ಜ್ಯೂನಿಯರ್ ಎನ್ ಟಿ ಆರ್ ಹೊಸ ಚಿತ್ರ ದೇವರ: ಪೋಸ್ಟರ್ ರಿಲೀಸ್ ಆಯ್ತು

RRR ಚಿತ್ರದ ನಂತರ ತೆಲುಗು ನಟ ಜ್ಯೂನಿಯರ್ ಎನ್ಟಿಆರ್ ಇದೀಗ ಕೊರಟಾಲ ಶಿವ ನಿರ್ದೇಶನದ ಹೊಸ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಚಿತ್ರ ಪ್ರಾರಂಭವಾದರೂ ಚಿತ್ರತಂಡ ಮಾತ್ರ ಇದುವರೆಗೂ ಶೀರ್ಷಿಕೆಯನ್ನು ಘೋಷಿಸಿರಲಿಲ್ಲ. ಇಂದು ಜ್ಯೂನಿಯರ್ ಎನ್ಟಿಆರ್ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಈ ಸಂದರ್ಭದಲ್ಲಿ ಚಿತ್ರದ ಹೆಸರನ್ನು ಘೋಷಿಸಲಾಗಿದೆ. ಚಿತ್ರಕ್ಕೆ ‘ದೇವರ’ ಎಂಬ ಶೀರ್ಷಿಕೆ ಇಡಲಾಗಿದ್ದು, ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಸಹ ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಗಿದೆ.


ಈ ಪೋಸ್ಟರ್ನಲ್ಲಿ ಜ್ಯೂನಿಯರ್ ಎನ್.ಟಿ.ಆರ್ ಕಪ್ಪು ಬಣ್ಣದ ಲುಂಗಿ ಮತ್ತು ಶರ್ಟ್ ತೊಟ್ಟು, ಸಮುದ್ರದ ಬಂಡೆಗಳ ಮೇಲೆ ಕೊಡಲಿ ಹಿಡಿದು ನಿಂತು ತೀಕ್ಷ್ಣವಾಗಿ ನೋಡುತ್ತಿದ್ದಾರೆ. ಕಳೆಗೆ ಹೆಣಗಳ ರಾಶಿ ಇದೆ. ಪಕ್ಕದಲ್ಲಿ ಮುರಿದು ಬಿದ್ದ ದೋಣಿಯೊಂದನ್ನೂ ಕಾಣಬಹುದು. ಈ ಪೋಸ್ಟರ್ ಈಗಾಗಲೇ ಜ್ಯೂನಿಯರ್ ಎನ್.ಟಿ.ಆರ್ ಅವರ ಅಭಿಮಾನಿಗಳಲ್ಲಿ ಚಿತ್ರದ ಬಗ್ಗೆ ತೀವ್ರ ಕುತೂಹಲ ಮೂಡಿಸಿದ್ದು, ಅವರ ಮಾಸ್ ಲುಕ್ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.


‘ದೇವರ ಚಿತ್ರದ ಮೂಲಕ ಶ್ರೀದೇವಿ ಮಗಳು ಜಾಹ್ನವಿ ಕಪೂರ್ ಇದೇ ಮೊದಲ ಬಾರಿಗೆ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಜೊತೆಗೆ ಬಾಲಿವುಡ್ನ ಖ್ಯಾತ ನಟ ಸೈಫ್ ಅಲಿ ಖಾನ್ ಸಹ ಖಳನಟನಾಗಿ ಈ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದಲ್ಲದೆ ಪ್ರಕಾಶ್ ರೈ, ಶ್ರೀಕಾಂತ್ ಮುಂತಾದ ಪ್ರತಿಭಾವಂತ ಕಲಾವಿದರ ದಂಡೇ ಈ ಚಿತ್ರದಲ್ಲಿದೆ. ಯುವಸುಧಾ ಆರ್ಟ್ಸ್ ಮತ್ತು ಎನ್ಟಿಆರ್ ಆರ್ಟ್ಸ್ನಡಿ ಮಿಕ್ಕಿಲಿನೇನಿ ಸುಧಾಕರ್ ಮತ್ತು ಹರಿಕೃಷ್ಣ ನಿರ್ಮಿಸುತ್ತಿರುವ ಈ ಚಿತ್ರವನ್ನು ಖ್ಯಾತ ನಟ ನಂದಮೂರಿ ಕಲ್ಯಾಣರಾಮ್ ನಿರ್ಮಿಸುತ್ತಿದ್ದಾರೆ.
2024ರ ಏಪ್ರಿಲ್ 06ಕ್ಕೆ ಐದು ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಚಿತ್ರವಾಗಿ ಬಿಡುಗಡೆಯಾಗಲಿರುವ ಈ ಚಿತ್ರಕ್ಕೆ ಅನಿರುದ್ಧ್ ಸಂಗೀತ, ರತ್ನವೇಲು ಛಾಯಾಗ್ರಹಣ ಮತ್ತು ಶ್ರೀಕರ್ ಪ್ರಸಾದ್ ಅವರ ಸಂಕಲನವಿದೆ.

Related Posts

error: Content is protected !!