Categories
ಸಿನಿ ಸುದ್ದಿ

ರೇಮೊ ಸೂಪರ್ ಹಿಟ್ ಆಗಲಿ ಅಂದ್ರು ಶಿವಣ್ಣ: ಸಿನಿಮಾ ಟ್ರೇಲರ್ ಹೊರಬಂತು…

ಸಿ.ಆರ್.ಮನೋಹರ್ ನಿರ್ಮಿಸಿರುವ, ನಿರ್ದೇಶಕ ಪವನ್ ಒಡೆಯರ್ ನಿರ್ದೇಶನದ ‘ರೇಮೊ’ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. ಶಿವರಾಜಕುಮಾರ್ ‘ರೇಮೊ’ ಟ್ರೇಲರ್ ಬಿಡುಗಡೆ ಮಾಡಿದ್ದಾರೆ. ಇಶಾನ್ ಮತ್ತು ಆಶಿಕಾ ರಂಗನಾಥ್ ಈ ಚಿತ್ರದ ನಾಯಕ, ನಾಯಕಿಯಾಗಿ ನಟಿಸಿದ್ದಾರೆ.

‘ಕನ್ನಡ ಚಿತ್ರರಂಗ ಯಾರಿಗೂ ಕಡಿಮೆ ಇಲ್ಲ. “ಕಾಂತಾರ” ಚಿತ್ರ ನಮಗೆಲ್ಲ ಒಂದು ಹೆಮ್ಮೆ. ಆ ಚಿತ್ರದ ಟ್ರೇಲರ್ ಮತ್ತು ಸಾಂಗ್ ನೋಡಿ ನಾನು ರಿಷಬ್ ಶೆಟ್ಟಿ ಅವರಿಗೆ ಫೋನ್ ಮಾಡಿದ್ದೆ. ‘ರೇಮೊ’ ಕೂಡ ಅದೇ ರೀತಿ ಸೂಪರ್ ಹಿಟ್ ಆಗಲಿ ಅಂತ ದೇವರಲ್ಲಿ ನಾನು ಪ್ರಾರ್ಥನೆ ಮಾಡಿಕೊಳ್ಳುತ್ತೇನೆ. ಇಶಾನ್ ಹಾಗೂ ಆಶಿಕಾ ಮುದ್ದಾಗಿ ಕಾಣುತ್ತಿದ್ದಾರೆ. ನಿರ್ದೇಶಕ ಪವನ್ ಒಡೆಯರ್ ಬಗ್ಗೆ ಹೇಳುವಂತೆಯೇ ಇಲ್ಲ. ಸಿ.ಆರ್. ಮನೋಹರ್ ಅವರಂತಹ ನಿರ್ಮಾಪಕರು ಕನ್ನಡ ಚಿತ್ರರಂಗಕ್ಕೆ ಬೇಕು’ ಎಂದು ಶಿವರಾಜಕುಮಾರ್ ಹೇಳಿದರು.

‘ರೇಮೊ’ ಚಿತ್ರದ ಕೆಲಸ ಶುರುವಾಗಿ 3 ವರ್ಷ ಆಯಿತು. ಈಗ ಬಿಡುಗಡೆ ಹಂತಕ್ಕೆ ಬಂದಿದೆ. ನನ್ನನ್ನು ಚಿತ್ರರಂಗಕ್ಕೆ ಬರಲು ಹೇಳಿದ್ದು ಶಿವಣ್ಣ. ಇವತ್ತು ಅವರಿಂದಲೇ ನಮ್ಮ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು ಖುಷಿಯಾಗಿದೆ. ನವೆಂಬರ್ 25 ರಂದು ನಮ್ಮ ಚಿತ್ರ ಬಿಡುಗಡೆಯಾಗಲಿದೆ. ಅಂದೇ ನಮ್ಮ ಚಿತ್ರವನ್ನು ನೋಡುವುದಾಗಿ ಶಿವಣ್ಣ ಹೇಳಿದ್ದಾರೆ. ಅವರೇ ನನಗೆ ಸ್ಫೂರ್ತಿ. ನಾನು ಎಷ್ಟೇ ಸಿನಿಮಾ ಮಾಡಬಹುದು. ಆದರೆ ‘ರೇಮೊ’ ಚಿತ್ರ ಯಾವಾಗಲೂ ನನ್ನ ಹೃದಯಕ್ಕೆ ಹತ್ತಿರವಾಗಿರುತ್ತದೆ ಎನ್ನುತ್ತಾರೆ ನಾಯಕ ಇಶಾನ್.

ನಟಿ ಆಶಿಕಾ ರಂಗನಾಥ್ ಅವರಿಗೂ ‘ರೇಮೊ’ ಚಿತ್ರ ವಿಶೇಷ ಅಂತೆ. ‘ಇಷ್ಟು ದಿನ ನನ್ನನ್ನು ಕ್ಯೂಟ್ ಹುಡುಗಿಯ ಪಾತ್ರದಲ್ಲಿ ನೋಡಿದ್ದೀರಿ. ಆದರೆ ಈ ಸಿನಿಮಾದಲ್ಲಿನ ಪಾತ್ರ ಭಿನ್ನವಾಗಿದೆ. ಈವರೆಗೆ ನಾನು ಮಾಡಿದ ಪಾತ್ರಗಳಲ್ಲಿ ಇದೇ ಬೆಸ್ಟ್. ಹೀರೋಗೆ ಸಮನಾಗಿ ಇರುವಂತಹ ಪಾತ್ರ ನನಗೆ ಸಿಕ್ಕಿದೆ. ಅದಕ್ಕೆ ನನ್ನನ್ನು ಆಯ್ಕೆ ಮಾಡಿದ ಪವನ್ ಒಡೆಯರ್ ಅವರಿಗೆ ಧನ್ಯವಾದಗಳು’ ಎನ್ನುತ್ತಾರೆ ಆಶಿಕಾ ರಂಗನಾಥ್.

ಪ್ರೀತಿಯಲ್ಲಿ ಹಲವು ವಿಧಗಳಿವೆ. ಅದರಲ್ಲಿ ನಾನು ಮ್ಯೂಸಿಕಲ್ ಲವ್ ಸ್ಟೋರಿ ಆಯ್ಕೆ ಮಾಡಿಕೊಂಡಿದ್ದೀನಿ. ಈ ಚಿತ್ರದಲ್ಲಿ ಎಮೋಷನ್ ಸಹ ಇದೆ. ವೈದಿ ಅವರ ಛಾಯಾಗ್ರಹಣ ಹಾಗೂ ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಚಿತ್ರವನ್ನು ಮತ್ತಷ್ಟು ಸುಂದರವಾಗಿಸಿದೆ. ಇಶಾನ್ ಹಾಗೂ ಆಶಿಕಾ ರಂಗನಾಥ್ ಸೇರಿದಂತೆ ಎಲ್ಲಾ ಕಲಾವಿದರ ಅಭಿನಯ ಚೆನ್ನಾಗಿದೆ. ಟ್ರೇಲರ್ ಬಿಡುಗಡೆ ಮಾಡಿಕೊಟ್ಟ ಶಿವರಾಜಕುಮಾರ್ ಅವರಿಗೆ ಧನ್ಯವಾದ ಎಂದರು ನಿರ್ದೇಶಕ ಪವನ್ ಒಡೆಯರ್.

ನಿರ್ಮಾಪಕ ಸಿ.ಆರ್.ಮನೋಹರ್ ಶಿವರಾಜಕುಮಾರ್ ಅವರನ್ನು ಸನ್ಮಾನಿಸಿದರು. ಚಿತ್ರ ಉತ್ತಮವಾಗಿ ಮೂಡಿಬರಲು ಸಹಕರಿಸಿದ ಚಿತ್ರತಂಡಕ್ಕೆ ಧನ್ಯವಾದ ತಿಳಿಸಿದರು.

ಪವನ್ ಒಡೆಯರ್ ಪತ್ನಿ ಅಪೇಕ್ಷಾ ಪುರೋಹಿತ್ ಅವರು ಈ ಚಿತ್ರಕ್ಕೆ ವಸ್ತ್ರ ವಿನ್ಯಾಸ ಮಾಡಿದ್ದಾರೆ. ಅರ್ಜುನ್ ಜನ್ಯ ಸಂಗೀತ ನಿರ್ದೇಶನ, ಇಮ್ರಾನ್ ಸರ್ದಾರಿಯಾ ನೃತ್ಯ ನಿರ್ದೇಶನ, ವೈದಿ ಛಾಯಾಗ್ರಹಣ, ಕೆ.ಎಂ. ಪ್ರಕಾಶ್ ಸಂಕಲನ, ಪಿ. ಗುಣಶೇಖರನ್ ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿದೆ.

Categories
ಸಿನಿ ಸುದ್ದಿ

ನವೆಂಬರ್ 11ಕ್ಕೆ ಹುಬ್ಬಳ್ಳಿ ಡಾಬಾ : ವಿಭನ್ನ ಕಥೆ ಸಿನಿಮಾದಲ್ಲಿ ರವಿಶಂಕರ್

“ನನ್ನವನು”, ” ಕೋಟೆ”, “ದಂಡುಪಾಳ್ಯ” , “ಶಿವ” ಮುಂತಾದ ಚಿತ್ರಗಳ ನಿರ್ದೇಶಕ ಶ್ರೀನಿವಾಸರಾಜು ನಿರ್ದೇಶನದ “ಹುಬ್ಬಳ್ಳಿ ಡಾಬಾ” ಚಿತ್ರ‌ ಇದೇ ನವೆಂಬರ್ 11 ರಂದು ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ.

ಕೊರೋನ ಎರಡನೇ ಅಲೆ ಸಮಯದಲ್ಲಿ ಆರಂಭವಾದ ಸಿನಿಮಾವಿದು. ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರ ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ತಯಾರಾಗಿ, ನವೆಂಬರ್ 11 ರಂದು ಬಿಡುಗಡೆಯಾಗುತ್ತಿದೆ. ತೆಲುಗಿನ ನವೀನ್ ಚಂದ್ರ ಈ ಚಿತ್ರದ ನಾಯಕ. ದಿವ್ಯ ಪಿಳ್ಳೈ, ಅನನ್ಯ ಸೇನ್ ಗುಪ್ತ ನಾಯಕಿಯರು. ‌ರವಿಶಂಕರ್, ರಾಜಾ ರವೀಂದ್ರ, ನಾಗಾ ಬಾಬು, ಅಯ್ಯಪ್ಪ ಶರ್ಮ, ಪೂಜಾ ಗಾಂಧಿ, ರವಿಕಾಳೆ, ಮಕರಂದ ದೇಶಪಾಂಡೆ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.

ಚಿತ್ರದ ವಿಶೇಷ ಸಂದರ್ಭದಲ್ಲಿ “ದಂಡುಪಾಳ್ಯ” ಗ್ಯಾಂಗ್ ನವರ ಸನ್ನಿವೇಶಗಳು ಸಹ ಬರುತ್ತದೆ. ಹಾಗಾಗಿ ಆ ಚಿತ್ರದಲ್ಲಿ ಅಭಿನಯಿಸಿದ್ದ ಕಲಾವಿದರು ಈ ಚಿತ್ರದಲ್ಲೂ ಅಭಿನಯಿಸಿದ್ದಾರೆ. ‌ಮೂರು ಹಾಡುಗಳನ್ನು ನಾಗೇಂದ್ರ ಪ್ರಸಾದ್ ಬರೆದಿದ್ದಾರೆ. ಚರಣ್ ಅರ್ಜುನ್ ಸಂಗೀತ ನೀಡಿದ್ದಾರೆ. ವೆಂಕಟ್ ಪ್ರಸಾದ್ ಈ ಚಿತ್ರದ ಛಾಯಾಗ್ರಹಕರು. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಟ್ರೇಲರ್ ಹಾಗೂ ಹಾಡುಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಚಿತ್ರದ ಬಗ್ಗೆ ವಿವರಣೆ ನೀಡಿದ್ದ ನಿರ್ದೇಶಕ ಶ್ರೀನಿವಾಸರಾಜು, ಚಿತ್ರಕ್ಕೆ ಎಲ್ಲರ ಪ್ರೋತ್ಸಾಹವಿರಲಿ ಎಂದರು.

ನನಗೆ ಶ್ರೀನಿವಾಸರಾಜು “ಕೋಟೆ” ಚಿತ್ರದಲ್ಲಿ ಅವಕಾಶ ನೀಡಿದ್ದರು. “ದಂಡುಪಾಳ್ಯ” ಚಿತ್ರದಲ್ಲೂ ನಟಿಸಿದ್ದೆ. ಈ ಚಿತ್ರದಲ್ಲಿ ನಾನು ಚಲಪತಿ ಹೆಸರಿನ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದೇನೆ. ಈ ಚಿತ್ರದ ಕುರಿತು ಇನ್ನೊಂದು ಹೆಮ್ಮೆಯ ವಿಷಯವೆಂದರೆ ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ ಅವರು ಎಂಭತ್ತರ ದಶಕದಲ್ಲಿ ಸಂಗೀತ ನೀಡಿದ್ದ, ಜನಪ್ರಿಯ ತಮಿಳು ಚಿತ್ರದ ಗೀತೆಯೊಂದರ ಟ್ಯೂನ್ ಬಳಸಿಕೊಳ್ಳಲು ಶ್ರೀನಿವಾಸರಾಜು ಅವರಿಗೆ ಅವಕಾಶ ನೀಡಿದ್ದಾರೆ.

ಈ ಹಾಡು ಇಳಯರಾಜ ಅವರ ಅಭಿಮಾನಿಯಾಗಿರುವ ನನ್ನ ಜನಪ್ರಿಯ ಗೀತೆಯೂ ಹೌದು ಎಂದು ನಟ ರವಿಶಂಕರ್ ತಿಳಿಸಿದರು. ಕ್ಲೈಮ್ಯಾಕ್ಸ್ ಸಾಹಸ ಸನ್ನಿವೇಶವನ್ನು ಹನ್ನೆರಡು ದಿನಗಳ ಕಾಲ ಚಿತ್ರಿಸಿರುವುದು ಚಿತ್ರದ ವಿಶೇಷಗಳಲ್ಲೊಂದು ಎಂದರು ರವಿಶಂಕರ್.

Categories
ಸಿನಿ ಸುದ್ದಿ

ಡಾಲಿ ಜೊತೆ ರಮ್ಯಾ! ನಾಯಕಿಯಾಗಿ ಎಂಟ್ರಿ ಕೊಟ್ಟ ಸ್ಯಾಂಡಲ್ ವುಡ್ ಕ್ವೀನ್: ಉತ್ತರಕಾಂಡ ಸಿನಿಮಾಗೆ ಪೂಜೆ- ಜನವರಿಯಿಂದ ಶೂಟಿಂಗ್…

ವಿಜಯ್ ಕಿರಗಂದೂರು ಅರ್ಪಿಸುತ್ತಿರುವ, ಕೆ.ಆರ್.ಜಿ ಸಂಸ್ಥೆ ನಿರ್ಮಿಸುತ್ತಿರುವ ಹಾಗೂ ರೋಹಿತ್ ಪದಕಿ ರಚಿಸಿ, ನಿರ್ದೇಶಿಸುತ್ತಿರುವ ‘ಉತ್ತರಕಾಂಡ’ ಚಿತ್ರದ ಮುಹೂರ್ತ ನವೆಂಬರ್ 6ರಂದು ಪಂಚಮುಖಿ ಗಣಪತಿ ದೇವಸ್ಥಾನದಲ್ಲಿ ನೆರವೇರಿದೆ. ‘ರತ್ನನ್ ಪ್ರಪಂಚ’ ಯಶಸ್ಸಿನ ನಂತರ ಮತ್ತೊಮ್ಮೆ ರೋಹಿತ್ ಪದಕಿ ಹಾಗೂ ಕಾರ್ತಿಕ್ ಮತ್ತು ಯೋಗಿ.ಜಿ.ರಾಜ್ ಒಂದಾಗಿದ್ದಾರೆ. ಈ ಸಿನಿಮಾಗೆ‌ ಡಾಲಿ ಧನಂಜಯ ಹಾಗು ರಮ್ಯಾ ನಾಯಕ, ನಾಯಕಿ.

ಸ್ಯಾಂಡಲ್‌ವುಡ್ ಕ್ವೀನ್ ರಮ್ಯ ‘ಉತ್ತರಕಾಂಡ’ ಚಿತ್ರದ ಮೂಲಕ ನಾಯಕಿಯಾಗಿ ಬೆಳ್ಳಿಪರದೆಗೆ ಹಿಂತಿರುಗುತ್ತಿದ್ದಾರೆ. ಎಂಟು ವರ್ಷಗಳ ಬಳಿಕ ತಮಗೆ ಅತ್ಯಂತ ಆಪ್ತವಾದ ಕಥೆ ಹಾಗು ಪಾತ್ರ ‘ಉತ್ತರಕಾಂಡ’ ಕೊಟ್ಟಿರುವ ಕಾರಣ ಅದಕ್ಕೆ ಬೇಕಾದ ತಯಾರಿ ಮಾಡಿಕೊಂಡು ಭಾಷೆ, ಉಡುಗೆ-ತೊಡುಗೆ ಎಲ್ಲದರ ಮೇಲೆ ಗಂಭೀರವಾಗಿ ಕಸರತ್ತು ನಡೆಸುತ್ತಿದ್ದಾರೆ ನಟಿ ರಮ್ಯ.

ಉತ್ತರಕಾಂಡದ ಬಗ್ಗೆ ಪ್ರಶ್ನಿಸಿದಾಗ ರಮ್ಯ ಹೇಳಿದ್ದು ಹೀಗೆ – “ ‘ರತ್ನನ್ ಪ್ರಪಂಚ’ ಚಿತ್ರಕ್ಕೆ ನಾಯಕಿಯ ಪಾತ್ರವನ್ನು ನನಗೆ ಕೇಳಿದಾಗ ಕಾರಣಾಂತರಗಳಿಂದ ಅದನ್ನು ಒಪ್ಪಿಕೊಳ್ಳಲಾಗಿರಲಿಲ್ಲ. ನನಗೆ ಅತ್ಯಂತ ಆಪ್ತವಾದ ಸಿನೆಮಾ ರತ್ನನ್ ಪ್ರಪಂಚ. ಅಂತಹ ಒಳ್ಳೆಯ ಸಿನೆಮಾ ತಂಡದ ಜೊತೆ ಕೈ ಜೋಡಿಸಿ ಬೆಳ್ಳಿಪರದೆಗೆ ಹಿಂತಿರುಗುತ್ತಿರುವುದು ಸಂತೋಷ ತಂದಿದೆ. ಇತ್ತೀಚಿನ ದಿನಗಳಲ್ಲಿ ಈ ತಂಡದ ಜೊತೆಗಿನ ಒಡನಾಟ ಮತ್ತು ತಂಡದವರೆಲ್ಲರು ನನ್ನ ಮೇಲೆ ತೋರುತ್ತಿರುವ ಅಭಿಮಾನ ಹಾಗು ಬಾಂಧವ್ಯ ಒಂದು ಒಳ್ಳೇ ಜಾಗದಲ್ಲಿದ್ದೀನಿ ಅನ್ನೋ ಭಾವನೆ ಕೊಟ್ಟಿದೆ. ಇಂತಹ ದೈತ್ಯ ಪ್ರತಿಭೆಗಳ ಜೊತೆ ಶೂಟಿಂಗ್ ಶುರು ಮಾಡೋದಕ್ಕೆ ಕಾಯ್ತ ಇದ್ದೀನಿ”

ಈ ಹಿಂದೆಯೇ ಚಿತ್ರತಂಡ ಹಂಚಿಕೊಂಡಂತೆ ‘ಉತ್ತರಕಾಂಡ’ದಲ್ಲಿ ಧನಂಜಯ ಮುಖ್ಯಭೂಮಿಕೆಯಲ್ಲಿದ್ದಾರೆ. ವೈವಿಧ್ಯಮಯ ಪಾತ್ರಗಳಲ್ಲಿ ನಾಯಕನಟನಾಗಿ ಮಿಂಚುತ್ತಿರುವ ಧನಂಜಯ ಅವರ ವೃತ್ತಿಯಲ್ಲೇ ಅತಿ ದೊಡ್ಡ ಸಿನೆಮಾ ‘ಉತ್ತರಕಾಂಡ’, ಅತ್ಯಂತ ಗಟ್ಟಿಯಾದ, ಕಷ್ಟವಾದ ಪಾತ್ರ ವಹಿಸಿಕೊಂಡಿರುವುದರ ಬಗ್ಗೆ ಅವರೇ ಹಂಚಿಕೊಂಡಿದ್ದಾರೆ. ಪೋಸ್ಟರ್‌ನಲ್ಲಿ ಈಗಾಗಲೇ ಧನಂಜಯ ಅವರ ಸುಕ್ಕಾ ಲುಕ್ ವೈರಲ್ ಆಗಿದೆ.

“ಒಂದೇ ದಿಕ್ಕಿನಲ್ಲಿ ಆಲೋಚಿಸುವವರು ಒಟ್ಟಿಗೆ ಸೇರಿ, ನಿಸ್ವಾರ್ಥವಾಗಿ ಸಿನಿಮಾಕ್ಕಾಗಿ, ಒಬ್ಬರು ಇನ್ನೊಬ್ಬರಿಗಾಗಿ contribute ಮಾಡಿದಾಗ ಅದ್ಭುತಗಳು ಸಂಭವಿಸುತ್ತವೆ ಎಂದು ನಾನು ನಂಬಿದ್ದೇನೆ. ಅದೆ ರೀತಿ ಆಗಿದ್ದು, ಮೈಲಿಗಲ್ಲಾಗಿದ್ದು “ರತ್ನನ್ ಪ್ರಪಂಚ” . ರೋಹಿತ್ ಪದಕಿಯಂತ ನಿರ್ದೇಶಕ ಘಟನ ಜೊತೆ ಎರಡನೆ ಪ್ರಯತ್ನ, ಕಾರ್ತಿಕ್ ಹಾಗು ಯೋಗಿ ಯಂತ ನಿರ್ಮಾಪಕ ಘಟರ ಜೊತೆ ಸತತವಾಗಿ ಮೂರನೆ ಪ್ರಯತ್ನ, ಇನ್ನೊಂದು ಮೈಲಿಗಲ್ಲಿನ ಕಡೆ ಮತ್ತೊಂದು ದಿಟ್ಟ ಹೆಜ್ಜೆ “ಉತ್ತರಕಾಂಡ”.

ಹಾಗೆ ರಮ್ಯ ಅವರ ಜೊತೆ ನಟಿಸುವ ಕನಸು ಈ ಸಿನಿಮಾದ ಮೂಲಕ ಕೈಗೂಡುತ್ತಿದೆ. ಇದು ಮತ್ತೊಂದು ಖುಷಿಯ ವಿಚಾರ. ನನ್ನ ಪರವಾಗಿ ನಿಂತು ಯುದ್ಧ ಮಾಡುವ ಮಾಧ್ಯಮ ಮಿತ್ರರು, ನನ್ನ ಮೇಲೆ ನಂಬಿಕೆಯಿಟ್ಟು ನನ್ನ ಶಕ್ತಿಯಾಗಿ ನಿಂತಿರುವ ಕನ್ನಡ ಕುಲಕೋಟಿಗೆ ನನ್ನ ಹೃದಯಪೂರ್ವಕ ನಮನಗಳು. ಹೀಗೆ ಜೊತೆಗಿರಿ, ತಪ್ಪಾದಾಗ ತಿದ್ದಿ, ಗೆಲುವಾಗುವಂತೆ ಹರಸಿ, ಮೆರೆಸಿ.” ಎಂದು ಧನಂಜಯ ಹೇಳಿದ್ದಾರೆ.

‘ಈ ಸಿನೆಮಾ ಮನುಷ್ಯನ ವಿಲಕ್ಷಣ ಮನಸ್ಸಿನ ಹೋರಾಟವನ್ನ ಬಿಂಬಿಸುತ್ತದೆ. ಸರಿ ತಪ್ಪುಗಳ ಸಿದ್ದಾಂತ, ಅಹಂಕಾರಗಳ ಗುದ್ದಾಟ. ಈ ಸಿನೆಮಾ ಒಂದು ಸೆಲೆಬ್ರೇಶನ್. ಉತ್ತರಕರ್ನಾಟಕದ ಅಧ್ಬುತ ಬದುಕಿನ ನಡುವೆ ನಡೆಯುವ ಕಥೆ ಹೇಳುತ್ತಿರುವುದು ನನಗೆ ದೊಡ್ಡ ಸವಾಲು ಮತ್ತು ಜವಾಬ್ದಾರಿ’ ಎಂದು ನಿರ್ದೇಶಕ ರೋಹಿತ್ ಪದಕಿ ಹೇಳಿದ್ದಾರೆ. ಚಿತ್ರ ಸಂಪೂರ್ಣ ಉತ್ತರಕರ್ನಾಟಕದ ಸೊಗಡಲ್ಲಿ, ಭಾಷೆಯಲ್ಲಿ ಇರುತ್ತದೆ. ಹಾಗೂ ಅಲ್ಲಿಯೇ ಚಿತ್ರೀಕರಣವಾಗಲಿದೆ ಎಂದು ಕೂಡ ಹಂಚಿಕೊಂಡಿದ್ದಾರೆ.

‘ಇನ್ ಮ್ಯಾಲಿಂದ ಫುಲ್ ಗುದ್ದಾಂಗುದ್ದಿ’ ಎಂದು ಅಡಿ-ಶೀರ್ಷಿಕೆ ಹೊಂದಿರುವ ‘ಉತ್ತರಕಾಂಡ’ ದೊಡ್ಡ ಮಟ್ಟದ ಮಾಸ್ ಮನರಂಜನೆ ನೀಡುವ ಸಿನೆಮಾ ಆಗಲಿದೆ ಎಂದು ನಿರ್ಮಾಪಕರು ನುಡಿದಿದ್ದಾರೆ. ಮುಂದಿನ ವರ್ಷದಲ್ಲಿ ಸೆಟ್ಟೇರುತ್ತಿರುವ ಚಿತ್ರಗಳಲ್ಲಿ ಅತಿ ದೊಡ್ಡ ತಾರಾಗಣ, ಹಾಗೂ ಬಜೆಟ್ ಹೊಂದಿರುವ ಚಿತ್ರ ಇದು ಎಂದು ಹೇಳಲಾಗುತ್ತಿದೆ.

“ಕೆ.ಆರ್.ಜಿ ಸಂಸ್ಥೆ ಧನಂಜಯ ಅವರ ಜೊತೆ ಕೈಜೋಡಿಸಿರುವ ಮೂರನೇ ಚಿತ್ರ ಇದು. ಚಿತ್ರರಂಗದಲ್ಲಿ ಅತ್ಯಂತ ಬೇಡಿಕೆಯಲ್ಲಿ ಇರುವ ನಟ ಧನಂಜಯ. ಸ್ಯಾಂಡಲ್‌ವುಡ್ ಕ್ವೀನ್ ರಮ್ಯ ಅವರ ಕಮ್‌ಬ್ಯಾಕ್ ಚಿತ್ರ ಇದು. ಇನ್ನು ರೋಹಿತ್ ಪದಕಿ ಮತ್ತು ಕೆಆರ್‌ಜಿ ಸ್ಟುಡಿಯೋಸ್ ಸಂಬಂಧ ಉನ್ನತ ಮಟ್ಟದಲ್ಲಿದೆ. ‘ರತ್ನನ್ ಪ್ರಪಂಚ’ ಒಂದು ಮೈಲಿಗಲ್ಲಾದರೆ, ‘ಉತ್ತರಕಾಂಡ’ ಎಂದೂ ಹೇಳಿರದ, ವಿಷಯ ಹೇಳಲಿದೆ ಎಂದು ಕಾರ್ತಿಕ್ ಮತ್ತು ಯೋಗಿ ಜಿ ರಾಜ್ ತಮ್ಮ ಸಂತೋಷವನ್ನು ವ್ಯಕ್ತ ಪಡಿಸಿದರು.

ಜನವರಿಯಿಂದ ಚಿತ್ರೀಕರಣ ಶುರುವಾಗಲಿದೆ ಅರವಿಂದ ಕಶ್ಯಪ್ ಕ್ಯಾಮರಾ, ಚರಣ್ ರಾಜ್ ಸಂಗೀತ ಸಂಯೋಜನೆ ಇರುತ್ತದೆ. ದೀಪು ಎಸ್ ಕುಮಾರ್ ಸಂಕಲನ, ವಿಶ್ವಾಸ್ ಕಶ್ಯಪ್ ಕಲೆ ನಿರ್ವಹಿಸುತ್ತಿದ್ದಾರೆ.

Categories
ಸಿನಿ ಸುದ್ದಿ

ಯತಿರಾಜನ ಅಗಮ್ಯ ಪಯಣ: ಸಂಜು ಜೊತೆ ಹೊಸ ಕಥೆ…

ಪ್ರೀತಿಯ ಚೌಕಟ್ಟಿನೊಳಗೆ ಸಂಬಂಧಗಳ ಪಯಣ..ಪಯಣದ ದಾರಿಯಲ್ಲಿ ಬದುಕಿನ ಮೌಲ್ಯಗಳ ಅನಾವರಣ- ಹೀಗೆಂದವರು ನಿರ್ದೇಶಕ ಯತಿರಾಜ್ . ಪತ್ರಕರ್ತನಾಗಿ, ನಟನಾಗಿ ಇದೀಗ ನಿರ್ದೇಶಕನಾಗಿ ಸದ್ಯ ಚಾಲ್ತಿಯಲ್ಲಿರುವ ಅವರು ತಮ್ಮ ಹೊಸ ಚಿತ್ರ “ಸಂಜು” ಕುರಿತು‌ ಹೇಳುತ್ತಾ ಹೋದರು.
‘ಮೈಸೂರಿನ ಸಂತೋಷ್ ಡಿ ಎಂ ನಿರ್ಮಿಸುತ್ತಿರುವ “ಸಂಜು” ಅಗಮ್ಯ ಪಯಣಿಗ.. ಡಿಸೆಂಬರ್ 14 ರಿಂದ ಚಿತ್ರೀಕರಣ ನಡೆಯಲಿದೆ. ಇಲ್ಲಿ ನಾಯಕ ಸಾಮಾನ್ಯ ಜನರ ಪ್ರತಿನಿಧಿಯಾಗಿ ಕಾಣಿಸಿಕೊಳ್ಳುತ್ತಾನೆ. ಆತನ ಬದುಕಿನಲ್ಲೂ ಸಾಕಷ್ಟು ಏರಿಳಿತಗಳ ತಲ್ಲಣಗಳಿವೆ. ನಾಯಕಿ ಸರಸ್ವತಿ ಬದುಕು ಕೂಡ ಇದಕ್ಕೆ ಹೊರತಾಗಿಲ್ಲ. ತತ್‌ಕ್ಷಣದ ನಿರ್ಧಾರಗಳು ನಮ್ಮ ಬದುಕಿನಲ್ಲಿ ಎಷ್ಟೆಲ್ಲಾ ಪರಿಣಾಮಗಳನ್ನು ಬೀರುತ್ತದೆ ಎಂಬುದನ್ನು ಮಡಿಕೇರಿ ಮತ್ತು ವಿರಾಜಪೇಟೆ ಸುತ್ತಮುತ್ತಲಿನ ಹಸಿರಿನ ಪರಿಸರದಲ್ಲಿ ಕಟ್ಟಿಕೊಡುವ ಪ್ರಯತ್ನ . ಅದಕ್ಕಾಗಿ ಮೂರ್ನಾಡುವಿನಲ್ಲಿ ಬಸ್ ಸ್ಟಾಪ್ ಮತ್ತು ಟೀ ಶಾಪಿನ ಸೆಟ್ ಕೂಡ ಹಾಕಲಾಗುತ್ತಿದೆ ಎಂದು ಚಿತ್ರದ ಕುರಿತು ಯತಿರಾಜ್ ಹೇಳಿದರು.


ಇನ್ನೂ ಚಿತ್ರದ ನಾಯಕನಾಗಿ ಮನ್ವೀತ್ ಕಾಣಿಸಿಕೊಳ್ಳುತ್ತಿದ್ದಾರೆ. ಈ ಹಿಂದೆ ‘ಅ್ಯಂಗರ್’ ಅನ್ನುವ ಸಿನಿಮಾದಲ್ಲಿ ನಟಿಸಿದ್ದ ಅವರಿಗೆ ‘ಸಂಜು’ ಎರಡನೇ ಚಿತ್ರ. ರಂಗಭೂಮಿಯ ನಂಟಿದ್ದರೂ ಪಾತ್ರದ ಪರಕಾಯ ಪ್ರವೇಶ ಪಡೆಯಲು ನಿರ್ದೇಶಕ ಜೊತೆಗೆ ಸತತ ತಾಲೀಮು ನಡೆಸಲಾಗುತ್ತಿದೆ ಎಂಬ ಮಾಹಿತಿ ನೀಡಿದರು. ಆರಂಭದಲ್ಲಿ ನಾಟಕವೊಂದರ ಡೈಲಾಗ್ ಮೂಲಕ ವೇದಿಕೆ ಏರಿದ ಮನ್ವೀತ್ ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾದರು.


ನಾಯಕಿಯಾಗಿ ನಟಿಸುತ್ತಿರುವ ರೇಖಾದಾಸ್ ಪುತ್ರಿ ಶ್ರಾವ್ಯ ‘ ಚಿತ್ರದಲ್ಲಿ ಸರಸ್ವತಿಯಾಗಿ ಕಾಣಿಸಿಕೊಳ್ಳುತ್ತಿದ್ದೇನೆ .ಮೊದಲ ಹದಿನೈದು ದೃಶ್ಯಗಳಲ್ಲಿ ನನಗೆ ಮಾತುಗಳಿಲ್ಲ. ಕೇವಲ ಭಾವನೆಗಳನ್ನು ಮಾತ್ರ ವ್ಯಕ್ತಪಡಿಸಬೇಕಿದೆ. ಇದೊಂಥರ ವಿಭಿನ್ನ ಪ್ರಯೋಗ ‘ ಎಂದು ತಮ್ಮ ಪಾತ್ರದ ಕುರಿತು ಹೇಳಿಕೊಂಡರು.
ನಾಯಕನ ತಾಯಿಯಾಗಿ ಸಂಗೀತಾ, ನಾಯಕಿಯ ತಂದೆಯಾಗಿ ಬಲರಾಜವಾಡಿ ಹಾಗೂ ಕಾಮಿಡಿ ಕಿಲಾಡಿಗಳು ಸಂತು, ಕುರಿ ರಂಗ, ಬೌ ಬೌ ಜಯರಾಮ್, ಶಂಕರ್ ಭಟ್, ಕಾತ್ಯಾಯಿನಿ, ಮಿಥಾಲಿ, ಪ್ರಕಾಶ್ ಶಣಯ್, ಚೇತನ್ ರಾಜ್, ಮಂಜು ಕವಿ, ನಾಗರತ್ನ, ಫ್ರೆಂಚ್ ಬಿರಿಯಾನಿ,
ಫ್ರೆಂಚ್ ಬಿರಿಯಾನಿ ಖ್ಯಾತಿಯ ಜೂ.ಯೋಗಿಬಾಬು  ಮಹಂತೇಶ್ ಸೇರಿದಂತೆ ಹಲವಾರು ಕಲಾವಿದರು ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಥ್ರಿಲ್ಲರ್ ಮಂಜು ಎರಡು ಸಾಹಸ ದೃಶ್ಯಗಳನ್ನು ನಿರ್ದೇಶನ ಮಾಡುತ್ತಿದ್ದಾರೆ.


ಸಂಗೀತ ನಿರ್ದೇಶಕ ವಿಜಯ್ ಹರಿತ್ಸ ‘ ಪ್ರೇಮ ಗೀತೆಯೊಂದನ್ನು ಜನಪದ ಶೈಲಿಯಲ್ಲಿ ಹೇಳುವ ಪ್ರಯತ್ನ ನಡೆಯುತ್ತಿದೆ’ ಎಂದರು. ಛಾಯಾಗ್ರಾಹಕ ವಿದ್ಯಾನಾಗೇಶ್, ಅನಿಲ್ ಮತ್ತು ಪ್ರದೀಪ್ ‘ ನಿರ್ದೇಶಕರು ಹೇಳಿದ್ದನ್ನು ಕೊಡುವುದೇ ನಮ್ಮ ಕರ್ತವ್ಯ’ ಎಂದರು.

Categories
ಸಿನಿ ಸುದ್ದಿ

ನಮ್ ಟಾಕೀಸ್ ಫ್ಯಾನ್ಸ್ ಕ್ರಿಕೆಟ್ ಲೀಗ್ ಡೇಟ್ ಅನಾವರಣ ಮಾಡಿದ ಅಭಿಷೇಕ್ ಅಂಬರೀಶ್

ನಮ್‌ ಟಾಕೀಸ್‌ ನೇತೃತ್ವದಲ್ಲಿ, ಭರತ್‌ ಅವರು ಆಯೋಜಿಸಿರುವ ಫ್ಯಾನ್ಸ್‌ ಕ್ರಿಕೆಟ್‌ ಲೀಗ್‌ ಸೀಸನ್‌ -9 ಈ ಬಾರಿ ರೆಬೆಲ್‌ ಸ್ಟಾರ್‌ ಡಾ. ಅಂಬರೀಶ್‌ ಅವರ ಆಶೀರ್ವಾದದೊಂದಿಗೆ ನಡೆಯಲಿದೆ.
ಪ್ರತಿವರ್ಷ ದಿಗ್ಗಜರ ಕಲಾವಿದರ ಹೆಸರಿನಲ್ಲಿ ಕ್ರಿಕೆಟ್‌ ಪಂದ್ಯವನ್ನು ಭರತ್‌ ಎಸ್ ಎನ್ ಅವರು ನಮ್‌ ಟಾಕೀಸ್‌ ಮೂಲಕ ನಡೆಸುತ್ತಿದ್ದಾರೆ. ಈ ಬಾರಿ ಎಫ್‌ ಸಿಎಲ್‌ -9 ಸೀಸನ್‌ ನಡೆಯಲಿದೆ.

ಅಂದಹಾಗೆ, ಈ ಪಂದ್ಯ A2 ಮ್ಯೂಸಿಕ್
ಯುಟ್ಯೂಬ್ ಚಾನಲ್ ನಲ್ಲಿ ನೇರ ಪ್ರಸಾರವಾಗಲಿದೆ . 12 ಸ್ಟಾರ್ ಫ್ಯಾನ್ಸ್ ತಂಡಗಳು ಈ ಟೂರ್ನಿಯಲ್ಲಿ ಭಾಗವಹಿಸುತ್ತಿದ್ದಾರೆ.

ಪ್ರತಿಬಾರಿಯು ಸಲಹೆ,ಸಹಕಾರ ಈ ಬಾರಿಯೂ ಇರಲಿ ಎನ್ನುವುದು ನಮ್‌ ಟಾಕೀಸ್‌ ಅವರ ಆಶಯ.
ಚಂದನವನದ ಸ್ಟಾರ್‌ ಗಳ ಅಭಿಮಾನಿಗಳು ತಮ್ಮ ತಂಡವನ್ನು ಕಟ್ಟಿಕೊಂಡು ಫ್ಯಾನ್ಸ್‌ ಕ್ರಿಕೆಟ್‌ ಲೀಗ್ ಟ್ರೋಫಿಗಾಗಿ ಹಣಾಹಣೆ ನಡೆಸಲಿದೆ.


ಜೂ.ರೆಬೆಲ್‌ ಸ್ಟಾರ್‌ ಅಭಿಷೇಕ್‌ ಅಂಬರೀಷ್‌ ಅವರು ಎಫ್‌ ಸಿ ಎಲ್‌ -9 ಇದರ ದಿನಾಂಕವನ್ನು ರಿವೀಲ್‌ ಮಾಡಿದ್ದು, ಡಿಸೆಂಬರ್‌ 3 ಹಾಗೂ 4 ರಂದು ನಡೆಯಲಿದೆ.

Categories
ಸಿನಿ ಸುದ್ದಿ

ಸಮಂತಾ ಸ್ಟಂಟ್ ನೋಡಿ ಹಾಲಿವುಡ್ ಸಾಹಸ ನಿರ್ದೇಶಕನ ಶಬ್ಬಾಸ್! ಯಶೋಧ ಸಿನಿಮಾ ಸಾಹಸ ಮೆಚ್ಚಿದ ಯಾನಿಕ್ ಬೆನ್…

ಹರಿ-ಹರೀಶ್ ನಿರ್ದೇಶನದ ಸಮಂತಾ ಅಭಿನಯದ ಆಕ್ಷನ್ ಥ್ರಿಲ್ಲರ್ ಚಿತ್ರವಾದ ‘ಯಶೋದಾ’ ನ.11ರಂದು ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿದೆ. ಈ ಚಿತ್ರದಲ್ಲಿ ಸಮಂತಾ ಅವರ ಕೆಲಸ ನೋಡಿ ಹಾಲಿವುಡ್ನ ಸಾಹಸ ನಿರ್ದೇಶಕ ಯಾನಿಕ್ ಬೆನ್ ಬೆರಗಾಗಿದ್ದಾರೆ.
ಶ್ರೀದೇವಿ ಮೂವೀಸ್ ಅಡಿಯಲ್ಲಿ ಶಿವಲೆಂಕ ಕೃಷ್ಣ ಪ್ರಸಾದ್ ನಿರ್ಮಿಸಿರುವ ಈ ಅದ್ಧೂರಿ ಬಜೆಟ್ ಚಿತ್ರದ ಟ್ರೇಲರ್ ಇತ್ತೀಚೆಗಷ್ಟೇ ಬಿಡುಗಡೆಯಾಗಿ ಎಲ್ಲರಿಂದ ಮೆಚ್ಚುಗೆ ಪಡೆದಿದೆ. ಅಷ್ಟೇ ಅಲ್ಲ, ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದೆ.

ಒಂದು ಕಡೆ ಪ್ರೇಕ್ಷಕರು ಚಿತ್ರದಲ್ಲಿನ ಆಕ್ಷನ್ ದೃಶ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರೆ, ಚಿತ್ರದಲ್ಲಿ ಹೈ-ವೋಲ್ಟೇಜ್ ಫೈಟ್ಸ್ ಮತ್ತು ಸ್ಟಂಟ್‌ಗಳು ಚೆನ್ನಾಗಿ ಮೂಡಿ ಬರುವುದಕ್ಕೆ ಕಾರಣರಾಗಿರುವ ಸಮಂತಾ ಶ್ರದ್ಧೆಗೆ ಯಾನಿಕ್ ಬೆನ್ ಖುಷಿಯಾಗಿದ್ದಾರೆ.
ಸಮಂತಾ ಮತ್ತು ಬೆನ್ ಒಟ್ಟಿಗೆ ಕೆಲಸ ಮಾಡುತ್ತಿರುವುದು ಇದು ಮೊದಲೇನಲ್ಲ.
ಈ ಹಿಂದೆ ಸಮಂತಾ ಅವರೊಂದಿಗೆ ‘ಫ್ಯಾಮಿಲಿ ಮ್ಯಾನ್ 2’ ವೆಬ್‌ಸೀರೀಸ್‌ಗಾಗಿ ಕೆಲಸ ಮಾಡಿದರು ಮತ್ತು ಈಗ ಅವರು ‘ಯಶೋದಾ’ದಲ್ಲಿ ಅತ್ಯುತ್ತಮ ಆಕ್ಷನ್‌ಗಾಗಿ ಜೊತೆಯಾಗಿದ್ದಾರೆ. ಚಿತ್ರದಲ್ಲಿ ಆಕ್ಷನ್ ದೃಶ್ಯಗಳು ಅದ್ಭುತವಾಗಿ ಮೂಡಿಬಂದಿರುವುದಕ್ಕೆ ಸಮಂತಾ ಅವರ ಸಮರ್ಪಣಾ ಮನೋಭಾವ ಮತ್ತು ಇಚ್ಛಾಶಕ್ತಿಯೇ ಕಾರಣ ಎಂದು ಮೆಚ್ಚಿ ಮಾತನಾಡಿದ್ದಾರೆ.


ಐಕಿಡೊ, ಕಿಕ್ ಬಾಕ್ಸಿಂಗ್, ಜಿಮ್ನಾಸ್ಟಿಕಗಸ್ ಮುಂತಾದ ಕಲೆಗಳಲ್ಲಿ ಪರಿಣಿತರಾಗಿರುವ ಬೆನ್, ಹಾಲಿವುಡ್ ‘ಟ್ರಾನ್ಸ್ಪೋರ್ಟರ್’, ‘ಇನ್ಸೆಪ್ಷನ್’, ಬಾಲಿವುಡ್ನ ‘ಟೈಗರ್ ಜಿಂದಾ ಹೈ’, ‘ರಯೀಸ್’, ತೆಲುಗಿನ ‘ಅತ್ತಾರಿಂಟಿಕಿ ದಾರೇದಿ’, ‘ನೇನೋಕ್ಕೊಡೇನ್’ ಮುಂತಾದ ಚಿತ್ರಗಳಿಗೆ ಸಾಹಸ ಸಂಯೋಜನೆ ಮಾಡಿದ್ದಾರೆ.
‘ಯಶೋದಾ’ ಚಿತ್ರದಲ್ಲಿ ಚಿತ್ರದಲ್ಲಿ ಸಮಂತಾ ಜೊತೆಗೆ ವರಲಕ್ಷ್ಮಿ ಶರತ್‌ಕುಮಾರ್, ಉನ್ನಿ ಮುಕುಂದನ್, ರಾವ್ ರಮೇಶ್, ಮುರಳಿ ಶರ್ಮಾ ಮುಂತಾದವರು ನಟಿಸಿದ್ದಾರೆ. ಇದೊಂದು ಪ್ಯಾನ್ ಇಂಡಿಯಾ ಚಿತ್ರವಾಗಿದ್ದು, ಏಕಕಾಲಕ್ಕೆ 5 ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ.

Categories
ಸಿನಿ ಸುದ್ದಿ

ಹಾಸ್ಟೆಲ್ ಹುಡುಗ್ರು ಜೊತೆ ರಮ್ಯಾ! ಸಿನಿಮಾ ಪ್ರಚಾರಕ್ಕೆ ಮೋಹಕ ತಾರೆ ಸಾಥ್…

‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಈ ಸಿನಿಮಾ ಹೆಸರು ನೀವು ಕೇಳಿರ್ತೀರಾ. ಸೋಶಿಯಲ್ ಮೀಡಿಯಾದಲ್ಲಿ ಒಂದಷ್ಟು ಸಖತ್ ಕ್ರಿಯೇಟಿವ್ ಆಗಿರೋ ಸಿನಿಮಾ ಪ್ರಮೋಷನಲ್ ವೀಡಿಯೋಗಳು ನಿಮ್ಮನ್ನು ಸೆಳೆದಿರುತ್ತೆ. ಅದಕ್ಕೂ ಮಿಗಿಲಾಗಿ ಎಲ್ಲರ ಪ್ರೀತಿಯ ಅಪ್ಪು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಚಿತ್ರದ ಪೋಸ್ಟರ್ ಲಾಂಚ್ ಮಾಡಿದ್ದ ವೀಡಿಯೋನಂತೂ ಕಣ್ತುಂಬಿಕೊಂಡಿರ್ತಿರಾ.ಹೀಗೆ ಸ್ಟಾರ್ ನಟರ ಮೂಲಕ ಸಿನಿಮಾದ ಭರ್ಜರಿ ಪ್ರಚಾರ ಕಾರ್ಯ ನಡೆಸುತ್ತಿರೋ ಈ ಚಿತ್ರತಂಡ ಇದೀಗ ಸ್ಯಾಂಡಲ್ ವುಡ್ ಕ್ವೀನ್ ಮೋಹಕ ತಾರೆ ರಮ್ಯಾ ಅವರನ್ನು ಚಿತ್ರದ ಪ್ರಚಾರ ಕಾರ್ಯಕ್ಕೆ ಕರೆತಂದಿದೆ.

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ, ಕಿಚ್ಚ ಸುದೀಪ ಅವರಿಂದ ಸಿನಿಮಾ ಪ್ರಮೋಷನಲ್ ಕಟೆಂಟ್ ಮಾಡಿಸಿ ಗಮನ ಸೆಳೆದಿತ್ತು ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಟೀಂ. ಸ್ಟಾರ್ ನಟರ ಮೂಲಕ ಸಿನಿಮಾ ಪ್ರಚಾರ ಒಂದು ಕಡೆಯಾದ್ರೆ ಇಂಟ್ರಸ್ಟಿಂಗ್ ಪ್ರಮೋಷನಲ್ ಕಂಟೆಂಟ್ ಕೂಡ ಸಾಮಾಜಿಕ ಜಾಲತಾಣದಲ್ಲಿ ಎಲ್ಲರನ್ನು ಸಖತ್ ಇಂಪ್ರೆಸ್ ಮಾಡಿತ್ತು. ಹೀಗೆ ವಿಭಿನ್ನವಾಗಿ ಸಿನಿಮಾ ಪ್ರಚಾರ ಮಾಡುತ್ತಾ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ ಚಿತ್ರತಂಡ. ಈ ಬಾರಿ ಮೋಹಕ ತಾರೆ ರಮ್ಯಾ ಅವರನ್ನು ಚಿತ್ರದ ಪ್ರಚಾರ ಕಾರ್ಯಕ್ಕಾಗಿ ಕರೆತಂದಿದೆ. ರಮ್ಯಾ ಕೂಡ ಚಿತ್ರತಂಡಕ್ಕೆ ಸಾಥ್ ನೀಡಲು ಒಪ್ಪಿದ್ದು, ಬಹಳ ಖುಷಿಯಿಂದಲೇ ಚಿತ್ರದ ಪ್ರಮೋಷನಲ್ ಕಂಟೆಂಟ್ ವೀಡಿಯೋ ನಲ್ಲಿ ಭಾಗಿಯಾಗಿದ್ದಾರೆ.

ವರುಣ್ ಸ್ಟುಡಿಯೋಸ್ ಹಾಗೂ ಪ್ರಜ್ವಲ್ ಬಿ ಪಿ ಅವರ ಗುಲ್ ಮೋಹರ್ ಫಿಲಂಸ್ ಬ್ಯಾನರ್ ನಡಿ ನಿರ್ಮಾಣವಾಗಿರುವ ಮೊದಲ ಸಿನಿಮಾ ಇದು. ಈ ಚಿತ್ರದ ಕಥೆ ಮೊದಲು ಕೇಳಿದವರು ಮತ್ತದೇ ನಮ್ಮೆಲ್ಲರ ಪ್ರೀತಿಯ ರಾಜರತ್ನ ಪುನೀತ್ ರಾಜ್ ಕುಮಾರ್. ಚಿತ್ರತಂಡ ಈ ಸಿನಿಮಾ ಚಿತ್ರೀಕರಣಕ್ಕೂ ಮೊದಲು ಅಪ್ಪು ಅವರ ಬಳಿ ಹೋಗಿ ಸಿನಿಮಾ ಬಗ್ಗೆ ಮಾತುಕತೆ ನಡೆಸಿದೆ. ಕಥೆ ಕೇಳಿ ಸಖತ್ ಇಂಪ್ರೆಸ್ ಆದ ಅಪ್ಪು ಸಿನಿಮಾ ಮಾಡಿ ಎಂದು ಇಡೀ ತಂಡಕ್ಕೆ ಬೆನ್ನುತಟ್ಟಿ ಪ್ರೋತ್ಸಾಹ ನೀಡಿದ್ದರು. ಅವರ ಆರ್ಶೀವಾದದೊಂದಿಗೆ ಸಿನಿಮಾ ಚಿತ್ರೀಕರಣ ಆರಂಭಿಸಿದ್ವಿ ಎಂದು ನಿರ್ಮಾಪಕ ವರುಣ್ ಕುಮಾರ್ ಹಾಗೂ ಪ್ರಜ್ವಲ್ ಬಿಪಿ ತಿಳಿಸಿದ್ದಾರೆ.

ಯೂತ್ ಸಬ್ಜೆಕ್ಟ್ ಒಳಗೊಂಡ ಚಿತ್ರವನ್ನು ನಿತಿನ್ ಕೃಷ್ಣಮೂರ್ತಿ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಹಲವು ರಂಗಭೂಮಿ ಪ್ರತಿಭೆಗಳು ಈ ಚಿತ್ರದಲ್ಲಿ ನಟಿಸಿದ್ದಾರೆ. ಇವರ ಜೊತೆಗೆ ಸ್ಯಾಂಡಲ್ ವುಡ್ ಸ್ಟಾರ್ ನಟರ ಗೆಸ್ಟ್ ಅಪಿಯರೆನ್ಸ್ ಕೂಡ ಚಿತ್ರದಲ್ಲಿರಲಿದೆ. ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಚಿತ್ರತಂಡ ನಿರತವಾಗಿದ್ದು, ಜನವರಿಯಲ್ಲಿ ಸಿನಿಮಾ ತೆರೆಗೆ ತರುವ ಪ್ಲ್ಯಾನ್ ನಲ್ಲಿದೆ. ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ, ಅರವಿಂದ್ ಕಶ್ಯಪ್ ಛಾಯಾಗ್ರಹಣ, ಸುರೇಶ್ ಸಂಕಲನ ಚಿತ್ರಕ್ಕಿದೆ.

Categories
ಸಿನಿ ಸುದ್ದಿ

ದಿಗಂತ್ ಸಿನಿಮಾಗೆ ರಂಗಿತರಂಗ ಬೆಡಗಿ ಎಂಟ್ರಿ: ಎಡಗೈ ಅಪಘಾತಕ್ಕೆ ಕಾರಣ ಚಿತ್ರಕ್ಕೆ ರಾಧಿಕಾ ನಾರಾಯಣ್ ಬಂದ್ರು…

ದೂದ್ ಪೇಡ ದಿಗಂತ್ ಅಭಿನಯದ ‘ಎಡಗೈ ಅಪಘಾತಕ್ಕೆ ಕಾರಣ’ ಸಿನಿಮಾ ಚಿತ್ರೀಕರಣ ಭರದಿಂದ ನಡೆಯುತ್ತಿದೆ. ಸಮರ್ಥ್ ಬಿ ಕಡಕೊಳ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಚೊಚ್ಚಲ ಸಿನಿಮಾ ಇದು. ಇತ್ತೀಚೆಗೆ ಸಿನಿಮಾ ತಂಡವನ್ನು ನಟಿ ನಿಧಿ ಸುಬ್ಬಯ್ಯ ಸೇರಿಕೊಂಡಿದ್ದರು. ಇದೀಗ ಮತ್ತೊಂದು ಲೇಟೆಸ್ಟ್ ಸುದ್ದಿ ಹೊರಬಿದ್ದಿದೆ. ಮತ್ತೊಬ್ಬ ಸ್ಟಾರ್ ನಟಿ ಈ ಚಿತ್ರತಂಡವನ್ನು ಸೇರಿಕೊಂಡಿದ್ದಾರೆ.

ರಂಗಿತರಂಗ ನಟಿ ರಾಧಿಕಾ ನಾರಾಯಣ್ ‘ಎಡಗೈ ಅಪಘಾತಕ್ಕೆ ಕಾರಣ’ ಸಿನಿಮಾ ತಂಡಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಚಿತ್ರದ ಪ್ರಮುಖ ಪಾತ್ರದಲ್ಲಿ ರಾಧಿಕಾ ನಾರಾಯಣ್ ನಿರ್ವಹಿಸಲಿದ್ದು, ಈಗಾಗಲೇ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ. ಈ ಮೂಲಕ ಸಿನಿಮಾ ಬಗೆಗಿನ ಕುತೂಹಲ ಹೆಚ್ಚಾಗಿದೆ.

ಎಡಗೈ ಬಳಸುವವರ ಸಮಸ್ಯೆಗಳ ಸುತ್ತ ಹೆಣೆದ ಕಥೆಯನ್ನು ಈ ಚಿತ್ರ ಒಳಗೊಂಡಿದೆ. ಬ್ಲಾಕ್ ಕಾಮಿಡಿ ಹಾಗೂ ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಸಿನಿಮಾದಲ್ಲಿದೆ. ಸಮರ್ಥ್ ಬಿ ಕಡಕೊಳ್ ನಿರ್ದೇಶನದಲ್ಲಿ ಮೂಡಿ ಬರ್ತಿರುವ ಮೊದಲ ಸಿನಿಮಾ ಇದಾಗಿದ್ದು, ಚಿತ್ರದಲ್ಲಿ ದಿಗಂತ್ ಜೋಡಿಯಾಗಿ ಧನು ಹರ್ಷ ನಟಿಸುತ್ತಿದ್ದಾರೆ.

ಹೈಫನ್ ಪಿಕ್ಚರ್ಸ್ ಬ್ಯಾನರ್ ನಡಿ ಗುರುದತ್ ಗಾಣಿಗ ಹಾಗೂ ನಿರ್ದೇಶಕ ಸಮರ್ಥ್ ಬಿ ಕಡಕೊಳ್ ಚಿತ್ರವನ್ನು ಜಂಟಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ಶೇ. 80ರಷ್ಟು ಚಿತ್ರೀಕರಣ ಕಂಪ್ಲೀಟ್ ಆಗಿದ್ದು, ಭಜರಂಗಿ ಲೋಕಿ, ಕೃಷ್ಣ ಹೆಬ್ಬಾಳ್ ಚಿತ್ರದ ತಾರಾಗಣದಲ್ಲಿದ್ದಾರೆ. ಅಭಿಮನ್ಯು ಸದಾನಂದ್ ಕ್ಯಾಮೆರಾ ವರ್ಕ್, ರಾಹುಲ್ ವಿ ಪಾರ್ವತಿಕರ್ ಹಾಗೂ ಶ್ರೀಪಾದ್ ಜೋಶಿ ಸಂಭಾಷಣೆ ಸಿನಿಮಾಗಿದೆ.

Categories
ಸಿನಿ ಸುದ್ದಿ

ದುಬೈನಲ್ಲಿ ಕನ್ನಡ ಕಹಳೆ: ನವೆಂಬರ್ 19ರಂದು ಅರಬ್ಬರ ನಾಡಲ್ಲಿ ವಿಶ್ವ ಕನ್ನಡ ಹಬ್ಬ…

ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಹಾಗೂ ಕನ್ನಡಿಗರು ದುಬೈ ಸಹಯೋಗದಲ್ಲಿ ಪ್ರಪ್ರಥಮ ಬಾರಿಗೆ ದುಬೈನಲ್ಲಿ ‘ವಿಶ್ವ ಕನ್ನಡ ಹಬ್ಬ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನವೆಂಬರ್ 19ರಂದು ದುಬೈನ ಶೇಕ್ ರಶೀದ್ ಸಭಾಂಗಣದಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ. ಈಗಾಗಲೇ ಈ ಬಾರಿಯ ‘ವಿಶ್ವ ಕನ್ನಡ ಹಬ್ಬ’ದ ಲೋಗೋ ಬಿಡುಗಡೆಯಾಗಿದ್ದು , ಕಾರ್ಯಕ್ರಮದ ಸಿದ್ದತೆಯೂ ಭರದಿಂದ ನಡೆಯುತ್ತಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಹಂಚಿಕೊಳ್ಳಲು ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಅಧ್ಯಕ್ಷರಾದ ಟಿ. ಶಿವಕುಮಾರ ನಾಗರ ನವಿಲೆ ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ರು. ಪತ್ರಿಕಾಗೋಷ್ಠಿಯಲ್ಲಿ ನಟಿ ಪ್ರೇಮ, ನಟ ವಸಿಷ್ಠ ಸಿಂಹ ಹಾಗೂ ಇತರರು ಪಾಲ್ಗೊಂಡಿದ್ದರು.

ನವೆಂಬರ್ 19ರಂದು ದುಬೈನಲ್ಲಿ ನಡೆಯುವ ‘ವಿಶ್ವ ಕನ್ನಡ ಹಬ್ಬ’ ವಿಶೇಷ ಕಾರ್ಯಕ್ರಮದಲ್ಲಿ ಮೈಸೂರು ಮಹಾರಾಜರಾದ ಯಧುವೀರ ಚಾಮರಾಜ ಒಡೆಯರ್, ನಟ ಶಿವರಾಜ್ ಕುಮಾರ್, ಮಹರ್ಷಿ ಡಾ.ಆನಂದ್ ಗುರೂಜಿ, ನಟಿಯರಾದ ಭವ್ಯ, ಸುಧಾರಾಣಿ, ಶೃತಿ, ಪ್ರೇಮಾ, ಮೇಘ ಶೆಟ್ಟಿ ವಿಜಯ ರಾಘವೇಂದ್ರ ಹಾಗೂ ಮುಖ್ಯ ಅತಿಥಿಯಾಗಿ ನಟ ವಸಿಷ್ಠ ಸಿಂಹ ಪಾಲ್ಗೊಳ್ಳುತ್ತಿದ್ದಾರೆ.

ನಟ ವಸಿಷ್ಠ ಸಿಂಹ ಮಾತನಾಡಿ, ನಾವೆಲ್ಲರೂ ಕನ್ನಡ ಬೆಳೆಯಬೇಕು, ಕನ್ನಡ ಬಳಸಬೇಕು ಎಂದು ಹೇಳುತ್ತೇವೆ. ಆದರೆ, ಅದಕ್ಕಾಗಿ ಹಲವಾರು ಜೀವಗಳು ನಿರಂತರವಾಗಿ ದುಡಿಯುತ್ತಿವೆ‌ ಹಾಗೂ ದುಡಿದಿದ್ದಾರೆ. ಅವರನ್ನೆಲ್ಲ ಗುರುತಿಸಿ ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಗೌರವ ನೀಡುತ್ತಿದೆ. ಈ ಕನ್ನಡ ಹಬ್ಬಕ್ಕೆ ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಅಂತರಾಷ್ಟ್ರೀಯ ರಾಯಭಾರಿಯಾಗಿ ನನ್ನನ್ನು ಭಾಗವಹಿಸಬೇಕು ಎಂದು ಹೇಳಿದಾಗ ತುಂಬಾ ಹಿರಿಮೆ ಅನಿಸಿತು. ಈ ರೀತಿಯ ಕಾರ್ಯಕ್ರಮದಿಂದ ವಿಚಾರಗಳ ವಿನಿಮಯ ಆಗುತ್ತೆ. ಈ ಕಾರ್ಯಕ್ರಮ ಬಹಳ ವಿಶೇಷವಾಗಿರುತ್ತೆ ಎಂದು ನಂಬಿದ್ದೇನೆ. ಎಲ್ಲರೂ ನವೆಂಬರ್ ಒನ್ ಕನ್ನಡಿಗರಾಗದೇ ನಂಬರ್ ಒನ್ ಕನ್ನಡಿಗರಾಗೋಣ ಎಂದರು ವಸಿಷ್ಠ ಸಿಂಹ.

ದುಬೈನಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸುತ್ತಿರೋದು ತುಂಬಾ ಖುಷಿಯ ವಿಚಾರ. ಹಲವು ಕಲಾವಿದರು ಕೂಡ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಕಾರ್ಯಕ್ರಮಕ್ಕೆ ಆಹ್ವಾನ ನೀಡಿದ್ದಕ್ಕಾಗಿ ಶಿವಕುಮಾರ್ ಅವರಿಗೆ ಧನ್ಯವಾದ ಎಂದು ನಟಿ ಪ್ರೇಮ ತಿಳಿಸಿದರು.

ಅಂತರಾಷ್ಟ್ರೀಯ ಮಟ್ಟದಲ್ಲಿ ಇದೇ ಮೊದಲ ಬಾರಿಗೆ ವಿಶ್ವ ಕನ್ನಡ ಹಬ್ಬ ಕಾರ್ಯಕ್ರಮ ಮಾಡಲಾಗುತ್ತಿದೆ. ರಾಜ್ಯಾದ್ಯಂತ ಇರುವ ಬೇರೆ ಬೇರೆ ಕಲೆಯ ಆಯ್ದ ಕಲಾವಿದರನ್ನು ದುಬೈಗೆ ಕರೆದುಕೊಂಡು ಹೋಗಿ ನಮ್ಮ ಕಲೆಯನ್ನು ಅಲ್ಲಿ ಪರಿಚಯಿಸುವ ಹಾಗೂ ಅವರನ್ನು ಗೌರವಿಸುವ ಉದ್ದೇಶವನ್ನು ಇದು ಒಳಗೊಂಡಿದೆ.

ಕನ್ನಡವನ್ನು ವಿಶ್ವದಾದ್ಯಂತ ಪಸರಿಸುವ ಉದ್ದೇಶ ಹೊಂದಿರುವ ಈ ಕಾರ್ಯಕ್ರಮ ಮೂಲ ಕನ್ನಡಿಗರು ಹಾಗೂ ಅನಿವಾಸಿ ಕನ್ನಡಿಗರ ಬೆಸುಗೆಯಾಗಿದೆ. ಹಿರಿಯ ಪತ್ರಕರ್ತರಿಗೆ ಹಾಗೂ ಬೇರೆ ಬೇರೆ ಕ್ಷೇತ್ರದಲ್ಲಿ ಸಾಧನೆ ಗೈದವರಿಗೆ ಪ್ರಶಸ್ತಿಯನ್ನು ಕೂಡ ನೀಡಿ ಗೌರವಿಸಲಾಗುತ್ತದೆ ಎಂದು ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಅಧ್ಯಕ್ಷರಾದ ಡಾ. ಟಿ. ಶಿವಕುಮಾರ ನಾಗರ ನವಿಲೆ ಕಾರ್ಯಕ್ರಮದ ಬಗ್ಗೆ ಮಾಹಿತಿ ಹಂಚಿಕೊಂಡ್ರು.

Categories
ಸಿನಿ ಸುದ್ದಿ

ಖಾಸಗಿ ಪುಟದಲ್ಲೊಂದು ಸ್ಪೆಷಲ್ ಲವ್ ಸ್ಟೋರಿ: ನವೆಂಬರ್ 18ಕ್ಕೆ ರಿಲೀಸ್…

ನವೀರಾದ ಪ್ರೇಮಕಥೆಯುಳ್ಳ ‘ಖಾಸಗಿ ಪುಟಗಳು’ ಸಿನಿಮಾ ಬಿಡುಗಡೆಗೆ ರೆಡಿಯಾಗಿದೆ. ಸಂತೋಷ್ ಶ್ರೀಕಂಠಪ್ಪ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರ ಟ್ರೇಲರ್ ಹಾಗೂ ಚೆಂದದ ಹಾಡುಗಳ ಮೂಲಕ ಎಲ್ಲರ ಗಮನ ಸೆಳೆದಿದೆ. ಇದೀಗ ಪ್ರೇಕ್ಷಕರ ಮುಂದೆ ಬರಲು ಸಿನಿಮಾ ರೆಡಿಯಾಗಿದ್ದು, ನವೆಂಬರ್ 18ರಂದು ಸಿನಿಮಾ ಬಿಡುಗಡೆಯಾಗುತ್ತಿದೆ.

‘ಖಾಸಗಿ ಪುಟಗಳು’ ಚಿತ್ರ ಸಂಪೂರ್ಣ ಹೊಸಬರ ಪ್ರಯತ್ನ. ಕಾಲೇಜು ಹುಡುಗನ್ನೊಬ್ಬನ ನವೀರಾದ ಪ್ರೇಮಕಥೆ ಹೊತ್ತ ಸಿನಿಮಾವಿದು. ಕಿರುಚಿತ್ರದಲ್ಲಿ ನಟಿಸಿ ಅನುಭವ ಇರುವ ವಿಶ್ವ ಚಿತ್ರದಲ್ಲಿ ನಾಯಕ ನಟನಾಗಿ ನಟಿಸಿದ್ದು, ಶ್ವೇತಾ ಡಿಸೋಜ ನಾಯಕಿಯಾಗಿ ನಟಿಸಿದ್ದಾರೆ.

ಚಿತ್ರದ ನಾಯಕಿ ಶ್ವೇತ ಡಿಸೋಜ ಮಾತನಾಡಿ ಹಿಂದಿಯಲ್ಲಿ ‘ವೈ’ ಎಂಬ ಸಿನಿಮಾದಲ್ಲಿ ನಟಿಸಿದ್ದೇನೆ. ಇದು ನನ್ನ ಮೊದಲ ಕನ್ನಡ ಸಿನಿಮಾ. ಭೂಮಿ ಪಾತ್ರದಲ್ಲಿ ನಟಿಸಿದ್ದೇನೆ. ಇನೋಸೆಂಟ್ ಹಾಗೂ ಮೆಚೋರ್ಡ್ ಎರಡು ಶೇಡ್ ನಲ್ಲಿ ಕಾಣಸಿಗಲಿದ್ದೇನೆ ಎಂದು ತಮ್ಮ ಪಾತ್ರದ ಬಗ್ಗೆ ಮಾಹಿತಿ ಹಂಚಿಕೊಂಡ್ರು.

ಕಿರುಚಿತ್ರಗಳಲ್ಲಿ ಅಭಿನಯಿಸುತ್ತಿದ್ದೆ ಸಿನಿಮಾಗಳಲ್ಲಿ ಅಭಿನಯಿಸಬೇಕು ಎಂಬ ಆಸೆಯಿತ್ತು. ನಾಯಕ ನಟನಾಗಿ ಇದು ನನ್ನ ಮೊದಲ ಸಿನಿಮಾ. ಒಂದು ತಂಡವಾಗಿ ಎಲ್ಲರೂ ಈ ಸಿನಿಮಾವನ್ನು ಮಾಡಿದ್ದೇವೆ. ನವೆಂಬರ್ 18ಕ್ಕೆ ಚಿತ್ರ ಬಿಡುಗಡೆಯಾಗುತ್ತಿದೆ ಎಲ್ಲರೂ ನೋಡಿ ಹರಸಬೇಕು ಎಂದು ನಾಯಕ ವಿಶ್ವ ಹೇಳಿದರು.

ಸಂಗೀತ ನಿರ್ದೇಶಕ ವಾಸುಕಿ ವೈಭವ್ ಮಾತನಾಡಿ ಸಂತೋಷ್ ಶ್ರೀಕಂಠಪ್ಪ ಅವರಿಗೆ ಇರುವ ಸಿನಿಮಾ ಪ್ರೀತಿ ನೋಡಿ ಈ ಚಿತ್ರವನ್ನು ಒಪ್ಪಿಕೊಂಡೆ. ಚಿತ್ರದಲ್ಲಿ ನಾಲ್ಕು ಹಾಡುಗಳಿವೆ, ಕೆ. ಕಲ್ಯಾಣ್, ಪ್ರಮೋದ್ ಮರವಂತೆ, ತ್ರಿಲೋಕ್ ತ್ರಿವಿಕ್ರಮ್ ಸಾಹಿತ್ಯ ಬರೆದಿದ್ದಾರೆ. ಸಿನಿಮಾ ಬಿಡುಗಡೆಗೆ ರೆಡಿಯಾಗಿದೆ ಎಲ್ಲರೂ ಸಿನಿಮಾ ನೋಡಿ ಹೊಸಬರನ್ನು ಬೆಳೆಸಿ ಎಂದರು.

ಚೇತನ್ ದುರ್ಗಾ, ನಂದಕುಮಾರ್,ಶ್ರೀಧರ್, ನಿರೀಕ್ಷಾ ಶೆಟ್ಟಿ, ದಿನೇಶ್ ಒಳಗೊಂಡ ತಾರಾಬಳಗ ಚಿತ್ರದಲ್ಲಿದೆ. ಎಸ್ ವಿ ಎಂ ಮೋಶನ್ ಪಿಕ್ಚರ್ ಬ್ಯಾನರ್ ನಡಿ ಮಂಜು ವಿ ರಾಜ್, ವೀಣಾ ವಿ ರಾಜ್, ಮಂಜುನಾಥ್ ಡಿ ಎಸ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ವಿಶ್ವಜಿತ್ ರಾವ್ ಛಾಯಾಗ್ರಹಣ,ರಾಕೇಶ್ ಆಚಾರ್ಯ ಬಿ.ಜಿ.ಎಂ ಮಾಡಿದ್ದು, ಆಶಿಕ್ ಕುಸುಗೋಳಿ ಸಂಕಲನ ಚಿತ್ರಕ್ಕಿದೆ.

error: Content is protected !!