Categories
ಸಿನಿ ಸುದ್ದಿ

ಛೂ ಮಂತರ್ ರಿಲೀಸ್ ಗೆ ರೆಡಿ: ಜನವರಿ 10ಕ್ಕೆ ತೆರೆಗೆ

ತರುಣ್ ಸ್ಟುಡಿಯೋಸ್ ಲಾಂಛನದಲ್ಲಿ ತರುಣ್ ಶಿವಪ್ಪ ಹಾಗೂ ಮಾನಸ ತರುಣ್ ನಿರ್ಮಿಸಿರುವ, “ಕರ್ವ”‌ ಖ್ಯಾತಿಯ ನವನೀತ್ ನಿರ್ದೇಶನದಲ್ಲಿ ಶರಣ್ ನಾಯಕರಾಗಿ ನಟಿಸಿರುವ ಬಹು ನಿರೀಕ್ಷಿತ “ಛೂ ಮಂತರ್” ಚಿತ್ರ ಹೊಸವರ್ಷದ ಆರಂಭದಲ್ಲಿ ಹಾಗೂ ಸಂಕ್ರಾಂತಿ ಸಮೀಪದಲ್ಲಿ ಅಂದರೆ ಜನವರಿ 10 ರಂದು ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಸಂಕ್ರಾಂತಿ ಸಮಯದಲ್ಲಿ ತೆಲುಗು, ತಮಿಳಿನ‌ ದೊಡ್ಡದೊಡ್ಡ ಚಿತ್ರಗಳು ಬಿಡುಗಡೆಯಾಗುತ್ತಿದ್ದವು. ಆದರೆ ಕನ್ನಡದಲ್ಲಿ ಯಾವುದೇ ಚಿತ್ರಗಳು ಸಂಕ್ರಾಂತಿ ಸಮಯದಲ್ಲಿ ಇತ್ತೀಚಿನ ವರ್ಷಗಳಲ್ಲಿ ಬಿಡುಗಡೆಯಾಗಿಲ್ಲ. ಬಹಳ ವರ್ಷಗಳ ನಂತರ ಕನ್ನಡದ “ಛೂ ಮಂತರ್” ಚಿತ್ರವನ್ನು ಸಂಕ್ರಾಂತಿ ಸಮಯಕ್ಕೆ ನಿರ್ಮಾಪಕ ತರುಣ್ ಶಿವಪ್ಪ ಬಿಡುಗಡೆ ಮಾಡುತ್ತಿದ್ದಾರೆ.

ಟೀಸರ್ ಬಿಡುಗಡೆ ಹಾಗೂ ಚಿತ್ರದ ದಿನಾಂಕ ಘೋಷಣೆ ಮಾಡಲು ಆಯೋಜಿಸಲಾಗಿದ್ದ ಸಮಾರಂಭಕ್ಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಎನ್‌ ಎಂ ಸುರೇಶ್, ನಿರ್ಮಾಪಕ ಕೆ.ಮಂಜು ಸೇರಿದಂತೆ ಅನೇಕ ಗಣ್ಯರು ಆಗಮಿಸಿ ಶುಭ ಕೋರಿದರು. ಆನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.

ಇಡೀ ಚಿತ್ರತಂಡದ ಪರಿಶ್ರಮದಿಂದ “ಛೂ ಮಂತರ್” ಉತ್ತಮವಾಗಿ ಬಂದಿದೆ. ಬಹು ನಿರೀಕ್ಷಿತ ಈ ಚಿತ್ರ ಜನವರಿ 10 ರಂದು ಬಿಡುಗಡೆಯಾಗಲಿದೆ. ನಮ್ಮ ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದು ನಿರ್ಮಾಪಕ ತರುಣ್ ಶಿವಪ್ಪ ತಿಳಿಸಿದರು.

ಇದೊಂದು ಡಾರ್ಕ್ ಹ್ಯೂಮರ್ ಜಾನರ್ ನ ಹಾರಾರ್ ಚಿತ್ರ. ಉತ್ತರ ಕಾಂಡ, ಶ್ರೀಲಂಕ, ಮೈಸೂರು, ಬೆಂಗಳೂರು ಮುಂತಾದ ಕಡೆ ಅರವತ್ತು ದಿನಗಳ ಚಿತ್ರೀಕರಣ ಮಾಡಿದ್ದೇವೆ. ಬೆಂಗಳೂರಿನಲ್ಲಿ ಎರಡು ಕೋಟಿ ರೂಪಾಯಿ ವೆಚ್ಚದಲ್ಲಿ ಹಾಕಲಾಗಿದ್ದ ಅದ್ದೂರಿ ಸೆಟ್ ನಲ್ಲೇ ಹೆಚ್ಚಿನ ಚಿತ್ರೀಕರಣ ನಡೆದಿದೆ. ರವಿವರ್ಮ ಸಾಹಸ ನಿರ್ದೇಶನ‌ ಮಾಡಿದ್ದಾರೆ. ಅನೂಪ್ ಅವರ ಛಾಯಾಗ್ರಹಣ ಹಾಗೂ ಶರಣ್ ಅವರು ಸೇರಿದಂತೆ ಎಲ್ಲಾ ಕಲಾವಿದರ ಅಭಿನಯ ಅದ್ಭುತವಾಗಿದೆ ಎಂದರು ನಿರ್ದೇಶಕ ನವನೀತ್.

ತರುಣ್ ಸುಧೀರ್ ಈ ಚಿತ್ರಕ್ಕೆ ಓಂಕಾರ ಹಾಕಿದರು. ದರ್ಶನ್ ಅವರು ಶೀರ್ಷಿಕೆ ನೀಡಿದರು. ಅಲ್ಲಿಂದ ಚಿತ್ರದ ಜರ್ನಿ ಆರಂಭವಾಯಿತು. ನವನೀತ್ ಅವರ ನಿರ್ದೇಶನದ ಈ ಚಿತ್ರವನ್ನು ತರುಣ್ ಹಾಗೂ ಮಾನಸ ತರುಣ್ ಅವರು ಅದ್ದೂರಿಯಾಗಿ‌ ನಿರ್ಮಾಣ‌ ಮಾಡಿದ್ದಾರೆ.‌ ಸುಮಾರು ವರ್ಷಗಳಿಂದ ಸಾಮಾನ್ಯವಾಗಿ ಸಂಕ್ರಾಂತಿ ಸಮಯಕ್ಕೆ ಕನ್ನಡ ಚಿತ್ರಗಳನ್ನು ಬಿಡುಗಡೆ‌ ಮಾಡುತ್ತಿರಲಿಲ್ಲ. ಆದರೆ ತರುಣ್ ಅವರು ಸಂಕ್ರಾಂತಿ ಸಮಯಕ್ಕೆ ಚಿತ್ರ ಬಿಡುಗಡೆ‌ ಮಾಡುತ್ತಿದ್ದಾರೆ. ಉತ್ತಮ‌ ಕಥಾಹಂದರ ಹೊಂದಿರುವ ಈ ಚಿತ್ರ ಗೆದ್ದೇ ಗೆಲ್ಲುತ್ತದೆ ಎಂಬ ನಂಬಿಕೆ ನನ್ನದು ಹಾಗೂ ಚಿತ್ರತಂಡದು. ಮುಂದೆ ಇದೇ ದಿನಾಂಕದಲ್ಲಿ ತಮ್ಮ ಚಿತ್ರವನ್ನು ಬಿಡುಗಡೆ ಮಾಡೋಣ ಎನ್ನುವಷ್ಟು ಈ ಚಿತ್ರ ಯಶಸ್ವಿಯಾಗಲಿ ಎಂದರು ನಾಯಕ ಶರಣ್.

ನಾನು ನಾಯಕನಾಗಿ ನಟಿಸಿದ್ದ‌ ಹಾಗೂ ನನ್ನ ಮತ್ತು ಶರಣ್ ಅವರ ಕಾಂಬಿನೇಶನ್ ನಲ್ಲಿ ಮೂಡಿ ಬಂದಿದ್ದ “ಉಪಾಧ್ಯಕ್ಷ” ಕಳೆದ ಜನವರಿಯಲ್ಲಿ ಬಿಡುಗಡೆಯಾಗಿತ್ತು. ಈ ಜನವರಿಯಲ್ಲಿ ನಮ್ಮಿಬ್ಬರ ಕಾಂಬಿನೇಶ್ ನಲ್ಲಿ ಬಂದಿರುವ ಈ ಚಿತ್ರ ಬಿಡುಗಡೆಯಾಗುತ್ತಿದೆ. ಆದರೆ ಈ ಚಿತ್ರ ನಮ್ಮಿಬ್ಬರ ಹಿಂದಿನ ಚಿತ್ರಗಳಿಗಿಂತ ವಿಭಿನ್ನ ಎಂದು ನಟ ಚಿಕ್ಕಣ್ಣ ತಿಳಿಸಿದರು.

ಶರಣ್ ಅವರ ಜೊತೆಗೆ ನಟಿಸಬೇಕೆಂಬ ಆಸೆ ಈ ಚಿತ್ರದ ಮೂಲಕ‌ ಈಡೇರಿದೆ ಎಂದು ನಟಿ ಮೇಘನಾ‌ ಗಾಂವ್ಕರ್ ತಿಳಿಸಿದರು. ಉತ್ತಮ ತಂಡದೊಂದಿಗೆ ಕೆಲಸ ಮಾಡಿದ್ದು ಖುಷಿಯಾಗಿದೆ ಎಂದು ನಟಿ ಅದಿತಿ ಪ್ರಭುದೇವ ಹೇಳಿದರು. ಚಿತ್ರದಲ್ಲಿ ಅಭಿನಯಿಸಿರುವ ಪ್ರಭು ಮುಂಡ್ಕರ್, ದಿಲೀಪ್‌ ರಾಜ್, ಧರ್ಮ, ನರಸಿಂಹ ಜಾಲಹಳ್ಳಿ, ರಜನಿ ಭಾರದ್ವಾಜ್ ಸಹ ತಮ್ಮ ಪಾತ್ರದ ಬಗ್ಗೆ ಮಾತನಾಡಿದರು. ನಿರಂಜನ್ ಅವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Categories
ಸಿನಿ ಸುದ್ದಿ

ಪುಣ್ಯಪಾದಕ್ಕೆ ಸಾಥ್ ಕೊಟ್ಟ ಶ್ರೀಮುರಳಿ: ಈ ಪಾದ ಪುಣ್ಯಪಾದ ಫಸ್ಟ್ ಲುಕ್ ರಿಲೀಸ್

ದಾರಿ ಯಾವುದಯ್ಯ ವೈಕುಂಠಕ್ಕೆ ಚಿತ್ರದ
ಖ್ಯಾತಿಯ ನಿರ್ದೇಶಕರಾದ ಸಿದ್ದು ಪೂರ್ಣಚಂದ್ರರವರು ಕಥೆ, ಚಿತ್ರಕಥೆ ಸಂಭಾಷಣೆ ಬರೆದು ನಿರ್ದೇಶನ ಮಾಡಿರುವ ಮತ್ತೊಂದು ಚಿತ್ರ”ಈ ಪಾದ ಪುಣ್ಯಪಾದ”. ಇತ್ತೀಚಿಗೆ ಈ ಚಿತ್ರದ ಮೊದಲ ಪೋಸ್ಟರ್ ಅನ್ನು ರೋರಿಂಗ್ ಸ್ಟಾರ್ ಶ್ರೀ ಮುರಳಿ ಅವರು ಬಿಡುಗಡೆ ಮಾಡಿ ಇಡೀ ತಂಡಕ್ಕೆ ಶುಭ ಹಾರೈಸಿದರು.

ಇದೊಂದು ಆನೆ ಕಾಲು ರೋಗಿಯ ಕಥೆಯಾಧಾರಿತ ಚಿತ್ರವಾಗಿರುವುದರಿಂದ ಪ್ರತಿಯೊಬ್ಬ ಪ್ರೇಕ್ಷಕನಿಗೂ ಕೂಡ ಹೊಸ ಆಯಾಮದಲ್ಲಿ ಈ ಚಿತ್ರ ಪರಿಣಾಮ ಬೀರಬಹುದು ಎಂಬುದು ನಿರ್ದೇಶಕರ ಆಶಯ. ಪ್ರತಿಯೊಬ್ಬ ಮನುಷ್ಯನಿಗೂ ಒಂದಲ್ಲ ಒಂದು ರೀತಿಯ ಖಾಯಿಲೆಗಳು ಸಂಭವಿಸಿದಾಗ ಆ ರೋಗಕ್ಕಿಂತ ಮಾನಸಿಕವಾಗಿಯೇ ಯಾತನೆ ಪಡುವುದು ಜಾಸ್ತಿ ಆಗಿರುತ್ತದೆ. ಯಾವುದೇ ರೋಗ ಬಂದರೂ ಕೂಡ ನಾವು ಎದೆಗುಂದದೆ ತಾಳ್ಮೆಯಿಂದ ಅದನ್ನು ಎದುರಿಸಬೇಕು ಎಂಬುದೇ ಈ ಚಿತ್ರದ ಕಥೆಯಾಗಿದೆ.

ಈ ಕಥೆಯನ್ನು ಹಲವು ವರ್ಷಗಳಿಂದ ಅಧ್ಯಯನ ಮಾಡಿ ಒಂದು ಚಿತ್ರಕಥೆಯ ರೂಪು ರೇಷೆಗಳನ್ನು ಸಿದ್ಧಪಡಿಸಿ ಆನಂತರ ಇದನ್ನು ಚಿತ್ರವಾಗಿಸಿದ್ದಾರೆ. ಯಾವುದೇ ರೋಗ ಬಂದಿರುವ ವ್ಯಕ್ತಿಯನ್ನು ಯಾವ ರೀತಿ ಪ್ರೀತಿಯಿಂದ ನೋಡಿಕೊಳ್ಳಬೇಕು, ಸಾಂತ್ವನ ಹೇಳಬೇಕು ಎಂಬುದು ಈ ಚಿತ್ರದ ಮುಖಾಂತರ ಕಾಣಿಸುತ್ತದೆ. ಜೊತೆಗೆ ಸಾಮಾಜಿಕ ಪರಿಣಾಮ ಬೀರುವಂತಹ ಚಿತ್ರಗಳು ಇತ್ತೀಚೆಗೆ ಕಡಿಮೆಯಾಗಿರುವುದರಿಂದ ಇಂತಹ ಚಿತ್ರಕ್ಕೆ ಪ್ರೋತ್ಸಾಹ ಕೊಡಬೇಕೆಂಬುದು ಇಡೀ ಚಿತ್ರತಂಡದ ಆಶಯ ಆಗಿದೆ.

ಆ ಕಾರಣಕ್ಕಾಗಿಯೇ ಶ್ರೀಮುರಳಿ ಅವರು ಈ ನಿಟ್ಟಿನಲ್ಲಾದರೂ ಹೊಸಬರಿಗೆ ಪ್ರೋತ್ಸಾಹ ನೀಡಬೇಕು ಹೊಸಬರಿಗೆ ದಾರಿಯಾಗಬೇಕು
ಹಾಗಾಗಿ ನಾನು ಈ ಚಿತ್ರದ ಪೋಸ್ಟರ್ ಅನ್ನು ಬಿಡುಗಡೆಗೊಳಿಸುತ್ತಾ ಇದ್ದೀನಿ. ನೀವು ಕೂಡ ಈ ಚಿತ್ರವನ್ನು ನೋಡಬೇಕು ಅನ್ನುವ ಅವರ ಮನದಾಳದ ಮಾತುಗಳನ್ನು ಹಂಚಿಕೊಂಡರು.

ಈ ಚಿತ್ರಕ್ಕೆ ನಾಯಕ ನಟರಾಗಿ ಆಟೋ ನಾಗರಾಜ್ ರವರು ಈ ಪಾತ್ರವನ್ನು ನಿಭಾಯಿಸಿದ್ದಾರೆ. ಈ ಹಿಂದೆ ಅವರು ಆಟೋ ಪ್ರಮೋಷನ್ ಅನ್ನು ಕಳೆದ 18 ವರ್ಷಗಳಿಂದಲೂ ಮಾಡಿದಂತವರು, ಅವರು ಮೊದಲ ಬಾರಿಗೆ ನಾಯಕ ನಟರಾಗಿ ಈ ಪಾತ್ರವನ್ನು ನಿರ್ವಹಿಸಿದ್ದಾರೆ. ನಂತರ ರಶ್ಮಿ, ಚೈತ್ರ, ಪ್ರಮೀಳಾ ಸುಬ್ರಹ್ಮಣ್ಯ, ಮನೋಜ್, ಹರೀಶ್ ಕುಂದೂರು, ಬೇಬಿ ರಿದಿ, ಪವಿತ್ರ, ಬಾಲರಾಜ್ ವಾಡಿ, ರೋಹಿಣಿ, ಶಂಕರ್ ಭಟ್, ಪ್ರೀತಿ, ಮೀಸೆ ಮೂರ್ತಿ ಇನ್ನೂ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.

ಈ ಚಿತ್ರಕ್ಕೆ ಸಂಗೀತ ಮತ್ತು ಹಿನ್ನೆಲೆ ಸಂಗೀತವನ್ನು ಅನಂತ ಆರ್ಯನ್ ರವರು ನೀಡಿದ್ದಾರೆ. ಕಲೆ ಬಸವರಾಜ್ ಆಚಾರ್, ವಸ್ತ್ರಲಂಕಾರ ನಾಗರತ್ನ ಕೆ ಎಚ್, ಶಬ್ದ ವಿನ್ಯಾಸ ಶ್ರೀರಾಮ್, ಕಲರಿಂಗ್ ಗಗನ್ ಆರ್, ಸಂಕಲನ ದೀಪು ಸಿ ಎಸ್ ನಿರ್ವಹಿಸಿದ್ದಾರೆ. ಈ ಚಿತ್ರ ಈಗಾಗಲೇ ಸೆನ್ಸಾರ್ ಮಂಡಳಿಯಿಂದ ಯು ಸರ್ಟಿಫಿಕೇಟ್ ಪಡೆದಿದೆ. ಈ ಚಿತ್ರವು ಹಲವಾರು ಚಲನಚಿತ್ರೋತ್ಸವಗಳಿಗೆ ಸ್ಪರ್ಧಿಸಲು ರೆಡಿಯಾಗಿದೆ.

Categories
ಸಿನಿ ಸುದ್ದಿ

ಗೀತಾ ಪಿಕ್ಚರ್ಸ್‌ 4ನೇ ಪ್ರೊಡಕ್ಷನ್ ಘೋಷಣೆ : ಹೀರೋ ಧೀರನ್ ರಾಮ್‌ಕುಮಾರ್

ಈ ವರ್ಷದ ಬ್ಲಾಕ್‌ಬಸ್ಟರ್ ಭೈರತಿ ರಣಗಲ್ ಯಶಸ್ಸಿನ ನಂತರ, ಗೀತಾ ಪಿಕ್ಚರ್ಸ್‌ ಮತ್ತೊಂದು ಹ್ಯಾಟ್ರಿಕ್‌ ಘೋಷಣೆಗೆ ಸಿದ್ಧವಾಗಿದೆ! ನವೆಂಬರ್ 14ರಂದು A For Anand, ಡಾ. ಶಿವರಾಜ್‌ಕುಮಾರ್‌ ಅವರ ಹೊಸ ಚಿತ್ರವನ್ನು ಘೋಷಿಸಿದ ಈ ಬ್ಯಾನರ್, ಡಾ. ಪರ್ವತಮ್ಮ ರಾಜಕುಮಾರ್‌ ಅವರ ಜನ್ಮದಿನದ ನಿಮಿತ್ತ ತಮ್ಮ 4ನೇ ಚಿತ್ರವನ್ನು ಇಂದು ಪ್ರಕಟಿಸಿದೆ.

ಈ ಹೊಸ ಚಿತ್ರದಲ್ಲಿ ಧೀರನ್ ರಾಮ್‌ಕುಮಾರ್‌ ನಾಯಕನಾಗಿ ನಟಿಸಲಿದ್ದಾರೆ. ಈ ಚಿತ್ರವನ್ನು ಶಾಖಾಹಾರಿ ಚಿತ್ರದ ಡೈರೆಕ್ಟರ್ ಸಂದೀಪ್ ಸುಂಕದ ಅವರ ನಿರ್ದೇಶನದಲ್ಲಿ ಮಾಡಲಾಗುತ್ತಿದೆ. ಗೀತಾ ಪಿಕ್ಚರ್ಸ್ ಈ ಹಿಂದೆ ಹೊಸ ಪ್ರತಿಭೆಗಳನ್ನು ಬೆಳೆಸಲು ಇಚ್ಛೆ ವ್ಯಕ್ತಪಡಿಸಿದ್ದನ್ನು ನಾವು ಕೇಳಿದ್ದೇವೆ. ಈ ಚಿತ್ರ, ಶಿವಣ್ಣನ ಹೊರತಾದ ಬೇರೆ ನಾಯಕನನ್ನು ಕಾಸ್ಟ್ ಮಾಡುವ ಮೊದಲ ಪ್ರಯತ್ನವಾಗಿದೆ.

ಡೈರೆಕ್ಟರ್ ಸಂದೀಪ್ ಸುಂಕದ ಅವರ ಮಾತುಗಳು:
“ಕೊನೆ ಕೆಲ ತಿಂಗಳುಗಳಿಂದ ಕಥೆಯ ಚರ್ಚೆ ನಡೆಯುತ್ತಿತ್ತು. ಕಥೆಯನ್ನು ಶಿವಣ್ಣ ಮತ್ತು ಗೀತಾ ಶಿವರಾಜಕುಮಾರ್ ಅವರಿಗೆ ಹೇಳಿದಾಗ, ಅವ್ರಿಗೆ ತುಂಬಾ ಇಷ್ಟವಾಯಿತು. ಕೇವಲ ಕೆಲ ದಿನಗಳಲ್ಲೇ ಅವರು ಈ ಚಿತ್ರವನ್ನು ನಿರ್ಮಿಸಲು ಮುಂದಾದರು. ಇಂಥಾ ದೊಡ್ಡ ಬ್ಯಾನರ್‌ ಜೊತೆ ಎಷ್ಟೋ ಡೈರೆಕ್ಟರ್‌ಗಳಿಗೆ ಕೆಲಸ ಮಾಡುವ ಆಸೆಯಿರುತ್ತದೆ. ನನ್ನ ಎರಡನೇ ಸಿನಿಮಾಗೆ ಈ ಅವಕಾಶ ಸಿಕ್ಕಿದ್ದಕ್ಕೆ ನಾನು ಎಷ್ಟು ಸಂತೋಷ ಪಡುತ್ತೇನೆ ಎಂಬುದು ಹೇಳಲು ಪದಗಳೇ ಸಾಕಾಗಲ್ಲ.”

ಧೀರನ್ ರಾಮ್‌ಕುಮಾರ್‌ ಅವರ ಉತ್ಸಾಹಭರಿತ ಪ್ರತಿಕ್ರಿಯೆ:
“ನನ್ನ ಡೆಬ್ಯೂ ನಂತರ, ನನಗೆ ನನ್ನ ಪರ್ಫಾರ್ಮೆನ್ಸ್‌ ಆಧರಿಸಿಕೊಳ್ಳುವ ಚಿತ್ರ ಬೇಕೆಂಬ ಕನಸು ಇತ್ತು. ಹಲವಾರು ಆಫರ್‌ಗಳು ಬಂದರೂ, ನಾನು ಧೈರ್ಯವಾಗಿ ನಿರಾಕರಿಸಿ, ನನ್ನ ಮೇಲೆ ಕೆಲಸ ಮಾಡಲು ಸಮಯ ತೆಗೆದುಕೊಂಡೆ. ನನ್ನ ಎರಡನೇ ಸಿನಿಮಾ ನನ್ನ ಪಾತ್ರಕರ್ತೃತೆಯನ್ನು ತೋರಿಸುವ ಅವಕಾಶವಾಗಬೇಕು ಅನ್ನೋ ಆಸೆ ಇತ್ತು. ಸಂದೀಪ್ ಸರ್‌ ಕಥೆಯನ್ನು ಹೇಳಿದಾಗ, ತುಂಬಾ ಸಂತಸವಾಯ್ತು. ಶಾಖಾಹಾರಿ ಕರ್ನಾಟಕದಲ್ಲಿ ಮಾತ್ರವಲ್ಲದೆ ಹೊರ ರಾಜ್ಯಗಳಲ್ಲಿ OTT ಮೂಲಕ ದೊಡ್ಡ ಹೆಸರು ಮಾಡಿತ್ತು. ಇಂಥಾ ತಂಡದ ಜೊತೆಗೆ ಕೆಲಸ ಮಾಡುವುದು ನನಗೆ ಸಂತೋಷ.”

ಚಿತ್ರದ ಶೈಲಿ ಮತ್ತು ತಾಂತ್ರಿಕ ತಂಡದ ವಿವರಗಳನ್ನು ಇನ್ನೂ ಬಹಿರಂಗಪಡಿಸಿಲ್ಲ, ಆದರೆ ಚಿತ್ರೀಕರಣ ಶೀಘ್ರದಲ್ಲೇ ಪ್ರಾರಂಭವಾಗಲಿದೆ.

Categories
ಸಿನಿ ಸುದ್ದಿ

ಕುಡುಬಿ ಜನರ ಕಥಾನಕ ಚಿತ್ರ ಗುಂಮ್ಟಿ ಈ ವಾರ ರಿಲೀಸ್

ಈಗಾಗಲೇ ತನ್ನ ಶೀರ್ಷಿಕೆ, ಕಥಾಹಂದರದ ಮತ್ತು ಟ್ರೇಲರ್ ಮೂಲಕ ಸಿನಿಪ್ರಿಯರ ಗಮನ ಸೆಳೆಯಲು ಯಶಸ್ವಿಯಾಗಿರುವ ‘ಗುಂಮ್ಟಿ’ ಚಿತ್ರ ಈ ವಾರ (ಡಿ. 06, ಶುಕ್ರವಾರ) ರಾಜ್ಯಾದ್ಯಂತ ತೆರೆಗೆ ಬರುತ್ತಿದೆ.

‘ತಸ್ಮೈ ಪ್ರೊಡಕ್ಷನ್ಸ್’ ಮತ್ತು ‘ಜ್ಯೋತಿ ಪ್ರೊಡಕ್ಷನ್ಸ್’ ಬ್ಯಾನರಿನಲ್ಲಿ ಜಂಟಿಯಾಗಿ ನಿರ್ಮಾಣವಾಗುತ್ತಿರುವ ‘ಗುಂಮ್ಟಿ’ ಸಿನಿಮಾವನ್ನು ವಿಕಾಸ್ ಎಸ್. ಶೆಟ್ಟಿ ನಿರ್ಮಿಸುತ್ತಿದ್ದಾರೆ. ‘ಗುಂಮ್ಟಿ’ ಚಿತ್ರಕ್ಕೆ ಅನೀಶ್ ಡಿಸೋಜಾ ಛಾಯಾಗ್ರಹಣ, ಶಿವರಾಜ ಮೇಹು ಸಂಕಲನವಿದೆ. ‘ಗುಂಮ್ಟಿ’ ಸಿನೆಮಾದ ಹಾಡಿಗೆ ಡೊಂಡಿ ಮೋಹನ್ ಸಾಹಿತ್ಯ ರಚಿಸಿ, ಸಂಗೀತ ಸಂಯೋಜಿಸಿದ್ದಾರೆ.

ಈಗಾಗಲೇ ಕನ್ನಡ ಚಿತ್ರರಂಗದಲ್ಲಿ ‘ಕತ್ತಲೆ ಕೋಣೆ’ ಮತ್ತು ‘ಇನಾಮ್ದಾರ್’ ಸಿನೆಮಾಗಳನ್ನು ನಿರ್ದೇಶಿಸಿ ಕಂಟೆಂಟ್ ಸಿನೆಮಾ ನಿರ್ದೇಶಕರ ಸಾಲಿನಲ್ಲಿ ಗುರುತಿಸಿಕೊಂಡಿರುವ ನಿರ್ದೇಶಕ ಸಂದೇಶದ ಶೆಟ್ಟಿ ಆಜ್ರಿ, ‘ಗುಂಮ್ಟಿ’ ಸಿನೆಮಾಕ್ಕೆ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್-ಕಟ್ ಹೇಳಿದ್ದು, ಜೊತೆಗೆ ತೆರೆಮೇಲೆ ನಾಯಕ ನಟನಾಗಿಯೂ ಕಾಣಿಸಿಕೊಂಡಿದ್ದಾರೆ.

‘ಗುಂಮ್ಟಿ’ ಸಿನೆಮಾದಲ್ಲಿ ವೈಷ್ಣವಿ ನಾಡಿಗ್ ನಾಯಕಿಯಾಗಿ ಮಲ್ಲಿ ಎಂಬ ಹೆಸರಿನ ಕುಡುಬಿ ಸಮುದಾಯದ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ರಂಜನ್ ಛತ್ರಪತಿ, ಕರಣ್ ಕುಂದರ್, ಯಶ್ ಆಚಾರ್ಯ, ಪ್ರಭಾಕರ ಕುಂದರ್, ರಘು ಪಾಂಡೇಶ್ವರ, ಚೇತನ ನೈಲಾಡಿ, ಚಿತ್ರಕಲಾ, ನೂರ್ ಅಹ್ಮದ್, ಸ್ವರಾಜ್ ಲಕ್ಷ್ಮಿ ಮತ್ತಿತರರು ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

‘ಕರ್ನಾಟಕದ ಕರಾವಳಿ ಪ್ರದೇಶವಾದ ಕುಂದಾಪುರದ ಸುತ್ತಮುತ್ತ ಕಂಡುಬರುವ ಜಾನಪದ ಕಲೆಯೊಂದನ್ನು ಈ ಸಿನೆಮಾದಲ್ಲಿ ತೆರೆಗೆ ತರುವ ಪ್ರಯತ್ನ ಮಾಡಿದ್ದೇವೆ. ನೈಜತೆಯಿಂದ ಸಿನೆಮಾ ಮೂಡಿಬಂದಿದ್ದು, ಎಲ್ಲರಿಗೂ ಈ ಸಿನೆಮಾದ ಕಥಾಹಂದರ ಇಷ್ಟವಾಗಲಿದೆ’ ಎಂಬ ವಿಶ್ವಾಸ ‘ಗುಂಮ್ಟಿ’ ಚಿತ್ರತಂಡದ್ದು.

‘ಇದೊಂದು ಕಲಾತ್ಮಕ ಸಿನೆಮಾವಾಗಿದ್ದು, ಕರ್ನಾಟಕದ ಕರಾವಳಿ ತೀರದ ಕುಡುಬಿ ಜನಾಂಗದ ಕಥೆಯನ್ನು ತೆರೆಮೇಲೆ ಹೇಳಲು ಹೊರಟಿದ್ದೇವೆೆ. ‘ಗುಂಮ್ಟಿ’ ಎಂಬುದು ಕುಡುಬಿ ಸಮುದಾಯಕ ಕಲಾಪ್ರಾಕಾರದ ಸಾಂಪ್ರದಾಯಿಕ ವಾದ್ಯವಾಗಿದ್ದು, ಅದನ್ನೇ ಸಿನೆಮಾದ ಟೈಟಲ್ ಆಗಿ ಇಟ್ಟುಕೊಂಡಿದ್ದೇವೆ. ಕುಡುಬಿ ಜನಾಂಗದ ಸಂಪ್ರದಾಯ, ಆಚಾರ-ವಿಚಾರ, ಬದುಕು ಮತ್ತು ಆಧುನಿಕತೆಯ ನಡುವಿನ ಸಂಘರ್ಷ ‘ಗುಂಮ್ಟಿ’ ಸಿನಿಮಾದಲ್ಲಿ ಅನಾವರಣವಾಗಲಿದೆ’ ಎಂಬುದು ಶೀರ್ಷಿಕೆ ಮತ್ತು ಕಥಾಹಂದರದ ಬಗ್ಗೆ ‘ಗುಂಮ್ಟಿ’ಯ ನಿರ್ದೇಶಕ ಕಂ ನಾಯಕ ನಟ ಸಂದೇಶ್ ಶೆಟ್ಟಿ ಆಜ್ರಿ ಅವರ ವಿವರಣೆ.

ಈಗಾಗಲೇ ಸಿನೆಮಾ ಬಿಡುಗಡೆಗೂ ಮೊದಲೇ ಎಲ್ಲ ಕಡೆಗಳಿಂದ ‘ಗುಂಮ್ಟಿ’ಗೆ ಉತ್ತಮ ಪ್ರತಿಕ್ರಿಯೆ ಬರುತ್ತಿದೆ. ಈಗಾಗಲೇ ಉಡುಪಿ ಜಿಲ್ಲೆಯ ಸುತ್ತಮುತ್ತಲ ಪ್ರದೇಶ ಸುಮಾರು 50ಕ್ಕೂ ಹೆಚ್ಚು ಪ್ರದರ್ಶನಗಳು ಮುಂಗಡವಾಗಿ ಬುಕ್ಕಿಂಗ್ ಆಗಿದೆ. ರಾಜ್ಯದಾದ್ಯಂತ ಸುಮಾರು 25ಕ್ಕೂ ಹೆಚ್ಚಿನ ಕಡೆಗಳಲ್ಲಿ ‘ಗುಂಮ್ಟಿ’ ಬಿಡುಗಡೆಯಾಗಿ ತೆರೆಗೆ ಬರುತ್ತಿದೆ.

ಇನ್ನು ‘ಗುಂಮ್ಟಿ’ ಸಿನೆಮಾವನ್ನು ಉಡುಪಿ, ಕುಂದಾಪುರ, ಕಾರವಾರ, ಶಿರಸಿ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಮಹಾರಾಷ್ಟ್ರದ ಸೋಲಾಪುರ ಹೀಗೆ ಕರಾವಳಿ-ಮಲೆನಾಡು ಮತ್ತು ಪಶ್ಚಿಮ ಘಟ್ಟದ ಸುತ್ತಮುತ್ತ ಸುಮಾರು 30ಕ್ಕೂ ಹೆಚ್ಚು ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆ.

Categories
ಸಿನಿ ಸುದ್ದಿ

ರಮ್ಯಾ ಉಪ್ಪಿ ಸಿನ್ಮಾ ರೆಡಿ: ರಕ್ತ ಕಾಶ್ಮೀರ ರಿಲೀಸ್ ಶೀಘ್ರ

ಎಂಡಿಎಂ ಪ್ರೊಡಕ್ಷನ್ ಲಾಂಛನದಲ್ಲಿ ನಿರ್ಮಾಣವಾಗಿರುವ, ಹಿರಿಯ ನಿರ್ದೇಶಕ ಎಸ್ ವಿ ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ ಹಾಗೂ ರಿಯಲ್ ಸ್ಟಾರ್ ಉಪೇಂದ್ರ ಹಾಗೂ ರಮ್ಯ ಮುಖ್ಯಪಾತ್ರದಲ್ಲಿ ನಟಿಸಿರುವ “ರಕ್ತ ಕಾಶ್ಮೀರ” ಚಿತ್ರ ತೆರೆಗೆ ಬರಲು ಅಣಿಯಾಗಿದೆ. ಸದ್ಯದಲ್ಲೇ ಚಿತ್ರವನ್ನು ತೆರೆಗೆ ತರುವ ಪ್ರಯತ್ನ ನಡೆಯುತ್ತಿದೆ.

ಪಾಕ್ ಆಕ್ರಮಿತ ಕಾಶ್ಮೀರವನ್ನು ವಾಪಸ್ ಪಡೆಯುವ ಪ್ರಧಾನಿ ಮೋದಿ ಅವರ ಹೇಳಿಕೆಯನ್ನು ಈ ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ.‌ ಇದೇ ಚಿತ್ರದ ಪ್ರಮುಖ ಕಥಾಹಂದರವಾಗಿದೆ. ಗಡಿ ಪ್ರದೇಶ ಅಷ್ಟೇ ಅಲ್ಲ. ಬೆಂಗಳೂರಿನಲ್ಲೂ ಉಗ್ರಗಾಮಿಗಳ ಕಾಟವಿದೆ. ಅದರ ನಿರ್ಮೂಲನೆಗೆ‌ ಸಂಬಂಧಿಸಿದ ಕಥಾವಸ್ತುವನ್ನೂ ಈ ಚಿತ್ರ ಹೊಂದಿದೆ. ‌

ಎಸ್ ವಿ ರಾಜೇಂದ್ರಸಿಂಗ್ ಬಾಬು ಅವರೆ “ರಕ್ತ ಕಾಶ್ಮೀರ” ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದಿದ್ದು, ಸಂಭಾಷಣೆ ಎಂ.ಎಸ್ ರಮೇಶ್ ಅವರದು. ಗುರುಕಿರಣ್ ಸಂಗೀತ ನಿರ್ದೇಶನದ ಈ ಚಿತ್ರದಲ್ಲಿ ಉಪೇಂದ್ರ, ರಮ್ಯ, ದೊಡ್ಡಣ್ಣ, ಓಂಪ್ರಕಾಶ್ ರಾವ್, ಅನಿಲ(ತೆಲುಗು ನಟಿ), ಕುರಿ ಪ್ರತಾಪ್ ಮುಂತಾದವರಿದ್ದಾರೆ.

Categories
ಸಿನಿ ಸುದ್ದಿ

ಶಿವಾಜಿ ಬಯೋಪಿಕ್ ನಲ್ಲಿ ರಿಷಭ್ ಶೆಟ್ಟಿ

ರಿಷಭ್ ಶೆಟ್ಟಿ ಕೇವಲ ಸ್ಯಾಂಡಲ್ ವುಡ್ ಅಷ್ಟೇ ಅಲ್ಲ, ಇಡೀ ಭಾರತೀಯ ಚಿತ್ರರಂಗದ ಭರವಸೆಯ ನಟ ಮತ್ತು ನಿರ್ದೇಶಕ. ಸಾಗರದಾಚೆಗೂ ರಿಷಭ್ ಶೆಟ್ಟಿ ಅವರ ಹೆಸರಿದೆ. ಕಾಂತಾರ ಮೂಲಕ ಏಕ್ ಧಮ್ ಪ್ಯಾನ್ ಇಂಡಿಯಾ ಸ್ಟಾರ್ ಆದ ರಿಷಭ್ ಸದ್ಯ, ಬಹುಭಾಷೆಯ ಸಿನಿಮಾಗಳಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ. ಹಾಗಾಗಿ ಜೈ ಹನುಮಾನ್ ಸಿನಿಮಾ ಚಟುವಟಿಕೆಗಳು ಗರಿಗೆದರಿವೆ. ಈಗ ಲೇಟೆಸ್ಟ್ ನ್ಯೂಸ್ ಅಂದರೆ, ರಿಷಭ್ ಶೆಟ್ಟಿ ಅವರು, ಹೊಸ ಚಿತ್ರವೊಂದರಲ್ಲಿ ನಟಿಸುವ ಬಗ್ಗೆ ಹೇಳಿಕೊಂಡಿದ್ದಾರೆ. ಸದ್ಯ ಅವರು ಶಿವಾಜಿ ಮಹಾರಾಜರ ಬಯೋಪಿಕ್ ಚಿತ್ರದಲ್ಲಿ ನಾಯಕರಾಗಿ ನಟಿಸುತ್ತಿದ್ದಾರೆ. ಸ್ವತಃ ರಿಷಭ್ ಶೆಟ್ಟಿ ಅವರೇ ಅಧಿಕೃತವಾಗಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ ಅನ್ನೋದು ವಿಶೇಷ.

ರಿಷಭ್ ಶೆಟ್ಟಿ ಅವರು ಪ್ಯಾನ್ ಇಂಡಿಯಾ ಮಟ್ಟದಲ್ಲಿ ತಯಾರಾಗಲಿರುವ ‘ಛತ್ರಪತಿ ಶಿವಾಜಿ ಮಹಾರಾಜ್’ ಚಿತ್ರದಲ್ಲಿ ಶಿವಾಜಿ ಪಾತ್ರಕ್ಕೆ ರಿಷಬ್ ಬಣ್ಣ ಹಚ್ಚುತ್ತಿದ್ದಾರೆ. ಬಾಲಿವುಡ್ ನಿರ್ಮಾಪಕ ಕಮ್ ನಿರ್ದೇಶಕ ಸಂದೀಪ್ ಸಿಂಗ್ ಈ ಚಿತ್ರದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಎಲ್ಲವೂ ಸರಿ, ಆದರೆ, ಅದೇಕೋ ಏನೋ, ರಿಷಬ್ ಶೆಟ್ಟಿ ಅವರ ಈ ತೀರ್ಮಾನ ಹಲವರಿಗೆ ಬೇಸರ ತರಿಸಿದೆ. ಈ ಚಿತ್ರವನ್ನು ಒಪ್ಪಿಕೊಂಡಿರುವುದರಿಂದ ಒಂದಷ್ಟು ಕನ್ನಡಿಗರಿಗೂ ಅದು ಕೋಪ ತರಿಸಿರುವುದು ಸುಳ್ಳಲ್ಲ. ಹಲವರು ಈಗಾಗಲೇ ಶೆಟ್ರು ಹಾಕಿರುವ ಪೋಸ್ಟ್ ಗೆ , “ಬೇಡ ಶೆಟ್ರೆ” ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಆ ಮೂಲಕ ಈ ಸಿನಿಮಾ ನೀವು ಮಾಡಬೇಡಿ ಎಂಬರ್ಥದಲ್ಲಿ ಹೇಳುತ್ತಿದ್ದಾರೆ.

“ಭಾರತದ ಮಹಾನ್ ಯೋಧ, ರಾಜ ಶಿವಾಜಿ ಅವರ ಜೀವನಚರಿತ್ರೆಯನ್ನು ತೆರೆಗೆ ತರುತ್ತಿರುವುದು ನಮ್ಮ ಗೌರವ ಹಾಗೂ ಹೆಮ್ಮೆ. ಇದು ಬರೀ ಸಿನಿಮಾ ಅಲ್ಲ, ದುಷ್ಟರ ವಿರುದ್ಧ ಹೋರಾಡಿ ಮೊಘಲ್ ಸಾಮ್ರಾಜ್ಯವನ್ನು ಕಟ್ಟಿ ಬೆಳೆಸಿದ ವೀರ ಯೋಧನ ಕಥೆ. ತೆರೆಮೇಲೆ ಅದ್ಭುತ ಆಕ್ಷನ್ ಡ್ರಾಮಾ ನೋಡಲು ಸಿದ್ಧರಾಗಿ ಎಂದು ಬರೆದುಕೊಂಡಿರುವ ರಿಷಭ್ ಶೆಟ್ಟಿ, ಸಿನಿಮಾ ಪೋಸ್ಟರ್ ಅನ್ನು ಹಂಚಿಕೊಂಡಿದ್ದಾರೆ. ಆದರೆ, ಆ ಪೋಸ್ಟರ್ ಮತ್ತು ಬರಹ ನೋಡಿದ ಅನೇಕರು, ಕಾಮೆಂಟ್ ಬಾಕ್ಸ್‌ನಲ್ಲಿ ರಿಷಬ್ ಶೆಟ್ಟಿ ಅವರಿಗೆ ಶುಭ ಕೋರಿದ್ದಾರೆ. ಶುಭ ಕೋರಿದವರಿಗಿಂತ, ಸಾಕಷ್ಟು ಜನ ಬೇಸರ ವ್ಯಕ್ತಪಡಿಸಿದ್ದಾರೆ.

ಶೆಟ್ರೇ, ಇದು ಉತ್ತಮ ಆಯ್ಕೆ ಅಲ್ಲ. ಈ ಸಿನಿಮಾ ಬೇಕಿರಲಿಲ್ಲ ಎಂದು ಕಾಮೆಂಟ್ ಮೂಲಕ ಹೇಳುತ್ತಿದ್ದಾರೆ. ಕರ್ನಾಟಕಕ್ಕೆ ಶಿವಾಜಿ ಕೊಡುಗೆ ಏನಿದೆ? ಆತನ ಜೀವನಾಧರಿತ ಕಥೆಯಲ್ಲಿ ನೀವು ಯಾಕೆ ನಟಿಸಬೇಕು ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಕರುನಾಡಿನ ವೀರ ವನಿತೆ ಬೆಳವಾಡಿ ಮಲ್ಲಮ್ಮನ ಎದುರು ಸೋಲುಂಡ ಶಿವಾಜಿಯ ಕಥೆಯನ್ನು ವಿಜೃಂಭಿಸಿ ಸಿನಿಮಾ ಮಾಡುವುದು, ಅದರಲ್ಲಿ ನೀವು ನಾಯಕನಾಗಿ ನಟಿಸುವುದು ಯಾಕೆ ಬೇಕಿತ್ತು ಎಂದು ಕಿವಿಮಾತು ಹೇಳುತ್ತಿದ್ದಾರೆ. ಒಟ್ಟಾರೆ ಶಿವಾಜಿ ಮಹಾರಾಜರ ಜೀವನಚರಿತ್ರೆಯಲ್ಲಿ ರಿಷಬ್ ಶೆಟ್ಟಿ ನಟಿಸುತ್ತಿರುವುದು ಕುತೂಹಲ ಮೂಡಿಸಿದೆ. ಸದ್ಯ ಖುಷಿಯಿಂದಲೇ ರಿಷಭ್ ಶೆಟ್ರು ಸಿನಿಮಾ ಪೋಸ್ಟರ್ ಹಾಕಿ, ತೆರೆ ಮೇಲೆ ಅದ್ಭುತ ಆಕ್ಷನ್ ಡ್ರಾಮಾ ನೋಡಲು ಸಜ್ಜಾಗಿ ಎಂದಿದ್ದರು. ಆದರೆ, ಕನ್ನಡದ ಅನೇಕರು ಆ ಸಿನಿಮಾ ಮಾಡುವುದು ಬೇಕಿತ್ತಾ ಎಂದು ಪ್ರಶ್ನಿಸುತ್ತಿದ್ದಾರೆ.

ರಿಷಭ್ ಶೆಟ್ಟಿ ಒಬ್ಬ ನಟ, ಕಲಾವಿದರಿಗೆ ಭಾಷೆಯ ಗಡಿ ಇಲ್ಲ. ಹಾಗೆಯೇ, ಬೇರೆಯವರ ಜೀವನ ಚರಿತ್ರೆ ಮಾಡಬಾರದು ಅನ್ನೋ ಕಾನೂನು ಇಲ್ಲ. ಅದು ಅವರವರ ಇಷ್ಟ. ಆದರೆ, ಎಲ್ಲೋ ಒಂದು ಕಡೆ, ರಿಷಭ್ ಇಷ್ಟೊಂದು ಹೆಸರು ಮಾಡಿದ್ದವರು, ಬಯೋಪಿಕ್ ಮಾಡುವುದಾದರೆ, ಇನ್ನು ಹಲವು ಸಾಧಕರ ಜೀವನ ಚರಿತ್ರೆಗಳಿವೆ. ಅದನ್ನು ಮಾಡಲಿ ಎಂಬ ಕಾಳಜಿ ಅಷ್ಟೇ. ಒಂದಂತೂ ಸತ್ಯ, ಇದು ಸಿನಿಮಾ ಅಷ್ಟೇ. ಕಲಾವಿದರು ಭಾಷೆಯ ಗಡಿ ದಾಟಿದವರು. ಕಲಾವಿದರಿಗೆ ಯಾವುದೇ ಭಾಷೆಯ ಮಿತಿ ಇಲ್ಲ, ಜಾತಿ, ಕುಲ ಅನ್ನೋದು ದೂರ. ಆ ನಿಟ್ಟಿನಲ್ಲಿ ನೋಡುವುದಾದರೆ, ಶಿವಾಜಿ ಅವರ ಜೀವನಚರಿತ್ರೆ ಮುಂದಿನ ಪೀಳಿಗೆಗೂ ಅಗತ್ಯ. ಇಂಥದ್ದೊಂದು ಸಿನಿಮಾ ಮಾಡುವ ಖುಷಿ ಶೆಟ್ರುದು. ಅದು ತಪ್ಪಲ್ಲ. ಆದರೇಕೋ ಕನ್ನಡಿಗರು ಇದು ಸರಿಯಲ್ಲ ಎನ್ನುತ್ತಿದ್ದಾರೆ. ಮುಂದಿನ ದಿನಗಳಲ್ಲಿ ರಿಷಭ್ ಶೆ್ಟ್ಟರೇ ಇದಕ್ಕೆ ಉತ್ತರ ಕೊಡಬೇಕಿದೆ.

ಅಂದಹಾಗೆ, ಬಹಳ ದಿನಗಳಿಂದ ಶಿವಾಜಿ ಬಯೋಪಿಕ್ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಲೇ ಇದೆ. ಈಗಾಗಲೇ ಬಾಲಿವುಡ್‌ನಲ್ಲಿ ಶಿವಾಜಿ ಕುರಿತು ಸಿನಿಮಾ, ಧಾರಾವಾಹಿ ಬಂದಿವೆ. ಆದರೂ ಇವತ್ತಿನ ತಂತ್ರಜ್ಞಾನ ಬಳಸಿ ಬಹಳ ಅದ್ಧೂರಿಯಾಗಿ ದೃಶ್ಯಕಾವ್ಯದ ರೀತಿ ಕತೆ ಕಟ್ಟಿಕೊಡುವ ಪ್ರಯತ್ನ ಮಾಡಲಾಗುತ್ತಿದೆ. ಶಿವಾಜಿ ಸಾಧನೆಯ ಕಥೆಯನ್ನು ಮತ್ತೊಮ್ಮೆ ತೆರೆಗೆ ತರುವ ಲೆಕ್ಕಾಚಾರ ನಡೀತಿದೆ. ಈಗ ನೋಡಿದರೆ, ಕನ್ನಡದ ಕೆಲವರಿಂದ ಕೊಂಚ ತಕರಾರು ಎದ್ದಿದೆ.ಬಹಳಷ್ಟು ಮಂದಿಯಂತೂ ಶೆಟ್ಟರ ವಿರುದ್ಧ ಕಾಮೆಂಟ್ ಹಾಕುತ್ತಿದ್ದಾರೆ. ಬೆಳೆಯತನಕ ಕನ್ನಡ, ಕರ್ನಾಟಕ ಬೆಳೆದ ಮೇಲೆ ಯಾಕೆ ಈ ರೀತಿ ಸ್ವಾಮಿ, ಮೊದಲು ಕನ್ನಡ ಕನ್ನಡ ಆಮೇಲೆ ಕಮರ್ಷಿಯಲ್ ಕೊಟ್ಟ ಕಡೆ ಎನ್ನುವಂತಾಗಿದೆ ಎಂದೆಲ್ಲಾ ಕಾಮೆಂಟ್ ಕಾಣಿಸುತ್ತಿವೆ. ಸಾವಿರಾರು ಕಾಮೆಂಟ್ ಗಳು ರಿಷಭ್ ಶೆಟ್ಟಿ ಅವರನ್ನು ಟ್ಯಾಗ್ ಮಾಡಿ ಬಂದಿವೆ. ಬರುತ್ತಲೇ ಇವೆ. ರಿಷಭ್ ಉತ್ತರ ಇನ್ನೂ ಸಿಕ್ಕಿಲ್ಲ.

Categories
ಸಿನಿ ಸುದ್ದಿ

ಅಯೋಗ್ಯರ ಆಗಮನಕ್ಕೆ ವೇದಿಕೆ ಸಜ್ಜು!

ಸ್ಯಾಂಡಲ್ ವುಡ್ ನ‌ ಸೂಪರ್ ಸಕ್ಸಸ್ ಜೋಡಿಗಳಲ್ಲಿ ಒಂದಾಗಿರುವ ರಚಿತಾ ರಾಮ್ ಹಾಗೂ ಸತೀಶ್ ನಿನಾಸಂ ಮತ್ತೆ ಒಂದಾಗಿದ್ದಾರೆ. ಅಯೋಗ್ಯ ಸಿನಿಮಾ ಮೂಲಕ ಮೋಡಿ ಮಾಡಿದ್ದ ಈ ಜೋಡಿ ಇದೀಗ 6 ವರ್ಷಗಳ ಬಳಿಕ ಮತ್ತೆ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದೆ. ಹೌದು ಅಯೋಗ್ಯ ಸಿನಿಮಾದ ಪಾರ್ಟ್ 2 ಸೆಟ್ಟೇರುತ್ತಿದ್ದು ಈಗಾಲೇ ಮುಹೂರ್ತಕ್ಕೆ ಡೇಟ್ ಫಿಕ್ಸ್ ಆಗಿದೆ.

6 ವರ್ಷದ ಹಿಂದೆ ಸಿದ್ದೇಗೌಡ ಹಾಗೂ ನಂದಿನಿ ಲವ್ ಸ್ಟೋರಿಗೆ ಕನ್ನಡ‌ ಸಿನಿಮಾ ಪ್ರೇಮಿಗಳು ಶಹಬ್ಬಾಸ್ ಎಂದಿದ್ದರು. ಈಗ ಮತ್ತದೇ ತಂಡ ಅಯೋಗ್ಯ 2 ಸಿನಿಮಾ ಮೂಲಕ‌ ಒಂದಾಗುತ್ತಿರುವುದು ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ.

ಅಯೋಗ್ಯ ಸಿನಿಮಾದ ಹಾಡುಗಳು ಕನ್ನಡ ಸಿನಿಮಾರಂಗದಲ್ಲಿಯೇ ಹೊಸ ಇತಿಹಾಸ ಬರೆದಿತ್ತು. ಈಗ ಮತ್ತಷ್ಟು ನಿರೀಕ್ಷೆಗಳೊಂದಿಗೆ ಚಿತ್ರತಂಡ ಹೊಸ ದಾಖಲೆ ಸೃಷ್ಟಿಸಲು‌ ಸಜ್ಜಾಗಿದೆ. ಇನ್ನು ಅಯೋಗ್ಯ2 ಸಿನಿಮಾ ಡಿಸೆಂಬರ್ 11 ರಂದು ಸೆಟ್ಟೇರಲಿದ್ದು ಮಹೇಶ್ ಕುಮಾರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಎಂ ಮುನೇಗೌಡ ಅಯೋಗ್ಯ ಸಿನಿಮಾಗೆ ಬಂಡವಾಳ ಹೂಡುತ್ತಿದ್ದಾರೆ. ಅರ್ಜುನ್ ಜನ್ಯ ಸಂಗೀತ ನಿರ್ದೇಶನ‌‌ ಇರಲಿದೆ.

ರಚಿತಾ ರಾಮ್, ಸತೀಶ್ ನಿನಾಸಂ‌, ರವಿಶಂಕರ್, ಶಿವರಾಜ್ ಕೆ ಆರ್ ಪೇಟೆ ಸೇರಿದಂತೆ ಅಯೋಗ್ಯ ಸಿನಿಮಾದಲ್ಲಿ ಅಭಿನಯಿಸಿದ ಬಹುತೇಕ ಕಲಾವಿದರು ಅಯೋಗ್ಯ2 ನಲ್ಲಿ ಮುಂದುವರೆಯುತ್ತಿರುವುದು ವಿಶೇಷ.

ಸೂಪರ್ ಹಿಟ್ ಸಿನಿಮಾದ ಸೀಕ್ವೆಲ್ ಅಂದರೆ ನಿರೀಕ್ಷೆ ಮತ್ತು ಕುತೂಹಲ ಕೊಂಚ ಜಾಸ್ತಿನೆ ಇರಲಿದೆ. ಹಾಗಾಗಿ ಅಯೋಗ್ಯ-2 ಕೂಡ ಸೆಟ್ಟೇರುವುದಕ್ಕೂ ಮೊದಲೇ ನಿರೀಕ್ಷೆ ದುಪ್ಪಟ್ಟು ಮಾಡಿದೆ. ಪಾರ್ಟ-2 ಹೇಗಿರಲಿದೆ ರವಿ ಶಂಕರ್ ಮತ್ತು ಸತೀಶ್ ನಡುವಿನಕಾದಾಟ, ಜಿದ್ದಾಜಿದ್ದಿ ಹಾಗೆ ಮುಂದುವರೆಯಲಿದಿಯಾ ಕಾದುನೋಡಬೇಕು.

Categories
ಸಿನಿ ಸುದ್ದಿ

ಸಿಲ್ಕ್ ಸ್ಮಿತಾ ಬಯೋಪಿಕ್!ಕ್ವೀನ್‌ ಆಫ್‌ ದಿ ಸೌತ್‌

ಈ ಸಿನಿಮಾ ನಟಿಯರೇ ಹಾಗೆ. ಕೆಲವು ನಟಿಯರಂತೂ ಮರೆಯಾದರೂ ಮರೆಯದ ಸಿನಿಮಾಗಳ ಮೂಲಕ ಮತ್ತೆ ಮತ್ತೆ ನೆನಪಾಗಿಸುವಂತೆ ಮೋಡಿ ಮಾಡಿದವರಲ್ಲಿ ಸಿಲ್ಕ್ ಸ್ಮಿತಾ ಕೂಡ ಒಬ್ಬರು. ಯೆಸ್, ಸಿಲ್ಕ್ ಸ್ಮಿತಾ ಸೌತ್ ಇಂಡಿಯನ್ ಫಿಲ್ಮ್ ಇಂಡಸ್ಟ್ರಿಯಲ್ಲಿ ದೊಡ್ಡ ಹೆಸರು. ಅದಷ್ಟೇ ಅಲ್ಲ, ಆಗಿನ ಕಾಲದಲ್ಲಿ ಯಾವ ಹೀರೋಯಿನ್ ಗೂ ಕಮ್ಮಿ ಇರದ ಸೌಂದರ್ಯವಂತೆ. ಸ್ಟಾರ್ ಹೀರೋಗಳನ್ನೇ ಮೀರಿ ಬೆಳೆದ ಸಿಲ್ಕ್ ಸ್ಮಿತಾ ಅವರ ಬದುಕು ನಿಜಕ್ಕೂ ಒಂದು ದುರಂತ ಕಥೆ. ಕನ್ನಡ ತೆಲುಗು ಸೇರಿದಂತೆ ಬಹುತೇಕ ಸೌತ್ ಇಂಡಿಯನ್ ಸಿನಿಮಾಗಳಲ್ಲಿ ಸ್ಮಿತಾ ನಟಿಸಿದ್ದಾರೆ.

ಸಿಲ್ಕ್ ಸ್ಮಿತಾ ಅವರ ಖ್ಯಾತಿ ಎಷ್ಟಿತ್ತೆಂದರೆ, ಅದು ಬಾಲಿವುಡ್ ಅಂಗಳಕ್ಕೂ ಹಬ್ಬಿತ್ತು ಅಂದರೆ ನಂಬಲೇಬೇಕು. ಬಹುತೇಕ ಎಲ್ಲಾ ಸ್ಟಾರ್ ಹೀರೋಗಳ ಜೊತೆ ಸ್ಟೆಪ್ ಹಾಕಿರುವ ಹೆಮ್ಮೆ ಈ ನಟಿಯದ್ದು. ಹೆಚ್ಚು ಕಮ್ಮಿ 18 ವರ್ಷಗಳ ವೃತ್ ತಿಜೀವನದಲ್ಲಿ ಸಿಲ್ಕ್ 450 ಕ್ಕೂ ಹೆಚ್ಚು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆಗಿನ ಕಾಲಕ್ಕೆ ಅವರ ಸಂಭಾವನೆ 50 ಸಾವಿರ.ತೆರೆಯ ಮೇಲೆ ಕುಣಿದು ಕುಪ್ಪಳಿಸಿ, ಅದೆಷ್ಟೋ ಕಣ್ಮನಗಳನ್ನು ತಣಿಸಿದ ಸಿಲ್ಕ್ ಸ್ಮಿತಾ, ಕೊನೆಗಾಲದಲ್ಲಿ ಕೈಯಲ್ಲಿ ಕಾಸಿಲ್ಲದೆ, ಅವಕಾಶಗಳೂ ಇಲ್ಲದೆ, ಸಮಸ್ಯೆ ಎದುರಿಸಿದರು. ಅಷ್ಟೇ ಅಲ್ಲ, ಸಾಲದ ಸುಳಿಯಲ್ಲೂ ಸಿಲುಕಿ ತಮ್ಮ 36ನೇ ವಯಸ್ಸಲ್ಲಿ ಸಾವನ್ನಪ್ಪಿದರು.

ಸಿಲ್ಕ್ ಸ್ಮಿತಾ ಅವರು ಬದುಕಿದ್ದಾಗ, ಸಿನಿ ಜಗತ್ತಲ್ಲಿ ದೊಡ್ಡ ಹೆಸರನ್ನೇ ಮಾಡಿದ್ರು. ಅವರ ಮಹತ್ವ ದೊಡ್ಡದಿತ್ತಾದರೂ, ಅದನ್ನು ಸಿಲ್ಕ್ ಸರಿಯಾಗಿ ಬಳಸಿಕೊಳ್ಳಲಿಲ್ಲ. ಆದರೆ, ಅವರು ನಿಧನರಾದ ಬಳಿಕ ಅವರ ಕುರಿತು ಮೆಚ್ಚುಗೆಯ ಮಾತುಗಳು ಹರಿದುಬಂದವು. ಸಿಲ್ಕ್ ಸ್ಮಿತಾ ತಮ್ಮದೇ ಛಾಪು ಮೂಡಿಸಿದ್ದರು. ಅವರ ಸ್ಥಾನವನ್ನು ಇಂದಿಗೂ ಯಾರೊಬ್ಬರೂ ತುಂಬಿಲ್ಲ ಬಿಡಿ. ಅಂದಹಾಗೆ, ಸಿಲ್ಕ್ ಸ್ಮಿತಾ ಕಣ್ಮರೆಯಾಗಿ 28 ವರ್ಷಗಳು ಗತಿಸಿವೆ. ಇಷ್ಟು ವರ್ಷಗಳ ಬಳಿಕವೂ ಸಿಲ್ಕ್ ಸ್ಮಿತಾ ಹೆಸರು ಜನಜನಿತ. ಅವರ ಹಾಡು, ಕುಣಿತ ಎಲ್ಲವೂ ದಾಖಲೆ ಬರೆದಿವೆ. ಹಾಗಾಗಿ ಸಿಲ್ಕ್ ಸ್ಮಿತಾ ಕುರಿತಾದ ಸಿನಿಮಾವೊಂದು ಇದೀಗ ಶುರುವಾಗುತ್ತಿದೆ ಅನ್ನೋದೇ ಈ ಹೊತ್ತಿನ ಸುದ್ದಿ.

ಹೌದು,ಸಿಲ್ಕ್‌ ಸ್ಮಿತಾ ಬಯೋಪಿಕ್‌ ಮಾಡುವುದಾಗಿ ಸ್ತ್ರೀ ಸಿನಿಮಾಸ್ ಘೋಷಿಸಿದೆ. ಈ ಸಿನಿಮಾವನ್ನು ಜಯರಾಮ್‌ ಸಂಕರನ್‌ ನಿರ್ದೇಶಿಸಿದರೆ, ವಿಜಯ್ ಅಮೃತ್‌ರಾಜ್‌ ನಿರ್ಮಾಣ ಮಾಡುತ್ತಿದ್ದಾರೆ. ಸಿಲ್ಕ್‌ ಸ್ಮಿತಾ ಅವರ ಬರ್ತ್‌ಡೇ ಹಿನ್ನೆಲೆಯಲ್ಲಿ ಸ್ತ್ರೀ ಸಿನಿಮಾಸ್ ಸಂಸ್ಥೆ “ಸಿಲ್ಕ್‌ ಸ್ಮಿತಾ- ಕ್ವೀನ್‌ ಆಫ್‌ ದಿ ಸೌತ್‌” ಎಂಬ ಟೈಟಲ್ ಅನೌನ್ಸ್ ಮಾಡಿ ಸಿನಿಮಾ ಮಾಡುವುದನ್ನು ಹೇಳಿಕೊಂಡಿದೆ. ಅಂದಹಾಗೆ, ಈ ಬಯೋಪಿಕ್ ಗೆ ನಾಯಕಿ ಯಾರಿರಬಹುದು ಎಂಬ ಕುತೂಹಲ ಸಹಜ. ಯಾಕಂದ್ರೆ, ಸಿಲ್ಕ್ ಮೋಹಕ ಮತ್ತು ಮೋದಕ ತಾರೆ. ಅವರ ಪಾತ್ರಕ್ಕೆ ಸರಿಹೊಂದುವ ನಟಿಯನ್ನೇ ತರಬೇಕು. ಹಾಗಾಗಿ ಚಿತ್ರತಂಡ, ಸಿಲ್ಕ್ ಪಾತ್ರಕ್ಕೆ ಚಂದ್ರಿಕಾ ರವಿ ಅವರನ್ನು ಆಯ್ಕೆ ಮಾಡಿ ಸಿನಿಮಾ ಮಾಡಲು ಮುಂದಾಗಿದೆ. ಸಿಲ್ಕ್‌ ಸ್ಮಿತಾ ಅವರ ಬರ್ತ್ ಡೇಗೆ ಟೈಟಲ್ ಅನೌನ್​ಸ್ ಜೊತೆ ವಿಡಿಯೋವೊಂದನ್ನು ಹಂಚಿಕೊಂಡಿದೆ ಚಿತ್ರತಂಡ.

ಇನ್ನು, ಸಿಲ್ಕ್ ಸ್ಮಿತಾ ಸಾವಿನ ಹಿಂದೆ ಒಂದಷ್ಟು ಪ್ರಶ್ನೆಗಳಿದ್ದವು. ಸತ್ತಿದ್ದು ಯಾಕೆ? ಎಂಬುದೇ ನಿಗೂಢವಾಗಿತ್ತು. ಆ ಬಗ್ಗೆ ಹಲವು ಊಹಾಪೋಹಗಳಿದ್ದವು. ಆ ಕುರಿತು ಇಂದಿಗೂ ಪ್ರಶ್ನೆಗಳಿವೆ. ಆದರೆ, ಸಿಲ್ಕ್ ಸ್ಮಿತಾ ಸಾಯುವ ದಿನದ ರಾತ್ರಿ ಅವರ ಗೆಳತಿ ನಟಿ ಅನುರಾಧ ಅವರಿಗೆ ಫೋನ್ ಮಾಡಿದ್ದರು. ಆ ವೇಳೆ ಮನೆಗೆ ಬರಲು ಸಾಧ್ಯವೇ ಎಂದು ಸಿಲ್ಕ್ ಸ್ಮಿತಾ ಅವರು ಅನುರಾಧಗೆ ಹೇಳಿದ್ದರು. ಆದರೆ, ಅವರು ಹೋಗಲು ಸಾಧ್ಯವಾಗಿರಲಿಲ್ಲ. ಒಂದು ವೇಳೆ ಹೋಗಿದ್ದರೆ, ಸಿಲ್ಕ್ ಬದುಕುತ್ತಿದ್ದರೇನೋ? ಈ ಬಗ್ಗೆ ಅನುರಾಧ ಅವರು, ತಮಿಳು ಯೂಟ್ಯೂಬ್ ಚಾನೆಲ್ ​ಗಲಾಟಾ ಮೀಡಿಯಾ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ಅನುರಾಧ ಹೇಳಿದ್ದಿಷ್ಟು. “ಸಿಲ್ಕ್ ಸ್ಮಿತಾ ಜೋರು ಅಂತ ಎಲ್ಲರೂ ಅಂದುಕೊಂಡಿದ್ರು. ಆದ್ರೆ ಅದು ನಿಜವಲ್ಲ. ಚಿಕ್ಕ ಮಕ್ಕಳಂತೆ ಇದ್ರು. ಸಿಲ್ಕ್ ಸ್ಮಿತಾ ತೀರಿಕೊಳ್ಳೋ ಮೊದಲು ಕೆಲವು ವಿಷಯಗಳನ್ನ ನನಗೆ ಹೇಳಿದ್ರು. ಆ ವಿಷಯಗಳನ್ನ ನಾನು ಯಾರಿಗೂ ಹೇಳಿಲ್ಲ, ನನ್ನ ಮಗಳಿಗೂ ಹೇಳಿಲ್ಲ. ನನ್ನ ಗೆಳತಿ ನನ್ನ ಮೇಲೆ ನಂಬಿಕೆ ಇಟ್ಟು ಹೇಳಿದ್ದನ್ನ ನಾನು ಬಹಿರಂಗವಾಗಿ ಹೇಳೋಕೆ ಇಷ್ಟ ಪಡೋದಿಲ್ಲ. ಅದರಲ್ಲೂ ಅವರಿಲ್ಲದ ಸಮಯದಲ್ಲಿ. ಅದೆಲ್ಲ ನನಗೂ ಸಿಲ್ಕ್‌ಗೂ ಮಾತ್ರ ಗೊತ್ತಿರೋ ವಿಷಯಗಳು. ಅವರ ಕೊನೆಯ ದಿನಗಳಲ್ಲಿ ನಡೆದ ಮುಖ್ಯವಾದ ವಿಷಯಗಳೆಲ್ಲ ನನಗೆ ಗೊತ್ತು”, ಅಂತ ಅನುರಾಧಾ ಹೇಳಿದ್ದಾರೆ.

“ಅವರು ತೀರಿಕೊಂಡ ದಿನ ಅನುರಾಧಗೆ ಫೋನ್ ಮಾಡಿದ್ದರಂತೆ. ರಾತ್ರಿ ಒಂಬತ್ತು-ಒಂಬತ್ತು ಮುಕ್ಕಾಲು ಸಮಯವದು. ಮನೆಗೆ ಬರಬಹುದಾ ಅಂತ ಸಿಲ್ಕ್ ಕೇಳಿದ್ದರಂತೆ. ಆಗ, ಅನುರಾಧ ಅವರ ಗಂಡ ಬೆಂಗಳೂರಿನಿಂದ ಬರ್ತಾ ಇದ್ದರಂತೆ. ಮಕ್ಕಳೆಲ್ಲಾ ನಿದ್ರೆಗೆ ಜಾರಿದ್ದರಂತೆ. ಹಾಗಾಗಿ ಅನುರಅಧ ನಾಳೆ ಬೆಳಿಗ್ಗೆ ಬರ್ತೀನಿ ಅಂತ ಹೇಳಿದ್ದರಂತೆ. ಆದರೂ, ಇಷ್ಟು ಹೊತ್ತಲ್ಲೆ ಕರೀತಾ ಇದ್ದಾರೆ ಅಂದಮೇಲೆ ಏನೋ ಸಮಸ್ಯೆ ಇರಬೇಕು ಅಂದುಕೊಂಡು ಅನುರಾಧ ಬರ್ತೀನಿ ಅಂದಿದ್ದಾರೆ. ಆದರೆ, ಅಷ್ಟೊತ್ತಿಗಾಗಲೇ ಸಿಲ್ಕ್ ಬೇಡ ಅಂದಿದ್ದರಂತೆ. ಇನ್ನು, ಅನುರಾಧ ಬೆಳಿಗ್ಗೆ ಮಕ್ಕಳನ್ನ ಶಾಲೆಗೆ ಕಳಿಸೋ ತಯಾರಿ ಯಲ್ಲಿದ್ದಾಗ, ಟಿವಿಯಲ್ಲಿ ಫ್ಲ್ಯಾಶ್ ನ್ಯೂಸ್ ನೋಡಿದ್ದಾರೆ. ಸಿಲ್ಕ್ ಸ್ಮಿತಾ ನಿಧನದ ಸುದ್ದಿ ಗೊತ್ತಾಗಿದೆ. ಆಗ ಅನುರಾಧಗೂ ಅದು ಶಾಕ್. ಒಂದು ವೇಳೆ ಅಂದು ರಾತ್ರಿ ಅನುರಾಧ ಹೋಗಿದ್ದರೆ, ಬಹುಶಃ ಸಿಲ್ಕ್ ಇವತ್ತು ಬದುಕಿರುತ್ತಿದ್ದರೇನೋ? ಆದರೆ, ಟೈಂ ಅನ್ನೋದು ಸಿಲ್ಕ್ ಪ್ರಾಣವನ್ನು ಬಿಡಲಿಲ್ಲ. ಸದಾ ನೆನಪಿಸಿಕೊಳ್ಳುವ ಡ್ಯಾನ್ಸರ್ ಪೈಕಿ ಸಿಲ್ಕ್ ಕೂಡ ಒಬ್ಬರು.

ಅದೇನೆ ಇರಲಿ, ಇದೀಗ ಸಿಲ್ಕ್ ಸ್ಮಿತಾ ಅವರ ಬಯೋಪಿಕ್ ಆಗುತ್ತಿರುವುದು ಒಳ್ಳೆಯ ಬೆಳವಣಿಗೆ. ಹಾಗಂತ ಸಿಲ್ಕ್ ಕುರಿತ ಸಿನಿಮಾ ಬಂದಿಲ್ಲವೆಂದಲ್ಲ, ಕನ್ನಡದಲ್ಲಿ ಡರ್ಟಿ ಪಿಕ್ಚರ್ -ಸಿಲ್ಕ್ ಸಖತ್ ಹಾಟ್ ಎಂಬ ಸಿನಿಮಾ ಬಂದಿತ್ತು. ಪಾಕ್ ನಟಿ ವೀಣಾ ಮಲ್ಲಿಕ್ ಸಿಲ್ಕ್ ಪಾತ್ರದಲ್ಲಿ ನಟಿಸಿದ್ದರು. ಹಿಂದಿಯಲ್ಲಿ ದಿ ಡರ್ಟಿ ಪಿಕ್ಚರ್ ಸಿನಿಮಾ ಬಂದಿತ್ತು. ವಿದ್ಯಾ ಬಾಲನ್ ಸಿಲ್ಕ್ ಪಾತ್ರ ಮಾಡಿದ್ದರು. ಮಲಯಾಳಂ ನಲ್ಲೂ ಕ್ಲೈಮ್ಯಾಕ್ಸ್ ಸಿನಿಮಾ ಬಂದಿತ್ತು. ಸಾನ ಖಾನ್ ಸಿಲ್ಕ್ ಪಾತ್ರ ಮಾಡಿದ್ದರು. ಈ ಸಿನಿಮಾಗಳೆಲ್ಲ ಸಿಲ್ಕ್ ಕುರಿತ ಪಾತ್ರ ಇದ್ದವು ಆದರೆ, ಸಿಲ್ಕ್ ಬಯೋಪಿಕ್ ಆಗಿರಲಿಲ್ಲ. ಎಂಬತ್ತು ತೊಂಬತ್ತರ ದಶಕದಲ್ಲಿ ಸಿಲ್ಕ್ ಸ್ಮಿತಾ ಮಾಡಿದ ಮೋಡಿಗೆ ಅದೆಷ್ಟೋ ಸಿನಿಪ್ರಿಯರು ಫಿದಾ ಆಗಿದ್ದು ಸುಳ್ಳಲ್ಲ. ಉತ್ತುಂಗಕ್ಕೆ ಏರಿದ್ದ ಅನೇಕ ನಟಿಮಣಿಗಳ ಬದುಕಲ್ಲೂ ದುರಂತ ಸಾವುಗಳಾಗಿರೋದು ನಿಜ. ಸಿಲ್ಕ್ ಸ್ಮಿತಾ ಸಾವು ಕೂಡ ಇಡೀ ಸೌತ್ ಫಿಲ್ಮ್ ಇಂಡಸ್ಟ್ರಿಯನ್ನು ಕಾಡಿದ್ದಂತೂ ಸುಳ್ಳಲ್ಲ.

Categories
ಸಿನಿ ಸುದ್ದಿ

ಯುಐ 2040ರ ರಿಯಲ್ ಸ್ಟೋರಿ! ಜಗತ್ತು ಹೇಗಾಗುತ್ತೆ ಗೊತ್ತಾ? ವಾರ್ನರ್ ನೋಡಿ

ಉಪೇಂದ್ರ ನಿರ್ದೇಶನದ ಯುಐ ವಾರ್ನರ್ ರಿಲೀಸ್ ಆಗಿದೆ. ವಾರ್ನರ್ ಅಂದಾಕ್ಷಣ ಒಬ್ಬೊಬ್ಬರಿಗೆ ಒಂದೊಂದು ಕುತೂಹಲ ಇತ್ತು. ಟೀಸರ್ ಓಕೆ, ಟ್ರೇಲರ್ ಓಕೆ ಇದೆಂಥದ್ದು ವಾರ್ನರ್ ಎಂಬ ಪ್ರಶ್ನೆ ಕಾಡಿದ್ದು ಸುಳ್ಳಲ್ಲ. ಅವರ ಅನೇಕ ಅಭಿಮಾನಿಗಳ ಪ್ರಶ್ನೆಗೆ ವಾರ್ನರ್ ಉತ್ತರ ಕೊಟ್ಟಿದೆ. ರಿಲೀಸ್ ಆದ ಕೆಲವೇ ನಿಮಿಷಗಳಲ್ಲಿ ಸಾವಿರಾರು ವೀಕ್ಷಣೆ ಪಡೆದು ಮುನ್ನುಗ್ಗುತ್ತಿರುವ ವಾರ್ನರ್ ಭರ್ಜರಿ ಚರ್ಚೆಗೆ ಕಾರಣವಾಗಿದೆ. ಉಪೇಂದ್ರ ಈ ವಾರ್ನರ್ ಮೂಲಕ ಯುಐ ಮೇಲಿನ ಕುತೂಹಲವನ್ನು ದುಪ್ಪಟ್ಟು ಮಾಡಿರೋದು ಸುಳ್ಳಲ್ಲ.

ಇಷ್ಟಕ್ಕೂ ಈ ವಾರ್ನರ್ ನೋಡದವರಿಗೆ ಒಂದಷ್ಟು ವಿಷಯ ಅರ್ಥವಾಗಿರಲೇಬೇಕು. ನೋಡದವರು ವಾರ್ನರ್ ಒಮ್ಮೆ ನೋಡಬೇಕು. ಯಾಕೆ ನೋಡಬೇಕು ಅನ್ನುವುದಾದರೆ, ಉಪೇಂದ್ರ ಅವರು ಮಾಡುವ ಯಾವುದೇ ಸಿನಿಮಾ ಇರಲಿ, ಅಲ್ಲೊಂದಷ್ಟು ವಿಷಯಗಳಿರುತ್ತವೆ. ಆ ವಿಷಯ ಕಾಡುತ್ತವೆ, ಪ್ರಶ್ನೆಗೂ ನೂಕೂತ್ತವೆ. ಇಲ್ಲೂ ಕೂಡ ಅಂಥದ್ದೇ ಒಂದು ಗಂಭೀರ ವಿಷಯ ಇಟ್ಟುಕೊಂಡು ಉಪೇಂದ್ರ ವಾರ್ನರ್ ರಿಲೀಸ್ ಮಾಡಿದ್ದಾರೆ.

ಅಷ್ಟಕ್ಕೂ ವಾರ್ನರ್ ಹೇಗಿದೆ ಅನ್ನುವುದಾದರೆ, ಎಲ್ಲರಿಗೂ ತಿಳಿದಂತೆ ವಿಶ್ವದಲ್ಲಿ ಅದೆಷ್ಟೋ ಸಮಸ್ಯೆಗಳು ಹಾಸಿ ಮಲಗಿವೆ. ಅಂತಹ ಸಮಸ್ಯೆಗಳ ಪೈಕಿ ಬೆರಳೆಣಿಕೆಯಷ್ಟು ಇರುವ ಪ್ರಮುಖವಾದ ವಿಚಾರಗಳನ್ನು ಇಟ್ಟುಕೊಂಡು ಯುಐ ಸಿನಿಮಾದಲ್ಲಿ ಹೇಳಲಾಗಿದೆ. ಜಗತ್ತು ಮುಂದಿನ ದಿನಗಳಲ್ಲಿ ಹೇಗಾಗುತ್ತೆ ಎಂಬ ಕಲ್ಪನೆಯಲ್ಲೇ ಕಥೆ ಕಟ್ಟಿಕೊಂಡು ಸಿನಿಮಾ ಮಾಡಿದ್ದಾರೆ. ಅವರು ಹರಿಬಿಟ್ಟಿರುವ ವಾರ್ನರ್ ಅಲ್ಲಿ, ಜಾಗತಿಕ ತಾಪಮಾನ ಏರಿಕೆ, ಕೋವಿಡ್ 19, ಹಣದುಬ್ಬರ, ಐಟಿ ಬಿಟಿ ಸಮಸ್ಯೆ, ನಿರುದ್ಯೋಗ, ವಾಸ್ತವ ಜಗತ್ತು ಹೇಗಿರುತ್ತೆ ಇದೆಲ್ಲದರ ಜೊತೆ ಯುದ್ಧಗಳ ಬಗ್ಗೆಯೂ ಸಿನಿಮಾದಲ್ಲಿ ಹೇಳಲಾಗಿದೆ.

ವಾರ್ನರ್ ನೋಡಿದವರಿಗೆ ನಿಜಕ್ಕೂ ಅದೊಂದು ಕುತೂಹಲ ಕೆರಳಿಸುವ ಸಿನಿಮಾ ಅನ್ನದೇ ಇರಲಾಗದೆಉ. ಹಾಗೆ ನೋಡಿದರೆ, ಉಪೇಂದ್ರ ಅವರು 2040 ಕಥೆ ಹೇಳುವ ಪ್ರಯತ್ನ ಮಾಡಿದ್ದಾರೆ. ಆಗ ದೇಶವಷ್ಟೇ ಅಲ್ಲ, ಜಗತ್ತು ಹೇಗಿರಬಹುದು, ಹೇಗಾಗಬಹುದು ಎಂಬ ಅವರ ಕಲ್ಪನಾಲೋಕದ ಚಿತ್ರಣವನ್ನು ಕಟ್ಟಿಕೊಟ್ಟಿದ್ದಾರೆ.

ಸದ್ಯ ಉಪೇಂದ್ರ ಅವರ ಬಹು ನಿರೀಕ್ಷೆಯ ಈ ಸಿನಿಮಾ ಹೇಗೆ ಮೂಡಿಬಂದಿರಬಹುದು ಎಂಬ ಸಣ್ಣ ಕುತೂಹಲ ಎಲ್ಲರಲ್ಲೂ ಇದ್ದೇ ಇರುತ್ತೆ. ಇಷ್ಟಕ್ಕೂ ಯಾವ ಕಾಲಘಟ್ಟದ ಕಥೆ ಹೇಳುತ್ತಾರೆ ಎಂಬ ಪ್ರಶ್ನೆಯೂ ಇದೆ. ಅದಕ್ಕೆ ಉತ್ತರವಾಗಿ ಯುಐ ವಾರ್ನರ್ ಬಂದಿದೆ. ಅವರ ಪ್ರಕಾರ ‘ವಾರ್ನರ್​’ ಅಂದರೆ ಎಚ್ಚರಿಕೆ. ಈಗಾಗಲೇ ಆ ಎಚ್ಚರಿಕೆ ವಿಡಿಯೋ ರಿಲೀಸ್ ಆಗಿದೆ ಕೂಡ. ಅದನ್ನು ನೋಡಿದವರಿಗೆ, ಸಿನಿಮಾದ ಸ್ಟೋರಿ 2040ರಲ್ಲಿ ಶುರುವಾಗುವಂತೆ ತೋರಿಸಿದ್ದಾರೆ.

ಆರಂಭದ ಶಾಟ್ ನೋಡುತ್ತಲೇ ಕುತೂಹಲ ಹುಟ್ಟಿಸುವ ವಾರ್ನರ್ ನಲ್ಲಿ, ಒಂದು ಬಾಳೆ ಹಣ್ಣಿಗಾಗಿ ಕಿತ್ತಾಟ ನಡೆಯುತ್ತದೆ. ‘ನಂಗೆ ಬಾಳೆ ಹಣ್ಣು’ ಎಂದು ಮೈಗೆ ಸರಿಯಾಗಿ ಹೊದಿಕೆ ಇರದ, ಹಸಿವಿನಿಂದ ಒದ್ದಾಡುವ ಸಾಕಷ್ಟು ಜನ ಕಿತ್ತಾಟ ನಡೆಸುವ ಸೀನ್ ಅದು. ಕ್ಯಾಮೆರಾ ಪ್ಯಾನ್ ಆಗುತ್ತಿದ್ದಂತೆಯೇ, ಸುತ್ತಲೂ ಇಡೀ ಜಗತ್ತೇ ನಾಶ ಆಗುವ ಹಂತಕ್ಕೆ ಬಂದಿರುವ ಭಾವ. ಅಲ್ಲಿ, ಹಸಿವಿದೆ, ಜಾತಿಯ ತಾರತಮ್ಯವಿದೆ. 2040ರಲ್ಲೂ ಜಾತಿ ವ್ಯವಸ್ಥೆ ಹೇಗಿರುತ್ತೆ ಅನ್ನುವ ಉದಾಹರಣೆ ಕಾಣಸಿಗುತ್ತೆ. ಅಷ್ಟೇ ಅಲ್ಲ,‘ಜಾತಿ ಮುದ್ರೆ ಕಡ್ಡಾಯ’ ಎಂಬುದು ವಾರ್ತೆಯಲ್ಲೂ ಕೇಳಿಬರುವ ಧ್ವನಿ ಒಂದು ಕಡೆಯಾದರೆ, ಎಲ್ಲೋ ಒಂದು ಕಡೆ ಜನ ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ, ಮೊಬೈಲ್ ಎಂಬ ಶೋಕಿಗೆ ಬೀಳುವ ದೃಶ್ಯ ಕೂಡ ವಾಸ್ತವಕ್ಕೆ ಹತ್ತಿರವೆನಿಸುತ್ತೆ. ಇದರ ನಡುವೆ, ವ್ಯವಸ್ಥೆಯ ವಿರುದ್ಧ ಧಿಕ್ಕಾರ ಕೂಗುವ ವರ್ಗದ ಮೇಲೆ ಹಾರುವ ಬುಲೆಟ್ ಸದ್ದು. ಧಿಕ್ಕಾರಕ್ಕಿಂತ ಅಧಿಕಾರಕ್ಕೆ ಬೆಲೆ ಜಾಸ್ತಿ ಎನ್ನುವ ವ್ಯವಸ್ಥೆಯೇ ಮೇಲುಗೈ ಸಾದಿಸುತ್ತೆ ಎಂಬ ಲೆಕ್ಕಾಚಾರ ಇಟ್ಟುಕೊಂಡೇ ಕಥೆ ಹೆಣೆದಿರುವ ಉಪೇಂದ್ರ, ನಿಜವಾಗಲೂ ದೂರದೃಷ್ಠಿಯ ಕಥಾಹಂದರ ಹೊಂದಿರುವ ಯುಐ ಡಿ.20ಕ್ಕೆ ರಿಲೀಸ್ ಆಗುತ್ತಿದೆ.

ಸದ್ಯ ವಾರ್ನರ್ ಅರ್ಥಾಥ್ ಎಚ್ಚರಿಕೆ ವಿಡಿಯೋ ನೋಡಿದವರಿಗೆ ಖಂಡಿತ ಜಗತ್ತು 2040ರಲ್ಲಿ ಹೀಗಿರುತ್ತಾ? ಹೀಗಾಗುತ್ತಾ? ಆಗಲೂ ಜಾತಿ ವ್ಯವಸ್ಥೆ ಇರುತ್ತಾ? ತಿನ್ನಲು ಅನ್ನಕ್ಕೂ ಪರದಾಡುವ ಜನ, ಬಿಟ್ಟಿ ಹಂಚುವ ಮೊಬೈಲ್ ಹಿಡಿದು ಜಗತ್ತನ್ನು ಅಂಗೈಲಿಟ್ಟುಕೊಂಡು ನೋಡುತ್ತಾರಾ? ಆಗಲೂ ಜಗತ್ತಲ್ಲಿ ಅನ್ನಕ್ಕಿಂತ ಮೊಬೈಲ್ ಹಾವಳಿಯೇ ಹೆ್ಚ್ಚಾಗುತ್ತಾ? ಜಾತಿ ವ್ಯವಸ್ಥೆ ಕೊನೆ ಆಗುವುದೇ ಇಲ್ಲ ಅನ್ನುವ ಸೂಕ್ಷ್ಮ ಒಳ ಅರ್ಥವನ್ನು ಉಪೇಂದ್ರ ಇಲ್ಲಿ ಬಿಡಿಸಿಟ್ಟಿದ್ದಾರೆ. ಅಂದಹಾಗೆ, ಉಪೇಂದ್ರ ಜೊತೆ ಇಲ್ಲಿ ರೀಶ್ಮಾ ನಾಣಯ್ಯ, ಇಂದ್ರಜಿತ್ ಲಂಕೇಶ್ ಇತರರು ನಟಿಸಿದ್ದಾರೆ. ಜಿ.ಮನೋಹರನ್, ಕೆಪಿ ಶ್ರೀಕಾಂತ್ ನಿರ್ಮಾಣದ ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತವಿದೆ. ಈಗಾಗಲೇ ಟ್ರೋಲ್ ಆಗುತ್ತೆ, ಟ್ರೆಂಡ್ ಆಗುತ್ತೆ ಸಾಂಗ್ ಸಿಕ್ಕಾಪಟ್ಟೆ ಸುದ್ದಿಯಾಗಿದೆ. ಈಗ ವಾರ್ನರ್ ಕೂಡ ಅದೇ ಹಾದಿಯಲ್ಲಿದೆ. ಅದಕ್ಕೆ ಹೇಳೋದು ಉಪ್ಪಿ ಗ್ಲೋಬಲ್ ನಿರ್ದೇಶಕ ಅಂತ. ಜಾಗತಿಕ ವ್ಯವಸ್ಥೆಯ ದೂರದೃಷ್ಟಿ ಇಲ್ಲಿ ಕಾಣುತ್ತೆ. ಅದೇನೆ ಇರಲಿ, ಸದ್ಯ ಅವರ ಫ್ಯಾನ್ಸ್ ಸೇರಿದಂತೆ ಬಹುತೇಕ ಸಿನಿಮಾ ಮಂದಿಗೆ ಯುಐ ನೋಡುವ ಕಾತರವಷ್ಠೇ ಇದೆ.

Categories
ಸಿನಿ ಸುದ್ದಿ

ಎಕ್ಕ ಸಿನಿಮಾಗೆ ಚಾಲನೆ: ಇದು ಯುವ ರಾಜ್ ಕುಮಾರ್ ಹೊಸ ಚಿತ್ರ

ಪಿ.ಆರ್.ಕೆ ಪ್ರೊಡಕ್ಷನ್ಸ್‌, ಜಯಣ್ಣ ಫಿಲಂಸ್, ಕೆ.ಆರ್.ಜಿ.ಸ್ಟುಡಿಯೋಸ್‌ ಸಹಯೋಗದಲ್ಲಿ ಮೂಡಿಬರುತ್ತಿರುವ ಯುವ ರಾಜ್‌ ಕುಮಾರ್‌ ಅವರ ಬಹು ನಿರೀಕ್ಷಿತ ಚಿತ್ರ “ಎಕ್ಕ” ಗುರುವಾರ ತನ್ನ ನಾಂದಿ ಪೂಜೆ/ಮುಹೂರ್ತವನ್ನು ಶ್ರೀ ಬಂಡೆ ಮಾಕಾಳಮ್ಮ ದೇವಸ್ಥಾನದಲ್ಲಿ ನೆರವೇರಿಸಿ, ಚಿತ್ರೀಕರಣವನ್ನು ಆರಂಭಿಸಿದೆ.

ವಿಜಯ್‌ ಕಿರಗಂದೂರ್‌ ಅವರ ಪತ್ನಿ ಶ್ರೀಮತಿ ಶೈಲಜಾ ವಿಜಯ್‌ ಕ್ಲಾಪ್‌ ಮಾಡುವ ಮೂಲಕ “ಎಕ್ಕ” ಚಿತ್ರಕ್ಕೆ ನಾಂದಿ ಹಾಡಲಾಯಿತು, ಮೊದಲ ಶಾಟ್‌ ಅನ್ನು ನಟರಾಕ್ಷಸ ಡಾಲಿ ಧನಂಜಯ್‌ ನಿರ್ದೇಶಿಸಿದ್ದು, ನಿರ್ಮಾಪಕ ಕಾರ್ತಿಕ ಗೌಡ ಅವರ ತಾಯಿ ಶ್ರೀಮತಿ ವಿಜಯಲಕ್ಷ್ಮೀ ರಾಮಕೃಷ್ಣ ಕ್ಯಾಮೆರಾ ಬಟನ್‌ ಆನ್‌ ಮಾಡುವ ಮೂಲಕ ಚಾಲನೆ ನೀಡಿದರು.

ಕಾಶ್ಮೀರ, ಬೆಂಗಳೂರು, ಮೈಸೂರು, ದೆಹಲಿ, ಕೋಲ್ಕತ್ತಾ, ಮುಂಬೈ ಸೇರಿದಂತೆ ಹಲವಾರು ಸ್ಥಳಗಳಲ್ಲಿ “ಎಕ್ಕ” ಚಿತ್ರದ ಚಿತ್ರೀಕರಣ ನಡೆಯುವುದಾಗಿ ತಂಡ ಇಂದು ತಿಳಿಸಿದೆ.

ಚಿತ್ರದ ನಿರ್ದೇಶಕ ರೋಹಿತ್‌ ಪದಕಿ ಮಾತನಾಡಿ, “ಎಕ್ಕ ಒಂದು ಮೆಗಾ ಚಿತ್ರವಾಗಿದ್ದು, ಇದರ ಜವಾಬ್ದಾರಿ ಹೊತ್ತಿರುವ ಹೆಮ್ಮೆ ನನಗಿದೆ. ಚಿತ್ರದ ಎಲ್ಲ ನಿರ್ಮಾಪಕರು, ಕನ್ನಡ ಜನರು, ಯುವ ರಾಜ್‌ ಕುಮಾರ್‌ ಮತ್ತು ಅವರ ಅಭಿಮಾನಿಗಳ ಎಲ್ಲರ ನಂಬಿಕೆಯನ್ನು ಈ ಚಿತ್ರ ಉಳಿಸಲಿದೆ, ಜನರ ಮೇಲೆ ಆಳವಾದ ಭಾವನಾತ್ಮಕ ಪ್ರಭಾವ ಬೀರಲಿದೆ” ಎಂದು ತಿಳಿಸಿದರು.

ಚಿತ್ರದ ನಾಯಕ ನಟ ಯುವ ರಾಜ್‌ ಕುಮಾರ್‌ ಮಾತನಾಡಿ, “ತಾಯಿ ಆಶಿರ್ವಾದದೊಂದಿಗೆ, ಅಪ್ಪು ಚಿಕ್ಕಪ್ಪನ ಆಶಿರ್ವಾದದೊಂದಿಗೆ ಇವತ್ತು “ಎಕ್ಕ” ಚಿತ್ರವನ್ನು ಆರಂಭಿಸಿದ್ದೇವೆ. ಮೂರು ಹೆಸರಾಂತ ನಿರ್ಮಾಣ ಸಂಸ್ಥೆಗಳೊಡನೆ, ರೋಹಿತ್ ಪದಕಿ ಅಂತಹ ದೊಡ್ಡ ನಿರ್ದೇಶಕರೊಡನೆ ಕೆಲಸ ಮಾಡುತ್ತಿರುವುದು ನನಗೆ ತುಂಬಾ ಖುಷಿ ಇದೆ” ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಚಿತ್ರದ ನಾಯಕಿ ಸಂಪದಾ ಮಾತನಾಡಿ, “ಎಕ್ಕ ಚಿತ್ರದ ಆರಂಭ ಬಹಳ ಮಂಗಳಕರವಾಗಿ ನೆರವೇರಿರುವುದು ನನಗೆ ತುಂಬ ಸಂತೋಷವನ್ನುಂಟು ಮಾಡಿದೆ. ಚಿತ್ರೀಕರಣವನ್ನು ನಾನು ಕಾತುರವಾಗಿ ಎದುರು ನೋಡುತ್ತಿದೇನೆ” ಎಂದು ತಿಳಿಸಿದರು.

ರೋಹಿತ್‌ ಪದಕಿ ನಿರ್ದೇಶನದ “ಎಕ್ಕ” ಒಬ್ಬ ಯುವಕನ ಕಥೆಯನ್ನು ಹೇಳುತ್ತದೆ. ಒಬ್ಬ ಮನುಷ್ಯನು ಭೂಗತ ಲೋಕಕ್ಕೆ ತುತ್ತಾದಾಗ, ಆತನಿಗೆ ಆಗುವ ಅನುಭವಗಳನ್ನು ಹೇಳುವ ಕಥೆಯೇ “ಎಕ್ಕ”. ‌

“ಎಕ್ಕ” ಚಿತ್ರದಲ್ಲಿ ಯುವ ರಾಜ್‌ ಕುಮಾರ್‌, ಸಂಪದಾ, ಅತ್ತುಲ್‌ ಕುಲಕರ್ಣೀ, ಶ್ರುತಿ ಕೃಷ್ಣ, ರಾಹುಲ್‌ ದೇವ್‌ ಶೆಟ್ಟಿ ಮುಂತಾದವರು ನಟಿಸಲಿದ್ದು, ಚಿತ್ರಿಕಥೆಯನ್ನು ರೋಹಿತ್‌ ಪದಕಿ ಮತ್ತು ವಿಕ್ರಮ್‌ ಹತ್ವಾರ್‌ ರಚಿಸಿರುತ್ತಾರೆ. ಚಿತ್ರಕ್ಕೆ ಸಂಗೀತವನ್ನು ಚರಣ್‌ ರಾಜ್‌ ಸಂಯೋಜಿಸಲಿದ್ದು, ಹಾಡುಗಳಿಗೆ ಸಾಹಿತ್ಯವನ್ನು ವಿ.ನಾಗೇಂದ್ರ ಪ್ರಸಾದ್‌, ನಾಗಾರ್ಜುನ ಶರ್ಮ, ನಟರಾಕ್ಷಸ ಡಾಲಿ ಧನಂಜಯ, ರೋಹಿತ್‌ ಪದಕಿ ರಚಿಸಲಿದ್ದಾರೆ.

ಸತ್ಯ ಹೆಗಡೆ ಮುಖ್ಯ ಛಾಯಾಗ್ರಾಹಕರಾಗಿದ್ದು, ದೀಪು ಎಸ್‌ ಕುಮಾರ್‌ ಸಂಕಲನಕಾರರಾಗಲಿದ್ದಾರೆ ಮತ್ತು ವಿಶ್ವಾಸ್‌ ಕಶ್ಯಪ್‌ ಪ್ರೊಡಕ್ಷನ್‌ ವಿನ್ಯಾಸವನ್ನು ಮಾಡಲಿದ್ದಾರೆ. ಚಿತ್ರದ ಫೈಟ್ಸ್‌ ಗಳನ್ನು ಅರ್ಜುನ್‌ ರಾಜ್‌ ಮತ್ತು ಚೇತನ್‌ ಡಿಸೌಜಾ಼ ನಿರ್ದೇಶಿಸಲಿದ್ದಾರೆ.ಈ ಚಿತ್ರವನ್ನು ಶ್ರೀಮತಿ ಅಶ್ವಿನಿ ಪುನೀತ್‌ ರಾಜ್‌ ಕುಮಾರ್‌ ಪಿ.ಆರ್.ಕೆ ಪ್ರೊಡಕ್ಷನ್ಸ್‌ ಲಾಂಛನದಡಿಯಲ್ಲಿ, ಜಯಣ್ಣ ಮತ್ತು ಭೋಗೇಂದ್ರ ಜಯಣ್ಣ ಫಿಲಂಸ್‌ ಲಾಂಛನದಡಿಯಲ್ಲಿ‌ ಹಾಗು ಕಾರ್ತಿಕ್‌ ಗೌಡ ಮತ್ತು ಯೋಗಿ ಜಿ ರಾಜ್‌ ಕೆ.ಆರ್.ಜಿ.ಸ್ಟುಡಿಯೋಸ್‌ ಲಾಂಛನದಡಿಯಲ್ಲಿ ನಿರ್ಮಿಸಲ್ಲಿದ್ದಾರೆ. “ಎಕ್ಕ” ಚಿತ್ರವು ಜೂನ್ 6 , 2025 ರಂದು ತೆರೆ ಕಾಣುವುದಾಗಿ ಚಿತ್ರತಂಡ ತಿಳಿಸಿದೆ.

ಈ ಚಿತ್ರವು ಕನ್ನಡ ಚಿತ್ರರಂಗದಲ್ಲಿ ಹೊಸ‌ ಮೈಲಿಗಲ್ಲನ್ನು ಸಾಧಿಸಲಿದೆ ಎಂಬ ಆಶ್ವಾಸನೆಯನ್ನು ಚಿತ್ರ ತಂಡ ನೀಡಿದೆ.

error: Content is protected !!