ಕನ್ನಡ ಚಿತ್ರರಂಗದ ಸರ್ವಕಾಲಿಕ ಸೂಪರ್ ಹಿಟ್ ಚಿತ್ರ ಉಪೇಂದ್ರ ನಾಯಕರಾಗಿ ನಟಿಸಿ, ನಿರ್ದೇಶಿಸಿದ್ದ “A”. ಈ ಚಿತ್ರ ತೆರೆಕಂಡು 26 ವರ್ಷಗಳಾಗಿದೆ. ಕಳೆದವಾರ ಈ ಚಿತ್ರ ಕರ್ನಾಟಕದಾದ್ಯಂತ ರೀ ರಿಲೀಸ್ ಕೂಡ ಆಗಿ ಜನರ ಮನ ಗೆಲ್ಲುತ್ತಿದೆ. ಈ ಸಂತಸವನ್ನು ನಾಯಕಿ ಚಾಂದಿನಿ ಹಾಗು ತಂಡ ಹಂಚಿಕೊಂಡಿದೆ.
26 ವರ್ಷಗಳ ಹಿಂದೆ ಇಡೀ ದೇಶದಲ್ಲಿ ಸಂಚಲನ ಮೂಡಿಸಿದ ಚಿತ್ರ ಉಪೇಂದ್ರ ನಿರ್ದೇಶನದ “A” ಅಂದಿದ್ದು ನಾಯಕಿ ಚಾಂದಿನಿ. ಈ ಚಿತ್ರ ಇತ್ತೀಚೆಗೆ ರೀ ರಿಲೀಸ್ ಆಗಿ ಯಶಸ್ಚಿ ಪ್ರದರ್ಶನ ಕಾಣುತ್ತಿದೆ. ಬಹಳ ಸಂತೋಷವಾಗಿದೆ. ಈ ಚಿತ್ರಕ್ಕೆ ನಾನು ನಾಯಕಿಯಾಗಿ ಆಯ್ಕೆಯಾಗಿದ್ದು ನಿಜಕ್ಕೂ ಆಶ್ಚರ್ಯ. ನಾನು ಆಗ ಓದುತ್ತದೆ. ನ್ಯೂಯಾರ್ಕ್ ನಲ್ಲಿದೆ. ನನ್ನ ಫೋಟೊ ನೋಡಿದ ಉಪೇಂದ್ರ ಅವರು ನಾಯಕಿಯಾಗಿ ಆಯ್ಕೆ ಮಾಡಿದರು.
ನಿಜವಾಗಲೂ ಉಪೇಂದ್ರ ಅವರು ಬರೀ ಕರ್ನಾಟಕ ಅಷ್ಟೇ ಅಲ್ಲ. ಇಡೀ ದೇಶ ಕಂಡ ಅತ್ಯಂತ ಪ್ರತಿಭಾವಂತ ನಿರ್ದೇಶಕ. ಅವರಿಂದ ಮೊದಲ ಚಿತ್ರದಲ್ಲೇ ನಾನು ಸಾಕಷ್ಟು ಕಲಿತಿದ್ದೇನೆ. ಮೊದಲ ಚಿತ್ರದ ಚಿತ್ರೀಕರಣದ ಅನುಭವ ಈಗಲೂ ಕಣ್ಣ ಮುಂದೆ ಇದೆ. ನಾನು “A” ಚಿತ್ರದ ನಂತರ ಕನ್ನಡ ಸೇರಿದಂತೆ ದೇಶದ ವಿವಿಧ ಭಾಷೆಗಳ ಜನಪ್ರಿಯ ಚಿತ್ರಗಳಲ್ಲಿ ನಟಿಸಿದ್ದೇನೆ. ಆದರೆ ನನ್ನನ್ನು ಎಲ್ಲರೂ ಗುರುತಿಸುವುದು “A” ಚಿತ್ರದ ನಾಯಕಿ ಅಂತ. ಅಷ್ಟು ಹೆಸರು ತಂದುಕೊಟ್ಟಿದೆ ನನಗೆ ಈ ಚಿತ್ರ.
ಈ ಸಂದರ್ಭದಲ್ಲಿ ನಿರ್ದೇಶಕರಿಗೆ, ನಿರ್ಮಾಪಕರಿಗೆ ಧನ್ಯವಾದ ತಿಳಿಸುತ್ತೇನೆ. ಮತ್ತೊಂದು ಮುಖ್ಯವಾದ ವಿಷಯವೆಂದರೆ ಈ ಜನಪ್ರಿಯ ಚಿತ್ರವನ್ನು ಇನ್ನಷ್ಟು ಮುಂದುವರೆಸುವುದು ನನ್ನ ಹಂಬಲ. ಹಾಗಾಗಿ ‘A’ ಚಿತ್ರದ ಮುಂದುವರೆದ ಭಾಗ ಮಾಡುವುದಕ್ಕೆ ತೀರ್ಮಾನ ಮಾಡಿದ್ದೇನೆ. ಕಥೆ ಮತ್ತು ಚಿತ್ರಕಥೆಯನ್ನು ನಾನೇ ಬರದಿದ್ದೇನೆ. ನಿರ್ಮಾಪಕ ಮಂಜುನಾಥ್, ಸಂಗೀತ ನಿರ್ದೇಶಕ ಗುರುಕಿರಣ್ ಮುಂತಾದವರು ಜೊತೆಗಿದ್ದಾರೆ.
ಇನ್ನೊಂದು ವಿಷಯ ಬಾಕಿ ಇದೆ. ನಾವೆಲ್ಲರೂ ಹೋಗಿ ಉಪೇಂದ್ರ ಅವರ ಬಳಿ ಈ ಚಿತ್ರವನ್ನು ನೀವೇ ನಿರ್ದೇಶಿಸಬೇಕು ಹಾಗೂ ನಾಯಕರಾಗೂ ನಟಿಸಬೇಕು ಎಂದು ಮನವಿ ಮಾಡುವುದು. ಸದ್ಯದಲ್ಲೇ ಅವರನ್ನು ಭೇಟಿ ಮಾಡುತ್ತೇವೆ. ಅವರು ಒಪ್ಪುತ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ, ಈ ಸಿನಿಮಾ ಮಾಡಬೇಕೆಂದು ತೀರ್ಮಾನ ಮಾಡಿದ್ದೇವೆ. ಸದ್ಯದಲ್ಲೇ ಚಿತ್ರ ಪ್ರಾರಂಭವಾಗಲಿದೆ. ಆ ಚಿತ್ರದಲ್ಲಿದ್ದ ಬಹುತೇಕ ಚಿತ್ರತಂಡದ ಸದಸ್ಯರು ಈ ಚಿತ್ರದಲ್ಲೂ ಇರುತ್ತಾರೆ ಎಂದರು.
ಚಿತ್ರ ಆರಂಭವಾದಗಿನಿಂದ ಹಿಡಿದು ಬಿಡುಗಡೆಯಾಗುವವರೆಗಿನ ಮಾಹಿತಿಯನ್ನು ನಿರ್ಮಾಪಕ ಮಂಜುನಾಥ್ ನೀಡಿದರು. ಹಾಡುಗಳ ಕುರಿತು ಗುರುಕಿರಣ್ ಮಾತನಾಡಿದರು. ವಿ.ಮನೋಹರ್, ಗುರುದತ್ತ್, ಲೋಕಿ, ರಾಜಾರಾಮ್, ಜೋಶಿ ಮುಂತಾದ ಚಿತ್ರತಂಡದ ಸದಸ್ಯರು ಹಾಗೂ ವಿತರಕ ಶಂಕರ್ ಸಮಾರಂಭದಲ್ಲಿ ಭಾಗಿಯಾಗಿದ್ದರು. ಉಪೇಂದ್ರ ಅವರು ವಿದೇಶದಲ್ಲಿರುವುದರಿಂದ ವಿಡಿಯೋ ಮೂಲಕ ಖುಷಿ ಹಂಚಿಕೊಂಡರು.
ಮಕ್ಕಳ್ ಸೆಲ್ವನ್ ವಿಜಯ್ ಸೇತುಪತಿ ನಟನೆಯ ‘ಏಸ್’ ಸಿನಿಮಾದ ಫಸ್ಟ್ ಲುಕ್ ಮತ್ತು ಟೈಟಲ್ ಟೀಸರ್ ಬಿಡುಗಡೆಯಾಗಿದೆ. . ಜೂಜು, ಬಂದೂಕು, ಸ್ಫೋಟ, ದರೋಡೆ ಮತ್ತು ಬೈಕ್ ಚೇಸಿಂಗ್ ಅಂಶಗಳನ್ನು ಒಳಗೊಂಡಿರುವ ಅನಿಮೇಟೆಡ್ ಸ್ವರೂಪದಲ್ಲಿ ಟೀಸರ್ ಅನಾವರಣಗೊಳ್ಳಿಸಲಾಗಿದೆ. ವಿಜಯ್ ಸೇತುಪತಿ ರಗಡ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದು, ಅವರಿಗೆ ಜೋಡಿಯಾಗಿ ಕನ್ನಡತಿ ರುಕ್ಮಿಣಿ ವಸಂತ್ ಸಾಥ್ ಕೊಟ್ಟಿದ್ದಾರೆ.
ಏಸ್ ಸಿನಿಮಾದಲ್ಲಿ ಯೋಗಿ ಬಾಬು ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದು, ಪಿ.ಎಸ್.ಅವಿನಾಶ್, ದಿವ್ಯಾ ಪಿಳ್ಳೈ, ಬಬ್ಲು, ರಾಜಕುಮಾರ್ ಮತ್ತು ಅನೇಕ ಪ್ರಮುಖ ನಟರು ತಾರಾಬಳಗದಲ್ಲಿದ್ದಾರೆ. ಆರ್ಮುಗ ಕುಮಾರ್ ನಿರ್ದೇಶನದ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಕರಣ್ ಬಹದ್ದೂರ್ ರಾವತ್ ಛಾಯಾಗ್ರಹಣ ಮತ್ತು ಜಸ್ಟಿನ್ ಪ್ರಭಾಕರನ್ ಸಂಗೀತ ಸಂಯೋಜಿಸಿದ್ದು, ಗೋವಿಂದರಾಜ್ ಸಂಕಲನ ಒದಗಿಸಿದ್ದಾರೆ.
ಕ್ರೈಮ್ ಥ್ರಿಲ್ಲರ್ ಕಾಮಿಡಿ ಕಥಾಹಂದರ ಹೊಂದಿರುವ ಏಸ್ ಸಿನಿಮಾವನ್ನು, 7Cs ಎಂಟರ್ಟೈನ್ಮೆಂಟ್ ಬ್ಯಾನರ್ ನಡಿ ನಿರ್ಮಾಣ ಮಾಡಲಾಗಿದೆ. ಭಾರೀ ನಿರೀಕ್ಷೆ ಮೂಡಿಸಿರುವ ಚಿತ್ರ ಈ ವರ್ಷವೇ ರಿಲೀಸ್ ಆಗಲಿದೆ.
ಜಿ9 ಕಮ್ಯುನಿಕೇಷನ್ ಮೀಟಿಯಾ ಅಂಡ್ ಎಂಟರ್ಟೈನ್ಮೆಂಟ್ ಬ್ಯಾನರ್ ಮೂಲಕ ನಿರ್ಮಾಣವಾಗಿರುವ ಹಾಗೂ ಕ್ರೇಜಿಸ್ಟಾರ್ ವಿ ರವಿಚಂದ್ರನ್ ಪ್ರಮುಖಪಾತ್ರದಲ್ಲಿ ನಟಿಸಿರುವ “ದ ಜಡ್ಜ್ ಮೆಂಟ್” ಚಿತ್ರದ ಟ್ರೇಲರ್ ಇತ್ತೀಚಿಗೆ ಬಿಡುಗಡೆಯಾಯಿತು. MMB legacy ಯಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ನಿರ್ಮಾಪಕ ಉದಯ್ ಕೆ ಮಹ್ತಾ ಟ್ರೇಲರ್ ಬಿಡುಗಡೆ ಮಾಡಿ ಶುಭ ಕೋರಿದರು.
ನಿರ್ದೇಶಕ ಗುರುರಾಜ ಕುಲಕರ್ಣಿ ಮಾತನಾಡಿ, ಇದು ರವಿಚಂದ್ರನ್ ಅವರಿಗಾಗಿಯೇ ಮಾಡಿರುವ ಕಥೆ. ಲೀಗಲ್ ಥ್ರಿಲ್ಲರ್ ಜಾನರ್ ನ ಚಿತ್ರ. “ಯದ್ದಕಾಂಡ” ಚಿತ್ರದಲ್ಲಿ ವಕೀಲರಾಗಿ ರವಿಚಂದ್ರನ್ ಅವರ ಅಭಿನಯ ಇಂದಿಗೂ ಜನಪ್ರಿಯ. ಬಹಳ ವರ್ಷಗಳ ನಂತರ ಈ ಚಿತ್ರದಲ್ಲಿ ವಕೀಲರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಲಕ್ಷ್ಮೀ ಗೋಪಾಲಸ್ವಾಮಿ, ದಿಗಂತ್, ಧನ್ಯ, ಮೇಘನಾ ಗಾಂವ್ಕರ್, ರಂಗಾಯಣ ರಘು, ಪ್ರಕಾಶ್ ಬೆಳವಾಡಿ ಅವರನ್ನು ಒಳಗೊಂಡ ಬಹು ದೊಡ್ಡ ತಾರಾಗಣ ಈ ಚಿತ್ರದಲ್ಲಿದೆ. ಚಿತ್ರತಂಡದ ಸದಸ್ಯರ ಸಹಕಾರದಿಂದ ಚಿತ್ರ ಚೆನ್ನಾಗಿ ಮೂಡಿ ಬಂದಿದೆ. ಮೇ 24 ಚಿತ್ರರಂದು ಕರ್ನಾಟಕ ಮಾತ್ರವಲ್ಲದೆ, ಡೆಲ್ಲಿ, ಮುಂಬೈ, ಲಕ್ನೋ, ಗೋವಾ, ಆಂದ್ರಪ್ರದೇಶ ಸೇರಿದಂತೆ ದೇಶದ ವಿವಿಧ ಕಡೆ ಪ್ರತಿಷ್ಠಿತ ರಿಲಯನ್ಸ್ ಎಂಟರ್ ಟೈನ್ಮೆಂಟ್ ಸಂಸ್ಥೆ ಮೂಲಕ ಬಿಡುಗಡೆಯಾಗಲಿದೆ ಎಂದರು.
ನಿರ್ದೇಶಕರು ಬಂದು ಕಥೆ ಹೇಳಿದಾಗ ಇಷ್ಟವಾಯಿತು. ಅಭಿನಯಿಸಲು ಒಪ್ಪಿಕೊಂಡೆ. ಈ ತಂಡದ ಜೊತೆಗೆ ಕೆಲಸ ಮಾಡಿದ್ದು ಖುಷಿಯಾಗಿದೆ. ಸಾಮಾನ್ಯವಾಗಿ ನನ್ನ ಸಿನಿಮಾ ಹಾಡುಗಳ ಮೂಲಕ ಜನಪ್ರಿಯ. ಆದರೆ ನನಗೆ ಈ ಚಿತ್ರದಲ್ಲಿ ಒಂದು ಹಾಡೂ ಇಲ್ಲ. ಈ ಚಿತ್ರದ ಹೆಸರು “ಜಡ್ಜ್ ಮೆಂಟ್”. ಆದರೆ ನಮ್ಮ ಸಿನಮಾ ನೋಡಿ ಪ್ರೇಕ್ಷಕ ನೀಡುವ ” ಜಡ್ಜ್ ಮೆಂಟ್ ” ಅಂತಿಮ ಎನ್ನುತ್ತಾರೆ ನಟ ರವಿಚಂದ್ರನ್.
ಚಿತ್ರದಲ್ಲಿ ಅಭಿನಯಿಸಿರುವ ಲಕ್ಷ್ಮೀ ಗೋಪಾಲಸ್ವಾಮಿ, ದಿಗಂತ್, ಧನ್ಯ ರಾಮಕುಮಾರ್, ಮೇಘನಾ ಗಾಂವ್ಕರ್, ರವಿಶಂಕರ್ ಗೌಡ, ರಾಜೇಂದ್ರ ಕಾರಂತ್, ಕೃಷ್ಣ ಹೆಬ್ಬಾಳೆ, ರೇಖಾ ಕೂಡ್ಲಗಿ, ನವಿಲ ಮುಂತಾದ ಕಲಾವಿದರು ಹಾಗೂ ಛಾಯಾಗ್ರಾಹಕ ಪಿ.ಕೆ.ಹೆಚ್ ದಾಸ್, ಸಂಕಲನಕಾರ ಕೆಂಪರಾಜ್, ಚಿತ್ರಕಥೆ ಬರೆದಿರುವ ವಾಸುದೇವ ಮೂರ್ತಿ ಸೇರಿದಂತೆ ಅನೇಕ ತಂತ್ರಜ್ಞರು “ದ ಜಡ್ಜ್ ಮೆಂಟ್” ಚಿತ್ರದ ಕುರಿತು ಮಾತನಾಡಿದರು.
ಕಳೆದ ಮೂರೂವರೆ ದಶಕಗಳಿಂದ ತನ್ನದೆ ಸಾಮರ್ಥ್ಯವನ್ನು ಉಳಿಸಿಕೊಂಡು ಬರುತ್ತಿರುವ ಉದಯ ವಾಹಿನಿಯು ಈಗ ’ಶ್ರೀಮದ್ ರಾಮಾಯಣ’ ಧಾರವಾಹಿಯನ್ನು ವೀಕ್ಷಕರಿಗೆ ಉಣಬಡಿಸಲು ಸಿದ್ದತೆ ಮಾಡಿಕೊಂಡಿದೆ. ಅದ್ಬುತ ಕಾವ್ಯವನ್ನು ಹೊಸ ತಲೆಮಾರಿಗೆ ತಲುಪಿಸಲು ಮುಂದಾಗಿದೆ.
ರಾಮಾಯಣ ಭಾರತೀಯ ಸಂಸ್ಕ್ರತಿ, ಪರಂಪರೆ ಪ್ರತಿಬಿಂಬಿಸಲಿರುವುದು ವಿಶೇಷ. ರಾಮನ ಜೀವನ ಬಹುತೇಕ ಭಾರತೀಯರಿಗೆ ಮಾದರಿಯಾಗಿದೆ. ಆತನ ರಾಜ್ಯ ಪರಿಪಾಲನೆಯು ಇಂದಿಗೂ ರಾಮರಾಜ್ಯ ಅನ್ನುವ ಪದ ಈಗಲೂ ಬಳಸಲಾಗುತ್ತಿದೆ.
ರಾಮ ಮತ್ತು ಸೀತೆಯ ಪವಿತ್ರ ಪ್ರೇಮ, ಕಥೆಯಲ್ಲಿ ಧರ್ಮದ ಪಾಲನೆಯ ಮಾರ್ಗದಲ್ಲಿ ಎದುರಿಸಿದ ಅನೇಕ ಸವಾಲುಗಳು ಕುತೂಹಲಕಾರಿಯಾಗಿದೆ. ಸಂಪೂರ್ಣ ನೂತನ ದೃಶ್ಯ ವೈಭವಗಳು, ವೈವಿಧ್ಯಮಯ ನಟರ ತಂಡವು ಪೌರಾಣಿಕ ಪಾತ್ರಗಳಿಗೆ ಹೊಸ ಜೀವ ತುಂಬಲಿದೆ.
ಪ್ರತಿ ಸಂಚಿಕೆಯ 250 ವೀಕ್ಷಕರಿಗೆ ಒಟ್ಟು 2.5 ಲಕ್ಷ ರೂಪಾಯಿ ನಗದು ಬಹುಮಾನ ಗೆಲ್ಲುವ ಅವಕಾಶವನ್ನು ಕಲ್ಪಿಸಿದೆ. ಸೀರಿಯಲ್ ವೀಕ್ಷಿಸಿ ಕೊನೆಯಲ್ಲಿ ಕೇಳಲಾಗುವ ಪ್ರಶ್ನೆಗಳಿಗೆ ಮಿಸ್ಡ್ ಕಾಲ್ ಮೂಲಕ ಸರಿ ಉತ್ತರ ನೀಡಿದವರಿಗೆ
ತಲಾ ಒಂದು ಸಾವಿರ ಬಹುಮಾನವನ್ನು ಅಂದೇ ಸಂದಾಯವಾಗುವಂತೆ ಯೋಜನೆ ರೂಪಿಸಲಾಗಿದೆ. ಸೀರಿಯಲ್ ಸೋಮವಾರದಿಂದ ಶನಿವಾರದವರೆಗೆ ಮೇ 20ರಿಂದ ಸಂಜೆ 6 ಗಂಟೆಗೆ ಉದಯ ಟಿವಿದಲ್ಲಿ ಪ್ರಸಾರವಾಗಲಿದೆ.
ಕನ್ನಡ ಚಿತ್ರರಂಗದಲ್ಲಿ ಇಲ್ಲಿಯವರೆಗೆ ಲವ್, ರೊಮ್ಯಾನ್ಸ್ ಮತ್ತು ಕಾಮಿಡಿ ಶೈಲಿಯ ಸಿನಿಮಾಗಳಲ್ಲೇ ಹೆಚ್ಚಾಗಿ ಕಾಣಿಸಿಕೊಂಡಿದ್ದ ನಟ ದಿಗಂತ್, ಈ ಬಾರಿ ಲೀಗಲ್-ಥ್ರಿಲ್ಲರ್ ಶೈಲಿಯ ʼದ ಜಡ್ಜ್ಮೆಂಟ್ʼ ಸಿನಿಮಾದಲ್ಲಿ ಹೊಸಥರದ ಪಾತ್ರದ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ʼದ ಜಡ್ಜ್ಮೆಂಟ್ʼ ಸಿನಿಮಾ ಪೋಸ್ಟರ್, ಫಸ್ಟ್ಲುಕ್ ಮತ್ತು ಟೀಸರ್ಗಳಲ್ಲಿ ದಿಗಂತ್ ಪಾತ್ರ ಗಮನ ಸೆಳೆಯುತ್ತಿದ್ದು, ತಮ್ಮ ಹೊಸ ಸಿನಿಮಾ ಹೊಸ ಪಾತ್ರದ ಬಗ್ಗೆ ದಿಗಂತ್ ಮನಬಿಚ್ಚಿ ಮಾತನಾಡಿದ್ದಾರೆ.
ʼದ ಜಡ್ಜ್ಮೆಂಟ್ʼ ಸಿನಿಮಾದಲ್ಲಿ ನಿಮ್ಮ ಪಾತ್ರ ಹೇಗಿದೆ?
ನಾನು ಇಲ್ಲಿಯವರೆಗೆ ಮಾಡಿರುವ ಪಾತ್ರಗಳಿಗಿಂತ ವಿಭಿನ್ನವಾದ ಪಾತ್ರ ʼದ ಜಡ್ಜ್ಮೆಂಟ್ʼ ಸಿನಿಮಾದಲ್ಲಿದೆ. ಇಂದಿನ ಜನರೇಶನ್ನ ಬೆಂಗಳೂರಿನಂತಹ ಸಿಟಿಯಲ್ಲಿರುವ ಯುವಕರನ್ನು ಪ್ರತಿನಿಧಿಸುವಂತೆ ನನ್ನ ಪಾತ್ರವಿದೆ. ತನ್ನ ಇಷ್ಟದಂತೆ ಜೀವನ ನಡೆಸಲು ಹೊರಟ ಹುಡುಗನೊಬ್ಬನ ಜೀವನದಲ್ಲಿ ನಡೆಯುವ ಕೆಲವು ಅನಿರೀಕ್ಷಿತ ಘಟನೆಗಳು, ಏನೆಲ್ಲ ಬದಲಾವಣೆಗಳಿಗೆ ಕಾರಣವಾಗುತ್ತದೆ ಎಂಬುದರ ಸುತ್ತ ನನ್ನ ಪಾತ್ರವಿದೆ.
ನಿಮ್ಮ ಪ್ರಕಾರ ʼದ ಜಡ್ಜ್ಮೆಂಟ್ʼ ಅಂದ್ರೇನು?
ನನ್ನ ಪ್ರಕಾರ, ʼದ ಜಡ್ಜ್ಮೆಂಟ್ʼ ಒಂದು ಕೋರ್ಟ್ ರೂಂ ಡ್ರಾಮಾ ಸಿನಿಮಾ. ಒಂದಷ್ಟು ನೈಜ ಘಟನೆಗಳನ್ನು ಆಧರಿಸಿ ಅದನ್ನು ಸಿನಿಮಾ ರೂಪದಲ್ಲಿ ತೆರೆಗೆ ತಂದಿದ್ದಾರೆ ನಿರ್ದೇಶಕ ಗುರುರಾಜ ಕುಲಕರ್ಣಿ (ನಾಡಗೌಡ). ಇಂದಿನ ಕಾನೂನು, ನ್ಯಾಯ ವ್ಯವಸ್ಥೆ ಎಲ್ಲದರ ಚಿತ್ರಣ ಈ ಸಿನಿಮಾದಲ್ಲಿದೆ. ಇದೊಂದು ಲೀಗಲ್-ಥ್ರಿಲ್ಲರ್ ಶೈಲಿಯ ಸಿನಿಮಾವಾಗಿರುವುದರಿಂದ, ಇದಕ್ಕಿಂತ ಹೆಚ್ಚಾಗಿ ಸಿನಿಮಾದ ಬಗ್ಗೆ ಏನೂ ಕುತೂಹಲ ಬಿಟ್ಟುಕೊಡಲಾರೆ.
ʼದ ಜಡ್ಜ್ಮೆಂಟ್ʼ ಸಿನಿಮಾ ಒಪ್ಪಿಕೊಳ್ಳಲು ಕಾರಣ?
ಮೊದಲೇ ಹೇಳಿದಂತೆ, ನಾನು ಇಲ್ಲಿಯವರೆಗೆ ಮಾಡಿದ ಸಿನಿಮಾಗಳಿಗಿಂತ ವಿಭಿನ್ನ ಕಥೆ, ಪಾತ್ರ ಎರಡೂ ಈ ಸಿನಿಮಾದಲ್ಲಿದೆ. ರವಿಚಂದ್ರನ್ ಅವರಂಥ ದೊಡ್ಡ ನಟರ ಜೊತೆ ಅಭಿನಯಿಸುವ ಅವಕಾಶ, ತುಂಬ ದೊಡ್ಡ ಸ್ಟಾರ್ ಕಾಸ್ಟಿಂಗ್, ತುಂಬ ವೃತ್ತಿಪರವಾಗಿರುವ ನಿರ್ದೇಶಕ ಗುರುರಾಜ್ ಕುಲಕರ್ಣಿ ಮತ್ತು ಸಿನಿಮಾದ ಬಗ್ಗೆ ತುಂಬ ಪ್ಯಾಶನೇಟ್ ಆಗಿರುವ ತಂಡ. ಇವೆಲ್ಲವೂ ಈ ಸಿನಿಮಾ ಒಪ್ಪಿಕೊಳ್ಳಲು ಕಾರಣವಾಯಿತು.
ರವಿಚಂದ್ರನ್ ಜೊತೆಗಿನ ಚಿತ್ರೀಕರಣದ ಅನುಭವ ಹೇಗಿತ್ತು?
ನಾನು ರವಿ ಸರ್ ಸಿನಿಮಾಗಳನ್ನು ನೋಡಿಕೊಂಡು ಬೆಳೆದವನು. ಮೊದಲ ಬಾರಿಗೆ ʼದ ಜಡ್ಜ್ಮೆಂಟ್ʼ ಸಿನಿಮಾದಲ್ಲಿ ಅವರೊಂದಿಗೆ ಅಭಿನಯಿಸುವ ಅವಕಾಶ ಸಿಕ್ಕಿದ್ದಕ್ಕೆ ತುಂಬ ಖುಷಿಯಾಗಿದೆ. ರವಿ ಸರ್ ಜೊತೆಗೆ ಶೂಟಿಂಗ್ ಮಾಡುವಾಗ, ಸಮಯ ಹೋಗುವುದೇ ಗೊತ್ತಾಗುವುದಿಲ್ಲ. ಅವರಿಂದ ಕಲಿತುಕೊಳ್ಳುವುದು, ಮಾತಿಗೆ ಕುಳಿತುಕೊಂಡರೆ ಅವರಿಂದ ತಿಳಿದುಕೊಳ್ಳುವುದು ಸಾಕಷ್ಟು ವಿಷಯಗಳು ಇರುತ್ತದೆ.
ಶೂಟಿಂಗ್ನಲ್ಲಿ ರವಿಚಂದ್ರನ್ ಅವರಿಂದ ಕಲಿತದ್ದು ?
ನಾವೆಲ್ಲ ಸಿನಿಮಾವನ್ನು ಆಡಿಯನ್ಸ್ ಆಗಿ ಅಥವಾ ಕಲಾವಿದರಾಗಿ ನೋಡಿದರೆ, ರವಿ ಸರ್ ಸಿನಿಮಾವನ್ನು ಬೇರೆಯದ್ದೇ ದೃಷ್ಟಿಕೋನದಲ್ಲಿ ನೋಡುತ್ತಾರೆ. ಅವರು ಆಡಿಯನ್, ಆರ್ಟಿಸ್ಟ್, ಟೆಕ್ನೀಶಿಯನ್, ಮೇಕರ್ ಎಲ್ಲವೂ ಆಗಿರುವುದರಿಂದ, ಸಿನಿಮಾವನ್ನು ಅವರು ನೋಡುವ ದೃಷ್ಟಿಯೇ ಬೇರೆಯಾಗಿರುತ್ತದೆ. ಸಿನಿಮಾ ವಿಷಯದಲ್ಲಿ ಅವರ ಜ್ಞಾನ ತುಂಬ ಅಪಾರ. ಸಿನಿಮಾ ಮೇಕಿಂಗ್ ಬಗ್ಗೆ ಅವರು ಹೇಳುವ ವಿಷಯಗಳು ಬೇರೆಲ್ಲೂ ಕಲಿತುಕೊಳ್ಳಲು ಸಿಗದಂತವು.
ನಿಮ್ಮ ಪಾತ್ರದ ತಯಾರಿ ಹೇಗಿತ್ತು?
ಸಾಮಾನ್ಯವಾಗಿ ಪ್ರತಿ ಸಿನಿಮಾದ ಪಾತ್ರಗಳಿಗೂ ಅದರದ್ದೇ ಆದ ಒಂದಷ್ಟು ತಯಾರಿ ಇದ್ದೇ ಇರುತ್ತದೆ. ಆದರೆ ನಿಜ ಹೇಳಬೇಕೆಂದರೆ, ಈ ಸಿನಿಮಾಕ್ಕೆ ಅಷ್ಟೊಂದು ತಯಾರಿ ಮಾಡಿಕೊಂಡಿರಲಿಲ್ಲ. ಅದಕ್ಕೆ ಕಾರಣ ನಿರ್ದೇಶಕ ಗುರುರಾಜ್. ಈ ಸಿನಿಮಾದ ಪ್ರತಿ ಪಾತ್ರಗಳು, ಸನ್ನಿವೇಶಗಳು ಹೇಗೆ ಬರಬೇಕು ಎಂಬುದರ ಬಗ್ಗೆ ಅವರಿಗೆ ಸ್ಪಷ್ಟತೆಯಿತ್ತು. ಪ್ರತಿಯೊಂದನ್ನೂ ಕಲಾವಿದರಿಗೆ ಅರ್ಥೈಸಿ ಅವರಿಂದ ಅಭಿನಯ ತೆಗೆಸುತ್ತಿದ್ದರು. ಅದನ್ನು ಬಿಟ್ಟರೆ ಸಿನಿಮಾದಲ್ಲಿ ಬರುವ ಡ್ಯಾನ್ಸ್ ನಂಬರ್ಗೆ ಒಂದಷ್ಟು ತಯಾರಿ ಮಾಡಿಕೊಳ್ಳಬೇಕಾಯಿತು
.
ನಿಮ್ಮ ಮತ್ತು ಧನ್ಯಾ ಕೆಮಿಸ್ಟ್ರಿ ಹೇಗಿದೆ?
ʼದ ಜಡ್ಜ್ಮೆಂಟ್ʼ ಸಿನಿಮಾದಲ್ಲಿ ಮೊದಲ ಬಾರಿಗೆ ನಾನು ಧನ್ಯಾ ರಾಮಕುಮಾರ್ ಜೋಡಿಯಾಗಿ ಅಭಿನಯಿಸಿದ್ದೇವೆ. ನಮ್ಮಿಬ್ಬರದ್ದೂ, ಇಂದಿನ ಜನರೇಶನ್ ಯುವ ಜೋಡಿಯನ್ನು ಪ್ರತಿನಿಧಿಸುವಂಥ ಪಾತ್ರ. ಇಬ್ಬರ ಕೆಮಿಸ್ಟ್ರಿ ತುಂಬ ಚೆನ್ನಾಗಿದೆ. ಕಲಾವಿದೆಯಾಗಿ ಬೆಳೆಯಬೇಕೆಂಬ ಧನ್ಯಾ ಅವರ ಉದ್ದೇಶ, ಅವರ ಉತ್ಸಾಹ ಎರಡೂ ಮೆಚ್ಚುವಂಥದ್ದು. ʼದ ಜಡ್ಜ್ಮೆಂಟ್ʼ ಸಿನಿಮಾದ ನಂತರ ʼಪೌಡರ್ʼ ಸಿನಿಮಾದಲ್ಲೂ ನಾವಿಬ್ಬರೂ ಒಟ್ಟಿಗೇ ಅಭಿನಯಿಸುತ್ತಿದ್ದೇವೆ.
ನಿರ್ದೇಶಕರು ಮತ್ತು ಚಿತ್ರತಂಡದ ಬಗ್ಗೆ ಏನು ಹೇಳುವಿರಿ?
ʼದ ಜಡ್ಜ್ಮೆಂಟ್ʼ ಸಿನಿಮಾದ ನಿರ್ದೇಶಕ ಗುರುರಾಜ್ ಮೂಲತಃ ಸಾಫ್ಟ್ವೇರ್ ಹಿನ್ನೆಲೆಯಿಂದ ಸಿನಿಮಾಕ್ಕೆ ಬಂದವರು. ಸಾಕಷ್ಟು ವಿಷಯಗಳ ಬಗ್ಗೆ ಅವರಿಗೆ ಆಳವಾದ ಜ್ಞಾನವಿದೆ. . ಬಿಗ್ ಕಾಸ್ಟಿಂಗ್, ಬಿಗ್ ಬಜೆಟ್ ಇಟ್ಟುಕೊಂಡು ಅಂದುಕೊಂಡಂತೆ, ಪ್ಲಾನ್ ಪ್ರಕಾರ ಇಡೀ ಸಿನಿಮಾವನ್ನು ನಿರ್ದೇಶಕರು ಮತ್ತು ಚಿತ್ರತಂಡ ಅಚ್ಚುಕಟ್ಟಾಗಿ ತೆರೆಮೇಲೆ ತರುತ್ತಿದೆ. ತುಂಬ ಪ್ಯಾಶನೇಟ್ ಆಗಿ ಎಲ್ಲರೂ ಸೇರಿ ಒಂದೊಳ್ಳೆ ಸಿನಿಮಾ ಮಾಡಿದ್ದೇವೆ.
ದ ಜಡ್ಜ್ಮೆಂಟ್ʼ ಮೇಲೆ ನಿಮ್ಮ ನಿರೀಕ್ಷೆ ?
ನನ್ನ ಪ್ರಕಾರ, ʼದ ಜಡ್ಜ್ಮೆಂಟ್ʼ ಮಾಮೂಲಿ ಎಂಟರ್ಟೈನ್ಮೆಂಟ್ ಸಿನಿಮಾಗಳ ಸಾಲಿಗೆ ಅಥವಾ ಯಾವುದೋ ಒಂದು ವರ್ಗಕ್ಕೆ ಸೇರುವ ಸಿನಿಮಾವಲ್ಲ. ಕನ್ನಡದ ಮಟ್ಟಿಗೆ ತುಂಬ ಅಪರೂಪವಾಗಿರುವ ಲೀಗಲ್-ಥ್ರಿಲ್ಲರ್ ಶೈಲಿಯಲ್ಲಿ ಸಿನಿಮಾ ಬಂದಿದೆ. ಇದರಲ್ಲೊಂದು ಒಳ್ಳೆಯ ವಿಷಯವಿದೆ. ಅದನ್ನು ಮನಮುಟ್ಟುವಂತೆ ನಿರ್ದೇಶಕರು ತೆರೆಮೇಲೆ ಹೇಳಿದ್ದಾರೆ. ಆಡಿಯನ್ಸ್ಗೆ ಖಂಡಿತವಾಗಿಯೂ ʼದ ಜಡ್ಜ್ಮೆಂಟ್ʼ ಒಂದು ಒಳ್ಳೆಯ ಅನುಭವ ಕೊಟ್ಟು, ಇಷ್ಟವಾಗಲಿದೆ ಎಂಬ ವಿಶ್ವಾಸವಿದೆ.
ಪ್ರಚಾರದ ವೇಳೆ ಪ್ರೇಕ್ಷಕರ ಕಡೆಯಿಂದ ಹೇಗೆ ರೆಸ್ಪಾನ್ಸ್ ಸಿಗುತ್ತಿದೆ?
ಈಗಾಗಲೇ ʼದ ಜಡ್ಜ್ಮೆಂಟ್ʼ ಸಿನಿಮಾದ ಟೈಟಲ್ ಪೋಸ್ಟರ್, ಕ್ಯಾರೆಕ್ಟರ್ ಫಸ್ಟ್ಲುಕ್, ಟೀಸರ್ ಮಾತ್ತು ಹಾಡು ಬಿಡುಗಡೆಯಾಗಿದೆ. ಎಲ್ಲದಕ್ಕೂ ಸೋಶಿಯಲ್ ಮೀಡಿಯಾಗಳಲ್ಲಿ ಆಡಿಯನ್ಸ್ ಕಡೆಯಿಂದ ಒಳ್ಳೆಯ ರೆಸ್ಪಾನ್ಸ್ ಸಿಗುತ್ತಿದೆ. ಬಹುತೇಕರು ಸಿನಿಮಾದ ಬಗ್ಗೆ ಸಾಕಷ್ಟು ನಿರೀಕ್ಷೆಯ ಮಾತುಗಳನ್ನಾಡುತ್ತಿದ್ದಾರೆ.
ಡಾಲಿ ಧನಂಜಯ್ ಅಭಿನಯದ ಕೋಟಿ ಸಿನಿಮಾದ ಮೊದಲ ಹಾಡು ‘ಮಾತು ಸೋತು’ ಈಗ ಬಿಡುಗಡೆಯಾಗಿದೆ. ಈ ಹಾಡನ್ನು ವಾಸುಕಿ ವೈಭವ್ ಸಂಯೋಜಿಸಿದ್ದು, ಯೋಗರಾಜ್ ಭಟ್ ಸಾಹಿತ್ಯ ರಚಿಸಿ, ಅರ್ಮಾನ್ ಮಲಿಕ್ ಹಾಡಿದ್ದಾರೆ. ಕೋಟಿ ಸಿನಿಮಾದ ಹಾಡುಗಳ ಹಕ್ಕನ್ನು ಸರೆಗಮ ಖರೀದಿಸಿದ್ದು ಈ ಹಾಡಿನ ಲಿರಿಕಲ್ ವಿಡಿಯೋವನ್ನು ಸರೆಗಮ ಕನ್ನಡ ಯೂಟ್ಯೂಬ್ ಚಾನೆಲ್ಲಿನಲ್ಲಿ ವೀಕ್ಷಿಸಬಹುದು.
ಹಾಡಿನ ಸಂಯೋಜಕರಾದ ವಾಸುಕಿ ವೈಭವ್ “ಇದು ನನ್ನ ಮತ್ತು ಅರ್ಮಾನ್ ಮಲಿಕ್ ಕಾಂಬಿನೇಷನ್ನಿನ ಮೊದಲ ಹಾಡು. ಸಾಹಿತ್ಯ ಯೋಗರಾಜ್ ಭಟ್ ಅವರದ್ದು. ಅವರ ಜತೆ ಕೆಲಸ ಮಾಡುವುದು ಯಾವಾಗಲೂ ಖುಷಿ ಮತ್ತು ಕಲಿಕೆಯ ವಿಚಾರ. ಜನರಿಗೆ ಖಂಡಿತ ಈ ಹಾಡು ಇಷ್ಟವಾಗತ್ತೆ ಅನ್ನೊ ನಂಬಿಕೆ ಇದೆ” ಎಂದು ಹೇಳಿದರು.
“ವಾಸುಕಿ ಹೊಸ ತಲೆಮಾರಿನ ಪ್ರತಿಭಾವಂತ ಸಂಗೀತ ನಿರ್ದೇಶಕ. ಯೋಗರಾಜ್ ಭಟ್ ಅವರ ಸಾಹಿತ್ಯದ ದೊಡ್ಡ ಅಭಿಮಾನಿ ನಾನು. ಈ ಇಬ್ಬರ ಕಾಂಬಿನೇಷನ್ನಿನ ಈ ಹಾಡನ್ನು ಅರ್ಮಾನ್ ಮಲಿಕ್ ತುಂಬಾ ಚೆನ್ನಾಗಿ ಹಾಡಿದ್ದಾರೆ. ಈ ಹಾಡು ಕನ್ನಡದ ಕಿವಿ ಮತ್ತು ಮನಸುಗಳಿಗೆ ಇಷ್ಟವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ” ಎಂದು ಕೋಟಿಯ ನಿರ್ದೇಶಕ ‘ಪರಮ್’ ಅಭಿಪ್ರಾಯ ಪಟ್ಟರು.
ಕೋಟಿ ಚಿತ್ರದ ತಾರಾಗಣದಲ್ಲಿ ಡಾಲಿ ಧನಂಜಯ ಜೊತೆ ನಾಯಕಿಯಾಗಿ ಮೋಕ್ಷಾ ಕುಶಾಲ್ ಇದ್ದಾರೆ. ಉಳಿದಂತೆ ಹಿರಿಯ ನಟರಾದ ರಂಗಾಯಣ ರಘು, ರಮೇಶ್ ಇಂದಿರಾ, ತಾರಾ, ಸರ್ದಾರ್ ಸತ್ಯ ಮುಂತಾದವರು ಅಭಿನಯಿಸಿದ್ದಾರೆ.
ಚಿತ್ರದಲ್ಲಿ ಐದು ಹಾಡುಗಳಿದ್ದು ವಾಸುಕಿ ವೈಭವ್ ರಾಗ ಸಂಯೋಜಿಸಿದ್ದಾರೆ. ಈ ಹಾಡುಗಳಿಗೆ ಯೋಗರಾಜ್ ಭಟ್ ಮತ್ತು ವಾಸುಕಿ ವೈಭವ್ ಸಾಹಿತ್ಯ ರಚಿಸಿದ್ದಾರೆ. ಹಿನ್ನೆಲೆ ಸಂಗೀತದ ಜವಾಬ್ದಾರಿಯನ್ನು ಚಾರ್ಲಿ 777 ಖ್ಯಾತಿಯ ನೊಬಿನ್ ಪೌಲ್ ಹೊತ್ತಿದ್ದಾರೆ. ಕಾಂತಾರ ಸಿನಿಮಾದ ಕೆಲಸಕ್ಕೆ ಪ್ರಶಂಸೆಗಳಿಸಿದ್ದ ಪ್ರತೀಕ್ ಶೆಟ್ಟಿಯವರು ಕೋಟಿಯ ಸಂಕಲನಕಾರರಾದರೆ, ಟೆಲಿವಿಷನ್ನ ಖ್ಯಾತ ಛಾಯಾಗ್ರಾಹಕ ಅರುಣ್ ಅವರು ಈ ಸಿನಿಮಾದ ಕ್ಯಾಮರಮನ್.
ಈ ಸಿನೆಮಾವನ್ನು ಜಿಯೋ ಸ್ಟುಡಿಯೋಸ್ ನಿರ್ಮಾಣ ಮಾಡಿದ್ದು, ಕಲರ್ಸ್ ಕನ್ನಡವನ್ನು ದಶಕಗಳ ಕಾಲ ಮುನ್ನಡೆಸಿದ್ದ ಪರಮ್ ಅವರು ಬರೆದು ನಿರ್ದೇಶಿಸಿದ್ದಾರೆ. ʼಕೋಟಿʼ ಜೂನ್ 14ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ಡಾಲಿ ಧನಂಜಯ್ ಅಭಿನಯದ ಕೋಟಿ ಸಿನಿಮಾದ ಮೊದಲ ಹಾಡು ‘ಮಾತು ಸೋತು’ ಮೇ 13, ಸೋಮವಾರ ಸಂಜೆ 5 ಗಂಟೆಗೆ ಬಿಡುಗಡೆಯಾಗಲಿದೆ. ಈ ಹಾಡನ್ನು ವಾಸುಕಿ ವೈಭವ್ ಸಂಯೋಜಿಸಿದ್ದು, ಯೋಗರಾಜ್ ಭಟ್ ಸಾಹಿತ್ಯ ರಚಿಸಿ, ಅರ್ಮಾನ್ ಮಲಿಕ್ ಹಾಡಿದ್ದಾರೆ. ಕೋಟಿ ಸಿನಿಮಾದ ಹಾಡುಗಳ ಹಕ್ಕನ್ನು ಸರೆಗಮ ಖರೀದಿಸಿದ್ದು ಈ ಹಾಡಿನ ಲಿರಿಕಲ್ ವಿಡಿಯೋ ಸರೆಗಮ ಕನ್ನಡ ಯೂಟ್ಯೂಬ್ ಚಾನೆಲ್ಲಿನಲ್ಲಿ ಮೇ 13ರಂದು ಬಿಡುಗಡೆಯಾಗಲಿದೆ.
ಕೋಟಿ ಚಿತ್ರದ ತಾರಾಗಣದಲ್ಲಿ ಡಾಲಿ ಧನಂಜಯ ಜೊತೆ ನಾಯಕಿಯಾಗಿ ಮೋಕ್ಷಾ ಕುಶಾಲ್ ಇದ್ದಾರೆ. ಉಳಿದಂತೆ ಹಿರಿಯ ನಟರಾದ ರಂಗಾಯಣ ರಘು, ರಮೇಶ್ ಇಂದಿರಾ, ತಾರಾ, ಸರ್ದಾರ್ ಸತ್ಯ ಮುಂತಾದವರು ಅಭಿನಯಿಸಿದ್ದಾರೆ.
ಚಿತ್ರದಲ್ಲಿ ಐದು ಹಾಡುಗಳಿದ್ದು ವಾಸುಕಿ ವೈಭವ್ ರಾಗ ಸಂಯೋಜಿಸಿದ್ದಾರೆ. ಈ ಹಾಡುಗಳಿಗೆ ಯೋಗರಾಜ್ ಭಟ್ ಮತ್ತು ವಾಸುಕಿ ವೈಭವ್ ಸಾಹಿತ್ಯ ರಚಿಸಿದ್ದಾರೆ. ಹಿನ್ನೆಲೆ ಸಂಗೀತದ ಜವಾಬ್ದಾರಿಯನ್ನು ಚಾರ್ಲಿ 777 ಖ್ಯಾತಿಯ ನೊಬಿನ್ ಪೌಲ್ ಹೊತ್ತಿದ್ದಾರೆ. ಕಾಂತಾರ ಸಿನಿಮಾದ ಕೆಲಸಕ್ಕೆ ಪ್ರಶಂಸೆಗಳಿಸಿದ್ದ ಪ್ರತೀಕ್ ಶೆಟ್ಟಿಯವರು ಕೋಟಿಯ ಸಂಕಲನಕಾರರಾದರೆ, ಟೆಲಿವಿಷನ್ನ ಖ್ಯಾತ ಛಾಯಾಗ್ರಾಹಕ ಅರುಣ್ ಅವರು ಈ ಸಿನಿಮಾದ ಕ್ಯಾಮರಮನ್.
ಈ ಸಿನೆಮಾವನ್ನು ಜಿಯೋ ಸ್ಟುಡಿಯೋಸ್ ನಿರ್ಮಾಣ ಮಾಡಿದ್ದು, ಕಲರ್ಸ್ ಕನ್ನಡವನ್ನು ದಶಕಗಳ ಕಾಲ ಮುನ್ನಡೆಸಿದ್ದ ಪರಮ್ ಅವರು ಬರೆದು ನಿರ್ದೇಶಿಸಿದ್ದಾರೆ. ʼಕೋಟಿʼ ಜೂನ್ 14ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ಈ ಮೊದಲು ದಕ್ಷ ಯಜ್ಞ, ತರ್ಲೆ ವಿಲೇಜ್, ಋತುಮತಿ ಚಿತ್ರ ನಿರ್ದೇಶನ ಮಾಡಿದ್ದ ಸಿದ್ದೇಗೌಡ ಜಿ.ಬಿ.ಎಸ್. ಅವರು ಕುಂಟೆಬಿಲ್ಲೆ ಸಿನಿಮಾ ನಿರ್ದೇಶನಕ್ಕೆ ಮುಂದಾಗಿದ್ದಾರೆ. ಯುವ ನಟ ಯದು ಮೊದಲ ಬಾರಿಗೆ ನಾಯಕರಾಗಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡುತ್ತಿದ್ದಾರೆ. ಹತ್ತಕ್ಕೂ ಹೆಚ್ಚು ಚಿತ್ರ ಮಾಡಿರುವ ಮೇಘ ಶ್ರೀ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.
ಪೋಷಕ ಪಾತ್ರಗಳಲ್ಲಿ ಕಿಶೋರ್, ಪವಿತ್ರ ಲೋಕೇಶ್, ಶಂಕರ್ ಅಶ್ವಥ್, ಚಂದ್ರಪ್ರಭ ಮೊದಲಾದವರು ನಟಿಸಲಿದ್ದಾರೆ. ನಾವೆಲ್ಲಾ ಚಿಕ್ಕ ವಯಸ್ಸಿನಲ್ಲಿ ಆಡುತ್ತಿದ್ದ ಆಟ ಕುಂಟೆಬಿಲ್ಲೆ. ಅದೇ ಟೈಟಲ್ ಇಟ್ಟುಕೊಂಡು ಪ್ರೀತಿ, ನೋವು, ಕಾಮ ಎಲ್ಲವನ್ನೂ ಕಟ್ಟಿಕೊಡಲಿದ್ದೇವೆ ಎಂದು ನಿರ್ದೇಶಕ ಸಿದ್ದೇಗೌಡ ತಿಳಿಸಿದರು.
ನಿರ್ಮಾಪಕ ಎಸ್.ಬಿ. ಶಿವು ಮಾತನಾಡಿ, ಜೀವಿತ ಕ್ರಿಯೇಷನ್ ನಿಂದ ಒಳ್ಳೆಯ ಸಿನಿಮಾ ಮಾಡಿದ್ದೇವೆ. ಯದು ಹೊಸ ಪ್ರತಿಭೆ ಆಗಿದ್ದು ಅವರನ್ನೇ ನಾಯಕರನ್ನಾಗಿ ಮಾಡಿಕೊಂಡಿದ್ದೇವೆ ಎಂದರು.
ನಿರ್ಮಾಪಕ ಕುಮಾರ್ ಗೌಡ ಮಾತನಾಡಿ, ನಿರ್ಮಾಣ ಕ್ಷೇತ್ರ ನನಗೆ ಹೊಸದು. 30 ವರ್ಷದ ಹಿಂದೆ ನಾನೊಬ್ಬ ಕಲಾವಿದ ಆಗಬೇಕು ಎಂದು ಬೆಂಗಳೂರಿಗೆ ಹೋಗಿದ್ದವನು. ಆದರೆ ಅದು ಸಾಧ್ಯವಾಗಿರಲಿಲ್ಲ. ಈಗ ಅದನ್ನು ನನ್ನ ಮಗನ ಮೂಲಕ ಈಡೇರಿಸಿಕೊಳ್ಳುತ್ತಿದ್ದೇನೆ. ನನ್ನ ಮಗನಿಗೆ ರಂಗಭೂಮಿ ಕಡೆಗೆ ಆಸಕ್ತಿ ಇತ್ತು .
ಇದೀಗ ವಿದ್ಯಾಭ್ಯಾಸ ಮುಗಿಸಿ ನಟನೆ ಕಡೆಗೆ ಬರುತ್ತಿದ್ದಾನೆ. ಈಗ ನಾನೇ ಮುಂದೆ ನಿಂತು ನಿರ್ದೇಶಕ ಸಿದ್ದೇಗೌಡ ಅವರ ಗರಡಿಗೆ ಬಿಟ್ಟಿದ್ದೇವೆ. ನನ್ನ ಮಗನಿಗೆ ಹೊಂದುವಂತ ಒಳ್ಳೆಯ ಕತೆ ಇದೆ. ಸಿನಿಮಾ ಚೆನ್ನಾಗಿ ಮೂಡಿಬರಲಿದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು.
ಮೇಘಶ್ರೀ ಮಾತಿಗಿಳಿದು, ಟೈಟಲ್ ನಷ್ಟೇ ಸ್ಕ್ರಿಪ್ಟ್ ಕೂಡ ಚೆನ್ನಾಗಿದೆ. ಕನ್ನಡದಲ್ಲಿ ಈ ರೀತಿಯ ಸ್ಟೋರಿ ಕೇಳಿರಲಿಲ್ಲ. ಒಳ್ಳೆಯ ತಂಡ ಸಿಕ್ಕಿದ್ದು, ನಾನು ಹಳ್ಳಿಯೊಂದರ ಶ್ರೀಮಂತ ಕುಟುಂಬದ ಹುಡುಗಿಯ ಪಾತ್ರ ಮಾಡಲಿದ್ದೇನೆ ಎಂದರು. ನಾಯಕ ಯದು ಮಾತನಾಡಿ, ನನ್ನ ಮೇಲೆ ನಂಬಿಕೆ ಇಟ್ಟು ಅವಕಾಶ ಕೊಟ್ಟಿದ್ದಾರೆ. ಆ ನಿಟ್ಟಿನಲ್ಲಿ ಪಾತ್ರ ಮಾಡುವೆ ಎಂದರು.
ಹಿರಿಯ ನಟ ಶಂಕರ್ ಅಶ್ವಥ್ ಮಾತನಾಡಿ, ಅಕ್ಷಯ ತೃತೀಯ ದಿನದಂದು ಯಾವುದೇ ಒಳ್ಳೆಯ ಕೆಲಸ ಮಾಡಿದರೂ ಒಳ್ಳೆಯದಾಗುತ್ತದೆ ಎನ್ನುವ ನಂಬಿಕೆ ಇದೆ. ಅದೇ ರೀತಿ ಈ ಚಿತ್ರಕ್ಕೂ ಒಳ್ಳೆಯದಾಗಲಿ. ನನ್ನದು ನಾಯಕಿಯ ತಂದೆ ಪಾತ್ರ. ಒಂದು ಗ್ರಾಮೀಣ ಆಟ ಜೀವನದಲ್ಲಿ ಎಷ್ಟು ಮುಖ್ಯ ಆಗುತ್ತದೆ ಎನ್ನುವುದನ್ನು ಚಿತ್ರದಲ್ಲಿ ಹೇಳಿದ್ದಾರೆ. ವಿಭಿನ್ನ ಮತ್ತು ಕುತೂಹಲಕಾರಿ ಚಿತ್ರ ಇದಾಗಿರಲಿದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು.
ಸಂಭಾಷಣೆ ಬರೆದಿರುವ ಮಧು ಮಾತನಾಡಿ ನಾನು ಪ್ರತಿ ಸಿನಿಮಾಗೆ ಬರೆಯುವಾಗಲೂ ಹೊಸದಾಗಿಯೇ ಬರೆಯುತ್ತೇನೆ. ಈ ಚಿತ್ರದ ಕಥೆ ಚೆನ್ನಾಗಿದೆ. ಅದಕ್ಕೆ ತಕ್ಕಂತೆ ಸಂಭಾಷಣೆ ಬರೆದಿದ್ದೇನೆ. ಹಳ್ಳಿಯ ನೈಜ ಘಟನೆಗಳು ಇಲ್ಲಿ ಇವೆ ಎಂದು ತಿಳಿಸಿದರು.
ಮತ್ತೆ ಪುಟಿದೇಳಲು ಸಜ್ಜಾದ ಹಾಸ್ಯ ಕಲಾವಿದ ಮಿತ್ರ. ಹಲವು ಏಳುಬೀಳು ಕಂಡ ಮಿತ್ರ ಇದೀಗ ಹೊಸ ರಾಗದ ಜೊತೆ ಕಾಣಿಸಿಕೊಳ್ಳುತ್ತಿದ್ದಾರೆ. ಅವರ ಅಪರೂಪದ ಪಾತ್ರಗಳ ಸಿನಿಮಾಗಳು ಬಿಡುಗಡೆಯಾಗಬೇಕಿದೆ. ಸೋಲು ಗೆಲುವು ಕಂಡ ಮಿತ್ರ ಸದಾ ಸ್ನೇಹಜೀವಿ. ಅವರೀಗ 46ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ. ಈ ವೇಳೆ ಮಿತ್ರ ಅವರ ಸಿನಿ ಜರ್ನಿಯ ಝಲಕ್ ಇಲ್ಲಿದೆ….
ಶಿನು ಜಾರ್ಜ್..ಅರೇ ಹಿಂಗಂದ್ರೆ ಯಾರಿಗೂ ಗೊತ್ತಾಗಲ್ಲ ; ಅದೇ ‘ಮಿತ್ರ‘ ಅಂತ ಕರೆದ್ರೆ ಇಡೀ ಚಂದನವನ ಮುಗಳ್ನಗುತ್ತದೆ..ಮಿತ್ರ ಇವ್ರ ಯಾವಾಗಲ್ಲೂ ಸ್ನೇಹ ಪ್ರೀತಿ ವಿಶ್ವಾಸದ ಹತ್ರ.. ಸ್ನೇಹಕ್ಕೋಸ್ಕರ_ ಸ್ನೇಹಿತರಿಗೋಸ್ಕರ ಹಾತೋರೆಯುವ ಮಸ್ತ್ ಮನಸು ಮಿತ್ರ ಅವರದ್ದು.. ಹಿಂಗಾಗಿಯೆ ತನ್ನ ಸ್ನೇಹ ಲೋಕದಿಂದಲೇ ಮಿತ್ರ ಅಂತ ಹೆಸರನ್ನ ಪಡೆದು ಪರಿಚಿತರಾಗಿರೋರು ಬಹುಮುಖ ಪ್ರತಿಭೆ. ಇವ್ರಿಗೆ ಗೊತ್ತಿರೋದು ಮೂರೇ ಒಂದು ಸ್ನೇಹಿತರು , ಇನ್ನೊಂದು ಅಡುಗೆ ,ಇನ್ನೊಂದು ಕಲೆ.. ಈ ಮೂರನ್ನು ತನು-ಮನವನ್ನಾಗಿಸಿಕೊಂಡು ಬಾಳುತ್ತಿರೋ ನಿಯತ್ತಿನ ಆಳು.
ಒಂದು ಕಾಲದಲ್ಲಿ ಒಂದೊತ್ತಿನ ಊಟಕ್ಕೂ ಕೂಡ ಸಮಸ್ಯೆ ಇದ್ದ ಫ್ಯಾಮಿಲಿ ಬ್ಯಾಗ್ರೌಂಡ್ ನಿಂದ ಬಂದವ್ರು ಇವ್ರು.. ಆದ್ರೆ ಇವತ್ತು ವೆರೈಟಿ ವೆರೈಟಿ ಅಡುಗೆ ಮಾಡೋ ಬೃಹತ್ ಬಾಣಸಿಗ ಮಿತ್ರ… ಹಾದಿ ಬೀದಿ ತಿಂಡಿಯಿಂದ ಹಿಡಿದು ಸೆವೆನ್ ಸ್ಟಾರ್ ಹೋಟೆಲ್ ಅಡುಗೆಯನ್ನು ಚಿಟ್ಕೆ ಹೊಡೆದಂಗೆ ಮಾಡಿಬಿಡ್ತಾರೆ.. ಸಾವಿರಾರು ಕಚಗುಳಿ ಇಡೋ ಕಾಮಿಡಿ ಶೋಗಳನ್ನ ನಡೆಸಿಕೊಟ್ಟಿದ್ದಾರೆ. ಈಗಲ್ಲೂ ಅವಕಾಶ ಬಂದಾಗೆಲ್ಲ ನಡೆಸಿಕೊಟ್ಟಿದ್ದಾರೆ ಪರಸಂಗದ ಮಾರ್ಡನ್ ಗೆಂಡ್ಡೆತಿಮ್ಮ.
ವೆಡಿಂಗ್ ಪ್ಲಾನ್ಗಳನ್ನೂ ಕೂಡ ಸಖತ್ ಕ್ರಿಯೆಟಿವ್ ಆಗಿ ಪ್ಲಾನ್ ಮಾಡ್ತಾರೆ ಜಾಣೇಶ. ನಟನೆಯ ಜೊತೆಗೆ ಮದುವೆ ಕಾರ್ಯಕ್ರಮಗಳನ್ನ ಸುಸೂತ್ರವಾಗಿ ಟೆಕ್ಷನ್ ಇಲ್ದಂಗೆ ಅದ್ದೂರಿಯಾಗಿ ಮಾಡಿಕೊಡ್ತಾ ಇದ್ದಾರೆ. ಅದೆಂಥದ್ದೆ ಪಾತ್ರ ಕೊಟ್ಟರು ನುಂಗಿ ನೀರು ಕೊಡಿಯೋ ಮಿತ್ರ ತನ್ನ ಅನೇಕ ಅನೇಕ ಮಿತ್ರ ಬಳಗಕ್ಕೆ ಗೊತ್ತೋ ಗೊತ್ತಿಲ್ಲದೆ ಸಹಾಯ ಮಾಡ್ತಾ ಇದ್ದಾರೆ.
ಇನ್ನು ಕರ್ನಾಟಕದ ಪ್ರಚಂಡ ಕುಳ್ಳ ದಿವಂಗತ ದ್ವಾರಕೀಶ್ ಅವರನ್ನ ಸ್ಫೂರ್ತಿಯನ್ನಾಗಿಸಿಕೊಂಡಿರುವ ‘ರಾಗ‘ ಅನ್ನೋ ಮನಮುಟ್ಟವ ಸಿನಿಮಾ ನಿರ್ಮಾಣ ಕಮ್ ನಟನೆ ಮಾಡಿ ಗೆದ್ದರು.. ಆದ್ರೆ ಅವತ್ತು ಬಾಹುಬಲಿ ಸಿನಿಮಾ ಎಲ್ಲಾ ಥಿಯೇಟರ್ಗಳನ್ನ ಕಬ್ಜ ಮಾಡಿಕೊಂಡಿದ್ದರಿಂದ ಮಿತ್ರ ಕೈ ಸುಟ್ಕೋ ಬೇಕಾಯ್ತು.. ಆದ್ರೂ ಛಲಬಿಡದ ತ್ರಿವಿಕ್ರಮನಂತೆ ಚಿತ್ರರಂಗದಲ್ಲಿ ಎದ್ದು ನಿಲ್ಲಬೇಕು ಕಲಾ ಸರಸ್ವತಿ ಆರಾಧಿಸಲೇಬೇಕು ಅನ್ನೋ ಪಣದಿಂದ ಸಿನಿಮಾ ಲೋಕದ ಕಲಾರಣಕಣದಲ್ಲಿ ಸಕ್ರಿಯರಾಗಿದ್ದಾರೆ. ಮೊನ್ನೆ ಸಂತೋಷ್ ಆನಂದ್ ರಾಮ್ ನಿರ್ದೇಶನದ ಹೊಂಬಾಳೆ ಫಿಲಂಸ್ ನಿರ್ಮಾಣದ ರಾಘವೇಂದ್ರ ಸ್ಟೋರ್ ಸಿನಿಮಾ ಮೂಗನ ಪಾತ್ರ ವೀಡೀಯೋ ವೈರಲ್ ಆಗ್ತಾ ಇರೋದು ಎಲ್ಲರಿಗೂ ಗೊತ್ತು.
2003ರಲ್ಲಿ ಶಿವಣ್ಣ ನಟನೆಯ 75ನೇ ಸಿನಿಮಾ ‘ಶ್ರೀರಾಮ್‘ ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದವರು ‘ಪಾಪಾ ಪಾಂಡು‘ ಮತ್ತು ‘ಸಿಲ್ಲಿ ಲಲ್ಲಿ‘ ಧಾರಾವಾಹಿಯ ಮೂಲಕ ಕನ್ನಡಿಗರ ಮನೆ ಮನಕ್ಕೆ ಹೋದವರು. ಅದ್ರಲ್ಲೂ ಯೋಗರಾಜ್ ಭಟ್ ಸೃಷ್ಟಿಸಿದ ‘ಮನಸಾರೆ‘ ಚಿತ್ರದ ‘‘ಬಟ್ಟೆ ಬ್ಯಾಡ‘‘ ಅನ್ನೊ ಕ್ಯಾರೆಕ್ಟರ್ , ‘ಪಂಚರಂಗಿ‘ ಸಿನಿಮಾದ ಜ್ಯೋತಿಷಿ ಪಾತ್ರ ಹಿಂಗೆ ಹೇಳ್ತಾ ಹೋದ್ರೆ ದೊಡ್ಡ ಪಟ್ಟಿನೆ ಹೇಳಬಹುದು.. ಇಲ್ಲಿಯ ತನಕ 150ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ ರಾಜ್ಯ ಪ್ರಶಸ್ತಿ ಪುರಸ್ಕೃತ ಕಲಾವಿದ ಮಿತ್ರ.
ಮಿತ್ರ ಎಷ್ಟು ಶ್ರಮಜೀವಿ, ಕ್ರಮ ಜೀವಿ ಅನ್ನೋದನ್ನ ಹೇಳ್ತಿವಿ ಕೇಳಿ.. ಅದೇ ಯಾವುದೇ ರೀತಿ ಪಾತ್ರ ಸಿಗ್ಲಿ ಲೀಲಾಜಾಲವಾಗಿ ಅಭಿನಯ ಮಾಡೋ ಈ ಕಲಾವಿದ ಈಗ ಅನೇಕ ಸಿನಿಮಾಗಳಲ್ಲಿ ಬಗೆ ಬಗೆಯ ಬ್ಯೂಟಿಫುಲ್ ಪಾತ್ರಗಳನ್ನ ಮಾಡ್ತಾ ಇದ್ದಾರೆ.. ಅದ್ರಲ್ಲಿ ಪ್ರಮುಖವಾದವುಗಳೆಂದ್ರೆ ‘ಯಲ್ಲಾಕುನ್ನಿ‘ ಮತ್ತು ‘ಕರಾವಳಿ‘ ಸಿನಿಮಾ.. ಪ್ರದೀಪ್ ನಿರ್ದೇಶನದ ಕೋಮಲ್ ಕುಮಾರ್ ಮತ್ತು ಸಹನಾಮೂರ್ತಿ ನಿರ್ಮಾಣದ ‘ಯಲ್ಲಾಕುನ್ನಿ‘ ಸಿನಿಮಾದಲ್ಲಿ ವಿಶೇಷ ಪಾತ್ರದಲ್ಲಿ ಮಿತ್ರ ಅಭಿನಯ ಮಾಡಿದ್ದಾರೆ.. ‘‘ಸುಗಂಧ ರಾಜ‘‘ ಅನ್ನೋ ಕಾಮಿಡಿ ಕಮ್ ವಿಲನ್ ಕ್ಯಾರೆಕ್ಟರ್ ಅನ್ನ ಫಸ್ಟ್ ಟೈಮ್ ಪ್ಲೇ ಮಾಡಿದ್ದಾರೆ.
ಇನ್ನು ಪ್ರಜ್ವಲ್ ದೇವರಾಜ್ ನಟನೆಯ ‘ಕರಾವಳಿ‘ ಸಿನಿಮಾದ ಬಗ್ಗೆ ಜನ ಮುಂದೊಂದು ದಿನ ಮಾತನಾಡೇ ಮಾತನಾಡುತ್ತಾರೆ.. ಯಾಕೆಂದ್ರೆ ಹಂಗಿದೆ ಮಿತ್ರ ಅವರ ಪಾತ್ರ.. ‘ಕರಾವಳಿ‘ ಸಿನಿಮಾದಲ್ಲಿ ಒಂದು ವಿಶೇಷ ಗೆಟಪ್ನಲ್ಲಿ ಮಿತ್ರ ಕಾಣಿಸಿಕೊಂಡಿದ್ದಾರೆ.. ಎಂದೂ ಕೂಡ ಗಡ್ಡ ಮೀಸೆ ಬಿಡದ ಮಿತ್ರ ಫಸ್ಟ್ ಟೈಮ್ ವೈಟ್ ಗಡ್ಡ- ಮಿಸೆ ಬಿಟ್ಟು ಪಾತ್ರಕ್ಕೆ ಎರಡು ತಿಂಗಳು ಜಿಮ್ ನಲ್ಲಿ ಕಸರತ್ತು ಮಾಡಿ 95ಕೆ.ಜಿ ಇದ್ದವರು 70 ಕೆ.ಜಿ ತೂಕ ಇಳಿಸಿಕೊಂಡು 60ವರ್ಷ ವಯಸಾದ ವ್ಯಕ್ತಿಯ ಪಾತ್ರವನ್ನ ಮಾಡುತ್ತಿದ್ದಾರೆ.. ಇದೇ ಸಿನಿಮಾದಲ್ಲಿ ಮತ್ತೊಂದು ಶೇಡ್ ಗಾಗಿ ಇನ್ನೊಂದು ಹದಿನೈದು ಕೆ.ಜಿ ಡೌನ್ ಆಗಿ ಕ್ಯಾಮೆರಾಕ್ಕೆ ಕೈ ಮುಗಿಯಲಿದ್ದಾರೆ.
ಇದೇ ಬಹುಮುಖ ಪ್ರತಿಭೆ ನಿರ್ಮಾಪಕ ಕಮ್ ನಟ ಮಿತ್ರ ಅವರಿಗೆ ಇಂದು 46ನೇ ಹ್ಯಾಪಿ ಹುಟ್ಟು ಹಬ್ಬ. ಇಂತಹ ಡೆಡಿಕೆಟೆಡ್ ಕಲಾವಿದನಿಗೆ ಇನ್ನಷ್ಟು ಮಗದಷ್ಟು ಮಸ್ತ್ ಮಹೊಬತ್ತ್ ಪಾತ್ರಗಳು ಸಿಗಲಿ ಅನ್ನೋದು ಆಶಯ.
ಚಿತ್ರ: 4ಎನ್ 6 ನಿರ್ದೇಶಕ: ದರ್ಶನ್ ಶ್ರೀನಿವಾಸ್ ನಿರ್ಮಾಣ: ಸಾಯಿ ಪ್ರೀತಿ ತಾರಾಗಣ: ರಚನಾ ಇಂದರ್, ಭವಾನಿ ಪ್ರಕಾಶ್, ನವೀನ್ ಕುಮಾರ್, ಆದ್ಯ ಶೇಖರ್, ಅರ್ಜುನ್, ಆಶಿತಾ, ಸೌರವ್ ಇತರರು.
ಕನ್ನಡದಲ್ಲಿ ಈಗಾಗಲೇ ಸಾಕಷ್ಟು ಸಸ್ಪೆನ್ಸ್ ಥ್ರಿಲ್ಲರ್ , ಮರ್ಡರ್ಮಿಸ್ಟ್ರಿ ಕಥೆ ಇರುವ ಸಿನಿಮಾಗಳು ಬಂದಿವೆ. ಆ ಸಾಲಿಗೆ 4ಎನ್6 ಕೂಡ ಹೊರತಲ್ಲ. ಇಲ್ಲೂ ಕೊಲೆಗಳ ಸುತ್ತ ಕಥೆ ಸಾಗುತ್ತೆ. ಆದರೆ, ಮಂದಗತಿಯ ವೇಗವೇ ಸಿನಿಮಾದ ಮೈನಸ್. ಕಥೆಯ ಎಳೆ ಚೆನ್ನಾಗಿದೆ. ನಿರ್ದೇಶಕರ ನಿರೂಪಣೆ ಶೈಲಿ, ಚಿತ್ರಕಥೆಯಲ್ಲಿನ ಬಿಗಿ ಹಿಡಿತ ಇನ್ನಷ್ಟು ಗಟ್ಟಿಯಾಗಿ ಇದ್ದಿದ್ದರೆ ಒಂದೊಳ್ಳೆಯ ಸಿನಿಮಾ ಆಗುವ ಸಾಧ್ಯತೆ ಇತ್ತು. ಕಥೆ ಕಟ್ಟುವಲ್ಲಿ ಇರುವ ನಿರ್ದೇಶಕರ ಜಾಣತನ, ತೋರಿಸುವಲ್ಲಿ ಹೆಚ್ಚು ಪ್ರಭಾವ ಬೀರಿಲ್ಲ. ಆದರೂ ಒಂದಷ್ಟು ಕೊಲೆಗಳು ನಡೆಯೋದು ಯಾಕೆ, ಯಾರು ಆ ಕೊಲೆಗಳನ್ನು ಮಾಡಿದ್ದಾರೆ ಅಂತ ಬೆನ್ನತ್ತಿ ಹೋಗುವ ಸನ್ನಿವೇಶಗಳು ತಕ್ಕಮಟ್ಟಿಗೆ ಗಮನಸೆಳೆಯುತ್ತವೆ ಹೊರತು ಕುತೂಹಲ ಮೂಡಿಸಲ್ಲ.
ಇಲ್ಲಿ ವೈದ್ಯರ ಕರಾಳ ಮುಖ ಅನಾವರಣಗೊಂಡಿದೆ. ಅದು ಹೇಗೆ ಎಂಬ ಕುತೂಹಲ ಇದ್ದರೆ, ಸಮಯ ಮಾಡಿಕೊಂಡು ಸಿನಿಮಾ ನೋಡಬಹುದು. ಆರಂಭದಲ್ಲಿ ಕುತೂಹಲ ಕೆರಳಿಸುವ ಕಥೆ ದ್ವಿತಿಯಾರ್ಧ ಕೊಂಚ ಮಂದವಾಗುತ್ತೆ. ಪೊಲೀಸ್ ಅಧಿಕಾರಿಯ ಜೊತೆ ಕೊಲೆಗಳ ತನಿಖೆಯಲ್ಲಿ ತೊಡಗುವ ಫೋರೆನ್ಸಿಕ್ ತಂಡದ ಲೀಡರ್ ನೈಶಾ ಹೇಗೆಲ್ಲಾ ಕೊಲೆ ರಹಸ್ಯ ಬಯಲಿಗೆಳೆಯುತ್ತಾಳೆ ಅನ್ನೋದು ಕಥೆ. ಆ ತನಿಖೆಯ ಸನ್ನಿವೇಶಗಳು ಕೊಂಚ ಜಾಳು ಜಾಳು ಎನಿಸುತ್ತವೆ. ಅದನ್ನು ರೋಚಕವಾಗಿಸಿದಿದ್ದರೆ, ನಿಜಕ್ಕೂ ಇದು ನೋಡುಗರಿಗೆ ಸ್ವಲ್ಪವಾದರೂ ರುಚಿಸುತ್ತಿತ್ತು. ಈ ರೀತಿಯ ಕಥೆಗೆ ಹಣ ಹಾಕುವ ನಿರ್ಮಾಪಕರ ಧೈರ್ಯ ಮೆಚ್ಚಲೇಬೇಕು.
ಇಂತಹ ಸಿನಿಮಾಗಳಿಗೆ ಹಿನ್ನೆಲೆ ಸಂಗೀತ ಪ್ರಧಾನ. ಆದರೆ ಅದೇ ಇಲ್ಲಿ ನಿಧಾನ. ಕತ್ತರಿ ಪ್ರಯೋಗ ಇನ್ನಷ್ಟು ಮೊನಚಾಗಿರಬೇಕಿತ್ತು. ಅಲ್ಲಲ್ಲೇ ಸುತ್ತುವ ಕಥೆಯಲ್ಲಿ ರೋಚಕತೆ ಸಾಲದು. ಆದರೂ ಕೊಲೆ ರಹಸ್ಯ ಭೇದಿಸುವ ದೃಶ್ಯಗಳಿಗೆ ವೇಗ ಜೋರಾಗಿರಬೇಕಿತ್ತು. ಇರುವ ಅಗತ್ಯತೆಗಳಿಗೆ ಸರಿಯಾಗಿ ನಿರ್ದೇಶಕರು ಸಿನಿಮಾ ಕಟ್ಟಿಕೊಟ್ಟಿದ್ದಾರೆ. ಫಸ್ಟ್ ಹಾಫ್ ಇದ್ದಂತೆ ಸೆಕೆಂಡ್ ಹಾಫ್ ಕೂಡ ಕುತೂಹಲ ಇರಿಸಿದ್ದರೆ ತನಿಖಾ ತಂಡದ ಓಡಾಟಕ್ಕೆ ಜೈಹೋ ಎನ್ನಬಹುದಿತ್ತು.
ಏನದು ಕಥೆ?
ಬಡ ಕುಟುಂಬದ ಹುಡುಗಿ ನೈಶಾ ಬಾಲ್ಯದಲ್ಲೇ ಚುರುಕು. ಮನೆಯಲ್ಲಿ ಏನಾದರೂ ಮಿಸ್ ಆಗಿದ್ದರೆ ಅದನ್ನು ಕಲ್ಪನೆಯಲ್ಲೇ ಮನಗಂಡು ಕಂಡು ಹಿಡಿಯುವಷ್ಟು ಬುದ್ಧಿವಂತೆ. ತನ್ನ ತಾಯಿಗೆ ಮಗಳು ಪೊಲೀಸ್ ಅಧಿಕಾರಿ ಆಗಬೇಕೆಂಬ ಆಸೆ. ಅದರಂತೆ ನೈಶಾಳ ಆ ಜಾಣತನ ಆಕೆಯನ್ನು ಫೋರೆನ್ಸಿಕ್ ಡಿಟೆಕ್ಟಿವ್ ತಂಡ ಸೇರುವಂತೆ ಮಾಡುತ್ತೆ.
ಅತ್ತ ಒಂದೊಂದೇ ವೈದ್ಯರ ಕೊಲೆಗಳು ನಡೆಯುತ್ತವೆ. ಅವು ಹೇಗಾದವು ಅನ್ನೋ ಕಲ್ಪನೆಯಲ್ಲೇ ನೈಶಾ ರಿಪೋರ್ಟ್ ಕೊಟ್ಟು ತನ್ನ ಬುದ್ಧಿವಂತಿಕೆ ಪ್ರದರ್ಶಿಸುತ್ತಾಳೆ. ಅವಳ ಜೊತೆ ಪೊಲೀಸ್ ಅಧಿಕಾರಿ ಕೂಡ ಸಾಥ್ ಕೊಡುತ್ತಾರೆ. ಕೊಲೆಗಳ ಸುತ್ತ ಸಾಗುವ ಕಥೆಯಲ್ಲಿ ಯಾರು ಕೊಲೆಗಾರ ಅನ್ನೋದೆ ಸಸ್ಪೆನ್ಸ್. ಕೊನೆಗೊಂದು ಟ್ವಿಸ್ಟ್ ಇದೆ. ಅದೇ ಸಿನಿಮಾದ ತಿರುವು. ಅದೇನೆಂಬ ಕುತೂಹಲ ಇದ್ದರೆ ಚಿತ್ರ ನೋಡಬಹುದು.
ರಚನಾ ಇಂದರ್ ಪೋರೆನ್ಸಿಕ್ ಡಿಟೆಕ್ಟಿವ್ ಆಗಿ ಗಮನ ಸೆಳೆದಿದ್ದಾರೆ. ಇನ್ನಷ್ಟು ಖಡಕ್ ಫರ್ಫಾರ್ಮೆನ್ಸ್ ಬೇಕಿತ್ತು. ನಿರ್ದೇಶಕರು ಹೇಳಿದ್ದಷ್ಟೇ ಮಾಡಿದಂತಿದೆ. ಇನ್ನು, ಪೊಲೀಸ್ ಅಧಿಕಾರಿಯಾಗಿ ಭವಾನಿ ಪ್ರಕಾಶ್ ಸಿಗರೇಟ್ ಎಳೆದು ಹೊಗೆ ಬಿಡುವಷ್ಟಕ್ಕೆ ಮಾತ್ರ ಸೀಮೀತ. ಅವರ ನಟನೆಯಲ್ಲೂ ಖದರ್ ಇಲ್ಲ. ಒಂದೊಳ್ಳೆ ಕಥೆಗೆ ನ್ಯಾಯ ಸಲ್ಲಿಸುವ ನಟನೆ ಕಡಿಮೆ ಎನಿಸಿದೆ. ಉಳಿದಂತೆ ರಚನಾ ತಾಯಿಯಾಗಿ ಕಾಣಿಸಿಕೊಂಡಿರುವ ಪಾತ್ರ ಗಮನ ಸೆಳೆಯುತ್ತೆ. ಇತರೆ ಪಾತ್ರಗಳು ನಿರ್ದೇಶಕರ ಪ್ರಕಾರ ಕಾಣಿಸಿಕೊಂಡಿವೆ. ಚರಣ್ ತೇಜ್ ಕ್ಯಾಮೆರಾ ಕೈಚಳಕ ಪರವಾಗಿಲ್ಲ. ಸಂಗೀತಕ್ಕಿನ್ನೂ ಧಮ್ ಬೇಕಿತ್ತು.