Categories
ಸಿನಿ ಸುದ್ದಿ

ಮಾಲಿವುಡ್ ಗೆ ಲೈಕಾ ಎಂಟ್ರಿ: ಪೃಥ್ವಿ ರಾಜ್ ಸುಕುಮಾರ್, ಮೋಹನ್ ಲಾಲ್ ’ಲೂಸಿಫರ್ ಪಾರ್ಟ್-2’ ಸಿನಿಮಾಗೆ ಸುಭಾಷ್ ಕರಣ್ ನಿರ್ಮಾಣ

ದಕ್ಷಿಣ ಭಾರತದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಲೈಕಾ ಮಾಲಿವುಡ್ ಅಂಗಳಕ್ಕೆ ಎಂಟ್ರಿ ಕೊಟ್ಟಿದೆ. ಇಂಡಿಯನ್, ದರ್ಬಾರ್, ಪೊನ್ನಿಯಿನ್ ಸೆಲ್ವನ್ ಸರಣಿ ಸಿನಿಮಾ, 2.0, ಖೈದಿ 150ಯಂತಹ ಅದ್ಧೂರಿ ಹಾಗೂ ಬ್ಲಾಕ್ ಬಸ್ಟರ್ ಹಿಟ್ ಸಿನಿಮಾಗಳನ್ನು ಸಿನಿಮಾ ರಂಗಕ್ಕೆ ಕೊಡುಗೆಯಾಗಿ ಕೊಟ್ಟಿರುವ ಲೈಕಾ ಮಾಲಿವುಡ್ ಸೂಪರ್ ಡೂಪರ್ ಹಿಟ್ ಚಿತ್ರ ಲೂಸಿಫರ್ ಪಾರ್ಟ್-2ಗೆ ಬಂಡವಾಳ ಹೂಡುತ್ತಿದೆ.

ಲೈಕಾ ಒಡೆಯ ಸುಭಾಷ್ ಕರಣ್, ಮಾಲಿವುಡ್ ಸೂಪರ್ ಸ್ಟಾರ್ ಮೋಹನ್ ಲಾಲ್-ಪೃಥ್ವಿ ರಾಜ್ ಸುಕುಮಾರ್ ಜೊತೆ ಕೈ ಜೋಡಿಸಿದ್ದಾರೆ. 2019ರಲ್ಲಿ ರಿಲೀಸ್ ಆಗಿದ್ದ ಪೊಲಿಟಿಕಲ್ ಆಕ್ಷನ್ ಥ್ರಿಲ್ಲರ್ ಲೂಸಿಫರ್ ಸಿನಿಮಾ ಕಮರ್ಷಿಯಲ್ ಹಾಗೂ ವಿಮರ್ಷಕರಿಂದಲೂ ಭಾರೀ ಮೆಚ್ಚುಗೆ ಪಡೆದುಕೊಂಡಿತ್ತು. ಮೋಹನ್ ಲಾಲ್ ಫಾರ್ಪೆಮನ್ಸ್, ಪೃಥ್ವಿರಾಜ್ ಡೈರೆಕ್ಷನ್ ಬಗ್ಗೆ ಸಿನಿಮಾರಸಿಕರು ಚಪ್ಪಾಳೆ ತಟ್ಟಿದ್ದರು. ಇದೀಗ ಲೂಸಿಫರ್ ಪಾರ್ಟ್-2 ನಿರ್ದೇಶಕ ಪೃಥ್ವಿರಾಜ್ ಸುಕುಮಾರ್ ಸಜ್ಜಾಗಿದ್ದು, ಲೈಕಾ ಜೊತೆಯಾಗಿ ನಿಂತಿದೆ.

ಲೂಸಿಫರ್ ಎರಡನೇ ಅಧ್ಯಾಯಕ್ಕೆ ಎಂಪುರನ್ ಎಂಬ ಟೈಟಲ್ ಇಡಲಾಗಿದೆ. ಮಲಯಾಳಂನ ಖ್ಯಾತ ನಿರ್ಮಾಣ ಸಂಸ್ಥೆ ಆಶೀರ್ವಾದ ಸಿನಿಮಾಸ್ ಜೊತೆಗೂಡಿ ಲೈಕಾ ಈ ಚಿತ್ರ ನಿರ್ಮಾಣ ಮಾಡುತ್ತಿದೆ. ಜಿ.ಕೆ.ಎಂ. ತಮಿಳ್ ಕುಮಾರನ್ ಲೈಕಾ ಪ್ರೊಡಕ್ಷನ್‌ನ ಮುಖ್ಯಸ್ಥರಾಗಿದ್ದಾರೆ. ಮುರಳಿ ಗೋಪಿ ಈ ಚಿತ್ರಕ್ಕೆ ಚಿತ್ರಕಥೆ ಬರೆಯುತ್ತಿದ್ದಾರೆ, ಸುಜಿತ್ ವಾಸುದೇವ್ ಛಾಯಾಗ್ರಹಣವನ್ನು ನಿಭಾಯಿಸುತ್ತಿದ್ದಾರೆ. ದೀಪಕ್ ದೇವ್ ಸಂಗೀತ ಸಂಯೋಜಿಸಿದ್ದಾರೆ.

ಸುರೇಶ್ ಬಾಲಾಜಿ ಮತ್ತು ಜಾರ್ಜ್ ಪಯಸ್ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು. ಮಲಯಾಳಂ, ತಮಿಳು, ತೆಲುಗು, ಕನ್ನಡ ಮತ್ತು ಹಿಂದಿಯಲ್ಲಿ ಚಿತ್ರ ನಿರ್ಮಾಣವಾಗಿದೆ. ‘ಎಂಪುರನ್’ ಅಧಿಕೃತ ಘೋಷಣೆಯ ಬಗ್ಗೆ ಅಭಿಮಾನಿಗಳು ಉತ್ಸುಕರಾಗಿದ್ದಾರೆ. ವಿಶೇಷವಾಗಿ ಆಶೀರ್ವಾದ್ ಸಿನಿಮಾಸ್ ಆಂಟೋನಿ ಪೆರುಂಬವೂರ್-ಲೈಕಾ ಪ್ರೊಡಕ್ಷನ್ಸ್ ಸುಭಾಸ್ಕರನ್-ಮೋಹನ್ ಲಾಲ್ ಮತ್ತು ಪೃಥ್ವಿರಾಜ್ ಸುಕುಮಾರನ್ ಕಾಂಬೋದ ಲೂಸಿಫರ್-2 ಝಲಕ್ ಪ್ರೇಕ್ಷಕರಲ್ಲಿ ನಿರೀಕ್ಷೆ ಹೆಚ್ಚಿಸಿದೆ.

Categories
ಸಿನಿ ಸುದ್ದಿ

ಶುಗರ್ ಫ್ಯಾಕ್ಟರಿ ಟ್ರೇಲರ್ ಸ್ವೀಟ್: ಇದು ಡಾರ್ಲಿಂಗ್ ಕೃಷ್ಣ ಚಿತ್ರ- ನವೆಂಬರ್ 24ಕ್ಕೆ ರಿಲೀಸ್

ಬಿಡುಗಡೆಗೂ ಮುನ್ನವೇ ಡಾರ್ಲಿಂಗ್ ಕೃಷ್ಣ ನಾಯಕರಾಗಿ ನಟಿಸಿರುವ “ಶುಗರ್ ಫ್ಯಾಕ್ಟರಿ” ಚಿತ್ರ ಭಾರಿ ಸುದ್ದಿಯಲ್ಲಿದೆ. ಇತ್ತೀಚೆಗೆ ಆನಂದ್ ಆಡಿಯೋ ಮೂಲಕ ಬಿಡೆಗಡೆಯಾಗಿರುವ ಈ ಚಿತ್ರದ ಟ್ರೇಲರ್ ಕುತೂಹಲ ಮೂಡಿಸಿದೆ.

ಚಿತ್ರ ನೋಡುವ ಕಾತುರವನ್ನು ಮತ್ತಷ್ಟು ಹೆಚ್ಚಿಸಿದೆ. ಟ್ರೇಲರ್ ನಲ್ಲಿ ಮನೋರಂಜನೆಯ ಮಹಾಪೂರವೇ ಹರಿದು ಬಂದಿದೆ.

ಎರಡು ನಿಮಿಷಗಳ ಟ್ರೇಲರ್ ನಲ್ಲೇ ಇಷ್ಟು ಮನರಂಜನೆ ಹಾಗೂ ಹಾಸ್ಯಭರಿತ ಸಂಭಾಷಣೆಗಳಿದೆ. ಇನ್ನು ಇಡೀ ಚಿತ್ರದುದ್ದಕ್ಕೂ ನಾನ್ ಸ್ಟಾಪ್ ಮನರಂಜನೆ ಖಚಿತ ಎಂಬುದಕ್ಕೆ ಟ್ರೇಲರ್ ಮುನ್ನುಡಿಯಾಗಿದೆ .

ಅಪಾರವೆಚ್ಚದಲ್ಲಿ ಹಾಗೂ ಅದ್ದೂರಿಯಾಗಿ ಮೂಡಿಬಂದಿರುವ “ಶುಗರ್ ಫ್ಯಾಕ್ಟರಿ” ನವೆಂಬರ್ 24 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.

ಗಿರೀಶ್ ನಿರ್ಮಿಸಿರುವ, ದೀಪಕ್ ಅರಸ್ ನಿರ್ದೇಶಿಸಿರುವ “ಶುಗರ್ ಫ್ಯಾಕ್ಟರಿ” ಚಿತ್ರದ ಹಾಡಗಳು ಹಾಗೂ ಟ್ರೇಲರ್ ಈಗಾಗಲೇ ಜನಪ್ರಿಯವಾಗಿದೆ.

ಡಾರ್ಲಿಂಗ್ ಕೃಷ್ಣ ಅವರ ಸಿನಿ ಜರ್ನಿಯಲ್ಲೇ “ಶುಗರ್ ಫ್ಯಾಕ್ಟರಿ” ಬಿಗ್ ಬಜೆಟ್ ನ ಚಿತ್ರವಾಗಿದೆ. ಸೋನಾಲ್ ಮಾಂತೆರೊ, ಅದ್ವಿತಿ ಶೆಟ್ಟಿ, ರುಹಾನಿ ಶೆಟ್ಟಿ ಕೃಷ್ಣ ಅವರಿಗೆ ನಾಯಕಿಯರಾಗಿ ನಟಿಸಿದ್ದಾರೆ.

Categories
ಸಿನಿ ಸುದ್ದಿ

ಗರಡಿ ಟೈಟಲ್ ಟ್ರ್ಯಾಕ್ ಬಂತು: ನವೆಂಬರ್ 10 ಕ್ಕೆ ಅಖಾಡ ರೆಡಿ

ವನಜಾ ಬಿ.ಸಿ ಪಾಟೀಲ್ ನಿರ್ಮಾಣದ ಹಾಗೂ ಯೋಗರಾಜ್ ಭಟ್ ನಿರ್ದೇಶನದ ‘ಗರಡಿ’ ಚಿತ್ರದ ಟೈಟಲ್ ಟ್ರ್ಯಾಕ್ ಇತ್ತೀಚೆಗೆ ‘ಸರೆಗಮ ಕನ್ನಡ’ ಯೂಟ್ಯೂಬ್‌ ಚಾನಲ್ ಮೂಲಕ ಬಿಡುಗಡೆಯಾಗಿದೆ. ಯೋಗರಾಜ್ ಭಟ್ ಅವರು ಬರೆದಿರುವ ‘ಲೋಕಾನೆ ಗರಡಿ.. ಬಾಳೇ ಅಖಾಡ” ಎಂಬ ಅದ್ಭುತ ಹಾಗೂ ಅರ್ಥಗರ್ಭಿತ ಗೀತೆಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಚಿತ್ರಕ್ಕೆ ಸಂಗೀತ ಸಂಯೋಜಿಸಿರುವ ವಿ.ಹರಿಕೃಷ್ಣ ಅವರೇ ಮುಖ್ಯ ಗಾಯಕರಾಗಿ ಹಾಡನ್ನು ಹಾಡಿದ್ದಾರೆ. ಹರಿಕೃಷ್ಣ ಅವರ ಜೊತೆಗೆ ಸಾಕಷ್ಟು ಪ್ರತಿಭಾವಂತ ‌ಗಾಯಕರು ಸಹ ಈ ಹಾಡಿಗೆ ಧ್ವನಿಯಾಗಿದ್ದಾರೆ.

“ಗರಡಿ” ಎಂದರೆ ಒಂದು ಊರನ್ನು ಕಾಯುವ ಪೊಲೀಸ್ ಠಾಣೆ ಇದ್ದ ಹಾಗೆ ಎಂದು ಮಾತು ಆರಂಭಿಸಿದ ನಿರ್ದೇಶಕ ಯೋಗರಾಜ್ ಭಟ್, ಹಿಂದೆ ಒಂದು ಊರಿನ ರಕ್ಷಣೆಗೆ “ಗರಡಿ” ಬಹು ಮುಖ್ಯವಾಗಿತ್ತು. ಊರಿನವರು ಸಹ ಗರಡಿ ಮನೆಯ ಕುಸ್ತಿಪಟುಗಳನ್ನು ತಮ್ಮ ಮನೆಯವರಂತೆಯೇ ನೋಡಿಕೊಳ್ಳುತ್ತಿದ್ದರು. ಅಂತಹ “ಗರಡಿ” ಸುತ್ತ ನಮ್ಮ ಚಿತ್ರದ ಕಥೆ ಸಾಗುತ್ತದೆ. ಗರಡಿ ಮನೆಯ ಯಜಮಾನನಾಗಿ ಬಿ.ಸಿ.ಪಾಟೀಲ್ ಅಭಿನಯಿಸಿದ್ದಾರೆ. ಅವರ ಶಿಷ್ಯನಾಗಿ ಸೂರ್ಯ ಅಭಿನಯಿಸಿದ್ದಾರೆ. ಇದು ಒಂದು ರೀತಿ ದ್ರೋಣಾಚಾರ್ಯ ಹಾಗೂ ಏಕಲವ್ಯನ ಕಥೆ ಎನ್ನಬಹುದು. ಇನ್ನು ಇಂದು ಬಿಡುಗಡೆಯಾಗಿರುವ ಹಾಡನ್ನು ಹರಿಕೃಷ್ಣ ಅದ್ಭುತವಾಗಿ ಸಂಯೋಜಿಸಿ ಹಾಡಿದ್ದಾರೆ. ಚಿತ್ರ ನವೆಂಬರ್ 10ರಂದು ಬಿಡುಗಡೆಯಾಗುತ್ತಿದೆ. ಎಲ್ಲರೂ ನೋಡಿ ಹಾರೈಸಿ ಎಂದರು.

“ಗರಡಿ” ಚಿತ್ರ ಆರಂಭವಾಗಿ ಈ ನವೆಂಬರ್ 14 ಕ್ಕೆ ಎರಡು ವರ್ಷಗಳಾಗುತ್ತದೆ. ನನ್ನ ಹುಟ್ಟುಹಬ್ಬಕ್ಕೆ ಈ ಚಿತ್ರ ಆರಂಭವಾಗಿತ್ತು. ದರ್ಶನ್ ಅವರು ಶೀರ್ಷಿಕೆ ಅನಾವರಣ ಮಾಡಿದ್ದರು. ಈ ಬಾರಿಯ ಹುಟ್ಟುಹಬ್ಬದ ಸಂದರ್ಭದಲ್ಲಿ (ನವೆಂಬರ್ 10) ಚಿತ್ರ ಬಿಡುಗಡೆಯಾಗುತ್ತದೆ. ಯೋಗರಾಜ್ ಭಟ್ ಅವರು ಬಹಳ ಶ್ರಮವಹಿಸಿ ಚಿತ್ರವನ್ನು ಉತ್ತಮವಾಗಿ ನಿರ್ದೇಶನ ಮಾಡಿದ್ದಾರೆ. ನಾನು ಈಗಾಗಲೇ ಚಿತ್ರವನ್ನು ಸಾಕಷ್ಟು ಸಲ ನೋಡಿ ಖುಷಿ ಪಟ್ಟಿದ್ದೇನೆ. ನಿಮಗೂ ಚಿತ್ರ ಹಿಡಿಸಲಿದೆ ಎಂದರು ಹಿರಿಯ ನಟ ಬಿ.ಸಿ.ಪಾಟೀಲ್.

ಈ ಚಿತ್ರದಲ್ಲೂ ನನ್ನ ಹೆಸರು ಸೂರ್ಯ ಅಂತ. ಎಲ್ಲರೂ “ಗರಡಿ ಸೂರಿ” ಅಂತ ಕರೆಯುತ್ತಿರುತ್ತಾರೆ. ಈ ಚಿತ್ರದಲ್ಲಿ ನನಗೆ ಅವಕಾಶ ಸಿಗಲು ದರ್ಶನ್ ಅವರು ಕಾರಣ. ಅವರು ಸಹ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಇಂದು ಬಿಡುಗಡೆಯಾಗಿರುವ ಟೈಟಲ್ ಸಾಂಗ್ ನಲ್ಲಿ ನಾನು ಸಖತ್ ಡ್ಯಾನ್ಸ್ ಮಾಡಿದ್ದೇನೆ. ಯೋಗರಾಜ್ ಭಟ್ ಅವರ ಸಾಹಿತ್ಯ ಹಾಗೂ ಹರಿಕೃಷ್ಣ ಅವರ ಸಂಗೀತದಲ್ಲಿ ಹಾಡು ಅದ್ಭುತವಾಗಿ ಮೂಡಿಬಂದಿದೆ ಎನ್ನುತ್ತಾರೆ ನಾಯಕ ಸೂರ್ಯ.

ನಾಯಕಿ ಸೋನಾಲ್ ಮಾಂತೆರೊ, ಚಿತ್ರದಲ್ಲಿ ನಟಿಸಿರುವ ಸುಜಯ್, ಧರ್ಮಣ್ಣ, ರಾಘು, ಛಾಯಾಗ್ರಾಹಕ ನಿರಂಜನ್ ಬಾಬು, ನೃತ್ಯ ನಿರ್ದೇಶಕ ಧನಂಜಯ ಚಿತ್ರದ ಕುರಿತು ಮಾತನಾಡಿದರು. ನಿರ್ಮಾಪಕಿ ವನಜಾ ಪಾಟೀಲ್ ಎಲ್ಲರಿಗೂ ಧನ್ಯವಾದ ತಿಳಿಸಿದರು. ಕಾರ್ಯಕಾರಿ ನಿರ್ಮಾಪಕಿ ಸೃಷ್ಟಿ ಪಾಟೀಲ್ “ಗರಡಿ” ಚಿತ್ರ ಸಾಗಿ ಬಂದ ಬಗ್ಗೆ ವಿವರಣೆ ನೀಡಿದರು.

Categories
ಸಿನಿ ಸುದ್ದಿ

ಸಲಾರ್ ರಿಲೀಸ್ ಡೇಟ್ ಫಿಕ್ಸ್: ಡಿಸೆಂಬರ್ 22ಕ್ಕೆ ಪ್ರಭಾಸ್ ಚಿತ್ರ

ಪ್ರಭಾಸ್‍ ಅಭಿನಯದ ‘ಸಲಾರ್’ ಚಿತ್ರದ ಬಿಡುಗಡೆ ಯಾವಾಗ ಎಂಬ ಅಭಿಮಾನಿಗಳ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ಹೊಂಬಾಳೆ ಫಿಲಂಸ್‍ ನಿರ್ಮಾಣದ, ಪ್ರಶಾಂತ್‍ ನೀಲ್‍ ನಿರ್ದೇ‍ಶನದ ಅತ್ಯಂತ ಮಹಾತ್ವಾಕಾಂಕ್ಷೆಯ ಚಿತ್ರವಾದ ‘ಸಲಾರ್ ಪಾರ್ಟ್ 1 – ಸೀಸ್‍ಫೈರ್’, ಡಿ. 22 ರಂದು ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿದೆ.


‘ಸಲಾರ್ ಪಾರ್ಟ್ 1 – ಸೀಸ್‍ಫೈರ್’ ಚಿತ್ರದ ಮೊದಲ ಟೀಸರ್ ಯಾವಾಗ ಬಿಡುಗಡೆಯಾಯಿತೋ, ಆಗಿನಿಂದಲೇ ಜಗತ್ತಿನಾದ್ಯಂತ ಇರುವ ಪ್ರಭಾಸ್‍ ಅಭಿಮಾನಿಗಳಲ್ಲಿ ಈ ಚಿತ್ರದ ಬಗ್ಗೆ ಕುತೂಹಲ ಮತ್ತು ನಿರೀಕ್ಷೆಗಳು ಗರಿಗೆದರಿವೆ. ‘ಸಲಾರ್’ ಪ್ರಪಂಚವನ್ನು ಪರಿಯಿಸುವ ಈ ಟೀಸರ್ ದೊಡ್ಡ ಮಟ್ಟದಲ್ಲಿ ಜನಪ್ರಿಯವಾಗುವುದರ ಜೊತೆಗೆ, ಅತೀ ಹೆಚ್ಚಿನ ವೀಕ್ಷಣೆಗೊಳಗಾಗಿತ್ತು.
ಪ್ರೇಕ್ಷಕರಿಗೆ ಗುಣಮಟ್ಟದ ಚಿತ್ರಗಳನ್ನು ನೀಡಬೇಕೆನ್ನುವ ಹೆಬ್ಬಯಕೆಯೊಂದಿಗೆ ಹಲವು ಚಿತ್ರಗಳ ನಿರ್ಮಾಣದಲ್ಲಿ ಹೊಂಬಾಳೆ ಫಿಲಂಸ್‍ ತೊಡಗಿಸಿಕೊಂಡಿದ್ದು, ಮುಂದಿನ ದಿನಗಳಲ್ಲಿ ‘ಯುವ’, ‘ಕಾಂತಾರ 2’, ‘ರಘು ತಥಾ’, ‘ಬಘೀರ’, ‘ಸಲಾರ್ 2’, ‘ಕೆಜಿಎಫ್‍ 3’, ‘ರಿಚರ್ಡ್‍ ಆಂಟೋನಿ’, ‘ಟೈಸನ್‍’ ಮುಂತಾದ ಚಿತ್ರಗಳನ್ನು ನಿರ್ಮಿಸುತ್ತಿದೆ. ಈಗ ‘ಸಲಾರ್ 1’ ಚಿತ್ರದ ಬಿಡುಗಡೆ ದಿನಾಂಕ ಘೋಷಣೆಯಾಗುವ ಮೂಲಕ ಈ ಸಂಭ್ರಮ ಇನ್ನಷ್ಟು ಹೆಚ್ಚಾಗಿದೆ.


‘ಸಲಾರ್ ಪಾರ್ಟ್ 1 – ಸೀಸ್‍ಫೈರ್’ ಚಿತ್ರದ ಬಿಡುಗಡೆ ದಿನಾಂಕದ ಜೊತೆಗೆ ಚಿತ್ರದ ಪೋಸ್ಟರ್ ಸಹ ಬಿಡುಗಡೆಯಾಗಿದೆ. ಈ ಚಿತ್ರದ ಮೂಲಕ ‘ಬಾಬುಬಲಿ’ ಖ್ಯಾತಿಯ ಪ್ರಭಾಸ್‍, ‘ಕೆಜಿಎಫ್‍ 1’ ಮತ್ತು ‘ಕೆಜಿಎಫ್‍ 2’ ಚಿತ್ರದ ನಿರ್ಮಾಪಕ ವಿಜಯ್‍ ಕಿರಗಂದರೂ ಮತ್ತು ನಿರ್ದೇಶಕ ಪ್ರಶಾಂತ್‍ ನೀಲ್‍ ಮೊದಲ ಬಾರಿಗೆ ಜೊತೆಯಾಗಿ ಕೆಲಸ ಮಾಡಿದ್ದು, ಆಕ್ಷನ್‍ ಚಿತ್ರಗಳಲ್ಲಿ ನಟನೆ, ನಿರ್ಮಾಣ ಮತ್ತು ನಿರ್ದೇಶನದಲ್ಲಿ ಜನಪ್ರಿಯವಾದ ಮೂವರು ಒಟ್ಟಿಗೆ ಕೆಲಸ ಮಾಡುತ್ತಿರುವುದು ವಿಶೇಷ.

ಭಾರತದ ಅತೀ ದೊಡ್ಡ ಆಕ್ಷನ್‍ ಚಿತ್ರ ಎಂಬ ಹೆಗ್ಗಳಿಕೆಗೆ ಈ ಚಿತ್ರ ಪಾತ್ರವಾಗಿದ್ದು, ಇದುವರೆಗೂ ಕಂಡು ಕೇಳರಿಯದ ಬೃಹತ್ ಆಕ್ಷನ್‍ ದೃಶ್ಯಗಳು ಈ ಚಿತ್ರದ ಹೈಲೈಟ್‍ ಆಗಲಿದೆ ಎಂದು ಹೇಳಲಾಗಿದೆ.
ಈ ಚಿತ್ರದಲ್ಲಿ ಪ್ರಭಾಸ್‍ ಜೊತೆಗೆ ಪೃಥ್ವಿರಾಜ್‍ ಸುಕುಮಾರನ್‍, ಶ್ರುತಿ ಹಾಸನ್‍, ಜಗಪತಿ ಬಾಬು ಮುಂತಾದವರು ನಟಿಸುತ್ತಿದ್ದು, ಕ್ರಿಸ್ಮಸ್‍ ಅಂಗವಾಗಿ ಡಿಸೆಂಬರ್ 22ರಂದು ಹಲವು ರಾಷ್ಟ್ರಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ.

Categories
ಸಿನಿ ಸುದ್ದಿ

ಪ್ರವೀರ್ ಶೆಟ್ಟಿ- ಐಶ್ವರ್ಯ ಎಂಗೇಜ್ ಮೆಂಟ್ ಮುಗೀತು!

“ಸೈರನ್” ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ ಪ್ರವೀರ್ ಶೆಟ್ಟಿ ನಾಯಕನಾಗಿ ನಟಿಸಿರುವ ಹಾಗೂ “ಜಾಗ್ವಾರ್”, “ಪ್ರವೀಣ” ಚಿತ್ರದಲ್ಲಿ ನಟಿಸಿರುವ ಐಶ್ವರ್ಯ ಗೌಡ ನಾಯಕಿಯಾಗಿ ಅಭಿನಯಿಸಿರುವ, ರಾಜು ಬೋನಗಾನಿ ನಿರ್ದೇಶನದ “ಎಂಗೇಜ್ ಮೆಂಟ್” ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಕೊಡಗು, ಮೈಸೂರು, ಗೋವಾ ಮುಂತಾದ ಕಡೆ ನಲವತ್ತು ದಿನಗಳ ಚಿತ್ರೀಕರಣವಾಗಿದೆ.

ಪ್ರೇಮ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ನಿರ್ದೇಶಕರೆ ಕಥೆ, ಚಿತ್ರಕಥೆ ಬರೆದಿದ್ದಾರೆ. ಇದು ರಾಜು ಬೋನಗಾನಿ ನಿರ್ದೇಶನದ ನಾಲ್ಕನೇ ಚಿತ್ರ. ಕನ್ನಡ ಸೇರಿದಂತೆ ಏಳು ಭಾಷೆಗಳಲ್ಲಿ ಈ ಪ್ಯಾನ್ ಇಂಡಿಯಾ ಚಿತ್ರ ನಿರ್ಮಾಣವಾಗುತ್ತಿದೆ‌. ಚಿತ್ರದಲ್ಲಿ ಐದು ಹಾಡುಗಳಿದ್ದು, ದಿಲೀಪ್ ಭಂಡಾರಿ ಹಾಗೂ ರಜತ್ ಘೋಶ್ ಸಂಗೀತ ನೀಡಿದ್ದಾರೆ.

ವೆಂಕಟ್ ಮನಂ ಛಾಯಾಗ್ರಹಣ, ರವಿ ಕೊಂಡವೀಟಿ ಸಂಕಲನ, ವೆಂಕಟೇಶ್ ಕಲಾ ನಿರ್ದೇಶನ, ಡ್ರ್ಯಾಗನ್ ಪ್ರಕಾಶ್ ಸಾಹಸ ನಿರ್ದೇಶನ ಹಾಗೂ ರಾಜು ಪೈಡೆ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.

ರೋಡಿಯಂ ಎಂಟರ್ಟೈನ್ಮೆಂಟ್ ಅರ್ಪಿಸುವ, ಸುರಾಮ್ ಮೂವೀಸ್ ಲಾಂಛನದಲ್ಲಿ ಜಯರಾಮ್ ದೇವಸಮುದ್ರ “ಎಂಗೇಜ್ ಮೆಂಟ್ ” ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಲಕ್ಷ್ಮೀಕಾಂತ್ ಹಾಗೂ ನಾರಾಯಣಸ್ವಾಮಿ ಈ ಚಿತ್ರದ ಸಹ ನಿರ್ಮಾಪಕರು.

ಪ್ರವೀರ್ ಶೆಟ್ಟಿ, ಐಶ್ವರ್ಯ ಗೌಡ, ರಾಜಗೋಪಾಲ್ ಅಯ್ಯರ್, ಬಾಲ ರಾಜವಾಡಿ, ಭಾವನ, ರಜನಿಶ್ರೀ, ಶರದ್ ವರ್ಮ, ದೀಪ್ತಿ ಗುಪ್ತ ಹಾಗೂ ಸುಜಯ್ ರಾಮ್ ಮುಂತಾದವರು “ಎಂಗೇಜ್ ಮೆಂಟ್” ಚಿತ್ರದ ತಾರಾಬಳಗದಲ್ಲಿದ್ದಾರೆ.

Categories
ಸಿನಿ ಸುದ್ದಿ

ಕಾವೇರಿಗಾಗಿ ಕನ್ನಡ ಕಲಾವಿದರ ಹೋರಾಟ! ರೈತರ ಜೊತೆ ನಾವಿದ್ದೇವೆ ಅಂದ್ರು ಸ್ಟಾರ್ಸ್

ಕಾವೇರಿ ನಮ್ಮವಳು. ಕಾವೇರಿ ನಮ್ಮ ಹಕ್ಕು. ಎಂದಿಗೂ ಕಾವೇರಿಯನ್ನು ಬಿಡೆವು…. ಇದು ಕಾವೇರಿ ಪರ ಕೂಗು. ರೈತರ ಪರ ದನಿ. ಹೌದು ಕಾವೇರಿಗಾಗಿ ಹೋರಾಟ ನಡೆಸುತ್ತಿರುವ ನಾಡಿನ ಜನರ ಜೊತೆ ಕನ್ನಡ ಚಿತ್ರರಂಗದ ಕಲಾವಿದರೂ ಕೂಡ ಭಾಗವಹಿಸಿ, ನಿಮ್ಮೊಂದಿಗೆ ಇದ್ದೇವೆ ಎಂದು ಬೆಂಬಲ ನೀಡಿದ್ದಾರೆ.

ಕರ್ನಾಟಕ ಬಂದ್ ಬೆಂಬಲಿಸಿ ಚಿತ್ರರಂಗ ಹಮ್ಮಿಕೊಂಡಿದ್ದ ಹೋರಾಟಕ್ಕೆ ಮೊದಲು ಬಂದು ಭಾಗವಾಗಿದ್ದು ರೋರಿಂಗ್ ಸ್ಟಾರ್ ಶ್ರೀಮುರಳಿ. ಆ ನಂತರ ಒಬ್ಬೊಬ್ಬರಾಗಿ ತಾರೆಗಳು ಪ್ರತಿಭನಾ ಸ್ಥಳಕ್ಕೆ ಆಗಮಿಸುತ್ತಿದ್ದಂತೆಯೇ ಜನ ಜಾತ್ರೆ ಹೆಜ್ಜೆಯಾಯಿತು.

ಬಿಗಿ ಪೊಲೀಸ್ ಬಂದೋ ಬಸ್ತ್ ನಡುವೆ ಸಿನಿಮಾ ತಾರೆಗಳು ನಮ್ಮ ಹೋರಾಟ ಕಾವೇರಿಗಾಗಿ, ನಮ್ಮ ಕೂಗು ಕಾವೇರಿಗಾಗಿ ಎನ್ನುವ ಮೂಲಕ ಹೋರಾಟಕ್ಕೆ ಉತ್ಸಾಹ ತುಂಬಿದರು. ನಟರಾದ ಶ್ರೀಮುರಳಿ, ಶಿವರಾಜ್ ಕುಮಾರ್ ಅವರು ವೇದಿಕೆ ಮೇಲೆ ಮಾತಿಗೆ ನಿಲ್ಲುತ್ತಿದ್ದಂತೆಯೇ ಕಾವೇರಿ ನೀರು ಕನ್ನಡಿಗರ ಹಕ್ಕು ಎನ್ನುವ ಘೋಷಣೆಗಳು ಸದ್ದು ಮಾಡಿದವು.

ಕಾವೇರಿಗಾಗಿ ಬೀದಿಗಿಳಿದ ಕಲಾವಿದರು!

ಕಾವೇರಿ ನೀರಿಗಾಗಿ ಶುಕ್ರವಾರ ಕನ್ನಡಪರ ಸಂಘಟನೆಗಳು ಕರೆ ಕೊಟ್ಟಿದ್ದ ಕರ್ನಾಟಕ ಬಂದ್ ಗೆ ಕನ್ನಡ ಚಿತ್ರರಂಗ ದೊಡ್ಡ ಮಟ್ಟದಲ್ಲಿ ಸಾಥ್ ನೀಡಿದೆ.

ಸ್ಯಾಂಡಲ್ ವುಡ್ ತಾರೆಗಳು ಪ್ರತಿಭಟನಾ ಸಭೆಯಲ್ಲಿ ಪಾಲ್ಗೊಂಡಿದ್ದು, ಕನ್ನಡಿಗರ ಕಾವೇರಿಗಾಗಿ ಕನ್ನಡಿಗರ ಹೋರಾಟ ಮತ್ತಷ್ಟು “ಕಾವೇರಿ”ದೆ. ಕನ್ನಡ ಸಿನಿಮಾ ರಂಗದ ನಟರಾದ ಶಿವರಾಜ್ ಕುಮಾರ್ ಪ್ರತಿಭಟನಾ ನೇತೃತ್ವ ವಹಿಸಿದ್ದರು.

ನಟರಾದ ಶ್ರೀನಾಥ್, ಶ್ರೀಮುರಳಿ, ವಿಜಯ ರಾಘವೇಂದ್ರ, ಉಪೇಂದ್ರ ದರ್ಶನ್, ಧ್ರುವ ಸರ್ಜಾ, ದುನಿಯಾ ವಿಜಯ್, ವಿನೋದ್ ಪ್ರಭಾಕರ್, ವಸಿಷ್ಠ ಸಿಂಹ, ರವಿಶಂಕರ್ , ಉಮಾಶ್ರೀ, ಭಾವನಾ, ರಘು ಮುಖರ್ಜಿ, ಅನು ಪ್ರಭಾಕರ್, ಶೃತಿ, ಶರಣ್, ಹಂಸಲೇಖ, ಗಿರಿಜಾ ಲೋಕೇಶ್, ಪ್ರಮೀಳಾ ಜೋಷಾಯ್, ಸುಂದರ್ ರಾಜ್, ಚೇಂಬರ್ ಅಧ್ಯಕ್ಷ ರಾದ ಎನ್.ಎಂ. ಸುರೇಶ್, ಪದಾಧಿಕಾರಿಗಳಿದ್ದರು.


ಮಾಜಿ ಅಧ್ಯಕ್ಷರಾದ ಚಿನ್ನೇಗೌಡ, ಭಾ.ಮ.ಹರೀಶ್,
ಶಿವಕುಮಾರ್, ಹೀಗೆ ನೂರಾರು ಸಂಖ್ಯೆಯಲ್ಲಿ ಸಿನಿಮಾ ತಾರೆಗಳು ಪಾಲ್ಗೊಳ್ಳುವ ಮೂಲಕ ಕಾವೇರಿ ಹೋರಾಟಕ್ಕೆ ಬೆಂಬಲ ಸೂಚಿಸಿದರು.

Categories
ಸಿನಿ ಸುದ್ದಿ

ಚಿತ್ರ ವಿಮರ್ಶೆ: ನೀರಸ ದಾರಿಯಲ್ಲಿ ಎಲ್ಲವೂ ಆಯಾಸ !

  • ವಿಜಯ್ ಭರಮಸಾಗರ

ರೇಟಿಂಗ್: 2/5

ಚಿತ್ರ: ಬಾನದಾರಿಯಲ್ಲಿ
ನಿರ್ಮಾಣ: ಶ್ರೀ ವಾರಿ ಟಾಕೀಸ್‍
ನಿರ್ದೇಶನ: ಪ್ರೀತಂ ಗುಬ್ಬಿ
ತಾರಾಗಣ: ಗಣೇಶ್‍, ರುಕ್ಮಿಣಿ ವಸಂತ್‍, ರೀಷ್ಮಾ ನಾಣಯ್ಯ, ರಂಗಾಯಣ ರಘು ಇತರರು.

ಮನಸು ಬದಲಾದರೆ ಮನುಷ್ಯನು ಬದಲಾಗ್ತಾನಂತೆ…’

ಈ ಡೈಲಾಗ್ ಬರುವ ಹೊತ್ತಿಗೆ ಅವರಿಬ್ಬರ ನಡುವೆ ಸಣ್ಣ ಮುನಿಸು, ಕೋಪ, ತಾಪ ಎಲ್ಲವೂ ಬಂದಿರುತ್ತೆ. ಹಾಗಂತ ಇದು ನಾಯಕ, ನಾಯಕಿ ನಡುವಿನ ಗುದ್ದಾಟವಲ್ಲ. ಬದಲಿಗೆ ನಾಯಕ ಹಾಗು ನಾಯಕಿ ತಂದೆ ಮಧ್ಯೆಯ ಕಿತ್ತಾಟ!

ಹೌದು, ಇದು ಪ್ರೇಮ ಕಥೆ ಅಲ್ಲ, ಇದೊಂಥರ ಪ್ರೀತಿಯ ಕಥೆ. ಹಾಗಂತ, ನೋಡುಗರಿಗೆ ಯಾವುದರ ಮೇಲೂ ಪ್ರೀತಿ ಹುಟ್ಟೋದಿಲ್ಲ ಬಿಡಿ. ‘ಬಾನ ದಾರಿಯಲ್ಲಿ’ ಶೀರ್ಷಿಕೆಯೇ ಇಲ್ಲಿ ಪಾಸಿಟಿವ್. ಆದರೆ, ಆ ದಾರಿಯುದ್ದಕ್ಕೂ ನೋಡುಗನಿಗೆ ಸಿಗೋದು ಕೇವಲ ನೀರಸ ಮತ್ತು ಆಯಾಸ. ಒಂದೊಳ್ಳೆಯ ಎಳೆ ಇದೆ. ಆದರೆ, ಮಜಬೂತಾಗಿ ತೋರಿಸುವ ಪ್ರಯತ್ನದಲ್ಲಿ ನಿರ್ದೇಶಕ ಪ್ರೀತಂ ಗುಬ್ಬಿ ಎಡವಿದ್ದಾರೆ. ಒಂದೇ ಮಾತಲ್ಲಿ ಹೇಳುವುದಾದರೆ, ನೋಡುಗರಿಗೆ ‘ಆ ದಾರಿಯಲಿ’ ನಿರಾಸೆ.

ಮೊದಲರ್ಧ ನಿಧಾನ. ದ್ವಿತಿಯಾರ್ಧ ಕೊಂಚ ಗೊಂದಲ. ಕ್ಲೈಮ್ಯಾಕ್ಸ್ ನಲ್ಲೇನಾದರೂ ಪವಾಡ ನಡೆಯುತ್ತಾ ಅದೂ ಇಲ್ಲ. ಒಂದೊಕ್ಕೊಂದು ಕನೆಕ್ಟಿವಿಟಿ ಇಲ್ಲ. ಸೂಕ್ಷ್ಮವಾಗಿ ಗಮನಿಸಿದರೆ, ಕೆಲವು ಕಡೆ ಕಂಟಿನ್ಯುಟಿಯೂ ಮಿಸ್. ಆರಂಭದಲ್ಲಿ ಸರಾಗವಾಗಿ ಸಾಗುವ ದಾರಿ, ಆ ಬಳಿಕ ಕಠಿಣ ಎನಿಸುವುದಕ್ಕೆ ಶುರುವಾಗುತ್ತೆ. ಕಥೆಗೆ ಇನ್ನಷ್ಟು ಒತ್ತು ನೀಡಬೇಕಿತ್ತು. ಚಿತ್ರಕಥೆಯಲ್ಲಿ ಬಿಗಿ ಹಿಡಿತ ಇರಬೇಕಿತ್ತು. ಇಲ್ಲಿ ಮಾತಷ್ಟೇ ಅಲ್ಲಲ್ಲಿ ನಗಿಸುತ್ತೆ. ಅದು ಬಿಟ್ಟರೆ, ಗಾಢ ಪ್ರಭಾವ ಏನಿಲ್ಲ.

ಏನದು ಕಥೆ?

ಅವನು ಕ್ರಿಕೆಟರ್. ಅವಳು ಈಜುಗಾರ್ತಿ ಜೊತೆಗೆ ಪರಿಸರ ಪ್ರೇಮಿ. ಮೊದಲ ನೋಟದಲ್ಲೇ ಅವನಿಗೆ ಅವಳ ಮೇಲೆ ಪ್ರೀತಿ ಅಂಕುರ. ಅವಳ ಹಿಂದಿಂದೆ ಸುತ್ತುತ್ತಾನೆ. ನೇರವಾಗಿ ಪ್ರೀತಿ ಬಗ್ಗೆ ಹೇಳುತ್ತಾನೆ. ಆದರೆ, ಅವಳಿಗೆ ಅಪ್ಪನೇ ಸರ್ವಸ್ವ. ಅಪ್ಪ ಒಪ್ಪಿದರೆ ಮದ್ವೆ ಅಂತಾಳೆ. ಅವನು ಅವಳ ಅಪ್ಪನನ್ನು ಒಪ್ಪಿಸಿ ಮದ್ವೆಗೆ ಅಣಿಯಾಗಬೇಕು ಅನ್ನುವಷ್ಟರಲ್ಲೇ ಘಟನೆಯೊಂದು ಸಂಭವಿಸುತ್ತೆ. ಆಮೇಲೆ ನಡೆಯೋದೆಲ್ಲ ಡ್ರಾಮ.

ಅವಳಿಗೆ ತಾನು ಇಷ್ಟಪಟ್ಟ ಹುಡುಗ, ಮತ್ತು ಬದುಕೇ ಆಗಿರುವ. ಅಪ್ಪ, ಇಬ್ಬರೂ ಒಂದಾಗಬೇಕು ಎಂಬ ಆಸೆ. ಅದು ನಿಜವಾಗುತ್ತೋ ಇಲ್ಲವೋ ಅನ್ನೋದು ಕಥೆ.

ಇಲ್ಲಿ ನಿಷ್ಕಲ್ಮಷ ಪ್ರೀತಿ. ಅಪ್ಪನ ಬಾಂಧವ್ಯ, ಪರಿಸರ ಪ್ರೀತಿ, ಬದುಕಿನ ಆಸೆ, ಕೋಪ, ತಾಪ ಮುನಿಸು, ಕನಸು ಎಲ್ಲವೂ ಇದೆ. ನಿರ್ದೇಶಕರು ಕಥೆಯಲ್ಲಿ ಕೊಂಚ ಹೊಸ ಆಲೋಚನೆ ಇಟ್ಟುಕೊಂಡಿದ್ದರೆ ತುಸು ನೋಡುಗರಿಗೆ ಇಷ್ಟವಾಗುತ್ತಿತ್ತೇನೋ?
ಆದರೂ ಒಂದಷ್ಟು ಎಮೋಷನ್ಸ್ ವಿಷಯದಲ್ಲಿ ಸೈ ಎನಿಸಿಕೊಂಡಿದ್ದಾರೆ ಎಂಬುದು ಸಮಾಧಾನ.

ಸ್ವಲ್ಪ ಮಟ್ಟಿಗೆ ಇಂದಿನ ಯೂತ್ಸ್ ಮನಸ್ಸಲ್ಲಿಟ್ಟುಕೊಂಡು ನಿರ್ದೇಶಕರು ಕಥೆ ಹೇಳಿದ್ದಾರಾದರೂ, ಚಿತ್ರಕಥೆ ಮತ್ತು ನಿರೂಪಣೆಯಲ್ಲಿ ಹೊಸತನಕ್ಕೆ ಒಗ್ಗಿಕೊಂಡಿಲ್ಲ.
ಸಾಕಷ್ಟು ಕಡೆ ಒಂದಷ್ಟು ಪ್ರಶ್ನೆಗಳೇ ಎದುರಾಗುತ್ತವೆ. ಅರ್ಥವಾಗದ ದೃಶ್ಯಗಳು ಎದುರಾಗಿ ಚಿತ್ರದ ವೇಗಕ್ಕೆ ಅಡ್ಡಿಯಾಗುತ್ತವೆ.

ಆ ದಾರಿಯಲ್ಲಿ ನೆನಪಲ್ಲುಳಿಯೋದು ಅಂದರೆ, ಭಾವುಕತೆಯಷ್ಟೆ. ಬಹುಶಃ ಅದೂ ಇಲ್ಲವಾಗಿದ್ದರೆ ಬಂದ ‘ದಾರಿ’ಗೆ ಸುಂಕವಿಲ್ಲ ಎಂದಾಗುತ್ತಿತ್ತು. ನೋಡುಗರಿಗೆ ತಕ್ಕಮಟ್ಟಿಗಾದರೂ ಮನರಂಜನೆ ಬೇಕಿತ್ತು. ಅಲ್ಲಿ ಬರುವ ಯಾವ ಹಾಡೂ ಕಾಡುವುದಿಲ್ಲ, ನೆನಪಲ್ಲಿ ಉಳಿಯುವುದೂ ಇಲ್ಲ. ಹಾಡೊಂದಕ್ಕೆ ಶಿಳ್ಳೆ, ಚಪ್ಪಾಳೆ ಸದ್ದು ಕೇಳುತ್ತಾದರೆ, ಅದು ಪುನೀತ್ ಹಾಡಿರುವ ‘ಬಾನ ದಾರಿಯಲ್ಲಿ ಸೂರ್ಯ ಜಾರಿ ಬಂದ’ ಹಾಡಿಗೆ ಮಾತ್ರ.

ಯಾರು ಹೇಗೆ?

ಗಣೇಶ್ ಎಂದಿನಂತೆ. ನಗಿಸುತ್ತ, ಅಳುತ್ತ, ಭಾವುಕತೆಗೆ ದೂಡುತ್ತಾರೆ. ಚಿತ್ರದುದ್ದಕ್ಕೂ ಲವಲವಿಕೆಯಲ್ಲೇ ಬ್ಯಾಟಿಂಗ್ ಮಾಡಿದ್ದಾರೆ. ರುಕ್ಮಿಣಿ ವಸಂತ್ ಸಿಕ್ಕ ಪಾತ್ರಕ್ಕೆ ಮೋಸ ಮಾಡಿಲ್ಲ, ರೀಷ್ಮಾ ಕೂಡ ನಟನೆಯಲ್ಲಿ ಹಿಂದೆ ಬಿದ್ದಿಲ್ಲ. ರಂಗಾಯಣ ರಘು ಒಳ್ಳೆಯ ಸ್ಕೋರ್ ಮಾಡಿದ್ದಾರೆ. ಗಣೇಶ್ ಜೊತೆಗಿನ ಕೆಮಿಸ್ಟ್ರಿ ಸಖತ್ ಆಗಿ ವರ್ಕೌಟ್ ಆಗಿದೆ.

ಅರ್ಜುನ್‍ ಜನ್ಯ ಸಂಗೀತದ ಯಾವ ಹಾಡೂ ಗುನುಗುವಂತಿಲ್ಲ. ಹಿನ್ನೆಲೆ ಸಂಗೀತದಲ್ಲೂ ಸ್ವಾದವಿಲ್ಲ. ಅಭಿಲಾಷ್‍ ಕಲ್ಲತ್ತಿ ಅವರ ಛಾಯಾಗ್ರಹಣ ಗಮನ ಸೆಳೆಯುತ್ತೆ.

ಕೊನೆಮಾತು: ಆಫ್ರಿಕಾ ಕಾಡು, ಅದರೊಳಗಿನ ಪ್ರಾಣಿಗಳನ್ನು ನೋಡದವರೊಮ್ಮೆ ಇಲ್ಲಿ ಅನಿಮಲ್ಸ್ ಡಾಕ್ಯುಮೆಂಟರಿ ಕಾಣಬಹುದು!!

Categories
ಸಿನಿ ಸುದ್ದಿ

ದಿಗಂತ್ ಜೊತೆ ನಿರೂಪ್ ಭಂಡಾರಿ: ಎಡಗೈಯೇ ಅಪಘಾತಕ್ಕೆ ಕಾರಣ ಸಿನಿಮಾಗೆ ಸ್ಪೆಷಲ್ ಎಂಟ್ರಿ

ದಿಗಂತ್​ ಮಂಚಾಲೆ ನಟನೆಯ ‘ಎಡಗೈಯೇ ಅಪಘಾತಕ್ಕೆ ಕಾರಣ’ ಸಿನಿಮಾ ವಿಭಿನ್ನವಾದ ಕಾನ್ಸೆಪ್ಟ್​ ಮೂಲಕ ಈಗಾಗಲೇ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಇತ್ತೀಚಿಗಷ್ಟೆ ಆಗಸ್ಟ್​ 13ರಂದು ‘ವಿಶ್ವ ಎಡಗೈ ದಿನ’ದ ದಿನ ಎಗಡೈ ಬಳಸುವವರಿಗೆ ಅನುಕೂಲ ಆಗುವ ರೀತಿಯಲ್ಲಿ ಹೊಸ ಬಗೆಯ ಹೆಲ್ಮೆಟ್​ ಕೂಡ ಲಾಂಚ್​ ಮಾಡಲಾಗಿದೆ. ವಿನೂತನ ಸಬ್ಜೆಕ್ಟ್ ಮೂಲಕ ಪ್ರೇಕ್ಷಕರನ್ನು ತನ್ನತ್ತ ಸೆಳೆಯುತ್ತಿರುವ ‘ಎಡಗೈ’ ತಂಡಕ್ಕೆ ಮತ್ತೋರ್ವ ಖ್ಯಾತ ನಟ ಎಂಟ್ರಿ ಕೊಟ್ಟಿದ್ದಾರೆ. ಅದು ಮತ್ಯಾರು ಅಲ್ಲ ‘ರಂಗಿತರಂಗ’ ಖ್ಯಾತಿಯ ನಟ ನಿರೂಪ್ ಭಂಡಾರಿ. ಮೊದಲ ಬಾರಿಗೆ ನಿರೂಪ್ ಮತ್ತು ದಿಗಂತ್ ಒಂದೇ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಸ್ಟಾರ್ ಕಲಾವಿದರು ಒಟ್ಟಿಗೆ ಸಿನಿಮಾ ಮಾಡುವುದು ತೀರ ಅಪರೂಪವಾಗಿದೆ. ಮಲ್ಟಿಸ್ಟಾರರ್ ಸಿನಿಮಾಗಳಿಗೆ ಖ್ಯಾತ ಕಲಾವಿದರನ್ನು ಸೇರಿಸಿ ಸಿನಿಮಾ ಮಾಡುವುದು ನಿರ್ಮಾಪಕರಿಗೂ ಸಹ ದೊಡ್ಡ ಸವಾಲಾಗಿದೆ. ಹೀಗಿರುವಾಗ ದಿಗಂತ್ ಸಿನಿಮಾದಲ್ಲಿ ನಿರೂಪ್ ಭಂಡಾರಿ ಕಾಣಿಸಿಕೊಂಡಿರುವುದು ವಿಶೇಷ. ಈ ಸಿನಿಮಾದಲ್ಲಿ ನಿರೂಪ್ ಅತಿಥಿ ಪಾತ್ರದಲ್ಲಿ ಮಿಂಚಿದ್ದಾರೆ. ಅಷ್ಟಕ್ಕೂ ಹೀರೋ ಆಗಿ ಅಬ್ಬರಿಸುತ್ತಿದ್ದ ನಿರೂಪ್ ಭಂಡಾರಿ, ದಿಗಂತ್ ಚಿತ್ರದಲ್ಲಿ ವಿಶೇಷ ಪಾತ್ರ ಮಾಡಲು ಕಾರಣ ಸಿನಿಮಾ ಕಥೆ ಮತ್ತು ಕಾನ್ಸೆಪ್ಟ್.

ಕಮರ್ಷಿಯಲ್ ಸಿನಿಮಾಗಳ ಮಧ್ಯೆ ಇಂತದೊಂದು ವಿಭಿನ್ನ ರೀತಿಯ ಕಾನ್ಸೆಪ್ಟ್ ಇರುವ ಚಿತ್ರದ ಕಥೆ ಕೇಳಿ ನಿರೂಪ್ ಇಂಪ್ರೆಸ್ ಆಗಿದ್ದಾರೆ. ಇನ್ನು ಯಂಗ್ ಅಂಡ್ ಎನರ್ಜಿಟಿಕ್ ಆಗಿರುವ ತಂಡ ನೋಡಿ ಈ ಸಿನಿಮಾದಲ್ಲಿ ತಾವು ಕೂಡ ಭಾಗಿ ಆದರೆ ಚೆನ್ನಾಗಿರುತ್ತೆ ಎಂದು
‘ಎಡಗೈ ಅಪಘಾತಕ್ಕೆ ಕಾರಣ’ಸಿನಿಮಾತಂಡದ ಜೊತೆ ಕೈಜೋಡಿಸಿದ್ದಾರೆ ನಿರೂಪ್.

‘ಎಡಗೈ ಅಪಘಾತಕ್ಕೆ ಕಾರಣ’ ಚಿತ್ರಕ್ಕೆ ಸಮರ್ಥ್ ಬಿ. ಕಡಕೊಳ್ ನಿರ್ದೇಶನ ಮಾಡುತ್ತಿದ್ದಾರೆ. ಇದು ಅವರ ಮೊದಲ ನಿರ್ದೇಶನದ ಚಿತ್ರ. ಅಂದಹಾಗೆ ಶೀರ್ಷಿಕೆಯೇ ಹೇಳುವಂತೆ ಇದು ಎಡಗೈ ಬಳಸುವವರ ಸಮಸ್ಯೆಗಳ ಸುತ್ತ ಸುತ್ತುವ ಸಿನಿಮಾವಾಗಿದೆ.‘ಹೈಫನ್ ಪಿಕ್ಚರ್ಸ್ ಬ್ಯಾನರ್’ಅಡಿಯಲ್ಲಿ ‘ಅಂಬಿ ನಿಂಗ್ ವಯಸ್ಸಾಯ್ತೋ’ ಸಿನಿಮಾ ಖ್ಯಾತಿಯ ನಿರ್ದೇಶಕ ಗುರುದತ್ ಗಾಣಿಗ ಮತ್ತು ನಿರ್ದೇಶಕ ಸಮರ್ಥ್ ಬಿ. ಕಡಕೊಳ್ ಜೊತೆಯಾಗಿ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ದಿಗಂತ್ ಮಂಚಾಲೆ ಅವರಿಗೆ ಜೋಡಿಯಾಗಿ ನಟಿ ಧನು ಹರ್ಷ ಅಭಿನಯಿಸಿದ್ದಾರೆ. ಇನ್ನು ಈ ಸಿನಿಮಾದಲ್ಲಿ ಖ್ಯಾತ ನಟಿಯರಾದ ರಾಧಿಕಾ ನಾರಾಯಣ್ ಮತ್ತು ನಿಧಿ ಸುಬ್ಬಯ್ಯ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

Categories
ಸಿನಿ ಸುದ್ದಿ

ಗರುಡ ಪುರಾಣಕ್ಕೆ ಅಶ್ವಿನಿ ಪುನೀತ್ ರಾಜ್‍ಕುಮಾರ್ ಸಾಥ್: ಟೀಸರ್ ರಿಲೀಸ್ ಆಯ್ತು

ಗರುಡ ಪುರಾಣ” ಚಿತ್ರದ ಟೀಸರ್ ಅನ್ನು ಅಶ್ವಿನಿ ಪುನೀತ್ ರಾಜಕುಮಾರ್ ಬಿಡುಗಡೆ ಮಾಡಿ ಶುಭ ಹಾರೈಸಿದ್ದಾರೆ. 27 ಫ್ರೇಮ್ ಕ್ರಿಯೇಷನ್ಸ್ ಬ್ಯಾನರ್ ನಲ್ಲಿ ಸಿಂಧು ಕೆ.ಎಂ ಮತ್ತು ಬಿ.ಎಲ್ ಯೋಗೇಶ್ ಕುಮಾರ್ ನಿರ್ಮಿಸುತ್ತಿರುವ. ಚಿತ್ರಕ್ಕೆ ಮಂಜುನಾಥ್ ಬಿ ನಾಗಬಾ ಕಥೆ, ಚಿತ್ರಕಥೆ ಬರೆದು ಸಂಕಲನ ಮಾಡಿ ನಿರ್ದೇಶಿಸಿದ್ದಾರೆ. ಟೀಸರ್ ರಿಲೀಸ್ ವೇಳೆ ಮಾಜಿ ಶಾಸಕ ರಾಜು ಗೌಡ, ತಿಪ್ಪರಾಜು, ಡಿ.ಎಸ್.ಮ್ಯಾಕ್ಸ್ ನ ದಯಾನಂದ್, ನಿವೃತ್ತ ಪೊಲೀಸ್ ಅಧಿಕಾರಿ ಶ್ರೀನಿವಾಸ್ ಕೂಚ್ಚಣ್ಣ, ನಟ ಮಣಿಕಂಠ ಮುಂತಾದವರು ಹಾರೈಸಿದ್ದಾರೆ.

ನಾನು “ಕಾಂತಾರ” ಸೇರಿದಂತೆ ಹದಿನೆಂಟು ಚಿತ್ರಗಳಿಗೆ ಆನ್ ಲೈನ್ ಎಡಿಟರ್ ಆಗಿ ಕಾರ್ಯ ನಿರ್ವಹಿಸಿದ್ದೇನೆ. “ಕಾಂತಾರ” ನನಗೆ ಹೆಸರು ತಂದುಕೊಟ್ಟ ಸಿನಿಮಾ. ಅವಕಾಶ ನೀಡಿದ ರಿಷಬ್ ಶೆಟ್ಟಿ ಅವರಿಗೆ ಧನ್ಯವಾದ ತಿಳಿಸುತ್ತೇನೆ. ಇನ್ನು “ಗರುಡ ಪುರಾಣ” ಚಿತ್ರದ ಕುರಿತು ಹೇಳಬೇಕಾದರೆ, ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ. ತಪ್ಪು ಮಾಡಿದವರು ಶಿಕ್ಷೆ ಅನುಭವಿಸಲೇ ಬೇಕು ಎಂಬ ಅಂಶ ನಮ್ಮ ಸಿನಿಮಾದಲ್ಲಿರುವುದರಿಂದ “ಗರುಡ ಪುರಾಣ” ಎಂದು ಹೆಸರಿಟ್ಟಿದ್ದೇವೆ‌.

ಮೂರು ಆಯಾಮಗಳಲ್ಲಿ ಚಿತ್ರದ ಕಥೆ ಸಾಗುತ್ತದೆ. ಚಿತ್ರೀಕರಣ ಮುಕ್ತಾಯವಾಗಿ, ಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ಟೀಸರ್ ಬಿಡುಗಡೆ ಮಾಡಿಕೊಟ್ಟ ಅಶ್ವಿನಿ ಪುನೀತ್ ರಾಜಕುಮಾರ್ ಅವರಿಗೆ ಹಾಗೂ ನಮಗೆ ಮೊದಲಿನಿಂದಲೂ ಪ್ರೋತ್ಸಾಹ ನೀಡುತ್ತಿರುವ ರಾಜು ಗೌಡ ಹಾಗೂ ತಿಪ್ಪರಾಜು ಅವರಿಗೆ ಧನ್ಯವಾದ ಎಂದರು ಚಿತ್ರದ ನಾಯಕ ಹಾಗೂ ನಿರ್ದೇಶಕ ಮಂಜುನಾಥ್ ನಾಗಬಾ.

ಚಿತ್ರದ ನಿರ್ಮಾಪಕರಾದ ಸಿಂಧು ಕೆ.ಎಂ ಹಾಗೂ ಬಿ.ಎಲ್ ಯೋಗೇಶ್ ಕುಮಾರ್ ಚಿತ್ರ ಉತ್ತಮವಾಗಿ ಮೂಡಿಬರಲು ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದ ತಿಳಿಸಿದರು.

ನಾಯಕಿ ದಿಶಾ ಶೆಟ್ಟಿ , “ಭಜರಂಗಿ” ಖ್ಯಾತಿಯ ಚೆಲುವರಾಜು, ಸಂತೋಷ್ ಕರ್ಕಿ, ಕೆಂಚಣ್ಣ, ರಾಜಕುಮಾರ್, ಮಹೇಂದ್ರ ಗೌಡ ಮುಂತಾದವರು ತಮ್ಮ ಪಾತ್ರದ ಬಗ್ಗೆ ಮಾತನಾಡಿದರು.

ಸಂಗೀತ ನಿರ್ದೇಶಕ ರಾಕೇಶ್ ಆಚಾರ್ಯ ಹಾಡುಗಳ ಬಗ್ಗೆ, ಸುನೀಲ್ ನರಸಿಂಹಮೂರ್ತಿ ಛಾಯಾಗ್ರಹಣದ ಕುರಿತು ಮಾಹಿತಿ ನೀಡಿದರು.

Categories
ಸಿನಿ ಸುದ್ದಿ

ಅನಿರುದ್ಧ ಅಭಿಮಾನಿಗಳ ಅಭಿಮಾನ: ರಾಷ್ಟ ಪ್ರಶಸ್ತಿ ವಿಜೇತರಿಗೆ ಸನ್ಮಾನ

“ಬಾಳೇ ಬಂಗಾರ” ಸಾಕ್ಷ್ಯ ಚಿತ್ರದ ನಿರ್ದೇಶನಕ್ಕಾಗಿ ಅನಿರುದ್ಧ್ ಅವರಿಗೆ ರಾಷ್ಟಪ್ರಶಸ್ತಿ ಮನ್ನಣೆ ದೊರೆತಿದೆ. ಈ ಸಂಭ್ರಮವನ್ನು ಅನಿರುದ್ಧ್ ಅವರ ಅಭಿಮಾನಿಗಳು ಸಂತೋಷದಿಂದ ಸಂಭ್ರಮಿಸಿದ್ದಾರೆ.

ಇತ್ತೀಚೆಗೆ ನಗರದ ಖಾಸಗಿ ಹೋಟೆಲ್ ನಲ್ಲಿ ಅನಿರುದ್ಧ್ ಜತಕರ ಅಭಿಮಾನಿ ಬಳಗದ ನಿಶಾದ್ (ಹೈದರಾಬಾದ್ ), ಗಾಯತ್ರಿ( ತಮಿಳುನಾಡು)

, ಸೋನಿ(ಸಿಂಗಾಪುರ), ಪುಷ್ಪ(ಬೆಂಗಳೂರು) ಸೇರಿದಂತೆ ಅನೇಕ ಅಭಿಮಾನಿಗಳು ಅನಿರುದ್ದ್ ಅವರಿಗೆ ಆತ್ಮೀಯವಾಗು ಅಭಿನಂದಿಸಿದ್ದಾರೆ.

ಸಮಾರಂಭವನ್ನು ಆಯೋಜಿಸಿ,‌ ನ್ಯಾಚುರಲ್ ಸ್ಟಾರ್ ಎಂಬ ಬಿರುದು ನೀಡಿದ್ದಾರೆ. ಹಿರಿಯ ನಟ ಬಿ.ಎಂ.ವೆಂಕಟೇಶ್ ಹಾಗೂ ನಿರ್ದೇಶಕ ಎಂ.ಆನಂದರಾಜ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಅನಿರುದ್ಧ್ ಜತಕರ್ ಕುಟುಂಬದ ಸದಸ್ಯರು ಈ ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಆತ್ಮೀಯ ಸನ್ಮಾನ ಸ್ವೀಕರಿಸಿ ಮಾತನಾಡಿದ ಅನಿರುದ್ಧ್, ಅಭಿಮಾನಿಗಳ ಈ ಪ್ರೀತಿಗೆ ಮನತುಂಬಿ ಬಂದಿದೆ. ಅವರಿಗೆ ನನ್ನ ಧನ್ಯವಾದ ಎಂದರು.

error: Content is protected !!