Categories
ಸಿನಿ ಸುದ್ದಿ

ಲವ್ಲಿ ಸಿನಿಮಾ ಶೂಟಿಂಗ್ ಮುಗೀತು: ಪ್ರೇಮ್, ಮಾನ್ವಿತಾ ಜೋಡಿ ಚಿತ್ರದ ಶೀರ್ಷಿಕೆ ಶೀಘ್ರ ಬಿಡುಗಡೆ

ಜೂಟಾಟ, ಗುಬ್ಬಚ್ಚಿ ಸಿನಿಮಾಗಳ ಸಾರಥಿ ಅಥರ್ವ್ ಆರ್ಯ ನಿರ್ದೇಶನದ ಹೊಸ ಸಿನಿಮಾದ ಚಿತ್ರೀಕರಣ ಮುಕ್ತಾಯಗೊಂಡಿದೆ. ಬೆಂಗಳೂರು, ಮೈಸೂರು, ಮಂಗಳೂರು ಸುತ್ತಮುತ್ತ 65 ದಿನಗಳ ಕಾಲ ಶೂಟಿಂಗ್ ನಡೆಸಲಾಗಿದ್ದು, ಶೀಘ್ರದಲ್ಲಿಯೇ ಟೈಟಲ್ ರಿವೀಲ್ ಮಾಡಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.

ಲವ್ಲಿ ಸ್ಟಾರ್ ಪ್ರೇಮ್ ಹಾಗೂ ಟಗರು ಪುಟ್ಟಿ ಖ್ಯಾತಿಯ ಮಾನ್ವಿತ್ ಕಾಮತ್ ಮೊದಲ ಬಾರಿಗೆ ಜೋಡಿಯಾಗಿ ನಟಿಸುತ್ತಿದ್ದು, ತಬಲಾ ನಾಣಿ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ಉಳಿದಂತೆ ಸಂಜಯ್, ಜೀವಿತಾ, ರಂಗೀತರಂಗ ಅರವಿಂದ್, ವಿಜಯ್ ಚೆಂಡೂರ್, ಬಲ ರಾಜ್ವಾಡಿ, ಮಿಮಿಕ್ರಿ ಗೋಪಿ, ಅರುಣ ಬಾಲರಾಜ್, ವರ್ಧನ್ ತೀರ್ಥಹಳ್ಳಿ, ಗಿರೀಶ್ ಜತ್ತಿ, ಪಟೇಲ್ ಅಣ್ಣಯ್ಯಪ್ಪ ಸೇರಿದಂತೆ ಹಲವು ತಾರಾಬಳಗ ಚಿತ್ರದಲ್ಲಿದೆ.

K.R.S ಪ್ರೊಡಕ್ಷನ್ಸ್ ನಡಿ ತಬಲಾನಾಣಿ ಹಾಗೂ ಸ್ನೇಹಿತರ ಜೊತೆಗೂಡಿ ನಿರ್ಮಿಸುತ್ತಿರುವ ಚೊಚ್ಚಲ ಚಿತ್ರ ಇದಾಗಿದೆ. ತಂದೆಯ ಮಹತ್ವ ಸಾರುವ, ಕುಟುಂಬದಲ್ಲಿ ಅಥವಾ ಸಮಾಜದಲ್ಲಿ ಆತ ಕಡೆಗಣನೆಗೆ ಒಳಗಾದಾಗ ಯಾವ ರೀತಿ ನೋವು ಅನುಭವಿಸುತ್ತಾನೆ ಎಂಬುದು ಕಥೆಯ ತಿರುಳು. ಇಲ್ಲಿ ತಂದೆಯಾಗಿ ತಬಲಾನಾಣಿ ಬಣ್ಣ ಹಚ್ಚಿದ್ದು, ರಂಗಭೂಮಿ ಕಲಾವಿದರಾದ ಸಂಜಯ್ ಹಾಗೂ ಜೀವಿತ ವಸಿಷ್ಠ ಚಿತ್ರರಂಗಕ್ಕೆ ಪರಿಚಿತರಾಗುತ್ತಿದ್ದಾರೆ.

ಪ್ರೊಡಕ್ಷನ್ ನಂಬರ್-1 ಸಿನಿಮಾಗೆ ನಾಗಾರ್ಜುನ್ ಆರ್ ಡಿ ಛಾಯಾಗ್ರಹಣ, ವೇಧಿಕ್ ವೀರ ಸಂಕಲನ, ಗಂಗಮ್ ರಾಜು ಕೊರಿಯೋಗ್ರಫಿ ಚಿತ್ರಕ್ಕಿದೆ. ಆಕಾಶ್ ಪರ್ವ ಸಂಗೀತ ನಿರ್ದೇಶನದ ಹಾಡುಗಳಿಗೆ ಡಾ.ನಾಗೇಂದ್ರ ಪ್ರಸಾದ್, ಕವಿರಾಜ್, k. ಕಲ್ಯಾಣ್, ಕಿನ್ನಾಳ್ ರಾಜ್ ಸಾಹಿತ್ಯ ಬರೆದಿದ್ದಾರೆ.

Categories
ಸಿನಿ ಸುದ್ದಿ

ಮದ್ವೆ ಆದ ನರೇಶ್ ಪವಿತ್ರಾ! ಮತ್ತೆ ಮದುವೆ ಟೀಸರ್ ರಿಲೀಸ್

ತೆಲುಗು ನಟ ನರೇಶ್ ಹಾಗೂ ಕನ್ನಡದ ಖ್ಯಾತ ನಟಿ ಪವಿತ್ರಾ ಲೋಕೇಶ್ ಮತ್ತೆ ಸುದ್ದಿಯಲ್ಲಿದ್ದಾರೆ. ಅದಕ್ಕೆ ಕಾರಣ ಮತ್ತೆ ಮದುವೆ ಟೀಸರ್..ಇವರಿಬ್ಬರು ನಟಿಸಿರುವ ಮತ್ತೆ ಮದುವೆ ಟೀಸರ್ ರಿಲೀಸ್ ಆಗಿದೆ. ಸಣ್ಣ ಝಲಕ್ ಮೂಲಕ ಸಂಚಲನ ಸೃಷ್ಟಿಸಿದ್ದ ಈ ಸಿನಿಮಾದ ಟೀಸರ್ ನಲ್ಲಿ ಹಲವು ವಿಷಯಗಳನ್ನು ಬಿಚ್ಚಿಡಲಾಗಿದೆ. ತೆಲುಗು ಇಂಡಸ್ಟ್ರೀಯವರು ಕನ್ನಡದ ಮೇಲೆ ಕಣ್ಣು ಹಾಕ್ತಿದ್ದಾರೆ ಎಂಬ ಪಂಚಿಂಗ್ ಡೈಲಾಗ್ ಮೂಲಕ ಶುರುವಾಗುವ ಟೀಸರ್ ಥೇಟ್ ನರೇಶ್ ಪವಿತ್ರಾ ರಿಯಲ್ ಕಥೆಯಂತಿದೆ.

ನರೇಶ್ ಮೂರನೇ ಪತ್ನಿ ನಡೆಸಿದ ಬೀದಿ ರದ್ದಾಂತ, ಮೈಸೂರಿನ ಹೋಟೆಲ್ ನಲ್ಲಿ ನಡೆದ ಘಟನೆ, ನರೇಶ್ ಬಾಳಲ್ಲಿ ಪವಿತ್ರಾ ಲೋಕೇಶ್ ಎಂಟ್ರಿ ಎಲ್ಲವೂ ಟೀಸರ್ ನಲ್ಲಿ ಬಿಚ್ಚಿಡಲಾಗಿದೆ, ಇದು ರಿಯಲ್ ಲೈಫ್ ಕಥೆಯಂತೆ ಭಾಸವಾಗಿದೆ.

ಪ್ರತಿಷ್ಠಿತ ವಿಜಯ ಕೃಷ್ಣ ಮೂವೀಸ್ ಬ್ಯಾನರ್ ನಡಿ ನರೇಶ್ ನಿರ್ಮಾಣ ಮಾಡಿರುವ ಮತ್ತೆ ಮದುವೆ ಚಿತ್ರಕ್ಕೆ ಎಂ. ಎಸ್. ರಾಜು ಆಕ್ಷನ್ ಕಟ್ ಹೇಳಿದ್ದಾರೆ. ಇದೊಂದು ಫ್ಯಾಮಿಲಿ ಎಂಟರ್ಟೈನ್ಮೆಂಟ್ ಸಿನಿಮಾವಾಗಿದ್ದು ಎಂ.ಎಸ್. ರಾಜು ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಜಯಸುಧ ಮತ್ತು ಶರತ್ ಬಾಬು ಚಿತ್ರದ ಪ್ರಮುಖ ಪಾತ್ರಗಳಿಗೆ ಬಣ್ಣಹಚ್ಚಿದ್ದಾರೆ. ವನಿತ ವಿಜಯಕುಮಾರ್, ಅನನ್ಯ ನಾಗೆಲ್ಲ, ರೋಶನ್, ರವಿವರ್ಮ, ಅನ್ನಪೂರ್ಣ, ಭದ್ರಂ, ಯುಕ್ತ, ಪ್ರವೀಣ್ ಯಂಡಮುರಿ ಹಾಗೂ ಮಧೂ ಒಳಗೊಂಡ ಬಹು ದೊಡ್ಡ ತಾರಾಬಳಗ ಚಿತ್ರದಲ್ಲಿದೆ.

ಸುರೇಶ್ ಬೊಬ್ಬಿಲಿ ಸಂಗೀತ ನಿರ್ದೇಶನ, ಅರುಲ್ ದೇವ್ ಹಿನ್ನೆಲೆ ಸಂಗೀತ, ಎಂ.ಎನ್ ಬಾಲ್ ರೆಡ್ಡಿ ಕ್ಯಾಮೆರಾ ವರ್ಕ್, ಜುನೈದ್ ಸಿದ್ದಿಕಿ ಸಂಕಲನ, ಅನಂತ ಶ್ರೀರಾಮ್ ಸಾಹಿತ್ಯ ಚಿತ್ರಕ್ಕಿದೆ. ಟೀಸರ್ ಮೂಲಕ ಸಂಚಲನ ಸೃಷ್ಟಿಸುತ್ತಿರುವ ಮತ್ತೆ ಮದುವೆ ಕನ್ನಡ ಹಾಗೂ ತೆಲುಗು ಎರಡು ಭಾಷೆಯಲ್ಲಿ ಮೂಡಿಬರ್ತಿದ್ದು, ಮೇ ತಿಂಗಳಲ್ಲಿ ಥಿಯೇಟರ್ ಅಂಗಳ ಪ್ರವೇಶಿಸಲಿದೆ.

Categories
ಸಿನಿ ಸುದ್ದಿ

ವಿಶ್ವದೆಲ್ಲೆಡೆ ಪೊನ್ನಿಯನ್ ಸೆಲ್ವನ್ 2 ರಿಲೀಸ್: ಮಣಿರತ್ನಂ ಕನಸಿನ ಚಿತ್ರ ಏಪ್ರಿಲ್ 28ಕ್ಕೆ ಅಬ್ಬರ ಜೋರು

ಖ್ಯಾತ ನಿರ್ದೇಶಕ ಮಣಿರತ್ನಂ ಕನಸಿನ ಕೂಸು ‘ಪೊನ್ನಿಯಿನ್ ಸೆಲ್ವನ್-2 ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಏಪ್ರಿಲ್ 28ಕ್ಕೆ ವಿಶ್ವಾದ್ಯಂತ ಅದ್ದೂರಿಯಾಗಿ ಸಿನಿಮಾ ತೆರೆ ಕಾಣುತ್ತಿದೆ. ಈಗಾಗಲೇ ಟ್ರೇಲರ್ ಹಾಗೂ ಹಾಡುಗಳ ಮೂಲಕ ನಿರೀಕ್ಷೆ ಹೆಚ್ಚಿಸಿರುವ ಚಿತ್ರ ತೆರೆಗೆ ಬರೋದಿಕ್ಕೆ ಇನ್ನೇನೂ ದಿನಗಣನೆಯಷ್ಟೇ ಬಾಕಿ ಇದೆ.

ಚಿತ್ರತಂಡ ಕೂಡ ಭರದಿಂದ ಪ್ರಚಾರ ಕಾರ್ಯ ನಡೆಸುತ್ತಿದೆ. ಈಗಾಗಲೇ ಬೇರೆ ಬೇರೆ ರಾಜ್ಯಗಳಲ್ಲಿ ಪ್ರಚಾರ ಇಟ್ಟುಕೊಂಡಿದೆ.

ಲೈಕಾ ಪ್ರೊಡಕ್ಷನ್ಸ್ ಮತ್ತು ಮದ್ರಾಸ್ ಟಾಕೀಸ್ ಬ್ಯಾನರ್ ನಡಿ ಅದ್ದೂರಿಯಾಗಿ ನಿರ್ಮಾಣವಾಗಿರುವ ಸ್ಟಾರ್ ತಾರಾಬಳಗವಿರುವ ಸಿನಿಮಾ ‘ಪೊನ್ನಿಯಿನ್ ಸೆಲ್ವನ್ -2’.

ಕಾರ್ತಿ, ಐಶ್ವರ್ಯಾ ರೈ, ಚಿಯಾನ್ ವಿಕ್ರಮ್, ಜಯಂ ರವಿ, ತ್ರಿಶಾ, ಶರತ್ ಕುಮಾರ್, ಪ್ರಕಾಶ್ ರಾಜ್ ದಿಗ್ಗಜ ಕಲಾವಿದರ ಸಮಾಗಮ ಚಿತ್ರದಲ್ಲಿದೆ.

ಮಣಿರತ್ನಂ ನಿರ್ದೇಶನ ಒಂದು ಶಕ್ತಿಯಾದ್ರೆ, ಎ.ಆರ್.ರೆಹಮಾನ್ ಮ್ಯೂಸಿಕ್, ರವಿವರ್ಮನ್ ಕ್ಯಾಮೆರಾ ವರ್ಕ್, ಸ್ಟಾರ್ ಹಾಗೂ ಅನುಭವಿ ಕಲಾವಿದರ ನಟನೆ, ಅದ್ದೂರಿ ಮೇಕಿಂಗ್ ಎಲ್ಲವೂ ಸೀಕ್ವೆಲ್ 2 ಮೇಲೆ ನಿರೀಕ್ಷೆ ಹೆಚ್ಚಿಸಿದೆ.

ಲೇಖಕ ಹಾಗೂ ಸ್ವಾತಂತ್ರ್ಯ ಹೋರಾಟಗಾರ ಕಲ್ಕಿ ಕೃಷ್ಣಮೂರ್ತಿ ಬರೆದ ಕಾದಂಬರಿ ‘ಪೊನ್ನಿಯಿನ್ ಸೆಲ್ವನ್’ ಆಧಾರಿತ ಚಿತ್ರವಿದು. ಸೆಪ್ಟೆಂಬರ್ 30ರಲ್ಲಿ ತೆರೆಕಂಡ ಮೊದಲ ಸೀಕ್ವೆಲ್ ವರ್ಲ್ ವೈಡ್ ಅಭೂತ ಪೂರ್ವ ಯಶಸ್ಸು ಕಂಡಿತ್ತು. ಗಲ್ಲಾಪೆಟ್ಟಿಗೆಯಲ್ಲಿ 500 ಕೋಟಿ ಲೂಟಿ ಮಾಡಿತ್ತು.

ಇದೀಗ ಆ ಗೆಲುವಿನ ಸಂಭ್ರಮದಲ್ಲೇ ಸೀಕ್ವೆಲ್ ತೆರೆಗೆ ಬರ್ತಿದೆ. ಚೋಳ ಸಾಮ್ರಾಜ್ಯದ ದೃಶ್ಯವೈಭೋಗದ ಪೊನ್ನಿಯಿನ್ ಸೆಲ್ವನ್-2 ತಮಿಳು, ತೆಲುಗು, ಕನ್ನಡ, ಹಿಂದಿ

ಹಾಗೂ ಮಲಯಾಳಂ ಭಾಷೆಯಲ್ಲಿ ಏಪ್ರಿಲ್ 28ಕ್ಕೆ ಅನಾವರಣಗೊಳ್ತಿದ್ದು, ಮಣಿರತ್ನ ತಂಡ ಕಟ್ಟಿಕೊಂಡ ಹೊರರಾಜ್ಯಗಳಲ್ಲಿ ಪ್ರಮೋಷನ್ ಕಹಳೆ ಮೊಳಗಿಸ್ತಿದ್ದಾರೆ.

Categories
ಸಿನಿ ಸುದ್ದಿ

ದಾದಾ ಸಾಹೇಬ್ ಫಾಲ್ಕೆ ಚಿತ್ರೋತ್ಸವದಲ್ಲಿ ಅರಳಲಿದೆ ಬ್ರಹ್ಮ ಕಮಲ!!

ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಹಲವು ಪ್ರಶಸ್ತಿಗಳನ್ನು ಗಳಿಸಿದ “ದಾರಿ ಯಾವುದಯ್ಯ ವೈಕುಂಠಕೆ” ಚಿತ್ರದ ನಿರ್ದೇಶಕ ಸಿದ್ದು ಪೂರ್ಣಚಂದ್ರ ಈಗ “ಬ್ರಹ್ಮ ಕಮಲ” ಎಂಬ ಚಿತ್ರವನ್ನು ನಿರ್ದೇಶಿಸಿದ್ದಾರೆ. ಈ ಚಿತ್ರ ಕೂಡ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಆಯ್ಕೆಯಾಗಿ ಜನಮನ ಮುಟ್ಟುತ್ತಿದೆ.

ಪೂರ್ಣಚಂದ್ರ ಫಿಲಂಸ್ ಮೂಲಕ ಈ ಚಿತ್ರ ನಿರ್ಮಾಣವಾಗಿದೆ. ಇದು ಮಹಿಳಾ ಪ್ರಧಾನ ಚಿತ್ರವಾಗಿದ್ದು, ಮುಖ್ಯಪಾತ್ರದಲ್ಲಿ ಅದ್ವಿತಿಶೆಟ್ಟಿ ಅಭಿನಯಿಸಿದ್ದಾರೆ.

ಉಳಿದಂತೆ ಋತುಚೈತ್ರ, ಲೋಕೇಂದ್ರಸೂರ್ಯ, ಬಲ ರಾಜವಾಡಿ, ಗಂಡಸಿ ಸದಾನಂದಸ್ವಾಮಿ,ಕವಿತ ಕಂಬಾರ್, ರಾಧಾ ರಾಮಚಂದ್ರ ಇನ್ನೂ ಮುಂತಾದವರು ಆಭಿನಯಿಸಿದ್ದಾರೆ.

ಈಗಾಗಲೇ ಬೆಂಗಳೂರು ಚಲನಚಿತ್ರೋತ್ಸವದಲ್ಲೂ ಈ ಚಿತ್ರ ಪ್ರದರ್ಶನ ಕಂಡಿದೆ. ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಚಿತ್ರೋತ್ಸವಕ್ಕೆ “ಬ್ರಹ್ಮಕಮಲ” ಆಯ್ಕೆಯಾಗಿದೆ. ಈ ವಿಷಯ ಇಡೀ ಚಿತ್ರತಂಡಕ್ಕೆ ಸಂತಸತಂದಿದೆ ಎನ್ನುತ್ತಾರೆ ನಿರ್ದೇಶಕ ಸಿದ್ದು ಪೂರ್ಣಚಂದ್ರ.

Categories
ಸಿನಿ ಸುದ್ದಿ

ಪ್ರಪಂಚದಲ್ಲಿ ಝೀರೋ ಪರ್ಸೆಂಟ್ ಲವ್! ರೊಮ್ಯಾಂಟಿಕ್ ಥ್ರಿಲ್ಲರ್ ರಿಲೀಸ್ ಗೆ ರೆಡಿ

ರೊಮ್ಯಾಂಟಿಕ್ ಥ್ರಿಲ್ಲರ್ ಕಥಾಹಂದರ ಹೊಂದಿರುವ “ಪ್ರೆಸೆಂಟ್ ಪ್ರಪಂಚ 0% ಲವ್” ಚಿತ್ರ ತೆರೆಗೆ ಬರಲು ಸಿದ್ದವಾಗಿದೆ.

ನಿರ್ದೇಶಕನಿಗೆ ತನ್ನ ಚಿತ್ರವೇ ಸರ್ವಸ್ವ. ನಮ್ಮ ಚಿತ್ರದ ನಿರ್ದೇಶಕ ಅಭಿರಾಮ್ ಎ ಅವರಿಗೂ ಈ ಚಿತ್ರದ ಬಗ್ಗೆ ಅಪಾರ ಪ್ರೀತಿ. ಆದರೆ ವಿಧಿ, ಚಿತ್ರ ಬಿಡುಗಡೆಗೆ ಮುನ್ನವೇ ನಿರ್ದೇಶಕ ಅಭಿರಾಮ್ ಹಾಗೂ ನಾಯಕ ಅರ್ಜುನ್ ಮಂಜುನಾಥ್ ಇಬ್ಬರನ್ನು ಬಲಿ ತೆಗೆದುಕೊಂಡಿದೆ.
ಅವರಿಬ್ಬರ ಅನುಪಸ್ಥಿತಿ ತುಂಬಾ ಕಾಡುತ್ತಿದೆ. ಇಬ್ಬರು ಚಿತ್ರೀಕರಣ ಹಾಗೂ ಡಬ್ಬಿಂಗ್ ಮುಗಿಯುವ ತನಕ ಜೊತೆಗಿದ್ದರು. ಆಮೇಲೆ ಯಾರು ನಿರೀಕ್ಷಿಸದ್ದು ನಡೆದು ಹೋಯಿತು.

ಆನಂತರ ದ್ವಿತೀಯ ನಾಯಕ ಯಶಸ್ ಅಭಿ ಸೇರಿದಂತೆ ಚಿತ್ರತಂಡದ ಸದಸ್ಯರ ಸಹಕಾರದಿಂದ ಸಿನಿಮಾ ಪೂರ್ಣವಾಗಿದೆ. ಸದ್ಯದಲ್ಲೇ ಬಿಡುಗಡೆ ಮಾಡುವ ಯೋಜನೆ ಇದೆ ಎಂದರು ನಿರ್ಮಾಪಕ ಕೃಷ್ಣಮೂರ್ತಿ ಕೆ.ಎಲ್.
ಈ ಚಿತ್ರವನ್ನು ಕೃಷ್ಣಮೂರ್ತಿ ಹಾಗೂ ರವಿಕುಮಾರ್ ಇಬ್ಬರು ಸೇರಿ ನಿರ್ಮಿಸಿದ್ದಾರೆ. ನಾಗರಾಜ್ ಹೊಸಳ್ಳಿ ಹಾಗೂ ದೇವರಾಜ್ ಅವರ ಸಹ ನಿರ್ಮಾಣವೂ ಇದೆ.

“ಪ್ರೆಸೆಂಟ್ ಪ್ರಪಂಚ”ದಲ್ಲಿ ಎಲ್ಲದಕ್ಕಿಂತ ಪ್ರೀತಿನೇ ಮುಖ್ಯ ಎಂಬುದೇ ಚಿತ್ರದ ಪ್ರಮುಖ ಕಥಾಹಂದರ. ಚಿತ್ರಮಂದಿರಕ್ಕೆ ಬರುವ ಪ್ರೇಕ್ಷಕ ೦% ಪ್ರೀತಿ ಎಂದು ಕೊಂಡು ಬಂದರೆ, ಹೋಗುವಾಗ 100% ಪ್ರೀತಿ ಹೊತ್ತಿಕೊಂಡು ಹೋಗುವುದು ಖಚಿತ. ನಾಯಕ ಹಾಗೂ ನಿರ್ದೇಶಕರ ನಿಧನದಿಂದ ನಮ್ಮ ತಂಡಕ್ಕೆ ತುಂಬಾ ಆಘಾತವಾಗಿತ್ತು. ಆದರೆ ಈ ಚಿತ್ರ ಅವರಿಬ್ಬರ ಕನಸಿನ ಕೂಸು. ಚಿತ್ರವನ್ನು ಪೂರ್ತಿ ಮಾಡಿ, ತೆರೆಗೆ ತರೋಣ ಎಂದು ನಾನು, ನಿರ್ಮಾಪಕರಿಗೆ ಹೇಳಿದೆ. ನನ್ನ ಹಾಗೂ ನಮ್ಮ ತಂಡದ ಕೋರಿಕೆಗೆ ಸ್ಪಂದಿಸಿದ ನಿರ್ಮಾಪಕರಿಗೆ ಧನ್ಯವಾದ. ಚಿತ್ರದಲ್ಲಿ ನನ್ನ ಪಾತ್ರ ಕೂಡ ಚೆನ್ನಾಗಿದೆ ಎಂದರು ದ್ವಿತೀಯ ನಾಯಕ ಯಶಸ್ ಅಭಿ.

ಮದುವೆಯಾದ ಮೇಲೆ ಗಂಡ – ಹೆಂಡತಿ ನಡುವೆ ಭಿನ್ನಾಭಿಪ್ರಾಯಗಳು ಬರುವುದು ಸಹಜ. ಅದು ವಿಚ್ಛೇದನದ ತನಕ ಹೋಗಬಾರದು ಎಂಬುದನ್ನು ನಮ್ಮ ಚಿತ್ರದಲ್ಲಿ ತೋರಿಸಲಾಗಿದೆ ಎಂದರು ನಾಯಕಿ ಸಂಭ್ರಮ ಶ್ರೀ.

ನಟರಾದ ಗೋವಿಂದೇ ಗೌಡ, ಕುರಿ ಸುನೀಲ್ ಹಾಗೂ ಸಂಗೀತ ನಿರ್ದೇಶಕ ರವಿತೇಜಸ್ ಚಿತ್ರದ ಕುರಿತು ಮಾತನಾಡಿದರು.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಭಾ.ಮ.ಹರೀಶ್, ಸಾಹಿತಿ ಹಾಗೂ ನಿರ್ದೇಶಕ ರಾಮ್ ನಾರಾಯಣ್ ಮುಂತಾದ ಗಣ್ಯರು ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಿದರು.

Categories
ಸಿನಿ ಸುದ್ದಿ

ಕ್ರೀಂ ಸಿನಿಮಾ ಬಿಡುಗಡೆಗೆ ರೆಡಿಯಾಗುತ್ತಿದೆ: ಕ್ರೀಂ ಅಂದರೆ ಕಾಳಿ ಮಾತೆ ಆರಾಧಿಸುವ ಬೀಜಾಕ್ಷರಿ ಮಂತ್ರ!

ಅಗ್ನಿ ಶ್ರೀಧರ್ ಅವರು ಕಥೆ ಹಾಗೂ ಸಂಭಾಷಣೆ ಬರೆದಿರುವ, ಅಭಿಷೇಕ್ ಬಸಂತ್ ನಿರ್ದೇಶನದಲ್ಲಿ ಮೂಡಿಬಂದಿರುವ ಮಹಿಳಾಪ್ರಧಾನ ಚಿತ್ರ “ಕ್ರೀಂ”. ಸಂಯುಕ್ತ ಹೆಗಡೆ ಈ ಚಿತ್ರದ ನಾಯಕಿಯಾಗಿದ್ದು, ಅಚ್ಯುತಕುಮಾರ್, ಅರುಣಸಾಗರ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಡಿ.ಕೆ. ದೇವೇಂದ್ರ ನಿರ್ಮಾಣ ಮಾಡಿದ್ದಾರೆ.

ಇದು ನನ್ನ ಮೊದಲ ನಿರ್ದೇಶನದ ಚಿತ್ರ. ಈ ಸಿನಿಮಾ ಮಾಡಲು ನನಗೆ ರೋಷನ್‌ ಅವರು ಸೇರಿದಂತೆ ಸಾಕಷ್ಟು ಜನ ಸಹಕಾರ ನೀಡಿದ್ದಾರೆ. ಅಗ್ನಿ ಶ್ರೀಧರ್ ಅವರು ಈ ಚಿತ್ರದ ಕಥೆ ಬರೆದಿದ್ದಾರೆ. ಮುಖ್ಯವಾಗಿ ಕಥೆ ಬರೆದಿರುವವರಿಗೆ ನಿರ್ದೇಶನ ಇಷ್ಟವಾಗಬೇಕು. ಆ ನಿಟ್ಟಿನಲ್ಲಿ ನಾನು ಗೆದ್ದಿದ್ದೇನೆ ಅಂದುಕೊಳ್ಳಬಹುದು. ಇನ್ನು ಚಿತ್ರ ಉತ್ತಮವಾಗಿ ಮೂಡಿಬರಲು ಎಲ್ಲವನ್ನು ಒದಗಿಸುತ್ತಿರುವ ನಿರ್ಮಾಪಕ ದೇವೇಂದ್ರ ಅವರಿಗೆ ಧನ್ಯವಾದ.

ನಮ್ಮ ಚಿತ್ರಕ್ಕೆ ಸಂಯುಕ್ತ ಹೆಗಡೆ ಅವರನ್ನು ಬಿಟ್ಟು ಬೇರೆ ಯಾರನ್ನೂ ನಾಯಕಿಯ ಪಾತ್ರಕ್ಕೆ ಕಲ್ಪನೆ ಮಾಡಿಕೊಳ್ಳಲು ಸಾಧ್ಯವಿಲ್ಲ, ಚಿತ್ರಕ್ಕಾಗಿ ಅವರು ಪಟ್ಟಿರುವ ಶ್ರಮ ನಿಜಕ್ಕೂ ಶ್ಲಾಘನೀಯ. ಸಾಹಸ ದೃಶ್ಯದಲ್ಲಿ ಅಭಿನಯಿಸುವಾಗ ಅವರ ಕಾಲಿಗೆ ಬಿದ್ದ ಪೆಟ್ಟಿನಿಂದ ಚೇತರಿಸಿಕೊಳ್ಳಲು ಕೆಲವು ತಿಂಗಳುಗಳೆ ಆಯಿತು. ಆನಂತರ ಕೂಡ ಅವರು ಮೊದಲಿನ ಹುಮ್ಮಸಿನಿಂದಲೇ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಸದ್ಯ ಚಿತ್ರೀಕರಣ ಮುಕ್ತಾಯವಾಗಿದೆ. ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ ಎಂದರು ನಿರ್ದೇಶಕ ಅಭಿಷೇಕ್ ಬಸಂತ್.

“ಕ್ರೀಂ” ಎಂದರೆ ಕಾಳಿ ಮಾತೆಯನ್ನು ಆರಾಧಿಸುವ ಬೀಜಾಕ್ಷರಿ ಮಂತ್ರ.
ದೇಶದಲ್ಲಿ ಪ್ರತಿ ತಿಂಗಳು ೪೦೦ಕ್ಕೂ ಹೆಚ್ಚು ಮಹಿಳೆಯರ ಹತ್ಯೆಯಾಗುತ್ತಿದೆ. ಜೊತೆಗೆ ಮಕ್ಕಳೂ ಕಣ್ಮರೆಯಾಗುತ್ತಿದ್ದಾರೆ, ಈ ಪ್ರಕರಣಗಳ ಹಿಂದೆ ಯಾರಿದ್ದಾರೆ? ಯಾಕೆ ಮಾಡುತ್ತಿದ್ದಾರೆ? ಎನ್ನುವ ಅಂಶವನ್ನಿಟ್ಟುಕೊಂಡು ಕಥೆ ಬರೆದಿದ್ದೇನೆ. ಸಂಯುಕ್ತ ಹೆಗಡೆ ಅವರದು ಇದರಲ್ಲಿ ವೇಶ್ಯೆಯ ಪಾತ್ರ. ಈ ಚಿತ್ರದ ಬಗ್ಗೆ ಕೂಡ ಕೆಲವು ವಿವಾದಗಳು ಬರಬಹುದು. ಎದುರಿಸಲು ನಾನು ಸಿದ್ದನಿದ್ದೇನೆ ಎಂದರು ಚಿತ್ರಕ್ಕೆ ಕಥೆ ಹಾಗೂ ಸಂಭಾಷಣೆ ಬರೆದಿರುವ ಅಗ್ನಿ ಶ್ರೀಧರ್.

ಈ ಸಿನಿಮಾಗಾಗಿ ನಾನು 2೦೦ ಪರ್ಸೆಂಟ್ ಎಫರ್ಟ್ ಹಾಕಿದ್ದೇನೆ.
ಚಿತ್ರೀಕರಣ ಸಮಯದಲ್ಲಿ ಕಾಲಿಗೆ ತೀವ್ರವಾದ ಪೆಟ್ಟಾಯಿತು. ನಾನು ಎರಡು ತಿಂಗಳು ಮನೆಯಲ್ಲೇ ಇದ್ದು, ವಿಶ್ರಾಂತಿ ಪಡೆದಿದ್ದು ಇದೇ ಮೊದಲ ಬಾರಿ. ಫಿಸಿಯೋ ಥೆರಪಿ ಮಾಡಿಸಿಕೊಳ್ಳಬೇಕಾದರೆ ನಾನು ಪಟ್ಟ ನೋವು ಅಷ್ಟಿಷ್ಟಲ್ಲ. ಈ ಚಿತ್ರಕ್ಕಾಗಿ ನಾನು ಬೆವರು ಮಾತ್ರ ಹರಿಸಿಲ್ಲ. ರಕ್ತವನ್ನು ಹರಿಸಿದ್ದೇನೆ. ಇಷ್ಟೆಲ್ಲ ಶ್ರಮಪಟ್ಟರು ಒಂದೊಳ್ಳೆಯ ಸಿನಿಮಾದಲ್ಲಿ ನಟಿಸಿದ ತೃಪ್ತಿಯಿದೆ ಎಂದರು ನಾಯಕಿ ಸಂಯುಕ್ತ ಹೆಗಡೆ.

ಚಿತ್ರ ಚೆನ್ನಾಗಿ ಬರಲು ಸಹಕಾರ ನೀಡುತ್ತಿರುವ ಚಿತ್ರತಂಡದ ಸದಸ್ಯರಿಗೆ ನಿರ್ಮಾಪಕ ದೇವೇಂದ್ರ ಧನ್ಯವಾದ ತಿಳಿಸಿದರು.

ನಟ ರೋಷನ್ ಸಹ “ಕ್ರೀಂ” ಚಿತ್ರದ ಕುರಿತಂತೆ ಮಾತನಾಡಿದರು.

Categories
ಸಿನಿ ಸುದ್ದಿ

ನನಗೆ ಸನ್ಮಾನ ಹೊಗಳಿಕೆ ಮುಜುಗರ: ಸುಧಾಮೂರ್ತಿ ; ಪದ್ಮಭೂಷಣ ಪ್ರಶಸ್ತಿ ವಿಜೇತೆಗೆ ಆತ್ಮೀಯ ಸನ್ಮಾನ

ಸರಳತೆ, ಸಹಾಯ, ಸಮಾಜಸೇವೆಗೆ ಇನ್ನೊಂದು ಹೆಸರು ಸುಧಾಮೂರ್ತಿ ಎಂದರೆ ತಪ್ಪಾಗಲಿಕ್ಕಿಲ್ಲ. ಇನ್ಫೋಸಿಸ್ ಎಂಬ ಐ.ಟಿ ದಿಗ್ಗಜ ಸಂಸ್ಥೆಯ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಕನ್ನಡಿಗರ ಹೆಮ್ಮೆ ಹೆಚ್ಚಿಸಿದ ಕನ್ನಡತಿ. ಲಕ್ಷಾಂತರ ಮಂದಿಗೆ ಕೆಲಸ ಕೊಟ್ಟ ಉದ್ಯಮಿ, ಸಮಾಜಸೇವಕಿ, ಲೇಖಕಿ ಸುಧಾಮೂರ್ತಿಯವರ ಸಾಮಾಜಿಕ ಸೇವೆಗಾಗಿ ಇತ್ತೀಚೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪದ್ಮಭೂಷಣ ಪ್ರಶಸ್ತಿ ಪ್ರದಾನ ಮಾಡಿದ್ದರು.


ಈ ನಿಟ್ಟಿನಲ್ಲಿ, ಇತ್ತೀಚಿಗೆ ಖ್ಯಾತ ನಿರ್ಮಾಪಕರಾದ ರಮೇಶ್ ರೆಡ್ಡಿಯವರ ನೇತೃತ್ವದಲ್ಲಿ, `ಸುಧಾಮೂರ್ತಿಯವರ ಆತ್ಮೀಯ ಗೆಳೆಯರ ಬಳಗ’ ಸನ್ಮಾನಿಸಿದೆ.

ಸನ್ಮಾನ ಸ್ವೀಕರಿಸಿ ಮಾತನಾಡಿದ ಸುಧಾಮೂರ್ತಿ, ‘ನನಗೆ ಸನ್ಮಾನ ಹೊಗಳಿಕೆ ಮುಜುಗರ ಮಾಡುತ್ತದೆ. ಆದರೆ, ರಮೇಶ್ ರೆಡ್ಡಿಯವರು ಹಲವು ವರ್ಷಗಳಿಂದ ನಮ್ಮ ಸಂಸ್ಥೆಗಾಗಿ ದುಡಿದಿದ್ದಾರೆ, ಅವರ ಕೆಲಸದ ಬಗ್ಗೆ ಇರುವ ಶ್ರದ್ಧೆಯನ್ನು ನಾನು ಮೆಚ್ಚಿದ್ದೇನೆ. ನಾನು ಸನ್ಮಾನ ಸ್ವೀಕರಿಸುವುದರಿಂದ ಹಲವರಿಗೆ ಸಂತೋಷವಾಗುವುದರಿಂದ ಅವರ ಸಂತೋಷದಲ್ಲಿ ನಾನು ಸಂತೋಷ ಕಾಣುತ್ತೇನೆ. ನನ್ನ ಕೆಲಸ ನಾನು ಮಾಡಿದ್ದೀನಿ, ಯಾವತ್ತೂ ಪ್ರಶಸ್ತಿಗಾಗಿ ಕೆಲಸ ಮಾಡಿದವಳು ನಾನಲ್ಲ. ಈಗ ಪ್ರಶಸ್ತಿ ಬಂದಿದ್ದಕ್ಕೆ ಸಂತೋಷ.

ಇನ್ನು ಹೆಣ್ಣು ಮಕ್ಕಳಿಗೆ ಒಂದು ಕಿವಿಮಾತು ಹೇಳಲು ಇಚ್ಚಿಸುತ್ತೇನೆ. ಆದನೆಂದರೆ, ಹೆಣ್ಣು ಮಕ್ಕಳು ನಾಲ್ಕು ಗೋಡೆಯ ಮಧ್ಯೆ ಬಂಧಿಯಾಗದೆ, ತಮ್ಮ ಸಂಪೂರ್ಣ ಸಾಮರ್ಥ್ಯವನ್ನು ಬಳಸಿಕೊಳ್ಳಬೇಕು. ನಾನು ನನ್ನ ಸಂಪೂರ್ಣ ಶಕ್ತಿಯನ್ನು ಬಳಸಿಕೊಂಡೆ ಅಷ್ಟೇ. ಎಲ್ಲರಿಂದಲೂ ಇದು ಸಾಧ್ಯವಿದೆ.

ಇನ್ನೊಂದು ಬಹಳ ಮುಖ್ಯವಾದ ಬಿನ್ನಹವೆಂದರೆ, ದಯವಿಟ್ಟು ಎಲ್ಲರೂ ದಿನಕ್ಕೆ ಹತ್ತು ರುಪಾಯಿಯಾದರೂ ಮೂಕಪ್ರಾಣಿಗಳ ಕಲ್ಯಾಣಕ್ಕೆ ಕೂಡಿಡಿ, ಆ ದುಡ್ಡನ್ನು ಪ್ರಾಣಿ ದಯಾ ಸಂಘಗಳಿಗೆ ಕೊಡಿ. ಇದರಿಂದ ಸರಿಯಾದ ಆಹಾರವಿಲ್ಲದೆ ಬಳಲುತ್ತಿರುವ ಪ್ರಾಣಿಗಳಿಗೆ ಆಹಾರ, ಆರೋಗ್ಯ ಸಿಗುತ್ತದೆ’ ಎಂದು ತಮ್ಮ ಮನದಾಳದ ಮಾತುಗಳನ್ನು ತರೆದಿಟ್ಟರು.

ಕಾರ್ಯಕ್ರಮದಲ್ಲಿ ಸಾಕಷ್ಟು ಮಂದಿ ಸುಧಾಮೂರ್ತಿಯವರ ಆತ್ಮೀಯರು ಮತ್ತು ಅಭಿಮಾನಿಗಳು ಭಾಗವಹಿಸಿದ್ದು, ಕಾರ್ಯಕ್ರಮ ಅರ್ಥಪೂರ್ಣವಾಗಿ ನೆರವೇರಿತು.

Categories
ಸಿನಿ ಸುದ್ದಿ

ಇದು ರವಿಚಂದ್ರನ್ ಜಡ್ಜ್ ಮೆಂಟ್! ಹೊಸ ಸಿನಿಮಾ ಶುರು…

ಜಿ9 ಕಮ್ಯುನಿಕೇಷನ್ ಮೀಡಿಯಾ ಅಂಡ್ ಎಂಟರ್ಟೈನ್ಮೆಂಟ್ ಬ್ಯಾನರ್ ನಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರವನ್ನು ಗುರುರಾಜ ಬಿ ಕುಲಕರ್ಣಿ(ನಾಡಗೌಡ) ನಿರ್ದೇಶಿಸುತ್ತಿದ್ದಾರೆ. ಈ ಹಿಂದೆ “ಆಕ್ಸಿಡೆಂಟ್”, ” ಲಾಸ್ಟ್‌ ಬಸ್” , “ಅಮೃತ ಅಪಾರ್ಟ್‌ಮೆಂಟ್ಸ್” ಚಿತ್ರಗಳನ್ನು ಈ ಸಂಸ್ಥೆ ಮೂಲಕ ನಿರ್ಮಿಸಲಾಗಿತ್ತು ಹಾಗೂ ಈ ಚಿತ್ರಗಳನ್ನು ಗುರುರಾಜ್ ಬಿ ಕುಲಕರ್ಣಿ ಅವರೆ ನಿರ್ದೇಶಿಸಿದ್ದರು. ಸಂಸ್ಥೆಯ ನಾಲ್ಕನೇ ಚಿತ್ರವಾಗಿ “ದ ಜಡ್ಜ್ ಮೆಂಟ್” ಚಿತ್ರ ನಿರ್ಮಾಣವಾಗುತ್ತಿದೆ.

ಇದೊಂದು ಲೀಗಲ್ ಸಿಸ್ಟಮ್ ಕುರಿತಾದ ಚಿತ್ರ. ಇದೇ ಏಪ್ರಿಲ್ 24ರಿಂದ ಚಿತ್ರೀಕರಣ ಆರಂಭವಾಗಲಿದೆ. ಬೆಂಗಳೂರಿನಲ್ಲೇ ಚಿತ್ರೀಕರಣ ನಡೆಯಲಿದೆ. ಕ್ರೇಜಿಸ್ಟಾರ್ ರವಿಚಂದ್ರನ್, ದಿಗಂತ್, ಧನ್ಯ ರಾಮಕುಮಾರ್, ಲಕ್ಷ್ಮೀಗೋಪಾಲಸ್ವಾಮಿ, ಟಿ.ಎಸ್.ನಾಗಾಭರಣ, ಪ್ರಕಾಶ್ ಬೆಳವಾಡಿ, ರಂಗಾಯಣ ರಘು, ರೂಪ ರಾಯಪ್ಪ, ರಾಜೇಂದ್ರ ಕಾರಂತ್ ಹೀಗೆ ಬಹುದೊಡ್ಡ ತಾರಾಬಳಗವಿದೆ. ಅನೂಪ್ ಸೀಳಿನ್ ಸಂಗೀತ ನಿರ್ದೇಶನ, ಶಿವು ಬಿ.ಕೆ.ಕುಮಾರ್ ಛಾಯಾಗ್ರಹಣ, ಬಿ.ಎಸ್ ಕೆಂಪರಾಜು ಸಂಕಲನ ಹಾಗೂ ಎಂ.ಎಸ್ ರಮೇಶ್ ಅವರ ಸಂಭಾಷಣೆ ಈ ಚಿತ್ರಕ್ಕಿದೆ ಎಂದು ನಿರ್ದೇಶಕ ಗುರುರಾಜ ಬಿ ಕುಲಕರ್ಣಿ (ನಾಡಗೌಡ) ಮಾಹಿತಿ ನೀಡಿದರು.

ನಿರ್ದೇಶಕರು “ಆಕ್ಸಿಡೆಂಟ್” ಮಾಡಿ “ಲಾಸ್ಟ್ ಬಸ್” ಹತ್ತಿ “ಅಮೃತ ಅಪಾರ್ಟ್‌ಮೆಂಟ್ಸ್” ಗೆ ಹೋಗಿ ಈಗ “ಜಡ್ಜ್ ಮೆಂಟ್” ನೀಡಲು ಬಂದಿದ್ದಾರೆ. ಈ ಚಿತ್ರದ ಕಥೆ ಚೆನ್ನಾಗಿದೆ. ನನಗೆ ಈ ತಂಡ ಹಾಗೂ ಜಾನರ್ ಎರಡು ಹೊಸತು. ಆರು ಜನ ಸ್ನೇಹಿತರು ಸೇರಿ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಒಳ್ಳೆಯ ತಂಡದ ಜೊತೆ ಸಿನಿಮಾ ಮಾಡುತ್ತಿರುವ ಖುಷಿಯಿದೆ ಎಂದರು ಕ್ರೇಜಿಸ್ಟಾರ್ ರವಿಚಂದ್ರನ್.

ನಾವೆಲ್ಲ ಸದ್ಯದಲ್ಲೇ ಮತ್ತೊಂದು “ಜಡ್ಜ್ ಮೆಂಟ್” ಗಾಗಿ ಕಾಯುತ್ತಿದ್ದೇವೆ. ಅಷ್ಟರಲ್ಲಿ ಗುರುರಾಜ್ ಕುಲಕರ್ಣಿ ಮತ್ತು ತಂಡದವರ “ದ ಜಡ್ಜ್ ಮೆಂಟ್” ಶುರುವಾಗಿದೆ. ನನ್ನ ಪಾತ್ರ ಕೂಡ ಚೆನ್ನಾಗಿದೆ. ಚಿತ್ರತಂಡಕ್ಕೆ ಒಳ್ಳೆಯದಾಗಲಿ ಎಂದು ನಾಗಾಭರಣ ಹಾರೈಸಿದರು.

ದಿಗಂತ್, ಧನ್ಯ, ಲಕ್ಷ್ಮೀ ಗೋಪಾಲಸ್ವಾಮಿ, ರೂಪ ರಾಯಪ್ಪ ಮುಂತಾದವರು “ದ ಜಡ್ಜ್ ಮೆಂಟ್” ಕುರಿತು ಮಾತನಾಡಿದರು.

ಶರದ್ ಬಿ ನಾಡಗೌಡ, ವಿಶ್ವನಾಥ ಗುಪ್ತ, ರಾಮು ರಾಯಚೂರು, ರಾಜಶೇಖರ ಆರ್ ಪಾಟೀಲ, ರಾಜೇಶ್ವರಿ ಆರ್ ಸುನೀಲ ಹಾಗೂ ಪ್ರತಿಮ ಬಿರಾದಾರ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ ‌.

Categories
ಸಿನಿ ಸುದ್ದಿ

ಮಾತಿಗೆ ನಿಂತ ಸೂತ್ರಧಾರಿ

ಗಾಯಕ, ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ ನಾಯಕನಾಗಿ ನಟಿಸುತ್ತಿರುವ ” ಸೂತ್ರಧಾರಿ” ಚಿತ್ರದ ಚಿತ್ರೀಕರಣ ಬಹುತೇಕ ಮುಕ್ತಾಯವಾಗಿದೆ. ಎರಡು ಹಾಡುಗಳ ಚಿತ್ರೀಕರಣ ಮಾತ್ರ ಬಾಕಿಯಿದೆ. ಸದ್ಯ ಲೂಪ್ ಸ್ಟುಡಿಯೋದಲ್ಲಿ ಮಾತಿನ ಜೋಡಣೆ ನಡೆಯುತ್ತಿದೆ‌. ಚಂದನ್ ಶೆಟ್ಟಿ ಈ ಚಿತ್ರದ ಸಂಗೀತ ನಿರ್ದೇಶಕರೂ ಹೌದು. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಡ್ಯಾಶ್ ಸಾಂಗ್ ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗಿ, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ದಕ್ಷಿಣ ಭಾರತದಲ್ಲಿ ಮೈ ಮೂವೀ ಬಜಾರ್ ಮೂಲಕ ಸಾಕಷ್ಟು ಇವೆಂಟ್ ಗಳನ್ನು ನಡೆಸುತ್ತಿರುವ ನವರಸನ್, ಈಗಲ್ ಮೀಡಿಯಾ ಕ್ರಿಯೇಷನ್ಸ್ ಮೂಲಕ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. “ಸೂತ್ರಧಾರಿ” ಇವರ ನಿರ್ಮಾಣದ ಐದನೇ ಚಿತ್ರ.

ಕ್ರೈಮ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರವನ್ನು ಕಿರಣ್ ಕುಮಾರ್ ನಿರ್ದೇಶಿಸುತ್ತಿದ್ದಾರೆ.
ಪಿ.ಕೆ.ಹೆಚ್ ದಾಸ್ ಛಾಯಾಗ್ರಹಣ, ಸತೀಶ್ ಚಂದ್ರಯ್ಯ ಸಂಕಲನ ಹಾಗೂ ಮೋಹನ್ ಅವರ ನೃತ್ಯ ನಿರ್ದೇಶನವಿದೆ.

ಚಂದನ್ ಶೆಟ್ಟಿ ಅವರಿಗೆ ನಾಯಕಿಯಾಗಿ ಅಪೂರ್ವ ನಟಿಸಿದ್ದಾರೆ‌. ಸಂಜನಾ ಆನಂದ್ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದಾರೆ. ತಬಲನಾಣಿ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ‌.

Categories
ಸಿನಿ ಸುದ್ದಿ

ಇದು ಜಗ್ಗೇಶ್ ಸ್ಟೋರ್ಸ್ ಕಣ್ರೀ: ಟ್ರೇಲರ್ ಗೆ ಭರಪೂರ ಮೆಚ್ಚುಗೆ

“ಕೆ.ಜಿ.ಎಫ್”, ” ಕಾಂತಾರ”ದಂತಹ ವಿಶ್ವಪ್ರಸಿದ್ಧ ಚಿತ್ರಗಳನ್ನು ನೀಡಿರುವ ಹೊಂಬಾಳೆ ಫಿಲಂಸ್ ನ ವಿಜಯ್ ಕಿರಗಂದೂರ್ ಅವರ ನಿರ್ಮಾಣದ, “ರಾಜಕುಮಾರ” ದಂತಹ ಯಶಸ್ವಿ ಚಿತ್ರದ ನಿರ್ದೇಶಕ ಸಂತೋಷ್ ಆನಂದರಾಮ್ ನಿರ್ದೇಶನದ ಹಾಗೂ ತಮ್ಮ ಅಭಿನಯದ ಮೂಲಕ ಕನ್ನಡಿಗರ ಮನ ಗೆದ್ದಿರುವ ನವರಸ ನಾಯಕ ಜಗ್ಗೇಶ್ ನಾಯಕರಾಗಿ ನಟಿಸಿರುವ “ರಾಘವೇಂದ್ರ ಸ್ಟೋರ್ಸ್” ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ.

ಬಿಡುಗಡೆಯಾದ ತಕ್ಷಣದಿಂದಲೇ ಟ್ರೇಲರ್ ಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಚಿತ್ರ ಏಪ್ರಿಲ್ 28 ರಂದು ತೆರೆಗೆ ಬರಲಿದೆ.

ಸದಭಿರುಚಿಯ ಚಿತ್ರಗಳ ನಿರ್ದೇಶಕರೆಂದೆ ಖ್ಯಾತರಾಗಿರುವ ಸಂತೋಷ್ ಆನಂದರಾಮ್ ಈ ಚಿತ್ರವನ್ನು ನಿರ್ದೇಶಿಸಿದ್ದು, ಕಥೆ, ಚಿತ್ರಕಥೆಯನ್ನು ಅವರೆ ಬರೆದಿದ್ದಾರೆ. ಕೌಟುಂಬಿಕ ಹಾಗೂ ಕಾಮಿಡಿ ಜಾನರ್ ನ “ರಾಘವೇಂದ್ರ ಸ್ಟೋರ್ಸ್” ಚಿತ್ರದ ಬಿಡುಗಡೆಗೆ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

ಈಗಾಗಲೇ ಟೀಸರ್ ಹಾಗೂ ಲಿರಿಕಲ್ ವಿಡಿಯೋ ಮೂಲಕ “ರಾಘವೇಂದ್ರ ಸ್ಟೋರ್ಸ್” ಸದ್ದು ಮಾಡಿದೆ.

ಅಜನೀಶ್ ಲೋಕನಾಥ್ ಸಂಗೀತದಲ್ಲಿ ಮೂಡಿಬಂದಿರುವ ಈ ಚಿತ್ರದ ಹಾಡುಗಳು ಸುಮಧುರವಾಗಿದೆ. ಶ್ರೀಶ ಕುದುವಳ್ಳಿ ಛಾಯಾಗ್ರಹಣ , ದೀಪು ಎಸ್ ಕುಮಾರ್ ಸಂಕಲನ ಹಾಗೂ ವುಶ್ವಾಸ್ ಕಶ್ಯಪ್ ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿದೆ.

ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸಿರುವ ಯೋಗಿ ಜಿ ರಾಜ್ ವಸ್ತ್ರ ವಿನ್ಯಾಸ ಕೂಡ ಮಾಡಿದ್ದಾರೆ.

ನಾಯಕ ಜಗ್ಗೇಶ್, ಶ್ವೇತ ಶ್ರೀವಾಸ್ತವ್, ಹೆಚ್ ಜಿ ದತ್ತಾತ್ರೇಯ, ರವಿಶಂಕರ್ ಗೌಡ ಮುಂತಾದವರು “ರಾಘವೇಂದ್ರ ಸ್ಟೋರ್ಸ್” ನಲ್ಲಿ ನಟಿಸಿದ್ದಾರೆ.

error: Content is protected !!