Categories
ಸಿನಿ ಸುದ್ದಿ

ಇದು ಸಂಯುಕ್ತ ಹೆಗಡೆಯ ಕ್ರೀಂ! ಟ್ರೇಲರ್ ರಿಲೀಸ್ ಆಯ್ತು

“ಕಿರಿಕ್ ಪಾರ್ಟಿ” ಚಿತ್ರದ ಮೂಲಕ ಎಲ್ಲರ ಮನ ಗೆದ್ದಿರುವ ನಟಿ ಸಂಯುಕ್ತ ಹೆಗಡೆ ಪ್ರಮುಖಪಾತ್ರದಲ್ಲಿ ನಟಿಸಿರುವ “ಕ್ರೀಂ” ಚಿತ್ರದ ವಿಷುಯಲ್ ಟ್ರೇಲರ್ ಇತ್ತೀಚೆಗೆ A2 music ಮೂಲಕ ಬಿಡುಗಡೆಯಾಗಿದೆ. ಖ್ಯಾತ ಲೇಖಕ ಅಗ್ನಿ ಶ್ರೀಧರ್ ಈ ಚಿತ್ರದ ವಿಷುಯಲ್ ಟ್ರೇಲರ್ ಬಿಡುಗಡೆ ಮಾಡಿದರು.

ಡಿ.ಕೆ.ದೇವೇಂದ್ರ ಅವರು ನಿರ್ಮಿಸಿರುವ ಈ ಚಿತ್ರವನ್ನು ಅಭಿಷೇಕ್ ಬಸಂತ್ ನಿರ್ದೇಶಿಸಿದ್ದಾರೆ. ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ಅಗ್ನಿ ಶ್ರೀಧರ್ ಅವರು ಬರೆದಿದ್ದಾರೆ.

ಈ ಚಿತ್ರದ ಬಗ್ಗೆ ತುಂಬಾ ಭರವಸೆಯಿಟ್ಟುಕೊಂಡಿದ್ದೇನೆ ಎಂದು ಮಾತು ಆರಂಭಿಸಿದ ಅಗ್ನಿ ಶ್ರೀಧರ್, ಎಲ್ಲಾ ಊರುಗಳಲ್ಲಿ, ಎಲ್ಲಾ ರಾಜ್ಯಗಳಲ್ಲಿ, ಎಲ್ಲಾ ಭಾಷೆಗಳಲ್ಲಿ ಕಾಣದ ಗರ್ಭ ಅಂತ ಇರುತ್ತದೆ. ಅಲ್ಲಿ ಏನೆಲ್ಲಾ ನಡೆಯುತ್ತದೆ. ಬೆಂಗಳೂರಿನಲ್ಲೇ ನನಗೆ ಗೊತ್ತಿರುವ ಸಂಗತಿಯಿಟ್ಟುಕೊಂಡು ಹತ್ತಾರು ವರ್ಷಗಳಿಂದ ಯೋಚನೆ ಮಾಡುತ್ತಿದೆ. ಸಿನಿಮಾ ಮಾಡಲು ಆಗಿರಲಿಲ್ಲ. ನಿರ್ಮಾಪಕ ದೇವೇಂದ್ರ ಅವರು ಸಿನಿಮಾ ಮಾಡಲೇಬೇಕು ಎಂದು ನನ್ನ ಒತ್ತಾಯಿಸಿದಾಗ ಈ ಚಿತ್ರದ ಕಥೆ ಹೇಳಿದೆ. ಈ ಚಿತ್ರ ಮಾಡುವುದಕ್ಕೆ ನಿಜವಾಗಿಯೂ ತುಂಬಾ ಧೈರ್ಯ ಬೇಕು.‌ ಆ ಧೈರ್ಯವನ್ನು ದೇವೇಂದ್ರ ಮಾಡಿದ್ದಾರೆ.

ಭಾರತದಲ್ಲಿ ಪ್ರತಿವರ್ಷ ಎರಡೂವರೆ ಸಾವಿರ ಮಹಿಳೆಯರು ಒಂದಲ್ಲಾ ಒಂದು ಕಾರಣದಿಂದ ಬಲಿಯಾಗುತ್ತಿದ್ದಾರೆ? ಅದಕ್ಕೆ ಕಾರಣ ಏನು ಎಂಬುದನ್ನು ತಿಳಿಸುವ ಕಥೆ ಕೂಡ ಈ ಚಿತ್ರದಲ್ಲಿದೆ. ಇನ್ನೂ ಸಂಯುಕ್ತ ಹೆಗಡೆ ಈ ಚಿತ್ರಕ್ಕಾಗಿ ತನ್ನ ಜೀವವನ್ನೇ ಕೊಟ್ಟು ಬಿಟ್ಟಿದ್ದಾರೆ. ಈ ಚಿತ್ರಕ್ಕಾಗಿ ಬಹಳ ಶ್ರಮ ಪಟ್ಟಿದ್ದಾರೆ. ಈ ಚಿತ್ರದ ಮೂಲಕ ಅವರು ಇನ್ನೂ ಎತ್ತರಕ್ಕೆ ಹೋಗುತ್ತಾರೆ. ನಿರ್ದೇಶಕ ಅಭಿಷೇಕ್ ಬಸಂತ್ ನನ್ನ ತಮ್ಮನ ಮಗ.‌ ಆತ ಬಹಳ ಬುದ್ದಿವಂತ. ತುಂಬಾ ಚೆನ್ನಾಗಿ ಚಿತ್ರ ಮಾಡಿದ್ದಾನೆ. ಶಿವು ಅವರ ಕಲಾ ನಿರ್ದೇಶನ ತುಂಬಾ ಚೆನ್ನಾಗಿದೆ ಎಂದು ತಿಳಿಸಿದರು.

ಚಿತ್ರತಂಡದ ಸಹಕಾರದಿಂದ ಇಪ್ಪತ್ತೆಂಟು ದಿನಗಳಲ್ಲಿ ಚಿತ್ರೀಕರಣ ಮುಕ್ತಾಯವಾಗಿದೆ.‌ ಇಂದು ವಿಷುಯಲ್ ಟ್ರೇಲರ್ ಬಿಡುಗಡೆ ಮಾಡಿದ್ದೇವೆ. ಸದ್ಯದಲ್ಲೇ ನಿಮ್ಮ ಮುಂದೆ ಚಿತ್ರ ಬರಲಿದೆ‌ ಎಂದರು ನಿರ್ದೇಶಕ ಅಭಿಷೇಕ್ ಬಸಂತ್.

ನಾನು ಈವರೆಗೂ ಮಾಡಿರದ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಐದು ವರ್ಷಗಳ ನಂತರ ನಾನು ನಟಿಸಿರುವ ಕನ್ನಡ ಸಿನಿಮಾ ಇದು. ಈ ಚಿತ್ರದಲ್ಲಿ ಆಕ್ಷನ್ ಕೂಡ ಮಾಡಿದ್ದೇನೆ. ಕಾಲು ಕೂಡ ಮುರಿದಿತ್ತು. ಒಟ್ಟಿನಲ್ಲಿ ಎಲ್ಲರ ಶ್ರಮದಿಂದ “ಕ್ರೀಂ” ಚಿತ್ರ ಚೆನ್ನಾಗಿ ಬಂದಿದೆ. ಛಾಯಾಗ್ರಾಹಕ ಸುನೋಜ್ ವೇಲಾಯುಧನ್ ಅವರ ಛಾಯಾಗ್ರಹಣ ಸುಂದರವಾಗಿದೆ. ಸಹಕಾರ ನೀಡಿದ ನಿರ್ದೇಶಕ, ನಿರ್ಮಾಪಕರಿಗೆ ಹಾಗೂ ವಿಶೇಷವಾಗಿ ಅಗ್ನಿ ಶ್ರೀಧರ್ ಅವರಿಗೆ ಧನ್ಯವಾದ ಎಂದರು ನಾಯಕಿ ಸಂಯುಕ್ತ ಹೆಗಡೆ.

ನಾನು ಮೊದಲು ಉತ್ತಮ ಕಥೆ ನೀಡಿರುವ ಅಗ್ನಿ ಶ್ರೀಧರ್ ಅವರಿಗೆ ಧನ್ಯವಾದ ತಿಳಿಸುತ್ತೇನೆ. ಇನ್ನು ಇಡೀ ತಂಡದ ಚಿತ್ರ ಚೆನ್ನಾಗಿ ಮೂಡಿಬರಲು ಪಟ್ಟಿರುವ ಶ್ರಮ ಅಷ್ಟಿಷ್ಟಲ್ಲ. ಸದ್ಯದಲ್ಲೇ ಚಿತ್ರವನ್ನು ತೆರೆಗೆ ತರುವುದಾಗಿ ನಿರ್ಮಾಪಕ ಡಿ.ಕೆ.ದೇವೇಂದ್ರ ತಿಳಿಸಿದರು.

ಸಂಗೀತ ನಿರ್ದೇಶಕ ರೋಹಿತ್, ಕಲಾ ನಿರ್ದೇಶಕ ಶಿವಕುಮಾರ್ ಹಾಗೂ ಚಿತ್ರದಲ್ಲಿ ನಟಿಸಿರುವ ರೋಷನ್‌ ಅಗ್ನಿ ಶ್ರೀಧರ್ ಬಚ್ಚನ್, ಇಫ್ರಾನ್ ಮುಂತಾದವರು “ಕ್ರೀಂ” ಚಿತ್ರದ ಕುರಿತು ಮಾತನಾಡಿದರು.

ನಿರ್ಮಾಪಕರಾದ ಕೆ.ಮಂಜು, ಸಂಜಯ್ ಗೌಡ, ನವರಸನ್, ಶ್ರೇಯಸ್ ಮೀಡಿಯಾ ಶ್ರೀನಿವಾಸ್ ಹಾಗೂ ನಿರ್ದೇಶಕ ಜಡೇಶ್ ಕೆ ಹಂಪಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದರು.

Categories
ಸಿನಿ ಸುದ್ದಿ

ಲೇಡಿಸ್ ಬಾರ್ ಗೆ ಬಂದ ಫಿಲ್ಮ್ ಚೇಂಬರ್ ಅಧ್ಯಕ್ಷ!

ಡಿ.ಎಂ.ಸಿ. ಪ್ರೊಡಕ್ಷನ್ಸ್ ಮೂಲಕ ಟಿ.ಎಂ.ಸೋಮರಾಜು ಅವರು ನಿರ್ಮಿಸಿರುವ ಹಾಗೂ ಮುತ್ತು ಎ.ಎನ್. ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ “ಲೇಡಿಸ್‌ಬಾರ್” ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ನಟ ಧರ್ಮ ಕೀರ್ತಿರಾಜ್ ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಎನ್ ಎಂ ಸುರೇಶ್ ಟ್ರೇಲರ್ ಬಿಡುಗಡೆ ಮಾಡಿದರು. ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷರಾದ ಉಮೇಶ್ ಬಣಕಾರ್ ಹಾಗೂ ನಿರ್ಮಾಪಕ ಶಿಲ್ಪಾ ಶ್ರೀನಿವಾಸ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ನಟ ಧರ್ಮ ಕೀರ್ತಿರಾಜ್, ಟ್ರೇಲರ್ ಚೆನ್ನಾಗಿದೆ. ನಿರ್ದೇಶಕ ಮುತ್ತು, ನಮ್ಮ “ರೋನಿ” ಸಿನಿಮಾಗೆ ಅಸೋಸಿಯೇಟ್ ಆಗಿದ್ದರು, ಈಗ ಸಮಾಜಕ್ಕೆ ಸಂದೇಶ ಕೊಡುವ ಒಂದೊಳ್ಳೆ ಸಿನಿಮಾ ಮಾಡಿದ್ದಾರೆ ಎಂದರು.

ನಿರ್ದೇಶಕ ಮುತ್ತು.ಎ.ಎನ್ ಮಾತನಾಡಿ, ಚಿತ್ರದಲ್ಲಿ ಅದ್ಭುತವಾದ ಕಥೆಯಿದೆ, ಕಥೆಯೇ ನಮ್ಮ ಚಿತ್ರದ ಹೀರೋ. ಸಿರಿ ಮ್ಯೂಸಿಕ್ ಮೂಲಕ ಬಿಡುಗಡೆಯಾಗಿರುವ ಈ ಚಿತ್ರದ ಟೀಸರ್ ಈಗಾಗಲೇ ಜನಪ್ರಿಯವಾಗಿದೆ. ಮನೋರಂಜನೆಯ ಮಹಾಪೂರವೇ ನಮ್ಮ ಚಿತ್ರದಲ್ಲಿದೆ. ಹೆಣ್ಣುಮಕ್ಕಳು ಬಾರ್‌ಗೆ ಹೋದರೆ ಏನೇನಾಗುತ್ತದೆ? ಎಂಬುದನ್ನು ಈ ಚಿತ್ರದಲ್ಲಿ ತೋರಿಸಿದ್ದೇವೆ. ಹಾಗಂತ “ಲೇಡಿಸ್‌ಬಾರ್” ಚಿತ್ರದಲ್ಲಿ ಬರೀ ಕುಡಿತವನ್ನಷ್ಟೇ ತೋರಿಸಿಲ್ಲ. ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಪ್ರಯತ್ನವಿದೆ ಎಂದರು.

ಹೊಸಬರು ಸಿನಿಮಾ ಮಾಡಿದಾಗ ನಾವೆಲ್ಲ ಸಪೋರ್ಟ್ ಮಾಡಬೇಕು. ಈ ಟ್ರೇಲರ್ ನೋಡಿದಾಗ ಏನೋ ವಿಶೇಷತೆಯಿದೆ ಎನ್ನುವುದು ಕಾಣುತ್ತದೆ. ನಿಮ್ಮ ಕೆಲಸದಲ್ಲಿ ಶ್ರದ್ದೆ ಪ್ರಾಮಾಣಿಕತೆ ಇದ್ದರೆ ಖಂಡಿತ ಗೆಲುವು ಸಿಗುತ್ತದೆ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಎನ್ ಎಂ ಸುರೇಶ್ ಹೇಳಿದರು.

ನಂತರ ನಿರ್ಮಾಪಕ ಸೋಮರಾಜ್ ಮಾತನಾಡಿ ನಮ್ಮ ಚಿತ್ರದ ಕಥೆ ತುಂಬಾ ವಿಭಿನ್ನವಾಗಿದೆ. ನಮ್ಮ ಸಮಾಜದಲ್ಲಿ ಈಗ ಯಾವ ವ್ಯವಸ್ಥೆ ಇದೆ ಎನ್ನುವುದನ್ನು ಸಿನಿಮಾ ಮೂಲಕ ತೋರಿಸಿದಾಗ ಜನರಿಗದು ಸುಲಭವಾಗಿ ಅರ್ಥವಾಗುತ್ತದೆ ಎಂದರು.

ನಟ ಗಣೇಶ್‌ರಾವ್ ಕೇಸರಕರ್ ಮಾತನಾಡಿ ಬಾರ್‌ನಿಂದಾಗುವ ಅನುಕೂಲ, ಅನಾನುಕೂಲ ಏನೆಂದು ಈ ಚಿತ್ರದಲ್ಲಿ ತೋರಿಸಿದ್ದಾರೆ, ನಾನು ಪೊಲೀಸ್ ಆಗಿ ಕಾಣಿಸಿಕೊಂಡಿದ್ದೇನೆ ಎಂದರು.

ನಾನು ಶಿಳ್ಳೆ ಎಂಬ ಪಾತ್ರ ಮಾಡಿದ್ದೇನೆ ಎಂದು ನಟ ಹರೀಶ್ ರಾಜ್ ತಿಳಿಸಿದರು. ನಾನು ಈವರೆಗೂ ಹೆಚ್ಚು ಚಿತ್ರಗಳಲ್ಲಿ ತಾಯಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದೆ. ಆದರೆ ಈ ಚಿತ್ರದಲ್ಲಿ ನನ್ನದು ವಿಭಿನ್ನ ಪಾತ್ರ ಎಂದು ನಟಿ ಮೀನಾಕ್ಷಿ ಹೇಳಿದರು.

ನಿರ್ಮಾಪಕ ಟಿ.ಎಂ.ಸೋಮರಾಜು, ಹರೀಶ್‌ರಾಜ್, ಶಿವಾನಿ, ಮೀನಾಕ್ಷಿ, ಡಾ.ರಾಜಶೇಖರ್ ಎಸ್ ಎನ್, ಗಣೇಶ್‌ರಾವ್, ಆರಾಧ್ಯ, ಪ್ರೇರಣಾ, ಚೈತ್ರ, ಎಸ್ಕಾರ್ಟ್ ಶ್ರೀನಿವಾಸ್, ಕೆಂಪೇಗೌಡ ಮುಂತಾದವರು “ಲೇಡೀಸ್ ಬಾರ್” ಚಿತ್ರದ ಪ್ರಮುಖ ತಾರಾಬಳಗದಲ್ಲಿದ್ದಾರೆ. ಹರ್ಷ ಕಾಗೋಡ್ ಅವರ ಸಂಗೀತ ನಿರ್ದೇಶನ, ವೀನಸ್‌ಮೂರ್ತಿ ಅವರ ಛಾಯಾಗ್ರಹಣ ಹಾಗೂ ಜಗ್ಗು ಮಾಸ್ಟರ್ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ಡಾ. ಸುಭಾಷಿಣಿ ಆರ್.ಎಸ್ ಈ ಚಿತ್ರದ ಸಹ ನಿರ್ಮಾಪಕರು.

Categories
ಸಿನಿ ಸುದ್ದಿ

ಫೆಬ್ರವರಿ 16ಕ್ಕೆ ಅಲೆಮಾರಿ ಬದುಕು: ವಿಭಿನ್ನ ಕಥೆಯಿರುವ ಚಿತ್ರ ತೆರೆಗೆ

ದಿವ್ಯಕುಮಾರ್ ಎಚ್.ಎನ್. ನಿರ್ಮಾಣದ ಹಾಗೂ ಸಿದ್ದು ಸಿ ಕಟ್ಟಿಮನಿ ನಿರ್ದೇಶನದ “ಅಲೆಮಾರಿ ಈ ಬದುಕು” ಚಿತ್ರ ಫೆಬ್ರವರಿ 16 ರಂದು ತೆರೆಗೆ ಬರುತ್ತಿದೆ. ಬಿಡುಗಡೆಗೂ ಮುನ್ನ ಚಿತ್ರದ ಟೀಸರ್, ಟ್ರೇಲರ್ ಹಾಗೂ ಹಾಡುಗಳು ಸಿರಿ ಮ್ಯೂಸಿಕ್ ಮೂಲಕ ಬಿಡುಗಡೆಯಾಗಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್‌ ಎಂ ಸುರೇಶ್, ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್, ನಟ ಹಾಗೂ ಸಮಾಜಿಕ ಹೋರಾಟಗಾರ ಚೇತನ್ ಅಹಿಂಸ ಹಾಗೂ ಪರಿಸರ ಪ್ರೇಮಿ ಪ್ರಕೃತಿ ಪ್ರಸನ್ನ ಮುಖ್ಯ ಅತಿಥಿಗಳಾಗಿ ಆಗಮಿಸಿ ಟೀಸರ್, ಟ್ರೇಲರ್ ಹಾಗೂ ಹಾಡುಗಳನ್ನು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು.

ನಮ್ಮ ಚಿತ್ರತಂಡದ ಬಹುತೇಕ ಸದಸ್ಯರು “ಅಲೆಮಾರಿ” ಗಳು. ಒಂದು ಹಂತ ತಲುಪಬೇಕೆಂದು ಅಲೆದು, ಅಲೆದು ಇಂದು ಇಲ್ಲಿ ಬಂದು ಕುಳಿತ್ತಿದ್ದೇವೆ. “ಅಲೆಮಾರಿ”ಗಳ ಕುರಿತಾಗಿಯೇ ನಮ್ಮ ಚಿತ್ರದ ಕಥೆ ಇದೆ. ” “ಪ್ರೇಮಪೂಜ್ಯಂ” ಚಿತ್ರದಲ್ಲಿ ಸಹಾಯಕ ನಿರ್ದೇಶಕನಾಗಿದ್ದ ನನಗೆ ಇದು ಮೊದಲ ನಿರ್ದೇಶನದ ಚಿತ್ರ. ಕಥೆ, ಚಿತ್ರಕಥೆ, ಸಂಭಾಷಣೆ, ಗೀತರಚನೆ ಹಾಗೂ ನಿರ್ದೇಶನವನ್ನು ನಾನೇ ಮಾಡಿದ್ದೇನೆ‌. ಫೆಬ್ರವರಿ 16ರಂದು ಚಿತ್ರ ಬಿಡುಗಡೆಯಾಗುತ್ತಿದೆ ಎಂದು ನಿರ್ದೇಶಕ ಸಿದ್ದು ಸಿ ಕಟ್ಟಿಮನಿ ತಿಳಿಸಿದರು.

ನಿರ್ದೇಶಕ ಸಿದ್ದು ಸಿ ಕಟ್ಟಿಮನಿ ಅವರು ಹೇಳಿದ ಕಥೆ ಇಷ್ಟವಾಯಿತು. ಹಾಗಾಗಿ ನಿರ್ಮಾಣಕ್ಕೆ ಮುಂದಾದೆ. ಖಂಡಿತಾವಾಗಿಯೂ ಈ ಚಿತ್ರ ಎಲ್ಲರ ಮನಸ್ಸಿಗೂ ಹತ್ತಿರವಾಗುತ್ತದೆ. ನಮ್ಮ ಚಿತ್ರಕ್ಕೆ ಹಾರೈಸಲು ಬಂದಿರುವ ಎಲ್ಲರಿಗೂ ಧನ್ಯವಾದ ಎಂದರು ನಿರ್ಮಾಪಕ ದಿವ್ಯಕುಮಾರ್.

ಚಿತ್ರದಲ್ಲಿ ಐದು ಹಾಡುಗಳಿದೆ. ನಿರ್ದೇಶಕ ಸಿದ್ದು ಸಿ ಕಟ್ಟಿಮನಿ ಹಾಗೂ ಮನೋಜ್ ಸೌಗಂದ್ ಬರೆದ್ದಿದ್ದಾರೆ ಎಂದು ತಿಳಿಸಿದ ಸಂಗೀತ ನಿರ್ದೇಶಕ ತ್ಯಾಗರಾಜ ಎಂ.ಎಸ್, ಹಾಡುಗಳ ಹಾಗೂ ಹಾಡಿದವರ ಬಗ್ಗೆ ಪರಿಚಯ ಮಾಡಿದರು. ಸಿರಿ ಮ್ಯೂಸಿಕ್ ಮೂಲಕ ಹಾಡುಗಳು ಬಿಡುಗಡೆಯಾಗುತ್ತಿದೆ ಎಂದು ತಿಳಿಸಿದರು.

ಈ ಚಿತ್ರತಂಡದವರು ಹಾಡುಗಳನ್ನು ನನಗೆ ತೋರಿಸಿದಾಗ ಬಹಳ ಇಷ್ಟವಾಯಿತು. ಬೇರೆ ಬೇರೆ ಕಡೆ ಹರಿಯುವ ನದಿಗಳು ಸಮುದ್ರವನ್ನು ಸೇರಿದಂತೆ. ಈ ತಂಡದವರು ಬೇರೆ ಬೇರೆ ಕಡೆಯಿಂದ ಬಂದು ಈ ಚಿತ್ರಕ್ಕಾಗಿ ಒಂದಾಗಿದ್ದಾರೆ. ಸಿರಿ ಮ್ಯೂಸಿಕ್ ಮೂಲಕ ಈ ಚಿತ್ರದ ಹಾಡುಗಳನ್ನು ಕೇಳಿ ಆನಂದಿಸಿ ಎಂದರು ಸಿರಿ ಮ್ಯೂಸಿಕ್ ನ ಸುರೇಶ್ ಚಿಕ್ಕಣ್ಣ.

ನಾನು ಮೂಲತಃ ರಂಗಭೂಮಿ ಕಲಾವಿದ. ಈ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದೇನೆ ಜೊತೆಗೆ ಸಂಕಲನಕಾರನಾಗೂ ಕಾರ್ಯ ನಿರ್ವಹಿಸಿದ್ದೇನೆ ಎಂದು ಶ್ರೀಧರ್ ಅಟವಿ ತಿಳಿಸಿದರು.

ನಟರಾದ ಸಂದೀಪ್, ರಾಘವೇಂದ್ರ ಸಿ ಕಟ್ಟಿಮನಿ ನಟಿಯರಾದ ಸಹನ ಹಾಗೂ ನೀಲಾಂಬಿಕ ಮುಂತಾದವರು “ಅಲೆಮಾರಿ ಈ ಬದುಕು” ಚಿತ್ರದ ಬಗ್ಗೆ ಮಾತನಾಡಿದರು.

Categories
ಸಿನಿ ಸುದ್ದಿ

ಬೆಂಗಳೂರಿನಲ್ಲಿ ಶ್ರೇಯಸ್ ಮೀಡಿಯಾ ಶಾಖೆ ಶುರು : ಶ್ರೇಯಸ್ ಶ್ರೀನಿವಾಸ್ ಗೆ ನಿರ್ದೇಶಕ ಮಾರುತಿ ಸಾಥ್

ದಕ್ಷಿಣ ಭಾರತದ ನಂಬರ್ 1 ಸಿನಿಮಾ ಪ್ರಚಾರ ಕಂಪನಿಯಾಗಿ ಹೊರಹೊಮ್ಮಿರುವ ಶ್ರೇಯಸ್ ಮೀಡಿಯಾ ಭಾರತದಲ್ಲಿ ತನ್ನ ಶಾಖೆಯನ್ನು ವಿಸ್ತರಿಸುತ್ತಿದೆ. ಹೈದ್ರಾಬಾದ್ ನಲ್ಲಿ ಯಶಸ್ವಿ ಕಾರ್ಯಕ್ರಮಗಳನ್ನು ಕೊಟ್ಟಿರುವ ಶ್ರೇಯಸ್ ಕಂಪನಿ, ಶ್ರೇಯಸ್ ಲೈವ್ ನಡಿ ಇದೀಗ ಬೆಂಗಳೂರಿನಲ್ಲಿಯೂ ಹೊಸ ವೆಂಚರ್ ಪ್ರಾರಂಭ ಮಾಡಿದೆ. ಸಿಲಿಕಾನ್ ಸಿಟಿಯಲ್ಲಿ ನಿನ್ನೆ ಶುಭಾರಂಭಗೊಂಡ ಶ್ರೇಯಸ್ ಮೀಡಿಯಾದ ಹೊಸ ಶಾಖೆಯನ್ನು ತೆಲುಗಿನ ಖ್ಯಾತ ನಿರ್ದೇಶಕ ಮಾರುತಿ ಉದ್ಘಾಟಿಸಿದರು. Biz-Bash ಸಹಯೋಗದೊಂದಿಗೆ ಶ್ರೇಯಸ್ ಕೆಲಸಕ್ಕೆ ಸಾಥ್ ಕೊಟ್ಟಿದೆ

ಬಳಿಕ ಮಾತನಾಡಿದ ನಿರ್ದೇಶಕ ಮಾರುತಿ, ಕಳೆದ 20 ವರ್ಷಗಳಿಂದ ಶ್ರೇಯಸ್ ಹಾಗೂ ನಾನು ಗೆಳೆಯರು. ಬೆಂಗಳೂರಿನಲ್ಲಿಂದು ಶ್ರೇಯಸ್ ಲೈವ್ ಪ್ರಾರಂಭಿಸಿದ್ದಾರೆ. ಹೈದ್ರಾಬಾದ್ ನಲ್ಲಿ 2000 ಸಾವಿರಕ್ಕೂ ಹೆಚ್ಚು ಇವೆಂಟ್ ಗಳನ್ನು ನಡೆಸಿದ್ದಾರೆ. ಕನ್ನಡದಲ್ಲಿ ಈಗ ಸೇವೆ ಪ್ರಾರಂಭಿಸಿದ್ದು, ನಾನು ಶ್ರೇಯಸ್ ಲೈವ್ ಲಾಂಚ್ ಮಾಡಿರೋದು ಸಂತೋಷವಾಗಿದೆ. ಇಲ್ಲಿಯೂ ಶ್ರೇಯಸ್ ಮೀಡಿಯಾ ರಾಕ್ ಆಗ್ಲಿ ಎಂದು ಶುಭಾಷಯ ತಿಳಿಸಿದರು.

ಶ್ರೇಯಸ್ ಮೀಡಿಯಾದ ಸಂಸ್ಥಾಪಕ ಶ್ರೇಯಸ್ ಶ್ರೀನಿವಾಸ್, ಬಾಲಿವುಡ್ ಹಾಗೂ ಸೌತ್ ಇಂಡಸ್ಟ್ರೀಯಲ್ಲಿ 2000ಕ್ಕೂ ಹೆಚ್ಚು ಇವೆಂಟ್ ಗಳನ್ನು ಶ್ರೇಯಸ್ ಮೀಡಿಯಾ ಯಶಸ್ವಿಯಾಗಿ ನಡೆಸಿದೆ. ಈಗ ಶ್ರೇಯಸ್ ಲೈವ್ ನಡಿ ಡಿಫರೆಂಟ್ ಇವೆಂಟ್ ನಡೆಸಲು ಪ್ಲಾನ್ ಹಾಕಿಕೊಂಡಿದ್ದೇವೆ. ಗ್ಲೋಬಲ್ ಸೌತ್ ಇಂಡಿಯನ್ ಮ್ಯೂಸಿಕ್ ಅವಾರ್ಡ್, ಏಷ್ಯಾನ್ ಬ್ಯುಸಿನೆಸ್ ಚಾಪಿಂಯನ್ ಅವಾರ್ಡ್, ಮ್ಯೂಸಿಕಲ್ ಕನ್ಸರ್ಟ್ ಹೀಗೆ ಈ ರೀತಿ ಕಾರ್ಯಕ್ರಮಗಳನ್ನು ಆಯೋಜಿಸಲು ಸಜ್ಜಾಗಿದ್ದೇವೆ. ಪ್ರತಿ ವಾರ ಬೆಂಗಳೂರಿನಲ್ಲಿ ಇವೆಂಟ್ ಆಯೋಜಿಸಲಿದ್ದೇವೆ ಎಂದು ಮಾಹಿತಿ ನೀಡಿದರು.

ಶ್ರೇಯಸ್ ಲೈವ್ ನ ಅನಾವರಣ ಕಾರ್ಯಕ್ರಮದಲ್ಲಿ ಶ್ರೇಯಸ್ ಗ್ರೂಪ್ ನ ಅಧ್ಯಕ್ಷ ಜಿ.ಶ್ರೀನಿವಾಸ್ ರಾವ್ ಮತ್ತು ಬಿಜ್-ಬಾಶ್ ಎಂಟರ್ ಟೈನ್ ಮೆಂಟ್ ನ ವ್ಯವಸ್ಥಾಪಕ ನಿರ್ದೇಶಕಿ ಹರ್ಷಿತಾ ಶೆಟ್ಟಿ, ಕಟ್ಟಾ ಸುಬ್ರಹ್ಮಣ್ಯಂ ನಾಯ್ಡು, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ನಾಯಕಿ ಸಂಜನಾ ಆನಂದ್ ಸೇರಿದಂತೆ ಗಣ್ಯ ಅತಿಥಿಗಳು ಉಪಸ್ಥಿತರಿದ್ದರು.

ಕಳೆದ 13 ವರ್ಷಗಳಿಂದ ಸಿನಿಮಾ ಹಾಗೂ ಮಾಧ್ಯಮದ ನಡುವೆ ಕೊಂಡಿಯಾಗಿ ಕೆಲಸ ಮಾಡುತ್ತಿರುವ ಶ್ರೇಯಸ್ ಮೀಡಿಯಾ 2100ಕ್ಕೂ ಹೆಚ್ಚು ಇವೆಂಟ್ ಗಳನ್ನು ಯಶಸ್ವಿಯಾಗಿ ನಡೆಸಿದೆ. 1200ಕ್ಕೂ ಹೆಚ್ಚು ಸಿನಿಮಾಗಳ ಪ್ರಚಾರದ ಜೊತೆಗೆ ಮಾರ್ಕೆಂಟಿಂಗ್ ವಿಭಾಗದಲ್ಲಿಯೂ ತನ್ನದೇ ರೀತಿಯಲ್ಲಿ ಛಾಪೂ ಮೂಡಿಸಿದೆ.

ಕೆಜಿಎಫ್, ಪುಷ್ಪ, ಆದಿಪುರುಷ, ಆರ್ ಆರ್ ಆರ್ , ಸಾಹೋ ಸೇರಿದಂತೆ ಹಲವರು ದೊಡ್ಡ ದೊಡ್ಡ ಸಿನಿಮಾಗಳ ಇವೆಂಟ್ ಆಯೋಜಿಸಿ ಶ್ರೇಯಸ್ ಮೀಡಿಯಾ ಸಕ್ಸಸ್ ಕಂಡಿದೆ. ಬ್ರ್ಯಾಂಡ್ ಪೊಸಿಷನಿಂಗ್, ಟೆಲಿವಿಷನ್, ಡಿಜಿಟಲ್ ಮೀಡಿಯಾ ಮತ್ತು ಈವೆಂಟ್ ಮ್ಯಾನೇಜ್‌ಮೆಂಟ್‌ನಲ್ಲಿ ಈ ಕಂಪನಿ ಪರಿಣತಿಯನ್ನು ಹೊಂದಿದೆ. ಇತ್ತೀಚೆಗೆ ಶ್ರೇಯಸ್ ಮೀಡಿಯಾ ಬಾಲಿವುಡ್ ಸಿನಿರಂಗ ಪ್ರವೇಶಿಸಿದೆ.

Categories
ಸಿನಿ ಸುದ್ದಿ

ಆರ್. ಚಂದ್ರುಗೆ ಸಿಎಂ ಹಾರೈಕೆ: ಆರ್ ಸಿ ಸ್ಟುಡಿಯೋಸ್ ಗೆ ಸಿದ್ಧರಾಮಯ್ಯ ಚಾಲನೆ; ಒಂದೇ ಸಲ ಐದು ಚಿತ್ರಗಳ ಅನೌನ್ಸ್- ಇದು ದಾಖಲೆ!

ನಿರ್ದೇಶಕ, ನಿರ್ಮಾಪಕ ಆರ್ ಚಂದ್ರು ಸಾರಥ್ಯದ ಆರ್ ಸಿ ಸ್ಟುಡಿಯೋಸ್ ಉದ್ಘಾಟನೆಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆರ್ ಸಿ ಸ್ಟುಡಿಯೋಸ್ ಗೆ ಚಾಲನೆ ನೀಡಿದರು. ಆರ್ ಸಿ ಸ್ಟುಡಿಯೋಸ್ ಮೂಲಕ ನಿರ್ಮಾಣವಾಗಲಿರುವ ಐದು ಚಿತ್ರಗಳಿಗೆ ಮುಖ್ಯಮಂತ್ರಿಗಳು ಶುಭ ಹಾರೈಸಿದ್ದಾರೆ.


ರಿಯಲ್ ಸ್ಟಾರ್ ಉಪೇಂದ್ರ, ಮಾಜಿ ಸಚಿವ ಎಚ್‍.ಎಂ. ರೇವಣ್ಣ, ಮುಂಬೈನ ಖ್ಯಾತ ನಿರ್ಮಾಪಕ ಮತ್ತು ವಿತರಕರಾದ ಆನಂದ್‍ ಪಂಡಿತ್‍, ನಿರ್ಮಾಪಕ ಜಾಕ್‍ ಮಂಜು, ಅಲಂಕಾರ್ ಪಾಂಡಿಯನ್‍,ಉದ್ಯಮಿಗಳಾದ ರಾಮಚಂದ್ರೇ ಗೌಡ, ಮಂಜುನಾಥ ಹೆಗಡೆ ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು. ಕರುನಾಡ ಚಕ್ರವರ್ತಿ ಶಿವರಾಜಕುಮಾರ್, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹಾಗೂ ಶ್ರೀಮತಿ ಗೀತಾ ಶಿವರಾಜಕುಮಾರ್ ವಿಡಿಯೋ ಮೂಲಕ ಆರ್ ಸಿ ಸ್ಟುಡಿಯೋಸ್ ಗೆ ಶುಭ ಕೋರಿದರು.

‘ಶ್ರೀ ರಾಮ ಬಾಣ’, ‘ಕಬ್ಜ 2’, ‘ಪಿಓಕೆ’, ‘ಫಾದರ್’ ಮತ್ತು ‘ಡಾಗ್’ ಚಿತ್ರಗಳ ಅಧಿಕೃತ ಘೋಷಣೆ ಈ ಸಂದರ್ಭದಲ್ಲಿ ಆಗಿದೆ. ಈ ಪೈಕಿ ‘ಕಬ್ಜ 2’ ಚಿತ್ರವನ್ನು ಮಾತ್ರ ಆರ್ ಚಂದ್ರು ಅವರು ನಿರ್ದೇಶಿಸುತ್ತಿದ್ದು, ಮಿಕ್ಕ ಚಿತ್ರಗಳನ್ನು ಬೇರೆ ಬೇರೆ ನಿರ್ದೇಶಕರು ನಿರ್ದೇಶಿಸಲಿದ್ದಾರೆ. ಈ ಎಲ್ಲಾ ಚಿತ್ರಗಳನ್ನು ಆರ್.ಸಿ. ಸ್ಟುಡಿಯೋಸ್‍ ನಿರ್ಮಿಸಲಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಆರ್ ಚಂದ್ರು, ನಮ್ಮ ಆರ್ ಸಿ ಸ್ಟುಡಿಯೋಸ್ ಗೆ ಇಂದು ಸನ್ಮಾನ್ಯ ಮುಖ್ಯಮಂತ್ರಿಗಳು ಚಾಲನೆ ನೀಡಿದ್ದಾರೆ. ಈ ಸಂಸ್ಥೆಯಿಂದ ಏಕಕಾಲಕ್ಕೆ ನಿರ್ಮಾಣವಾಗಲಿರುವ ಐದು ಚಿತ್ರಗಳು ಇಂದು ಅಧಿಕೃತವಾಗಿ ಆರಂಭವಾಗಿದೆ. ಆರ್ ಸಿ ಸ್ಟುಡಿಯೋಸ್ ನನ್ನದೊಬ್ಬನ್ನದಲ್ಲ. ಇಲ್ಲಿರುವ ಮಂಜುನಾಥ ಹೆಗಡೆ, ಸೋದರ ಸಮಾನರಾದ ರಾಮಚಂದ್ರೇ ಗೌಡರು, ಮುಂಬೈನಿಂದ ಬಂದಿರುವ ಆನಂದ್ ಪಂಡಿತ್ ಹಾಗೂ ಅಲಂಕಾರ್ ಪಾಂಡಿಯನ್ ಎಲ್ಲರೂ ನಮ್ಮ ಸಂಸ್ಥೆಯ ಆಧಾರ ಸ್ತಂಭಗಳು. ಅವರೆಲ್ಲರ ಸಹಕಾರಕ್ಕೆ ನಾನು ಚಿರ ಋಣಿ.

ಕಲ್ಲು ಹೊಡೆದರೆ ಲೈಟ್ ಕಂಬಕ್ಕೆ ಹೊಡೆಯಬಾರದು.‌ ಚಂದ್ರನಿಗೆ ಹೊಡೆಯಬೇಕು. ನಾನು ಸಹ ‘ಕಬ್ಜ’ ಮೂಲಕ ಅದೇ ರೀತಿ ಪ್ರಯತ್ನಪಟ್ಟೆ. ನಾನು ನನ್ನದೇ ಹಣದಿಂದ ಪ್ರಯತ್ನಪಟ್ಟೆ. ಲ್ಯಾಂಡಿಂಗ್‍ ವೇಳೆ ಚಿಕ್ಕ ಕ್ರಾಶ್‍ ಆಯ್ತು. ಅದು ಸೋಲಲ್ಲ. ಮಿಕ್ಕಂತೆ ಎಲ್ಲವೂ ಸಕ್ಸಸ್‍ ಆಯಿತು. ಹಾಗಾಗಿದ್ದರಿಂದ ಇಂದು ಹೊಸ ನಿರ್ಮಾಣ ಸಂಸ್ಥೆ ಆರಂಭಿಸಿ ಐದು ಸಿನಿಮಾಗಳನ್ನು ಘೋಷಿಸಿದ್ದೀನಿ. ನಾನು ಸಹ ದುಡ್ಡನ್ನು ರಿಯಲ್‍ ಎಸ್ಟೇಟ್‍ಗೆ ಹಾಕಬಹುದಿತ್ತು. ಆದರೆ, ದೇವರು ನನ್ನನ್ನು ಇಲ್ಲಿ ತಂದು ಹಾಕಿದ್ದಾರೆ, ಇಲ್ಲಿರು ಅಂತ. ಸಿನಿಮಾ ಮಾಡಿದರೆ, ಚಿತ್ರರಂಗದ ಎಲ್ಲಾ ವಲಯದವರು ಅದರಿಂದ ಊಟ ಮಾಡುತ್ತಾರೆ’ ಎಂದರು.

ಮೊದಲು ನಾವು ಎಲ್ಲರನ್ನು ಗೌರವಿಸುವುದನ್ನು ಕಲಿಯಬೇಕು ಎಂದ ಅವರು, ‘ನಾವು ಒಳ್ಳೆಯ ಸಿನಿಮಾ ಮಾಡೋದಕ್ಕೆ ಪ್ರಯತ್ನ ಮಾಡೋಣ. ಮಾಡಿದ ಸಿನಿಮಾ ಎಲ್ಲಾ ದೊಡ್ಡ ಹಿಟ್‍ ಆಗುವುದಿಲ್ಲ. ದೊಡ್ಡ ದೊಡ್ಡ ಸ್ಟಾರ್ ಗಳ ಸಿನಿಮಾ ಸಹ ಫ್ಲಾಪ್‍ ಆಗುತ್ತದೆ. ನಮ್ಮದು ಸಹ ಸಣ್ಣ ಕ್ರಾಶ್‍ ಆಗಿರಬಹುದು. ಸರಕಾರಕ್ಕೆ ನಾನು 20 ಕೋಟಿ ಟ್ಯಾಕ್ಸ್ ಕಟ್ಟಿದ್ದೀನಿ. ಅದು ‘ಕಬ್ಜ’ದಿಂದ. ಇದನ್ನು ಯಾರೂ ಬಹಿರಂಗವಾಗಿ ಹೇಳುವುದಿಲ್ಲ. ನಾನು ಹೇಳುತ್ತೇನೆ. ಅದರಿಂದ ಎಷ್ಟು ಜನ ಊಟ ಮಾಡಿರುತ್ತಾರೆ. ಅದರಿಂದ ಚಿತ್ರರಂಗದಲ್ಲಿ ಎಷ್ಟು ಜನ ಬದುಕಬಹುದು? ಇದೆಲ್ಲವನ್ನೂ ಯೋಚಿಸಬೇಕು. ಸುಮ್ಮನೆ ಏನೇನೋ ಮಾತನಾಡಬಾರದು’ ಎಂದು ಹೇಳಿದರು.

ಎಲ್ಲರೂ ಚಿತ್ರವನ್ನು ಗೆಲ್ಲಿಸಬೇಕು ಅಂತಲೇ ಮಾಡುತ್ತಾರೆ, ಸೋಲಬೇಕು ಅಂತ ಯಾರೂ ಮಾಡುವುದಿಲ್ಲ ಎಂದ ಚಂದ್ರು, ಕನ್ನಡ ನಿರ್ದೇಶಕರಿಗೆ ಅವಕಾಶ ಕೊಡಬೇಕು ಎಂದು ಈ ಸಂಸ್ಥೆ ಕಟ್ಟಿದ್ದೇನೆ. ನಾನು ಬೇರೆ ಯಾವುದೋ ಭಾಷೆಗೆ ಹೋಗಿ ಈ ಸಂಸ್ಥೆ ಶುರು ಮಾಡಿಲ್ಲ. ಬೆಂಗಳೂರಿನಲ್ಲಿ ನಿಂತು ಆರ್.ಸಿ. ಸ್ಟುಡಿಯೋಸ್‍ ಪ್ರಾರಂಭಿಸಿದ್ದೇನೆ. ಈ ಸಂಸ್ಥೆಯ ಮೂಲಕ ನಿರಂತರವಾಗಿ ಚಿತ್ರ ಮಾಡುತ್ತೇನೆ’ ಎಂದರು

Categories
ಸಿನಿ ಸುದ್ದಿ

ಪುಟ್ಟಕ್ಕನ ಮಕ್ಕಳ ಲವ್ ರೀಸೆಟ್! ಇದು ಶಾರ್ಟ್ ಫಿಲಂ ಲವ್ ಸ್ಟೋರಿ

ಹಿರಿತೆರೆಯಲ್ಲಿ ಮೊದಲ ಚಿತ್ರ ನಿರ್ದೇಶಿಸುವವರು ಮೊದಲು ಕಿರುಚಿತ್ರದ ಮೂಲಕ ತಮ್ಮ ಪ್ರತಿಭೆ ಪ್ರದರ್ಶಿಸುತ್ತಾರೆ. ಎಷ್ಟೋ ಕಿರುಚಿತ್ರಗಳು ಜನರ ಮನಸ್ಸಿಗೆ ಹತ್ತಿರವಾಗಿರುವುದು ಹೌದು. ಅಂತಹ ವಿಭಿನ್ನ ಕಿರುಚಿತ್ರ ” ಲವ್ ರೀಸೆಟ್” ಇತ್ತೀಚೆಗೆ ಬಿಡುಗಡೆಯಾಗಿದೆ.

ಶ್ರೀಗಣೇಶ್ ನಿರ್ದೇಶಿಸಿ, “ಪುಟ್ಟಕ್ಕನ ಮಕ್ಕಳು” ಖ್ಯಾತಿಯ ಪವನ್ ಕುಮಾರ್ ಹಾಗೂ ಸಂಜನಾ ಬುರ್ಲಿ ನಾಯಕ, ನಾಯಕಿಯಾಗಿ ನಟಿಸಿರುವ ಈ ಕಿರುಚಿತ್ರದ ಪ್ರೀಮಿಯರ್ ನಡೆಯಿತು. “ಪುಟ್ಟಕ್ಕನ ಮಕ್ಕಳು” ಧಾರಾವಾಹಿ ತಂಡದವರು, ಬಿಗ್ ಬಾಸ್ ಖ್ಯಾತಿಯ ಸ್ನೇಹಿತ್, ಭೂಮಿ ಶೆಟ್ಟಿ, ರಮೇಶ್ ಪಂಡಿತ್, ಕಲಾಗಂಗೋತ್ರಿ ಮಂಜು, ಪದ್ಮಕಲಾ ಸೇರಿದಂತೆ ಅನೇಕ ಗಣ್ಯರು ಪ್ರೀಮಿಯರ್ ಗೆ ಆಗಮಿಸಿ ತಂಡಕ್ಕೆ ಶುಭ ಕೋರಿದರು.

ಪ್ರದರ್ಶನದ ನಂತರ ಮಾತನಾಡಿದ ನಿರ್ದೇಶಕ ಶ್ರೀಗಣೇಶ್, ನಾನು ಮೂಲತಃ ಐಟಿ ಉದ್ಯೋಗಿ. ಸಿನಿಮಾ ಮಾಡಬೇಕೆಂಬ ಆಸೆಯಿದೆ. ಅದರ ಪೂರ್ವಭಾವಿಯಾಗಿ ಈ ಕಿರುಚಿತ್ರ ಮಾಡಿದ್ದೇನೆ. ಇದೊಂದು ಪ್ರೇಮ ಕಥಾನಕ. ಈಗಿನ ಪ್ರೇಮಿಗಳ ಮನಸ್ಥಿತಿಯನ್ನು 25 ನಿಮಿಷಗಳಲ್ಲಿ ತೋರಿಸುವ ಪ್ರಯತ್ನ ಮಾಡಿದ್ದೇನೆ. ಈ ಕಿರುಚಿತ್ರದಲ್ಲಿ ವಿ. ನಾಗೇಂದ್ರ ಪ್ರಸಾದ್ ಬರೆದಿರುವ “ಅನುರಾಗದ ನೆನಪೀಗ ಕೊನೆಯಾಗಲಿ’ ಎಂಬ ಸುಂದರವಾದ ಹಾಡೊಂದಿದೆ.

ಸರಿಗಮಪ ಖ್ಯಾತಿಯ ಸುನೀಲ್, ಅನನ್ಯ ಪ್ರಕಾಶ್ ದನಿಯಾಗಿರುವ ಈ ಹಾಡಿಗೆ ಜೋಯಲ್ ಹಾಗೂ ಅಭಿಲಾಶ್ ಸಂಗೀತ ನೀಡಿದ್ದಾರೆ. ಈ ಹಾಡನ್ನು A2 music ಮೂಲಕ ಮೊದಲೆ ಬಿಡುಗಡೆಯಾಗಿತ್ತು. 7 ಶೇಡ್ಸ್ ಯೂಟ್ಯೂಬ್ ಚಾನೆಲ್ ನಲ್ಲಿ ಕಿರುಚಿತ್ರ ಬಿಡುಗಡೆ ಮಾಡಿದ್ದೇವೆ ಎಂದು ತಿಳಿಸಿದರು.

” ಪುಟ್ಟಕ್ಕನ ಮಕ್ಕಳು ” ಧಾರಾವಾಹಿ ಮುರಳಿ ಪಾತ್ರವನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ. ಸಿನಿಮಾದಲ್ಲೂ ನಟಿಸುವ ಆಸಯಿದೆ. ಈ ಕಿರುಚಿತ್ರದಲ್ಲಿ “ಅಮರ್” ನನ್ನ ಪಾತ್ರದ ಹೆಸರು. ಪ್ರೀತಿ ಹಾಗೂ ಕೆರಿಯರ್ ವಿಷಯ ಬಂದಾಗ ಹುಡುಗ ಯಾವುದನ್ನು ಆಯ್ಕೆ ಮಾಡಿಕೊಳ್ಳುತ್ತಾನೆ ಎಂಬುದನ್ನು ನಿರ್ದೇಶಕರು ಇದರಲ್ಲಿ ತೋರಿಸಿದ್ದಾರೆ ಎಂದು ನಾಯಕ ಪವನ್ ಕುಮಾರ್ ತಿಳಿಸಿದರು.

ಕಥೆ ಬಹಳ ಡಿಫರೆಂಟ್ ಆಗಿದೆ. ನನ್ನ ಪಾತ್ರ ಕೂಡ ಚೆನ್ನಾಗಿದೆ ನೋಡಿ ಹಾರೈಸಿ ಎಂದರು ನಾಯಕಿ ಸಂಜನ ಬುರ್ಲಿ.
ಛಾಯಾಗ್ರಾಹಕ ಪ್ರಜ್ವಲ್ ಭಾರದ್ವಾಜ್ ಸೇರಿದಂತೆ ಅನೇಕ ತಂತ್ರಜ್ಞರು ಕಿರುಚಿತ್ರದ ಬಗ್ಗೆ ಮಾತನಾಡಿದರು. ರಂಜಿತ್ ಶಂಕರೇಗೌಡ ಸಹ ನಿರ್ದೇಶಕರ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ.

Categories
ಸಿನಿ ಸುದ್ದಿ

ಇದು ಯತಿರಾಜ್ ಸತ್ಯ: ಫೆಬ್ರವರಿ 2ಕ್ಕೆ ಸತ್ಯಂ ಶಿವಂ ರಿಲೀಸ್

ಪತ್ರಕರ್ತ ಹಾಗೂ ಕಲಾವಿದ ಯತಿರಾಜ್ ನಿರ್ದೇಶನದ “ಸತ್ಯಂ ಶಿವಂ” ಚಿತ್ರ ಫೆಬ್ರವರಿ 2 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈಗಾಗಲೇ ಟ್ರೇಲರ್ ಹಾಗೂ ಹಾಡುಗಳ ಮೆಚ್ಚುಗೆ ಪಡೆದಿದೆ.

ನಿರ್ದೇಶಕ ಯತಿರಾಜ್ ಸಿನಿಮಾ ಬಗ್ಗೆ ಹೇಳಿದ್ದಿಷ್ಟು. ವಿಭಿನ್ನ ಕಥಾಹಂದರ ಹೊಂದಿರುವ “ಸತ್ಯಂ ಶಿವಂ” ಚಿತ್ರ ಫೆಬ್ರವರಿ 2ರಂದು ಬಿಡುಗಡೆಯಾಗುತ್ತಿದೆ. ನಮ್ಮ ಚಿತ್ರದ ನಿರ್ಮಾಪಕ ಬುಲೆಟ್ ರಾಜು ಅವರೆ ನಾಯಕನಾಗೂ ನಟಿಸಿದ್ದಾರೆ. ಸಂಜನ ನಾಯ್ಡು ಈ ಚಿತ್ರದ ನಾಯಕಿ. ಮೈಕೋ ನಾಗರಾಜ್, ಬಲ ರಾಜವಾಡಿ, ಅರವಿಂದ್ ರಾವ್, ಸಂಗೀತ, ಸುಂದರಶ್ರೀ, ತೇಜಸ್ವಿನಿ, ತನುಜ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ನಾನು ಕೂಡ ನಟಿಸಿದ್ದೇನೆ. ವಿದ್ಯಾ ನಾಗೇಶ್ ಛಾಯಾಗ್ರಹಣ, ವಿ.ಮನೋಹರ್ ಸಂಗೀತ ನಿರ್ದೇಶನ ಹಾಗೂ ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ. ಸಸ್ಪೆನ್ಸ್, ಸೆಂಟಿಮೆಂಟ್, ಥ್ರಿಲ್ಲರ್ ಎಲ್ಲಾ ಅಂಶಗಳು ಈ ಚಿತ್ರದಲ್ಲಿದೆ. ಫೆಬ್ರವರಿ 2 ರಂದೆ ತೆರೆಗೆ ಬರುತ್ತಿರುವ ನಮ್ಮ ಚಿತ್ರವನ್ನು ನೋಡಿ. ಪ್ರೋತ್ಸಾಹ ನೀಡಿ ಎಂದರು.

ನಾನು ಈ ಹಿಂದೆ ಬಿಕ್ಷುಕ ಎಂಬ ಸಿನಿಮಾ ಮಾಡಿದ್ದೆ. ಇದು ಎರಡನೇ ಸಿನಿಮಾ.‌ ಯತಿರಾಜ್ ನಿರ್ದೇಶನದಲ್ಲಿ ಚಿತ್ರ ಚೆನ್ನಾಗಿ ಬಂದಿದೆ. ಸೆನ್ಸಾರ್ ಮಂಡಳಿ ಯಾವುದೇ ಕಟ್ ಇಲ್ಲದೆ ಯು/ಎ ಅರ್ಹತಾಪತ್ರ ನೀಡಿದೆ ಎಂದು ತಿಳಿಸಿದ ನಿರ್ಮಾಪಕ ಮತ್ತು ನಾಯಕ ಬುಲೆಟ್ ರಾಜು, ಇಡೀ ತಂಡಕ್ಕೆ ಧನ್ಯವಾದ ತಿಳಿಸಿದರು.

ನಾಯಕಿ ಸಂಜನಾ ತಮ್ಮ ಪಾತ್ರದ ಬಗ್ಗೆ ಮಾಹಿತಿ ನೀಡಿದರು. ಸಿರಿ ಮ್ಯೂಸಿಕ್ ಸುರೇಶ್ ಚಿಕ್ಕಣ್ಣ ಈ ಚಿತ್ರದ ಹಾಡುಗಳು ಈಗಾಗಲೇ ಎಲ್ಲರ ಮನ ಗೆದ್ದಿದೆ ಎಂದರು. ಛಾಯಾಗ್ರಾಹಕ ವಿದ್ಯಾ ನಾಗೇಶ್, ಸಹ ನಿರ್ದೇಶಕರಾದ ಅರುಣ್ ಕುಮಾರ್ ಮತ್ತು ಸೋನು ಸಾಗರ , ಮುಂತಾದ ತಂತ್ರಜ್ಞರು ಹಾಗೂ ಕಲಾವಿದರು “ಸತ್ಯಂ ಶಿವಂ” ಬಗ್ಗೆ ಮಾತನಾಡಿದರು.

Categories
ಸಿನಿ ಸುದ್ದಿ

ಖುಷಿಯ ಬರ್ತ್ ಡೇಗೆ ಸಖತ್ ಪೋಸ್ಟರ್ ಬಂತು: ಫುಲ್ ಮೀಲ್ಸ್ ಶೂಟಿಂಗ್ ಮುಗೀತು ; ಪುಲ್ ರೀಲ್ಸ್ ನೋಡೋದಷ್ಟೆ ಬಾಕಿ

ನಟ ಲಿಖಿತ್ ಶೆಟ್ಟಿ ನಟಿಸಿ ನಿರ್ಮಿಸುತ್ತಿರುವ ಫುಲ್ ಮೀಲ್ಸ್ ಚಿತ್ರದ ನಾಯಕಿ ಖುಷಿ ರವಿ ಹುಟ್ಟು ಹಬ್ಬದ ಅಂಗವಾಗಿ ಚಿತ್ರತಂಡ ಬರ್ತ್ ಡೇ ಫೋಸ್ಟರ್ ಅನ್ನು ಬಿಡುಗಡೆ ಮಾಡಿದೆ. ಇತ್ತೀಚೆಗಷ್ಟೇ ಚಿತ್ರೀಕರಣ ಮುಗಿಸಿ, ಕುಂಬಳಕಾಯಿ ಶಾಸ್ತ್ರ ಮುಗಿಸಿದ ಚಿತ್ರತಂಡ, ಚಿತ್ರೀಕರಣದ ಕೊನೆಯ ದಿನ, ಖುಷಿ ರವಿ ಅವರನ್ನು ನೆನಪಿಸಿಕೊಂಡ ತಕ್ಷಣ ಯಾವ ತಿನ್ನುವ ಪದಾರ್ಥ ನೆನಪಾಗುತ್ತದೆ ಎಂಬ ವಿಭಿನ್ನ ಪ್ರಶ್ನೆಗೆ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿ, ಆ ವೀಡಿಯೋವನ್ನು ಖುಷಿ ರವಿ ಅವರಿಗೆ ಉಡುಗೊರೆಯಾಗಿ ನೀಡಿದ್ದಾರೆ.

ಚಿತ್ರದ ಮತ್ತೋರ್ವ ನಾಯಕಿ ತೇಜಸ್ವಿನಿ ಶರ್ಮ ಈ ವೀಡಿಯೋದ ರುವಾರಿಯಾಗಿದ್ದು, ತನ್ನ ಸಹನಟಿ ಮತ್ತು ಸ್ನೇಹಿತೆಗೆ ಹುಟ್ಟು ಹಬ್ಬಕ್ಕೆ ವಿಶೇಷ ಉಡುಗೊರೆ ನೀಡಿದ್ದಾರೆ. ವೆಡ್ಡಿಂಗ್ ಫೋಟೋಗ್ರಾಫರ್ ಸುತ್ತ ಸುತ್ತುವ ಕಥಾ ಹಂದರವನ್ನು ಹೊಂದಿರುವ ‘ಫುಲ್ ಮೀಲ್ಸ್’ ನಲ್ಲಿ ಖುಷಿ ರವಿ ‘ಪೂಜಾ’ ಹೆಸರಿನ ಪಾತ್ರ ನಿರ್ವಹಿಸುತ್ತಿದ್ದು, ಇದುವರೆಗಿನ ಅವರ ಎಲ್ಲಾ ಪಾತ್ರಗಳಿಗಿಂತ ವಿಭಿನ್ನ ರೀತಿಯ ಪಾತ್ರ ಇದಾಗಿದ್ದು, ಜನರು ಪಾತ್ರವನ್ನು ಖಂಡಿತ ಇಷ್ಟಪಡುತ್ತಾರೆಂಬ ವಿಶ್ವಾಸವನ್ನು ಹೊಂದಿದ್ದಾರೆ. ಯುವ ಪ್ರತಿಭೆ ಎನ್. ವಿನಾಯಕ ಚಿತ್ರದ ಮೂಲಕ ಮೊದಲ ಬಾರಿಗೆ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ.

ಹರೀಶ್ ಗೌಡ ಸಂಭಾಷಣೆ ಬರೆದಿದ್ದು, ಮನೋಹರ್ ಜೋಷಿ ಛಾಯಾಗ್ರಹಣ, ಗುರು ಕಿರಣ್ ಸಂಗೀತ, ದೀಪು ಎಸ್ ಕುಮಾರ್ ಸಂಕಲನ ಚಿತ್ರಕ್ಕಿದೆ. ಉಳಿದಂತೆ ತಾರಾಗಣದಲ್ಲಿ ರಂಗಾಯಣ ರಘು, ವಿಜಯ್ ಚಂಡೂರ್, ರವಿ ಶಂಕರ್ ಗೌಡ, ರಾಜೇಶ್ ನಟರಂಗ, ಸುಜಯ್ ಶಾಸ್ತ್ರಿ, ಚಂದ್ರಕಲಾ ಮೋಹನ್, ಸೂರಜ್ ಲೋಕ್ರೆ, ಹೂನ್ನವಳ್ಳಿ ಕೃಷ್ಣ, ರಮೇಶ್ ಪಂಡಿತ್, ನಾಗೇಂದ್ರ ಅರಸ್, ಮೂಗು ಸುರೇಶ್ ಸೇರಿದಂತೆ ದೊಡ್ಡ ತಾರಾ ಬಳಗವೇ ಇದೆ. ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಆದಷ್ಟು ಬೇಗ ಮುಗಿಸಿ, ಶೀಘ್ರದಲ್ಲೇ ಚಿತ್ರವನ್ನು ತೆರೆಗೆ ತರುವ ಉತ್ಸಾಹದಲ್ಲಿ ಚಿತ್ರತಂಡವಿದೆ.

Categories
ಸಿನಿ ಸುದ್ದಿ

ಕಿರಣ್ ರಾಜ್ ಮೇಘ ಸಂದೇಶ: ಟೀಸರ್ ಬಂತು

ಕನ್ನಡತಿ” ಧಾರಾವಾಹಿ ಮೂಲಕ ಕನ್ನಡಿಗರ ಮನ ಗೆದ್ದಿರುವ ನಟ ಕಿರಣ್ ರಾಜ್ ನಾಯಕನಾಗಿ ನಟಿಸಿರುವ, ಚರಣ್ ನಿರ್ದೇಶನದ “ಮೇಘ” ಚಿತ್ರದ ಟೀಸರ್ ಇತ್ತೀಚೆಗೆ ಬಿಡುಗಡೆಯಾಯಿತು. ಗೀತರಚನೆಕಾರ ವಿ.ನಾಗೇಂದ್ರ ಪ್ರಸಾದ್ “ಮೇಘ” ಚಿತ್ರದ ಟೀಸರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು.

ನಾನು ಮೂಲತಃ ಐಟಿ ಉದ್ಯೋಗಿ. ಕೋವಿಡ್ ನಂತರ ಐಟಿ ಕೆಲಸ ಬಿಟ್ಟು ವಿ.ನಾಗೇಂದ್ರಪ್ರಸಾದ್ ಅವರ ಬಳಿ ಸಿನಿಮಾ ಕೆಲಸ ಕಲಿಯಲು ಆರಂಭಿಸಿದೆ. ಇನ್ನು “ಮೇಘ” ನನ್ನ ಮೊದಲ ನಿರ್ದೇಶನದ ಚಿತ್ರ. “ಮೇಘ” ಗಳು ಆಕಾಶದಲ್ಲಿ ಯಾವಾಗಲೂ ಒಟ್ಟಾಗೆ ಚಲಿಸುತ್ತದೆ. ಆದರೆ ಮಳೆಯನ್ನು ಎಲ್ಲೋ ಸುರಿಸುತ್ತದೆ. ಇದನ್ನೇ ಇಟ್ಟುಕೊಂಡು ಪ್ರೇಮ ಕಥೆ ಸಿದ್ದ ಮಾಡಿಕೊಂಡೆ. ನಮ್ಮ ಸಿನಿಮಾದಲ್ಲಿ “ಮೇಘ” ಎಂದರೆ ಪ್ರೀತಿ ಅಂತ. ಕಿರಣ್ ರಾಜ್ ಹಾಗೂ ಕಾಜಲ್ ಕುಂದರ್ ನಾಯಕ – ನಾಯಕಿಯಾಗಿ ನಟಿಸಿದ್ದಾರೆ.

ರಾಜೇಶ್ ನಟರಂಗ ಸೇರಿದಂತೆ ಅನೇಕ ಹಿರಿಯ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ. ಪ್ರೀತಿ, ಸ್ನೇಹ, ಸೆಂಟಿಮೆಂಟ್ ಎಲ್ಲಾ ಅಂಶಗಳು ಈ ಚಿತ್ರದಲ್ಲಿದೆ. ಜೋಯಲ್ ಸಕ್ಕರಿ ಸಂಗೀತ ಸಂಯೋಜಿಸಿರುವ ಐದು ಸುಮಧುರ ಹಾಡುಗಳು ಈ ಚಿತ್ರದಲ್ಲಿದ್ದು, ಎರಡು ಹಾಡುಗಳನ್ನು ಗುರುಗಳಾದ ನಾಗೇಂದ್ರ ಪ್ರಸಾದ್ ಅವರು, ಬಾಕಿ ಮೂರು ಹಾಡುಗಳನ್ನು ನಾನು ಬರೆದಿದ್ದೇನೆ. ಯತೀಶ್ ಹೆಚ್ ಆರ್ ಅವರು ನಿರ್ಮಾಣ ಮಾಡಿದ್ದಾರೆ. ಚಿತ್ರ ಬಿಡುಗಡೆಯ ಹಂತದಲ್ಲಿದೆ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು.

ನನಗೆ ಸಿನಿಮಾ ರಂಗ ಹೊಸತು. ನಿರ್ಮಾಪಕರಾದ ಎಂ.ಜಿ.ರಾಮಮೂರ್ತಿ ಹಾಗೂ ತ್ರಿವಿಕ್ರಮ ಸಾಫಲ್ಯ ಅವರ ಮಾರ್ಗದರ್ಶನದಲ್ಲಿ ಕೃಷಿ ಪ್ರೊಡಕ್ಷನ್ಸ್ ಮೂಲಕ ಈ ಚಿತ್ರವನ್ನು ನಿರ್ಮಿಸಿರುವುದಾಗಿ ನಿರ್ಮಾಪಕ ಯತೀಶ್ ಹೆಚ್ ಆರ್ ಹೇಳಿದರು.

ನಾನು ಈವರೆಗೂ ಮಾಡಿರದ ಪಾತ್ರದಲ್ಲಿ “ಮೇಘ” ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಪ್ರೇಮ ಕಥಾನಕವಾಗಿದ್ದರೂ ಚಿತ್ರದ ಎಮೋಷನ್ ಎಲ್ಲರ ಗಮನ ಸೆಳೆಯುತ್ತದೆ. ಉದಾಹರಣೆಗೆ ನಾನು ಈ ಚಿತ್ರದ ಕಥೆ ಕೇಳಿ, ನನ್ನ ಅಪ್ಪನಿಗೆ ಬುಲೆಟ್ ಕೊಡಿಸಿದ್ದೇನೆ. ಈಗಿನ ಪೀಳಿಗೆಗೆ ಬೇಕಾದ ಎಲ್ಲಾ ಅಂಶಗಳು ನಮ್ಮ ಚಿತ್ರದಲ್ಲಿದೆ ಎಂದರು ನಾಯಕ ಕಿರಣ್ ರಾಜ್.

ಈ ಚಿತ್ರದ ವಿಶೇಷವೆಂದರೆ ನನ್ನ ಹಾಗೂ ನಾಯಕ ಇಬ್ಬರ ಹೆಸರು “ಮೇಘ” ಎಂದು. ಉತ್ತಮ ಕಥೆಯ ಈ ಚಿತ್ರಕ್ಕೆ ನಿಮ್ಮ ಬೆಂಬಲವಿರಲಿ ಎಂದರು ನಾಯಕಿ ಕಾಜಲ್ ಕುಂದರ್.

ಚಿತ್ರದ ಛಾಯಾಗ್ರಾಹಕ & ಸಂಕಲನಕಾರ ಗೌತಮ್ ನಾಯಕ್, ನಟಿ ಶ್ರೀವಿದ್ಯ ಹಾಗೂ ತ್ರಿವಿಕ್ರಮ ಸಾಫಲ್ಯ ಅವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Categories
ಸಿನಿ ಸುದ್ದಿ

ಜಸ್ಟ್ ಪಾಸ್ ಹುಡುಗರಿಗೆ ಶಾಸಕ ಪ್ರದೀಪ್ ಈಶ್ವರ್ ಹಿತವಚನ: ಸಾಂಗ್ ರಿಲೀಸ್ ಆಯ್ತು

ಚಿಕ್ಕ ಬಳ್ಳಾಪುರ ಕ್ಷೇತ್ರದ ಹಾಲಿ ಶಾಸಕರು ಹಾಗೂ ಪರಿಶ್ರಮ ಅಕಾಡೆಮಿಯ ಸ್ಥಾಪಕರು ಆದ ಪ್ರದೀಪ್ ಈಶ್ವರ್, ರಾಯ್ಸ್ ಎಂಟರ್ ಟೈನ್ಮೆಂಟ್ ಬ್ಯಾನರ್ ಅಡಿಯಲ್ಲಿ ಕೆ.ವಿ.ಶಶಿಧರ್ ನಿರ್ಮಿಸಿರುವ, ಕೆ.ಎಂ.ರಘು ನಿರ್ದೇಶನದ ಹಾಗೂ ಶ್ರೀ, ಪ್ರಣತಿ ನಾಯಕ-ನಾಯಕಿಯಾಗಿ ನಟಿಸಿರುವ “ಜಸ್ಟ್ ಪಾಸ್” ಚಿತ್ರದ ಹಾಡನ್ನು ಖ್ಯಾತ ಪತ್ರಕರ್ತ ವಿಶ್ವೇಶ್ವರ ಭಟ್ ಅವರ ಜೊತೆಗೂಡಿ ಬಿಡುಗಡೆ ಮಾಡಿದರು. ಕವಿರಾಜ್ ಬರೆದಿರುವ, ಹರ್ಷವರ್ಧನ್ ರಾಜ್ ಸಂಗೀತ ನೀಡಿರುವ “ಟೈಮಿಗೇ ಟೈಮೇನೇ ದುಶ್ಮನ್” ಎಂಬ ಯುವಕರಿಗೆ ಪ್ರಿಯವಾಗುವ ಈ ಗೀತೆ A2 ಮ್ಯೂಸಿಕ್ ಮೂಲಕ ಬಿಡುಗಡೆಯಾಗಿ ಎಲ್ಲರ ಮನ ಗೆಲ್ಲುತ್ತಿದೆ.

ಪ್ರಪಂಚದಲ್ಲಿ ಹೆಚ್ಚು ಅಂಕ ಬಂದವರಿಗೆ ಸಾಕಷ್ಟು ಕಾಲೇಜುಗಳಿದೆ. ಆದರೆ “ಜಸ್ಟ್ ಪಾಸ್” ಆದವರಿಗಾಗಿಯೇ ನಮ್ಮ ಚಿತ್ರದಲ್ಲಿ ಕಾಲೇಜು ತೆರೆಯಲಾಗಿದೆ. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಹಾಡು ಹಾಗೂ ಟೀಸರ್ ಎಲ್ಲರ ಮೆಚ್ಚುಗೆ ಪಡೆದುಕೊಂಡಿದೆ. ಇಂದು ಈ ಹಾಡನ್ನು ನಾನು ಇಷ್ಟಪಡುವ ಬರಹಗಾರರಾದ ವಿಶ್ವೇಶ್ವರ ಭಟ್ ಹಾಗೂ ಶಾಸಕರಾದ ಪ್ರದೀಪ್ ಈಶ್ವರ್ ಬಿಡುಗಡೆ ಮಾಡಿದ್ದು ಬಹಳ ಖುಷಿಯಾಗಿದೆ.

ಏಕೆಂದರೆ ಪರಿಶ್ರಮ ಅಕಾಡೆಮಿಯ ಮೂಲಕ ಪ್ರದೀಪ್ ಈಶ್ವರ್ ಅವರು ಸಹ ಸಾಕಷ್ಟು ಜಸ್ಟ್ ಪಾಸ್ ಆದ ವಿದ್ಯಾರ್ಥಿಗಳನ್ನು ಫಸ್ಟ್ ಕ್ಲಾಸ್ ಬರುವ ಹಾಗೆ ಮಾಡುತ್ತಿದ್ದಾರೆ. ಅವರು ನಮ್ಮ ಚಿತ್ರದ ಹಾಡನ್ನು ಬಿಡುಗಡೆ ಮಾಡಿದ್ದು ನಿಜಕ್ಕೂ ಹೆಮ್ಮೆ ಎಂದು ತಿಳಿಸಿದ ನಿರ್ದೇಶಕ ಕೆ.ಎಂ.ರಘು, ಪ್ರದೀಪ್ ಈಶ್ವರ್ ತಮ್ಮ “ಪರಿಶ್ರಮ” ಪುಸ್ತಕದಲ್ಲಿ ಬರೆದುಕೊಂಡಿರುವ ಜೀವನದ ಕುರಿತಾದ ನಾಲ್ಕು ಅರ್ಥಗರ್ಭಿತ ಸಾಲುಗಳನ್ನು ವಾಚಿಸಿದರು.

ಪ್ರದೀಪ್ ಈಶ್ವರ್ ಹಾಗೂ ವಿಶ್ವೇಶ್ವರ ಭಟ್ ಅವರು ನಮ್ಮ ಚಿತ್ರದ ಹಾಡನ್ನು ಬಿಡುಗಡೆ ಮಾಡಿ ಹಾರೈಸಿದ್ದಾರೆ ಅವರಿಗೆ ಹಾಗೂ ನನ್ನ ಚಿತ್ರತಂಡಕ್ಕೆ ಧನ್ಯವಾದ ಎಂದರು ನಿರ್ಮಾಪಕ ಕೆ.ವಿ.ಶಶಿಧರ್.

ನಮ್ಮ ದೇಶದ ಅತೀ ಹೆಚ್ಚು ಶ್ರೀಮಂತರೆಲ್ಲಾ “ಜಸ್ಟ್ ಪಾಸ್” ಹಾಗೂ ಅದಕ್ಕಿಂತ ಸ್ವಲ್ಪ ಹೆಚ್ಚು ಅಂಕ ಪಡೆದಿರುವವರೆ ಎಂದು ಮಾತನಾಡಿದ ವಿಶ್ವೇಶ್ವರ ಭಟ್ ಅವರು ಚಿತ್ರದ ಹಾಡುಗಳು ತುಂಬಾ ಚೆನ್ನಾಗಿದೆ. ಚಿತ್ರದ ಹೆಸರು “ಜಸ್ಟ್ ಪಾಸ್” ಅಷ್ಟೇ. ಆದರೆ ಗಳಿಕೆಯಲ್ಲಿ “ಫಸ್ಟ್ ಕ್ಲಾಸ್” ಆಗಲಿ ಎಂದು ಹಾರೈಸಿದರು.

ನಿಜವಾಗಲೂ ನಮ್ಮ ದೇಶದಲ್ಲಿ ಏನಾದರೂ ಸಾಧನೆ ಮಾಡಲು ಸಾಧ್ಯ ಎಂದರೆ ಅದು “ಜಸ್ಟ್ ಪಾಸ್” ಆದರಿಂದ ಮಾತ್ರ. ಉದಾಹರಣೆಗೆ ನಾನೇ. ಜೀವನದಲ್ಲಿ ಸಾಕಷ್ಟು ಕಷ್ಟಪಟ್ಟ ನಾನು, ಇಂದು “ಪರಿಶ್ರಮ” ಅಕಾಡೆಮಿ ಸ್ಥಾಪಿಸಿ ಐನ್ನೂರಕ್ಕೂ ಹೆಚ್ಚು ಜನರಿಗೆ ಕೆಲಸ ನೀಡಿದ್ದೇನೆ. ವರ್ಷಕ್ಕೆ ಸಾಕಷ್ಟು ವಿದ್ಯಾರ್ಥಿಗಳು ನಮ್ಮ ಸಂಸ್ಥೆಯಿಂದ ವೈದ್ಯರಾಗುತ್ತಿದ್ದಾರೆ. ಹಾಗಂತ ನೀವು rank ಬರಬೇಡಿ ಎಂದು ಹೇಳುತ್ತಿಲ್ಲ. ಆದರೆ “ಜಸ್ಟ್ ಪಾಸ್” ಆದೆ ಅಂತ ಬೇಜಾರು ಮಾಡಿಕೊಳ್ಳಬೇಡಿ. ನನಗೆ ತಿಳಿದ ಹಾಗೆ ಈ ಚಿತ್ರದ ಕಥೆಯೂ ಇದೇ ರೀತಿ ಇರಬಹುದು. “ಜಸ್ಟ್ ಪಾಸ್” ಚಿತ್ರ ಚೆನ್ನಾಗಿ ಓಡಲಿ ಎಂದು ಶಾಸಕ ಪ್ರದೀಪ್ ಈಶ್ವರ್ ತಮ್ಮದೇ ಮಾತಿನ ಶೈಲಿಯಲ್ಲಿ ಚಿತ್ರತಂಡಕ್ಕೆ ಶುಭ ಕೋರಿದರು ‌.

ನಾಯಕ ಶ್ರೀ, ನಾಯಕಿ ಪ್ರಣತಿ, ನಟ ಸುಚೇಂದ್ರ ಪ್ರಸಾದ್, ಸಂಗೀತ ನಿರ್ದೇಶಕ ಹರ್ಷವರ್ಧನ್ ರಾಜ್, ಛಾಯಾಗ್ರಾಹಕ ಸುಜಯ್ ಕುಮಾರ್ ಮುಂತಾದ ಚಿತ್ರತಂಡದ ಸದಸ್ಯರು “ಜಸ್ಟ್ ಪಾಸ್” ಬಗ್ಗೆ ಮಾತನಾಡಿದರು.

error: Content is protected !!