ಶ್ರೀಮತಿ ಭಾಗ್ಯ ಕೃಷ್ಣಮೂರ್ತಿ ಅವರ ಕಾದಂಬರಿ ಆಧಾರಿತ “ಶ್ಯಾನುಭೋಗರ ಮಗಳು” ಚಿತ್ರ ಸ್ವತಂತ್ರ ಪೂರ್ವದ ಕಥೆ. ಕನ್ನಡದಲ್ಲಿ ಅತೀ ಹೆಚ್ಚು ಕಾದಂಬರಿ ಆಧಾರಿತ ಚಿತ್ರಗಳನ್ನು ನಿರ್ದೇಶಿಸಿರುವ ನಿರ್ದೇಶಕರಲ್ಲಿ ಒಬ್ಬರಾದ ಕೋಡ್ಲು ರಾಮಕೃಷ್ಣ ಈ ಚಿತ್ರದ ನಿರ್ದೇಶಕರು. ಬಿ.ಎ.ಮಧು ಚಿತ್ರಕಥೆ ಹಾಗೂ ಸಂಭಾಷಣೆ ಬರೆಯುತ್ತಿರುವ ಈ ಚಿತ್ರಕ್ಕೆ ಜೈ ಆನಂದ್ ಛಾಯಾಗ್ರಹಣ, ಶಮಿತಾ ಮಲ್ನಾಡ್ ಸಂಗೀತ ನಿರ್ದೇಶನ ಹಾಗೂ ವಸಂತ್ ರಾವ್ ಕುಲಕರ್ಣಿ ಅವರ ಕಲಾ ನಿರ್ದೇಶನವಿದೆ.
ಭುವನ್ ಫಿಲಂಸ್ ಲಾಂಛನದಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದೆ.
“ಶ್ಯಾನುಭೋಗರ ಮಗಳು” ಚಿತ್ರದ ಪ್ರಮುಖಪಾತ್ರದಲ್ಲಿ ರಾಗಿಣಿ ಪ್ರಜ್ವಲ್ ಅಭಿನಯಿಸುತ್ತಿದ್ದಾರೆ. ಮೇಘಶ್ರೀ, ನಿರಂಜನ್ ಕುಮಾರ್, ರಮೇಶ್ ಭಟ್, ಟೆನ್ನಿಸ್ ಕೃಷ್ಣ, ಶಂಕರ್ ಅಶ್ವತ್ಥ್ , ನೀನಾಸಂ ಅಶ್ವತ್ಥ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಈ ಚಿತ್ರದಲ್ಲಿ ಟಿಪ್ಪಸುಲ್ತಾನ್ ಪ್ರಮುಖ ಪಾತ್ರವಾಗಿದ್ದು, ಆ ಪಾತ್ರಕ್ಕಾಗಿ ಆಯ್ಕೆ ಕಾರ್ಯ ನಡೆಯುತ್ತಿದೆ.
ಸೆಪ್ಟೆಂಬರ್ ಕೊನೆಯ ವಾರದಿಂದ ಮೈಸೂರು, ಶ್ರೀರಂಗಪಟ್ಟಣ, ಮೇಲುಕೋಟೆ ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ.
ಕಲಾ ಸಾಮ್ರಾಟ್ ಎಸ್ ನಾರಾಯಣ್ ಪುತ್ರ ಪವನ್ ಎಸ್ ನಾರಾಯಣ್ ನೇತೃತ್ವದಲ್ಲಿ “ಕಲಾಸಾಮ್ರಾಟ್ ಫಿಲ್ಮ್ ಅಕಾಡೆಮಿ” ಆರಂಭವಾಗಿದೆ. ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಭಾರ್ಗವ ಈ ನೂತನ ಫಿಲ್ಮ್ ಅಕಾಡೆಮಿಯನ್ನು ಉದ್ಘಾಟಿಸಿದರು. ಹಿರಿಯ ನಟರಾದ ಮುಖ್ಯಮಂತ್ರಿ ಚಂದ್ರು, ಸುಂದರರಾಜ್, ವಿ.ಮನೋಹರ್, ಎಂ.ಎನ್ ಸುರೇಶ್, ನಾಯಕ ಆದಿತ್ಯ ಹಾಗೂ ನಾಯಕಿ ಅದಿತಿ ಪ್ರಭುದೇವ ಸೇರಿದಂತೆ ಅನೇಕ ಗಣ್ಯರು ಉದ್ಘಾಟನಾ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ನಾರಾಯಣ್ ಅವರು ನನ್ನನ್ನು ಚೆನ್ನೈನಲ್ಲಿ ಭೇಟಿಯಾಗಿ, ಅವರ ವೃತ್ತಿಜೀವನ ಆರಂಭಿಸಿದರು. ಕೆಲಸದ ಮೇಲೆ ಅವರಿಗಿರುವ ಶ್ರದ್ಧೆಯಿಂದ ಬಹಳ ಎತ್ತರಕ್ಕೆ ಬೆಳೆದಿದ್ದಾರೆ. ಅವರ ಮಗ ಈಗ ಫಿಲ್ಮ್ ಅಕಾಡೆಮಿ ಆರಂಭಿಸಿದ್ದಾರೆ. ಪವನ್ ಅವರ ನೂತನ ಪ್ರಯತ್ನಕ್ಕೆ ಒಳ್ಳೆಯದಾಗಲಿ ಎಂದು ಹಿರಿಯ ನಿರ್ದೇಶಕ ಭಾರ್ಗವ ಹಾರೈಸಿದರು.
ಮುಖ್ಯಮಂತ್ರಿ ಚಂದ್ರು, ಸುಂದರರಾಜ್ ಸೇರಿದಂತೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಗಣ್ಯರು “ಕಲಾ ಸಾಮ್ರಾಟ್ ಫಿಲ್ಮ್ ಅಕಾಡೆಮಿ”ಗೆ ಶುಭ ಕೋರಿದರು.
ಇಂದು ಶಿಕ್ಷಕರ ದಿನಾಚರಣೆ. ಇಂತಹ ಶುಭದಿನ ನನ್ನ ಗುರುಗಳಾದ ಭಾರ್ಗವ ಅವರು ಈ ಫಿಲ್ಮ್ ಅಕಾಡೆಮಿ ಉದ್ಘಾಟಿಸಿದ್ದು ನನಗೆ ಖುಷಿ ತಂದಿದೆ. ಪ್ರೀತಿಯಿಂದ ಇಷ್ಟು ಜನ ಗಣ್ಯರು ಬಂದಿದ್ದೀರಿ ಧನ್ಯವಾದಗಳು. ನನ್ನ ಮಗ ಪವನ್ ನನ್ನ ಜೊತೆಯಿದ್ದು ಸಾಕಷ್ಟು ಅನುಭವ ಪಡೆದುಕೊಂಡಿದ್ದಾನೆ. ಈಗ “ಕಲಾಸಾಮ್ರಾಟ್ ಫಿಲ್ಮ್ ಅಕಾಡೆಮಿ” ಅರಂಭಿಸಿದ್ದಾನೆ. ಈ ವಿಷಯ ಕುರಿತು ನನ್ನ ಬಳಿ ಪವನ್ ಹೇಳಿದಾಗ, “ಕಲಾ ಸಾಮ್ರಾಟ್” ಎಂಬ ಹೆಸರಿಟ್ಟಿದ್ದಿ. ಆ ಹೆಸರಿಗೆ ಕೆಟ್ಟ ಹೆಸರು ಬರದಂತೆ ನೋಡಿಕ್ಕೊಳ್ಳುವ ಜವಾಬ್ದಾರಿ ನಿನ್ನದು.
ಏಕೆಂದರೆ ಎಸ್. ನಾರಾಯಣ್ ಎಂದು ನನ್ನ ತಂದೆಯಿಟ್ಟ ಹೆಸರು. “ಕಲಾ ಸಾಮ್ರಾಟ್” ಜನ ಕೊಟ್ಟಿದ್ದು. ಆ ಹೆಸರಿಗೆ ಏನು ಆಗಬಾರದು ಎಂದು ಹೇಳಿದ್ದೇನೆ. ಪವನ್ ಸಹ ಶ್ರದ್ಧೆಯಿಂದ ನಡೆಸಿಕೊಂಡು ಹೋಗುತ್ತಾನೆ. ನಾಲ್ಕು ತಿಂಗಳ ಈ ಕೋರ್ಸ್ ನಲ್ಲಿ ಒಂದುವರೆ ಗಂಟೆಯ ಹಾಗೆ ತರಗತಿಗಳಿರುತ್ತದೆ. ನಟನೆ, ನಿರ್ದೇಶನ ಹಾಗೂ ಚಲನಚಿತ್ರದ ಹಲವಾರು ವಿಭಾಗಗಳಲ್ಲಿ ತರಬೇತಿಯನ್ನು “ಕಲಾಸಾಮ್ರಾಟ್ ಫಿಲ್ಮ್ ಅಕಾಡೆಮಿ”ಯಲ್ಲಿ ನೀಡಲಾಗುವುದು.
ಅನುಭವಿ ಕಲಾವಿದರು ಹಾಗೂ ತಂತ್ರಜ್ಞರು ತಮ್ಮ ಅನುಭವಗಳನ್ನು ವಿದ್ಯಾರ್ಥಿಗಳಿಗೆ ಹಂಚಲಿದ್ದಾರೆ. ಮುಖ್ಯಮಂತ್ರಿ ಚಂದ್ರು ಅವರು ಹೇಳಿದಂತೆ ಥಿಯೇಟರ್ ಮುಂದೆ ಕಟೌಟ್ ನಿಲ್ಲಿಸಿಕೊಳ್ಳುವಂತಹ ಅದ್ಭುತ ಕಲಾವಿದರು ಈ ಸಂಸ್ಥೆಯಿಂದ ಹೊರಹೊಮ್ಮಲಿ ಎಂದರು ಕಲಾಸಾಮ್ರಾಟ್ ಎಸ್.ನಾರಾಯಣ್.
ಸೆಪ್ಟೆಂಬರ್ 5 ಶಿಕ್ಷಕರ ದಿನಾಚರಣೆ ಶುಭದಿನದಂದು “ರಿಯಾ” ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಆಂದ್ರಪ್ರದೇಶದವರಾದ ವಿಜಯ ನರೇಶ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ವಿಜಯ ನರೇಶ್ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ಪತಿ ಕಣಿಗೊಂಡ ನರೇಶ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.
ಪ್ರಥಮ್ ಹಾಗೂ “ಸ್ತಬ್ಧ” ಚಿತ್ರದ ನಾಯಕ ಪ್ರತಾಪ್ ಸಿಂಹ ಈ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು.
ಇದು ಒಂದು ಹಾರರ್ ಸಿನಿಮಾ. ಹದಿನಾಲ್ಕು ಪಾತ್ರಗಳ ಜೊತೆಗೆ ಒಂದೇ ಮನೆಯಲ್ಲಿ ಈ ಚಿತ್ರದ ಕಥೆ ನಡೆಯುತ್ತದೆ. ನಾನು ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದೇನೆ. ಇದೇ 16ನೇ ತಾರೀಖು ಚಿತ್ರ ಬಿಡುಗಡೆಯಾಗುತ್ತಿದೆ. ನೋಡಿ ಹಾರೈಸಿ ಎಂದರು ಪ್ರಮುಖ ಪಾತ್ರಧಾರಿ ಕಾರ್ತಿಕ್ ವರ್ಣೆಕರ್.
ನಾಯಿಕಿ ಸಾವಿತ್ರಿ ತಮ್ಮ ಪಾತ್ರದ ಬಗ್ಗೆ ಮಾತನಾಡಿದರು. ಕಲಾವಿದರಾದ ವಿಕಾಸ್, ಶ್ವೇತಾ, ರಾಜ್ ಉದಯ್ ಮುಂತಾದವರು ತಮ್ಮ ಪಾತ್ರ ಪರಿಚಯ ಮಾಡಿಕೊಂಡರು. “ರಿಯಾ” ಪಾತ್ರಧಾರಿ ಬೇಬಿ ಅನನ್ಯ ಸಹ ತಮ್ಮ ತಮ್ಮ ಅನುಭವ ಹಂಚಿಕೊಂಡರು. ವಿತರಕರಾದ ಪಿ.ವಿ.ಆರ್ ಸ್ವಾಮಿ, ಚೇತನ್ ಹಾಗೂ ಚಿತ್ರತಂಡದ ಅನೇಕ ಸದಸ್ಯರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ವೃತ್ತಿಯಲ್ಲಿ ಫೋಟೋಗ್ರಾಫರ್ ಆಗಿರುವ, “ರಿಯಾ” ಚಿತ್ರದ ನಿರ್ಮಾಪಕ ನರೇಶ್ ಚಿತ್ರತಂಡಕ್ಕೆ ಹಾಗೂ ಗಣ್ಯರಿಗೆ ಧನ್ಯವಾದ ತಿಳಿಸಿ, ಇದೇ ಹದಿನಾರರಂದು ಬಿಡುಗಡೆಯಾಗಲಿರುವ ನಮ್ಮ ಚಿತ್ರಕ್ಕೆ ನಿಮ್ಮೆಲ್ಲರ ಹಾರೈಕೆ ಇರಲಿ ಎಂದರು.
ಎಂಭತ್ತರ ದಶಕದಲ್ಲಿ ದ್ವಾರಕೀಶ್ ನಿರ್ಮಾಣದ ” ಗುರು ಶಿಷ್ಯರು ” ಚಿತ್ರ ಕನ್ನಡಿಗರ ಮನ ಗೆದ್ದಿತ್ತು. ಈಗ ಆದೇ ಹೆಸರಿನ ಚಿತ್ರ ಮತ್ತೊಮ್ಮೆ ಬರುತ್ತಿದೆ. ಶರಣ್ ಕೃಷ್ಣ ಹಾಗೂ ತರುಣ್ ಕಿಶೋರ್ ಸುಧೀರ್ ನಿರ್ಮಿಸಿರುವ ಈ ಚಿತ್ರವನ್ನು ಜಡೇಶ್ ಕೆ ಹಂಪಿ ನಿರ್ದೇಶಿಸಿದ್ದಾರೆ.
ಶರಣ್ ಹಾಗೂ ನಿಶ್ವಿಕಾ ನಾಯ್ಡು ನಾಯಕ – ನಾಯಕಿಯಾಗಿ ನಟಿಸಿರುವ ಈ ಚಿತ್ರ, ದೇಸಿ ಕ್ರೀಡೆಯಾದ ಖೋಖೋ ಆಟದ ಸುತ್ತ ನಡೆಯುತ್ತದೆ.. ಖೋಖೋ ಕೋಚರ್ ಆಗಿ ಶರಣ್ ಕಾಣಿಸಿಕೊಂಡಿದ್ದಾರೆ. ವಿಶೇಷವೆಂದರೆ ಹದಿಮೂರು ಜನ ಖೋಖೋ ಆಟಗಾರರ ಪಾತ್ರದಲ್ಲಿ ಆರು ಜನ ಸಿನಿರಂಗದ ನಟರ ಪುತ್ರರು ನಟಿಸಿದ್ದಾರೆ. ಶರಣ್ ಪುತ್ರ ಹೃದಯ್, ಪ್ರೇಮ್(ನೆನಪಿರಲಿ) ಪುತ್ರ ಏಕಾಂತ್, ರವಿಶಂಕರ್ ಗೌಡ ಪುತ್ರ ಸೂರ್ಯ, ನವೀನ್ ಕೃಷ್ಣ ಪುತ್ರ ಹರ್ಷಿತ್, ಬುಲೆಟ್ ಪ್ರಕಾಶ್ ಪುತ್ರ ರಕ್ಷಕ್ ಹಾಗೂ ಶಾಸಕ ರಾಜು ಗೌಡ ಅವರ ಪುತ್ರ ಮಣಿಕಂಠ ಈ ಚಿತ್ರದಲ್ಲಿ ನಟಿಸಿದ್ದಾರೆ. ಇವರಲ್ಲದೆ ಆಸಿಫ್ ಮುಲ್ಲಾ, ಸಾಂಬಶಿವ, ಸಂದೇಶ್, ಸಾಗರ್, ರುದ್ರಗೌಡ, ಅನುಪ್ ರಾಮಣ್ಣ ಮತ್ತು ಅಮಿತ್ ಬಿ ಕೂಡ ಖೊಖೊ ಆಟಗಾರರಾಗಿ ಕಾಣಿಸಿಕೊಂಡಿದ್ದಾರೆ.
ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ. ಹಿರಿಯ ನಟ ದ್ವಾರಕೀಶ್, ನಾಯಕರಾದ ದುನಿಯಾ ವಿಜಯ್ ಹಾಗೂ ಪ್ರಜ್ವಲ್ ದೇವರಾಜ್ ಸೇರಿ ಈ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದರು. ಇದೇ ಸಂದರ್ಭದಲ್ಲಿ ಹಿರಿಯ ಕಲಾವಿದರಾದ ದ್ವಾರಕೀಶ್, ಎಂ.ಎಸ್.ಉಮೇಶ್, ಎಂ.ಎನ್ ಲಕ್ಷ್ಮೀದೇವಿ ಹಾಗೂ ಡಿಂಗ್ರಿ ನಾಗರಾಜ್ ಅವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿದ ಹಿರಿಯರು ಚಿತ್ರತಂಡಕ್ಕೆ ಮನತುಂಬಿ ಹಾರೈಸಿದರು.
ಶರಣ್, ಪ್ರೇಮ್, ರವಿಶಂಕರ್ ಗೌಡ, ನವೀನ್ ಕೃಷ್ಣ ಹಾಗೂ ರಾಜು ಗೌಡ ದಂಪತಿಗಳು ತಮ್ಮ ಮಕ್ಕಳು ಈ ಸಿನಿಮಾಗೆ ಆಯ್ಕೆಯಾದ ಬಗ್ಗೆ ತಿಳಿಸಿದರು. ಬುಲೆಟ್ ಪ್ರಕಾಶ್ ಪುತ್ರ ರಕ್ಷಕ್ ಸೇರಿದಂತೆ ಚಿತ್ರದಲ್ಲಿ ನಟಿಸಿರುವ ಎಲ್ಲಾ ಹುಡಗರು ತಮ್ಮ ಅನುಭವ ಹಂಚಿಕೊಂಡರು.
ಚಿತ್ರ ಸಾಗಿ ಬಂದ ಕುರಿತು “ಜಂಟಲ್ ಮನ್” ಖ್ಯಾತಿಯ ನಿರ್ದೇಶಕ ಜಡೇಶ್ ಕೆ ಹಂಪಿ ಮಾಹಿತಿ ನೀಡಿದರು. ಉತ್ತಮ ಪಾತ್ರ ನೀಡಿರುವುದಕ್ಕೆ ನಿಶ್ವಿಕಾ ನಾಯ್ಡು ಧನ್ಯವಾದ ತಿಳಿಸಿದರು.
ಈಗಾಗಲೇ ಬಿಡುಗಡೆಯಾಗಿರುವ ಹಾಡು ಹಿಟ್ ಆಗಿರುವುದಕ್ಕೆ ಅಜನೀಶ್ ಲೋಕನಾಥ್ ಸಂತೋಷಪಟ್ಟರು.
ಇದೊಂದು ಉತ್ತಮ ಚಿತ್ರ. ತುಂಬಾ ಚೆನ್ನಾಗಿ ಮೂಡಿಬಂದಿದೆ. “ರಾಬರ್ಟ್ ನಲ್ಲಿ ದುಡಿದ ದುಡ್ಡನೆಲ್ಲಾ ಈ ಚಿತ್ರಕ್ಕೆ ಹಾಕಿದ್ದೇನೆ. ಶಾಸಕ ರಾಜು ಗೌಡ ನಮಗೆ ಬೆನ್ನೆಲುಬಾಗಿ ನಿಂತಿದ್ದಾರೆ. ದೇಸಿ ಕ್ರೀಡೆ ಕುರಿತಾದ ಸಿನಿಮಾಗಳು ನಮ್ಮಲ್ಲಿ ಬರುವುದು ತುಂಬಾ ಕಡಿಮೆ. ಹಾಗಾಗಿ ಖೊಖೊ ಅಂತಹ ಆಟವನ್ನು ನಾವು ಆಯ್ಕೆ ಮಾಡಿಕೊಂಡೆವು. ಇದೇ ಇಪ್ಪತ್ಮೂರರಂದು ಚಿತ್ರ ತೆರೆಗೆ ಬರುತ್ತಿದೆ. ಒಂದು ಖುಷಿ ವಿಚಾರವೆಂದರೆ ನಾವು ಬಿಡುಗಡೆಗೂ ಪೂರ್ವದಲ್ಲೇ ಸೇಫ್ ಆಗಿದ್ದೀವೆ ಎಂದು ತರುಣ್ ಕಿಶೋರ್ ಸುಧೀರ್ ತಿಳಿಸಿದರು.
ನಾನು ಧನ್ಯವಾದ ಹೇಳಲು ಶುರು ಮಾಡಿದರೆ ಎರಡು ಗಂಟೆ ಬೇಕು ಅಷ್ಟು ಜನರನ್ನು ನಾನು ನೆನಪಿಸಿಕೊಳ್ಳಬೇಕು ಎಲ್ಲರಿಗೂ ಧನ್ಯವಾದ. ನನ್ನ ಮಗ ಈ ಚಿತ್ರದಲ್ಲಿ ನಟಿಸಿದ್ದಾನೆ. ನನ್ನ ಮಗ ಒಳ್ಳೆಯ ನಟನಾದನೋ? ಇಲ್ಲವೋ? ಗೊತ್ತಿಲ್ಲ. ಈ ಸಿನಿಮಾ ಸಹವಾಸದಿಂದ ಒಳ್ಳೆಯ ಮನುಷ್ಯನಾಗಿದ್ದಾನೆ. ನನ್ನ ಮಗನಿಗೆ ಸ್ನೇಹಿತ ದುನಿಯಾ ವಿಜಯ್ ಸಾಕಷ್ಟು ಸಲಹೆ ನೀಡಿದ್ದಾರೆ. ಎಲ್ಲಾ ಮಕ್ಕಳು ಚೆನ್ನಾಗಿ ಅಭಿನಯಿಸಿದ್ದಾರೆ ಎಂದರು ಶರಣ್.
ನಾನು ಆಣೆ ಮಾಡಿ ಹೇಳುತ್ತೇನೆ ಈ ಸಿನಿಮಾ ಸೂಪರ್ ಹಿಟ್ ಆಗುವುದು ಖಂಡಿತಾ. ಮುಂದೊಂದು ದಿನ ಈ ಮಕ್ಕಳನ್ನಿಟ್ಟು ಕೊಂಡು ನಾನು ಒಂದು ಸಿನಿಮಾ ನಿರ್ದೇಶನ ಮಾಡುತ್ತೇನೆ ಎಂದರು ದುನಿಯಾ ವಿಜಯ್.
ನಾನು ಬೇರೆ ಚಿತ್ರದ ಸಮಾರಂಭಕ್ಕೆ ಬಂದಿದ್ದೀನಿ ಅನಿಸುತ್ತಿಲ್ಲ. ನಮ್ಮ ಸಿನಿಮಾನೇ ಅನಿಸುತ್ತಿದೆ. ಇದರಲ್ಲಿ ಅಭಿನಯಿಸಿರುವವರು ಹುಡುಗರಲ್ಲ . ಹುಲಿಗಳು ಅಷ್ಟು ಚೆನ್ನಾಗಿದೆ ಅವರೆಲ್ಲರ ಅಭಿನಯ ಎಂದು ಪ್ರಜ್ವಲ್ ದೇವರಾಜ್ ಪ್ರಶಂಸೆಯ ಮಾತುಗಳಾಡಿದರು.
ಮಾಲತಿ ಸುಧೀರ್, ನಂದ ಕಿಶೋರ್, ಡಿ.ಎಸ್ ಮ್ಯಾಕ್ಸ್ ದಯಾನಂದ್ ಸೇರಿದಂತೆ ಮುಂತಾದವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಬಿಗ್ ಬಾಸ್ ಖ್ಯಾತಿಯ ಶಶಿ ನಾಯಕನಾಗಿ ನಟಿಸಿರುವ “ಮೆಹಬೂಬ” ಚಿತ್ರಕ್ಕಾಗಿ ರಘುಶಾಸ್ತ್ರಿ ಅವರು ಬರೆದಿರುವ “ದೇವರು ದೇವರು” ಎಂಬ ಭಾವೈಕ್ಯತೆ ಸಾರುವ ಹಾಡು ಇತ್ತೀಚೆಗೆ ಬಿಡುಗಡೆಯಾಗಿದೆ. “ಸರಿಗಮಪ” ಖ್ಯಾತಿಯ ಮನೋಜವಂ ಆತ್ರೇಯ ಸುಮಧುರವಾಗಿ ಹಾಡಿರುವ ಈ ಗೀತೆಗೆ ಮ್ಯಾಥ್ಯೂಸ್ ಮನು ಸಂಗೀತ ನೀಡಿದ್ದಾರೆ. ಜಂಕಾರ್ ಮ್ಯೂಸಿಕ್ ಮೂಲಕ ಬಿಡುಗಡೆಯಾಗಿರುವ ಈ ಹಾಡು ಅಪಾರ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದ್ದು, ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ.
ಸ್ಕಂದ ಎಂಟರ್ ಟೈನ್ ಮೆಂಟ್ ಲಾಂಛನದಲ್ಲಿ ಪ್ರಸನ್ನ ಶ್ರೀನಿವಾಸ್ ನಿರ್ಮಿಸುತ್ತಿರುವ ಈ ಚಿತ್ರವನ್ನು ಅನೂಪ್ ಆಂಟೊನಿ ನಿರ್ದೇಶಿಸುತ್ತಿದ್ದಾರೆ. ಕೇರಳದಲ್ಲಿ ನಡೆದ ನೈಜಘಟನೆಯೊಂದನ್ನು ಆಧರಿಸಿ ಈ ಚಿತ್ರ ಸಿದ್ಧವಾಗುತ್ತಿದೆ. ಚಿತ್ರೀಕರಣ ಮುಕ್ತಾಯ ಹಂತ ತಲುಪಿದ್ದು, ಪೋಸ್ಟ್ ಪ್ರೊಡಕ್ಷನ್ ಬಿರುಸಿನಿಂದ ಸಾಗಿದೆ. ಬೆಂಗಳೂರಿನಲ್ಲೇ ಹೆಚ್ಚಿನ ಚಿತ್ರೀಕರಣವಾಗಿದೆ.
ಮ್ಯಾಥ್ಯೂಸ್ ಮನು ಸಂಗೀತ ನಿರ್ದೇಶನವಿರುವ ಈ ಚಿತ್ರದ ಹಾಡುಗಳನ್ನು ಯೋಗರಾಜ್ ಭಟ್ ಹಾಗೂ ರಘುಶಾಸ್ತ್ರಿ ರಚಿಸಿದ್ದಾರೆ. ಸಂಭಾಷಣೆಯನ್ನು ರಘುಶಾಸ್ತ್ರಿ ಬರೆದಿದ್ದಾರೆ.ಕಿರಣ್ ಹಂಪಾಪುರ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ಮಾಸ್ ಮಾದ ಸಾಹಸ ನಿರ್ದೇಶನ ಹಾಗೂ ಕಲೈ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.
ಶಶಿ, ಪಾವನ ಗೌಡ, ಕಬೀರ್ ದುಹಾನ್ ಸಿಂಗ್, ಸಲ್ಮಾನ್(ಕಿರಿಕ್ ಪಾರ್ಟಿ), ಬುಲೆಟ್ ಪ್ರಕಾಶ್, ಜೈಜಗದೀಶ್, ವಿಜಯಲಕ್ಷ್ಮಿ ಸಿಂಗ್, ಕಲ್ಯಾಣಿರಾಜು, ಸಂದೀಪ್, ಧನರಾಜ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
ವಿಜಯ್ ಸೇತುಪತಿ ಮತ್ತು ಸೂರಿ ನಟಿಸುತ್ತಿರುವ ತಮಿಳು ಚಿತ್ರ ‘ವಿಡುದಲೈ’ ಇದೀಗ ಎರಡು ಭಾಗಗಳಲ್ಲಿ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ.ಈ ಚಿತ್ರವನ್ನು ರೆಡ್ ಜಯಂಟ್ ಮೂವಿಸ್ನಡಿ ಉದಯನಿಧಿ ಸ್ಟಾಲಿನ್ ಅರ್ಪಿಸಿದರೆ, ಆರ್.ಎಸ್. ಇನ್ಫೋಟೈನ್ಮೆಂಟ್ನಡಿ ಎಲ್ರೆಡ್ ಕುಮಾರ್ ನಿರ್ಮಿಸುತ್ತಿದ್ದಾರೆ. ಕಾಲಿವುಡ್ನ ಜನಪ್ರಿಯ ನಿರ್ದೇಶಕರಲ್ಲಿ ವೆಟ್ರಿಮಾರನ್ ಪ್ರಮುಖರು. ಕೆಲವು ತಿಂಗಳುಗಳ ಹಿಂದೆ ಅವರು ‘ವಿಡುದಲೈ’ ಎಂಬ ಚಿತ್ರವನ್ನು ನಿರ್ದೇಶಿಸುತ್ತಿರುವುದಾಗಿ ಘೋಷಿಸಿದಾಗಲೇ, ಈ ಚಿತ್ರದ ಬಗ್ಗೆ ಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲ ಇತ್ತು. ಕ್ರಮೇಣ ಜನಪ್ರಿಯ ಕಲಾವಿದರು ಮತ್ತು ತಂತ್ರಜ್ಞರು ಚಿತ್ರತಂಡಕ್ಕೆ ಸೇರ್ಪಡೆಯಾಗುತ್ತಿದ್ದಂತೆಯೇ, ಈ ಚಿತ್ರದ ಬಗ್ಗೆ ನಿರೀಕ್ಷೆಗಳು ಹೆಚ್ಚಾಗಿವೆ.
ಸದ್ಯ, ‘ವಿಡುದಲೈ’ ಚಿತ್ರದ ಭಾಗ ಒಂದರ ಚಿತ್ರೀಕರಣ ಸಂಪೂರ್ಣವಾಗಿದ್ದು, ಪೋಸ್ಟ್ಪ್ರೊಡಕ್ಷನ್ ಕೆಲಸಗಳು ಪ್ರಗತಿಯಲ್ಲಿವೆ. ಎರಡನೆಯ ಭಾಗದ ಚಿತ್ರೀಕರಣ ಸದ್ಯದಲ್ಲೇ ಪ್ರಾರಂಭವಾಗಲಿದ್ದು ಸಿರುಮಲೈ, ಕೊಡೈಕೆನಾಲ್ ಮುಂತಾದ ಕಡೆ ಚಿತ್ರೀಕರಣ ನಡೆಯಲಿದೆ. ಈ ಎರಡು ಚಿತ್ರಗಳು ದೊಡ್ಡ ಬಜೆಟ್ನಲ್ಲಿ ನಿರ್ಮಾಣವಾಗುತ್ತಿದ್ದು, ತಮಿಳಿನ ಕಾಸ್ಟ್ಲಿ ಚಿತ್ರಗಳ ಪೈಕಿ ‘ವಿಡುದಲೈ’ ಸಹ ಸೇರ್ಪಡೆಯಾಗಲಿದೆ. ಈ ಚಿತ್ರವನ್ನು ಕೋಟ್ಯಂತರ ವೆಚ್ಚದಲ್ಲಿ ಅದ್ಧೂರಿಯಾಗಿ ನಿರ್ಮಿಸಲಾಗಿದ್ದು, ಚಿತ್ರಕ್ಕಾಗಿ ವಿಶೇಷವಾಗಿ 10 ಕೋಟಿ ರೂ. ವೆಚ್ಚದ ರೈಲು ಮತ್ತು ರೈಲ್ವೇ ಸೇತುವೆಯ ಸೆಟ್ ನಿರ್ಮಾಣ ಮಾಡಲಾಗಿದೆ. ನಿಜವಾದ ರೈಲ್ವೆ ಬೋಗಿಗಳು ಮತ್ತು ಸೇತುವೆಯನ್ನು ನಿರ್ಮಿಸುವುದಕ್ಕೆ ಬಳಸಲಾಗುವ ಪರಿಕರಗಳನ್ನೇ ಈ ಸೆಟ್ ನಿರ್ಮಾಣಕ್ಕೂ ಬಳಸಲಾಗಿರುವುದು ವಿಶೇಷ.
ಇದಲ್ಲದೆ, ಸಿರುಮಲೈ ಬಳಿ ಜಾಕಿ ಅವರ ಕಲಾ ನಿರ್ದೇಶನದಲ್ಲಿ ಒಂದು ಹಳ್ಳಿಯನ್ನು ನಿರ್ಮಿಸಲಾಗಿದೆ. ಸದ್ಯ ಕೊಡೈಕೆನಾಲ್ನಲ್ಲಿ ಪೀಟರ್ ಹೇನ್ಸ್ ನಿರ್ದೇಶನದಲ್ಲಿ ಸಾಹಸಮಯ ದೃಶ್ಯಗಳನ್ನು ಚಿತ್ರೀಕರಿಸುವುದಕ್ಕೆ ತಯಾರಿ ನಡೆಸಲಾಗಿದ್ದು, ಇದಕ್ಕಾಗಿ ಬಲ್ಗೇರಿಯಾದಿಂದ ಸಾಹಸ ಕಲಾವಿದರನ್ನು ಕರೆಸಲಾಗಿದೆ. ಈ ಆಕ್ಷನ್ ದೃಶ್ಯಗಳಲ್ಲಿ ಬಲ್ಗೇರಿಯಾದ ಸಾಹಸ ಕಲಾವಿದರು ಸಹ ಭಾಗವಹಿಸುತ್ತಿರುವುದು ವಿಶೇಷ. ‘ವಿಡುದಲೈ’ ಚಿತ್ರದಲ್ಲಿ ವಿಜಯ್ ಸೇತುಪತಿ, ಸೂರಿ, ಭವಾನಿ ಶ್ರೀ, ಪ್ರಕಾಶ್ ರಾಜ್, ಗೌತಮ್ ವಾಸುದೇವ ಮೆನನ್, ರಾಜೀವ್ ಮೆನನ್ ಮುಂತಾದವರು ನಟಿಸುತ್ತಿದ್ದಾರೆ.
ಸಾವಿರಕ್ಕೂ ಹೆಚ್ಚು ಚಿತ್ರಗಳಿಗೆ ಸಂಗೀತ ಸಂಯೋಜಿಸಿರುವ ‘ಇಸೈಜ್ನಾನಿ’ ಇಳಯರಾಜ ಈ ಚಿತ್ರದ ಸಂಗೀತದ ಜವಾಬ್ದಾರಿ ಹೊತ್ತಿದ್ದು, ವೇಲ್ರಾಜ್ ಛಾಯಾಗ್ರಹಣ ಮಾಡುತ್ತಿದ್ದಾರೆ. ಈ ಚಿತ್ರದ ವಿತರಣೆಯ ಜವಾಬ್ದಾರಿಯನ್ನು ರೆಡ್ ಜೈಂಟ್ ಮೂವೀಸ್ ವಹಿಸಿಕೊಂಡಿದ್ದು, ಸದ್ಯದಲ್ಲೇ ‘ವಿಡುದಲೈ’ ಮೊದಲ ಭಾಗದ ಬಿಡುಗಡೆ ದಿನಾಂಕ ಘೋಷಣೆಯಾಗಲಿದೆ.
ಹೆಸರಾಂತ ಹೊಂಬಾಳೆ ಫಿಲಂಸ್ ಮೂಲಕ ವಿಜಯ್ ಕಿರಗಂದೂರು ನಿರ್ಮಿಸಿರುವ, ರಿಷಬ್ ಶೆಟ್ಟಿ ನಿರ್ದೇಶನ ಹಾಗೂ ನಟನೆಯ, ಬಹು ನಿರೀಕ್ಷಿತ “ಕಾಂತಾರ” ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು,. ಅಪಾರ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿರುವ ಈ ಚಿತ್ರದ ಟ್ರೇಲರ್ ಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ.
“ಕಾಂತಾರ” ಎಂದರೆ ನಿಗೂಡವಾದ ಕಾಡು. ಪ್ರಕೃತಿ ಹಾಗೂ ಮನುಷ್ಯನ ನಡುವಿನ ಅವಿನಾಭಾವ ಸಂಬಂಧವನ್ನು ಜಾನಪದ ಸೊಗಡಿನ ಮೂಲಕ ತೋರಿಸುವ ಪ್ರಯತ್ನ ಈ ಚಿತ್ರದಲ್ಲಾಗಿದೆ. ಭೂಮಿಯ ಸುತ್ತ ಈ ಕಥೆ ನಡೆಯುತ್ತದೆ. ದಕ್ಷಿಣ ಕನ್ನಡದ ಭೂಮಿ, ಪರಶುರಾಮ ಸೃಷ್ಟಿ ಎಂದೆ ಪ್ರಸಿದ್ದಿ. ಈ ಭಾಗದಲ್ಲಿ ನಡೆಯುವ ದೈವಾರಾಧನೆ, ಕಂಬಳ ಮುಂತಾದ ಜಾನಪದ ಕ್ರೀಡೆಗಳನ್ನು “ಕಾಂತಾರ” ಚಿತ್ರದಲ್ಲಿ ನೋಡುವುದೆ ಕಣ್ಣಿಗೆ ಹಬ್ಬ.. ಟ್ರೇಲರ್ ನಲ್ಲೇ ಇಷ್ಟು ಕುತೂಹಲ ಮೂಡಿಸಿರುವ “ಕಾಂತಾರ” ಚಿತ್ರ ಇದೇ ತಿಂಗಳ 30ರಂದು ಬಿಡುಗಡೆಯಾಗುತ್ತಿದೆ.
ಶಿವ ಹಾಗೂ ಮುರಳಿಧರ ಎಂಬ ಮುಖ್ಯಪಾತ್ರಗಳಿದ್ದು, ಶಿವನಾಗಿ ರಿಷಬ್ ಶೆಟ್ಟಿ, ಮುರಳಿಧರ ಪಾತ್ರದಲ್ಲಿ ಕಿಶೋರ್ ಕಾಣಿಸಿಕೊಂಡಿದ್ದಾರೆ. “ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ” ಚಿತ್ರದ ನಂತರ ರಿಷಬ್ ಶೆಟ್ಟಿ ಮತ್ತೊಂದು ಸಾಮಾಜಿಕ ಕಳಕಳಿಯುಳ್ಳ ಚಿತ್ರವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಹಾಡು, ಟ್ರೇಲರ್ ನಿಂದ ಈಗಾಗಲೇ ಜನಮನ ಗೆದ್ದಿರುವ “ಕಾಂತಾರ” ಚಿತ್ರದ ಬಿಡುಗಡೆಗಾಗಿ ಕನ್ನಡ ಕಲಾರಸಿಕರು ಕಾತುರದಿಂದ ಕಾಯುತ್ತಿದ್ದಾರೆ.
ಅಭಿನಯ ಚಕ್ರವರ್ತಿ ಸುದೀಪ್ ಅವರು ರಾಷ್ಟ್ರದಾದ್ಯಂತ ಖ್ಯಾತಿ ಜೊತೆಗೆ ಅಭಿಮಾನ ಸಮೂಹವನ್ನು ಹೊಂದಿರುವ ಕನ್ನಡದ ಮೇರುನಟ. ಸೆಪ್ಟೆಂಬರ್ 2ರಂದು ಸುದೀಪ್ ಅವರ ಜನ್ಮದಿನ. ಈ ಜನ್ಮದಿನವನ್ನು ಸ್ಮರಣೀಯವಾಗಿಸಲು ಮತ್ತು ಸಂಭ್ರಮವನ್ನು ದುಪ್ಪಟ್ಟುಗೊಳಿಸಲು ಮಾನಸ್ ಕುಮಾರ್ ಎಂಬ ಹೆಸರಾಂತ ಮರಳುಶಿಲ್ಪಿ ಒರಿಸ್ಸಾದ ಸಮುದ್ರ ತೀರದಲ್ಲಿ ಕಿಚ್ಚ ಸುದೀಪ್ ಅವರ ಮರಳು ಶಿಲ್ಪವನ್ನು ನಿರ್ಮಿಸುವ ಮೂಲಕ ಶುಭಾಶಯ ತಿಳಿಸಿದ್ದಾರೆ.
ಈ ಶಿಲ್ಪವು 20 ಅಡಿ ಅಗಲ, 7 ಅಡಿ ಎತ್ತರವಿದೆ. ಈ ಶಿಲ್ಪಕ್ಕಾಗಿ ಸುಮಾರು 20 ಟನ್ ಮರಳನ್ನು ಬಳಸಲಾಗಿದೆ ಎಂದು ಶಿಲ್ಪಿ ತಿಳಿಸಿದ್ದಾರೆ. ಸುದೀಪ್ ಅವರ ಆಪ್ತರಾದ ವೀರಕಪುತ್ರ ಶ್ರೀನಿವಾಸ ಅವರು ಯಾವ ಫೋಟೋ ಬಳಸಬೇಕು ಮತ್ತು ಕನ್ನಡ ಬರವಣಿ ಹೇಗಿರಬೇಕು ಎಂಬ ಗೊಂದಲಕ್ಕೆ ಅಗತ್ಯವಿದ್ದ ಮಾಹಿತಿಯನ್ನು ನೀಡಿರುವುದನ್ನು ತಿಳಿಸಿದರು.
ದಕ್ಷಿಣ ಭಾರತದಲ್ಲಿಯೇ ಈ ಮರಳು ಶಿಲ್ಪ ಗೌರವಕ್ಕೆ ಪಾತ್ರವಾಗುತ್ತಿರುವ ಎರಡನೇ ಕಲಾವಿದರೆಂದರೆ ಅದು ಕಿಚ್ಚ ಸುದೀಪ್ ಅವರು ಮಾತ್ರ.
ಈ ಹಿಂದೆ 2020ರಲ್ಲಿ ಡಾ.ವಿಷ್ಣುವರ್ಧನ್ ಅವರ 70ನೇ ಜನ್ಮದಿನ ಪ್ರಯುಕ್ತ ಮರಳು ಶಿಲ್ಪದ ಗೌರವ ನೀಡಲಾಗಿತ್ತು ಎಂಬುದು ಬಿಟ್ಟರೆ ಇದುವರೆಗೆ ಯಾವುದೇ ದಕ್ಷಿಣ ಭಾರತದ ನಟರಿಗೆ ಈ ಗೌರವ ದಕ್ಕಿರಲಿಲ್ಲ.
ಈಗ ಎರಡನೆಯವರಾಗಿ ಕಿಚ್ಚ ಸುದೀಪ್ ಅವರು ಅಂತಹ ಗೌರವವಕ್ಕೆ ಪಾತ್ರರಾಗಿದ್ದಾರೆ. ನಿನ್ನೆ ತಾನೇ ಅಂಚೆ ಇಲಾಖೆಯಿಂದ ವಿಶೇಷ ಲಕೋಟೆಯ ಗೌರವವನ್ನು ಪಡೆದಿದ್ದಂತಹ ಸುದೀಪ್ ಅವರು ಈಗ ಮರಳು ಶಿಲ್ಪ ಗೌರವಕ್ಕೂ ಪಾತ್ರರಾಗಿರುವುದು ಅವರ ಅಭಿಮಾನಿಗಳನ್ನು ಖುಷಿಯಿಂದ ಕುಣಿಯುವಂತೆ ಮಾಡಿದೆ.
ಕಿಚ್ಚ ಸುದೀಪ್ ಕನ್ಮಡ ಚಿತ್ರರಂಗ ಮಾತ್ರವಲ್ಲ, ಭಾರತೀಯ ಚಿತ್ರರಂಗ ಮೆಚ್ಚುವಂತಹ ನಟ. ಅವರು ಸೆಪ್ಟೆಂಬರ್ 2 ತಮ್ಮಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. ಅಭಿಮಾನಿಗಳು ಗುರುವಾರ ರಾತ್ರಿಯೇ ಪ್ರೀತಿಯ ನಾಯಕನ ಮನೆ ಎದುರು ಸಾಲುಗಟ್ಟಿ ನಿಂತು ಶುಭ ಕೋರಿದ್ದಾರೆ.
ಪ್ರತಿ ಹುಟ್ಟುಹಬ್ಬದಲ್ಲೂ ಅಭಿಮಾನಿಗಳು ದೊಡ್ಡ ಹಬ್ಬದಂತೆ ಸಡಗರದಿಂದ ಆಚರಿಸುತ್ತಾರೆ. ಈ ಬಾರಿಯೂ ಅದೇ ರೀತಿ ಹಬ್ಬ ಅಚರಿಸಿದ್ದಾರೆ. ಈ ನಡುವೆ ಕಿಚ್ಚ ಸುದೀಪ ಅವರು, ಸರ್ಕಾರದ ಪಶುಸಂಗೋಪನೆ ಇಲಾಖೆಯ ರಾಯಭಾರಿಯಾಗಿದ್ದಾರೆ. ಪಶು ಸಂಗೋಪನೆ ಇಲಾಖೆ ಜಾನುವರುಗಳ ರಕ್ಷಣೆಗೆ ಕೈಗೊಂಡಿರುವ ಮಹತ್ವಾಕಾಂಕ್ಷೆ ಯೋಜನೆಯದ ಪುಣ್ಯಕೋಟಿ ದತ್ತು ಯೋಜನೆಯ ರಾಯಭಾರಿ ಆಗಿದ್ದಾರೆ.
ಅವರ ಹುಟ್ಟು ಹಬ್ಬದ ಸವಿನೆನಪಿಗೆ ಪಶು ಸಂಗೋಪನೆ ಇಲಾಖೆ ಸಚಿವರಾದ ಪ್ರಭು ಚವ್ಹಾಣ್ ಅವರು, ಸುದೀಪ್ ರಾಯಭಾರಿ ಆಗುವ ಮೂಲಕ ಗೋ ಸಂಪತ್ತಿನ ರಕ್ಷಣೆಗೆ ಕೈ ಜೋಡಿಸಬೇಕು ಎಂದಿದ್ದಾರೆ.
ಕನ್ನಡ ಚಿತ್ರರಂಗದ ಮೋಹಕತಾರೆ ರಮ್ಯಾ ಮತ್ತೆ ಸುದ್ದಿಯಾಗಿದ್ದಾರೆ. ಹೌದು, ರಮ್ಯಾ ಸ್ಯಾಂಡಲ್ ವುಡ್ ಕ್ವೀನ್ ಆಗಿ ಅಬ್ಬರಿಸಿದ್ದು ಗೊತ್ತೇ ಇದೆ. ನಾಯಕಿಯಾಗಿ ಬಿಝಿಯಾಗಿದ್ದ ಸಮಯದಲ್ಲೇ ಅವರು, ಚಿತ್ರರಂಗಕ್ಕೆ ಬ್ರೇಕ್ ನೀಡಿ, ರಾಜಕೀಯದತ್ತ ಮುಖ ಮಾಡಿದ್ದರು. ಇನ್ನೇನು ಸಿನಿಮಾರಂಗವನ್ನು ಮರೆತೇ ಬಿಟ್ಟರು ಅಂದುಕೊಳ್ಳುತ್ತಿದ್ದಂತೆಯೇ ಅವರು ಪುನಃ ಚಿತ್ರರಂಗಕ್ಕೆ ರೀ ಎಂಟ್ರಿಯಾಗಿದ್ದಾರೆ.
ಹೌದು ಆ ಕುರಿತಂತೆ ಸ್ವತಃ ರಮ್ಯಾ ಅವರೇ ಪತ್ರಿಕಾ ಪ್ರಕಟಣೆ ನೀಡಿದ್ದಾರೆ. ಅವರು ಈಗ ನಟಿಯಾಗಿ ಅಲ್ಲ, ನಿರ್ಮಾಪಕಿಯಾಗಿ ಇಂಡಸ್ಟ್ರಿ ಗೆ ಎಂಟ್ರಿಯಾಗುತ್ತಿದ್ದಾರೆ. ಆ ಬಗ್ಗೆ ಅವರು ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ಅದೇನೆ ಇರಲಿ ರಮ್ಯಾ ಈಗ ನಿರ್ಮಾಪಕಿಯಾಗುತ್ತಿದ್ದಾರೆ ಅವರು ಆ್ಯಪಲ್ ಬಾಕ್ಸ್ ನಿರ್ಮಾಣ ಸಂಸ್ಥೆ ಮೂಲಕ ಸದ್ಯ ಎರಡು ಸಿನಿಮಾಗಳನ್ನು ನಿರ್ಮಿಸಲು ರೆಡಿಯಾಗಿದ್ದಾರೆ. ಆ ಎರಡು ಸಿನಿಮಾಗಳು ಕೆ ಆರ್ ಜಿ ಸ್ಟುಡಿಯೋಸ್ ಮೂಲಕ ವಿತರಣೆಯಾಗಿ ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆ ಆಗಲಿವೆ.
ಸದ್ಯ ರಮ್ಯಾ ನಿರ್ಮಾಣ ಮಾಡುವ ಕುರಿತು ಸ್ಪಷ್ಟವಾಗಿ ಹೇಳಿದ್ದಾರೆ. ಇನ್ನಷ್ಟು ವಿವರಗಳನ್ನು ಅವರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಿದ್ದಾರೆ.