ಟಿವಿ ಠೀವಿ ಪತ್ರಿಕೆ ಬಿಡುಗಡೆ: ಇದು ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ಸಹಯೋಗದ ಪತ್ರಿಕೆ

ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ವತಿಯಿಂದ ಪ್ರಕಟವಾಗುತ್ತಿರುವ “ಟಿವಿ ಠೀವಿ” ಮಾಸ ಪತ್ರಿಕೆಯ ವಿಶೇಷ ಸಂಚಿಕೆ ಬಿಡುಗಡೆ ಸಮಾರಂಭ ಇತ್ತೀಚೆಗೆ ನಡೆದಿದೆ.

ಸಹಕಾರ ಸಚಿವ ಕೆ.ಎನ್.ರಾಜಣ್ಣ, ಹಿರಿಯ ಸಾಹಿತಿ ಡಾ. ದೊಡ್ಡರಂಗೇಗೌಡ, ನಟಿ ಉಮಾಶ್ರೀ, ನಟ ಪ್ರಕಾಶ್ ರೈ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ.ಹರೀಶ್, ಮಿಲನ ಪ್ರಕಾಶ್ ಮುಂತಾದವರು ಈ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ “ಟಿವಿ ಠೀವಿ” ಮಾಸ ಪತ್ರಿಕೆ ವಿಶೇಷ ಸಂಚಿಕೆ ಬಿಡುಗಡೆ ಮಾಡಿದ್ದಾರೆ.

ಮುಂದಿನ ವರ್ಷ ನಮ್ಮ ಸಂಸ್ಥೆ 25 ನೇ ವರ್ಷಕ್ಕೆ ಅಡಿಯಿಡುತ್ತಿದೆ ಎಂದು ಮಾತು ಆರಂಭಿಸಿದ, KTVA ಪ್ರಧಾನ ಕಾರ್ಯದರ್ಶಿ ಸೃಜನ್ ಲೋಕೇಶ್, ಈಗಿರುವ ನಮ್ಮ ಸಂಸ್ಥೆಯ ಸದಸ್ಯರು ಎಲ್ಲಾ ಕಾರ್ಯಕ್ರಮಗಳಲ್ಲೂ ಭಾಗಿಯಾಗಬೇಕು ಹಾಗೂ ಇನ್ನೂ ಸದಸ್ಯರಾಗದವರೂ ಬೇಗ ಸದಸ್ಯತ್ವ ಪಡೆದುಕೊಳ್ಳುವಂತೆ ಹೇಳಿದರು ‌.

ಕಿರುತೆರೆ ಕ್ಷೇತ್ರದಲ್ಲಿ ಸುಮಾರು ಹತ್ತು ಸಾವಿರಕ್ಕೂ ಅಧಿಕ ಜನ ಕೆಲಸ ಮಾಡುತ್ತಾರೆ. ಸುಮಾರು ಇಪ್ತತ್ತು ಸಾವಿರಕ್ಕೂ ಹೆಚ್ಚು ಜನ ಈ ಉದ್ಯಮವನ್ನೇ ನಂಬಿಕೊಂಡಿದ್ದಾರೆ. ಆದರೆ ಇವರಿಗೆ ಆರೋಗ್ಯ ವಿಮೆ(ಯಶಸ್ವಿನಿ) ಸೇರಿದಂತೆ ಯವುದೇ ಸರ್ಕಾರದ ಯೋಜನೆಗಳು ಸಿಗುತ್ತಿಲ್ಲ. ದಯವಿಟ್ಟು ಸಚಿವರು ಈ ಕುರಿತು ಸಹಕಾರ ನೀಡಬೇಕೆಂದು KTVA ಅಧ್ಯಕ್ಷ ರವಿ.ಆರ್.ಗರಣಿ ವಿನಂತಿಸಿದರು.

ಕೆಲವು ವರ್ಷಗಳು ಪ್ರಸಾರವಾಗಿ ಸ್ಥಗಿತಗೊಂಡಿದ್ದ “ಟಿವಿ ಠೀವಿ” ಮಾಸಪತ್ರಿಕೆಯನ್ನು ಪುನರಾರಂಭ ಮಾಡುತ್ತಿದ್ದೇವೆ. ವಿಶೇಷ ಸಂಚಿಕೆ ಇಂದು ಬಿಡುಗಡೆಯಾಗಿದೆ‌. ಈ ಮಾಸ ಪತ್ರಿಕೆ ಎಲ್ಲೂ ಮಾರಾಟಕ್ಕಿರುವುದಿಲ್ಲ. ನಮ್ಮ ಸದಸ್ಯರಿಗೆ ಹಾಗೂ ಆಸಕ್ತರಿಗೆ ನಾವೇ ತಲುಪಿಸುವ ವ್ಯವಸ್ಥೆ ಮಾಡುತ್ತೇವೆ ಎಂದರು.

“ಟಿವಿ ಠೀವಿ”‌ಮಾಸಪತ್ರಿಕೆಯಲ್ಲಿ ಬಂದಿರುವ ಲೇಖನಗಳು ಚೆನ್ನಾಗಿದೆ. ಅಧ್ಯಕ್ಷ ರವಿ ಆರ್ ಗರಣಿ, ಅವರು ಹೇಳಿರುವ ವಿಷಯಗಳನ್ನು ಆದಷ್ಟು ಬೇಗ ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತೇನೆ. ಮುಖ್ಯಮಂತ್ರಿಗಳನ್ನು ನಿಮ್ಮ ಸಂಘದ ಪದಾಧಿಕಾರಿಗಳು ಭೇಟಿ ಮಾಡಲು ವ್ಯವಸ್ಥೆ ಮಾಡುತ್ತೇನೆ. ನಾನು ನಿಮ್ಮ ಜೊತೆ ಇರುತ್ತೇನೆ ಎಂದು ಸಹಕಾರ ಸಚಿವ ಕೆ.ಎನ್ ರಾಜಣ್ಣ ತಿಳಿಸಿದರು.

Related Posts

error: Content is protected !!