Categories
ಸಿನಿ ಸುದ್ದಿ

ಇದು ಡಾರ್ಲಿಂಗ್ ಕೃಷ್ಣ ಅವರ ಬೆಸ್ಟ್ ಕಥೆಯ ಚಿತ್ರ: ಕೌಸಲ್ಯ ಸುಪ್ರಜಾ ಜೊತೆ ರಾಮ! ಜುಲೈ 28ಕ್ಕೆ ರಿಲೀಸ್

ಶಶಾಂಕ್ ನಿರ್ದೇಶನದಲ್ಲಿ ಡಾರ್ಲಿಂಗ್ ಕೃಷ್ಣ ನಾಯಕರಾಗಿ ನಟಿಸಿರುವ “ಕೌಸಲ್ಯ ಸುಪ್ರಜಾ ರಾಮ” ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಯಿತು. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಟ್ರೇಲರ್ ಅನಾವರಣ ಮಾಡಿದರು. ‌

ಈ ಟ್ರೇಲರ್ ನಲ್ಲಿ ಬಹಳ ಒಳ್ಳೆಯ ಕಥೆಯನ್ನು ಕಂಡೆ ಎಂದು ಮಾತು ಪ್ರಾರಂಭಿಸಿದ ಕಿಚ್ಚ ಸುದೀಪ್,ಇಲ್ಲಿ ನಂಬಿಕೆ ಮತ್ತು ಸಂಬಂಧಗಳ ಸಂಘರ್ಷ ಇದೆ. ಶಶಾಂಕ್ ಅವರು ಎಮೋಷನ್ ಗಳನ್ನು ಹಿಡಿದಿಡುವ ರೀತಿ ನನಗೆ ಇಷ್ಟ. ಚಿತ್ರದ ಹಾಡುಗಳು ಚೆನ್ನಾಗಿವೆ. ಈ ಚಿತ್ರ ಸಹ ಚೆನ್ನಾಗಿ ಮೂಡಿಬಂದಿರುತ್ತದೆ. ಚಿತ್ರ ಯಶಸ್ವಿಯಾಗಲಿ ಎಂದು ಹಾರೈಸಿದರು.

ನಾನು ಇದುವರೆಗೂ ಮಾಡಿರುವ ಸಿನಿಮಾಗಳಲ್ಲಿ ಬೆಸ್ಟ್ ಸಿನಿಮಾ ಇದು. ಕಾರಣ ಈ ಚಿತ್ರದ ಕಥೆ. ಈ ಕಥೆಗೆ ಯಾವುದೋ ಒಂದು ಆಯಾಮವಿಲ್ಲ, ಹಲವು ಆಯಾಮಗಳಿವೆ. ಸಿನಿಮಾ ನೋಡುವ ಪ್ರತಿಯೊಬ್ಬರಿಗೂ ರಿಲೇಟ್ ಆಗುವ ಕಥೆ ಇದು. ಪ್ರತಿಯೊಬ್ಬರೂ ಚಿತ್ರದಲ್ಲಿನ ಯಾವುದಾದರೊಂದು ಪಾತ್ರದ ಜೊತೆಗೆ ರಿಲೇಟ್ ಮಾಡಿಕೊಳ್ಳಬಹುದು. ಈ ತರಹದ ಕಥೆ ಸಿಗೋದು ಕಷ್ಟ. ಇದು ದೊಡ್ಡ ಮಟ್ಟದಲ್ಲಿ ಸದ್ದು ಮಾಡಬಹುದು ಎಂಬ ನಿರೀಕ್ಷೆ ಇದೆ. ಕೃಷ್ಣ ಅವರನ್ನು ಬೇರೆ ತರಹ ತೋರಿಸುವ ಪ್ರಯತ್ನ ಮಾಡಿದ್ದೇನೆ.

ಮಿಲನಾ ಅವರನ್ನು ಚಿತ್ರಕ್ಕೆ ಆಯ್ಕೆ ಮಾಡಿದ್ದು ಬೇರೆ ಕಾರಣಕ್ಕಲ್ಲ, ಅವರ ಪ್ರತಿಭೆಗಾಗಿ. ಆ ಪಾತ್ರ ನಿಭಾಯಿಸುವುದು ಬಹಳ ಕಷ್ಟ. ಬಹಳ ನೈಜವಾಗಿ ಮತ್ತು ಸೆನ್ಸಿಬಲ್ ಆಗಿ ನಟಿಸಬೇಕಿತ್ತು. ನಿರೀಕ್ಷೆಗೂ ಮೀರಿ ಅವರು ನಟಿಸಿದ್ದಾರೆ. ಬೃಂದಾ ಅವರ ಅಭಿನಯ ಕೂಡ ಅದ್ಭುತವಾಗಿದೆ. ಜುಲೈ 28ಕ್ಕೆ ಚಿತ್ರ ಬಿಡುಗಡೆಯಾಗುತ್ತಿದೆ. ಇಷ್ಟವಾಗಬಹುದೆಂಬ ನಂಬಿಕೆ ಇದೆ ಎಂದು ನರ್ದೇಶಕ ಶಶಾಂಕ್ ತಿಳಿಸಿದರು.

ನಾನು ಇಷ್ಟು ವರ್ಷಗಳಲ್ಲಿ ಕೇಳಿರುವ ದಿ ಬೆಸ್ಟ್ ಕಥೆ ಇದು ಎಂದ ನಾಯಕ ಡಾರ್ಲಿಂಗ್ ಕೃಷ್ಣ, ಈ ಚಿತ್ರದಲ್ಲಿ ಸಾಕಷ್ಟು ವಿಷಯಗಳನ್ನು ಮನರಂಜನಾತ್ಮಕವಾಗಿ ಹೇಳಿದ್ದಾರೆ. ಶಶಾಂಕ್ ಅವರು ಬಂದಾಗ, ಕಥೆ ಇರಲಿಲ್ಲ. ನಿಮಗೆ ಯಾವ ತರಹದ ಸಿನಿಮಾ ಬೇಕು ಎಂದು ಕೇಳಿದರು. ನೀವು ನಿಮ್ಮ ಸ್ಟೈಲ್ ನಲ್ಲೇ ಮಾಡಿ ಎಂದು ಹೇಳಿದೆ. ಒಂದು ತಿಂಗಳ ನಂತರ ಈ ಕಥೆ ತಂದರು. ಬಹಳ ಸುಲಭವಾಗಿ ಮುಗಿದ ಚಿತ್ರ ಇದು. ನಟನೆ ಮಾಡಿದ್ದೇ ಗೊತ್ತಾಗಲಿಲ್ಲ. ಈ ಸಿನಿಮಾ ಎಲ್ಲರ ಮನಸ್ಸಿಗೂ ಹತ್ತಿರವಾಗಲಿದೆ ಎಂದು ತಿಳಿಸಿದರು.

ಶಶಾಂಕ್ ಅವರು ಬಂದು ಕಥೆ ಹೇಳಿದಾಗ ಬಹಳ ಇಷ್ಟವಾಯಿತು. ನಮ್ಮ ಕೌರವ ಪ್ರೊಡಕ್ಷನ್ ಹೌಸ್ ಹಾಗೂ ಶಶಾಂಕ್ ಸಿನಿಮಾಸ್ ಜೊತೆ ಸೇರಿ ಈ ಚಿತ್ರ‌ ನಿರ್ಮಾಣ ಮಾಡಿದ್ದೇವೆ.‌ ಅರ್ಜುನ್ ಜನ್ಯ ಸಂಗೀತ ನಿರ್ದೇಶನದಲ್ಲಿ ಮೂಡಿಬಂದಿರುವ ಹಾಡುಗಳು ಈಗಾಗಲೇ ಹಿಟ್ ಆಗಿದೆ. ಟ್ರೇಲರ್ ಬಿಡುಗಡೆ ಮಾಡಿಕೊಟ್ಟ ಸುದೀಪ್ ಅವರಿಗೆ ಧನ್ಯವಾದ ಎಂದು ಬಿ.ಸಿ.ಪಾಟೀಲ್.

ಚಿತ್ರದಲ್ಲಿ ನಟಿಸಿರುವ ಮಿಲನ ನಾಗರಾಜ್, ಬೃಂದಾ ಆಚಾರ್ಯ, ನಾಗಭೂಷಣ್ ಸೇರಿದಂತೆ ಅನೇಕ ಚಿತ್ರತಂಡದ ಸದಸ್ಯರು ಚಿತ್ರದ ಕುರಿತು ಮಾತನಾಡಿದರು.

.

Categories
ಸಿನಿ ಸುದ್ದಿ

ಇವರಿಬ್ಬರ ಪ್ರೀತಿ ಹೇಳಿಕೊಳ್ಳುವಂತಹ ಅಪರೂಪವೇನಲ್ಲ!

ಚಿತ್ರ ವಿಮರ್ಶೆ

ವಿಜಯ್ ಭರಮಸಾಗರ

ರೇಟಿಂಗ್ : 3/5

ಚಿತ್ರ : ಅಪರೂಪ
ನಿರ್ದೇಶಕ : ಮಹೇಶ್ ಬಾಬು
ನಿರ್ಮಾಪಕ :ಕೆ.ಆರ್.ಮಹೇಶ್
ತಾರಾಗಣ : ಸುಘೋಷ್, ಹೃತಿಕಾ, ಅಶೋಕ್, ಅರುಣಾ ಬಲರಾಜ್, ಅವಿನಾಶ್, ಕುರಿಪ್ರತಾಪ್ , ವಿಜಯ್ ಚೆಂಡೂರು, ಕಡ್ಡಿಪುಡಿ ಚಂದ್ರು, ಮೋಹನ್ ಜುನೇಜ ಇತರರು…

ಅವನದು ಬಚ್ಚಿಟ್ಕೊಳ್ಳೋ ಕ್ಯಾರೆಕ್ಟರ್ ಅಲ್ಲ ಅಣ್ಣ, ಬೆಚ್ಚಿ ಬೀಳೀಸೋ ಕ್ಯಾರೆಕ್ಟರ್…’

ಸಿನಿಮಾ ಶುರುವಿಗೆ ಈ ಡೈಲಾಗ್ ತೂರಿ ಬರುತ್ತೆ. ಅಲ್ಲಿಗೆ ಹೀರೋ ಎಂಟ್ರಿ, ರಗಡ್ ಫೈಟು ಗೀಟು ಇತ್ಯಾದಿ ಕಾಣಸಿಗುತ್ತೆ. ಎಲ್ಲಾ ಸಿನಿಮಾಗಳಲ್ಲೂ ಇರುವಂತೆ ಇಲ್ಲೂ ಹೀರೋಯಿಸಮ್ ಗೆ ಬೇಕಾದ ಬಿಲ್ಡಪ್ ಫೈಟು, ಓಪನಿಂಗ್ ಸಾಂಗು ಇದೆ. ಅಲ್ಲಿಗೆ ಇದೊಂದು ಕಮರ್ಷಿಯಲ್ ಸಿನಿಮಾ ಅಂತ ಪ್ರತ್ಯೇಕವಾಗಿ ಹೇಳಬೇಕಿಲ್ಲ. ಈ ಸಿನಿಮಾ ಮೂಲಕ ಸುಘೋಷ್ ಎಂಬ ಹೊಸ ಪ್ರತಿಭೆ ಸಿನಿಮಾರಂಗ ಸ್ಪರ್ಶಿಸಿದೆ. ನಿರ್ದೇಶಕ ಮಹೇಶ್ ಬಾಬು ಹೊಸತೇನೋ ಹೇಳಿದ್ದಾರೆ ಅಂತ ನಿರೀಕ್ಷೆ ಇಟ್ಟುಕೊಳ್ಳುವಂತಿಲ್ಲ. ಹೇಳಿಕೊಳ್ಳುವಂತಹ ಕಥೆಯಾಗಲಿ, ನಿರೂಪಣೆಯಾಗಲಿ ಕಾಣಸಿಗಲ್ಲ. ಹೊಸ ಹೀರೋ ಸಿನಿಮಾ ಅಂದರೆ, ಒಂದಷ್ಟು ಹೊಸತನವಾದರೂ ಬೇಕಿತ್ತು. ಅದು ಕಥೆಯಲ್ಲಾಗಲಿ, ಚಿತ್ರಕಥೆಯಲ್ಲಾಗಲಿ ಇಲ್ಲ. ಸಿಂಪಲ್ ಲವ್ ಸ್ಟೋರಿಯಾದರೂ ಅದನ್ನು ಇನ್ನಷ್ಟು ರಿಚ್ ಆಗಿ ಹೇಳಬಹುದಿತ್ತು. ಹಾಗಂತ ಸಿನಿಮಾ ರಿಚ್ಚಾಗಿ ಇಲ್ಲವಂತಲ್ಲ, ಅಲ್ಲಲ್ಲಿ ಅದ್ಧೂರಿತನ ಕಾಣುತ್ತೆ.

ಪ್ರೀತಿ ಪ್ರೇಮ ಕಥೆಗಳು ಸಾಕಷ್ಟು ಬಂದಿವೆ. ಅಂತಹ ಪ್ರೀತಿ ಕಥೆಗಳ ಸಾಲಿಗೆ ಇದೂ ಒಂದಷ್ಟೇ. ಇಲ್ಲಿರು ಪ್ರೀತಿ ಕಥೆಯಲ್ಲೇನೂ ವಿಶೇಷತೆ ಇಲ್ಲ. ಆದರೆ, ಹಾಡು, ಡ್ಯಾನ್ಸು, ಫೈಟು ಇಷ್ಟಪಡೋರಿಗೆ ಸಿನಿಮಾ ನಿರಾಸೆ ಮಾಡಲ್ಲ.
ಮೊದಲರ್ಧ ಹಾಡು, ಡ್ಯಾನ್ಸು ಫೈಟಿನೊಂದಿಗೆ ಮುಗಿದರೆ, ದ್ವಿತಿಯಾರ್ಧ ಕೊಂಚ ಭಾವುಕತೆ, ತಲ್ಲಣ,ನೋವು, ನಗು ಖುಷಿಯೊಂದಿಗೆ ಮುಗಿಯುತ್ತೆ.

ಕಥೆ ಏನು?

ಇಲ್ಲೂ ಮುದ್ದಾದ ಜೋಡಿ ಇದೆ. ಅವರ ಪ್ರೀತಿ, ಮುನಿಸು, ಕಿತ್ತಾಟ, ಸುತ್ತಾಟ, ಸಂಭ್ರಮ, ಸಂಕಷ್ಟ, ಒಂದಷ್ಟು ಹಾಸ್ಯ, ಅಪ್ಪ ಅಮ್ಮನ ಪ್ರೀತಿ, ಬಾತ್ಸಲ್ಯ, ಗೆಳೆತನ, ಹಗೆತನ ಇತ್ಯಾದಿ ಇದೆ.

ಇಲ್ಲಿ ಹೀರೋ ವಿಜಯ್ (ಸುಘೋಷ್) ಮಧ್ಯಮ ವರ್ಗದ ಹುಡುಗ. ಅಪ್ಪ, ಅಮ್ಮ ತಂಗಿ ಅವನ ಪ್ರಪಂಚ. ಕುಡಿತ ಅವನ ಅರೆಕಾಲಿಕ ಚಟ. ಅದಕ್ಕೆ‌ ಕಾರಣ ಕೈ ಕೊಟ್ಟ ಪ್ರೀತಿ. ಪ್ರೀತಿಸಿದ ಹುಡುಗಿ ದೂರವಾಗೋಕೆ ಕಾರಣ, ತುಂಬಾ ಸಿಂಪಲ್. ಅದು ಏನು ಎಂಬ ಕುತೂಹಲ ಇದ್ದರೆ ‘ಅಪರೂಪ’ದ ನೋಡಿ!

ನಾಯಕಿ ಶ್ರೀಮಂತನ ಮಗಳು. ಅಪ್ಪನಿಗೆ ಮಗಳೆಂದರೆ ಪ್ರಾಣ, ಆ ಮಗಳಿಗೆ ‘ಈಡಿಯಟ್’ನಂತಹ ಹುಡುಗನ ಮೇಲೆ ಪ್ರೀತಿ. ಅವರಿಬ್ಬರ ಪ್ರೀತಿ ಅಪ್ಪನಿಗೆ ಇಷ್ಟ ಇಲ್ಲ. ಅತ್ತ, ಹುಡುಗನ ಅಪ್ಪ ಅಮ್ಮನಿಗೆ ಮಗ ಪ್ರೀತಿಸಿದ ಹುಡುಗಿ ಅಚ್ಚುಮೆಚ್ಚು. ಹೀಗಿರುವಾಗ, ಪ್ರೀತಿ ಕಾರಣವೊಂದಕ್ಕೆ ಬ್ರೇಕಪ್ ಆಗುತ್ತೆ. ಮೇಲೆ ಅವರಿಬ್ಬರು ಒಂದಾಗ್ತಾರ? ಅದೇ ಸಸ್ಪೆನ್ಸ್.

ಕೆಲವು ಕಡೆ ಸಣ್ಣ ಸಣ್ಣ ಟ್ವಿಸ್ಟುಗಳಿವೆ. ನೋಡುಗರಿಗೆ ಅಲ್ಲಲ್ಲಿ ಟೆಸ್ಟೂ ಇದೆ. ಅಪರೂಪ ಎಂಬ ಶೀರ್ಷಿಕೆಗೆ ತಕ್ಕಂತೆ ಅಪರೂಪ ಎನಿಸುವ ಯಾವ ಅಂಶಗಳು ಇಲ್ಲ ಎಂಬುದು ಬೇಸರವಷ್ಟೆ. ಅದು ಬಿಟ್ಟರೆ, ಸುಮನೆ ಎರಡು ತಾಸು ಕುಳಿತು, ಅವರ ಪ್ರೀತಿ, ಜಗಳ, ಹಾಡು, ಕುಣಿತ ಇತ್ಯಾದಿ ನೋಡಬೇಕಷ್ಟೆ.

ಯಾರು ಹೇಗೆ?


ನಿರ್ದೇಶಕ ಮಹೇಶ್ ಬಾಬು ಅವರ ಈ ಸಿನಿಮಾ ಕಥೆಯಲ್ಲಿ ಇನ್ನಷ್ಟು ಧಮ್ ಇರಬೇಕಿತ್ತು. ಅಲ್ಲಲ್ಲಿ ಸಣ್ಣಪುಟ್ಟ ಎಡವಟ್ಟುಗಳನ್ನು ಸರಿಪಡಿಸಬೇಕಿತ್ತು.
ಇನ್ನು ಹೀರೋ ಸುಘೋಷ್ ಅವರ ಮೊದಲ ಪ್ರಯತ್ನ ಇದು. ಮೊದಲ ಬಾಲ್ ನಲ್ಲೇ ಒಳ್ಳೆಯ ಸ್ಕೊರ್ ಮಾಡಿದ್ದಾರೆ. ಡ್ಯಾನ್ಸ್, ಫೈಟ್ ಚೆನ್ನಾಗಿ ಮಾಡಿದ್ದಾರೆ. ಲವಲವಿಕೆ ಎದ್ದು ಕಾಣುತ್ತೆ.
ನಾಯಕಿ ಹೃತಿಕಾ ಸಿಕ್ಕ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ.

ವಿಜಯ್ ಚೆಂಡೂರ್ ಸ್ಕ್ರೀನ್ ಮೇಲೆ ಕಾಣುವಾಗೆಲ್ಲ ನಗೆಬುಗ್ಗೆ ಸಿಗುತ್ತೆ. ಉಳಿದಂತೆ ಅಶೋಕ್, ಅವಿನಾಶ್, ಅರುಣಾ ಬಾಲರಾಜ್, ಕಡ್ಡಿಪುಡಿ ಚಂದ್ರು ಪಾತ್ರಕ್ಕೆ ಮೋಸ ಮಾಡಿಲ್ಲ.
ಪ್ರಜ್ವಲ್ ಪೈ ಸಂಗೀತದ ಎರಡು ಹಾಡುಗಳು ಕೇಳುವಂತಿವೆ. ಹಿನ್ನೆಲೆ ಸಂಗೀತಕ್ಕೆ ಕೊಂಚ ಗಮನಕೊಡಬೇಕಿತ್ತು. ಸೂರ್ಯಕಾಂತ್ ಕ್ಯಾಮರಾ ಕೈಚಳಕ ಪರವಾಗಿಲ್ಲ.

Categories
ಸಿನಿ ಸುದ್ದಿ

ಶಿವಣ್ಣ-ಪ್ರಭುದೇವ ನಟನೆಯ ಕರಟಕ ದಮನಕ ಸಿನಿಮಾ

ಹ್ಯಾಟ್ರಿಕ್ ಹೀರೋ ಶಿವಣ್ಣ ಮತ್ತು ಡ್ಯಾನ್ಸ್ ಕಿಂಗ್ ಪ್ರಭುದೇವ ಮೊದಲ ಬಾರಿಗೆ ಒಟ್ಟಿಗೇ ಅಭಿನಯಿಸಿರುವ ರಾಕ್‌ಲೈನ್ ಎಂಟರ್ಟೈನ್ಮೆಂಟ್ ಲಾಂಛನದಲ್ಲಿ ರಾಕ್ ಲೈನ್ ವೆಂಕಟೇಶ್ ನಿರ್ಮಿಸಿರುವ, ಯೋಗರಾಜ್ ಭಟ್ ನಿರ್ದೇಶನದ, ವಿ.ಹರಿಕೃಷ್ಣ ಸಂಗೀತ ನಿರ್ದೇಶನದ ‘ಕರಟಕ ದಮನಕ’ ಚಿತ್ರದ EXCLUSIVE ಮೊದಲ ಝಲಕ್ ಬಿಡುಗಡೆಯಾಗಿದೆ.

‘ಒಂದಾನೊಂದು ಕಾಲದಲ್ಲಿ ಎರಡು ಕುತಂತ್ರಿ ನರಿಗಳಿದ್ದವು. ಒಂದರ ಹೆಸರು “ಕರಟಕ” ಇನ್ನೊಂದರ ಹೆಸರು “ದಮನಕ”. ಈ ಎರಡೂ ನರಿಗಳು ಕಾಡು ಮತ್ತು ನಾಡಿನ ತಲೆ ಕೆಡಿಸಿ ಇತಿಹಾಸವಾದವು.
ಆ ಕುತಂತ್ರಿ ನರಿಗಳು ಇಂದು ಇಲ್ಲಿ ಮಾನವ ರೂಪ ತಾಳಿವೆ…!!
ಎಚ್ಚರಿಕೆ’ ❗ಎಂಬ ಈ ಬರಹದ ಮೂಲಕ ಪ್ರೇಕ್ಷಕರ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ ನಿರ್ದೇಶಕ ಯೋಗರಾಜ್ ಭಟ್.

ಬೆಂಗಳೂರು ಗ್ರಾಮಾಂತರ, ಕೋಲಾರ, ಗೌರಿಬಿದನೂರು ಹಾಗೂ ಉತ್ತರ ಕರ್ನಾಟಕದಲ್ಲಿ ಚಿತ್ರೀಕರಣ ನಡೆದಿದೆ.

ಶಿವರಾಜಕುಮಾರ್, ಪ್ರಭುದೇವ, ರವಿಶಂಕರ್, ತನಿಕೆಲ್ಲ ಭರಣಿ, ರಂಗಾಯಣ ರಘು, ಪ್ರಿಯಾ ಆನಂದ್, ನಿಶ್ವಿಕಾ ನಾಯ್ಡು ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.

ಸಂತೋಷ್ ರೈ ಪಾತಾಜೆ ಛಾಯಾಗ್ರಹಣ ಹಾಗೂ ಕೆ.ಎಂ.ಪ್ರಕಾಶ್ ಅವರ ಸಂಕಲನ ಈ ಚಿತ್ರಕ್ಕಿದೆ. ಯೋಗರಾಜ್ ಭಟ್ ಹಾಗೂ ರವಿ ಈ ಚಿತ್ರಕ್ಕೆ ಕಥೆ ರಚಿಸಿದ್ದು, ಚಿತ್ರಕಥೆಯನ್ನು ಯೋಗರಾಜ್ ಭಟ್, ರವಿ ಹಾಗೂ ಸುಬ್ರಹ್ಮಣ್ಯ ಬರೆದಿದ್ದಾರೆ.

Categories
ಸಿನಿ ಸುದ್ದಿ

ಬ್ಯಾಡ್ ಹುಡುಗನಿಗೆ ಸಾಥ್ ಕೊಟ್ಟ ಬೋಲ್ಡ್ ಹುಡುಗಿ ಮಾನ್ವಿತ

“ಟಗರು” ಸೇರಿದಂತೆ ಅನೇಕ ಚಿತ್ರಗಳಲ್ಲಿ ತಮ್ಮ ಅಮೋಘ ಅಭಿನಯದ ಮೂಲಕ ಜನಪ್ರಿಯರಾಗಿರುವ ಮಾನ್ವಿತ ಕಾಮತ್, ಪ್ರಸ್ತುತ ಪಿ.ಸಿ ಶೇಖರ್ ನಿರ್ದೇಶನದ “BAD” ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ “BAD” ಚಿತ್ರ ಫಸ್ಟ್ ಲುಕ್ ಮೂಲಕ ಜನರ ಮನ ಗೆದ್ದಿದೆ. ಪ್ರಮುಖ ಪಾತ್ರಧಾರಿ ನಕುಲ್ ಗೌಡ ಅವರ ಲುಕ್ ಗೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಮಾನ್ವಿತ ಕಾಮತ್ ಅವರ ಪಾತ್ರದ ಕುರಿತು ಮಾತನಾಡುವ ನಿರ್ದೇಶಕ ಪಿ.ಸಿ.ಶೇಖರ್, ಈ ಚಿತ್ರದಲ್ಲಿ ಮಾನ್ವಿತ ಅವರ ಪಾತ್ರದ ಹೆಸರು ಪವಿತ್ರ(ಪವಿ). ತುಂಬಾ ಬೋಲ್ಡ್ ಕ್ಯಾರೆಕ್ಟರ್ ಅವರದು. ವಿಲೇಜ್ ಬ್ಯಾಕ್ ಡ್ರಾಪ್ ನಲ್ಲಿ ಅವರ ಸ್ಟೋರಿ ಸಾಗುತ್ತಾ ಹೋಗುತ್ತದೆ. ನಾನು ಮುಂಚೆ ತಿಳಿಸಿದ ಹಾಗೆ ಕಾಮ, ಕ್ರೋಧ ಸೇರಿದಂತೆ ಅರಿಷಡ್ವರ್ಗಗಳನ್ನು ಪ್ರತಿನಿಧಿಸುವ ಆರು ಪಾತ್ರಗಳು ನಮ್ಮ‌ ಚಿತ್ರದಲ್ಲಿದೆ. ಈ ಆರು ಪಾತ್ರಗಳಲ್ಲದೆ ಇನ್ನೊಂದು ಪಾತ್ರ ಕೂಡ ಇದೆ ಎಂದು. ಆ ಪಾತ್ರದಲ್ಲಿ ಮಾನ್ವಿತ ಅಭಿನಯಿಸುತ್ತಿದ್ದಾರೆ ಎಂದರು.

ನನಗೆ “BAD” ಚಿತ್ರದ ಪಾತ್ರ ಬಹಳ ಇಷ್ಟವಾಯಿತು. ಪವಿತ್ರ ನನ್ನ ಪಾತ್ರದ ಹೆಸರು. ಯಾವುದಕ್ಕೂ ಅಂಜದ, ಬೋಲ್ಡ್ ಹುಡುಗಿಯ ಪಾತ್ರ ನನ್ನದು. ಈ ಹಿಂದೆ ನಿರ್ದೇಶಕ ಸೂರಿ ಅವರು ಕಾಸ್ಟ್ಯೂಮ್ಸ್ ಇದೇ ರೀತಿ ಇರಬೇಕು ಎಂದು ಆಸಕ್ತಿ ತೋರಿಸುತ್ತಿದ್ದರು. ಅದೇ ರೀತಿ ಪಿ.ಸಿ.ಶೇಖರ್ ಅವರು ಕೂಡ ಕಾಸ್ಟ್ಯೂಮ್ಸ್ ಗೆ ಹೆಚ್ಚು ಒತ್ತು ಕೊಟ್ಟಿದ್ದಾರೆ. ನಾನು ಈವರೆಗೂ ಮಾಡಿರದ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತದ್ದೇನೆ ಎಂದು ನಟಿ ಮಾನ್ವಿತ ಕಾಮತ್ ತಿಳಿಸಿದ್ದಾರೆ.

ಎಸ್ ಆರ್ ವೆಂಕಟೇಶ್ ಗೌಡ ನಿರ್ಮಾಣದ ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನಿರ್ದೇಶನ, ಪಿ.ಸಿ.ಶೇಖರ್ ಸಂಕಲನ ಹಾಗೂ ಶಕ್ತಿ ಶೇಖರ್ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಸಚಿನ್ ಬಿ ಹೊಳಗುಂಡಿ ಸಂಭಾಷಣೆ ಬರೆದಿದ್ದಾರೆ. ಜಿ.ರಾಜಶೇಖರ್ ಅವರ ಕಲಾ ನಿರ್ದೇಶನ “BAD” ಚಿತ್ರಕ್ಕಿದೆ.

“ಪ್ರೀತಿಯ ರಾಯಭಾರಿ” ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದ ನಕುಲ್ ಗೌಡ, ಮಾನ್ವಿತ ಹರೀಶ್, ಸಾಯಿ ಕೃಷ್ಣ, ಅಪೂರ್ವ ಭಾರದ್ವಾಜ್, ಮಂಜುನಾಥ್ , ಅಶ್ವಿನಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Categories
ಸಿನಿ ಸುದ್ದಿ

ಆಚಾರ್ ಅಂಡ್ ಕೋ: ಟ್ರೇಲರ್ ಬಂತು: ಪಿ ಆರ್ ಕೆ ನಿರ್ಮಾಣದ ಚಿತ್ರ ಜುಲೈ 28ಕ್ಕೆ ರಿಲೀಸ್

ಹೊಸಬರ ಹೊಸ ಪ್ರಯತ್ನಕ್ಕೆ ಪ್ರತಿಷ್ಠಿತ ಪಿ.ಆರ್.ಕೆ ಪ್ರೊಡಕ್ಷನ್ಸ್ ಮೊದಲಿನಿಂದಲೂ ಪ್ರೋತ್ಸಾಹ ನೀಡುತ್ತಾ ಬಂದಿದೆ. ಪ್ರಸ್ತುತ ಸಿಂಧು ಶ್ರೀನಿವಾಸಮೂರ್ತಿ ನಿರ್ದೇಶನದ ವಿಭಿನ್ನ ಕಥಾಹಂದರ ಹೊಂದಿರುವ ” “ಆಚಾರ್ & ಕೋ” ಚಿತ್ರವನ್ನು ಪಿ.ಆರ್.ಕೆ ಪ್ರೊಡಕ್ಷನ್ಸ್ ಮೂಲಕ ಅಶ್ವಿನಿ ಪುನೀತ್ ರಾಜಕುಮಾರ್ ನಿರ್ಮಿಸಿದ್ದಾರೆ. ಇತ್ತೀಚೆಗೆ ಈ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಟ್ರೇಲರ್ ಸಾಕಷ್ಟು ವಿಶ್ವಾಸ ಮೂಡಿಸಿದೆ. ಚಿತ್ರ ನೋಡುವ ಕಾತುರವನ್ನು ಮತ್ತಷ್ಟು ಹೆಚ್ಚಿಸಿದೆ.

ಇದು ಅರವತ್ತರ ಕಾಲಘಟ್ಟದಲ್ಲಿ ನಡೆಯುವ ಕಥೆ ಎಂದು ಮಾತು‌ ಪ್ರಾರಂಭಿಸಿದ ನಿರ್ದೇಶಕಿ ಸಿಂಧು ಶ್ರೀನಿವಾಸಮೂರ್ತಿ, ಬೆಂಗಳೂರಿನ ಜಯನಗರ ನಿವಾಸಿ ಮಧುಸೂದನ್ ಆಚಾರ್ – ಸಾವಿತ್ರಿ ಆಚಾರ್ ಹಾಗೂ ಅವರ ಹತ್ತು ಜನ ಮಕ್ಕಳ ಸುತ್ತ ನಡೆಯುವ ಕಥೆ. ಒಟ್ಟಿನಲ್ಲಿ ಇದೊಂದು ಕೂಡು ಕುಟುಂಬದ ಕಥೆ ಎನ್ನಬಹುದು. ಮಧುಸೂದನ್ ಆಚಾರ್ ಪಾತ್ರದಲ್ಲಿ ಹಿರಿಯ ನಟ ಅಶೋಕ್, ಸಾವಿತ್ರಿ ಆಚಾರ್ ಪಾತ್ರದಲ್ಲಿ ಸುಧಾ ಬೆಳವಾಡಿ ಅಭಿನಯಿಸಿದ್ದಾರೆ. ಹೆಚ್ಚು ಜನ ಕಲಾವಿದರನ್ನು ಆಡಿಷನ್ ಮೂಲಕ ಆಯ್ಕೆ ಮಾಡಿಕೊಳ್ಳಲಾಗಿದೆ. ಅದರಲ್ಲಿ ಬಹುತೇಕರು ರಂಗಭೂಮಿ ಹಿನ್ನೆಲೆಯುಳ್ಳವರು. ನಾನು ಕೂಡ ಇದರಲ್ಲಿ ಅಭಿನಯಿಸಿದ್ದೇನೆ.

ಅರವತ್ತರ ದಶಕದಲ್ಲಿ ನಡೆಯುವ ಕಥೆಯಾಗಿರುವುದರಿಂದ ಚಿತ್ರದಲ್ಲಿ ಸ್ವಲ್ಪ ಕೂಡ ಅಧುನಿಕತೆ ಕಾಣಬಾರದು ಹಾಗಾಗಿ ಮೈಸೂರಿನಲ್ಲಿ ಚಿತ್ರೀಕರಣ ಮಾಡಿದ್ದೇವೆ. ಈ ಚಿತ್ರದ ಬಗ್ಗೆ ಪುನೀತ್ ರಾಜಕುಮಾರ್ ಅವರ ಬಳಿ ಮಾತನಾಡಿದ್ದೆ.‌ ಇಂದು ಅವರಿದಿದ್ದರೆ ಬಹಳ ಖುಷಿ ಪಡುತ್ತಿದ್ದರು. ಅಶ್ವಿನಿ ಪುನೀತ್ ರಾಜಕುಮಾರ್ ಅವರು ಯಾವುದೇ ಕೊರತೆ ಬರದಂತೆ ಅಚ್ಚುಕಟ್ಟಾಗಿ ನಿರ್ಮಾಣ ಮಾಡಿದ್ದಾರೆ. ನಮ್ಮ ಚಿತ್ರದ ಬಹುತೇಕ ತಂತ್ರಜ್ಞರು ಮಹಿಳೆಯರೆ ಆಗಿರುವುದು ವಿಶೇಷ. ಜುಲೈ 28 ನಮ್ಮ ಚಿತ್ರ ಬಿಡುಗಡೆಯಾಗುತ್ತಿದೆ. ನೋಡಿ ಪ್ರೋತ್ಸಾಹ ನೀಡಿ ಎಂದರು.

ನಾನು ಸಿನಿಮಾ ನೋಡಿದ್ದೇನೆ. ಚೆನ್ನಾಗಿದೆ. ಸಿಂಧು ಶ್ರೀನಿವಾಸಮೂರ್ತಿ ಮತ್ತು ತಂಡಕ್ಕೆ ಶುಭವಾಗಲಿ ಎಂದು ಅಶ್ವಿನಿ ಪುನೀತ್ ರಾಜಕುಮಾರ್ ಹಾರೈಸಿದರು.

ಹಿರಿಯ ನಟ ಅಶೋಕ್, ಸುಧಾ ಬೆಳವಾಡಿ ಸೇರಿದಂತೆ ಚಿತ್ರದಲ್ಲಿ ನಟಿಸಿರುವ ಅನೇಕ ಕಲಾವಿದರು, ಛಾಯಾಗ್ರಹಕ ಅಭಿಮನ್ಯು ಸದಾನಂದನ್ ಮುಂತಾದವರು “ಆಚಾರ್ & ಕೋ” ಚಿತ್ರದ ಕುರಿತು ಮಾತಾಡಿದರು.

ಬಿಂದು‌ಮಾಲಿನಿ ಸಂಗೀತ ನಿರ್ದೇಶನ, ವಿಶ್ವಾಸ್ ಕಶ್ಯಪ್ ಕಲಾ ನಿರ್ದೇಶನ ಹಾಗೂ ಆಶಿಕ್ ಕುಸುಗೊಳ್ಳಿ ಅವರ ಸಂಕಲನವಿರುವ ಈ ಚಿತ್ರಕ್ಕೆ ಸಿಂಧು ಶ್ರೀನಿವಾಸಮೂರ್ತಿ ಹಾಗೂ ಕಣ್ಣನ್ ಗಿಲ್ ಕಥೆ, ಚಿತ್ರಕಥೆ ರಚಿಸಿದ್ದಾರೆ. ಸಂಭಾಷಣೆಯನ್ನು ತ್ರಿಲೋಕ್ ತ್ರಿವಿಕ್ರಮ ಬರೆದಿದ್ದಾರೆ.

Categories
ಸಿನಿ ಸುದ್ದಿ

ಶಿವಣ್ಣ ಈಗ ಧೀರ! ಹುಟ್ದಬ್ಬಕ್ಕೆ ಅನೌನ್ಸ್ ಆಯ್ತು ಹೊಸ ಚಿತ್ರ

ಜುಲೈ 12, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಹುಟ್ಟುಹಬ್ಬ.ಅಂದು ಶಿವಣ್ಣ ಅಭಿನಯಿಸಲಿರುವ ಅನೇಕ ಚಲನಚಿತ್ರಗಳ, ಸಿನಿಮಾ ಶೀರ್ಷಿಕೆಗಳ‌ ಅನೌನ್ಸ್ ಮೆಂಟ್ ಆಗಿದೆ. ಆ ಚಿತ್ರಗಳಲ್ಲಿ “ಧೀರ” ಚಿತ್ರವೂ ಒಂದು. ಹೆಚ್.ಸಿ.ಶ್ರೀನಿವಾಸ್(ಶಿಲ್ಪ ಶ್ರೀನಿವಾಸ್) ಅರ್ಪಿಸುತ್ತಿರುವ ಈ ಚಿತ್ರವನ್ನು ಚಿಲ್ಲಿ ಫಿಲಂಸ್ ಎಂಟರ್ ಟೈನ್ ಮೆಂಟ್ ಅಡಿಯಲ್ಲಿ ಸಾಗರ್ ಅವರು ಅದ್ದೂರಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ಇನ್ನು ಈ ಚಿತ್ರಕ್ಕೆ ನವೀನ್ ಶೆಟ್ಟಿ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ‌.
ಸಿನಿಮಾ ನಟನಾಗಬೇಕೆಂಬ ಕನಸು ಹೊತ್ತು 12 ವರ್ಷಗಳ ಹಿಂದೆ ಮಲೆನಾಡಿಂದ ಬೆಂಗಳೂರಿಗೆ ಬಂದ ನವೀನ್ ಶೆಟ್ಟಿ ಅವರು ಎಸ್.ನಾರಾಯಣ್, ಓಂಪ್ರಕಾಶ್ ರಾವ್, ಗಡ್ಡವಿಜಿ ಅವರ ಜೊತೆ ಸಹಾಯಕನಾಗಿ ಕೆಲಸ‌ ಮಾಡಿದ್ದಾರೆ.

ಇಲ್ಲಿ ಬಂದ ಮೇಲೆ ನಿರ್ದೇಶನದ ಮೇಲೆ ಹೆಚ್ಚು ಆಸಕ್ತಿ ಹುಟ್ಟಿ ಅದರಲ್ಲೇ ಪರಿಣತಿ ಪಡೆದಿಕೊಂಡಿದ್ದಾರೆ. ನಂತರ ಓಟಿಟಿ ವೇದಿಕೆಗೆಂದೇ ‘ನಿಧಾನವಾಗಿ ಚಲಿಸಿ’ ಎಂಬ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಒಮ್ಮೆ ಆ ಚಿತ್ರವನ್ನು ವೀಕ್ಷಿಸಿದ ಶಿವಣ್ಣ ಮೆಚ್ಚಿ ಬೆನ್ನು ತಟ್ಟಿದ್ದಾರೆ. ಅದೇ ಸಮಯದಲ್ಲಿ ತಾವು ಶಿವಣ್ಣ ಅವರಿಗೆಂದೇ ಮಾಡಿಕೊಂಡಿದ್ದ ‘ಧೀರ’ ಕಥೆಯನ್ನು ಹೇಳಿ ಅವರನ್ನು ಒಪ್ಪಿಸಿದ್ದಾರೆ.


ತೆರೆಮೇಲೆ ಶಿವಣ್ಣ ಅವರನ್ನು ಬೇರೆಯದೇ ರೀತಿ ತೋರಿಸಹೊಟಿರುವ ನವೀನ್ ಶಟ್ಟಿ, ಮಾಸ್, ಅಂಡರ್ ವರ್ಲ್ಡ್, ಮ್ಯೂಸಿಕಲ್ ಆಕ್ಷನ್ ಡ್ರಾಮಾ ಸಬ್ಜೆಕ್ಟ್ ಅನ್ನು ಈ ಚಿತ್ರದಲ್ಲಿ ಹೇಳಹೊರಟಿದ್ದಾರೆ. ಕಲಿಯುಗ ಕರ್ಣ ಎಂಬ ಟ್ಯಾಗ್ ಲೈನ್ ಹೊಂದಿರುವ ಈ ಚಿತ್ರಕ್ಕೆ ಎಂ.ಎನ್. ಕೃಪಾಕರ್ ಅವರು ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಸದ್ಯ ಧೀರ ಚಿತ್ರದ ಪ್ರಿಪ್ರೊಡಕ್ಷನ್ ವರ್ಕ್ ನಡೆಯುತ್ತಿದ್ದು, ಶೀಘ್ರದಲ್ಲೇ ನಾಯಕಿ ಸೇರಿದಂತೆ ಉಳಿದ ತಾಂತ್ರಿಕ ವರ್ಗವನ್ನು ಪ್ರಕಟಿಸಲಾಗುವುದು.

Categories
ಸಿನಿ ಸುದ್ದಿ

ಶಿವಣ್ಣನ ಜೊತೆ ಅಜೇಯ್ ರಾವ್ ಹೊಸ ಸಿನಿಮಾ: ಫಸ್ಟ್ ಲುಕ್ ರಿಲೀಸ್

ನನ್ ಮಗಳೇ ಹೀರೋಯಿನ್, ಎಂಆರ್.ಪಿ. ಯಂಥ ಹಾಸ್ಯಮಯ ಚಲನಚಿತ್ರಗಳನ್ನು ನಿರ್ದೇಶನ‌ ಮಾಡಿಕೊಂಡು ಬಂದಿದ್ದ ಎಸ್.ಕೆ. ಬಾಹುಬಲಿ ಅವರು ಇದೇ ಮೊದಲ ಬಾರಿಗೆ ಮಲ್ಟಿ ಸ್ಟಾರ್ ಇಟ್ಟುಕೊಂಡು ಮಾಸ್ ಎಂಟರ್ಟೈನರ್ ಸಿನಿಮಾಗೆ ಆಕ್ಷನ್ ಕಟ್ ಹೇಳಲು ಹೊರಟಿದ್ದಾರೆ.


ಕನ್ನಡದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಕೃಷ್ಣ ಅಜೇಯ್ ರಾವ್ ಇಬ್ಬರ ಕಾಂಬಿನೇಷನ್ ನಲ್ಲಿ ಹೊಸ ಚಿತ್ರವೊಂದನ್ನು ಬಾಹುಬಲಿ ನಿರ್ದೇಶನ‌ ಮಾಡುತ್ತಿದ್ದಾರೆ. ನಟ ಶಿವರಾಜ್ ಕುಮಾರ್ ಅವರ ಹುಟ್ಟುಹಬ್ಬದ ವಿಶೇಷವಾಗಿ ಈ ಚಿತ್ರದ ಫಸ್ಟ್ ಲುಕ್ ಪೋಸ್ಟರನ್ನು ಬಿಡುಗಡೆ ಮಾಡಲಾಗಿದೆ.


ಕುತೂಹಲ ಕೆರಳಿಸುವ ಆಕ್ಷನ್, ಡ್ರಾಮಾ ಕಥಾಹಂದರ ಒಳಗೊಂಡ ಈ ಚಿತ್ರಕ್ಕೆ ಬಾಹುಬಲಿ ಅವರೇ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರವನ್ನು ಪಿ.ಕೆ. ಪ್ರೊಡಕ್ಷನ್ಸ್ ಬ್ಯಾನರ್ ಮೂಲಕ ಕಿರಣ್ ಅವರು ಬಿಗ್ ಬಜೆಟ್ ನಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. ಸದ್ಯ ಚಿತ್ರದ ಪ್ರಿಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದ್ದು ಮುಂದಿನ ದಿನಗಳಲ್ಲಿ ಸಂಪೂರ್ಣ ಮಾಹಿತಿ ಹೊರಬೀಳಲಿದೆ.

Categories
ಸಿನಿ ಸುದ್ದಿ

ಬರ್ತ್ ಡೇಗೆ ಶಿವಣ್ಣನ ಹೊಸ ಸಿನಿಮಾ ಅನೌನ್ಸ್: ಕಾನ್ಸೆಪ್ಟ್ ಪೋಸ್ಟರ್ ರಿಲೀಸ್

‘ಕರುನಾಡ ಚಕ್ರವರ್ತಿ’ ಶಿವರಾಜಕುಮಾರ್ ಜುಲೈ 12 (ಇಂದು) ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಹೊಸದೊಂದು ಚಿತ್ರವನ್ನು ಅವರು ಒಪ್ಪಿಕೊಂಡಿದ್ದು, ಹುಟ್ಟುಹಬ್ಬದ ಈ ಸಂದರ್ಭದಲ್ಲಿ ಈ ಚಿತ್ರದಲ್ಲಿನ ಅವರ ಪಾತ್ರದ ಕಾನ್ಸೆಪ್ಟ್ ಪೋಸ್ಟರ್ ಬಿಡುಗಡೆ ಮಾಡಲಾಗಿದೆ.


ಈ ಹಿಂದೆ ತಮಿಳಿನಲ್ಲಿ ವಿಕ್ರಮ್ ಪ್ರಭು ಅಭಿನಯದ ‘ಪಾಯುಮ್ ಒಳಿ ನೀ ಎನಕ್ಕು’ ಎಂಬ ಚಿತ್ರವನ್ನು ನಿರ್ದೇಶಿಸಿದ್ದ ಕಾರ್ತಿಕ್ ಅದ್ವೈತ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಸುಧೀರ್ ಚಂದ್ರ ಫಿಲಂ ಕಂಪನಿ ಮೂಲಕ ಸುಧೀರ್ ಚಂದ್ರ ಪದಿರಿ ನಿರ್ಮಿಸುತ್ತಿದ್ದಾರೆ. ಇದು ಅವರು ಕನ್ನಡದಲ್ಲಿ ನಿರ್ಮಿಸುತ್ತಿರುವ ಮೊದಲ ಚಿತ್ರವಾಗಿದೆ. ‘ವಿಕ್ರಮ್ ವೇದ’ ಮತ್ತು ‘ಕೈದಿ’ ಚಿತ್ರಗಳಿಗೆ ಸಂಗೀತ ಸಂಯೋಜಿಸಿದ್ದ ಸ್ಯಾಮ್ ಸಿ.ಎಸ್ ಈ ಚಿತ್ರಕ್ಕೆ ಸಂಗೀತ ಸಂಯೋಜಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ.


ಇದೊಂದು ಆಕ್ಷನ್ ಚಿತ್ರವಾಗಿದ್ದು, ದಕ್ಷಿಣ ಭಾರತದ ಜನಪ್ರಿಯ ನಟ-ನಟಿಯರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರವು ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂನಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿದ್ದು, ಸದ್ಯದಲ್ಲೇ ಈ ಚಿತ್ರದ ಹೆಚ್ಚಿನ ವಿವರಗಳು ಹೊರಬೀಳಲಿವೆ.

Categories
ಸಿನಿ ಸುದ್ದಿ

ಟಿವಿ ಠೀವಿ ಪತ್ರಿಕೆ ಬಿಡುಗಡೆ: ಇದು ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ಸಹಯೋಗದ ಪತ್ರಿಕೆ

ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ವತಿಯಿಂದ ಪ್ರಕಟವಾಗುತ್ತಿರುವ “ಟಿವಿ ಠೀವಿ” ಮಾಸ ಪತ್ರಿಕೆಯ ವಿಶೇಷ ಸಂಚಿಕೆ ಬಿಡುಗಡೆ ಸಮಾರಂಭ ಇತ್ತೀಚೆಗೆ ನಡೆದಿದೆ.

ಸಹಕಾರ ಸಚಿವ ಕೆ.ಎನ್.ರಾಜಣ್ಣ, ಹಿರಿಯ ಸಾಹಿತಿ ಡಾ. ದೊಡ್ಡರಂಗೇಗೌಡ, ನಟಿ ಉಮಾಶ್ರೀ, ನಟ ಪ್ರಕಾಶ್ ರೈ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ.ಹರೀಶ್, ಮಿಲನ ಪ್ರಕಾಶ್ ಮುಂತಾದವರು ಈ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ “ಟಿವಿ ಠೀವಿ” ಮಾಸ ಪತ್ರಿಕೆ ವಿಶೇಷ ಸಂಚಿಕೆ ಬಿಡುಗಡೆ ಮಾಡಿದ್ದಾರೆ.

ಮುಂದಿನ ವರ್ಷ ನಮ್ಮ ಸಂಸ್ಥೆ 25 ನೇ ವರ್ಷಕ್ಕೆ ಅಡಿಯಿಡುತ್ತಿದೆ ಎಂದು ಮಾತು ಆರಂಭಿಸಿದ, KTVA ಪ್ರಧಾನ ಕಾರ್ಯದರ್ಶಿ ಸೃಜನ್ ಲೋಕೇಶ್, ಈಗಿರುವ ನಮ್ಮ ಸಂಸ್ಥೆಯ ಸದಸ್ಯರು ಎಲ್ಲಾ ಕಾರ್ಯಕ್ರಮಗಳಲ್ಲೂ ಭಾಗಿಯಾಗಬೇಕು ಹಾಗೂ ಇನ್ನೂ ಸದಸ್ಯರಾಗದವರೂ ಬೇಗ ಸದಸ್ಯತ್ವ ಪಡೆದುಕೊಳ್ಳುವಂತೆ ಹೇಳಿದರು ‌.

ಕಿರುತೆರೆ ಕ್ಷೇತ್ರದಲ್ಲಿ ಸುಮಾರು ಹತ್ತು ಸಾವಿರಕ್ಕೂ ಅಧಿಕ ಜನ ಕೆಲಸ ಮಾಡುತ್ತಾರೆ. ಸುಮಾರು ಇಪ್ತತ್ತು ಸಾವಿರಕ್ಕೂ ಹೆಚ್ಚು ಜನ ಈ ಉದ್ಯಮವನ್ನೇ ನಂಬಿಕೊಂಡಿದ್ದಾರೆ. ಆದರೆ ಇವರಿಗೆ ಆರೋಗ್ಯ ವಿಮೆ(ಯಶಸ್ವಿನಿ) ಸೇರಿದಂತೆ ಯವುದೇ ಸರ್ಕಾರದ ಯೋಜನೆಗಳು ಸಿಗುತ್ತಿಲ್ಲ. ದಯವಿಟ್ಟು ಸಚಿವರು ಈ ಕುರಿತು ಸಹಕಾರ ನೀಡಬೇಕೆಂದು KTVA ಅಧ್ಯಕ್ಷ ರವಿ.ಆರ್.ಗರಣಿ ವಿನಂತಿಸಿದರು.

ಕೆಲವು ವರ್ಷಗಳು ಪ್ರಸಾರವಾಗಿ ಸ್ಥಗಿತಗೊಂಡಿದ್ದ “ಟಿವಿ ಠೀವಿ” ಮಾಸಪತ್ರಿಕೆಯನ್ನು ಪುನರಾರಂಭ ಮಾಡುತ್ತಿದ್ದೇವೆ. ವಿಶೇಷ ಸಂಚಿಕೆ ಇಂದು ಬಿಡುಗಡೆಯಾಗಿದೆ‌. ಈ ಮಾಸ ಪತ್ರಿಕೆ ಎಲ್ಲೂ ಮಾರಾಟಕ್ಕಿರುವುದಿಲ್ಲ. ನಮ್ಮ ಸದಸ್ಯರಿಗೆ ಹಾಗೂ ಆಸಕ್ತರಿಗೆ ನಾವೇ ತಲುಪಿಸುವ ವ್ಯವಸ್ಥೆ ಮಾಡುತ್ತೇವೆ ಎಂದರು.

“ಟಿವಿ ಠೀವಿ”‌ಮಾಸಪತ್ರಿಕೆಯಲ್ಲಿ ಬಂದಿರುವ ಲೇಖನಗಳು ಚೆನ್ನಾಗಿದೆ. ಅಧ್ಯಕ್ಷ ರವಿ ಆರ್ ಗರಣಿ, ಅವರು ಹೇಳಿರುವ ವಿಷಯಗಳನ್ನು ಆದಷ್ಟು ಬೇಗ ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತೇನೆ. ಮುಖ್ಯಮಂತ್ರಿಗಳನ್ನು ನಿಮ್ಮ ಸಂಘದ ಪದಾಧಿಕಾರಿಗಳು ಭೇಟಿ ಮಾಡಲು ವ್ಯವಸ್ಥೆ ಮಾಡುತ್ತೇನೆ. ನಾನು ನಿಮ್ಮ ಜೊತೆ ಇರುತ್ತೇನೆ ಎಂದು ಸಹಕಾರ ಸಚಿವ ಕೆ.ಎನ್ ರಾಜಣ್ಣ ತಿಳಿಸಿದರು.

Categories
ಸಿನಿ ಸುದ್ದಿ

ಹಾಸ್ಟೆಲ್ ಹುಡುಗರಿಗೆ ರಮ್ಯಾ ಪಾಠ! ಟ್ರೇಲರ್ ರಿಲೀಸ್ ಮಾಡಿದ ಸ್ಟಾರ್ಸ್

ಸೆಟ್ಟೇರಿದ ದಿನದಿಂದಲೂ ಭಾರೀ ಕುತೂಹಲ ಹೆಚ್ಚಿಸಿರುವ ಹಾಸ್ಟೆಲ್ ಹುಡುಗರು ಸಿನಿಮಾದ ಮೊದಲ ನೋಟ ಬಿಡುಗಡೆಯಾಗಿದೆ. ಬೆಂಗಳೂರಿನ ನಂದಿ ಲಿಂಕ್ಸ್ ಗ್ರೌಂಡ್ ನಲ್ಲಿ ಅದ್ಧೂರಿಯಾಗಿ ಟ್ರೇಲರ್ ಲಾಂಚ್ ಮಾಡಲಾಯಿತು. ಅಶ್ವಿನಿ ಪುನೀತ್ ರಾಜ್‌ಕುಮಾರ್, ರಿಷಬ್ ಶೆಟ್ಟಿ, ರಕ್ಷಿತ್‌ ಶೆಟ್ಟಿ, ಧ್ರುವ ಸರ್ಜಾ ಸೇರಿದಂತೆ ಸ್ಯಾಂಡಲ್‌ವುಡ್ ತಾರೆಯರು ಕಾರ್ಯಕ್ರಮಕ್ಕೆ ಆಗಮಿಸಿ ತಂಡಕ್ಕೆ ಶುಭ ಹಾರೈಸಿದ್ದರು.

ರಿಷಬ್ ಶೆಟ್ಟಿ ಮಾತನಾಡಿ, ನನ್ನ ಶಿಷ್ಯದಿಂದರೇ ಮಾಡಿರುವ ಸಿನಿಮಾ. ಅರವಿಂದ್, ಪ್ರಜ್ವಲ್ ಇವರೆಲ್ಲರನ್ನೂ ಲೂಸಿಯಾ ಸಮಯದಿಂದಲೂ ನೋಡಿಕೊಂಡು ಬರುತ್ತಿದ್ದೇನೆ. ತುಂಬಾ ಅದ್ಭುತ ಟೆಕ್ನಿಷಿಯನ್ಸ್. ಒಂದು ಸಿನಿಮಾದ ಕಥೆ ಇದೆ ಗೆಸ್ಟ್ ಅಪಿಯರೆನ್ಸ್ ಮಾಡ್ತೀರಾ ಅಂತಾ ಕೇಳಿದರು. ಕಥೆ ಏನೂ ಕೇಳಿಲ್ಲ. ಒಂದು ರಾತ್ರಿಯಷ್ಟೇ ಪಾತ್ರವನ್ನು ಚಿತ್ರೀಕರಿಸಲಾಯಿತು. ಪವನ್ ಇದ್ದರು. ಶೈನ್ ಇದ್ದರು, ಬಹಳ ಅದ್ಭುತವಾಗಿ ಶೂಟಿಂಗ್ ಅನುಭವ. ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಒಂದು ಅದ್ಭುತ ತಂಡ. ಬೆಳೆಯುತ್ತಾ ಬೆಳೆಯುತ್ತಾ ಸಿನಿಮಾ ದೊಡ್ಡ ಸ್ಕೆಲ್ ಆಯ್ತು. 500 ಜನ ಕಲಾವಿದರನ್ನು ಕಂಪ್ಲೀಟ್ ನೈಟ್ ಸೀಕ್ವೆಲ್ ನಲ್ಲಿ ಶೂಟ್ ಮಾಡುವುದು ತುಂಬಾ ಚಾಲೆಂಜಿಂಗ್ . ಇದೇ 21ಕ್ಕೆ ಸಿನಿಮಾ ಬರ್ತಿದೆ, ಥಿಯೇಟರ್ ಗೆ ಬಂದು ಸಿನಿಮಾ ನೋಡಿ. ನೀವು ಖಂಡಿತ ಎಂಜಾಯ್ ಮಾಡ್ತೀರ. ಅದ್ಭುತ ಸಿನಿಮಾ ಮಾಡಿದ್ದಾರೆ ಎಂದರು.

ಧ್ರುವ ಸರ್ಜಾ ಮಾತನಾಡಿ, ಒಬ್ಬ ಪ್ರೇಕ್ಷಕನಾಗಿ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾ ನೋಡಿದ್ದೇನೆ. ಈ ಸಿನಿಮಾ ನೋಡಿದಾಗ ನಾನು ನನ್ನ ಅಣ್ಣನನ್ನು ಮಿಸ್ ಮಾಡಿಕೊಂಡೆ. ಏಳೆಂಟು ವರ್ಷ ನಾವು ಹಾಸ್ಟೆಲ್ ನಲ್ಲಿ ಇದ್ದೆವು. ಅದನ್ನು ನೋಡಿದ ತಕ್ಷಣ ನಾವು ಹೀಗೆ ಇದ್ವಲ್ಲಾ ಅನಿಸಿತು. ನಿತಿನ್ ಅವರು ತುಂಬಾ ಚೆನ್ನಾಗಿ ಸಿನಿಮಾ ಶೂಟ್ ಮಾಡಿದ್ದಾರೆ. ನಾನು ನೋಡಿದಾಗ ರೀ ರೆಕಾರ್ಡಿಂಗ್ ಆಗಿರಲಿಲ್ಲ. ರೀ ರೆಕಾರ್ಡಿಂಗ್ ಆದ್ಮೇಲೆ ನೋಡಬೇಕೆಂಬ ಕುತೂಹಲವಿದೆ. ನಾನು ಪ್ರೀಮಿಯರ್ ಶೋ ನೋಡಲ್ಲ. ನಾನು ಫಸ್ಟ್ ಡೇ ಫಸ್ಟ್ ಶೋ ಸಿನಿಮಾವನ್ನು ಥಿಯೇಟರ್ ನಲ್ಲಿ ನೋಡುತ್ತೇನೆ. ಕಿರಿಕ್ ಪಾರ್ಟಿಯಂತೆ ಈ ಸಿನಿಮಾ ಕೂಡ ಸೂಪರ್ ಹಿಟ್ ಆಗಲಿ ಎಂದು ಶುಭ ಹಾರೈಸಿದರು.

ರಕ್ಷಿತ್ ಶೆಟ್ಟಿ ಮಾತನಾಡಿ, ನಾನು ಈ ಪ್ರೋಗ್ರಾಂಗೆ ಗೆಸ್ಟ್ ಆಗಿ ಬಂದಿಲ್ಲ. ಯಾಕಂದ್ರೆ ನಾನು ಈ ಸಿನಿಮಾವನ್ನು ಪ್ರೆಸೆಂಟ್ ಮಾಡುತ್ತಿದ್ದೇನೆ. ಅಪ್ಪು ಸರ್ ಏನೇ ಶುರು ಮಾಡಿದರು. ಅದ್ಭುತ ರಿಸ್ಟಲ್ ಕೊಡುತ್ತದೆ ಎಂಬ ನಂಬಿಕೆ. ನಮ್ಮ ಪರವಃ ಸ್ಟುಡಿಯೋಸ್ ನಮ್ಮ ಆಫೀಸ್ ನ್ನು ಅವರೇ ಉದ್ಘಾಟಿಸಿದ್ದರು. ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾದ ಫಸ್ಟ್ ಪೋಸ್ಟರ್ ಅವರೇ ಲಾಂಚ್ ಮಾಡಿದ್ದರು. ಈ ಸಿನಿಮಾವನ್ನು ನಾನು ಪ್ರೆಸೆಂಟ್ ಮಾಡಲು ತುಂಬಾ ಕಾರಣವಿದೆ. ನಾನು ಈ ಚಿತ್ರವನ್ನು ಎರಡು ಬಾರಿ ನೋಡಿದ್ದೇನೆ. 2 ಸಲ ನೋಡುವಾಗಲೂ ಅಷ್ಟೇ ಎಂಜಾಯ್ ಮಾಡಿದ್ದೇನೆ. ಸಿನಿಮಾವನ್ನು ಹಾಲಿವುಡ್ ರೇಂಜ್ ಗೆ ಶೂಟ್ ಮಾಡಲಾಗಿದೆ ಎಂದರು.

ನಿರ್ದೇಶಕ ನಿತಿನ್ ಕೃಷ್ಣಮೂರ್ತಿ ಮಾತನಾಡಿ, ಅಪ್ಪು ಸರ್ ಪೋಸ್ಟರ್ ಲಾಂಚ್ ಮಾಡಿಕೊಟ್ಟಿದ್ದರು. ಅಲ್ಲಿಂದಲೇ ಜರ್ನಿ ಶುರುವಾಗಿದ್ದು, ಈ ವೇದಿಕೆ ಹತ್ತಿದ್ದೇನೆ. ಆದ್ರೆ ಕೆಲಸ ಮಾಡಲು. ನಾನು ಟಿವಿ ಮಾಧ್ಯಮದಲ್ಲಿ ಕೆಲಸ ಮಾಡಿದವನು. ಈ ಚಿತ್ರ ಮಾಡಲು ಎರಡು ವರ್ಷ ಬೇಕಾಯ್ತು. ಮಳೆ, ಲಾಕ್ ಡೌನ್ ನಿಂದ ಸ್ವಲ್ಪ ಲೇಟ್ ಆಯ್ತು. ಇಷ್ಟು ದಿನ ಪ್ರೋಮೋ ಬಿಟ್ಟಿದ್ದೇವೆ. ಈಗ ಟ್ರೇಲರ್ ಬಂದಿದೆ. ಈ ಮೂವೀಗೆ 1000 ಜನ ರಂಗಭೂಮಿ ಕಲಾವಿದರನ್ನು ಬಿಟ್ಟು ಸ್ಯಾಂಡಲ್ ವುಡ್ ಇಂಡಸ್ಟ್ರೀ ಸಾಥ್ ಕೊಟ್ಟಿದೆ ಎಂದು ಸಂತಸ ಹಂಚಿಕೊಂಡರು.

ನಿರ್ಮಾಪಕ ವರುಣ್ ಗೌಡ ಮಾತನಾಡಿ, ಜುಲೈ 21ಕ್ಕೆ ಸಿನಿಮಾ ರಿಲೀಸ್ ಆಗುತ್ತಿದೆ. ದಯವಿಟ್ಟು ಎಲ್ಲರೂ ಸಪೋರ್ಟ್ ಮಾಡಿ. ಇಷ್ಟು ದಿನ ಬೆಂಬಲ ಕೊಟ್ಟ ರೀತಿ ಮುಂದೆಯೂ ನಿಮ್ಮ ಬೆಂಬಲವಿರಲಿ ಎಂದರು.

ಕಿರಿಕ್‌ ಮಾಡುವ ವಾರ್ಡನ್‌ ಕಾಟದಿಂದ ತಪ್ಪಿಸಿಕೊಳ್ಳಲು ಹಾಸ್ಟೆಲ್‌ ಹುಡುಗರು ಏನೆಲ್ಲಾ ಮಾಡುತ್ತಾರೆ. ಅದರಿಂದ ಮುಂದೆ ಏನು ಸಮಸ್ಯೆ ಅನುಭವಿಸುತ್ತಾರೆ ಎಂಬುದನ್ನು ಚಿತ್ರದಲ್ಲಿ ತೋರಿಸಲಾಗಿದೆ. ಮೋಹಕತಾರೆ ರಮ್ಯಾ ಲೆಕ್ಚರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಿಷಬ್ ಶೆಟ್ಟಿ, ಪವನ್ ಕುಮಾರ್, ಶೈನ್ ಶೆಟ್ಟಿ ಹಾಗೂ ದಿಗಂತ್ ಕೂಡ ಸ್ಪೆಷಲ್ ರೋಲ್ ನಲ್ಲಿ ನಟಿಸಿದ್ದಾರೆ. ಪುನೀತ್ ರಾಜ್ ಕುಮಾರ್, ರಕ್ಷಿತ್ ಶೆಟ್ಟಿ, ಸುದೀಪ್ ಸಾಥ್ ಕೊಟ್ಟಿರುವ ಈ ಸಿನಿಮಾಗೆ ನಿತಿನ್ ಕೃಷ್ಣಮೂರ್ತಿ ಆಕ್ಷನ್ ಕಟ್ ಹೇಳಿದ್ದಾರೆ. ಪ್ರಜ್ವಲ್ ಬಿಪಿ, ವರುಣ್ ಕುಮಾರ್ ಗೌಡ, ನಿತಿನ್ ಕೃಷ್ಣಮೂರ್ತಿ, ಅರವಿಂದ್ ಕಶ್ಯಪ್ ಹಾಗೂ ಇನ್ನಿತರರು ಜೊತೆಗೆ ಸೇರಿ ಹಾಸ್ಟೆಲ್‌ ಹುಡುಗರು ಬೇಕಾಗಿದ್ದಾರೆ ಸಿನಿಮಾವನ್ನು ನಿರ್ಮಿಸಿದ್ದಾರೆ. ಚಿತ್ರದ ಹಾಡುಗಳಿಗೆ ಅಜನೀಶ್‌ ಲೋಕನಾಥ್‌ ಸಂಗೀತ ನೀಡಿದ್ದಾರೆ. ರಕ್ಷಿತ್ ಶೆಟ್ಟಿ ತಮ್ಮದೇ ಪರವಃ ಪಿಕ್ಚರ್ಸ್ ಮೂಲಕ ಪ್ರಸ್ತುತಪಡಿಸುತ್ತಿದ್ದು, ಇದೇ 21 ಕ್ಕೆ ಸಿನಿಮಾ ರಾಜ್ಯಾದ್ಯಂತ ತೆರೆ ಕಾಣುತ್ತಿದೆ.

error: Content is protected !!