ವಿದ್ಯಾ ಶ್ರೀಮುರಳಿ ಅರ್ಪಿಸುವ, F3 ಪ್ರೊಡಕ್ಷನ್ ಬ್ಯಾನರ್ ನಲ್ಲಿ ನಿರ್ಮಾಣವಾಗಿರುವ ಹಾಗೂ ನೀನಾಸಂ ಸತೀಶ್ ನಾಯಕರಾಗಿ ನಟಿಸಿರುವ “ಮ್ಯಾಟ್ನಿ” ಚಿತ್ರ ಜೂನ್ ನಲ್ಲಿ ಬಿಡುಗಡೆಯಾಗಲಿದೆ. ಈಗ ಅದೇ ಸಂಸ್ಥೆಯ ಬ್ಯಾನರ್ ನಲ್ಲಿ “ಎಲ್ಲಾ ನಿನಗಾಗಿ” ಎಂಬ ನೂತನ ಚಿತ್ರ ಆರಂಭವಾಗಿದೆ.
ವಿದ್ಯಾ ಶ್ರೀಮುರಳಿ ಅವರೆ ಈ ಚಿತ್ರವನ್ನೂ ಅರ್ಪಿಸುತ್ತಿದ್ದಾರೆ. ರಾಹುಲ್ ಆರ್ಕಾಟ್ ಹಾಗೂ ಧನ್ಯ ರಾಮಕುಮಾರ್ ಈ ಚಿತ್ರದ ನಾಯಕ – ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಕಾಶಿ ನಿರ್ದೇಶಿಸುತ್ತಿದ್ದಾರೆ.
ಇತ್ತೀಚೆಗೆ ಈ ನೂತನ ಚಿತ್ರದ ಸ್ಕ್ರಿಪ್ಟ್ ಪೂಜೆ ಹಾಗೂ ಶೀರ್ಷಿಕೆ ಅನಾವರಣ ಮಹಾಲಕ್ಷ್ಮಿ ಲೇಔಟ್ ನ ಪಂಚಮುಖಿ ದೇವಸ್ಥಾನದಲ್ಲಿ ನೆರವೇರಿತು. ನಟ ಶ್ರೀಮುರಳಿ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದರು. ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ “ಎಲ್ಲಾ ನಿನಗಾಗಿ” ಎಂದು ಹೆಸರಿಡಲಾಗಿದೆ. ಮೇ ಎರಡನೇ ವಾರದಲ್ಲಿ ಚಿತ್ರೀಕರಣ ಆರಂಭವಾಗಲಿದೆ.
ಒಂದು ಮನೆ, ಎರಡು ಪಾತ್ರಗಳನ್ನಿಟ್ಟುಕೊಂಡು ಸಿನಿಮಾ ರೂಪಿಸುವುದು ಅಂದರೆ ಸುಲಭದ ಮಾತಲ್ಲ. ಅದೂ ಹತ್ತಕ್ಕೂ ಹೆಚ್ಚು ನಿಮಿಷಗಳ ಸಿಂಗಲ್ ಶಾಟ್ ಗಳನ್ನು ಕಂಪೋಸ್ ಮಾಡೋದು ಕೂಡಾ ಕಷ್ಟದ ಕೆಲಸವೇ. ಆರಂಭದಿಂದಲೂ ಒಂದಲ್ಲಾ ಒಂದು ಕಾರಣಕ್ಕೆ ಕುತೂಹಲ ಹೆಚ್ಚಿಸಿಕೊಂಡು ಬಂದಿರುವ ಚಿತ್ರ ʻಅಥಿʼ. ಹಾಗೆ ನೋಡಿದರೆ, ಕನ್ನಡದಲ್ಲಿ ಗಂಡ-ಹೆಂಡತಿಯ ಸಂಬಂಧದ ಕುರಿತ ಸಾಕಷ್ಟು ಚಿತ್ರಗಳು ಬಂದಿವೆ. ಆದರೆ ʻʻಈವರೆಗೂ ಎಲ್ಲೂ, ಯಾರೂ ಹೇಳಿರದ ಹೊಸ ವಿಚಾರವೊಂದನ್ನು ನಾವಿಲ್ಲಿ ʻಅಥಿʼಯ ಮೂಲಕ ಅನಾವರಣ ಮಾಡುತ್ತಿದ್ದೇವೆʼʼ ಅನ್ನೋದು ಸ್ವತಃ ಚಿತ್ರದ ನಾಯಕನಟರೂ ಆಗಿರುವ, ನಿರ್ದೇಶಕ ಲೋಕೇಂದ್ರ ಸೂರ್ಯ ಅವರ ಮಾತು.
ʻಅಟ್ಟಯ್ಯ ವರ್ಸಸ್ ಹಂದಿ ಕಾಯೋಳುʼ ಎನ್ನುವ ಚಿತ್ರದ ಮೂಲಕ ಅಚ್ಚರಿ ಮೂಡಿಸಿದವರು ಲೋಕೇಂದ್ರ. ಆ ತನಕ ಯಾವ ಚಿತ್ರಗಳಲ್ಲೂ ನಟಿಸದ, ತಮಗೆ ಪರಿಚಿತರಿರುವವರನ್ನೇ ಪಾತ್ರಗಳನ್ನಾಗಿಸಿ, ಸಿನಿಮಾದ ಅನುಭವವೇ ಇರದವರನ್ನು ತಂತ್ರಜ್ಞರನ್ನಾಗಿಸಿ , ಕಾಡುವ ಕತೆಯ, ಚೆಂದದ ಸಿನಿಮಾ ನೀಡಿ ಎಲ್ಲರ ಗಮನ ಸೆಳೆದಿದ್ದರು. ಈ ಚಿತ್ರ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಸೇರಿದಂತೆ ಸಾಕಷ್ಟು ಸಿನಿಮೋತ್ಸವಗಳಲ್ಲಿ ಪ್ರದರ್ಶನಗೊಂಡು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಲೋಕೇಂದ್ರ ಅವರೇ ರೂಪಿಸಿರುವ ʻಕುಗ್ರಾಮʼ ಚಿತ್ರ ಕೂಡ ಬಿಡುಗಡೆಗೆ ತಯಾರಾಗಿದೆ.
ಸದ್ಯ ಸೂರ್ಯ ಸಿನಿ ಫ್ಯಾಕ್ಟರಿಯಲ್ಲಿ ʻಅಥಿʼ ಚಿತ್ರಕ್ಕಾಗಿ ಕ್ಯೂಟ್ ಮತ್ತು ರೊಮ್ಯಾಂಟಿಕ್ ಫೋಟೋಶೂಟ್ ಮಾಡಲಾಗಿದೆ. ʻʻಫೋಟೋಗಳು ಎಲ್ಲರನ್ನೂ ಆಕರ್ಷಿಸುವುದರ ಜೊತೆಗೆ ಸಿನಿಮಾ ಕಂಟೆಂಟ್ ಹೇಳುವಂತಿರಬೇಕು ಎನ್ನುವ ಕಾರಣಕ್ಕೆ ಚಿತ್ರೀಕರಣವೆಲ್ಲಾ ಬಹುತೇಕ ಮುಕ್ತಾಯವಾಗುವ ಈ ಹಂತದಲ್ಲಿ ಫೋಟೋ ಶೂಟ್ ಮಾಡಿದ್ದೇವೆ. ಚುನಾವಣೆ ಮುಗಿಯುತ್ತಿದ್ದಂತೇ ಮೇ 13ರ ನಂತರ ʻಅಥಿʼ ಚಿತ್ರದ ಫಸ್ಟ್ ಲುಕ್ ಅನ್ನು ಬಿಡುಗಡೆ ಮಾಡುತ್ತೇವೆʼʼ ಎಂದು ಚಿತ್ರದ ನಿರ್ಮಾಪಕರಾದ ರೆಡ್ ಅಂಡ್ ವೈಟ್ ಸೆವೆನ್ ರಾಜ್ ಅವರು ಹೇಳಿದ್ದಾರೆ.
ನಟಿಯಾಗಿ ಸಾಕಷ್ಟು ಹೆಸರು ಮಾಡಿರುವ ಋತುಚೈತ್ರ ಅವರು ವಸ್ತ್ರವಿನ್ಯಾಸ ಮಾಡಿರುವುದು ಈ ಫೋಟೋಶೂಟ್ನ ಮತ್ತೊಂದು ವಿಶೇಷವಾಗಿದೆ. ಇನ್ನುಳಿದಂತೆ ಸೆವೆನ್ ರಾಜ್ ಆರ್ಟ್ಸ್ ನಿರ್ಮಿಸುತ್ತಿರುವ ಅಥಿ ಐ ಲವ್ ಯುʼ ಚಿತ್ರಕ್ಕೆ ಲೋಕೇಂದ್ರ ಸೂರ್ಯ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುವುದರ ಜೊತೆಗೆ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ಅನಂತ್ ಆರ್ಯನ್ ಸಂಗೀತ ಚಿತ್ರಕ್ಕಿದೆ.
ಎನ್. ಓಂ ಪ್ರಕಾಶ್ ರಾವ್ ಅವರ ಪುತ್ರಿ ಶ್ರಾವ್ಯಾ ರಾವ್ ಅಂದ್ರೆ ಸಾತ್ವಿಕ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಚಿತ್ರದ ಪರದೆಯನ್ನು ಬಹುತೇಕ ಸಾತ್ವಿಕ ಆವರಿಸಿಕೊಂಡಿದ್ದ ಬಿಡುಗಡೆಗೆ ಕಾತರದಲ್ಲಿ ಕಾಯುತ್ತಿರುವುದಾಗಿ ಹೇಳಿದ್ದಾರೆ ಸಾತ್ವಿಕ ಹೇಳಿದ್ದಾರೆ. ಅಲ್ಲದೆ ರೆಡ್ ಅಂಡ್ ವೈಟ್ ಸೆವೆನ್ ರಾಜ್ ಅವರ ನಿರ್ಮಾಣದ ಎರಡನೇ ಚಿತ್ರ ಇದಾಗಿದೆ.
ಮಿತ್ರ ಚಿತ್ರರಂಗದಲ್ಲಿ ಚಿರಪರಿಚಿತ. ಯಾವುದೇ ಪಾತ್ರವಿರಲಿ ಅದ್ಭುತ ಅಭಿನಯ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ತಮ್ಮದೇ ಅಭಿಮಾನಿ ವರ್ಗ ಹೊಂದಿರುವ ಮಿತ್ರ, ಸಿನಿಮಾ ರಂಗದಲ್ಲಿ ಎಲ್ಲರಿಗೂ ಆತ್ಮೀಯ ಮಿತ್ರರೇ ಹೌದು.
ನಟ ಮಿತ್ರ ಅವರ ಬಗ್ಗೆ ಇಷ್ಟೊಂದು ಪೀಠಿಕೆ ಹಾಕೋಕೆ ಕಾರಣ, ‘ರಾಘವೇಂದ್ರ ಸ್ಟೋರ್ಸ್’ ಸಿನಿಮಾ. ಹೌದು, ಹೊಂಬಾಳೆ ಫಿಲಂಸ್ ನಿರ್ಮಾಣದ ಈ ಚಿತ್ರ ರಿಲೀಸ್ ಆಗಿದೆ. ಜಗ್ಗೇಶ್ ಚಿತ್ರದ ಪ್ರಮುಖ ಆಕರ್ಷಣೆ. ಈ ಚಿತ್ರದಲ್ಲಿ ಮಿತ್ರ ಅವರೂ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆ ಪಾತ್ರದ ಮೂಲಕ ನೋಡುಗರ ಮನದಲ್ಲಿ ಗಟ್ಟಿಯಾಗಿ ಬೇರೂರುತ್ತಾರೆ.
ಅವರು ‘ರಾಘವೇಂದ್ರ ಸ್ಟೋರ್ಸ್’ ಸಿನಿಮಾದಲ್ಲಿ ‘ಮೂಗ’ನ ಪಾತ್ರದಲ್ಲಿ ಅತ್ಯದ್ಭುತವಾಗಿ ನಟಿಸಿದ್ದಾರೆ. ಇಡೀ ಚಿತ್ರದಲ್ಲಿ ನೆನಪಲ್ಲಿ ಉಳಿಯೋ ಬೆರಳೆಣಿಕೆ ಪಾತ್ರಗಳ ಪೈಕಿ ಮಿತ್ರ ಅವರು ನಿರ್ವಹಿಸಿರುವ ‘ಕೋಗಿಲೆ’ ಎಂಬ ಮೂಗನ ಪಾತ್ರವೂ ಒಂದು.
ತೆರೆ ಮೇಲೆ ಉದ್ದುದ್ದ, ಮಾಸ್ ಡೈಲಾಗ್, ಕಾಮಿಡಿ ಡೈಲಾಗ್ ಹೇಳಿ ಗುರುತಿಸಿಕೊಳ್ಳೋದೆ ಕಷ್ಟ. ಆದರೆ, ಮಾತೇ ಬಾರದ ಪಾತ್ರದ ಮೂಲಕ ಆ ಸನ್ನಿವೇಶಕ್ಕೆ ತಕ್ಕಂತೆ ಪಾತ್ರದೊಳಗೆ ತಲ್ಲೀನರಾಗಿ ನೋಡುಗರನ್ನು ನಗಿಸುವುದಿದೆಯಲ್ಲ, ಅದು ನಿಜಕ್ಕೂ ವಿಶೇಷವೇ ಸರಿ. ಮಿತ್ರ ಅದನ್ನಿಲ್ಲಿ ಸಾಧ್ಯವಾಗಿಸಿದ್ದಾರೆ.
ನಟ ಮಿತ್ರ ಅವರು ರಂಗಭೂಮಿಯ ಅಪಾರ ನಂಟು ಹೊಂದಿದವರು, ನವರಸಗಳನ್ನು ಮೈದುಂಬಿಸಿಕೊಂಡವರು. ಹಾಗಾಗಿ ಅವರು ಯಾವ ಪಾತ್ರವೇ ಇರಲಿ ಸಲೀಸಾಗಿ ಪ್ರೇಕ್ಷಕರನ್ನು ನಗಿಸುವ ಜಾಣೇಶರಾದವರು.
ರಾಘವೇಂದ್ರ ಸ್ಟೋರ್ಸ್ ಸಿನಿಮಾ ನೋಡಿದವರಿಗೆ ಮಿತ್ರ ಅವರ ಕೋಗಿಲೆ ಹೆಸರಿನ ಮೂಗನ ಪಾತ್ರ ಕಾಡದೇ ಇರದು. ನಗಿಸುತ್ತಲೇ ಕೊಂಚ ಭಾವುಕತೆಗೂ ದೂಡುವ ಪಾತ್ರದಲ್ಲಿ ಸೈ ಎನಿಸಿಕೊಂಡು, ನೋಡುಗರ ಚಪ್ಪಾಳೆ, ಶಿಳ್ಳೆಗೆ ಪಾತ್ರರಾಗುತ್ತಾರೆ.
ಜಗ್ಗೇಶ್ ಮೆಚ್ಚಿದ ಮಿತ್ರ!
ಸಾಮಾನ್ಯವಾಗಿ ಕಲಾವಿದರ ನಡುವೆ, ನಟರ ಮಧ್ಯೆ ಎಲ್ಲವೂ ಸರಿ ಇರಲ್ಲ. ಅದರಲ್ಲೂ ಒಬ್ಬರನ್ನು ಮೆಚ್ಚುವ ಮಾತು ದೂರ. ಆದರೆ, ನಟ ಜಗ್ಗೇಶ್ ಅವರು ಮಾತ್ರ, ಮಿತ್ರ ಅವರ ಮೂಗನ ಪಾತ್ರದ ಬಗ್ಗೆ ಕೊಂಡಾಡಿದ್ದಾರೆ. ನಿರ್ದೇಶಕರ ಆಯ್ಕೆ ಸರಿಯಾಗಿದೆ ಎಂದು ಮೆಚ್ಚಿದ್ದಾರೆ. ಮಿತ್ರ ಮೂಗನಾಗಿ ಅದ್ಭುತವಾಗಿ ನಟಿಸಿದ್ದು, ಇಪ್ಪತ್ತು ವರ್ಷವಾದರೂ ನೆನಪಲ್ಲುಳಿಯೋ ಪಾತ್ರವದು’ ಎಂದು ಮಿತ್ರ ಅವರ ಅಭಿನಯದ ಬಗ್ಗೆ ಜಗ್ಗೇಶ್ ಕೊಂಡಾಡಿದ್ದಾರೆ.
ಮಿತ್ರ ಈಗಾಗಲೇ ತಾನೊಬ್ಬ ಪರ್ಫೆಕ್ಟ್ ಪರ್ಫಾಮರ್ ಅಂತ ಸಾಬೀತುಪಡಿಸಿದ್ದಾರೆ. ‘ರಾಗ’ ಎಂಬ ಕಲರ್ ಫುಲ್‌ಸಿನಿಮಾ ಮೂಲಕ ನಿರ್ಮಾಪಕರಾಗಿ ಅಷ್ಟೇ ಅಲ್ಲ, ಅಲ್ಲಿ ಅಂಧ ಪಾತ್ರಧಾರಿಯಾಗಿಯೂ ಮಿಂಚಿದವರು. ಸರ್ಕಾರ ಗುರುತಿಸಿ ಅವಾರ್ಡ್ ಕೊಡುವಷ್ಟರ ಮಟ್ಟಿಗೆ ಮಿತ್ರ ಪಾತ್ರದಲ್ಲಿ ಮಿಂದೆದ್ದವರು. ರಾಗ ಸಿನಿಮಾದ ಪಾತ್ರ ಒಂದು ಮೈಲಿಗಲ್ಲು ಸೃಷ್ಠಿಸಿದ್ದಂತೂ ಸುಳ್ಳಲ್ಲ. ಈಗ ಮೂಗನಾಗಿ ಅಭಿನಯಿಸಿರುವ ಮಿತ್ರ ಮತ್ತೆ ಪುಟಿದೆದ್ದಿದ್ದಾರೆಂದರೆ ಅತಿಶಯೋಕ್ತಿಯೇನಲ್ಲ.
ರಾಯರೇ ಆಶೀರ್ವದಿಸಿದರು!
ರಾಗ ಸಿನಿಮಾ ಬಳಿಕ ಮಿತ್ರ ಅವರ ಅಭಿನಯದ ಸಿನಿಮಾಗಳು ಕ್ರಮೇಣ ಕಡಿಮೆಯಾದವು. ಕಡಿಮೆ ಆದವು ಎನ್ನುವುದಕ್ಕಿಂತ ಅವರು ಚ್ಯೂಸಿಯಾದರು. ಕಥೆ ಹಾಗು ಗಟ್ಟಿ ಪಾತ್ರದತ್ತ ಗಮನ ಹರಿಸಿದರು. ಗುಣಮಟ್ಟದ ಸಿನಿಮಾ ಮೂಲಕ ಕಾಣಿಸಿಕೊಂಡರೂ ಎಲ್ಲೋ ಒಂದು ಕಡೆ ಹೇಳಿಕೊಳ್ಳುವ ಯಶಸ್ಸು ಸಿಗಲಿಲ್ಲ. ಒಂದು ಕಡೆ ರಾಗ ಎಂಬ ಕ್ಲಾಸಿಕ್ ಸಿನಿಮಾ ನಿರ್ಮಾಣ ಮಾಡಿ ಭೇಷ್ ಎನಿಸಿಕೊಂಡರೂ, ಹಾಕಿದ ಹಣ ಹಿಂದಿರುಗಲಿಲ್ಲ.
ಮಿತ್ರ ಅವರು ಸಿನಿಮಾ ಮೇಲಿನ ಪ್ರೀತಿಗಾಗಿ ಕೋಟಿ ಕೋಟಿ ಹಾಕಿ ರಾಗ ಸೃಷ್ಟಿಸಿದರೂ, ಬದುಕಲ್ಲಿ ಅದು ಅನುರಾಗ ಆಗಲಿಲ್ಲ. ಅಲ್ಲಿಂದ ಬರೀ ಭಾವುಕ ರಾಗವೇ ಕೇಳತೊಡಗಿತು. ಎಲ್ಲಾ ಕಲಾವಿದರಂತೆ ಮಿತ್ರ ಏಳು-ಬೀಳು ಕಂಡವರು. ಒಂದೊಳ್ಳೆಯ ಅವಕಾಶ ಎದುರು ನೋಡುತ್ತಿದ್ದ ಅವರಿಗೆ ಸ್ವತಃ ರಾಯರೇ ಆಶೀರ್ವಾದ ಮಾಡಿದ್ದಾರೆ.
ರಾಘವೇಂದ್ರ ಸ್ಟೋರ್ಸ್ ಸಿನಿಮಾದಲ್ಲೊಂದು ವಿಶೇಷ ಪಾತ್ರ ಅವರ ಪಾಲಾಯಿತು. ಸಿಕ್ಕ ಅವಕಾಶವನ್ನು ಮಿತ್ರ ಮಿಸ್ ಮಾಡಿಕೊಳ್ಳಲಿಲ್ಲ. ಮೂಗನ ಪಾತ್ರದ ಮೂಲಕ ಅವರು ಮತ್ತೆ ಸ್ಟಡಿಯಾಗಿದ್ದಾರೆ. ಎಂಥಾ ಪಾತ್ರಕ್ಕೂ ಸೈ ಅಂತ ಮತ್ತೆ ತೋರಿಸಿದ್ದಾರೆ. ಸದ್ಯ ಚಿತ್ರಕ್ಕೆ ಒಳ್ಳೆಯ ಮಾತುಗಳು ಕೇಳಿ ಬರುತ್ತಿವೆ. ಜಗ್ಗೇಶ್ ಅಭಿನಯ ಜೊತೆ ಮಿತ್ರ ಅವರ ನಟನೆಯನ್ನೂ ಜನರು ಗುರುತಿಸುತ್ತಿದ್ದಾರೆ. ತೆರೆ ಮೇಲೆ ನಗಿಸುತ್ತಿದ್ದ ಮಿತ್ರ ಅವರ ಮೊಗದಲ್ಲೀಗ ಬೊಗೆದಷ್ಟೂ ಮಂದಹಾಸ ಮೂಡುತ್ತಿದೆ.
ಸ್ಯಾಂಡಲ್ ವುಡ್ ನಲ್ಲಿ ಸೂಪರ್ ಹಿಟ್ ಸಿನಿಮಾಗಳ ಟೈಟಲ್ ಮರುಬಳಕೆ ಆಗುವುದು ಹೊಸತೆನಲ್ಲ. ಈಗ ಡೈನಾಮಿಕ್ ಸ್ಟಾರ್ ದೇವರಾಜ್ ನಟನೆಯ ‘ಹುಲಿಯಾ’ ಶೀರ್ಷಿಕೆ ಮರುಬಳಕೆ ಮಾಡಿಕೊಂಡು ಹೊಸ ಚಿತ್ರವೊಂದು ತಯಾರಾಗುತ್ತಿದೆ. ತೂತುಮಡಿಕೆ ಸಿನಿಮಾ ಮೂಲಕ ಭರವಸೆ ಮೂಡಿಸಿದ್ದ ಯುವ ನಿರ್ದೇಶಕ ಕಂ ನಟ ಚಂದ್ರಕೀರ್ತಿ ಎರಡನೇ ಹೆಜ್ಜೆಗೆ ‘ಹುಲಿಯಾ’ ಎಂಬ ಟೈಟಲ್ ಇಡಲಾಗಿದೆ. ದೇವರಾಜ್ ಅವರ ಆಶೀರ್ವಾದೊಂದಿಗೆ ಶುರುವಾಗುತ್ತಿರುವ ಈ ಸಿನಿಮಾದ ಫಸ್ಟ್ ಲುಕ್ ಹಾಗೂ ಟೈಟಲ್ ಪೋಸ್ಟರ್ 50ಕ್ಕೂ ಹೆಚ್ಚು ಸೆಲೆಬ್ರಿಟಿಗಳಿಂದ ಏಕಕಾಲಕ್ಕೆ ಬಿಡುಗಡೆಯಾಗಿದೆ.
ಸಿಲಿಕಾನ್ ಸಿಟಿ, ಕಿಸ್, ಮೂಕವಿಸ್ಮಿತ, ಬೆಂಕಿ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿರುವ ಚಂದ್ರಕೀರ್ತಿ ತೂತುಮಡಿಕೆ ಸಿನಿಮಾ ಮೂಲಕ ನಿರ್ದೇಶಕರಾಗಿ ಬಡ್ತಿ ಪಡೆದಿದ್ದರು. ಮೊದಲ ಚಿತ್ರದಲ್ಲಿಯೇ ಗಮನಸೆಳೆದಿದ್ದ ಅವರಿಗೆ ಹುಲಿಯಾ ಮೂಲಕ ಲವ್ ಹಾಗೂ ಆಕ್ಷನ್ ಕಥೆಯನ್ನು ಆಯ್ಕೆ ಮಾಡಿಕೊಂಡು ಪ್ರೇಕ್ಷಕರನ್ನು ರಂಜಿಸಲು ಅಣಿಯಾಗುತ್ತಿದ್ದಾರೆ.
ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುವುದರ ಜೊತೆಗೆ ಚಂದ್ರಕೀರ್ತಿ ನಾಯಕನಾಗಿಯೂ ನಟಿಸುತ್ತಿದ್ದಾರೆ. ಹುಲಿಯಾ ಪೋಸ್ಟರ್ ನಲ್ಲಿ ಅವರು ಸಖತ್ ರಗಡ್ ಆಗಿ ಕಾಣಿಸಿಕೊಂಡಿದ್ದಾರೆ. ತೂತುಮಡಿಕೆ ಸಿನಿಮಾ ನಿರ್ಮಾಣ ಮಾಡಿದ್ದ ಸರ್ವತಾ ಸಿನಿ ಗ್ಯಾರೇಜ್, ಮಧು ರಾವ್ ಹಾಗೂ ವಸಂತ್ ವಲ್ಲಭ್ ಈ ಚಿತ್ರಕ್ಕೆ ಹಣ ಹಾಕುತ್ತಿದ್ದಾರೆ.
ಸ್ವಾಮಿನಾಥನ್ ಆರ್ ಕೆ ಸಂಗೀತ, ಭಜರಂಗಿ, ವೇದ ಹಾಗೂ ಬೆಲ್ ಬಾಟಂ ಸಂಭಾಷಣೆಗಾರ ರಘು ನಿಡುವಳ್ಳಿ ಮಾತು ಚಿತ್ರಕ್ಕಿದೆ. ಟೈಟಲ್ ಹಾಗೂ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಮಾಡಿರುವ ಹುಲಿಯಾ ಚಿತ್ರತಂಡ ಶೀಘ್ರದಲ್ಲಿ ಉಳಿದ ತಾಂತ್ರಿಕ ಹಾಗೂ ತಾರಾಬಳಗ ಬಗ್ಗೆ ಮಾಹಿತಿ ನೀಡಲಿದೆ.
ಕಿರುತೆರೆಯ ಜನಪ್ರಿಯ ಧಾರಾವಾಹಿಗಳ ನಿರ್ದೇಶಕ ವಿನು ಬಳಂಜ “ಬೇರ” ಚಿತ್ರ ನಿರ್ದೇಶಿಸುವ ಮೂಲಕ ಹಿರಿತೆರೆಗೆ ಪಾದಾರ್ಪಣೆ ಮಾಡಿದ್ದಾರೆ. ಎಸ್ ಎಲ್ ವಿ ಕಲರ್ಸ್ ಲಾಂಛನದಲ್ಲಿ ದಿವಾಕರ ದಾಸ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ಇತ್ತೀಚೆಗೆ ಈ ಚಿತ್ರದ ಟೀಸರ್ ಬಿಡುಗಡೆಯಾಯಿತು. ಚಿತ್ರತಂಡದ ಸದಸ್ಯರು “ಬೇರ” ಚಿತ್ರದ ಕುರಿತು ಮಾತನಾಡಿದರು.
ಕಳೆದ ನಾಲ್ಕೈದು ವರ್ಷ ನಾನು ವೈಯಕ್ತಿಕ ಕಾರಣದಿಂದ ಕಿರುತೆರೆ ಹಾಗೂ ಹಿರಿತೆರೆಯಿಂದ ದೂರವಿದ್ದೆ. ಆನಂತರ ಒಂದು ಮ್ಯೂಸಿಯಂ ಗೆ ಹೋದೆ. ಅಲ್ಲೇ ಈ ಕಥೆ ಹುಟ್ಟಿದ್ದು. ಆನಂತರ ಮತ್ತೆ ನನ್ನನ್ನು ಸಿನಿಮಾ ಮಾಡಲು ಪ್ರೇರೇಪಿಸಿದ್ದು ನಿರ್ಮಾಪಕ ದಿವಾಕರ್. ತುಳುವಿನಲ್ಲಿ “ಬೇರ” ಎಂದರೆ ಕನ್ನಡದಲ್ಲಿ ವ್ಯಾಪಾರ ಎಂದು ಅರ್ಥ.
ಅಮಾಯಕರನ್ನು ಬಳಸಿಕೊಂಡು ಹೇಗೆ ನಾಯಕರಾಗುತ್ತಾರೆ ಹಾಗೂ “ಯಾವ ತಾಯಂದ್ರ ಮಕ್ಕಳೂ ಇನ್ನೊಬ್ರಿಂದಾಗಿ ಸಾಯ್ಬಾರ್ದು” ಎಂಬುದೇ ಕಥಾಹಂದರ. ಈ ಚಿತ್ರದಲ್ಲಿ ನಾಯಕ, ನಾಯಕಿ ಅಂತ ಇಲ್ಲ. ಬರುವ ಎಲ್ಲಾ ಪಾತ್ರಗಳು ಮುಖ್ಯ ಪಾತ್ರಗಳಾಗಿರುತ್ತದೆ. ಸದ್ಯ ಟೀಸರ್ ಬಿಡುಗಡೆ ಮಾಡಿದ್ದೇವೆ. ಮೇ ಅಂತ್ಯಕ್ಕೆ ಚಿತ್ರವನ್ನು ತೆರೆಗೆ ತರುವ ಯೋಜನೆ ಇದೆ ಎಂದು ನಿರ್ದೇಶಕ ವಿನು ಬಳಂಜ ತಿಳಿಸಿದರು.
ಕೇವಲ ಮೂರು ಜನ ಕೆಲಸಗಾರರಿಂದ ಶುರುವಾದ ಎಸ್ ಎಲ್ ವಿ ಸಂಸ್ಥೆಯಲ್ಲಿ ಇಂದು ನೂರೈವತ್ತು ಜನ ಕೆಲಸಗಾರರಿದ್ದಾರೆ. ಈಗ ಎಸ್ ಎಲ್ ವಿ ಕಲರ್ಸ್ ಲಾಂಛನದಲ್ಲಿ “ಬೇರ” ಎಂಬ ಮೊದಲ ಚಿತ್ರ ನಿರ್ಮಾಣ ಮಾಡಿದ್ದೇವೆ. ಈ ಚಿತ್ರಕ್ಕೆ ನಿಮ್ಮ ಹಾರೈಕೆ ಇರಲಿ ಎಂದರು ನಿರ್ಮಾಪಕ ದಿವಾಕರ ದಾಸ.
ವಿನು ಬಳಂಜ ಅವರ ನಿರ್ದೇಶನದಲ್ಲಿ ಕೆಲಸ ಮಾಡಿದ್ದ ಖುಷಿಯಿದೆ. ನಮ್ಮ ಪಾತ್ರ ಕೂಡ ಚೆನ್ನಾಗಿದೆ ಎಂದರು ಚಿತ್ರದಲ್ಲಿ ನಟಿಸಿರುವ ದತ್ತಣ್ಣ, ಯಶ್ ಶೆಟ್ಟಿ, ಹರ್ಷಿಕಾ ಪೂಣಚ್ಛ, ಅಶ್ವಿನ್ ಹಾಸನ್, ಚಿತ್ಕಲ ಬಿರಾದಾರ್, ಮಂಜುನಾಥ್ ಹೆಗಡೆ, ಗುರು ಹೆಗಡೆ, ರಾಕೇಶ್ ಮಯ್ಯ, ಧವಳ್ ದೀಪಕ್ ಮುಂತಾದವರು. ಛಾಯಾಗ್ರಹಕ ರಾಜಶೇಖರ್ ಹಾಗೂ ಕಾರ್ಯಕಾರಿ ನಿರ್ಮಾಪಕ ರಾಮದಾಸ ಶೆಟ್ಟಿ ಕೂಡ “ಬೇರ” ಚಿತ್ರದ ಕುರಿತು ಮಾತನಾಡಿದರು.
ಜೀವನದಲ್ಲಿ ಯಾರಿಗೆ ಯಾವಾಗ “ಲಕ್” ಬರತ್ತೆ ಹೇಳಲಿಕ್ಕೆ ಆಗಲ್ಲ. ಕಳೆದ 9 ವರ್ಷಗಳಿಂದ ಕ್ಯಾರಾವ್ಯಾನ್ ಚಾಲಕನಾಗಿ ಕಾರ್ಯನಿರ್ವಹಿಸುತ್ತಿರುವ ಕ್ಯಾರಾವ್ಯಾನ್ ಸ್ಟಾರ್ ಸ್ಮೈಲ್ ಮಂಜು ಅವರು “ಲಕ್” ಚಿತ್ರದ ನಾಯಕನಾಗಿ ಅಭಿನಯಿಸಿದ್ದಾರೆ ಜೊತೆಗೆ ನಿರ್ಮಾಣವನ್ನು ಮಾಡಿದ್ದಾರೆ. ಇತ್ತೀಚೆಗೆ ಈ ಚಿತ್ರದ “90 ಕುಡಿ ಮಗ ಪಲ್ಟಿ ಹೊಡಿ” ಎಂಬ ಹಾಡಿನ ಲಿರಿಕಲ್ ವಿಡಿಯೋ ಬಿಡುಗಡೆಯಾಯಿತು. ಅಪ್ಪಿ ಹಾಗೂ ಹರೀಶ್ ಬರೆದಿರುವ ಈ ಹಾಡನ್ನು ನವೀನ್ ಸಜ್ಜು ಹಾಡಿದ್ದಾರೆ. ವಿಜಯ್ ಹರಿತ್ಸ ಸಂಗೀತ ನೀಡಿದ್ದಾರೆ.
ಚಿತ್ರಕ್ಕೆ ಮೊದಲೊಬ್ಬ ನಿರ್ದೇಶಕರಿದ್ದರು. ಹಾಗೆ ನಾಯಕರೂ ಬೇರೆಯೇ ಇದ್ದರು. ಅನಿವಾರ್ಯ ಕಾರಣದಿಂದ ಅವರು ಚಿತ್ರದಿಂದ ದೂರವಾದಾಗ ಈ ಚಿತ್ರಕ್ಕೆ ನಾನು ನಿರ್ದೇಶಕನಾದೆ. ಮಂಜು ನಾಯಕನಾದರು. ನನ್ನ ಜೀವದಲ್ಲೇ ನಡೆದಿರುವ ಘಟನೆಯನ್ನು ಸಿನಿಮಾ ರೂಪದಲ್ಲಿ ಆಚೆ ತರುತ್ತಿದ್ದೇನೆ. ಈಗಾಗಲೇ ಬಹುತೇಕ ಚಿತ್ರೀಕರಣ ಮುಕ್ತಾಯವಾಗಿದೆ. ಡಾಲಿ ಧನಂಜಯ್ ಅವರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆ ಭಾಗದ ಚಿತ್ರೀಕರಣ ಮಾತ್ರ ಬಾಕಿಯಿದೆ. ಇದು ಒಂದು ದಿನ, ಅದರಲ್ಲೂ ಕೆಲವೇ ಗಂಟೆಗಳಲ್ಲಿ ನಡೆಯುವ ಕಥೆಯಾಗಿದೆ. ಪದ್ಮಜಾರಾವ್, ಕಡ್ಡಿಪುಡಿ ಚಂದ್ರು ಮುಂತಾದವರು ತಾರಾಬಳಗದಲ್ಲಿದ್ದಾರೆ. ಎಂದು ನಿರ್ದೇಶಕ ಹರೀಶ್ ಮಾಹಿತಿ ನೀಡಿದರು.
ನಾನು ಒಂಭತ್ತು ವರ್ಷಗಳಿಂದ ಕ್ಯಾರಾವ್ಯಾನ್ ಓಡಿಸುತ್ತಿದ್ದೇನೆ. ಗೋಲ್ಡನ್ ಸ್ಟಾರ್ ಗಣೇಶ್, ಡಾಲಿ ಅವರ ಕ್ಯಾರಾವ್ಯಾನ್ ಗೆ ನಾನೇ ಚಾಲಕ. ಸಿನಿಮಾ ಮಾಡುವ ಆಸೆಯಿತ್ತು. ದುಡಿದ ಹಣ ಹಾಗೂ ಜಮೀನು ಮಾರಿದ ಹಣ ಎರಡೂ ಸೇರಿಸಿ ಈ ಚಿತ್ರ ನಿರ್ಮಾಣ ಮಾಡಿದ್ದೇನೆ ಜೊತೆಗೆ ನಾಯಕನಾಗೂ ಅಭಿನಯಿಸಿದ್ದೇನೆ.
ನನ್ನ ಮೇಲೆ ಪ್ರೀತಿಯಿಟ್ಟು ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಅವರು ಸೇರಿದಂತೆ ಚಿತ್ರರಂಗದ ಅನೇಕ ನಾಯಕರು ಪೋಸ್ಟರ್ ಬಿಡುಗಡೆ ಮಾಡಿ ಶುಭ ಕೋರಿದ್ದಾರೆ. ಚಿತ್ರತಂಡದ ಸಹಕಾರಕ್ಕೆ ಧನ್ಯವಾದ ಎಂದರು ನಾಯಕ ಹಾಗೂ ನಿರ್ಮಾಪಕ ಕ್ಯಾರಾವ್ಯಾನ್ ಸ್ಟಾರ್ ಸ್ಮೈಲ್ ಮಂಜು.
ಚಿತ್ರದ ಪ್ರಮುಖಪಾತ್ರದಲ್ಲಿ ನಟಿಸಿರುವ ರೇಣು ಹಾಡು ಬರೆದಿರು ಅಪ್ಪಿ ಹಾಗೂ ಸಂಗೀತ ನಿರ್ದೇಶಕ ವಿಜಯ್ ಹರಿತ್ಸ ಚಿತ್ರದ ಕುರಿತು ಮಾತನಾಡಿದರು.
ಕಿಚ್ಚ ಸುದೀಪ್ ಬಿಜೆಪಿ ಪರ ಪ್ರಚಾರ ಮಾಡುವುದಾಗಿ ಘೋಷಿಸಿದ್ದು ಗೊತ್ತೇ ಇದೆ. ಆದರೆ, ಅದೇಕೋ ಇದ್ದಕ್ಕಿದ್ದಂತೆ ಪ್ರಚಾರ ಕಾರ್ಯವನ್ನು ಸ್ಥಗಿತಗೊಳಿಸಿದ್ದಾರೆ ಸುದೀಪ್. ಬಿಜೆಪಿ ಕಿಚ್ಚನಿಗೆ ಕೊಟ್ಟ ಮಾತೇನಾದರೂ ತಪ್ಪಿತಾ? ಡಿಕೆ ಶಿವಕುಮಾರ್ ಹೇಳಿಕೆಗೂ ಈ ಸ್ಥಗಿತಕ್ಕೂ ಸಂಬಂಧವೇನು? ಹಾಗಾದರೆ, ಸುದೀಪ್ ಕಾಂಗ್ರೆಸ್ ಪರ ಪ್ರಚಾರ ಮಾಡ್ತಾರಾ?
ಅದೆಲ್ಲಾಸರಿ, ಸುದೀಪ್ ಸದಾ ಮಾತಿಗೆ ಬದದ್ದರಾದವರು. ಆದರೆ ದಿಢೀರನೆ ಪ್ರಚಾರ ನಿಲ್ಲಿಸಿದ್ದೇಕೆ. ಅದಕ್ಕೆ ಉತ್ತರವಿಲ್ಲ. ಆದರೆ ಸುದೀಪ್ ಮನಸ್ಸಿಗೆ ಬಿಜೆಪಿ ಏನಾದರೂ ನೋವುಂಟು ಮಾಡಿತಾ?
ದಿನಕ್ಕೆ ಐದಾರು ಕ್ಷೇತ್ರಗಳಲ್ಲಿ ಬಿಡುವಿಲ್ಲದೆಯೇ ಪ್ರಚಾರ ಮಾಡುತ್ತಿದ್ದ ಕಿಚ್ಚ ಸುದೀಪ್, ದಿಢೀರನೆ ಪ್ರಚಾರ ನಿಲ್ಲಿಸಿ ಬೆಂಗಳೂರಿಗೆ ವಾಪಾಸ್ ಆಗಿದ್ದು ಯಾಕೆ ಎಂಬ ಪ್ರಶ್ನೆ ಈಗ ಎಲ್ಲರಲ್ಲೂ ಕಾಡುತ್ತಿದೆ.
ನಾನು ಬೊಮ್ಮಾಯಿ ಮಾಮನ ಪರವಾಗಿ ಮಾತ್ರ ಪ್ರಚಾರ ಮಾಡುತ್ತೇನೆ ಎಂದು ಘೋಷಣೆ ಮಾಡಿದಂತೆ ಸುದೀಪ್ ಬಿಜೆಪಿ ಪಕ್ಷದ ಪರ ಪ್ರಚಾರಕ್ಕೆ ನಿಂತರು. ಶಿಗ್ಗಾವಿ ಸೇರಿದಂತೆ 18 ಕ್ಷೇತ್ರ ಸುತ್ತಾಡಿ ಲಕ್ಷಾಂತರ ಅಭಿಮಾನಿಗಳ ನಡುವೆ ಹಗಲು ರಾತ್ರಿ ಪ್ರಚಾರ ಮಾಡಿದರು. ಆದರೆ ಬಿಜೆಪಿ ಪಕ್ಷ ಎಡವಿದ್ದು ಎಲ್ಲಿ? ಸುದೀಪ್ ಅವರ ಮನಸ್ಸನ್ನು ಬಿಜೆಪಿ ನೋಯಿಸಿತಾ?
ಖುದ್ದಾಗಿ ಕಾಂಗ್ರೆಸ್ ಅಭ್ಯರ್ಥಿ ಗಳೇ ನಮ್ಮ ಭಾಗಕ್ಕೆ ಬಂದು ಬಿಜೆಪಿ ಪರ ಪ್ರಚಾರ ಮಾಡಬೇಡಿ ಎಂದು ಕೇಳಿದ್ದುಂಟು. ಹಾಗಾಗಿಯೇ ಕಿಚ್ಚ ನವಲಗುಂದ, ಗದಗಕ್ಕೆ ಪ್ರಚಾರ ಮಾಡಲು ಹೋಗದೆ ಹಿಂದಿರುಗಿದರು ಯಾಕೆ ಎಂಬ ಪ್ರಶ್ನೆ ಎದ್ದಿದೆ. ಡಿ.ಕೆ.ಶಿವಕುಮಾರ್ ಪಕ್ಷ ಪರ ಕಿಚ್ಚ ಪ್ರಚಾರಕ್ಕೇನಾದರೂ ಇಳಿಯುತ್ತಾರಾ ಕಾದು ನೋಡಬೇಕು.
ತೆಲುಗು ನಟ ನರೇಶ್ ಹಾಗೂ ಕನ್ನಡದ ಖ್ಯಾತ ನಟಿ ಪವಿತ್ರಾ ಲೋಕೇಶ್ ನಟನೆಯ ಮತ್ತೆ ಮದುವೆ ಸಿನಿಮಾದ ಮೊದಲ ಹಾಡು ಬಿಡುಗಡೆಯಾಗಿದೆ. ಇತ್ತೀಚೆಗಷ್ಟೇ ಟೀಸರ್ ಮೂಲಕ ಸದ್ದು ಮಾಡಿದ್ದ ಈ ಚಿತ್ರದ ಉರುಳೋ ಕಾಲವೇ ಎಂಬ ಗಾನಲಹರಿ ಅನಾವರಣಗೊಂಡಿದೆ.
ವರದರಾಜು ಚಿಕ್ಕಬಳ್ಳಾಪುರ ಸಾಹಿತ್ಯ ಬರೆದಿರುವ ಹಾಡಿಗೆ ಸಂತೋಷ್ ವೆಂಕಿ ದನಿಯಾಗಿದ್ದಾರೆ. ನರೇಶ್ ಹಾಗೂ ಪವಿತ್ರಾ ಲೋಕೇಶ್ ಉರುಳೋ ಕಾಲವೇ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ.
ಪ್ರತಿಷ್ಠಿತ ವಿಜಯ ಕೃಷ್ಣ ಮೂವೀಸ್ ಬ್ಯಾನರ್ ನಡಿ ನರೇಶ್ ನಿರ್ಮಾಣ ಮಾಡಿರುವ ಮತ್ತೆ ಮದುವೆ ಚಿತ್ರಕ್ಕೆ ಎಂ. ಎಸ್. ರಾಜು ಆಕ್ಷನ್ ಕಟ್ ಹೇಳಿದ್ದಾರೆ. ಇದೊಂದು ಫ್ಯಾಮಿಲಿ ಎಂಟರ್ಟೈನ್ಮೆಂಟ್ ಸಿನಿಮಾವಾಗಿದ್ದು ಎಂ.ಎಸ್. ರಾಜು ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಜಯಸುಧ ಮತ್ತು ಶರತ್ ಬಾಬು ಚಿತ್ರದ ಪ್ರಮುಖ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ.
ವನಿತ ವಿಜಯಕುಮಾರ್, ಅನನ್ಯ ನಾಗೆಲ್ಲ, ರೋಶನ್, ರವಿವರ್ಮ, ಅನ್ನಪೂರ್ಣ, ಭದ್ರಂ, ಯುಕ್ತ, ಪ್ರವೀಣ್ ಯಂಡಮುರಿ ಹಾಗೂ ಮಧೂ ಒಳಗೊಂಡ ಬಹು ದೊಡ್ಡ ತಾರಾಬಳಗ ಚಿತ್ರದಲ್ಲಿದೆ. ಸುರೇಶ್ ಬೊಬ್ಬಿಲಿ ಸಂಗೀತ ನಿರ್ದೇಶನ, ಅರುಲ್ ದೇವ್ ಹಿನ್ನೆಲೆ ಸಂಗೀತ, ಎಂ.ಎನ್ ಬಾಲ್ ರೆಡ್ಡಿ ಕ್ಯಾಮೆರಾ ವರ್ಕ್, ಜುನೈದ್ ಸಿದ್ದಿಕಿ ಸಂಕಲನ, ಅನಂತ ಶ್ರೀರಾಮ್ ಸಾಹಿತ್ಯ ಚಿತ್ರಕ್ಕಿದೆ.
ಟೀಸರ್ ಮೂಲಕ ಸಂಚಲನ ಸೃಷ್ಟಿಸುತ್ತಿರುವ ಮತ್ತೆ ಮದುವೆ ಕನ್ನಡ ಹಾಗೂ ತೆಲುಗು ಎರಡು ಭಾಷೆಯಲ್ಲಿ ಮೂಡಿಬರ್ತಿದ್ದು, ಮೇ ತಿಂಗಳಲ್ಲಿ ಥಿಯೇಟರ್ ಅಂಗಳ ಪ್ರವೇಶಿಸಲಿದೆ.
ಶಿವರಾಜಕುಮಾರ್, ಉಪೇಂದ್ರ, ರಾಜ್ ಬಿ. ಶೆಟ್ಟಿ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿರುವ ‘45’ ಚಿತ್ರದ ಮುಹೂರ್ತ ಮೈಸೂರಿನಲ್ಲಿ ನೆರವೇರಿದೆ. ದೇವರ ಮೇಲೆ ಚಿತ್ರೀಕರಿಸಲಾದ ಮೊದಲ ದೃಶ್ಯಕ್ಕೆ ಗೀತಾ ಶಿವರಾಜಕುಮಾರ್ ಕ್ಲಾಪ್ ಮಾಡುವ ಮೂಲಕ ಚಿತ್ರಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಚಿತ್ರರಂಗದ ಅನೇಕ ಕಲಾವಿದರು, ತಂತ್ರಜ್ಞರು, ಗಣ್ಯರು ಹಾಜರಿದ್ದು ಚಿತ್ರತಂಡಕ್ಕೆ ಶುಭ ಕೋರಿದರು. ‘45’ ಚಿತ್ರವನ್ನು ಸೂರಜ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಎಂ. ರಮೇಶ್ ರೆಡ್ಡಿ ನಿರ್ಮಿಸುತ್ತಿದ್ದು, ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ. ಈ ಚಿತ್ರಕ್ಕೆ ಅವರೇ ಕಥೆ-ಚಿತ್ರಕಥೆ ಬರೆದು ಸಂಗೀತ ಸಂಯೋಜಿಸಿದ್ದು, ಸತ್ಯ ಹೆಗಡೆ ಛಾಯಾಗ್ರಹಣ ಮಾಡುತ್ತಿದ್ದಾರೆ. ಅನಿಲ್ ಕುಮಾರ್ ಸಂಭಾಷಣೆ ಬರೆದಿದ್ದು, ಕೆ. ಎಂ ಪ್ರಕಾಶ್ ಅವರ ಸಂಕಲನ ಈ ಚಿತ್ರಕ್ಕಿದೆ.
ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶಿವರಾಜಕುಮಾರ್, ‘ಇದೊಂದು ಫಿಲಾಸಫಿಕಲ್ ಎಂಟರ್ ಟೈನರ್ ಎಂದು ಚಿತ್ರವನ್ನು ಬಣ್ಣಿಸುತ್ತಾರೆ. ಕಳೆದ ಒಂದು ವರ್ಷದಿಂದ ಈ ಚಿತ್ರದ ಪ್ರೀ-ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದೆ. ಅರ್ಜುನ್ ಜನ್ಯ ಕಥೆ ಹೇಳಿದಾಗ ತುಂಬಾ ಇಷ್ಟವಾಗಿತ್ತು. ಆ ನಂತರ ಅನಿಮೇಶನ್ ರೂಪದಲ್ಲಿ ಚಿತ್ರವನ್ನು ತೋರಿಸಿದ್ದಾರೆ. ಅವರೊಬ್ಬ ಪ್ರತಿಭಾವಂತ. ಈ ಸಿನಿಮಾದ ನಂತರ ಭಾರತದ ಟಾಪ್ ನಿರ್ದೇಶಕರ ಸಾಲಿನಲ್ಲಿ ಅರ್ಜುನ್ ಜನ್ಯ ಕೂಡ ಒಬ್ಬರಾಗುತ್ತಾರೆ ಎಂಬ ನಂಬಿಕೆಯಿದೆ. ತುಂಬಾ ಪ್ರಬುದ್ಧವಾಗಿರುವ ಪಾತ್ರ ಈ ಚಿತ್ರದಲ್ಲಿದೆ’ ಎಂದರು.
‘ಸಾಮಾನ್ಯವಾಗಿ ನಟರಿಗೆ ನಿರ್ದೇಶಕರು ಚಿತ್ರದ ಕಥೆ ಹೇಳಿದರೆ, ಅರ್ಜುನ್ ಜನ್ಯ ನನಗೆ ಚಿತ್ರವನ್ನೇ ತೋರಿಸಿದರು. ಒಂದು ಚಿತ್ರಕ್ಕೆ ನಾವು ಸಹ ಸಾಕಷ್ಟು ತಯಾರಿ ಮಾಡಿಕೊಳ್ಳುವುದರಿಂದ, ಮೊದಲು ನನ್ನ ತಂಡದ ಬಗ್ಗೆ ನನಗೆ ಹೆಮ್ಮೆ ಇತ್ತು. ಆದರೆ ಅರ್ಜುನ್ ಜನ್ಯ ಮತ್ತು ಅವರ ತಂಡದ ಕೆಲಸ ನೋಡಿ ಆಶ್ಚರ್ಯವಾಯಿತು. ಅವರು ಈ ಚಿತ್ರಕ್ಕೆ ಮಾಡಿಕೊಂಡ ತಯಾರಿ ಅದ್ಭುತ. ಒಬ್ಬ ನಟನಾಗಿ, ಪ್ರೇಕ್ಷಕನಾಗಿ ಸಿನಿಮಾದ ಬಗ್ಗೆ ಸಾಕಷ್ಟು ಕುತೂಹಲ ಮತ್ತು ನಿರೀಕ್ಷೆಯಿದೆ’ ಎಂದು ರಾಜ್ ಬಿ ಶೆಟ್ಟಿ ಹೇಳಿದರು.
‘ಮೊದಲ ಬಾರಿಗೆ ಹೆಸರಾಂತ ಕಲಾವಿದರು ಮತ್ತು ತಂತ್ರಜ್ಞರ ಜೊತೆ ಈ ಸಿನಿಮಾದಲ್ಲಿ ಅಭಿನಯಿಸುತ್ತಿರುವುದಕ್ಕೆ ತುಂಬಾ ಖುಷಿಯಾಗುತ್ತಿದೆ. ಬೋಲ್ಡ್ ಆಗಿರುವಂತ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ’ ಎಂದರು ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿರುವ ಕೌಸ್ತುಭ ಮಣಿ.
ನಿರ್ಮಾಪಕ ರಮೇಶ್ ರೆಡ್ಡಿ ಅವರಿಗೆ ಅರ್ಜುನ್ ಜನ್ಯ ಹೇಳಿದ ಕಥೆ ಬಹಳ ಇಷ್ಟವಾಯಿತಂತೆ. ‘ಚಿತ್ರದ ಘೋಷಣೆಯಾಗಿ ಹಲವು ತಿಂಗಳಾದರೂ ನಿಧಾನಕ್ಕೆ ಸಾಗುತ್ತಿತ್ತು. ಈ ಬಗ್ಗೆ ಅರ್ಜುನ್ ಜನ್ಯ ಅವರನ್ನು ಕೇಳಿದಾಗ, ಅವರು ಅನಿಮೇಶನ್ ಮೂಲಕ ಸಿನಿಮಾ ತೋರಿಸಿದರು. ಚಿತ್ರೀಕರಣ ಶುರುವಾಗುವುದಕ್ಕಿಂತ ಮೊದಲೇ, ಚಿತ್ರ ತೋರಿಸಿದರು. ನಾವು ಅಂದುಕೊಂಡಿರುವುದಕ್ಕಿಂತ ಸಿನಿಮಾ ಚೆನ್ನಾಗಿ ಬರುತ್ತದೆ ಎಂಬ ನಂಬಿಕೆಯಿದೆ’ ಎಂದರು ರಮೇಶ್ ರೆಡ್ಡಿ.
ಕೊನೆಗೆ ಮಾತನಾಡಿದ ಅರ್ಜುನ್ ಜನ್ಯ, ‘ಚಿತ್ರೀಕರಣ ಈಗ ಶುರುವಾಗುತ್ತಿದ್ದರೂ, ಸುಮಾರು 9 ತಿಂಗಳ ಕಾಲ ಪ್ರೀ-ಪ್ರೊಡಕ್ಷನ್ ಕೆಲಸಗಳನ್ನು ಮಾಡಿ ಈಗ ಚಿತ್ರೀಕರಣಕ್ಕೆ ಹೊರಡುತ್ತಿದ್ದೇವೆ. ಮೊದಲು ಶಿವಣ್ಣ ಅವರಿಗೆ ಕಥೆ ಹೇಳಿದಾಗ, ನೀವೇ ಈ ಸಿನಿಮಾ ಮಾಡಿ ಎಂದು ಹುರುದಿಂಬಿಸಿದರು. ಈ ಚಿತ್ರದ ಮೂಲಕ ಒಂದು ದೊಡ್ಡ ಫಿಲಾಸಫಿಯನ್ನು ಸರಳ ರೀತಿಯಲ್ಲಿ, ಕ್ಲಾಸ್ ಮತ್ತು ಮಾಸ್ ಆಗಿ ಹೇಳುವ ಪ್ರಯತ್ನ ಮಾಡುತ್ತಿದ್ದೇನೆ ಎಂದರು.
‘45’ ಚಿತ್ರಕ್ಕೆ 80 ದಿನಗಳ ಕಾಲ ಬೆಂಗಳೂರು, ಮೈಸೂರು ಮುಂತಾದ ಕಡೆ ಚಿತ್ರೀಕರಣ ನಡೆಯಲಿದೆ. ಕನ್ನಡವಲ್ಲದೆ ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲೂ ಮೂಡಿಬರುತ್ತಿರುವ ಈ ಚಿತ್ರವನ್ನು 2024ರಲ್ಲಿ ಬಿಡುಗಡೆ ಮಾಡುವುದಕ್ಕೆ ಚಿತ್ರತಂಡ ಯೋಜನೆ ಹಾಕಿಕೊಂಡಿದೆ.
ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಪುತ್ರ ವಿಕ್ರಮ್ ರವಿಚಂದ್ರನ್ ಎರಡನೆ ಚಿತ್ರಕ್ಕೆ ಮಧೋಳ್ ಎಂಬ ಶೀರ್ಷಿಕೆ ಇಡಲಾಗಿದೆ. ಬೆಂಗಳೂರಿನ ನವರಂಗ್ ಚಿತ್ರಮಂದಿರದಲ್ಲಿ ಅಭಿಮಾನಿಗಳ ನಡುವೆ ವಿಕ್ಕಿ ಹೊಸ ಚಿತ್ರದ ಶೀರ್ಷಿಕೆ ಅನಾವರಣ ಮಾಡಲಾಯಿತು. ಟೈಟಲ್ ಟೀಸರ್ ಮೂಲಕ ಎಂಟ್ರಿ ಕೊಟ್ಟ ವಿಕ್ರಮ್ ರವಿಚಂದ್ರನ್, ಕಂಪ್ಲೀಟ್ ಗ್ಯಾಂಗ್ ಸ್ಟಾರ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಅಷ್ಟಕ್ಕೂ ಕ್ರೇಜಿಸ್ಟಾರ್ ಪುತ್ರನ ಚಿತ್ರಕ್ಕೆ ಮುಧೋಳ್ ಎಂಬ ಟೈಟಲ್ ಕೊಟ್ಟಿದ್ದೇ ವಿ. ರವಿಚಂದ್ರನ್. ತ್ರಿವಿಕ್ರಮ್ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಅಡಿ ಇಟ್ಟಿದ ವಿಕ್ಕಿ ಈ ಬಾರಿ ರಾ ಹಾಗೂ ಗ್ಯಾಂಗ್ ಸ್ಟಾರ್ ಸಬ್ಜೆಕ್ಟ್ ಮೂಲಕ ಸಿನಿರಸಿಕರನ್ನು ರಂಜಿಸಲು ಬರ್ಉತ್ತಿದ್ದಾರೆ.
ಮುಧೋಳ್ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡ ವಿಕ್ರಮ್ ರವಿಚಂದ್ರನ್, ತ್ರಿವಿಕ್ರಮ ರಿಲೀಸ್ ಆಗಿದ್ದು ಜೂನ್ 24, ಅದು ಆದ್ಮೇಲೆ ಏಪ್ರಿಲ್ 26 ಅಂದ್ರೆ ಇವತ್ತು ನನ್ನ ಎರಡನೇ ಸಿನಿಮಾದ ಟೈಟಲ್ ಲಾಂಚ್ ಮಾಡುತ್ತಿದ್ದೇವೆ. ತುಂಬಾ ಜನ ವಿಕೆಆರ್ ಅಂದ್ರೇನು ಅಂತಾ ಕೇಳುತ್ತಿದ್ರು. ವಿಕೆಆರ್ ವಿಕ್ರಮ್ ರವಿಚಂದ್ರನ್ ಅನ್ನೋದು ತುಂಬಾ ಜನಕ್ಕೆ ಗೊತ್ತಿದೆ. ವಿಕೆಆರ್ ಕೆ ಬ್ರ್ಯಾಂಡ್ ಶುರು ಮಾಡೋಣಾ ಅಂತಾ. ವಿಕೆಆರ್ ವಿಕ್ರಮ್ ರವಿಚಂದ್ರನ್ ಬರುತ್ತದೆ. ವೀರಸ್ವಾಮಿ ರವಿಚಂದ್ರನ್ ಬರುತ್ತೆ. ನೆಕ್ಸ್ಟ್ ನಿಮ್ಮ ಫೇವರೇಟ್ ಡಾ. ವಿ ರವಿಚಂದ್ರನ್ ಹೆಸರು ಬರುತ್ತದೆ. ಇದರ ಮಧ್ಯೆ ಕನ್ನಡ ಬರುತ್ತದೆ. ಪ್ರಯತ್ನ ಅನ್ನೋದು ನಿರಂತರ. ಪ್ರಯತ್ನ ಮಾಡಿ ಜೀವನದಲ್ಲಿ ಗೆಲ್ಲುವುದು ಮುಖ್ಯವಲ್ಲ. ಜೀವನವನ್ನೇ ಗೆಲ್ಲಬಹುದು. ಆ ರೀತಿ ಒಂದು ತಂಡ ನಿಮ್ಮ ಮುಂದೆ. ನನ್ನ ಎರಡನೇ ಹೆಜ್ಜ. ನಿಮ್ಮ ಪ್ರೀತಿ ಹಾರೈಕೆ ಹೀಗೆ ಇರಲಿ ಎಂದರು.
ನಿರ್ದೇಶಕ ಕಾರ್ತಿಕ್ ರಾಜನ್ ಮಾತನಾಡಿ, ಮುಧೋಳ್ ಗಾಗಿ ತುಂಬಾ ಕಡೆ ಹುಡುಗಾಡಿದೆವು. ನಮ್ಮ ಮ್ಯಾನೇಜರ್ ಹತ್ತಿರ ಹೇಳಿದೆ. ತ್ಯಾಗರಾಜ್ ಎಂಬುವವರು ಆ ಶ್ವಾನ ಟ್ರೈನ್ ಮಾಡಿದ್ದಾರೆ. ಟೈಟಲ್ ಟೀಸರ್ ನಲ್ಲಿ ಶ್ವಾನ ಚಾಕು ಕಚ್ಚಿಕೊಂಡು ಬರುವ ದೃಶ್ಯಕ್ಕಾಗಿ 23 ಟೇಕ್ ತೆಗೆದುಕೊಂಡಿದ್ದೇವೆ ಎಂದು ತಿಳಿಸಿದರು.
ಸಂಭಾಷಣೆಗಾರ ಮಾಸ್ತಿ ಮಾತನಾಡಿ, ಈಶ್ವರಿ ಕಂಬೈನ್ಸ್ ಅನ್ನೋದು ಲೆಗೆಸಿ. ಹೀರೋಯಿನ್ಸ್ ಗಳು ರವಿಚಂದ್ರನ್ ಸರ್ ಜೊತೆ ಕೆಲಸ ಮಾಡ್ಬೇಕು ಎಂದುಕೊಳ್ತಿದ್ರು. ಅದೇ ರೀತಿ ರೈಟರ್ಸ್ ಆ ಸಂಸ್ಥೆ ಜೊತೆ ಕೆಲಸ ಮಾಡಬೇಕು ಎಂದುಕೊಳ್ತಿದ್ರು. ಈಶ್ವರಿ ಕಂಬೈನ್ಸ್ ಅನ್ನೋದು ಪರಂಪರೆ. ಆ ಸಂಸ್ಥೆಯ ಜೊತೆ ವಿಕ್ರಮ್ ಸರ್ ಜೊತೆ ಕೆಲಸ ಮಾಡುತ್ತಿರುವುದು ಖುಷಿ ಎಂದರು.
ತಮಿಳು, ತೆಲುಗು ಚಿತ್ರರಂಗದಲ್ಲಿ ಸಹ ನಿರ್ದೇಶಕನಾಗಿ, ಸಿನಿಮಾ ಬರಹಗಾರನಾಗಿ ಗುರುತಿಸಿಕೊಂಡಿರುವ ಕಾರ್ತಿಕ್ ರಾಜನ್ ಮುಧೋಳ್ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದು, ಇದು ಇವರ ಚೊಚ್ಚಲ ಹೆಜ್ಜೆ. ಎಸ್.ತಮನ್ ಜೊತೆ ಕೆಲಸ ಮಾಡಿ ಅನುಭವ ಇರುವ ಯುವರಾಜ್ ಚಂದ್ರನ್ ಚಿತ್ರಕ್ಕೆ ಸಂಗೀತ ನಿರ್ದೇಶನ ನೀಡುತ್ತಿದ್ದು, ಟಗರು, ಸಲಗ ಸಿನಿಮಾ ಖ್ಯಾತಿ ಮಾಸ್ತಿ ಸಂಭಾಷಣೆ, ಸಂದೀಪ್ ವಲ್ಲೂರಿ ಛಾಯಾಗ್ರಹಣ, ಡಾ.ಕೆ.ರವಿವರ್ಮಾ ಆಕ್ಷನ್ ಚಿತ್ರಕ್ಕಿದೆ.
ತಂಡವ್ ಸ್ಟುಡಿಯೋಸ್ ಬ್ಯಾನರ್ ನಡಿ ರಕ್ಷಾ ವಿಜಯಕುಮಾರ್ ಹಾಗೂ ಸಿಲ್ಜು ಕಣ್ಣನ್ ನಿರ್ಮಾಣ ಮಾಡ್ತಿರುವ ಮಧೋಳ್ ಚಿತ್ರದಲ್ಲಿ ಲವ್ ಮಾಕ್ಟೇಲ್ ಖ್ಯಾತಿ ಅಭಿಲಾಶ್, ರಘು ಮ್ಯೂಟಂಟ್ ಸೇರಿದಂತೆ ಹಲವರು ನಟಿಸುತ್ತಿದ್ದಾರೆ. ಈಗಾಗ್ಲೇ 30 ದಿನ ಚಿತ್ರೀಕರಣ ಕಂಪ್ಲೀಟ್ ಮಾಡಿರುವ ಚಿತ್ರತಂಡ ಮತ್ತಷ್ಟು ಕಲಾವಿದರ ಬಗ್ಗೆ ಶೀರ್ಘದಲ್ಲಿಯೇ ಮಾಹಿತಿ ನೀಡಲಿದೆ.