Categories
ಸಿನಿ ಸುದ್ದಿ

ಮನದ ಕಡಲಿಗೆ ರಾಕಿಭಾಯ್ ಹಾರೈಕೆ: ಟ್ರೇಲರ್ ರಿಲೀಸ್ ಮಾಡಿದ ಯಶ್

ಇ.ಕೆ. ಎಂಟರ್ ಟೈನರ್ಸ್ ಲಾಂಛನದಲ್ಲಿ ಈ.ಕೃಷ್ಣಪ್ಪ ಅವರು ನಿರ್ಮಿಸಿ, ಯೋಗರಾಜ್ ಭಟ್ ನಿರ್ದೇಶಿಸಿದ್ದ ಯಶಸ್ವಿ “ಮುಂಗಾರು ಮಳೆ” ಚಿತ್ರದ ನಂತರ ಇದೇ ಕಾಂಬಿನೇಷನ್ ನಲ್ಲಿ ಮೂಡಿಬಂದಿರುವ ಚಿತ್ರ “ಮನದ ಕಡಲು”.

ಇತ್ತೀಚೆಗೆ ಬಹು ನಿರೀಕ್ಷಿತ ಈ ಚಿತ್ರದ ಟ್ರೇಲರ್ ಅನ್ನು ರಾಕಿಂಗ್ ಸ್ಟಾರ್ ಯಶ್ ಬಿಡುಗಡೆ ಮಾಡಿದರು. ಕಳೆದ ನಾಲ್ಕು ವರ್ಷಗಳಿಂದ ಯಶ್ ಅವರು ಯಾವುದೇ ಸಿನಿಮಾ ಸಮಾರಂಭಗಳಲ್ಲಿ ಪಾಲ್ಗೊಂಡಿರಲಿಲ್ಲ‌. ಬಹಳ ದಿನಗಳ ನಂತರ ಯಶ್ ಅವರು ಪಾಲ್ಗೊಂಡಿದ್ದ ಸಿನಿಮಾ ಸಮಾರಂಭವಿದು. ಲುಲು ಮಾಲ್ ನ ಹೊರಂಗಣದಲ್ಲಿ ನಡೆದ “ಮನದ ಕಡಲು” ಟ್ರೇಲರ್ ಸಮಾರಂಭಕ್ಕೆ ಯಶ್ ಅವರು ಬರುವುದನ್ನು ತಿಳಿದ ಅಭಿಮಾನಿಗಳು ಮನೆಮಂದಿ ಸಹಿತ ಮಧ್ಯಾಹ್ನದಿಂದಲೇ ಮಾಲ್ ಬಳಿ‌ ಜಮಾಯಿಸಿದ್ದರು. ಕಣ್ಣು ಹಾಯಿಸಿದಷ್ಟು “ಜನರ ಕಡಲು” ಅಲ್ಲಿತ್ತು‌. ವರ್ಣರಂಜಿತ ಸಮಾರಂಭದಲ್ಲಿ ಟ್ರೇಲರ್ ಬಿಡುಗಡೆ ಮಾಡಿದ ಯಶ್, ನಂತರ ತಮ್ಮ ಮಾತುಗಳ ಮೂಲಕ ಚಿತ್ರತಂಡಕ್ಕೆ ಹಾರೈಸಿದರು

ನಾನು ಈ ಸಮಾರಂಭಕ್ಕೆ ಬರಲು ಮೊದಲ ಕಾರಣ‌ ನಿರ್ಮಾಪಕ ಈ ಕೃಷ್ಣಪ್ಪ ಅವರು ಎಂದು ಮಾತನಾಡಿದ ಯಶ್, ಕೃಷ್ಣಪ್ಪ ಅವರು ನನಗೆ “ಮೊಗ್ಗಿನ ಮನಸ್ಸು” ಚಿತ್ರದಲ್ಲಿ ನಟಿಸಲು ಅವಕಾಶ ನೀಡದೆ ಇದ್ದಿದ್ದರೆ ನಾನು ಇಂದು ನಾಯಕನಾಗುತ್ತಿರಲ್ಲಿಲ್ಲ. ನನ್ನ ಮೊದಲ ಚಿತ್ರದ ನಿರ್ಮಾಪಕರು ಅವರು. ನಿರ್ದೇಶಕ ಯೋಗರಾಜ್ ಭಟ್, ಸಂಗೀತ ನಿರ್ದೇಶಕ ವಿ.ಹರಿಕೃಷ್ಣ, ಸಹ ನಿರ್ಮಾಪಕ ಗಂಗಾಧರ್ ಹೀಗೆ ಇಲ್ಲಿರುವ ಬಹುತೇಕರು ನನ್ನ ಬೆಳವಣಿಗೆಗೆ ಶ್ರಮ ಪಟ್ಟಿದ್ದಾರೆ. “ಮನದ ಕಡಲು” ಟ್ರೇಲರ್ ಚೆನ್ನಾಗಿದೆ. ಎಲ್ಲರೂ ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಿ. ಕನ್ನಡದಲ್ಲಿ ಹೊಸ ಪ್ರತಿಭೆಗಳು ಬರಬೇಕು. ನಾವು ಯಾರಿಗೂ ಕಡಿಮೆ ಇಲ್ಲದಂತೆ ಬೆಳೆಯಬೇಕು. ಒಳ್ಳೆಯ ಚಿತ್ರಗಳನ್ನು ಕನ್ನಡಿಗರು ಎಂದಿಗೂ ಕೈ ಬಿಡುವುದಿಲ್ಲ ಎಂದರು.

ಕಳೆದ‌ ನಾಲ್ಕು ವರ್ಷಗಳಿಂದ ಯಾವುದೇ ಸಿನಿಮಾ ಸಮಾರಂಭಕ್ಕೆ ಹೋಗದ ಯಶ್ ಅವರು ನಮ್ಮ ಸಮಾರಂಭಕ್ಕೆ ಬಂದು ಚಿತ್ರದ ಟ್ರೇಲರ್ ಬಿಡುಗಡೆ ಮಾಡಿಕೊಟ್ಟಿದ್ದು ಬಹಳ ಖುಷಿಯಾಗಿದೆ. ಅವರಿಗೆ ಧನ್ಯವಾದ ಎಂದರು ನಿರ್ಮಾಪಕ ಈ ಕೃಷ್ಣಪ್ಪ.

ಯಶ್ ಅವರ ಸ್ವಾಗತಕ್ಕೆ ವಿಶೇಷ ವಿಡಿಯೋ ತುಣುಕು ಸಿದ್ದಪಡಿಸಿದ್ದ ನಿರ್ದೇಶಕ ಯೋಗರಾಜ್ ಭಟ್ ಅವರು ವೇದಿಕೆಯ ಮೇಲೂ ತಮ್ಮ ಪ್ರೀತಿ‌ ತುಂಬಿದ ಮಾತುಗಳಿಂದ ಯಶ್ ಅವರನ್ನು ಆತ್ಮೀಯವಾಗಿ‌ ಸ್ವಾಗತಿಸಿ, ಟ್ರೇಲರ್ ಬಿಡುಗಡೆ ಮಾಡಿಕೊಟ್ಟಿದ್ದಕ್ಕೆ ಧನ್ಯವಾದ ತಿಳಿಸಿದರು. “ಮನದ ಕಡಲು” ಈ ತಿಂಗಳ 28 ರಿಂದ “ಜನರ ಕಡಲಾ”ಗಲಿದೆ. ಎಲ್ಲರೂ ನಮ್ಮ ಚಿತ್ರ ನೋಡಿ. ಪ್ರೋತ್ಸಾಹ ನೀಡಿ ಅಂತಲೂ ಯೋಗರಾಜ್ ಭಟ್ ಹೇಳಿದರು.

ನಾಯಕ ಸುಮುಖ, ನಾಯಕಿಯರಾದ ರಾಶಿಕಾ ಶೆಟ್ಟಿ, ಅಂಜಲಿ ಅನೀಶ್‌,‌ ಸಹ ನಿರ್ಮಾಪಕ ಜಿ.ಗಂಗಾಧರ್, ಕಾರ್ಯಕಾರಿ ನಿರ್ಮಾಪಕ ಪ್ರತಾಪ್, ಸಂಗೀತ ನಿರ್ದೇಶಕ ವಿ.ಹರಿಕೃಷ್ಣ, ನೃತ್ಯ ನಿರ್ದೇಶಕ ಮುರಳಿ ಮಾಸ್ಟರ್ ಹಾಗೂ ಛಾಯಾಗ್ರಾಹಕ ಸಂತೋಷ್ ರೈ ಪಾತಾಜೆ ಮುಂತಾದ ಚಿತ್ರತಂಡದ ಸದಸ್ಯರು “ಮನದ ಕಡಲಿ” ಬಗ್ಗೆ ಮಾತನಾಡಿ, ಯಶ್ ಅವರಿಗೆ ವಿಶೇಷ ಧನ್ಯವಾದ ಹೇಳಿದರು.

Categories
ಸಿನಿ ಸುದ್ದಿ

ಕರಳೆ ಎಂಬ ನೈಜತೆಯ ಭಿನ್ನ ಮಹಿಳಾ ಚಿತ್ರ: ರಿಲೀಸ್ ಆಯ್ತು ಫಸ್ಟ್ ಲುಕ್ ಪೋಸ್ಟರ್

ಈ ಹಿಂದೆ ಕಲಿವೀರ, ಕನ್ನಡದೇಶದೊಳ್ ಚಿತ್ರ ಮಾಡಿದ್ದ ನಿರ್ದೇಶಕ ಅವಿರಾಮ್ ಕಂಠೀರವ ಮತೊಮ್ಮೆ ವಿಭಿನ್ನ ಕಥಾ ಹಂದರ ಹೊಂದಿರುವ “ಕರಳೆ” ಎಂಬ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಇದು ನೈಜ ಘಟನೆ ಆಧಾರಿತ ಚಿತ್ರ, ಈಗಾಗಲೇ ಎರಡು ಹಂತದ ಚಿತ್ರೀಕರಣ ಪೂರ್ಣಗೊಳಿಸಿರುವ ಚಿತ್ರತಂಡ ಮೂರನೇ ಹಂತದ ಚಿತ್ರೀಕರಣಕ್ಕೆ ಸಜ್ಜಾಗಿದೆ.

ಇದು ಮಹಿಳಾ ಪ್ರಧಾನ ಚಿತ್ರವಾಗಿದ್ದು ಇತ್ತೀಚೆಗೆ ಚಿತ್ರದ ಮೊದಲ ಪೋಸ್ಟರ್ ಬಿಡುಗಡೆ ಗೊಳಿಸಿದೆ. ಪೋಸ್ಟರ್ ಸದ್ಯ ಮೆಚ್ಚುಗೆ ಗಳಿಸಿದೆ, ಚಿತ್ರದಲ್ಲಿ ಸಮಾಜದ ವಾಸ್ತವ ಅಂಶಗಳನ್ನೇ ಇಲ್ಲಿ ಚಿತ್ರೀಕರಿಸಲಾಗುತ್ತಿದೆ. ಎಮೋಷನಲ್, ರಾ, ಮನಕಲಕುವ ದೃಶ್ಯಗಳು ಚಿತ್ರದಲ್ಲಿ ಇರಲಿವೆ ಎಂದು ನಿರ್ದೇಶಕರ ಮಾತು. ಈಗಾಗಲೇ ಚಿಂತಾಮಣಿ, ಮದ್ದೂರು, ಹುಲಿರಾಯನದುರ್ಗ ಸೇರಿ ಹಲವು ಕಡೆ ಶೂಟಿಂಗ್ ನಡೆಸಲಾಗಿದೆ ಎಂದು ಮಾಹಿತಿ ನೀಡಿದರು.


ಕನ್ನಡ, ಚೈನೀಸ್ ಭಾಷೆಯಲ್ಲಿ ಸಿನಿಮಾ ಭಾರತ ಹಾಗೂ ಚೀನಾ ದೇಶಕ್ಕೆ ಸಾಮ್ಯತೆ ಹೊಂದಿರುವ ಕಥೆ ಇದಾಗಿದ್ದು, ಹೀಗಾಗಿ ಈ ಚಿತ್ರವನ್ನು ಕನ್ನಡ ಹಾಗೂ ಚೈನೀಸ್ ಭಾಷೆಯಲ್ಲಿ ತೆರೆಗೆ ತರಲು ನಿರ್ದೇಶಕ ಅವಿರಾಮ್ ಕಂಠೀರವ ಸಿದ್ಧತೆ ನೆಡೆಸುತ್ತಿದ್ದಾರೆ, ಎರಡು ದೇಶಗಳಲ್ಲಿ ನೆಡೆಯುವ ಘಟನೆಗಳಿಗೆ ಸಾಮ್ಯತೆ ಇರುವ ಕಾರಣ ಕನ್ನಡ ಚೈನೀಸ್ ಭಾಷೆಯಲ್ಲಿ ಸಿನಿಮಾ ನಿರ್ಮಿಸುತ್ತಿದ್ದೇವೆ,

ಕನ್ನಡ ಜೊತೆಗೆ ನೆರೆ ರಾಷ್ಟ್ರ ಚೈನಾದ ಚೈನೀಸ್ ಭಾಷೆಯಲ್ಲಿ ತಯಾರಾಗುತ್ತಿರುವ ಮೊದಲ ಭಾರತದ ಸಿನಿಮಾ ಎಂಬ ಹೆಗ್ಗಳಿಕೆ “ಕರಳೆ” ಚಿತ್ರಕ್ಕಿದೆ. ಡಾರ್ಕ್ ಶೇಡ್ ನಲ್ಲಿ ಮೇಕಿಂಗ್ ಮಾಡಲಾಗುತ್ತಿದೆ. ಈಗಾಗಲೇ 52 ದಿನಗಳ ಚಿತ್ರೀಕರಣ ಪೂರ್ಣಗೊಳಿಸಲಾಗಿದೆ, ಇನ್ನು 20 ದಿನಗಳ ಶೂಟಿಂಗ್ ಬಾಕಿಯಿದೆ, ಚಿತ್ರೀಕರಣ ಪೂರ್ಣಗೊಳಿಸಿ ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಮುಂದಕ್ಕೆ ನೀಡುತ್ತೇವೆ ಎಂದು ನಿರ್ದೇಶಕ ಅವಿರಾಮ್ ಹೇಳುತ್ತಾರೆ.

Categories
ಸಿನಿ ಸುದ್ದಿ

ಉಪ್ಪಿ ಅಣ್ಣನ ಮಗ ಈಗ ಜರ್ನಲಿಸ್ಟ್: ಹೊಸ ಸ್ಪಾರ್ಕ್ ಗೆ ರೆಡಿ

ನಿರ್ದೇಶನದ ಅಖಾಡಕ್ಕೆ ಜೇಮ್ಸ್ ಕೋ-ಡೈರೆಕ್ಟರ್…ಮಹಾಂತೇಶ್ ಹಂದ್ರಾಳ್ ಜೊತೆ ನಿರಂಜನ್ ಸುಧೀಂದ್ರ ಹೊಸ ಸಿನಿಮಾ

ಸ್ಯಾಂಡಲ್‌ವುಡ್‌ನ ಭರವಸೆಯ ನಾಯಕ ನಟರಾಗುವ ನಿರೀಕ್ಷೆ ಹುಟ್ಟಿಸಿರುವ ಉಪ್ಪಿ ಅವರ ಸಹೋದರನ ಪುತ್ರ ನಿರಂಜನ್‌ ಸುಧೀಂದ್ರ ಹೊಸ ಸಿನಿಮಾ ಸ್ಪಾರ್ಕ್.
ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ನಲ್ಲಿರುವ ಶ್ರೀ ಪ್ರಸನ್ನ ವೀರಾಂಜನೇಯ ಸ್ವಾಮಿ ದೇಗುಲದಲ್ಲಿಂದು ಚಿತ್ರದ‌ ಮುಹೂರ್ತ ನೆರವೇರಿದೆ. ಸ್ಪಾರ್ಕ್ ಚಿತ್ರಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸಹೋದರ, ಎಂಎಲ್ ಸಿ ಆಗಿರುವ ಚನ್ನರಾಜ್ ಹಟ್ಟಿಹೊಳಿ ಕ್ಲ್ಯಾಪ್ ಮಾಡಿದರು. ಉದ್ಯಮಿ ಅಂಕಿತಾ ವಸಿಷ್ಠ ಕ್ಯಾಮೆರಾಗೆ ಚಾಲನೆ ಕೊಟ್ಟರು. ಡಾರ್ಲಿಂಗ್ ಕೃಷ್ಣ ,‌ ಮಿಲನಾ ನಾಗರಾಜ್ ಹಾಗೂ ನವೀನ್ ಶಂಕರ್ ವಿಶೇಷ ಅತಿಥಿಯಾಗಿ ಆಗಮಿಸಿ ಇಡೀ ಚಿತ್ರತಂಡಕ್ಕೆ ಶುಭಾಶಯ ತಿಳಿಸಿದರು.

ಬಳಿಕ ನಿರ್ದೇಶಕರಾದ ಮಹಾಂತೇಶ್ ಹಂದ್ರಾಳ್ ಮಾತನಾಡಿ, ಸ್ಪಾರ್ಕ್ ನನ್ನ ಮೊದಲ ಸಿನಿಮಾ. ಇದೇ ತಿಂಗಳಾಂತ್ಯಕ್ಕೆ ಶೂಟಿಂಗ್ ಹೋಗುತ್ತಿದ್ದೇವೆ. ಬಹುತೇಕ ಶೂಟಿಂಗ್ ಬೆಂಗಳೂರಿನಲ್ಲಿಯೇ ಇರುತ್ತದೆ ಎಂದರು.

ನಟ ನಿರಂಜನ್ ಸುಧೀಂದ್ರ ಮಾತನಾಡಿ, ಈ ಸಿನಿಮಾಗಾಗಿ ಮಹಾಂತೇಶ್ ಒಂದು ಅದ್ಭುತ ಕಥೆ ಬರೆದಿದ್ದಾರೆ. ಸ್ಪಾರ್ಕ್ ಅಂದರೆ ಪ್ರೆಸ್. ಅವರಿಗೆ ಇರುವ ಸ್ಪಾರ್ಕ್ ಇನ್ಯಾರಿಗೂ ಇರುವುದಿಲ್ಲ. ಯಾವುದೇ ವಿಷಯದ ಬಗ್ಗೆ ಮೊದಲು ಕಿಡಿ ಹತ್ತಿಸುವವರು ಅವರೇ. ನಮ್ಮ ಕಥೆಯಲ್ಲಿ ಚಿಕ್ಕ ಕಿಡಿ ಇದೆ. ಅದನ್ನು ಸ್ಪಾರ್ಕ್ ಚಿತ್ರದ ಮೂಲಕ ಅದ್ಭುತವಾಗಿ ಹೇಳಲು ಹೊರಟ್ಟಿದ್ದಾರೆ. ಸಿನಿಮಾದಲ್ಲಿ ನಾನು ಅಭಿರಾಮ್ ಎಂಬ ಜರ್ನಲಿಸ್ಟ್ ಪಾತ್ರ ಮಾಡುತ್ತಿದ್ದೇನೆ. ಈ ಚಿತ್ರಕ್ಕೆ ಇಬ್ಬರು ನಿರ್ಮಾಪಕರು ಸಾಥ್ ಕೊಟ್ಟಿದ್ದಾರೆ. ಸ್ಪಾರ್ಕ್ ಸಿನಿಮಾದ ಭಾಗವಾಗುತ್ತಿರುವುದು ಖುಷಿ ಕೊಟ್ಟಿದೆ ಎಂದರು.

ನಿರ್ಮಾಪಕಿ ಗರಿಮಾ ಮಾತನಾಡಿ, ನನ್ನ ಕನಸು ನನಸಾಗಿದೆ. ಬಹಳ ಖುಷಿಯಾಗುತ್ತಿದೆ. ನಾನು ಮ್ಯೂಸಿಕ್ ಆಲ್ಬಂ ಮಾಡಬೇಕು ಎಂದುಕೊಂಡಿದ್ದೇನೆ ಎಂದಾಗ ನನ್ನ ಕುಟುಂಬ ಸಿನಿಮಾ ಮಾಡೋಲ್ವಾ ಎಂದರು. ಇಂದು ನನ್ನ ಕುಟುಂಬದ ಬೆಂಬಲದಿಂದ ನಾನು ಇವತ್ತು ಮೊದಲ ಚಿತ್ರ ಮಾಡುತ್ತಿದ್ದೇನೆ. ಒಂದೊಳ್ಳೆ ತಂಡದ ಜೊತೆ ಕೆಲಸ ಮಾಡುತ್ತಿರುವುದು ಖುಷಿ ಕೊಟ್ಟಿದೆ ಎಂದು ಸಂತಸ ಹಂಚಿಕೊಂಡರು.

ಜೇಮ್ಸ್, ಭರಾಟೆ, ಕನಕ ಸೇರಿದಂತೆ 15ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಕೋ ಡೈರೆಕ್ಟರ್ ಆಗಿ ದುಡಿದಿರುವ ಡಿ.ಮಹಾಂತೇಶ್ ಹಂದ್ರಾಳ್ ಡೈರೆಕ್ಟರ್ ಕುರ್ಚಿ ಅಲಂಕರಿಸುತ್ತಿದ್ದಾರೆ. ಚೇತನ್ ಕುಮಾರ್, ಆರ್.ಚಂದ್ರು ಅವರ ಗರಡಿಯಲ್ಲಿ ನಿರ್ದೇಶನದ ಪಟುಗಳನ್ನು ಕಲಿತಿರುವ ಮಹಾಂತೇಶ್ ಈಗ ಪೂರ್ಣ ಪ್ರಮಾಣದ ನಿರ್ದೇಶಕರಾಗಿ ಮೊದಲ ಹೆಜ್ಜೆ ಇಡುತ್ತಿದ್ದಾರೆ. ಅವರ ಚೊಚ್ಚಲ ಪ್ರಯತ್ನದಲ್ಲಿ ನಾಯಕನಾಗಿ ನಿರಂಜನ್ ಸುಧೀಂದ್ರ ಅಭಿನಯಿಸುತ್ತಿದ್ದಾರೆ.

ಡಿ.ಮಹಾಂತೇಶ್ ಹಂದ್ರಾಳ್ ಆಕ್ಷನ್ ಥ್ರಿಲ್ಲರ್ ಕಥೆಯನ್ನು ಎಣೆದಿದ್ದಾರೆ. ನೈಜ ಘಟನೆಯಿಂದ ಸ್ಫೂರ್ತಿ ಪಡೆದಿರುವ ಈ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಹೊಸ ನಿರ್ಮಾಪಕರ ಆಗಮನವಾಗುತ್ತಿದೆ. ಮಹಾಂತೇಶ್ ವಿಷನ್ ಗೆ ಡಾ.ಗರಿಮಾ ಅವಿನಾಶ್ ವಸಿಷ್ಠ ಸಾಥ್ ಕೊಡುತ್ತಿದ್ದಾರೆ. ಸಾಫ್ಟ್‌ವೇರ್ ಉದ್ಯೋಗಿಯಾಗಿರುವ ಅವಿನಾಶ್, ಗರಿಮಾ ಅವಿನಾಶ್ ಪ್ರೊಡಕ್ಷನ್ ಎಂಬ ನಿರ್ಮಾಣ ಸಂಸ್ಥೆ ಪ್ರಾರಂಭಿಸಿದ್ದಾರೆ. ಈ ನಿರ್ಮಾಣ ಸಂಸ್ಥೆ ಪ್ರಪ್ರಥಮ ಸಿನಿಮಾವನ್ನು ನಿರಂಜನ್ ಸುಧೀಂದ್ರಗೆ ಮಾಡುತ್ತಿದ್ದಾರೆ. ನಾಯಕಿಯಾಗಿ ರಚನಾ ಇಂದರ್ ಸಾಥ್ ಕೊಡುತ್ತಿದ್ದಾರೆ.

ಇನ್ನು, ಅನುಭವಿ ತಾಂತ್ರಿಕ ವರ್ಗ ಚಿತ್ರದಲ್ಲಿದೆ. ಅಶ್ವಿನ್ ಕೆನಡಿ ಛಾಯಾಗ್ರಹಣ, ಸಚಿನ್ ಬಸ್ರೂರ್ ಸಂಗೀತ‌ ನಿರ್ದೇಶನ, ಮಧು ಸಂಕಲನ ಈ ಚಿತ್ರಕ್ಕಿದೆ. ಈ ತಿಂಗಳಾಂತ್ಯಕ್ಕೆ ಚಿತ್ರತಂಡ ಶೂಟಿಂಗ್ ಅಖಾಡಕ್ಕೆ ಇಳಿಯಲಿದ್ದು , ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.

Categories
ಸಿನಿ ಸುದ್ದಿ

ಕನ್ನಡಕ್ಕೆ ಬಂದ ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್: ಸುಜಯ್ ಶಾಸ್ತ್ರಿ ನಿರ್ದೇಶನದ 8 ಕ್ಕೆ ಎಂಟ್ರಿ

ದಕ್ಷಿಣ ಸಿನಿರಂಗದತ್ತ ಬಾಲಿವುಡ್ ತಾರಾದಂಡು ಒಬ್ಬೊಬ್ಬರಾಗಿ ಹೆಜ್ಜೆ ಹಾಕುತ್ತಿರುವುದು ಹೊಸ ವಿಷಯವಲ್ಲ. ಈಗಾಗಲೇ ಅನೇಕ ಸಿನಿಮೇಕರ್ಸ್, ಸ್ಟಾರ್ಸ್ ಕಾಲಿವುಡ್, ಸ್ಯಾಂಡಲ್ ವುಡ್, ಟಾಲಿವುಡ್ ನಲ್ಲಿ ಧೂಳ್ ಎಬ್ಬಿಸುತ್ತಿದ್ದಾರೆ. ಇದೀಗ ಹೊಸ ಸೇರ್ಪಡೆ ಬಾಲಿವುಡ್ ಖ್ಯಾತ ನಿರ್ದೇಶಕ ಅನುರಾಗ್ ಕಶ್ಯಪ್.

ಅನುರಾಗ್ ಕಶ್ಯಪ್ ದಕ್ಷಿಣದ ಕಡೆಗೆ ಬಂದಾಗಿದೆ. ತಮಿಳಿನ ಮಹಾರಾಜ ಚಿತ್ರದಲ್ಲಿ ಅದ್ಭುತ ಪಾತ್ರದಲ್ಲಿ ಗಮನಸೆಳೆದಿದ್ದಾರೆ. ಈ ಮೂಲಕ ತಮಿಳು ಪ್ರೇಕ್ಷಕರನ್ನ ರಂಜಿಸಿದ್ದಾರೆ. ತೆಲುಗಿನ ಡಕಾಯಿತ್ ಚಿತ್ರದಲ್ಲಿ ಕಪಟ ಪೊಲೀಸ್ ಆಫೀಸರ್ ನಟಿಸಿರುವ ಅವರೀಗ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಹಾಸ್ಯ ನಟ-ನಿರ್ದೇಶಕ ಸುಜಯ್ ಶಾಸ್ತ್ರಿ ಈ ಚಿತ್ರವನ್ನ ಡೈರೆಕ್ಷನ್ ಮಾಡುತ್ತಿದ್ದಾರೆ. ಈ ಮೂಲಕ ಒಂದು ಒಳ್ಳೆ ಕಥೆಯನ್ನ ಹೇಳುತ್ತಿದ್ದಾರೆ.

8 ಸಿನಿಮಾದ ಟೈಟಲ್ ಲಾಂಚ್ ಕಾರ್ಯಕ್ರಮ ಬೆಂಗಳೂರಿನಲ್ಲಿ ನಿನ್ನೆ ನಡೆಯಿತು. ಈ ವೇಳೆ ನಿರ್ದೇಶಕ ಕಂ ನಟ ಅನುರಾಗ್ ಕಶ್ಯಪ್ ಮಾತನಾಡಿ, ಇದೊಂದು ಎಮೋಷನಲ್ ಕಥೆ. ಜೀವನ ಎಲ್ಲರಿಗೂ ಎರಡನೇ ಅವಕಾಶ ನೀಡುತ್ತದೆ. ಈ ಚಿತ್ರ ಕೂಡ ಅದನ್ನೇ ಹೇಳುತ್ತದೆ. ಅರವಿಂದ್ ಹಾಗೂ ಸುಜಯ್ ಶಾಸ್ತ್ರೀಗೆ ಧನ್ಯವಾದ ಎಂದರು.

ಕನ್ನಡದ ‘8’ ಎಂಬ ಚಿತ್ರದಲ್ಲಿ ಅನುರಾಗ್ ಕಶ್ಯಪ್ ನಟಿಸುತ್ತಿದ್ದಾರೆ. ಹಾಸ್ಯನಟ ಸುಜಯ್ ಶಾಸ್ತ್ರೀ ಈ ಚಿತ್ರದ ಸಾರಥಿ. ಎವಿಆರ್ ಎಂಟರ್‌ಟೈನ್‌ಮೆಂಟ್ ಬ್ಯಾನರ್ ಅಡಿಯಲ್ಲಿ ಅರವಿಂದ್ ವೆಂಕಟೇಶ್ ರೆಡ್ಡಿ ಚಿತ್ರಕ್ಕೆ ಹಣ ಹೂಡುತ್ತಿದ್ದಾರೆ.ಫುಟ್‌ಬಾಲ್ ಆಟದ ಸುತ್ತ ನಡೆಯುವ ಕಥೆ ‘8’ ಚಿತ್ರದಲ್ಲಿದೆ.

AVR ಪ್ರೊಡಕ್ಷನ್ ಚೊಚ್ಚಲ ಸಿನಿಮಾ‌ 8

ಕನ್ನಡ ಚಿತ್ರರಂಗಕ್ಕೆ ಸದಾ ಅಭಿರುಚಿ ಸಿನಿಮಾಗಳನ್ನು ನೀಡುವ ಉದ್ದೇಶದಿಂದ ಶುರುವಾಗಿರುವ ಎವಿಆರ್ ಚೊಚ್ಚಲ ಕಾಣಿಕೆ 8. ಅರವಿಂದ್ ರೆಡ್ಡಿ ನಿರ್ಮಾಣದಲ್ಲಿ ಈ ಸಿನಿಮಾ‌ ಮೂಡಿ ಬರಲಿದೆ. ಈ ಚಿತ್ರದ ಜೊತೆಗೆ ಸಿಂಪಲ್ ಸುನಿ ಜೊತೆಗೂ ಎವಿಆರ್ ಕೈ ಜೋಡಿಸಿದೆ. ಬಿಗ್ ಬಾಸ್ ಖ್ಯಾತಿಯ ಮಹೇಶ್ ಕಾರ್ತಿಕ್ ನಾಯಕನಾಗಿ ನಟಿಸಲಿರುವ ಈ ಸಿನಿಮಾ ಈಗಾಗಲೇ ಘೋಷಣೆಯಾಗಿದೆ. ಸದ್ಯ 8 ಸಿನಿಮಾದ ಚಿತ್ರೀಕರಣ ಬೆಂಗಳೂರಿನಲ್ಲಿ ಭರದಿಂದ ಸಾಗುತ್ತಿದೆ.

Categories
ಸಿನಿ ಸುದ್ದಿ

ದಿ ಡೆವಿಲ್ ಶೂಟಿಂಗ್ ಶುರು: ಮುಂದಿನವಾರ ದರ್ಶನ್ ಭಾಗಿ

ಶ್ರೀ ಜೈ ಮಾತ ಕಂಬೈನ್ಸ್ ಲಾಂಛನದಲ್ಲಿ ಅದ್ದೂರಿಯಾಗಿ ನಿರ್ಮಾಣವಾಗುತ್ತಿರುವ, ಪ್ರಕಾಶ್ ವೀರ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕರಾಗಿ ನಟಿಸುತ್ತಿರುವ ಬಹು ನಿರೀಕ್ಷಿತ “ದಿ ಡೆವಿಲ್” ಚಿತ್ರದ ಎರಡನೇ ಹಂತದ ಚಿತ್ರೀಕರಣ ಬೆಂಗಳೂರಿನಲ್ಲಿ ಆರಂಭವಾಗಿದೆ.

“ದಿ ಡೆವಿಲ್” ಚಿತ್ರದ ಎರಡನೇ ಹಂತದ ಚಿತ್ರೀಕರಣ ಬೆಂಗಳೂರಿನಲ್ಲಿ ಬಿರುಸಿನಿಂದ ಸಾಗಿದೆ. ಮುಂದಿನವಾರದಿಂದ ಚಿತ್ರೀಕರಣದಲ್ಲಿ ದರ್ಶನ್ ಅವರು ಭಾಗಿಯಾಗಲಿದ್ದಾರೆ. ದರ್ಶನ್ ಅವರಿಗೆ ಬೆನ್ನು ನೋವಿನ ಸಮಸ್ಯೆ ಇರುವುದರಿಂದ ಈ ಹಂತದಲ್ಲಿ ಬರೀ ಮಾತಿನ ಭಾಗದ ಚಿತ್ರೀಕರಣ ಮಾತ್ರ ಮಾಡಲಾಗುವುದು. ಸಾಹಸ ಸನ್ನಿವೇಶಗಳ ಚಿತ್ರೀಕರಣವಾಗಲಿ ಅಥವಾ ಬೇರೆ ಯಾವುದೇ ರಿಸ್ಕ್ ಇರುವ ಸನ್ನಿವೇಶಗಳ ಚಿತ್ರೀಕರಣ ಮಾಡುವುದಿಲ್ಲ ಎಂದು ತಿಳಿಸಿರುವ ನಿರ್ದೇಶಕ ಪ್ರಕಾಶ್ ವೀರ್, ಬೆಂಗಳೂರು, ಮೈಸೂರು, ಹೈದರಾಬಾದ್ ಹಾಗೂ ರಾಜಸ್ಥಾನದಲ್ಲಿ ಎರಡನೇ ಹಂತದ ಚಿತ್ರೀಕರಣ ಮಾಡುವ ಯೋಜನೆ ಹಾಕಿಕೊಂಡಿದ್ದೇವೆ ಎಂದಿದ್ದಾರೆ.

ನಾಯಕ ಚಾಲೆಂಜಿಂಗ್ ಸ್ಟಾರ್ ದರ್ಶನ್, ನಾಯಕಿ ರಚನ ರೈ, ತುಳಸಿ,‌ಅಚ್ಯುತಕುಮಾರ್, ಮಹೇಶ್ ಮಂಜ್ರೇಕರ್, ಶ್ರೀನಿವಾಸಪ್ರಭು, ಶೋಭ್ ರಾಜ್ ಮುಂತಾದ ಕಲಾವಿದರು ಎರಡನೇ ಹಂತದ ಚಿತ್ರೀಕರಣದಲ್ಲಿ ಭಾಗವಹಿಸಲಿದ್ದಾರೆ.

ಸುಧಾಕರ್.ಎಸ್.ರಾಜ್ ಅವರ ಛಾಯಾಗ್ರಹಣವಿರುವ “ದಿ ಡೆವಿಲ್” ಚಿತ್ರಕ್ಕೆ ಬಿ.ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ, ಮೋಹನ್ ಬಿ ಕೆರೆ ಕಲಾ ನಿರ್ದೇಶನ ಹಾಗೂ ರಾಮ್ ಲಕ್ಷ್ಮಣ್ ಅವರ ಸಾಹಸ ನಿರ್ದೇಶನವಿದೆ.

Categories
ಸಿನಿ ಸುದ್ದಿ

ಮೂವರು ಗೆಳೆಯರ ಬದುಕಿನ ತಳಮಳ

ರೇಟಿಂಗ್: 3 /5

ಚಿತ್ರ: ಇಂಟರ್‌ರ್ವೆಲ್‌
ನಿರ್ದೇಶನ: ಭರತ್
ತಾರಾಗಣ: ಶಶಿ ರಾಜ್‌, ಪ್ರಜ್ವಲ್‌ಕುಮಾರ್‌ ಗೌಡ, ಸುಕಿ, ಚರಿತ್ರ ರಾವ್‌, ಸಹನಾ ಆರಾಧ್ಯ, ಸಮೀಕ್ಷ, ದಾನಂ ಇತರರು.

ಮಲೆನಾಡು ತಪ್ಪಲಿನ ಒಂದು ಊರು. ಆ ಊರಿನ ಮೂರು‌ ಮುತ್ತುಗಳು. ಓದೋ ವಯಸ್ಸಲ್ಲಿ ಸರಿಯಾಗಿ ಓದದೆ ಹರಟೆ, ತರಲೆ ಮಾಡ್ತಾನೇ ಬದುಕಿನ ಅರ್ಥ ಅರಿಯದೆ ಜಾಲಿ ಮಾಡುವ ಪೋಲಿಗಳು. ಲೈಫು ಅಂದುಕೊಂಡಷ್ಟು ಸುಲಭ ಅಲ್ಲ ಅಂತ ಗೊತ್ತಾಗುವಷ್ಟರಲ್ಲಿ ಆ ಮೂವರು ಗೆಳೆಯರ ಬದುಕಲ್ಲಿ ಅಲ್ಲೋಲ ಕಲ್ಲೋಲ. ಮುಂದೆ ಅವರು ಬದುಕು ಕಟ್ಟಿಕೊಳ್ತಾರ ಇಲ್ವಾ ಅನ್ನೋದೇ ಒನ್ ಲೈನ್ ಸ್ಟೋರಿ.
‘ಇಂಟರ್‌ರ್ವೆಲ್‌’ ಪ್ರತಿಯೊಬ್ಬರ ಬದುಕಲ್ಲಿ ಬಂದೇ ಬರುತ್ತೆ. ಈ ಮೂವರ ಬಾಳಲ್ಲೂ ಬರುವ ಬದುಕಿನ‌ ತಿರುವು ಹೇಗಿರುತ್ತೆ ಎಂಬ ಕುತೂಹಲವಿದ್ದರೆ ಒಮ್ಮೆ ಸಿನಿಮಾ ನೋಡಬಹುದು.

ಇಲ್ಲಿ ಮೂವರ ತುಂಟಾಟ, ಪೋಲಿತನ, ತಮಾಷೆ, ಅಸಹಾಯಕತೆ, ಉತ್ಸಾಹ, ನಿರಾಸೆ ಎಲ್ಲವೂ ಮೇಳೈಸಿದೆ.

ಜಾಲಿಯಾಗಿಯೇ ಇರುವ ಮೂವರ ಬದುಕು ಜವಾಬ್ದಾರಿ ಇಲ್ಲದೆ ಒದ್ದಾಡುವಂತ ಸ್ಥಿತಿಗೆ ಬರುತ್ತೆ. ನಗಿಸುವ ಹಾಗು ಭಾವುಕತೆ ಹೆಚ್ಚಿಸುವ ಪಾತ್ರಗಳ ಮೂಲಕ ಒಂದೊಳ್ಳೆಯ ಆಪ್ತ ಕಥೆ ಹೇಳುವಲ್ಲಿ‌ ನಿರ್ದೇಶಕರು ಗೆದ್ದಿದ್ದಾರೆ.

ಮೊದಲರ್ಧ ತಮಾಷೆಯಾಗಿ ಸಾಗುವ ಚಿತ್ರದ ದ್ವಿತಿಯಾರ್ಧ ಗಂಭೀರತೆ ಪಡೆಯುತ್ತೆ. ವಿನಾಕಾರಣ ಇಲ್ಲಿ ದೃಶ್ಯಗಳ ವೈಭವೀಕರಣವಿಲ್ಲ. ಅನಗತ್ಯ ಸೀನ್ ಗಳಿಲ್ಲ. ಬೇಸರಿಸುವ ಅಂಶಗಳೂ ಇಲ್ಲ. ಹೊಸ ತಂಡವಾದರೂ ಬೆನ್ನು ತಟ್ಟುವಂತಹ‌ ಕೆಲಸ‌ ಮಾಡಿದೆ ಎಂಬುದೇ ಸಮಾಧಾನ.

ಇಲ್ಲಿ ಶಿಕ್ಷಣ ಎಷ್ಟು ಮುಖ್ಯ ಅನ್ನೋದನ್ನು ನಿರ್ದೇಶಕರು ಒತ್ತಿ ಹೇಳಿದ್ದಾರೆ. ಈಗಿನ ಯುವಕರ ಮನಸ್ಥಿತಿ ಹೇಗಿರುತ್ತೆ ಎನ್ನುವುದನ್ನಿಲ್ಲಿ ಕಾಣಬಹುದು.

ಸಿನಿಮಾದ ವೇಗಕ್ಕೆ ಸಂಕಲನ ಸಾಥ್ ಕೊಟ್ಟಿದೆ. ಒಂದು ಹಾಡು ಗುನುಗಬಹುದು. ಹಿನ್ನೆಲೆ ಸಂಗೀತ ಕಥೆಗೆ ಪೂರಕ.

ಇನ್ನು, ಶಶಿ ರಾಜ್‌, ಪ್ರಜ್ವಲ್‌ಕುಮಾರ್‌ ಗೌಡ, ಸುಕಿ ಅಭಿನಯದಲ್ಕಿ ಸಹಜತೆ ಇದೆ. ಸಹನಾ ಆರಾಧ್ಯ ಸಿಕ್ಕ ಪಾತ್ರಕ್ಕೆ ಮೋಸ ಮಾಡಿಲ್ಲ. ತೆರೆ ಮೇಲೆ ಬರುವ ಪಾತ್ರಗಳೂ ಗಮನ ಸೆಳೆಯುತ್ತವೆ.

Categories
ಸಿನಿ ಸುದ್ದಿ

ಕತ್ತಲು ರಾತ್ರಿಯೊಳು ಭಯ, ಭೀತಿ ಇತ್ಯಾದಿ…

ರೇಟಿಂಗ್: 3.5/5

ಚಿತ್ರ: ಕಪಟಿ
ನಿರ್ದೇಶನ: ರವಿಕಿರಣ್, ಚೇತನ್
ನಿರ್ಮಾಣ: ದಯಾಳ್ ಪದ್ಮನಾಭನ್
ತಾರಾಗಣ: ಸುಕೃತ ವಾಗ್ಲೆ, ದೇವ್ ದೇವಯ್ಯ, ಸಾತ್ವಿಕ್ ಕೃಷ್ಣನ್, ಶಂಕರ್ ನಾರಾಯಣ ಇತರರು.

ಆ ಮನೆಯಲ್ಲಿ ಅವಳಿಗೆ ಯಾರೋ ಕರೆಯುತ್ತಿರುವ ಭಾಸ. ಇನ್ಯಾರೋ ಓಡಾಡಿದ ಫೀಲ್. ಮನೆ ಸುತ್ತ ಮುತ್ತ ಏನೇನೋ ನಡೆಯುತ್ತಿರೋ ಭೀತಿ…

ಇಷ್ಟಕ್ಕೂ ಅದು ದೆವ್ವದ ಓಡಾಟವೋ? ಯಾರಾದರೂ ಭಯಗೊಳಿಸಲು ಮಾಡುತ್ತಿರೋ ಪಿತೂರಿಯೋ ? ಆರಂಭದಿಂದ ಅಂತ್ಯದವರೆಗೂ ನೋಡುಗರಿಗೆ ಕುತೂಹಲ ಕೆರಳಿಸುವ ಈ ಕಥೆ ನೋಡಿಸಿಕೊಂಡು ಹೋಗುತ್ತೆ. ಹಾಗೆ ನೋಡೋಕೆ ಕಾರಣ ನಿರ್ದೇಶಕರ ನಿರೂಪಣೆಯ ಜಾಣತನ. ಇಲ್ಲಿ ಭೀತಿ ಇದೆ, ಗಂಭೀರತೆ ಇದೆ, ಆತಂಕ ಇದೆ, ಆಸೆ, ದುರಾಸೆ , ಬಾಂಧವ್ಯ, ಎಮೋಷನಲ್ ಇತ್ಯಾದಿ ಎಲ್ಲವೂ ಮೇಳೈಸಿದೆ. ಆ ಕಾರಣಕ್ಕೆ ಚಿತ್ರ ಆಪ್ತತೆಯ ಸಾರವಾಗುತ್ತೆ.

ಕಥೆ ಸಿಂಪಲ್ ಎನಿಸಿದರೂ, ಹೊಸ ವಿಷಯ ಇಲ್ಲಿದೆ. ಹೊಸತನ್ನು ಹೇಳಿರುವ ಮತ್ತು ತೋರಿಸಿರುವ ರೀತಿ ಇಷ್ಟವಾಗುತ್ತೆ. ನೋಡುಗರಿಗೆ ಎಷ್ಟು ತೋರಿಸಬೇಕು, ಏನನ್ನು ಹೇಳಬೇಕೆಂಬ ಅರಿವು ನಿರ್ದೇಶಕರಿಗೆ ಇದೆ. ಹಾಗಾಗಿ ಸಿನಿಮಾ ಎಲ್ಲಾ ವರ್ಗಕ್ಕೂ ರುಚಿಸುವುದರಲ್ಲಿ ಸಂದೇಹವಿಲ್ಲ.

ಮೊದಲರ್ಧ ಸರಾಗವಾಗಿ ಸಾಗುವ ಸಿನಿಮಾದಲ್ಲಿ ಸಾಕಷ್ಟು ಸಂಗತಿಗಳಿವೆ. ದ್ವಿತಿಯಾರ್ಧ ಕಥೆಯ ಓಗ ನೋಡುಗರಲ್ಲಿ ಕುತೂಹಲ ಮೂಡಿಸುತ್ತೆ. ಸಾಮಾನ್ಯವಾಗಿ ಹಾರರ್, ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಪ್ರಿಯರಿಗೆ ಇದು ಇಷ್ಟವಾಗದೇ ಇರದು.

ಸಿನಿಮಾದ ಅವಧಿ ಹೆಚ್ಚನಿಸಲ್ಲ. ಎಲ್ಲೂ ಗೊಂದಲ ಇರದ ಕಥೆಯಲ್ಲಿ ಚಿತ್ರಕಥೆ ಬಿಗಿಯಾಗಿದೆ. ಸಿನಿಮಾದ ವೇಗಕ್ಕೆ ಸಂಕಲನ ಮುಖ್ಯವಾಗಿ ಹೆಗಲು ಕೊಟ್ಟಿದೆ. ಇಂತಹ ಸಿನಿಮಾಗಳಿಗೆ ಹಿನ್ನೆಲೆ ಸಂಗೀತ ಮಾತಾಡಬೇಕು. ಅದಿಲ್ಲಿ ವರ್ಕ್ ಆಗಿದೆ.

ಇಲ್ಲಿ ಗಮನಿಸಬೇಕಾದ ಮತ್ತೊಂದು ಅಂಶವೆಂದರೆ ಅದು ಪಾತ್ರಗಳು. ಬೆರಳೆಣಿಕೆಯ ಪಾತ್ರಗಳಿವೆ. ಬಹುತೇಕ ಒಂದೇ ಮನೆ ಸಿನಿಮಾದ ಕೇಂದ್ರಬಿಂದು. ನೋಡೋಕೆ ಒಂದು ಹಾಡು, ಒಂದು ಫೈಟು ಇದ್ದರೂ ಅದು ಕಥೆಗೆ ಪೂರಕ. ಗಲಿಬಿಲಿ ಇರದ ನೀಟ್ ನರೇಷನ್ ಚಿತ್ರ.

ಕಥೆ ಏನು?

ಇದೊಂದು ಡಾರ್ಕ್ ನೈಟ್ ಕಥೆ. ಅಂದರೆ ಇಬ್ಬರು ಹ್ಯಾಕರ್ಸ್ ಕಥೆ ವ್ಯಥೆ ಇಲ್ಲಿದೆ. ಯಾರೂ ಇಲ್ಲದ ವೇಳೆ ಆ ದೊಡ್ಡ ಬಂಗಲೆಯಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿ, ಅಪ್ಪ, ಮಗ ಮತ್ತು ಮಗಳ ಚಟುವಟಿಕೆಯನ್ನು ಡಾರ್ಕ್ ವೆಬ್ ಮೂಲಕ ಹಣ ಮಾಡುವ ಸಂಚು ಹೇಗಿರುತ್ತೆ ಅನ್ನೋದು ಒನ್ ಲೈನ್. ಅದು ಹೇಗೆ ಎಂಬ ಕುತೂಹಲ ಇದ್ದರೆ ಒಮ್ಮೆ ನೋಡಲ್ಲಡ್ಡಿಯಿಲ್ಲ.

ಆ ಮನೆಯಲ್ಲಿ ವಿಚಿತ್ರ ಘಟನೆ ನಡೆಯುತ್ತೆ. ಏನೇನು ಎಂಬ ಪ್ರಶ್ನೆಗೆ ಇಡೀ ಸಿನಿಮಾ ಉತ್ತರವಾಗಲಿದೆ.

ನೋಡ ನೋಡುತ್ತಿದ್ದಂತೆ ಚಿತ್ರ ಎಂಡ್ ಆಗುತ್ತೆ. ಒಂದಷ್ಟು ಪ್ರಶ್ನೆಗಳು ಕಾಡುತ್ತವೆ. ಅಲ್ಲೇ ಉತ್ತರವೂ ಸಿಗುತ್ತೆ. ಹೊಸ ವಿಷಯವನ್ನು ಹೀಗೂ ಹೇಳಬಹುದು ಅಂತ ಕಪಟಿ ನೋಡಿದವರಿಗೆ ಗೊತ್ತಾಗುತ್ತೆ.

ಕತ್ತಲು ರಾತ್ರಿಯೊಳು ಜರುಗುವ ಸೂಕ್ಷ್ಮ ಸನ್ನಿವೇಶಗಳೇ ಚಿತ್ರದ ಹೈಲೆಟ್. ಕನ್ನಡದಲ್ಲಿ ಬಂದ ಅದೆಷ್ಟೋ ಕ್ರೈಮ್ ಥ್ರಿಲ್ಲರ್ ನಡುವೆ ಇದು ಭಿನ್ನವಾಗುತ್ತೆ. ಒಟ್ಟಾರೆ ಕನ್ನಡಕ್ಕೊಂದು ಹೊಸ ಪ್ರಯತ್ನವಂತೂ ಹೌದು.ತಾಂತ್ರಿಕವಾಗಿಯೂ ಸಿನಿಮಾ ಸೈ ಎನಿಸಿಕೊಂಡಿದೆ.

ಯಾರು ಹೇಗೆ?

ಇಲ್ಲಿ ಸುಕೃತ ವಾಗ್ಲೆ ಎಂದಿಗಿಂತ ನಟನೆಯಲ್ಲಿ ಇಷ್ಟವಾಗುತ್ತಾರೆ. ಎಮೋಷನ್ ದೃಶ್ಯದಲ್ಲಿ ಭಾವುಕತೆಗೆ ದೂಡುತ್ತಾರೆ. ಕೊಟ್ಟ ಪಾತ್ರಕ್ಕೆ ಮೋಸ‌ ಮಾಡಿಲ್ಲ. ದೇವ್ ದೇವಯ್ಯ ಮತ್ತು ಸಾತ್ವಿಕ್ ಕೃಷ್ಣನ್ ಸಿನಿಮಾದ ಕೇಂದ್ರ ಬಿಂದು. ಜಿದ್ದಿಗೆ ಬಿದ್ದವರಂತೆ ಕಾಣಿಸಿಕೊಂಡಿದ್ದಾರೆ. ಪಕ್ಕಾ ಹ್ಯಾಕರ್ಸ್ ಆಗಿ ಇಷ್ಟವಾಗುತ್ತಾರೆ. ತೆರೆ ಮೇಲೆ ಬರುವ ಕೆಲ ಪಾತ್ರಗಳೂ ಇರುವಷ್ಟು ಕಾಲ ಗಮನ ಸೆಳೆಯುತ್ತವೆ.

ಚಿತ್ರದ ಛಾಯಾಗ್ರಹಣದಲ್ಲಿ ಕತ್ತಲು ಬಿಳುಪಿನ ಆಟ ಸೊಗಸಾಗಿದೆ. ಸಂಗೀತ ಸಿನಿಮಾಗೆ ಸಾಥ್ ನೀಡಿದೆ.

Categories
ಸಿನಿ ಸುದ್ದಿ

ಚಿತ್ರ ವಿಮರ್ಶೆ: ಜಾಲಿಯಾಗಿ ನೋಡಲು ಅಪಾಯವಿಲ್ಲ!

ರೇಟಿಂಗ್: 3.5/5

ಚಿತ್ರ: ಅಪಾಯವಿದೆ ಎಚ್ಚರಿಕೆ
ನಿರ್ದೇಶಕ: ಅಭಿಜಿತ್ ತೀರ್ಥಹಳ್ಳಿ
ನಿರ್ಮಾಣ: ವಿ.ಜಿ.ಮಂಜುನಾಥ್, ಪೂರ್ಣಿಮಾ ಎಂ.ಗೌಡ
ತಾರಾಗಣ: ವಿಕಾಸ್ ಉತ್ತಯ್ಯ, ಅಶ್ವಿನ್ ಹಾಸನ್, ರಾಧಾ ಭಗವತಿ, ರಾಘವ್ ಕೊಡಚಾದ್ರಿ, ಮಿಥುನ್ ತೀರ್ಥಹಳ್ಳಿ, ಹರಿಣಿ, ಲಂಕೇಶ್ ರಾವಣ, ಕುಮಾರ್ ಶಿವಮೊಗ್ಗ ಇತರರು.

ಜೀವನದಲ್ಲಿ ಹಣವೇ ಮುಖ್ಯ. ಹಣ ಇಲ್ಲದಿದ್ದರೆ ಬದುಕೇ ಬರಡು. ಉದ್ಯೋಗ ಇರದ ಮೂವರು ಹುಡುಗರು ಹಣ ಮಾಡಬೇಕು ಅಂತ ನಿರ್ಧರಿಸಿ ಕಗತ್ತಲ ಕಾನನದಲ್ಲಿರೋ ಗಂಧದ ಮರ ಕಡಿಯೋಕೆ ಹೊರಡುವ ಕಥೆಯೇ ಒಂದು ರೋಚಕ. ಲೈಫಲ್ಲಿ ಹಣ ಮಾಡಬೇಕು ಅಂತ ಡಿಸೈಡ್ ಮಾಡುವ ಮೂವರು ಯುವಕರು ಕತ್ತಲ ಕಾಡೊಳಗೆ ಹೋಗಿ ಗಂಧದ ಮರ ಕಡಿದು ತರುತ್ತಾರಾ ಅಥವಾ ಇಲ್ಲವಾ ಅನ್ನುವ ಕುತೂಹಲವಿದ್ದರೆ ಮಿಸ್ ಮಾಡದೆ ಒಂದೊಮ್ಮೆ ಈ ಸಿನಿಮಾ ನೋಡಬಹುದು.

ಇತ್ತೀಚೆಗೆ ಬರುವ ಕಥೆಗಳಲ್ಲಿ ಅದಿಲ್ಲ, ಇದು ಮಿಸ್ ಆಗಿದೆ, ಅದೊಂದಷ್ಟು ಬೇಕಿತ್ತು, ಇದು ಬೇಡವಾಗಿತ್ತು ಅನ್ನುವ ಮಾತುಗಳೇ ಹೆಚ್ಚಾಗಿ ಕೇಳಿಬರುತ್ತಿದ್ದವು. ಆದರೆ, ಈ ಸಿನಿಮಾದೊಳಗಿನ ಕಥೆಯಲ್ಲಾಗಲಿ, ನಿರೂಪಣೆಯಲ್ಲಾಗಲಿ ಅಥವಾ ಚಿತ್ರಕಥೆಯಲ್ಲಾಗಲಿ ಯಾವುದೂ ಹೆಚ್ಚೆನಿಸಿಲ್ಲ. ಯಾವುದೂ ಕಮ್ಮಿ ಅನಿಸಿಲ್ಲ. ಎಷ್ಟು ಬೇಕೋ, ಏನು ಬೇಕೋ ಅದನ್ನು ಹೇಳುವ ಮೂಲಕ ನೋಡುಗರನ್ನು ಹಿಡಿದಿಟ್ಟುಕೊಂಡು ಸುಮ್ಮನೆ ಸಿನಿಮಾ ನೋಡುವಂತೆ ಮಾಡುವ ಗುಣ ಈ ಚಿತ್ರದಲ್ಲಿದೆ. ಸ್ವಲ್ಪ ಗಂಭೀರತೆಗೆ ದೂಡುವ ಈ ಕಥೆಯಲ್ಲಿ ಮಜವೆನಿಸುವ ಹಲವು ರೂಪಕಗಳಿವೆ. ಒಂದಷ್ಟು ರೋಚಕ ಎನಿಸುವ ಸಂಗತಿಗಳಿವೆ. ಬೆಚ್ಚಿಬೀಳಿಸುವ ದೃಶ್ಯಗಳೂ ಇವೆ. ಅವೆಲ್ಲವನ್ನು ಅನುಭವಿಸುವ ಆಸೆ ಇದ್ದರೆ, ಚಿತ್ರ ನೋಡಿ ಹೊರಬರಬಹುದು.

ತೀರಾ ಸರಳ ಕಥೆ ಇದು. ಹಾಗಂತ ಒಂದೇ ಸಮನೆ ನೋಡಿಸಿಕೊಂಡು ಹೋಗುತ್ತೆ ಅಂತ ಹೇಳುವುದಿಲ್ಲ. ಮೊದಲರ್ಧ ಅತ್ತಿತ್ತ ಓಡಾಡಿಸಿಕೊಂಡೇ ಸಾಗುವ ಈ ಸಿನಿಮಾ, ದ್ವಿತಿಯಾರ್ಧದಲ್ಲಿ ಸಾಕಷ್ಟು ಗಂಭೀರತೆ ಪಡೆದುಕೊಳ್ಳುತ್ತೆ. ಎಷ್ಟರಮಟ್ಟಿಗೆ ಅಂದರೆ, ನೋಡುಗರ ಕಣ್ಣು ತದೇಕಚಿತ್ತದಿಂದ ಇರುವಷ್ಟು, ಮನಸ್ಸು ಮೌನವಾಗಿರುವಷ್ಟು, ಕಿವಿ ಅದೇನನ್ನೋ ಆಲಿಸುವಷ್ಟು. ನೋಡುವ ಮನಸ್ಸುಗಳಿಗೆ ಅಲ್ಲಲ್ಲಿ ಕಚಗುಳಿಯ ದೃಶ್ಯಗಳಿವೆ, ಮಾತುಗಳಿವೆ. ಹಾಗೆಯೇ, ಒಮ್ಮೊಮ್ಮೆ ಬೆಚ್ಚಿಬೀಳಿಸುವಂತಹ ದೃಶ್ಯಗಳು ಎರಗುತ್ತವೆ. ಅದೆಲ್ಲೋ ಕೇಳಿದ ದೃಶ್ಯಗಳು ಎದುರಾಗುತ್ತವೆ. ಏನೇನೋ ಅಂದುಕೊಂಡು ನೋಡುವ ಮನಸ್ಸುಗಳನ್ನು ಆಗಾಗ ಭಯ ಹುಟ್ಟಿಸುವ ಸನ್ನಿವೇಶಗಳು ರಾಚುತ್ತವೆ. ಹಾಗಾಗಿ ಈ ಚಿತ್ರ ಒಂದಷ್ಟು ಖುಷಿ ಕೊಡುತ್ತೆ, ಮತ್ತಷ್ಟು ಭಯ ಹುಟ್ಟಿಸುತ್ತೆ. ಎಚ್ಚರಿಕೆಯಿಂದ ನೋಡಿದವರಿಗೂ ಒಮ್ಮೊಮ್ಮೆ ಢವ ಢವ ಎನಿಸದಿರದು.

ನಿರ್ದೇಶಕರ ಕಥೆ ವಿಶೇಷವಾಗಿದೆ. ನಿರೂಪಣೆ ಶೈಲಿ ಇಷ್ಟವಾಗುತ್ತೆ. ಚಿತ್ರಕಥೆಯಲ್ಲಿ ಒಂದಷ್ಟು ಬಿಗಿ ಹಿಡಿತ ಇದ್ದಿದ್ದರೆ, ಇನ್ನಷ್ಟು ಭಯಾನಕವಾಗಿ ಸಿನಿಮಾವನ್ನು ಕಟ್ಟಿಕೊಡಬಹುದಿತ್ತು. ಇದನ್ನು ಥ್ರಿಲ್ಲರ್ ಎನ್ನಬೇಕೋ, ಹಾರರ್ ಎನ್ನಬೇಕೋ, ಕಾಮಿಡಿ ಎನ್ನಬೇಕೋ ಎಂಬ ಕನ್ ಫ್ಯೂಸ್ ನೋಡುಗರಿಗಿದ್ದರೂ, ಒಂದೊಳ್ಳೆಯ ಮನರಂಜನೆ ಸಿನಿಮಾ ಅಂತ ಸಾಬೀತುಪಡಿಸುತ್ತದೆ. ಮೊದಲರ್ಧ ಇನ್ನಷ್ಟು ಬಿಗಿ ಬೇಕಿತ್ತು. ಸಿನಿಮಾದಲ್ಲಿ ಮಜ ಇರೋದೇ ದ್ವಿತಿಯಾರ್ಧದಲ್ಲಿ. ಅದನ್ನು ಹೇಳುವುದಕ್ಕಿಂತ ನೋಡುವುದೇ ಒಳಿತು.

ನಿರ್ದೇಶಕರಿಗೆ ನೋಡುಗರ ನಾಡಿಮಿಡಿತದ ಅರಿವಿದೆ. ಆ ಕಾರಣಕ್ಕೆ ಅವರಿಲ್ಲಿ ಸರಳ ಕಥೆಗೆ ಹಾರರ್ ಟಚ್ ಮಾಡಿದ್ದಾರೆ. ಅದು ಸುಮ್ಮನೆ ನೋಡಿಸಿಕೊಂಡು ಹೋಗುತ್ತೆ. ಅವರ ಜಾಣತನದ ಕೆಲಸಕ್ಕೆ ಆ ದೊಡ್ಡ ಕಾಡು, ಕತ್ತಲು, ಪಾತ್ರಗಳು, ಸಂಗೀತ, ಕ್ಯಾಮೆರಾ ಎಲ್ಲವೂ ಸಾಥ್ ಕೊಟ್ಟಿವೆ. ಹಾಗಾಗಿ ಸಿನಿಮಾ ರುಚಿಸುತ್ತಾ ಹೋಗುತ್ತೆ. ಇಂತಹ ಸಿನಿಮಾಗಳಿಗೆ ಕಥೆಗಿಂತ ದೃಶ್ಯಗಳು ಪ್ರಮುಖವಾಗಿ ಆಕರ್ಷಿಸಬೇಕು. ಜೊತೆಗೆ ಸಂಗೀತವೂ ಕೂಡ. ಅವೆರೆಡು ಇಲ್ಲಿ ಮೇಳೈಸಿವೆ. ಒಂದು ಹಾರರ್ ಫೀಲ್ ಕಟ್ಟಿಕೊಡುವ ಕೆಸಲ ಸುಲಭವಲ್ಲ. ಅದನ್ನು ನಿರ್ದೇಶಕರು ಪರಿಪೂರ್ಣವಾಗಿ ಕಟ್ಟಿಕೊಡುವ ಮೂಲಕ ನೋಡುಗರಲ್ಲಿ ಒಂದಷ್ಟು ಥ್ರಿಲ್ ಕೊಡುತ್ತಾ ಹೋಗುತ್ತಾರೆ. ಹಾಗಾಗಿ ಸಿನಿಮಾ ನೋಡುವ ಮನಸ್ಸುಗಳಿಗೆ ಎಲ್ಲೂ ಬೋರ್ ಎನಿಸೋದಿಲ್ಲ.

ಕಥೆ ತುಂಬಾನೇ ಸಿಂಪಲ್. ಉದ್ಯೋಗ ಇರದ ಮೂವರು ಗೆಳೆಯರು, ಸದಾ ಕುಡಿಬೇಕು, ಲೈಫ್ ಎಂಜಾಯ್ ಮಾಡಬೇಕು ಅದಷ್ಟೇ ಬದುಕು ಅಂದುಕೊಂಡವರು. ಆದರೆ, ಬದುಕಲು ಹಣ ಬೇಕು ಅದಕ್ಕೆ ಕಂಡುಕೊಳ್ಳುವ ದಾರಿ ಹಲವು. ಒಂದು ವಿಚಿತ್ರ ಸನ್ನಿವೇಶದಲ್ಲಿ ಅವರು ಕಾಡಿಗೆ ಹೋಗುವ ಮನಸ್ಸು ಮಾಡ್ತಾರೆ. ಅಲ್ಲಿ ಅಚ್ಚರಿಯ ಬೆಳವಣಿಗೆ ಕಾಣುತ್ತಾರೆ. ಕಂಡರಿಯದ ದೃಶ್ಯಗಳು ಎದುರಾಗುತ್ತವೆ. ಅವರು ಕಾಡಿಗೆ ಹೋಗಿದ್ದು ಯಾಕೆ, ಅಲ್ಲಿ ಅವರನ್ನು ಆವರಿಸಿದ್ದು ಏನು? ಮುಂದೆ ಅವರು ಅಂದುಕೊಂಡಿದ್ದನ್ನು ಸಾಧಿಸುತ್ತಾರಾ? ಇದು ಕಥೆ. ಈ ಕಥೆಯ ಜಾಡು ಹಿಡಿದು ಹೋಗುವ ಮನಸ್ಸಿದ್ದರೆ ಮುಲಾಜಿಲ್ಲದೆ ಬಂದು ಸಿನಿಮಾ ನೋಡಬಹುದು. ನೋಡುವ ಅಷ್ಟೂ ಗಂಟೆಗಳು ಕೂಡ ಮೋಸ ಆಗುವುದಿಲ್ಲ ಎಂಬ ಗ್ಯಾರಂಟಿಯನ್ನು ಸಿನಿಮಾ ಕೊಡುತ್ತದೆ.

ಸಿನಿಮಾದಲ್ಲಿ ಒಬ್ಬೊಬ್ಬರದ್ದು ಒಂದೊಂದು ರೀತಿಯ ಪಾತ್ರ. ಎಲ್ಲಾ ಪಾತ್ರಗಳೂ ಇಲ್ಲಿ ಗಮನಸೆಳೆಯುತ್ತವೆ. ಮುಖ್ಯವಾಗಿ ವಿಕಾಸ್ ಉತ್ತಯ್ಯ ತಮ್ಮ ಪಾತ್ರದ ಮೂಲಕ ಮೆಚ್ಚುಗೆಯಾಗುತ್ತಾರೆ. ಮಿಥುನ್ ತೀರ್ಥಹಳ್ಳಿ ನೋಡುಗರನ್ನೂ ಗಾಬರಿಪಡಿಸುತ್ತಾರೆ. ರಾಘವ್ ಕೊಡಚಾದ್ರಿ ಪಾತ್ರಕ್ಕೆ ಮೋಸ ಮಾಡಿಲ್ಲ. ಇಲ್ಲಿ ಮೂವರಿಗೂ ಒಂದೊಂದು ವಿಭಿನ್ನ ಪಾತ್ರಗಳಿವೆ. ಅದನ್ನು ಅವರು ಸರಿಯಾಗಿಯೇ ನಿರ್ವಹಿಸಿದ್ದಾರೆ. ಇನ್ನು, ಪ್ರಮುಖವಾಗಿ ಸಿನಿಮಾದ ಆಕರ್ಷಣೆ ಅಂದರೆ ಅದು ಅಶ್ವಿನ್ ಹಾಸನ್. ಅವರಿಲ್ಲಿ ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ಅವರೇ ಸಿನಿಮಾದ ತಿರುವು ಅನ್ನಬಹುದು. ಅವರ ಪಾತ್ರದಲ್ಲಿ ಧಮ್ ಇದೆ. ಖಡಕ್ ಅಭಿನಯವೂ ತುಂಬಿದೆ. ಇನ್ನು, ರಾಧಾ ಪಾತ್ರ ಕೂಡ ಇರುವಷ್ಟು ಕಾಲ ಇಷ್ಟವಾಗುತ್ತದೆ. ಹರಿಣಿ ಪಾತ್ರ ಕೂಡ ಗಮನಸೆಳೆಯುತ್ತೆ. ಇನ್ನು, ಆಗಾಗ ಕಾಣಿಸಿಕೊಳ್ಳುವ ಕೆಲ ಪಾತ್ರಗಳು ಕಥೆಗೆ ಪೂರಕವಾಗಿವೆ.

ಇಂತಹ ಸಿನಿಮಾಗಳಿಗೆ ತಾಂತ್ರಿಕತೆ ಮುಖ್ಯವಾಗಿ ಬೇಕು. ಅದಿಲ್ಲಿ ಮಾತಾಡುವಂತಿದೆ. ಸುನಾದ್ ಗೌತಮ್ ಅವರ ಸಂಗೀತ ಇಲ್ಲಿ ಚೆನ್ನಾಗಿಯೇ ಮಾತಾಡಿದೆ. ಅದು ನೋಡುಗರನ್ನು ಬೆಚ್ಚಿಬೀಳುವಷ್ಟರ ಮಟ್ಟಿಗೆ. ಸುನಾದ್ ಅವರ ಕ್ಯಾಮೆರಾ ಕೈಚಳಕ ಕೂಡ ಸೊಗಸಾಗಿದೆ. ಒಟ್ಟಾರೆ, ಈ ಸಿನಿಮಾವನ್ನು ಜಾಲಿಯಾಗಿ ನೋಡೋಕೆ ಯಾವುದೇ ಅಪಾಯವಂತೂ ಇಲ್ಲ.

Categories
ಸಿನಿ ಸುದ್ದಿ

ಚಿತ್ರ ವಿಮರ್ಶೆ: ಒಂದು ಭಾವುಕತೆಯ ಪ್ರೀತಿ ಕಥೆ!

ರೇಟಿಂಗ್ : 3.5/5

ಚಿತ್ರ: 1990s
ನಿರ್ದೇಶಕ : ನಂದಕುಮಾರ್
ನಿರ್ಮಾಣ: ಮನಸ್ಸು ಮಲ್ಲಿಗೆ ಸಂಸ್ಥೆ
ತಾರಾಗಣ: ಅರುಣ್, ರಾಣಿ ವರದ್, ಶಿವಾನಂದ, ಸ್ವಪ್ನ ಶೆಟ್ಟಿಗಾರ್, ದೇವ್ ಇತರರು.

ಏ ಜುಟ್ಟು ನಮ್ ತಂಟೆಗೆ ಬಂದ್ರೆ ಅಷ್ಟೇ, ಈ ಸಲ ನಿನ್ ಮಗಳ ಕೈ ಕಚ್ಚಿದ್ದಿನಿ. ಮುಂದೆ ನಿನ್ ಮಗಳ ಕೆನ್ನೆ ಕಚ್ಚೀತೀನಿ…
ಬಾಲ್ಯದಲ್ಲೇ ಆ ಹುಡುಗ ಈ ಖಡಕ್ ಡೈಲಾಗ್ ಹೇಳಿದ ಮೇಲೆ ಮುಂದೆಯೂ ಆ ಹುಡುಗ ಪಕ್ಕಾ ಲೋಕಲ್ ಹುಡುಗನಾಗಿ ಮೆರಿತಾನೆ ಅಂತ ಪ್ರತ್ಯೇಕವಾಗಿ ಹೇಳುವಂತಿಲ್ಲ ಬಿಡಿ. ಚಿಕ್ಕಂದಿನಲ್ಲೇ ಅವನೊಬ್ಬ ಪೋಲಿ. ಅಪ್ಪ, ಅಮ್ಮ ಅಷ್ಟೇ ಅಲ್ಲ, ಆ ಊರಿನ ಯಾರೊಬ್ಬರಿಗೂ ಬಗ್ಗದ ಹುಡುಗ. ಅವನೊಬ್ಬ ಮಹಾ ಕೋಪಿಷ್ಠ. ಇವಿಷ್ಟು ಹೇಳಿದ ಮೇಲೆ ಇದೊಂದು ಪಕ್ಕಾ ರಿವೇಂಜ್ ಸ್ಟೋರಿನೇ ಇರಬೇಕು ಅಂತ ಅಂದುಕೊಂಡರೆ ಆ ಊಹೆ ತಪ್ಪು.

ಹೌದು, ಇದೊಂದು ತೊಂಬತ್ತರ ಕಾಲಘಟ್ಟದ ಲವ್ ಸ್ಟೋರಿ. ಹಾಗಂತ ಬರೀ ಲವ್ವು ತುಂಬಿಕೊಂಡಿದೆ ಅಂದರೆ ಆ ಕಲ್ಪನೆಯೇ ಇಲ್ಲಿಲ್ಲ. ಇಲ್ಲಿ ನಿಷ್ಕಲ್ಮಷ ಪ್ರೀತಿ ಇದೆ. ಮುಗ್ಧ ಮನಸ್ಸಿಗೆ. ಗೆಳೆತನವಿದೆ. ಸಂಬಂಧಗಳ ಮೌಲ್ಯವಿದೆ. ಕೋಪ ತಾಪಗಳ ಮುಖವಾಡವಿದೆ. ಭಾವನಾತ್ಮಕ ಅಂಶಗಳೂ ಇವೆ. ಹಾಗಾಗಿ ಇದೊಂದು ಮನ ಮುಟ್ಟುವ ಮತ್ತು ಮಿಡಿಯುವ ಪ್ರೀತಿ ಕಥೆ ಅಂದರೆ ತಪ್ಪಿಲ್ಲ. ಸಿನಿಮಾ ಮೊದಲರ್ಧ ಸುಮ್ಮನೆ ನೋಡಿಸಿಕೊಂಡು ಹೋಗುತ್ತೆ. ದ್ವಿತಿಯಾರ್ಧ ಒಂದಷ್ಟು ಕಾಡುವ ಹಂತಕ್ಕೂ ಕರೆದುಕೊಂಡು ಹೋಗುತ್ತೆ. ಸಿನಿಮಾದ ಕ್ಲೈಮ್ಯಾಕ್ಸ್ ಜೀವಾಳ. ಇಲ್ಲಿ ಪ್ರೀತಿಯ ಉನ್ಮಾದತೆ ಜೊತೆಗೆ ಕಣ್ಣಾಲಿಗಳು ತುಂಬುವಂತಹ ದೃಶ್ಯಗಳು ನೋಡುಗರನ್ನು ಹಿಡಿದಿಟ್ಟುಕೊಳ್ಳುತ್ತವೆ. ಅದೇ ಚಿತ್ರದ ಪ್ಲಸ್ ಎನ್ನಬಹುದು.

ತೊಂಬತ್ತರ ಕಾಲಘಟ್ಟದ ಸಿನಿಮಾಗಳಲ್ಲಿ ಸೂಕ್ಷ್ಮತೆಗೆ ಹೆಚ್ಚು ಒತ್ತು ಕೊಡುವುದು ಕಾಮನ್. ಇಲ್ಲೂ ಅದು ಮುಂದುವರೆದಿದೆ. ಆಗಿನ ಪ್ರೀತಿ, ಕಾಸ್ಟ್ಯೂಮ್, ಮಾತು, ನಡೆ ನುಡಿ ಎಲ್ಲವನ್ನೂ ಅಷ್ಟೇ ಸೂಕ್ಷ್ಮವಾಗಿ ಕಟ್ಟಿ ಕೊಡುವ ಪ್ರಯತ್ನವನ್ನು ನಿರ್ದೇಶಕರು ಮಾಡಿದ್ದಾರೆ. ಇಲ್ಲಿ ಮಳೆ ಇದೆ, ಬೆಂಕಿ ಇದೆ, ತಣ್ಣನೆಯ ಗಾಳಿ ಇದೆ, ಬಿರುಗಾಳಿಯೂ ಇದೆ. ಹಾಗಾಗಿ ಇದೊಂದು ಆ್ಯಕ್ಷನ್ ಕಮ್ ಲವ್ ಸ್ಟೋರಿ ಎನ್ನಬಹುದು. ಕೆಲವು ಕಡೆ ಅನಗತ್ಯ ದೃಶ್ಯಗಳಿವೆ. ಆಗಾಗ ಬೇಡವೆನಿಸುವ ಮಾತುಗಳೂ ಇವೆ. ಅಂತಹ ಸಮಯದಲ್ಲಿ ಮನಸ್ಸಿಗೆ ನಾಟುವ ಮುದವೆನಿಸುವ ಹಾಡು ಕಾಣಿಸಿಕೊಂಡು ಆ ಮಿಸ್​ಟೇಕ್ ಗಳನ್ನು ದೂರ ತಳ್ಳುತ್ತವೆ. ಆದ್ದರಿಂದ ಈ 90ರ ಕಾಲಘಟ್ಟದ ಕಥೆ ನೋಡುಗರಿಗೆ ಆಪ್ತವೆನಿಸುತ್ತಾ ಹೋಗುತ್ತದೆ.

ಸಿನಿಮಾದಲ್ಲಿ ಆಗಿನ ಕಥೆ ಹೇಳಿರುವುದು ತುಸು ಕಷ್ಟದ ಕೆಲಸವೇ. ಕೆಲವು ಕಡೆ ಅದು ಹರಸಾಹಸವಾಗಿಯೂ ಕಾಣುತ್ತದೆ. ಆದರೆ, ನಿರ್ದೇಶಕರ ಜಾಣತನ ಇಲ್ಲಿ ವರ್ಕೌಟ್ ಆಗಿರುವುದರಿಂದಲೇ ಸಿನಿಮಾ ಎಲ್ಲೂ ಬೋರ್ ಎನಿಸದೆ, ನೋಡಿಸಿಕೊಂಡು ಹೋಗುತ್ತದೆ. ಸಿನಿಮಾದ ಅವಧಿ ಕೊಂಚ ಜಾಸ್ತಿ ಆಯ್ತು ಅನ್ನುವ ಮಾತುಗಳನ್ನು ಬಿಟ್ಟರೆ, ಸಿನಿಮಾದಲ್ಲಿ ಬೇರೆ ಯಾವ ಮೈನಸ್ ಅಂಶಗಳು ಸಿಗುವುದಿಲ್ಲ. ಅವಧಿಯನ್ನು ಕೊಂಚ ಕಡಿಮೆ ಮಾಡಿದರೆ, ಮನಸ್ಸಿಗೆ ಇನ್ನಷ್ಟು ಆಪ್ತವಾಗುವ ಎಲ್ಲಾ ಸಾಧ್ಯತೆಗಳೂ ಇವೆ.

ಸಿನಿಮಾದ ಮೊದಲರ್ಧ ಜಾಲಿಯಾಗಿ ಕರೆದುಕೊಂಡು ಹೋಗುವ ಈ ಚಿತ್ರದ ಕಥೆ, ದ್ವಿತಿಯಾರ್ಧದಲ್ಲಿ ಒಂದಷ್ಟು ತಿರುವುಗಳನ್ನು ಕೊಡುತ್ತಾ ಹೋಗುತ್ತದೆ. ಚಿತ್ರದ ಕ್ಲ್ಯೆಮ್ಯಾಕ್ಸ್ ನಿಜಕ್ಕೂ ಊಹೆ ಮಾಡಿಕೊಳ್ಳಲಾಗುವುದಿಲ್ಲ. ಸಿನಿಮಾ ನೋಡಿ ಹೊರಬಂದವರಿಗೆ ಒಂದಷ್ಟು ಎದೆಭಾರ ಎನಿಸುವುದು ದಿಟ. ಆಗಿನ ಕಾಲಘಟ್ಟದ ಕಥೆಯಾದರೂ, ಈಗಿನ ಟ್ರೆಂಡ್ ಗೂ ಒಪ್ಪುವ ಮತ್ತು ಅಪ್ಪುವಂತಹ ಮೇಕಿಂಗ್ ಇಲ್ಲಿದೆ. ಎಲ್ಲಾ ವರ್ಗಕ್ಕೂ ನಾಟುವ ಎಳೆ ಇಲ್ಲಿರುವುದರಿಂದ ನೋಡುಗರನ್ನು ಒಂದಷ್ಟು ಭಾವುಕತೆಗೆ ದೂಡುತ್ತದೆ. ಸಿನಿಮಾದಲ್ಲಿ ಸಂಭಾಷಣೆಗೆ ಇನ್ನಷ್ಟು ಧಮ್ ಕಟ್ಟಿಕೊಡಬಹುದಿತ್ತು. ಸಂಕಲನ ಚಿತ್ರದ ವೇಗವನ್ನು ಎತ್ತಿ ಹಿಡಿದಿದೆ. ಸಿನಿಮಾದಲ್ಲಿ ಮಾತನಾಡುವ ಮತ್ತೊಂದು ಅಂಶವೆಂದರೆ ಅದು ಕಲಾತ್ಮಕತೆ. ಕಲಾನಿರ್ದೇಶಕರ ಕೈ ಚಳಕ ಆಗಿನ ಕಾಲಘಟ್ಟಕ್ಕೆ ಕರೆದೊಯ್ಯುತ್ತದೆ. ಇದು ಸಿನಿಮಾದ ಮತ್ತೊಂದು ಪ್ಲಸ್.

ಕಥೆ ಏನು?

ಚಿಕ್ಕಂದಿನಲ್ಲೇ ನಾಯಕ (ಅರುಣ್) ಕೋಪಿಷ್ಠ. ಅದು ದೊಡ್ಡವನಾದ ಮೇಲೂ ಮುಂದುವರೆಯುತ್ತೆ. ಊರಿನ ಬ್ರಾಹ್ಮಣ ಪೂಜಾರಿ ಮೇಲೆ ಅವನಿಗೆ ಎಲ್ಲಿಲ್ಲದ ಕೋಪ. ಕಾರಣ ಚಿಕ್ಕಂದಿನಲ್ಲಿ ಆದಂತಹ ಅವಮಾನ. ಅದು ಎಷ್ಟರಮಟ್ಟಿಗೆ ಅಂದರೆ, ಬ್ರಾಹ್ಮಣ ಮಗಳನ್ನು ಕಿಚಾಯಿಸುವಷ್ಟು. ಆದರೆ, ಮುಂಗೋಪಿ ನಾಯಕನೆಂದರೆ, ಆ ಬ್ರಾಹ್ಮಣ ಮಗಳಿಗೆ ಪ್ರೀತಿ. ಕಲ್ಲು ಮನಸ್ಸಿನ ನಾಯಕನನ್ನು ಹೇಗೆ ಮೃದುಗೊಳಿಸಿ, ಪ್ರೀತಿಯತ್ತ ಕರೆದೊಯ್ಯುತ್ತಾಳೆ ಅನ್ನೋದೇ ಕಥೆಯ ಒನ್ ಲೈನ್. ಇಬ್ಬರ ಪ್ರೀತಿ ಶುರುವಾಗೋಕೆ ಮೊದಲರ್ಧ ಮುಗಿಯುತ್ತೆ. ದ್ವಿತಿಯಾರ್ಧದಲ್ಲಿ ನಿರೀಕ್ಷಿಸದ ಸಂಗತಿಗಳು ನಡೆದುಹೋಗುತ್ತವೆ. ಸಿನಿಮಾದ ಕೊನೆಯಲ್ಲೆ ಎಲ್ಲವೂ ನಿಶಬ್ಧ. ಅಲ್ಲೊಂದಷ್ಟು ಘಟನೆಗಳು ನಡೆದುಹೋಗುತ್ತವೆ. ಈ ನಡುವೆ, ಜಾತಿ, ಧರ್ಮ, ಅಧರ್ಮ, ಪ್ರೀತಿ, ದ್ವೇಷ ಎಲ್ಲವೂ ಇಣುಕಿ ನೋಡುತ್ತವೆ. ತಣ್ಣಗೆ ಶುರುವಾದ ಪ್ರೀತಿ ಕೊನೆಗೆ ಕೆಂಡವಾಗುತ್ತೆ. ಅಂತ್ಯದಲ್ಲೇ ಏನಾಗುತ್ತೆ ಅನ್ನೋದೇ ಸಸ್ಪೆನ್ಸ್. ಆ ಕುತೂಹಲವಿದ್ದರೆ ಒಮ್ಮೆ 1990s ಸಿನಿಮಾ ನೋಡಲ್ಲಡ್ಡಿಯಿಲ್ಲ.

ನಾಯಕ ಅರುಣ್ ಫೈಟ್ ಮತ್ತು ಡ್ಯಾನ್ಸ್ ನಲ್ಲಿ ಇಷ್ಟವಾಗುತ್ತಾರೆ. ನಟನೆಯಲ್ಲೂ ಸೈ ಎನಿಸಿಕೊಂಡಿದ್ದಾರೆ. ಬಾಡಿಲಾಂಗ್ವೇಜ್, ಡೈಲಾಗ್ ಡಿಲವರಿಯಲ್ಲಿ ಹಿಂದೆ ಬಿದ್ದಿಲ್ಲ. ಫಸ್ಟ್ ಸಿನಿಮಾ ಆಗಿದ್ದರೂ, ಅನುಭವಿ ನಟರಂತೆ ಕಾಣುತ್ತಾರೆ. ಸಣ್ಣಪುಟ್ಟ ಮಿಸ್ಟೇಕ್ ಸರಿಪಡಿಸಿಕೊಂಡರೆ, ಕನ್ನಡಕ್ಕೊಬ್ಬ ಒಳ್ಳೆಯ ಹೀರೋ ಆಗುವ ಎಲ್ಲಾ ಲಕ್ಷಣಗಳಿವೆ. ನಾಯಕಿ ರಾಣಿವರದ್ ಅಂದದಷ್ಟೇ ಪಾತ್ರವನ್ನೂ ಕಟ್ಟಿಕೊಟ್ಟಿದ್ದಾರೆ. ಕ್ಲ್ಯೆಮ್ಯಾಕ್ಸ್ ನಲ್ಲಿ ಎಲ್ಲರನ್ನೂ ಮೌನವಾಗಿಸುವಲ್ಲಿ ಯಶಸ್ವಿಯಾಗಿದ್ದಾರೆ. ಉಳಿದಂತೆ ಅರುಣ್ ಕುಮಾರ್, ಶಾಸ್ತ್ರಿ ಪಾತ್ರದಲ್ಲಿ ಮೆಚ್ಚುಗೆ ಆಗುತ್ತಾರೆ. ಉಳಿದಂಂತೆ ಸ್ವಪ್ನ ಶೆಟ್ಟಿಗಾರ್ ಪಾತ್ರ ಗಮನಸೆಳೆಯುತ್ತೆ. ದೇವ್, ಶಿವಾನಂದ ಇತರರು ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.
ಮಹಾರಾಜ ಅವರ ಸಂಗೀತ ಇಲ್ಲಿ ಮಾತಾಡಿದೆ. ಅಪ್ಪ ನಿನ್ನ ಕಣ್ಣ ನೀರು, ಕಂಡೊಡನೆ ಮೌನಿ ನಾನು ಹಾತು ಮತ್ತು ಮಳೆ ಕುರಿತ ಸಾಂಗ್ ಇಷ್ಟವಾಗುತ್ತವೆ. ಹಾಲೇಶ್ ಅವರ ಕ್ಯಾಮೆರಾ ಕೈಚಳಕ ಸಿನಿಮಾದ ಅಂದವನ್ನು ಹೆಚ್ಚಿಸಿದೆ.

Categories
ಸಿನಿ ಸುದ್ದಿ

ಟಾಕ್ಸಿಕ್ ಪ್ಯಾನ್ ವರ್ಲ್ಡ್ ಸಿನಿಮಾ ಗುರು! ರಿಲೀಸ್ ಮೊದಲೇ ಭರಪೂರ ದಾಖಲೆ

ಗಡಿದಾಟಿ ದಾಖಲೆ ಬರೆದ ‘ಟಾಕ್ಸಿಕ್’…ಜಾಗತಿಮಟ್ಟದಲ್ಲಿ ಕೆವಿಎನ್-ಯಶ್ ಹೊಸ ಕ್ರಾಂತಿ

ರಾಕಿಂಗ್ ಸ್ಟಾರ್ ಯಶ್ ಹಾಗೂ ಕೆವಿಎನ್ ನಿಮಾರ್ತೃ ವೆಂಕಟ್ ಕೊನಂಕಿ ಯೋಜನೆ ಹಾಗೂ ಯೋಚನೆ ಎರಡು ದೊಡ್ಡದಾಗಿದೆ ಅನ್ನೋದಕ್ಕೆ ಟಾಕ್ಸಿಕ್ ಸಿನಿಮಾ ಅಂಗಳದಿಂದ ಸಿಕ್ಕಿರುವ ಲೇಟೆಸ್ಟ್ ಮಾಹಿತಿಯೇ ಸಾಕ್ಷಿ. ರಾಕಿಂಗ್ ಸ್ಟಾರ್ ಆಗಿದ್ದ ಯಶ್ ಕೆಜಿಎಫ್ ಸಿನಿಮಾ ಮೂಲಕ ನ್ಯಾಷನಲ್ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ. ಟಾಕ್ಸಿಕ್ ಮೂಲಕ ಮತ್ತೊಂದು ದೊಡ್ಡ ಹೆಜ್ಜೆ ಇಟ್ಟಿರುವ ಯಶ್ ಪ್ಯಾನ್ ಇಂಡಿಯಾ ಬಿಟ್ಟು ಈಗ ಪ್ಯಾನ್ ವರ್ಲ್ಡ್ ಗುರಿ ಇಟ್ಟಿದ್ದಾರೆ. ಯಶ್ ವಿಷನ್ ಗೆ ಕೆವಿಎನ್ ಸಂಪೂರ್ಣವಾಗಿ ಬೆಂಬಲ ಕೊಟ್ಟಿದೆ.

ಟಾಕ್ಸಿಕ್ ಕೇವಲ ಪ್ಯಾನ್ ಇಂಡಿಯನ್ ಸಿನಿಮಾವಲ್ಲ. ಜಾಗತಿಕ ಮಟ್ಟದಲ್ಲಿ ಈ ಚಿತ್ರವನ್ನು ಕೊಂಡೊಯ್ಯುವ ನಿಟ್ಟಿನಲ್ಲಿ ನಿರ್ಮಾಪಕ ವೆಂಕಟ್ ಹಾಗೂ ಚಿತ್ರದ ನಾಯಕ ಯಶ್ ಶ್ರಮಿಸುತ್ತಿದ್ದಾರೆ. ಭಾರತೀಯ ಚಿತ್ರರಂಗದ ಅದ್ಧೂರಿ ಹಾಗೂ ದುಬಾರಿ ಸಿನಿಮಾವಾಗಿರುವ ಈ ಚಿತ್ರವನ್ನು ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಚಿತ್ರೀಕರಿಸಲಾಗುತ್ತಿದೆ. ಬಳಿಕ ತೆಲುಗು, ತಮಿಳು, ಮಲಯಾಳಂ, ಹಿಂದಿ ಸೇರಿ ಇನ್ನೂ ಹಲವು ಅಂತಾರಾಷ್ಟ್ರೀಯ ಭಾಷೆಗಳಲ್ಲಿ ಡಬ್ ಮಾಡಲಾಗುತ್ತದೆ.

ಸಾಮಾನ್ಯವಾಗಿ ಸಿನಿಮಾವನ್ನು ಮೊದಲು ಮೂಲ ಭಾಷೆಯಲ್ಲಿ ಶೂಟ್ ಮಾಡಿ ಉಳಿದ ಭಾಷೆಗೆ ಡಬ್ ಮಾಡಿ ರಿಲೀಸ್ ಮಾಡಲಾಗುತ್ತದೆ. ಕೆಲವೊಮ್ಮೆ ಎರಡು ಭಾಷೆಗಳಲ್ಲಿ ಸಿನಿಮಾಗಳು ಒಟ್ಟಿಗೆ ಶೂಟ್ ಆದ ಉದಾಹರಣೆ ಇದೆ. ಆದರೆ, ಕನ್ನಡ ಹಾಗೂ ಇಂಗ್ಲಿಷ್ನಲ್ಲಿ ಒಟ್ಟಿಗೆ ಸಿನಿಮಾ ಶೂಟ್ ಈವರೆಗೆ ಆಗಿಲ್ಲ. ಟಾಕ್ಸಿಕ್ ತಂಡ ಈಗ ಕನ್ನಡ ಹಾಗೂ ಇಂಗ್ಲಿಷ್ನಲ್ಲಿ ಒಟ್ಟಿಗೆ ಸಿನಿಮಾ ಶೂಟ್ ಮಾಡಿ ಹೊಸ ದಾಖಲೆ ಬರೆದಿದೆ. ಈ ಮೂಲಕ ಅಪರೂಪದ ದಾಖಲೆಯನ್ನು ತನ್ನದಾಗಿಸಿಕೊಂಡಿದೆ. ಭಾಷೆ, ಗಡಿ, ಸಂಸ್ಕೃತಿ, ಈ ಎಲ್ಲ ಮೀತಿಗಳನ್ನು ಮೀರಿ ಹೊರಹೊಮ್ಮುವ ಚಿತ್ರವಾಗಬೇಕು ಎಂಬ ಚಿತ್ರತಂಡ ಶ್ರಮಿಸುತ್ತಿದೆ.

ಟಾಕ್ಸಿಕ್ ಸಿನಿಮಾವನ್ನು ವೆಂಕಟ್ ಕೆ. ನಾರಾಯಣ ಸಾರಥ್ಯದ ಕೆವಿಎನ್ ಪ್ರೊಡಕ್ಷನ್ ಹಾಗೂ ಯಶ್ ಮೊನಸ್ಟಾರ್ ಮೈಂಡ್ ಕ್ರಿಯೇಷನ್ ಜೊತೆಯಾಗಿ ಸೇರಿ ನಿರ್ಮಾಣ ಮಾಡುತ್ತಿದೆ. ಈಗಾಗಲೇ ಹಲವು ಅಂತಾರಾಷ್ಟ್ರೀಯ ಪ್ರಶಸ್ತಿ ಪಡೆದ ಗೀತು ಮೋಹನದಾಸ್ ಈ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದು. ಈ ಸಿನಿಮಾವನ್ನು ಪ್ಯಾನ್‌ ವರ್ಲ್ಡ್‌ ಹಂತಕ್ಕೆ ತೆಗೆದುಕೊಂಡು ಹೋಗಲು ಇಡೀ ಸಿನಿಮಾ ತಂಡ ಸಜ್ಜಾಗಿದೆ.

error: Content is protected !!