಕತ್ತಲೆ” ಎನ್ನುವ ವ್ಯಕ್ತಿಯಾರು ಎನ್ನುವುದನ್ನು ಪತ್ತೆ ಹಚ್ಚಲು ಚಿತ್ರದ ನಿರ್ದೇಶಕರು ಮನವಿ ಮಾಡಿದ್ದಾರೆ.
ಅರ್ಜುನ್ ಚಕ್ರವರ್ತಿ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಇತ್ತೀಚೆಗಷ್ಟೇ ಅನಾವರಣಗೊಂಡಿದೆ. ಕ್ರೀಡಾಂಗಣದ ಮಧ್ಯಭಾಗದಲ್ಲಿ ನಿಂತು, ಪದಕವನ್ನು ಹಿಡಿದುಕೊಂಡು ಮೈಕ್ ಮುಂದೆ ತಮ್ಮ ಗೆಲುವಿನ ಕ್ಷಣವನ್ನು ಅರ್ಜುನ್ ಚಕ್ರವರ್ತಿ ವಿವರಿಸಿದ್ದಾರೆ. ವಿಕ್ರಾಂತ್ ರುದ್ರ ನಿರ್ದೇಶನದ ವಿಜಯ ರಾಮರಾಜು ಅರ್ಜುನ್ ಚಕ್ರವರ್ತಿಯಾಗಿ ನಟಿಸಿದ್ದು, ಸಿಜಾ ರೋಸ್ ಮುಖ್ಯ ಭೂಮಿಕೆಯಲ್ಲಿದ್ದಾರೆ.
ಅರ್ಜುನ್ ಚಕ್ರವರ್ತಿ , 1980ರ ದಶಕದಲ್ಲಿ ಭಾರತವನ್ನು ಪ್ರತಿನಿಧಿಸಿದ ಕಬಡ್ಡಿ ಆಟಗಾರ ನೈಜ ಕಥೆಯನ್ನು ಆಧರಿಸಿದೆ. ಒಬ್ಬ ಕ್ರೀಡಾಪಟುವಿನ ಜೀವನದ ಹೋರಾಟಗಳು ಮತ್ತು ಗೆಲುವಿನ ಸುತ್ತಾ ಸಿನಿಮಾ ಸಾಗುತ್ತದೆ. ಪೋಷಕ ಪಾತ್ರಗಳಲ್ಲಿ ಅಜಯ್, ದಯಾನಂದ ರೆಡ್ಡಿ, ಅಜಯ್ ಘೋಷ್ ಮತ್ತು ದುರ್ಗೇಶ್ ಇದ್ದಾರೆ.
ವಿಘ್ನೇಶ್ ಬಾಸ್ಕರನ್ ಸಂಗೀತ ಮತ್ತು ಜಗದೀಶ್ ಚೀಕಾಟಿ ಛಾಯಾಗ್ರಹಣವಿದೆ. ಗ್ಯಾನೆಟ್ ಸೆಲ್ಯುಲಾಯ್ಡ್ ಅಡಿಯಲ್ಲಿ ನಿರ್ಮಾಪಕ ಶ್ರೀನಿ ಗುಬ್ಬಾಳ ಚಿತ್ರಕ್ಕೆ ಹಣ ಹಾಕಿದ್ದಾರೆ. ಚಿತ್ರವನ್ನು ತೆಲುಗು ಮತ್ತು ತಮಿಳಿನಲ್ಲಿ ಏಕಕಾಲದಲ್ಲಿ ಚಿತ್ರೀಕರಿಸಲಾಗುತ್ತಿದ್ದು, ಹಿಂದಿ, ಮಲಯಾಳಂ ಮತ್ತು ಕನ್ನಡದಲ್ಲಿ ಡಬ್ ಮಾಡಲಾಗುತ್ತದೆ.
ಸಿನಿಮಾದ ಬಗ್ಗೆ ಮಾಹಿತಿ ಹಂಚಿಕೊಂಡಿರುವ ನಿರ್ಮಾಪಕ ಶ್ರೀನಿ ಗುಬ್ಬಾಳ, ಅರ್ಜುನ್ ಚಕ್ರವರ್ತಿ: ಜರ್ನಿ ಆಫ್ ಅನ್ಸಂಗ್ ಚಾಂಪಿಯನ್” ಕೇವಲ ಸಿನಿಮಾವಲ್ಲ. ಸವಾಲುಗಳನ್ನು ಮೀರಿ ಎದ್ದುನಿಲ್ಲುವ ಮತ್ತು ನಮಗೆಲ್ಲರಿಗೂ ಸ್ಫೂರ್ತಿ ನೀಡುವ ವ್ಯಕ್ತಿಗಳ ಅದಮ್ಯ ಮನೋಭಾವಕ್ಕೆ ಗೌರವವಾಗಿದೆ. ಅರ್ಜುನ್ ಚಕ್ರವರ್ತಿ ಸಿನಿಮಾ ಮೂಲಕ ನಾವು ಮಾನವ ಇಚ್ಛೆಯ ಶಕ್ತಿಯನ್ನು ಮತ್ತು ಮಾನವ ಆತ್ಮದ ವಿಜಯವನ್ನು ಪ್ರದರ್ಶಿಸಲು ಬಯಸುತ್ತೇವೆ ಎಂದು ತಿಳಿಸಿದ್ದಾರೆ.
ದಕ್ಷಿಣಭಾರತದ ಖ್ಯಾತ ನಟ ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯ ಅರ್ಜುನ್ ಅವರ ನಿಶ್ಚಿತಾರ್ಥ ಇತ್ತೀಚೆಗೆ ಉಮಾಪತಿ ಅವರೊಂದಿಗೆ ನೆರವೇರಿದೆ.
ಚೆನ್ನೈನಲ್ಲಿ ಅರ್ಜುನ್ ಸರ್ಜಾ ನಿರ್ಮಿಸಿರುವ ಅರ್ಜುನ್ ಸರ್ಜಾ ಅವರ ಆರಾಧ್ಯ ದೈವ ಆಂಜನೇಯನ ದೇವಸ್ಥಾನದಲ್ಲಿರುವ ಸಿತಾರಾಮರ ಸನ್ನಿಧಾನದಲ್ಲಿ ಐಶ್ವರ್ಯ ಹಾಗೂ ಉಮಾಪತಿ ಅವರು ಉಂಗುರ ಬದಲಾವಣೆ ಮಾಡಿಕೊಂಡರು.
ಕುಟುಂಬ ಸದಸ್ಯರು, ನಟ & ಸಂಬಂಧಿ ಧ್ರುವ ಸರ್ಜಾ ಹಾಗೂ ಅರ್ಜುನ್ ಸರ್ಜಾ ಆಪ್ತರಾದ ನಟ ವಿಶಾಲ್ ಸೇರಿದಂತೆ ಕೆಲವು ಗೆಳೆಯರು ಈ ಸುಂದರ ಸಮಾರಂಭಕ್ಕೆ ಸಾಕ್ಷಿಯಾದರು.
ಐಶ್ವರ್ಯ ಅವರು ಈಗಾಗಲೇ ನಟಿಯಾಗಿ ಜನಪ್ರಿಯರಾಗಿದ್ದು, ಉಮಾಪತಿ ಅವರು ನಟನಾಗಿ ಕೆಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಚಿತ್ರವೊಂದನ್ನು ನಿರ್ದೇಶನ ಕೂಡ ಮಾಡಿದ್ದು, ಚಿತ್ರ ಸದ್ಯದಲ್ಲೇ ಬಿಡುಗಡೆಯಾಗಲಿದೆ. ಉಮಾಪತಿ ಅವರ ತಂದೆ ತಂಬಿ ರಾಮಯ್ಯ ಹೆಸರಾಂತ ಹಾಸ್ಯನಟರಾಗಿ ಜನಮನ್ನಣೆ ಪಡೆದಿದ್ದಾರೆ.
ನಿಶ್ಚಿತಾರ್ಥದಲ್ಲಿ ಉಮಾಪತಿ ಹಾಗೂ ಐಶ್ವರ್ಯ ಅವರ ಸುಂದರ ಉಡುಗೆ ಎಲ್ಲರ ಗಮನ ಸೆಳೆಯಿತ್ತು. ಉಮಾಪತಿ ಅವರಿಗೆ ಮನೀಶ್ ಮಲ್ಹೋತ್ರ ಹಾಗೂ ಐಶ್ವರ್ಯ ಅವರಿಗೆ ಜಯಂತಿ ರೆಡ್ಡಿ ಅವರು ವಸ್ತ್ರವಿನ್ಯಾಸ ಮಾಡಿದ್ದರು. ಆಕರ್ಷಕವಾಗಿದ್ದ ರೂಬಿ ಹರಳಿನ ಬಂಗಾರದ ನಿಶ್ಚಿತಾರ್ಥದ ಉಂಗುರಗಳನ್ನು ಜೈಪುರದಿಂದ ತರಿಸಲಾಗಿತ್ತು.
2024 ರ ಮಾರ್ಚ್ ಅಥವಾ ಏಪ್ರಿಲ್ ತಿಂಗಳಲ್ಲಿ ಐಶ್ವರ್ಯ ಹಾಗೂ ಉಮಾಪತಿ ಅವರ ಕಲ್ಯಾಣ ಮಹೋತ್ಸವ ನೆರವೇರಲಿದೆ ಎಂದು ನಟ ಅರ್ಜುನ್ ಸರ್ಜಾ ತಿಳಿಸಿದ್ದಾರೆ.
ಲಾಯಲ್ ವರ್ಲ್ಡ್ ಮಾರ್ಕೆಟ್ ನ ಎರಡನೇ ಶಾಖೆ ಬೆಂಗಳೂರಿನ ಹೆಬ್ಬಾಳದ ಫೀನಿಕ್ಸ್ ಮಾಲ್ ಆಫ್ ಏಷ್ಯಾ ನಲ್ಲಿಂದು ಶುಭಾರಂಭಗೊಂಡಿದೆ. ಕಂದಾಯ ಸಚಿವ ಕೃಷ್ಣ ಬೈರೇಗೌಡ ಲಾಯಲ್ ವರ್ಲ್ಡ್ ಮಾರ್ಕೆಟ್ ಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿಂದು ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್, ಶಾಸಕ ರಿಜ್ವಾನ್ ಅರ್ಷದ್ ಉಪಸ್ಥಿತರಿದ್ದರು. ದೈನಂದಿನ ಅಗತ್ಯ ವಸ್ತುಗಳ ಲಾಯಲ್ ವರ್ಲ್ಡ್ ಮಾರ್ಕೆಟ್ ಈಗಾಗಲೇ ಬೆಂಗಳೂರಿನ ವೈಟ್ ಫೀಲ್ಡ್ ಹಾಗೂ ಮೈಸೂರಿನಲ್ಲಿ ಕಾರ್ಯ ನಿರ್ವಹಿಸುತ್ತಿದೆ.
ಫೀನಿಕ್ಸ್ ಮಾಲ್ ಆಫ್ ಏಷ್ಯಾ ದಲ್ಲಿರುವ ಲಾಯಲ್ ವರ್ಲ್ಡ್ ಮಾರ್ಕೆಟ್ 25 ಸಾವಿರ ಚದರ ಅಡಿಯಷ್ಟು ವಿಸ್ತಾರವಿದ್ದು, ಒಂದು ಲಕ್ಷಕ್ಕೂ ಅಧಿಕ 100 ವಿಭಾಗಗಳ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಬ್ರ್ಯಾಂಡ್ ಉತ್ಪನ್ನಗಳು ಇಲ್ಲಿ ದೊರೆಯುತ್ತವೆ.
ಲಾಯಲ್ ವರ್ಲ್ಡ್ ಮಾರ್ಕೆಟ್ ಹಲವಾರು ವಿಶೇಷತೆಗಳನ್ನು ಹೊಂದಿದೆ. ಇದು ಬ್ರೆಡ್, ಟೋಸ್ಟ್ಗಳು, ಚೌಕ್ಸ್ ಪೇಸ್ಟ್ರಿಗಳು ಮತ್ತು ಖಾರದ ಟ್ರೀಟ್ಗಳಂತಹ ವಿವಿಧ ತಾಜಾ ಉತ್ಪನ್ನಗಳು. ಹಾಗೆಯೇ ಪ್ರಪಂಚದಾದ್ಯಂತದ ಅತ್ಯುತ್ತಮ ಹಣ್ಣುಗಳು ಇಲ್ಲಿ ದೊರೆಯುತ್ತವೆ. ಯಾವುದೇ ವಯೋಮಾನದವರು ಬಂದರು ವಸ್ತುಗಳನ್ನು ಕೊಂಡುಕೊಳ್ಳಲು ಗೊಂದಲವಾಗುವುದಿಲ್ಲ. ಕ್ವಾಲಿಟಿ ವಿಷಯದಲ್ಲಿ ರಾಜಿ ಮಾಡಿಕೊಳ್ಳುವ ಪ್ರಮೇಯ ಇಲ್ಲಿ ಇಲ್ಲವೇ ಇಲ್ಲ.
ಒಂದೇ ಸೂರಿನಡಿ ವಿವಿಧ ರೀತಿಯ ದೈನಂದಿನ ವಸ್ತುಗಳ ದೊರೆಯುತ್ತದೆ. ಅದರಲ್ಲೂ ಬೇಕರಿ ಉತ್ಪನ್ನಗಳಾದ ಕೇಕ್, ಬನ್, ಬ್ರೆಡ್ ಹಾಗೂ ಐಸ್ ಕ್ರೀಮ್ ರುಚಿ ಅದ್ಭುತವಾಗಿದೆ. ಹೊರಗಡೆ ಮಾರುಕಟ್ಟೆಗಿಂತ ಇಲ್ಲಿ ಕಡಿಮೆ ದರದಲ್ಲಿ ತರಕಾರಿಗಳು ಸಿಗುತ್ತವೆ. ಸಖತ್ ಫ್ರೆಶ್ ಎನಿಸುವ ಉತ್ಪನ್ನಗಳು ದೊರೆಯುತ್ತಿವೆ. ದುಬೈ ಮಾಲ್ ರೀತಿ ಲಾಯಲ್ ವರ್ಲ್ಡ್ ಮಾರ್ಕೆಟ್ ಫೀಲ್ ಕೊಡುತ್ತದೆ ಎನ್ನುತ್ತಾರೆ ಗ್ರಾಹಕರು.
ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ನಾಯಕರಾಗಿ ನಟಿಸಿರುವ “ಗಣ” ಚಿತ್ರಕ್ಕಾಗಿ ಪ್ರಮೋದ್ ಮರವಂತೆ ಅವರು ಬರೆದಿರುವ “she is in love” ಎಂಬ ರೊಮ್ಯಾಂಟಿಕ್ ಸಾಂಗ್ ಇತ್ತೀಚೆಗೆ ಬಿಡುಗಡೆಯಾಗಿದೆ.
ಅನೂಪ್ ಸೀಳಿನ್ ಸಂಗೀತ ನೀಡಿರುವ ಈ ಹಾಡನ್ನು ವಿಜಯ ಪ್ರಕಾಶ್ ಇಂಪಾಗಿ ಹಾಡಿದ್ದಾರೆ. ಮುರಳಿ ಮಾಸ್ಟರ್ ನೃತ್ಯ ಸಂಯೋಜಿಸಿರುವ ಈ ಹಾಡಿಗೆ ಪ್ರಜ್ವಲ್ ದೇವರಾಜ್ ಹಾಗೂ ಯಶ ಶಿವಕುಮಾರ್ ಹೆಜ್ಜೆ ಹಾಕಿದ್ದಾರೆ. ಈ ಸುಮಧುರ ಹಾಡಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಚಿತ್ರ ಬಿಡುಗಡೆಗೆ ಸಿದ್ದವಾಗಿದ್ದು ಸದ್ಯದಲ್ಲೇ ತೆರೆಗೆ ಬರಲಿದೆ.
ಚೆರಿ ಕ್ರಿಯೇಷನ್ಸ್ ಲಾಂಛನದಲ್ಲಿ ಪಾರ್ಥು ಅವರು ನಿರ್ಮಿಸಿರುವ ಈ ಚಿತ್ರವನ್ನು ಹರಿಪ್ರಸಾದ್ ಜಕ್ಕ ನಿರ್ದೇಶಿಸಿದ್ದಾರೆ. ಜೈ ಆನಂದ್ ಛಾಯಾಗ್ರಹಣ, ಅನೂಪ್ ಸೀಳಿನ್ ಸಂಗೀತ ನಿರ್ದೇಶನ, ಹರೀಶ್ ಕೊಮ್ಮೆ ಸಂಕಲನವಿದೆ.
ಸತೀಶ್ ಎ ಕಲಾ ನಿರ್ದೇಶನ ಹಾಗೂ ಡಿ.ಜೆ ಕ್ರಿಯೇಟಿವ್ ಪ್ರೊಡ್ಯೂಸರ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಚಿಕ್ಕಬಳ್ಳಾಪುರ ಶ್ರೀನಿವಾಸ್ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು.
ಪ್ರಜ್ವಲ್ ದೇವರಾಜ್, ಯಶಾ ಶಿವಕುಮಾರ್, ವೇದಿಕಾ ಕುಮಾರ್, ಕೃಷಿ ತಾಪಂಡ, ವಿಶಾಲ್ ಹೆಗಡೆ, ರವಿ ಕಾಳೆ, ಸಂಪತ್ ರಾಜ್, ಶಿವರಾಜ್ ಕೆ.ಆರ್ ಪೇಟೆ, ರಮೇಶ್ ಭಟ್ ಮುಂತಾದವರು “ಗಣ” ಚಿತ್ರದ ತಾರಾಬಳಗದಲ್ಲಿದ್ದಾರೆ.