ಅಂಜನಾದ್ರಿ ಸಿನಿ ಕ್ರಿಯೇಷನ್ಸ್ ಬ್ಯಾನರ್ ನಲ್ಲಿ ರೇಖಾ ಕೆ.ಎನ್ ಹಾಗೂ ಅನೂಪ್ ಗೌಡ ನಿರ್ಮಿಸಿರುವ, ಆಕಾಶ್ ಶ್ರೀವತ್ಸ ನಿರ್ದೇಶನದಲ್ಲಿ ರಮೇಶ್ ಅರವಿಂದ್ ನಾಯಕರಾಗಿ ನಟಿಸಿರುವ “ಶಿವಾಜಿ ಸುರತ್ಕಲ್ 2” ಚಿತ್ರವನ್ನು ಮೈಸೂರು ಮಹಾರಾಜರಾದ ಶ್ರೀಯದುವೀರ ಒಡೆಯರ್ ಅವರು ವೀಕ್ಷೀಸಿ ಮೆಚ್ಚಿದ್ದಾರೆ. ನಾಯಕ ರಮೇಶ್ ಅರವಿಂದ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
“ನನಗೆ ಪತ್ತೆದಾರಿ ಸಿನಿಮಾಗಳು ಬಹಳ ಇಷ್ಟ. ಶಿವಾಜಿ ಸುರತ್ಕಲ್ 2 ಚಿತ್ರ ತುಂಬಾ ಚೆನ್ನಾಗಿದೆ. ಈ ಚಿತ್ರದ ಮುಂದುವರಿದ ಭಾಗಗಳು ಇನ್ನು ಹೆಚ್ಚಾಗಿ ಬರಲಿ ಎಂದು ಮಹಾರಾಜರು ಮನತುಂಬಿ ಹಾರೈಸಿದರು.
ಈಗಾಗಲೇ ಜನಮನಸೂರೆಗೊಂಡಿರುವ ಈಚಿತ್ರ ಚಿತ್ರಮಂದಿರಗಳಲ್ಲಿ ಯಶಸ್ವಿ 41 ದಿನಗಳನ್ನು ಪೂರೈಸಿ, 50ನೇ ದಿನದತ್ತ ಹೆಜ್ಜೆ ಹಾಕುತ್ತಿದೆ.
ಮೇ 29 ರೆಬಲ್ ಸ್ಟಾರ್ ಅಂಬರೀಶ್ ಅವರ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ಅವರು ಅಭಿನಯಿಸಿದ್ದ ಸೂಪರ್ ಹಿಟ್ “ಅಂತ” ಚಿತ್ರ ಮೇ 26ರಂದು ಮರು ಬಿಡುಗಡೆಯಾಗುತ್ತಿದೆ. ನಲವತ್ತು ವರ್ಷಗಳ ಹಿಂದೆ ಬಿಡುಗಡೆಯಾಗಿದ್ದ ಈ ಚಿತ್ರಕ್ಕೆ ಈಗ ನೂತನ ತಂತ್ರಜ್ಞಾನ ಅಳವಡಿಸಲಾಗಿದೆ.
1981ರಲ್ಲಿ ಈ ಚಿತ್ರ ತೆರೆ ಕಂಡ ಚಿತ್ರವಿದು. ಈ ಚಿತ್ರವನ್ನು ಬೇರೆಯವರು ನಿರ್ದೇಶಿಸಬೇಕಿತ್ತು. ಆದರೆ ಪತ್ರಕರ್ತ ಎಂ.ಬಿ ಸಿಂಗ್ ಅವರ ಮೂಲಕ ಕಥೆ ನನಗೆ ದೊರಕಿತು. ಪರಿಮಳ ಆರ್ಟ್ಸ್ ಮೂಲಕ ಮಾರುತಿ, ವೇಣು ಹಾಗೂ ಕೆ.ಸಿ.ಎನ್ ಚಂದ್ರಶೇಖರ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದರು. ಅಂಬರೀಶ್ ಅವರು ನಾಯಕ ಎಂದು ತಿರ್ಮಾನಿಸಲಾಯಿತು. ಲಕ್ಷ್ಮೀ ಈ ಚಿತ್ರದ ನಾಯಕಿ. ವಜ್ರಮುನಿ, ಸುಂದರಕೃಷ್ಣ ಅರಸ್, ಮುಸುರಿ ಕೃಷ್ಣಮೂರ್ತಿ, ಪ್ರಭಾಕರ್ ಮುಂತಾದವರು ಇದರಲ್ಲಿ ನಟಿಸಿದ್ದಾರೆ.
ಇಡೀ ಚಿತ್ರದ ಚಿತ್ರೀಕರಣ ಮೈಸೂರಿನಲ್ಲೇ ನಡೆದಿದೆ. ಹದಿನೆಂಟು ಅದ್ದೂರಿ ಸೆಟ್ ಹಾಕಲಾಗಿತ್ತು. “ಅಂತ” ನಿರೀಕ್ಷೆಗೂ ಮೀರಿದ ಯಶಸ್ಸು ಗಳಿಸಿತ್ತು. ನನಗೆ ತಿಳಿದಿರುವ ಪ್ರಕಾರ ಈ ಚಿತ್ರದ ಸ್ಪೂರ್ತಿಯಿಂದ ಸಾವಿರಾರು ಚಿತ್ರಗಳು ಬಂದಿದೆ. “ಅಂತ” ಆಗಲೇ ಪ್ಯಾನ್ ಇಂಡಿಯಾ ಸಿನಿಮಾ ಆಗಿತ್ತು.
ಬೇರೆ ಬೇರೆ ಭಾಷೆಯಲ್ಲಿ ತುಂಬಾ ಬೇಡಿಕೆಯಿತ್ತು. ನನ್ನ ಪ್ರಕಾರ ಚಿತ್ರದ ನಿಜವಾದ ಹೀರೋ ಕಥೆ. ಆ ಕಥೆ ಚೆನ್ನಾಗಿತ್ತು ಎಂದರೆ ಯಶಸ್ಸು ಖಂಡಿತ. ಇಂತಹ ಅದ್ಭುತ “ಅಂತ” ಚಿತ್ರ ಇದೇ ಮೇ 26 ಮರು ಬಿಡುಗಡೆಯಾಗುತ್ತಿದೆ. ಒಳ್ಳೆಯದಾಗಲಿ ಎಂದು ನಿರ್ದೇಶಕ ರಾಜೇಂದ್ರಸಿಂಗ್ ಬಾಬು ತಿಳಿಸಿದರು.
ಮೇ29, ಅಂಬರೀಶ್ 71ನೇ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ಮೇ 26 ರಂದು “ಅಂತ” ಚಿತ್ರವನ್ನು 70 ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಮರು ಬಿಡುಗಡೆ ಮಾಡುತ್ತಿದ್ದೇವೆ. ಜಯಣ್ಣ ಫಿಲಂಸ್ ಅವರು ಬಿಡುಗಡೆ ಮಾಡುತ್ತಿದ್ದಾರೆ. 35 ಎಂ ಎಂ ನಿಂದ 70 ಎಂ ಎಂ ಮಾಡಲಾಗಿದೆ. ಸೌಂಡ್, ಕಲರಿಂಗ್ ಎಲ್ಲವನ್ನೂ ಈಗಿನ ರೀತಿಗೆ ಬದಲಿಸಲಾಗಿದೆ ಎಂದು ನಿರ್ಮಾಪಕ ವೇಣು ತಿಳಿಸಿದರು.
ಒಂದು ಮರ್ಡರ್ ಮಿಸ್ಟ್ರಿ ಸುತ್ತ ನಡೆಯುವ ಕುತೂಹಲಕಾರಿ ಪಯಣವನ್ನು ಹೇಳುವ ಚಿತ್ರ ಯದಾ ಯದಾ ಹಿ. ಮದುವೆಯಾದ ನಂತರ ಇದೇ ಮೊದಲಬಾರಿಗೆ ವಸಿಷ್ಠಸಿಂಹ ಹಾಗೂ ಹರಿಪ್ರಿಯ ತೆರೆಮೇಲೆ ಒಟ್ಟಾಗಿ ಕಾಣಿಸಿಕೊಳ್ಳುತ್ತಿರುವ ಚಿತ್ರವೂ ಇದಾಗಿದ್ದು, ನಟ ದಿಗಂತ್ ಕೂಡ ಪ್ರಮುಖ ಪಾತ್ರವೊಂದರಲ್ಲಿ ಅಭಿನಯಿಸಿದ್ದಾರೆ. ಜೂನ್ 2ರಂದು ಚಿತ್ರ ರಾಜ್ಯಾದ್ಯಂತ ತೆರೆಕಾಣುತ್ತಿದ್ದು, ಶಾಲಿನಿ ಎಂಟರ್ ಪ್ರೈಸಸ್ ಮೂಲಕ ಜಾಕ್ ಮಂಜು ಅವರು ಚಿತ್ರವನ್ನು ರಿಲೀಸ್ ಮಾಡುತ್ತಿದ್ದಾರೆ.
ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಈ ಚಿತ್ರದ ಟೈಟಲ್ ಸಾಂಗನ್ನು ಕಿಚ್ಚ ಸುದೀಪ್ ಅವರು ಬಿಡುಗಡೆ ಮಾಡಿದ್ದರು, ವಿಶೇಷವಾಗಿ ಈ ಗೀತೆಗೆ ವಸಿಷ್ಠಸಿಂಹ ಹಾಗೂ ಹರಿಪ್ರಿಯ ದನಿಯಾಗಿದ್ದಾರೆ. ತೆಲುಗು ವರ್ಷನ್ನಲ್ಲಿ ನಟಿ ರೆಜಿನಾ ಅವರು ನಿರ್ವಹಿಸಿದ್ದ ಪಾತ್ರವನ್ನು, ಇಲ್ಲಿ ಹರಿಪ್ರಿಯಾ ಅವರು ಮಾಡಿದ್ದಾರೆ. ಹಿರಿಯನಟ ಅವಿನಾಶ್ ಕೂಡ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.
ತೆಲುಗು ಮೂಲದ ಅಶೋಕ ತೇಜ ಅವರು ಈ ಚಿತ್ರವನ್ನು ನಿರ್ದೇಶಿಸಿದ್ದು, ಈಗಾಗಲೇ ತೆಲುಗಲ್ಲಿ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದರೂ, ಕನ್ನಡದಲ್ಲಿದು ಮೊದಲ ಸಿನಿಮಾ. ಇನ್ನು ಈ ಚಿತ್ರಕ್ಕೆ ಗೈಸ್ ಅಂಡ್ ಡಾಲ್ಸ್ ಕ್ರಿಯೇಶನ್ಸ್ ಮೂಲಕ ಹೈದ್ರಾಬಾದ್ ಮೂಲದ ರಾಜೇಶ್ ಅಗರವಾಲ್ ಅವರು ಬಂಡವಾಳ ಹೂಡಿ ಅದ್ದೂರಿಯಾಗಿ ನಿರ್ಮಿಸಿದ್ದಾರೆ.
ಈ ಚಿತ್ರಕ್ಕೆ ಕೇರಳದ ಮನ್ನಾರ್, ಚಿಕ್ಕಮಗಳೂರು, ಹೈದರಾಬಾದ್ ಹಾಗೂ ಬೆಂಗಳೂರು ಸುತ್ತಮುತ್ತ ಸುಮಾರು 55 ದಿನಗಳ ಕಾಲ ಚಿತ್ರೀಕರಿಸಲಾಗಿದೆ.
ದಿಗಂತ್ ಮಾತನಾಡಿ, ಸಿನಿಮಾ ತುಂಬಾ ಚೆನ್ನಾಗಿ ಬಂದಿದೆ. ನಿರ್ಮಾಪಕರು, ನಿರ್ದೇಶಕರು ತೆಲುಗಿನಿಂದ ಬಂದು ಈ ಸಿನಿಮಾ ಮಾಡಿದ್ದಾರೆ. ಜನರಿಗೆ ಇಷ್ಟವಾಗುವಂಥ ಕಥೆ ಇದರಲ್ಲಿದ್ದು, ನಾನು ಒಬ್ಬ ಪೊಲೀಸ್ ಆಫೀಸರ್ ಆಗಿ ಕಾಣಿಸಿಕೊಂಡಿದ್ದೇನೆ. ನನ್ನ ಪಾತ್ರಕ್ಕೆ ಮತ್ತೊಂದು ಶೇಡ್ ಇದೆ. ತೆಲುಗಿನ ಪ್ರಸಿದ್ದ ಕಾದಂಬರಿಯನ್ನಾಧರಿಸಿ ಈ ಸಿನಿಮಾ ಮಾಡಿದ್ದಾರೆ ಎಂದರು.
ವಸಿಷ್ಠ ಸಿಂಹ ಮಾತನಾಡಿ, ನಿರ್ದೇಶಕ ಅಶೋಕ್ ತೇಜ ಅವರು ಬಂದು ನನಗೆ ಈ ಕಥೆಯನ್ನು ಹೇಳಿದಾಗ ತುಂಬಾ ಇಂಟರೆಸ್ಟಿಂಗ್ ಅನಿಸಿತು, ತೆಲುಗಿನ ಯವುಡು ಕಾದಂಬರಿ ಆಧಾರಿತ ಚಿತ್ರ. ಒಂದೊಳ್ಳೆಯ ಜರ್ನಿ ಕಥೆ ಇದರಲ್ಲಿದೆ. ಟೈಟಲ್ ಹಾಡಿಗೆ ನಾಗಾರ್ಜುನ ಶರ್ಮಾ ಸಾಹಿತ್ಯ ಬರೆದಿದ್ದಾರೆ. ಸಿನಿಮಾದಲ್ಲಿನ ಪಾತ್ರಗಳು, ಅವುಗಳ ತೊಳಲಾಟಗಳನ್ನು ಹೇಳುವ ಸಾಹಿತ್ಯವಿದು. ಈಗಾಗಲೇ ಚಿತ್ರವನ್ನು ನೋಡಿದ್ದೇನೆ. ಔಟ್ಪುಟ್ ನೋಡಿದಾಗ ಖುಷಿಯಾಯ್ತು. ಚಿತ್ರದಲ್ಲಿ ಒಳ್ಳೆಯ ಕಾನ್ಸೆಪ್ಟ್ ಇದೆ. ಈವರೆಗೆ ನೋಡಿದ್ದಕ್ಕಿಂತ ಬೇರೆ ದಿಗಂತರನ್ನು ನೋಡಬಹುದು. ಇದರಲ್ಲಿ ಪ್ರೀತಿ, ಮೋಸ, ದ್ವೇಷ ಎಲ್ಲವೂ ಇದೆ ಎಂದು ಹೇಳಿದರು.
ಹರಿಪ್ರಿಯ ಮಾತನಾಡಿ, ಈ ಕಥೆ ಕೇಳಿದಾಗಲೇ ನನಗೆ ತುಂಬಾ ಇಷ್ಟವಾಗಿತ್ತು. ಸಿನಿಮಾ ನೋಡಿ ಮತ್ತಷ್ಟು ಖುಷಿ ಆಯ್ತು. ನಾನು ವಸಿಷ್ಠ, ದಿಗಂತ್ ಮೂರೂ ಜನ ಸ್ಪರ್ಧೆಗೆ ಬಿದ್ದವರಂತೆ ನಟಿಸಿದ್ದೇವೆ. ನನ್ನದು ಇನ್ಟೆನ್ಸ್ ರೋಲ್, ಅಭಿನಯಕ್ಕೆ ಹೆಚ್ಚು ಅವಕಾಶ ಇರುವಂಥ ಪಾತ್ರ. ತುಂಬಾ ಚಾಲೆಂಜಿಂಗ್ ಕೂಡ ಆಗಿತ್ತು. ಸಿನಿಮಾನೂ ಕ್ಲಾಸ್ ಆಗಿ ಮೂಡಿಬಂದಿದ್ದು, ಪ್ರೇಕ್ಷಕರಿಗೆ ಕುತೂಹಲ ಕೆರಳಿಸುತ್ತಾ ಹೋಗುತ್ತದೆ. ವಿಕ್ಟಿಮ್ ಅಂದ್ರೆ ಹುಡುಗಿಯರು ಮಾತ್ರವಲ್ಲ, ಹುಡುಗರ ಪಾಲೂ ಇರುತ್ತೆ, ಮೂರು ಜನರ ಮೇಲೂ ಕಥೆ ಸಾಗುತ್ತದೆ, ಮೂವರೂ ಒಬ್ಬರಿಗಿಂತ ಒಬ್ಬರು ಬುದ್ದಿವಂತರು, ಚಾಣಾಕ್ಷರು, ಇಡೀ ಸಿನಿಮಾ ಸೀಟಿನ ತುದಿಯಲ್ಲಿ ಕೂತು ನೋಡಿಸಿಕೊಂಡು ಹೋಗುತ್ತೆ, ಟೈಟಲ್ ಹಾಡಿಗೆ ಉತ್ತಮ ಪ್ರತಿಕ್ರಿಯೆ ಬಂದಿದ್ದು, ಸಿನಿಮಾವನ್ನು ಕೂಡ ಜನ ಇಷ್ಟಪಡುತ್ತಾರೆಂಬ ನಂಬಿಕೆಯಿದೆ ಎಂದು ಹೇಳಿದರು.
ನಿರ್ಮಾಪಕ ರಾಜೇಶ್ ಅಗರವಾಲ್ ಮಾತನಾಡುತ್ತ ನನ್ನ ನಿರ್ಮಾಣದ ಮೊದಲ ಕನ್ನಡ ಚಿತ್ರವಿದು, ಸಿನಿಮಾ ಮಾಡೋದು ನನ್ನ ಕನಸು. ಮೂಲ ಕಥೆಯಲ್ಲಿ ಸಾಕಷ್ಟು ಬದಲಾವಣೆ ಮಾಡಿಕೊಂಡು ಕನ್ನಡ ನೇಟಿವಿಟಿಗೆ ತಕ್ಕಂತೆ ಚಿತ್ರ ಮಾಡಿದ್ದೇವೆ, ದೊಡ್ಡ ಬಜೆಟ್ನಲ್ಲಿ ಒಳ್ಳೆಯ ಸಿನಿಮಾ ನಿರ್ಮಿಸಿದ್ದೇವೆ ಎಂದರು.
ಕೊಲೆಗಾರನನ್ನು ಪತ್ತೆ ಹಚ್ಚುವುದೇ ಚಿತ್ರದ ಕುತೂಹಲಕರ ಜರ್ನಿಯಾಗಿದೆ. ಚಿತ್ರದಲ್ಲಿ ಒಟ್ಟು 3 ಹಾಡುಗಳಿದ್ದು, ಶ್ರೀಚರಣ್ ಪಾಕಾಲ ಅವರ ಸಂಗೀತ ನಿರ್ದೇಶನವಿದೆ. ಹರ್ಷವರ್ಧನ್ರಾಜ್ ಟೈಟಲ್ ಸಾಂಗ್ ಮಾಡಿದ್ದಾರೆ. ಯೋಗಿ ಅವರ ಕ್ಯಾಮೆರಾವರ್ಕ ಚಿತ್ರದಲ್ಲಿದ್ದು, ಕೆಜಿಎಫ್ ಖ್ಯಾತಿಯ ಶ್ರೀಕಾಂತ್ ಎಡಿಟಿಂಗ್ ಮಾಡಿದ್ದಾರೆ.
ಮಾಡಲಿಂಗ್ ಲೋಕದಿಂದ ಸಿನಿಮಾಲೋಕಕ್ಕೆ ಎಂಟ್ರಿ ಕೊಟ್ಟ ಅದೆಷ್ಟು ಪ್ರತಿಭೆಗಳು ಸ್ಯಾಂಡಲ್ ವುಡ್ ನಲ್ಲಿ ನೆಲೆ ಕಂಡುಕೊಂಡಿದ್ದಾರೆ. ಆ ಸಾಲಿಗೆ ಸೇರಲು ರೋಹಿತ್ ಕಾತುರರಾಗಿದ್ದಾರೆ. ಮೂಲತಃ ಉತ್ತರ ಕರ್ನಾಟಕದ ರಾಯಚೂರು ಜಿಲ್ಲೆ ಪುಟ್ಟ ಹಳ್ಳಿಯ ರೋಹಿತ್ ಆರು ವರ್ಷಗಳ ಕಾಲ ಮಾಡಲಿಂಗ್ ಸಾಮ್ರಾಜ್ಯದಲ್ಲಿ ಮಿಂಚಿದವರು. ಎರಡು ವರ್ಷಗಳ ರಂಗಭೂಮಿ ಅನುಭವ ಪಡೆದಿರುವ ಅವರೀಗ ರಕ್ತಾಕ್ಷ ಸಿನಿಮಾ ಮೂಲಕ ನಾಯಕನಾಗಿ ಅದೃಷ್ಟ ಪರೀಕ್ಷೆಗಿಳಿದ್ದಾರೆ.
ಒಂದಷ್ಟು ಪ್ರತಿಷ್ಠಿತ ಬ್ರ್ಯಾಂಡ್ ಪ್ರತಿನಿಧಿಸಿರುವ ರೋಹಿತ್ ಎಬಿ ಪಾಸಿಟಿವ್ ಸಿನಿಮಾದಲ್ಲಿ ಖಳನಾಯಕನಾಗಿ ಅಭಿನಯಿಸಿದ ಅನುಭವಿದೆ. ನಾಯಕನಾಗಿ ಬೆಳ್ಳಿಪರದೆಯಲ್ಲಿ ರಾರಾಜಿಸಬೇಕೆಂಬ ಹೊಸ ಉತ್ಸಹ ಹಾಗೂ ಹುಮ್ಮಸ್ಸಿನೊಂದಿಗೆ ತಮ್ಮದೇ ಸಾಯಿ ಪ್ರೊಡಕ್ಷನ್ ಹೌಸ್ ನಡಿ ರಕ್ತಾಕ್ಷ ಚಿತ್ರ ನಿರ್ಮಾಣ ಮಾಡಿ ನಟಿಸುತ್ತಿದ್ದಾರೆ.
ವಾಸುದೇವ ಎಸ್ ಎನ್ ಎಂಬುವವರು ಈ ಚಿತ್ರ ಆಕ್ಷನ್ ಕಟ್ ಹೇಳುತ್ತಿದ್ದು, ಇದು ಇವರ ಚೊಚ್ಚಲ ನಿರ್ದೇಶನದ ಸಿನಿಮಾವಾಗಿದೆ. ಒಂದಷ್ಟು ಸಿನಿಮೋತ್ಸಾಹಿ ಪ್ರತಿಭೆಗಳು ಸೇರಿ ತಯಾರಿಸುತ್ತಿರುವ ರಕ್ತಾಕ್ಷ ಸಿನಿಮಾಗೆ ವಸಿಷ್ಠ ಸಿಂಹ ಸಾಥ್ ಕೊಟ್ಟಿದ್ದಾರೆ. ರೋಹಿತ್ ಹೀರೋ ಆಗಿ ನಟಿಸುತ್ತಿರುವ ಈ ಚಿತ್ರದ ಟೈಟಲ್ ಟ್ರ್ಯಾಕ್ ಗೆ ಚಿಟ್ಟೆ ಧ್ವನಿಯಾಗಿದ್ದಾರೆ.
ಸುಜಿತ್ ವೆಂಕಟ್ ವೆಂಕಟರಾಮಯ್ಯ ಸಾಹಿತ್ಯ, ಧೀರೇಂದರ್ ದಾಸ್ ಸಂಗೀತ ಈ ಹಾಡಿಗಿದ್ದು, ಶೀಘ್ರದಲ್ಲಿ ರಕ್ತಾಕ್ಷ ಟೈಟಲ್ ಟ್ರ್ಯಾಕ್ ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಆಗಲಿದೆ. ಚಿಕ್ಕಂದಿನಿಂದಲೇ ಬಣ್ಣದ ಲೋಕದಲ್ಲಿ ಮಿಂಚಬೇಕೆಂಬ ಕನಸುಕಟ್ಟಿಕೊಂಡಿರುವ ಪ್ರತಿಭಾವಂತ ರೋಹಿತ್, ತನ್ನಜೊತೆ ಹಳ್ಳಿ ಪ್ರತಿಭೆಗಳಿಗೂ ಈ ಸಿನಿಮಾದಲ್ಲಿ ಅವಕಾಶ ಕೊಟ್ಟಿದ್ದಾರೆ.
ಉಳಿದ ತಾರಾಬಳಗ ಹಾಗೂ ತಾಂತ್ರಿಕ ವರ್ಗವನ್ನು ಮುಂದಿನ ದಿನಗಳಲ್ಲಿ ಚಿತ್ರತಂಡ ರಿವೀಲ್ ಮಾಡಲು ಪ್ಲಾನ್ ಹಾಕಿಕೊಂಡಿದೆ.
ಕನ್ನಡದಲ್ಲೀಗ ಹೊಸ ಪ್ರತಿಭೆಗಳ ವಿಭಿನ್ನ ಪರ್ವ ಕಾಲ ಶುರುವಾಗಿದೆ. ಅದರ ಮುಂದುವರೆದ ಭಾಗವಾಗಿ ರೂಪಗೊಂಡಿರುವ ಸಿನಿಮಾ ಡಾಲರ್ಸ್ ಪೇಟೆ. ಮಾರ್ಫಿ, ಮದಗಜ ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿರುವ ಮೋಹನ್ ಎನ್ ಮುನಿನಾರಾಯಣಪ್ಪ ನಿರ್ದೇಶನದ ಈ ಚಿತ್ರದ ಟೀಸರ್ ರಿಲೀಸ್ ಆಗಿದೆ. ದರೋಡೆ ಹಿಂದಿನ ರೋಚಕ ಕಥೆಯನ್ನು ಬಿಚ್ಚಿಡುವ ಟೀಸರ್ ನಲ್ಲಿ ಬುಲೆಟ್ ಗಳ ಆರ್ಭಟ, ಹೊಡೆದಾಟ-ಬಡಿದಾಟ, ಹಣ, ವಿಲನ್ ಅಬ್ಬರ ಜೋರಾಗಿದೆ. ಈಗಾಗಲೇ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಟೀಸರ್ ರಿಲೀಸ್ ಮಾಡುವ ಮೂಲಕ ಪ್ರಚಾರ ಕಾರ್ಯಕ್ಕೆ ಚಾಲನೆ ಕೊಟ್ಟಿದೆ.
ಬೆಂಗಳೂರಿನ ರೇಣುಕಾಂಬ ಸ್ಟುಡಿಯೋದಲ್ಲಿ ಟೀಸರ್ ಬಿಡುಗಡೆ ಕಾರ್ಯಕ್ರಮ ನಡೆಯಿತು. ಟೀಸರ್ ರಿಲೀಸ್ ಮಾಡಿದ ಚಿತ್ರತಂಡ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡಿದೆ.
ನಿರ್ದೇಶಕ ಮಾತನಾಡಿ, ಡಾಲರ್ಸ್ ಪೇಟೆ ಸತ್ಯ ಘಟನೆಯಾಧಾರಿತ ಚಿತ್ರ. ತಮಿಳುನಾಡಿನ ಬ್ಯಾಂಕ್ ಒಂದ್ರಲ್ಲಿ ಬ್ಯಾಂಕ್ ಮ್ಯಾನರ್ ನಿಂದ 13 ಕೋಟಿ ಹಣ 100 ಜನಕ್ಕೆ ಮಿಸ್ ಆಗಿ ಡೆಪೋಸಿಟ್ ಆಗುತ್ತದೆ. ಅದು ಹೇಗೆ ಏನು ಅನ್ನೋದರ ಸುತ್ತ ಸಿನಿಮಾ ಸಾಗುತ್ತದೆ. ಇಡೀ ಸಿನಿಮಾವನ್ನು ಒಂದು ಪಾತ್ರದ ಮೇಲೆ ಡೆವಲಪ್ ಮಾಡಿಲ್ಲ. ಇದೊಂದು ಹೈಪರ್ ಲಿಂಕ್ ಹಾಗೂ ಡಾರ್ಕ್ ಕಾಮಿಡಿ ಥ್ರಿಲ್ಲರ್. ನಾಲ್ಕು ಐದು ಪಾತ್ರಗಳು ಒಂದು ಜಾಗದಲ್ಲಿ ಕ್ರಾಸ್ ಓವರ್ ಆಗುತ್ತೇ ಅನ್ನೋದು ಚಿತ್ರದ ಹೈಲೆಟ್. 50ರಷ್ಟು ಸಿನಿಮಾ ಬ್ಯಾಂಕ್ ನಡೆಯಲಿದೆ ಎಂದರು.
ಸೌಮ್ಯಾ ಮಾತನಾಡಿ, ನಾನು ಪೂಜಾ ಎಂಬ ಪಾತ್ರದಲ್ಲಿ ನಟಿಸಿದ್ದೇನೆ. ಈ ಸಿನಿಮಾದ ಭಾಗವಾಗಿರುವುದು ನನಗೆ ಖುಷಿಕೊಟ್ಟಿದೆ. ನಿರ್ಮಾಪಕಿ ಪೂಜಾ ಬೆನ್ನೆಲುಬಾಗಿ ನಿಂತು ಯಾವುದೇ ಕುಂದುಕೊರೆತೆ ಬಾರದೆ ನೋಡಿಕೊಂಡಿದ್ದಾರೆ. ನಿರ್ದೇಶಕರು ನನಗೆ ಕಥೆ ಹೇಳಿದಾಗ ತಕ್ಷಣ ಸಿನಿಮಾ ಮಾಡಲು ಒಪ್ಪಿಕೊಂಡೆ. ಥ್ರಿಲ್ಲರ್ ಜಾನರ್ ಆದರೂ ಪಾತ್ರಗಳು ಅಳುತ್ತಿದ್ದರು ಪ್ರೇಕ್ಷಕರು ನಗುವಂತೆ ಮಾಡುವ ಸನ್ನಿವೇಶ ಚಿತ್ರದಲ್ಲಿದೆ. ನಿಮ್ಮೆಲ್ಲರ ಸಹಕಾರ ಹೀಗೆ ಇರಲಿ ಎಂದರು.
ನಟ ವೆಂಕಟ್ ರಾಜು ಮಾತನಾಡಿ, ಡಾನ್ ಪಾತ್ರದಲ್ಲಿ ನಟಿಸಿದ್ದು, ನನ್ನ ಸ್ನೇಹಿತನಿಂದ ಈ ಪಾತ್ರ ಸಿಕ್ಕಿದೆ. ಮೂರು ತಿಂಗಳು ಪಾತ್ರಕ್ಕೆ ತಯಾರಿ ಮಾಡಿಕೊಂಡೆ. ಸೆಟ್ ನಲ್ಲಿ ಇಡೀ ಕುಟುಂಬದ ರೀತಿ ಎಲ್ಲರೂ ಟ್ರೀಟ್ ಮಾಡುತ್ತಿದ್ದರು. ಇದು ಒಳ್ಳೆ ಅನುಭವ. ಪ್ರತಿಯೊಬ್ಬರು ಸಿನಿಮಾ ಬೆಂಬಲ ಕೊಡಿ ಎಂದರು.
ಹೈಪರ್ ಲಿಂಕ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಸಿನಿಮಾದಲ್ಲಿ ಲೂಸಿಯಾ ಪವನ್ ಪತ್ನಿ ಸೌಮ್ಯ ಜಗನ್ ಮೂರ್ತಿ, ಮೆಟ್ರೋ ಸಾಗಾ ಖ್ಯಾತಿಯ ಆಕರ್ಷ್ ಕಮಲ, ವೆಂಕಟ್, ರಾಜ್, ಮುಖ್ಯಪಾತ್ರದಲ್ಲಿ ಅಭಿನಯಿಸಿದ್ದು, ದಿಯಾ ಪೃಥ್ವಿ ಅಂಬರ್ ಗೆಸ್ಟ್ ಅಪಿಯರೆನ್ಸ್ ಚಿತ್ರದಲ್ಲಿದೆ. ಉಳಿದಂತೆ ದತ್ತು ಬಣಕರ್, ಕೌಶಿಲ್, ರಾಘವೇಂದ್ರ, ಹೊನ್ನವಳ್ಳಿ, ಡ್ರಾಮಾ ಜೂನಿಯರ್ಸ್ ಮಹೇಂದ್ರ ಒಳಗೊಂಡ ಕಲಾಬಳಗ ಚಿತ್ರದಲ್ಲಿದೆ.
ಸೂರಜ್ ಜೋಯಿಸ್ ಸಂಗೀತ ನಿರ್ದೇಶನ, ಆನಂದ್ ಸುಂದರೇಶ ಛಾಯಾಗ್ರಹಣ, ಮಹೇಶ್ ತೊಗಟ್ಟ ಸಂಕಲನ, ಅರ್ಜುನ್ ರಾಜ್ ಮತ್ತು ನರಸಿಂಹ ಸಾಹಸ ನಿರ್ದೇಶನ, ರಮೇಶ್ ಎಸ್, ಮನೋಹರ ಸಹಬರವಣಿಗೆ ಸಿನಿಮಾಕ್ಕಿದೆ. ಪೆಂಟ್ರಿಕ್ಸ್ ಎಂಟಟೈನ್ಮೆಂಟ್ ಬ್ಯಾನರ್ ನಡಿ ಪೂಜಾ ಟಿ.ವೈ ಚಿತ್ರ ನಿರ್ಮಾಣ ಮಾಡಿದ್ದಾರೆ.
ಸಾಯಿಸಾಗರ್ ಫಿಲ್ಮ್ ಫ್ಯಾಕ್ಟರಿ ಬ್ಯಾನರ್ ನಲ್ಲಿ ಡಾ.ವಿದ್ಯಾಸಾಗರ್ ಅವರು ನಿರ್ಮಿಸಿರುವ, ಲಾಲಿ ರಾಘವ ನಿರ್ದೇಶನದಲ್ಲಿ ಪ್ರತಾಪ್ ಸಿಂಹ ನಾಯಕರಾಗಿ ನಟಿಸಿರುವ “ಸ್ತಬ್ಧ” ಚಿತ್ರದ ಟ್ರೇಲರ್ ಹಾಗೂ ಹಾಡುಗಳ ಬಿಡುಗಡೆಯಾಗಿದೆ. ರಾಘವೇಂದ್ರ ರಾಜಕುಮಾರ್ ಸೇರಿದಂತೆ ಅನೇಕ ಗಣ್ಯರು ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಪ್ರತಾಪ್ ಸಿಂಹ ನಾಯಕರಾಗಿ ನಟಿಸಿರುವ ಈ ಚಿತ್ರದ ಟ್ರೇಲರ್ ಹಾಗೂ ಹಾಡುಗಳು ಚೆನ್ನಾಗಿದೆ. ನಾನು ಕೂಡ ಈ ಚಿತ್ರದಲ್ಲಿ ಅಭಿನಯಿಸಿದ್ದೇನೆ. ಚಿತ್ರಕ್ಕೆ ಒಳ್ಳೆಯದಾಗಲಿ ಎಂದು ರಾಘವೇಂದ್ರ ರಾಜಕುಮಾರ್ ಹಾರೈಸಿದರು.
“ಸ್ಥಬ್ಧ” ಇದೊಂದು ಭ್ರಮೆಯ ಸುತ್ತ ನಡೆಯುವ ಕಥೆ. ಹಾರರ್, ಸಸ್ಪೆನ್ಸ್ ಥ್ರಿಲ್ಲರ್ ಎನ್ನಬಹುದು. ನಲವತ್ತೈದು ದಿನಗಳ ಕಾಲ ಬೆಂಗಳೂರು, ಮಂಗಳೂರು, ಉಡುಪಿಯಲ್ಲಿ ಚಿತ್ರೀಕರಣ ನಡೆದಿದೆ. ಹರ್ಷಿಕಾ ಪೂಣಚ್ಛ, ರಾಘವೇಂದ್ರ ರಾಜಕುಮಾರ್, ಪ್ರಿಯಾಂಕ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.
ನಿರ್ದೇಶಕ ಲಾಲಿ ರಾಘವ ಸೇರಿದಂತೆ ಎಲ್ಲಾ ತಂತ್ರಜ್ಞರ ಕಾರ್ಯವೈಖರಿ ಚೆನ್ನಾಗಿದೆ. ನಿರ್ಮಾಪಕರಿಗೆ ಧನ್ಯವಾದ. ಜೂನ್ 9 ರಂದು ಚಿತ್ರ ಬಿಡುಗಡೆಯಾಗಲಿದೆ ನೋಡಿ ಹಾರೈಸಿ ಎಂದರು ನಾಯಕ ಪ್ರತಾಪ್ ಸಿಂಹ.
ನಿರ್ಮಾಪಕ ವಿದ್ಯಾ ಸಾಗರ್ ನಮ್ಮಣ್ಣನ ಸ್ನೇಹಿತರು. ಚಿತ್ರದ ಕಥೆ ಕೇಳಿದ ಅವರು, ನಿರ್ಮಾಣಕ್ಕೆ ಮುಂದಾದರು. ನಮ್ಮ ತಂಡದ ಸಹಕಾರದಿಂದ ಚಿತ್ರ ಈಗ ಬಿಡುಗಡೆ ಹಂತಕ್ಕೆ ಬಂದಿದೆ. ಎಲ್ಲರಿಗೂ ಧನ್ಯವಾದ ಎಂದರು ನಿರ್ದೇಶಕ ಲಾಲಿ ರಾಘವ.
ಒಂದೊಳ್ಳೆ ಚಿತ್ರ ನಿರ್ಮಾಣ ಮಾಡಿರುವ ಖುಷಿಯಿದೆ ಎಂದು ನಿರ್ಮಾಪಕ ಡಾ.ವಿದ್ಯಾಸಾಗರ್ ತಿಳಿಸಿದರು.
ತಮ್ಮ ಪಾತ್ರದ ಬಗ್ಗೆ ನಾಯಕಿ ಹರ್ಷಿಕಾ ಪೂಣಚ್ಛ ಮಾಹಿತಿ ನೀಡಿದರು. ನಟ ಭಜರಂಗಿ ಪ್ರಸನ್ನ, ಸಂಗೀತ ನಿರ್ದೇಶಕ ಆರವ್ ರಿಷಿಕ್, ಛಾಯಾಗ್ರಹಕ ಪಿ.ವಿ.ಆರ್ ಸ್ವಾಮಿ ಮುಂತಾದವರು ಚಿತ್ರದ ಕುರಿತು ಮಾತನಾಡಿದರು.
ಅದ್ವಿತ ಫಿಲಂ ಫ್ಯಾಕ್ಟರಿ ಲಾಂಛನದಲ್ಲಿ ಭಾರ್ಗವಿ ತಿರುಮಲೇಶ್ ಹಾಗೂ ರಂಗನಾಥ್ ಬಿ ನಿರ್ಮಿಸಿರುವ “ಆಪರೇಶನ್ ಡಿ” ಚಿತ್ರಕ್ಕೆ ಡಬ್ಬಿಂಗ್, SFX, ಸಂಗೀತ ಸಂಯೋಜನೆ ಮುಕ್ತಯವಾಗಿ VFX ಕೆಲಸ ಆರಂಭವಾಗಿದೆ, ಶೀಘ್ರದಲ್ಲೇ ಟ್ರೇಲರ್ ಬಿಡುಗಡೆಯಾಗಲಿದೆ.
ಕನ್ನಡದ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದ ತಿರುಮಲೇಶ್ ವಿ ಈ ಚಿತ್ರದ ಮೂಲಕ ನಿರ್ದೇಶಕರಾಗಿದ್ದಾರೆ.
ನಿರ್ದೇಶಕರೆ ಕಥೆ, ಚಿತ್ರಕಥೆ ಬರೆದಿದ್ದಾರೆ. ಕಾರ್ಯಕಾರಿ ನಿರ್ಮಾಪಕ ಹಾಗೂ ಕ್ರಿಯೇಟಿವ್ ಹೆಡ್ ಆಗಿ ಸುರೇಶ್ .ಬಿ. ಕಾರ್ಯ ನಿರ್ವಹಿಸಿದ್ದಾರೆ.
ತಿರಮಲೇಶ್ ಅವರು ರಾಜ ರವಿಶಂಕರ್, ಸಿದ್ದರಾಜು, ಪ್ರಶಾಂತ್ ಜೊತೆಗೂಡಿ ಸಂಭಾಷಣೆ ಬರೆದಿದ್ದಾರೆ.
ವೇದಿಕ ಹಾಗೂ ದ್ವೈಪಾಯನ ಸಿಂಗ್ ನಾಲ್ಕು ಹಾಡುಗಳಿರುವ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಕೆಂಪಗಿರಿ ಒಂದು ಹಾಡು ಹಾಗೂ ವೇದಿಕ ಉಳಿದ ಎಲ್ಲಾ ಹಾಡುಗಳನ್ನು ರಚಿಸಿದ್ದಾರೆ.
ಅನಿರುದ್ಧ್ ಶಾಸ್ತ್ರಿ ಮೊದಲ ಬಾರಿಗೆ ಚಿತ್ರದ ನಾಲ್ಕು ಹಾಡುಗಳನ್ನು ಹಾಡಿದ್ದಾರೆ. ಜೊತೆಗೆ ವೇದಿಕ ಹಾಗೂ ಪೃಥ್ವಿ ಭಟ್ ಸಾಥ್ ನೀಡಿದ್ದಾರೆ,
ಕಾರ್ತಿಕ್ ಪ್ರಸಾದ್ ಛಾಯಾಗ್ರಹಣ, ವಿಕ್ರಮ್ ಶ್ರೀಧರ್ ಸಂಕಲನ ಹಾಗೂ ತರ್ಮಾಕೋಲ್ ಶ್ರೀನಿವಾಸ್ ಅವರ ಕಲಾ ನಿರ್ದೇಶನ ಈ ಚಿತ್ರಕ್ಕೆ ಇದೆ ಈ ಚಿತ್ರದ ನೃತ್ಯ ನಿರ್ದೇಶಕರು.
ವಿನೋದ್ ದೇವ್, ಸುಹಾಸ್ ಆತ್ರೇಯ, ರುದ್ರೇಶ್ ಬೂದನೂರು ಈ ಚಿತ್ರದ ನಾಯಕರಾಗಿ ನಟಿಸಿದ್ದು, ನಾಯಕಿಯರಾಗಿ ಸ್ನೇಹ ಭಟ್, ಇಂಚರ ಬಿ ಚನ್ನಪ್ಪ ಇದ್ದಾರೆ.
ಶಿವಮಂಜು, ವೆಂಕಟಾಚಲ, ಜೂ ನರಸಿಂಹರಾಜು, ಮಹೇಶ್ ಎಸ್ ಕಲಿ, ರಂಗನಾಥ ಬಿ, ಶ್ರೀಧರ್ ಟಿ ಎಸ್, ಸುರೇಶ್ ಬಿ, ಸಂಚಯ ನಾಗರಾಜ್,ಕಿರಣ್ ಈಡಿಗ, ರವಿಶಂಕರ್,ಶಿವಾನಂದ, ಸೂರ್ಯವಂಶಿ(ಶಿವು ಅಪ್ಪಾಜಿ), ನಂಜಪ್ಪ ಎಸ್ ದೊಡ್ಡಮದುರೆ ಆರ್ ಜೆ ಧೀರಜ್, ಪೃಥ್ವಿ ಬನವಾಸಿ, ಆಶಾ, ರೂಪ ಆರ್, ಧನಲಕ್ಷ್ಮೀ, ಕಿರಣ್, ನಾಗರಾಜ್ ದಾವಣಗೆರೆ, ಸಂತೋಷ್,ನಾಗರಾಜ್ ಕೀಲಗೆರೆ,ಖಾದರ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
RRR ಚಿತ್ರದ ನಂತರ ತೆಲುಗು ನಟ ಜ್ಯೂನಿಯರ್ ಎನ್ಟಿಆರ್ ಇದೀಗ ಕೊರಟಾಲ ಶಿವ ನಿರ್ದೇಶನದ ಹೊಸ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಚಿತ್ರ ಪ್ರಾರಂಭವಾದರೂ ಚಿತ್ರತಂಡ ಮಾತ್ರ ಇದುವರೆಗೂ ಶೀರ್ಷಿಕೆಯನ್ನು ಘೋಷಿಸಿರಲಿಲ್ಲ. ಇಂದು ಜ್ಯೂನಿಯರ್ ಎನ್ಟಿಆರ್ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಈ ಸಂದರ್ಭದಲ್ಲಿ ಚಿತ್ರದ ಹೆಸರನ್ನು ಘೋಷಿಸಲಾಗಿದೆ. ಚಿತ್ರಕ್ಕೆ ‘ದೇವರ’ ಎಂಬ ಶೀರ್ಷಿಕೆ ಇಡಲಾಗಿದ್ದು, ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಸಹ ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಗಿದೆ.
ಈ ಪೋಸ್ಟರ್ನಲ್ಲಿ ಜ್ಯೂನಿಯರ್ ಎನ್.ಟಿ.ಆರ್ ಕಪ್ಪು ಬಣ್ಣದ ಲುಂಗಿ ಮತ್ತು ಶರ್ಟ್ ತೊಟ್ಟು, ಸಮುದ್ರದ ಬಂಡೆಗಳ ಮೇಲೆ ಕೊಡಲಿ ಹಿಡಿದು ನಿಂತು ತೀಕ್ಷ್ಣವಾಗಿ ನೋಡುತ್ತಿದ್ದಾರೆ. ಕಳೆಗೆ ಹೆಣಗಳ ರಾಶಿ ಇದೆ. ಪಕ್ಕದಲ್ಲಿ ಮುರಿದು ಬಿದ್ದ ದೋಣಿಯೊಂದನ್ನೂ ಕಾಣಬಹುದು. ಈ ಪೋಸ್ಟರ್ ಈಗಾಗಲೇ ಜ್ಯೂನಿಯರ್ ಎನ್.ಟಿ.ಆರ್ ಅವರ ಅಭಿಮಾನಿಗಳಲ್ಲಿ ಚಿತ್ರದ ಬಗ್ಗೆ ತೀವ್ರ ಕುತೂಹಲ ಮೂಡಿಸಿದ್ದು, ಅವರ ಮಾಸ್ ಲುಕ್ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
‘ದೇವರ ಚಿತ್ರದ ಮೂಲಕ ಶ್ರೀದೇವಿ ಮಗಳು ಜಾಹ್ನವಿ ಕಪೂರ್ ಇದೇ ಮೊದಲ ಬಾರಿಗೆ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಜೊತೆಗೆ ಬಾಲಿವುಡ್ನ ಖ್ಯಾತ ನಟ ಸೈಫ್ ಅಲಿ ಖಾನ್ ಸಹ ಖಳನಟನಾಗಿ ಈ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದಲ್ಲದೆ ಪ್ರಕಾಶ್ ರೈ, ಶ್ರೀಕಾಂತ್ ಮುಂತಾದ ಪ್ರತಿಭಾವಂತ ಕಲಾವಿದರ ದಂಡೇ ಈ ಚಿತ್ರದಲ್ಲಿದೆ. ಯುವಸುಧಾ ಆರ್ಟ್ಸ್ ಮತ್ತು ಎನ್ಟಿಆರ್ ಆರ್ಟ್ಸ್ನಡಿ ಮಿಕ್ಕಿಲಿನೇನಿ ಸುಧಾಕರ್ ಮತ್ತು ಹರಿಕೃಷ್ಣ ನಿರ್ಮಿಸುತ್ತಿರುವ ಈ ಚಿತ್ರವನ್ನು ಖ್ಯಾತ ನಟ ನಂದಮೂರಿ ಕಲ್ಯಾಣರಾಮ್ ನಿರ್ಮಿಸುತ್ತಿದ್ದಾರೆ. 2024ರ ಏಪ್ರಿಲ್ 06ಕ್ಕೆ ಐದು ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಚಿತ್ರವಾಗಿ ಬಿಡುಗಡೆಯಾಗಲಿರುವ ಈ ಚಿತ್ರಕ್ಕೆ ಅನಿರುದ್ಧ್ ಸಂಗೀತ, ರತ್ನವೇಲು ಛಾಯಾಗ್ರಹಣ ಮತ್ತು ಶ್ರೀಕರ್ ಪ್ರಸಾದ್ ಅವರ ಸಂಕಲನವಿದೆ.
ಕವಲುದಾರಿ ಮತ್ತು ಆಪರೇಷನ್ ಅಲಮೇಲಮ್ಮ ಖ್ಯಾತಿಯ ರಿಷಿ ಅವರು ನಟಿಸುತ್ತಿರುವ ಬಹುಕೋಟಿ ಬಜೆಟ್ ನ ಚಿತ್ರವೊಂದು ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲದಲ್ಲಿ ಸೆಟ್ಟೇರುವ ತಯಾರಿಯಲ್ಲಿದೆ. ರಿಷಿ ಅವರು ನಿರ್ಮಾಪಕರ ನಟನಾಗಿದ್ದು ತಮ್ಮದೇ ಪ್ರೇಕ್ಷಕ ವರ್ಗವನ್ನು ಹೊಂದಿರುತ್ತಾರೆ ಮತ್ತು ಕಥೆಯ ಆಯ್ಕೆಯಲ್ಲಿಯೂ ಕೂಡ ತುಂಬಾ ಯೋಚಿಸಿ ನಿರ್ಧಾರ ತೆಗೆದುಕೊಳ್ಳುತ್ತಾರೆ.
ಈ ಚಿತ್ರ ಜೂನ್ ಎರಡರಂದು ಅಧಿಕೃತವಾಗಿ ಆರಂಭವಾಗಲಿದೆ ಎಂದು ತಿಳಿದುಬಂದಿದೆ. ಸಿನಿಮಾದ ಹೆಸರು. ನಿರ್ಮಾಣ ಸಂಸ್ಥೆ ಮತ್ತು ತಾರಾ ಬಳಗದ ಬಗ್ಗೆ ಜೂನ್ 2ರಂದು ಚಿತ್ರತಂಡ ತಿಳಿಸಲಿದೆ. ಈ ಚಿತ್ರವನ್ನು ಡಿಯರ್ ವಿಕ್ರಂ ಸಿನಿಮಾ ಖ್ಯಾತಿಯ ನಿರ್ದೇಶಕ ಕೆ ಎಸ್ ನಂದೀಶ್ ಅವರು ನಿರ್ದೇಶನ ಮಾಡಲಿದ್ದಾರೆ.
ತಮ್ಮ ಪ್ರಥಮ ಚಿತ್ರ ಓ ಟಿ ಟಿ ಯಲ್ಲಿ ಬಿಡುಗಡೆಗೊಂಡು ಅದ್ಭುತ ಯಶಸ್ಸು ಸಾಧಿಸಿರುವುದು ನಿರ್ದೇಶಕರಿಗೆ ಮತ್ತೊಂದು ಚಿತ್ರ ಮಾಡಲು ಹುಮ್ಮಸ್ಸು ಮತ್ತು ಪ್ರೋತ್ಸಾಹ ಕೊಟ್ಟಿದೆ. ಡಿಯರ್ ವಿಕ್ರಂ ಚಿತ್ರವನ್ನು ಓಟಿಟಿಯಲ್ಲಿ ನೋಡಿದ ತೆಲುಗಿನ ಖ್ಯಾತ ನಿರ್ಮಾಣ ಸಂಸ್ಥೆಯು ತೆಲುಗಿನಲ್ಲಿ ರೀಮೇಕ್ ಮಾಡಲು ಮಾತುಕತೆ ನಡೆಸುತ್ತಿದೆ.
ನೈಜ ಘಟನೆಗಳ ಆದರಿಸಿದ ಚಿತ್ರ “ಡಿಯರ್ ವಿಕ್ರಂ”, ನಕ್ಸಲ್ ಮತ್ತು ರಾಜಕೀಯ ಕಥಾಂದರ ಗಳನ್ನು ಒಳಗೊಂಡ ಚಿತ್ರವಾಗಿತ್ತು. ಓ ಟಿ ಟಿ ಯಲ್ಲಿ ಬಿಡುಗಡೆಗೊಂಡ ನಂತರ ತುಂಬಾ ಜನ ಇದು ಥಿಯೇಟರ್ ನಲ್ಲಿ ಬಿಡುಗಡೆ ಆಗಬೇಕಾಗಿತ್ತು ಎಂದು ಮಾತನಾಡಿದ್ದಾರೆ.. ಆದರೆ ನಿರ್ದೇಶಕರು ನೇರವಾಗಿ ಓಟಿಟಿ ನಲ್ಲಿ ಬಿಡುಗಡೆಗೊಂಡಿದ್ದಕ್ಕೆ ಯಾವುದೇ ಬೇಸರವಿಲ್ಲ ಯಾಕೆಂದರೆ ಪ್ರಸ್ತುತ ಕಾಲದಲ್ಲಿ ಬದಲಾವಣೆಗೆ ಹೊಂದಿಕೊಂಡು ಹೋಗುವುದು ಅನಿವಾರ್ಯ.
ಥಿಯೇಟರ್ ನಷ್ಟೇ ಓಟಿಟಿ ಕೂಡ ಮನರಂಜನೆಯನ್ನು ಜನಕ್ಕೆ ತಲುಪಿಸುವ ಒಂದು ಮಾಧ್ಯಮ ಎಂದು ಹೇಳಿದ್ದಾರೆ. ಆದರೆ ಈಗ ತಯಾರಿ ನಡೆಯುತ್ತಿರುವ ಈ ಚಿತ್ರ, ಚಿತ್ರಮಂದಿರಗಳಲ್ಲಿ ಮತ್ತು ಓ ಟಿ ಟಿ ಯಲ್ಲಿ ಬಿಡುಗಡೆಗೊಳ್ಳುತ್ತದೆ. ತಾರಾ ಬಳಗದಲ್ಲಿ ತೆಲುಗಿನ ಕೆಲವು ಪ್ರಖ್ಯಾತ ನಟರು ಕೂಡ ನಟಿಸುತ್ತಿದ್ದಾರೆ.
ಮನರಂಜನೆಯ ಹೊಸ ಪರ್ವ ಆರಂಭಿಸಲು ‘JioCinema’ ಓಟಿಟಿ ವೇದಿಕೆ ಸಿದ್ಧವಾಗಿದೆ. ತನ್ನ ವೀಕ್ಷಕರಿಗೆ ವೈವಿಧ್ಯಮಯ ರಂಜನೆಯ ರಸದೂಟ ಉಣಬಡಿಸುವ ಉದ್ದೇಶದ ಭಾಗವಾಗಿ ‘ಲವ್ ಯು ಅಭಿ’ ಎಂಬ ಕನ್ನಡ ವೆಬ್ ಸಿರೀಸ್ ಮೇ 19ರಂದು ‘JioCinema’ದಲ್ಲಿ ನೇರವಾಗಿ ಬಿಡುಗಡೆಗೊಳ್ಳುತ್ತಿದೆ. ಇದನ್ನು ಉಚಿತವಾಗಿ ವೀಕ್ಷಿಸಬಹುದಾಗಿದೆ!
ಕಾಳಿ ವೇಲಾಯುಧಂ ನಿರ್ಮಾಣ ಮಾಡಿ ನಿರ್ದೇಶಿಸಿರುವ ‘JioCinema’ ಒರಿಜಿನಲ್ ವೆಬ್ ಸಿರೀಸ್ನಲ್ಲಿ ಅದಿತಿ ಪ್ರಭುದೇವ, ವಿಕ್ರಮ್ ರವಿಚಂದ್ರನ್ ಮತ್ತು ರವಿಶಂಕರ್ ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ. ಎಲ್ಲರೊಳಗೊಬ್ಬ ಶಿವ: ಹಿರಿಯ ನಟ ರವಿಚಂದ್ರನ್ ಅವರ ಪುತ್ರ ವಿಕ್ರಮ್ ರವಿಚಂದ್ರನ್ ಅವರಿಗೂ ಇದು ಮೊದಲ ವೆಬ್ ಸಿರೀಸ್. ತಮ್ಮ ಪಾತ್ರದ ಕುರಿತು ತುಂಬ ಉತ್ಸಾಹದಿಂದ ವಿವರಿಸುತ್ತಾರೆ ವಿಕ್ರಮ್. ‘ಶಿವ ನಿಮ್ಮನ್ನು ಕಾಡುತ್ತಾನೆ, ನಿಮ್ಮ ಮನಸ್ಸನ್ನು ಚುಚ್ಚುತ್ತಾನೆ.
ಯಾಕೆಂದರೆ ಈ ಶಿವ ಎಲ್ಲರೊಳಗೂ ಇದ್ದಾನೆ. ಹಲವು ನಿಗೂಢಗಳನ್ನು ಮನಸ್ಸಿನಲ್ಲಿಟ್ಟುಕೊಂಡು, ಅದನ್ನು ಯಾರೊಂದಿಗೂ ಹಂಚಿಕೊಳ್ಳದ ವ್ಯಕ್ತಿ ಆತ. ಒಂದೊಮ್ಮೆ ಅವನು ಹಂಚಿಕೊಳ್ಳಲು ಯತ್ನಿಸಿದರೂ ಪರಿಸ್ಥಿತಿ ಅದಕ್ಕೆ ವಿರುದ್ಧವಾದ ಸನ್ನಿವೇಶವನ್ನು ಸೃಷ್ಟಿಸಿಬಿಡುತ್ತದೆ. ‘ಪ್ರೇಮ ಮತ್ತು ಯುದ್ಧದಲ್ಲಿ ಎಲ್ಲವೂ ನ್ಯಾಯೋಚಿತವೇ’ ಎಂಬ ಮಾತಿದೆ. ಆದರೆ ಶಿವ ಮತ್ತು ಅವನ ಬದುಕಿನ ವಿಷಯಕ್ಕೆ ಬಂದಾಗ, ಅವನ ಪ್ರೇಮದಲ್ಲಿಯೂ, ಬದುಕಿನಲ್ಲಿ ಹೋರಾಟದಲ್ಲಿಯೂ ನ್ಯಾಯೋಚಿತವಾಗಿದ್ದು ನಡೆಯುವುದೇ ಇಲ್ಲ’. ಎಂದು ತಮ್ಮ ಪಾತ್ರದ ಕುರಿತು ವಿವರಿಸುತ್ತಾರೆ ಶಿವನ ಪಾತ್ರಕ್ಕೆ ಜೀವ ತುಂಬಿದ ವಿಕ್ರಮ್ ರವಿಚಂದ್ರನ್.
ವಿಕ್ರಮ್, ಅದಿತಿ ಜೋಡಿ- ರವಿಶಂಕರ್ ಅಬ್ಬರದ ಮೋಡಿ: ಕಿರುತೆರೆ ಮತ್ತು ಹಿರಿತೆರೆಗಳಲ್ಲಿ ತಮ್ಮದೇ ಛಾಪು ಮೂಡಿಸಿರುವ ಅದಿತಿ ಪ್ರಭುದೇವ ‘ಲವ್ ಯು ಅಭಿ’ಯ ಮೂಲಕ ವೆಬ್ ಸಿರೀಸ್ ಜಗತ್ತಿಗೂ ಜಿಗಿದಿದ್ದಾರೆ. ಇವರಿಬ್ಬರ ಕ್ಯೂಟ್ ಕಾಂಬಿನೇಷನ್ ಜೊತೆ ಖ್ಯಾತ ನಟ ರವಿಶಂಕರ್ ಅವರ ಅಬ್ಬರದ ಭರ್ಜರಿ ಮಸಾಲೆಯೂ ಇದೆ. ಪೊಲೀಸ್ ಅಧಿಕಾರಿಯಾಗಿ ರವಿಶಂಕರ್ ಅವರ ಆರ್ಭಟವನ್ನು ನೋಡಿಯೇ ಸವಿಯಬೇಕು. ‘ಎಲ್ಲ ಕಲಾವಿದರೂ ತಮ್ಮದೇ ಆದ ರಿದಮ್ ನಲ್ಲಿ, ಮನೋಭಾವದಲ್ಲಿ ನಟಿಸುತ್ತ ಹೋಗುತ್ತಿರುತ್ತೇವೆ. ಕಲಾವಿದರ ಜರ್ನಿ ಹಾಗೆಯೇ ಇರುತ್ತದೆ. ಒಂದೊಂದ್ಸಲ ಅದು ಬ್ರೇಕ್ ಆಗಬೇಕಾಗುತ್ತದೆ. ಅಭಿ ನನ್ನ ನಟನಾಪಯಣವನ್ನು ಹಾಗೆ ಬ್ರೇಕ್ ಮಾಡಿದಂಥ ಪಾತ್ರ. ನನ್ನ ಇಡೀ ವ್ಯಕ್ತಿತ್ವಕ್ಕೇ ಚಾಲೆಂಜ್ ಮಾಡಿದಂಥ ಪಾತ್ರ. ಆ ಪಾತ್ರದಲ್ಲಿ ನಟಿಸುತ್ತ ನನ್ನ ವ್ಯಕ್ತಿತ್ವದಲ್ಲೂ ಸಾಕಷ್ಟು ಬದಲಾವಣೆಗಳನ್ನು ಮಾಡಿಕೊಂಡಿದೀನಿ. ಐ ಲವ್ ಅಭಿ. ಬಹುಶಃ ತುಂಬ ಜನರಿಗೆ ಅಭಿ ಇಷ್ಟ ಆಗ್ತಾಳೆ’ ಎಂದು ತುಂಬ ವಿಶ್ವಾಸದಿಂದ ಹೇಳುತ್ತಾರೆ ಅದಿತಿ ಪ್ರಭುದೇವ.
ಹಲವು ಭಾವಗಳ ಸಂಗಮ: ಪ್ರೇಮ, ವಿರಹ, ಕೊಲೆ, ತನಿಖೆ ಹೀಗೆ ನೋಡುಗರನ್ನು ಕುರ್ಚಿಯ ತುದಿಯಲ್ಲಿ ಕೂಡುವಂತೆ ಮಾಡಬಲ್ಲ ಎಲ್ಲ ಅಂಶಗಳೂ ಇದರಲ್ಲಿದೆ. ಒಂದು ಸಾವಿನ ಸುತ್ತ ಬೆಳೆಯುತ್ತ ಹೋಗುವ ಈ ಕಥನದಲ್ಲಿ ಮನಸ್ಸನ್ನು ಭಾವುಕಗೊಳಿಸುವ ಸನ್ನಿವೇಶಗಳಿವೆ, ದಾಂಪತ್ಯದ ಮಧುರ ಕ್ಷಣಗಳನ್ನು ಉಣಬಡಿಸುವ ದೃಶ್ಯಗಳಿವೆ, ಪ್ರೇಮದ ವ್ಯಾಮೋಹ ಮತ್ತು ಸತ್ಯದ ಹಂಬಲದ ನಡುವಿನ ಘರ್ಷಣೆಯೂ ಇದೆ. ಅನುಮಾನ, ವಂಚನೆ, ಮುಗ್ಧ ಪ್ರೇಮ, ಒಳ್ಳೆಯತನ, ಸ್ವಾರ್ಥ, ಪ್ರಾಮಾಣಿಕತೆ ಎಲ್ಲ ಗುಣಗಳೂ ಸೇರಿ ರೂಪುಗೊಂಡ ಅಪರೂಪದ ರಸಪಾಕ ‘ಲವ್ ಯು ಅಭಿ’. ಮೂವತ್ತು ನಿಮಿಷಗಳ ಏಳು ಎಪಿಸೋಡ್ಗಳಲ್ಲಿ ಅಭಿಯ ಬದುಕಿನ ಕಥೆಯನ್ನು ಹೇಳಲಾಗಿದೆ.
ಯುವನಟರ ಧಮಾಲ್; ಅನುಭವಿಗಳ ಕಮಾಲ್: ಕನ್ನಡ ದೃಶ್ಯಮಾಧ್ಯಮ ಲೋಕಕ್ಕೆ ಹೊಸ ಫ್ಲೇವರ್ ಪರಿಚಯಿಸಲಿರುವ ಈ ಸಸ್ಪೆನ್ಸ್ ಥ್ರಿಲ್ಲರ್ ಕಥೆಯಲ್ಲಿ ಹೊಸ ಉತ್ಸಾಹದ ನಟರ ಜೊತೆಗೆ ವಿನಯಾ ಪ್ರಸಾದ್, ರಚಿತಾ ಮಹಾಲಕ್ಷ್ಮಿ, ಅಶೋಕ್ ಶರ್ಮ, ಶ್ರೀನಾಥ್, ಅಂಬಿಕಾ, ಶ್ರೀನಿವಾಸ ಮೂರ್ತಿ, ಸುಂದರ್ರಾಜ್ ಹೀಗೆ ಅನುಭವಿ ಕಲಾವಿದರ ದಂಡೂ ಇದೆ. ‘ಲವ್ ಯು ಅಭಿ’ಗೆ ಅರುಣ್ ಬ್ರಹ್ಮ ಅವರ ಕ್ಯಾಮೆರಾ ಚಳಕವಿದ್ದು, ಪ್ರದಿಪ್ ರಾಘವ್ ಸಂಕಲನ ಮಾಡಿದ್ದಾರೆ. ನಿಜಿಲ್ ದಿನಕರ್ ಸಂಗೀತ ನಿರ್ದೇಶನ ಮತ್ತು ಧ್ವನಿ ವಿನ್ಯಾಸವನ್ನು ನಿರ್ವಹಿಸಿದ್ದಾರೆ. ಅಭಿಲಾಷ್ ಗೌಡ ಮತ್ತು ಜಿ.ವಿ. ಸತೀಶ್ ಕುಮಾರ್ ಜಂಟಿಯಾಗಿ ಮಾತುಗಳನ್ನು ಪೋಣಿಸಿದ್ದಾರೆ.