ಮರಿ ಟೈಗರ್ ವಿನೋದ್ ಪ್ರಭಾಕರ್ ನಟನೆಯ ಮಾದೇವ ಸಿನಿಮಾಗೆ ಚಿತ್ರೀಕರಣ ಪೂರ್ಣಗೊಂಡಿದೆ. ನವೀನ್ ರೆಡ್ಡಿ ಮಾದೇವ ಸಿನಿಮಾದ ನಿರ್ದೇಶಕ. ಒಂದಷ್ಟು ಪೋಸ್ಟರ್ ಮೂಲಕ ನಿರೀಕ್ಷೆ ಹೆಚ್ಚಿಸಿರುವ ಮಾದೇವ ಸಿನಿಮಾಗೆ ಕನಕಪುರ, ಚನ್ನಪಟ್ಟಣ, ಶಿವಮೊಗ್ಗ, ರಾಮೋಜಿ ಫಿಲ್ಮಂಸಿಟಿ, ಹೆಸರಘಟ್ಟ ಭಾಗಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.

ನೈಜ ಘಟನೆಗಳಿಂದ ಸ್ಪೂರ್ತಿ ಪಡೆದ ಈ ಸಿನಿಮಾದ ಕಥೆಯು 1965, 1980 ಮತ್ತು 1999ರ ಕಾಲಘಟ್ಟದಲ್ಲಿ ನಡೆಯಲಿದೆ. ಹಿಂದೆಂದೂ ಕಂಡಿರದಂತಹ ಲುಕ್‌ನಲ್ಲಿ ವಿನೋದ್ ಪ್ರಭಾಕರ್ ಕಾಣಿಸಿಕೊಳ್ಳಲಿದ್ದಾರಂತೆ. ಖಳನಾಯಕನಾಗಿ ಶ್ರೀನಗರಕಿಟ್ಟಿ, ಶ್ರುತಿ ಮತ್ತು ಅಚ್ಯುತ್ ಕುಮಾರ್, ಕಾಕ್ರೋಚ್ ಸುಧಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
‘ರಾಬರ್ಟ್’ ಸಿನಿಮಾದಲ್ಲಿ ರಾಘವ್ ಮತ್ತು ತನು ಪಾತ್ರಗಳ ಮೂಲಕ ಪ್ರೇಕ್ಷಕರಿಗೆ ಸಖತ್ ಇಷ್ಟವಾಗಿದ್ದ ವಿನೋದ್ ಪ್ರಭಾಕರ್ ಮತ್ತು ಸೋನಲ್ ಮೊಂಥೆರೋ ‘ಮಾದೇವ’ ಚಿತ್ರದಲ್ಲೂ ಜೋಡಿಯಾಗಿ ಅಭಿನಯಿಸಿದ್ದಾರೆ.

ಬಾಹುಬಲಿ, ಆರ್‌ಆರ್‌ಆರ್ ಸಿನಿಮಾಗಳ ಛಾಯಾಗ್ರಾಹಕ ಸೆಂಥಿಲ್ ಕುಮಾರ್ ಬಳಿ ಸಹಾಯಕರಾಗಿ ಕೆಲಸ ಮಾಡುತ್ತಿದ್ದ ಬಾಲಕೃಷ್ಣ ತೋಟ ‘ಮಾದೇವ’ ಚಿತ್ರಕ್ಕೆ ಛಾಯಾಗ್ರಾಹಕರಾಗಿ ಕೆಲಸ ಮಾಡುತ್ತಿದ್ದಾರೆ. ರಾಧಾಕೃಷ್ಣ ಬ್ಯಾನರ್ ನಡಿ ಆರ್ ಆರ್ ಕೇಶವ ದೇವಸಂದ್ರ ಚಿತ್ರಕ್ಕೆ ಹಣ ಹಾಕಿದ್ದಾರೆ. ಸದ್ಯ ಶೂಟಿಂಗ್ ಮುಗಿಸಿರುವ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದೆ.