ಇ.ಕೆ.ಎಂಟರ್ ಟೈನರ್ಸ್ ಲಾಂಛನದಲ್ಲಿ ಇ.ಕೃಷ್ಣಪ್ಪ ಅವರು ನಿರ್ಮಿಸಿ, ಯೋಗರಾಜ್ ಭಟ್ ನಿರ್ದೇಶಿಸಿದ್ದ ಯಶಸ್ವಿ “ಮುಂಗಾರು ಮಳೆ” ಚಿತ್ರದ ನಂತರ ಇದೇ ಕಾಂಬಿನೇಷನ್ ನಲ್ಲಿ ಮೂಡಿಬಂದಿರುವ “ಮನದ ಕಡಲು” ಚಿತ್ರ ಈ ವಾರ ರಾಜ್ಯಾದ್ಯಂತ (ಮಾರ್ಚ್ 28) ಬಿಡುಗಡೆಯಾಗುತ್ತಿದೆ.
ಜಿ.ಗಂಗಾಧರ್ ಅವರ ಸಹ ನಿರ್ಮಾಣ ಹಾಗೂ ಪ್ರತಾಪ್ ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸಿರುವ ಈ ಚಿತ್ರ ಈಗಾಗಲೇ ಟೀಸರ್, ಟ್ರೇಲರ್ ಹಾಗೂ ಹಾಡುಗಳ ಮೂಲಕ ಪ್ರೇಕ್ಷಕರ ಮನ ಗೆದ್ದಿದೆ. ನಾಯಕನಾಗಿ ಸುಮುಖ ಅಭಿನಯಿಸಿದ್ದಾರೆ. ನಾಯಕಿಯರಾಗಿ ರಾಶಿಕಾ ಶೆಟ್ಟಿ ಹಾಗೂ ಅಂಜಲಿ ಅನೀಶ್ ನಟಿಸಿದ್ದಾರೆ. ರಂಗಾಯಣ ರಘು, ದತ್ತಣ್ಣ, ಶಿವಧ್ವಜ್ ಮುಂತಾದವರು ತಾರಾಬಳಗದಲ್ಲಿದ್ದಾರೆ.
ವಿ.ಹರಿಕೃಷ್ಣ ಸಂಗೀತ ಸಂಯೋಜಿಸಿರುವ ಈ ಚಿತ್ರದ ಹಾಡುಗಳನ್ನು ಜಯಂತ ಕಾಯ್ಕಿಣಿ, ಯೋಗರಾಜ್ ಭಟ್ ಬರೆದಿದ್ದಾರೆ. ಸಂತೋಷ್ ರೈ ಪಾತಾಜೆ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ಶಿವಕುಮಾರ್ ಕಲಾ ನಿರ್ದೇಶನ, ವಿನೋದ್ ಹಾಗೂ ಕೌರವ ವೆಂಕಟೇಶ್ ಸಾಹಸ ನಿರ್ದೇಶನ ಮತ್ತು ಮುರಳಿ, ಕಂಬಿ ರಾಜು , ಗೀತಾ ಸಾಯಿ ಅವರ ನೃತ್ಯ ನಿರ್ದೇಶನವಿರುವ “ಮನದ ಕಡಲು” ಚಿತ್ರಕ್ಕೆ ಯೋಗರಾಜ್ ಭಟ್, ಗಡ್ಡ ವಿಜಿ ಹಾಗೂ ಅಮೋಲ್ ಪಾಟೀಲ್ ಚಿತ್ರಕಥೆ ಬರೆದಿದ್ದಾರೆ. .
ಪ್ರಕಾಶ್ ವೀರ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕರಾಗಿ ನಟಿಸುತ್ತಿರುವ ಬಹು ನಿರೀಕ್ಷಿತ “ದಿ ಡೆವಿಲ್” ಚಿತ್ರದ ಚಿತ್ರೀಕರಣ ರಾಜಸ್ಥಾನದಲ್ಲಿ ಬಿರುಸಿನಿಂದ ಸಾಗಿದೆ. ಮಾತಿನ ಭಾಗದ ಚಿತ್ರೀಕರಣ ನಡೆಯುತ್ತಿದ್ದು, ಚಾಲೆಂಜಿಂಗ್ ಸ್ಟಾರ್ ದರ್ಶನ್, ರಚನ ರೈ, ಮಹೇಶ್ ಮಂಜ್ರೇಕರ್, ಅಚ್ಯುತಕುಮಾರ್ ಮುಂತಾದ ಕಲಾವಿದರು ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ.
ಸುಧಾಕರ್.ಎಸ್.ರಾಜ್ ಅವರ ಛಾಯಾಗ್ರಹಣವಿರುವ “ದಿ ಡೆವಿಲ್” ಚಿತ್ರಕ್ಕೆ ಬಿ.ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ, ಮೋಹನ್ ಬಿ ಕೆರೆ ಕಲಾ ನಿರ್ದೇಶನ ಹಾಗೂ ರಾಮ್ ಲಕ್ಷ್ಮಣ್ ಅವರ ಸಾಹಸ ನಿರ್ದೇಶನವಿದೆ.
ದರ್ಶನ್ ಅವರಿಗೆ ನಾಯಕಿಯಾಗಿ ರಚನ ರೈ ಅಭಿನಯಿಸುತ್ತಿದ್ದಾರೆ. ತುಳಸಿ, ಅಚ್ಯುತಕುಮಾರ್, ಮಹೇಶ್ ಮಂಜ್ರೇಕರ್, ಶ್ರೀನಿವಾಸಪ್ರಭು , ಶೋಭ್ ರಾಜ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
ಇಷ್ಟಕಾಮ್ಯ ಕೇಶವ ಪ್ರೊಡಕ್ಷನ್ಸ್ ಮತ್ತು ಸಿನಿಮ್ಯಾಟಿಕ್ಸ್ ಬ್ಯಾನರಿನ ಅಡಿಯಲ್ಲಿ ಆದರ್ಶ್ ಅಯ್ಯಂಗಾರ್ ಅವರು ನಿರ್ಮಿಸಿ ಅವರೆ ಹಾಡಿರುವ ’ಪದವೇ’ ಎಂಬ ಹಾಡು ’ಆದರ್ಶ್ ಅಯ್ಯಂಗಾರ್’ ಯೂಟ್ಯೂಬ್ ಚಾನಲಿನಲ್ಲಿ ಬಿಡುಗಡೆಯಾಗಿದೆ. ಇದು ಆದರ್ಶ್ ಅಯ್ಯಂಗಾರ್ ಅವರು ತಮ್ಮ ಬ್ಯಾನರ್ ಮೂಲಕ ಹೊರ ತರುತ್ತಿರುವ ಏಳನೇ ವಿಡಿಯೋ ಹಾಡಾಗಿದ್ದು ಅವರ ನಿರ್ಮಾಣದ “ತಿಮ್ಮನ ಮೊಟ್ಟೆಗಳು” ಚಿತ್ರ ಕೂಡ ಬಿಡುಗಡೆಗೆ ಸಿದ್ಧವಾಗಿದೆ.
ಸುಂದರ ತಾಣಗಳಲ್ಲಿ ಚಿತ್ರೀಕರಿಸಿರುವ ಹಾಡಿಗೆ ಹೇಮಂತ್ ಜೋಯಿಸ್ ಸಂಗೀತ ನೀಡಿದ್ದು ರಕ್ಷಿತ್ ತೀರ್ಥಹಳ್ಳಿ ಸಾಹಿತ್ಯ ಬರೆದು ನಿರ್ದೇಶನ ಮಾಡಿದ್ದಾರೆ. ಕಿರಿಕ್ ಪಾರ್ಟಿ ಚಿತ್ರದಲ್ಲಿ ನಟಿಸಿದ್ದ ಶಂಕರಮೂರ್ತಿ ಈ ಹಾಡಿನಲ್ಲಿ ಒಂದೊಳ್ಳೆ ಪಾತ್ರ ನಿರ್ವಹಿಸಿದ್ದಾರೆ. ಅವರ ಜೊತೆಗೆ ಆದರ್ಶ್ ಅಯ್ಯಂಗಾರ್ ಹಾಗೂ ಹೊಸ ಪ್ರತಿಭೆ ಸಂದೀಪ್ ಕುಂದಾದ್ರಿ ಪ್ರಮುಖ ಪಾತ್ರದಲ್ಲಿದ್ದಾರೆ. ಉಳಿದಂತೆ ಸಮೀರ್ ನಗರದ್, ನೇಹಾ ಶಾಂತವೇರಿ, ಅರ್ಚನ ಎಸ್ ಎಚ್, ಅನಂತ್ ಭಟ್ ಹೊದಲ ಮುಂತಾದವರು ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಪ್ರಶಾಂತ್ ಸಾಗರ ಅವರ ಕ್ಯಾಮರ ಕೆಲಸ ಕಣ್ಣಿಗೆ ಮುದ ನೀಡುತ್ತದೆ. ಸುಧೀರ್ ಎಸ್ ಜೆ ಸಂಕಲನ ಅಚ್ಚುಕಟ್ಟಾಗಿದೆ.
ಬರಹಗಾರನೊಬ್ಬ ತನ್ನ ಕಥೆ ಹುಡುಕಾಟದಲ್ಲಿ ಎರಡು ಪಾತ್ರಗಳೊಡನೆ ಮಲೆನಾಡಿನ ಪುಟ್ಟ ಪರಿಸರದಲ್ಲಿ ಸಂಚರಿಸುವುದರ ಸುತ್ತಾ ಹಾಡು ಸಾಗುತ್ತದೆ. ಎರಡು ಭಿನ್ನ ಪ್ರೇಮಕಥೆಗಳನ್ನು ನಿನಿಮ್ಯಾಟಿಕ್ ಆಗಿ ತೋರಿಸಲಾಗಿದೆ. ಕಥೆ ಸಾಗುತ್ತಾ ಬರಹಗಾರ ಆ ಕಥೆಗಳಿಗೆ ಯಾವ ಅಂತ್ಯ ಕೊಡುತ್ತಾನೆ ಎಂಬುವುದರೊಂದಿಗೆ ಹಾಡು ಕೊನೆಗೊಳ್ಳುತ್ತದೆ.
ಇ.ಕೆ. ಎಂಟರ್ ಟೈನರ್ಸ್ ಲಾಂಛನದಲ್ಲಿ ಈ.ಕೃಷ್ಣಪ್ಪ ಅವರು ನಿರ್ಮಿಸಿ, ಯೋಗರಾಜ್ ಭಟ್ ನಿರ್ದೇಶಿಸಿದ್ದ ಯಶಸ್ವಿ “ಮುಂಗಾರು ಮಳೆ” ಚಿತ್ರದ ನಂತರ ಇದೇ ಕಾಂಬಿನೇಷನ್ ನಲ್ಲಿ ಮೂಡಿಬಂದಿರುವ ಚಿತ್ರ “ಮನದ ಕಡಲು”.
ಇತ್ತೀಚೆಗೆ ಬಹು ನಿರೀಕ್ಷಿತ ಈ ಚಿತ್ರದ ಟ್ರೇಲರ್ ಅನ್ನು ರಾಕಿಂಗ್ ಸ್ಟಾರ್ ಯಶ್ ಬಿಡುಗಡೆ ಮಾಡಿದರು. ಕಳೆದ ನಾಲ್ಕು ವರ್ಷಗಳಿಂದ ಯಶ್ ಅವರು ಯಾವುದೇ ಸಿನಿಮಾ ಸಮಾರಂಭಗಳಲ್ಲಿ ಪಾಲ್ಗೊಂಡಿರಲಿಲ್ಲ. ಬಹಳ ದಿನಗಳ ನಂತರ ಯಶ್ ಅವರು ಪಾಲ್ಗೊಂಡಿದ್ದ ಸಿನಿಮಾ ಸಮಾರಂಭವಿದು. ಲುಲು ಮಾಲ್ ನ ಹೊರಂಗಣದಲ್ಲಿ ನಡೆದ “ಮನದ ಕಡಲು” ಟ್ರೇಲರ್ ಸಮಾರಂಭಕ್ಕೆ ಯಶ್ ಅವರು ಬರುವುದನ್ನು ತಿಳಿದ ಅಭಿಮಾನಿಗಳು ಮನೆಮಂದಿ ಸಹಿತ ಮಧ್ಯಾಹ್ನದಿಂದಲೇ ಮಾಲ್ ಬಳಿ ಜಮಾಯಿಸಿದ್ದರು. ಕಣ್ಣು ಹಾಯಿಸಿದಷ್ಟು “ಜನರ ಕಡಲು” ಅಲ್ಲಿತ್ತು. ವರ್ಣರಂಜಿತ ಸಮಾರಂಭದಲ್ಲಿ ಟ್ರೇಲರ್ ಬಿಡುಗಡೆ ಮಾಡಿದ ಯಶ್, ನಂತರ ತಮ್ಮ ಮಾತುಗಳ ಮೂಲಕ ಚಿತ್ರತಂಡಕ್ಕೆ ಹಾರೈಸಿದರು
ನಾನು ಈ ಸಮಾರಂಭಕ್ಕೆ ಬರಲು ಮೊದಲ ಕಾರಣ ನಿರ್ಮಾಪಕ ಈ ಕೃಷ್ಣಪ್ಪ ಅವರು ಎಂದು ಮಾತನಾಡಿದ ಯಶ್, ಕೃಷ್ಣಪ್ಪ ಅವರು ನನಗೆ “ಮೊಗ್ಗಿನ ಮನಸ್ಸು” ಚಿತ್ರದಲ್ಲಿ ನಟಿಸಲು ಅವಕಾಶ ನೀಡದೆ ಇದ್ದಿದ್ದರೆ ನಾನು ಇಂದು ನಾಯಕನಾಗುತ್ತಿರಲ್ಲಿಲ್ಲ. ನನ್ನ ಮೊದಲ ಚಿತ್ರದ ನಿರ್ಮಾಪಕರು ಅವರು. ನಿರ್ದೇಶಕ ಯೋಗರಾಜ್ ಭಟ್, ಸಂಗೀತ ನಿರ್ದೇಶಕ ವಿ.ಹರಿಕೃಷ್ಣ, ಸಹ ನಿರ್ಮಾಪಕ ಗಂಗಾಧರ್ ಹೀಗೆ ಇಲ್ಲಿರುವ ಬಹುತೇಕರು ನನ್ನ ಬೆಳವಣಿಗೆಗೆ ಶ್ರಮ ಪಟ್ಟಿದ್ದಾರೆ. “ಮನದ ಕಡಲು” ಟ್ರೇಲರ್ ಚೆನ್ನಾಗಿದೆ. ಎಲ್ಲರೂ ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಿ. ಕನ್ನಡದಲ್ಲಿ ಹೊಸ ಪ್ರತಿಭೆಗಳು ಬರಬೇಕು. ನಾವು ಯಾರಿಗೂ ಕಡಿಮೆ ಇಲ್ಲದಂತೆ ಬೆಳೆಯಬೇಕು. ಒಳ್ಳೆಯ ಚಿತ್ರಗಳನ್ನು ಕನ್ನಡಿಗರು ಎಂದಿಗೂ ಕೈ ಬಿಡುವುದಿಲ್ಲ ಎಂದರು.
ಕಳೆದ ನಾಲ್ಕು ವರ್ಷಗಳಿಂದ ಯಾವುದೇ ಸಿನಿಮಾ ಸಮಾರಂಭಕ್ಕೆ ಹೋಗದ ಯಶ್ ಅವರು ನಮ್ಮ ಸಮಾರಂಭಕ್ಕೆ ಬಂದು ಚಿತ್ರದ ಟ್ರೇಲರ್ ಬಿಡುಗಡೆ ಮಾಡಿಕೊಟ್ಟಿದ್ದು ಬಹಳ ಖುಷಿಯಾಗಿದೆ. ಅವರಿಗೆ ಧನ್ಯವಾದ ಎಂದರು ನಿರ್ಮಾಪಕ ಈ ಕೃಷ್ಣಪ್ಪ.
ಯಶ್ ಅವರ ಸ್ವಾಗತಕ್ಕೆ ವಿಶೇಷ ವಿಡಿಯೋ ತುಣುಕು ಸಿದ್ದಪಡಿಸಿದ್ದ ನಿರ್ದೇಶಕ ಯೋಗರಾಜ್ ಭಟ್ ಅವರು ವೇದಿಕೆಯ ಮೇಲೂ ತಮ್ಮ ಪ್ರೀತಿ ತುಂಬಿದ ಮಾತುಗಳಿಂದ ಯಶ್ ಅವರನ್ನು ಆತ್ಮೀಯವಾಗಿ ಸ್ವಾಗತಿಸಿ, ಟ್ರೇಲರ್ ಬಿಡುಗಡೆ ಮಾಡಿಕೊಟ್ಟಿದ್ದಕ್ಕೆ ಧನ್ಯವಾದ ತಿಳಿಸಿದರು. “ಮನದ ಕಡಲು” ಈ ತಿಂಗಳ 28 ರಿಂದ “ಜನರ ಕಡಲಾ”ಗಲಿದೆ. ಎಲ್ಲರೂ ನಮ್ಮ ಚಿತ್ರ ನೋಡಿ. ಪ್ರೋತ್ಸಾಹ ನೀಡಿ ಅಂತಲೂ ಯೋಗರಾಜ್ ಭಟ್ ಹೇಳಿದರು.
ನಾಯಕ ಸುಮುಖ, ನಾಯಕಿಯರಾದ ರಾಶಿಕಾ ಶೆಟ್ಟಿ, ಅಂಜಲಿ ಅನೀಶ್, ಸಹ ನಿರ್ಮಾಪಕ ಜಿ.ಗಂಗಾಧರ್, ಕಾರ್ಯಕಾರಿ ನಿರ್ಮಾಪಕ ಪ್ರತಾಪ್, ಸಂಗೀತ ನಿರ್ದೇಶಕ ವಿ.ಹರಿಕೃಷ್ಣ, ನೃತ್ಯ ನಿರ್ದೇಶಕ ಮುರಳಿ ಮಾಸ್ಟರ್ ಹಾಗೂ ಛಾಯಾಗ್ರಾಹಕ ಸಂತೋಷ್ ರೈ ಪಾತಾಜೆ ಮುಂತಾದ ಚಿತ್ರತಂಡದ ಸದಸ್ಯರು “ಮನದ ಕಡಲಿ” ಬಗ್ಗೆ ಮಾತನಾಡಿ, ಯಶ್ ಅವರಿಗೆ ವಿಶೇಷ ಧನ್ಯವಾದ ಹೇಳಿದರು.
ಈ ಹಿಂದೆ ಕಲಿವೀರ, ಕನ್ನಡದೇಶದೊಳ್ ಚಿತ್ರ ಮಾಡಿದ್ದ ನಿರ್ದೇಶಕ ಅವಿರಾಮ್ ಕಂಠೀರವ ಮತೊಮ್ಮೆ ವಿಭಿನ್ನ ಕಥಾ ಹಂದರ ಹೊಂದಿರುವ “ಕರಳೆ” ಎಂಬ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಇದು ನೈಜ ಘಟನೆ ಆಧಾರಿತ ಚಿತ್ರ, ಈಗಾಗಲೇ ಎರಡು ಹಂತದ ಚಿತ್ರೀಕರಣ ಪೂರ್ಣಗೊಳಿಸಿರುವ ಚಿತ್ರತಂಡ ಮೂರನೇ ಹಂತದ ಚಿತ್ರೀಕರಣಕ್ಕೆ ಸಜ್ಜಾಗಿದೆ.
ಇದು ಮಹಿಳಾ ಪ್ರಧಾನ ಚಿತ್ರವಾಗಿದ್ದು ಇತ್ತೀಚೆಗೆ ಚಿತ್ರದ ಮೊದಲ ಪೋಸ್ಟರ್ ಬಿಡುಗಡೆ ಗೊಳಿಸಿದೆ. ಪೋಸ್ಟರ್ ಸದ್ಯ ಮೆಚ್ಚುಗೆ ಗಳಿಸಿದೆ, ಚಿತ್ರದಲ್ಲಿ ಸಮಾಜದ ವಾಸ್ತವ ಅಂಶಗಳನ್ನೇ ಇಲ್ಲಿ ಚಿತ್ರೀಕರಿಸಲಾಗುತ್ತಿದೆ. ಎಮೋಷನಲ್, ರಾ, ಮನಕಲಕುವ ದೃಶ್ಯಗಳು ಚಿತ್ರದಲ್ಲಿ ಇರಲಿವೆ ಎಂದು ನಿರ್ದೇಶಕರ ಮಾತು. ಈಗಾಗಲೇ ಚಿಂತಾಮಣಿ, ಮದ್ದೂರು, ಹುಲಿರಾಯನದುರ್ಗ ಸೇರಿ ಹಲವು ಕಡೆ ಶೂಟಿಂಗ್ ನಡೆಸಲಾಗಿದೆ ಎಂದು ಮಾಹಿತಿ ನೀಡಿದರು.
ಕನ್ನಡ, ಚೈನೀಸ್ ಭಾಷೆಯಲ್ಲಿ ಸಿನಿಮಾ ಭಾರತ ಹಾಗೂ ಚೀನಾ ದೇಶಕ್ಕೆ ಸಾಮ್ಯತೆ ಹೊಂದಿರುವ ಕಥೆ ಇದಾಗಿದ್ದು, ಹೀಗಾಗಿ ಈ ಚಿತ್ರವನ್ನು ಕನ್ನಡ ಹಾಗೂ ಚೈನೀಸ್ ಭಾಷೆಯಲ್ಲಿ ತೆರೆಗೆ ತರಲು ನಿರ್ದೇಶಕ ಅವಿರಾಮ್ ಕಂಠೀರವ ಸಿದ್ಧತೆ ನೆಡೆಸುತ್ತಿದ್ದಾರೆ, ಎರಡು ದೇಶಗಳಲ್ಲಿ ನೆಡೆಯುವ ಘಟನೆಗಳಿಗೆ ಸಾಮ್ಯತೆ ಇರುವ ಕಾರಣ ಕನ್ನಡ ಚೈನೀಸ್ ಭಾಷೆಯಲ್ಲಿ ಸಿನಿಮಾ ನಿರ್ಮಿಸುತ್ತಿದ್ದೇವೆ,
ಕನ್ನಡ ಜೊತೆಗೆ ನೆರೆ ರಾಷ್ಟ್ರ ಚೈನಾದ ಚೈನೀಸ್ ಭಾಷೆಯಲ್ಲಿ ತಯಾರಾಗುತ್ತಿರುವ ಮೊದಲ ಭಾರತದ ಸಿನಿಮಾ ಎಂಬ ಹೆಗ್ಗಳಿಕೆ “ಕರಳೆ” ಚಿತ್ರಕ್ಕಿದೆ. ಡಾರ್ಕ್ ಶೇಡ್ ನಲ್ಲಿ ಮೇಕಿಂಗ್ ಮಾಡಲಾಗುತ್ತಿದೆ. ಈಗಾಗಲೇ 52 ದಿನಗಳ ಚಿತ್ರೀಕರಣ ಪೂರ್ಣಗೊಳಿಸಲಾಗಿದೆ, ಇನ್ನು 20 ದಿನಗಳ ಶೂಟಿಂಗ್ ಬಾಕಿಯಿದೆ, ಚಿತ್ರೀಕರಣ ಪೂರ್ಣಗೊಳಿಸಿ ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಮುಂದಕ್ಕೆ ನೀಡುತ್ತೇವೆ ಎಂದು ನಿರ್ದೇಶಕ ಅವಿರಾಮ್ ಹೇಳುತ್ತಾರೆ.
ನಿರ್ದೇಶನದ ಅಖಾಡಕ್ಕೆ ಜೇಮ್ಸ್ ಕೋ-ಡೈರೆಕ್ಟರ್…ಮಹಾಂತೇಶ್ ಹಂದ್ರಾಳ್ ಜೊತೆ ನಿರಂಜನ್ ಸುಧೀಂದ್ರ ಹೊಸ ಸಿನಿಮಾ
ಸ್ಯಾಂಡಲ್‌ವುಡ್‌ನ ಭರವಸೆಯ ನಾಯಕ ನಟರಾಗುವ ನಿರೀಕ್ಷೆ ಹುಟ್ಟಿಸಿರುವ ಉಪ್ಪಿ ಅವರ ಸಹೋದರನ ಪುತ್ರ ನಿರಂಜನ್ ಸುಧೀಂದ್ರ ಹೊಸ ಸಿನಿಮಾ ಸ್ಪಾರ್ಕ್. ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ನಲ್ಲಿರುವ ಶ್ರೀ ಪ್ರಸನ್ನ ವೀರಾಂಜನೇಯ ಸ್ವಾಮಿ ದೇಗುಲದಲ್ಲಿಂದು ಚಿತ್ರದ ಮುಹೂರ್ತ ನೆರವೇರಿದೆ. ಸ್ಪಾರ್ಕ್ ಚಿತ್ರಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸಹೋದರ, ಎಂಎಲ್ ಸಿ ಆಗಿರುವ ಚನ್ನರಾಜ್ ಹಟ್ಟಿಹೊಳಿ ಕ್ಲ್ಯಾಪ್ ಮಾಡಿದರು. ಉದ್ಯಮಿ ಅಂಕಿತಾ ವಸಿಷ್ಠ ಕ್ಯಾಮೆರಾಗೆ ಚಾಲನೆ ಕೊಟ್ಟರು. ಡಾರ್ಲಿಂಗ್ ಕೃಷ್ಣ , ಮಿಲನಾ ನಾಗರಾಜ್ ಹಾಗೂ ನವೀನ್ ಶಂಕರ್ ವಿಶೇಷ ಅತಿಥಿಯಾಗಿ ಆಗಮಿಸಿ ಇಡೀ ಚಿತ್ರತಂಡಕ್ಕೆ ಶುಭಾಶಯ ತಿಳಿಸಿದರು.
ಬಳಿಕ ನಿರ್ದೇಶಕರಾದ ಮಹಾಂತೇಶ್ ಹಂದ್ರಾಳ್ ಮಾತನಾಡಿ, ಸ್ಪಾರ್ಕ್ ನನ್ನ ಮೊದಲ ಸಿನಿಮಾ. ಇದೇ ತಿಂಗಳಾಂತ್ಯಕ್ಕೆ ಶೂಟಿಂಗ್ ಹೋಗುತ್ತಿದ್ದೇವೆ. ಬಹುತೇಕ ಶೂಟಿಂಗ್ ಬೆಂಗಳೂರಿನಲ್ಲಿಯೇ ಇರುತ್ತದೆ ಎಂದರು.
ನಟ ನಿರಂಜನ್ ಸುಧೀಂದ್ರ ಮಾತನಾಡಿ, ಈ ಸಿನಿಮಾಗಾಗಿ ಮಹಾಂತೇಶ್ ಒಂದು ಅದ್ಭುತ ಕಥೆ ಬರೆದಿದ್ದಾರೆ. ಸ್ಪಾರ್ಕ್ ಅಂದರೆ ಪ್ರೆಸ್. ಅವರಿಗೆ ಇರುವ ಸ್ಪಾರ್ಕ್ ಇನ್ಯಾರಿಗೂ ಇರುವುದಿಲ್ಲ. ಯಾವುದೇ ವಿಷಯದ ಬಗ್ಗೆ ಮೊದಲು ಕಿಡಿ ಹತ್ತಿಸುವವರು ಅವರೇ. ನಮ್ಮ ಕಥೆಯಲ್ಲಿ ಚಿಕ್ಕ ಕಿಡಿ ಇದೆ. ಅದನ್ನು ಸ್ಪಾರ್ಕ್ ಚಿತ್ರದ ಮೂಲಕ ಅದ್ಭುತವಾಗಿ ಹೇಳಲು ಹೊರಟ್ಟಿದ್ದಾರೆ. ಸಿನಿಮಾದಲ್ಲಿ ನಾನು ಅಭಿರಾಮ್ ಎಂಬ ಜರ್ನಲಿಸ್ಟ್ ಪಾತ್ರ ಮಾಡುತ್ತಿದ್ದೇನೆ. ಈ ಚಿತ್ರಕ್ಕೆ ಇಬ್ಬರು ನಿರ್ಮಾಪಕರು ಸಾಥ್ ಕೊಟ್ಟಿದ್ದಾರೆ. ಸ್ಪಾರ್ಕ್ ಸಿನಿಮಾದ ಭಾಗವಾಗುತ್ತಿರುವುದು ಖುಷಿ ಕೊಟ್ಟಿದೆ ಎಂದರು.
ನಿರ್ಮಾಪಕಿ ಗರಿಮಾ ಮಾತನಾಡಿ, ನನ್ನ ಕನಸು ನನಸಾಗಿದೆ. ಬಹಳ ಖುಷಿಯಾಗುತ್ತಿದೆ. ನಾನು ಮ್ಯೂಸಿಕ್ ಆಲ್ಬಂ ಮಾಡಬೇಕು ಎಂದುಕೊಂಡಿದ್ದೇನೆ ಎಂದಾಗ ನನ್ನ ಕುಟುಂಬ ಸಿನಿಮಾ ಮಾಡೋಲ್ವಾ ಎಂದರು. ಇಂದು ನನ್ನ ಕುಟುಂಬದ ಬೆಂಬಲದಿಂದ ನಾನು ಇವತ್ತು ಮೊದಲ ಚಿತ್ರ ಮಾಡುತ್ತಿದ್ದೇನೆ. ಒಂದೊಳ್ಳೆ ತಂಡದ ಜೊತೆ ಕೆಲಸ ಮಾಡುತ್ತಿರುವುದು ಖುಷಿ ಕೊಟ್ಟಿದೆ ಎಂದು ಸಂತಸ ಹಂಚಿಕೊಂಡರು.
ಜೇಮ್ಸ್, ಭರಾಟೆ, ಕನಕ ಸೇರಿದಂತೆ 15ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಕೋ ಡೈರೆಕ್ಟರ್ ಆಗಿ ದುಡಿದಿರುವ ಡಿ.ಮಹಾಂತೇಶ್ ಹಂದ್ರಾಳ್ ಡೈರೆಕ್ಟರ್ ಕುರ್ಚಿ ಅಲಂಕರಿಸುತ್ತಿದ್ದಾರೆ. ಚೇತನ್ ಕುಮಾರ್, ಆರ್.ಚಂದ್ರು ಅವರ ಗರಡಿಯಲ್ಲಿ ನಿರ್ದೇಶನದ ಪಟುಗಳನ್ನು ಕಲಿತಿರುವ ಮಹಾಂತೇಶ್ ಈಗ ಪೂರ್ಣ ಪ್ರಮಾಣದ ನಿರ್ದೇಶಕರಾಗಿ ಮೊದಲ ಹೆಜ್ಜೆ ಇಡುತ್ತಿದ್ದಾರೆ. ಅವರ ಚೊಚ್ಚಲ ಪ್ರಯತ್ನದಲ್ಲಿ ನಾಯಕನಾಗಿ ನಿರಂಜನ್ ಸುಧೀಂದ್ರ ಅಭಿನಯಿಸುತ್ತಿದ್ದಾರೆ.
ಡಿ.ಮಹಾಂತೇಶ್ ಹಂದ್ರಾಳ್ ಆಕ್ಷನ್ ಥ್ರಿಲ್ಲರ್ ಕಥೆಯನ್ನು ಎಣೆದಿದ್ದಾರೆ. ನೈಜ ಘಟನೆಯಿಂದ ಸ್ಫೂರ್ತಿ ಪಡೆದಿರುವ ಈ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಹೊಸ ನಿರ್ಮಾಪಕರ ಆಗಮನವಾಗುತ್ತಿದೆ. ಮಹಾಂತೇಶ್ ವಿಷನ್ ಗೆ ಡಾ.ಗರಿಮಾ ಅವಿನಾಶ್ ವಸಿಷ್ಠ ಸಾಥ್ ಕೊಡುತ್ತಿದ್ದಾರೆ. ಸಾಫ್ಟ್‌ವೇರ್ ಉದ್ಯೋಗಿಯಾಗಿರುವ ಅವಿನಾಶ್, ಗರಿಮಾ ಅವಿನಾಶ್ ಪ್ರೊಡಕ್ಷನ್ ಎಂಬ ನಿರ್ಮಾಣ ಸಂಸ್ಥೆ ಪ್ರಾರಂಭಿಸಿದ್ದಾರೆ. ಈ ನಿರ್ಮಾಣ ಸಂಸ್ಥೆ ಪ್ರಪ್ರಥಮ ಸಿನಿಮಾವನ್ನು ನಿರಂಜನ್ ಸುಧೀಂದ್ರಗೆ ಮಾಡುತ್ತಿದ್ದಾರೆ. ನಾಯಕಿಯಾಗಿ ರಚನಾ ಇಂದರ್ ಸಾಥ್ ಕೊಡುತ್ತಿದ್ದಾರೆ.
ಇನ್ನು, ಅನುಭವಿ ತಾಂತ್ರಿಕ ವರ್ಗ ಚಿತ್ರದಲ್ಲಿದೆ. ಅಶ್ವಿನ್ ಕೆನಡಿ ಛಾಯಾಗ್ರಹಣ, ಸಚಿನ್ ಬಸ್ರೂರ್ ಸಂಗೀತ ನಿರ್ದೇಶನ, ಮಧು ಸಂಕಲನ ಈ ಚಿತ್ರಕ್ಕಿದೆ. ಈ ತಿಂಗಳಾಂತ್ಯಕ್ಕೆ ಚಿತ್ರತಂಡ ಶೂಟಿಂಗ್ ಅಖಾಡಕ್ಕೆ ಇಳಿಯಲಿದ್ದು , ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.
ದಕ್ಷಿಣ ಸಿನಿರಂಗದತ್ತ ಬಾಲಿವುಡ್ ತಾರಾದಂಡು ಒಬ್ಬೊಬ್ಬರಾಗಿ ಹೆಜ್ಜೆ ಹಾಕುತ್ತಿರುವುದು ಹೊಸ ವಿಷಯವಲ್ಲ. ಈಗಾಗಲೇ ಅನೇಕ ಸಿನಿಮೇಕರ್ಸ್, ಸ್ಟಾರ್ಸ್ ಕಾಲಿವುಡ್, ಸ್ಯಾಂಡಲ್ ವುಡ್, ಟಾಲಿವುಡ್ ನಲ್ಲಿ ಧೂಳ್ ಎಬ್ಬಿಸುತ್ತಿದ್ದಾರೆ. ಇದೀಗ ಹೊಸ ಸೇರ್ಪಡೆ ಬಾಲಿವುಡ್ ಖ್ಯಾತ ನಿರ್ದೇಶಕ ಅನುರಾಗ್ ಕಶ್ಯಪ್.
ಅನುರಾಗ್ ಕಶ್ಯಪ್ ದಕ್ಷಿಣದ ಕಡೆಗೆ ಬಂದಾಗಿದೆ. ತಮಿಳಿನ ಮಹಾರಾಜ ಚಿತ್ರದಲ್ಲಿ ಅದ್ಭುತ ಪಾತ್ರದಲ್ಲಿ ಗಮನಸೆಳೆದಿದ್ದಾರೆ. ಈ ಮೂಲಕ ತಮಿಳು ಪ್ರೇಕ್ಷಕರನ್ನ ರಂಜಿಸಿದ್ದಾರೆ. ತೆಲುಗಿನ ಡಕಾಯಿತ್ ಚಿತ್ರದಲ್ಲಿ ಕಪಟ ಪೊಲೀಸ್ ಆಫೀಸರ್ ನಟಿಸಿರುವ ಅವರೀಗ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಹಾಸ್ಯ ನಟ-ನಿರ್ದೇಶಕ ಸುಜಯ್ ಶಾಸ್ತ್ರಿ ಈ ಚಿತ್ರವನ್ನ ಡೈರೆಕ್ಷನ್ ಮಾಡುತ್ತಿದ್ದಾರೆ. ಈ ಮೂಲಕ ಒಂದು ಒಳ್ಳೆ ಕಥೆಯನ್ನ ಹೇಳುತ್ತಿದ್ದಾರೆ.
8 ಸಿನಿಮಾದ ಟೈಟಲ್ ಲಾಂಚ್ ಕಾರ್ಯಕ್ರಮ ಬೆಂಗಳೂರಿನಲ್ಲಿ ನಿನ್ನೆ ನಡೆಯಿತು. ಈ ವೇಳೆ ನಿರ್ದೇಶಕ ಕಂ ನಟ ಅನುರಾಗ್ ಕಶ್ಯಪ್ ಮಾತನಾಡಿ, ಇದೊಂದು ಎಮೋಷನಲ್ ಕಥೆ. ಜೀವನ ಎಲ್ಲರಿಗೂ ಎರಡನೇ ಅವಕಾಶ ನೀಡುತ್ತದೆ. ಈ ಚಿತ್ರ ಕೂಡ ಅದನ್ನೇ ಹೇಳುತ್ತದೆ. ಅರವಿಂದ್ ಹಾಗೂ ಸುಜಯ್ ಶಾಸ್ತ್ರೀಗೆ ಧನ್ಯವಾದ ಎಂದರು.
ಕನ್ನಡದ ‘8’ ಎಂಬ ಚಿತ್ರದಲ್ಲಿ ಅನುರಾಗ್ ಕಶ್ಯಪ್ ನಟಿಸುತ್ತಿದ್ದಾರೆ. ಹಾಸ್ಯನಟ ಸುಜಯ್ ಶಾಸ್ತ್ರೀ ಈ ಚಿತ್ರದ ಸಾರಥಿ. ಎವಿಆರ್ ಎಂಟರ್‌ಟೈನ್‌ಮೆಂಟ್ ಬ್ಯಾನರ್ ಅಡಿಯಲ್ಲಿ ಅರವಿಂದ್ ವೆಂಕಟೇಶ್ ರೆಡ್ಡಿ ಚಿತ್ರಕ್ಕೆ ಹಣ ಹೂಡುತ್ತಿದ್ದಾರೆ.ಫುಟ್‌ಬಾಲ್ ಆಟದ ಸುತ್ತ ನಡೆಯುವ ಕಥೆ ‘8’ ಚಿತ್ರದಲ್ಲಿದೆ.
AVR ಪ್ರೊಡಕ್ಷನ್ ಚೊಚ್ಚಲ ಸಿನಿಮಾ 8
ಕನ್ನಡ ಚಿತ್ರರಂಗಕ್ಕೆ ಸದಾ ಅಭಿರುಚಿ ಸಿನಿಮಾಗಳನ್ನು ನೀಡುವ ಉದ್ದೇಶದಿಂದ ಶುರುವಾಗಿರುವ ಎವಿಆರ್ ಚೊಚ್ಚಲ ಕಾಣಿಕೆ 8. ಅರವಿಂದ್ ರೆಡ್ಡಿ ನಿರ್ಮಾಣದಲ್ಲಿ ಈ ಸಿನಿಮಾ ಮೂಡಿ ಬರಲಿದೆ. ಈ ಚಿತ್ರದ ಜೊತೆಗೆ ಸಿಂಪಲ್ ಸುನಿ ಜೊತೆಗೂ ಎವಿಆರ್ ಕೈ ಜೋಡಿಸಿದೆ. ಬಿಗ್ ಬಾಸ್ ಖ್ಯಾತಿಯ ಮಹೇಶ್ ಕಾರ್ತಿಕ್ ನಾಯಕನಾಗಿ ನಟಿಸಲಿರುವ ಈ ಸಿನಿಮಾ ಈಗಾಗಲೇ ಘೋಷಣೆಯಾಗಿದೆ. ಸದ್ಯ 8 ಸಿನಿಮಾದ ಚಿತ್ರೀಕರಣ ಬೆಂಗಳೂರಿನಲ್ಲಿ ಭರದಿಂದ ಸಾಗುತ್ತಿದೆ.
ಶ್ರೀ ಜೈ ಮಾತ ಕಂಬೈನ್ಸ್ ಲಾಂಛನದಲ್ಲಿ ಅದ್ದೂರಿಯಾಗಿ ನಿರ್ಮಾಣವಾಗುತ್ತಿರುವ, ಪ್ರಕಾಶ್ ವೀರ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕರಾಗಿ ನಟಿಸುತ್ತಿರುವ ಬಹು ನಿರೀಕ್ಷಿತ “ದಿ ಡೆವಿಲ್” ಚಿತ್ರದ ಎರಡನೇ ಹಂತದ ಚಿತ್ರೀಕರಣ ಬೆಂಗಳೂರಿನಲ್ಲಿ ಆರಂಭವಾಗಿದೆ.
“ದಿ ಡೆವಿಲ್” ಚಿತ್ರದ ಎರಡನೇ ಹಂತದ ಚಿತ್ರೀಕರಣ ಬೆಂಗಳೂರಿನಲ್ಲಿ ಬಿರುಸಿನಿಂದ ಸಾಗಿದೆ. ಮುಂದಿನವಾರದಿಂದ ಚಿತ್ರೀಕರಣದಲ್ಲಿ ದರ್ಶನ್ ಅವರು ಭಾಗಿಯಾಗಲಿದ್ದಾರೆ. ದರ್ಶನ್ ಅವರಿಗೆ ಬೆನ್ನು ನೋವಿನ ಸಮಸ್ಯೆ ಇರುವುದರಿಂದ ಈ ಹಂತದಲ್ಲಿ ಬರೀ ಮಾತಿನ ಭಾಗದ ಚಿತ್ರೀಕರಣ ಮಾತ್ರ ಮಾಡಲಾಗುವುದು. ಸಾಹಸ ಸನ್ನಿವೇಶಗಳ ಚಿತ್ರೀಕರಣವಾಗಲಿ ಅಥವಾ ಬೇರೆ ಯಾವುದೇ ರಿಸ್ಕ್ ಇರುವ ಸನ್ನಿವೇಶಗಳ ಚಿತ್ರೀಕರಣ ಮಾಡುವುದಿಲ್ಲ ಎಂದು ತಿಳಿಸಿರುವ ನಿರ್ದೇಶಕ ಪ್ರಕಾಶ್ ವೀರ್, ಬೆಂಗಳೂರು, ಮೈಸೂರು, ಹೈದರಾಬಾದ್ ಹಾಗೂ ರಾಜಸ್ಥಾನದಲ್ಲಿ ಎರಡನೇ ಹಂತದ ಚಿತ್ರೀಕರಣ ಮಾಡುವ ಯೋಜನೆ ಹಾಕಿಕೊಂಡಿದ್ದೇವೆ ಎಂದಿದ್ದಾರೆ.
ನಾಯಕ ಚಾಲೆಂಜಿಂಗ್ ಸ್ಟಾರ್ ದರ್ಶನ್, ನಾಯಕಿ ರಚನ ರೈ, ತುಳಸಿ,ಅಚ್ಯುತಕುಮಾರ್, ಮಹೇಶ್ ಮಂಜ್ರೇಕರ್, ಶ್ರೀನಿವಾಸಪ್ರಭು, ಶೋಭ್ ರಾಜ್ ಮುಂತಾದ ಕಲಾವಿದರು ಎರಡನೇ ಹಂತದ ಚಿತ್ರೀಕರಣದಲ್ಲಿ ಭಾಗವಹಿಸಲಿದ್ದಾರೆ.
ಸುಧಾಕರ್.ಎಸ್.ರಾಜ್ ಅವರ ಛಾಯಾಗ್ರಹಣವಿರುವ “ದಿ ಡೆವಿಲ್” ಚಿತ್ರಕ್ಕೆ ಬಿ.ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ, ಮೋಹನ್ ಬಿ ಕೆರೆ ಕಲಾ ನಿರ್ದೇಶನ ಹಾಗೂ ರಾಮ್ ಲಕ್ಷ್ಮಣ್ ಅವರ ಸಾಹಸ ನಿರ್ದೇಶನವಿದೆ.
ಮಲೆನಾಡು ತಪ್ಪಲಿನ ಒಂದು ಊರು. ಆ ಊರಿನ ಮೂರು ಮುತ್ತುಗಳು. ಓದೋ ವಯಸ್ಸಲ್ಲಿ ಸರಿಯಾಗಿ ಓದದೆ ಹರಟೆ, ತರಲೆ ಮಾಡ್ತಾನೇ ಬದುಕಿನ ಅರ್ಥ ಅರಿಯದೆ ಜಾಲಿ ಮಾಡುವ ಪೋಲಿಗಳು. ಲೈಫು ಅಂದುಕೊಂಡಷ್ಟು ಸುಲಭ ಅಲ್ಲ ಅಂತ ಗೊತ್ತಾಗುವಷ್ಟರಲ್ಲಿ ಆ ಮೂವರು ಗೆಳೆಯರ ಬದುಕಲ್ಲಿ ಅಲ್ಲೋಲ ಕಲ್ಲೋಲ. ಮುಂದೆ ಅವರು ಬದುಕು ಕಟ್ಟಿಕೊಳ್ತಾರ ಇಲ್ವಾ ಅನ್ನೋದೇ ಒನ್ ಲೈನ್ ಸ್ಟೋರಿ. ‘ಇಂಟರ್‌ರ್ವೆಲ್’ ಪ್ರತಿಯೊಬ್ಬರ ಬದುಕಲ್ಲಿ ಬಂದೇ ಬರುತ್ತೆ. ಈ ಮೂವರ ಬಾಳಲ್ಲೂ ಬರುವ ಬದುಕಿನ ತಿರುವು ಹೇಗಿರುತ್ತೆ ಎಂಬ ಕುತೂಹಲವಿದ್ದರೆ ಒಮ್ಮೆ ಸಿನಿಮಾ ನೋಡಬಹುದು.
ಇಲ್ಲಿ ಮೂವರ ತುಂಟಾಟ, ಪೋಲಿತನ, ತಮಾಷೆ, ಅಸಹಾಯಕತೆ, ಉತ್ಸಾಹ, ನಿರಾಸೆ ಎಲ್ಲವೂ ಮೇಳೈಸಿದೆ.
ಜಾಲಿಯಾಗಿಯೇ ಇರುವ ಮೂವರ ಬದುಕು ಜವಾಬ್ದಾರಿ ಇಲ್ಲದೆ ಒದ್ದಾಡುವಂತ ಸ್ಥಿತಿಗೆ ಬರುತ್ತೆ. ನಗಿಸುವ ಹಾಗು ಭಾವುಕತೆ ಹೆಚ್ಚಿಸುವ ಪಾತ್ರಗಳ ಮೂಲಕ ಒಂದೊಳ್ಳೆಯ ಆಪ್ತ ಕಥೆ ಹೇಳುವಲ್ಲಿ ನಿರ್ದೇಶಕರು ಗೆದ್ದಿದ್ದಾರೆ.
ಮೊದಲರ್ಧ ತಮಾಷೆಯಾಗಿ ಸಾಗುವ ಚಿತ್ರದ ದ್ವಿತಿಯಾರ್ಧ ಗಂಭೀರತೆ ಪಡೆಯುತ್ತೆ. ವಿನಾಕಾರಣ ಇಲ್ಲಿ ದೃಶ್ಯಗಳ ವೈಭವೀಕರಣವಿಲ್ಲ. ಅನಗತ್ಯ ಸೀನ್ ಗಳಿಲ್ಲ. ಬೇಸರಿಸುವ ಅಂಶಗಳೂ ಇಲ್ಲ. ಹೊಸ ತಂಡವಾದರೂ ಬೆನ್ನು ತಟ್ಟುವಂತಹ ಕೆಲಸ ಮಾಡಿದೆ ಎಂಬುದೇ ಸಮಾಧಾನ.
ಇಲ್ಲಿ ಶಿಕ್ಷಣ ಎಷ್ಟು ಮುಖ್ಯ ಅನ್ನೋದನ್ನು ನಿರ್ದೇಶಕರು ಒತ್ತಿ ಹೇಳಿದ್ದಾರೆ. ಈಗಿನ ಯುವಕರ ಮನಸ್ಥಿತಿ ಹೇಗಿರುತ್ತೆ ಎನ್ನುವುದನ್ನಿಲ್ಲಿ ಕಾಣಬಹುದು.
ಸಿನಿಮಾದ ವೇಗಕ್ಕೆ ಸಂಕಲನ ಸಾಥ್ ಕೊಟ್ಟಿದೆ. ಒಂದು ಹಾಡು ಗುನುಗಬಹುದು. ಹಿನ್ನೆಲೆ ಸಂಗೀತ ಕಥೆಗೆ ಪೂರಕ.
ಇನ್ನು, ಶಶಿ ರಾಜ್, ಪ್ರಜ್ವಲ್‌ಕುಮಾರ್ ಗೌಡ, ಸುಕಿ ಅಭಿನಯದಲ್ಕಿ ಸಹಜತೆ ಇದೆ. ಸಹನಾ ಆರಾಧ್ಯ ಸಿಕ್ಕ ಪಾತ್ರಕ್ಕೆ ಮೋಸ ಮಾಡಿಲ್ಲ. ತೆರೆ ಮೇಲೆ ಬರುವ ಪಾತ್ರಗಳೂ ಗಮನ ಸೆಳೆಯುತ್ತವೆ.
ಚಿತ್ರ: ಕಪಟಿ ನಿರ್ದೇಶನ: ರವಿಕಿರಣ್, ಚೇತನ್ ನಿರ್ಮಾಣ: ದಯಾಳ್ ಪದ್ಮನಾಭನ್ ತಾರಾಗಣ: ಸುಕೃತ ವಾಗ್ಲೆ, ದೇವ್ ದೇವಯ್ಯ, ಸಾತ್ವಿಕ್ ಕೃಷ್ಣನ್, ಶಂಕರ್ ನಾರಾಯಣ ಇತರರು.
ಆ ಮನೆಯಲ್ಲಿ ಅವಳಿಗೆ ಯಾರೋ ಕರೆಯುತ್ತಿರುವ ಭಾಸ. ಇನ್ಯಾರೋ ಓಡಾಡಿದ ಫೀಲ್. ಮನೆ ಸುತ್ತ ಮುತ್ತ ಏನೇನೋ ನಡೆಯುತ್ತಿರೋ ಭೀತಿ…
ಇಷ್ಟಕ್ಕೂ ಅದು ದೆವ್ವದ ಓಡಾಟವೋ? ಯಾರಾದರೂ ಭಯಗೊಳಿಸಲು ಮಾಡುತ್ತಿರೋ ಪಿತೂರಿಯೋ ? ಆರಂಭದಿಂದ ಅಂತ್ಯದವರೆಗೂ ನೋಡುಗರಿಗೆ ಕುತೂಹಲ ಕೆರಳಿಸುವ ಈ ಕಥೆ ನೋಡಿಸಿಕೊಂಡು ಹೋಗುತ್ತೆ. ಹಾಗೆ ನೋಡೋಕೆ ಕಾರಣ ನಿರ್ದೇಶಕರ ನಿರೂಪಣೆಯ ಜಾಣತನ. ಇಲ್ಲಿ ಭೀತಿ ಇದೆ, ಗಂಭೀರತೆ ಇದೆ, ಆತಂಕ ಇದೆ, ಆಸೆ, ದುರಾಸೆ , ಬಾಂಧವ್ಯ, ಎಮೋಷನಲ್ ಇತ್ಯಾದಿ ಎಲ್ಲವೂ ಮೇಳೈಸಿದೆ. ಆ ಕಾರಣಕ್ಕೆ ಚಿತ್ರ ಆಪ್ತತೆಯ ಸಾರವಾಗುತ್ತೆ.
ಕಥೆ ಸಿಂಪಲ್ ಎನಿಸಿದರೂ, ಹೊಸ ವಿಷಯ ಇಲ್ಲಿದೆ. ಹೊಸತನ್ನು ಹೇಳಿರುವ ಮತ್ತು ತೋರಿಸಿರುವ ರೀತಿ ಇಷ್ಟವಾಗುತ್ತೆ. ನೋಡುಗರಿಗೆ ಎಷ್ಟು ತೋರಿಸಬೇಕು, ಏನನ್ನು ಹೇಳಬೇಕೆಂಬ ಅರಿವು ನಿರ್ದೇಶಕರಿಗೆ ಇದೆ. ಹಾಗಾಗಿ ಸಿನಿಮಾ ಎಲ್ಲಾ ವರ್ಗಕ್ಕೂ ರುಚಿಸುವುದರಲ್ಲಿ ಸಂದೇಹವಿಲ್ಲ.
ಮೊದಲರ್ಧ ಸರಾಗವಾಗಿ ಸಾಗುವ ಸಿನಿಮಾದಲ್ಲಿ ಸಾಕಷ್ಟು ಸಂಗತಿಗಳಿವೆ. ದ್ವಿತಿಯಾರ್ಧ ಕಥೆಯ ಓಗ ನೋಡುಗರಲ್ಲಿ ಕುತೂಹಲ ಮೂಡಿಸುತ್ತೆ. ಸಾಮಾನ್ಯವಾಗಿ ಹಾರರ್, ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಪ್ರಿಯರಿಗೆ ಇದು ಇಷ್ಟವಾಗದೇ ಇರದು.
ಸಿನಿಮಾದ ಅವಧಿ ಹೆಚ್ಚನಿಸಲ್ಲ. ಎಲ್ಲೂ ಗೊಂದಲ ಇರದ ಕಥೆಯಲ್ಲಿ ಚಿತ್ರಕಥೆ ಬಿಗಿಯಾಗಿದೆ. ಸಿನಿಮಾದ ವೇಗಕ್ಕೆ ಸಂಕಲನ ಮುಖ್ಯವಾಗಿ ಹೆಗಲು ಕೊಟ್ಟಿದೆ. ಇಂತಹ ಸಿನಿಮಾಗಳಿಗೆ ಹಿನ್ನೆಲೆ ಸಂಗೀತ ಮಾತಾಡಬೇಕು. ಅದಿಲ್ಲಿ ವರ್ಕ್ ಆಗಿದೆ.
ಇಲ್ಲಿ ಗಮನಿಸಬೇಕಾದ ಮತ್ತೊಂದು ಅಂಶವೆಂದರೆ ಅದು ಪಾತ್ರಗಳು. ಬೆರಳೆಣಿಕೆಯ ಪಾತ್ರಗಳಿವೆ. ಬಹುತೇಕ ಒಂದೇ ಮನೆ ಸಿನಿಮಾದ ಕೇಂದ್ರಬಿಂದು. ನೋಡೋಕೆ ಒಂದು ಹಾಡು, ಒಂದು ಫೈಟು ಇದ್ದರೂ ಅದು ಕಥೆಗೆ ಪೂರಕ. ಗಲಿಬಿಲಿ ಇರದ ನೀಟ್ ನರೇಷನ್ ಚಿತ್ರ.
ಕಥೆ ಏನು?
ಇದೊಂದು ಡಾರ್ಕ್ ನೈಟ್ ಕಥೆ. ಅಂದರೆ ಇಬ್ಬರು ಹ್ಯಾಕರ್ಸ್ ಕಥೆ ವ್ಯಥೆ ಇಲ್ಲಿದೆ. ಯಾರೂ ಇಲ್ಲದ ವೇಳೆ ಆ ದೊಡ್ಡ ಬಂಗಲೆಯಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿ, ಅಪ್ಪ, ಮಗ ಮತ್ತು ಮಗಳ ಚಟುವಟಿಕೆಯನ್ನು ಡಾರ್ಕ್ ವೆಬ್ ಮೂಲಕ ಹಣ ಮಾಡುವ ಸಂಚು ಹೇಗಿರುತ್ತೆ ಅನ್ನೋದು ಒನ್ ಲೈನ್. ಅದು ಹೇಗೆ ಎಂಬ ಕುತೂಹಲ ಇದ್ದರೆ ಒಮ್ಮೆ ನೋಡಲ್ಲಡ್ಡಿಯಿಲ್ಲ.
ಆ ಮನೆಯಲ್ಲಿ ವಿಚಿತ್ರ ಘಟನೆ ನಡೆಯುತ್ತೆ. ಏನೇನು ಎಂಬ ಪ್ರಶ್ನೆಗೆ ಇಡೀ ಸಿನಿಮಾ ಉತ್ತರವಾಗಲಿದೆ.
ನೋಡ ನೋಡುತ್ತಿದ್ದಂತೆ ಚಿತ್ರ ಎಂಡ್ ಆಗುತ್ತೆ. ಒಂದಷ್ಟು ಪ್ರಶ್ನೆಗಳು ಕಾಡುತ್ತವೆ. ಅಲ್ಲೇ ಉತ್ತರವೂ ಸಿಗುತ್ತೆ. ಹೊಸ ವಿಷಯವನ್ನು ಹೀಗೂ ಹೇಳಬಹುದು ಅಂತ ಕಪಟಿ ನೋಡಿದವರಿಗೆ ಗೊತ್ತಾಗುತ್ತೆ.
ಕತ್ತಲು ರಾತ್ರಿಯೊಳು ಜರುಗುವ ಸೂಕ್ಷ್ಮ ಸನ್ನಿವೇಶಗಳೇ ಚಿತ್ರದ ಹೈಲೆಟ್. ಕನ್ನಡದಲ್ಲಿ ಬಂದ ಅದೆಷ್ಟೋ ಕ್ರೈಮ್ ಥ್ರಿಲ್ಲರ್ ನಡುವೆ ಇದು ಭಿನ್ನವಾಗುತ್ತೆ. ಒಟ್ಟಾರೆ ಕನ್ನಡಕ್ಕೊಂದು ಹೊಸ ಪ್ರಯತ್ನವಂತೂ ಹೌದು.ತಾಂತ್ರಿಕವಾಗಿಯೂ ಸಿನಿಮಾ ಸೈ ಎನಿಸಿಕೊಂಡಿದೆ.
ಯಾರು ಹೇಗೆ?
ಇಲ್ಲಿ ಸುಕೃತ ವಾಗ್ಲೆ ಎಂದಿಗಿಂತ ನಟನೆಯಲ್ಲಿ ಇಷ್ಟವಾಗುತ್ತಾರೆ. ಎಮೋಷನ್ ದೃಶ್ಯದಲ್ಲಿ ಭಾವುಕತೆಗೆ ದೂಡುತ್ತಾರೆ. ಕೊಟ್ಟ ಪಾತ್ರಕ್ಕೆ ಮೋಸ ಮಾಡಿಲ್ಲ. ದೇವ್ ದೇವಯ್ಯ ಮತ್ತು ಸಾತ್ವಿಕ್ ಕೃಷ್ಣನ್ ಸಿನಿಮಾದ ಕೇಂದ್ರ ಬಿಂದು. ಜಿದ್ದಿಗೆ ಬಿದ್ದವರಂತೆ ಕಾಣಿಸಿಕೊಂಡಿದ್ದಾರೆ. ಪಕ್ಕಾ ಹ್ಯಾಕರ್ಸ್ ಆಗಿ ಇಷ್ಟವಾಗುತ್ತಾರೆ. ತೆರೆ ಮೇಲೆ ಬರುವ ಕೆಲ ಪಾತ್ರಗಳೂ ಇರುವಷ್ಟು ಕಾಲ ಗಮನ ಸೆಳೆಯುತ್ತವೆ.
ಚಿತ್ರದ ಛಾಯಾಗ್ರಹಣದಲ್ಲಿ ಕತ್ತಲು ಬಿಳುಪಿನ ಆಟ ಸೊಗಸಾಗಿದೆ. ಸಂಗೀತ ಸಿನಿಮಾಗೆ ಸಾಥ್ ನೀಡಿದೆ.