ಖುಷಿಯ ಬರ್ತ್ ಡೇಗೆ ಸಖತ್ ಪೋಸ್ಟರ್ ಬಂತು: ಫುಲ್ ಮೀಲ್ಸ್ ಶೂಟಿಂಗ್ ಮುಗೀತು ; ಪುಲ್ ರೀಲ್ಸ್ ನೋಡೋದಷ್ಟೆ ಬಾಕಿ

ನಟ ಲಿಖಿತ್ ಶೆಟ್ಟಿ ನಟಿಸಿ ನಿರ್ಮಿಸುತ್ತಿರುವ ಫುಲ್ ಮೀಲ್ಸ್ ಚಿತ್ರದ ನಾಯಕಿ ಖುಷಿ ರವಿ ಹುಟ್ಟು ಹಬ್ಬದ ಅಂಗವಾಗಿ ಚಿತ್ರತಂಡ ಬರ್ತ್ ಡೇ ಫೋಸ್ಟರ್ ಅನ್ನು ಬಿಡುಗಡೆ ಮಾಡಿದೆ. ಇತ್ತೀಚೆಗಷ್ಟೇ ಚಿತ್ರೀಕರಣ ಮುಗಿಸಿ, ಕುಂಬಳಕಾಯಿ ಶಾಸ್ತ್ರ ಮುಗಿಸಿದ ಚಿತ್ರತಂಡ, ಚಿತ್ರೀಕರಣದ ಕೊನೆಯ ದಿನ, ಖುಷಿ ರವಿ ಅವರನ್ನು ನೆನಪಿಸಿಕೊಂಡ ತಕ್ಷಣ ಯಾವ ತಿನ್ನುವ ಪದಾರ್ಥ ನೆನಪಾಗುತ್ತದೆ ಎಂಬ ವಿಭಿನ್ನ ಪ್ರಶ್ನೆಗೆ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿ, ಆ ವೀಡಿಯೋವನ್ನು ಖುಷಿ ರವಿ ಅವರಿಗೆ ಉಡುಗೊರೆಯಾಗಿ ನೀಡಿದ್ದಾರೆ.

ಚಿತ್ರದ ಮತ್ತೋರ್ವ ನಾಯಕಿ ತೇಜಸ್ವಿನಿ ಶರ್ಮ ಈ ವೀಡಿಯೋದ ರುವಾರಿಯಾಗಿದ್ದು, ತನ್ನ ಸಹನಟಿ ಮತ್ತು ಸ್ನೇಹಿತೆಗೆ ಹುಟ್ಟು ಹಬ್ಬಕ್ಕೆ ವಿಶೇಷ ಉಡುಗೊರೆ ನೀಡಿದ್ದಾರೆ. ವೆಡ್ಡಿಂಗ್ ಫೋಟೋಗ್ರಾಫರ್ ಸುತ್ತ ಸುತ್ತುವ ಕಥಾ ಹಂದರವನ್ನು ಹೊಂದಿರುವ ‘ಫುಲ್ ಮೀಲ್ಸ್’ ನಲ್ಲಿ ಖುಷಿ ರವಿ ‘ಪೂಜಾ’ ಹೆಸರಿನ ಪಾತ್ರ ನಿರ್ವಹಿಸುತ್ತಿದ್ದು, ಇದುವರೆಗಿನ ಅವರ ಎಲ್ಲಾ ಪಾತ್ರಗಳಿಗಿಂತ ವಿಭಿನ್ನ ರೀತಿಯ ಪಾತ್ರ ಇದಾಗಿದ್ದು, ಜನರು ಪಾತ್ರವನ್ನು ಖಂಡಿತ ಇಷ್ಟಪಡುತ್ತಾರೆಂಬ ವಿಶ್ವಾಸವನ್ನು ಹೊಂದಿದ್ದಾರೆ. ಯುವ ಪ್ರತಿಭೆ ಎನ್. ವಿನಾಯಕ ಚಿತ್ರದ ಮೂಲಕ ಮೊದಲ ಬಾರಿಗೆ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ.

ಹರೀಶ್ ಗೌಡ ಸಂಭಾಷಣೆ ಬರೆದಿದ್ದು, ಮನೋಹರ್ ಜೋಷಿ ಛಾಯಾಗ್ರಹಣ, ಗುರು ಕಿರಣ್ ಸಂಗೀತ, ದೀಪು ಎಸ್ ಕುಮಾರ್ ಸಂಕಲನ ಚಿತ್ರಕ್ಕಿದೆ. ಉಳಿದಂತೆ ತಾರಾಗಣದಲ್ಲಿ ರಂಗಾಯಣ ರಘು, ವಿಜಯ್ ಚಂಡೂರ್, ರವಿ ಶಂಕರ್ ಗೌಡ, ರಾಜೇಶ್ ನಟರಂಗ, ಸುಜಯ್ ಶಾಸ್ತ್ರಿ, ಚಂದ್ರಕಲಾ ಮೋಹನ್, ಸೂರಜ್ ಲೋಕ್ರೆ, ಹೂನ್ನವಳ್ಳಿ ಕೃಷ್ಣ, ರಮೇಶ್ ಪಂಡಿತ್, ನಾಗೇಂದ್ರ ಅರಸ್, ಮೂಗು ಸುರೇಶ್ ಸೇರಿದಂತೆ ದೊಡ್ಡ ತಾರಾ ಬಳಗವೇ ಇದೆ. ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಆದಷ್ಟು ಬೇಗ ಮುಗಿಸಿ, ಶೀಘ್ರದಲ್ಲೇ ಚಿತ್ರವನ್ನು ತೆರೆಗೆ ತರುವ ಉತ್ಸಾಹದಲ್ಲಿ ಚಿತ್ರತಂಡವಿದೆ.

Related Posts

error: Content is protected !!