” ಮುದ್ದಿನ ಅಳಿಯ” ಚಿತ್ರದ ನಾಯಕ ಶಶಿಕುಮಾರ್ ಅವರು ಬಿಗ ಬಾಸ್ ಖ್ಯಾತಿಯ ಪ್ರಥಮ್ ನಿರ್ದೇಶಿಸಿ, ನಾಯಕನಾಗಿ ನಟಿಸಿರುವ “ಕರ್ನಾಟಕದ ಅಳಿಯ” ಚಿತ್ರದ “ಮನಸಿಗೆ ಹಿಡಿಸಿದನು ಇವನು” ಹಾಡನ್ನು ಬಿಡುಗಡೆ ಮಾಡಿದರು. ಕೆ.ರಾಮನಾರಾಯಣ್ ಈ ಹಾಡನ್ನು ಬರೆದಿದ್ದು, ಪ್ರದ್ಯೋತನ್ ಸಂಗೀತ ನೀಡಿದ್ದಾರೆ. ಅದಿತಿ ಸಾಗರ್ ಹಾಡಿದ್ದಾರೆ.
ನಮ್ಮಲ್ಲಿ “ಮುದ್ದಿನ ಅಳಿಯ”, ” ಗಡಿಬಿಡಿ ಅಳಿಯ” ಹೀಗೆ ಸಾಕಷ್ಟು ಜನ ಅಳಿಯಂದರಿದ್ದೀವಿ. ಈಗ ಪ್ರಥಮ್ “ಕರ್ನಾಟಕದ ಅಳಿಯ” ಆಗಿದ್ದಾರೆ. ಹಿರಿಯ ನಟ ದ್ವಾರಕೀಶ್ ಅವರು ಹಾಡು ಬಿಡುಗಡೆಗೆ ಬರುತ್ತಾರೆ ಅಂದಿದ್ದರು. ಆದರೆ ಅನಾರೋಗ್ಯದ ಕಾರಣದಿಂದಾಗಿ ಅವರು ಬಂದಿಲ್ಲ. ಆದರೆ ವಿಡಿಯೋ ಮೂಲಕ ಹಾರೈಸಿದ್ದಾರೆ. ಅವರು ಹೇಳಿರುವ ಪ್ರೀತಿಯ ಮಾತುಗಳಿಗೆ ನಾನು ಆಭಾರಿ. ಸದ್ಯದಲ್ಲೇ ಅವರನ್ನು ಭೇಟಿಯಾಗುತ್ತೇನೆ. ಇಂದು ಬಿಡುಗಡೆಯಾಗಿರುವ ಈ ಹಾಡು ಬಹಳ ಇಂಪಾಗಿದೆ. ಚಿತ್ರ ಕೂಡ ಎಲ್ಲರ ಮನ ಗೆಲ್ಲಲಿ ಎಂದು ನಟ ಶಶಿಕುಮಾರ್ ಹಾರೈಸಿದರು.
“ಕರ್ನಾಟಕದ ಅಳಿಯ” ಚಿತ್ರ ತೆರೆಗೆ ಬರಲು ಸಿದ್ದವಾಗಿದೆ ಎಂದು ಮಾತು ಆರಂಭಿಸಿದ ಪ್ರಥಮ್, ಇಂದು ಹಾಡು ಬಿಡುಗಡೆಯಾಗಿದೆ. ವಿದೇಶದಲ್ಲಿ ಈ ಹಾಡಿನ ಚಿತ್ರೀಕರಣ ನಡೆದಿದೆ. ಅಣಜಿ ನಾಗರಾಜ್ ಅವರ ಛಾಯಾಗ್ರಹಣ ಹಾಡಿನ ಅಂದವನ್ನು ಮತ್ತಷ್ಟು ಹೆಚ್ಚಿಸಿದೆ. ಪ್ರದ್ಯೋತನ್ ಸಂಗೀತ ನಿರ್ದೇಶನದಲ್ಲಿ ರಾಮನಾರಾಯಣ್ ಬರೆದಿರುವ ಈ ಹಾಡನ್ನು ಅರುಣ್ ಸಾಗರ್ ಪುತ್ರಿ ಅದಿತಿ ಸಾಗರ್ ಸುಶ್ರಾವ್ಯವಾಗಿ ಹಾಡಿದ್ದಾರೆ. ಇದೊಂದು ವಾಮಾಚಾರದ ಕುರಿತಾದ ಸಿನಿಮಾವಾಗಿದ್ದು, ಮೂವತ್ತು ವರ್ಷಗಳ ಹಿಂದೆ “ತುಳಸಿದಳ” ಎಂಬ ಸಿನಿಮಾ ಬಂದಿತ್ತು.
ಆನಂತರ ದೀರ್ಘವಾಗಿ ವಾಮಾಚಾರದ ಕುರಿತು ಬಂದಿರುವ ಸಿನಿಮಾ ಇದೇ ಇರಬಹುದು. ನಾನು ನಿರ್ದೇಶನದೊಂದಿಗೆ ನಾಯಕನಾಗೂ ನಟಿಸಿದ್ದೇನೆ. ರಾಘವೇಂದ್ರ ರಾಜಕುಮಾರ್ ಅವರು ನನ್ನ ತಂದೆ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಅಕ್ಷಿತ ಬೋಪಯ್ಯ, ಜ್ಯೋತಿ, ಸ್ಪರ್ಶ ರೇಖಾ, ಓಂಪ್ರಕಾಶ್ ರಾವ್, ರಾಮಕೃಷ್ಣ, ಕೋಟೆ ಪ್ರಭಾಕರ್, ಶ್ರೀಧರ್, ವಿ.ಮನೋಹರ್, ರಮೇಶ್ ಭಟ್ ಮುಂತಾದವರು ತಾರಾಬಳಗದಲ್ಲಿದ್ದಾರೆ ಎಂದು ತಿಳಿಸಿದರು.
ನಾಯಕಿ ಜ್ಯೋತಿ, ನಟ ಕೋಟೆ ಪ್ರಭಾಕರ್, ಹಾಡು ಬರೆದಿರುವ ರಾಮನಾರಾಯಣ್ ಹಾಗೂ ಛಾಯಾಗ್ರಾಹಕ ಅಣಜಿ ನಾಗರಾಜ್ ಮುಂತಾದವರು ಚಿತ್ರದ ಕುರಿತು ಮಾಹಿತಿ ನೀಡಿದರು. ಅರುಣ್ ಸಾಗರ್ ಚಿತ್ರಕ್ಕೆ ಶುಭ ಹಾರೈಸಿದರು.