ಇವರಿಬ್ಬರ ಪ್ರೀತಿ ಹೇಳಿಕೊಳ್ಳುವಂತಹ ಅಪರೂಪವೇನಲ್ಲ!

ಚಿತ್ರ ವಿಮರ್ಶೆ

ವಿಜಯ್ ಭರಮಸಾಗರ

ರೇಟಿಂಗ್ : 3/5

ಚಿತ್ರ : ಅಪರೂಪ
ನಿರ್ದೇಶಕ : ಮಹೇಶ್ ಬಾಬು
ನಿರ್ಮಾಪಕ :ಕೆ.ಆರ್.ಮಹೇಶ್
ತಾರಾಗಣ : ಸುಘೋಷ್, ಹೃತಿಕಾ, ಅಶೋಕ್, ಅರುಣಾ ಬಲರಾಜ್, ಅವಿನಾಶ್, ಕುರಿಪ್ರತಾಪ್ , ವಿಜಯ್ ಚೆಂಡೂರು, ಕಡ್ಡಿಪುಡಿ ಚಂದ್ರು, ಮೋಹನ್ ಜುನೇಜ ಇತರರು…

ಅವನದು ಬಚ್ಚಿಟ್ಕೊಳ್ಳೋ ಕ್ಯಾರೆಕ್ಟರ್ ಅಲ್ಲ ಅಣ್ಣ, ಬೆಚ್ಚಿ ಬೀಳೀಸೋ ಕ್ಯಾರೆಕ್ಟರ್…’

ಸಿನಿಮಾ ಶುರುವಿಗೆ ಈ ಡೈಲಾಗ್ ತೂರಿ ಬರುತ್ತೆ. ಅಲ್ಲಿಗೆ ಹೀರೋ ಎಂಟ್ರಿ, ರಗಡ್ ಫೈಟು ಗೀಟು ಇತ್ಯಾದಿ ಕಾಣಸಿಗುತ್ತೆ. ಎಲ್ಲಾ ಸಿನಿಮಾಗಳಲ್ಲೂ ಇರುವಂತೆ ಇಲ್ಲೂ ಹೀರೋಯಿಸಮ್ ಗೆ ಬೇಕಾದ ಬಿಲ್ಡಪ್ ಫೈಟು, ಓಪನಿಂಗ್ ಸಾಂಗು ಇದೆ. ಅಲ್ಲಿಗೆ ಇದೊಂದು ಕಮರ್ಷಿಯಲ್ ಸಿನಿಮಾ ಅಂತ ಪ್ರತ್ಯೇಕವಾಗಿ ಹೇಳಬೇಕಿಲ್ಲ. ಈ ಸಿನಿಮಾ ಮೂಲಕ ಸುಘೋಷ್ ಎಂಬ ಹೊಸ ಪ್ರತಿಭೆ ಸಿನಿಮಾರಂಗ ಸ್ಪರ್ಶಿಸಿದೆ. ನಿರ್ದೇಶಕ ಮಹೇಶ್ ಬಾಬು ಹೊಸತೇನೋ ಹೇಳಿದ್ದಾರೆ ಅಂತ ನಿರೀಕ್ಷೆ ಇಟ್ಟುಕೊಳ್ಳುವಂತಿಲ್ಲ. ಹೇಳಿಕೊಳ್ಳುವಂತಹ ಕಥೆಯಾಗಲಿ, ನಿರೂಪಣೆಯಾಗಲಿ ಕಾಣಸಿಗಲ್ಲ. ಹೊಸ ಹೀರೋ ಸಿನಿಮಾ ಅಂದರೆ, ಒಂದಷ್ಟು ಹೊಸತನವಾದರೂ ಬೇಕಿತ್ತು. ಅದು ಕಥೆಯಲ್ಲಾಗಲಿ, ಚಿತ್ರಕಥೆಯಲ್ಲಾಗಲಿ ಇಲ್ಲ. ಸಿಂಪಲ್ ಲವ್ ಸ್ಟೋರಿಯಾದರೂ ಅದನ್ನು ಇನ್ನಷ್ಟು ರಿಚ್ ಆಗಿ ಹೇಳಬಹುದಿತ್ತು. ಹಾಗಂತ ಸಿನಿಮಾ ರಿಚ್ಚಾಗಿ ಇಲ್ಲವಂತಲ್ಲ, ಅಲ್ಲಲ್ಲಿ ಅದ್ಧೂರಿತನ ಕಾಣುತ್ತೆ.

ಪ್ರೀತಿ ಪ್ರೇಮ ಕಥೆಗಳು ಸಾಕಷ್ಟು ಬಂದಿವೆ. ಅಂತಹ ಪ್ರೀತಿ ಕಥೆಗಳ ಸಾಲಿಗೆ ಇದೂ ಒಂದಷ್ಟೇ. ಇಲ್ಲಿರು ಪ್ರೀತಿ ಕಥೆಯಲ್ಲೇನೂ ವಿಶೇಷತೆ ಇಲ್ಲ. ಆದರೆ, ಹಾಡು, ಡ್ಯಾನ್ಸು, ಫೈಟು ಇಷ್ಟಪಡೋರಿಗೆ ಸಿನಿಮಾ ನಿರಾಸೆ ಮಾಡಲ್ಲ.
ಮೊದಲರ್ಧ ಹಾಡು, ಡ್ಯಾನ್ಸು ಫೈಟಿನೊಂದಿಗೆ ಮುಗಿದರೆ, ದ್ವಿತಿಯಾರ್ಧ ಕೊಂಚ ಭಾವುಕತೆ, ತಲ್ಲಣ,ನೋವು, ನಗು ಖುಷಿಯೊಂದಿಗೆ ಮುಗಿಯುತ್ತೆ.

ಕಥೆ ಏನು?

ಇಲ್ಲೂ ಮುದ್ದಾದ ಜೋಡಿ ಇದೆ. ಅವರ ಪ್ರೀತಿ, ಮುನಿಸು, ಕಿತ್ತಾಟ, ಸುತ್ತಾಟ, ಸಂಭ್ರಮ, ಸಂಕಷ್ಟ, ಒಂದಷ್ಟು ಹಾಸ್ಯ, ಅಪ್ಪ ಅಮ್ಮನ ಪ್ರೀತಿ, ಬಾತ್ಸಲ್ಯ, ಗೆಳೆತನ, ಹಗೆತನ ಇತ್ಯಾದಿ ಇದೆ.

ಇಲ್ಲಿ ಹೀರೋ ವಿಜಯ್ (ಸುಘೋಷ್) ಮಧ್ಯಮ ವರ್ಗದ ಹುಡುಗ. ಅಪ್ಪ, ಅಮ್ಮ ತಂಗಿ ಅವನ ಪ್ರಪಂಚ. ಕುಡಿತ ಅವನ ಅರೆಕಾಲಿಕ ಚಟ. ಅದಕ್ಕೆ‌ ಕಾರಣ ಕೈ ಕೊಟ್ಟ ಪ್ರೀತಿ. ಪ್ರೀತಿಸಿದ ಹುಡುಗಿ ದೂರವಾಗೋಕೆ ಕಾರಣ, ತುಂಬಾ ಸಿಂಪಲ್. ಅದು ಏನು ಎಂಬ ಕುತೂಹಲ ಇದ್ದರೆ ‘ಅಪರೂಪ’ದ ನೋಡಿ!

ನಾಯಕಿ ಶ್ರೀಮಂತನ ಮಗಳು. ಅಪ್ಪನಿಗೆ ಮಗಳೆಂದರೆ ಪ್ರಾಣ, ಆ ಮಗಳಿಗೆ ‘ಈಡಿಯಟ್’ನಂತಹ ಹುಡುಗನ ಮೇಲೆ ಪ್ರೀತಿ. ಅವರಿಬ್ಬರ ಪ್ರೀತಿ ಅಪ್ಪನಿಗೆ ಇಷ್ಟ ಇಲ್ಲ. ಅತ್ತ, ಹುಡುಗನ ಅಪ್ಪ ಅಮ್ಮನಿಗೆ ಮಗ ಪ್ರೀತಿಸಿದ ಹುಡುಗಿ ಅಚ್ಚುಮೆಚ್ಚು. ಹೀಗಿರುವಾಗ, ಪ್ರೀತಿ ಕಾರಣವೊಂದಕ್ಕೆ ಬ್ರೇಕಪ್ ಆಗುತ್ತೆ. ಮೇಲೆ ಅವರಿಬ್ಬರು ಒಂದಾಗ್ತಾರ? ಅದೇ ಸಸ್ಪೆನ್ಸ್.

ಕೆಲವು ಕಡೆ ಸಣ್ಣ ಸಣ್ಣ ಟ್ವಿಸ್ಟುಗಳಿವೆ. ನೋಡುಗರಿಗೆ ಅಲ್ಲಲ್ಲಿ ಟೆಸ್ಟೂ ಇದೆ. ಅಪರೂಪ ಎಂಬ ಶೀರ್ಷಿಕೆಗೆ ತಕ್ಕಂತೆ ಅಪರೂಪ ಎನಿಸುವ ಯಾವ ಅಂಶಗಳು ಇಲ್ಲ ಎಂಬುದು ಬೇಸರವಷ್ಟೆ. ಅದು ಬಿಟ್ಟರೆ, ಸುಮನೆ ಎರಡು ತಾಸು ಕುಳಿತು, ಅವರ ಪ್ರೀತಿ, ಜಗಳ, ಹಾಡು, ಕುಣಿತ ಇತ್ಯಾದಿ ನೋಡಬೇಕಷ್ಟೆ.

ಯಾರು ಹೇಗೆ?


ನಿರ್ದೇಶಕ ಮಹೇಶ್ ಬಾಬು ಅವರ ಈ ಸಿನಿಮಾ ಕಥೆಯಲ್ಲಿ ಇನ್ನಷ್ಟು ಧಮ್ ಇರಬೇಕಿತ್ತು. ಅಲ್ಲಲ್ಲಿ ಸಣ್ಣಪುಟ್ಟ ಎಡವಟ್ಟುಗಳನ್ನು ಸರಿಪಡಿಸಬೇಕಿತ್ತು.
ಇನ್ನು ಹೀರೋ ಸುಘೋಷ್ ಅವರ ಮೊದಲ ಪ್ರಯತ್ನ ಇದು. ಮೊದಲ ಬಾಲ್ ನಲ್ಲೇ ಒಳ್ಳೆಯ ಸ್ಕೊರ್ ಮಾಡಿದ್ದಾರೆ. ಡ್ಯಾನ್ಸ್, ಫೈಟ್ ಚೆನ್ನಾಗಿ ಮಾಡಿದ್ದಾರೆ. ಲವಲವಿಕೆ ಎದ್ದು ಕಾಣುತ್ತೆ.
ನಾಯಕಿ ಹೃತಿಕಾ ಸಿಕ್ಕ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ.

ವಿಜಯ್ ಚೆಂಡೂರ್ ಸ್ಕ್ರೀನ್ ಮೇಲೆ ಕಾಣುವಾಗೆಲ್ಲ ನಗೆಬುಗ್ಗೆ ಸಿಗುತ್ತೆ. ಉಳಿದಂತೆ ಅಶೋಕ್, ಅವಿನಾಶ್, ಅರುಣಾ ಬಾಲರಾಜ್, ಕಡ್ಡಿಪುಡಿ ಚಂದ್ರು ಪಾತ್ರಕ್ಕೆ ಮೋಸ ಮಾಡಿಲ್ಲ.
ಪ್ರಜ್ವಲ್ ಪೈ ಸಂಗೀತದ ಎರಡು ಹಾಡುಗಳು ಕೇಳುವಂತಿವೆ. ಹಿನ್ನೆಲೆ ಸಂಗೀತಕ್ಕೆ ಕೊಂಚ ಗಮನಕೊಡಬೇಕಿತ್ತು. ಸೂರ್ಯಕಾಂತ್ ಕ್ಯಾಮರಾ ಕೈಚಳಕ ಪರವಾಗಿಲ್ಲ.

Related Posts

error: Content is protected !!