Categories
ಸಿನಿ ಸುದ್ದಿ

ಮಾರ್ಚ್ 8 ಕ್ಕೆ 2 ಸಾವಿರಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ರೆಕಾರ್ಡ್ ಬ್ರೇಕ್!

ತೆಲುಗಿನಲ್ಲಿ ಅನೇಕ ಚಿತ್ರಗಳನ್ನು ನಿರ್ಮಿಸಿರುವ, ಈವರೆಗೂ ತೆಲುಗು ಸೇರಿದಂತೆ ಎರಡು ಸಾವಿರಕ್ಕೂ ಅಧಿಕ ಚಲನಚಿತ್ರಗಳನ್ನು ವಿತರಣೆ ಮಾಡಿರುವ ಚಲದವಾಡ ಶ್ರೀನಿವಾಸರಾವ್ ನಿರ್ಮಿಸಿ, ನಿರ್ದೇಶಿಸಿರುವ ಪ್ಯಾನ್ ಇಂಡಿಯಾ ಚಿತ್ರ “ರೆಕಾರ್ಡ್ ಬ್ರೇಕ್”. ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರ ಮಾರ್ಚ್ 8, ಮಹಾ ಶಿವರಾತ್ರಿ ದಿನದಂದು ಎಲ್ಲಾ ಭಾಷೆಗಳಲ್ಲೂ ಭಾರತದಾದ್ಯಂತ ಸುಮಾರು ಎರಡು ಸಾವಿರಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಲಿದೆ.

ನಾನು ಮೂಲತಃ ಟಿಂಬರ್ ಉದ್ಯಮಿ. ಅಯೋಧ್ಯಾ ಶ್ರೀರಾಮನ ದೇವಸ್ಥಾನ ಸೇರಿದಂತೆ ಅನೇಕ ಜಗತ್ಪ್ರಸಿದ್ಧ ದೇವಸ್ಥಾನಗಳಿಗೆ ಮರ ಒದಗಿಸಿದ್ದೇವೆ. ನಮ್ಮ ಸಂಸ್ಥೆಯಿಂದ ಈವರೆಗೂ ನೂರಕ್ಕೂ ಹೆಚ್ಚು ಚಿತ್ರಗಳನ್ನು ನಿರ್ಮಾಣ ಮಾಡಿದ್ದೇವೆ. ಸಾವಿರ ಸಾವಿರ ಸಂಖ್ಯೆಗಳಲ್ಲಿ ಅನೇಕ ಭಾಷೆಗಳ ಚಿತ್ರಗಳನ್ನು ವಿತರಣೆ ಕೂಡ ಮಾಡಿದ್ದೇವೆ. ದುಡ್ಡು ಮಾಡುವುದಕ್ಕಿಂತ ನೋಡುಗರಿಗೆ ಒಳ್ಳೆಯ ಚಿತ್ರ ಕೊಡುವ ಆಸೆ ನನ್ನದು. ಇನ್ನು ಈ ಚಿತ್ರದ ಬಗ್ಗೆ ಹೇಳಬೇಕೆಂದರೆ, ಚಂಟಿ ಹಾಗೂ ಬಂಟಿ ಎಂಬ ಅನಾಥ ಹುಡುಗರಿಬ್ಬರು ತಾವು ಅಂದುಕೊಂಡದ್ದನ್ನು ಹಾಗೂ ಯಾರು ನಿರೀಕ್ಷಿಸದ್ದನ್ನು ಸಾಧಿಸುವ ಕಥೆಯಿದು.

ಖ್ಯಾತ ನಟಿ ಜಯಸುಧಾ ಅವರ ಪುತ್ರ ನಿಹಾರ್ ಹಾಗೂ ಹೊಸ ಪ್ರತಿಭೆ ನಾಗಾರ್ಜುನ ಚಂಟಿ ಹಾಗೂ ಬಂಟಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ರಗ್ದಾ ಇಫ್ತೇಕರ್ ಈ ಚಿತ್ರದ ನಾಯಕಿ. ಸತ್ಯಕೃಷ್ಣ, ಸಂಜನಾ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ. ಚಿತ್ರ ಮಾರ್ಚ್‌ 8ರಂದು ಮಹಾ ಶಿವರಾತ್ರಿ ಶುಭದಿವಸ ತೆಲುಗು, ಕನ್ನಡ, ತಮಿಳು, ಮಲಯಾಳಂ, ಹಿಂದಿ, ಭೋಜಪುರಿ, ಬೆಂಗಾಲಿ, ಒಡಿಯಾ ಭಾಷೆಗಳಲ್ಲಿ ಏಕಕಾಲಕ್ಕೆ ಭಾರತದಾದ್ಯಂತ ಎರಡು ಸಾವಿರಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಉತ್ತಮ ಕಥಾಹಂದರ ಹೊಂದಿರುವ ಈ ಚಿತ್ರವನ್ನು ನೋಡಿ. ಹಾರೈಸಿ ಎಂದರು ನಿರ್ಮಪಕ & ನಿರ್ದೇಶಕ ಚಲದವಾಡ ಶ್ರೀನಿವಾಸರಾವ್.

ನಾಯಕರಾದ ನಿಹಾರ್, ನಾಗಾರ್ಜುನ, ನಾಯಕಿ ರಗ್ದಾ ಇಫ್ತೇಕರ್, ನಟಿ ಸತ್ಯಕೃಷ್ಣ ಹಾಗೂ ನಟ ಪ್ರಸನ್ನ ಕುಮಾರ್ ತಮ್ಮ ಪಾತ್ರದ ಕುರಿತು ಮಾಹಿತಿ ನೀಡಿದರು. ನಿರ್ದೇಶಕ ಅಜಯ್ ಕುಮಾರ್ ಅತಿಥಿಗಳಾಗಿ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದರು.

Categories
ಸಿನಿ ಸುದ್ದಿ

ಸಾಮ್ರಾಟ್ ಮಾಂಧಾತ ಟ್ರೇಲರ್ ರಿಲೀಸ್: ನಿರ್ದೇಶಕ ಓಂ ಸಾಯಿಪ್ರಕಾಶ್ ಬಿಡುಗಡೆ

ಇತ್ತೀಚಿನ ದಿಗಳಲ್ಲಿ ಭಕ್ತಿಪ್ರಧಾನ ಮತ್ತು ಪೌರಾಣಿಕ ಚಿತ್ರಗಳ ನಿರ್ಮಾಣ ಕಡಿಮೆಯಾಗುತ್ತಿವೆ. ಅದರಲ್ಲೂ ಕೆಲವರು ಅಂಥಾ ಸಾಹಸಕ್ಕೆ ಮುಂದಾಗುತ್ತಿದ್ದಾರೆ. ಹೇಮಂತ್ ಪ್ರೊಡಕ್ಷನ್ಸ್ ಮೂಲಕ ಹೇಮಂತ್ ಕುಮಾರ್ ಅವರು ಸೂರ್ಯವಂಶದ ಸಾಮ್ರಾಟ್ ಮಾಂಧಾತನ ಕಥೆಯನ್ನು ತೆರೆಮೇಲೆ ತರುತ್ತಿದ್ದಾರೆ. ನಿರ್ಮಾಣದ ಜೊತೆಗೆ ಚಿತ್ರದ ನಿರ್ದೇಶನ ಕೂಡ ಮಾಡಿದ್ದಾರೆ.

ಸದ್ದಿಲ್ಲದೆ ಚಿತ್ರೀಕರಣ ಪೂರ್ಣಗೊಳಿಸಿ ಬಿಡುಗಡೆ ಹಂತಕ್ಕೆ ತಂದಿದ್ದಾರೆ. ಇತ್ತೀಚೆಗೆ ಸಾಮ್ರಾಟ್ ಮಾಂಧಾತ ಚಿತ್ರದ ಟ್ರೈಲರನ್ನು ಹಿರಿಯ ನಿರ್ದೇಶಕ ಓಂ ಸಾಯಿಪ್ರಕಾಶ್ ಅವರು ಬಿಡುಗಡೆಗೊಳಿಸಿದರು.

ಇಕ್ಷ್ವಾಕು ವಂಶದ (ಸೂರ್ಯವಂಶ) ಯುವನಾಶ್ವ ಮಹಾರಾಜನ ಮಗನಾದ ಮಾಂಧಾತ ತನ್ನ ಸತ್ಯ ಮತ್ತು ಧರ್ಮದ ಆಡಳಿತದಿಂದಲೇ ಪ್ರಖ್ಯಾತಿ ಗಳಿಸಿದ್ದನು. ಶಶಬಿಂದುವಿನ ಮಗಳು ಬಿಂದುಮತಿ ಚೈತ್ರರಥಿಯನ್ನು ವರಿಸಿದ ಮಾಂಧಾತನಿಗೆ ಪುರುಕುತ್ಸ ಅಥವಾ ಸುಸಂಧಿ, ಅಂಬರೀಷ ಮತ್ತು ಮುಚುಕುಂದರೆಂಬ ಮೂವರು ಗಂಡು ಮಕ್ಕಳು ಮತ್ತು ಐವತ್ತು ಹೆಣ್ಣುಮಕ್ಕಳಿದ್ದರೆಂದು ಹೇಳಲಾಗುತ್ತಿದೆ. ಆತನ ಕಥೆಯನ್ನು “ಸಾಮ್ರಾಟ್ ಮಾಂಧಾತ” ಚಿತ್ರದ ಮೂಲಕ ಹೇಮಂತ್ ಅವರು ನಿರೂಪಿಸಹೊರಟಿದ್ದಾರೆ.

ಅಂದುಕೊಂಡಂತೆ ಆದರೆ ಏಪ್ರಿಲ್‍ನಲ್ಲಿ ಸಾಮ್ರಾಟ ಮಾಂಧಾತ ತೆರೆಗೆ ಬರುವ ಸಾಧ್ಯತೆಗಳಿವೆ.
ಈ ಸಂದರ್ಭದಲ್ಲಿ ಮಾತನಾಡಿದ ಓಂ ಸಾಯಿ ಪ್ರಕಾಶ್ ಆಗಿನ ಕಾಲದಲ್ಲಿ ಕಥೆ ಬರೆಯಲು 6 ತಿಂಗಳು, ವರ್ಷ ಕಷ್ಟಪಡುತ್ತಿದ್ದೆವು. ಒಳ್ಳೆಯ ಕಂಟೆಂಟ್ ಇಟ್ಟುಕೊಂಡು ಮಾಡಿದ ಯಾವುದೇ ಸಿನಿಮಾ ಯಶಸ್ವಿಯಾಗುತ್ತವೆ. ಅದೇ ರೀತಿ ಈ ಚಿತ್ರವೂ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.

ನಿರ್ದೇಶಕ ನಿರ್ಮಾಪಕ ಹೇಮಂತ್ ಕುಮಾರ್ ಮಾತನಾಡಿ ಇದು ಪೌರಾಣಿಕ ಚಿತ್ರ. ಇದರಲ್ಲಿ ಅಭಿನಯಿಸಿರುವ ಎಲ್ಲರೂ ರಂಗಭೂಮಿ ಕಲಾವಿದರು. ಐದಾರು ತಿಂಗಳವರೆಗೆ ಎಲ್ಲರಿಗೂ ತರಬೇತಿ ನೀಡಿದ ನಂತರ ಕ್ಯಾಮೆರಾ ಮುಂದೆ ಅಭಿನಯಿಸಿದ್ದಾರೆ .ಕೋರೋನಾ ಸಮಯದಲ್ಲಿ ಚಿತ್ರೀಕರಣ ಆರಂಭಿಸಿದ್ದೆವು. ವಿಎಫ್‍ಎಕ್ಸ್ ಜಾಸ್ತಿ ಇರೋದ್ರಿಂದ ಚಿತ್ರ ಮೂರು ವರ್ಷ ತೆಗೆದುಕೊಂಡಿತು. ಮುಂದಿನವಾರ ಸೆನ್ಸಾರ್ ಗೆ ಅಪ್ಲೈ ಮಾಡಿ, ಏಪ್ರಿಲ್‍ನಲ್ಲಿ ಬಿಡುಗಡೆ ಮಾಡುವ ಯೋಜನೆಯಿದೆ. ತ್ರೇತಾಯುಗದ ಆದಿಭಾಗದಲ್ಲಿ ಭೂಲೋಕದಲ್ಲಿ ಅಧರ್ಮ ಹೆಚ್ಚಾದಾಗ ಧರ್ಮದೇವ ಶನಿ ಮಹಾತ್ಮನ ಮೊರೆ ಹೋಗುತ್ತಾನೆ.

ಆ ಸಂದರ್ಭದಲ್ಲಿ ಶನಿ‌ ಮತ್ತು ಲಕ್ಷ್ಮಿಯ ನಡುವೆ ಯಾರು ಶ್ರೇಷ್ಠರೆಂದು ನಿರ್ಧರಿಸುವ ಕಥೆಯೇ ಸಾಮ್ರಾಟ್ ಮಾಂಧಾತ ಎಂದರು
ಚಿತ್ರದಲ್ಲಿ ಮಾಂಧಾತನಾಗಿ ನಟಿಸಿರುವ ಬಸವರಾಜು ಅವರು ನಾಟಕದಲ್ಲೂ ಸಹ ಅದೇ ಪಾತ್ರ ಮಾಡಿ ಗುರುತಿಸಿಕೊಂಡವರು. ಉಳಿದಂತೆ ಶನಿದೇವನಾಗಿ ನಟಿಸಿರುವ ಸುಂದರಬಾಬು, ಬಿಂದುಮತಿಯಾಗಿ ಕಾಣಿಸಿಕೊಂಡಿರಯವ ಭಾರತಿ, ನಾರದನಾಗಿರುವ ನಂಜುಂಡಪ್ಪ, ಶೌಭರಿ ಮಹರ್ಷಿಯಾಗಿರುವ ನರಸಿಂಹಮೂರ್ತಿ, ಯವನಾಶ್ವನಾಗಿರುವ ಮಂಜುನಾಥ, ಕಲಾನಿರ್ದೇಶಕ ರವಿ ಮತ್ತಿತರು ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡರು. ಸಾಮ್ರಾಟ ಮಾಂಧಾತ ಚಿತ್ರಕ್ಕೆ ಆರ್.ವೀರೇಂದ್ರಕುಮಾರ್ ಸಂಭಾಷಣೆ ಸಾಹಿತ್ಯ ರಚಿಸಿದ್ದಾರೆ. ಶಿವರಾಮ್ ಅವರ ಸಂಕಲನ ಈ ಚಿತ್ರಕ್ಕಿದೆ.

Categories
ಸಿನಿ ಸುದ್ದಿ

ಹೈಡ್ ಅಂಡ್ ಸೀಕ್ ಟ್ರೇಲರ್ ಬಂತು: ಅನೂಪ್ ಗೆ ಸಚಿವ ರಾಮಲಿಂಗಾರೆಡ್ಡಿ ಸಾಥ್

ಯುವನಟ ಅನೂಪ್ ರೇವಣ್ಣ ಅಭಿನಯದ ನಾಲ್ಕನೇ ಚಿತ್ರ ಹೈಡ್ ಅಂಡ್ ಸೀಕ್ ಮಾರ್ಚ್ 15ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ, ಸುನೇರಿ ಆರ್ಟ್ ಕ್ರಿಯೇಶನ್ಸ್ ಮೂಲಕ ಪುನೀತ್ ನಾಗರಾಜು ಹಾಗೂ ವಸಂತ್‌ರಾವ್ ಎಂ. ಕುಲಕರ್ಣಿ ಸೇರಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಪುನೀತ್ ನಾಗರಾಜು ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮ ಕಳೆದ ಸೋಮವಾರ ನಡೆಯಿತು. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ವಿ.ಪ.ಸದಸ್ಯ ಎಸ್.ವಿಶ್ವನಾಥ್ ಅವರುಗಳು ಟ್ರೈಲರ್ ರಿಲೀಸ್ ಮಾಡಿ ಶುಭ ಕೋರಿದರು. ಈ ಸಂದರ್ಭದಲ್ಲಿ ರೇವಣ್ಣ ಅವರ ಅನೇಕ ಸ್ನೇಹಿತರು ಹಾಜರಿದ್ದು, ಶುಭ ಹಾರೈಸಿದರು.

ಈ ಚಿತ್ರದಲ್ಲಿ ಅನೂಪ್ ರೇವಣ್ಣ ಅವರು ಒಬ್ಬ ಕಿಡ್ನಾಪರ್ ಆಗಿ ಕಾಣಿಸಿಕೊಂಡಿದ್ದಾರೆ. ಧನ್ಯಾ ರಾಮ್‌ಕುಮಾರ್ ಚಿತ್ರದ ನಾಯಕಿ.

ವೇದಿಕೆಯಲ್ಲಿ ಸಚಿವ ರಾಮಲಿಂಗಾರೆಡ್ಡಿ ಅವರು ಮಾತನಾಡುತ್ತ ರೇವಣ್ಣ ಅವರ ಮಗ ಹೀರೋ ಆಗಿ ನಟಿಸಿರುವ ಈ ಚಿತ್ರ ಯಶಸ್ವಿಯಾಗಲಿ, ಇದು ಅವರ ನಾಲ್ಕನೇ ಚಿತ್ರ. ಟ್ರೈಲರ್ ನಲ್ಲಿ ಆತನ ಅಭಿನಯ ಚೆನ್ನಾಗಿ ಬಂದಿದೆ, ಚಿತ್ರವೂ ಸಹ ಚೆನ್ನಾಗಿರುತ್ತದೆ, ಈ ಸಿನಿಮಾದಲ್ಲಿ ಕೆಲಸ ಮಾಡಿದ ಎಲ್ಲರಿಗೂ ಒಳ್ಳೆಯ ಹೆಸರು ಬರಬೇಕು ಎಂದು ಶುಭ ಹಾರೈಸಿದರು.

‌‌ನಂತರ ಎಸ್.ವಿಶ್ವನಾಥ್ ಮಾತನಾಡುತ್ತ ಈ ಚಿತ್ರದಲ್ಲಿ ನಮ್ಮ ಹುಡುಗನೇ ಹೀರೋ ಆಗಿದ್ದಾನೆ. ರಾಜ್‌ಕುಮಾರ್ ಅವರ ಮೊಮ್ಮಗಳು ಕೂಡ ಚಿತ್ರದಲ್ಲಿ ನಟಿಸಿದ್ದಾರೆ. ಸಿನಿಮಾ ಎಲ್ಲರ ಮನಗೆಲ್ಲಲಿ ಎಂದು ಹಾರೈಸಿದರು.

ಸೀನಿಯರ್ ಪ್ರೊಫೆಸರ್ ಡಿ.ಕೆ.ರವಿ ಮಾತನಾಡಿ ಟ್ರೈಲರ್ ತುಂಬಾ ಇಂಪ್ರೆಸಿವ್ ಆಗಿದೆ. ಅನೂಪ್ ಒಳ್ಳೇ ಹುಡುಗ, ಆತನಿಗೆ ಉತ್ತಮ ಭವಿಷ್ಯವಿದೆ, ನಾಯಕಿ ಕೂಡ ಶೃಗಾರ್ ನಾಗರಾಜ್ ಹಾಗೂ ರಾಜ್‌ಕುಮಾರ್ ಅವರ ಮೊಮ್ಮಗಳು, ಎಲ್ಲರೂ ಚಿತ್ರ ನೋಡಿ ಹರಸಿ ಎಂದು ಹೇಳಿದರು.
ನಂತರ ಮಾಜಿ ಸಚಿವ ರೇವಣ್ಣ ಮಾತನಾಡಿ ಚಿತ್ರರಂಗ ಇವತ್ತು ಚಾಲೆಂಜಿಂಗ್ ಏರಿಯಾ ಆಗಿದೆ. ಕನ್ನಡ ಚಿತ್ರರಂಗಕ್ಕೆ ಹಿಂದೆ ಸೀಮಿತ ಮಾರುಕಟ್ಟೆ ಇತ್ತು, ಈಗದು ವಿಸ್ತಾರವಾಗಿದೆ. ನಾನು ಈ ಚಿತ್ರದ ಶೂಟಿಂಗ್ ಟೈಮ್‌ನಲ್ಲಿ ಹೋಗಿದ್ದೇನೆ, ಎಲ್ಲರೂ ಕುಟುಂಬದ ರೀತಿ ಸಿನಿಮಾ ಮಾಡಿದ್ದಾರೆ ಎಂದು ಹೇಳಿದರು. ನಟ ಹಾಗೂ ಧನ್ಯಾ ಸಹೋದರ ಧೀರೇನ್ ರಾಮ್ ಕುಮಾರ್ ಮಾತನಾಡಿ ಹೈಡ್ ಅಂಡ್ ಸೀಕ್ ಮಾ.15ಕ್ಕೆ ರಿಲೀಸಾಗ್ತಿದೆ. ನನ್ನ ತಂಗಿ ಧನ್ಯಾ, ಅನೂಪ್ ಚಿತ್ರವನ್ನು ಪ್ರೋತ್ಸಾಹಿಸಿ ಎಂದು ಕೇಳಿಕೊಂಡರು.

ನಿರ್ದೇಶಕ ಪುನೀತ್ ನಾಗರಾಜು ಮಾತನಾಡುತ್ತ ಕಿಡ್ನಾಪಿಂಗ್ ಕೂಡ ಹೇಗೆ ಒಂದು ಆರ್ಗನೈಜೇಶನ್ ಮೂಲಕ ನಡೆಯುತ್ತೆ ಎಂಬುದನ್ನು ಚಿತ್ರದಲ್ಲಿ ತೋರಿಸಿದ್ದೇವೆ, ಬೆಂಗಳೂರು, ಮಾಗಡಿ, ಚಿಕ್ಕಮಗಳೂರು ಸುತ್ತಮುತ್ತ 30 ದಿನಗಳ ಕಾಲ ಚಿತ್ರೀಕರಿಸಿದ್ದೇವೆ. ಹೈಡ್ ಅಂಡ್ ಸೀಕ್ ಚಿತ್ರದಲ್ಲಿ ನಾಯಕನೇ ಕಿಡ್ನಾಪರ್ ಆಗಿದ್ದು, ಹೆಚ್ಚು ಮಾತನಾಡದ, ಯಾವುದನ್ನೂ ಎಕ್ಸ್ಪ್ರೆಸ್ ಮಾಡದ ವ್ಯಕ್ತಿಯ ಪಾತ್ರ ಅನೂಪ್ ರೇವಣ್ಣ ಅವರದು.
ಅಲ್ಲದೆ ನಾಯಕಿ ಒಬ್ಬ ಬ್ಯುಸಿನೆಸ್ ಮ್ಯಾನ್ ಮಗಳಾಗಿರುತ್ತಾರೆ, ಮಾರ್ಚ್ 15ಕ್ಕೆ ಚಿತ್ರ ಬಿಡುಗಡೆಯಾಗುತ್ತಿದೆ ಎಂದು ಹೇಳಿದರು.

ನಾಯಕಿ ಧನ್ಯಾ ರಾಮಕುಮಾರ್ ಮಾತನಾಡಿ ನನ್ನ ಪಾತ್ರದ ಹೆಸರು ಹಾಸಿನಿ, ಒಳ್ಳೇ ಫ್ಯಾಮಿಲಿಯಿಂದ ಬಂದ ಹುಡುಗಿ, ಅಂಥ ಹುಡುಗಿ ಕಿಡ್ನ್ಯಾಪ್ ಆದಾಗ ಆಕೆ ಎದುರಿಸಿದ ಪರಿಸ್ಥಿತಿ ಎಂಥಾದ್ದು, ಆ ಕಿಡ್ನಾರ‍್ಸ್ ಉದ್ದೇಶ, ಹಿನ್ನೆಲೆ ಏನು ಅನ್ನೋದರ ಮೇಲೆ ಈ ಸಿನಿಮಾ ನಿಂತಿದೆ ಎಂದವರು ಹೇಳಿದರು.

ನಟ ಬಲ ರಾಜವಾಡಿ, ಸೂರಜ್, ಜಗ್ಗಿ, ವಿತರಕ ಕಮರ್ ಚಿತ್ರದ ಕುರಿತಂತೆ ಮಾತನಾಡಿದರು. ರಿಜೋ ಪಿ.ಜಾನ್ ಅವರ ಛಾಯಾಗ್ರಾಹಣ, ಸ್ಯಾಂಡಿ ಅದಾನ್ಕಿ ಅವರ ಸಂಗೀತ ಸಂಯೋಜನೆ, ಮಧು ತುಂಬಕೆರೆ ಅವರ ಸಂಕಲನ ಈ ಚಿತ್ರಕ್ಕಿದೆ.

Categories
ಸಿನಿ ಸುದ್ದಿ

ಲೈನ್ ಮ್ಯಾನ್ ಬರ್ತಾರೆ: ಮೋಷನ್ ಪೋಸ್ಟರ್ ಬಂತು- ಮಾರ್ಚ್‌ 15ಕ್ಕೆ ಚಿತ್ರ ರಿಲೀಸ್

ಕನ್ನಡ ಚಿತ್ರರಂಗದಲ್ಲಿ ರನ್ ಆಂಟೋನಿ ಹಾಗೂ ಟಕ್ಕರ್ ಚಿತ್ರಗಳಿಗೆ ಆ್ಯಕ್ಷನ್ ಕಟ್ ಹೇಳಿದ್ದ ನಿರ್ದೇಶಕ ರಘು ಶಾಸ್ತ್ರಿ ಇದೀಗ ಮತ್ತೊಂದು ವಿಭಿನ್ನ ಸಿನಿಮಾದೊಂದಿಗೆ ಬರುತ್ತಿದ್ದಾರೆ. ಈ ಚಿತ್ರಕ್ಕೆ ‘ಲೈನ್ ಮ್ಯಾನ್’ ಎಂಬ ಶೀರ್ಷಿಕೆ ಇಡಲಾಗಿದೆ. ಡಿಫ್ರೆಂಟ್ ಟೈಟಲ್ ಮೂಲಕ ಸಿನಿಮಾ ಪ್ರೇಕ್ಷಕರ ಗಮನ ಸೆಳೆಯುತ್ತಿದ್ದು, ಇದೀಗ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ.

ಲೈನ್ ಮ್ಯಾನ್ ಮೋಷನ್ ಪೋಸ್ಟರ್ ಅನಾವರಣಗೊಂಡಿದೆ. ಸರಿಗಮ ಕನ್ನಡ ಯೂಟ್ಯೂಬ್ ನಲ್ಲಿ ಚಿತ್ರದ ಝಲಕ್ ರಿಲೀಸ್ ಆಗಿದ್ದು, ಹಳ್ಳಿ ಬ್ಯಾಕ್ ಡ್ರಾಪ್ ನಲ್ಲಿ ಮೂಡಿಬಂದಿದೆ. ಕದ್ರಿ ಮಣಿಕಾಂತ್ ಮ್ಯೂಸಿಕ್ ಕಿಕ್ ಕೊಡ್ತಿದೆ. ಯುವ ನಟ ತ್ರಿಗುಣ್ ಅವರು ಲೈನ್ ಮ್ಯಾನ್ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಆರ್.ಜಿ.ವಿ ನಿರ್ದೇಶನದ ‘ಕೊಂಡ’ ಚಿತ್ರ ಸೇರಿದಂತೆ ಕೆಲ ಸಿನಿಮಾಗಳಲ್ಲಿ ನಟಿಸಿರುವ ತ್ರಿಗುಣ್ ಅವರಿಗಿದು ನಾಯಕ ನಟನಾಗಿ ಚೊಚ್ಚಲ ಚಿತ್ರ. ಹಾಗಾಗಿ ಸಿನಿಮಾ ಕುರಿತು ಸಾಕಷ್ಟು ನಿರೀಕ್ಷೆ, ಭರವಸೆಯನ್ನಿಟ್ಟುಕೊಂಡಿದ್ದಾರೆ. ಚಿತ್ರದಲ್ಲಿ ಕಾಜಲ್ ಕುಂದರ್ ನಾಯಕಿಯಾಗಿ ಅಭಿನಯಿಸಿದ್ದಾರೆ. ಉಳಿದಂತೆ ಹಿರಿಯ ನಟಿ ಬಿ ಜಯಶ್ರೀ, ಮೈಕೋ ನಾಗರಾಜ್, ಹರಿಣಿ, ಅಂಜಲಿ, ಅಪೂರ್ವಶ್ರೀ ಸೇರಿದಂತೆ ದೊಡ್ಡ ತಾರಾಬಳಗ ಚಿತ್ರದಲ್ಲಿದೆ.

ವಿದ್ಯುತ್ಗೆ ಸಂಬಂಧಿಸಿದ ಕೆಲಸ, ತೊಂದರೆ ಸರಿಪಡಿಸುವ ‘ಲೈನ್ ಮ್ಯಾನ್’ ಸುತ್ತ ಈ ಕಥೆ ಸುತ್ತುತ್ತದೆ. ಭಿನ್ನ, ಡಿಯರ್ ಸತ್ಯ ಸಿನಿಮಾಗಳನ್ನು ನಿರ್ಮಿಸಿರುವ ಪರ್ಪಲ್ ರಾಕ್ ಸಂಸ್ಥೆಯ ಮೂರನೇ ಚಿತ್ರವೇ ‘ಲೈನ್ ಮ್ಯಾನ್’. ಯತೀಶ್ ವೆಂಕಟೇಶ್, ಗಣೇಶ್ ಪಾಪಣ್ಣ, ಶ್ರೀನಿವಾಸ್ ಬಿಂಡಿಗನವಿಲೆ ಹಾಗೂ ಅಜಯ್ ಅಪರೂಪ್ ಸೇರಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.


ಮೂರು ಹಾಡುಗಳಿರುವ ಈ ಚಿತ್ರಕ್ಕೆ ಮಣಿಕಾಂತ್ ಕದ್ರಿ ಸಂಗೀತ ನೀಡಿದ್ದಾರೆ. ಶಾಂತಿ ಸಾಗರ್ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಪ್ರಚುರ ಪಿ.ಪಿ, ಜ್ಯೋತಿ ರಘು ಶಾಸ್ತ್ರೀ ಹಾಗೂ ಮಣಿಕಾಂತ್ ಕದ್ರಿ ಅವರ ಸಹ ನಿರ್ಮಾಣವಿದೆ. ಚಾಮರಾಜನಗರದ ಚಂದಕವಾಡಿಯಲ್ಲಿ ಶೂಟಿಂಗ್ ನಡೆಸಲಾಗಿದ್ದು, ಕನ್ನಡ ಹಾಗೂ ತೆಲುಗು ಸೇರಿ ಎರಡು ಭಾಷೆಯಲ್ಲಿ ಚಿತ್ರ ತಯಾರಾಗಿದೆ. ಸೆನ್ಸಾರ್ ಪಾಸಾಗಿರುವ ಲೈನ್ ಮ್ಯಾನ್ ಸಿನಿಮಾ ಮಾರ್ಚ್ 15ಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.

Categories
ಸಿನಿ ಸುದ್ದಿ

ಜುಗಲ್ ಬಂದಿ ಟ್ರೇಲರ್ ರಿಲೀಸ್: ಮಾರ್ಚ್ 1 ಕ್ಕೆ ಚಿತ್ರ ಬಿಡುಗಡೆ

ಕನ್ನಡ ಚಿತ್ರರಂಗದಲ್ಲೀಗ ಪ್ರಯೋಗಾತ್ಮಕ ಚಿತ್ರಗಳ ಅಲೆ ಶುರುವಾಗಿದೆ ಕಮರ್ಷಿಯಲ್ ಚಿತ್ರಗಳ ನಡುವೆ ಆಗೊಮ್ಮೆ ಈಗೊಮ್ಮೆ ವಿಭಿನ್ನ ಪ್ರಯತ್ನಗಳು ನಡೆಯುತ್ತಿವೆ. ಜೀವನಕ್ಕೆ ಬಹಳ ಹತ್ತಿರವಾದ ಕಥೆಗಳು ದೃಶ್ಯರೂಪಕ್ಕೆ ಇಳಿಸಲಾಗ್ತಿದೆ. ಅದರ ಮುಂದುವರೆದ ಭಾಗವಾಗಿ ತಯಾರಾಗಿರುವ ಚಿತ್ರ
“ಜುಗಲ್ ಬಂದಿ.”ಭಗವದ್ಗೀತೆ, ಕುರಾನ್, ಬೈಬಲ್ನಲ್ಲೂ ಬರ್ದಿಲ್ಲ ದುಡ್ಮಾಡದೆಂಗತ! ಟ್ಯಾಗ್ ಲೈನ್ ಮೂಲಕ ಕುತೂಹಲ ದುಪ್ಪಟ್ಟು ಮಾಡಿರುವ ಜುಗಲ್ ಬಂದಿ ಮೊದಲ ನೋಟ ಬಿಡುಗಡೆಯಾಗಿದೆ.

ಟ್ರೇಲರ್ ಬಿಡುಗಡೆ ಬಳಿಕ ಮಾತನಾಡಿ ನಿರ್ದೇಶಕ ದಿವಾಕರ್ ಡಿಂಡಿಮ, ಸ್ಕೂಲ್‌ಗೆ ಹೋಗುವಾಗ ಅಮ್ಮ ಕೈ ಹಿಡಿದು ಕರೆದುಕೊಂಡು ಹೋಗಿದ್ದರು,ಆದ್ರೆ ಚಿತ್ರರಂಗಕ್ಕೆ ಒಬ್ಬನೇ ನಡೆದುಕೊಂಡು ಬಂದಿದ್ದೇನೆ.
ದಯವಿಟ್ಟು ತಪ್ಪುಗಳು ಇದ್ದರೆ, ನಮ್ಮಿಂದ ಸಮಸ್ಯೆ ಆಗಿದ್ದರೆ ಯಾವುದನ್ನೂ ಮನಸ್ಸಿನಲ್ಲಿ ಇಟ್ಟುಕೊಳ್ಳಬೇಡಿ, ಜುಗಲ್ ಬಂದಿ ಸಿನಿಮಾ ವೈಯಕ್ತಿಕವಾಗಿ ಗೆಲ್ಲಲು ಮಾಡಿರುವ ಸಿನಿಮಾವಲ್ಲ. ಚಿತ್ರರಂಗಕ್ಕೆ ಬಂದಿದ್ದೇವೆ 10 ಅಭಿಮಾನಿಗಳನ್ನಾದರು ಚಿತ್ರರಂಗಕ್ಕೆ ಕೊಡೋಣಾ,ನಮ್ಮ ಸಿನಿಮಾದಿಂದ ಚಿತ್ರರಂಗಕ್ಕೆ ಕನ್ನಡ ಸಿನಿಮಾ ಪ್ರೇಮಿಗಳನ್ನು ಕೊಡೋಣಾ ಎಂಬ ಉದ್ದೇಶದಿಂದ ಮಾಡಿದ್ದೇವೆ. ವೈಯಕ್ತಿಕ ಗೆಲುವಿಗಿಂತ ಚಿತ್ರರಂಗಕ್ಕೆ ಖಾಯಂ ಪ್ರೇಕ್ಷಕರನ್ನು ಹುಟ್ಟಿಸುವ ಕೆಲಸ ಮಾಡೋಣಾ ಅಂತಾ ಮಾಡಿರುವ ಸಿನಿಮಾ.
ಜುಗಲ್ ಬಂದಿ ಸಿನಿಮಾವನ್ನು ತುಂಬಾ ಅರ್ಗ್ಯಾನಿಕ್ ಆಗಿ ಮಾಡಿದ್ದೇನೆ. ಯಾವ ಚಿತ್ರದ ರೆಪ್ರೆನ್ಸ್ ಸಿಗಲ್ಲ..ಈ ಚಿತ್ರ ನಿಮ್ಮೊಳಗಿನ ಪ್ರೇಕ್ಷಕರನ್ನು ಟಚ್ ಮಾಡುವುದರಲ್ಲಿ ಡೌಟ್ ಇಲ್ಲ. ಎಲ್ಲರೂ ಚಿತ್ರದಲ್ಲಿ ಎರಡು ಎರಡು ನಾಲ್ಕು ನಾಲ್ಕು ಕೆಲಸ ಮಾಡಿದ್ದೇವೆ ಎಂದರು.

ಮಾನಸಿ ಸುಧೀರ್ ಮಾತನಾಡಿ, ಇದೊಂದು ವಿನೂತನ ಪ್ರಯತ್ನ. ಜುಗಲ್ ಬಂಧಿ ಒಂದು ಕ್ರಿಯೇಟಿವ್ ಟೀಮ್. ಈ ತಂಡದಲ್ಲಿ ನನಗೊಂದು ಪಾತ್ರ ಮಾಡಲು ಅವಕಾಶ ನೀಡಿದ ಡಿಂಡಿಮ ಸರ್ ಗೆ ಧನ್ಯವಾದ. ನನ್ನ ಪಾತ್ರ ಯಶೋಧ. ಯಶೋಧ ಅಂದತಕ್ಷಣ ಕೃಷ್ಣ ನೆನಪು ಆಗುತ್ತಾರೆ. ತಾಯಿಯ ಪ್ರೀತಿ, ನೆನಪು ವಾತ್ಸಲ್ಯ ಎಲ್ಲವೂ ನೆನಪು ಆಗುತ್ತದೆ. ಇಲ್ಲಿರುವ ಯಶೋಧ ಮಗುವಿಲ್ಲ. ಅಮ್ಮ ಎನಿಸಿಕೊಳ್ಳಲು ಕಾಯುತ್ತಿದ್ದಾಳೆ. ಅಂತಹ ಪಾತ್ರ. ಕಾಂತಾರದ ಕಮಲ ಒಂದು ರೇಂಜಾದರೆ. ಯಶೋಧ ಮತ್ತೊಂದು ರೇಂಜ್. ಕಂಪ್ಲೀಟ್ ವಿಭಿನ್ನ ಪಾತ್ರಗಳು. ಎರಡು ಒಟ್ಟೊಟ್ಟಿಗೆ ಬಂದ ಪಾತ್ರಗಳು. ಎರಡು ಒಟ್ಟಿಗೆ ಶೂಟಿಂಗ್ ಆಗಿದ್ದು, ಜುಗಲ್ ಬಂದಿ ಯನ್ನು ಮೊದಲ ಆರಿಸಿಕೊಂಡಿದ್ದೇನೆ. ನಾನು ಈ ಚಿತ್ರದಲ್ಲಿ ಇರುವುದು ಹೆಮ್ಮೆ ಇದೆ ಎಂದರು.

ಸಂಭಾಷಣೆಗಾರ ಮಾಸ್ತಿ ಮಾತನಾಡಿ, ಯಾವುದೇ ಒಂದು ಸಿನಿಮಾದ ಘಟ್ಟವನ್ನು ದೊಡ್ಡವರಿಂದ ಉದ್ಘಾಟನೆ ಮಾಡಿಸಬೇಕೆಂದು ಆಸೆಪಟ್ಟಿರುತ್ತಾರೆ. ಆದರೆ ಈ ತಂಡ ಅಸಿಸ್ಟೆಂಟ್ ಡೈರೆಕ್ಟರ್ ಗಳಿಂದ ಟ್ರೇಲರ್ ಲಾಂಚ್ ಮಾಡಿಸಿದ್ದು ಖುಷಿ ಕೊಟ್ಟಿತು. ಅಸಿಸ್ಟೆಂಟ್ ಡೈರೆಕ್ಟರ್ ಚಿತ್ರದ ನಿಜವಾದ ಹೀರೋಗಳು. ಯಾವಾಗಲೂ ಕಥೆ ಬರೆಯುವಾಗ ಹೀರೋ ತ್ಯಾಗ ಮಾಡಿಕೊಳ್ತಾರೆ ಅಂತಾ ಬರೆಯುತ್ತೇವೆ. ಆದರೆ ನಿಜವಾದ ತ್ಯಾಗ ಮಾಡಿಕೊಳ್ಳುವವರು ಅಸಿಸ್ಟೆಂಟ್ ಡೈರೆಕ್ಟರ್. ಅವರು ಸಿನಿಮಾ ಕನಸು ಹೊತ್ತು ಊರುಬಿಟ್ಟು ಬೇರೆ ಊರಿಗೆ ಬಂದಿರ್ತಾರೆ. ಅವರೊಳಗಡೆ ಒಂದು ಹಸಿವಿರುತ್ತದೆ. ಜುಗಲ್ ಬಂಧಿ ಚೆನ್ನಾಗಿದೆ ಎಂಬುದು ಕಿವಿಗೆ ಬಿದ್ದರೆ ಹೋಗಿ ಸಿನಿಮಾ ನೋಡಿ. ತುಂಬಾ ಭರವಸೆ ಇಟ್ಟು ಬಂದಿರುವ ಚಿತ್ರ. ಕಂಟೆಂಟ್ ಚೆನ್ನಾಗಿದೆ. ಟ್ರೇಲರ್ ಚೆನ್ನಾಗಿದೆ. ಇಡೀ ತಂಡಕ್ಕೆ ಒಳ್ಳೆಯದಾಗಲಿ ಎಂದರು.

‘ಜುಗಲ್ ಬಂದಿ’ ಒಂದೇ ಕತೆಯ ಸಿನಿಮಾ ಅಲ್ಲ. ಇದು ಹಲವು ಕಥೆಗಳ ಸಂಗಮ. ಹೀಗಾಗಿ ಕುತೂಹಲ ದುಪ್ಪಟ್ಟು ಮಾಡಿದೆ. ತಾಯಿ ಹೃದಯದ ಮಿಡಿತ, ಪ್ರೀತಿ, ವಂಚನೆಯನ್ನು ಈ ಟ್ರೈಲರ್ ಒಳಗೊಂಡಿದೆ. ಅಲ್ಲದೆ ಕಾಮಿಡಿ ಸನ್ನಿವೇಶಗಳು ಸಾಕಷ್ಟಿವೆ. ಸಸ್ಪೆನ್ಸ್ ಥ್ರಿಲ್ಲರ್ ಜೊತೆಗೆ ಎಲ್ಲಾ ಎಲಿಮೆಂಟ್ಸ್ ಕೂಡ ಟ್ರೇಲರ್ ನಲ್ಲಿ ಹೈಲೆಟ್ ಆಗಿದೆ. ದಿವಾಕರ್ ಡಿಂಡಿಮ ಈ ಚಿತ್ರದ ಸಾರಥಿ. ಅವರಿಗಿದು ಮೊದಲ ಪ್ರಯತ್ನ.

‘ಕಾಂತಾರ’ ಸಿನಿಮಾದಲ್ಲಿ ರಿಷಬ್ ಶೆಟ್ಟಿಯ ತಾಯಿ ಪಾತ್ರದಲ್ಲಿ ನಟಿಸಿದ್ದ ಮಾನಸಿ ಸುಧೀರ್ ಈ ಸಿನಿಮಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅರ್ಚನಾ ಕೊಟ್ಟಿಗೆ, ಅಶ್ವಿನ್ ರಾವ್ ಪಲ್ಲಕ್ಕಿ, ಸಂತೋಷ್ ಆಶ್ರಯ್, ಯಶ್ ಶೆಟ್ಟಿ ಈ ಸಿನಿಮಾದಲ್ಲಿ ಪ್ರಮುಖ ಪಾತ್ರಗಳು. ಹಾಗೇ ಪ್ರಕಾಶ್ ಬೆಳಗಲ್, ಚಂದ್ರಪ್ರಭಾ ಜಿ ಯುವಕ, ರಂಜನ್, ಯುಕ್ತ ಅಲ್ಲು ಸುಶ್, ಅರವಿಂದ್ ರಾವ್ ‘ಜುಗಲ್ ಬಂದಿ’ ಸಿನಿಮಾದಲ್ಲಿ ನಟಿಸಿದ್ದಾರೆ.

ದಿವಾಕರ ಡಿಂಡಿಮ ನಿರ್ದೇಶನದ ಜೊತೆಗೆ ನಿರ್ಮಾಣ ಜವಾಬ್ದಾರಿ ಕೂಡ ಇವರದ್ದೇ. ಪ್ರದ್ಯೋತ್ತನ್ ಸಂಗೀತ ನೀಡಿದ್ರೆ, ಪ್ರಸಾದ್ ಹೆಚ್ ಎಂ ಸಂಕಲನ ಚಿತ್ರಕ್ಕಿದೆ.
ಚಿತ್ರದಲ್ಲಿ ಮೂರು ಹಾಡುಗಳಿದ್ದು, ಮೂರೂ ಹಾಡುಗಳಿಗೆ ನಿರ್ದೇಶಕ ದಿವಾಕರ್ ಡಿಂಡಿಮ ಅವರೇ ಸಾಹಿತ್ಯ ರಚಿಸಿದ್ದಾರೆ.
ಸಹ ನಿರ್ದೇಶನ ಬಾಲಕೃಷ್ಣ ಯಾದವ್, ಶ್ರೀನಿವಾಸ್ ಸಿನಿ. ಸಹಾಯಕ ನಿರ್ದೇಶಕರು ಸಂತೋಷ್ ಆಶ್ರಯ, ಕೊಟ್ರೇಶಿ ಕನಸು. ನಿರ್ದೇಶನ ಟ್ರೈನಿಯಾಗಿ ರಘು ವೈ.ಜಿ. ಕಲೆ – ತಿರುಪತಿ, ಲೈಟಿಂಗ್ ಮಂಜೇಶ, ಯೂನಿಟ್ ಉಲ್ಲಾಸ ಅವರ ಕೆಲಸ ಈ ಚಿತ್ರಕ್ಕಿದೆ. ಸದ್ಯ ಚಿತ್ರದ ಪ್ರಚಾರ ಕಾರ್ಯ ಭರದಿಂದ ಸಾಗುತ್ತಿದೆ. ವಿಷಿಕಾ ಫಿಲ್ಮ್ಸ್ ರಾಜ್ಯಾದ್ಯಂತ ಸಿನಿಮಾ ವಿತರಣೆ ಜವಾಬ್ದಾರಿ ಹೊತ್ತಿದ್ದು, ಅವರದ್ದೇ ಪ್ರೆಸೆಂಟ್ಸ್ ಮೂಲಕ ತೆರೆಗೆ ಬರಲಿದೆ.
ಟ್ರೇಲರ್ ಮೂಲಕ ಪ್ರಚಾರದ ಕಹಳೆ ಮೊಳಗಿಸಿರುವ ಚಿತ್ರತಂಡ ಮಾರ್ಚ್ 1ಕ್ಕೆ ಸಿನಿಮಾವನ್ನು ಪ್ರೇಕ್ಷಕರ ಎದುರು ತರ್ತಿದೆ.

Categories
ಸಿನಿ ಸುದ್ದಿ

ಶಾಖಾಹಾರಿ ಎಂಬ ಚೇತೋಹಾರಿ: ಓಟಿಟಿಗೆ ಕಾಯಬೇಡಿ ಥಿಯೇಟರ್ ಗೆ ಬನ್ನಿ ಅಂದ್ರು ರಂಗಾಯಣ ರಘು

ಅಭಿನಯಾಸೂರ ರಂಗಾಯಣ ರಘು ನಟನೆಯ ಶಾಖಾಹಾರಿ ಸಿನಿಮಾ ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾಗಿದೆ. ನಿರ್ದೇಶಕ ಸಂದೀಪ್ ಸುಂಕದ್ ಬೇರೊಂದು ದಿಕ್ಕಿನಲ್ಲಿ ಯೋಚಿಸಿ ಹೊಸತನಕ್ಕೆ ಒತ್ತುಕೊಟ್ಟು ಸಿನಿರಸಿಕರನ್ನು ರಂಜಿಸುವಲ್ಲಿ ಗೆದ್ದಿದ್ದಾರೆ. ಪಕ್ಕ ಪೈಸಾ ವಸೂಲ್ ಸಿನಿಮಾ ಎನಿಸಿಕೊಂಡಿರುವ ಶಾಖಾಹಾರಿ ರೋಚಕ ತಿರುವು, ಭಾವನಾತ್ಮಕ ಸಂಬಂಧ, ಪ್ರೀತಿ, ಸ್ನೇಹ, ನಂಬಿಕೆ ಇವೆಲ್ಲವುದರ ಬಗ್ಗೆ ಬಹಳ ಸೂಕ್ಷ್ಮವಾಗಿ ಪ್ರೇಕ್ಷಕರಿಗೆ ಮುಟ್ಟಿಸಿ ಎಲ್ಲಾ ರೀತಿಯ ರಸಾನುಭವ ನೀಡಿದೆ. ಇಷ್ಟು ಸಾಕಲ್ವಾ? ಪ್ರೇಕ್ಷಕರು ಬಯಸೋದು ಇದನ್ನೇ.ಕೊಟ್ಟ ಕಾಸಿಗೆ ಒಳ್ಳೆ ಎಂಟರ್ ಟೈನ್ಮೆಂಟ್ ಸಿಗಬೇಕು. ಚಿತ್ರ ಚೆನ್ನಾಗಿರಬೇಕು. ಅದೆಲ್ಲಾ ಕ್ವಾಲಿಟಿ ಶಾಖಾಹಾರಿ ಚಿತ್ರಕ್ಕಿದೆ. ಆದ್ರೆ ಚಿತ್ರತಂಡ ನಿರೀಕ್ಷೆ ಮಟ್ಟದಲ್ಲಿ ಪ್ರೇಕ್ಷಕಪ್ರಭು ಥಿಯೇಟರ್ ನತ್ತ ಹೆಜ್ಜೆ ಇಡುತ್ತಿಲ್ಲ ,ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಸಿನೆಮಾ ನೋಡಲು ಬರಲಿ ಅನ್ನುವ ಆಶಯವನ್ನು ಚಿತ್ರತಂಡ ಮನದಾಳದ ಮಾತನ್ನು ಹೇಳಿದೆ.

ರಂಗಾಯಣ ರಘು ಮಾತನಾಡಿ, ಯೋಗರಾಜ್ ಭಟ್ ರಿಂದ ಶುರುವಾಗುತ್ತದೆ. ಅಶ್ವಿನಿ ಮೇಡಂ ದುನಿಯಾ ವಿಜಯ್, ಸೃಜಯನ್ ಲೋಕೇಶ್ ಅವರು, ನವೀನ್ ಅವರು.ಹೀಗೆ ನಮ್ಮ ಸಿನಿಮಾದವರು. ಹೊರಗಿನವರು ಜನ ಬಂದು ಎಲ್ಲರೂ ಚೆನ್ನಾಗಿ ಆಗಿದೆ ಅಂದರು. ಇದು ಕ್ಲಾಸ್ ಸಿನಿಮಾ ಎಂದು ನಾನು ಒಪ್ಪುವುದಿಲ್ಲ. ಒಳ್ಳೆ ಸಿನಿಮಾ ಎಂದು ಹೇಳುತ್ತೇನೆ. ಕ್ಲಾಸ್ ಮಾಸ್ ಹೋಗಿ ತುಂಬಾ ದಿನ ಆಗಿದೆ. ಒಳ್ಳೆ ಸಿನಿಮಾ. ಇಲ್ಲ ನೋಡದೇ ಇರುವ ಸಿನಿಮಾ. ದೊಡ್ಡ ದೊಡ್ಡವರ ಸಿನಿಮಾ ಎಂದಾಗ ಕೋಟಿ ಕೋಟಿ ಹಾಕುವ ನಿರ್ಮಾಪಕರು ಸಾಕಾಗುವುದಿಲ್ಲ. ಅದಕ್ಕೆ ಇದ್ದಾರೆ ಅವ್ರು ಮಾಡ್ತಾರೆ. ಆದರೆ ಸಣ್ಣ ಇರಬೇಕಲ್ಲ. ಸಣ್ಣ ಸಣ್ಣವರು ಮಾಡಿದಾಗ ಅದು ಸಮುದ್ರವಾಗುತ್ತದೆ. ನದಿ ಹರಿವೇ ಇಲ್ಲ ಅಂದರೆ ಸಮುದ್ರಕ್ಕೆ ಕಷ್ಟವಾಗುತ್ತದೆ, ಶಿವಮೊಗ್ಗದ ನದಿ ಇದು ಹರಿದುಕೊಂಡು ಹೋಗುತ್ತದೆ ಎಂದುಕೊಂಡರೆ. ಆದರೆ ಅವರು ಹೇಳಿದ್ದು ಕೇಳಿ ಬೇಜಾರ್ ಆಯ್ತು. ನಾವು ಕೊಳ್ಳೆಗಾಲಕ್ಕೆ ಹೋಗಬೇಕಾಗುತ್ತದೆ. ಗೊತ್ತಿಲ್ಲ ಏನು ಮಂತ್ರ ಮಾಡಬೇಕೋ. ಇದು ಒಳ್ಳೆ ಸಿನಿಮಾ ಅಂತಾ ಎಲ್ಲರೂ ಹೇಳುತ್ತಿದ್ದಾರೆ. ಒಟಿಟಿಗೆ ಬಂದ್ಮೇಲೆ ಮೆಚ್ಚಿಕೊಳ್ತಾರೆ ಗೊತ್ತಿಲ್ಲ ಎಂದರು.

ನಿರ್ದೇಶಕ ಸಂದೀಪ್ ಸುಂಕದ್ ಮಾತನಾಡಿ, ಇಷ್ಟು ಪಬ್ಲಿಸಿಟಿ ಮಾಡಿದರು ಯಾಕೆ ಜನಕ್ಕೆ ರೀಚ್ ಮಾಡಲು ಆಗುತ್ತಿಲ್ಲ. ನಾವು ಕ್ಲಾಸ್ ಸಿನಿಮಾ ಎಂದುಕೊಂಡು ಒಂದಷ್ಟು ಸೀಮಿತ ಜನಕ್ಕೆ ನಮ್ಮದೇ ಆದ ಒಂದು ಟಾರ್ಗೆಟ್ ಆಡಿಯನ್ಸ್ ಮಾಡಿಕೊಂಡೆವು. ಅದು ರಿಲೀಸ್ ಆದ್ಮೇಲೆ ಅದು ತೆಗೆದುಕೊಂಡ ವಿಸ್ತಾರ, ಜನರಿಗೆ ರೀಚ್ ಆಗಿದ್ದು ಇರಬಹುದು. ಬಿಕೆಟಿ ಸೆಂಟರ್ ಗಳಲ್ಲಿ ಜನ ತುಂಬಿ ಎಂಜಾಯ್ ಮಾಡಿದರು. ನಾವು ಅದನ್ನು ಮುಂಚೆಯಿಂದನೇ ಟಾರ್ಗೆಟ್ ಮಾಡಿಕೊಂಡು ಬಂದಿದ್ದರೆ ಬಹುಶಃ ಈ ಸಣ್ಣ ಸಮಸ್ಯೆ ಎದುರುರಾಗ್ತಿರಲಿಲ್ಲ ಎನಿಸಿತು. ನಮ್ಮ ಸುತ್ತ ವಲಯದಲ್ಲಿ ಹೆಚ್ಚು ರೀಚ್ ಆಗಿದೆ. ಅದು ಬಿಟ್ಟು ಹೋಗಿಲ್ಲ ಎಂಬ ಕೊರಗು ಇತ್ತು. ಇದಾದ ಮೇಲೆ ಇತ್ತೀಚೆಗೆ ಬಂದ ವಿಮರ್ಷೆ ಆಗಿರಬಹುದು. ಥಿಯೇಟರ್ ಫಿಲ್ಲಿಂಗ್ ಇರಬಹುದು. ಈಗಲೂ 50 ರಿಂದ 60% ಆಕ್ಯೂಪೆನ್ಸಿ ಇದೆ. ನಿಮ್ಮ ಮೂಲಕ ಇನ್ನೂ ಹೆಚ್ಚು ಜನರಿಗೆ ರೀಚ್ ಆಗಬಹುದು. ನಿಮ್ಮ ಬೆಂಬಲ ಇರಬೇಕು. ನಮಗೆ ಎಲ್ಲಾ ಒಟಿಟಿ ಕಡೆಯಿಂದ ಆಫರ್ ಬಂದಿದೆ ಎಂದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿನ ಒಂದು ಪುಟ್ಟ ಗ್ರಾಮದಲ್ಲಿ ನಡೆಯುವ ಬಲು ರೋಚಕವಾದ ಕಥೆ ‘ಶಾಖಾಹಾರಿ’ ಕಹಾನಿ. ಈ ಸಿನಿಮಾದ ಕಥಾನಾಯಕ ಸುಬ್ಬಣ್ಣ ಭಟ್ಟ್ ರಂಗಾಯಣ ರಘು ಒಂದು ವೆಜಿಟೇರಿಯನ್ ಹೋಟೆಲ್ ನಡೆಸುತ್ತಾನೆ. ಆದರೆ ಅಲ್ಲಿ ನಡೆಯುವ ಕೆಲವು ಘಟನೆಗಳಿಂದಾಗಿ ಶಾಕಾಹಾರಿ ಹೋಟೆಲ್ನ ಇಮೇಜ್ ‘ಶಾಖಾಹಾರಿ’ಯಾಗಿ ಬದಲಾಗುತ್ತದೆ. ಇಂಥ ಒಗಟಿನಂತಹ ಟೈಟಲ್ನ ಹಿಂದಿರುವ ಕಥೆ ಏನು ಎಂಬುದು ಸಿನಿಮಾದ ತಿರುಳು..

ಶಾಖಾಹಾರಿ ಚಿತ್ರಕ್ಕೆ ಕಥೆ, ಸಂಭಾಷಣೆ ಬರೆದು ಸಂದೀಪ್ ಸುಂಕದ್ ಆಕ್ಷನ್ ಕಟ್ ಹೇಳಿದ್ದಾರೆ. ವಿಶ್ವಜಿತ್ ರಾವ್ ಕ್ಯಾಮೆರಾ. ಶಶಾಂಕ್ ನಾರಾಯಣ್ ಸಂಕಲನ, ಮಯೂರ್ ಅಂಬೇಕಲ್ಲು ಸಂಗೀತ ಚಿತ್ರಕ್ಕೆ ಪುಷ್ಟಿ ನೀಡಿದೆ. ರಾಜೇಶ್ ಕೀಳಂಬಿ ಮತ್ತು ರಂಜಿನಿ ಪ್ರಸನ್ನ ಕೀಳಂಬಿ ಮೀಡಿಯಾ ಲ್ಯಾಬ್ ಪ್ರೈ.ಲಿ. ನ ಅಡಿಯಲ್ಲಿ ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಗೋಪಾಲಕೃಷ್ಣ ದೇಶಪಾಂಡೆ ನಟಿಸಿದ್ದಾರೆ. ಹಾಗೇ ಸುಜಯ್ ಶಾಸ್ತ್ರಿ ಈ ಸಿನಿಮಾದ ಒಂದು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇನ್ನುಳಿದಂತೆ ಪ್ರತಿಮಾ ನಾಯಕ್, ಹರಿಣಿ, ವಿನಯ್ ಯು.ಜೆ., ಶ್ರೀಹರ್ಷ ಗೋಭಟ್ಟ, ನಿಧಿ ಹೆಗ್ಡೆ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

Categories
ಸಿನಿ ಸುದ್ದಿ

ನಟ್ವರ್ ಲಾಲ್ ಎಂಬ ಕ್ರೈಮ್ ಲೋಕದ ರೋಚ ‘ಕಥೆ’!

ಚಿತ್ರ ವಿಮರ್ಶೆ
ರೇಟಿಂಗ್ 3.5/5

ನಿರ್ದೇಶನ : ಲವ.ವಿ
ನಿರ್ಮಾಣ : ತನುಷ್ ಶಿವಣ್ಣ
ತಾರಾಗಣ: ತನುಷ್, ಸೋನಾಲ್ ಮೊಂಟೇರೊ, ರಾಜೇಶ್ ನಟರಂಗ, ನಾಗಭೂಷಣ್, ಕಾರಂತ್ ಇತರರು.

ಅವನು ರಂಗ ಅಲಿಯಾಸ್ ನಟ್ವರ್ ಲಾಲ್! ಹೆಸರು ಕೇಳಿದರೆ ಮಹಾವಂಚಕನ ಲೈಫ್ ಸ್ಟೋರಿ ಇರಬಹುದು ಅನಿಸುತ್ತೆ. ಆದರೆ, ಈ ನಟ್ವರ್ ಲಾಲ್ ಒಳಗಿನ ಹೂರಣವೇ ಬೇರೆ. ಹಾಗಾದರೆ ಅವನ ವಂಚನೆ ಏನು, ಯಾಕೆ ಎಂಬ ಕುತೂಹಲವಿದ್ದರೆ , ಒಮ್ಮೆ‌ ಸಿನಿಮಾ ನೋಡಿ.

ಈಗ ಡಿಜಿಟಲ್ ಯುಗ. ಮೋಸ ವಂಚನೆ ಕಾಮನ್. ಅದರಂತೆ ಇಲ್ಲೂ ಅದೇ ಹೈಲೆಟ್. ಆದರೆ ಇಲ್ಲಿರೋ ನಟ್ವರ್ ಲಾಲ್ ಯಾಕೆ ವಂಚನೆ ಮಾಡ್ತಾನೆ ಅನ್ನೋದೇ ವಿಶೇಷ. ಈಗ ಜಾಲತಾಣ ಎಷ್ಟೆಲ್ಲ ಪವರ್ ಅನ್ನೋದ್ದಕ್ಕೆ ಉದಾಹರಣೆಯಂತಿದೆ ಈ ಚಿತ್ರ.

ಇದೊಂದು ಬುದ್ಧಿವಂತ ಯುವಕನ ಚುರುಕುತನದ ಕಥೆ. ಇಲ್ಲಿ ತೆಳುವಾದ, ನವಿರಾದ ಪ್ರೀತಿ ಇದೆ. ದ್ವೇಷ ಇದೆ, ರೋಷವಿದೆ, ಅನ್ಯಾಯ ವಿರುದ್ಧದ ಧ್ವನಿ ಇದೆ, ಮೋಸಗಾರರ ಮೇಲಿನ ಸಿಟ್ಟಿದೆ. ಆ ಎಲ್ಲದರ ವಿರುದ್ಧ ರೋಚಕವೆನಿಸುವಂತೆ ಓಡಾಡುವ ಮತ್ತು ಹೋರಾಡುವ ಹೀರೋನ ಬುದ್ಧಿವಂತಿಕೆ ಇದೆ. ಅದೇ ಸಿನಿಮಾದ ಟ್ವಿಸ್ಟು ಮತ್ತು ಟೆಸ್ಟು.

ಸಿನಿಮಾದ ಆರಂಭದಲ್ಲೊಂದು ಮಹಿಳೆಯ ಮರ್ಡರ್ ಆಗುತ್ತೆ. ಅದು ಗೌರಿಲಂಕೇಶ್ ಅವರ ಶೂಟೌಟ್ ಪ್ರಕರಣ ನೆನಪಿಸುತ್ತದೆ. ಆದರೆ, ಅದೇ ಸಿನಿಮಾ ವೇಗದ ಜೊತೆ ಕುತೂಹಲ ಕಾಯ್ದಿರಿಸುತ್ತೆ. ಆ ಕೊಲೆಯಾಗಿದ್ದು ಯಾಕೆ, ಅವಳು ಯಾರು ಅನ್ನೋ ಪ್ರಶ್ನೆಗೆ ಕ್ಲೈಮ್ಯಾಕ್ಸ್ ಉತ್ತರ ಕೊಡುತ್ತೆ. ಅಲ್ಲಿವರೆಗೆ ಬರೀ ಕುತೂಹಲ.

ಇಲ್ಲೂ ಬಿಟ್ ಕಾಯಿನ್ ದಂಧೆ ಸದ್ದು ಮಾಡುತ್ತೆ. ವೈದ್ಯಲೋಕದ ಕರಾಳತನ ಕಾಣುತ್ತೆ. ಅದರೊಂದಿಗೆ ಸಮಾಜದೊಳಗಿನ ಹಲವು ದಂಧೆಗಳು ಕಳಚಿ ಬೀಳುತ್ತವೆ. ಇವೆಲ್ಲದರ ವಿರುದ್ಧ ಹೀರೋ ಹೋರಾಡುವ ಬೆಳಕು ಪ್ರಜ್ವಲಿಸುತ್ತೆ.

ಅಂದಹಾಗೆ ಇಲ್ಲಿ ಹ್ಯಾಕರ್ ಕಥೆ ತೆರೆದುಕೊಳ್ಳುತ್ತಾದರೂ, ಒಂದೊಂದೇ ಪ್ರಕರಣಗಳ ಮುಖವಾಡವನ್ನು ಹೀರೋ ಕಳಚುತ್ತಾ ಹೋಗುತ್ತಾನೆ. ವ್ಯವಸ್ಥೆಯ ವಿರುದ್ಧ ಕೂತಲ್ಲೇ ಸಾಮಾಜಿಕ ಜಾಲತಾಣ ಮೂಲಕ ಹೋರಾಡುತ್ತಾನೆ. ಹಾಗಾದರೆ ಅವನು ವಂಚಕನೋ, ಒಳ್ಳೆಯವನೋ ಎಂಬ ಕುತೂಹಲದಲ್ಲೇ ಸಿನಿಮಾ ಸಾಗುತ್ತಾದರೂ, ಒಂದೊಂದು ತಿರುವು ಸಿನಿಮಾ ವೇಗ ಹೆಚ್ಚಿಸುತ್ತಾ ಹೋಗುತ್ತದೆ.

ಇಲ್ಲಿ ಮುಖ್ಯವಾಗಿ ವಂಚಕ ಮತ್ತು ಪೊಲೀಸ್ ಸುತ್ತ ಕಥೆಯ ರೋಚಕತೆ ಹೆಚ್ಚಿಸುತ್ತೆ. ತನಿಖೆ ಸಾಗುವ ಪರಿಯೇ ಸಿನಿಮಾದ ಗಟ್ಟಿತನಕ್ಕೆ ಸಾಕ್ಷಿಯಾಗುತ್ತೆ.

ಹೊಡಿಬಡಿ ಸಿನಿಮಾಗಳ ಜೊತೆಗೆ ಈ ರೀತಿಯ ಟ್ಚಿಸ್ಟ್ ಕಥೆಗಳು ಹೊಸತನಕ್ಕೆ ಸಾಥ್ ಕೊಡುತ್ತವೆ. ಇಲ್ಲಿ ಮುಖ್ಯವಾಗಿ ಆನ್ಲೈನ್ ಬಳಸಿಕೊಂಡು ಹೇಗೆಲ್ಲಾ ಉಳ್ಳವರು ಮತ್ತು ವಂಚಕರನ್ನು ಬಗ್ಗು ಬಡಿಯಬಹುದು ಅನ್ನೋದನ್ನ ತೋರಿಸಿದರೂ, ಆ ನಾಯಕನ ಒಳಗೊಬ್ಬ ಸಮಾಜ ಪರಿವರ್ತನೆಯ ಮನಸ್ಸಿದೆ ಅದೇ ಸಿನಿಮಾದ ವಿಶೇಷ.

ಮೊದಲರ್ಧ ಕಥೆ ತೆರೆದುಕೊಂಡರೆ, ದ್ವಿತಿಯಾರ್ಧ ಕುತೂಹಲದ ಜೊತೆ ಸಾಗುತ್ತೆ. ಇಲ್ಲಿ ನಿರ್ದೇಶಕರ ನಿರೂಪಣೆ ಶೈಲಿ ಚೆನ್ನಾಗಿದೆ. ಕಥೆ ಸರಳವಾಗಿದ್ದರೂ, ಚಿತ್ರಕಥೆಯಲ್ಲಿ ಹಿಡಿತವಿದೆ. ಎಲ್ಲೋ ಒಂದು ಕಡೆ ಕಥೆ ಜಾಡು ಬೇರೆಡೆ ಹೋಗುತ್ತೆ ಎನ್ನುವಷ್ಟರಲ್ಲಿ ಬರುವ ಕೆಲ ಟ್ವಿಸ್ಟುಗಳು ಮತ್ತಷ್ಟು ಕುತೂಹಲ ಕೆರಳಿಸುತ್ತವೆ. ಮೇಕಿಂಗ್ ವಿಚಾರದಲ್ಲಿ ಸಿನಿಮಾ ಹಿಂದೆ ಬಿದ್ದಿಲ್ಲ. ತೆರೆ ಮೇಲೆ ಬಜೆಟ್ ಎದ್ದು ಕಾಣುತ್ತೆ. ಮುಖ್ಯವಾಗಿ ಸ್ಟಂಟ್ ಸಿನಿಮಾದ ಇನ್ನೊಂದು ಭಾಗ ಎನ್ನಬಹುದು.

ಡೇವಿಡ್ ಅವರ ಕ್ಯಾಮರ ಕೈಚಳಕ ಖುಷಿ ಕೊಡುತ್ತದೆ. ಧರ್ಮವಿಶ್ ಅವರ ಸಂಗೀತಕ್ಕಿನ್ನು ಧಮ್ ಇರಬೇಕಿತ್ತು. ಕತ್ತರಿ ಪ್ರಯೋಗ ವೇಗ ಹೆಚ್ಚಿಸಿದೆ.

ಯಾರು ಹೇಗೆ?

ತನುಷ್ ಶಿವಣ್ಣ ಹಿಂದಿನ ಸಿನಿಮಾಗಳಿಗೆ ಹೋಲಿಸಿದರೆ, ಇಲ್ಲಿ ಎಂದಿಗಿಂತ ಇಷ್ಟವಾಗುತ್ತಾರೆ. ಅವರ ಬಾಡಿಲಾಂಗ್ವೇಜ್, ಡೈಲಾಗ್ ಬಿಡುವ ಪರಿ ಗಮನಸೆಳೆಯುತ್ತದೆ. ಸ್ಟಂಟ್ ವಿಚಾರದಲ್ಲಿ ಅವರು ಭಿನ್ನ ಎನಿಸುತ್ತಾರೆ. ನೋಡುಗರಿಗೆ ಪಕ್ಕಾ ವಂಚಕ ಎನಿಸಿದರೂ, ಕೊನೆಯಲ್ಲಿ ಮನಸ್ಸಿಗೆ ಇಷ್ಟವಾಗುವ ಹೀರೋ ಆಗಿಬಿಡುತ್ತಾರೆ.

ಸೋನಾಲ್ ಲ್ ತೆರೆ ಮೇಲೆ ಇರುವಷ್ಟು ಸಮಯ ಇಷ್ಟ ಆಗುತ್ತಾರೆ. ರಾಜೇಶ್ ನಟರಂಗ ಪೊಲೀಸ್ ಅಧಿಕಾರಿಯಾಗಿ ಗಮನ ಸೆಳೆದರೆ, ಸ್ನೇಹಿತನ ಪಾತ್ರದಲ್ಲಿ ನಾಗಭೂಷಣ್ ವಿಶೇಷ. ವಿಶೇಷ. ತೆರೆ ಮೇಲೆ ಶ್ರೀಧರ್, ಬಲರಾಜವಾಡಿ, ಹರಿಣಿ, ವಿಜಯ್ ಚೆಂಡೂರ್, ಸುಧೀ ಕಾಕ್ರೋಚ್, ಯಶ್ ಶೆಟ್ಟಿ ಹಾಗೂ ರಘು ರಾಮನಕೊಪ್ಪ ಪಾತ್ರಕ್ಕೆ ಮೋಸ‌ ಮಾಡಿಲ್ಲ.

Categories
ಸಿನಿ ಸುದ್ದಿ

ಕೆರೆಬೇಟೆ ಟ್ರೇಲರ್ ರಿಲೀಸ್: ಮಲೆನಾಡ ಪದ್ಧತಿ ಸಿನಿಮಾಗೆ ಪ್ರೇಕ್ಷಕರ ಕಾತರ

‘ಕೆರೆಬೇಟೆ’ ಫಸ್ಟ್ ಲುಕ್ ಮತ್ತು ಟೀಸರ್ ಮೂಲಕವೇ ಸ್ಯಾಂಡಲ್‌ವುಡ್‌ನಲ್ಲಿ ಭಾರಿ ಕುತೂಹಲ ಮೂಡಿಸಿರುವ ಸಿನಿಮಾ. ಇದೀಗ ಸಿನಿಮಾತಂಡ ಟ್ರೇಲರ್ ಮೂಲಕ ಅಭಿಮಾನಿಗಳ ಮುಂದೆ ಬಂದಿದೆ. ಭಾರಿ ನಿರೀಕ್ಷೆಯ ಟ್ರೇಲರ್ ರಿಲೀಸ್ ಆಗಿದೆ. ‘ಕೆರೆಬೇಟೆ’ ಮಲೆನಾಡು ಭಾಗದ ಮೀನು ಬೇಟೆಯಾಗುವ ಒಂದು ಪದ್ಧತಿ. ಮಲೆನಾಡಿನ ಈ ವಿಭಿನ್ನ ಸಂಸ್ಕೃತಿಯನ್ನು ಮೊದಲ ಬಾರಿಗೆ ತೆರೆಮೇಲೆ ತರುತ್ತಿದ್ದಾರೆ ನಿರ್ದೇಶಕ ರಾಜ್‌ಗುರು. ನಾಯಕನಾಗಿ ಗೌರಿಶಂಕರ್ ಎಸ್‌ಆರ್‌ಜಿ ಕಾಣಿಸಿಕೊಂಡಿದ್ದಾರೆ. ವಿಭಿನ್ನವಾದ ಒಂದೊಳ್ಳೆ ಹಳ್ಳಿ ಸೊಗಡಿನ ಸಿನಿಮಾ ಮೂಲಕ ಗೌರಿಶಂಕರ್ ತೆರೆಮೇಲೆ ಮಿಂಚಲು ಸಜ್ಜಾಗಿದ್ದಾರೆ.

ಸದ್ಯ ರಿಲೀಸ್ ಆಗಿರುವ ಟ್ರೇಲರ್ ಗಮನ ಸೆಳೆಯುತ್ತಿದೆ. ಅಂಟಿಗೆ ಪಿಂಟಿಗೆ ಶೈಲಿಯಲ್ಲೇ ಟ್ರೇಲರ್ ರಿಲೀಸ್ ಮಾಡಿದ್ದು ವಿಶೇಷವಾಗಿತ್ತು. ರಿಲೀಸ್ ಗೂ ಮೊದಲು ಬೆಂಗಳೂರಿನ ಮನೆ ಮನೆಗೆ ಹೋಗಿ ತಮ್ಮ ಸಿನಿಮಾ ರಿಲೀಸ್ ಆಗುತ್ತಿದೆ ಹಾರೈಸಿ ಎಂದು ದೀಪ ಹಿಡಿದು ಕೇಳಿಕೊಂಡಿದ್ದಾರೆ. ಬಳಿಕ ನಾಯಕ ಗೌರಿ ಶಂಕರ್ ಅವರ ಪುತ್ರಿ ಪುಟ್ಟ ಕಂದ ಈಶ್ವರಿ ಮನ ಟ್ರೈಲರ್ ಮಾಡಿದಳು. ಟ್ರೇಲರ್‌ನಲ್ಲಿ ಮಲೆನಾಡಿ ಕೆರೆಬೇಟೆ ಜೊತೆಗೆ ‘ಅಂಟಿಕೆ ಪೆಂಟಿಗೆ..’ ಸಂಸ್ಕೃತಿ ಕೂಡ ಹೈಲೆಟ್ ಆಗಿದೆ.

ಅಂಟಿಕೆ ಪಿಂಟಿಗೆಯಿಂದನೆ ಟ್ರೈಲರ್ ಪ್ರಾರಂಭವಾಗಿದ್ದು ಅದ್ಭುತವಾಗಿ ಮೂಡಿ ಬಂದಿದೆ. ಮಲೆನಾಡಿನ ಹಳ್ಳಿಯಲ್ಲೇ ನಡೆಯುವ ಸಿನಿಮಾ ಇದಾಗಿದೆ. ಕೆರೆಬೇಟೆ ಜೊತೆಗೆ ಹಳ್ಳಿ ಜನರ ಕಿತ್ತಾಟ, ಹೊಡೆದಾಟ ಸೇರಿದಂತೆ ಈ ಪುಟ್ಟ ಟ್ರೈಲರ್‌ನಲ್ಲೇ ಮಲೆನಾಡಿನ ಸಂಪೂರ್ಣ ಚಿತ್ರಣ ನೋಡಬಹುದು. ಇನ್ನು ಸಿನಿಮಾ ಹೇಗಿರಲಿದೆ ಎನ್ನುವ ಕುತೂಹಲ ಮತ್ತು ನಿರೀಕ್ಷೆ ದುಪ್ಪಟ್ಟು ಮಾಡಿದೆ.

ನಾಯಕ ಗೌರಿ ಶಂಕರ್ ಅದ್ಭುತವಾಗಿ ನಟಿಸಿದ್ದಾರೆ. ಟ್ರೈಲರ್‌ನಲ್ಲಿ ತನ್ನ ನಟನೆಯ ಝಲಕ್ ತೋರಿಸಿದ್ದಾರೆ. ನಾಯಕಿ ಬಿಂಧು ಶಿವರಾಮ್ ಕೂಡ ತನ್ನ ಪಾತ್ರಕ್ಕೆ ಜೀವತುಂಬಿದ್ದಾರೆ. ಬಿಂಧು ಅವರಿಗೆ ಇದು ಮೊದಲ ಸಿನಿಮಾ. ಹಾಗಾಗಿ ತನ್ನ ಚೊಚ್ಚಲ ಸಿನಿಮಾದ ಬಗ್ಗೆ ಸಿಕ್ಕಾಪಟ್ಟೆ ಎಕ್ಸಾಯಿಟ್ ಆಗಿದ್ದಾರೆ. ಇನ್ನೂ ಮಲೆನಾಡಿನ ಸುಂದರ ಸಂಸ್ಕೃತಿಯನ್ನು ಅಷ್ಟೇ ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ರಾಜ್‌ಗುರು.

ಅಂದಹಾಗೆ ನಿರ್ದೇಶಕ ರಾಜ್‌ಗುರು ಅವರಿಗೂ ಇದು ಚೊಚ್ಚಲ ಸಿನಿಮಾ. ಹಾಗಂತ ಅವರಿಗೆ ಸಿನಿಮಾರಂಗ ಹೊಸದೇನಲ್ಲ. ಈ ಮೊದಲು ನಿರ್ದೇಶಕ ಪವನ್ ಒಡೆಯರ್ ಜೊತೆ ಗೂಗ್ಲಿ, ರಣವಿಕ್ರಮ, ನಟಸಾರ್ವಭೌಮ, ಜೆಸ್ಸಿ, ರೆಮೋ ಸೇರಿದಂತೆ ಇನ್ನು ಅನೇಕ ಸಿನಿಮಾಗಳಲ್ಲಿ ಸಹ ನಿರ್ದೇಶಕರಾಗಿ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. ಇದೀಗ ಕೆರೆಬೇಟೆ ಮೂಲಕ ಮೊದಲ ಬಾರಿಗೆ ಸ್ವತಂತ್ರ ನಿರ್ದೇಶಕರಾಗಿ ಹೊರಹೊಮ್ಮುತ್ತಿದ್ದಾರೆ .

ಮಲೆನಾಡಿನವರೇ ಆಗಿರುವುದರಿಂದ ಕೆರೆಬೇಟೆ ನೋಡುತ್ತಾ, ಆಡುತ್ತಾ ಬೆಳೆದವರು. ಹಾಗಾಗಿ ಮಲೆನಾಡಿನ ಜೀವನ ಶೈಲಿಯನ್ನು ಅಷ್ಟೆ ನೈಜ್ಯವಾಗಿ ಕಟ್ಟಿಕೊಡುವ ಪ್ರಯತ್ನ ಈ ಸಿನಿಮಾದಲ್ಲಿ ಮಾಡಲಾಗಿದೆ. ಬ್ಯಾಗ್‌ಗ್ರೌಂಡ್ ಮ್ಯೂಸಿಕ್ ಕೂಡ ಸುಂದರವಾಗಿ ಮೂಡಿಬಂದಿದೆ.

ಇನ್ನೂ ಉಳಿದಂತೆ ಸಿನಿಮಾದಲ್ಲಿ ಗೋಪಾಲ್ ದೇಶಪಾಂಡೆ, ಸಂಪತ್ ಕುಮಾರ್ ಸೇರಿದಂತೆ ಅನೇಕರು ನಟಿಸಿದ್ದಾರೆ. ಚಿತ್ರಕ್ಕೆ ಗಗನ್ ಬದೇರಿಯಾ ಸಂಗೀತ ಸಂಯೋಜನೆ ಮಾಡಿದ್ದಾರೆ. ಈ ಸಿನಿಮಾಗೆ ನಾಯಕ ಗೌರಿಶಕಂಕರ್ ಅವರ ಜನಮನ ಸಿನಿಮಾಸ್ ಬ್ಯಾನರ್‌ನಲ್ಲಿ ಅವರ ಸಹೋದರ ಜೈಶಂಕರ್ ಪಟೇಲ್ ಬಂಡವಾಳ ಹೂಡಿದ್ದಾರೆ. ಸದ್ಯ ಟ್ರೈಲರ್ ಮೂಲಕ ಅಭಿಮಾನಿಗಳ ಮುಂದೆ ಬಂದಿರುವ ಕೆರೆಬೇಟಿ ಮುಂದಿನ ತಿಂಗಳು ಮಾರ್ಚ್ 15ಕ್ಕೆ ಅದ್ದೂರಿಯಾಗಿ ತೆರೆಗೆ ಬರುತ್ತಿದೆ.

Categories
ಸಿನಿ ಸುದ್ದಿ

ರಿಲೀಸ್ ಮೊದಲೇ ’ಫಾರ್ ರಿಜಿಸ್ಟ್ರೇಷನ್’ಗೆ ಡಿಮ್ಯಾಂಡ್: ತೆಲುಗಿಗೆ ಭಾರೀ ಮೊತ್ತಕ್ಕೆ ಡಬ್ಬಿಂಗ್ ರೈಟ್ಸ್ ಸೇಲ್

ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆ ಎದ್ದಿದೆ. ಪ್ರತಿಭಾವಂತ ಹೊಸಬರು ಮಾಡುತ್ತಿರುವ ಹೊಸ ಹೊಸ ಪ್ರಯೋಗಗಳಿಗೆ ಕನ್ನಡ ಪ್ರೇಕ್ಷಕರು ಮಾತ್ರ ಅಲ್ಲ, ಪಕ್ಕದ ರಾಜ್ಯದವರೂ ಫಿದಾ ಆಗುತ್ತಿದ್ದಾರೆ. ಬಾಲಿವುಡ್ ಮಂದಿ ಕೂಡ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತಾಗಿದೆ. ನಾವು ಇಷ್ಟೆಲ್ಲಾ ಪೀಠಿಕೆ ಹಾಕುತ್ತಿರುವುದಕ್ಕೆ ಕಾರಣ ಫಾರ್ ರಿಜಿಸ್ಟ್ರೇಷನ್ ಸಿನಿಮಾ.

ಯುವ ಪ್ರತಿಭೆ ನವೀನ್ ದ್ವಾರಕಾನಾಥ್ ನಿರ್ದೇಶನದ, ನವೀನ್ ರಾವ್ ನಿರ್ಮಾಣದ, ಪೃಥ್ವಿ ಅಂಬಾರ್ ಹಾಗೂ ಮಿಲನಾ ನಾಗರಾಜ್ ಅಭಿನಯದ, ಫಾರ್ ರಿಜಿಸ್ಟ್ರೇಷನ್ ಚಿತ್ರವನ್ನು ತೆಲುಗಿನ ಖ್ಯಾತ ನಿರ್ಮಾಪಕರೊಬ್ಬರು ಭಾರೀ ಮೊತ್ತಕ್ಕೆ ಡಬ್ಬಿಂಗ್ ರೈಟ್ಸ್ ಪಡೆದುಕೊಂಡಿದ್ದಾರೆ.

ಶಿವಣ್ಣ ನಟನೆಯ 125ನೇ ಸಿನಿಮಾದ ವೇದವನ್ನು ಅಖಂಡ ತೆಲುಗು ಪ್ರೇಕ್ಷಕರ ಎದುರು ಪ್ರಸ್ತುತಪಡಿಸಿದ್ದ ಎಂವಿಆರ್ ಕೃಷ್ಣ ಫಾರ್ ರಿಜಿಸ್ಟ್ರೇಷನ್ ಚಿತ್ರದ ಡಬ್ಬಿಂಗ್ ಹಕ್ಕು ಖರೀದಿ ಮಾಡಿದ್ದಾರೆ. ಸಿನಿಮಾ ಬಿಡುಗಡೆಗೂ ಮುನ್ನವೇ ಡಬ್ಬಿಂಗ್ ರೈಟ್ಸ್ ಸೇಲ್ ಆಗಿರುವುದು ಚಿತ್ರತಂಡ ಖುಷಿಯನ್ನು ದುಪ್ಪಟ್ಟು ಮಾಡಿದೆ.

ಟ್ರೇಲರ್ ಹಾಗೂ ಹಾಡಿನ ಮೂಲಕ ಆಮಂತ್ರಣ ಕೊಟ್ಟಿರುವ ಫಾರ್ ರಿಜಿಸ್ಟ್ರೇಷನ್ ಸಿನಿಮಾ ನಾಳೆ ತೆರೆಗೆ ಬರ್ತಿದೆ. ಸಂಬಂಧ ಮಹತ್ವ ಸಾರುವ ಈ ಚಿತ್ರದಲ್ಲಿ ರವಿಶಂಕರ್, ತಬಲಾ ನಾಣಿ, ಸುಧಾ ಬೆಳವಾಡಿ, ಬಾಬು ಹಿರಣಯ್ಯ, ಸ್ವಾತಿ, ರಮೇಶ್ ಭಟ್, ಉಮೇಶ್ ಸೇರಿದಂತೆ ಹಲವರು ತಾರಾ ಬಳಗದಲ್ಲಿದ್ದಾರೆ.

ಚಿತ್ರಕಥೆ, ನಿರ್ದೇಶನ ನವೀನ್ ದ್ವಾರಕನಾಥ್ ನಿರ್ವಹಿಸಿದ್ದು, ಸಂಗೀತ ಸಂಯೋಜನೆ ಆರ್.ಕೆ ಹರೀಶ್, ಅಭಿಲಾಷ್ ಕಲಾತಿ, ಅಭಿಷೇಕ್ ಜಿ.ಕಾಸರಗೋಡು ಛಾಯಾಗ್ರಹಣ, ಮನು ಶೇಡ್ಗರ್ ಸಂಕಲನ ಚಿತ್ರಕ್ಕಿದೆ. ನಿಶ್ಚಲ್ ಫಿಲಂಸ್ ಬ್ಯಾನರ್ನಲ್ಲಿ ನವೀನ್ ರಾವ್ ಬಂಡವಾಳ ಹೂಡಿದ್ದಾರೆ. ಬಹಳ ದಿನಗಳ ನಂತರ ಮತ್ತೆ ವಿತರಣೆ ಅಖಾಡಕ್ಕೆ ಇಳಿದಿರುವ ದೀಪಕ್ ಗಂಗಾಧರ್ ಫಿಲಂಸ್ ಫಾರ್ ರಿಜಿಸ್ಟ್ರೇಷನ್ ಸಿನಿಮಾವನ್ನು ಫೆಬ್ರವರಿ 23ರಂದು ರಾಜ್ಯಾದ್ಯಂತ ಬಿಡುಗಡೆ ಮಾಡುತ್ತಿದೆ.

Categories
ಸಿನಿ ಸುದ್ದಿ

4 ಎನ್ 6 ಫಸ್ಟ್ ಗ್ಲಿಂಪ್ಸ್ ಟೀಸರ್ ಬಿಡುಗಡೆ: ಇದು ಪ್ರತಿಭಾವಂತರ ಚಿತ್ರ

ಪರ್ಪಲ್ ಪ್ಯಾಚ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಸಾಯಿಪ್ರೀತಿ ಎನ್. ಅವರು ನಿರ್ಮಿಸಿರುವ, ಮರ್ಡರ್‌ ಮಿಸ್ಟ್ರಿ ಜೊತೆಗೆ ಇನ್ ವೆಸ್ಟಿಗೇಷನ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಚಿತ್ರ 4 ಎನ್ 6. ಬಿಡುಗಡೆಗೆ ಸಿದ್ದವಾಗಿರುವ ಈ ಚಿತ್ರದ ಫಸ್ಟ್ ಗ್ಲಿಂಪ್ಸ್ ಟೀಸರ್ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.

ಲವ್ ಮಾಕ್ಟೇಲ್ ಹಾಗೂ ಲವ್ 360 ಖ್ಯಾತಿಯ ರಚನಾ ಇಂದರ್ ಭವಾನಿಪ್ರಕಾಶ್ ಹಾಗೂ ನವೀನ್ ಕುಮಾರ್, ಆದ್ಯಶೇಖರ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ “4 ಎನ್ 6” ಚಿತ್ರಕ್ಕೆ ದರ್ಶನ್ ಶ್ರೀನಿವಾಸ್ ಕಥೆ, ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಕೊಲೆಯೊಂದರ ತನಿಖೆಯ ಸುತ್ತ ನಡೆಯುವ ಕಥೆ ಈ ಚಿತ್ರದಲ್ಲಿದ್ದು, ರಚನಾ ಇಂದರ್ ಇದೇ ಮೊದಲ ಬಾರಿಗೆ ಫಾರೆನ್ಸಿಕ್ ಡಿಟೆಕ್ಟಿವ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ವೇದಿಕೆಯಲ್ಲಿ ಮಾತನಾಡಿದ ನಿರ್ದೇಶಕ ದರ್ಶನ್ ಈ ಹಿಂದೆ ೨ ಕಿರುಚಿತ್ರಗಳನ್ನು ನಿರ್ದೇಶಿಸಿದ್ದೆ. ನನ್ನ ಪ್ರಥಮ ನಿರ್ದೇಶನದ ಚಿತ್ರ ಇದಾಗಿದ್ದು ಕೊಲೆ ಪ್ರಕರಣ ಪತ್ತೆ ಹಚ್ಚುವಲ್ಲಿ ಫೋರೆನ್ಸಿಕ್ ರಿಪೋರ್ಟ್ ಇಂಪಾರ್ಟೆಂಟ್ ಆಗಿರುತ್ತದೆ. ೪ ಪ್ರಮುಖ ಪಾತ್ರಗಳ ಸುತ್ತ ಕಥೆ ನಡೆಯುತ್ತದೆ. ಕಥೆ ಮಾಡುವಾಗ ಫೋರೆನ್ಸಿಕ್ ತಜ್ಞರ ಸಲಹೆ ತೆಗೆದುಕೊಂಡೆ. ಚಿತ್ರಕ್ಕೆ ಬೆಂಗಳೂರು ಸುತ್ತಮುತ್ತ 30 ದಿನ ಚಿತ್ರೀಕರಿಸಲಾಗಿದ್ದು ಈಗಾಗಲೇ ಸೆನ್ಸಾರ್ ನಿಂದ ಯು/ಎ ಸರ್ಟಿಫಿಕೇಟ್ ಸಿಕ್ಕಿದೆ ಎಂದು ಹೇಳಿದರು.

ನಂತರ ನಿರ್ಮಾಪಕಿ ಸಾಯಿಪ್ರೀತಿ ಮಾತನಾಡಿ ತುಂಬಾ ಟ್ಯಾಲೆಂಟ್ ಇರೋ ತಂಡವಿದು. ಸಿನಿಮಾ ತುಂಬಾ ಚೆನ್ನಾಗಿ ಬಂದಿದೆ. ಏಪ್ರಿಲ್ ಗೆ ರಿಲೀಸ್ ಮಾಡೋ ಪ್ಲಾನಿದೆ ಎಂದರು. ಕಾರ್ಯಕಾರಿ ನಿರ್ಮಾಪಕರಾದ ಕರಣ್ ಸಿಂಗ್ ಮಾತನಾಡಿ ದರ್ಶನ್ ಶಾರ್ಟ್ ಫಿಲಂ ಮಾಡುವಾಗ ನನಗೆ ಪರಿಚಯವಾದರು. ಅವರಲ್ಲಿ ಓಳ್ಳೊಳ್ಳೆ ಕಥೆಗಳಿದ್ದವು. ಕೋವಿಡ್ ನಂತರ ಜನ ಸಿನಿಮಾನೋಡುವ ದೃಷ್ಟಿಕೋನ ಬದಲಾಗಿದೆ. ಕ್ರೈಂ‌ ಕಥೆಗಳನ್ನು ಹೆಚ್ಚು ಇಷ್ಟಪಡುತ್ತಿದ್ದಾರೆ ಅಂತ ಈ ಕಾನ್ಸೆಪ್ಟ್ ಕೈಗೆತ್ತಿಕೊಂಡೆವು ಎಂದರು.

ನಾಯಕಿ ರಚನಾ ಇಂದರ್ ಮಾತನಾಡಿ ಮೊದಲಬಾರಿಗೆ ಇಂಥ ಪಾತ್ರ ಮಾಡಿದ್ದೇನೆ. ಚಿತ್ರದಲ್ಲಿ ನನ್ನ ಪಾತ್ರಕ್ಕೆ ಹೆಚ್ಚು ಮಾತಿಲ್ಲ. ಮುಖದಲ್ಲೇ ಎಕ್ಸ್ ಪ್ರೆಶನ್ಸ್ ತೋರಿಸಬೇಕಿತ್ತು ಎಂದರು.

ಭವಾನಿ ಪ್ರಕಾಶ್ ಮಾತನಾಡಿ ಬೇರೊಬ್ಬರು ಮಾಡಬೇಕಿದ್ದ ಪಾತ್ರ ನನಗೆ ಬಂತು. ಇದು ಬರೀ ಮರ್ಡರ್ ಇನ್ವೆಸ್ಟಿಗೇಶನ್ ಸುತ್ತ ನಡೆವ ಕಥೆಯಲ್ಲ, ಸೈಕಲಾಜಿಕಲ್ ಚಿತ್ರವೂ ಹೌದು, ಶೂಟಿಂಗ್ ಅನುಭವ ತುಂಬಾ ಚೆನ್ನಾಗಿತ್ತು. ಸ್ಲಂನಲ್ಲೂ ಓಡಾಡಿದ್ದೇವೆ ಎಂದರು.

ನಾಯಕ ನವೀನ್ ಕುಮಾರ್ ಮಾತನಾಡಿ ನಾನು ಚಿತ್ರರಂಗಕ್ಕೆ ಹೊಸಬ. ಈ ಸಿನಿಮಾದಿಂದ ಸಾಕಷ್ಟು ಕಲಿತಿದ್ದೇನೆ.
ಎಲ್ಲಾ ಪಾತ್ರಗಳು ತುಂಬಾ ಪ್ರಾಮಿಸಿಂಗ್ ಆಗಿವೆ ಎಂದರು.
ಇನ್ನು‌ ಈ ಚಿತ್ರಕ್ಕೆ ನಿರ್ದೇಶಕರೇ ಎಡಿಟರ್ ಆಗಿದ್ದು ಮುತ್ತುರಾಜ್ ಸಾಥ್ ನೀಡಿದ್ದಾರೆ. ಚರಣ್ ತೇಜ್ ಅವರ ಛಾಯಾಗ್ರಹಣ, ಸತ್ಯಕಹಿ ಅವರ ಸಂಭಾಷಣೆ ಹಾಗೂ ಸಾಯಿ ಸೋಮೇಶ್ ಅವರ ಸಂಗೀತ ನಿರ್ದೇಶನವಿದೆ. ಅರ್ಜುನ್, ಆಶಿತಾ ಅಲ್ವಾ, ಮುಕ್ತಿ ಅಲ್ವಾ, ಆರ್ ನಿಕ್ಸಾನ್, ಪ್ರಶಾಂತ್, ಸಂಜಯ್ ನಾಯಕ್, ಸೌರವ್, ಸತ್ಯ ಕಹಿ, ಬೇಬಿ ವಂಶಿಕಾ, ಬೇಬಿ ರೇಯನ್ಸ್ ಇತರರು ಚಿತ್ರದಲ್ಲಿ‌ ಅಭಿನಯಿಸಿದ್ದಾರೆ.

error: Content is protected !!